ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇಘವಲಯದಲ್ಲಿನ ಜೀವನ

ಮೇಘವಲಯದಲ್ಲಿನ ಜೀವನ

ಮೇಘವಲಯದಲ್ಲಿನ ಜೀವನ

ಬೊಲಿವಿಯದ ಎಚ್ಚರ! ಲೇಖಕರಿಂದ

ನಿರ್ಜನ ಪ್ರದೇಶ, ಭವ್ಯ ಪ್ರಕೃತಿ ದೃಶ್ಯ, ಮತ್ತು ಕಾಲ್ನಡೆ, ಪರ್ವತಾರೋಹಣ, ಹಾಗೂ ಸ್ಕೀಇಂಗ್‌ಗೆ ಅತ್ಯುತ್ತಮ ಸಂದರ್ಭಗಳು ಅನೇಕ ಪ್ರವಾಸಿಗಳನ್ನು ಪರ್ವತಗಳಿಗೆ ಆಕರ್ಷಿಸುತ್ತವೆ. ಇದಕ್ಕೆ ಕೂಡಿಕೆಯಾಗಿ, ಈಗಾಗಲೇ ಕೋಟ್ಯಂತರ ಜನರು ಮೇಘಗಳ ವಿನ್ಯಾಸಕ್ಕೂ ಅತಿ ಎತ್ತರದಲ್ಲಿರುವ ಕಣಿವೆ ಪ್ರದೇಶಗಳಲ್ಲಿ ಮತ್ತು ಪ್ರಸ್ಥಭೂಮಿಗಳಲ್ಲಿ ನಿತ್ಯವೂ ಜೀವಿಸುತ್ತಿದ್ದಾರೆ. ಹಾಗಿದ್ದರೂ, ಅಷ್ಟೊಂದು ಉತ್ತುಂಗದಲ್ಲಿ ಜೀವಿಸುವುದು ಮನುಷ್ಯನ ಆರೋಗ್ಯ ಮತ್ತು ವಾಹನಗಳ ಮೇಲೆ ವಿಶಿಷ್ಟವಾದ ಪ್ರಭಾವಗಳನ್ನು ಬೀರುತ್ತದೆ ಮತ್ತು ಅವರ ಆಹಾರ ತಯಾರಿಕೆಯ ಮೇಲೆಯೂ ಪ್ರಭಾವಬೀರಬಹುದು. ಈ ಸಮಸ್ಯೆಗಳ ಮೂಲವು ಯಾವುದಾಗಿದೆ, ಮತ್ತು ಅವುಗಳನ್ನು ಹೇಗೆ ನಿಭಾಯಿಸಸಾಧ್ಯವಿದೆ? ಮೊದಲಾಗಿ, ನಿಜವಾಗಿಯೂ ಅಷ್ಟೊಂದು ಜನರು ಎತ್ತರದ ಪರ್ವತ ಪ್ರದೇಶಗಳಲ್ಲಿ ಜೀವಿಸುತ್ತಿದ್ದಾರೋ?

ಅನೇಕ ಪ್ರಸ್ಥಭೂಮಿ ಪ್ರದೇಶಗಳು ಈಗ ಆರ್ಥಿಕ ಬೆಳವಣಿಗೆ ಹೊಂದಿದ ಸ್ಥಳಗಳಾಗಿವೆ. ಮೆಕ್ಸಿಕೊ ಪಟ್ಟಣದ ಅನೇಕ ಲಕ್ಷಾಂತರ ಜನರು ಸಮುದ್ರ ಮಟ್ಟಕ್ಕಿಂತ 2,000 ಮೀಟರ್‌ಗಳಿಗಿಂತಲೂ ಹೆಚ್ಚು ಔನ್ನತ್ಯದಲ್ಲಿ ಜೀವಿಸುತ್ತಿದ್ದಾರೆ. ಅಮೆರಿಕದಲ್ಲಿನ ಕೊಲರಾಡೋದ ಡೆನ್‌ವರ್‌; ಕೆನ್ಯದ ನೈರೋಬಿ; ಮತ್ತು ದಕ್ಷಿಣ ಆಫ್ರಿಕದ ಜೊಹಾನಸ್‌ಬರ್ಗ್‌ ಸಮುದ್ರ ಮಟ್ಟಕ್ಕಿಂತ 1,500 ಮೀಟರ್‌ಗಳಿಗಿಂತಲೂ ಹೆಚ್ಚು ಎತ್ತರದಲ್ಲಿವೆ. ಹಿಮಾಲಯ ಪ್ರದೇಶಗಳಲ್ಲಿ ಲಕ್ಷಾಂತರ ಜನರು, ಸಮುದ್ರ ಮಟ್ಟಕ್ಕಿಂತ 3,000 ಮೀಟರ್‌ಗಳಿಗಿಂತಲೂ ಎತ್ತರದಲ್ಲಿ ಜೀವಿಸುತ್ತಾರೆ. ಆ್ಯಂಡಿಸ್‌ನಲ್ಲಿರುವ ಅನೇಕ ದೊಡ್ಡ ಪಟ್ಟಣಗಳು ಸಮುದ್ರ ಮಟ್ಟಕ್ಕಿಂತ 3,300 ಮೀಟರ್‌ಗಳಿಗಿಂತಲೂ ಹೆಚ್ಚು ಎತ್ತರದಲ್ಲಿವೆ, ಮತ್ತು ಅಲ್ಲಿನ ಗಣಿಕೆಲಸಗಾರರು 6,000 ಮೀಟರ್‌ಗಳ ಔನ್ನತ್ಯದಲ್ಲಿ ಕೆಲಸಮಾಡುತ್ತಾರೆ. ಇಷ್ಟೊಂದು ಜನರು ಪ್ರಸ್ಥಭೂಮಿಗಳಲ್ಲಿ ಜೀವಿಸುತ್ತಿರುವ ಕಾರಣ, ಮಾನವ ಶರೀರವು ಅಲ್ಲಿ ಜೀವಿಸಲು ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಅಧ್ಯಯನಮಾಡುವುದು ಬಹಳ ಸ್ವಾರಸ್ಯಕರವಾದ ವಿಷಯವಾಗಿ ಪರಿಣಮಿಸಿದೆ. ಈ ಅಧ್ಯಯನಗಳಿಂದ ತಿಳಿದುಕೊಂಡಿರುವ ವಿಷಯಗಳು, ನಿಮ್ಮ ದೇಹದ ಅದ್ಭುತಕರ ವಿನ್ಯಾಸದ ಕಡೆಗಿನ ನಿಮ್ಮ ಗಣ್ಯತೆಯನ್ನು ಇನ್ನೂ ಹೆಚ್ಚು ಆಳಗೊಳಿಸುತ್ತವೆ.

