ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಗುವಿಗೆ ಜ್ವರ ಇರುವಾಗ

ನಿಮ್ಮ ಮಗುವಿಗೆ ಜ್ವರ ಇರುವಾಗ

ನಿಮ್ಮ ಮಗುವಿಗೆ ಜ್ವರ ಇರುವಾಗ

“ನನಗೆ ಏನೋ ಆಗುತ್ತಿದೆ!” ನಿಮ್ಮ ಮಗು ಈ ರೀತಿಯಲ್ಲಿ ಹೇಳುವುದಾದರೆ ನೀವು ತಕ್ಷಣ ಅವನ ದೇಹದ ಉಷ್ಣತೆಯನ್ನು ಪರೀಕ್ಷಿಸುತ್ತೀರಿ. ಅವನಿಗೆ ಜ್ವರವಿರುವುದಾದರೆ ನೀವು ಚಿಂತಿತರಾಗುತ್ತೀರಿ.

ಅಮೆರಿಕದ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನ ಜಾನ್‌ ಹಾಪ್ಕಿನ್ಸ್‌ ಮಕ್ಕಳ ಕೇಂದ್ರದಿಂದ ನಡಿಸಲಾದ ಒಂದು ಅಧ್ಯಯನಕ್ಕನುಸಾರ, “ಸಾಧಾರಣವಾದ ಜ್ವರವು ಸಹ ಕಡಿಮೆಪಕ್ಷ ಮೂರ್ಛೆರೋಗ ಅಥವಾ ಮಿದುಳಿನ ಹಾನಿ ಮುಂತಾದ ಒಂದು ಹಾನಿಕಾರಕ ಪ್ರಭಾವವನ್ನು ಉಂಟುಮಾಡಬಲ್ಲದೆಂದು” 91 ಪ್ರತಿಶತ ಹೆತ್ತವರು ನಂಬಿದ್ದರು. ಅದೇ ಅಧ್ಯಯನವು ತೋರಿಸಿದ್ದೇನೆಂದರೆ, “89 ಪ್ರತಿಶತ ಹೆತ್ತವರು ತಮ್ಮ ಮಗುವಿನ ದೇಹದ ಉಷ್ಣತೆಯು 38.9 ಡಿಗ್ರಿ ಸೆಲ್ಸಿಯಸ್‌ ಅನ್ನು ತಲಪುವ ಮುನ್ನವೇ ಜ್ವರ ಕಡಿಮೆಗೊಳಿಸುವ ಮದ್ದನ್ನು ನೀಡಿದರು.”

ನಿಮ್ಮ ಮಗುವಿಗೆ ಜ್ವರ ಬಂದಾಗ ನಿರ್ದಿಷ್ಟವಾಗಿ ನೀವು ಎಷ್ಟರ ಮಟ್ಟಿಗೆ ಎಚ್ಚರಿಕೆಯನ್ನು ವಹಿಸಬೇಕು? ಮತ್ತು ಅದಕ್ಕೆ ಚಿಕಿತ್ಸೆಯನ್ನು ನೀಡುವ ಉತ್ತಮ ವಿಧಾನಗಳು ಯಾವುವು?

