ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಧುಮೇಹ ಪೀಡಿತರಿಗೆ ಬೈಬಲ್‌ ಸಹಾಯನೀಡುವ ವಿಧ

ಮಧುಮೇಹ ಪೀಡಿತರಿಗೆ ಬೈಬಲ್‌ ಸಹಾಯನೀಡುವ ವಿಧ

ಮಧುಮೇಹ ಪೀಡಿತರಿಗೆ ಬೈಬಲ್‌ ಸಹಾಯನೀಡುವ ವಿಧ

ಮಧುಮೇಹ ಪೀಡಿತರ ಆರೋಗ್ಯ ಮತ್ತು ಸುಕ್ಷೇಮಕ್ಕೆ, ಸ್ವನಿಯಂತ್ರಣ ಮತ್ತು ಒಂದು ಸಕಾರಾತ್ಮಕ ಹೊರನೋಟವು ಅತ್ಯಾವಶ್ಯಕ. ಆದರೆ ಇಂಥ ಗುಣಗಳನ್ನು ಬೆಳೆಸಿಕೊಳ್ಳಲು, ರೋಗಿಗಳಿಗೆ ನಿರಂತರ ಬೆಂಬಲದ ಅಗತ್ಯವಿದೆ. ಆದುದರಿಂದ, ‘ಇದೊಂದು ಸಾರಿ ತಿಂದರೆ ಏನೂ ಆಗುವುದಿಲ್ಲ’ ಎಂಬಂಥ ಮಾತುಗಳನ್ನು ಹೇಳುವ ಮೂಲಕ ಅಹಿತಕರ ಆಹಾರವನ್ನು ಸೇವಿಸುವಂತೆ ಮಧುಮೇಹ ಪೀಡಿತರನ್ನು ಪ್ರೇರೇಪಿಸಲು ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಬಯಸುವುದಿಲ್ಲ. ಹೃದ್ರೋಗ ಮತ್ತು ಟೈಪ್‌ 2 ಮಧುಮೇಹವಿದ್ದ ಹ್ಯಾರೀ ಎಂಬ ವ್ಯಕ್ತಿಯು ತಿಳಿಸುವುದು: “ನನಗೆ ನನ್ನ ಪತ್ನಿಯಿಂದ ಉತ್ತಮ ಬೆಂಬಲವು ದೊರಕಿತು. ನಾನು ತಿನ್ನಬಾರದಾದ ಆಹಾರವನ್ನು ಅವಳು ಮನೆಯಲ್ಲಿಡುವುದಿಲ್ಲ. ಆದರೆ ಕೆಲವರಿಗೆ ಇದು ಅರ್ಥವಾಗುವುದಿಲ್ಲ, ಮತ್ತು ಒಬ್ಬ ವ್ಯಕ್ತಿಯು ತಿನ್ನಬಾರದ ಆಹಾರವು ಅವನ ಎದುರಿನಲ್ಲಿದ್ದರೆ ಆಹಾರಪಥ್ಯವನ್ನು ಕಾಪಾಡಿಕೊಳ್ಳಲು ಎಷ್ಟು ಕಷ್ಟಕರವಾಗುತ್ತದೆಂದು ಅವರಿಗೆ ತಿಳಿಯದು.”

ಮಧುಮೇಹ ಪೀಡಿತರೊಂದಿಗೆ ನೀವು ಕ್ರಮವಾಗಿ ಸಹವಾಸಿಸುತ್ತಿರುವುದಾದರೆ, ಬೈಬಲಿನಲ್ಲಿರುವ ಈ ಎರಡು ಸುಂದರವಾದ ಮೂಲತತ್ತ್ವಗಳನ್ನು ಮನಸ್ಸಿನಲ್ಲಿಡಿರಿ: “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ,” ಮತ್ತು “ಪ್ರೀತಿ . . . ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ.”​—⁠1 ಕೊರಿಂಥ 10:24; 13:​4, 5.

ತಮ್ಮ ಆರೋಗ್ಯದ ಕುರಿತು ಚಿಂತನೆಯುಳ್ಳ ಪ್ರತಿಯೊಬ್ಬರೂ ತಮಗೆ ಮಧುಮೇಹವಿರಲಿ ಇಲ್ಲದಿರಲಿ ಆಹಾರ ಸೇವನೆಯಲ್ಲಿ ಸ್ವನಿಯಂತ್ರಣವನ್ನು ಕಾಪಾಡಿಕೊಳ್ಳುವುದು ಅಗತ್ಯ. ಬೈಬಲ್‌ ಈ ವಿಷಯದಲ್ಲಿ ನಮಗೆ ಸಹಾಯಮಾಡುತ್ತದೆ ಏಕೆಂದರೆ ನಮ್ಮಲ್ಲಿ ಪ್ರತಿಯೊಬ್ಬರೂ ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳುವ ಅಗತ್ಯತೆಯನ್ನು ಅದು ಸೂಚಿಸುತ್ತದೆ. ಈ ಗುಣವನ್ನು ನಿಮ್ಮ ಜೀವನದಲ್ಲಿ ಬೆಳೆಸಿಕೊಳ್ಳಲು ನೀವು ನಿರ್ಧರಿಸಿದ್ದೀರೋ? (ಗಲಾತ್ಯ 5:​22, 23) ಬೈಬಲಿನಲ್ಲಿ ಕೊಡಲ್ಪಟ್ಟಿರುವ, ಕ್ರೈಸ್ತ ಅಪೊಸ್ತಲ ಪೌಲ ಮುಂತಾದವರ ಮಾದರಿಗಳಿಂದಲೂ ಹೆಚ್ಚಿನ ಸಹಾಯವು ದೊರೆಯಸಾಧ್ಯವಿದೆ. ಒಬ್ಬ ಮಧುಮೇಹ ಪೀಡಿತನು ಹೇಳುವುದು: “ಅವನ ಶರೀರದಲ್ಲಿ ನಿರಂತರವೂ ಒಂದು ಶೂಲ ನಾಟಿತ್ತಾದರೂ ಅವನು ದೇವರನ್ನು ನಂಬಿಗಸ್ತಿಕೆಯಿಂದ ಮತ್ತು ಪೂರ್ಣವಾಗಿ ಸೇವಿಸಿದನು. ಅವನಂತೆಯೇ ನಾನು ಸಹ ಮಾಡಬಲ್ಲೆ!”

