ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ಇಬ್ಬರು ಯಜಮಾನರ ಸೇವೆಮಾಡಲು ಪ್ರಯತ್ನಿಸಿದೆ

ನಾನು ಇಬ್ಬರು ಯಜಮಾನರ ಸೇವೆಮಾಡಲು ಪ್ರಯತ್ನಿಸಿದೆ

ನಾನು ಇಬ್ಬರು ಯಜಮಾನರ ಸೇವೆಮಾಡಲು ಪ್ರಯತ್ನಿಸಿದೆ

ಕೆನ್‌ ಪೇನ್‌ ಅವರು ಹೇಳಿದಂತೆ

ನಾನು 1938ರಲ್ಲಿ ಜನಿಸಿದೆ ಮತ್ತು ಯು.ಎಸ್‌.ಎ.ಯ ನ್ಯೂ ಮೆಕ್ಸಿಕೊದಲ್ಲಿರುವ ನನ್ನ ಅಜ್ಜನ ಪಶುಪಾಲನಾ ಕ್ಷೇತ್ರದಲ್ಲಿ ಬೆಳೆಸಲ್ಪಟ್ಟೆ. ಇದು ತೊರೆಗಳು ಮತ್ತು ಹುಲ್ಲುಗಾವಲುಗಳನ್ನು ಆವರಿಸಿದ್ದ 24,000 ಎಕ್ರೆಗಳಷ್ಟು ವಿಸ್ತಾರವಾದ ಕ್ಷೇತ್ರವಾಗಿದ್ದು, ಅದರ ಹಿನ್ನೆಲೆಯಲ್ಲಿ ಪರ್ವತಗಳಿದ್ದವು. ಕುರಿಗಳು, ದನಕರುಗಳು ಮತ್ತು ಕುದುರೆಗಳ ಧ್ವನಿಯನ್ನು ಹಾಗೂ ಗೊಲ್ಲರ ಪಾದರಕ್ಷೆಗಳಲ್ಲಿದ್ದ ಚಿಕ್ಕ ಗಾಲಿಗಳ ಝಣಝಣ ನಾದವನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಕೆಲವೊಮ್ಮೆ ಹುಲ್ಲುಗಾವಲಿನಲ್ಲಿ ಬೀಸುವ ತಂಗಾಳಿಯ ಪಿಸುಧ್ವನಿಗೆ ನಾನು ಕಿವಿಗೊಡುತ್ತಿದ್ದೆ ಮತ್ತು ಇದಕ್ಕೆ ತದ್ವಿರುದ್ಧವಾದ, ಪ್ರಾಣಿಗಳ ದಾಹವನ್ನು ತಣಿಸಲಿಕ್ಕಾಗಿ ಕಟ್ಟಲ್ಪಟ್ಟಿದ್ದ ನೀರಿನ ತೊಟ್ಟಿಯ ಸುತ್ತಲೂ ಇರುತ್ತಿದ್ದ ಕಿಲ್‌ಡೀರ್ಸ್‌ ಪಕ್ಷಿಗಳ ಕರ್ಕಶ ಧ್ವನಿಯನ್ನೂ ಆಲಿಸುತ್ತಿದ್ದೆ.

ಒಬ್ಬನ ಜೀವಿತದ ಆರಂಭದ ಭಾಗದಲ್ಲಿ ಬೀರಲ್ಪಡುವಂಥ ಪ್ರಭಾವಗಳು ಅವನ ಮೇಲೆ ಆಳವಾದ ಮತ್ತು ಅಚ್ಚಳಿಯದ ಪರಿಣಾಮವನ್ನು ಬೀರಸಾಧ್ಯವಿದೆ. ನನ್ನ ಅಜ್ಜನೊಂದಿಗೆ ನಾನು ತಾಸುಗಟ್ಟಲೆ ಸಮಯವನ್ನು ಕಳೆದಿದ್ದೇನೆ; ಮತ್ತು ಅವರು ಪಶ್ಚಿಮ ಯುನೈಟೆಡ್‌ ಸ್ಟೇಟ್ಸ್‌ನ ಬಗ್ಗೆ ಅನೇಕ ಕಥೆಗಳನ್ನು ಹೇಳುತ್ತಿದ್ದರು. ಅವರಿಗೆ ಬಿಲೀ ದ ಕಿಡ್‌ ಎಂಬ ಚಿಕ್ಕ ಪ್ರಾಯದ ದುಷ್ಕರ್ಮಿಯ ಜೊತೆಗಿದ್ದವರ ಪರಿಚಯವಿತ್ತು. ಈ ದುಷ್ಕರ್ಮಿಯು, ಆವೇಶದಲ್ಲಿ ಒಂದರ ನಂತರ ಇನ್ನೊಂದು ಕೊಲೆಯನ್ನು ಮಾಡಿ ಕುಖ್ಯಾತನಾದನು, ಮತ್ತು 1881ರಲ್ಲಿ ಅವನು 21 ವರ್ಷ ಪ್ರಾಯದಲ್ಲಿ ಮರಣಪಟ್ಟಾಗ ಆ ಕೊಲೆಸರಣಿಯು ಅಂತ್ಯಗೊಂಡಿತು.

ನನ್ನ ಹೆತ್ತವರು ಯೆಹೋವನ ಸಾಕ್ಷಿಗಳಾಗಿದ್ದರು. ಅವರು ನನ್ನನ್ನು ಬಹು ದೂರದಲ್ಲಿದ್ದ ಜಾನುವಾರು ಕ್ಷೇತ್ರಗಳಿಗೆ ಮತ್ತು ಹಾಂಡೊ ಕಣಿವೆಯ ಏರುತಗ್ಗುಗಳಲ್ಲಿದ್ದ ಸಾಧಾರಣವಾದ ಹಸಿ ಇಟ್ಟಿಗೆಯ ಮನೆಗಳಿಗೆ ಕ್ರೈಸ್ತ ಶುಶ್ರೂಷೆಗಾಗಿ ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು. ಅನೇಕವೇಳೆ ಅವರು ಜೆ. ಎಫ್‌. ರದರ್‌ಫರ್ಡರ ಧ್ವನಿಯುಳ್ಳ ಬೈಬಲ್‌ ರೆಕಾರ್ಡಿಂಗ್‌ಗಳೊಂದಿಗೆ ಒಂದು ಫೋನೋಗ್ರಾಫನ್ನು ಉಪಯೋಗಿಸುತ್ತಿದ್ದರು. ಈ ರೆಕಾರ್ಡಿಂಗ್‌ಗಳು ನನ್ನ ಮನಸ್ಸಿನ ಮೇಲೆ ಅಚ್ಚಳಿಯದೆ ಉಳಿದವು. * ಪಶುಪಾಲನಾ ಕ್ಷೇತ್ರಗಳ ಒಡೆಯರು, ಮೆಕ್ಸಿಕನ್‌ ರೈತರು ಮತ್ತು ಅಪ್ಯಾಚಿ ಹಾಗೂ ಪ್ವೆಬ್ಲೊ ಬುಡಕಟ್ಟಿಗೆ ಸೇರಿದ್ದ ಅಮೆರಿಕನ್‌ ಇಂಡಿಯನ್ನರು​—⁠ಹೀಗೆ ಎಲ್ಲಾ ವಿಧದ ಜನರಿಗೆ ನಾವು ರದರ್‌ಫರ್ಡರ ಈ ಭಾಷಣಗಳನ್ನು ನುಡಿಸಿದೆವು. ಪತ್ರಿಕೆಗಳನ್ನು ಕೊಟ್ಟು ಮಾಡಲಾಗುತ್ತಿದ್ದ ಬೀದಿ ಸಾಕ್ಷಿಕಾರ್ಯವನ್ನು ನಾನು ತುಂಬ ಇಷ್ಟಪಡುತ್ತಿದ್ದೆ. ಏಕೆಂದರೆ ಆ ಯುದ್ಧದ ವರ್ಷಗಳಲ್ಲಿ ಸಹ ಒಬ್ಬ ಚಿಕ್ಕ ಹುಡುಗನಾಗಿದ್ದ ನನ್ನಿಂದ ಪತ್ರಿಕೆಗಳನ್ನು ಪಡೆದುಕೊಳ್ಳಲು ನಿರಾಕರಿಸಿದವರು ತೀರಾ ಕಡಿಮೆ.

