ಸಂಬಂಧಿಕರು ನಿಮ್ಮ ನಂಬಿಕೆಯಲ್ಲಿ ಪಾಲಿಗರಾಗದಿರುವಾಗ
ಬೈಬಲಿನ ದೃಷ್ಟಿಕೋನ
ಸಂಬಂಧಿಕರು ನಿಮ್ಮ ನಂಬಿಕೆಯಲ್ಲಿ ಪಾಲಿಗರಾಗದಿರುವಾಗ
ಲೋಕದಲ್ಲಿ 10,000 ಕ್ಕಿಂತಲೂ ಹೆಚ್ಚು ಧರ್ಮಗಳು ಮತ್ತು ಪಂಗಡಗಳಿವೆ ಎಂದು ಒಂದು ಅಂದಾಜಿಗನುಸಾರ ತಿಳಿದುಬಂದಿದೆ. ಒಂದು ದೇಶದಲ್ಲಿ ವಯಸ್ಕರಲ್ಲಿ ಸುಮಾರು 16 ಪ್ರತಿಶತದಷ್ಟು ಜನರು ತಮ್ಮ ಜೀವನದ ಯಾವುದಾದರೊಂದು ಸಮಯದಲ್ಲಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬದಲಾಯಿಸುತ್ತಾರೆ. ಆದುದರಿಂದ, ಸಂಬಂಧಿಕರ ಮತ್ತು ಸ್ನೇಹಿತರ ಮಧ್ಯೆ ಧಾರ್ಮಿಕ ನಂಬಿಕೆಗಳ ಕುರಿತು ಭಿನ್ನಾಭಿಪ್ರಾಯಗಳಿರುವುದು ಸಹಜ. ಕೆಲವೊಮ್ಮೆ ಇದು ಸಂಬಂಧಗಳ ನಡುವೆ ಬಿರುಕನ್ನು ಉಂಟುಮಾಡುತ್ತದೆ. ಆದುದರಿಂದ ಪ್ರಶ್ನೆಯೇನಂದರೆ, ತಮ್ಮ ನಂಬಿಕೆಯಲ್ಲಿ ಪಾಲಿಗರಾಗದ ಸಂಬಂಧಿಕರೊಂದಿಗೆ ಕ್ರೈಸ್ತರು ಹೇಗೆ ವ್ಯವಹರಿಸಬೇಕು?
ಒಂದು ವಿಶೇಷ ಸಂಬಂಧ
ಉದಾಹರಣೆಗೆ, ಹೆತ್ತವರ ಮತ್ತು ಅವರ ಮಕ್ಕಳ ನಡುವೆ ಇರುವ ವಿಶೇಷ ಸಂಬಂಧದ ಕುರಿತು ಬೈಬಲ್ ಏನನ್ನುತ್ತದೆ ಎಂಬುದನ್ನು ಪರಿಗಣಿಸಿರಿ. ವಿಮೋಚನಕಾಂಡ 20:12ರಲ್ಲಿ ತಿಳಿಸಲ್ಪಟ್ಟಿರುವ “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು” ಎಂಬ ಆಜ್ಞೆಯಲ್ಲಿ, ಯಾವುದೇ ನಿರ್ದಿಷ್ಟ ಸಮಯದ ವರೆಗೆ ಮಾತ್ರ ಹಾಗೆ ಮಾಡಬೇಕೆಂಬುದು ಸೂಚಿಸಲ್ಪಟ್ಟಿಲ್ಲ. ವಾಸ್ತವದಲ್ಲಿ, ಮತ್ತಾಯ 15:4-6ರಲ್ಲಿ ದಾಖಲಿಸಲ್ಪಟ್ಟಿರುವ ಈ ಆಜ್ಞೆಯ ಕುರಿತಾದ ಯೇಸುವಿನ ಚರ್ಚೆಯಲ್ಲಿ, ವಯಸ್ಕ ಮಕ್ಕಳು ತಮ್ಮ ಹೆತ್ತವರಿಗೆ ಸಲ್ಲಿಸಬೇಕಾದ ಗೌರವದ ಕುರಿತು ಅವನು ಮಾತಾಡುತ್ತಿದ್ದನು ಎಂಬುದು ಸುವ್ಯಕ್ತ.
