ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಹೋಮ್‌ವರ್ಕ್‌ ಮಾಡಲು ನಾನು ಸಮಯವನ್ನು ಹೇಗೆ ಕಂಡುಕೊಳ್ಳಬಲ್ಲೆ?

ನನ್ನ ಹೋಮ್‌ವರ್ಕ್‌ ಮಾಡಲು ನಾನು ಸಮಯವನ್ನು ಹೇಗೆ ಕಂಡುಕೊಳ್ಳಬಲ್ಲೆ?

ಯುವ ಜನರು ಪ್ರಶ್ನಿಸುವುದು . . .

ನನ್ನ ಹೋಮ್‌ವರ್ಕ್‌ ಮಾಡಲು ನಾನು ಸಮಯವನ್ನು ಹೇಗೆ ಕಂಡುಕೊಳ್ಳಬಲ್ಲೆ?

‘ನಾನು 12ನೇ ತರಗತಿಯಲ್ಲಿ ಓದುತ್ತಿದ್ದೇನೆ, ಮತ್ತು ವಿವರಿಸಲು ಅಸಾಧ್ಯವಾದಷ್ಟು ತೀವ್ರವಾದ ಒತ್ತಡವನ್ನು ಅನುಭವಿಸುತ್ತಿದ್ದೇನೆ. . . . ನನಗೆ ಅನೇಕಾನೇಕ ಸಂಶೋಧನಾ ಕೆಲಸಗಳನ್ನು ಮತ್ತು ನಿರೂಪಣೆಗಳನ್ನು ಮಾಡಲಿಕ್ಕಿದೆ. ಇದೇನು ಸಾಧಾರಣ ಕೆಲಸವಲ್ಲ. ಇವೆಲ್ಲವನ್ನು ಮಾಡಲು ನನಗೆ ಸಮಯವೂ ಇಲ್ಲ.’​—⁠ಒಬ್ಬಾಕೆ 18 ವರುಷ ಪ್ರಾಯದ ಹುಡುಗಿ.

ಪ್ರತಿದಿನ ಶಾಲೆಯಿಂದ ಮನೆಗೆ ಬಂದ ನಂತರ ಮಾಡಲಿಕ್ಕಿರುವ ದೊಡ್ಡ ಮೊತ್ತದ ಹೋಮ್‌ವರ್ಕ್‌ನಿಂದಾಗಿ ನಿಮಗೆ ಚಿತ್ತಸ್ಥೈರ್ಯವನ್ನು ಕಳೆದುಕೊಂಡಂತೆ ಅನಿಸುತ್ತದೋ? ಹೌದಾದರೆ ಚಿಂತಿಸಬೇಡಿ, ಇದೇ ರೀತಿಯ ಅನಿಸಿಕೆ ಇತರರಿಗೂ ಆಗುತ್ತದೆ. “ಅಮೆರಿಕದಾದ್ಯಂತ ಇರುವ ಶಾಲೆಗಳು ತಮ್ಮ ಶಾಲಾ ಮಟ್ಟವನ್ನು​—⁠ಮತ್ತು ಯೋಗ್ಯತಾ ಪರೀಕ್ಷೆಯ ಅಂಕಗಳನ್ನು​—⁠ಹೆಚ್ಚಿಸಲು ಪ್ರಯತ್ನಿಸುತ್ತಿರುವ ಕಾರಣ, ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಹೋಮ್‌ವರ್ಕ್‌ ಅನ್ನು ನೀಡುತ್ತಾರೆ. ಕೆಲವು ಪ್ರದೇಶಗಳಲ್ಲಿ, ಪ್ರೌಢಶಾಲೆಯ ವಿದ್ಯಾರ್ಥಿಗಳು ರಾತ್ರಿ ಮೂರು ತಾಸುಗಳನ್ನು ತಮ್ಮ ಹೋಮ್‌ವರ್ಕ್‌ ಮಾಡಲು ವ್ಯಯಿಸುತ್ತಾರೆ. 20 ವರುಷಗಳ ಹಿಂದೆ ಮಕ್ಕಳು ಮಾಡುತ್ತಿದ್ದ ಹೋಮ್‌ವರ್ಕ್‌ಗಿಂತ ಮೂರುಪಟ್ಟು ಹೆಚ್ಚನ್ನು ಇಂದಿನ ಯುವ ಮಕ್ಕಳು ಮಾಡುತ್ತಿದ್ದಾರೆ ಎಂದು ಮಿಷಿಗನ್‌ನ ಒಂದು ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನವು ತೋರಿಸಿಕೊಟ್ಟಿತು” ಎಂಬುದಾಗಿ ಅಮೆರಿಕದ ಒಂದು ಪ್ರೆಸ್‌ ವರದಿಯು ಹೇಳಿತು.