ಹೌದು, ನನಗೆ ಒಂದು ಒಳ್ಳೇ ಅಸ್ತಿವಾರವಿತ್ತು. ಆದರೂ, “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ” ಎಂಬ ಯೇಸುವಿನ ಎಚ್ಚರಿಕೆಗೆ ಕಿವಿಗೊಡಲು ನಾನು ತಪ್ಪಿಹೋದೆ. (ಮತ್ತಾಯ 6:24) ನಾನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಅದ್ಭುತಕರವಾದ ಜೀವನವನ್ನು ಸಾಗಿಸಿದ್ದೇನೆ ಎಂದು ಹೇಳಸಾಧ್ಯವಾಗುತ್ತಿದ್ದರೆ ಎಷ್ಟೋ ಒಳ್ಳೇದಿತ್ತು. ಇದಕ್ಕೆ ವಿಪರ್ಯಾಸವಾಗಿ, ಆರಂಭದಲ್ಲಿಯೇ ನಾನು ಮೂರು ವರ್ಷದವನಾಗಿದ್ದಾಗಿನಿಂದ ನನ್ನ ಮೇಲೆ ಪ್ರಭಾವ ಬೀರಿದ್ದ ಇನ್ನೊಬ್ಬ ‘ಯಜಮಾನನು’ ನನ್ನನ್ನು ಬೇರೆ ಹಾದಿಗೆ ನಡೆಸಿದನು. ಏನು ಸಂಭವಿಸಿತು?

ಹಾರುವುದು ನನ್ನ ಹುಚ್ಚಾಯಿತು

ಇಸವಿ 1941ರಲ್ಲಿ ಒಂದು ಪೈಪರ್‌ ಕಬ್‌ ವಿಮಾನವು ಕಣಜದ ಬಳಿ ಬಂದಿಳಿಯಿತು. ನಮ್ಮ ಕುರಿಗಳನ್ನು ಕದಿಯುತ್ತಿದ್ದ ತೋಳಗಳನ್ನು ಬೇಟೆಯಾಡಲಿಕ್ಕಾಗಿ ಇದನ್ನು ಉಪಯೋಗಿಸಲಾಗುತ್ತಿತ್ತು. ಆ ಕ್ಷಣದಲ್ಲಿಯೇ ಅಂದರೆ ನಾನು ಮೂರು ವರ್ಷದವನಾಗಿದ್ದಾಗಲೇ, ನಾನು ಒಬ್ಬ ವಿಮಾನಚಾಲಕನಾಗಬೇಕೆಂದು ಮನಸ್ಸಿನಲ್ಲೇ ನಿರ್ಧರಿಸಿಕೊಂಡೆ. ಬೆಳವಣಿಗೆಯ ವರ್ಷಗಳು ಕಳೆದುಹೋದವು ಮತ್ತು 17ರ ಪ್ರಾಯದಲ್ಲಿ ನಾನು ಮನೆಯಿಂದ ಹೊರಬಂದೆ ಹಾಗೂ ನ್ಯೂ ಮೆಕ್ಸಿಕೋದ ಹಾಬ್ಸ್‌ನಲ್ಲಿದ್ದ ವಿಮಾನನಿಲ್ದಾಣದಲ್ಲಿ ಕೆಲಸಕ್ಕೆ ಸೇರಿದೆ. ವಿಮಾನ ನಡೆಸುವ ಪಾಠಗಳನ್ನು ಕಲಿಯುವುದಕ್ಕೆ ಪ್ರತಿಯಾಗಿ ಅಲ್ಲಿನ ವಿಮಾನಖಾನೆಗಳಲ್ಲಿ ಕಸಗುಡಿಸುವ ಮತ್ತು ಅವುಗಳನ್ನು ರಿಪೇರಿಮಾಡುವ ಕೆಲಸಮಾಡುತ್ತಿದ್ದೆ. ಕ್ರೈಸ್ತ ಶುಶ್ರೂಷೆಯು ನನ್ನ ಜೀವಿತದಲ್ಲಿ ಎರಡನೆಯ ಸ್ಥಾನಕ್ಕೆ ತಲಪಿತ್ತು.

