ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಾಗ ಉಪದ್ರವಕಾರಿಯೊ ಅಥವಾ ಸೋಜಿಗವೊ?

ಪರಾಗ ಉಪದ್ರವಕಾರಿಯೊ ಅಥವಾ ಸೋಜಿಗವೊ?

ಪರಾಗ ಉಪದ್ರವಕಾರಿಯೊ ಅಥವಾ ಸೋಜಿಗವೊ?

ಆಸ್ಟ್ರೇಲಿಯದ ಎಚ್ಚರ! ಲೇಖಕರಿಂದ

ಅ-ಕ್ಷೀ! ಈ ಶಬ್ದ, ಮತ್ತು ಇದರೊಂದಿಗೆ ಕಣ್ಣಿನಿಂದ ನೀರು ಹರಿಯುವುದು, ತುರಿಸುವಿಕೆ ಮತ್ತು ಮೂಗಿಗೆ ಕಚಗುಳಿಯಿಟ್ಟಂತಾಗಿ ಅಲ್ಲಿಂದ ನೀರು ಸುರಿಯುವುದು​—⁠ಇದೆಲ್ಲಾ ಕೋಟಿಗಟ್ಟಲೆ ಜನರಿಗೆ ವಸಂತಕಾಲದ ಆಗಮನದ ಸಂಕೇತ. ಅವರಿಗಾಗುವ ಅಲರ್ಜಿಗೆ ಕಾರಣ, ಸಾಮಾನ್ಯವಾಗಿ ಪರಾಗಧೂಳಿಯಿಂದ ತುಂಬಿರುವ ವಾತಾವರಣವೇ ಆಗಿದೆ. ಬಿಎಮ್‌ಜೆ (ಈ ಮುಂಚೆ ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌) ಅಂದಾಜುಮಾಡುವುದೇನೆಂದರೆ, ಔದ್ಯೋಗೀಕೃತ ಲೋಕದಲ್ಲಿನ 6 ಮಂದಿಯಲ್ಲಿ ಒಬ್ಬನು, ಹೇ ಜ್ವರ ಎಂದೂ ಕರೆಯಲ್ಪಡುವ ಋತುವಿಗನುಗುಣವಾದ ಪರಾಗಧೂಳಿಯ ಅಲರ್ಜಿಯಿಂದ ನರಳುತ್ತಾನೆ. ಸಸ್ಯಗಳು ಗಾಳಿಯಲ್ಲಿ ಹೊರಸೂಸುವಂಥ ಅಧಿಕ ಪ್ರಮಾಣದ ಪರಾಗವನ್ನು ಪರಿಗಣಿಸುವಾಗ, ಆ ಸಂಖ್ಯೆಯು ಖಂಡಿತವಾಗಿಯೂ ಆಶ್ಚರ್ಯವನ್ನುಂಟುಮಾಡುವುದಿಲ್ಲ.

ಸ್ವೀಡನ್‌ನ ಮೂರನೇ ಒಂದು ಭಾಗದಷ್ಟಿರುವ ದಕ್ಷಿಣದಲ್ಲಿರುವಂಥ ಸ್ಪ್ರೂಸ್‌ ಮರಗಳಿಂದ ಕೂಡಿರುವ ಕಾಡುಗಳು, ಪ್ರತಿವರ್ಷ ಸುಮಾರು 75,000 ಟನ್ನುಗಳಷ್ಟು ಪರಾಗವನ್ನು ಬಿಡುಗಡೆಮಾಡುತ್ತವೆ ಎಂದು ವಿಜ್ಞಾನಿಗಳು ಅಂದಾಜುಮಾಡುತ್ತಾರೆ. ಹೇ ಜ್ವರದಿಂದ ನರಳುವವರಿಗೆ ಕಿರುಕುಳಕ್ಕೆ ಮೂಲವಾಗಿರುವ ರ್ಯಾಗ್‌ವೀಡ್‌ ಗಿಡವೊಂದೇ, ದಿನವೊಂದಕ್ಕೆ ಅಸಂಖ್ಯಾತ ಪರಾಗಧೂಳಿಯನ್ನು ಉತ್ಪಾದಿಸಬಲ್ಲದು. ಗಾಳಿಯಿಂದ ರವಾನಿಸಲ್ಪಡುವ ರ್ಯಾಗ್‌ವೀಡ್‌ ಪರಾಗವು, ಭೂಮಿಯ ಮೇಲೆ 3 ಕಿಲೊಮೀಟರುಗಳಷ್ಟು ಎತ್ತರದಲ್ಲಿ ಹಾಗೂ ಸಮುದ್ರ ತೀರದಿಂದ 600 ಕಿಲೊಮೀಟರುಗಳಷ್ಟು ದೂರದ ವರೆಗೂ ಸಿಕ್ಕಿದೆ.

ಆದರೆ ಪರಾಗವು ಕೆಲವು ಜನರಲ್ಲಿ ಅಲರ್ಜಿಯನ್ನು ಏಕೆ ಉಂಟುಮಾಡುತ್ತದೆ? ನಾವು ಈ ಪ್ರಶ್ನೆಯನ್ನು ಪರಿಗಣಿಸುವುದಕ್ಕೆ ಮೊದಲು, ಪರಾಗವನ್ನು ನಿಕಟವಾಗಿ ಪರಿಶೀಲಿಸೋಣ ಮತ್ತು ಈ ಅತಿ ಸೂಕ್ಷ್ಮ ಕಣಗಳಲ್ಲಿರುವ ವಿಸ್ಮಯಕರವಾದ ವಿನ್ಯಾಸವನ್ನು ಹೆಚ್ಚು ನಿಕಟವಾಗಿ ಗಮನಿಸೋಣ.

