ಕುಲಸಂಬಂಧಿತ ದ್ವೇಷವು ನ್ಯಾಯಸಮ್ಮತವೋ?
ಬೈಬಲಿನ ದೃಷ್ಟಿಕೋನ
ಕುಲಸಂಬಂಧಿತ ದ್ವೇಷವು ನ್ಯಾಯಸಮ್ಮತವೋ?
ನೀವು ಒಂದು ನಿರ್ದಿಷ್ಟ ಕುಲಸಂಬಂಧಿತ ಗುಂಪಿಗೆ ಸೇರಿದವರಾಗಿದ್ದೀರಿ ಎಂಬ ಮಾತ್ರಕ್ಕೆ ನಿಮ್ಮನ್ನು ನಯವಂಚಕ, ಹಿಂಸಾತ್ಮಕ, ಮೂರ್ಖ ಅಥವಾ ಅನೈತಿಕ ವ್ಯಕ್ತಿಯಾಗಿ ಪರಿಗಣಿಸಲಾಗುವಲ್ಲಿ ನಿಮಗೆ ಹೇಗನಿಸಬಹುದು? * ಖಂಡಿತವಾಗಿಯೂ ನಿಮಗೆ ತುಂಬ ಕೋಪ ಬರುವುದು ಅಲ್ಲವೆ? ದುಃಖಕರವಾಗಿಯೇ, ಲಕ್ಷಾಂತರ ಮಂದಿಯ ಅನುಭವವು ಇದೇ ಆಗಿದೆ. ಅಷ್ಟುಮಾತ್ರವಲ್ಲ, ಮಾನವ ಇತಿಹಾಸದಾದ್ಯಂತ ಅಸಂಖ್ಯಾತ ಮುಗ್ಧ ಜನರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಮತ್ತು ಹತ್ಯೆಗೈಯಲ್ಪಟ್ಟಿದ್ದಾರೆ ಕೂಡ, ಮತ್ತು ಇದಕ್ಕಾಗಿರುವ ಏಕಮಾತ್ರ ಕಾರಣ ಅವರ ಜಾತಿ ಅಥವಾ ರಾಷ್ಟ್ರೀಯತೆಯೇ ಆಗಿದೆ. ವಾಸ್ತವದಲ್ಲಿ, ಇಂದು ನಡೆಯುತ್ತಿರುವ ಅಧಿಕಾಂಶ ರಕ್ತಮಯ ಸಂಘರ್ಷಗಳ ಮೂಲ ಕಾರಣವು ಕುಲಸಂಬಂಧಿತ ದ್ವೇಷವೇ ಆಗಿದೆ. ಆದರೂ, ನಿಜ ಹೇಳಬೇಕೆಂದರೆ, ಇಂಥ ಹಿಂಸಾತ್ಮಕ ವಿಚಾರಗಳನ್ನು ಬೆಂಬಲಿಸುವಂಥ ಅನೇಕರು ದೇವರಲ್ಲಿ ಮತ್ತು ಬೈಬಲಿನಲ್ಲಿ ನಂಬಿಕೆಯಿಡುತ್ತೇವೆಂದು ಹೇಳಿಕೊಳ್ಳುವವರೇ ಆಗಿದ್ದಾರೆ. ಮತ್ತು ಜಾತಿವಾದವು ಎಂದೂ ತೊಲಗುವುದಿಲ್ಲ, ಅದು ಮಾನವ ಸ್ವಭಾವ ಲಕ್ಷಣದ ಒಂದು ಭಾಗವಾಗಿಯೇ ಉಳಿಯುತ್ತದೆ ಎಂದು ಪ್ರತಿಪಾದಿಸುವವರೂ ಇದ್ದಾರೆ.
ಬೈಬಲು ಈ ರೀತಿಯ ಕುಲಸಂಬಂಧಿತ ದ್ವೇಷವನ್ನು ಖಂಡಿಸುತ್ತದೋ? ಭಿನ್ನ ಸಂಸ್ಕೃತಿ ಅಥವಾ ಭಿನ್ನ ಕುಲದವರಾಗಿರುವ ಜನರನ್ನು ದ್ವೇಷಿಸುವುದನ್ನು ಸಮರ್ಥಿಸುವಂಥ ಸನ್ನಿವೇಶಗಳು ಇವೆಯೋ? ಕುಲಸಂಬಂಧಿತ ದ್ವೇಷವಿಲ್ಲದ ಒಂದು ಭವಿಷ್ಯತ್ತಿನ ಯಾವುದೇ ನಿರೀಕ್ಷೆಯಿದೆಯೋ? ಈ ವಿಷಯದಲ್ಲಿ ಬೈಬಲಿನ ದೃಷ್ಟಿಕೋನವೇನು?