ನನ್ನ 18ರ ಪ್ರಾಯದಲ್ಲಿ ನಾನು ಮದುವೆಯಾದೆ ಮತ್ತು ಕಾಲಕ್ರಮೇಣ ನಮಗೆ ಮೂವರು ಮಕ್ಕಳಾದರು. ನಾನು ಜೀವನೋಪಾಯಕ್ಕಾಗಿ ಏನು ಮಾಡುತ್ತಿದ್ದೆ? ಪೈರಿಗೆ ಕೀಟನಾಶಕವನ್ನು ಉದುರಿಸುವ ವಿಮಾನಗಳು, ಬಾಡಿಗೆ ವಿಮಾನಗಳು ಮತ್ತು ಪರಭಕ್ಷಕ ಪ್ರಾಣಿಗಳನ್ನು ಬೇಟೆಯಾಡುವ ವಿಮಾನಗಳಲ್ಲಿ ವಿಮಾನಚಾಲಕನಾಗಿ ಕೆಲಸಮಾಡುವ ಮೂಲಕ ಹಾಗೂ ಹಾರಾಟದ ಪಾಠಗಳನ್ನು ಕಲಿಸುವ ಮೂಲಕ ಜೀವನ ಸಾಗಿಸುತ್ತಿದ್ದೆ. ಸುಮಾರು ಆರು ವರ್ಷಗಳ ವರೆಗೆ ಈ ಕೆಲಸವನ್ನು ಮಾಡಿದ ಬಳಿಕ, ಟೆಕ್ಸಾಸ್‌ನ ಡಾಲಸ್‌ನ ಹೊರಗೆ ಹೋಗುವ ಟೆಕ್ಸಾಸ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನಲ್ಲಿ ವಿಮಾನಚಾಲಕನಾಗಿ ಕೆಲಸಮಾಡಲು ಆರಂಭಿಸಿದೆ. ಇದು ನನ್ನ ಜೀವನಕ್ಕೆ ಹೆಚ್ಚಿನ ಆರ್ಥಿಕ ಸ್ಥಿರತೆಯನ್ನು ನೀಡಿತು ಮತ್ತು ನಾನು ಡೆಂಟನ್‌ ಸಭೆಯಲ್ಲಿ ಒಬ್ಬ ಹಿರಿಯನಾಗಿಯೂ ಸೇವೆಮಾಡಿದೆ. ನಾನು ಅನೇಕ ಬೈಬಲ್‌ ಅಧ್ಯಯನಗಳನ್ನೂ ನಡೆಸುತ್ತಿದ್ದೆ. ಇವುಗಳಲ್ಲಿ ಒಂದು ಒಬ್ಬ ಏರ್‌ಲೈನ್‌ ಕ್ಯಾಪ್ಟನ್‌, ಅವನ ಹೆಂಡತಿ ಮತ್ತು ಅವರ ಕುಟುಂಬವು ಒಂದಾಗಿದ್ದು, ಇವರೆಲ್ಲರೂ ಬೈಬಲ್‌ ಸತ್ಯವನ್ನು ತಮ್ಮದಾಗಿ ಮಾಡಿಕೊಂಡರು.

ಇಸವಿ 1973ರಷ್ಟಕ್ಕೆ, ನಾನಾಗಲೇ ಸುಮಾರು ಮೂರು ವರ್ಷಗಳ ವರೆಗೆ ಪ್ರಾಪ್‌ಜೆಟ್‌ ವಿಮಾನಗಳಲ್ಲಿ ಚಾಲಕನಾಗಿ ಕೆಲಸಮಾಡುತ್ತಿದ್ದೆನಾದರೂ, DC-3 ವಿಮಾನದ ಉಪಯೋಗವು ನಿಲ್ಲಿಸಲ್ಪಟ್ಟಾಗ ನಾನು ಅದರಲ್ಲಿ ಆಸಕ್ತಿಯನ್ನು ಕಳೆದುಕೊಳ್ಳತೊಡಗಿದೆ. ನಿಜ ಹೇಳಬೇಕೆಂದರೆ, ನನ್ನ ಹೃದಯವು ಇನ್ನೂ ನ್ಯೂ ಮೆಕ್ಸಿಕೋಗಾಗಿ ಹಂಬಲಿಸುತ್ತಿತ್ತು. ಆದರೆ ನಾನು ವಿಮಾನಚಾಲಕ ಕೆಲಸವನ್ನು ಬಿಟ್ಟರೆ ಹೊಟ್ಟೆಪಾಡಿಗಾಗಿ ಇನ್ನೇನು ಮಾಡಸಾಧ್ಯವಿತ್ತು?

ನನಗೆ ಕಲಾಕೌಶಲದ ಹುಚ್ಚುಹಿಡಿಯಿತು

ಇಸವಿ 1961ರಿಂದ, ಅಮೆರಿಕನ್‌ ವೆಸ್ಟ್‌ನ ಚಿತ್ರಗಳನ್ನು ಬಿಡಿಸುವುದು ನನ್ನ ಹವ್ಯಾಸವಾಗಿತ್ತು ಮತ್ತು ಈ ಚಿತ್ರಕಲೆಯು ಒಳ್ಳೇ ರೀತಿಯಲ್ಲಿ ಮಾರಾಟವಾಗುತ್ತಿತ್ತು. ಆದುದರಿಂದ ನಾನು ಏರ್‌ಲೈನ್‌ಗೆ ರಾಜೀನಾಮೆ ನೀಡಿದೆ ಮತ್ತು ಸಮ್ಮೋಹಕ ದೇಶ ಎಂದು ಕರೆಯಲ್ಪಡುವಂಥ ನ್ಯೂ ಮೆಕ್ಸಿಕೋಗೆ ಹಿಂದಿರುಗಿದೆ. ಆದರೆ ನಾನು ಸಮತೂಕವನ್ನು ಕಾಪಾಡಿಕೊಳ್ಳಲಿಲ್ಲ. ಕಲಾಪ್ರೇಮವು ನನ್ನನ್ನು ಸಂಪೂರ್ಣವಾಗಿ ಅದರಲ್ಲೇ ಮಗ್ನಗೊಳಿಸುವಂತೆ ಬಿಟ್ಟುಕೊಟ್ಟೆ. ಚಿತ್ರಕಲೆ ಹಾಗೂ ನಂತರ ಶಿಲ್ಪಕಲೆ, ಇದರ ಜೊತೆಗೆ ಆಂಶಕಾಲಿಕ ವಿಮಾನಚಾಲಕ ಕೆಲಸವು ನನ್ನ ಸಮಯವನ್ನು ಸಂಪೂರ್ಣವಾಗಿ ಕಬಳಿಸಿಬಿಡುತ್ತಿತ್ತು. ದಿನವೊಂದಕ್ಕೆ ನಾನು 12ರಿಂದ 18 ತಾಸುಗಳಷ್ಟು ಸಮಯ ಕೆಲಸಮಾಡುತ್ತಿದ್ದೆ. ಇದರ ಪರಿಣಾಮವಾಗಿ ನನ್ನ ಕುಟುಂಬವನ್ನು ಹಾಗೂ ನನ್ನ ದೇವರನ್ನು ಸಂಪೂರ್ಣವಾಗಿ ಅಲಕ್ಷಿಸತೊಡಗಿದೆ. ನಂತರ ಏನಾಯಿತು?

