ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಮಂಗಚೇಷ್ಟೆ

ಅಗಣಿತ ಸಂಖ್ಯೆಯ ಕೋತಿಗಳು ಹಲವಾರು ಟೈಪ್‌ರೈಟರ್‌ಗಳನ್ನು ಕುಕ್ಕುವುದಾದರೆ ಕ್ರಮೇಣ ಶೇಕ್ಸ್‌ಪಿಯರ್‌ನ ಸಂಪೂರ್ಣ ಕೃತಿಯನ್ನೇ ಬರೆಯಬಲ್ಲವು ಎಂದು ಕೆಲವು ವಿಕಾಸವಾದಿಗಳು ವಾದಿಸಿದ್ದಾರೆ. ಇಂಗ್ಲಂಡಿನ ಪಿಮ್ಲತ್‌ ವಿಶ್ವವಿದ್ಯಾನಿಲಯದಲ್ಲಿನ ಸಂಶೋಧಕರು ಆರು ಮಂಗಗಳಿಗೆ ಒಂದು ಕಂಪ್ಯೂಟರ್‌ ಅನ್ನು ಒಂದು ತಿಂಗಳಿನ ವರೆಗೆ ನೀಡಿದರು. ಆ ಮಂಗಗಳಿಂದ “ಒಂದು ಪದವನ್ನು ಟೈಪ್‌ ಮಾಡಲು ಸಹ ಆಗಲಿಲ್ಲ,” ಎಂಬುದಾಗಿ ದ ನ್ಯೂ ಯಾರ್ಕ್‌ ಟೈಮ್ಸ್‌ ವರದಿಮಾಡುತ್ತದೆ. ಇಂಗ್ಲಂಡಿನ ನೈರುತ್ಯ ಭಾಗದಲ್ಲಿರುವ ಪೇನ್‌ಟನ್‌ ಮೃಗಾಲಯದಲ್ಲಿ ಆರು ಮಂಗಗಳು ಕೇವಲ ಐದು ಪುಟಗಳನ್ನು ತುಂಬುವಷ್ಟು ಪದಗಳನ್ನು ಟೈಪ್‌ ಮಾಡಿದವು.” ಆದರೆ ಅದರಲ್ಲಿ ಹೆಚ್ಚಾಗಿ “s” ಎಂಬ ಇಂಗ್ಲಿಷ್‌ ಪದವು ತುಂಬಿತ್ತು. ಕಾಗದದ ಕೊನೆಯಲ್ಲಿ ಇನ್ನಿತರ ಕೆಲವು ಪದಗಳನ್ನು ಮಂಗಗಳು ಟೈಪ್‌ ಮಾಡಿದವು. ಅಷ್ಟುಮಾತ್ರವಲ್ಲದೆ, ಮಂಗಗಳು ಕಂಪ್ಯೂಟರಿನ ಕೀಬೋರ್ಡ್‌ ಅನ್ನು ತಮ್ಮ ಶೌಚಾಲಯವಾಗಿ ಉಪಯೋಗಿಸಿದವು. (g04 1/22)

