ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೊಸೇಯಿಕ್‌ ಚಿತ್ರಕಲೆಗಳು ಕಲ್ಲುಗಳಿಂದ ಮಾಡಿದ ವರ್ಣಕಲೆಗಳು

ಮೊಸೇಯಿಕ್‌ ಚಿತ್ರಕಲೆಗಳು ಕಲ್ಲುಗಳಿಂದ ಮಾಡಿದ ವರ್ಣಕಲೆಗಳು

ಮೊಸೇಯಿಕ್‌ ಚಿತ್ರಕಲೆಗಳು ಕಲ್ಲುಗಳಿಂದ ಮಾಡಿದ ವರ್ಣಕಲೆಗಳು

ಇಟಲಿಯ ಎಚ್ಚರ! ಲೇಖಕರಿಂದ

ಮೊಸೇಯಿಕ್‌ ಚಿತ್ರಕಲೆಯನ್ನು, “ಒಂದು ವಿಚಿತ್ರವಾದ ಚಿತ್ರಕಲೆ,” “ಹೃದಯಸ್ಪರ್ಶಿಸುವ” ಒಂದು ಅಲಂಕಾರ ವಿಧಾನ, ಮತ್ತು “ಪುರಾತನ ಕಾಲದಿಂದ ಪಾರಾಗಿ ಇಂದಿನ ವರೆಗೆ ಉಳಿದಿರುವ ಅತಿ ಬಾಳಿಕೆಬರುವ ಆಲಂಕಾರಿಕ ಕಲಾಕೃತಿಗಳಲ್ಲಿ” ಒಂದು ಎಂದೆಲ್ಲಾ ಕರೆಯಲಾಗಿದೆ. ಹದಿನೈದನೆಯ ಶತಮಾನದ ಇಟಲಿಯ ಕಲಾಕಾರನಾದ ಡೋಮೇನಿಕೊ ಗಿರ್ಲಂಡಾಯೊ ಇದನ್ನು “ಸದಾಕಾಲಕ್ಕೆ ಉಳಿಯುವ ಚಿತ್ರರಚನೆಯ ಸರಿಯಾದ ವಿಧಾನ” ಎಂದು ಕರೆದನು. ಮೊಸೇಯಿಕ್‌ ಚಿತ್ರಕಲೆಗಳ ಬಗ್ಗೆ ನೀವೇನೇ ನೆನಸಿದರೂ, ಅವುಗಳಿಗೆ ನಿಜವಾಗಿಯೂ ಅತ್ಯಂತ ಆಕರ್ಷಣೀಯ ಇತಿಹಾಸವಿದೆ.

ಕಲ್ಲು, ಗಾಜು ಅಥವಾ ಹೆಂಚಿನ ಚೂರುಗಳನ್ನು ಹತ್ತಿರವಾಗಿ ಜೋಡಿಸಿ ತಯಾರಿಸಲಾದ ಚಿತ್ರದಿಂದ ಕೊಠಡಿಯ ನೆಲ, ಗೋಡೆ, ಅಥವಾ ಚಾವಣಿಯ ಮೇಲ್ಭಾಗವನ್ನು ಅಲಂಕರಿಸುವ ಕಲಾಕೃತಿಯನ್ನು ಮೊಸೇಯಿಕ್‌ ಚಿತ್ರಕಲೆ ಎಂದು ವಿವರಿಸಬಹುದು. ಪುರಾತನ ಸಮಯಗಳಿಂದಲೂ ನೆಲಗಳನ್ನು ಮತ್ತು ಗೋಡೆಗಳನ್ನು ಅಲಂಕರಿಸಲು ಮೊಸೇಯಿಕ್‌ ಚಿತ್ರಕಲೆಯನ್ನು ಉಪಯೋಗಿಸಲಾಗುತ್ತಿತ್ತು. ಎಲ್ಲಿ ಅತಿ ಆಲಂಕಾರಿಕ ಕಲಾಕೃತಿಯನ್ನು ನೀರು ಹಾಳುಮಾಡಬಲ್ಲದೋ ಅಂಥ ಸ್ಥಳಗಳಾದ ಸ್ನಾನದ ತೊಟ್ಟಿಗಳು, ಕೊಳಗಳು, ಮತ್ತು ಕಾರಂಜಿಗಳು ಸಹ ಮೊಸೇಯಿಕ್‌ ಚಿತ್ರಕಲೆಯಿಂದ ಅಲಂಕರಿಸಲ್ಪಟ್ಟಿವೆ.

ಮೊಸೇಯಿಕ್‌ ಚಿತ್ರಕಲೆಗಳು ವಿವಿಧ ರೀತಿಯದ್ದಾಗಿರಬಲ್ಲವು. ಇವುಗಳಲ್ಲಿ ಸರಳವಾದ ಏಕ ವರ್ಣದ ನೆಲಗಳಿಂದ ಹಿಡಿದು ಕಪ್ಪುಬಿಳುಪುಗಳನ್ನು ಮಾತ್ರ ಬಳಸಿ ರಚಿಸಿದ ಅಲಂಕಾರಗಳ ವರೆಗೆ ಮತ್ತು ಜಟಿಲವಾದ ಬಹುವರ್ಣ ಕಲಾಕೃತಿಯ ನೆಲಗಳಿಂದ ಹಿಡಿದು ಮನಮೋಹಕ ಆದರೆ ರಚಿಸಲು ಕಷ್ಟಕರವಾದ ಕಲಾಕೃತಿಯ ವರೆಗಿನ ವೈವಿಧ್ಯಗಳಿವೆ.

ಕಂಡುಹಿಡಿಯುವಿಕೆ ಮತ್ತು ವಿಕಸನ

ಮೊಸೇಯಿಕ್‌ ಚಿತ್ರಕಲೆಯನ್ನು ಯಾರು ಕಂಡುಹಿಡಿದರು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಪುರಾತನ ಐಗುಪ್ತದ ಜನರು ಮತ್ತು ಸುಮೇರಿಯದವರು ತಮ್ಮ ಕಟ್ಟಡಗಳ ಮೇಲ್ಭಾಗವನ್ನು ನಾನಾ ಬಣ್ಣಗಳ ಚಿತ್ರಾಕೃತಿಗಳಿಂದ ಅಲಂಕರಿಸುತ್ತಿದ್ದರು. ಆದರೆ, ಈ ಚಿತ್ರಕಲೆಯು ಯಾವುದೇ ಹೆಚ್ಚಿನ ವಿಕಸನವಿಲ್ಲದೆ ಅಸ್ತಿತ್ವದಿಂದಲೇ ಕಣ್ಮರೆಯಾಯಿತು. ಏಷಿಯ ಮೈನರ್‌, ಕಾರ್ತೆಜ್‌, ಕ್ರೇತದ್ವೀಪ, ಗ್ರೀಸ್‌, ಸಿರಿಯ, ಸಿಸಿಲಿ ಮತ್ತು ಸ್ಪೆಯಿನ್‌ ಈ ಮುಂತಾದ ಸ್ಥಳಗಳು ಮೊಸೇಯಿಕ್‌ ಚಿತ್ರಕಲೆಯ ಜನ್ಮಸ್ಥಳಗಳಾಗಿ ಮಾನ್ಯತೆ ಪಡೆದಿವೆ. ಇದರ ಫಲಿತಾಂಶವಾಗಿ, ಈ ಕಲೆಯು “ಕಂಡುಹಿಡಿಯಲ್ಪಟ್ಟು, ಮರೆತುಬಿಡಲ್ಪಟ್ಟು, ನಂತರ ಇನ್ನೊಮ್ಮೆ ನಾನಾ ಸಮಯಗಳಲ್ಲಿ ಹಾಗೂ ಮೆಡಿಟರೇನಿಯನ್‌ ಸಮುದ್ರ ತೀರದ ವಿವಿಧ ಸ್ಥಳಗಳಲ್ಲಿ ಆವಿಷ್ಕರಿಸಲ್ಪಟ್ಟ ಕಲೆ,” ಎಂದು ಒಬ್ಬ ಲೇಖಕನು ಊಹಿಸುವಂತೆ ನಡೆಸಿತು.

ಆರಂಭದ ಮೊಸೇಯಿಕ್‌ ಚಿತ್ರಕಲೆಗಳು​—⁠ಕೆಲವು ಸಾ.ಶ.ಪೂ. ಒಂಭತ್ತನೆಯ ಶತಮಾನಕ್ಕೂ ಹಿಂದಿನವುಗಳಾಗಿವೆ​—⁠ಸರಳವಾದ ಚಿತ್ರಾಲಂಕಾರಗಳಲ್ಲಿ ನುಣುಪಾದ ಕಲ್ಲು ಹರಳುಗಳಿಂದ ಮಾಡಲ್ಪಟ್ಟಿವೆ. ಸ್ಥಳಿಕ ಕಲ್ಲುಗಳು ವಿವಿಧ ಬಣ್ಣಗಳನ್ನು ಒದಗಿಸಿದವು. ಈ ಕಲ್ಲುಗಳು ಸಾಮಾನ್ಯವಾಗಿ 10ರಿಂದ 20 ಮಿಲಿಮೀಟರ್‌ ಸುತ್ತಳತೆಯನ್ನು ಹೊಂದಿದ್ದವು, ಆದರೆ ಕೆಲವು ಚಿತ್ರಾಲಂಕಾರಗಳಿಗಾಗಿ ಅತಿ ಸಣ್ಣ ಅಂದರೆ ಕೇವಲ ಐದು ಮಿಲಿಮೀಟರ್‌ಗಳ ಕಲ್ಲು ಹರಳುಗಳನ್ನು ಉಪಯೋಗಿಸಲಾಗುತ್ತಿತ್ತು. ಸಾ.ಶ.ಪೂ. ನಾಲ್ಕನೆಯ ಶತಮಾನದಷ್ಟಕ್ಕೆ, ಶಿಲ್ಪಿಗಳು ಬಹಳ ಹೆಚ್ಚಿನ ನಿಷ್ಕೃಷ್ಟತೆಯಿಂದ ಕಲ್ಲು ಹರಳುಗಳನ್ನು ತೀರಾ ಸಣ್ಣಸಣ್ಣದಾಗಿ ತುಂಡರಿಸಲು ಆರಂಭಿಸಿದರು. ಕ್ರಮೇಣ ಕಲ್ಲು ಹರಳುಗಳ ಬದಲಿಗೆ ಘನಾಕೃತಿಯ ಅಥವಾ ತೀರಾ ಸಣ್ಣದಾಗಿ ತುಂಡು ಮಾಡಲಾದ ಸಾಮಾನ್ಯ ಕಲ್ಲುಗಳನ್ನು ಉಪಯೋಗಿಸಲಾಯಿತು. ಈ ಸಣ್ಣ ಕಲ್ಲುಗಳು ವೈವಿಧ್ಯಮಯ ಬಣ್ಣಗಳನ್ನು ಹೊಂದಿರುತ್ತವೆ ಮತ್ತು ಅಗತ್ಯವಿರುವ ಚಿತ್ರಾಲಂಕಾರಗಳಿಗೆ ತಕ್ಕಂತೆ ಅವುಗಳನ್ನು ವಿನ್ಯಾಸಿಸಲು ಸುಲಭವಾಗಿರುತ್ತವೆ. ಅವುಗಳ ಮೇಲ್ಭಾಗವು ನಯವಾಗಿರುವ ಕಾರಣ, ಅವುಗಳ ಬಣ್ಣಗಳನ್ನು ಇನ್ನಷ್ಟು ವರ್ಧಿಸಲು ಅದನ್ನು ಸುಲಭವಾಗಿ ಪರಿಷ್ಕರಿಸಸಾಧ್ಯವಿದೆ ಹಾಗೂ ಅದಕ್ಕೆ ಸುಲಭವಾಗಿ ಮೇಣಹಚ್ಚಸಾಧ್ಯವಿದೆ. ಸಾ.ಶ. ಎರಡನೆಯ ಶತಮಾನದಷ್ಟಕ್ಕೆ, ನಾನಾ ಬಣ್ಣಗಳ ಗಾಜಿನ ಚೂರುಗಳನ್ನು ಸಹ ವ್ಯಾಪಕವಾಗಿ ಉಪಯೋಗಿಸಲಾಯಿತು. ಇದು, ಮೊಸೇಯಿಕ್‌ ಚಿತ್ರಕಲೆಯ ಸೌಂದರ್ಯವನ್ನು ಇನ್ನಷ್ಟೂ ಹೆಚ್ಚಿಸಿತು.

ಗ್ರೀಕರ ಸಮಯಾವಧಿಯು (ಸಾ.ಶ.ಪೂ. 300ರಿಂದ ಸಾ.ಶ.ಪೂ. 30) ಅತ್ಯುತ್ತಮವಾದ ಮೊಸೇಯಿಕ್‌ ಚಿತ್ರಕಲೆಗಳನ್ನು ಉತ್ಪಾದಿಸಿತು. “ಲಭ್ಯವಿರುವಷ್ಟು ವೈವಿಧ್ಯಮಯವಾದ ಬಣ್ಣಗಳನ್ನು ಉಪಯೋಗಿಸುತ್ತಾ, ಕಲ್ಲುಗಳ ಗಾತ್ರವನ್ನು ಒಂದು ಕ್ಯೂಬಿಕ್‌ ಮಿಲಿಮೀಟರ್‌ನಷ್ಟಕ್ಕೆ ಕಡಿಮೆಗೊಳಿಸುತ್ತಾ, . . . ಗ್ರೀಕ್‌ ಮೊಸೇಯಿಕ್‌ ಚಿತ್ರಕಲಾಕಾರರಿಂದ ತಯಾರಿಸಲಾದ ಮೊಸೇಯಿಕ್‌ ಚಿತ್ರಕಲೆಗಳು ವರ್ಣಕಲೆಗಳೊಂದಿಗೆ ಪೈಪೋಟಿಯನ್ನು ನಡಿಸಲಾರಂಭಿಸಿದವು,” ಎಂದು ಗ್ಲೋಸಾರ್ಯೋ ಟೇಕ್ನಿಕೊ-ಸ್ಟೋರೀಕೊ ಡೆಲ್‌ ಮೋಸಾಯೀಕೊ (ಮೊಸೇಯಿಕ್‌ ಚಿತ್ರಕಲೆಯ ತಾಂತ್ರಿಕ-ಐತಿಹಾಸಿಕ ಲಘು ಶಬ್ದಕೋಶ) ಎಂಬ ಪುಸ್ತಕವು ತಿಳಿಸುತ್ತದೆ. ಹೊಳಪು, ಛಾಯೆ, ಸಾಂದ್ರತೆ, ಘನ, ಮತ್ತು ಪರಿದೃಶ್ಯ ಚಿತ್ರ ಮುಂತಾದ ಪ್ರಭಾವಗಳನ್ನು ಗಳಿಸಲು ಬಹಳ ಕೌಶಲ್ಯದಿಂದ ಬಣ್ಣಗಳನ್ನು ಉಪಯೋಗಿಸಲಾಯಿತು.

ಗ್ರೀಕ್‌ ಕಲಾಕೃತಿಯಲ್ಲಿ ಲಾಕ್ಷಣಿಕವಾಗಿರುವುದು, ಸುತ್ತಲೂ ಅಲಂಕಾರಮಯ ಅಂಚುಗಳನ್ನು ಹೊಂದಿದ ಮಧ್ಯಭಾಗದಲ್ಲಿರುವ ಅತಿ ಸೂಕ್ಷವಾಗಿ ಜೋಡಿಸಿದ ಒಳ ಜೋಡಣೆ (ದೊಡ್ಡ ನಕ್ಷೆಯೊಳಗೆ ಸೇರಿಸಿದ ಸಣ್ಣ ನಕ್ಷೆ) ಅಥವಾ ಲಾಂಛನವಾಗಿದೆ​—⁠ಅನೇಕವೇಳೆ ಇದು ಪ್ರಖ್ಯಾತ ವರ್ಣಕಲೆಯ ಉಚ್ಚ ಗುಣಮಟ್ಟದ ಪುನರುತ್ಪಾದನೆಯಾಗಿರುತ್ತದೆ. ಕೆಲವು ಒಳ ಜೋಡಣೆಗಳು ಅತಿ ಸಣ್ಣ ಕಲ್ಲುಗಳಿಂದ ಎಷ್ಟು ಉತ್ತಮವಾಗಿ ಜೋಡಿಸಲ್ಪಟ್ಟಿರುತ್ತವೆಂದರೆ ಅದು ಕಲ್ಲುಗಳ ಸಣ್ಣ ಸಣ್ಣ ತುಂಡುಗಳಿಂದ ಮಾಡಲ್ಪಟ್ಟದ್ದಾಗಿ ತೋರದೆ ವಿವಿಧ ಬಣ್ಣಗಳನ್ನು ಜಾಗರೂಕತೆಯಿಂದ ಬಳಿದು ತಯಾರಿಸಿದ ವರ್ಣಕಲೆಯಂತೆ ತೋರುತ್ತವೆ.