ಜೀವಕ್ಕೆ ಅತ್ಯವಶ್ಯವಾಗಿರುವ ಪುಟ್ಟ ಕಣಗಳು

ಪರಾಗವು “ಬೀಜಗಳುಳ್ಳ ಸಸ್ಯಗಳಲ್ಲಿನ ಪರಾಗಕೋಶದಲ್ಲಿ ಅಥವಾ ಪುರುಷ ಲಿಂಗಾಣುವಿನಲ್ಲಿ ರೂಪಿತವಾಗುತ್ತದೆ ಮತ್ತು ಬೇರೆ ಬೇರೆ ಮಾಧ್ಯಮಗಳ (ಗಾಳಿ, ನೀರು, ಕೀಟಗಳು ಇನ್ನು ಮುಂತಾದವು) ಮೂಲಕ ಪುಷ್ಪಯೋನಿಗೆ ಅಥವಾ ಹೆಣ್ಣು ಲಿಂಗಾಣುವಿಗೆ ರವಾನಿಸಲ್ಪಡುತ್ತದೆ ಹಾಗೂ ಅಲ್ಲಿ ಗರ್ಭಾಧಾನವು ನಡೆಯುತ್ತದೆ” ಎಂದು ದ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕವು ತಿಳಿಸುತ್ತದೆ.

ಹೂಬಿಡುವ ಸಸ್ಯಗಳಲ್ಲಿ ಪರಾಗ ಕಣಗಳು ಮೂರು ರೀತಿಯ ಭಿನ್ನ ಭಾಗಗಳಿಂದ, ಅಂದರೆ ಗಂಡು ಅಂಡಾಶಯಗಳ ಒಂದು ನ್ಯೂಕ್ಲಿಯಸ್‌ ಹಾಗೂ ಪರಾಗ ಕಣದ ಗೋಡೆ ಅಥವಾ ಹೊರಕವಚದಿಂದ ಕೂಡಿರುವ ಎರಡು ಪದರಗಳಿಂದ ರಚಿತವಾಗಿವೆ. ಗಡುಸಾಗಿರುವ ಹೊರಪದರವು ವಿದಳನವನ್ನು ಅತ್ಯಧಿಕ ರೀತಿಯಲ್ಲಿ ಪ್ರತಿರೋಧಿಸುವ ಶಕ್ತಿಯನ್ನು ಹೊಂದಿದೆ ಮತ್ತು ಆಮ್ಲಗಳು, ಕ್ಷಾರಗಳು ಹಾಗೂ ತೀವ್ರವಾದ ಶಾಖವನ್ನು ಸಹ ತಾಳಿಕೊಳ್ಳಲು ಶಕ್ತವಾಗಿದೆ. ಆದರೂ, ಕೆಲವು ರೀತಿಯ ಪರಾಗಗಳನ್ನು ಬಿಟ್ಟು ಬೇರೆಲ್ಲಾ ಪರಾಗಗಳು ಕೇವಲ ಕೆಲವು ದಿನಗಳು ಅಥವಾ ಕೆಲವೇ ವಾರಗಳ ಕಾಲಾವಧಿಯಲ್ಲಿ ಮಾತ್ರ ಮೊಳಕೆಯೊಡೆಯಲು ಶಕ್ತವಾಗಿರುತ್ತವೆ. ಗಡುಸಾದ ಕವಚವಾದರೋ ಸ್ವಲ್ಪವೂ ಕೊಳೆಯದೆ ಸಾವಿರಾರು ವರ್ಷ ಉಳಿಯಬಹುದು. ಆದುದರಿಂದಲೇ ಭೂಮಿಯ ಮಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ಪರಾಗ ಕಣಗಳು ಕಂಡುಬರಸಾಧ್ಯವಿದೆ. ವಾಸ್ತವದಲ್ಲಿ, ಬೇರೆ ಬೇರೆ ಆಳಗಳಿಂದ ತೆಗೆಯಲ್ಪಟ್ಟಿರುವ ಮಣ್ಣಿನ ಸ್ಯಾಂಪಲ್‌ಗಳಲ್ಲಿ ಕಂಡುಬರುವ ಪರಾಗವನ್ನು ಅಧ್ಯಯನಮಾಡುವ ಮೂಲಕ ವಿಜ್ಞಾನಿಗಳು ಭೂಮಿಯ ಸಸ್ಯಶಾಸ್ತ್ರೀಯ ಇತಿಹಾಸದ ಕುರಿತು ಬಹಳಷ್ಟನ್ನು ತಿಳಿದುಕೊಳ್ಳಲು ಶಕ್ತರಾಗಿದ್ದಾರೆ.

ಪರಾಗ ಕಣಗಳ ಹೊರಕವಚದ ಮೇಲೆ ಕಂಡುಬರುವ ಬೇರೆ ಬೇರೆ ರೀತಿಯ ವಿಶಿಷ್ಟ ವಿನ್ಯಾಸಗಳಿಂದಲೂ ಈ ಸಸ್ಯಶಾಸ್ತ್ರೀಯ ಇತಿಹಾಸವು ಬಹಳಷ್ಟು ನಿಷ್ಕೃಷ್ಟವಾಗಿರಸಾಧ್ಯವಿದೆ. ಒಂದೊಂದು ರೀತಿಯ ಪರಾಗಕ್ಕೆ ಅನುಗುಣವಾಗಿ ಅದರ ಕವಚವು ಮೃದುವಾಗಿರಬಹುದು, ಸುಕ್ಕುಗಟ್ಟಿರಬಹುದು, ವಿನ್ಯಾಸಗಳುಳ್ಳದ್ದಾಗಿರಬಹುದು ಅಥವಾ ಕೇಸರಗಳು ಹಾಗೂ ಗುಬಟಗಳಿಂದ ಆವೃತವಾಗಿರಬಹುದು. “ಹೀಗೆ, ಗುರುತಿಸುವಿಕೆಯ ಉದ್ದೇಶಕ್ಕಾಗಿ ಪರಿಗಣಿಸುವಾಗ, ಪ್ರತಿಯೊಂದು ಜಾತಿಯ ಪರಾಗವು ಮಾನವ ಬೆರಳಚ್ಚಿನಷ್ಟೇ ವಿಶ್ವಾಸಾರ್ಹವಾದದ್ದಾಗಿದೆ” ಎಂದು ಮಾನವಶಾಸ್ತ್ರದ ಪ್ರೊಫೆಸರರಾಗಿರುವ ವೋನ್‌ ಎಮ್‌. ಬ್ರಾಯಂಟ್‌, ಜೂನಿಯರ್‌ ಅವರು ಹೇಳುತ್ತಾರೆ.