ನನ್ನ ಮದುವೆಯು ಕುಸಿದುಬಿತ್ತು ಮತ್ತು ವಿವಾಹ ವಿಚ್ಛೇದದಲ್ಲಿ ಕೊನೆಗೊಂಡಿತು. ನಾನು ಉತ್ತರದಲ್ಲಿದ್ದ ಮೊಂಟಾನಾಕ್ಕೆ ಸ್ಥಳಾಂತರಿಸಿದೆ ಹಾಗೂ ಮದ್ಯಪಾನಕ್ಕೆ ಶರಣಾಗತನಾದೆ. ಈ ಅಕ್ರೈಸ್ತ ಜೀವನ ಶೈಲಿಯು, ಯೇಸುವಿನ ದೃಷ್ಟಾಂತದಲ್ಲಿ ತಿಳಿಸಲ್ಪಟ್ಟ ಪೋಲಿಹೋದ ಮಗನು ಹಿಡಿದ ಹಾದಿಯನ್ನೇ ನಾನೂ ಹಿಡಿಯುವಂತೆ ಮಾಡಿತು. (ಲೂಕ 15:​11-32) ತದನಂತರ ಒಂದು ದಿನ, ನನಗೆ ಒಬ್ಬ ನಿಜ ಸ್ನೇಹಿತನೂ ಇಲ್ಲ ಎಂಬುದು ಮನದಟ್ಟಾಯಿತು. ತೊಂದರೆಯಲ್ಲಿರುವ ಜನರನ್ನು ನಾನು ಭೇಟಿಯಾದಾಗ, “ಯೆಹೋವನ ಸಾಕ್ಷಿಗಳನ್ನು ಭೇಟಿಯಾಗಿ. ಅವರೇ ನಿಮಗೆ ನಿಜವಾಗಿಯೂ ಸಹಾಯಮಾಡಬಲ್ಲರು” ಎಂದು ನಾನು ಅವರಿಗೆ ಹೇಳುತ್ತಿದ್ದೆ. ಆಗ, “ಹಾಗಾದರೆ ನೀವು ಏಕೆ ಒಬ್ಬ ಸಾಕ್ಷಿಯಾಗಿಲ್ಲ?” ಎಂಬ ಉತ್ತರ ನನಗೆ ಸಿಗುತ್ತಿತ್ತು. ಒಬ್ಬನು, ನಾನು ಜೀವಿಸುತ್ತಿದ್ದಂಥ ರೀತಿಯ ಜೀವನ ಶೈಲಿಯನ್ನು ಬೆನ್ನಟ್ಟುತ್ತಿರುವಾಗ ಖಂಡಿತವಾಗಿಯೂ ಒಬ್ಬ ಸಾಕ್ಷಿಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ನಾನು ಆಗ ಅವರ ಮುಂದೆ ಒಪ್ಪಿಕೊಳ್ಳಲೇಬೇಕಾಗುತ್ತಿತ್ತು.

ಅಂತಿಮವಾಗಿ, 1978ರಲ್ಲಿ ನಾನು ನ್ಯೂ ಮೆಕ್ಸಿಕೋದಲ್ಲಿ ನನ್ನ ಪರಿಚಯವಿದ್ದ ಸಾಕ್ಷಿಗಳುಳ್ಳ ಸಭೆಗೆ ಹಿಂದಿರುಗಿದೆ. ಅನೇಕ ವರ್ಷಗಳ ಬಳಿಕ ನಾನು ಪ್ರಥಮ ಬಾರಿ ರಾಜ್ಯ ಸಭಾಗೃಹಕ್ಕೆ ಕಾಲಿರಿಸಿದ್ದೆ, ಮತ್ತು ಅಲ್ಲಿ ನಾನು ತಡೆಯಲಾಗದೆ ಅತ್ತುಬಿಟ್ಟೆ. ಯೆಹೋವನು ನನಗೆಷ್ಟು ಕರುಣೆ ತೋರಿಸಿದನು! ಸಭೆಯಲ್ಲಿದ್ದ ಸ್ನೇಹಿತರು ತುಂಬ ದಯಾಭರಿತರಾಗಿದ್ದರು ಮತ್ತು ಯೆಹೋವನ ಮಾರ್ಗಗಳಿಗೆ ಹಿಂದಿರುಗುವಂತೆ ಅವರು ನನಗೆ ಸಹಾಯಮಾಡಿದರು.

ಹೊಸ ಸಂಗಾತಿ ಮತ್ತು ಹೊಸ ಆರಂಭ

ಇಸವಿ 1980ರಲ್ಲಿ, ಅನೇಕ ವರ್ಷಗಳಿಂದ ನನಗೆ ಪರಿಚಯವಿದ್ದ ಒಬ್ಬ ಸುಂದರ ಸಾಕ್ಷಿಯಾಗಿದ್ದ ಕರನ್‌ಳನ್ನು ಮದುವೆಯಾದೆ. ಅವಳ ಮುಂಚಿನ ವಿವಾಹದಿಂದ ಅವಳಿಗೆ ಜೇಸನ್‌ ಹಾಗೂ ಜಾನಥನ್‌ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಯೆಹೋವನಿಗಾಗಿದ್ದ ತನ್ನ ಪ್ರೀತಿಯಿಂದ ಅವಳು ನನ್ನ ಜೀವನದಲ್ಲಿ ಸ್ಥಿರತೆಯನ್ನು ಮೂಡಿಸಿದಳು ಮತ್ತು ನಮಗೆ ಬೆನ್‌ ಹಾಗೂ ಫಿಲಿಪ್‌ ಎಂಬ ಇನ್ನೂ ಇಬ್ಬರು ಪುತ್ರರು ಜನಿಸಿದರು. ಆದರೆ ನಮ್ಮ ಮುಂದಿನ ಜೀವನವು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ನಮ್ಮ ಭವಿಷ್ಯತ್ತಿನಲ್ಲಿ ದುರಂತವು ಕಾದಿತ್ತು.

ನಾನು ಕಲಾಭ್ಯಾಸವನ್ನು ಮಾಡಿದೆ ಮತ್ತು ಮಾನವ ಹಾಗೂ ಪ್ರಾಣಿಯ, ಅದರಲ್ಲೂ ವಿಶೇಷವಾಗಿ ಕುದುರೆಗಳ ಅಂಗರಚನೆಯನ್ನು, ಹಾಗೂ ಸಂಯೋಜನೆಯನ್ನು, ಅನುಪಾತವನ್ನು ಮತ್ತು ಕಣ್ನೆಲೆ ಚಿತ್ರವನ್ನು ಕಲಿಯುವುದರಲ್ಲಿ ಅನೇಕ ತಾಸುಗಳನ್ನು ವ್ಯಯಿಸಿದೆ. ಸಮಯಾನಂತರ ನಾನು ಜೇಡಿಮಣ್ಣಿನಲ್ಲಿ ಶಿಲ್ಪಕಲಾಕೃತಿಗಳನ್ನು ಮಾಡುವ ಕೆಲಸವನ್ನು ಆರಂಭಿಸಿದೆ; ವಿಶೇಷವಾಗಿ ಪ್ರಾಚೀನಕಾಲದ ಪಶ್ಚಿಮದ ಕುರಿತಾದ ಮೂರ್ತಿಗಳನ್ನು ಮಾಡತೊಡಗಿದೆ. ಇವುಗಳಲ್ಲಿ ಕುದುರೆಗಳು, ಕುದುರೆಯ ಮೇಲೆ ಸವಾರಿಮಾಡುತ್ತಿರುವ ಇಂಡಿಯನ್ನರು, ಗೊಲ್ಲರು ಹಾಗೂ ಒಂದು ಕುದುರೆ ಮತ್ತು ಗಾಡಿಯಲ್ಲಿ ಪ್ರಯಾಣಿಸುತ್ತಿರುವ ಹಳೇ ಕಾಲದ ಒಬ್ಬ ವೈದ್ಯನ ಶಿಲ್ಪಕೃತಿಗಳು ಸೇರಿದ್ದವು. ಇದರಲ್ಲಿ ನಾನು ಸಫಲನಾಗತೊಡಗಿದೆ. ಆದುದರಿಂದ ನಾವು ಒಂದು ಕಲಾಮಂದಿರವನ್ನು ತೆರೆಯುವ ನಿರ್ಧಾರವನ್ನು ಮಾಡಿದೆವು. ಕರನ್‌ ಇದಕ್ಕೆ ಮೌಂಟೆನ್‌ ಟ್ರೈಲ್ಸ್‌ ಗ್ಯಾಲರಿ ಎಂಬ ಹೆಸರನ್ನು ಹೊಸದಾಗಿ ರಚಿಸಿದಳು.