ಅವರ ಕೃತ್ಯಗಳಿಂದಲೇ ಖಂಡಿಸಲ್ಪಟ್ಟವರು
ಮಾನವಕುಲದೊಂದಿಗಿನ ದೇವರ ಆರಂಭದ ವ್ಯವಹಾರಗಳನ್ನು ಕೇವಲ ಮೇಲುಮೇಲಾಗಿ ಪುನರ್ವಿಮರ್ಶಿಸುವುದು ಒಬ್ಬನನ್ನು ತಪ್ಪಾದ ನಿರ್ಧಾರಕ್ಕೆ, ಅಂದರೆ ದೇವರು ನಿಜವಾಗಿಯೂ ಕುಲಸಂಬಂಧಿತ ದ್ವೇಷವನ್ನು ಬೆಂಬಲಿಸಿದನು ಎಂಬ ಆಲೋಚನೆಗೆ ನಡೆಸಬಹುದು. ಅನೇಕ ಬೈಬಲ್ ವೃತ್ತಾಂತಗಳು ದೇವರನ್ನು ಒಂದು ಇಡೀ ಬುಡಕಟ್ಟುಗಳ ಅಥವಾ ಜನಾಂಗಗಳ ಸಂಹಾರಕನನ್ನಾಗಿ ಚಿತ್ರಿಸುವುದಿಲ್ಲವೋ? ಹೌದು, ಆದರೆ ಹೆಚ್ಚು ಜಾಗರೂಕವಾಗಿ ಮಾಡಿದ ಪರಿಶೀಲನೆಯು, ತನ್ನ ನಿಯಮಗಳ ಕಡೆಗೆ ಅವರು ತೋರಿಸಿದ ಅನೈತಿಕ ಅಗೌರವದ ಕಾರಣದಿಂದಲೇ ದೇವರು ಅವರನ್ನು ಖಂಡಿಸಿದನೇ ಹೊರತು ಅವರ ಕುಲಸಂಬಂಧಿತ ಹಿನ್ನೆಲೆಯ ಕಾರಣದಿಂದಲ್ಲ ಎಂಬುದನ್ನು ಸೂಚಿಸುತ್ತದೆ.
ಉದಾಹರಣೆಗೆ, ಕಾನಾನ್ಯರ ನೀತಿಭ್ರಷ್ಟ ಲೈಂಗಿಕ ಹಾಗೂ ಪೈಶಾಚಿಕ ಮತಸಂಸ್ಕಾರಗಳ ಕಾರಣದಿಂದ ಯೆಹೋವ ದೇವರು ಅವರನ್ನು ದಂಡನೆಗೆ ಗುರಿಮಾಡಿದನು. ಅವರು ಸುಳ್ಳು ದೇವತೆಗಳಿಗೆ ತಮ್ಮ ಮಕ್ಕಳನ್ನೂ ಯಜ್ಞವಾಗಿ ಆಹುತಿಕೊಟ್ಟರು! (ಧರ್ಮೋಪದೇಶಕಾಂಡ 7:5; 18:9-12) ಆದರೂ, ಕೆಲವು ವಿದ್ಯಮಾನಗಳಲ್ಲಿ, ಕೆಲವು ಕಾನಾನ್ಯರು ದೇವರಲ್ಲಿ ನಂಬಿಕೆಯನ್ನಿಟ್ಟರು ಮತ್ತು ಪಶ್ಚಾತ್ತಾಪಪಟ್ಟರು. ಅದಕ್ಕನುಸಾರ ಯೆಹೋವನು ಅವರ ಜೀವಗಳನ್ನು ಉಳಿಸಿದನು ಮತ್ತು ಅವರನ್ನು ಆಶೀರ್ವದಿಸಿದನು. (ಯೆಹೋಶುವ 9:3, 25-27; ಇಬ್ರಿಯ 11:31) ರಾಹಾಬಳೆಂಬ ಒಬ್ಬ ಕಾನಾನ್ಯ ಸ್ತ್ರೀಯು, ವಾಗ್ದತ್ತ ಮೆಸ್ಸೀಯನಾದ ಯೇಸು ಕ್ರಿಸ್ತನ ಪೂರ್ವಜಳೂ ಆದಳು.—ಮತ್ತಾಯ 1:5.
