ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧುನಿಕ ತಾತ್ಪರ್ಯವುಳ್ಳ ಒಂದು ಪುರಾತನ ಪ್ರಮಾಣವಚನ

ಆಧುನಿಕ ತಾತ್ಪರ್ಯವುಳ್ಳ ಒಂದು ಪುರಾತನ ಪ್ರಮಾಣವಚನ

ಆಧುನಿಕ ತಾತ್ಪರ್ಯವುಳ್ಳ ಒಂದು ಪುರಾತನ ಪ್ರಮಾಣವಚನ

ಔಷಧದ ಮಹಾಪಿತನೆಂದು ಪ್ರಸಿದ್ಧನಾದ ಗ್ರೀಕ್‌ ವೈದ್ಯನಾದ ಹಿಪೊಕ್ರೇಟಿಸ್‌, ಸಾ.ಶ.ಪೂ. 400ರ ಸುಮಾರಿಗೆ ಹಿಪೊಕ್ರೇಟಿಕ್‌ ಪ್ರಮಾಣವಚನವನ್ನು ಬರೆದನು. ಆ ಶ್ರೇಷ್ಠ ಕೃತಿಯಲ್ಲಿನ ಉನ್ನತ ಮೂಲತತ್ತ್ವಗಳು ಈಗಲೂ ವೈದ್ಯಕೀಯ ವೃತ್ತಿಯನ್ನು ಮಾರ್ಗದರ್ಶಿಸುತ್ತಿವೆ. ಹೀಗೆಂದು ನಿಮಗೆ ಕಲಿಸಲಾಗಿದೆಯೋ? ಹಾಗಿರುವಲ್ಲಿ, ಹೀಗೆ ಕಲಿಸಲ್ಪಟ್ಟವರಲ್ಲಿ ನೀವು ಒಬ್ಬರೇ ಅಲ್ಲ. ಆದರೆ ಇದು ನಿಜವಾಗಿಯೂ ಸತ್ಯವಾಗಿದೆಯೋ?

ಹಿಪೊಕ್ರೇಟಿಸನ ಹೆಸರನ್ನು ಹೊಂದಿರುವ ಈ ಪ್ರಮಾಣವಚನದ ರಚಕನು ಅವನಾಗಿರಲಿಕ್ಕಿಲ್ಲ ಎಂಬುದನ್ನು ವಾಸ್ತವಾಂಶಗಳು ಸೂಚಿಸುತ್ತವೆ. ಅಷ್ಟುಮಾತ್ರವಲ್ಲದೆ, ಇಂದಿನ ವೈದ್ಯಕೀಯ ವೃತ್ತಿಯು ಆ ಪ್ರಮಾಣವಚನದಲ್ಲಿ ಮೂಲತಃ ಬರೆಯಲ್ಪಟ್ಟಿದ್ದ ಎಲ್ಲಾ ವಿಚಾರಗಳನ್ನು ಸ್ವೀಕರಿಸುವುದಿಲ್ಲ.

ಈ ಪುರಾತನ ಪ್ರಮಾಣವಚನವನ್ನು ನಿಜವಾಗಿಯೂ ಯಾರು ಬರೆದರೆಂದು ನಮಗೆ ಗೊತ್ತಿದೆಯೆ? ಒಂದುವೇಳೆ ಗೊತ್ತಿರುವುದಾದರೂ, ಇಂದು ನಮಗೆ ಈ ಪ್ರಮಾಣವಚನವು ಯಾವುದೇ ತಾತ್ಪರ್ಯವನ್ನು ಹೊಂದಿದೆಯೆ?

ಹಿಪೊಕ್ರೇಟಿಸನು ಆ ಪ್ರಮಾಣವಚನವನ್ನು ಬರೆದನೋ?