ಮೊಟ್ಟೆಗಳಿಂದ ಹಾವಿನ ವಿಷಕ್ಕೆ ಪ್ರತಿವಿಷ

“ಹಾವು ಕಡಿತಕ್ಕೆ ಚಿಕಿತ್ಸೆ ನೀಡಲು ಬೇಕಾಗಿರುವ ಅಣುಗಳ ಮೂಲವನ್ನು ಕೋಳಿಯ ಮೊಟ್ಟೆಗಳಿಂದ ಪಡೆಯಸಾಧ್ಯವಿದೆ ಎಂಬುದನ್ನು ಭಾರತದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ,” ಎಂಬುದಾಗಿ ದ ಟೈಮ್ಸ್‌ ಆಫ್‌ ಇಂಡಿಯ ಪತ್ರಿಕೆಯು ವರದಿಮಾಡುತ್ತದೆ. ಸುಮಾರು 12 ವಾರದ ಕೋಳಿಗಳಿಗೆ “ಮಾರಕವಲ್ಲದ ವಿಷವನ್ನು ಮಾಂಸಕಾಂಡದ ಮೂಲಕ ಚುಚ್ಚಲಾಗುತ್ತದೆ” ಮತ್ತು ಎರಡರಿಂದ ಮೂರು ವಾರಗಳ ನಂತರ ಮತ್ತೊಮ್ಮೆ ಇನ್ನೊಂದು ಬೂಸ್ಟರ್‌ ಡೋಸ್‌ ವಿಷವನ್ನು ಚುಚ್ಚಲಾಗುತ್ತದೆ. 21 ವಾರಗಳ ನಂತರ ಕೋಳಿಗಳು, ಪ್ರತಿವಿಷಭರಿತ ಜೀವಾಣುಗಳನ್ನು ಹೊಂದಿರುವ ಮೊಟ್ಟೆಗಳನ್ನಿಡಲು ಆರಂಭಿಸುತ್ತವೆ. ಕುದುರೆಗಳಿಂದ ಪಡೆಯುವ ಪ್ರತಿವಿಷಕ್ಕೆ ಬದಲಾಗಿ ಮೊಟ್ಟೆಯಿಂದ ಪಡೆಯುವ ಪ್ರತಿವಿಷವನ್ನು ಬಳಸಬಹುದೆಂದು ಸಂಶೋಧಕರು ನಿರೀಕ್ಷಿಸುತ್ತಾರೆ. ಏಕೆಂದರೆ ಕುದುರೆಗಳಿಂದ “ಹಾವಿನ ವಿಷಕ್ಕೆ ಪ್ರತಿವಿಷವನ್ನು ಪಡೆಯಬೇಕಾದರೆ ಅವುಗಳು ಬಹಳ ಯಾತನಾಮಯ ಪರೀಕ್ಷೆಗಳಿಗೆ ಒಳಪಡಬೇಕಾಗುತ್ತವೆ,” ಎಂದು ಹೇಳುತ್ತದೆ ದ ಟೈಮ್ಸ್‌ ಪತ್ರಿಕೆ. ಆಸ್ಟ್ರೇಲಿಯದಲ್ಲಿರುವ ವಿಜ್ಞಾನಿಗಳು, ಈ ಹೊಸ ತಂತ್ರಜ್ಞಾನವನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿ ನೋಡಿ ಈಗಾಗಲೇ ಯಶಸ್ಸನ್ನು ಕಂಡುಕೊಂಡಿದ್ದಾರೆ. ಮೊಟ್ಟೆಗಳಿಂದ ದೊರೆತ ಪ್ರತಿವಿಷವು ಮಾನವರ ಮೇಲೆಯೂ ಪರಿಣಾಮಕಾರಿಯಾದರೆ, ಇದು ಭಾರತಕ್ಕೆ ಬಹಳ ಪ್ರಯೋಜನಕಾರಿಯಾಗಬಹುದು. ಏಕೆಂದರೆ ಪ್ರತಿ ವರುಷ ಭಾರತದಲ್ಲಿ 3,00,000 ಹಾವು ಕಡಿತದ ಸಂಭವಗಳು ವರದಿಮಾಡಲಾಗುತ್ತಿವೆ. ಅವುಗಳಲ್ಲಿ, 10 ಪ್ರತಿಶತ ಜನರು ಮೃತರಾಗುತ್ತಾರೆ. (g04 1/8)