ಹೋಮ್‌ವರ್ಕ್‌ನ ದೊಡ್ಡ ಹೊರೆಯು ಕೇವಲ ಅಮೆರಿಕದಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಉದಾಹರಣೆಗೆ, ಪ್ರತಿದಿನ ತಮಗೆ ಎರಡು ತಾಸುಗಳಿಗಿಂತಲೂ ಹೆಚ್ಚು ಸಮಯ ಹೋಮ್‌ವರ್ಕ್‌ ಅನ್ನು ಮಾಡಲಿಕ್ಕಿರುತ್ತದೆ ಎಂಬುದಾಗಿ ಅಲ್ಲಿನ 13 ವರುಷ ಪ್ರಾಯದವರಲ್ಲಿ 30 ಪ್ರತಿಶತದಷ್ಟು ವಿದ್ಯಾರ್ಥಿಗಳು ವರದಿಮಾಡಿರುವಲ್ಲಿ, ಥಾಯ್‌ಲೆಂಡ್‌ ಮತ್ತು ಕೊರಿಯದಲ್ಲಿಯಾದರೋ 40 ಪ್ರತಿಶತ, ಫ್ರಾನ್ಸ್‌ನಲ್ಲಿ 50 ಪ್ರತಿಶತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಗೆಂದು ವರದಿಮಾಡಿದ್ದಾರೆ. “ಕೆಲವೊಮ್ಮೆ ನನ್ನ ಹೋಮ್‌ವರ್ಕ್‌ ರಾಶಿಬಿದ್ದಾಗ ನಾನು ನಿಜವಾಗಿಯೂ ಬಹಳ ಚಿಂತಾಜನಕಳಾಗುತ್ತೇನೆ” ಎಂದು ಅಮೆರಿಕದ ಒಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾದ ಕೇಟೀ ಪ್ರಲಾಪಿಸುತ್ತಾಳೆ. ಫ್ರಾನ್ಸ್‌ನ ಮಾರ್ಸೇಯಲ್ಲಿ ಶಾಲೆಗೆ ಹೋಗುತ್ತಿರುವ ಮರ್ಲಿನ್‌ ಮತ್ತು ಬಿಲಿಂಡ ಎಂಬ ವಿದ್ಯಾರ್ಥಿಗಳು ಸಹ ತದ್ರೀತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಮರ್ಲಿನ್‌ ಹೇಳಿದ್ದು: “ನಾವು ಪ್ರತಿ ರಾತ್ರಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಾಸುಗಳನ್ನು ನಮ್ಮ ಹೋಮ್‌ವರ್ಕ್‌ ಮಾಡಲು ವ್ಯಯಿಸುತ್ತೇವೆ. ಬೇರೇನಾದರೂ ಜವಾಬ್ದಾರಿಗಳಿರುವಲ್ಲಿ ಸಮಯವನ್ನು ಕಂಡುಕೊಳ್ಳುವುದು ಬಹಳಷ್ಟು ಕಷ್ಟಕರವಾಗಿರುತ್ತದೆ.”

ಸಮಯವನ್ನು ನಾನು ಎಲ್ಲಿ ಕಂಡುಕೊಳ್ಳಬಲ್ಲೆ?

ನಿಮ್ಮ ಹೋಮ್‌ವರ್ಕ್‌ ಅನ್ನು ಮತ್ತು ಇನ್ನಿತರ ಕೆಲಸಗಳನ್ನು ಮಾಡಿಮುಗಿಸಲು ಸಾಧ್ಯವಾಗುವಂತೆ, ನಿಮಗೆ ಅಗತ್ಯವಿದ್ದಾಗ ದಿನಕ್ಕೆ ಕೆಲವು ತಾಸುಗಳನ್ನು ಸೇರಿಸಲು ಸಾಧ್ಯವಿದ್ದಲ್ಲಿ ಬಹಳ ಒಳ್ಳೇದಿರುತ್ತಿತ್ತಲ್ಲವೇ? ಎಫೆಸ 5:​15, 16ರಲ್ಲಿ ಕಂಡುಬರುವ ಬೈಬಲ್‌ ಮೂಲತತ್ತ್ವಗಳಿಂದ ನೀವು ಕಲಿತುಕೊಳ್ಳುವುದಾದರೆ ಈ ರೀತಿ ಮಾಡಶಕ್ತರಾಗಬಹುದು. ಅಲ್ಲಿ ತಿಳಿಸುವುದು: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. . . . ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ [“ಸಮಯೋಚಿತ ಕಾಲವನ್ನು ಖರೀದಿಸಿರಿ,” NW].” ಈ ವಾಕ್ಯಗಳನ್ನು ಬರೆಯುವಾಗ ಬೈಬಲ್‌ ಬರಹಗಾರನ ಮನಸ್ಸಿನಲ್ಲಿ ಹೋಮ್‌ವರ್ಕ್‌ನ ಆಲೋಚನೆ ಇಲ್ಲದಿದ್ದರೂ, ಇದರ ಮೂಲತತ್ತ್ವವನ್ನು ದಿನನಿತ್ಯದ ಜೀವಿತಕ್ಕೆ ಅನ್ವಯಿಸಸಾಧ್ಯವಿದೆ. ನೀವು ಏನನ್ನಾದರೂ ಖರೀದಿಸುವಾಗ ಅದರ ಬದಲಿಗೆ ಇನ್ನೇನನ್ನಾದರೂ ತ್ಯಾಗಮಾಡಬೇಕಾಗುತ್ತದೆ. ಇಲ್ಲಿರುವ ಮುಖ್ಯ ಅಂಶವೇನೆಂದರೆ, ಅಧ್ಯಯನಕ್ಕಾಗಿ ಸಮಯವನ್ನು ಕಂಡುಕೊಳ್ಳಲು ನೀವು ಯಾವುದೋ ಇನ್ನೊಂದು ವಿಷಯವನ್ನು ತ್ಯಾಗಮಾಡಬೇಕು. ಆದರೆ ಯಾವುದನ್ನು ತ್ಯಾಗಮಾಡಬೇಕು?

“ನೀವು ಪ್ರಥಮವಾಗಿ ಮಾಡಬೇಕಾದ ವಿಷಯವನ್ನು ಪಟ್ಟಿಮಾಡಿ” ಎಂದು ಜಿಲ್‌ಯನ್‌ ಎಂಬ ಯುವತಿಯು ಸಲಹೆನೀಡುತ್ತಾಳೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಆದ್ಯತೆಗಳನ್ನು ಸ್ಥಾಪಿಸಿರಿ. ಕ್ರೈಸ್ತ ಕೂಟಗಳು ಮತ್ತು ಆಧ್ಯಾತ್ಮಿಕ ವಿಷಯಗಳು ನಿಮ್ಮ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಬೇಕು. ನಿಮ್ಮ ಕುಟುಂಬ ಜವಾಬ್ದಾರಿಗಳು, ಮನೆಗೆಲಸ ಮತ್ತು ಅದರೊಂದಿಗೆ ಹೋಮ್‌ವರ್ಕ್‌ ಅನ್ನು ಮರೆಯಬೇಡಿ.

ನಂತರ, ಒಂದು ವಾರ ಅಥವಾ ಅದಕ್ಕಿಂತ ಹೆಚ್ಚಿನ ದಿವಸಗಳ ತನಕ ನೀವು ನಿಜವಾಗಿಯೂ ಸಮಯವನ್ನು ಹೇಗೆ ವ್ಯಯಿಸಿದ್ದೀರೆಂಬುದನ್ನು ತಿಳಿಯಲು ಪ್ರತಿದಿನದ ಕಾರ್ಯಕಲಾಪಗಳನ್ನು ಡೈರಿಯಲ್ಲಿ ಬರೆದಿಡಿರಿ. ನಂತರ ಅದನ್ನು ಪರೀಕ್ಷಿಸುವಾಗ ನಿಮಗೆ ಆಶ್ಚರ್ಯವಾಗಬಹುದು. ಟಿವಿ ಕಾರ್ಯಕ್ರಮಗಳನ್ನು ನೋಡುವುದರಲ್ಲಿ, ಇಂಟರ್‌ನೆಟ್‌ನಲ್ಲಿ ಸರ್ಫ್‌ ಮಾಡುವುದರಲ್ಲಿ, ಚಲನಚಿತ್ರಗಳಿಗೆ ಹೋಗುವುದರಲ್ಲಿ, ಫೋನಿನಲ್ಲಿ ಮಾತನಾಡುವುದರಲ್ಲಿ, ಸ್ನೇಹಿತರನ್ನು ಸಂದರ್ಶಿಸುವುದರಲ್ಲಿ ನೀವು ಎಷ್ಟು ಸಮಯವನ್ನು ವ್ಯಯಮಾಡಿದ್ದೀರಿ? ಈ ಎಲ್ಲಾ ವಿಷಯಗಳನ್ನು ನಿಮ್ಮ ಡೈರಿಯಲ್ಲಿ ನೋಡಿ ತಿಳಿದುಕೊಂಡ ಬಳಿಕ ಅವನ್ನು ನಿಮ್ಮ ಆದ್ಯತೆಗಳ ಪಟ್ಟಿಯೊಂದಿಗೆ ಹೋಲಿಸುವಾಗ ಅವು ಏನನ್ನು ಸೂಚಿಸುತ್ತವೆ? ಇನ್ನೂ ಹೆಚ್ಚಿನ ಸಮಯವನ್ನು ಯಾವ ಕ್ಷೇತ್ರಗಳಿಂದ ನೀವು ಖರೀದಿಸಸಾಧ್ಯವಿದೆ ಎಂಬುದನ್ನು ಕಂಡುಕೊಳ್ಳಲು ನೀವು ಮಾಡಬೇಕಾದ ವಿಷಯವು, ನಿಮ್ಮ ಟಿವಿ ವೀಕ್ಷಣ, ಫೋನಿನಲ್ಲಿ ಮಾತನಾಡುವ, ಅಥವಾ ವೆಬ್‌ ಸೈಟ್‌ನಲ್ಲಿ ಸರ್ಫ್‌ ಮಾಡುವ ಹವ್ಯಾಸಗಳಿಗಾಗಿ ಎಷ್ಟು ಸಮಯವನ್ನು ವ್ಯಯಿಸುತ್ತೀರೆಂಬುದನ್ನು ಪರೀಕ್ಷಿಸುವುದೇ ಆಗಿದೆ!