ಇಸವಿ 1987ರಲ್ಲಿ ನಾವು ಆರಿಸೋನದ ಸೆಡೋನದಲ್ಲಿ ಒಂದು ಕಲಾಮಂದಿರವನ್ನು ಖರೀದಿಸಿದೆವು ಮತ್ತು ಇದಕ್ಕೆ ಆ ಹೆಸರನ್ನು ಕೊಟ್ಟೆವು. ಕರನ್‌ ಕಲಾಮಂದಿರವನ್ನು ನೋಡಿಕೊಳ್ಳುತ್ತಿದ್ದಳು ಮತ್ತು ನಾನು ಮನೆಯಲ್ಲೇ ಇದ್ದುಕೊಂಡು ಕಲಾ ಕಾರ್ಯಶಾಲೆಯಲ್ಲಿ ಕೆಲಸಮಾಡಿಕೊಂಡು, ಮಕ್ಕಳ ಆರೈಕೆಮಾಡುತ್ತಿದ್ದೆ. ಆದರೂ, ಮಕ್ಕಳು ಅಸ್ವಸ್ಥರಾದರು ಮತ್ತು ವ್ಯಾಪಾರ ಕೂಡ ಒಳ್ಳೇ ರೀತಿಯಲ್ಲಿ ನಡೆಯುತ್ತಿರಲಿಲ್ಲ. ಆದುದರಿಂದ ಕರನ್‌ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವಂತಾಗಲು ನಾವು ನಮ್ಮ ಸ್ಥಾನಗಳನ್ನು ಬದಲಾಯಿಸುವ ನಿರ್ಧಾರವನ್ನು ಮಾಡಿದೆವು. ನಾನು ಜೇಡಿಮಣ್ಣನ್ನು ಕಲಾಮಂದಿರಕ್ಕೇ ತೆಗೆದುಕೊಂಡುಹೋಗಿ, ಗಿರಾಕಿಗಳ ಕಣ್ಮುಂದೆಯೇ ಶಿಲ್ಪಕಲಾಕೃತಿಗಳನ್ನು ಮಾಡತೊಡಗಿದೆ. ಇದು ವ್ಯಾಪಾರದಲ್ಲಿ ಎಂಥ ಬದಲಾವಣೆಯನ್ನು ತಂದಿತು!

ನಾನು ಕಂಚಿನಿಂದ ತಯಾರಿಸುತ್ತಿದ್ದ ಶಿಲ್ಪಕಲಾಕೃತಿಯ ಕುರಿತು ಜನರು ನನಗೆ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ನನ್ನ ಕೆಲಸದ ಕುರಿತು ನಾನು ಅವರಿಗೆ ವಿವರಿಸುತ್ತಿದ್ದಾಗ ಮತ್ತು ನನ್ನ ವಿನ್ಯಾಸಗಳಿಗೆ ಯಾವುದನ್ನು ಆಧಾರವಾಗಿ ಉಪಯೋಗಿಸುತ್ತೇನೋ ಆ ಹಸ್ತಕೃತಿಗಳ ಬಗ್ಗೆ ಅವರಿಗೆ ತಿಳಿಸುತ್ತಿದ್ದಾಗ ನನ್ನ ವಿಸ್ತಾರವಾದ ವಾಚನದಿಂದ ನಾನು ಕಲಿತಿದ್ದ ಹೆಸರುಗಳು, ಸ್ಥಳಗಳು ಹಾಗೂ ಘಟನೆಗಳೊಂದಿಗೆ ಪ್ರಾಚೀನ ಪಶ್ಚಿಮದ ಇತಿಹಾಸದ ಕುರಿತು ನಾನು ಅವರಿಗೆ ಒಂದು ಉಪನ್ಯಾಸವನ್ನೇ ನೀಡುತ್ತಿದ್ದೆ. ನಾನು ಮಾಡುತ್ತಿದ್ದ ಆಕೃತಿಗಳಲ್ಲಿ ಜನರು ನಿಜವಾದ ಆಸಕ್ತಿಯನ್ನು ತೋರಿಸಿದರು ಮತ್ತು ಇನ್ನು ಕೆಲವರು ಆಗ ತಾನೇ ರೂಪಿಸಲ್ಪಡುತ್ತಿದ್ದ ಒಂದು ಶಿಲ್ಪಕಲಾಕೃತಿಗಾಗಿ ಮುಂಗಡ ಹಣವನ್ನು ಕೊಟ್ಟು, ಇದು ಕಂಚಿನಲ್ಲಿ ಎರಕಹೊಯ್ಯಲ್ಪಟ್ಟ ಬಳಿಕ ಬಾಕಿಯನ್ನು ಪಾವತಿಮಾಡಲು ಬಯಸಿದರು. ಹೀಗೆ, “ಮುನ್ನಚ್ಚು ಹಾಕುವುದಕ್ಕೆ ಮೊದಲೇ ಮಾರಾಟ” ಎಂಬ ಅಭಿವ್ಯಕ್ತಿಯು ಬಳಕೆಗೆ ಬಂತು. ಇದರಿಂದ ಆ ಕೂಡಲೆ ಸಾಫಲ್ಯವು ದೊರಕಿತು. ನನ್ನ ವ್ಯಾಪಾರವು ಎಷ್ಟೊಂದು ಬೆಳೆಯಿತೆಂದರೆ, ನಮ್ಮ ಬಳಿ ಮೂರು ಕಲಾಮಂದಿರಗಳಿದ್ದವು ಮತ್ತು 32 ಮಂದಿ ಉದ್ಯೋಗಸ್ಥರಿರುವ ಒಂದು ದೊಡ್ಡ ಎರಕಾಗಾರವೂ ಇತ್ತು. ಆದರೆ ಇದು ನನ್ನ ಶಕ್ತಿಯನ್ನೆಲ್ಲಾ ಕಬಳಿಸಿಬಿಡುತ್ತಿತ್ತು. ಕೊನೆಯೇ ಇಲ್ಲದಂಥ ಈ ಗಾಣದೆತ್ತಿನ ದುಡಿತದಿಂದ ಹೇಗೆ ವಿಮುಕ್ತರಾಗಸಾಧ್ಯವಿದೆ ಎಂದು ನಾನು ಹಾಗೂ ಕರನ್‌ ಚಿಂತಿಸುತ್ತಿದ್ದೆವು. ನಾವು ಇದರ ಕುರಿತು ಪ್ರಾರ್ಥಿಸಿದೆವು. ಈಗ ನಾನು ಸಭೆಯಲ್ಲಿ ಒಬ್ಬ ಹಿರಿಯನಾಗಿ ಸೇವೆಮಾಡುತ್ತಿದ್ದೆ ಹಾಗೂ ನಾನು ಯೆಹೋವನಿಗಾಗಿ ಹೆಚ್ಚನ್ನು ಮಾಡಸಾಧ್ಯವಿದೆ ಎಂಬುದು ನನಗೆ ಗೊತ್ತಿತ್ತು.