ಸಸ್ಯಗಳು ಪರಾಗದಾನ ಮಾಡುವ ವಿಧ

ಒಂದು ಪರಾಗ ಕಣವು ಪುಷ್ಪಯೋನಿಯ ತುದಿಯಾಗಿರುವ ಶಲಾಕಾಗ್ರದೊಂದಿಗೆ ಸಂಪರ್ಕಮಾಡಿದ ಬಳಿಕ, ಅಲ್ಲಿ ನಡೆಯುವ ಒಂದು ರಾಸಾಯನಿಕ ಕ್ರಿಯೆಯು ಪರಾಗ ಕಣವನ್ನು ಉಬ್ಬಿಸುತ್ತದೆ ಹಾಗೂ ಅಂಡದ ತನಕ ತಲಪುವಂಥ ಒಂದು ನಳಿಕೆಯು ಬೆಳೆಯುವಂತೆ ಮಾಡುತ್ತದೆ. ತದನಂತರ ಪರಾಗ ಕಣದೊಳಗಿರುವ ಪುರುಷ ಲಿಂಗಾಣುಗಳು ಆ ನಳಿಕೆಯೊಳಕ್ಕೆ ಹೋಗಿ ಅಂಡವನ್ನು ತಲಪುತ್ತವೆ ಮತ್ತು ಗರ್ಭಾಧಾನವಾದ ಬೀಜವು ರೂಪುಗೊಳ್ಳುವಂತೆ ಮಾಡುತ್ತವೆ. ಆ ಬೀಜವು ಬಲಿತ ನಂತರ, ಮೊಳಕೆಯೊಡೆಯಲಿಕ್ಕಾಗಿ ಅದಕ್ಕೆ ಸೂಕ್ತವಾದ ವಾತಾವರಣದಲ್ಲಿ ನೆಲೆಸುವುದು ಅಗತ್ಯವಷ್ಟೆ.

ಬೀಜಗಳುಳ್ಳ ಕೆಲವು ಸಸ್ಯಗಳು ಗಂಡು ಅಥವಾ ಹೆಣ್ಣು ಸಸ್ಯಗಳಾಗಿ ಬೆಳೆಯುತ್ತವಾದರೂ, ಇವುಗಳಲ್ಲಿ ಹೆಚ್ಚಿನವು ಪರಾಗವನ್ನೂ ಅಂಡಗಳನ್ನೂ ಉತ್ಪಾದಿಸುತ್ತವೆ. ಕೆಲವು ಸಸ್ಯಗಳು ಸ್ವಪರಾಗಸ್ಪರ್ಶ ಕ್ರಿಯೆಯನ್ನು ನಡೆಸುತ್ತವೆ; ಇತರ ಗಿಡಗಳು ಅದೇ ಜಾತಿಯ ಇತರ ಸಸ್ಯಗಳಿಗೆ ಅಥವಾ ಸ್ವಲ್ಪಮಟ್ಟಿಗೆ ಅದೇ ಜಾತಿಗೆ ಸೇರಿರುವ ಸಸ್ಯಗಳಿಗೆ ಪರಾಗವನ್ನು ರವಾನಿಸುವ ಮೂಲಕ ಪರಕೀಯ ಪರಾಗಸ್ಪರ್ಶ ಕ್ರಿಯೆಯನ್ನು ನಡೆಸುತ್ತವೆ. ಪರಕೀಯ ಪರಾಗಸ್ಪರ್ಶ ಕ್ರಿಯೆಯನ್ನು ನಡೆಸುವ ಸಸ್ಯಗಳು “ಅದೇ ಸಸ್ಯದ ಮೇಲಿರುವ ಶಲಾಕಾಗ್ರಗಳು ಪರಾಗವನ್ನು ಸ್ವೀಕರಿಸಲು ಸಿದ್ಧವಾಗುವುದಕ್ಕೆ ಮುಂಚೆ ಅಥವಾ ನಂತರ ತಮ್ಮ ಪರಾಗವನ್ನು ಹೊರಸೂಸುವ ಮೂಲಕ ಅನೇಕವೇಳೆ ಸ್ವಪರಾಗಸ್ಪರ್ಶವನ್ನು ತಡೆಯುತ್ತವೆ” ಎಂದು ಬ್ರಿಟ್ಯಾನಿಕವು ಹೇಳುತ್ತದೆ. ಇನ್ನಿತರ ಸಸ್ಯಗಳು, ತಮ್ಮ ಸ್ವಂತ ಪರಾಗ ಅಥವಾ ಅದೇ ಜಾತಿಯ ಇನ್ನೊಂದು ಸಸ್ಯದ ಪರಾಗದ ನಡುವಣ ವ್ಯತ್ಯಾಸವನ್ನು ಗುರುತಿಸಲು ಅಗತ್ಯವಾಗಿರುವ ರಾಸಾಯನಿಕ ವಸ್ತುಗಳನ್ನು ಹೊಂದಿವೆ. ಇಂಥ ಸಸ್ಯಗಳು ತಮ್ಮ ಸ್ವಂತ ಪರಾಗವನ್ನು ಗುರುತಿಸಿದಾಗ, ಪರಾಗ ನಳಿಕೆಯ ಬೆಳವಣಿಗೆಯನ್ನು ತಡೆಗಟ್ಟುವ ಮೂಲಕ ಆ ಪರಾಗವನ್ನು ನಿಷ್ಕ್ರಿಯಗೊಳಿಸಿಬಿಡುತ್ತವೆ.