ಇಸ್ರಾಯೇಲ್ಯರಿಗೆ ದೇವರು ಕೊಟ್ಟ ಧರ್ಮಶಾಸ್ತ್ರವು, ಆತನು ಪಕ್ಷಪಾತಿಯಲ್ಲವೆಂಬುದನ್ನು ತೋರಿಸುತ್ತದೆ. ಅದಕ್ಕೆ ಬದಲಾಗಿ, ಎಲ್ಲಾ ಜನರ ಹಿತಕ್ಷೇಮಕ್ಕೋಸ್ಕರ ಆತನು ನಿಜವಾದ ಚಿಂತೆಯನ್ನು ತೋರಿಸುತ್ತಾನೆ. ಯಾಜಕಕಾಂಡ 19:33, 34ರಲ್ಲಿ, ದೇವರಿಂದ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ಈ ಮುಂದಿನ ಅನುಕಂಪಭರಿತ ಆಜ್ಞೆಯನ್ನು ನಾವು ಕಂಡುಕೊಳ್ಳುತ್ತೇವೆ: “ನಿಮ್ಮ ದೇಶದಲ್ಲಿ ಇಳುಕೊಂಡಿರುವ ಪರದೇಶದವರಿಗೆ ಅನ್ಯಾಯವೇನೂ ಮಾಡಬಾರದು. ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ. ನಾನು ನಿಮ್ಮ ದೇವರಾದ ಯೆಹೋವನು.” ವಿಮೋಚನಕಾಂಡ ಮತ್ತು ಧರ್ಮೋಪದೇಶಕಾಂಡ ಪುಸ್ತಕಗಳಲ್ಲಿ ತದ್ರೀತಿಯ ಆಜ್ಞೆಗಳು ಕಂಡುಬರುತ್ತವೆ. ಯೆಹೋವನು ಕುಲಸಂಬಂಧಿತ ದ್ವೇಷವನ್ನು ನ್ಯಾಯಸಮ್ಮತವೆಂದು ಸಮರ್ಥಿಸಲಿಲ್ಲ ಎಂಬುದು ಸುಸ್ಪಷ್ಟ. ಆತನು ಯಾವಾಗಲೂ ಕುಲಸಂಬಂಧಿತ ಸಾಮರಸ್ಯವನ್ನೇ ಒತ್ತಿಹೇಳಿದನು.
ಯೇಸು ಕುಲಸಂಬಂಧಿತ ಸಹಿಷ್ಣುತೆಯನ್ನು ಉತ್ತೇಜಿಸಿದನು
ಯೇಸು ಭೂಮಿಯಲ್ಲಿದ್ದಾಗ, ಯೆಹೂದ್ಯರು ಸಮಾರ್ಯದವರನ್ನು ತಿರಸ್ಕಾರದಿಂದ ಕಾಣುವುದು ವಾಡಿಕೆಯಾಗಿತ್ತು. ಒಂದು ಸಂದರ್ಭದಲ್ಲಿ, ಯೇಸು ಯೆರೂಸಲೇಮಿಗೆ ಹೋಗುತ್ತಿದ್ದ ಒಬ್ಬ ಯೆಹೂದ್ಯನಾಗಿದ್ದನು ಎಂಬ ಒಂದೇ ಕಾರಣಕ್ಕಾಗಿ ಸಮಾರ್ಯದಲ್ಲಿನ ಒಂದು ಹಳ್ಳಿಯ ಜನರು ಅವನನ್ನು ತಮ್ಮಲ್ಲಿ ಸೇರಿಸಿಕೊಳ್ಳಲಿಲ್ಲ. ನೀವು ಆ ತಿರಸ್ಕಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದ್ದೀರಿ? “ಸ್ವಾಮೀ, ಆಕಾಶದಿಂದ ಬೆಂಕಿಬಿದ್ದು ಇವರನ್ನು ನಾಶಮಾಡಲಿ ಎಂದು ನಾವು ಹೇಳುವದಕ್ಕೆ ನಿನಗೆ ಮನಸ್ಸುಂಟೋ” ಎಂದು ಯೇಸುವಿನ ಶಿಷ್ಯರು ಅವನನ್ನು ಕೇಳಿದಾಗ, ಅವರು ಸಹ ಆ ದಿನಗಳಲ್ಲಿ ಸರ್ವಸಾಮಾನ್ಯವಾಗಿದ್ದ ಪೂರ್ವಕಲ್ಪಿತ ಅಭಿಪ್ರಾಯವನ್ನೇ ತೋರಿಸಿದ್ದಿರಬಹುದು. (ಲೂಕ 9:51-56) ತನ್ನ ಶಿಷ್ಯರ ಕಹಿ ಮನೋಭಾವವು ತನ್ನನ್ನು ಪ್ರಭಾವಿಸುವಂತೆ ಯೇಸು ಅನುಮತಿಸಿದನೋ? ಇಲ್ಲ, ಅದಕ್ಕೆ ಬದಲಾಗಿ ಅವನು ಅವರನ್ನು ಗದರಿಸಿದನು ಮತ್ತು ಶಾಂತಭಾವದಿಂದ ಬೇರೊಂದು ಹಳ್ಳಿಗೆ ಹೋಗಿ ಇಳುಕೊಳ್ಳಲು ಏರ್ಪಾಡುಗಳನ್ನು ಮಾಡಿದನು. ಸ್ವಲ್ಪ ಸಮಯಾನಂತರವೇ ಯೇಸು ನೆರೆಯವನಾದ ಸಮಾರ್ಯದವನ ಸಾಮ್ಯವನ್ನು ಅವರಿಗೆ ಹೇಳಿದನು. ವ್ಯಕ್ತಿಯೊಬ್ಬನ ಕುಲಸಂಬಂಧಿತ ಹಿನ್ನೆಲೆಯು ತಾನೇ ಒಬ್ಬನನ್ನು ಇನ್ನೊಬ್ಬರ ವೈರಿಯನ್ನಾಗಿ ಮಾಡುವುದಿಲ್ಲ ಎಂಬುದನ್ನು ಇದು ಬಲವತ್ತಾಗಿ ದೃಷ್ಟಾಂತಿಸಿತು. ವಾಸ್ತವದಲ್ಲಿ, ಒಂದು ದಿನ ಅವನೇ ಒಬ್ಬ ಒಳ್ಳೇ ನೆರೆಯವನಾಗಿ ಪರಿಣಮಿಸಬಹುದು!
ಕ್ರೈಸ್ತ ಸಭೆಯಲ್ಲಿ ಕುಲಸಂಬಂಧಿತ ಗುಂಪುಗಳು
ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯೇಸು, ತನ್ನ ಸ್ವಂತ ಜನಾಂಗದ ಜನರ ನಡುವೆ ಶಿಷ್ಯರನ್ನಾಗಿ ಮಾಡುವ ಕೆಲಸದ ಮೇಲೆ ಮೂಲತಃ ಮನಸ್ಸನ್ನು ಕೇಂದ್ರೀಕರಿಸಿದನು. ಆದರೆ ಕಾಲಕ್ರಮೇಣ ಇತರರೂ ತನ್ನ ಹಿಂಬಾಲಕರಾಗುವರು ಎಂದು ಅವನು ಸೂಚಿಸಿದನು. (ಮತ್ತಾಯ 28:19) ಎಲ್ಲಾ ಕುಲಸಂಬಂಧಿತ ಗುಂಪುಗಳ ಜನರು ಅಂಗೀಕರಿಸಲ್ಪಡುವರೋ? ಹೌದು! ಅಪೊಸ್ತಲ ಪೇತ್ರನು ಹೇಳಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” (ಅ. ಕೃತ್ಯಗಳು 10:34, 35) ಸಮಯಾನಂತರ ಅಪೊಸ್ತಲ ಪೌಲನು, ಒಬ್ಬ ವ್ಯಕ್ತಿಯ ಕುಲಸಂಬಂಧಿತ ಹಿನ್ನೆಲೆಗೆ ಕ್ರೈಸ್ತ ಸಭೆಯಲ್ಲಿ ಯಾವುದೇ ಪ್ರಾಮುಖ್ಯತೆಯಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಇದೇ ವಿಚಾರವನ್ನು ಬೆಂಬಲಿಸಿದನು.—ಕೊಲೊಸ್ಸೆ 3:11.
ದೇವರು ಎಲ್ಲಾ ಕುಲಸಂಬಂಧಿತ ಗುಂಪುಗಳ ಜನರನ್ನು ಅಂಗೀಕರಿಸುತ್ತಾನೆ ಎಂಬುದಕ್ಕಿರುವ ಇನ್ನೊಂದು ಸೂಚನೆಯು, ಬೈಬಲಿನ ಪ್ರಕಟನೆ ಪುಸ್ತಕದಲ್ಲಿ ಕಂಡುಬರುತ್ತದೆ. ಒಂದು ದೈವಪ್ರೇರಿತ ದರ್ಶನದಲ್ಲಿ ಅಪೊಸ್ತಲ ಯೋಹಾನನು ‘ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದ’ ಮತ್ತು ದೇವರಿಂದ ರಕ್ಷಣೆಯನ್ನು ಪಡೆದ ‘ಒಂದು ಮಹಾ ಸಮೂಹವನ್ನು’ ಕಂಡನು. (ಪ್ರಕಟನೆ 7:9, 10) ಈ “ಮಹಾ ಸಮೂಹವು” ಒಂದು ಹೊಸ ಮಾನವ ಸಮಾಜದ ಅಸ್ತಿವಾರವಾಗಿರುವುದು, ಇದರಲ್ಲಿ ಎಲ್ಲಾ ಹಿನ್ನೆಲೆಗಳಿಂದ ಬಂದ ಜನರು ದೇವರಿಗಾಗಿರುವ ತಮ್ಮ ಪ್ರೀತಿಯಿಂದ ಐಕ್ಯರಾಗಿದ್ದು, ಶಾಂತಿಯಿಂದ ಒಟ್ಟಿಗೆ ವಾಸಿಸುವರು.