ಒಬ್ಬನೇ ಯಜಮಾನನ ಸೇವೆಮಾಡಲು ಹಿಂದೆರಳಿದ್ದು

ಇಸವಿ 1996ರಲ್ಲಿ ನಮ್ಮನ್ನು ಸಂದರ್ಶಿಸುತ್ತಿದ್ದ ಸರ್ಕಿಟ್‌ ಮೇಲ್ವಿಚಾರಕರು ಸಭೆಗೆ ಬಂದರು ಮತ್ತು ಅವರೊಂದಿಗೆ ಮಧ್ಯಾಹ್ನದೂಟವನ್ನು ಮಾಡಲು ನಮ್ಮನ್ನು ಆಮಂತ್ರಿಸಿದರು. ನಾವು ಊಟವನ್ನು ಆರಂಭಿಸುವುದಕ್ಕೂ ಮುಂಚೆ ಅವರು ಒಂದು ಬಾಂಬನ್ನು ಹಾಕಿದರು. ಅದೇನೆಂದರೆ, ನಾವು ಚಿನ್ಲೀ ಎಂಬ ಸ್ಥಳದಲ್ಲಿ ನವಾಹೋ ಇಂಡಿಯನ್‌ ಬುಡಕಟ್ಟುಗಳ ವಸತಿಗಾಗಿ ಕಾಯ್ದಿರಿಸಲ್ಪಟ್ಟಿರುವ ಮೀಸಲು ಪ್ರದೇಶಕ್ಕೆ ಹೋಗಿ, ಅಲ್ಲಿ ಒಂದು ಹೊಸ ಸಭೆಯನ್ನು ಆರಂಭಿಸಲು ಸಹಾಯಮಾಡಲಿಕ್ಕಾಗಿ ಅಲ್ಲಿಗೆ ಸ್ಥಳಾಂತರಿಸಸಾಧ್ಯವಿದೆಯೋ? ಎಂಥ ಒಂದು ಪಂಥಾಹ್ವಾನ! ನಾವು ಅನೇಕ ಸಂದರ್ಭಗಳಲ್ಲಿ ಆ ಮೀಸಲು ಪ್ರದೇಶಕ್ಕೆ ಭೇಟಿ ನೀಡಿದ್ದೆವು ಮತ್ತು ಆ ಬಹು ದೂರದ ಕ್ಷೇತ್ರದಲ್ಲಿ ಕೆಲವು ಕಡೆ ಸಾರುವ ಕೆಲಸವನ್ನು ಮಾಡುವುದರಲ್ಲಿ ಸಹಾಯ ನೀಡಿದ್ದೆವು ಮತ್ತು ಈಗ ಇದು ನಮಗೆ ಹೊಸದೊಂದು ಗುರಿಯನ್ನು ನಮ್ಮ ಮುಂದೆ ಇಟ್ಟಿತು. ಪ್ರಾಪಂಚಿಕತೆಯ ಗಾಣದೆತ್ತಿನ ದುಡಿತದಿಂದ ವಿಮುಕ್ತರಾಗಲು ಮತ್ತು ಯೆಹೋವನಿಗಾಗಿಯೂ ಆತನ ಜನರಿಗಾಗಿಯೂ ಹೆಚ್ಚು ಸಮಯವನ್ನು ಮೀಸಲಾಗಿಡಲು ಇದು ನಮಗೆ ಒಂದು ದೊಡ್ಡ ಸದವಕಾಶವಾಗಿತ್ತು. ಏಕಮಾತ್ರ ಯಜಮಾನನ ಸೇವೆಮಾಡುವ ಹಾದಿಗೆ ನಾವು ಹಿಂದೆರಳುತ್ತಿದ್ದೆವು!

ನಮ್ಮ ಉತ್ತಮ ಸ್ನೇಹಿತರಾಗಿದ್ದ ಕರಸೆಟಸ್‌ ಎಂಬ ಹೆಸರಿನ ಇನ್ನೊಬ್ಬ ಹಿರಿಯನಿಗೂ ಹಾಗೂ ಅವನ ಕುಟುಂಬಕ್ಕೂ ಈ ಸಾಹಸದಲ್ಲಿ ಕೈಹಾಕುವಂತೆ ಆಮಂತ್ರಿಸಲಾಗಿತ್ತು. ನಾವಿಬ್ಬರೂ ಸುಖಸೌಕರ್ಯಗಳಿಂದ ಕೂಡಿದ್ದ ನಮ್ಮ ಮನೆಗಳನ್ನು ಮಾರಿ, ಆ ಮೀಸಲು ಪ್ರದೇಶದಲ್ಲಿರಿಸಲು ಅನುಕೂಲಕರವಾದ ಚಲಿಸುವ ಮನೆಗಳನ್ನು ಖರೀದಿಸಿದೆವು. ನಾನು ಕಲಾಮಂದಿರಗಳನ್ನು ಹಾಗೂ ಎರಕಾಗಾರವನ್ನು ಮಾರಿದೆ. ನಾವು ನಮ್ಮ ಜೀವನಗಳನ್ನು ಸರಳೀಕರಿಸಿದ್ದೆವು ಮತ್ತು ನಮ್ಮ ಕ್ರೈಸ್ತ ಶುಶ್ರೂಷೆಯನ್ನು ವಿಸ್ತರಿಸಲು ಸ್ವತಂತ್ರರಾಗಿದ್ದೆವು.