ರೋಮನ್‌ ಮೊಸೇಯಿಕ್‌ ಚಿತ್ರಕಲೆಗಳು

ಇಟಲಿಯಲ್ಲಿ ಮತ್ತು ರೋಮನ್‌ ಸಾಮ್ರಾಜ್ಯದ ಪ್ರಾಂತಗಳಲ್ಲಿ ಕಂಡುಬರುವ ಹೇರಳವಾದ ಮೊಸೇಯಿಕ್‌ ಚಿತ್ರಕಲೆಗಳ ಕಾರಣ, ಅದನ್ನು ಅನೇಕವೇಳೆ ರೋಮನ್‌ ಕಲಾಕೃತಿಯೆಂದು ಪರಿಗಣಿಸಲಾಗಿದೆ. “ಬ್ರಿಟನ್‌ನಿಂದ ಲಿಬೀಯ, ಅಟ್ಲ್ಯಾಂಟಿಕ್‌ ತೀರದಿಂದ ಸಿರಿಯನ್‌ ಮರುಭೂಮಿಯ ತನಕದ ರೋಮನ್‌ ಕಾಲಗಳ ಪ್ರದೇಶದಲ್ಲಿನ ಕಟ್ಟಡಗಳಲ್ಲಿ ನೂರಾರು ಸಾವಿರ ಮೊಸೇಯಿಕ್‌ ಚಿತ್ರಕಲೆಯ ನೆಲಗಟ್ಟುಗಳು ಕಂಡುಬರುತ್ತವೆ. ಒಂದು ನಿರ್ದಿಷ್ಟ ಸ್ಥಳದಲ್ಲಿ ರೋಮನ್‌ ಆಳ್ವಿಕೆಯು ಇತ್ತೆಂಬುದನ್ನು ರುಜುಪಡಿಸಲು ಇದನ್ನು ಒಂದು ಗುರುತು ಚಿಹ್ನೆಯಾಗಿ ಉಪಯೋಗಿಸಲಾಗುವಷ್ಟು ಮಟ್ಟಿಗೆ ಮೊಸೇಯಿಕ್‌ ಚಿತ್ರಕಲೆಯು ರೋಮನ್‌ ಸಂಸ್ಕೃತಿಯ ಹರಡುವಿಕೆಯೊಂದಿಗೆ ಸಂಬಂಧಿಸಿತ್ತು,” ಎಂದು ಒಂದು ಪುಸ್ತಕವು ತಿಳಿಸುತ್ತದೆ.

ಹಾಗಿದ್ದರೂ, ನಾನಾ ಬಣ್ಣಗಳ ಮೊಸೇಯಿಕ್‌ ಚಿತ್ರಕಲೆಯು ಹಿಂದಿನ ರೋಮನ್‌ ಸಾಮ್ರಾಜ್ಯದ ಆವಶ್ಯಕತೆಯನ್ನು ಪೂರೈಸಲಿಲ್ಲ. ಸಾ.ಶ. ಒಂದನೇ ಶತಮಾನದ ಸಮಯದಲ್ಲಿ ದೊಡ್ಡ ದೊಡ್ಡ ಪಟ್ಟಣಗಳ ಹುಟ್ಟುವಿಕೆಯು, ಶೀಘ್ರದಲ್ಲಿಯೇ ತಯಾರಿಸಲಾಗುವ ಮತ್ತು ಕಡಿಮೆ ಬೆಲೆಯ ಮೊಸೇಯಿಕ್‌ ಚಿತ್ರಕಲೆಗಳಿಗಾಗಿ ಬೇಡಿಕೆಯನ್ನು ಹೆಚ್ಚಿಸಿತು. ಈ ಬೇಡಿಕೆಯು, ಕೇವಲ ಕಪ್ಪುಬಿಳಿ ಬಣ್ಣದ ಸಣ್ಣ ಕಲ್ಲುಗಳನ್ನು ಉಪಯೋಗಿಸಿ ರಚಿಸುವ ಮೊಸೇಯಿಕ್‌ ಚಿತ್ರಕಲೆಯನ್ನು ಆರಂಭಿಸಿತು. ಉತ್ಪಾದನೆಯು ತೀವ್ರಗತಿಯಲ್ಲಿ ಹೆಚ್ಚಾಯಿತು ಮತ್ತು ಏನ್‌ಚೀಕ್ಲೊಪೀಡ್ಯ ಡಿಲಾರ್ಟೆ ಆನ್ಟೀಕ (ಪುರಾತನ ಕಲಾಕೃತಿಯ ಎನ್‌ಸೈಕ್ಲಪೀಡಿಯ)ಕ್ಕನುಸಾರ “ರೋಮನ್‌ ಸಾಮ್ರಾಜ್ಯದಲ್ಲಿನ ಶ್ರೀಮಂತರ ಮನೆಗಳಲ್ಲಿ ಮೊಸೇಯಿಕ್‌ ಚಿತ್ರಕಲೆಯಿಲ್ಲದ ಒಂದು ಮನೆಯೂ ಇರಲಿಲ್ಲ.”

ದೂರದಲ್ಲಿರುವ ಬೇರೆ ಬೇರೆ ಸ್ಥಳಗಳಲ್ಲಿ ಕೆಲವು ಚಿತ್ರಾಲಂಕಾರಗಳ ನಿಕರವಾದ ನಕಲು ಕೃತಿಗಳು ಲಭ್ಯವಿದ್ದವು. ಶಿಲ್ಪಿಗಳ ತಂಡಗಳು​—⁠ಅಥವಾ ಒಂದುವೇಳೆ ಮೊಸೇಯಿಕ್‌ ಚಿತ್ರಾಲಂಕಾರಗಳನ್ನು ಹೊಂದಿದ ಪುಸ್ತಕಗಳು​—⁠ಒಂದು ಕಟ್ಟಡ ನಿರ್ಮಾಣ ಸ್ಥಳದಿಂದ ಇನ್ನೊಂದಕ್ಕೆ ಪ್ರಯಾಣಿಸಿದವು ಎಂಬುದನ್ನು ಇದು ಸೂಚಿಸುತ್ತದೆ. ಒಂದುವೇಳೆ ಇಚ್ಛಿಸುವುದಾದರೆ, ಶಿಲ್ಪಿಗಳ ಕೆಲಸದ ಸ್ಥಳದಲ್ಲಿಯೇ ಲಾಂಛನವನ್ನು ತಯಾರಿಸುವಂತೆ ಮುಂಚಿತವಾಗಿಯೇ ತಿಳಿಸಿ, ಅಲ್ಲಿಯೇ ತಯಾರಿಸಿ, ಕಟ್ಟಡ ಕಟ್ಟುವ ಸ್ಥಳಕ್ಕೆ ಅದನ್ನು ಒಂದು ಅಮೃತ ಶಿಲೆ ಇಲ್ಲವೆ ಗಟ್ಟಿ ಮಣ್ಣಿನ ಹರಿವಾಣದಲ್ಲಿ ಸಾಗಿಸಿ, ನಂತರ ಅಲ್ಲಿ ಅದನ್ನು ಅಳವಡಿಸಸಾಧ್ಯವಿದೆ. ಇತರ ಎಲ್ಲಾ ಮೊಸೇಯಿಕ್‌ ಚಿತ್ರಕಲೆಯನ್ನು ಕಟ್ಟಡ ಕಟ್ಟುವ ಸ್ಥಳದಲ್ಲಿಯೇ ತಯಾರಿಸಲಾದವು.