ಹೌದು, ತನ್ನಿಂದ ಯಾವುದನ್ನು ಬದಲಾಯಿಸಲು ಸಾಧ್ಯವಿರಲಿಲ್ಲವೋ ಅದನ್ನು ಪೌಲನು ಅಂಗೀಕರಿಸಿ, ಒಬ್ಬ ಮಿಷನೆರಿಯೋಪಾದಿ ಮಹತ್ತರವಾದ ಯಶಸ್ಸನ್ನು ಆನಂದಿಸಿದನು. (2 ಕೊರಿಂಥ 12:​7-9) ಹದಿನೆಂಟು ವರುಷ ಪ್ರಾಯದ ಹುಟ್ಟುಕುರುಡನಾಗಿದ್ದ ಡಸ್ಟಿನ್‌, ತನ್ನ ಹನ್ನೆರಡು ವರುಷ ಪ್ರಾಯದಲ್ಲಿ ಮಧುಮೇಹದಿಂದ ಬಾಧಿತನಾದನು. ಅವನು ಬರೆಯುವುದು: “ಈ ಲೋಕದಲ್ಲಿ ಯಾರಿಗೂ ತಾವು ಇಚ್ಛಿಸುವ ಎಲ್ಲಾ ವಿಷಯಗಳು ಪರಿಪೂರ್ಣವಾಗಿ ದೊರೆತಿಲ್ಲವೆಂದು ನನಗೆ ತಿಳಿದಿದೆ. ದೇವರ ಹೊಸ ಲೋಕದಲ್ಲಿ ನನಗೆ ಮಧುಮೇಹವೇ ಇರದಿರುವ ಸಮಯಕ್ಕಾಗಿ ನಾನು ಎದುರುನೋಡುತ್ತಿದ್ದೇನೆ. ನನಗೆ ಇದು ಒಂದು ತಾತ್ಕಾಲಿಕ ವಿಷಯವಾಗಿದೆ. ಶೀತ ಅಥವಾ ಜ್ವರಕ್ಕಿಂತಲೂ ಇದು ಹೆಚ್ಚು ಸಮಯವಿರಬಹುದು, ಆದರೆ ಇದು ಕಟ್ಟಕಡೆಗೆ ಕೊನೆಗೊಳ್ಳಲಿದೆ.”

ಈ ಹೇಳಿಕೆಯನ್ನು ಮಾಡುವಾಗ ಡಸ್ಟಿನ್‌ನ ಮನಸ್ಸಿನಲ್ಲಿ, ದೇವರ ರಾಜ್ಯದ ಕೆಳಗೆ ಭೂಪರದೈಸಿನಲ್ಲಿ ಪರಿಪೂರ್ಣ ಆರೋಗ್ಯದ ಬೈಬಲ್‌ ಆಧಾರಿತ ನಿರೀಕ್ಷೆಯಿತ್ತು. (ಪ್ರಕಟನೆ 21:​3, 4) ದೇವರ ವಾಕ್ಯವು ವಾಗ್ದಾನಿಸುವಂತೆ ಅಂಥ ದೈವಿಕ ಆಳ್ವಿಕೆಯ ಕೆಳಗೆ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24; ಮತ್ತಾಯ 6:​9, 10) ಈ ಬೈಬಲ್‌ ಆಧಾರಿತ ವಾಗ್ದಾನದ ಕುರಿತು ಹೆಚ್ಚನ್ನು ತಿಳಿಯಲು ನೀವು ಬಯಸುತ್ತೀರೋ? ಸ್ಥಳಿಕ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ, ಅಥವಾ 5ನೇ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸದಲ್ಲಿ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ. (g03 5/08)

[ಪುಟ 12ರಲ್ಲಿರುವ ಚಿತ್ರ]

ಸ್ವನಿಯಂತ್ರಣ ಹಾಗೂ ಒಂದು ಸಕಾರಾತ್ಮಕ ಹೊರನೋಟವು ಅತ್ಯಾವಶ್ಯಕ