ಜ್ವರದ ಪ್ರಾಮುಖ್ಯ ಪಾತ್ರ

ಜ್ವರಕ್ಕೆ ಯಾವುದು ಕಾರಣವಾಗಿರುತ್ತದೆ? ಸಾಮಾನ್ಯವಾದ ದೇಹದ ಸರಾಸರಿ ಉಷ್ಣತೆಯು (ಬಾಯಿಂದ ಅದರ ತೀವ್ರತೆಯನ್ನು ಅಳೆಯುವಾಗ) 37 ಡಿಗ್ರಿ ಸೆಲ್ಸಿಯಸ್‌ ಆಗಿರುವುದಾದರೂ, ದಿವಸದಾದ್ಯಂತ ಒಬ್ಬ ವ್ಯಕ್ತಿಯ ದೇಹ ಉಷ್ಣತೆಯು ಸಾಮಾನ್ಯವಾಗಿ ಒಂದು ಡಿಗ್ರಿ ಅಥವಾ ಅದಕ್ಕಿಂತಲೂ ಹೆಚ್ಚಿಗೆ ಬದಲಾಗುತ್ತದೆ. * ನಿಮ್ಮ ದೇಹದ ಉಷ್ಣತೆಯು ಬೆಳಿಗ್ಗೆ ಕಡಿಮೆಯಾಗಿದ್ದು, ಮಧ್ಯಾಹ್ನ ಹೆಚ್ಚಾಗಬಹುದು. ಮಿದುಳಿನ ಕೆಳಗಿರುವ ಅಂಗವಾದ ಮಸ್ತಿಷ್ಕನಿಮ್ನಾಂಗ ದೇಹದ ಉಷ್ಣತೆಯನ್ನು ಒಂದು ಶಾಖನಿಯಂತ್ರಣದಂತೆ ನಿಯಂತ್ರಿಸುತ್ತದೆ. ಸೂಕ್ಷ್ಮಾಣು ಅಥವಾ ವೈರಸ್‌ಗಳ ದಾಳಿಗೆ ಪ್ರತಿಕ್ರಿಯಿಸುತ್ತಾ ಸೋಂಕು ರಕ್ಷಣಾವ್ಯವಸ್ಥೆಯು ರಕ್ತದಲ್ಲಿ ಪೈರೋಜೆನ್ಸ್‌ ಎಂದು ಕರೆಯಲಾಗುವ ಜ್ವರಜನಕ ರಸಾಯನವನ್ನು ಉತ್ಪಾದಿಸುವಾಗ ಜ್ವರವು ಉಂಟಾಗುತ್ತದೆ. ಇದು ಮಸ್ತಿಷ್ಕನಿಮ್ನಾಂಗವು ಉಷ್ಣತೆಯನ್ನು ಹೆಚ್ಚು ಉಚ್ಚಮಟ್ಟಕ್ಕೆ “ಪುನಃ ಸಂಯೋಜಿಸುವಂತೆ” ನಡೆಸುತ್ತದೆ.

ಜ್ವರವು ವಿಪರೀತ ಸುಸ್ತು ಮತ್ತು ನಿರ್ಜಲತೆಯನ್ನು ಉಂಟುಮಾಡಬಹುದಾದರೂ, ಅದು ಯಾವಾಗಲೂ ಹಾನಿಕಾರಕ ಸಂಗತಿಯಾಗಿರಬೇಕೆಂದಿಲ್ಲ. ವಾಸ್ತವದಲ್ಲಿ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗಾಗಿ ಮೇಓ ಸಂಸ್ಥೆಗನುಸಾರ, ಜ್ವರವು ಸೂಕ್ಷ್ಮಾಣು ಮತ್ತು ವೈರಸ್‌ ಸೋಂಕುಗಳನ್ನು ಹೊರಗಟ್ಟಲು ದೇಹಕ್ಕೆ ಸಹಾಯಮಾಡುವ ಪ್ರಾಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. “ನೆಗಡಿ ಮತ್ತು ಇತರ ಉಸಿರಾಟದ ಸೋಂಕುಗಳನ್ನು ಉಂಟುಮಾಡುವ ವೈರಸ್‌ಗಳು ತಂಪಾದ ತಾಪಮಾನವನ್ನು ಇಷ್ಟಪಡುತ್ತವೆ. ಆದುದರಿಂದ, ಸೌಮ್ಯ ಜ್ವರವನ್ನು ಉಂಟುಮಾಡುವ ಮೂಲಕ ನಿಮ್ಮ ದೇಹವು ವೈರಸ್‌ ಅನ್ನು ಹೊರಗಟ್ಟಲು ಸಹಾಯಮಾಡುತ್ತದೆ.” ಹೀಗೆ, ಈ ಸಂಸ್ಥೆಯು ಇನ್ನೂ ತಿಳಿಸಿದ್ದು: “ಸೌಮ್ಯ ಜ್ವರವನ್ನು ಕಡಿಮೆಗೊಳಿಸುವುದು ಅನಗತ್ಯ ಮತ್ತು ಇದು ನಿಮ್ಮ ಮಗುವಿನ ಸ್ವಾಭಾವಿಕವಾಗಿ ಗುಣಪಡಿಸುವ ಕ್ರಿಯೆಯನ್ನು ತಡೆಗಟ್ಟಬಹುದು.” ಆಸಕ್ತಿಕರವಾಗಿ, ಮೆಕ್ಸಿಕೊದಲ್ಲಿನ ಒಂದು ಆಸ್ಪತ್ರೆಯಲ್ಲಿ ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ರೋಗಿಯ ದೇಹದ ಉಷ್ಣತೆಯನ್ನು ಹೆಚ್ಚುಮಾಡುವ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯನ್ನು ಹೈಪರ್‌ತರ್ಮಿಅ (ಅತ್ಯುಷ್ಣತೆ) ಎಂದು ಕರೆಯಲಾಗುತ್ತದೆ.

