ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ನನ್ನ ಒಡಹುಟ್ಟಿದವರ ಛಾಯೆಯಿಂದ ಹೇಗೆ ಹೊರಬರಬಲ್ಲೆ?

ನಾನು ನನ್ನ ಒಡಹುಟ್ಟಿದವರ ಛಾಯೆಯಿಂದ ಹೇಗೆ ಹೊರಬರಬಲ್ಲೆ?

ಯುವ ಜನರು ಪ್ರಶ್ನಿಸುವುದು . . .

ನಾನು ನನ್ನ ಒಡಹುಟ್ಟಿದವರ ಛಾಯೆಯಿಂದ ಹೇಗೆ ಹೊರಬರಬಲ್ಲೆ?

“ನನಗೆ ನನ್ನದೇ ಆದ ವ್ಯಕ್ತಿತ್ವ ಇರಬೇಕೆಂದು ಬಯಸಿದೆ, ಆದರೆ ನನ್ನ ಅಕ್ಕಂದಿರ ಸತ್ಕೀರ್ತಿಗಳಿಗೆ ಹೊಂದಿಕೆಯಲ್ಲಿಯೇ ನಾನು ಕ್ರಿಯೆಗೈಯಬೇಕೆಂದು ನನಗೆ ಯಾವಾಗಲೂ ಅನಿಸುತ್ತಿತ್ತು. ನನ್ನ ಅಕ್ಕಂದಿರು ಸಾಧಿಸಿದ ವಿಷಯಗಳನ್ನು ನಾನೆಂದೂ ಸಾಧಿಸಲಾರೆನೆಂದು ನಾನು ನೆನೆಸಿದೆ.”​—⁠ಕ್ಲ್ಯಾರ್‌.

ಹೆಚ್ಚುಕಡಿಮೆ ಎಲ್ಲಾ ವಿಷಯಗಳಲ್ಲಿ ಯಶಸ್ಸನ್ನು ಕಾಣುವ ಒಬ್ಬ ಅಣ್ಣ ಅಥವಾ ಅಕ್ಕ ನಿಮಗಿದ್ದಾರೆಯೇ? ನೀವು ಸಹ ಅವರಂತೆಯೇ ಇರಬೇಕೆಂದು ನಿಮ್ಮ ಹೆತ್ತವರು ಯಾವಾಗಲೂ ನಿಮಗೆ ಬುದ್ಧಿಹೇಳುತ್ತಿರುತ್ತಾರೋ? ಹಾಗಿರುವಲ್ಲಿ, ನೀವು ಯಾವಾಗಲೂ ಅವನ ಅಥವಾ ಅವಳ ಛಾಯೆಯಲ್ಲಿಯೇ ಇರುತ್ತೀರೆಂಬ ಮತ್ತು ನಿಮ್ಮ ಅಣ್ಣಅಕ್ಕಂದಿರು ಸಾಧಿಸಿರುವ ವಿಷಯಗಳಿಗೆ ಹೋಲಿಕೆಯಲ್ಲಿ ನೀವು ಎಷ್ಟರ ಮಟ್ಟಿಗೆ ಸಾಧಿಸಿದ್ದೀರಿ ಎಂಬುದರ ಮೇಲೆ ನಿಮ್ಮ ಮೌಲ್ಯವು ಅಳತೆಮಾಡಲ್ಪಡುವುದು ಎಂಬ ಭಯ ನಿಮಗಿರಬಹುದು.

ಬ್ಯಾರೀ * ಎಂಬವನ ಇಬ್ಬರು ಅಣ್ಣಂದಿರು ಅತಿ ಗಣನೀಯವಾದ ಶುಶ್ರೂಷಾ ತರಬೇತಿ ಶಾಲೆಯ * ಪದವೀಧರರಾಗಿದ್ದಾರೆ ಮತ್ತು ಕ್ರೈಸ್ತರೋಪಾದಿ ಬಹಳ ಉತ್ತಮ ಹೆಸರನ್ನು ಗಳಿಸಿದ್ದಾರೆ. ಬ್ಯಾರೀ ತಿಳಿಸುವುದು: “ಸಾರುವ ಕೆಲಸದಲ್ಲಿನ ಅವರ ಮಟ್ಟಗಳನ್ನು ನಾನೆಂದಿಗೂ ತಲಪಲಾರೆ ಅಥವಾ ಸಾರ್ವಜನಿಕ ಭಾಷಣಕಲೆಯಲ್ಲಿ ಅವರಂತೆ ನಿಪುಣನಾಗಲಾರೆ ಎಂಬುದಾಗಿ ನಾನು ಭಾವಿಸಿದ್ದರಿಂದ ನನ್ನ ಆತ್ಮವಿಶ್ವಾಸವು ಬಾಧಿಸಲ್ಪಟ್ಟಿತು. ನನ್ನ ಸ್ವಂತ ಸ್ನೇಹಿತರನ್ನು ಸಂಪಾದಿಸುವುದು ನನಗೆ ಕಷ್ಟಕರವಾಯಿತು, ಏಕೆಂದರೆ ನಾನು ಕೇವಲ ನನ್ನ ಅಣ್ಣಂದಿರನ್ನು ಯಾರಾದರು ಆಮಂತ್ರಿಸಿದಾಗ ಮಾತ್ರ ಅವರೊಂದಿಗೆ ಹೋಗುತ್ತಿದ್ದೆ. ನನ್ನ ಅಣ್ಣಂದಿರ ಕಾರಣ ಮಾತ್ರ ಜನರು ನನ್ನೊಂದಿಗೆ ಸ್ನೇಹದಿಂದಿದ್ದಾರೆಂದು ನನಗನಿಸುತ್ತಿತ್ತು.”