ಚಿತ್ರಾಲಂಕಾರಗಳನ್ನು ಮತ್ತು ಅಂಚುಗಳನ್ನು ಅದರದರ ಸ್ಥಳದಲ್ಲಿ ಸರಿಯಾಗಿ ಜೋಡಿಸಲು ಜಾಗರೂಕ ತಯಾರಿಯು ಅಗತ್ಯವಾಗಿತ್ತು. ಅಸ್ತಿವಾರ ಮತ್ತು ಅದರ ಮೇಲ್ಭಾಗವು ನಯವಾಗಿಯೂ ಚಪ್ಪಟೆಯಾಗಿಯೂ ಇದೆಯೆಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ಗಮನವನ್ನು ಕೊಡಲಾಯಿತು. ನಂತರ, ಗಾರೆಯು ಒಣಗುವದಕ್ಕಿಂತ ಮುಂಚೆ ಕೆಲಸವನ್ನು ಮುಗಿಸಸಾಧ್ಯವಾಗುವಷ್ಟೇ ಸಣ್ಣ ಒಂದು ವಿಸ್ತೀರ್ಣಕ್ಕೆ​—⁠ಒಂದು ಚದರ ಮೀಟರಿಗೂ ಕಡಮೆ ವಿಸ್ತೀರ್ಣಕ್ಕೆ​—⁠ನಯವಾದ ಗಾರೆಯ ತೆಳ್ಳಗಿನ ಲೇಪವನ್ನು ಹಚ್ಚಲಾಯಿತು. ಮೇಲ್ಭಾಗದಲ್ಲಿ ಒಂದು ಗುರುತಿನೋಪಾದಿ ಗೆರೆಗಳನ್ನು ಎಳೆದುಕೊಳ್ಳಬಹುದು. ಕಲ್ಲುಗಳನ್ನು ಅಪೇಕ್ಷಿತ ಗಾತ್ರದಲ್ಲಿ ತುಂಡುಮಾಡಿ, ನಂತರ ಶಿಲ್ಪಿಗಳಿಂದ ಅದನ್ನು ಗಾರೆಯ ಮೇಲೆ ಜೋಡಿಸಲಾಯಿತು.

ಒಂದರ ನಂತರ ಇನ್ನೊಂದರಂತೆ ಸಣ್ಣ ಸಣ್ಣ ಕಲ್ಲುಗಳನ್ನು ಗಾರೆಯೊಳಕ್ಕೆ ಒತ್ತಲಾಯಿತು. ಕಲ್ಲುಗಳು ಗಾರೆಯೊಳಕ್ಕೆ ಹೋಗುವಾಗ ಗಾರೆಯು ಅವುಗಳ ಮಧ್ಯದಿಂದ ಮೇಲಕ್ಕೆ ಬಂತು. ಹೀಗೆ ಒಂದು ವಿಸ್ತೀರ್ಣವು ಕಲ್ಲುಗಳಿಂದ ಮುಚ್ಚಲ್ಪಟ್ಟ ನಂತರ, ಅದರ ಪಕ್ಕದಲ್ಲಿರುವ ಇನ್ನೊಂದು ವಿಸ್ತೀರ್ಣಕ್ಕೆ ಗಾರೆ ಬಳಿದು ಅದನ್ನು ಮುಚ್ಚಲಾಯಿತು, ಮತ್ತು ನಂತರ ಇನ್ನೊಂದು ವಿಸ್ತೀರ್ಣವನ್ನು ಹೀಗೆ ಉಳಿದ ಎಲ್ಲಾ ಭಾಗವನ್ನು ಕಲ್ಲುಗಳಿಂದ ಮುಚ್ಚಲಾಯಿತು. ಬಹಳ ನಿಪುಣರಾದ ಶಿಲ್ಪಿಗಳು ಕಷ್ಟಕರವಾದ ಭಾಗಗಳಲ್ಲಿ ಕೆಲಸಮಾಡುವಾಗ, ಅತಿ ಸರಳವಾದ ಭಾಗಗಳನ್ನು ಕಲ್ಲುಗಳಿಂದ ಮುಚ್ಚುವ ಕೆಲಸವನ್ನು ಅವರು ತಮ್ಮ ಸಹಾಯಕರಿಗೆ ನೀಡಿದರು.