ಸಂಭಾವ್ಯ ಸಂಗತಿಗಳು

ಆ್ಯಂಡಿಸ್‌ ಪರ್ವತದ ತುದಿಯನ್ನು ತಲಪಿದಾಗ, ಡಗ್‌ಗೆ ಆದ ಅನಿಸಿಕೆ ಪ್ರಾತಿನಿಧಿಕ. ಅವನು ಹೇಳುವುದು: “ವಿಮಾನ ನಿಲ್ದಾಣದಲ್ಲಿ ನಮ್ಮ ಸೂಟ್‌ಕೇಸ್‌ ಅನ್ನು ಎತ್ತಿಕೊಂಡಾಗ, ನನಗೆ ಕೂಡಲೆ ತಲೆತಿರುಗಿ ಬೀಳುವ ಅನಿಸಿಕೆಯಾಯಿತು. ಸ್ವಲ್ಪ ಹೊತ್ತಿನಲ್ಲಿಯೇ ಅದು ಸರಿಯಾಯಿತಾದರೂ, ಮೊದಲ ಒಂದರಿಂದ ಎರಡು ವಾರಗಳ ತನಕ ನಾನು ತಲೆನೋವು ಮತ್ತು ಅರ್ಧಂಬರ್ಧ ನಿದ್ರೆಯಿಂದ ಕಷ್ಟಾನುಭವಿಸುತ್ತಿದ್ದೆ. ಉಸಿರುಗಟ್ಟಿದ ಅನಿಸಿಕೆಯೊಂದಿಗೆ ನಾನು ನಿದ್ದೆಯಿಂದ ಕೂಡಲೆ ಎಚ್ಚೆತ್ತುಕೊಳ್ಳುತ್ತಿದ್ದೆ. ನಂತರ, ಕೆಲವು ತಿಂಗಳಿನ ತನಕ ನನಗೆ ಹಸಿವೆಯೇ ಆಗುತ್ತಿರಲಿಲ್ಲ, ಬಹಳ ನಿತ್ರಾಣವಾಗುತ್ತಿತ್ತು, ಮತ್ತು ಹೆಚ್ಚು ನಿದ್ದೆಯ ಅಗತ್ಯವಿತ್ತು.” ಅವನ ಹೆಂಡತಿಯಾದ ಕ್ಯಾಟ್ಟೀ ಕೂಡಿಸುವುದು: “ಔನ್ನತ್ಯ ಪ್ರದೇಶದಲ್ಲಿನ ಸಮಸ್ಯೆಗಳ ಕುರಿತು ಜನರು ಮಾತನಾಡುತ್ತಿರುವಾಗ, ಅದೆಲ್ಲ ಅವರ ಭ್ರಮೆಯೆಂದು ನಾನು ಭಾವಿಸುತ್ತಿದ್ದೆ. ಆದರೆ ಈಗ ನನಗೆ ಅದು ನಿಜವೆಂದು ತಿಳಿದಿದೆ.”

ಡಗ್‌ ಅನುಭವಿಸಿದ ಅರ್ಧಂಬರ್ಧ ನಿದ್ರೆಯನ್ನು ವೈದ್ಯರು ನಿಯತಕಾಲಿಕ ಉಸಿರಾಟ ಸಮಸ್ಯೆ ಎಂದು ಕರೆದರು. ಇತ್ತೀಚೆಗೆ ಎತ್ತರ ಪ್ರದೇಶಕ್ಕೆ ಸ್ಥಳಾಂತರಿಸಿರುವ ಜನರಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಒಂದುವೇಳೆ ನಿಮಗೆ ಅದು ಸಂಭವಿಸುವಲ್ಲಿ ನೀವು ಅದರಿಂದಾಗಿ ಬಹಳ ಭಯಭೀತರಾಗಬಹುದು. ನಿಜವಾಗಿ ಸಂಭವಿಸುವುದೇನೆಂದರೆ, ನೀವು ನಿದ್ರಿಸುತ್ತಿರುವಾಗ, ಮಧ್ಯೆಮಧ್ಯೆ ಉಸಿರಾಡುವುದನ್ನು ಕೆಲವು ಸೆಕೆಂಡಿನ ವರೆಗೆ ನಿಲ್ಲಿಸಿಬಿಡುತ್ತೀರಿ. ಕೆಲವೊಮ್ಮೆ ಇದು, ನೀವು ಏದುಸಿರುಬಿಡುತ್ತಾ ತಕ್ಷಣವೇ ಎಚ್ಚತ್ತುಕೊಳ್ಳುವಂತೆ ಮಾಡುತ್ತದೆ.

ಕೆಲವು ಜನರಿಗೆ ಔನ್ನತ್ಯ ಪ್ರದೇಶಕ್ಕೆ ಬಂದು ತಲಪಿದ ನಂತರ ಯಾವ ಸಮಸ್ಯೆಯೂ ಇರುವುದಿಲ್ಲ. ಕೆಲವು ಜನರು, 2,000 ಮೀಟರ್‌ ಎತ್ತರದ ಪ್ರದೇಶದಲ್ಲಿ ಅಹಿತಕರ ಪ್ರತಿಕ್ರಿಯೆಗಳನ್ನು ಅನುಭವಿಸುತ್ತಾರೆ. 3,000 ಮೀಟರ್‌ ಎತ್ತರದಲ್ಲಿ ಸುಮಾರು ಅರ್ಧದಷ್ಟು ಮಂದಿ ಹೊಸಬರು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಆಸಕ್ತಿಕರವಾದ ವಿಷಯವೇನೆಂದರೆ, ಈ ಎತ್ತರ ಪ್ರದೇಶದ ನಿವಾಸಿಗಳು ಸಹ ಕೇವಲ ಒಂದು ಅಥವಾ ಎರಡು ವಾರಗಳಿಗಾಗಿ ತಗ್ಗುಪ್ರದೇಶಕ್ಕೆ ಹೋಗಿ ಹಿಂದಿರುಗಿ ಬಂದಾಗ ಇದೇ ರೀತಿಯ ಪ್ರತಿಕ್ರಿಯೆಗಳನ್ನು ಅನುಭವಿಸುತ್ತಾರೆ. ಏಕೆ?