ಹೊಗಳಿಕೆಯ ಕೇಂದ್ರಬಿಂದುವಾಗಿರುವ ಒಡಹುಟ್ಟಿದವರಿರುವಾಗ ಮತ್ಸರದ ಭಾವನೆಯಾಗುವುದು ಸಹಜ. ಬೈಬಲ್‌ ಸಮಯಗಳಲ್ಲಿ, ಯುವ ಯೋಸೇಫನು ತನ್ನ ಅಣ್ಣಂದಿರಿಗಿಂತ ಬಹಳ ಎದ್ದುಕಾಣುವವನಾಗಿದ್ದನು. ಇದು ಅವನ ಅಣ್ಣಂದಿರ ಮೇಲೆ ಯಾವ ಪರಿಣಾಮವನ್ನು ಬೀರಿತು? ಅವರು “ಯೋಸೇಫನನ್ನು ಹಗೆಮಾಡಿ ಅವನೊಡನೆ ಸ್ನೇಹಭಾವದಿಂದ ಮಾತಾಡಲಾರದೆ ಹೋದರು.” (ಆದಿಕಾಂಡ 37:​1-4) ಈ ಸಮಯದಲ್ಲಿ ಯೋಸೇಫನು ನಮ್ರನಾಗಿದ್ದನು. ಆದರೆ ನಿಮ್ಮ ಒಡಹುಟ್ಟಿದವನು/ಳು, ಅವನ ಅಥವಾ ಅವಳ ಸಾಧನೆಗಳ ಬಗ್ಗೆ ಆಗಿಂದಾಗ್ಗೆ ಜ್ಞಾಪಕಹುಟ್ಟಿಸುವುದರ ಮೂಲಕ ನಿಮ್ಮಲ್ಲಿ ಪ್ರತಿಸ್ಪರ್ಧೆಯ ಮತ್ತು ಅಸಮಾಧಾನದ ಮನೋಭಾವವನ್ನು ಹುಟ್ಟಿಸಬಹುದು.

ಕೆಲವು ಯುವ ಜನರು ಈ ಎಲ್ಲಾ ವಿಷಯಗಳಿಗೆ ದಂಗೆಯೇಳುವ ಮೂಲಕ​—⁠ಪ್ರಾಯಶಃ, ಉದ್ದೇಶಪೂರ್ವಕವಾಗಿ ಶಾಲೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸುವುದು, ಕ್ರೈಸ್ತ ಚಟುವಟಿಕೆಗಳಲ್ಲಿನ ತಮ್ಮ ಭಾಗವಹಿಸುವಿಕೆಯನ್ನು ಕಡಿಮೆಗೊಳಿಸುವುದು, ಅಥವಾ ಬೆಚ್ಚಿಬೀಳಿಸುವಂಥ ನಡತೆಯಲ್ಲಿ ಭಾಗವಹಿಸುವ ಮೂಲಕ​—⁠ತಮ್ಮ ಪ್ರತಿಕ್ರಿಯೆಯನ್ನು ತೋರ್ಪಡಿಸುತ್ತಾರೆ. ತಮಗೆ ತಮ್ಮ ಅಣ್ಣಅಕ್ಕಂದಿರಷ್ಟು ಉತ್ತಮವಾಗಿ ವಿಷಯಗಳನ್ನು ನಿರ್ವಹಿಸಲು ಸಾಧ್ಯವಿರದಿದ್ದರೆ ಅದನ್ನು ನಿರ್ವಹಿಸಲು ಪ್ರಯತ್ನಿಸುವುದು ಸಹ ವ್ಯರ್ಥವೆಂದು ಅವರು ಆಲೋಚಿಸುತ್ತಾರೆ. ಆದರೆ ದಂಗೆ ಏಳುವುದು ಕ್ರಮೇಣ ನಿಮಗೇ ಹಾನಿಗೊಳಿಸುತ್ತದೆ. ನೀವು ನಿಮ್ಮ ಕುರಿತು ಒಳ್ಳೆಯ ಭಾವನೆಯನ್ನು ಹೊಂದಿರುವಂಥ ರೀತಿಯಲ್ಲಿ ನಿಮ್ಮ ಅಣ್ಣಅಕ್ಕಂದಿರ ಛಾಯೆಯಿಂದ ಹೇಗೆ ಹೊರಬರಬಲ್ಲಿರಿ?