ಅಮೆರಿಕದ ತುರ್ತು ವೈದ್ಯರ ಕಾಲೇಜಿನ ಡಾ. ಆ್ಯಲ್‌ ಸಾಕ್ಕೇಟ್ಟೀ ಹೇಳುವುದು: “ಸಾಮಾನ್ಯವಾಗಿ ಜ್ವರವು ಒಂದು ಸಮಸ್ಯೆಯಾಗಿರುವುದಿಲ್ಲ. ಆದರೆ ಸೋಂಕು ಇದೆ ಎಂಬುದಕ್ಕೆ ಇದು ಒಂದು ಸೂಚನೆಯಾಗಿದೆ. ಆದುದರಿಂದ, ಮಗುವಿಗೆ ಜ್ವರವಿದ್ದಾಗ ನಿಮ್ಮ ಗಮನವು ಮಗುವಿನ ಮತ್ತು ಸಂಭವನೀಯ ಸೋಂಕಿನ ಮೇಲಿರಬೇಕೇ ಹೊರತು ಮಗುವಿನ ದೇಹದ ಉಷ್ಣತೆಯನ್ನು ಓದುವುದರ ಮೇಲಲ್ಲ.” ಶಿಶುರೋಗ ತಜ್ಞರ ಅಮೆರಿಕದ ಸಂಸ್ಥೆಯು ತಿಳಿಸುವುದು: “ಮಗುವಿಗೆ ಅಹಿತಕರವಾದ ಅನಿಸಿಕೆಯಾಗುವಾಗ ಅಥವಾ ಜ್ವರಸಂಬಂಧಿತ ಸ್ನಾಯುಗಳ ಸೆಳೆತವನ್ನು ಅನುಭವಿಸುವ ಸಮಸ್ಯೆಯಿರುವಾಗ ಮಾತ್ರ ಚಿಕಿತ್ಸೆಯ ಅಗತ್ಯವಿರುತ್ತದೆಯೇ ಹೊರತು, 38.3 ಡಿಗ್ರಿ ಸೆಲ್ಸಿಯಸ್‌ ಜ್ವರಕ್ಕೆ ಸಾಮಾನ್ಯವಾಗಿ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಮಗುವಿಗೆ ಸ್ನಾಯುಗಳ ಸೆಳೆತಗಳು ಅಥವಾ ಒಂದು ದೀರ್ಘ ವ್ಯಾಧಿಯು ಇರುವ ಹೊರತಾಗಿ, ತೀಕ್ಷ್ಣ ಜ್ವರ ಸಹ ತನ್ನಲ್ಲಿ ತಾನೇ ಅಪಾಯಕಾರಿಯಾಗಿಲ್ಲ ಅಥವಾ ಗಮನಾರ್ಹವಾಗಿಲ್ಲ. ನಿಮ್ಮ ಮಗು ಹೇಗೆ ವರ್ತಿಸುತ್ತಿದೆ ಎಂಬುದನ್ನು ಗಮನಿಸುವುದು ಬಹಳ ಪ್ರಾಮುಖ್ಯವಾಗಿದೆ. ಅವನು ಒಳ್ಳೇ ರೀತಿಯಲ್ಲಿ ಊಟ ಹಾಗೂ ನಿದ್ದೆಮಾಡುತ್ತಾನಾದರೆ, ಮತ್ತು ಮಧ್ಯೆ ಮಧ್ಯೆ ಆಟವಾಡುತ್ತಾನಾದರೆ, ಅವನಿಗೆ ಯಾವುದೇ ಚಿಕಿತ್ಸೆಯ ಅಗತ್ಯವಿರುವುದಿಲ್ಲ.”