ಜ್ಞಾನೋಕ್ತಿ 23:22 ಬುದ್ಧಿವಾದವನ್ನು ನೀಡುತ್ತದೆ. ಜ್ಞಾನೋಕ್ತಿ 19:26ರಲ್ಲಿ “ತಂದೆಯನ್ನು ಹೊಡೆದು ತಾಯಿಯನ್ನು ಓಡಿಸುವ ಮಗನು ನಾಚಿಕೆಯನ್ನೂ ಅವಮಾನವನ್ನೂ ಉಂಟುಮಾಡುವನು” ಎಂಬುದಾಗಿ ನೇರವಾಗಿ ತಿಳಿಸುತ್ತದೆ.
ಬೈಬಲಿನ ಜ್ಞಾನೋಕ್ತಿ ಪುಸ್ತಕವು, ಮಕ್ಕಳು ತಮ್ಮ ಹೆತ್ತವರಿಗೆ ಅಗೌರವವನ್ನು ತೋರಿಸುವ ವಿರುದ್ಧ ಎಚ್ಚರಿಸುತ್ತದೆ. “ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ” ಎಂದುನಮ್ಮ ಹೆತ್ತವರನ್ನು ನಾವು ಅಲಕ್ಷಿಸಬಾರದೆಂದು ಶಾಸ್ತ್ರವಚನಗಳಿಂದ ನಮಗೆ ಸ್ಪಷ್ಟವಾಗಿ ತಿಳಿದುಬರುತ್ತದೆ. ನಮ್ಮ ಹೆತ್ತವರು ನಮ್ಮ ಧರ್ಮವನ್ನು ಅಂಗೀಕರಿಸುವುದಿಲ್ಲವೆಂಬ ವಾಸ್ತವಾಂಶವು ಅವರೊಂದಿಗಿನ ನಮ್ಮ ಸಂಬಂಧವನ್ನು ರದ್ದುಗೊಳಿಸುವುದಿಲ್ಲ. ಬೈಬಲಿನ ಈ ಮೂಲತತ್ತ್ವಗಳು ಇತರ ರಕ್ತ ಸಂಬಂಧಿಗಳಿಗೂ ಒಬ್ಬ ವ್ಯಕ್ತಿಯ ವಿವಾಹ ಸಂಗಾತಿಗೂ ತದ್ರೀತಿಯಲ್ಲಿ ಅನ್ವಯಿಸುತ್ತದೆ. ಕ್ರೈಸ್ತರು ನೈತಿಕವಾಗಿಯೂ ಶಾಸ್ತ್ರೀಯವಾಗಿಯೂ ಸದಾ ತಮ್ಮ ಸಂಬಂಧಿಕರನ್ನು ಪ್ರೀತಿಸುವ ಹಂಗಿನಲ್ಲಿದ್ದಾರೆ ಎಂಬುದು ಸುಸ್ಪಷ್ಟ.
ವಿವೇಚನೆಯು ಪ್ರಾಮುಖ್ಯ
ಬೈಬಲ್ ದುಸ್ಸಹವಾಸದ ವಿರುದ್ಧ ಎಚ್ಚರಿಸುತ್ತದೆ, ಮತ್ತು ಈ ಪ್ರಭಾವವು ಒಬ್ಬ ವ್ಯಕ್ತಿಯ ಸಮೀಪ ಸಂಬಂಧಿಕರಿಂದಲೂ ಬರಸಾಧ್ಯವಿದೆ. (1 ಕೊರಿಂಥ 15:33) ಪೂರ್ವಕಾಲದಲ್ಲಿನ ಅನೇಕ ನಂಬಿಗಸ್ತ ಸೇವಕರು, ಅವರ ಹೆತ್ತವರು ಅಸಮ್ಮತಿಸಿದರೂ ಯಾವುದು ಸರಿಯಾಗಿತ್ತೋ ಅದನ್ನೇ ಎತ್ತಿಹಿಡಿದರು. ಇದು ಕೋರಹನ ಮಕ್ಕಳ ವಿಷಯದಲ್ಲಿಯೂ ಸತ್ಯವಾಗಿತ್ತು. (ಅರಣ್ಯಕಾಂಡ 16:32, 33; 26:10, 11) ಸತ್ಯ ಕ್ರೈಸ್ತರು ಇತರರನ್ನು, ಒಂದುವೇಳೆ ತಮ್ಮ ಸಂಬಂಧಿಕರನ್ನೂ ಮೆಚ್ಚಿಸಲಿಕ್ಕಾಗಿ ತಮ್ಮ ನಂಬಿಕೆಯನ್ನು ರಾಜಿಮಾಡಿಕೊಳ್ಳಬಾರದು.—ಅ. ಕೃತ್ಯಗಳು 5:29.