ಮೊದಲು ಮಾಡಬೇಕಾದದ್ದನ್ನು ಮೊದಲು ಮಾಡಿ

ಇದರ ಅರ್ಥ, ನೀವು ಟಿವಿಯನ್ನು ಬಿಸಾಡಿಬಿಡಬೇಕು ಇಲ್ಲವೆ ಸನ್ಯಾಸಿಯಾಗಬೇಕು ಎಂದಲ್ಲ. “ಮೊದಲು ಮಾಡಬೇಕಾದದ್ದನ್ನು ಮೊದಲು ಮಾಡಿ” ಎಂಬ ನಿಯಮವನ್ನು ನೀವು ನಿಮ್ಮದಾಗಿಸುವ ಅಗತ್ಯವಿರಬಹುದು. ಅನ್ವಯಿಸಿಕೊಳ್ಳಬಲ್ಲ ಒಂದು ಬೈಬಲ್‌ ವಚನವು ಹೀಗೆ ತಿಳಿಸುತ್ತದೆ: “ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳನ್ನು ಖಚಿತಪಡಿಸಿಕೊಳ್ಳಿರಿ.” (ಫಿಲಿಪ್ಪಿ 1:​10, NW) ಉದಾಹರಣೆಗೆ, ನಿಮ್ಮ ವಿದ್ಯಾಭ್ಯಾಸವು ಪ್ರಾಮುಖ್ಯವಾಗಿರುವುದರಿಂದ, ನಿಮ್ಮ ಮನೆಗೆಲಸಗಳನ್ನು, ಕ್ರೈಸ್ತ ಕೂಟಗಳ ತಯಾರಿಯನ್ನು, ಮತ್ತು ನಿಮ್ಮ ಹೋಮ್‌ವರ್ಕ್‌ ಅನ್ನು ಮಾಡಿಮುಗಿಸುವ ತನಕ ಟಿವಿಯನ್ನು ಹಾಕುವುದಿಲ್ಲ ಎಂಬ ನಿಯಮವನ್ನು ನಿಮಗೆ ನೀವೇ ಮಾಡಿಕೊಳ್ಳಬಲ್ಲಿರಿ. ನಿಮ್ಮ ಮೆಚ್ಚಿನ ಟಿವಿ ಕಾರ್ಯಕ್ರಮವನ್ನು ನೋಡದೇ ಇರುವುದು ಕಷ್ಟಕರವಾಗಿರಬಲ್ಲದು ಎಂಬುದು ಒಪ್ಪತಕ್ಕ ಸಂಗತಿ. ಆದರೆ ಎಷ್ಟು ಬಾರಿ ನೀವು ನಿಮ್ಮ ಮೆಚ್ಚಿನ ಟಿವಿ ಕಾರ್ಯಕ್ರಮವನ್ನು ಮಾತ್ರ ನೋಡುತ್ತೇನೆಂದು ಕುಳಿತುಕೊಂಡು ಆಮೇಲೆ ಇಡೀ ಸಾಯಂಕಾಲವನ್ನು ಬೇರೆ ಯಾವುದೇ ಕೆಲಸವನ್ನು ಮಾಡದೆ ಬರೀ ಟಿವಿಯ ಮುಂದೆ ಕಳೆದಿಲ್ಲ?

ಇನ್ನೊಂದು ಬದಿಯಲ್ಲಿ, ಕ್ರೈಸ್ತ ಕೂಟಗಳಿಗೆ ಹಾಜರಾಗುವುದಕ್ಕೆ ಸಹ ನೀವು ಸಾಕಷ್ಟು ಮಹತ್ವವನ್ನು ನೀಡಬೇಕು. ಉದಾಹರಣಗೆ, ಶೀಘ್ರದಲ್ಲಿಯೇ ಒಂದು ಪ್ರಾಮುಖ್ಯ ಪರೀಕ್ಷೆ ನಡೆಯಲಿದೆ ಅಥವಾ ಹೋಮ್‌ವರ್ಕ್‌ ನೇಮಕ ಸಿಗಲಿದೆ ಎಂದು ನಿಮಗೆ ಈಗಾಗಲೇ ತಿಳಿದಿರುವುದಾದರೆ, ಅದಕ್ಕೆ ಬೇಕಾದ ತಯಾರಿಯನ್ನು ಮುಂಚಿತವಾಗಿಯೇ ಮಾಡುವ ಮೂಲಕ ಅದು ನಿಮ್ಮ ಕೂಟಗಳನ್ನು ತಡೆಯದಂತೆ ನೀವು ನೋಡಿಕೊಳ್ಳಬಹುದು. ನಿಮ್ಮ ಪರಿಸ್ಥಿತಿಯನ್ನು ನಿಮ್ಮ ಅಧ್ಯಾಪಕರಿಗೆ ತಿಳಿಸಲು ಸಹ ಪ್ರಯತ್ನಿಸಿರಿ. ಕೂಟಗಳಿರುವ ಸಾಯಂಕಾಲಗಳಂದು ಮಾಡಬೇಕಾಗಿರುವ ಯಾವುದೇ ಹೋಮ್‌ವರ್ಕ್‌ ನೇಮಕಗಳನ್ನು ಮುಂಚಿತವಾಗಿಯೇ ತಿಳಿಸುವುದಾದರೆ ಅದು ಬಹಳಷ್ಟು ಸಹಾಯಕರವಾಗಿರುವುದು ಎಂಬುದನ್ನು ನೀವು ಅವರಿಗೆ ತಿಳಿಯಪಡಿಸಬಹುದು. ಕೆಲವು ಅಧ್ಯಾಪಕರು ನಿಮ್ಮೊಂದಿಗೆ ಸಹಕರಿಸಲು ಇಚ್ಛಿಸಬಹುದು.