ನಿಮ್ಮ ಒಡಹುಟ್ಟಿದವರ ಕುರಿತು ಸೂಕ್ತವಾದ ದೃಷ್ಟಿಕೋನವನ್ನು ಹೊಂದಿರಿ

ನಿಮ್ಮ ಹಿರಿಯ ಒಡಹುಟ್ಟಿದವರಿಗೆ ಸಿಗುವ ಎಲ್ಲಾ ಗಮನವನ್ನು ನೋಡುವಾಗ, ಅವನು ಅಥವಾ ಅವಳು ಪರಿಪೂರ್ಣರಾಗಿದ್ದಾರೆ ಮತ್ತು ನೀವು ಎಂದಿಗೂ ಅವರಂತೆ ಆಗಸಾಧ್ಯವಿಲ್ಲ ಎಂಬ ಅಭಿಪ್ರಾಯವು ನಿಮ್ಮಲ್ಲಿ ಮೂಡಬಹುದು. ಆದರೆ ಅದು ನಿಜವಾಗಿದೆಯೋ? “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ,” ಎಂಬುದಾಗಿ ವಿಷಯವನ್ನು ಬೈಬಲ್‌ ನೇರವಾಗಿ ಹೇಳುತ್ತದೆ.​—⁠ರೋಮಾಪುರ 3:23.

ಹೌದು, ನಮ್ಮ ಅಣ್ಣಅಕ್ಕಂದಿರ ನಿಪುಣತೆಗಳು ಅಥವಾ ಪ್ರತಿಭೆಗಳು ಯಾವುದೇ ಆಗಿರಲಿ ಅವರು ಇನ್ನೂ ‘ನಮ್ಮಂಥ ಸ್ವಭಾವವುಳ್ಳವರು.’ (ಅ. ಕೃತ್ಯಗಳು 14:15) ಅವರನ್ನು ಉನ್ನತ ಸ್ಥಾನದಲ್ಲಿಡುವ ಅಥವಾ ಮೂರ್ತೀಕರಿಸುವ ಯಾವುದೇ ಅಗತ್ಯವಿಲ್ಲ. ಪರಿಪೂರ್ಣ ಮಾದರಿಯನ್ನಿಟ್ಟಿರುವ ಒಬ್ಬನೇ ಮನುಷ್ಯನು ಯೇಸು ಕ್ರಿಸ್ತನಾಗಿದ್ದಾನೆ.​—⁠1 ಪೇತ್ರ 2:21.

ಅವರಿಂದ ಕಲಿಯಿರಿ!

ಅಷ್ಟುಮಾತ್ರವಲ್ಲದೆ, ನಿಮ್ಮ ಪರಿಸ್ಥಿತಿಯನ್ನು ಏನನ್ನಾದರೂ ಕಲಿಯಲಿಕ್ಕಾಗಿರುವ ಒಂದು ಸದವಕಾಶವಾಗಿ ಪರಿಗಣಿಸಿರಿ. ಉದಾಹರಣೆಗೆ, ಯೇಸು ಕ್ರಿಸ್ತನ ತಮ್ಮತಂಗಿಯರನ್ನು ಪರಿಗಣಿಸಿರಿ. (ಮತ್ತಾಯ 13:​55, 56) ಅವರ ಪರಿಪೂರ್ಣ ಅಣ್ಣನಿಂದ ಅವರು ಏನೆಲ್ಲಾ ಕಲಿತುಕೊಳ್ಳಸಾಧ್ಯವಿತ್ತು ಎಂಬುದನ್ನು ಆಲೋಚಿಸಿರಿ. ಆದರೆ, “ಅವನ ತಮ್ಮಂದಿರು ಆತನನ್ನು ನಂಬದೆ ಇದ್ದರು.” (ಯೋಹಾನ 7:​5, NW) ಬಹುಶಃ, ಹೆಮ್ಮೆ ಮತ್ತು ಮತ್ಸರ ಅವರ ನಂಬಿಕೆಗೆ ಅಡ್ಡಿಯಾಗಿತ್ತು. ಆದರೆ ಯೇಸುವಿನ ಆತ್ಮಿಕ ಸಹೋದರರು​—⁠ಅವನ ಶಿಷ್ಯರು​—⁠“ನನ್ನಲ್ಲಿ ಕಲಿತುಕೊಳ್ಳಿರಿ” ಎಂಬ ಅವನ ಉದಾರವಾದ ಆಮಂತ್ರಣಕ್ಕೆ ಪ್ರತಿಕ್ರಿಯಿಸಿದರು. (ಮತ್ತಾಯ 11:29) ಕೇವಲ ಯೇಸುವಿನ ಪುನರುತ್ಥಾನದ ನಂತರವೇ ಅವನ ತಮ್ಮಂದಿರು ಅವನನ್ನು ಗಣ್ಯಮಾಡಿದರು. (ಅ. ಕೃತ್ಯಗಳು 1:14) ಆದರೆ ಅಷ್ಟರ ತನಕ, ಅವರ ಮಹಾನ್‌ ಅಣ್ಣನಿಂದ ಕಲಿತುಕೊಳ್ಳುವ ಸುವರ್ಣ ಸಂದರ್ಭಗಳು ಅವರ ಕೈಜಾರಿಹೋಗಿದ್ದವು.