ಕೆಲವು ಸಂದರ್ಭಗಳಲ್ಲಿ ಹೆತ್ತವರು ಅಥವಾ ಇತರ ಪ್ರಿಯ ಜನರು ಉದ್ದೇಶಪೂರ್ವಕವಾಗಿ ಕ್ರೈಸ್ತನೊಬ್ಬನ ನಂಬಿಕೆಗಳ ವಿರುದ್ಧ ಹೋರಾಡುತ್ತಾರೆ. ಕೆಲವರು ಸತ್ಯ ಕ್ರೈಸ್ತತ್ವದ ಶತ್ರುಗಳಾಗಲೂಬಹುದು. ಅಂಥ ಸನ್ನಿವೇಶಗಳಲ್ಲಿ ಕ್ರೈಸ್ತರು ತಮ್ಮ ಆತ್ಮಿಕತೆಯನ್ನು ಕಾಪಾಡಿಕೊಳ್ಳಲು ಸೂಕ್ತವಾದ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾರೆ. ಯೇಸು ಸೂಕ್ತವಾಗಿಯೇ ಹೇಳಿದ್ದು: “ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು. ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ; ಮಗನ ಮೇಲಾಗಲಿ ಮಗಳ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ.”—ಮತ್ತಾಯ 10:36, 37.
ಹಾಗಿದ್ದರೂ ಹೆಚ್ಚಿನ ಸನ್ನಿವೇಶಗಳಲ್ಲಿ, ಕ್ರೈಸ್ತರು ತಮ್ಮ ಪ್ರಿಯ ಜನರಿಂದ ತೀಕ್ಷ್ಣವಾದ ವಿರೋಧವನ್ನು ಎದುರಿಸುವುದಿಲ್ಲ. ಅವರ ಸಂಬಂಧಿಕರು ಕೇವಲ ಅವರು ವಿಶ್ವಾಸಿಸಿರುವ ಬೈಬಲ್ ಬೋಧನೆಗಳನ್ನು ಸ್ವೀಕರಿಸುವುದಿಲ್ಲ. ಅವಿಶ್ವಾಸಿಗಳೊಂದಿಗೆ “ಶಾಂತಭಾವದಿಂದ” ಮತ್ತು “ಆಳವಾದ ಗೌರವದಿಂದ” ವ್ಯವಹರಿಸಬೇಕೆಂದು ಪವಿತ್ರ ಶಾಸ್ತ್ರವು ಕ್ರಿಸ್ತನ ಹಿಂಬಾಲಕರನ್ನು ಉತ್ತೇಜಿಸುತ್ತದೆ. (2 ತಿಮೊಥೆಯ 2:25, NW; 1 ಪೇತ್ರ 3:15, NW) ಬೈಬಲ್ ಸೂಕ್ತವಾಗಿಯೇ ಸಲಹೆನೀಡುವುದು: ‘ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವಾಗಿರಬೇಕು.’ (2 ತಿಮೊಥೆಯ 2:24) ಕ್ರೈಸ್ತರು “ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು ತೋರಿಸುತ್ತಾ” ಇರಬೇಕೆಂದು ಅಪೊಸ್ತಲ ಪೌಲನು ಸಹ ಸಲಹೆನೀಡಿದನು.—ತೀತ 3:2.