ಇಸವಿ 1996ರ ಅಕ್ಟೋಬರ್‌ ತಿಂಗಳಿನಲ್ಲಿ ನಮ್ಮ ಹೊಸ ಚಿನ್ಲೀ ಸಭೆಯ ಪ್ರಪ್ರಥಮ ಕೂಟವು ನಡೆಸಲ್ಪಟ್ಟಿತು. ಅಂದಿನಿಂದ ನವಾಹೋ ಬುಡಕಟ್ಟಿನ ಜನರ ನಡುವೆ ಸಾರುವ ಕೆಲಸವು ವಿಸ್ತರಿಸುತ್ತಾ ಹೋಗಿದೆ ಮತ್ತು ನಮ್ಮ ಸಭೆಯಲ್ಲಿ ನವಾಹೋ ಭಾಷೆಯನ್ನು ಮಾತಾಡುವಂಥ ಅತ್ಯುತ್ತಮ ಪಯನೀಯರರಿದ್ದಾರೆ. ನಾವು ನವಾಹೋ ಬುಡಕಟ್ಟಿಗೆ ಸೇರಿದವರಾಗಿಲ್ಲವಾದರೂ ಇತರರು ನಮ್ಮನ್ನು ಅಂಗೀಕರಿಸಬೇಕೆಂಬ ನಿರೀಕ್ಷೆಯಿಂದ ನಾವು ನಿಧಾನವಾಗಿ ಈ ಕಷ್ಟಕರ ಭಾಷೆಯನ್ನು ಕಲಿಯಲು ಆರಂಭಿಸಿದ್ದೇವೆ. ಅಮೆರಿಕನ್‌ ಇಂಡಿಯನ್‌ ಅಧಿಕಾರಿಗಳ ಅನುಮತಿಯ ಮೇರೆಗೆ ನಾವು ಜಮೀನನ್ನು ಖರೀದಿಸಿ, ಚಿನ್ಲೀಯಲ್ಲಿ ಒಂದು ರಾಜ್ಯ ಸಭಾಗೃಹವನ್ನು ಕಟ್ಟಿದೆವು. ಈ ವರ್ಷದ ಜೂನ್‌ ತಿಂಗಳಿನಲ್ಲಿ ಇದರ ಪ್ರತಿಷ್ಠಾಪನೆಯು ನಡೆಯಿತು.

ದುರಂತವು ಬಡಿದದ್ದು!

ಇಸವಿ 1996ರ ಡಿಸೆಂಬರ್‌ ತಿಂಗಳಿನಲ್ಲಿ, ಅಲ್ಪಾವಧಿಯ ರಜೆಗೆ ಕರನ್‌ ನಮ್ಮ ಗಂಡುಮಕ್ಕಳನ್ನು ಕರೆದುಕೊಂಡು ನ್ಯೂ ಮೆಕ್ಸಿಕೋದ ರೂಡೋಸೋಗೆ ಹೋದಳು. ನಾನು ಚಿನ್ಲೀಯಲ್ಲೇ ಉಳಿಯಬೇಕಾಗಿತ್ತು. ಆದರೆ ನಮ್ಮ 14 ವರ್ಷ ಪ್ರಾಯದ ಮಗನಾಗಿದ್ದ ಬೆನ್‌ ನೀರ್ಗಲ್ಲ ಮೇಲೆ ಜಾರಾಟವಾಡುತ್ತಿದ್ದಾಗ, ಒಂದು ದೊಡ್ಡ ಬಂಡೆಗೆ ಅಪ್ಪಳಿಸಿ ಮೃತಪಟ್ಟ ಘಟನೆಯು ನಮಗೆ ಎಷ್ಟು ಆಘಾತ ಮತ್ತು ದುಃಖವನ್ನು ಉಂಟುಮಾಡಿತೆಂಬುದನ್ನು ತುಸು ಊಹಿಸಿಕೊಳ್ಳಿರಿ! ಇದು ನಮಗೆಲ್ಲರಿಗೂ ಒಂದು ಭೀಕರ ಪರೀಕ್ಷೆಯಾಗಿತ್ತು. ಬೈಬಲಿನ ಪುನರುತ್ಥಾನದ ನಿರೀಕ್ಷೆಯೇ ಈ ದುರಂತವನ್ನು ಸಹಿಸಿಕೊಳ್ಳುವಂತೆ ನಮಗೆ ಸಹಾಯಮಾಡಿತು. ನಮ್ಮ ಕ್ರೈಸ್ತ ಸಹೋದರರ ಬೆಂಬಲವು ಸಹ ಒಂದು ದೊಡ್ಡ ಸಹಾಯವಾಗಿತ್ತು. ಅನೇಕ ವರ್ಷಗಳ ವರೆಗೆ ನಾವು ಎಲ್ಲಿ ನೆಲೆಸಿದ್ದೆವೋ ಆ ಸೆಡೋನದಲ್ಲಿದ್ದ ರಾಜ್ಯ ಸಭಾಗೃಹದಲ್ಲಿ ನಾವು ಶವಸಂಸ್ಕಾರದ ಭಾಷಣವನ್ನು ನಡೆಸಿದಾಗ, ನಮ್ಮ ನೆರೆಯವರು ತಮ್ಮ ಜೀವಮಾನದಲ್ಲೇ ಮೊಟ್ಟಮೊದಲ ಬಾರಿಗೆ ಅಷ್ಟೊಂದು ಮಂದಿ ನವಾಹೋ ಜನರನ್ನು ನೋಡಿದರು. ಮೀಸಲು ಪ್ರದೇಶದಿಂದ ಬಂದ ಆ ಸಹೋದರ ಸಹೋದರಿಯರು ನಮಗೆ ಭಾವನಾತ್ಮಕ ಬೆಂಬಲವನ್ನು ನೀಡಲಿಕ್ಕಾಗಿ 300 ಕಿಲೊಮೀಟರುಗಳಿಗಿಂತಲೂ ಹೆಚ್ಚು ದೂರದಿಂದ ಪ್ರಯಾಣಿಸಿ ಬಂದಿದ್ದರು.