ಹಿಪೊಕ್ರೇಟಿಸನು ಆ ಪ್ರಮಾಣವಚನವನ್ನು ಬರೆದನೋ ಎಂಬ ಪ್ರಶ್ನೆಯನ್ನು ಕೇಳಲು ಅನೇಕ ಕಾರಣಗಳಿವೆ. ಮೊದಲನೇ ಕಾರಣ, ಆ ಪ್ರಮಾಣವಚನವು ಹಲವು ದೇವದೇವತೆಗಳಿಗೆ ಮಾಡಲ್ಪಟ್ಟ ಪ್ರಾರ್ಥನೆಯಿಂದ ಆರಂಭವಾಗುತ್ತದೆ. ಆದರೆ ಹಿಪೊಕ್ರೇಟಿಸನನ್ನು, ವೈದ್ಯಕೀಯ ವಿಚಾರವನ್ನು ಧಾರ್ಮಿಕ ವಿಚಾರದಿಂದ ಪ್ರತ್ಯೇಕಿಸಿದ ಮತ್ತು ಅಸ್ವಸ್ಥತೆಗೆ ಶಾರೀರಿಕ ಕಾರಣಗಳೇ ಹೊರತು ಅತಿಮಾನುಷ್ಯ ಶಕ್ತಿ ಕಾರಣವಲ್ಲ ಎಂದು ನಂಬಿದ್ದ ಮೊದಲ ವ್ಯಕ್ತಿ ಎಂದು ವೀಕ್ಷಿಸಲಾಗಿತ್ತು.

ಇದಕ್ಕೆ ಕೂಡಿಸಿ, ಆ ಪ್ರಮಾಣವಚನದಲ್ಲಿ ನಿಷೇಧಿಸಲ್ಪಟ್ಟಿರುವ ಅನೇಕ ವಿಷಯಗಳು ಹಿಪೊಕ್ರೇಟಿಸನ ಸಮಯಗಳಲ್ಲಿನ ವೈದ್ಯಕೀಯ ಪದ್ಧತಿಗೆ ವಿರುದ್ಧವಾಗಿರಲಿಲ್ಲ. (ಪುಟ 23ರಲ್ಲಿರುವ ಚೌಕವನ್ನು ನೋಡಿರಿ.) ಉದಾಹರಣೆಗೆ, ಹಿಪೊಕ್ರೇಟಿಸನ ಕಾಲದಲ್ಲಿ ಕಾನೂನು ಇಲ್ಲವೆ ಹೆಚ್ಚಿನ ಧಾರ್ಮಿಕ ಮಟ್ಟಗಳು ಗರ್ಭಪಾತ ಹಾಗೂ ಆತ್ಮಹತ್ಯೆಯನ್ನು ಆಕ್ಷೇಪಿಸುತ್ತಿರಲಿಲ್ಲ. ಇನ್ನೊಂದು ವಿಷಯವು, ಆ ಪ್ರಮಾಣವಚನವನ್ನು ಸ್ವೀಕರಿಸುವವರು ತಾವು ಶಸ್ತ್ರಚಿಕಿತ್ಸೆಯನ್ನು ಮಾಡುವುದಿಲ್ಲ ಎಂದು ಮಾತುಕೊಡುತ್ತಿದ್ದರು. ಆದರೆ, ಹಿಪೊಕ್ರೇಟಿಸ್‌ ಮತ್ತು ಇತರ ಪುರಾತನ ಬರಹಗಾರರಿಂದ ಪ್ರಾಯಶಃ ಬರೆಯಲ್ಪಟ್ಟಿರುವವುಗಳೆಂದು ಅನೇಕವೇಳೆ ಹೇಳಲಾಗುವ ವೈದ್ಯಕೀಯ ಸಾಹಿತ್ಯಗಳಲ್ಲಿ ಶಸ್ತ್ರಚಿಕಿತ್ಸೆಯ ವಿಧಾನಗಳನ್ನು ನೀಡಲಾಗಿದೆ.