ಎತ್ತರ ಪ್ರದೇಶ ನಿಮ್ಮ ಶರೀರವನ್ನು ಬಾಧಿಸಲು ಕಾರಣ

ಆಮ್ಲಜನಕದ ಕೊರತೆಯೇ ಹೆಚ್ಚಿನ ಸಮಸ್ಯೆಗೆ ಕಾರಣವಾಗಿದೆ. ಏಕೆಂದರೆ ನೀವು ಎಷ್ಟು ಎತ್ತರಕ್ಕೆ ಹೋಗುತ್ತೀರೋ ವಾತಾವರಣದ ಒತ್ತಡವು ಅಷ್ಟು ಕಡಿಮೆಯಾಗುತ್ತದೆ. ಸಮುದ್ರ ಮಟ್ಟದಿಂದ 2,000 ಮೀಟರ್‌ ಎತ್ತರಕ್ಕೆ ಹೋದರೆ ಅಲ್ಲಿನ ಗಾಳಿಯಲ್ಲಿ ಆಮ್ಲಜನಕವು ಸಾಮಾನ್ಯವಾದುದಕ್ಕಿಂತ 20 ಪ್ರತಿಶತ ಕಡಿಮೆಯಿರುತ್ತದೆ ಮತ್ತು 4,000 ಮೀಟರ್‌ ಎತ್ತರಕ್ಕೆ ಹೋದರೆ ಅಲ್ಲಿ 40 ಪ್ರತಿಶತ ಕಡಿಮೆ ಆಮ್ಲಜನಕವಿರುತ್ತದೆ. ಆಮ್ಲಜನಕದ ಕೊರತೆಯು ನಿಮ್ಮ ಶರೀರದ ಹೆಚ್ಚಿನ ಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಸ್ನಾಯುಗಳ ಕೆಲಸ ಕುಂಠಿತವಾಗಬಲ್ಲದು, ನಿಮ್ಮ ನರವ್ಯೂಹವು ಕಡಿಮೆ ಒತ್ತಡವನ್ನು ಸಹಿಸಶಕ್ತವಾಗಿರುತ್ತದೆ, ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಕೊಬ್ಬನ್ನು ಕರಗಿಸಶಕ್ತವಾಗಿರುವುದಿಲ್ಲ. ಸಾಮಾನ್ಯವಾಗಿ, ನಿಮ್ಮ ಶರೀರಕ್ಕೆ ಹೆಚ್ಚು ಆಮ್ಲಜನಕದ ಅಗತ್ಯವಿದ್ದಾಗ, ನೀವು ಕೂಡಲೆ ತನ್ನಷ್ಟಕ್ಕೆ ತಾನೇ ಹೆಚ್ಚು ಬಿರುಸಾಗಿ ಉಸಿರಾಡುವುದನ್ನು ಆರಂಭಿಸುತ್ತೀರಿ ಮತ್ತು ಈ ಮೂಲಕ ಆಮ್ಲಜನಕದ ಅಗತ್ಯವು ಪೂರೈಸಲ್ಪಡುತ್ತದೆ. ಆದರೆ ನೀವು ಎತ್ತರ ಪ್ರದೇಶಕ್ಕೆ ತಲಪಿದಾಗಲೂ ನಿಮ್ಮ ದೇಹವು ಏಕೆ ಈ ರೀತಿಯಾಗಿ ಪ್ರತಿಕ್ರಿಯಿಸುವುದಿಲ್ಲ?

ನಿಮ್ಮ ಶರೀರವು ಉಸಿರಾಟದ ಪ್ರಮಾಣವನ್ನು ಹೇಗೆ ಹತೋಟಿಯಲ್ಲಿಡುತ್ತದೆ ಎಂಬುದು ಇನ್ನೂ ಸರಿಯಾಗಿ ಅರ್ಥವಾಗದ ವಿಸ್ಮಯಕರ ಸಂಗತಿಯಾಗಿದೆ. ಆದರೆ ನೀವು ಯಾವುದಾದರೂ ಕಠಿಣ ಕೆಲಸವನ್ನು ಮಾಡಿದಾಗ ಹೆಚ್ಚು ಬಿರುಸಾಗಿ ಉಸಿರಾಡುವುದು ಆಮ್ಲಜನಕದ ಕೊರತೆಯ ಕಾರಣದಿಂದಲ್ಲ. ಬದಲಾಗಿ, ಸ್ನಾಯುವಿನ ಚಟುವಟಿಕೆಯ ಕಾರಣದಿಂದ ಶರೀರದಲ್ಲಿ ಶೇಖರಿಸಲ್ಪಡುವ ಕಾರ್ಬನ್‌ ಡೈಆಕ್ಸೈಡ್‌ ತಾನೇ ನೀವು ಹೆಚ್ಚು ಉಸಿರಾಡುವಂತೆ ಮಾಡುವುದರಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಎತ್ತರ ಪ್ರದೇಶದಲ್ಲಿರುವಾಗಲೂ ನೀವು ಹೆಚ್ಚು ಉಸಿರಾಡುತ್ತೀರಿ, ಆದರೆ ಆಮ್ಲಜನಕದ ಕೊರತೆಯನ್ನು ಸರಿದೂಗಿಸಲು ಸಾಕಾಗುವಷ್ಟಲ್ಲ.

ತಲೆನೋವನ್ನು ಯಾವುದು ಉಂಟುಮಾಡುತ್ತದೆ? ಬೊಲಿವಿಯದ ಲ ಪಾಸ್‌ ನಗರದಲ್ಲಿ ನಡೆಸಲ್ಪಟ್ಟ, ಔನ್ನತ್ಯ ಪ್ರದೇಶ ಔಷಧ ಮತ್ತು ಶರೀರ ವಿಜ್ಞಾನದ ಪ್ರಥಮ ಲೋಕ ಸಮ್ಮೇಳನದಲ್ಲಿ ಒಬ್ಬ ಭಾಷಣಕರ್ತನು ವಿವರಿಸಿದ್ದು, ಔನ್ನತ್ಯ ಪ್ರದೇಶಕ್ಕೆ ತಲಪಿದಾಗ ಆಗುವ ಹೆಚ್ಚಿನ ಸಮಸ್ಯೆಗಳು ಮಿದುಳಿನಲ್ಲಿ ಶೇಖರಿಸಲ್ಪಡುವ ಒಂದು ರೀತಿಯ ದ್ರವದ ಪರಿಣಾಮವಾಗಿದೆ. ಕೆಲವು ವ್ಯಕ್ತಿಗಳಲ್ಲಿ ಇದು ತಲೆಯೊಳಗೆ ಒತ್ತಡವನ್ನು ಉಂಟುಮಾಡುತ್ತದೆ. ತಲೆಬುರುಡೆಯ ಗಾತ್ರದ ಕಾರಣ, ಕೆಲವು ವ್ಯಕ್ತಿಗಳು ಈ ಪರಿಣಾಮಗಳನ್ನು ಅನುಭವಿಸುವುದಿಲ್ಲ. ಹಾಗಿದ್ದರೂ, ವಿರಳ ವಿದ್ಯಮಾನಗಳಲ್ಲಿ ಜೀವಕ್ಕೆ ಅಪಾಯಕರವಾದ ಸನ್ನಿವೇಶ ಉಂಟಾಗಸಾಧ್ಯವಿದೆ. ಸ್ನಾಯುವಿನ ಹತೋಟಿ ಕಳೆದುಕೊಳ್ಳುವಿಕೆ, ದೃಷ್ಟಿಮಾಂದ್ಯ, ಭ್ರಾಂತಿಗಳು, ಮತ್ತು ಮಾನಸಿಕ ಅಸ್ತವ್ಯಸ್ತ ಮುಂತಾದ ಸೂಚನೆಗಳು ಕಂಡುಬಂದಲ್ಲಿ ಕೂಡಲೆ ವೈದ್ಯರ ಸಹಾಯವನ್ನು ಪಡೆಯುವ ಅಗತ್ಯವಿದೆ. ಅಷ್ಟುಮಾತ್ರವಲ್ಲದೆ, ಅಂತಹ ಸಮಯದಲ್ಲಿ ಕೂಡಲೆ ತಗ್ಗುಪ್ರದೇಶಕ್ಕೆ ಸ್ಥಳಾಂತರಿಸಬೇಕು.