ಕ್ರೈಸ್ತಪ್ರಪಂಚದ ಮೊಸೇಯಿಕ್‌ ಚಿತ್ರಕಲೆಗಳು

ಸಾ.ಶ. ನಾಲ್ಕನೆಯ ಶತಮಾನದಲ್ಲಿ, ಮೊಸೇಯಿಕ್‌ ಚಿತ್ರಕಲೆಯು ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿಯೂ ಉಪಯೋಗಿಸಲ್ಪಡಲು ಆರಂಭಗೊಂಡಿತು. ಅನೇಕವೇಳೆ ಮೊಸೇಯಿಕ್‌ ಚಿತ್ರಕಲೆಗಳು ಬೈಬಲ್‌ ಕಥೆಗಳನ್ನು ನಿರೂಪಿಸುತ್ತಿರುವ ಕಾರಣ, ಅವುಗಳು ಆರಾಧಕರಿಗೆ ಬೋಧಿಸಲೂ ಉಪಯುಕ್ತವಾಯಿತು. ಮಿನುಗುತ್ತಿರುವ ಲೈಟ್‌ಗಳು ಹೊಂಬಣ್ಣದ ಮತ್ತು ವಿವಿಧ ವರ್ಣದ ಗಾಜಿನ ತುಂಡುಗಳ ಮೇಲೆ ಪ್ರತಿಬಿಂಬಿಸುವಾಗ ಅಲ್ಲಿನ ವಾತಾವರಣಕ್ಕೆ ಒಂದು ಆತ್ಮಿಕ ಮಹತ್ವವನ್ನು ನೀಡಿದವು. ಸ್ಟಾರ್ಯ ಡೆಲಾರ್ಟೆ ಈಟಾಲ್ಯಾನಾ (ಇಟಲಿಯ ಕಲಾಕೃತಿಯ ಇತಿಹಾಸ) ಎಂಬ ಪುಸ್ತಕವು ತಿಳಿಸುವುದು: “ನವಪ್ಲೇಟೋವಾದದಿಂದ . . . ಪ್ರಭಾವಿತವಾದ ಆ ಸಮಯದ ಸಿದ್ಧಾಂತಕ್ಕೆ ಮೊಸೇಯಿಕ್‌ ಚಿತ್ರಕಲೆಯು ಪರಿಪೂರ್ಣವಾಗಿ ಹೊಂದಿಕೆಯಲ್ಲಿತ್ತು. ಮೊಸೇಯಿಕ್‌ ಚಿತ್ರಕಲೆಯಲ್ಲಿ, ಯಾವುದೇ ನಿರ್ಜೀವ ವಸ್ತುಗಳು ಸಹ ಶುದ್ಧ ಆತ್ಮಿಕ, ಶುದ್ಧ ಬೆಳಕು ಮತ್ತು ಶುದ್ಧ ಆಕಾರವಾಗಿ ಪರಿವರ್ತನೆಗೊಳ್ಳುತ್ತವೆ.” * ಕ್ರೈಸ್ತತ್ವವನ್ನು ಸ್ಥಾಪಿಸಿದ ಯೇಸು ಕ್ರಿಸ್ತನು ಕಲಿಸಿದ ಆರಾಧನಾ ಕ್ರಮಕ್ಕಿಂತ ಎಂಥ ಒಂದು ಎದ್ದುಕಾಣುವ ವ್ಯತ್ಯಾಸ!​—⁠ಯೋಹಾನ 4:​21-24.

ಮೊಸೇಯಿಕ್‌ ಚಿತ್ರಕಲೆಯ ಕೆಲವು ಎದ್ದುಕಾಣುವ ಉದಾಹರಣೆಗಳನ್ನು ಬೈಸೆಂಟೈನ್‌ ಚರ್ಚುಗಳು ಹೊಂದಿವೆ. ಕೆಲವು ಆರಾಧನಾ ಮನೆಗಳಲ್ಲಿ, ಹೆಚ್ಚುಕಡಿಮೆ ಎಲ್ಲಾ ಒಳಗೋಡೆಗಳಲ್ಲಿ ಮತ್ತು ಚಾವಣಿಗಳಲ್ಲಿ ಪ್ರತಿಯೊಂದು ಸೆಂಟಿಮೀಟರ್‌ ಸ್ಥಳವನ್ನೂ ಕಲ್ಲುಗಳಿಂದ ಮುಚ್ಚಲಾಗಿದೆ. “ಕ್ರೈಸ್ತ ಮೊಸೇಯಿಕ್‌ ಚಿತ್ರಕಲೆಗಳ ನಾಯಕ ಕೃತಿಗಳು” ಎಂಬುದಾಗಿ ವಿವರಿಸಲಾದ ಕಲಾಕೃತಿಗಳನ್ನು ಇಟಲಿಯ ರವೇನ ಎಂಬಲ್ಲಿ ಕಾಣಸಾಧ್ಯವಿದೆ. ಹೊಂಬಣ್ಣದ ಹಿನ್ನೆಲೆಯ ಕಾರಣ ಅಲ್ಲಿನ ಮೊಸೇಯಿಕ್‌ ಚಿತ್ರಕಲೆಗಳು ದೈವಿಕ ಬೆಳಕನ್ನು ಮತ್ತು ಮರ್ಮವನ್ನು ವರ್ಣಿಸುವಂತೆ ಎದ್ದುಕಾಣುತ್ತವೆ.

ಮೊಸೇಯಿಕ್‌ ಚಿತ್ರಕಲೆಗಳು, ಮಧ್ಯಯುಗಗಳಾದ್ಯಂತ ಪಶ್ಚಿಮ ಯೂರೋಪಿಯನ್‌ ಚರ್ಚುಗಳಲ್ಲಿ ಬಹಳ ಪ್ರಮುಖವಾಗಿ ಉಪಯೋಗಿಸಲ್ಪಡುತ್ತಾ ಮುಂದುವರಿದವು. ಅಷ್ಟುಮಾತ್ರವಲ್ಲದೆ, ಇಸ್ಲಾಮ್‌ ಜಗತ್ತಿನಲ್ಲಿಯೂ ಇದನ್ನು ಬಹಳ ನಿಪುಣತೆಯಿಂದ ಉಪಯೋಗಿಸಲಾಯಿತು. ನವಜಾಗೃತ ಇಟಲಿಯಲ್ಲಿ, ವೆನಿಸ್‌ನಲ್ಲಿರುವ ಸೈಂಟ್‌ ಮಾರ್ಕ್ಸ್‌ ಮತ್ತು ರೋಮ್‌ನಲ್ಲಿರುವ ಸೈಂಟ್‌ ಪೀಟರ್ಸ್‌ ಮುಂತಾದ ದೊಡ್ಡ ಆರಾಧನಾಮಂದಿರಗಳಿಗೆ ಸಂಬಂಧಿಸಿದ ಕಾರ್ಖಾನೆಗಳು ಮೊಸೇಯಿಕ್‌ ಚಿತ್ರಕಲೆಗಳ ಉತ್ಪಾದನಾ ಕೇಂದ್ರಗಳಾದವು. 1775ರೊಳಗಾಗಿ ರೋಮ್‌ನಲ್ಲಿದ್ದ ಶಿಲ್ಪಿಗಳು, ಕರಗಿಸಿದ ಗಾಜಿನ ನಾನಾ ಬಣ್ಣಗಳ ಚೂರುಗಳನ್ನು ಹೇಗೆ ಅತಿ ಸಣ್ಣಸಣ್ಣವುಗಳಾಗಿ ತುಂಡುಮಾಡಬೇಕೆಂಬುದನ್ನು ಕಲಿತುಕೊಂಡರು. ಇದು, ವರ್ಣಕಲೆಯ ಪುನರುತ್ಪಾದನೆಯಾದ ಸಣ್ಣ ಮೊಸೇಯಿಕ್‌ ಚಿತ್ರಕಲೆಯನ್ನು ತಯಾರಿಸುವಂತೆ ಸಾಧ್ಯಗೊಳಿಸಿತು.