ಈ ಪ್ರಮಾಣವಚನವನ್ನು ಬರೆದವರು ಯಾರು ಎಂಬ ಪ್ರಶ್ನೆಯು ಇನ್ನೂ ಪಾಂಡಿತ್ಯಪೂರ್ಣ ವಾದವಿವಾದದ ವಿಷಯವಾಗಿರುವುದಾದರೂ, ಹಿಪೊಕ್ರೇಟಿಕ್‌ ಪ್ರಮಾಣವಚನವು ವಾಸ್ತವದಲ್ಲಿ ಹಿಪೊಕ್ರೇಟಿಸನಿಂದ ಬರೆಯಲ್ಪಟ್ಟಿರದ ಸಂಭಾವ್ಯತೆ ಹೆಚ್ಚಾಗಿದೆ ಎಂದು ತೋರುತ್ತದೆ. ಆ ಪ್ರಮಾಣವಚನದಲ್ಲಿ ಬರೆಯಲ್ಪಟ್ಟಿರುವ ತತ್ತ್ವಜ್ಞಾನವು, ಸಾ.ಶ.ಪೂ. ನಾಲ್ಕನೇ ಶತಮಾನದ ಪೈಥಾಗೊರೀಯನರ ತತ್ತ್ವಜ್ಞಾನಕ್ಕೆ ಬಹಳ ಹೊಂದಿಕೆಯಲ್ಲಿದೆ. ಈ ಜನರು ಜೀವವನ್ನು ಪವಿತ್ರವಾಗಿ ಎಣಿಸುತ್ತಿದ್ದರು ಮತ್ತು ಶಸ್ತ್ರಚಿಕಿತ್ಸೆಯನ್ನು ವಿರೋಧಿಸುತ್ತಿದ್ದರು.

ಪತನ ಮತ್ತು ಪುನರುಜ್ಜೀವನ

ಆ ಪ್ರಮಾಣವಚನದ ನಿಜವಾದ ರಚಕನು ಯಾರೇ ಆಗಿದ್ದರೂ, ಅದು ಪಾಶ್ಚಾತ್ಯ ದೇಶಗಳಲ್ಲಿನ ವೈದ್ಯಕೀಯ ಪದ್ಧತಿಗಳ ಮೇಲೆ, ಮತ್ತು ವಿಶೇಷವಾಗಿ ನೀತಿಶಾಸ್ತ್ರ ರಂಗದಲ್ಲಿ ಮಹತ್ತರವಾದ ಪ್ರಭಾವವನ್ನು ಬೀರಿದೆ ಎಂಬ ವಿಷಯವನ್ನು ಮಾತ್ರ ನಿರಾಕರಿಸಲು ಸಾಧ್ಯವಿಲ್ಲ. ಆ ಪ್ರಮಾಣವಚನವನ್ನು “ವೈದ್ಯಕೀಯ ಕ್ಷೇತ್ರದಲ್ಲಿನ ಕಟ್ಟುನಿಟ್ಟಿನ ನೀತಿಶಾಸ್ತ್ರದ ಬೆಳವಣಿಗೆಯ ಶಿಖರ,” “ಪ್ರಗತಿಪರ ದೇಶಗಳಲ್ಲಿನ ರೋಗಿ-ವೈದ್ಯ ಸಂಬಂಧದ ಆಧಾರ,” ಮತ್ತು “ವೃತ್ತಿಪರ ನೈತಿಕತೆಯ ಉಚ್ಚ ಮಟ್ಟ” ಎಂದೆಲ್ಲಾ ಕರೆಯಲಾಗಿದೆ. ಕೆನಡದ ಖ್ಯಾತ ವೈದ್ಯರಾದ ಸರ್‌ ವಿಲ್ಯಮ್‌ ಓಸ್ಲರ್‌ ಅವರು 1913ರಷ್ಟು ಹಿಂದೆ ಹೇಳಿದ್ದು: “ಈ ಪ್ರಮಾಣವಚನವು ಹಿಪೊಕ್ರೇಟಿಸನ ಕಾಲದ್ದಾಗಿದೆಯೊ ಇಲ್ಲವೊ ಎಂಬುದು ಪ್ರಾಮುಖ್ಯವಲ್ಲ . . . ಸುಮಾರು ಇಪ್ಪತ್ತೈದು ಶತಮಾನಗಳಿಂದ ಇದು ತಾನೇ ವೈದ್ಯಕೀಯ ವೃತ್ತಿಯ ‘ಸೂತ್ರ’ವಾಗಿದೆ, ಮತ್ತು ಇಂದು ಸಹ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯ ವೃತ್ತಿಗೆ ಪಾದಾರ್ಪಣಮಾಡಲಿಕ್ಕಾಗಿ ಇದೇ ವಿಧಿಸೂತ್ರವಾಗಿದೆ.”