ವಿವೇಚನೆಯ ಮುಂಜಾಗ್ರತೆಗಳು

ಎತ್ತರ ಪ್ರದೇಶಕ್ಕೆ ಬಂದು ತಲಪಿದ ಎರಡನೆಯ ಇಲ್ಲವೆ ಮೂರನೆಯ ದಿನದಂದು ನಕಾರಾತ್ಮಕ ಪ್ರಭಾವಗಳು ಅತಿಯಾಗಿ ತೋರಿಬರುತ್ತವೆ, ಆದುದರಿಂದ ಅಲ್ಲಿಗೆ ತಲಪುವ ಕೆಲವು ದಿನಗಳ ಮುಂಚೆ ಮತ್ತು ಅಲ್ಲಿಗೆ ತಲಪಿದ ನಂತರ ಕೆಲವು ದಿನಗಳ ವರೆಗೆ, ಕಡಿಮೆ ಆಹಾರವನ್ನು​—⁠ಪ್ರಾಮುಖ್ಯವಾಗಿ ರಾತ್ರಿಯಲ್ಲಿ​—⁠ಸೇವಿಸುವುದು ಉತ್ತಮ. ಅಲ್ಲಿಗೆ ತಲಪಿದ ನಂತರ, ಕೊಬ್ಬುಭರಿತ ಆಹಾರವನ್ನು ಸೇವಿಸುವ ಬದಲಾಗಿ, ಅನ್ನ, ಓಟ್ಸ್‌, ಹಾಗೂ ಆಲುಗಡ್ಡೆ ಮುಂತಾದ ಕಾರ್ಬೋಹೈಡ್ರೇಟ್‌ ಅನ್ನು ಹೊಂದಿದ ಆಹಾರವನ್ನು ಸೇವಿಸುವುದು ಉತ್ತಮ. “ರಾಜನಂತೆ ಬೆಳಗ್ಗಿನ ಉಪಹಾರವನ್ನು ಸೇವಿಸು, ಆದರೆ ಭಿಕ್ಷುಕನಂತೆ ರಾತ್ರಿ ಊಟವನ್ನು ಸೇವಿಸು” ಎಂಬ ಹೇಳಿಕೆಗೆ ಗಮನಕೊಡುವುದು ಉತ್ತಮವಾಗಿರಬಹುದು. ಅಷ್ಟುಮಾತ್ರವಲ್ಲದೆ, ಶಾರೀರಿಕವಾಗಿ ಹೆಚ್ಚು ಶ್ರಮಪಡುವುದನ್ನು ತಡೆಗಟ್ಟಿರಿ ಏಕೆಂದರೆ ಅದು ಎತ್ತರ ಪ್ರದೇಶದಲ್ಲಿ ಉಂಟಾಗಬಹುದಾದ ಅನಾರೋಗ್ಯವನ್ನು ಇನ್ನಷ್ಟು ಹೆಚ್ಚಾಗಿಸಬಲ್ಲದು. ಯುವಜನರು ಈ ಬುದ್ಧಿವಾದವನ್ನು ಕಡೆಗಣಿಸುವುದರಿಂದ ಇಂಥ ಸಮಸ್ಯೆಗಳಿಗೆ ಅವರು ಹೆಚ್ಚಾಗಿ ತುತ್ತಾಗುತ್ತಾರೆ.

“ಟೋಪಿಯನ್ನು ಧರಿಸಿಕೊಳ್ಳಿ, ಮತ್ತು ಬಿಸಿಲಿನ ಕಿರಣಗಳಿಂದ ಚರ್ಮವನ್ನು ರಕ್ಷಿಸುವ ಕ್ರೀಮ್‌ ಅನ್ನು ಹಚ್ಚಿಕೊಳ್ಳಿ” ಎಂಬ ಬುದ್ಧಿವಾದವು ಸಹ ಉತ್ತಮವಾದದ್ದಾಗಿದೆ, ಏಕೆಂದರೆ ಈ ಸ್ಥಳದಲ್ಲಿ, ನಿಮ್ಮನ್ನು ಸೂರ್ಯನ ಅಪಾಯಕಾರಿ ಕಿರಣಗಳಿಂದ ರಕ್ಷಿಸಲು ಬೇಕಾಗುವುದಕ್ಕಿಂತ ಕಡಿಮೆ ಅನಿಲಾವರಣವಿದೆ. ಈ ಕಿರಣಗಳು ನಿಮ್ಮ ಕಣ್ಣುಗಳಿಗೆ ವೇದನೆಯನ್ನು ಮಾತ್ರವಲ್ಲ ಹಾನಿಯನ್ನೂ ಉಂಟುಮಾಡಬಲ್ಲವು. ಆದುದರಿಂದ, ಉತ್ತಮ ಗುಣಮಟ್ಟದ ಸೂರ್ಯಕಿರಣ ರಕ್ಷಕ ಕನ್ನಡಕವನ್ನು ಉಪಯೋಗಿಸಿರಿ. ಪರ್ವತ ಪ್ರದೇಶದ ಗಾಳಿಯು ನಿಮ್ಮ ಕಣ್ಣಿನ ದ್ರವವನ್ನು ಇಂಗಿಸುವುದರಿಂದ, ಅದು ನಿಮ್ಮ ಕಣ್ಣುಗಳಿಗೆ ಇನ್ನಷ್ಟು ವೇದನೆಯನ್ನು ಉಂಟುಮಾಡಬಹುದು. ಆದುದರಿಂದ, ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿರಿ.