ಸೌಮ್ಯ ಜ್ವರಕ್ಕೆ ಚಿಕಿತ್ಸೆನೀಡುವ ವಿಧ

ನಿಮ್ಮ ಮಗುವಿಗೆ ಸಹಾಯನೀಡಲು ನೀವು ಏನನ್ನೂ ಮಾಡಸಾಧ್ಯವಿಲ್ಲ ಎಂಬುದು ಇದರ ಅರ್ಥವಲ್ಲ. ಸೌಮ್ಯ ಜ್ವರಕ್ಕೆ ಚಿಕಿತ್ಸೆನೀಡಲು ಈ ಕೆಲವು ಸಲಹೆಗಳನ್ನು ಕೆಲವು ವೈದ್ಯಕೀಯ ಪ್ರವೀಣರು ತಿಳಿಸುತ್ತಾರೆ: ನಿಮ್ಮ ಮಗುವಿನ ಕೋಣೆಯನ್ನು ಹಿತಕರವಾಗಿ ತಂಪಾಗಿಡಿರಿ. ಮಗುವಿಗೆ ಹಗುರವಾದ ಬಟ್ಟೆಯನ್ನು ಧರಿಸಿರಿ. (ದೇಹವನ್ನು ಹೆಚ್ಚು ಬೆಚ್ಚಗೆ ಮಾಡುವುದು ಜ್ವರವನ್ನು ಇನ್ನಷ್ಟು ಹೆಚ್ಚಿಸಸಾಧ್ಯವಿದೆ.) ನೀರು, ಹಣ್ಣಿನ ರಸ, ಮತ್ತು ಸೂಪ್‌ ಮುಂತಾದ ಹೆಚ್ಚು ದ್ರವವನ್ನು ಸೇವಿಸುವಂತೆ ಮಗುವನ್ನು ಉತ್ತೇಜಿಸಿರಿ, ಏಕೆಂದರೆ ಜ್ವರವು ನಿರ್ಜಲತೆಗೆ ನಡಿಸಬಲ್ಲದು. * (ಕೋಲ ಅಥವಾ ಕಪ್ಪು ಚಹ ಮುಂತಾದ ಕ್ಯಾಫೀನ್‌ ಅಂಶವನ್ನು ಹೊಂದಿರುವ ಪಾನೀಯಗಳು ಮೂತ್ರವರ್ಧಕಗಳಾಗಿವೆ ಮತ್ತು ಇನ್ನಷ್ಟು ನಿರ್ಜಲತೆಯನ್ನು ಉಂಟುಮಾಡಬಹುದು.) ಶಿಶುಗಳಿಗೆ ಮೊಲೆಯೂಡಿಸುವುದನ್ನು ಮುಂದುವರಿಸಬೇಕು. ಜೀರ್ಣಿಸಲು ಕಷ್ಟಕರವಾದ ಆಹಾರವನ್ನು ಕೊಡಬೇಡಿ, ಏಕೆಂದರೆ ಜ್ವರವು ಹೊಟ್ಟೆಯ ಚಟುವಟಿಕೆಯನ್ನು ಕಡಿಮೆಗೊಳಿಸುತ್ತದೆ.