ಇನ್ನೊಂದು ಸಹಾಯಕಾರಿ ಮೂಲತತ್ತ್ವವು, ಯೇಸುವಿನ ಒಬ್ಬಾಕೆ ಸ್ನೇಹಿತೆಯಾದ ಮಾರ್ಥಳ ಕುರಿತಾದ ಬೈಬಲ್‌ ವೃತ್ತಾಂತದಲ್ಲಿ ಕಲಿಸಲ್ಪಟ್ಟಿದೆ. ಅವಳು ಬಹಳ ಕಾರ್ಯಮಗ್ನಳೂ ಕಷ್ಟಪಟ್ಟು ದುಡಿಯುವವಳೂ ಆಗಿದ್ದಳು, ಆದರೆ ಅವಳು ತನ್ನ ಆದ್ಯತೆಗಳನ್ನು ಸರಿಯಾದ ಸ್ಥಾನದಲ್ಲಿಡಲು ತಪ್ಪಿಹೋದಳು. ಒಂದು ಸಂದರ್ಭದಲ್ಲಿ, ಬಹುಶಃ ಯೇಸುವಿಗಾಗಿ ಒಂದು ದೊಡ್ಡ ಔತಣವನ್ನು ತಯಾರಿಸಲು ಪ್ರಯತ್ನಿಸುತ್ತಾ ಅವಳು ಬಹಳ ದಣಿದುಹೋದಳು. ಆದರೆ ಅವಳ ಸಹೋದರಿಯಾದ ಮರಿಯಳು ಅವಳಿಗೆ ಸಹಾಯಮಾಡುವ ಬದಲು ಯೇಸುವಿನ ಬಳಿಯಲ್ಲಿ ಕುಳಿತು ಆಲಿಸುತ್ತಿದ್ದಳು. ಇದರ ಕುರಿತು ದೂರಿದಾಗ, ಯೇಸು ಅವಳಿಗೆ ಹೇಳಿದ್ದು: “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ. ಕೆಲವು ಮಾತ್ರ ಬೇಕಾದದ್ದು, ಅಥವಾ ಒಂದೇ, ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ; ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ.”​—⁠ಲೂಕ 10:​41, 42.

ಇದರಿಂದ ನಾವೇನನ್ನು ಕಲಿಯಬಲ್ಲೆವು? ವಿಷಯಗಳನ್ನು ಸರಳವಾಗಿಡಿರಿ. ನಿಮ್ಮ ಪರಿಸ್ಥಿತಿಯಲ್ಲಿ ನೀವು ಈ ಮೂಲತತ್ತ್ವವನ್ನು ಹೇಗೆ ಅನ್ವಯಿಸಿಕೊಳ್ಳಬಹುದು? ನೀವು ‘ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀರೋ’​—⁠ಬಹುಶಃ ನಿಮ್ಮ ಕಾಲತಖ್ತೆಯೊಳಗೆ ಹೋಮ್‌ವರ್ಕ್‌ ಮತ್ತು ಒಂದು ಪಾರ್ಟ್‌ ಟೈಮ್‌ ಕೆಲಸವನ್ನು ಹೊಂದಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದೀರೋ? ನಿಮಗೆ ಒಂದು ಉದ್ಯೋಗವಿರುವುದಾದರೆ, ನಿಮ್ಮ ಕುಟುಂಬಕ್ಕೆ ನಿಜವಾಗಿಯೂ ಹಣದ ಅಗತ್ಯವಿದೆಯೋ? ಅಥವಾ ನಿಮಗೆ ನಿಜವಾಗಿಯೂ ಅಗತ್ಯವಿಲ್ಲದ ಆದರೆ ನೀವು ಇಚ್ಛಿಸುವ ಎಲ್ಲಾ ವಸ್ತುಗಳನ್ನು ಖರೀದಿಸಸಾಧ್ಯವಾಗುವಂತೆ ಹೆಚ್ಚು ಹಣವನ್ನು ಗಳಿಸಲು ನೀವು ಬಯಸುತ್ತಿದ್ದೀರೋ?