ಅತಿಯಾದ ದೇಹ ತೂಕವನ್ನು ಹೊಂದಿರುವ ಇಲ್ಲವೆ ಅಧಿಕ ರಕ್ತದೊತ್ತಡ, ಸಿಕ್‌ಲ್‌ ಸೆಲ್‌ ಅನೀಮಿಅ, ಹೃದಯ ಅಥವಾ ಶ್ವಾಸಕೋಶದ ರೋಗ ಮುಂತಾದ ಪರಿಸ್ಥಿತಿಯಲ್ಲಿರುವ ಜನರು, ಅತಿ ಎತ್ತರ ಪ್ರದೇಶಕ್ಕೆ ಭೇಟಿನೀಡುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳುವಂತೆ ವೈದ್ಯರು ಎಚ್ಚರಿಸಿದ್ದಾರೆ. * ನಿಮಗೆ ಗಂಭೀರವಾದ ಶೀತ, ಅಸ್ಥಿಗತ ಶ್ವಾಸನಾಳಗಳ ಉರಿಯೂತ, ಇಲ್ಲವೆ ನ್ಯುಮೋನಿಯವಿರುವುದಾದರೆ, ಅತಿ ಎತ್ತರ ಪ್ರದೇಶಕ್ಕಾಗಿನ ನಿಮ್ಮ ಭೇಟಿಯನ್ನು ಮುಂದೂಡುವುದು ಉತ್ತಮ. ಏಕೆಂದರೆ, ಅತಿ ಎತ್ತರ ಪ್ರದೇಶದ ಜೊತೆಗೆ ಉಸಿರಾಟದ ಸೋಂಕುಗಳು ಇಲ್ಲವೆ ಅತಿಯಾದ ಶಾರೀರಿಕ ವ್ಯಾಯಾಮವು ಸೇರಿದಾಗ, ಜೀವಕ್ಕೆ ಬೆದರಿಕೆಯನ್ನೊಡ್ಡುವಷ್ಟರ ಮಟ್ಟಿಗೆ ಶ್ವಾಸಕೋಶದಲ್ಲಿ ದ್ರವವು ಶೇಖರಿಸಲ್ಪಡಸಾಧ್ಯವಿದೆ. ಉಸಿರಾಟದ ಸಮಸ್ಯೆಯು, ಜೀವನಪರ್ಯಂತ ಪ್ರಸ್ಥಭೂಮಿಯಲ್ಲಿ ಜೀವಿಸಿದ ಜನರಲ್ಲಿಯೂ ಆಮ್ಲಜನಕದ ಕೊರತೆಯನ್ನು ಉಂಟುಮಾಡಬಲ್ಲದು ಮತ್ತು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಅವರು ಅನುಭವಿಸಸಾಧ್ಯವಿದೆ. ಇನ್ನೊಂದು ಬದಿಯಲ್ಲಿ, ಎತ್ತರ ಪ್ರದೇಶದಲ್ಲಿ ಜೀವಿಸುವುದು ಉಬ್ಬಸ ರೋಗಿಗಳಿಗೆ ಅನೇಕವೇಳೆ ಸೂಕ್ತವೆನಿಸಬಹುದು. ವಾಸ್ತವದಲ್ಲಿ, ಉಬ್ಬಸ ರೋಗಿಗಳನ್ನು ನಾವು ಒಂದು ಚಿಕಿತ್ಸೆಯೋಪಾದಿ ಎತ್ತರ ಪ್ರದೇಶದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುತ್ತೇವೆ ಎಂಬುದಾಗಿ ರಷ್ಯದ ವೈದ್ಯರ ಒಂದು ಗುಂಪು, ಔನ್ನತ್ಯ ಪ್ರದೇಶದ ಔಷಧ ಮತ್ತು ಶರೀರ ವಿಜ್ಞಾನದ ಪ್ರಥಮ ಲೋಕ ಸಮ್ಮೇಳನಕ್ಕೆ ವರದಿಸಿತು.

ಎತ್ತರ ಪ್ರದೇಶದ ನಿವಾಸಿಗಳಾಗುವುದು

ಎತ್ತರ ಪ್ರದೇಶದಲ್ಲಿ ಜೀವಿಸಲು ಭಯಪಡಬೇಕಾದ ಅಗತ್ಯವೇನೂ ಇಲ್ಲ. ವಾಸ್ತವದಲ್ಲಿ, ಕಾಕಸಸ್‌ ಪರ್ವತ ಪ್ರದೇಶಗಳಂಥ ಕೆಲವು ಪ್ರಸ್ಥಭೂಮಿಗಳು, ದೀರ್ಘಾಯುಷಿಗಳಾಗಿ ಜೀವಿಸುವ ಅನೇಕ ನಿವಾಸಿಗಳಿಗೆ ಪ್ರಖ್ಯಾತವಾಗಿವೆ. ಅಷ್ಟುಮಾತ್ರವಲ್ಲದೆ, ಕೆಲವು ವ್ಯಕ್ತಿಗಳು ಬಹಳ ವರುಷಗಳಿಂದ ತುಂಬ ಎತ್ತರದ ಪ್ರದೇಶಗಳಲ್ಲಿ ಜೀವಿಸುತ್ತಾ ಬಂದಿದ್ದಾರೆ. ಆ್ಯಂಡಿಸ್‌ನಲ್ಲಿರುವ ಎಚ್ಚರ! ಪತ್ರಿಕೆಯ ವಾಚಕನೊಬ್ಬನು ತಿಳಿಸುವುದು: “ಒಂದು ಜ್ವಾಲಾಮುಖಿಯ ತುದಿಯ ಹತ್ತಿರದಲ್ಲಿ, ಸಮುದ್ರದಿಂದ 6,000 ಮೀಟರ್‌ [19,500 ಅಡಿ] ಎತ್ತರದಲ್ಲಿದ್ದ ಒಂದು ಗಣಿಯಲ್ಲಿ ನಾನು 13 ವರುಷ ಕೆಲಸಮಾಡಿದ್ದೆ. ಚಮ್ಮಟಿಗೆಯಿಂದ ಗಂಧಕದ ತುಂಡುಗಳನ್ನು ಪುಡಿಮಾಡುವುದು ಅತಿ ಕಷ್ಟಕರ ಕೆಲಸವಾಗಿತ್ತು. ಆದರೂ, ದಿನದ ಅಂತ್ಯದಲ್ಲಿ, ನಾವು ಫುಟ್‌ಬಾಲ್‌ ಆಟವನ್ನು ಆಡುತ್ತಿದ್ದೆವು!” ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಎಷ್ಟೊಂದು ಅದ್ಭುತಕರವಾದ ಸಾಮರ್ಥ್ಯವನ್ನು ಮಾನವ ಶರೀರವು ಹೊಂದಿದೆ ಎಂದರೆ ನಾವು ಸೃಷ್ಟಿಕರ್ತನ ವಿವೇಕವನ್ನು ಆಲೋಚಿಸಿ ಮೂಕವಿಸ್ಮಿತರಾಗುತ್ತೇವೆ. ಎತ್ತರ ಪ್ರದೇಶದಲ್ಲಿ ಉಂಟಾಗುವ ಆಮ್ಲಜನಕದ ಕೊರತೆಯನ್ನು ನಿಮ್ಮ ದೇಹವು ಹೇಗೆ ನಿಭಾಯಿಸುತ್ತದೆ?

