ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮುದ್ರದಲ್ಲಿ ವಿಪತ್ತು ಭೂಮಿಯ ಮೇಲೆ ದುರಂತ

ಸಮುದ್ರದಲ್ಲಿ ವಿಪತ್ತು ಭೂಮಿಯ ಮೇಲೆ ದುರಂತ

ಸಮುದ್ರದಲ್ಲಿ ವಿಪತ್ತು ಭೂಮಿಯ ಮೇಲೆ ದುರಂತ

ಸ್ಪೆಯ್ನ್‌ನ ಎಚ್ಚರ! ಲೇಖಕರಿಂದ

ಇಸವಿ 2002, ನವೆಂಬರ್‌ 13ರಂದು ಒಂದು ಪರಿಸರೀಯ ಮತ್ತು ಆರ್ಥಿಕ ವಿಪತ್ತು ಆರಂಭಗೊಂಡಿತು. ಬಿರುಸಾದ ಸಮುದ್ರದಲ್ಲಿ ಸಾಗುತ್ತಿದ್ದ ಪ್ರೆಸ್ಟೀಜ್‌ ಎಂಬ ಒಂದು ತೈಲ ಜಹಜಿನಲ್ಲಿ ಬಿರುಕು ಉಂಟಾದಾಗ ಇದು ಸಂಭವಿಸಿತು. ಬಿರುಕುಬಿದ್ದ ಈ ಜಹಜನ್ನು ಸಂರಕ್ಷಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡವು ಮತ್ತು ಆರು ದಿವಸಗಳ ನಂತರ​—⁠ಅಷ್ಟರೊಳಗೆ ಆಗಲೇ 20,000 ಟನ್‌ಗಳಷ್ಟು ತೈಲವು ನೀರಿಗೆ ಸುರಿದಿತ್ತು​—⁠ತೈಲ ಜಹಜು ಎರಡು ಭಾಗಗಳಾಗಿ ಛೇದಿಸಲ್ಪಟ್ಟಿತ್ತು ಹಾಗೂ ಸ್ಪೆಯಿನ್‌ ಸಮುದ್ರ ತೀರದಿಂದ ಸುಮಾರು 200 ಕಿಲೊಮೀಟರ್‌ ದೂರದಲ್ಲಿ ನೆಲಗಚ್ಚಿತು.

ಈ ತೈಲ ಜಹಜು ಸಮುದ್ರ ತಳಕ್ಕೆ ಮುಳುಗುವಾಗ ತನ್ನೊಂದಿಗೆ 50,000 ಟನ್‌ಗಳಿಗಿಂತಲೂ ಹೆಚ್ಚು ತೈಲವನ್ನು ತೆಗೆದುಕೊಂಡು ಹೋಯಿತು ಮತ್ತು ಪ್ರತಿ ದಿನಕ್ಕೆ ಸುಮಾರು 125 ಟನ್‌ಗಳಷ್ಟು ತೈಲವನ್ನು ನೀರಿಗೆ ಸುರಿಸುತ್ತಿತ್ತು. ಹೊಸ ತೈಲ ಮೇಲ್ಪದರಗಳು ರಚಿಸಲ್ಪಟ್ಟವು ಮತ್ತು ಅವು ಕರಾವಳಿ ತೀರಕ್ಕೆ ಒಂದೇ ಸಮನೆ ತೇಲುತ್ತಾ ಬರಲಾರಂಭಿಸಿದವು. ಸಾಂದ್ರತೆ ಹೆಚ್ಚಾಗಿರುವ ಇಂದನ ತೈಲದಲ್ಲಿ ನಿರೋಧಕತೆ ಮತ್ತು ವಿಷಕಾರಿ ಗುಣವು ಹೆಚ್ಚಿರುವ ಕಾರಣ ಅದರ ಪರಿಸರೀಯ ಹಾನಿಯು ವಿಶೇಷವಾಗಿ ಭಯಂಕರವಾಗಿತ್ತು.