ಬೇರೆ ಬೇರೆ ರೀತಿಯ ಸಸ್ಯಗಳಿರುವ ಕ್ಷೇತ್ರದಲ್ಲಿ, ಗಾಳಿಯು ಅನೇಕ ಪರಾಗಗಳ ನಿಜವಾದ ಮಿಶ್ರಣವುಳ್ಳದ್ದಾಗಿರಬಹುದು. ಸಸ್ಯಗಳು ತಮಗೆ ಬೇಕಾಗಿರುವಂಥ ಪರಾಗಗಳನ್ನು ಹೇಗೆ ಪರೀಕ್ಷಿಸಿ ಆಯ್ಕೆಮಾಡುತ್ತವೆ? ಕೆಲವು ಸಸ್ಯಗಳು ವಾಯುಚಲನ ವಿಜ್ಞಾನದ ಜಟಿಲ ನಿಯಮಗಳನ್ನು ಉಪಯೋಗಿಸಿಕೊಳ್ಳುತ್ತವೆ. ಉದಾಹರಣೆಗೆ, ಪೈನ್‌ ಮರಗಳನ್ನು ಪರಿಗಣಿಸಿರಿ.

ಗಾಳಿಯ ಸಹಾಯವನ್ನು ಪಡೆದುಕೊಳ್ಳುವುದು

ಗಂಡು ಪೈನ್‌ ಕಾಯಿಗಳು (ಪೈನ್‌ ಶಂಕುಗಳು) ಗೊಂಚಲುಗಳಲ್ಲಿ ಬೆಳೆಯುತ್ತವೆ ಮತ್ತು ಅವು ಪೂರ್ಣವಾಗಿ ಬಲಿತಾಗ ಭಾರಿ ಪ್ರಮಾಣದ ಪರಾಗವನ್ನು ಗಾಳಿಯಲ್ಲಿ ಹೊರಬಿಡುತ್ತವೆ. ಹೆಣ್ಣು ಪೈನ್‌ ಶಂಕುಗಳು ತಮ್ಮ ಸುತ್ತಲೂ ಇರುವ ಸೂಜಿಯಾಕಾರದ ಎಲೆಗಳ ಸಹಾಯದಿಂದ ಹೇಗೆ ವಾಯುಹರಿತಕ್ಕೆ ದಾರಿಮಾಡಿಕೊಡುತ್ತವೆಂದರೆ, ಗಾಳಿಯಿಂದ ಸಾಗಿಸಲ್ಪಡುವ ಪರಾಗಗಳು ಸುಳಿಸುತ್ತಿ ಶಂಕುಗಳ ಪುನರುತ್ಪತ್ತಿಮಾಡುವ ಮೇಲ್ಮೈಯ ಮೇಲೆ ಬೀಳುತ್ತವೆ ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಪರಾಗವನ್ನು ಪಡೆದುಕೊಳ್ಳುವ ಹೆಣ್ಣು ಪೈನ್‌ಗಳಲ್ಲಿ ಈ ಮೇಲ್ಮೈಗಳು, ಶಲ್ಕಗಳು ಸ್ವಲ್ಪಮಟ್ಟಿಗೆ ತೆರೆದುಕೊಂಡು ಪರಸ್ಪರ ಪ್ರತ್ಯೇಕವಾಗುವಾಗ ಬಿಚ್ಚಿಕೊಳ್ಳುತ್ತವೆ.

ಕಾರ್ಲ್‌ ಜೆ. ನಿಕ್‌ಲಸ್‌ ಎಂಬ ಸಂಶೋಧಕರು, ಪೈನ್‌ ಶಂಕುಗಳ ಅಪೂರ್ವ ವಿನ್ಯಾಸಗಳ ಕುರಿತು ಬೇಕಾದಷ್ಟು ಪರೀಕ್ಷೆಗಳನ್ನು ನಡೆಸಿದರು. ಸೈಂಟಿಫಿಕ್‌ ಅಮೆರಿಕನ್‌ ಎಂಬ ಪತ್ರಿಕೆಯಲ್ಲಿ ಅವರು ಬರೆದುದು: “ನಮ್ಮ ಅಧ್ಯಯನಗಳು ಪ್ರಕಟಪಡಿಸುವುದೇನೆಂದರೆ, ಪ್ರತಿಯೊಂದು ಸಸ್ಯಜಾತಿಯಿಂದ ಉಂಟುಮಾಡಲ್ಪಡುವ ಶಂಕುವಿನ ಅಸಾಮಾನ್ಯ ಆಕಾರವು, ವಾಯುಹರಿತದ ನಮೂನೆಗಳ ವಿಶಿಷ್ಟ ಶೈಲಿಯ [ಬೇರೆ ಬೇರೆ] ಬದಲಾವಣೆಗಳಲ್ಲಿ ಫಲಿಸುತ್ತದೆ . . . ತದ್ರೀತಿಯಲ್ಲಿ, ಪ್ರತಿಯೊಂದು ರೀತಿಯ ಪರಾಗಕ್ಕೆ ಅದರದ್ದೇ ಆದ ಗಾತ್ರ, ಆಕಾರ ಮತ್ತು ಸಾಂದ್ರತೆಯಿದೆ, ಮತ್ತು ಇದು ಆ ಪರಾಗವು ಒಂದು ಅಪೂರ್ವ ರೀತಿಯಲ್ಲಿ ಆ ಪ್ರಕ್ಷುಬ್ಧತೆಯೊಂದಿಗೆ ಪರಸ್ಪರ ಪ್ರತಿಕ್ರಿಯಿಸುವಂತೆ ಮಾಡುತ್ತದೆ.” ಈ ತಂತ್ರ ಕೌಶಲಗಳು ಎಷ್ಟು ಪರಿಣಾಮಕಾರಿಯಾಗಿವೆ? ನಿಕ್‌ಲಸ್‌ರು ಹೇಳುವುದು: “ನಾವು ಅಧ್ಯಯನ ನಡೆಸಿದಂಥ ಬಹುತೇಕ ಶಂಕುಗಳು ಗಾಳಿಯಿಂದ ‘ತಮ್ಮದೇ’ ಜಾತಿಯ ಪರಾಗಗಳನ್ನು ಸೋಸಿಕೊಂಡವೇ ವಿನಹ ಇತರ ಜಾತಿಯ ಸಸ್ಯಗಳ ಪರಾಗವನ್ನಲ್ಲ.”