ನೀವು ಎತ್ತರ ಪ್ರದೇಶಕ್ಕೆ ತಲಪಿದ ಕೂಡಲೆ, ನಿಮ್ಮ ಶರೀರದ ಮೊದಲ ಪ್ರತಿಕ್ರಿಯೆಯು ನಿಮ್ಮ ಹೃದಯ ಮತ್ತು ಶ್ವಾಸಕೋಶ ವೇಗವಾಗಿ ಕೆಲಸಮಾಡುವಂತೆ ಮಾಡುವುದೇ ಆಗಿದೆ. ನಂತರ, ನೀವು ನಿಮ್ಮ ರಕ್ತದಿಂದ ರಕ್ತರಸ (ಪ್ಲಾಸ್ಮಾ)ವನ್ನು ಕಳೆದುಕೊಳ್ಳುತ್ತೀರಿ. ಈ ಮೂಲಕ, ಕೇವಲ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತಕಣಗಳ ಮೇಲೆ ಶರೀರವು ಕೇಂದ್ರೀಕರಿಸುತ್ತದೆ. ಸ್ವಲ್ಪ ಸಮಯದೊಳಗಾಗಿ, ಹೆಚ್ಚಿನ ರಕ್ತವು ಅದು ಎಲ್ಲಿ ಹೆಚ್ಚು ಅಗತ್ಯವಾಗಿದೆಯೋ ಆ ಸ್ಥಳಕ್ಕೆ ಅಂದರೆ ನಿಮ್ಮ ಮಿದುಳಿಗೆ ರವಾನಿಸಲ್ಪಡುತ್ತದೆ. ಮತ್ತು ಕೆಲವೇ ತಾಸುಗಳೊಳಗಾಗಿ, ತಗ್ಗುಪ್ರದೇಶದಲ್ಲಿ ಉತ್ಪತ್ತಿಯಾದ ಕೆಂಪು ರಕ್ತಕಣಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಆಮ್ಲಜನಕವನ್ನು ರವಾನಿಸಬಲ್ಲ ಹೆಚ್ಚಿನ ಕೆಂಪು ರಕ್ತಕಣಗಳನ್ನು ಈಗಾಗಲೇ ನಿಮ್ಮ ಮೂಳೆ ಮಜ್ಜೆಯು ಉತ್ಪತ್ತಿಮಾಡಲು ಆರಂಭಿಸಿರುತ್ತದೆ. ಇದೆಲ್ಲದರ ಅರ್ಥವು, ಎತ್ತರ ಪ್ರದೇಶಕ್ಕೆ ಹೊಂದಿಕೊಳ್ಳಲು ನಿಮಗೆ ಕೆಲವು ತಿಂಗಳುಗಳು ತಗಲಬಹುದಾದರೂ, ನಿಮ್ಮ ಹೃದಯಬಡಿತ ಮತ್ತು ಉಸಿರಾಟವು ಕೇವಲ ಕೆಲವೇ ದಿನಗಳೊಳಗಾಗಿ ಸಾಮಾನ್ಯ ಸ್ಥಿತಿಗೆ ಬರುತ್ತದೆ.

ವಾಹನ ಉಪಯೋಗದ ಮತ್ತು ಆಹಾರ ತಯಾರಿಕೆಯ ಸಮಸ್ಯೆಗಳು

ಆಮ್ಲಜನಕದ ಕೊರತೆಯನ್ನು ಅನುಭವಿಸುವಂಥದ್ದು ನಿಮ್ಮ ಶರೀರ ಮಾತ್ರವೇ ಅಲ್ಲ. ನಿಮ್ಮ ವಾಹನವೂ ಸೋಮಾರಿಯಾಗಿಬಿಡುವಂತೆ ಕಾಣುತ್ತದೆ. ನಿಮ್ಮ ಸ್ಥಳಿಕ ಮೆಕ್ಯಾನಿಕ್‌ ಇಂಧನ ಮತ್ತು ಗಾಳಿ ಮಿಶ್ರಣವನ್ನು ಹೊಂದಾಣಿಸಿ, ಇಗ್ನಿಷನ್‌ ಸಮಯವನ್ನು ಹೆಚ್ಚಿಸಬಹುದಾದರೂ, ನಿಮ್ಮ ಇಂಜಿನ್‌ ಇನ್ನೂ ಕಡಿಮೆ ಶಕ್ತಿಯನ್ನು ಹೊಂದಿರುತ್ತದೆ. ಆದರೆ ಅಡುಗೆ ಮನೆಯಲ್ಲಿ ಏನು ಸಂಭವಿಸುತ್ತದೆ?

ಗಟ್ಟಿಯಾಗಿರುವ ದೋಸೆ, ಮುಟ್ಟಿದೊಡನೆ ಪುಡಿಪುಡಿಯಾಗುವ ಬ್ರೆಡ್‌, ಅರ್ಧ ಬೆಂದ ಬೀನ್ಸ್‌, ಮತ್ತು ನೀರು ನೀರಂತಿರುವ ಬೆಂದ ಮೊಟ್ಟೆ ಇವು ಮುಂತಾದವುಗಳು ಅಡಿಗೆಯನ್ನು ತಯಾರಿಸಿದವರ ಕಣ್ಣಿನಲ್ಲಿ ನೀರುಬರಿಸುವ ಕೆಲವು ಸಮಸ್ಯೆಗಳು. ಆದರೆ ಈ ಎಲ್ಲಾ ಸಂಗತಿಗಳು ಏಕೆ ಸಂಭವಿಸುತ್ತವೆ, ಮತ್ತು ಇದರ ಕುರಿತು ನೀವು ಏನು ಮಾಡಸಾಧ್ಯವಿದೆ?