ಅತಿ ದೀರ್ಘಾಂತರದ ನೆರವಿನ ದೂರವಾಣಿ ಕರೆಗಳು

ಅಮೆರಿಕದ ಫಿಲಡೆಲ್‌ಫಿಯದಲ್ಲಿನ ಒಬ್ಬಾಕೆ ಸ್ತ್ರೀಯು ಗ್ರಾಹಕ ಸೇವೆಯ ನಂಬರ್‌ಗೆ ಕರೆಮಾಡುತ್ತಾಳೆ. ಇದು, ತಾನಿರುವ ಸ್ಥಳದಲ್ಲಿಯೇ ಇರುವ ಗ್ರಾಹಕ ಸೇವೆಯ ನಂಬರ್‌ ಎಂದು ಅವಳು ಊಹಿಸಿದ್ದಾಳೆ. ಅವಳ ಕರೆಯನ್ನು ಉತ್ತರಿಸುವ ಯುವ ಸ್ತ್ರೀಯ ಹೆಸರು ಮೇಘ್ನ ಎಂದಾಗಿರುವುದಾದರೂ ಅವಳು ತನ್ನನ್ನು ಮೀಷೆಲ್‌ ಎಂದು ಪರಿಚಯಪಡಿಸಿಕೊಳ್ಳುತ್ತಾಳೆ, ಮತ್ತು ಅವಳು ಭಾರತದಲ್ಲಿದ್ದು ಈ ಕರೆಯನ್ನು ಸ್ವೀಕರಿಸುತ್ತಿದ್ದಾಳೆ ಹಾಗೂ ಅಲ್ಲಿ ಈಗ ಮಧ್ಯರಾತ್ರಿಯ ಸಮಯ. ಭಾರತದ ಕಾಲ್‌ ಸೆಂಟರ್‌ಗಳು 1,00,000ಕ್ಕಿಂತಲೂ ಹೆಚ್ಚಿನ ಜನರನ್ನು ಕೆಲಸಕ್ಕಿಟ್ಟುಕೊಂಡಿವೆ. ಉದಾಹರಣೆಗೆ, ಅಮೆರಿಕನ್‌ ಎಕ್ಸ್‌ಪ್ರೆಸ್‌, ಎಟಿ & ಟಿ, ಬ್ರಿಟಿಷ್‌ ಏರ್‌ವೇಸ್‌, ಸಿಟಿ ಬ್ಯಾಂಕ್‌, ಮತ್ತು ಜನರಲ್‌ ಎಲೆಕ್ಟ್ರಿಕ್‌ ಮುಂತಾದ ಹೊರದೇಶದ ಕಂಪೆನಿಗಳ ವಹಿವಾಟನ್ನು ಭಾರತದಲ್ಲಿದ್ದುಕೊಂಡೇ ನೋಡಿಕೊಳ್ಳಲು ಈ ಜನರನ್ನು ನೇಮಿಸಲಾಗುತ್ತದೆ. ಅಂತಾರಾಷ್ಟ್ರೀಯ ಟೆಲಿಫೋನ್‌ ಕರೆಯ ಬೆಲೆಯು ಅಷ್ಟು ದುಬಾರಿಯಲ್ಲದ, ವಿದ್ಯಾಭ್ಯಾಸ ಹೊಂದಿದ ಹಾಗೂ ಇಂಗ್ಲಿಷ್‌ ಭಾಷೆಯನ್ನು ಉತ್ತಮವಾಗಿ ಮಾತನಾಡಬಲ್ಲ ಕೆಲಸದವರು ಭಾರತದಲ್ಲಿ ಸಾಕಷ್ಟು ಇರುವ ಕಾರಣ, ಮತ್ತು ಭಾರತದ ಕೆಲಸಗಾರರ ಸಂಬಳವು “ಪಾಶ್ಚಾತ್ಯ ದೇಶದವರ ಸಂಬಳಕ್ಕೆ ಹೋಲಿಸುವಾಗ 80 ಪ್ರತಿಶತ ಕಡಿಮೆ” ಇರುವ ಕಾರಣ ಈ ಕೆಲಸವನ್ನು ಭಾರತದಿಂದಲೇ ನಿರ್ವಹಿಸಲಾಗುತ್ತಿದೆ ಎಂದು ಇಂಡಿಯಾ ಟುಡೆ ಪತ್ರಿಕೆಯು ವರದಿಮಾಡುತ್ತದೆ. ಅಮೆರಿಕದವರ ಸ್ವರದಂತೆ ಮಾತನಾಡಲು ಸಾಧ್ಯವಾಗುವಂತೆ ಮೇಘ್ನಳಂಥ ಟೆಲಿಫೋನ್‌ ಚಾಲಕರಿಗೆ ಅನೇಕ ತಿಂಗಳಿನ ತರಬೇತಿಯನ್ನು ನೀಡಲಾಗುತ್ತದೆ. ಅಷ್ಟುಮಾತ್ರವಲ್ಲದೆ, ಅಮೆರಿಕದವರ ವಿವಿಧ ರೀತಿಯ ಉಚ್ಚಾರಗಳನ್ನು ಕಲಿತುಕೊಳ್ಳಲು ಅವರಿಗೆ “ಹಾಲಿವುಡ್‌ ಚಲನಚಿತ್ರಗಳನ್ನೂ ತೋರಿಸಲಾಗುತ್ತದೆ.” ಕರೆ ಬಂದಂಥ ಸಮಯದಲ್ಲಿ ಫಿಲಡೆಲ್‌ಫಿಯದಲ್ಲಿನ ಹವಾಮಾನವು ಹೇಗಿದೆ ಎಂಬುದನ್ನು ಸಹ ಮೇಘ್ನಳ ಕಂಪ್ಯೂಟರ್‌ ಅವಳಿಗೆ ತಿಳಿಸುತ್ತದೆ. ಈ ಮೂಲಕ ಅವಳು ಕರೆಗಾರರಿಗೆ ಅದರ ಕುರಿತೂ ಹೇಳಿಕೆಯನ್ನು ನೀಡಬಹುದು. ಇಲ್ಲಿ ರಾತ್ರಿಯಾಗಿರುವುದಾದರೂ, ಅವಳು ತನ್ನ ಮಾತನ್ನು “ಹ್ಯಾವ್‌ ಅ ಗುಡ್‌ ಡೇ” ಎಂದು ಹೇಳುವ ಮೂಲಕ ಮುಕ್ತಾಯಗೊಳಿಸುತ್ತಾಳೆ. (g03 12/22)

