ಸುಡುಮದ್ದುಗಳ ಕಡೆಗೆ ಒಂದು ಆಕರ್ಷಣೆ
ಸುಡುಮದ್ದುಗಳ ಕಡೆಗೆ ಒಂದು ಆಕರ್ಷಣೆ
ಒಂದು ಊರಿನ ಜಾತ್ರೆಯ ಆರಂಭದಲ್ಲಾಗಲಿ ಇಲ್ಲವೆ ಒಲಂಪಿಕ್ ಕ್ರೀಡೆಗಳ ಆರಂಭದಲ್ಲಾಗಲಿ, ಯಾವಾಗಲೂ ಸುಡುಮದ್ದುಗಳು ಮತ್ತು ಉತ್ಸವಾಚರಣೆಗಳು ಒಂದಕ್ಕೊಂದು ಆಪ್ತ ಸಂಬಂಧವನ್ನು ಹೊಂದಿರುತ್ತವೆ. ಅಮೆರಿಕದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಫ್ರಾನ್ಸ್ನಲ್ಲಿ ಬ್ಯಾಸ್ಟೀಲ್ ದಿನಾಚರಣೆಯನ್ನು ಆಚರಿಸಲು ಬೆಂಕಿಗಳ ಸ್ಫೋಟನಗಳನ್ನು ಉಪಯೋಗಿಸಲಾಗುತ್ತದೆ. ಅಷ್ಟುಮಾತ್ರವಲ್ಲದೆ, ಹೆಚ್ಚುಕಡಿಮೆ ಪ್ರತಿಯೊಂದು ದೊಡ್ಡ ನಗರಗಳಲ್ಲಿ ಡಿಸೆಂಬರ್ 31ರ ಸಂಜೆಯಂದು ಅಂದರೆ ಹೊಸ ವರುಷ ಆರಂಭಗೊಳ್ಳುವ ತುಸು ಮುಂಚೆ ಆಕಾಶವು ನಾನಾ ಬಣ್ಣಗಳಿಂದ ಮಿಣುಗುತ್ತಿರುತ್ತದೆ.
ಆದರೆ ಈ ಸುಡುಮದ್ದುಗಳ ಕಡೆಗೆ ಮಾನವನ ಆಕರ್ಷಣೆಯು ಯಾವಾಗ ಆರಂಭಗೊಂಡಿತು? ಈ ಪ್ರಜ್ವಲಿಸುವ ಪ್ರದರ್ಶನಗಳನ್ನು ಸೃಷ್ಟಿಸುವುದರಲ್ಲಿ ಯಾವ ಜಾಣತನವು ಒಳಗೊಂಡಿದೆ?
ಒಂದು ಪೌರಸ್ತ್ಯ ಸಂಪ್ರದಾಯ
ನಮ್ಮ ಸಾಮಾನ್ಯ ಶಕದ ಹತ್ತನೆಯ ಶತಮಾನದ ಸುಮಾರಿಗೆ, ಕಡ್ಡಿಯುಪ್ಪನ್ನು (ಪೊಟ್ಯಾಸಿಯಂ ನೈಟ್ರೇಟ್) ಗಂಧಕ ಮತ್ತು ಇದ್ದಲಿನೊಂದಿಗೆ ಬೆರೆಸಿದರೆ ಸ್ಫೋಟಕ ವಸ್ತು ಉಂಟಾಗುತ್ತದೆ ಎಂಬುದನ್ನು ಪೌರಸ್ತ್ಯ ರಸಾಯನಶಾಸ್ತ್ರಜ್ಞರು ಕಂಡುಹಿಡಿದಾಗ ಚೀನದವರು ಸುಡುಮದ್ದನ್ನು ಆವಿಷ್ಕರಿಸಿದರೆಂದು ಹೆಚ್ಚಿನ ಇತಿಹಾಸಗಾರರು ಒಪ್ಪಿಕೊಳ್ಳುತ್ತಾರೆ. ಮಾರ್ಕೋ ಪೋಲೋನಂಥ ಪಾಶ್ಚಾತ್ಯ ಪರಿಶೋಧಕರು, ಇಲ್ಲವೆ ಬಹುಶಃ ಅರಬ್ ವ್ಯಾಪಾರಸ್ಥರು ಈ ಸ್ಫೋಟಕ ವಸ್ತುಗಳನ್ನು ಯುರೋಪಿನೊಳಗೆ ತರುವುದಕ್ಕೆ ಕಾರಣರಾಗಿದ್ದರು. ಮತ್ತು 14ನೇ ಶತಮಾನದೊಳಗಾಗಿ ಈ ಸುಡುಮದ್ದಿನ ಮನೋಹರ ದೃಶ್ಯಗಳು ಯೂರೋಪಿನ ಪ್ರೇಕ್ಷಕರನ್ನೂ ರಂಜಿಸಿದವು.