ಸಮುದ್ರ ತೀರವನ್ನು ಶುಚಿಗೊಳಿಸಲು ಬಂದ ಸ್ವಯಂಸೇವಕರಲ್ಲಿ ಅನೇಕರು ಹಬೆಯ ಕಾರಣ ನಿಶ್ಶಕ್ತರಾದರು. ಅಷ್ಟುಮಾತ್ರವಲ್ಲದೆ, ತೈಲದಿಂದ ದಟ್ಟವಾದ ಕಪ್ಪು ಟಾರು ಉಂಟಾಯಿತು ಮತ್ತು ಅದು ಕಪ್ಪು ಚೂವಿಂಗ್‌ ಗಮ್ಮಿನಂತೆ ಬಂಡೆಗಳಿಗೆ ಅಂಟಿಕೊಂಡಿತು. “ಇತಿಹಾಸದಲ್ಲಿಯೇ ಇದೊಂದು ಅತಿ ಭಯಾನಕ ತೈಲ ಮೇಲ್ಪದರಗಳಲ್ಲಿ ಒಂದಾಗಿದೆ” ಎಂದು, ಆಕಸ್ಮಿಕ ನೀರು ಮಾಲಿನ್ಯತೆಯ ಕುರಿತು ದಾಖಲಾತಿ, ಸಂಶೋಧನೆ ಮತ್ತು ಪ್ರಯೋಗ ನಡಿಸುವ ಕೇಂದ್ರದ ಡೈರೆಕ್ಟರ್‌ರಾದ ಮೀಶೆಲ್‌ ಗಿರಿನ್‌ ಪ್ರಲಾಪಿಸಿದರು.

ಸಾಹಸದ ಪ್ರಯತ್ನಗಳು

ನೂರಾರು ಬೆಸ್ತರು ತಮ್ಮ ಜೀವನೋಪಾಯಕ್ಕೆ ಗಂಡಾಂತರವನ್ನೊಡ್ಡಿದ ತೈಲ ಪದರಗಳ ವಿರುದ್ಧ ಹೋರಾಡಲು ಅನೇಕ ವಾರಗಳ ತನಕ ಸಮುದ್ರಕ್ಕೆ ಇಳಿದರು. ತಮ್ಮ ಸಮುದ್ರ ತೀರವನ್ನು ಕಪ್ಪುಮಾಡುವ ಮತ್ತು ಲೋಕದಲ್ಲಿಯೇ ಅತ್ಯಂತ ದೊಡ್ಡ ಮೀನುಗಾರಿಕೆಯ ಕ್ಷೇತ್ರವನ್ನು ನಾಶಮಾಡುವ ಮುನ್ನ, ಈ ತೈಲವನ್ನು ಒಟ್ಟುಗೂಡಿಸಿ ತೆಗೆಯುವ ಧೀರ ಹೋರಾಟವನ್ನೇ ಬೆಸ್ತರು ಮಾಡಿದರು. ಕೆಲವರು ತಮ್ಮ ಕೈಗಳಿಂದಲೇ ಜಿಡ್ಡು ಜಿಡ್ಡಾದ ರೊಚ್ಚಿನ ತುಂಡನ್ನು ನೀರಿನಿಂದ ಹೊರತೆಗೆಯುತ್ತಿದ್ದರು. ಒಬ್ಬ ಸ್ಥಳಿಕ ಬೆಸ್ತನಾದ ಆನ್ಟೋನ್ಯೋ ವಿವರಿಸಿದ್ದು: “ಅದು ಬೆನ್ನುಮೂಳೆ ಮುರಿಯುವಂಥ ಪ್ರಯಾಸಕರ ಕೆಲಸವಾಗಿತ್ತು, ಆದರೆ ಚಿಕ್ಕ ದೋಣಿಯಲ್ಲಿದ್ದ ನಮಗೆ ಬೇರೆ ಯಾವುದೇ ಆಯ್ಕೆಯಿರಲಿಲ್ಲ.”

ಬೆಸ್ತರು ಸಮುದ್ರದಿಂದ ತೈಲವನ್ನು ಹೊರತೆಗೆಯಲು ಹೋರಾಡುತ್ತಿದ್ದಂತೆ, ಸ್ಪೆಯಿನ್‌ನಾದ್ಯಂತದಿಂದ ಬಂದ ಸಾವಿರಾರು ಸ್ವಯಂಸೇವಕರು ಸಮುದ್ರತೀರವನ್ನು ಶುಚಿಗೊಳಿಸುವ ಕೆಲಸದಲ್ಲಿ ತೊಡಗಿದರು. ಒಮ್ಮೆ ಉಪಯೋಗಿಸಿ ಬಿಸಾಡಿಬಿಡುವ ಬಿಳಿಯ ವಸ್ತ್ರಗಳನ್ನು ಧರಿಸಿ, ಮುಖಕ್ಕೆ ಮುಸುಕನ್ನು ಹಾಕಿಕೊಂಡವರಾಗಿ, ಅವರು ಜೈವಿಕ ಸಮರದಲ್ಲಿ ಭಾಗವಹಿಸುವವರಂತೆ ಕಾಣುತ್ತಿದ್ದರು. ಅವರ ಕೆಲಸವು ಬಹಳ ಕಷ್ಟಕರವಾಗಿತ್ತು. ಅವರು ಸಲಾಕೆಗಳಿಂದ ತೈಲವನ್ನು ಬಕೆಟಿನೊಳಗೆ ಹಾಕಬೇಕಿತ್ತು ಮತ್ತು ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗಲಾಗುತ್ತಿತ್ತು. ಬೆಸ್ತರಂತೆ ಕೆಲವು ಸ್ವಯಂಸೇವಕರು ಸಹ ತಮ್ಮ ಕೈಗಳಿಂದಲೇ ಸಮುದ್ರತೀರವನ್ನು ಮಲಿನಗೊಳಿಸಿದ ಆ ತೈಲವನ್ನು ತೆಗೆದು ಬಕೆಟಿನೊಳಗೆ ಹಾಕುತ್ತಿದ್ದರು.

