ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಪುರಾತನ ಈಜಿಪ್ಟ್‌ನ ಟೂತ್‌ಪೇಸ್ಟ್‌ ಸೂತ್ರ

“ಇಸವಿ 1873ರಲ್ಲಿ ವಾಣಿಜ್ಯ ಜಗತ್ತಿನಲ್ಲಿ ಮೊಟ್ಟಮೊದಲಾಗಿ ಮಾರುಕಟ್ಟೆಗೆ ಬಂದಿರುವ ಕೋಲ್ಗೇಟ್‌ ಅನ್ನು ಉಪಯೋಗಿಸುವುದಕ್ಕಿಂತಲೂ 1,500 ವರುಷಗಳ ಹಿಂದೆ ಅಂದರೆ ಲೋಕದ ಅತಿ ಹಳೆಯ ಟೂತ್‌ಪೇಸ್ಟ್‌ ಸೂತ್ರವನ್ನು ವಿಯೆನ್ನ ಮ್ಯೂಸಿಯಮ್‌ನ ನೆಲಮಾಳಿಗೆಯಲ್ಲಿ ಒಂದು ಧೂಳುಹಿಡಿದ ಪಪೈರಸ್‌ನ ಮೇಲೆ ಕಂಡುಹಿಡಿಯಲಾಯಿತು” ಎಂದು ಎಲೆಕ್ಟ್ರಾನಿಕ್‌ ಟೆಲಿಗ್ರಾಫ್‌ ವರದಿಸುತ್ತದೆ. “ಹೊಗೆಮಸಿ ಮತ್ತು ಅಂಟನ್ನು ನೀರಿನಲ್ಲಿ ಬೆರೆಸಿ ತಯಾರಿಸಲಾದ ಕಳೆಗುಂದಿರುವ ಕಪ್ಪು ಶಾಯಿಯಲ್ಲಿ, ‘ಬಿಳಿಯಾದ ಮತ್ತು ಪರಿಪೂರ್ಣವಾದ ಹಲ್ಲಿಗಾಗಿ ಉಪಯೋಗಿಸುವ ಪುಡಿಯನ್ನು’ ಪುರಾತನ ಈಜಿಪ್ಟ್‌ನ ಲೇಖಕನಿಂದ ಜಾಗರೂಕತೆಯಿಂದ ವರ್ಣಿಸಲಾಗಿದೆ. ಬಾಯಿಯಲ್ಲಿ ಉಗುಳಿನೊಂದಿಗೆ ಮಿಶ್ರವಾದಾಗ, ಅದು ಒಂದು ‘ಶುದ್ಧವಾದ ಟೂತ್‌ಪೇಸ್ಟ್‌’ ಆಗಿ ಪರಿಣಮಿಸುತ್ತದೆ.” ಕಲ್ಲುಪ್ಪು, ಪುದೀನ, ಒಣಗಿದ ಐರಿಸ್‌ ಹೂವು, ಮತ್ತು ಕರಿ ಮೆಣಸು ಮುಂತಾದವುಗಳು ಇದರಲ್ಲಿ ಉಪಯೋಗಿಸಲಾದ ಮಿಶ್ರಣಗಳು ಎಂಬುದಾಗಿ ಸಾ.ಶ. ನಾಲ್ಕನೆಯ ಶತಮಾನದ ಈ ದಾಖಲೆಯು ಪಟ್ಟಿಮಾಡಿದೆ. ಈ ಮಿಶ್ರಣಗಳನ್ನು ಪುಡಿಮಾಡಿ ಒಟ್ಟುಸೇರಿಸಲಾಗುತ್ತಿತ್ತು. ಈ ಆವಿಷ್ಕಾರವು, ವಿಯೆನ್ನದಲ್ಲಿ ನಡೆಸಲಾದ ದಂತ ಸಮಾವೇಶದಲ್ಲಿ ಒಂದು ಆಸಕ್ತಿಕರವಾದ ವಿಷಯವಾಗಿತ್ತು. “ಪುರಾತನ ಕಾಲದ ಇಂಥ ಮುಂದುವರಿದ ಟೂತ್‌ಪೇಸ್ಟ್‌ ಸೂತ್ರವು ಇನ್ನೂ ಅಸ್ತಿತ್ವದಲ್ಲಿದೆ ಎಂಬುದು ದಂತ ವೈದ್ಯರಲ್ಲಿ ಯಾರಿಗೂ ತಿಳಿದಿರಲಿಲ್ಲ,” ಎಂಬುದಾಗಿ ಈ ಟೂತ್‌ಪೇಸ್ಟ್‌ ಸೂತ್ರವನ್ನು ಉಪಯೋಗಿಸಿ ಅದರಿಂದ ತನ್ನ “ಕಲ್ಲುಗಳು ಶುದ್ಧವೂ ನವೀನವೂ ಆದ ಅನುಭವವನ್ನು” ಹೊಂದಿದ ಡಾ. ಹೈನ್ಟ್ಸ್‌ ನಾಯ್ಮನ್‌ ತಿಳಿಸುತ್ತಾರೆ. ಲೇಖನವು ತಿಳಿಸುವುದು: “ಒಸಡುಗಳ ರೋಗದ ವಿರುದ್ಧ ಬಹಳ ಪ್ರಭಾವಕಾರಿಯಾಗಿರುವ ಐರಿಸ್‌ನ ಪ್ರಯೋಜನದಾಯಕ ಅಂಶಗಳನ್ನು ಇತ್ತೀಚಿಗೆ ದಂತ ವೈದ್ಯರು ಕಂಡುಹಿಡಿದಿದ್ದಾರೆ. ಅಷ್ಟುಮಾತ್ರವಲ್ಲದೆ ಅದೀಗ ಪುನಃ ವಾಣಿಜ್ಯ ಜಗತ್ತಿನಲ್ಲಿ ಬಳಕೆಯಲ್ಲಿದೆ.” (g03 11/22)

ಕುಟುಂಬ ಸಂವಾದದ ಆವಶ್ಯಕತೆ

“ಕುಟುಂಬ ಸಂವಾದವು ಎಷ್ಟು ಮಟ್ಟಿಗೆ ಧ್ವಂಸಗೊಂಡಿದೆ ಎಂದರೆ ಅದು ‘ಪ್ರತಿದಿನದ ಗೊಣಗುವಿಕೆಯಾಗಿ’ ಪರಿವರ್ತನೆಯಾಗಿದೆ. ಆದಕಾರಣ, ಇಂದಿನ ಯುವ ಪೀಳಿಗೆಯು ಸರಿಯಾಗಿ ಮಾತನಾಡುವ ಧಾಟಿಯನ್ನೇ ಕಲಿತಿಲ್ಲ,” ಎಂದು ಲಂಡನಿನ ದಿ ಟೈಮ್ಸ್‌ ಪತ್ರಿಕೆಯು ವರದಿಮಾಡುತ್ತದೆ. ಮಕ್ಕಳು “ಟಿವಿಯ ಮತ್ತು ಕಂಪ್ಯೂಟರ್‌ನ ಮುಂದೆ ಗಂಟೆಗಟ್ಟಳೆ ಸಮಯ ಕುಳಿತುಕೊಳ್ಳುವುದು ಹಾಗೂ ಕುಟುಂಬ ಸದಸ್ಯರು ಒಟ್ಟಾಗಿ ಕುಳಿತು ಊಟಮಾಡುವುದಕ್ಕೆ ಸಮಯವನ್ನು ವ್ಯಯಿಸದೆ ಇರುವುದು,” ಇವೇ ಈ ಸಮಸ್ಯೆಗೆ ಕಾರಣ ಎಂದು ಬ್ರಿಟನಿನಲ್ಲಿ ಶೈಕ್ಷಣಿಕ ಮಟ್ಟವನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುವ ಸರಕಾರದ ಮೂಲಭೂತ ಕೌಶಲಗಳ ಸಂಘದ ಡೈರೆಕ್ಟರರಾದ ಆ್ಯಲೆನ್‌ ವೆಲ್ಸ್‌ ತಿಳಿಸುತ್ತಾರೆ. ಅಷ್ಟುಮಾತ್ರವಲ್ಲದೆ, ಅಜ್ಜಅಜ್ಜಿಯರಿರದ ಏಕ ಹೆತ್ತವರಿರುವ ಕುಟುಂಬವು ಹೆಚ್ಚಾಗುತ್ತಿರುವುದು ಮತ್ತು ಅತಿ ಕಡಿಮೆ ಹೆತ್ತವರು ತಮ್ಮ ಮಕ್ಕಳೊಂದಿಗೆ ಓದುವುದು ಸಹ ಇದಕ್ಕೆ ಕಾರಣವಾಗಿದೆ ಎಂದು ವೆಲ್ಸ್‌ ದೂರುತ್ತಾರೆ. ಆದುದರಿಂದಲೇ, ಇಂದು ನಾಲ್ಕು ಅಥವಾ ಐದು ವರುಷ ಪ್ರಾಯಕ್ಕೆ ಶಾಲೆಯನ್ನು ಸೇರುವ ಮಕ್ಕಳು ಹಿಂದಿನ ಕಾಲದ ಮಕ್ಕಳಿಗಿಂತ ಏಕೆ “ಕಡಿಮೆ ವಾಚಾಳಿಗಳೂ ತಮ್ಮ ಕುರಿತು ವ್ಯಕ್ತಪಡಿಸಲು ಕಡಿಮೆ ಸಾಮರ್ಥ್ಯವುಳ್ಳವರೂ” ಆಗಿದ್ದಾರೆ ಎಂಬುದನ್ನು ವಿವರಿಸಲು ಈ ಅಂಶಗಳು ಸಹಾಯಮಾಡುತ್ತವೆ ಎಂದು ಅವರು ನಂಬುತ್ತಾರೆ. ಮಕ್ಕಳೊಂದಿಗೆ ಹೇಗೆ ವ್ಯವಹರಿಸಬೇಕೆಂಬುದನ್ನು ಹೆತ್ತವರಿಗೆ ಕಲಿಸುವ ಕಾರ್ಯಕ್ರಮವನ್ನು ವೆಲ್ಸ್‌ ಶಿಫಾರಸ್ಸುಮಾಡುತ್ತಾರೆ. (g03 9/22)

ಧರ್ಮದಲ್ಲಿ ಆಸಕ್ತಿಯಿಲ್ಲ

“ಇಂದಿನ ಖಿನ್ನತೆಗೊಳಿಸುವ ಪರಿಸ್ಥಿತಿಗಳನ್ನು ನಿಭಾಯಿಸಲು ಹೋರಾಡುತ್ತಿರುವಾಗ ಉತ್ತರಕ್ಕಾಗಿ [ಜಪಾನಿಯರು] ಧರ್ಮದ ಕಡೆಗೆ ತಿರುಗುತ್ತಿಲ್ಲ ಎಂಬಂತೆ ತೋರುತ್ತದೆ,” ಎಂದು ಐಹೆಚ್‌ಟಿ ಅಸಾಹೀ ಶೀಮ್ಬೂನ್‌ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. “ಧರ್ಮದಲ್ಲಿ ಅಥವಾ ಯಾವುದೇ ರೀತಿಯ ನಂಬಿಕೆಯಲ್ಲಿ ನಿಮಗೆ ವಿಶ್ವಾಸ ಅಥವಾ ಸ್ವಲ್ಪಮಟ್ಟಿಗಿನ ಆಸಕ್ತಿ ಇದೆಯೋ?” ಎಂಬ ಪ್ರಶ್ನೆಗೆ ಕೇವಲ 13 ಪ್ರತಿಶತ ಸ್ತ್ರೀಪುರುಷರು ಹೌದು ಎಂದು ಉತ್ತರಿಸಿದರು. ಇದಕ್ಕೆ ಕೂಡಿಕೆಯಾಗಿ, 9 