ಬೇಕಿಂಗ್‌ ಮಾಡುವಾಗ ಆಗಾಗ ಗಮನಾರ್ಹವಾದ ಗಂಡಾಂತರಗಳು ಸಂಭವಿಸುವುದು ಸಹಜ. ಬ್ರೆಡ್‌ ಇಲ್ಲವೆ ಕೇಕ್‌ ಮುಂತಾದವುಗಳನ್ನು ಹೂವಿನಂತೆ ಮೃದುವಾಗಿಸುವ ಅನಿಲಗಳು, ಎತ್ತರ ಪ್ರದೇಶದಲ್ಲಿ ಗಾಳಿಯ ಒತ್ತಡ ಕಡಿಮೆಯಿರುವುದರಿಂದ ಸಮುದ್ರ ಮಟ್ಟದಲ್ಲಿ ಉಬ್ಬುವದಕ್ಕಿಂತಲೂ ಹೆಚ್ಚು ಉಬ್ಬುತ್ತದೆ. ಹಿಟ್ಟಿನಲ್ಲಿ ಉಂಟಾಗುವ ಚಿಕ್ಕಚಿಕ್ಕ ಗುಳ್ಳೆಗಳು ದೊಡ್ಡದಾಗುತ್ತವೆ. ಹೀಗೆ ಅದು ಅಗತ್ಯಕ್ಕಿಂತ ಹೆಚ್ಚು ದೊಡ್ಡದಾಗುವ ಕಾರಣ ಅದರಿಂದ ತಯಾರಿಸಿದ ಆಹಾರವಸ್ತು ಮುಟ್ಟಿದೊಡನೆ ಪುಡಿಪುಡಿಯಾಗುತ್ತದೆ. ಕೆಲವೊಮ್ಮೆ ಈ ಗುಳ್ಳೆಗಳು ಇನ್ನೂ ಹೆಚ್ಚು ಉಬ್ಬಿ ಒಡೆದುಹೋಗುತ್ತವೆ. ಹೀಗಾದಲ್ಲಿ, ಕೇಕ್‌ ಉಬ್ಬಿ, ಮೃದುವಾಗುವ ಬದಲು ಚಪ್ಪಟೆಯಾಗಿ ಗಟ್ಟಿಯಾಗುತ್ತದೆ. ಆದರೆ ಈ ಸಮಸ್ಯೆಯನ್ನು ಪರಿಹರಿಸುವುದು ಕಷ್ಟಕರವಲ್ಲ. ಒಂದುವೇಳೆ ಮಧಿಸಿದ ಮೊಟ್ಟೆಗಳಿಂದ ಕೇಕನ್ನು ಮೃದುಮಾಡಬೇಕಾದರೆ, ಅದನ್ನು ಹೆಚ್ಚು ಮಧಿಸಬೇಡಿರಿ. ಅಥವಾ ಕಿಣ್ವ ಇಲ್ಲವೆ ಬೇಕಿಂಗ್‌ ಪುಡಿ ಮುಂತಾದ ಹುಳಿಹಿಡಿಸುವ ಪದಾರ್ಥವನ್ನು ಹಾಕಿ ಮೃದುಗೊಳಿಸುವುದಾದರೆ, ಬಹಳ ಕಡಿಮೆ ಪ್ರಮಾಣವನ್ನು ಉಪಯೋಗಿಸಿರಿ. ನೀವು ಸಮುದ್ರ ಮಟ್ಟದಿಂದ 600 ಮೀಟರ್‌ ಎತ್ತರದಲ್ಲಿದ್ದರೆ ಹುಳಿಹಿಡಿಸುವ ಪದಾರ್ಥವನ್ನು 25 ಪ್ರತಿಶತ ಕಡಿಮೆ ಉಪಯೋಗಿಸಿರಿ ಮತ್ತು 2,000 ಮೀಟರ್‌ ಎತ್ತರದಲ್ಲಿರುವಾಗ 75 ಪ್ರತಿಶತ ಕಡಿಮೆ ಉಪಯೋಗಿಸಿರಿ ಎಂಬುದಾಗಿ ಹೊಸ ಔನ್ನತ್ಯ ಪ್ರದೇಶ ಅಡಿಗೆಪುಸ್ತಕ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುತ್ತದೆ.

ಕಿಣ್ವವನ್ನು ಹಾಕಿ ಬ್ರೆಡ್‌ ತಯಾರಿಸುವಾಗ, ನಾದಿದ ಹಿಟ್ಟು ಇಮ್ಮಡಿಗಿಂತ ಹೆಚ್ಚು ಉಬ್ಬದಂತೆ ನೋಡಿಕೊಳ್ಳಿರಿ. ಮೊಟ್ಟೆಗಳು ಕೇಕಿನ ಕಣರಚನೆಯನ್ನು ಬಲಪಡಿಸುವುದರಿಂದ, ನಿಮ್ಮ ಪಾಕವಿಧಾನವನ್ನು ಹೊಂದಿಸಿಕೊಳ್ಳುವಾಗ ದೊಡ್ಡ ಮೊಟ್ಟೆಗಳನ್ನು ಉಪಯೋಗಿಸಿರಿ. ಆದರೆ ಹೆಚ್ಚು ಸಕ್ಕರೆ ಅದರ ಕಣರಚನೆಯನ್ನು ದುರ್ಬಲಗೊಳಿಸುವುದರಿಂದ ಕಡಿಮೆ ಸಕ್ಕರೆ ಉಪಯೋಗಿಸಿರಿ. ಏಕೆಂದರೆ, ಕಡಿಮೆ ಒತ್ತಡದ ವಾಯುವು ನೀರನ್ನು ಹೆಚ್ಚು ಬೇಗನೆ ಹೀರಿಕೊಳ್ಳುವುದರಿಂದ ಅದು ನಾದಿದ ಹಿಟ್ಟಿನಲ್ಲಿರುವ ಸಕ್ಕರೆಯನ್ನು ಒಂದೆಡೆ ಸೇರಿಸುತ್ತದೆ. ಎತ್ತರ ಪ್ರದೇಶದಲ್ಲಿ ತಯಾರಿಸುವ ಹೆಚ್ಚಿನ ಅಡಿಗೆಗೆ ಹೆಚ್ಚು ನೀರಿನ ಅಗತ್ಯವಿದೆ, ಏಕೆಂದರೆ ಅಲ್ಲಿನ ಒಣಗಾಳಿಯು ಆಹಾರದಲ್ಲಿನ ಪಸೆಯನ್ನು ಹೀರಿಕೊಳ್ಳುತ್ತದೆ.