ಅಲರ್ಜಿಯಿಂದ ನರಳುವವರಿಗೆ ಸ್ವಲ್ಪ ನೆಮ್ಮದಿಯನ್ನು ಕೊಡುವ ಒಂದು ಸಂಗತಿಯಿದೆ​—⁠ಎಲ್ಲಾ ಸಸ್ಯಗಳು ಗಾಳಿಯ ಸಹಾಯದಿಂದ ಪರಾಗವನ್ನು ಹರಡಿಸುವುದಿಲ್ಲ! ಅನೇಕ ಸಸ್ಯಗಳು ಇದಕ್ಕಾಗಿ ಪ್ರಾಣಿಗಳನ್ನು ಉಪಯೋಗಿಸುತ್ತವೆ.

ಮಕರಂದದಿಂದ ಆಕರ್ಷಿತವಾಗುವುದು

ಪಕ್ಷಿಗಳು, ಚಿಕ್ಕ ಸಸ್ತನಿಗಳು ಹಾಗೂ ಕೀಟಗಳಿಂದ ಪರಾಗಸ್ಪರ್ಶ ಮಾಡಲ್ಪಡುವ ಸಸ್ಯಗಳು, ಮಕರಂದವನ್ನು ಸಂಗ್ರಹಿಸುತ್ತಿರುವ ಪರಾಗಸ್ಪರ್ಶಕದ ದೇಹಕ್ಕೆ ಪರಾಗವನ್ನು ಅಂಟಿಸಲಿಕ್ಕಾಗಿ ಕೊಂಡಿಗಳು, ಮುಳ್ಳುಗಳು ಅಥವಾ ಅಂಟುಅಂಟಾದ ತಂತುಗಳನ್ನು ಸಾಮಾನ್ಯವಾಗಿ ಉಪಯೋಗಿಸುತ್ತವೆ. ಉದಾಹರಣೆಗೆ, ರೋಮವುಳ್ಳ ಒಂದು ಹೆಜ್ಜೇನು, ಒಂದೇ ಬಾರಿಗೆ 15,000ದಷ್ಟು ಪರಾಗ ಕಣಗಳನ್ನು ಅಂಟಿಸಿಕೊಂಡು ಹಾರುತ್ತಿರಬಹುದು!

ವಾಸ್ತವದಲ್ಲಿ, ಹೂಬಿಡುವ ಸಸ್ಯಗಳ ಪ್ರಮುಖ ಪರಾಗಸ್ಪರ್ಶಕಗಳು ಜೇನುನೊಣಗಳಾಗಿವೆ. ಇದಕ್ಕೆ ಪ್ರತಿಯಾಗಿ ಸಸ್ಯಗಳು ಜೇನುನೊಣಗಳಿಗೆ ತಿನ್ನಲಿಕ್ಕಾಗಿ ಮಧುರವಾದ ಮಕರಂದವನ್ನು ಹಾಗೂ ಪರಾಗವನ್ನು ಕೊಡುತ್ತವೆ; ಈ ಪರಾಗವು ಆ ನೊಣಗಳಿಗೆ ಪ್ರೋಟೀನ್‌ಗಳು, ವಿಟಮಿನ್‌ಗಳು, ಖನಿಜಪದಾರ್ಥಗಳು ಹಾಗೂ ಕೊಬ್ಬನ್ನು ಒದಗಿಸುತ್ತವೆ. ಅಸಾಮಾನ್ಯವಾದ ರೀತಿಯಲ್ಲಿ ಪರಸ್ಪರ ಸಹಕಾರವನ್ನು ತೋರಿಸುತ್ತಾ, ಜೇನುನೊಣಗಳು ಒಂದೇ ಪ್ರಯಾಣದಲ್ಲಿ 100ಕ್ಕಿಂತಲೂ ಹೆಚ್ಚು ಹೂವುಗಳ ಮೇಲೆ ಹೋಗಿ ಕುಳಿತುಕೊಳ್ಳಬಹುದು. ಆದರೆ, ಸಾಕಷ್ಟು ಪ್ರಮಾಣದಲ್ಲಿ ಅಥವಾ ಸರಬರಾಯಿಯು ಮುಗಿದುಹೋಗುವ ತನಕ ಅವು ಒಂದೇ ಜಾತಿಯ ಹೂಗಳಿಂದ ಮಾತ್ರ ಪರಾಗಗಳನ್ನು, ಮಕರಂದವನ್ನು ಅಥವಾ ಎರಡನ್ನೂ ಸಂಗ್ರಹಿಸುತ್ತವೆ. ಈ ಗಮನಾರ್ಹವಾದ, ಸಹಜ ಪ್ರವೃತ್ತಿಯು ಖಂಡಿತವಾಗಿಯೂ ಫಲಕಾರಿ ಪರಾಗಸ್ಪರ್ಶಕ್ಕೆ ಸಹಾಯಕರವಾಗಿದೆ.