ಆಧುನಿಕ ವಿಧಾನ ಮತ್ತು ಉಪಯೋಗ

ಆಧುನಿಕ ಮೊಸೇಯಿಕ್‌ ಚಿತ್ರಕಲೆಯ ರಚಕರು, ಪರೋಕ್ಷ ವಿಧಾನ ಎಂದು ಕರೆಯಲಾಗುವ ವಿಧಾನವನ್ನು ಉಪಯೋಗಿಸುತ್ತಾರೆ. ಇದು ಯಾವ ರೀತಿಯೆಂದರೆ, ಮೊದಲಾಗಿ ಚಿತ್ರಾಲಂಕಾರವನ್ನು ಹೊಂದಿದ್ದ ಒಂದು ದೊಡ್ಡ ಗಾತ್ರದ ಕಾಗದವನ್ನು ತೆಗೆದುಕೊಳ್ಳಲಾಗುತ್ತದೆ. ನಂತರ, ಅದಕ್ಕೆ ಸಣ್ಣ ಕಲ್ಲುಗಳನ್ನು ಕೆಳಮುಖವಾಗಿ ಅಂಟಿಸಲಾಗುತ್ತದೆ, ಅಂದರೆ ಕಲ್ಲುಗಳ ಹಿಂಭಾಗವನ್ನು ತೆರೆದಿಡುತ್ತಾ ಅದರ ಮುಖಭಾಗವನ್ನು ಕಾಗದಕ್ಕೆ ಅಂಟಿಸಲಾಗುತ್ತದೆ. ಇದೆಲ್ಲವನ್ನು ಒಂದು ಕಾರ್ಖಾನೆಯಲ್ಲಿಯೇ ಮಾಡಲಾಗುತ್ತದೆ. ಇದಾದ ಬಳಿಕ, ಈ ಮೊಸೇಯಿಕ್‌ ಚಿತ್ರಕಲೆಯನ್ನು ಅಳವಡಿಸಬೇಕಾದ ಕಟ್ಟಡಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ, ಕಲ್ಲುಗಳ ತೆರೆದಿಡಲಾದ ಹಿಂಭಾಗವನ್ನು ಗಾರೆಯೊಳಕ್ಕೆ ಒತ್ತಲಾಗುತ್ತದೆ. ಗಾರೆಯು ಒಣಗಿದಾಗ, ಕಾಗದ ಮತ್ತು ಅಂಟನ್ನು ತೊಳೆದುತೆಗೆಯಲಾಗುತ್ತದೆ. ಆಗ ಕಲ್ಲುಗಳ ಮುಖಭಾಗವು ಕಾಣತೊಡಗುತ್ತವೆ. ಈ ವಿಧಾನವು ಸಮಯ ಮತ್ತು ಶ್ರಮವನ್ನು ಕಡಿಮೆಗೊಳಿಸುತ್ತದೆ, ಆದರೆ ಇದರ ಮೇಲ್ಭಾಗವು ಚಪ್ಪಟೆಯಾಗಿರುವ ಕಾರಣ ಮಧ್ಯಯುಗದ ಉತ್ಪಾದನೆಗಳಲ್ಲಿದ್ದ ಅದೇ ಹೊಳಪನ್ನು ಇದು ಹೊಂದಿರುವುದಿಲ್ಲ.

ಹಾಗಿದ್ದರೂ, 19ನೆಯ ಶತಮಾನದ ಅಸಂಖ್ಯಾತ ಸರ್ಕಾರಿ ಕಟ್ಟಡಗಳು, ನಾಟಕ ಮಂದಿರ (ಆಪರ ಹೌಸ್‌)ಗಳು, ಚರ್ಚುಗಳು, ಮತ್ತು ಇಂಥ ಇತರ ಕಟ್ಟಡಗಳು ಇದೇ ವಿಧಾನವನ್ನು ಉಪಯೋಗಿಸಿ, ಅಲಂಕರಿಸಲ್ಪಟ್ಟಿವೆ. ಇದಕ್ಕೆ ಕೂಡಿಕೆಯಾಗಿ, ಮೆಕ್ಸಿಕೊ ಪಟ್ಟಣದಿಂದ ಮಾಸ್ಕೋ ಮತ್ತು ಇಸ್ರೇಲ್‌ನಿಂದ ಜಪಾನ್‌ ಮುಂತಾದ ಸ್ಥಳಗಳಲ್ಲಿರುವ ವಸ್ತು ಸಂಗ್ರಹಾಲಯಗಳು, ರೈಲು ನಿಲ್ದಾಣಗಳು, ವ್ಯಾಪಾರ ಕೇಂದ್ರಗಳು, ಮತ್ತು ಪಾರ್ಕ್‌ ಹಾಗೂ ಆಟದ ಮೈದಾನಗಳು ಸಹ ಈ ವಿಧಾನವನ್ನು ಬಹಳವಾಗಿ ಉಪಯೋಗಿಸುತ್ತಿವೆ. ನುಣುಪಾದ ಆದರೆ ಅನೇಕ ಮುಖಗಳಿರುವ ಮೊಸೇಯಿಕ್‌ ಚಿತ್ರಕಲೆಗಳ ಮೇಲ್ಭಾಗಗಳು, ಆಧುನಿಕ ಕಟ್ಟಡಗಳ ಮುಂಭಾಗವನ್ನು ಅಲಂಕರಿಸಲು ಸಹ ಬಹಳ ಆದರ್ಶಪ್ರಾಯವೆಂದು ಪರಿಗಣಿಸಲಾಗಿದೆ.