ಬೆನ್‌ನ ತಮ್ಮನಾದ ಫಿಲಿಪ್‌ ಮಾಡಿರುವ ಆತ್ಮಿಕ ಪ್ರಗತಿಯನ್ನು ನೋಡುವುದು ನಿಜವಾಗಿಯೂ ಒಂದು ಆಶೀರ್ವಾದವಾಗಿದೆ. ಅವನಿಗೆ ಒಳ್ಳೇ ಆತ್ಮಿಕ ಗುರಿಗಳಿವೆ ಮತ್ತು ಅವನು ನಮಗೆ ಅಪಾರ ಆನಂದವನ್ನು ಕೊಡುತ್ತಿದ್ದಾನೆ. ಒಬ್ಬ ಶಿಕ್ಷಕನೊಂದಿಗೆ ನಡೆಸುತ್ತಿದ್ದ ಬೈಬಲ್‌ ಅಧ್ಯಯನವನ್ನೂ ಸೇರಿಸಿ ಅವನು ಅನೇಕ ಅಧ್ಯಯನಗಳನ್ನು ನಡಿಸಿದ್ದಾನೆ. ಆದರೆ ಯೆಹೋವನು ವಾಗ್ದಾನಿಸಿರುವ ಹೊಸ ಲೋಕದಲ್ಲಿ ಬೆನ್‌ನನ್ನು ಪುನಃ ನೋಡಲು ನಾವೆಲ್ಲರೂ ಹಂಬಲಿಸುತ್ತಿದ್ದೇವೆ.​—⁠ಯೋಬ 14:14, 15; ಯೋಹಾನ 5:28, 29; ಪ್ರಕಟನೆ 21:1-4.

ನಾವು ಪ್ರೀತಿಭರಿತವಾದ ಬೆಂಬಲಾತ್ಮಕ ಕುಟುಂಬದಿಂದ ಆಶೀರ್ವದಿಸಲ್ಪಟ್ಟಿದ್ದೇವೆ. ನನ್ನ ದತ್ತುಮಗನಾದ ಜಾನಥನ್‌ ತನ್ನ ಪತ್ನಿಯಾದ ಕೆನಳೊಂದಿಗೆ ಯೆಹೋವನ ಸೇವೆಮಾಡುತ್ತಿದ್ದಾನೆ; ನನ್ನ ಮೊದಲ ಮದುವೆಯಲ್ಲಿ ನನಗೆ ಹುಟ್ಟಿರುವ ನನ್ನ ಕಿರಿಯ ಮಗನು ತನ್ನ ಪತ್ನಿಯಾದ ಲೊರೀಯೊಂದಿಗೆ ಯೆಹೋವನನ್ನು ಸೇವಿಸುತ್ತಾ ಮುಂದುವರಿಯುತ್ತಿದ್ದಾನೆ. ನಮ್ಮ ಮೊಮ್ಮಕ್ಕಳಾದ ವುಡ್ರೋ ಹಾಗೂ ಜೋನರು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ವಿದ್ಯಾರ್ಥಿ ಭಾಷಣಗಳನ್ನು ಕೊಡುತ್ತಾರೆ. ನನ್ನ ತಂದೆಯವರು 1987ರಲ್ಲಿ ಮೃತಪಟ್ಟರು, ಆದರೆ 84ರ ಪ್ರಾಯದಲ್ಲಿರುವ ನನ್ನ ತಾಯಿಯವರು ಹಾಗೂ ನನ್ನ ತಮ್ಮನಾದ ಜಾನ್‌ ಹಾಗೂ ಅವನ ಪತ್ನಿಯಾದ ಶೆರೀ ಸಹ ಯೆಹೋವನ ಸೇವೆಯಲ್ಲಿ ಈಗಲೂ ಕ್ರಿಯಾಶೀಲರಾಗಿದ್ದಾರೆ.

ಯೇಸುವಿನ ಈ ಮಾತುಗಳು ಸತ್ಯವಾಗಿವೆ ಎಂಬುದನ್ನು ನಾನು ಅನುಭವದಿಂದ ಕಲಿತುಕೊಂಡಿದ್ದೇನೆ: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. . . . ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.” ಈಗ ಸಹ ಕಲೆಯು ಒಬ್ಬ ಅಸೂಯೆಭರಿತ ಯಜಮಾನನಾಗಿ ಪರಿಣಮಿಸಸಾಧ್ಯವಿದೆ. ಆದುದರಿಂದಲೇ, ನನ್ನ ಕಲೆಯು ನನ್ನನ್ನು ಸಂಪೂರ್ಣವಾಗಿ ಕಬಳಿಸಿಬಿಡದಂತೆ ಕಾಪಾಡಿಕೊಳ್ಳಲಿಕ್ಕಾಗಿ ಸಮತೂಕತೆ ಹಾಗೂ ಎಚ್ಚರಿಕೆಯ ಪ್ರಾಮುಖ್ಯತೆಯನ್ನು ನಾನು ಕಲಿತುಕೊಂಡಿದ್ದೇನೆ. ಅಪೊಸ್ತಲ ಪೌಲನು ಸಲಹೆ ನೀಡುವಂತೆ ಮಾಡುವುದು ಎಷ್ಟೋ ಹೆಚ್ಚು ಅತ್ಯುತ್ತಮವಾದದ್ದಾಗಿದೆ: “ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.”​—⁠1 ಕೊರಿಂಥ 15:⁠58.(g03 7/8)

[ಪಾದಟಿಪ್ಪಣಿ]

^ ಜೆ. ಎಫ್‌. ರದರ್‌ಫರ್ಡರು 1942ರಲ್ಲಿ ಮರಣಹೊಂದುವ ತನಕ ಯೆಹೋವನ ಸಾಕ್ಷಿಗಳ ನಡುವೆ ಮುಂದಾಳುತ್ವ ವಹಿಸಿದರು.

[ಪುಟ 14, 15ರಲ್ಲಿರುವ ಚಿತ್ರ]

ಚಿನ್ಲೀಯಲ್ಲಿ 1996ರಲ್ಲಿ ನನ್ನ ವಿಮಾನ

[ಪುಟ 15ರಲ್ಲಿರುವ ಚಿತ್ರ]

“ಕಾಲಹರಣಮಾಡಲು ಬಿಡುವಿಲ್ಲ” ಎಂಬ ಹೆಸರಿನ ಒಂದು ಕಂಚಿನ ಶಿಲ್ಪಕಲಾಕೃತಿ

[ಪುಟ 17ರಲ್ಲಿರುವ ಚಿತ್ರ]

ನಮ್ಮ ರಾಜ್ಯ ಸಭಾಗೃಹವು ಇಲ್ಲಿ ಕಟ್ಟಲ್ಪಡುವ ಮುಂಚೆ ನಾವು ಬೈಬಲ್‌ ಅಧ್ಯಯನಕ್ಕಾಗಿ ಕೂಡಿಬರುತ್ತಿದ್ದ ಸ್ಥಳ

[ಪುಟ 17ರಲ್ಲಿರುವ ಚಿತ್ರ]

ನನ್ನ ಪತ್ನಿಯಾದ ಕರನ್‌ಳೊಂದಿಗೆ

[ಪುಟ 17ರಲ್ಲಿರುವ ಚಿತ್ರ]

ನವಾಹೋ ಬುಡಕಟ್ಟು ಜನರ ವಿಶೇಷತೆಯಾಗಿರುವ ಒಂದು ದಿಮ್ಮಿಮನೆಯ ಬಳಿ ಸಾರುತ್ತಿರುವುದು