ಅದೇ ರೀತಿಯ ತಪ್ಪನ್ನು ಕಾಯಿನನು ಸಹ ಮಾಡಿದನು. ಅವನ ತಮ್ಮನಾದ ಹೇಬೆಲನು ದೇವರ ನಿಷ್ಠಾವಂತ ಸೇವಕನಾಗಿದ್ದನು. ಬೈಬಲ್‌ ಹೇಳುವುದು: ‘ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿದನು.’ (ಆದಿಕಾಂಡ 4:⁠5) ಆದರೆ ಯಾವುದೋ ಕಾರಣಕ್ಕೆ ದೇವರು “ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ.” ಕಾಯಿನನು ದೀನತೆಯನ್ನು ತೋರಿಸಿ, ತನ್ನ ತಮ್ಮನಿಂದ ಕಲಿಯಸಾಧ್ಯವಿತ್ತು. ಅದಕ್ಕೆ ಬದಲಾಗಿ, “ಕಾಯಿನನು ಬಹು ಕೋಪಗೊಂಡನು” ಮತ್ತು ಹೇಬೆಲನನ್ನು ಕೊಂದನು.​—⁠ಆದಿಕಾಂಡ 4:​5-8.

ನೀವು ನಿಮ್ಮ ಒಡಹುಟ್ಟಿದವರೊಂದಿಗೆ ಅಷ್ಟರ ಮಟ್ಟಿಗೆ ಕೋಪಗೊಳ್ಳಲಿಕ್ಕಿಲ್ಲ ಎಂಬುದು ನಿಜ. ಆದರೆ, ಹೆಮ್ಮೆ ಮತ್ತು ಮತ್ಸರ ನಿಮ್ಮನ್ನು ತಡೆಯುವಂತೆ ಅನುಮತಿಸುವುದಾದರೆ, ಅತ್ಯಮೂಲ್ಯವಾದ ಸಂದರ್ಭಗಳನ್ನು ನೀವು ಕಳೆದುಕೊಳ್ಳಬಲ್ಲಿರಿ. ಗಣಿತದಲ್ಲಿ ಮೇಧಾವಿಯಾಗಿರುವ, ಇತಿಹಾಸವನ್ನು ಕಲಿಯುವುದರಲ್ಲಿ ಚುರುಕು ಬುದ್ಧಿಯುಳ್ಳ, ನಿಮ್ಮ ಅಚ್ಚುಮೆಚ್ಚಿನ ಕ್ರೀಡೆಯಲ್ಲಿ ಪ್ರವೀಣತೆಯನ್ನು ತಲಪಿರುವ, ಶಾಸ್ತ್ರವಚನಗಳ ಗಮನಾರ್ಹ ಜ್ಞಾನವನ್ನು ಹೊಂದಿರುವ, ಅಥವಾ ಸಾರ್ವಜನಿಕ ಭಾಷಣ ನೀಡುವುದರಲ್ಲಿ ನಿಪುಣನಾಗಿರುವ ಒಬ್ಬ ಅಣ್ಣನು ನಿಮಗಿರುವುದಾದರೆ, ನೀವು ಮತ್ಸರವನ್ನು ತಡೆಹಿಡಿಯಲೇಬೇಕು! ಏಕೆಂದರೆ, “ಮತ್ಸರವು ಎಲುಬಿಗೆ ಕ್ಷಯ” ಮತ್ತು ಅದು ಕೇವಲ ನಮಗೇ ಹಾನಿಯನ್ನುಂಟುಮಾಡುತ್ತದೆ. (ಜ್ಞಾನೋಕ್ತಿ 14:​30, NW; 27:⁠4) ನಿಮ್ಮ ಒಡಹುಟ್ಟಿದವರೊಂದಿಗೆ ಅಸಮಾಧಾನಗೊಳ್ಳುವುದಕ್ಕೆ ಬದಲಾಗಿ ಅವರಿಂದ ಕಲಿಯಲು ಪ್ರಯತ್ನಿಸಿರಿ. ಅವನಲ್ಲಿ ಅಥವಾ ಅವಳಲ್ಲಿ ನಿಮ್ಮಲ್ಲಿಲ್ಲದಂಥ ಕೆಲವು ಪ್ರತಿಭೆಗಳು ಇಲ್ಲವೆ ನಿಪುಣತೆಗಳಿವೆ ಎಂಬುದನ್ನು ಅಂಗೀಕರಿಸಿರಿ. ನಿಮ್ಮ ಒಡಹುಟ್ಟಿದವರು ವಿಷಯಗಳನ್ನು ನಿರ್ವಹಿಸುವ ರೀತಿಯನ್ನು ಗಮನಿಸಿರಿ​—⁠ಅಥವಾ, ಇನ್ನೂ ಉತ್ತಮ ಸಂಗತಿಯೇನೆಂದರೆ ಸಹಾಯವನ್ನು ಕೇಳಿಕೊಳ್ಳಿರಿ.