ಪ್ರತಿಶತ ಗಂಡಸರು ಮತ್ತು 10 ಪ್ರತಿಶತ ಹೆಂಗಸರು ತಮಗೆ “ಕೊಂಚ” ಆಸಕ್ತಿಯಿದೆ ಎಂದು ಹೇಳಿದರು. ವಾರ್ತಾಪತ್ರಿಕೆಯು ಕೂಡಿಸಿ ಹೇಳುವುದು: “20ರ ವಯೋಮಾನದಲ್ಲಿರುವ ಸ್ತ್ರೀಯರಲ್ಲಿ ಕೇವಲ 6 ಪ್ರತಿಶತದಷ್ಟು ಸ್ತ್ರೀಯರಿಗೆ ಧರ್ಮದಲ್ಲಿ ಆಸಕ್ತಿಯಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.” ಜಪಾನಿನಲ್ಲಿ 77 ಪ್ರತಿಶತ ಗಂಡಸರು ಮತ್ತು 76 ಪ್ರತಿಶತ ಹೆಂಗಸರು ತಮಗೆ ಧರ್ಮದಲ್ಲಿಯಾಗಲಿ ಅಥವಾ ಯಾವುದೇ ರೀತಿಯ ನಂಬಿಕೆಯಲ್ಲಿಯಾಗಲಿ ಯಾವ ಆಸಕ್ತಿಯೂ ಇಲ್ಲ ಎಂಬುದಾಗಿ ತಿಳಿಸಿದರು. 1978ರ ತದ್ರೀತಿಯ ಎಣಿಕೆಗೆ ಹೋಲಿಸುವಾಗ ಜಪಾನಿನ ಜನರಲ್ಲಿ ಧರ್ಮದ ಕಡೆಗಿನ ಆಸಕ್ತಿಯು ಹೆಚ್ಚುಕಡಿಮೆ ಅರ್ಧದಷ್ಟು ಕಡಿಮೆಯಾಗಿದೆ. ಸಾಮಾನ್ಯವಾಗಿ, ಕೇವಲ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಮಾತ್ರ ಧರ್ಮದ ಕಡೆಗೆ ಸ್ವಲ್ಪ ಮಟ್ಟಿಗಿನ ಆಸಕ್ತಿ ಇದೆ ಎಂಬುದು ತೋರಿಬಂತು. (g03 10/08)

ಕಲಿಯಲು ವಯೋಮಿತಿಯಿಲ್ಲ

ಅನಕ್ಷರತೆಯು ವ್ಯಾಪಕವಾಗಿರುವ ನೇಪಾಲ್‌ನಲ್ಲಿ, 12 ಮೊಮ್ಮಕ್ಕಳಿರುವ ಒಬ್ಬ ಪ್ರಾಯಸ್ಥರು ಶಿಕ್ಷಣವನ್ನು ಪಡೆದುಕೊಳ್ಳಲು ಮಾಡಿದ ಪ್ರಯತ್ನಕ್ಕಾಗಿ ಖ್ಯಾತರಾಗಿದ್ದಾರೆ. ಬರಹಗಾರ ಬಾಜೆ ಎಂದು ಪ್ರಖ್ಯಾತಿ ಹೊಂದಿದ ಬಾಲ್‌ ಬಹಾದೂರ್‌ ಕಾರ್ಕೀ 1917ರಲ್ಲಿ ಹುಟ್ಟಿ, ಎರಡನೆಯ ಲೋಕ ಯುದ್ಧದಲ್ಲಿ ಹೋರಾಡಿದರು. ಅವರು ತಮ್ಮ 84ನೇ ವಯಸ್ಸಿನಲ್ಲಿ​—⁠ನಾಲ್ಕು ಪ್ರಯತ್ನಗಳ ನಂತರ​—⁠ಶಾಲೆಯನ್ನು