ಮಗುವಿಗೆ 38.9 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತೀಕ್ಷ್ಣವಾದ ಜ್ವರವಿರುವಲ್ಲಿ, ವೈದ್ಯರ ಶಿಫಾರಸ್ಸಿಲ್ಲದೆ ಜ್ವರವನ್ನು ಕಡಿಮೆಗೊಳಿಸುವ ಪ್ಯಾರಸಿಟಮೊಲ್‌ ಅಥವಾ ಇಬುಪ್ರೋಫೆನ್‌ನಂತಹ ಔಷಧಿಗಳನ್ನು ಕೊಡಲಾಗುತ್ತದೆ. ಹಾಗಿದ್ದರೂ, ಎಷ್ಟು ಮಾತ್ರೆಗಳನ್ನು ನೀಡಬೇಕೆಂಬುದನ್ನು ಮದ್ದಿನ ಮೇಲೆ ತಿಳಿಸಿರುವ ಪಟ್ಟಿಯಲ್ಲಿ ನೋಡುವುದು ಬಹಳ ಪ್ರಾಮುಖ್ಯವಾಗಿದೆ. (ಎರಡು ವರುಷಕ್ಕಿಂತ ಕಡಿಮೆ ಪ್ರಾಯದ ಮಗುವಿಗೆ ವೈದ್ಯರ ಶಿಫಾರಸ್ಸಿಲ್ಲದೆ ಔಷಧವನ್ನು ನೀಡಬಾರದು.) ಜ್ವರ ಕಡಿಮೆಗೊಳಿಸುವ ಔಷಧವು ವೈರಸ್‌ ನಿರೋಧಕಗಳಾಗಿರುವುದಿಲ್ಲ. ಆದುದರಿಂದ, ಅದು ನೆಗಡಿ ಅಥವಾ ಇತರ ಅಸ್ವಸ್ಥತೆಯಿಂದ ಮಗುವನ್ನು ಶೀಘ್ರವಾಗಿ ಗುಣಪಡಿಸುವುದಿಲ್ಲ, ಬದಲಾಗಿ ಸುಸ್ತನ್ನು ಇನ್ನಷ್ಟು ಹೆಚ್ಚಿಸಬಹುದು. 16ಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೆ ಜ್ವರವನ್ನು ಕಡಿಮೆಮಾಡಲಿಕ್ಕಾಗಿ ಆ್ಯಸ್ಪಿರಿನ್‌ ಗುಳಿಗೆಯನ್ನು ಕೊಡಬಾರದು ಎಂದು ಕೆಲವು ವೈದ್ಯರು ಶಿಫಾರಸ್ಸುಮಾಡುತ್ತಾರೆ, ಏಕೆಂದರೆ ಅದು ರೈಸ್‌ ಸಹಲಕ್ಷಣವನ್ನು​—⁠ಜೀವಕ್ಕೆ ಅಪಾಯಕಾರಿಯಾದ ಅಸ್ವಸ್ಥತೆ​—⁠ಉಂಟುಮಾಡಬಲ್ಲದು. *

ಸ್ಪಂಜು ಸ್ನಾನವನ್ನು ಮಾಡಿಸುವ ಮೂಲಕ ಸಹ ಜ್ವರವನ್ನು ಕಡಿಮೆಗೊಳಿಸಸಾಧ್ಯವಿದೆ: ಉಗುರುಬೆಚ್ಚಗಿರುವ ನೀರನ್ನು ಟಬ್ಬಿನಲ್ಲಿ ಕೆಲವು ಸೆಂಟಿಮೀಟರ್‌ನಷ್ಟು ತುಂಬಿಸಿ, ಮಗುವನ್ನು ಅದರಲ್ಲಿ ಕುಳ್ಳಿರಿಸಿ ಸ್ಪಂಜು ಸ್ನಾನವನ್ನು ಮಾಡಿಸಿರಿ. (ಕ್ರಿಮಿನಾಶಕ ದ್ರವಗಳನ್ನು ಉಪಯೋಗಿಸಬೇಡಿರಿ, ಏಕೆಂದರೆ ಅದು ವಿಷಕಾರಿಯಾಗಿರಬಲ್ಲದು.)

ಈ ಲೇಖನದ ಜೊತೆಗಿರುವ ರೇಖಾಚೌಕದಲ್ಲಿ, ಒಬ್ಬನು ಯಾವಾಗ ವೈದ್ಯರನ್ನು ಕರೆಯಬೇಕೆಂದು ತಿಳಿಯಲು ಕೆಲವು ಸಹಾಯಕಾರಿ ಸಲಹೆಗಳು ಕೊಡಲ್ಪಟ್ಟಿವೆ. ಡೆಂಗು ಜ್ವರ, ಈಬೋಲ ವೈರಸ್‌, ಟೈಫಾಯ್ಡ್‌ ಜ್ವರ, ಅಥವಾ ಹಳದಿ ಜ್ವರ ಮುಂತಾದ ಅಪಾಯಕಾರಿ ಜ್ವರಗಳು ಸಾಮಾನ್ಯವಾಗಿರುವ ಸ್ಥಳದಲ್ಲಿ ವಾಸಿಸುವವರು ವೈದ್ಯರನ್ನು ಭೇಟಿಯಾಗುವುದು ಬಹಳ ಪ್ರಾಮುಖ್ಯವಾಗಿದೆ.