ಆರಂಭದಲ್ಲಿ ತಿಳಿಸಲಾದ ಬ್ಯಾರೀ, ತನ್ನ ಅಣ್ಣಂದಿರು ಇಟ್ಟಂಥ ಉತ್ತಮ ಮಾದರಿಗಳಿಂದ ಪ್ರಯೋಜನವನ್ನು ಪಡೆದುಕೊಂಡನು. ಅವನು ಹೇಳುವುದು: “ಸಭೆಯಲ್ಲಿ ಮತ್ತು ಸಾರುವ ಕೆಲಸದಲ್ಲಿ ಜನರಿಗೆ ಸಹಾಯಮಾಡಲು ಇಚ್ಛೆಯುಳ್ಳವರಾಗಿರುವ ಕಾರಣ ನನ್ನ ಅಣ್ಣಂದಿರು ಎಷ್ಟು ಸಂತೋಷದಿಂದಿದ್ದಾರೆಂದು ನಾನು ನೋಡಿದೆ. ಆದುದರಿಂದ, ನಾನು ಸಹ ನನ್ನ ಅಣ್ಣಂದಿರ ಮಾದರಿಯನ್ನು ಅನುಸರಿಸಲು ನಿರ್ಧರಿಸಿದೆ ಮತ್ತು ರಾಜ್ಯಸಭಾಗೃಹ ಹಾಗೂ ಬೆತೆಲ್‌ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದೆ. ಈ ರೀತಿಯಲ್ಲಿ ನಾನು ಗಳಿಸಿದ ಅನುಭವವು ನನ್ನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು ಮತ್ತು ಯೆಹೋವನೊಂದಿಗಿನ ನನ್ನ ಸಂಬಂಧವು ಬೆಳೆಯುವಂತೆ ಸಹಾಯಮಾಡಿತು.”

ನಿಮ್ಮ ಸ್ವಂತ ಸಾಮರ್ಥ್ಯಗಳನ್ನು ಕಂಡುಕೊಳ್ಳುವುದು

ಪ್ರಾಯಶಃ ನೀವು ನಿಮ್ಮ ಒಡಹುಟ್ಟಿದವರ ಉತ್ತಮ ಗುಣಗಳನ್ನು ಅನುಸರಿಸುವುದು ನಿಮ್ಮ ಸ್ವಂತ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ಅರ್ಥದಲ್ಲಿದೆ ಎಂದು ಭಯಪಡುತ್ತೀರಿ. ಆದರೆ ಹಾಗೆ ಸಂಭವಿಸುವ ಅಗತ್ಯವಿಲ್ಲ. ಅಪೊಸ್ತಲ ಪೌಲನು ಪ್ರಥಮ ಶತಮಾನದ ಕ್ರೈಸ್ತರನ್ನು ಉತ್ತೇಜಿಸಿದ್ದು: ‘ನನ್ನನ್ನು ಅನುಸರಿಸಿರಿ.’ (1 ಕೊರಿಂಥ 4:16) ಅವರು ತಮ್ಮ ಸ್ವಂತ ವ್ಯಕ್ತಿತ್ವರಹಿತರಾಗಿರಬೇಕೆಂದು ಪೌಲನು ಬಯಸಿದನೆಂದು ಇದರ ಅರ್ಥವೋ? ಇಲ್ಲವೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬನಿಗಿಂತ ಭಿನ್ನವಾದ ವ್ಯಕ್ತಿತ್ವವನ್ನು ಹೊಂದಿರಲು ಸಾಧ್ಯವಿವೆ. ನಿಮ್ಮ ಅಣ್ಣ ಅಥವಾ ಅಕ್ಕನಂತೆ ನೀವು ಗಣಿತದಲ್ಲಿ ಉತ್ತಮರಲ್ಲದಿದ್ದರೆ, ನಿಮ್ಮಲ್ಲಿ ಏನೋ ಕೊರತೆಯಿದೆ ಎಂಬುದನ್ನು ಅದು ಅರ್ಥೈಸುವುದಿಲ್ಲ. ನೀವು ಅವರಿಗಿಂತ ಭಿನ್ನರಾಗಿದ್ದೀರಿ ಎಂಬುದನ್ನು ಮಾತ್ರ ಅದು ಅರ್ಥೈಸುತ್ತದೆ.