ಆದರೆ ಇಂಥ ಸುಂದರವಾದ ಗಮನಹಾರಿ ದೃಶ್ಯವನ್ನು ಉಂಟುಮಾಡಿದ ಪುಡಿಯು, ಯೂರೋಪಿನ ಇತಿಹಾಸದ ದಿಕ್ಕನ್ನು ಸಹ ಬದಲಾಯಿಸಿತು. ನಂತರ ಬಂದೂಕು ಸಿಡಿಮದ್ದು ಎಂದು ಪ್ರಸಿದ್ಧವಾದ ಈ ವಸ್ತುವನ್ನು ಮಿಲಿಟರಿ ಪುರುಷರು ಸೀಸದ ಗುಂಡುಗಳನ್ನು ಹಾರಿಸಲು, ಕೋಟೆಯ ಗೋಡೆಗಳನ್ನು ಧ್ವಂಸಗೊಳಿಸಲು, ಮತ್ತು ರಾಜಕೀಯ ಶಕ್ತಿಗಳನ್ನು ನಾಶಗೊಳಿಸಲು ಉಪಯೋಗಿಸಿದರು. “ಯೂರೋಪಿಯನ್ ಮಧ್ಯ ಯುಗಗಳಲ್ಲಿ ಮಿಲಿಟರಿ ಸ್ಫೋಟಕಗಳು ಪಾಶ್ಚಾತ್ಯ ದಿಕ್ಕುಗಳಿಗೆ ಹರಡಿದಂತೆ ಅದರೊಂದಿಗೆ ಸುಡುಮದ್ದುಗಳೂ ಹರಡಿದವು, ಮತ್ತು ಯೂರೋಪಿನಲ್ಲಿ ಮಿಲಿಟರಿ ಸುಡುಮದ್ದಿನ ಪ್ರವೀಣನು ವಿಜಯ ಮತ್ತು ಶಾಂತಿಯ ಉತ್ಸವಾಚರಣೆಗಳನ್ನು ನಡೆಸಬೇಕಾಗಿತ್ತು” ಎಂಬುದಾಗಿ ಎನ್ಸೈಕೊಪೀಡೀಯ ಬ್ರಿಟ್ಯಾನಿಕ ತಿಳಿಸುತ್ತದೆ.
ಚೀನದ ಜನರು, ಈ ಸಿಡಿಮದ್ದಿನ ವಿನಾಶಕಾರಿ ಸಾಮರ್ಥ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಲಿಲ್ಲವೆಂದು ತೋರುತ್ತದೆ. 16ನೇ ಶತಮಾನದಲ್ಲಿ ಚೀನದಲ್ಲಿದ್ದ ಇಟ್ಯಾಲಿಯನ್ ಜೆಸ್ಯುಯಿಟ್ ಮಿಷನೆರಿ ಮಾಟಿಯೋ ರೀಟ್ಚೀ ಬರೆದದ್ದು: “ಬಂದೂಕಿನ ಮತ್ತು ಫಿರಂಗಿಯ ಉಪಯೋಗದಲ್ಲಿ ಚೀನದವರು ಪ್ರವೀಣರಲ್ಲ ಹಾಗೂ ಅವರು ಇದೆಲ್ಲವನ್ನು ತಯಾರಿಸುತ್ತಾರಾದರೂ ಯುದ್ಧಗಳಲ್ಲಿ ಅದನ್ನು ಉಪಯೋಗಿಸುವುದು ತೀರಾ ಕಡಿಮೆ. ಹಾಗಿದ್ದರೂ, ಸಾರ್ವಜನಿಕ ಆಟಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ ಪ್ರದರ್ಶಿಸಲಿಕ್ಕಾಗಿ ತಯಾರಿಸುವ ಸುಡುಮದ್ದುಗಳಲ್ಲಿ ದೊಡ್ಡ ಮೊತ್ತದ ಕಡ್ಡಿಯುಪ್ಪನ್ನು ಉಪಯೋಗಿಸಲಾಗುತ್ತದೆ. ಇಂಥ ಪ್ರದರ್ಶನಗಳಲ್ಲಿ ಚೀನಾದ ಜನರು ಬಹಳ ಆನಂದವನ್ನು ಕಂಡುಕೊಳ್ಳುತ್ತಾರೆ . . . ಸುಡುಮದ್ದುಗಳನ್ನು ತಯಾರಿಸುವುದರಲ್ಲಿ ಅವರ ಕೌಶಲವು ನಿಜವಾಗಿಯೂ ಅಸಾಧಾರಣವಾಗಿದೆ.”