ಶ್ರಮಪಡುತ್ತಿರುವ ರೈತರು

ಒಂದು ವರದಿಗನುಸಾರ, “ಲೋಕದಾದ್ಯಂತ ಉತ್ತಮ ಫಸಲನ್ನು ಫಲಿಸಿದ ಹಸಿರು ಕ್ರಾಂತಿಯಿಂದಾದ ನಷ್ಟ: ಆಫ್ರಿಕದಲ್ಲಿರುವ ಲೋಕದ ಅತೀ ಬಡ ರೈತರು ಇನ್ನೂ ಬಡವರಾದರು,” ಎಂಬುದಾಗಿ ನ್ಯೂ ಸಾಯಂಟಿಸ್ಟ್‌ ಪತ್ರಿಕೆಯು ತಿಳಿಸುತ್ತದೆ. ಅದು ಹೇಗೆ? 1950ರ ಅಂತ್ಯಭಾಗದಲ್ಲಿ, ಲೋಕದ ಜನಸಂಖ್ಯೆಯ ಹೆಚ್ಚಳದಿಂದಾಗಿ ಉಂಟಾಗಬಹುದಾದ ಬರಗಾಲವನ್ನು ತಡೆಯಲು ಉತ್ತಮ ಫಲವನ್ನು ಕೊಡುವ ಜಾತಿಯ ಗೋಧಿ ಮತ್ತು ಬತ್ತವನ್ನು ಪರಿಚಯಪಡಿಸಲಾಯಿತು. ಆದರೆ, ಈ ಉತ್ತಮ ಫಸಲನ್ನು ಕೊಡುವ ತಳಿಗಳು ಹೇರಳವಾಗಿ ಪೈರನ್ನು ಉತ್ಪತ್ತಿಮಾಡಿದ ಕಾರಣ ಬೆಲೆಯ ಕುಸಿತವು ಉಂಟಾಯಿತು. “ಈ ಹೊಸ ಜಾತಿಯ ಬೀಜವನ್ನು ಖರೀದಿಸಿ ಬಿತ್ತಬಲ್ಲ ರೈತರು ಹೆಚ್ಚು ಫಸಲನ್ನು ಗಳಿಸಿ ಅದನ್ನು ಕಡಿಮೆ ಬೆಲೆಗೆ ಮಾರಿ ಹಣಗಳಿಸಿದರು, ಆದರೆ ಯಾರಿಂದ ಈ ಹೊಸ ಜಾತಿಯ ಬೀಜವನ್ನು ಖರೀದಿಸಲಾಗಲಿಲ್ಲವೋ ಅಂಥ ಬಡ ರೈತರು ನಷ್ಟವನ್ನು ಅನುಭವಿಸಿದರು,” ಎಂಬುದಾಗಿ ನ್ಯೂ ಸಾಯಂಟಿಸ್ಟ್‌ ಪತ್ರಿಕೆಯು ತಿಳಿಸುತ್ತದೆ. ಇದಕ್ಕೆ ಕೂಡಿಕೆಯಾಗಿ, ಈ ಹೊಸ ಜಾತಿಯ ಪೈರು ಆಫ್ರಿಕದ ಪರಿಸರಕ್ಕೆ ಸೂಕ್ತವಾಗಿರಲಿಲ್ಲ, ಏಕೆಂದರೆ ಈ ಪೈರನ್ನು ಏಷಿಯ ಮತ್ತು ಲ್ಯಾಟಿನ್‌ ಅಮೆರಿಕದಲ್ಲಿ ಬೆಳೆಸುವ ಉದ್ದೇಶದಿಂದ ತಯಾರಿಸಲಾಗಿತ್ತು. (g04 1/22)