ಉದಾಹರಣೆಗೆ, ಕೆಲವು ದೇಶಗಳಲ್ಲಿ ಯುವಕರು ತಮ್ಮದೇ ಆದ ಕಾರನ್ನು ಖರೀದಿಸಲು ಇಚ್ಛಿಸುತ್ತಾರೆ. “ಒಂದು ಕಾರನ್ನು ಹೊಂದಿರುವುದು ಬಹಳ ದುಬಾರಿಯ ವಿಷಯವಾಗಿರುವುದರಿಂದ, ಹೆಚ್ಚು ಹಣವನ್ನು ಸಂಪಾದಿಸುವ ಒತ್ತಡ ಇಂದಿರುವ ಯುವಕರ ಮೇಲೆ ಬಹಳಷ್ಟಿದೆ” ಎಂಬುದಾಗಿ ಪ್ರೌಢಶಾಲಾ ಸಲಹೆಗಾರ್ತಿ ಕ್ಯಾರನ್‌ ಟರ್ನರ್‌ ವಿವರಿಸುತ್ತಾರೆ. ಟರ್ನರ್‌ ಮುಂದುವರಿಸುವುದು: “ನೀವು ಬಹಳಷ್ಟು ವಿಷಯಗಳನ್ನು ಅಂದರೆ ದೊಡ್ಡ ಮೊತ್ತದ ಹೋಮ್‌ವರ್ಕ್‌ನೊಂದಿಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳು, ಉದ್ಯೋಗ ಮುಂತಾದ ವಿಷಯಗಳನ್ನು ನಿರ್ವಹಿಸಲು ಪ್ರಯತ್ನಿಸುವುದಾದರೆ ಅದು ನಿಮಗೆ ಒಂದು ಅಡ್ಡಿಯಾಗಿರಬಲ್ಲದು. ಅಷ್ಟುಮಾತ್ರವಲ್ಲದೆ, ಹಾಗೆ ಮಾಡುವ ಮೂಲಕ ವಿದ್ಯಾರ್ಥಿಗಳು ದೊಡ್ಡ ಹೊರೆಯನ್ನು ಅನುಭವಿಸುತ್ತಾರೆ.” ಅಗತ್ಯವಿಲ್ಲದಿದ್ದರೆ ಏಕೆ ನಿಮ್ಮ ಮೇಲೆ ನೀವೇ ಹೊರೆಯನ್ನು ಹೊರಿಸಿಕೊಳ್ಳಬೇಕು? ಒಂದುವೇಳೆ ನಿಮ್ಮ ಹೋಮ್‌ವರ್ಕ್‌ ಇದರಿಂದಾಗಿ ಬಾಧಿಸಲ್ಪಡುವಲ್ಲಿ ನೀವು ನಿಮ್ಮ ಉದ್ಯೋಗಕ್ಕಾಗಿ ಕಡಿಮೆ ಸಮಯವನ್ನು ವ್ಯಯಿಸಸಾಧ್ಯವಿದೆ ಇಲ್ಲವೆ ಉದ್ಯೋಗವನ್ನು ಬಿಟ್ಟುಬಿಡಸಾಧ್ಯವಿದೆ.

ಶಾಲೆಯಲ್ಲಿ ಸಮಯವನ್ನು “ಖರೀದಿಸಿರಿ”

ಶಾಲೆಯ ನಂತರದ ಸಮಯಗಳಲ್ಲಿ ನೀವು ಮಾಡುವ ಕೆಲಸಗಳಲ್ಲಿ ತುಸು ಹೊಂದಾಣಿಕೆಯನ್ನು ಮಾಡುವ ಮೂಲಕ ಕೆಲವು ತಾಸುಗಳನ್ನು ಗಳಿಸುವುದಕ್ಕೆ ಕೂಡಿಕೆಯಾಗಿ, ಶಾಲೆಯಲ್ಲಿರುವಾಗಲೇ ನಿಮ್ಮ ಸಮಯವನ್ನು ಇನ್ನೂ ಉತ್ತಮ ರೀತಿಯಲ್ಲಿ ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದರ ಬಗ್ಗೆ ಗಮನವನ್ನು ಕೊಡಿರಿ. “ಶಾಲೆಯ ಸಮಯದಲ್ಲಿಯೇ ಆದಷ್ಟು ಮಟ್ಟಿಗೆ ನನ್ನ ಹೋಮ್‌ವರ್ಕ್‌ ಅನ್ನು ಮಾಡಿಮುಗಿಸಲು ನಾನು ಪ್ರಯತ್ನಿಸುತ್ತೇನೆ. ಹೀಗೆ ಮಾಡುವ ಮೂಲಕ ನನಗೆ ಆ ದಿನದ ತರಗತಿಯಲ್ಲಿ ಏನಾದರೂ ಅರ್ಥವಾಗಿರದಿದ್ದರೆ ಅದನ್ನು ಕೂಡಲೆ ಅಧ್ಯಾಪಕರೊಂದಿಗೆ ಕೇಳಿ ತಿಳಿದುಕೊಳ್ಳುವ ಅವಕಾಶವೂ ಇರುತ್ತದೆ” ಎಂಬುದಾಗಿ ಹೋಸ್‌ವೇ ತಿಳಿಸುತ್ತಾನೆ.

ಪರಿಗಣಿಸಬೇಕಾದ ಇನ್ನೊಂದು ವಿಷಯವು, ನೀವು ಆರಿಸಿಕೊಳ್ಳುವ ಐಚ್ಛಿಕ ಪಾಠಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದೇ ಆಗಿದೆ. ನೀವು ಒಳಗೊಂಡಿರುವ ಪಠ್ಯೇತರ ಚಟುವಟಿಕೆಗಳನ್ನು ಸಹ ನೀವು ನಿಲ್ಲಿಸಿಬಿಡಲು ಇಚ್ಛಿಸಬಹುದು. ಈ ಎಲ್ಲಾ ಕ್ಷೇತ್ರಗಳಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ, ಅಧ್ಯಯನಕ್ಕಾಗಿ ನಿಮಗೆ ಹೆಚ್ಚಿನ ಸಮಯವು ದೊರಕಸಾಧ್ಯವಿದೆ.