ಸುಡುಮದ್ದು ಪ್ರದರ್ಶನದ ರಹಸ್ಯ
ವೈವಿಧ್ಯಮಯ ಪ್ರದರ್ಶನಗಳನ್ನು ವಿಕಸಿಸುತ್ತಿದ್ದಂತೆ ಆರಂಭದ ಸುಡುಮದ್ದು ತಯಾರಕರಿಗೆ ಕೌಶಲ ಮತ್ತು ಧೈರ್ಯದ ಅಗತ್ಯವಿತ್ತೆಂಬುದರಲ್ಲಿ ಸಂಶಯವಿಲ್ಲ. ಬಂದೂಕು ಸಿಡಿಮದ್ದಿನ ದೊಡ್ಡ ಹರಳುಗಳು ನಿಧಾನವಾಗಿ ಸುಡುತ್ತವೆ, ಆದರೆ ಅತಿ ಸಣ್ಣದಾದ ಹರಳುಗಳು ಬೇಗನೆ ಸ್ಫೋಟಗೊಂಡು ಸುಡುತ್ತವೆ ಎಂಬುದನ್ನು ಅವರು ಕಂಡುಹಿಡಿದರು. ಬಿದಿರಿನ ತುಂಡಿನ ಅಥವಾ ಕಾಗದದ ಟ್ಯೂಬಿನ ಒಂದು ಬದಿಯನ್ನು ಮುಚ್ಚಿ, ಇನ್ನೊಂದು ಬದಿಯನ್ನು ಬಂದೂಕು ಸಿಡಿಮದ್ದಿನ ದೊಡ್ಡ ಹರಳಿನಿಂದ ತುಂಬಿಸುವ ಮೂಲಕ ಕ್ಷಿಪಣಿಗಳನ್ನು ತಯಾರಿಸಲಾಗುತ್ತದೆ. ಬಂದೂಕು ಸಿಡಿಮದ್ದಿಗೆ ಬೆಂಕಿಹಚ್ಚಿದಾಗ, ಶೀಘ್ರವಾಗಿ ಹೆಚ್ಚುವ ಅನಿಲವು ಟ್ಯೂಬಿನ ತೆರೆದ ಬಾಗದಿಂದ ಒಳಕ್ಕೆ ಹೋಗಿ ಕ್ಷಿಪಣಿಯನ್ನು ಆಕಾಶಕ್ಕೆ ಹಾರಿಸುತ್ತದೆ. (ಗಗನಯಾತ್ರಿಕರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಂದು ಇದೇ ಮೂಲತತ್ತ್ವವನ್ನು ಉಪಯೋಗಿಸಲಾಗುತ್ತದೆ.) ಎಲ್ಲವೂ ಯಶಸ್ವಿಕರವಾಗಿ ನಡೆಯುವಲ್ಲಿ, ಕ್ಷಿಪಣಿಯು ತನ್ನ ಪಥದ ಉತ್ತುಂಗಕ್ಕೆ ಸಮೀಪಿಸುವಾಗ ಸ್ಫೋಟಿಸುವಂತೆ ಅದರ ತುದಿಯನ್ನು ಬಂದೂಕು ಸಿಡಿಮದ್ದಿನ ಅತಿ ಸಣ್ಣದಾದ ಹರಳುಗಳಿಂದ ತುಂಬಿಸಲಾಗುತ್ತದೆ.