ಕರಗುತ್ತಿರುವ ನೀರ್ಗಲ್ಲ ನದಿಗಳು

ಮಳೆಗಾಲದಲ್ಲಿ ತಡವಾಗಿ ಮಳೆಬಂದ ಕಾರಣ ಭಾರತದ ಪಂಜಾಬಿನಾದ್ಯಂತ ಇರುವ ಜಲಾಶಯಗಳ ನೀರಿನ ಮಟ್ಟವು ಕಡಿಮೆಯಾಗಿರುವಾಗ, ಸಟ್‌ಲೆಜ್‌ ನದಿಯ ಮೇಲಿರುವ ಬಕ್ರ ಅಣೆಕಟ್ಟಿನ ನೀರಿನ ಮಟ್ಟ ಕಳೆದ ವರುಷಕ್ಕಿಂತ ಎರಡು ಪಟ್ಟು ಹೆಚ್ಚಾಯಿತು. ಇದು ಹೇಗೆ? ಸಟ್‌ಲೆಜ್‌ ನದಿಗೆ ಹರಿದು ಬರುವ ಉಪನದಿಗಳು 89 ನೀರ್ಗಲ್ಲ ನದಿಗಳಿರುವ ಪ್ರದೇಶವನ್ನು ದಾಟಿಬರುತ್ತವೆ ಎಂಬುದಾಗಿ ಡೌನ್‌ ಟು ಅರ್ತ್‌ ಪತ್ರಿಕೆ ತಿಳಿಸುತ್ತದೆ. “ಮಳೆಯ ಕೊರತೆಯಿಂದ ಅನೇಕ ನೀರ್ಗಲ್ಲ ನದಿಗಳು ಕರಗುತ್ತಿವೆ. ಮೋಡಗಳಿಲ್ಲದೆ ಬಿಸಿಲಿನ ತಾಪವು ಹೆಚ್ಚಾಗಿದೆ. ಇದರೊಂದಿಗೆ ತಾಪಮಾನವು ಸಹ ಹೆಚ್ಚಾಗಿರುವುದರಿಂದ ನೀರ್ಗಲ್ಲ ನದಿಗಳು ಕರಗುತ್ತಿವೆ,” ಎಂಬುದಾಗಿ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾನಿಲಯದ ನೀರ್ಗಲ್ಲ ನದಿ ವಿಶೇಷಜ್ಞ ಸೈಯದ್‌ ಇಕ್ಬಾಲ್‌ ಹ್ಯಾಸ್‌ನೇನ್‌ ವಿವರಿಸುತ್ತಾರೆ. ನೀರ್ಗಲ್ಲ ನದಿಗಳು ಕರಗುವ ಕಾರಣ ನದಿಗಳು ಉಕ್ಕಿಹರಿಯಲಾರಂಭಿಸುತ್ತವೆ. ಅಷ್ಟುಮಾತ್ರವಲ್ಲದೆ, ನೀರ್ಗಲ್ಲ ನದಿಗಳು ಕರಗಿ ಸಣ್ಣದಾದಂತೆ ಭವಿಷ್ಯತ್ತಿನಲ್ಲಿ ನೀರಿನ ಅಭಾವ ಉಂಟಾಗುತ್ತದೆ ಮತ್ತು ಇದು ಶಕ್ತಿಯ ಉತ್ಪನ್ನದ ಹಾಗೂ ವ್ಯವಸಾಯದ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. (g04 1/22)