ದುರಂತಮಯ ಪರಿಣಾಮ

“ಮೂಕೀಯಾದಲ್ಲಿನ ಆ ರೇವುಕಟ್ಟೆಗೆ ಬಂದು ಬಡಿಯುತ್ತಿದ್ದ ಕಪ್ಪನೆಯ ತೈಲ ತೆರೆಗಳನ್ನು ನಾನು ಮೊದಲು ನೋಡಿದಾಗ ಎಷ್ಟು ದುಃಖಿತನಾದೆನೆಂದರೆ, ನನ್ನ ಎದೆಯೊಡೆದು ಸಾಯುವೆನೆಂದು ನನಗನಿಸಿತು,” ಎಂಬುದಾಗಿ ಸಮುದ್ರತೀರವು ಸಂಪೂರ್ಣವಾಗಿ ಧ್ವಂಸಗೊಂಡ ಆ ಉತ್ತರ ಗಲೀಶಿಯಾದಲ್ಲಿನ ಕೋರ್ಕುಬ್ಯಾನ್‌ ಪಟ್ಟಣದ ಮೇಯರ್‌ ಆಗಿದ್ದ ರಾಫಾಯೆಲ್‌ ಮೂಸೋ ತಿಳಿಸುತ್ತಾರೆ. “ನಮ್ಮ ಪಟ್ಟಣದಲ್ಲಿನ ಅನೇಕ ಜನರ ಜೀವನೋಪಾಯವನ್ನು ಈ ತೈಲ ಸುರಿತವು ಭಾದಿಸಿತು.”

ದುಃಖಕರವಾಗಿ ಸ್ಪೆಯಿನ್‌ನ ಸುಂದರವಾದ ಹೊಸ ರಾಷ್ಟ್ರೀಯ ಉದ್ಯಾನವನವಾದ ಲಾಸ್‌ ಈಸ್ಲಾಸ್‌ ಆಟ್ಲಾಂಟಿಕಾಸ್‌ (ಅಟ್ಲಾಂಟಿಕ್‌ ದ್ವೀಪಗಳು), ತೈಲ ಪದರಗಳಲ್ಲಿ ಒಂದರಿಂದ ಬಹಳವಾಗಿ ಹಾನಿಗೊಳಗಾಗಿದೆ. ಹಿಂದೆ ಶುದ್ಧವಾಗಿದ್ದ ಮತ್ತು ಗಲೀಶಿಯಾ ತೀರದ ಆಚೆಯಿದ್ದ ಈ ಐದು ದ್ವೀಪಗಳಲ್ಲಿ ಅನೇಕಾನೇಕ ಸಮುದ್ರಪಕ್ಷಿಗಳು ಬಂದು ಗೂಡುಕಟ್ಟುತ್ತಿದ್ದವು. ಈ ದ್ವೀಪಗಳ ಸುತ್ತಲಿದ್ದ ಸಮುದ್ರವು ವಿವಿಧ ಜಲಚರಗಳಿಂದ ತುಂಬಿತ್ತು.

ಡಿಸೆಂಬರ್‌ ತಿಂಗಳಿನ ಆರಂಭದಲ್ಲಿ, ಆ ಉದ್ಯಾನವನದ ಕರಾವಳಿಯು 95 ಪ್ರತಿಶತ ತೈಲದಿಂದ ಮಲಿನವಾಗಿತ್ತು. ಸುಮಾರು 1,00,000 ಪಕ್ಷಿಗಳು ಇದರಿಂದ ಬಾಧಿಸಲ್ಪಟ್ಟವು ಎಂದು ಪಕ್ಷಿ ವಿಜ್ಞಾನಿಗಳು ಲೆಕ್ಕಹಾಕಿದರು. ಅಂತರ್ಜಲ ಮುಳುಕರು ಸಹ ಸಮುದ್ರ ತಳದಲ್ಲಿ ಗಟ್ಟಿಯಾದ ತೈಲದ ದೊಡ್ಡ ದೊಡ್ಡ ಮುದ್ದೆಗಳು ತೇಲಾಡುವುದನ್ನು ಮತ್ತು ಅದು, ಹಡಗುಗಳ ನಾಜೂಕಾದ ಯಂತ್ರವ್ಯವಸ್ಥೆಯನ್ನು ಹಾಳುಮಾಡುವುದನ್ನು ನೋಡಿದ್ದಾರೆ.