ಹಾಗಾದರೆ ಮುಖ್ಯವಾಗಿ, ನಿಮ್ಮ ಮಗು ಹೆಚ್ಚು ಆರಾಮವಾಗಿರುವಂತೆ ನೋಡಿಕೊಳ್ಳುವುದೇ ನೀವು ಮಾಡಬಹುದಾದ ಅತ್ಯುತ್ತಮ ಕ್ರಿಯೆಯಾಗಿದೆ. ನರವ್ಯೂಹಗಳಿಗೆ ಹಾನಿಯನ್ನುಂಟುಮಾಡುವ ಅಥವಾ ಮಾರಕವಾದ ತೀಕ್ಷ್ಣ ಜ್ವರ ಸಂಭವಿಸುವುದು ತೀರಾ ವಿರಳ. ಜ್ವರದಿಂದುಂಟಾಗುವ ಮೂರ್ಛೆರೋಗದ ವಿಷಯದಲ್ಲೂ, ಎಚ್ಚರಿಕೆಯನ್ನು ವಹಿಸಬೇಕಾದರೂ ಅದು ದೀರ್ಘಕಾಲದ ಪರಿಣಾಮಗಳನ್ನು ಉಂಟುಮಾಡುವುದಿಲ್ಲ.

ತಡೆಗಟ್ಟುವಿಕೆಯು ಅತ್ಯುತ್ತಮ ಔಷಧಿಯಾಗಿದೆ ಎಂಬುದು ನಿಶ್ಚಯ, ಮತ್ತು ನಿಮ್ಮ ಮಗುವನ್ನು ಸೋಂಕಿನಿಂದ ರಕ್ಷಿಸುವ ಒಂದು ವಿಧಾನವು ಅವನಿಗೆ ಅಥವಾ ಅವಳಿಗೆ ಶುಚಿತ್ವದ ಮೂಲಭೂತ ವಿಷಯಗಳನ್ನು ಕಲಿಸಿಕೊಡುವುದೇ. ಮಕ್ಕಳಿಗೆ ತಮ್ಮ ಕೈಗಳನ್ನು ಆಗಾಗ ತೊಳೆದುಕೊಳ್ಳುವಂತೆ ಕಲಿಸಬೇಕು​—⁠ಪ್ರಾಮುಖ್ಯವಾಗಿ ಊಟಮಾಡುವ ಮುನ್ನ, ಶೌಚಾಲಯವನ್ನು ಉಪಯೋಗಿಸಿದ ನಂತರ, ಜನನಿಬಿಡ ಸ್ಥಳಗಳಲ್ಲಿ ಸಮಯವನ್ನು ಕಳೆದ ಬಳಿಕ, ಅಥವಾ ಪ್ರಾಣಿಗಳನ್ನು ಮುಟ್ಟಿದ ನಂತರ. ನಿಮ್ಮ ಉತ್ತಮ ಪ್ರಯತ್ನಗಳ ಹೊರತಾಗಿಯೂ ನಿಮ್ಮ ಮಗುವಿಗೆ ಸೌಮ್ಯ ಜ್ವರ ಬರುವುದಾದರೆ, ಹೆದರಬೇಡಿರಿ. ನಾವು ಈಗ ಕಲಿತಂತೆ, ನಿಮ್ಮ ಮಗು ಜೇತರಿಸಿಕೊಳ್ಳುವಂತೆ ನೀವು ಅನೇಕ ವಿಷಯಗಳನ್ನು ಮಾಡಸಾಧ್ಯವಿದೆ. (g03 12/08)

[ಪಾದಟಿಪ್ಪಣಿಗಳು]

^ ಎಲ್ಲಿ ಅದನ್ನು ಅಳೆಯಲಾಗಿದೆ ಮತ್ತು ಯಾವ ರೀತಿಯ ಉಷ್ಣತಾಮಾಪಕವನ್ನು ಉಪಯೋಗಿಸಲಾಗಿದೆ ಎಂಬುದರ ಮೇಲೆ ಹೊಂದಿಕೊಂಡು ಉಷ್ಣತೆಯಲ್ಲಿ ಭಿನ್ನತೆಯು ಕಂಡುಬರಬಹುದು.

^ ಭೇದಿ ಮತ್ತು ವಾಂತಿಯಿಂದ ಕೂಡಿದ ಜ್ವರ ಸಂಭವಿಸುವ ಸಂದರ್ಭದಲ್ಲಿ ಉಪಯೋಗಿಸಸಾಧ್ಯವಾಗಿರುವ ಪುನರ್ಜಲ ಚಿಕಿತ್ಸೆಯನ್ನು, 1995, ಏಪ್ರಿಲ್‌ 8ರ ಎಚ್ಚರ! ಪತ್ರಿಕೆಯ ಪುಟ 11ನ್ನು ನೋಡಿರಿ.