ಎತ್ತರ ಪ್ರದೇಶದಲ್ಲಿ ಪ್ರತಿಯೊಂದು ಆಹಾರವೂ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಉದಾಹರಣೆಗೆ, 1,500 ಮೀಟರ್‌ ಎತ್ತರದಲ್ಲಿ ಮೊಟ್ಟೆಯನ್ನು ಬೇಯಿಸಲು ಒಂದು ನಿಮಿಷ ಹೆಚ್ಚು ಬೇಕಾಗುತ್ತದೆ ಮತ್ತು 3,000 ಮೀಟರ್‌ ಎತ್ತರದಲ್ಲಿ ಮೂರು ನಿಮಿಷ ಹೆಚ್ಚು ಬೇಕಾಗುತ್ತದೆ. ಆದುದರಿಂದ ಅಲ್ಲಿ ಪ್ರೆಷರ್‌ ಕುಕರ್‌ ಬಹಳ ಉಪಯುಕ್ತವಾಗಿರುತ್ತದೆ. ವಾಸ್ತವದಲ್ಲಿ, ಅತಿ ಎತ್ತರ ಪ್ರದೇಶದಲ್ಲಿ ಪ್ರೆಷರ್‌ ಕುಕರ್‌ ಇಲ್ಲದೆ ಬೀನ್ಸ್‌ ಮತ್ತು ಬಟಾಣಿಯನ್ನು ಬೇಯಿಸಸಾಧ್ಯವೇ ಇಲ್ಲ.

ಆದುದರಿಂದ ಪ್ರಸ್ಥಭೂಮಿ ಪ್ರದೇಶಗಳಿಗೆ ಭೇಟಿನೀಡಲು ಭಯಪಡಬೇಡಿರಿ. ಮೊದಲಿನ ಕೆಲವು ದಿನಗಳ ತನಕ ನೀವು ಏದುಸಿರುಬಿಡಬೇಕಾದೀತು, ನಿಮ್ಮ ದೋಸೆಯು ಒಣ ರೊಟ್ಟಿಯಂತೆ ಕಾಣಬಹುದು, ನಿಮ್ಮ ಓಡಿಸುತ್ತಿರುವ ಕಾರ್‌ ಸಂಧಿವಾತವಿದ್ದ ಆಮೆಯಂತೆ ಚಲಿಸಬಹುದು, ಆದರೆ ನೀವು ತಕ್ಕಮಟ್ಟಿಗೆ ಒಳ್ಳೇ ಆರೋಗ್ಯವನ್ನು ಹೊಂದಿರುವುದಾದರೆ, ಈ ಅನುಭವವು ನಿಮಗೆ ನಿಜವಾಗಿಯೂ ಹರ್ಷೋಲ್ಲಾಸವನ್ನು ಉಂಟುಮಾಡುವುದು. (g04 3/8)

[ಪಾದಟಿಪ್ಪಣಿ]

^ ಕೆಲವು ವೈದ್ಯರು, ಅತಿ ಎತ್ತರದ ಪ್ರದೇಶದಲ್ಲಿ ಉಸಿರಾಟವನ್ನು ಹೆಚ್ಚಿಸುವ ಸಲುವಾಗಿ ಅಸಿಟಸೋಲಮೈಡ್‌ ಮಾತ್ರೆಯನ್ನು ಶಿಫಾರಸ್ಸು ಮಾಡುತ್ತಾರೆ. ಪರ್ವತ ಪ್ರದೇಶಕ್ಕೆ ಸಂಬಂಧಿಸಿದ ರೋಗಗಳಿಗೆ ಬೇರೆ ಇತರ ಔಷಧಗಳೂ ಇವೆ, ಆದರೆ ಎಲ್ಲಾ ವೈದ್ಯರು ಅವುಗಳನ್ನು ಶಿಫಾರಸ್ಸು ಮಾಡುವುದಿಲ್ಲ.

[ಪುಟ 16, 17ರಲ್ಲಿರುವ ರೇಖಾಕೃತಿ/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಲೋಕದಾದ್ಯಂತವಿರುವ ಕೆಲವು ಔನ್ನತ್ಯ ಪಟ್ಟಣಗಳು ಮತ್ತು ಪರ್ವತಗಳು

9,000 ಮೀಟರ್‌

ಮೌಂಟ್‌ ಎವರೆಸ್ಟ್‌, ನೇಪಾಲ್‌ ಮತ್ತು ಚೀನ

8,850 ಮೀಟರ್‌

⁠7,500 ಮೀಟರ್‌​—

⁠6,000 ಮೀಟರ್‌​—

ಕಿಲಿಮಂಜಾರೊ ಪರ್ವತ, ಟಾನ್ಸೇನಿಯ

5,895 ಮೀಟರ್‌

ಅವುಕಾನ್‌ಕೀಲ್‌ಚಾ, ಚಿಲಿ

5,346 ಮೀಟರ್‌

ಮೌಂಟ್‌ ಬ್ಲಾನ್‌, ಫ್ರಾನ್ಸ್‌

4,807 ಮೀಟರ್‌

⁠4,500 ಮೀಟರ್‌​—

ಪೋಟಸೀ, ಬೊಲಿವಿಯ

4,180 ಮೀಟರ್‌

ಪ್ಯೂನೋ ನಗರ, ಪೆರೂ

3,826 ಮೀಟರ್‌

ಮೌಂಟ್‌ ಫೂಜಿ, ಜಪಾನ್‌

3,776 ಮೀಟರ್‌

ಲ ಪಾಸ್‌ ನಗರ, ಬೊಲಿವಿಯ

3,625 ಮೀಟರ್‌

—⁠3,000 ಮೀಟರ್‌​—

ಟ್ರನ್‌ಸಾ ಸಾನ್‌, ಭೂತಾನ್‌

2,398 ಮೀಟರ್‌

ಮೆಕ್ಸಿಕೊ ಸಿಟಿ, ಮೆಕ್ಸಿಕೊ

2,239 ಮೀಟರ್‌

ಮೌಂಟ್‌ ವಾಷಿಂಗ್ಟನ್‌,

ನ್ಯೂ ಹ್ಯಾಂಪ್‌ಶೈಯರ್‌, ಅಮೆರಿಕ

1,917 ಮೀಟರ್‌

ನೈರೋಬಿ, ಕೆನ್ಯ

1,675 ಮೀಟರ್‌

ಡೆನ್ವರ್‌, ಕಾಲರಾಡೊ, ಅಮೆರಿಕ

1,609 ಮೀಟರ್‌

—⁠1,500 ಮೀಟರ್‌​—

—⁠ಸಮುದ್ರ ಮಟ್ಟ​—⁠

[ಪುಟ 14ರಲ್ಲಿರುವ ಚಿತ್ರ]

ಲ ಪಾಸ್‌ ನಗರ, ಬೊಲಿವಿಯ 3,625 ಮೀಟರ್‌

[ಪುಟ 14ರಲ್ಲಿರುವ ಚಿತ್ರ]

ಜೊಹಾನಸ್‌ಬರ್ಗ್‌, ದಕ್ಷಿಣ ಆಫ್ರಿಕ 1,750 ಮೀಟರ್‌