ಮುಗಿಸಿದ ಸರ್ಟಿಫಿಕೇಟ್‌ ಅನ್ನು ಪಡೆದುಕೊಂಡರು. ಈಗ ಅವರು ತಮ್ಮ 86ನೇ ವರುಷದಲ್ಲಿ ಕಾಲೇಜು ಕೋರ್ಸ್‌ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಇಂಗ್ಲಿಷ್‌ ಪ್ರೌಢಾಧ್ಯಯನವನ್ನು ಮಾಡುವುದು ಮಾತ್ರವಲ್ಲ ಅವರು ಇತರರಿಗೂ ಇಂಗ್ಲಿಷ್‌ ಭಾಷೆಯನ್ನು ಕಲಿಸಿಕೊಡುತ್ತಿದ್ದಾರೆ. ಮಕ್ಕಳಿಂದ ಸುತ್ತುಗಟ್ಟಿದ ಒಂದು ಮೇಜಿನ ಮುಂದೆ ಕುಳಿತು ಅವರಿಗೆ ಕಲಿಸುವುದು ತಮ್ಮ ಪ್ರಾಯವನ್ನು ಮರೆಯಲು ಹಾಗೂ ಪುನಃ ಯುವಕನಂತೆ ಭಾವಿಸಲು ಸಹಾಯಮಾಡುತ್ತದೆ ಎಂದವರು ತಿಳಿಸುತ್ತಾರೆ. ಕಾಠ್ಮಂಡುವಿಗೆ ಅವರು ಮಾಡಿದ ಕಳೆದ ಭೇಟಿಯಲ್ಲಿ ಅವರಿಗೆ ಅವರ ಸಾಧನೆಗಳಿಗಾಗಿ ಬಹುಮಾನಗಳು ಮತ್ತು ಜಯ ಘೋಷಗಳು ದೊರೆತವು. ತಾವು ಪ್ರಾಯಸ್ಥರಾಗಿದ್ದೇವೆ ಎಂದ ಮಾತ್ರಕ್ಕೆ ಕಲಿಯುವುದನ್ನು ನಿಲ್ಲಿಸಬಾರದೆಂದು ಅವರು ಇತರರನ್ನೂ ಉತ್ತೇಜಿಸಿದರು. ಹಾಗಿದ್ದರೂ, ಬರಹಗಾರರಾದ ಬಾಜೆ ತನಗಾದ ಒಂದು ದುಃಖಕರ ಸಂಗತಿಯನ್ನು ತಿಳಿಯಪಡಿಸಿದರು. ಅದೇನಂದರೆ, ಪಟ್ಟಣಕ್ಕೆ ಹೋಗಲು ಬಸ್ಸು ಹಿಡಿಯುವ ಸಲುವಾಗಿ ಅವರು ಮೂರು ದಿನಗಳ ವರೆಗೆ ನಡೆಯಬೇಕಾಯಿತು ಏಕೆಂದರೆ ಅವರಿಗೆ ವಿಮಾನದಲ್ಲಿ ವಿದ್ಯಾರ್ಥಿ ಡಿಸ್ಕೌಂಟನ್ನು ನೀಡಲು ನಿರಾಕರಿಸಲಾಯಿತು. ಅವರು ಕಾಠ್ಮಂಡು ಪೋಸ್ಟ್‌ ಎಂಬ ವಾರ್ತಾಪತ್ರಿಕೆಗೆ ತಿಳಿಸುವುದು: “ವಿಮಾನಯಾನ ವ್ಯವಸ್ಥೆಯು ನನಗೆ ವಿದ್ಯಾರ್ಥಿ ಡಿಸ್ಕೌಂಟನ್ನು ನೀಡಬೇಕು, ಏಕೆಂದರೆ ನಾನು ಸಹ ಒಬ್ಬ ವಿದ್ಯಾರ್ಥಿ.” (g03 12/22)