ಪೌಲನು ಈ ವ್ಯವಹಾರಿಕ ಸಲಹೆಯನ್ನು ನೀಡುತ್ತಾನೆ: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ.” (ಗಲಾತ್ಯ 6:4) ನೀವು ನಿಮ್ಮ ಸ್ವಂತ ಅದ್ವಿತೀಯವಾದ ನಿಪುಣತೆಗಳು ಮತ್ತು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಏಕೆ ಪ್ರಯಾಸಪಡಬಾರದು? ಹೊಸ ಭಾಷೆಯನ್ನು ಕಲಿಯುವುದು, ಒಂದು ಸಂಗೀತ ಉಪಕರಣವನ್ನು ನುಡಿಸಲು ಕಲಿಯುವುದು, ಅಥವಾ ಕಂಪ್ಯೂಟರ್‌ ಉಪಯೋಗಿಸಲು ಕಲಿಯುವುದು, ನಿಮ್ಮ ಕುರಿತು ನಿಮಗೆ ಉತ್ತಮವಾದ ಭಾವನೆಯನ್ನು ಬೆಳೆಸಿಕೊಳ್ಳಲು ಸಹಾಯಮಾಡಬಹುದು. ಅಷ್ಟುಮಾತ್ರವಲ್ಲದೆ, ಅದು ನಿಮ್ಮಲ್ಲಿ ಬೆಲೆಬಾಳುವ ನಿಪುಣತೆಗಳನ್ನು ಸಹ ಬೆಳೆಸಬಹುದು. ವಿಷಯಗಳನ್ನು ಪರಿಪೂರ್ಣವಾಗಿ ಮಾಡುವುದರ ಕುರಿತು ಚಿಂತಿಸಬೇಡಿರಿ! ವಿಷಯಗಳನ್ನು ಸಂಪೂರ್ಣವಾಗಿ, ಮನಪೂರ್ವಕವಾಗಿ, ಮತ್ತು ದಕ್ಷತೆಯಿಂದ ಕಲಿಯಲು ಪ್ರಯತ್ನಿಸಿ. (ಜ್ಞಾನೋಕ್ತಿ 22:29) ಕೆಲವು ವಿಷಯಗಳ ಕಡೆಗೆ ನಿಮಗೆ ಸ್ವಾಭಾವಿಕವಾದ ಒಲವು ಇಲ್ಲದಿರಬಹುದು, ಆದರೆ “ಚುರುಕುಗೈಯವನಿಗೆ ರಾಜ್ಯಾಧಿಕಾರ” ಎಂದು ಜ್ಞಾನೋಕ್ತಿ 12:24 (ಓರೆ ಅಕ್ಷರಗಳು ನಮ್ಮವು.) ತಿಳಿಸುತ್ತದೆ.