ಸಂಪರ್ಕವನ್ನಿಟ್ಟುಕೊಳ್ಳಿರಿ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿರಿ
ಕ್ರೈಸ್ತರಿಗೆ 1 ಪೇತ್ರ 2:12ರಲ್ಲಿ ಈ ಉತ್ತೇಜನವನ್ನು ಕೊಡಲಾಗಿದೆ: “ನಿಮ್ಮ ನಡವಳಿಕೆಯು ಅನ್ಯಜನರ [ಅವಿಶ್ವಾಸಿಗಳ] ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು . . . ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.” ಅನೇಕವೇಳೆ, ಬೈಬಲ್ ಮೂಲತತ್ತ್ವಗಳು ನಮ್ಮ ಜೀವನದಲ್ಲಿ ಮಾಡಿರುವ ಬದಲಾವಣೆಗಳನ್ನು ನಮ್ಮ ನಂಬಿಕೆಯಲ್ಲಿ ಪಾಲಿಗರಾಗದಿರುವ ಪ್ರಿಯ ಜನರು ನೋಡುತ್ತಾರೆ. ಬೈಬಲ್ ಸತ್ಯವನ್ನು ಸ್ವೀಕರಿಸದ ಅಥವಾ ಅದನ್ನು ವಿರೋಧಿಸುತ್ತಿದ್ದ ಅನೇಕರು ತಮ್ಮ ಮನಸ್ಸನ್ನು ಬದಲಾಯಿಸಿಕೊಂಡಿದ್ದಾರೆ ಎಂಬುದನ್ನು ನೆನಪಿನಲ್ಲಿಡಿರಿ. ತಮ್ಮ ವಿವಾಹ ಸಂಗಾತಿಯ ಅಥವಾ ಮಕ್ಕಳ ಒಳ್ಳೇ ನಡತೆಯ ಹಿಂದಿರುವ ಕಾರಣವನ್ನು ತಿಳಿಯಲು ಕೆಲವರಿಗೆ ಅನೇಕ ವರುಷಗಳ ಸೂಕ್ಷ್ಮ ಗಮನವು ಅಗತ್ಯವಿರಬಹುದು. ಆದರೆ ನಮ್ಮ ನಡತೆಯೇ ಜನರು ಬೈಬಲ್ ಸತ್ಯತೆಗಳನ್ನು ಸ್ವೀಕರಿಸದಿರಲು ಕಾರಣವಾಗದಿರಲಿ.
ಪರಿಸ್ಥಿತಿಗಳು ಭಿನ್ನಭಿನ್ನವಾಗಿರುತ್ತವೆ ಮತ್ತು ಕೆಲವು ಕ್ರೈಸ್ತ ಸಾಕ್ಷಿಗಳು ತಮ್ಮ ಹೆತ್ತವರಿಂದ ಬಹಳ ದೂರದಲ್ಲಿ ವಾಸಿಸುತ್ತಾರೆ ಎಂಬುದು ಒಪ್ಪತಕ್ಕ ವಿಷಯವಾಗಿದೆ. ಬಯಸಿದಷ್ಟು ಸಲ ಹೋಗಿ ಭೇಟಿನೀಡಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಪತ್ರಗಳನ್ನು ಬರೆಯುವುದು, ಫೋನಿನ ಮೂಲಕ ಮಾತನಾಡುವುದು, ಅಥವಾ ಇತರ ವಿಧಗಳಲ್ಲಿ ಕ್ರಮವಾಗಿ ಸಂಪರ್ಕವನ್ನಿಟ್ಟುಕೊಳ್ಳುವುದು, ನಮ್ಮ ಪ್ರಿಯ ಜನರಿಗೆ ಅವರ ಕಡೆಗಿನ ನಮ್ಮ ಪ್ರೀತಿಯನ್ನು ಖಚಿತಪಡಿಸುತ್ತದೆ. ಸತ್ಯ ಕ್ರೈಸ್ತರಲ್ಲದಿರುವ ಅನೇಕರು ತಮ್ಮ ಹೆತ್ತವರನ್ನು ಮತ್ತು ಸಂಬಂಧಿಕರನ್ನು ಪ್ರೀತಿಸುತ್ತಾರೆ ಹಾಗೂ ಅವರ ಧಾರ್ಮಿಕ ನಂಬಿಕೆಗಳು ಯಾವುದೇ ಆಗಿರಲಿ, ಅವರೊಂದಿಗೆ ಕ್ರಮವಾಗಿ ಸಂವಾದಿಸುತ್ತಾರೆ. ಹೀಗಿರುವಾಗ ಕ್ರೈಸ್ತ ಸಾಕ್ಷಿಗಳು ಇದಕ್ಕಿಂತಲೂ ಕಡಿಮೆಯಾದುದ್ದನ್ನು ಮಾಡಬೇಕೋ? (g03 11/08)
[ಪುಟ 20ರಲ್ಲಿರುವ ಚಿತ್ರ]
ನಿಮ್ಮ ಸಂಬಂಧಿಕರೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳುವುದು ಅವರ ಕಡೆಗಿನ ನಿಮ್ಮ ಪ್ರೀತಿಯನ್ನು ಅವರಿಗೆ ಖಚಿತಪಡಿಸುತ್ತದೆ