ಹೂವುಗಳಿಂದ ಮೋಸಹೋಗುವುದು

ಕೆಲವು ಸಸ್ಯಗಳು ಸಿಹಿಯಾದ ಮಕರಂದವನ್ನು ನೀಡಿ ಸತ್ಕರಿಸುವುದಕ್ಕೆ ಬದಲಾಗಿ, ಕೀಟಗಳು ತಮಗೆ ಪರಾಗದಾನ ಮಾಡುವಂತೆ ಅವುಗಳನ್ನು ಪುಸಲಾಯಿಸಲಿಕ್ಕಾಗಿ ಜಟಿಲವಾದ ಕುಟಿಲೋಪಾಯಗಳನ್ನು ಅವಲಂಬಿಸುತ್ತವೆ. ಪಶ್ಚಿಮ ಆಸ್ಟ್ರೇಲಿಯದಲ್ಲಿ ಬೆಳೆಯುವಂಥ ಒಂದು ರೀತಿಯ ಆರ್ಕಿಡ್‌ ಸಸ್ಯವನ್ನು ಪರಿಗಣಿಸಿರಿ. ಈ ಆರ್ಕಿಡ್‌ ಸಸ್ಯದ ಹೂವಿನ ಮಧ್ಯಭಾಗದಲ್ಲಿ ಒಂದು ಚಿಕ್ಕ ಎಸಳಿದೆ. ಇದು ಮನುಷ್ಯರ ಕಣ್ಣಿಗೆ ಸಹ, ಗುಂಡುಗುಂಡಾಗಿರುವ ರೆಕ್ಕೆರಹಿತ ಹೆಣ್ಣು ಥೈನಿಡ್‌ ಕಣಜದಂತೆಯೇ ಕಾಣುತ್ತದೆ. ನಿಜವಾದ ಹೆಣ್ಣು ಕಣಜದ ಫೆರಮೋನ್‌ ಎಂಬ ಲೈಂಗಿಕ ರಾಸಾಯನಿಕದ ಅಥವಾ ಲೈಂಗಿಕವಾಗಿ ಆಕರ್ಷಿಸುವಂಥ ವಸ್ತುವಿನ ರಾಸಾಯನಿಕ ಪಡಿರೂಪವನ್ನೇ ಈ ಹೂವು ಹೊರಸೂಸುತ್ತದೆ! ಹೆಣ್ಣು ಕಣಜದಂತೆಯೇ ಕಾಣುವ ಈ ಎಸಳಿನ ತುಸು ಮೇಲಕ್ಕೆ ತೊಟ್ಟಿನ ತುದಿಯಲ್ಲಿ ಪರಾಗಗಳಿಂದ ತುಂಬಿರುವ ಲೋಳೆಭರಿತ ಚೀಲಗಳಿವೆ.

ನಕಲಿ ಲೈಂಗಿಕ ರಾಸಾಯನಿಕದ ವಾಸನೆಯಿಂದ ಆಕರ್ಷಿತವಾದ ಗಂಡು ಥೈನಿಡ್‌ ಕಣಜವು, ಈ ಎಸಳನ್ನು ಗಬಕ್ಕನೆ ಹಿಡಿದು, ತನ್ನ ಬಿಗಿ ಮುಷ್ಟಿಯಲ್ಲಿ “ಅವಳನ್ನು” ಹಿಡಿದುಕೊಂಡು ಹಾರಿಹೋಗಲು ಪ್ರಯತ್ನಿಸುತ್ತದೆ. ಆದರೆ, ಅದು ಹಾರಲಿಕ್ಕಿರುವಾಗ, ಅದರ ಆವೇಗದಿಂದಾಗಿ ಅದು ಹಾಗೂ ಅದರ ಭಾವೀ ನಕಲಿ ಸಂಗಾತಿಯು ತಲೆಕೆಳಗಾಗಿ, ಲೋಳೆಭರಿತ ಪರಾಗ ಚೀಲಗಳ ಮಧ್ಯಕ್ಕೇ ಬೀಳುತ್ತದೆ. ತನ್ನ ತಪ್ಪನ್ನು ಮನಗಂಡ ಬಳಿಕ ಗಂಡು ಕಣಜವು ಆ ಎಸಳನ್ನು ಬಿಟ್ಟುಬಿಡುತ್ತದೆ; ಈ ಎಸಳು ಒಂದು ಕೀಲಿಗೆ ಅನುಕೂಲಕರವಾದ ರೀತಿಯಲ್ಲಿ ಅಂಟಿಕೊಂಡಿದ್ದಾಗಿದ್ದು, ಬಿಟ್ಟ ಕೂಡಲೆ ತನ್ನ ಯಥಾಸ್ಥಾನಕ್ಕೆ ಹೋಗಿ ನಿಲ್ಲುತ್ತದೆ. ನಂತರ ಆ ಕಣಜವು ಹಾರಿಹೋಗುತ್ತದೆ ಆದರೆ ಪುನಃ ಇನ್ನೊಂದು ಆರ್ಕಿಡ್‌ ಸಸ್ಯದಿಂದ ಮೋಸಹೋಗುತ್ತದೆ. ಆದರೆ ಈ ಬಾರಿ ಅದು ತನ್ನ ಹಿಂದಿನ ಗಿಡದಿಂದ ತಾನು ಅಂಟಿಸಿಕೊಂಡಿದ್ದ ಪರಾಗದಿಂದ ಈ ಆರ್ಕಿಡ್‌ ಸಸ್ಯಕ್ಕೆ ಪರಾಗದಾನಮಾಡುತ್ತದೆ.

ಆದರೆ ಹೆಣ್ಣು ಥೈನಿಡ್‌ ಕಣಜಗಳು ಕ್ರಿಯಾಶೀಲವಾಗಿರುವಲ್ಲಿ, ಗಂಡು ಕಣಜಗಳು ನಕಲಿ ಎಸಳುಗಳನ್ನಲ್ಲ ಬದಲಾಗಿ ನಿಜವಾದ ಕಣಜಗಳಲ್ಲಿ ಒಂದನ್ನೇ ತಪ್ಪದೆ ಆಯ್ಕೆಮಾಡುವವು. ಈ ಕಾರಣಕ್ಕಾಗಿ ಅನುಕೂಲಕರವಾಗಿಯೇ, ಹೆಣ್ಣು ಕಣಜಗಳು ತಮ್ಮ ಪೊರೆಗೂಡುಗಳಿಂದ ಹೊರಬರುವ ಕೆಲವು ವಾರಗಳಿಗೆ ಮೊದಲೇ ಆರ್ಕಿಡ್‌ಗಳು ಅರಳುತ್ತವೆ, ಮತ್ತು ಇದು ಆ ಆರ್ಕಿಡ್‌ ಹೂವುಗಳಿಗೆ ತಾತ್ಕಾಲಿಕ ಪ್ರಯೋಜನವನ್ನು ಕೊಡುತ್ತದೆ.

ಕೆಲವರಿಗೆ ಏಕೆ ಅಲರ್ಜಿಯಾಗುತ್ತದೆ?