ಈ ಮಧ್ಯೆ, ಇತರರ ಕುಲಸಂಬಂಧಿತ ಹಿನ್ನೆಲೆಯ ಕಾರಣದಿಂದ ಅವರ ಕುರಿತು ಪೂರ್ವಾಭಿಪ್ರಾಯವನ್ನು ಇಟ್ಟುಕೊಳ್ಳುವ ಪ್ರಚೋದನೆಯನ್ನು ಕ್ರೈಸ್ತರು ಪ್ರತಿರೋಧಿಸಬೇಕು. ಜನರನ್ನು ಕೇವಲ ಕುಲಸಂಬಂಧಿತ ಗುಂಪುಗಳ ಸದಸ್ಯರಾಗಿ ಅಲ್ಲ, ಬದಲಾಗಿ ದೇವರು ಜನರನ್ನು ಹೇಗೆ ವೀಕ್ಷಿಸುತ್ತಾನೋ ಅದೇ ರೀತಿಯಲ್ಲಿ ನಾವು ಪ್ರತಿಯೊಬ್ಬರನ್ನು ವೀಕ್ಷಿಸುವುದು ನ್ಯಾಯೋಚಿತವಾಗಿದೆ ಮತ್ತು ಪ್ರೀತಿಪೂರ್ಣವಾದದ್ದಾಗಿದೆ. ನೀವು ಸಹ ಇದೇ ರೀತಿ ವೀಕ್ಷಿಸಲ್ಪಡಬೇಕೆಂದು ಬಯಸುತ್ತೀರಲ್ಲವೇ? ಯೇಸು ಸೂಕ್ತವಾಗಿಯೇ ನಮಗೆ ಬುದ್ಧಿಹೇಳುವುದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಕುಲಸಂಬಂಧಿತ ದ್ವೇಷವಿಲ್ಲದೆ ಜೀವಿಸುವುದು ನಿಜವಾಗಿಯೂ ಹರ್ಷಕರವಾಗಿದೆ. ಇದರ ಫಲಿತಾಂಶವಾಗಿ ಅತ್ಯಧಿಕ ಮನಶ್ಶಾಂತಿ ದೊರಕುತ್ತದೆ ಮತ್ತು ಇತರರೊಂದಿಗೆ ಶಾಂತಿದಾಯಕ ಸಂಬಂಧವು ಬೆಳೆಯುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ಇದು ನಮ್ಮ ನಿಷ್ಪಕ್ಷಪಾತಿ ಸೃಷ್ಟಿಕರ್ತನಾದ ಯೆಹೋವ ದೇವರೊಂದಿಗೆ ಹೊಂದಿಕೊಂಡು ನಡೆಯುವಂತೆ ಮಾಡುತ್ತದೆ. ಕುಲಸಂಬಂಧಿತ ದ್ವೇಷವನ್ನು ತಿರಸ್ಕರಿಸಲು ಇದೆಷ್ಟು ಮನವೊಲಿಸುವಂಥ ಕಾರಣವಾಗಿದೆ! (g03 8/8)
[ಪಾದಟಿಪ್ಪಣಿ]
^ ಈ ಲೇಖನದಲ್ಲಿ ಉಪಯೋಗಿಸಲ್ಪಟ್ಟಿರುವ “ಕುಲಸಂಬಂಧಿತ ಗುಂಪು” ಎಂಬ ವಾಕ್ಸರಣಿಯು, ಒಂದೇ ರೀತಿಯ ಜಾತಿ, ರಾಷ್ಟ್ರ, ಬುಡಕಟ್ಟು ಅಥವಾ ಸಾಂಸ್ಕೃತಿಕ ಮೂಲಕ್ಕೆ ಸೇರಿರುವ ಜನರನ್ನು ಸೂಚಿಸುತ್ತದೆ.