ಶತಮಾನಗಳಾದ್ಯಂತ ತಾಂತ್ರಿಕವಾಗಿ ಸುಡುಮದ್ದುಗಳು ಸ್ವಲ್ಪ ಮಟ್ಟಿಗೆ ಮಾತ್ರ ಬದಲಾಗಿವೆ. ಹಾಗಿದ್ದರೂ, ಕೆಲವು ಪ್ರಗತಿಗಳಿವೆ. ಆರಂಭದಲ್ಲಿ ಪೌರಸ್ತ್ಯರಿಗೆ ಕೇವಲ ಬಿಳಿ ಅಥವಾ ಸ್ವರ್ಣ ಬಣ್ಣದ
ಪ್ರದರ್ಶನವನ್ನು ತಯಾರಿಸುವುದು ಹೇಗೆ ಎಂಬುದು ಮಾತ್ರ ತಿಳಿದಿತ್ತು. ಇಟಲಿಯ ಜನರು ಬಣ್ಣವನ್ನು ಬೆರೆಸಿದರು. 19ನೇ ಶತಮಾನದ ಆರಂಭದಲ್ಲಿ, ಪೊಟ್ಯಾಸಿಯಂ ಕ್ಲೋರೇಟ್ ಅನ್ನು ಬಂದೂಕು ಸಿಡಿಮದ್ದಿಗೆ ಬೆರೆಸಿದರೆ, ಮಿಶ್ರಣವು ಸಾಕಷ್ಟು ಉಷ್ಣತೆಯೊಂದಿಗೆ ಉರಿದು ಲೋಹಗಳನ್ನು ಅನಿಲವಾಗಿ ಪರಿವರ್ತಿಸುತ್ತಾ, ಅದರಿಂದ ಉಂಟಾಗುವ ಬೆಂಕಿಗೆ ಬಣ್ಣವನ್ನು ನೀಡುತ್ತದೆ ಎಂಬುದನ್ನು ಇಟಲಿಯವರು ಕಂಡುಹಿಡಿದರು. ಇಂದು, ಕೆಂಪು ಜ್ವಾಲೆಯನ್ನು ಉಂಟುಮಾಡಲು ಸ್ಟ್ರಾನ್ಷೀಯಮ್ ಕಾರ್ಬೊನೇಟ್ ಅನ್ನು ಸೇರಿಸಲಾಗುತ್ತದೆ. ಕಡುಬಿಳಿ ಬಣ್ಣವು ಟೈಟ್ಯಾನಿಯಂ, ಅಲುಮೀನಿಯಂ, ಮತ್ತು ಮ್ಯಾಗ್ನೀಸಿಯಂ ಮುಂತಾದವುಗಳಿಂದ ಉಂಟಾಗುತ್ತದೆ. ನೀಲಿ ಬಣ್ಣವು ತಾಮ್ರ ಮೂಲಧಾತುಗಳಿಂದ ಉಂಟಾಗುತ್ತದೆ. ಹಸಿರು ಬಣ್ಣವು ಬೇರಿಯಂ ನೈಟ್ರೇಟ್ನಿಂದ ಮತ್ತು ಹಳದಿ ಬಣ್ಣವು ಸೋಡಿಯಂ ಆಕ್ಸಲೇಟ್ ಅನ್ನು ಹೊಂದಿರುವ ಮಿಶ್ರಣದಿಂದ ಉಂಟಾಗುತ್ತದೆ.ಸುಡುಮದ್ದುಗಳ ಪ್ರದರ್ಶನಗಳಿಗೆ ಕಂಪ್ಯೂಟರ್ಗಳು ಇನ್ನೊಂದು ಅಂಶವನ್ನು ಸೇರಿಸಿವೆ. ಕೈಯಿಂದ ಬೆಂಕಿಹಚ್ಚುವ ಬದಲಿಗೆ, ಕಂಪ್ಯೂಟರ್ ಪ್ರೋಗ್ರಾಮ್ನ ಮೂಲಕ ಸಮಯವನ್ನು ನಿರ್ಧರಿಸಿ, ಸರಿಯಾದ ಸಮಯಕ್ಕೆ ಸುಡುಮದ್ದುಗಳನ್ನು ವಿದ್ಯುತ್ತಿನ ಸಹಾಯದಿಂದ ಸಂಗೀತದ ತಾಳಕ್ಕೆ ಹೊಂದಿಕೆಯಾಗಿ ಸ್ಫೋಟಿಸುವಂತೆ ಮಾಡಲಾಗುತ್ತದೆ.