ನಿಮ್ಮ ಸಮಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸುವುದು

ಒಳ್ಳೇದು, ನೀವು ತ್ಯಾಗಗಳನ್ನು ಮತ್ತು ಹೊಂದಾಣಿಕೆಗಳನ್ನು ಮಾಡಿ, ಸ್ವಲ್ಪ ಹೆಚ್ಚು ಸಮಯವನ್ನು ನಿಮ್ಮ ಹೋಮ್‌ವರ್ಕ್‌ಗಾಗಿ ಒಟ್ಟುಗೂಡಿಸಿದ್ದೀರೆಂದು ನೆನಸಿ. ಆದರೆ ಈಗ ಆ ಸಮಯವನ್ನು ನೀವು ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸುವಿರಿ? ಒಂದುವೇಳೆ ನೀವು ಒಟ್ಟುಗೂಡಿಸಿದ ಆ ಸಮಯದಲ್ಲಿ 50 ಪ್ರತಿಶತ ಹೆಚ್ಚು ಹೋಮ್‌ವರ್ಕ್‌ ಅನ್ನು ನೀವು ಮಾಡಶಕ್ತರಾದರೆ, ಅದು 50 ಪ್ರತಿಶತ ಹೆಚ್ಚು ಸಮಯವನ್ನು ನೀವು ಒಟ್ಟುಗೂಡಿಸಿದಕ್ಕೆ ಸಮಾನವಾಗಿರುವುದಿಲ್ಲವೇ? ನೀವು ಸಮಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸಲು ಇಲ್ಲಿ ಕೆಲವು ಸಲಹೆಗಳು ಕೊಡಲ್ಪಟ್ಟಿವೆ.

ಯೋಜನೆಯನ್ನು ಮಾಡಿ. ನಿಮ್ಮ ಹೋಮ್‌ವರ್ಕ್‌ ಅನ್ನು ಆರಂಭಿಸುವ ಮುನ್ನ ಈ ಕೆಲವು ವಿಷಯಗಳಿಗೆ ಸ್ವಲ್ಪ ಗಮನವನ್ನು ನೀಡಿರಿ: ಯಾವ ಪಠ್ಯ ವಿಷಯಕ್ಕೆ ಸಂಬಂಧಿಸಿದ ಹೋಮ್‌ವರ್ಕ್‌ ಅನ್ನು ನಾನು ಮೊದಲು ಮಾಡಬೇಕು? ಈ ನೇಮಕಕ್ಕೆ ಎಷ್ಟು ಸಮಯವನ್ನು ವ್ಯಯಿಸಬೇಕು? ಈ ನೇಮಕವನ್ನು ಪೂರೈಸಲು ಯಾವ ಸಲಕರಣೆಗಳು​—⁠ಪುಸ್ತಕಗಳು, ಕಾಗದ, ಪೆನ್‌, ಕ್ಯಾಲ್ಕ್ಯುಲೇಟರ್‌​—⁠ಬೇಕಾಗಿವೆ?

ಅಧ್ಯಯನಕ್ಕಾಗಿ ಸೂಕ್ತ ಸ್ಥಳವನ್ನು ಕಂಡುಕೊಳ್ಳಿ. ಪ್ರಾಮುಖ್ಯವಾಗಿ ಸ್ಥಳವು ಯಾವುದೇ ಅಪಕರ್ಷಣೆಯಿಂದ ವಿಮುಕ್ತವಾಗಿರಬೇಕು. ‘ನಿಮ್ಮ ಬಳಿ ಡೆಸ್ಕ್‌ ಇರುವುದಾದರೆ, ಅದನ್ನು ಉಪಯೋಗಿಸಿರಿ. ಹಾಸಿಗೆಯಲ್ಲಿ ಮಲಗಿಕೊಂಡಿರುವುದಕ್ಕಿಂತ ಕುಳಿತುಕೊಂಡಿರುವುದು ಮನಸ್ಸನ್ನು ಕೇಂದ್ರೀಕರಿಸಲು ಹೆಚ್ಚು ಸಹಾಯಮಾಡುತ್ತದೆ’ ಎಂಬುದಾಗಿ ಎಲೀಸ್‌ ಎಂಬ ಯುವತಿಯು ತಿಳಿಸುತ್ತಾಳೆ. ಒಂದುವೇಳೆ ನಿಮ್ಮದೇ ಆದ ಪ್ರತ್ಯೇಕ ಕೋಣೆ ನಿಮಗಿಲ್ಲದಿದ್ದರೆ, ನಿಮ್ಮ ಸಹೋದರ ಸಹೋದರಿಯರು ನಿಮ್ಮ ಅಧ್ಯಯನದ ಅವಧಿಯಲ್ಲಿ ನಿಮಗೆ ಯಾವುದೇ ತೊಂದರೆಯನ್ನು ಮಾಡದೆ ನಿಶ್ಶಬ್ದವಾಗಿರಲು ಇಚ್ಛಿಸಬಹುದು. ಅಥವಾ ನೀವು ಪಾರ್ಕ್‌ ಇಲ್ಲವೆ ಒಂದು ಸಾರ್ವಜನಿಕ ಲೈಬ್ರರಿಯನ್ನು ಉಪಯೋಗಿಸಸಾಧ್ಯವಿದೆ. ಒಂದುವೇಳೆ ನಿಮ್ಮದೇ ಆದ ಪ್ರತ್ಯೇಕ ಕೋಣೆ ನಿಮಗಿರುವುದಾದರೆ, ಟಿವಿಯನ್ನು ಹಾಕುವ ಮೂಲಕ ಇಲ್ಲವೆ ಅಡ್ಡಿಯನ್ನು ಉಂಟುಮಾಡುವ ಹಾಡನ್ನು ಹಾಕುವ ಮೂಲಕ ನೀವು ಅಧ್ಯಯನ ಮಾಡಲು ಮಾಡುತ್ತಿರುವ ಪ್ರಯತ್ನಗಳನ್ನು ಕುಂದಿಸಬೇಡಿರಿ.