^ ರೈಸ್‌ ಸಹಲಕ್ಷಣ ಎಂಬುದು ವೈರಸ್‌ ಸೋಂಕಿನ ಬಳಿಕ ಮಕ್ಕಳಲ್ಲಿ ಸಂಭವಿಸುವ ಒಂದು ತೀಕ್ಷ್ಣವಾದ ನರರೋಗವಾಗಿದೆ.

[ಪುಟ 31ರಲ್ಲಿರುವ ಚೌಕ]

ಮಗುವಿಗೆ ಜ್ವರವಿರುವಲ್ಲಿ ವೈದ್ಯರನ್ನು ಕರೆಯಬೇಕಾದ ಸಂದರ್ಭಗಳು

◼ ನಿಮ್ಮ ಮಗು ಮೂರು ತಿಂಗಳು ಅಥವಾ ಅದಕ್ಕಿಂತಲೂ ಚಿಕ್ಕ ಪ್ರಾಯದ್ದಾಗಿದ್ದು, 38 ಡಿಗ್ರಿ ಸೆಲ್ಸಿಯಸ್‌ ಅಥವಾ ಅದಕ್ಕಿಂತ ಹೆಚ್ಚಿನ ಗುದನಾಳದ ಶಾಖವನ್ನು ಹೊಂದಿರುವುದಾದರೆ

◼ ಮೂರು ಮತ್ತು ಆರು ತಿಂಗಳಿನ ಮಧ್ಯದ ಪ್ರಾಯದ್ದಾಗಿದ್ದು, 38.3 ಡಿಗ್ರಿ ಸೆಲ್ಸಿಯಸ್‌ ಅಥವಾ ಅದಕ್ಕಿಂತಲೂ ಹೆಚ್ಚಿನ ದೇಹಶಾಖವನ್ನು ಹೊಂದಿರುವುದಾದರೆ

◼ ಆರು ತಿಂಗಳಿಗಿಂತಲೂ ಹೆಚ್ಚು ಪ್ರಾಯದ್ದಾಗಿದ್ದು, 40 ಡಿಗ್ರಿ ಸೆಲ್ಸಿಯಸ್‌ ಅಥವಾ ಹೆಚ್ಚಿನ ದೇಹಶಾಖವನ್ನು ಹೊಂದಿರುವುದಾದರೆ

◼ ದ್ರವವನ್ನು ಸೇವಿಸಲು ನಿರಾಕರಿಸುವುದಾದರೆ ಮತ್ತು ನಿರ್ಜಲತೆಯ ಸೂಚನೆಯನ್ನು ತೋರಿಸುತ್ತದಾದರೆ

◼ ಜ್ವರ ನೆತ್ತಿಗೇರಿದರೆ ಮತ್ತು ವಿಪರೀತ ನಿತ್ರಾಣವಿರುವುದಾದರೆ

◼ 72 ತಾಸುಗಳ ನಂತರವು ಜ್ವರವಿರುವುದಾದರೆ

◼ ಎಡೆಬಿಡದೆ ಅಳುವುದಾದರೆ ಅಥವಾ ಗೊಂದಲ ಇಲ್ಲವೆ ಮಾನಸಿಕ ಗಲಿಬಿಲಿಯನ್ನು ತೋರಿಸುವುದಾದರೆ

◼ ಚರ್ಮದ ಮೇಲೆ ಗುಳ್ಳೆಗಳಿರುವುದಾದರೆ, ಉಸಿರಾಡಲು ಕಷ್ಟಕರವಾಗಿದ್ದರೆ, ಅಥವಾ ಪದೇ ಪದೇ ವಾಂತಿಯಾಗುತ್ತಿರುವುದಾದರೆ

◼ ಸೆಡೆತುಕೊಂಡಿರುವ ಕತ್ತು ಮತ್ತು ಹಠಾತ್ತಾಗಿ ಬರುವ ತೀಕ್ಷ್ಣ ತಲೆನೋವು ಇರುವುದಾದರೆ

[ಕೃಪೆ]

ಮೂಲ: ಶಿಶುರೋಗ ತಜ್ಞರ ಅಮೆರಿಕದ ಸಂಸ್ಥೆ