ಸೋಪು ಜೀವಗಳನ್ನು ಉಳಿಸುತ್ತದೆ

ಲಂಡನಿನ ಆರೋಗ್ಯಶಾಸ್ತ್ರ ಮತ್ತು ಉಷ್ಣವಲಯದ ಔಷಧದ ಶಾಲೆಯಲ್ಲಿ ಅಧ್ಯಾಪಕಿಯಾಗಿರುವ ವ್ಯಾಲ್‌ ಕರ್ಟಿಸ್‌ಗನುಸಾರ, ಕೇವಲ ಸೋಪನ್ನು ಉಪಯೋಗಿಸಿ ಕೈಗಳನ್ನು ತೊಳೆಯುವುದು ಪ್ರತಿ ವರುಷ ಹತ್ತು ಲಕ್ಷ ಜನರ ಜೀವವನ್ನು ಉಳಿಸಬಲ್ಲದು. ಏಕೆಂದರೆ ಇದು ಅತಿಭೇದಿಯನ್ನು ಉಂಟುಮಾಡುವ ರೋಗಗಳನ್ನು ತಡೆಯಲು ಜನರಿಗೆ ಸಹಾಯಮಾಡುತ್ತದೆ. ಜಪಾನಿನ ಕಿಯೊಟೊ ನಗರದಲ್ಲಿ ನಡೆದ ಮೂರನೆಯ ಜಾಗತಿಕ ಜಲವೇದಿಕೆಯಲ್ಲಿ, ಮಾನವ ಮಲದಲ್ಲಿರುವ ರೋಗಾಣುಗಳನ್ನು “ಸಾರ್ವಜನಿಕರ ಅತಿ ದೊಡ್ಡ ವೈರಿ” ಎಂದು ಕರ್ಟಿಸ್‌ ವಿವರಿಸಿದರು ಎಂಬುದಾಗಿ ದ ಡೆಯ್ಲೀ ಯೋಮ್ಯುರಿ ಎಂಬ ವಾರ್ತಾಪತ್ರಿಕೆಯು ವರದಿಮಾಡುತ್ತದೆ. ವಾರ್ತಾಪತ್ರಿಕೆಯು ಇನ್ನೂ ತಿಳಿಸುವುದು: “ಕೆಲವು ಸ್ಥಳಗಳಲ್ಲಿ, ಮಲವಿಸರ್ಜಿಸಿದ ಮಗುವನ್ನು ತೊಳೆದ ನಂತರ ಮಹಿಳೆಯರು ತಮ್ಮ ಕೈಗಳನ್ನು ತೊಳೆಯದೆಯೇ ಆಹಾರವನ್ನು ತಯಾರಿಸುವುದು ಸಾಮಾನ್ಯವಾಗಿರುತ್ತದೆ.” ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆಯುವುದು, ಮಾರಕ ರೋಗಾಣುಗಳ ಮತ್ತು ಬ್ಯಾಕ್ಟೀರಿಯಗಳ ಹರಡುವಿಕೆಯನ್ನು ತಡೆಗಟ್ಟಸಾಧ್ಯವಿದೆ. ಪ್ರಗತಿಪರ ದೇಶಗಳಲ್ಲಿ, “ಅತಿಭೇದಿಯ ಗಂಡಾಂತರವನ್ನು ಕಡಿಮೆಗೊಳಿಸಲು ನೀರಿನ ಗುಣಮಟ್ಟವನ್ನು ಉತ್ತಮಗೊಳಿಸುವುದಕ್ಕಿಂತ ಸೋಪನ್ನು ಉಪಯೋಗಿಸಿ ಕೈಗಳನ್ನು ತೊಳೆಯುವುದು ಖರ್ಚನ್ನು ಮೂರುಪಟ್ಟು ಕಡಿಮೆಗೊಳಿಸುತ್ತದೆ.” (g04 2/22)