ಕೆಲವರಿಗೆ ಪರಾಗದ ಅಲರ್ಜಿಯಾಗುವುದೇಕೆ? ಚಿಕ್ಕ ಪರಾಗ ಕಣಗಳು ಮೂಗಿನೊಳಕ್ಕೆ ಸೇರಿದಾಗ, ಅಂಟಿನ ಪದಾರ್ಥವಿರುವ ಒಂದು ಪದರದ ಮೇಲೆ ಅವು ಸಿಕ್ಕಿಕೊಳ್ಳುತ್ತವೆ. ಅಲ್ಲಿಂದ ಅವು ಗಂಟಲಿಗೆ ಸೇರಿಕೊಳ್ಳುತ್ತವೆ ಮತ್ತು ಅಲ್ಲಿ ಅವುಗಳನ್ನು ನುಂಗಲಾಗುತ್ತದೆ ಅಥವಾ ಕೆಮ್ಮಿ ಹೊರಹಾಕಲಾಗುತ್ತದೆ​—⁠ಸಾಮಾನ್ಯವಾಗಿ ಇದರಿಂದ ಯಾವುದೇ ಹಾನಿಕರ ಪರಿಣಾಮಗಳು ಉಂಟಾಗುವುದಿಲ್ಲ. ಆದರೂ ಕೆಲವೊಮ್ಮೆ ಪರಾಗಗಳು ಸೋಂಕು ರಕ್ಷಾ ವ್ಯವಸ್ಥೆಯನ್ನು ಉದ್ರೇಕಿಸುತ್ತವೆ.

ಸಮಸ್ಯೆಯು ಪರಾಗದ ಪ್ರೋಟೀನ್‌ಗೆ ಸಂಬಂಧಿಸಿದ್ದಾಗಿದೆ. ಅಲರ್ಜಿಯಿಂದ ನರಳುತ್ತಿರುವಂಥ ವ್ಯಕ್ತಿಯ ಸೋಂಕು ರಕ್ಷಾ ವ್ಯವಸ್ಥೆಯು, ಯಾವುದೋ ಕಾರಣಕ್ಕಾಗಿ ನಿರ್ದಿಷ್ಟ ಪರಾಗದ ಪ್ರೋಟೀನ್‌ ಅನ್ನು ಒಂದು ಬೆದರಿಕೆಯಾಗಿ ಪರಿಗಣಿಸುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ದೇಹವು, ದೇಹದ ಅಂಗಾಂಶಗಳಲ್ಲಿ ಕಂಡುಬರುವ ಸಂಯೋಜಕ ಜೀವಕೋಶಗಳು ವಿಪರೀತ ಪ್ರಮಾಣಗಳಲ್ಲಿ ಹಿಸ್ಟಮೀನ್‌ ಪ್ರತ್ಯಾಮ್ಲವನ್ನು ಬಿಡುಗಡೆಮಾಡುವಂತೆ ಪ್ರಚೋದಿಸುವ ಸರಣಿಕ್ರಿಯೆಯನ್ನು ಆರಂಭಿಸುತ್ತದೆ. ಈ ಹಿಸ್ಟಮೀನ್‌ ಪ್ರತ್ಯಾಮ್ಲವು ರಕ್ತನಾಳಗಳನ್ನು ಹಿಗ್ಗಿಸುತ್ತದೆ ಹಾಗೂ ಪದಾರ್ಥಗಳು ಅವುಗಳ ಮೂಲಕ ಸುಲಭವಾಗಿ ಹಾದುಹೋಗುವಂತೆ ಮಾಡುತ್ತದೆ; ಇದರಿಂದಾಗಿ ಈ ರಕ್ತನಾಳಗಳು ಅತ್ಯಧಿಕ ಸಂಖ್ಯೆಯಲ್ಲಿ ಸೋಂಕು ರಕ್ಷಾ ಜೀವಕೋಶಗಳನ್ನು ಹೊಂದಿರುವ ದ್ರವಗಳನ್ನು ಸ್ರವಿಸುತ್ತವೆ. ಸಾಮಾನ್ಯ ಸನ್ನಿವೇಶಗಳ ಕೆಳಗೆ ಈ ಸೋಂಕು ರಕ್ಷಾ ಜೀವಕೋಶಗಳು ಗಾಯ ಅಥವಾ ಸೋಂಕು ತಗಲಿರುವ ಸ್ಥಳಕ್ಕೆ ಹೋಗುತ್ತವೆ, ಮತ್ತು ಅಲ್ಲಿ ಹಾನಿಕರವಾದ ಆಕ್ರಮಣಗಾರರನ್ನು ದೇಹದಿಂದ ತೆಗೆದುಹಾಕುವುದರಲ್ಲಿ ಸಹಾಯಮಾಡುತ್ತವೆ. ಆದರೆ, ಅಲರ್ಜಿಯಿಂದ ನರಳುತ್ತಿರುವವರಿಗಾದರೋ ಈ ಪರಾಗಗಳು ಸುಳ್ಳು ಅಪಾಯಸೂಚನೆಯನ್ನು ಕೊಡುತ್ತವೆ, ಮತ್ತು ಇದರ ಪರಿಣಾಮವಾಗಿಯೇ ಮೂಗಿನಲ್ಲಿ ಕೆರೆತ ಉಂಟಾಗುತ್ತದೆ, ನೀರುಬರುತ್ತದೆ, ಅಂಗಾಂಶಗಳು ಊದುತ್ತವೆ ಮತ್ತು ಕಣ್ಣುಗಳಲ್ಲಿ ನೀರುಬರುತ್ತದೆ.