ಹದಿನಾರನೆಯ ಶತಮಾನದ ಇಟಲಿಯ ಕಲಾಕಾರ ಮತ್ತು ಕಲಾಕೃತಿಗಳ ಕುರಿತಾದ ಇತಿಹಾಸಗಾರ ಜೋರ್ಜೋ ವಸಾರೀ ಬರೆದದ್ದು: “ಅಸ್ತಿತ್ವದಲ್ಲಿರುವ ಚಿತ್ರಕಲೆಗಳಲ್ಲಿಯೇ ಅತಿ ಬಾಳಿಕೆ ಬರುವ ಚಿತ್ರಕಲೆಗಳೆಂದರೆ ಮೊಸೇಯಿಕ್‌ ಚಿತ್ರಕಲೆಗಳಾಗಿವೆ. ಸಮಯದಾಟಿದಂತೆ ವರ್ಣಚಿತ್ರಗಳ ಬಣ್ಣಗಳು ಮಾಸಿಹೋಗುತ್ತವೆ, ಆದರೆ ಮೊಸೇಯಿಕ್‌ ಚಿತ್ರಕಲೆಗಳು ಎಷ್ಟು ವರುಷಗಳಾದರೂ ಪ್ರಕಾಶಮಾನವಾಗಿರುತ್ತವೆ.” ಹೌದು, ಅನೇಕ ಮೊಸೇಯಿಕ್‌ ಚಿತ್ರಕಲೆಗಳನ್ನು ತಯಾರಿಸಲು ಉಪಯೋಗಿಸಲಾದ ಹಸ್ತಕೌಶಲಗಳು ನಮ್ಮ ಗಮನವನ್ನು ಆಕರ್ಷಿಸುತ್ತವೆ. ನಿಶ್ಚಯವಾಗಿಯೂ, ಮೊಸೇಯಿಕ್‌ ಚಿತ್ರಕಲೆಗಳು ಕಲ್ಲುಗಳಿಂದ ಮಾಡಿದ ಆಕರ್ಷಣೀಯ ವರ್ಣಕಲೆಗಳಾಗಿವೆ! (g03 10/08)

[ಪಾದಟಿಪ್ಪಣಿ]

^ ಇತರ ಎಲ್ಲಾ ವಿಷಯಗಳೊಂದಿಗೆ, ಅಶಾಸ್ತ್ರೀಯವಾದ ನವಪ್ಲೇಟೋವಿನ ತತ್ತ್ವಜ್ಞಾನಗಳು ಆತ್ಮದ ಅಮರತ್ವದಲ್ಲಿ ನಂಬಿಕೆಯನ್ನು ಪ್ರಚೋದಿಸಿದವು.

[ಪುಟ 22ರಲ್ಲಿರುವ ಚಿತ್ರ]

ಯೆರೂಸಲೇಮಿನ ನಕ್ಷೆ (ಸಾ.ಶ. ಆರನೇ ಶತಮಾನ)

[ಕೃಪೆ]

Garo Nalbandian

[ಪುಟ 22ರಲ್ಲಿರುವ ಚಿತ್ರ]

ಮಹಾ ಅಲೆಕ್ಸಾಂಡರ್‌ (ಸಾ.ಶ.ಪೂ. ಎರಡನೇ ಶತಮಾನ)

[ಕೃಪೆ]

Erich Lessing/Art Resource, NY

[ಪುಟ 22, 23ರಲ್ಲಿರುವ ಚಿತ್ರ]

ಡೋಮ್‌ ಆಫ್‌ ದ ರಾಕ್‌, ಯೆರೂಸಲೇಮ್‌ (ಸಾ.ಶ. 685-691ರಲ್ಲಿ ಕಟ್ಟಲ್ಪಟ್ಟಿತು)

[ಪುಟ 23ರಲ್ಲಿರುವ ಚಿತ್ರ]

“ಡಯನೈಶಿಯಸ್‌,” ಅಂತಿಯೋಕ್ಯ (ಸಾ.ಶ. 325ರ ಸುಮಾರಿಗೆ)

[ಕೃಪೆ]

Museum of Art, Rhode Island School of Design, by exchange with the Worcester Art Museum, photography by Del Bogart

[ಪುಟ 24ರಲ್ಲಿರುವ ಚಿತ್ರ]

ಸಣ್ಣ ಕಲ್ಲುಗಳು, ನಾನಾ ಬಣ್ಣಗಳ ಗಾಜು, ಮತ್ತು ಕಲ್ಲು ಹರಳುಗಳನ್ನು ಈಗಲೂ ಆಧುನಿಕ ಮೊಸೇಯಿಕ್‌ ಚಿತ್ರಕಲೆಗಳಲ್ಲಿ ಉಪಯೋಗಿಸಲಾಗುತ್ತದೆ

[ಪುಟ 24ರಲ್ಲಿರುವ ಚಿತ್ರ]

ಮ್ಯಾಸಚೂಸೆಟ್ಸ್‌ನ ಲಿನ್‌ ಹೆರಿಟೇಜ್‌ ಸ್ಟೇಟ್‌ ಪಾರ್ಕ್‌ನಲ್ಲಿ ಪ್ರದರ್ಶಿಸಲಾಗಿರುವ ಮೊಸೇಯಿಕ್‌ ಚಿತ್ರಕಲೆ

[ಕೃಪೆ]

Kindra Clineff/Index Stock Photography

[ಪುಟ 24ರಲ್ಲಿರುವ ಚಿತ್ರ]

ಅನ್ಟೊನೀ ಗವ್ಡೀಯಿಂದ ತಯಾರಿಸಲಾದ ಬಾರ್ಸೆಲೋನದಲ್ಲಿರುವ ಮೊಸೇಯಿಕ್‌ ಚಿತ್ರಕಲೆ (1852-1926)

[ಕೃಪೆ]

ಛಾಯಾಚಿತ್ರ: Por cortesía de la Fundació Caixa Catalunya