ಹಾಗಿದ್ದರೂ, ಮುಖ್ಯವಾಗಿ ನೀವು ಬೆಳೆಸಿಕೊಳ್ಳಬೇಕಾಗಿರುವುದು ನಿಮ್ಮ ಆತ್ಮಿಕತೆಯನ್ನೇ. ಜನರನ್ನು ಬೇಗನೆ ಆಕರ್ಷಿಸಬಹುದಾದ ಯಾವುದೇ ಕೌಶಲ್ಯಗಳಿಗಿಂತ ಆತ್ಮಿಕ ನಿಪುಣತೆಗಳು ಹೆಚ್ಚು ನಿರಂತರವಾದ ಮೌಲ್ಯವನ್ನು ಹೊಂದಿವೆ. ಅವಳಿ ಸಹೋದರರಾದ ಏಸಾವ ಮತ್ತು ಯಾಕೋಬರ ಕುರಿತು ಪರಿಗಣಿಸಿರಿ. ಏಸಾವನು ತನ್ನ ತಂದೆಯಿಂದ ಬಹಳ ಸ್ತುತಿಯನ್ನು ಗಳಿಸಿದ್ದನು ಏಕೆಂದರೆ ಅವನು “ಬೇಟೆಯಾಡುವದರಲ್ಲಿ ಜಾಣನಾದನು; ಅವನು ಅರಣ್ಯವಾಸಿ.” ಆರಂಭದಲ್ಲಿ ಅವನ ಸಹೋದರನಾದ ಯಾಕೋಬನು ತೀರಾ ಅಗಣ್ಯನಾಗಿದ್ದನು, ಏಕೆಂದರೆ ಅವನು “ಸಾಧುಮನುಷ್ಯನಾಗಿ ಗುಡಾರಗಳಲ್ಲೇ ವಾಸಿಸಿದನು.” (ಆದಿಕಾಂಡ 25:27) ಏಸಾವನು ತನ್ನ ಆತ್ಮಿಕತೆಯನ್ನು ಬೆಳೆಸಿಕೊಳ್ಳಲು ತಪ್ಪಿಹೋದನು ಮತ್ತು ಆಶೀರ್ವಾದಗಳನ್ನು ಕಳೆದುಕೊಂಡನು. ಆದರೆ ಯಾಕೋಬನು ಆತ್ಮಿಕ ವಿಷಯಗಳಿಗಾಗಿ ಪ್ರೀತಿಯನ್ನು ಬೆಳೆಸಿಕೊಂಡನು ಮತ್ತು ಯೆಹೋವನಿಂದ ಹೇರಳವಾಗಿ ಆಶೀರ್ವದಿಸಲ್ಪಟ್ಟನು. (ಆದಿಕಾಂಡ 27:28, 29; ಇಬ್ರಿಯ 12:16, 17) ಇದರಿಂದ ಕಲಿಯಬಹುದಾದ ಪಾಠವೇನು? ನಿಮ್ಮ ಆತ್ಮಿಕತೆಯನ್ನು ಬೆಳೆಸಿಕೊಳ್ಳಿರಿ, ‘ನಿಮ್ಮ ಬೆಳಕನ್ನು ಪ್ರಕಾಶಿಸಿರಿ,’ ಮತ್ತು ಹಾಗೆ ಮಾಡುವುದಾದರೆ ನಿಮ್ಮ “ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.”​—⁠ಮತ್ತಾಯ 5:16; 1 ತಿಮೊಥೆಯ 4:15.

ಆರಂಭದಲ್ಲಿ ಉಲ್ಲೇಖಿಸಲಾದ ಕ್ಲ್ಯಾರ್‌ ಹೇಳುವುದು: “ನನ್ನ ಅಕ್ಕಂದಿರ ಛಾಯೆಯಲ್ಲಿ ಜೀವಿಸುವುದರಲ್ಲಿಯೇ ನಾನು ತೃಪ್ತಳಾಗಿದ್ದೆ. ಆದರೆ ನಂತರ ನನ್ನ ವಾತ್ಸಲ್ಯವನ್ನು ‘ವಿಶಾಲಮಾಡಿಕೊಳ್ಳಲು’ ಕೊಡಲ್ಪಟ್ಟಿರುವ ಶಾಸ್ತ್ರೀಯ ಸಲಹೆಯನ್ನು ನಾನು ಅನುಸರಿಸಲು ನಿರ್ಧರಿಸಿದೆ. ಸಭೆಯಲ್ಲಿರುವ ಬೇರೆ ಬೇರೆ ವ್ಯಕ್ತಿಗಳೊಂದಿಗೆ ನಾನು ಕ್ಷೇತ್ರ ಶುಶ್ರೂಷೆಯಲ್ಲಿ ಕೆಲಸಮಾಡಿದೆ ಮತ್ತು ಸಭೆಯಲ್ಲಿ ಅಗತ್ಯದಲ್ಲಿರುವವರಿಗೆ ಸಹಾಯಮಾಡಲು ಪ್ರಾಯೋಗಿಕ ವಿಧಾನಗಳಿಗಾಗಿ ಹುಡುಕಿದೆ. ವಿವಿಧ ಪ್ರಾಯದ ಸಹೋದರ ಸಹೋದರಿಯರನ್ನು ನಮ್ಮ ಮನೆಗೆ ಆಮಂತ್ರಿಸಿದೆ ಮತ್ತು ಅವರಿಗಾಗಿ ಊಟವನ್ನು ತಯಾರುಮಾಡಿದೆ. ಸ್ನೇಹಿತರ ವಿಸ್ತೃತ ಬಳಗದಲ್ಲಿ ನಾನೀಗ ಆನಂದಿಸುತ್ತಿದ್ದೇನೆ, ಮತ್ತು ನಾನು ಹೆಚ್ಚು ಆತ್ಮವಿಶ್ವಾಸದಿಂದಿದ್ದೇನೆ.​—⁠2 ಕೊರಿಂಥ 6:⁠13.