ಧಾರ್ಮಿಕ ಸಂಬಂಧ
ಜೆಸ್ಯುಯಿಟ್ ಮಿಷನೆರಿ ರೀಟ್ಚೀ ಗಮನಿಸಿದಂತೆ, ಸುಡುಮದ್ದುಗಳು ಚೀನದವರ ಧಾರ್ಮಿಕ ಸಮಾರಂಭಗಳಲ್ಲಿ ಪ್ರಾಮುಖ್ಯ ಪಾತ್ರವನ್ನು ವಹಿಸಿದ್ದವು. ಜನಪ್ರಿಯ ಯಂತ್ರಶಾಸ್ತ್ರ (ಇಂಗ್ಲಿಷ್) ಎಂಬ ಪತ್ರಿಕೆಯು ವಿವರಿಸುವುದು, ಸುಡುಮದ್ದುಗಳು “ಹೊಸ ವರುಷದಿಂದ ಮತ್ತು ಇತರ ಸಾಂಪ್ರದಾಯಿಕ ಸಂದರ್ಭಗಳಿಂದ ದೆವ್ವಗಳನ್ನು ಬಿಡಿಸಲು ಚೀನದವರಿಂದ ಆವಿಷ್ಕರಿಸಲ್ಪಟ್ಟವು.” ಹಾವರ್ಡ್ ವಿ. ಹಾರ್ಪರ್ರವರು ಎಲ್ಲಾ ನಂಬಿಕೆಗಳ ದಿನಗಳು ಮತ್ತು ಸಂಪ್ರದಾಯಗಳು (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ತಿಳಿಸಿದ್ದು: “ಆರಂಭದ ವಿಧರ್ಮಿ ಸಮಯಗಳಿಂದ ಜನರು ತಮ್ಮೊಂದಿಗೆ ದೀವಿಟಿಕೆಗಳನ್ನು ಕೊಂಡೊಯ್ಯುತ್ತಿದ್ದರು ಮತ್ತು ದೊಡ್ಡ ಧಾರ್ಮಿಕ ಸಮಾರಂಭಗಳಲ್ಲಿ ಉತ್ಸವಾಗ್ನಿಗಳನ್ನು ಉರಿಸುತ್ತಿದ್ದರು. ಈಗ ಅದರ ಸ್ಥಳದಲ್ಲಿ, ನಾನಾ ಬಣ್ಣದ ಮತ್ತು ಸ್ವಯಂಚಾಲಿತ ಸುಡುಮದ್ದುಗಳ ಬೆಂಕಿಯನ್ನು ಉಪಯೋಗಿಸುವುದು ಆಶ್ಚರ್ಯಕರವೇನಲ್ಲ.”
ಕ್ರೈಸ್ತರೆನಿಸಿಕೊಳ್ಳುವವರಿಂದ ಸುಡುಮದ್ದುಗಳು ಉಪಯೋಗಿಸಲು ಆರಂಭಿಸಿದ ಸ್ವಲ್ಪ ಸಮಯದೊಳಗಾಗಿ, ಪ್ರತಿ ಸುಡುಮದ್ದು ತಯಾರಕರಿಗೆ ತಮ್ಮದೇ ಆದ ಒಬ್ಬ ಆಶ್ರಯದಾತ ಸಂತನನ್ನು ನೇಮಿಸಲಾಯಿತು. ದಿ ಕೊಲಂಬಿಯ ಎನ್ಸೈಕೊಪೀಡೀಯ ತಿಳಿಸುವುದು: “ಸಂತ ಬಾರ್ಬರಳು ಕ್ರೈಸ್ತಳಾದದ್ದಕ್ಕಾಗಿ ಅವಳ ತಂದೆಯು ಅವಳನ್ನು ಒಂದು ಬುರುಜಿನ ಒಳಗೆ ಬಂದಿಸಿಟ್ಟು, ನಂತರ ಕೊಲ್ಲಲು ಯೋಜಿಸಿದನು. ಆದರೆ ಅವನು ಮಿಂಚು ತಗಲಿ ಮೃತನಾದನು. ಹೀಗೆ ಅವಳ ತಂದೆಯು ಒಂದು ದೊಡ್ಡ ಬೆಂಕಿಯಾದ ಮಿಂಚಿನಿಂದ ಕೊಲ್ಲಲ್ಪಟ್ಟ ಕಾರಣ, ಅಂದಿನಿಂದ ಅವಳು ಬಂದೂಕುಗಳ ಮತ್ತು ಸುಡುಮದ್ದುಗಳ ತಯಾರಕರ ಆಶ್ರಯ ಸಂತಳಾದಳು.”