ಲ್ಯಾಟಿನ್‌ ಭಾಷೆಯನ್ನು ಜೀವಂತವಾಗಿರಿಸುವುದು

ಲ್ಯಾಟಿನ್‌ ಭಾಷೆಯನ್ನು ಅನೇಕರು ಮೃತಭಾಷೆ ಎಂದು ಪರಿಗಣಿಸಿದರೂ, ಅದನ್ನು ಇನ್ನೂ ಜೀವಂತವಾಗಿಯೂ ಸದ್ಯೋಚಿತವಾಗಿಯೂ ಇರಿಸಲು ವ್ಯಾಟಿಕನ್‌ ಬಹಳ ಶ್ರಮಪಡುತ್ತಿದೆ. ಏಕೆ? ಏಕೆಂದರೆ ವ್ಯಾಟಿಕನ್‌ನ ಜನರು ಉಪಯೋಗಿಸುವ ಭಾಷೆಯು ಇಟ್ಯಾಲಿಯನ್‌ ಭಾಷೆಯಾಗಿದ್ದರೂ, ಅದರ ಅಧಿಕೃತ ಭಾಷೆಯು ಲ್ಯಾಟಿನ್‌ ಆಗಿದೆ ಮತ್ತು ಈಗಲೂ ಪೋಪರ ಸುತ್ತೋಲೆ ಹಾಗೂ ಇತರ ದಾಖಲೆಗಳು ಲ್ಯಾಟಿನ್‌ ಭಾಷೆಯಲ್ಲಿಯೇ ಬರೆಯಲ್ಪಡುತ್ತವೆ. 1970ಗಳಲ್ಲಿ ಚರ್ಚಿನಲ್ಲಿ ಮಾಸ್‌ ಅನ್ನು ಅಲ್ಲಿನ ಸ್ಥಳೀಯ ಭಾಷೆಯಲ್ಲಿಯೇ ನಡೆಸಲಾಗುವುದೆಂದು ಘೋಷಿಸಿದಾಗ, ಲ್ಯಾಟಿನ್‌ ಭಾಷೆಯ ಉಪಯೋಗವು ಬಹಳವಾಗಿ ಕುಂಠಿತಗೊಂಡಿತು. ಈ ಸಮಯದಲ್ಲಿಯೇ, ಪೋಪ್‌ ಪೌಲ್‌ VIರವರು ಲ್ಯಾಟಿನ್‌ ಭಾಷೆಯನ್ನು ಜೀವಂತವಾಗಿರಿಸಲು ಲ್ಯಾಟಿನ್‌ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಇದಕ್ಕಾಗಿ ತೆಗೆದುಕೊಳ್ಳಲ್ಪಟ್ಟ ಮೊದಲ ಹೆಜ್ಜೆಯು, ಎರಡು ಸಂಪುಟಗಳ ಲ್ಯಾಟಿನ್‌-ಇಟ್ಯಾಲಿಯನ್‌ ಭಾಷೆಯ ನಿಘಂಟನ್ನು ಪ್ರಕಾಶಿಸುವುದೇ ಆಗಿತ್ತು. ಈ ಸಂಪುಟಗಳ ಎಲ್ಲಾ ಪ್ರತಿಗಳು ಮಾರಲ್ಪಟ್ಟವು. ಈಗ ಈ ಎರಡು ಸಂಪುಟಗಳನ್ನು ಒಟ್ಟುಗೂಡಿಸಿ ಒಂದು ಸಂಚಿಕೆಯಾಗಿ ಪ್ರಕಾಶಿಸಿ, 115 ಡಾಲರ್‌ಗಳಿಗೆ ಮಾರಲ್ಪಡುತ್ತಿವೆ. ಇದರಲ್ಲಿ, “ಏಸ್‌ಕ್ಯಾರ್ಯೋರುಮ್‌ ಲಾವಾಟೋರ್‌” (ಪಾತ್ರೆ ತೊಳೆಯುವ ಯಂತ್ರ) ಮತ್ತು “ಆರ್‌ಬೀಯುಮ್‌ ಫೋನೋಗ್ರೇಫೀಕುಮ್‌” (ಡಿಸ್ಕೋ) ಮುಂತಾದ ಸುಮಾರು 15,000 ಆಧುನಿಕ ಲ್ಯಾಟಿನ್‌ ಪದಗಳಿವೆ. ಒಂದು ಹೊಸ ಸಂಪುಟವು “ಎರಡು ಅಥವಾ ಮೂರು ವರುಷಗಳೊಳಗಾಗಿ ತಯಾರಾಗಲಿದೆ,” ಎಂದು ದ ನ್ಯೂ ಯಾರ್ಕ್‌ ಟೈಮ್ಸ್‌ ವಾರ್ತಾಪತ್ರಿಕೆಯು ತಿಳಿಸುತ್ತದೆ. ಸೇರಿಸಲ್ಪಡುವ ಪದಗಳು ಬಹುತೇಕ “ಕಂಪ್ಯೂಟರ್‌ ಮತ್ತು ಮಾಹಿತಿ ಕ್ಷೇತ್ರದಲ್ಲಿ” ಉಪಯೋಗಿಸಲ್ಪಡುವವುಗಳಾಗಿವೆ. (g04 2/22)