ಆಗಿಂದಾಗ್ಗೆ, ನಿಮ್ಮ ಹೆತ್ತವರು, ನೀವು ನಿಮ್ಮ ಅಣ್ಣ ಅಥವಾ ಅಕ್ಕನಂತಿರಬೇಕೆಂದು ಬುದ್ಧಿಹೇಳುವ ಕೆಟ್ಟ ಚಟವನ್ನು ಮರುಕಳಿಸಬಹುದು. ಆದರೆ ನಿಮ್ಮ ಹೆತ್ತವರ ಹೃದಯದಲ್ಲಿ ನಿಮ್ಮ ಬಗ್ಗೆ ಹಿತಾಸಕ್ತಿಯಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಮಟ್ಟಿಗಿನ ನೋವನ್ನು ದೂರಮಾಡಬಲ್ಲದು. (ಜ್ಞಾನೋಕ್ತಿ 19:11) ಹಾಗಿದ್ದರೂ, ಆ ರೀತಿಯಲ್ಲಿ ಹೋಲಿಸುವಂಥದ್ದು ನಿಮಗೆ ಎಷ್ಟು ನೋವನ್ನುಂಟುಮಾಡುತ್ತದೆ ಎಂಬುದನ್ನು ನಿಮ್ಮ ಹೆತ್ತವರಿಗೆ ಗೌರವಪೂರ್ವಕವಾಗಿ ಹೇಳುವುದು ವಿವೇಕಯುತವಾಗಿದೆ. ಪ್ರಾಯಶಃ, ಅವರು ನಿಮ್ಮ ಕಡೆಗಿನ ತಮ್ಮ ಚಿಂತನೆಯನ್ನು ಇತರ ವಿಧಾನಗಳಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸುವರು.

ನೀವು ಯೆಹೋವ ದೇವರನ್ನು ಸೇವಿಸುವುದಾದರೆ ಆತನು ತಾನೇ ನಿಮ್ಮನ್ನು ಗಮನಿಸುತ್ತಾನೆ ಎಂಬುದನ್ನು ಎಂದಿಗೂ ಮರೆಯಬೇಡಿರಿ. (1 ಕೊರಿಂಥ 8:⁠3) ಬ್ಯಾರೀ, ವಿಷಯವನ್ನು ಈ ರೀತಿಯಲ್ಲಿ ಮುಕ್ತಾಯಗೊಳಿಸುತ್ತಾನೆ: “ನಾನು ಯೆಹೋವನನ್ನು ಎಷ್ಟು ಹೆಚ್ಚಾಗಿ ಸೇವಿಸುತ್ತೇನೊ, ಅಷ್ಟೇ ಹೆಚ್ಚಾಗಿ ನಾನು ಸಂತೋಷಿತನಾಗಿರುತ್ತೇನೆ ಎಂಬುದನ್ನು ನಾನು ಕಂಡುಕೊಂಡೆ. ನಾನೇನಾಗಿದ್ದೇನೋ ಅದಕ್ಕಾಗಿ ಜನರು ಈಗ ನನ್ನನ್ನು ಗಮನಿಸುತ್ತಾರೆ ಮತ್ತು ನನ್ನ ಅಣ್ಣಂದಿರನ್ನು ಗಣ್ಯಮಾಡುವಂತೆ ನನ್ನನ್ನೂ ಗಣ್ಯಮಾಡುತ್ತಾರೆ.” (g03 11/22)

[ಪಾದಟಿಪ್ಪಣಿಗಳು]

^ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

^ ಯೆಹೋವನ ಸಾಕ್ಷಿಗಳಿಂದ ಏರ್ಪಡಿಸಲ್ಪಟ್ಟಿದೆ.

[ಪುಟ 13ರಲ್ಲಿರುವ ಚಿತ್ರ]

ನಿಮ್ಮ ಒಡಹುಟ್ಟಿದವಳು ಹೆಚ್ಚಾಗಿ ಗಮನದ ಕೇಂದ್ರ ಬಿಂದುವಾಗಿದ್ದಾಳೋ?

[ಪುಟ 14ರಲ್ಲಿರುವ ಚಿತ್ರ]

ನಿಮ್ಮ ಸ್ವಂತ ಪ್ರತಿಭೆಗಳನ್ನು ಮತ್ತು ಆಸಕ್ತಿಗಳನ್ನು ಪರಿಶೋಧಿಸಿರಿ

[ಪುಟ 14ರಲ್ಲಿರುವ ಚಿತ್ರ]

ನಿಮ್ಮ ಆತ್ಮಿಕ ನಿಪುಣತೆಗಳನ್ನು ಬೆಳೆಸಿಕೊಳ್ಳುವ ಮೂಲಕ ‘ನಿಮ್ಮ ಬೆಳಕನ್ನು ಪ್ರಕಾಶಿಸಿರಿ’