ಪಕ್ಷಿಗಳ ರಕ್ಷಣಾ ಕೇಂದ್ರವನ್ನು ವ್ಯವಸ್ಥಾಪಿಸಿದ ಜೇ ಹೋಲ್ಕಮ್‌ ವರದಿಮಾಡುವುದು: “ಸಾಮಾನ್ಯವಾಗಿ ಪಕ್ಷಿಗಳು ಮುಳುಗುವಿಕೆಯಿಂದ ಅಥವಾ ತೀವ್ರವಾದ ಉಷ್ಣತೆಯಿಂದ ಸಾಯುತ್ತವೆ. ತೈಲವು ಅವುಗಳ ಗರಿಗಳೊಳಗೆ ಪ್ರವೇಶಿಸಿ, ಅವುಗಳ ನಿರೋಧಕ ಶಕ್ತಿಯನ್ನು ಮತ್ತು ನೀರನ್ನು ತಡೆಗಟ್ಟುವ ಸಾಮರ್ಥ್ಯವನ್ನು ನಾಶಮಾಡುತ್ತದೆ. ಅಷ್ಟುಮಾತ್ರವಲ್ಲದೆ, ಪೂರ್ಣವಾಗಿ ಒದ್ದೆಯಾದ ಬಟ್ಟೆಯು ಹೇಗೆ ಈಜುಗಾರನನ್ನು ಬೇಗನೆ ನೀರಿನೊಳಕ್ಕೆ ಎಳೆಯುತ್ತದೋ ಹಾಗೆಯೇ ಭಾರವಾದ ತೈಲವು ಅವುಗಳನ್ನು ಸಮುದ್ರದ ತಳಕ್ಕೆ ಎಳೆಯುತ್ತದೆ. ಕೆಲವು ಪಕ್ಷಿಗಳನ್ನಾದರೂ​—⁠ಸಂಖ್ಯೆಯಲ್ಲಿ ಬಹುಮಟ್ಟಿಗೆ ಕೊಂಚವಾಗಿದ್ದರೂ​—⁠ರಕ್ಷಿಸಲು ಸಾಧ್ಯವಾಗುವುದು ಅತ್ಯಂತ ತೃಪ್ತಿದಾಯಕ ಕೆಲಸವಾಗಿದೆ.”

‘ಸಂಭವಿಸುವುದಕ್ಕಾಗಿ ಕಾಯುತ್ತಿದ್ದ ಒಂದು ಅನಿರೀಕ್ಷಿತ ಘಟನೆ’

ಲೋಕವು ಶಕ್ತಿಗಾಗಿ ತೈಲದ ಮೇಲೆ ಅವಲಂಬಿಸಿದೆ, ಆದರೆ ವೆಚ್ಚವನ್ನು ಕಡಿಮೆಗೊಳಿಸಲು ಅಪಾಯಕಾರಿಯಾದ ಹಾಗೂ ಬಹಳ ದುಸ್ಥಿತಿಯಲ್ಲಿರುವ ಜಹಜುಗಳ ಮೂಲಕ ಅದನ್ನು ಕೊಂಡೊಯ್ಯಲಾಗುತ್ತದೆ. ಆದುದರಿಂದ, ಸಂಭವಿಸಿದ ಈ ಘಟನೆಯನ್ನು ದಿ ನ್ಯೂ ಯಾರ್ಕ್‌ ಟೈಮ್ಸ್‌ “ಸಂಭವಿಸುವುದಕ್ಕಾಗಿ ಕೇವಲ ಕಾಯುತ್ತಿದ್ದ ಒಂದು ಅನಿರೀಕ್ಷಿತ ಘಟನೆ” ಎಂದು ವಿವರಿಸುತ್ತದೆ.