ವೆಚ್ಚಕ್ಕೆ ಮಿತಿಯಿಲ್ಲ
ಧಾರ್ಮಿಕ ಸಮಾರಂಭಗಳಾಗಿರಲಿ ಅಥವಾ ಐಹಿಕ ಸಮಾರಂಭಗಳಾಗಿರಲಿ ಸಾರ್ವಜನಿಕರು ದೊಡ್ಡದಾದ ಮತ್ತು ಉತ್ತಮವಾದ ಸುಡುಮದ್ದುಗಳ ಪ್ರದರ್ಶನಗಳಿಗಾಗಿ ತಣಿಸಲಾಗದ ದಾಹವನ್ನು ಹೊಂದಿರುತ್ತಾರೆ. 16ನೇ ಶತಮಾನದಲ್ಲಿ ಚೀನದವರ ಸುಡುಮದ್ದುಗಳ ಒಂದು ಪ್ರದರ್ಶನವನ್ನು ವಿವರಿಸುತ್ತಾ ರೀಟ್ಚೀ ಬರೆದದ್ದು: “ನಾನು ನನ್ಕಿನ್ನಲ್ಲಿರುವಾಗ, ಅಲ್ಲಿನ ಜನರ ಅತಿ ಪ್ರಾಮುಖ್ಯ ಹಬ್ಬವಾದ ವರುಷದ ಮೊದಲನೆಯ ತಿಂಗಳಿನ ಆಚರಣೆಗಾಗಿ ನಡೆಸಲಾದ ಅತಿ ದೊಡ್ಡ ಪ್ರದರ್ಶನವನ್ನು ನೋಡಿದೆ. ಆ ಒಂದು ಸಂದರ್ಭದಲ್ಲಿ, ಕೆಲವು ವರುಷಗಳ ತನಕ ನಡಿಸಬಹುದಾದ ಅನೇಕ ದೊಡ್ಡ ಯುದ್ಧಗಳಿಗೆ ಬೇಕಾಗುವಷ್ಟು ಬಂದೂಕುಮದ್ದುಗಳನ್ನು ಉಪಯೋಗಿಸಲಾದದ್ದನ್ನು ನಾನು ಲೆಕ್ಕಿಸಿದೆ.” ಆ ಪ್ರದರ್ಶನದ ವೆಚ್ಚದ ಕುರಿತು ಅವರು ಹೇಳುವುದು: “ಸುಡುಮದ್ದುಗಳ ವಿಷಯದಲ್ಲಿ ಅವರಿಗೆ ವೆಚ್ಚದ ಕುರಿತು ಯಾವ ಮಿತಿಯೂ ಇಲ್ಲ.”
ಶತಮಾನಗಳು ಕಳೆದಿವೆಯಾದರೂ ಈ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆಗಳಾಗಲಿಲ್ಲ. ಇಸವಿ 2000ದಲ್ಲಿ ಸಿಡ್ನಿ ಹಾರ್ಬರ್ ಬ್ರಿಜ್ನ ಮೇಲೆ ನಡೆಸಲಾದ ಕೇವಲ ಒಂದು ಸಮಾರಂಭದಲ್ಲಿ, ತೀರಪ್ರದೇಶಗಳಲ್ಲಿ ಒಟ್ಟುಸೇರಿದ ಹತ್ತು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ವೀಕ್ಷಕರನ್ನು ಮನರಂಜಿಸಲು 20 ಟನ್ ಸುಡುಮದ್ದುಗಳನ್ನು ಉರಿಸಲಾಯಿತು. ಅದೇ ವರುಷದಲ್ಲಿ ಅಮೆರಿಕದಲ್ಲಿ, ಸುಮಾರು 7,00,00,000 ಕಿಲೊಗ್ರಾಮ್ಗಳಷ್ಟು ಸುಡುಮದ್ದುಗಳಿಗಾಗಿ 62.5 ಕೋಟಿ ಡಾಲರ್ ವೆಚ್ಚಮಾಡಲಾಯಿತು. ನಿಶ್ಚಯವಾಗಿಯೂ, ವಿಭಿನ್ನ ಹಿನ್ನಲೆಯ ಜನರು ಇಂದೂ ಸುಡುಮದ್ದುಗಳಿಂದ ಆಕರ್ಷಿಸಲ್ಪಡುತ್ತಿದ್ದಾರೆ. “ಸುಡುಮದ್ದುಗಳ ವಿಷಯದಲ್ಲಿ ಅವರಿಗೆ ವೆಚ್ಚದ ಕುರಿತು ಯಾವ ಮಿತಿಯೂ ಇಲ್ಲ” ಎಂಬ ಮಾತು ಇಂದು ಸಹ ಸತ್ಯವಾಗಿದೆ. (g04 2/8)
[ಪುಟ 19ರಲ್ಲಿ ಇಡೀ ಪುಟದ ಚಿತ್ರ]