ಹಾಗಿದ್ದರೂ, ಆ ಪ್ರಮಾಣವಚನವು 20ನೇ ಶತಮಾನದ ಆರಂಭದಲ್ಲಿ ಅಸಮ್ಮತಿಗೆ ಒಳಗಾಯಿತು. ಆಗ ಸಂಭವಿಸುತ್ತಿದ್ದ ವೈಜ್ಞಾನಿಕ ಮುನ್ನಡೆಗಳು ಇದಕ್ಕೆ ಒಂದುವೇಳೆ ಕಾರಣವಾಗಿರಬಹುದು. ಬದುಕಿನಲ್ಲಿ ಧರ್ಮಕ್ಕಿಂತಲೂ ತರ್ಕವೇ ಸರಿಯಾದ ಮಾರ್ಗದರ್ಶಕ ಸೂತ್ರ ಎಂಬ ಸಿದ್ಧಾಂತವು ಬೆಳೆಯುತ್ತಿದ್ದ ಆ ಸಮಯದಲ್ಲಿ, ಈ ಪ್ರಮಾಣವಚನವು ಬಹಳ ಹಳೆಯದ್ದೂ ಅಸಂಬದ್ಧವೂ ಆಗಿ ತೋರಿರಬಹುದು. ಆದರೆ ವೈಜ್ಞಾನಿಕ ಮುನ್ನಡೆಗಳ ಹೊರತಾಗಿಯೂ ನೈತಿಕ ಮಾರ್ಗದರ್ಶನದ ಅಗತ್ಯವು ಮಾತ್ರ ಇವತ್ತಿಗೂ ಇದೆ. ಇತ್ತೀಚಿನ ದಶಕಗಳಲ್ಲಿ ಈ ಪ್ರಮಾಣವಚನವು ಪುನಃ ಸಮ್ಮತಿಯನ್ನು ಪಡೆಯಲು ಇದೇ ಕಾರಣವಾಗಿರಬಹುದು.

ಅನೇಕರು ವೈದ್ಯಕೀಯ ಕಾಲೇಜಿಗೆ ಸೇರುವ ಮತ್ತು ಅಲ್ಲಿಂದ ಪದವಿ ಪಡೆಯುವ ಸಮಯದಲ್ಲಿ ಪ್ರಮಾಣವಚನವನ್ನು ಸ್ವೀಕರಿಸುವುದು ಪುನಃ ಒಂದು ಪ್ರಾಮುಖ್ಯ ಭಾಗವಾಗಿ ಪರಿಣಮಿಸಿದೆ. ಯುನೈಟೆಡ್‌ ಸ್ಟೇಟ್ಸ್‌ ಮತ್ತು ಕೆನಡದ ವೈದ್ಯಕೀಯ ಕಾಲೇಜುಗಳ 1993ರ ಸಮೀಕ್ಷೆಯು ತೋರಿಸುವುದೇನೆಂದರೆ, ಸಮೀಕ್ಷೆಯು ನಡೆಸಲ್ಪಟ್ಟಿರುವ ಕಾಲೇಜುಗಳಲ್ಲಿ 98 ಪ್ರತಿಶತ ಕಾಲೇಜುಗಳು ಒಂದಲ್ಲ ಒಂದು ವಿಧದ ಪ್ರಮಾಣವಚನವನ್ನು ಸ್ವೀಕರಿಸುವ ಪದ್ಧತಿಯನ್ನು ಅನುಕರಿಸುತ್ತವೆ. ಹಿಂದೆ 1928ರಲ್ಲಿ ಕೇವಲ 24 ಪ್ರತಿಶತ ಕಾಲೇಜುಗಳು ಮಾತ್ರ ಇದನ್ನು ಅನುಕರಿಸುತ್ತಿದ್ದವು. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ನಡೆಸಲಾದ ಅಂಥದ್ದೇ ಒಂದು ಸಮೀಕ್ಷೆಯು, ಸದ್ಯಕ್ಕೆ ಸುಮಾರು 50 ಪ್ರತಿಶತ ಕಾಲೇಜುಗಳು ಮಾತ್ರ ಪ್ರಮಾಣವಚನ ಅಥವಾ ಒಪ್ಪಂದವನ್ನು ಉಪಯೋಗಿಸುತ್ತಿವೆ ಎಂದು ತೋರಿಸಿತು. ಆಸ್ಟ್ರೇಲಿಯ ಮತ್ತು ನ್ಯೂ ಸೀಲೆಂಡ್‌ನಲ್ಲಿ ಸಹ ಸಂಖ್ಯೆಯು ಸುಮಾರು 50 ಪ್ರತಿಶತವೇ ಆಗಿದೆ.