ಅಲರ್ಜಿಗಳನ್ನು ಹೊಂದಿರುವ ಪ್ರವೃತ್ತಿಯು ಸಾಮಾನ್ಯವಾಗಿ ಜನರಿಗೆ ಹೆತ್ತವರಿಂದ ಬಂದಿರುತ್ತದೆ, ಆದರೆ ಆ ಪ್ರವೃತ್ತಿಯು ನಿರ್ದಿಷ್ಟ ರೀತಿಯ ಅಲರ್ಜಿಕ ವಸ್ತುವಿಗೆ ಸಂಬಂಧಿಸಿದ್ದಾಗಿರಲಿಕ್ಕಿಲ್ಲ ಎಂದು ಸಂಶೋಧಕರು ನಂಬುತ್ತಾರೆ. ಮಾಲಿನ್ಯವು ಸಹ ಸೂಕ್ಷ್ಮ ಸಂವೇದಿಗಳಾಗಿರಲು ಕಾರಣವಾಗಿರಸಾಧ್ಯವಿದೆ. ಬಿಎಮ್‌ಜೆ ಹೇಳಿದ್ದು: “ಜಪಾನಿನಲ್ಲಿ, ಪರಾಗಗಳಿಗೆ ಸೂಕ್ಷ್ಮ ಸಂವೇದಿಗಳಾಗಿರುವುದಕ್ಕೂ ಸುತ್ತಲಿನ ಗಾಳಿಯಲ್ಲಿ ಡೀಸಲ್‌ನಿಂದ ಹೊರಬರುವ ಕಣಗಳು ಅತ್ಯಧಿಕ ಪ್ರಮಾಣದಲ್ಲಿರುವ ಕ್ಷೇತ್ರಗಳಿಗೆ ತೀರ ಹತ್ತಿರದಲ್ಲಿ ವಾಸಿಸುವುದಕ್ಕೂ ನೇರವಾದ ಸಂಬಂಧವಿರುವುದನ್ನು ಕಂಡುಕೊಳ್ಳಲಾಯಿತು. ಈ ಕಣಗಳು ಅಲರ್ಜಿಕ ಸಂವೇದನೆಯನ್ನು ಅತ್ಯಧಿಕಗೊಳಿಸುತ್ತವೆ ಎಂದು ಪ್ರಾಣಿಗಳೊಂದಿಗಿನ ಅಧ್ಯಯನಗಳು ಸೂಚಿಸುತ್ತವೆ.”

ಸಂತೋಷಕರವಾಗಿಯೇ, ಅಲರ್ಜಿಯಿಂದ ನರಳುತ್ತಿರುವವರು ಹಿಸ್ಟಮೀನ್‌ನಿರೋಧಕ ಔಷಧಗಳ ಸಹಾಯದಿಂದ ತಮ್ಮ ರೋಗಲಕ್ಷಣಗಳನ್ನು ಕಡಿಮೆಮಾಡಿಕೊಳ್ಳಸಾಧ್ಯವಿದೆ. * ಹೆಸರೇ ಸೂಚಿಸುವಂತೆ, ಈ ಔಷಧಗಳು ಹಿಸ್ಟಮೀನ್‌ನ ಕ್ರಿಯೆಯನ್ನು ತಡೆಗಟ್ಟುತ್ತವೆ. ಆದರೆ ಪರಾಗಗಳ ಉಪದ್ರವಕರ ಪರಿಣಾಮಗಳ ಹೊರತಾಗಿಯೂ, ಅವುಗಳ ವಿನ್ಯಾಸ ಹಾಗೂ ಈ ಚಿಕ್ಕ ಕಣಗಳ ಪ್ರಸರಣದಲ್ಲಿ ಸುವ್ಯಕ್ತವಾಗುವ ಬುದ್ಧಿವಂತಿಕೆಯನ್ನು ನೋಡಿ ಒಬ್ಬನು ಪೂರ್ಣವಾಗಿ ಪ್ರಭಾವಿತನಾಗಲೇಬೇಕು. ಇವುಗಳಿಲ್ಲದೆ, ಭೂಗ್ರಹವು ಖಂಡಿತವಾಗಿಯೂ ಒಂದು ಬಂಜರು ತಾಣವಾಗಿರುತ್ತಿತ್ತು.(g03 7/22)

[ಪಾದಟಿಪ್ಪಣಿಗಳು]

^ ಗತ ಸಮಯಗಳಲ್ಲಿ, ಹಿಸ್ಟಮೀನ್‌ನಿರೋಧಕ ಔಷಧಗಳು ತೂಕಡಿಸುವಿಕೆಯನ್ನು ಉಂಟುಮಾಡುತ್ತಿದ್ದವು ಮತ್ತು ಬಾಯಿಯನ್ನು ಒಣಗಿಸುತ್ತಿದ್ದವು. ಹೊಸ ಔಷಧಗಳು ಈ ಅಡ್ಡಪರಿಣಾಮಗಳನ್ನು ಕಡಿಮೆಗೊಳಿಸಿವೆ.

[ಪುಟ 24, 25ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಕೇಸರ

ಪರಾಗಕೋಶ

ಪರಾಗ ಕಣ

ಎಸಳು

ಪುಷ್ಪಯೋನಿ

ಶಲಾಕಾಗ್ರ

ಪರಾಗ ನಳಿಕೆ

ಅಂಡಾಶಯ

ಅಂಡ

[ಕೃಪೆ]

NED SEIDLER/NGS Image Collection

[ಪುಟ 25ರಲ್ಲಿರುವ ಚಿತ್ರಗಳು]

ಬೇರೆ ಬೇರೆ ರೀತಿಯ ಪರಾಗಗಳ ಸೂಕ್ಷ್ಮದರ್ಶಕೀಯ ನೋಟ

[ಕೃಪೆ]

ಪರಾಗ ಕಣಗಳು: © PSU Entomology/PHOTO RESEARCHERS, INC.

[ಪುಟ 26ರಲ್ಲಿರುವ ಚಿತ್ರಗಳು]

ಆರ್ಕಿಡ್‌ ಹೂವಿನ ಒಂದು ಭಾಗವು ಒಂದು ಹೆಣ್ಣು ಕಣಜವನ್ನು ಹೋಲುತ್ತದೆ

[ಕೃಪೆ]

Hammer orchid images: © BERT & BABS WELLS/OSF

[ಪುಟ 24ರಲ್ಲಿರುವ ಚಿತ್ರ ಕೃಪೆ]

ಪರಾಗ ಕಣಗಳು: © PSU Entomology/PHOTO RESEARCHERS, INC.

[ಪುಟ 26ರಲ್ಲಿರುವ ಚಿತ್ರ ಕೃಪೆ]

ಪರಾಗ ಕಣಗಳು: © PSU Entomology/PHOTO RESEARCHERS, INC.