ಕಳೆದ 26 ವರುಷಗಳಲ್ಲಿ ಗಲೀಶಿಯಾದ ಕರಾವಳಿಯಿಂದಾಚೆ ಸಂಭವಿಸಿದ ಮೂರು ತೈಲ ಜಹಜುಗಳ ಒಡೆತದಲ್ಲಿ ಪ್ರೆಸ್ಟೀಜ್‌ ಒಂದಾಗಿದೆ. ಸುಮಾರು ಹತ್ತು ವರುಷಗಳ ಹಿಂದೆ ಉತ್ತರ ಗಲೀಶಿಯಾದಲ್ಲಿನ ಲಾ ಕೋರುನ್ಯಾದ ಬಳಿ ಈಜಿಯನ್‌ ಸೀ ಎಂಬ ತೈಲ ಜಹಜು ಒಡೆದು, 40,000 ಟನ್‌ ಪರಿಷ್ಕರಿಸದ ಪೆಟ್ರೋಲಿಯಮ್‌ ನೀರಿಗೆ ಸುರಿಯಿತು. ಕೆಲವು ಸಮೀಪದ ಕರಾವಳಿ ಪ್ರದೇಶಗಳು ಈಗಲೂ ಈ ವಿಪತ್ತಿನ ಪರಿಣಾಮಗಳಿಂದ ಹೊರಬಂದಿಲ್ಲ. 1976ರಲ್ಲಿ, ಉರ್‌ಕೀಓಲ ಎಂಬ ತೈಲ ಜಹಜು ಅದೇ ಅಳಿವೆಯಲ್ಲಿ ಮುಳುಗಿತು. ಅದು 1,00,000 ಟನ್‌ಗಳಿಗಿಂತಲೂ ಹೆಚ್ಚು ಹಾನಿಕಾರಕ ತೈಲವನ್ನು ನೀರಿಗೆ ಸುರಿಸಿತು.

ಇತ್ತೀಚಿನ ವಿಪತ್ತಿನ ಪರಿಗಣನೆಯಲ್ಲಿ, ಇಮ್ಮಡಿ ಒಡಲಿಲ್ಲದ ತೈಲ ಜಹಜುಗಳನ್ನು ನಿಷೇಧಿಸುವುದಾಗಿ ಯೂರೋಪಿನ ಒಕ್ಕೂಟವು ನಿರ್ಣಯಿಸಿದೆ. ಆದರೆ ಈ ಕಾಯಿದೆಯು, ಸತತವಾಗಿ ಇಂಥ ದುರಂತಕ್ಕೆ ಈಡಾಗುತ್ತಿರುವ ಯೂರೋಪಿನ ಕರಾವಳಿಯನ್ನು ರಕ್ಷಿಸಲು ಸಾಕಷ್ಟು ಮಟ್ಟದ್ದಾಗಿ ಪರಿಣಮಿಸುತ್ತದೊ ಎಂದು ಕಾದುನೋಡಬೇಕು.

ಸ್ಪಷ್ಟವಾಗಿ, ಮಾನವ ಸರಕಾರಗಳು ಮಾಲಿನ್ಯರಹಿತ​—⁠ಚೆಲ್ಲಿದ ತೈಲ ಪದರಗಳಾಗಿರಲಿ, ವಿಷಮಯವಾದ ತ್ಯಾಜ್ಯವಸ್ತುಗಳಾಗಿರಲಿ, ಅಥವಾ ವಾತಾವರಣದ ಮಾಲಿನ್ಯವಾಗಿರಲಿ​—⁠ಲೋಕದ ಖಾತ್ರಿಯನ್ನು ನೀಡಲು ಅಶಕ್ತವಾಗಿವೆ. ಕ್ರೈಸ್ತರಾದರೋ, ದೇವರ ರಾಜ್ಯವು ನಮ್ಮ ಗ್ರಹವನ್ನು ಎಂದೂ ಮಲಿನಗೊಳ್ಳದ ಒಂದು ಪರದೈಸಾಗಿ ಪರಿವರ್ತಿಸುವ ಸಮಯಕ್ಕಾಗಿ ಎದುರುನೋಡುತ್ತಿದ್ದಾರೆ.​—⁠ಯೆಶಾಯ 11:​1, 9; ಪ್ರಕಟನೆ 11:18. (g03 8/22)

[ಪುಟ 26, 27ರಲ್ಲಿರುವ ಚಿತ್ರ]

ಪ್ರೆಸ್ಟೀಜ್‌ ಎಂಬ ತೈಲ ಜಹಜು ತನ್ನೊಂದಿಗೆ 50,000 ಟನ್‌ ತೈಲವನ್ನು ಸಮುದ್ರ ತಳಕ್ಕೆ ತೆಗೆದುಕೊಂಡು ಹೋಯಿತು

[ಕೃಪೆ]

AFP PHOTO/DOUANE FRANCAISE