ವಿರಾಮವನ್ನು ತೆಗೆದುಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ನೀವು ನಿಮ್ಮ ಮನಸ್ಸಿನ ಕೇಂದ್ರೀಕರಣವನ್ನು ಕಳೆದುಕೊಳ್ಳುತ್ತಿರುವುದಾದರೆ, ಒಂದು ಚಿಕ್ಕ ಬ್ರೇಕ್‌ ತೆಗೆದುಕೊಳ್ಳಿರಿ. ಹಾಗೆ ಮಾಡುವುದು, ನೀವು ಪುನಃ ಗಮನವನ್ನು ಕೇಂದ್ರೀಕರಿಸಲು ನಿಮಗೆ ಸಹಾಯಮಾಡಬಹುದು.

ವಿಳಂಬಿಸಬೇಡಿ. “ನಾನು ಯಾವಾಗಲೂ ವಿಳಂಬಿಸುವ ಸ್ವಭಾವದವಳು. ಕೊನೆಯ ಗಳಿಗೆಯ ತನಕ ಯಾವುದೇ ನೇಮಕವನ್ನು ನಾನು ಆರಂಭಿಸುವುದಿಲ್ಲ,” ಎಂಬುದಾಗಿ ಆರಂಭದಲ್ಲಿ ಉಲ್ಲೇಖಿಸಿದ ಕೇಟೀ ತಿಳಿಸುತ್ತಾಳೆ. ನಿಮ್ಮ ಹೋಮ್‌ವರ್ಕ್‌ ಅನ್ನು ಮಾಡಲು ನಿರ್ದಿಷ್ಟವಾದ ಸಮಯವನ್ನು ಗೊತ್ತುಮಾಡಿ ಅದಕ್ಕೆ ಅಂಟಿಕೊಳ್ಳುವ ಮೂಲಕ ವಿಳಂಬಿಸುವುದನ್ನು ತಡೆಯಿರಿ.

ಶಾಲಾಕೆಲಸವು ಪ್ರಾಮುಖ್ಯವಾಗಿದೆ, ಆದರೆ ಯೇಸು ಮಾರ್ಥಳಿಗೆ ತಿಳಿಸಿದಂತೆ ಆಧ್ಯಾತ್ಮಿಕ ಬೆನ್ನಟ್ಟುವಿಕೆಗಳು​—⁠‘ಉತ್ತಮ ಭಾಗಗಳು’​—⁠ಅತಿ ಪ್ರಾಮುಖ್ಯವಾದದ್ದಾಗಿವೆ. ಬೈಬಲ್‌ ಓದುವಿಕೆ, ಶುಶ್ರೂಷೆಯಲ್ಲಿನ ಭಾಗವಹಿಸುವಿಕೆ, ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಿ ಮುಂತಾದ ಪ್ರಾಮುಖ್ಯ ಚಟುವಟಿಕೆಗಳಿಗೆ ಹೋಮ್‌ವರ್ಕ್‌ ಅಡ್ಡಿಯಾಗದಂತೆ ನೋಡಿಕೊಳ್ಳಿರಿ. ಏಕೆಂದರೆ ಈ ಎಲ್ಲಾ ಆಧ್ಯಾತ್ಮಿಕ ವಿಷಯಗಳು ನಿಮ್ಮ ಜೀವನವನ್ನು ನಿತ್ಯನಿರಂತರಕ್ಕೂ ಸಮೃದ್ಧಗೊಳಿಸುವುದು!​—⁠ಕೀರ್ತನೆ 1:​1, 2; ಇಬ್ರಿಯ 10:​24, 25. (g04 1/22)

[ಪುಟ 23ರಲ್ಲಿರುವ ಚಿತ್ರಗಳು]

ಅನೇಕ ಚಟುವಟಿಕೆಗಳನ್ನು ಒಂದೇ ಸಮಯದಲ್ಲಿ ಮಾಡಲು ಪ್ರಯತ್ನಿಸುವುದು, ಹೋಮ್‌ವರ್ಕ್‌ಗಾಗಿ ಸಮಯವನ್ನು ಕಂಡುಕೊಳ್ಳುವುದನ್ನು ಕಷ್ಟಕರವನ್ನಾಗಿ ಮಾಡುವುದು

[ಪುಟ 23ರಲ್ಲಿರುವ ಚಿತ್ರ]

ವಿಷಯಗಳನ್ನು ಉತ್ತಮ ರೀತಿಯಲ್ಲಿ ಸಂಘಟಿಸುವುದು, ನಿಮ್ಮ ಹೋಮ್‌ವರ್ಕ್‌ಗಾಗಿ ಹೆಚ್ಚಿನ ಸಮಯವನ್ನು ಕಂಡುಕೊಳ್ಳಲು ಸಹಾಯಮಾಡಬಲ್ಲದು