ಕಾಲಕ್ಕೆ ತಕ್ಕಂತೆ ಬದಲಾವಣೆ

ಆದರೆ ಹಿಪೊಕ್ರೇಟಿಕ್‌ ಪ್ರಮಾಣವಚನವು ಬದಲಾಗದೆ ಉಳಿದಿಲ್ಲ; ಶತಮಾನಗಳಾದ್ಯಂತ ಕ್ರೈಸ್ತಪ್ರಪಂಚದಲ್ಲಿ ಚಾಲ್ತಿಯಲ್ಲಿದ್ದ ನಂಬಿಕೆಗಳಿಗೆ ಹೊಂದಿಕೆಯಲ್ಲಿ ಅದನ್ನು ಬದಲಾಯಿಸಲಾಯಿತು. ಕೆಲವೊಮ್ಮೆ, ಪ್ಲೇಗ್‌ ರೋಗ ಪೀಡಿತರಿಗೆ ಚಿಕಿತ್ಸೆ ನೀಡುವುದೇ ಮುಂತಾದ ಇತರ ವಿಷಯಗಳಿಗಾಗಿ ಅದನ್ನು ಬದಲಾಯಿಸಲಾಗಿದೆ. ಇತ್ತೀಚೆಗೆ, ಆಧುನಿಕ ಅಭಿಪ್ರಾಯಕ್ಕೆ ಹೊಂದಿಕೆಯಲ್ಲಿ ತರಲಿಕ್ಕಾಗಿ ಅದನ್ನು ಬದಲಾಯಿಸಲಾಗಿದೆ.

ಆ ಪ್ರಮಾಣವಚನದ ಅನೇಕ ಬೇರೆ ಬೇರೆ ಪಾಠಾಂತರಗಳಲ್ಲಿ, ಆಧುನಿಕ ವೈದ್ಯಕೀಯ ಪದ್ಧತಿಯನ್ನು ಪ್ರತಿನಿಧಿಸದಂಥ ವಿಚಾರಗಳನ್ನು ತೆಗೆದುಹಾಕಲಾಗಿದೆ, ಮತ್ತು ಇಂದಿನ ಸಮಾಜಕ್ಕೆ ಸೂಕ್ತವಾಗಿರುವ ಇತರ ಪ್ರಾಮುಖ್ಯ ವಿಚಾರಗಳನ್ನು ಸೇರ್ಪಡೆಮಾಡಲಾಗಿದೆ. ಉದಾಹರಣೆಗೆ, ಇಂದಿನ ವೈದ್ಯಕೀಯ ಪದ್ಧತಿಯಲ್ಲಿ, ರೋಗಿಯ ಸ್ವಂತ ಹಕ್ಕುಗಳನ್ನು ಗೌರವಿಸುವ ವಿಚಾರವು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ, ಆದರೆ ಇದು ಪುರಾತನ ಗ್ರೀಕ್‌ ವೈದ್ಯಕೀಯ ಕ್ಷೇತ್ರದಲ್ಲಿ ಯಾವ ಪ್ರಮುಖತೆಯನ್ನೂ ಹೊಂದಿರಲಿಲ್ಲ ಮತ್ತು ಹಿಪೊಕ್ರೇಟಿಕ್‌ ಪ್ರಮಾಣವಚನದ ಭಾಗವಾಗಿಯೂ ಇರಲಿಲ್ಲ. ಇಂದು ಉಪಯೋಗದಲ್ಲಿರುವ ಅನೇಕ ಒಪ್ಪಂದದ ಷರತ್ತುಗಳಲ್ಲಿ ರೋಗಿಯ ಹಕ್ಕುಗಳನ್ನು ಗೌರವಿಸುವುದು ಒಂದು ಪ್ರಾಮುಖ್ಯ ವಿಚಾರವಾಗಿದೆ.

ಇದಕ್ಕೆ ಕೂಡಿಸಿ, ತಿಳಿವಳಿಕೆಭರಿತ ಸಮ್ಮತಿ ಎಂಬ ತತ್ತ್ವವು ಬಹಳಷ್ಟು ಪ್ರಾಮುಖ್ಯವಾಗುತ್ತಾ ಇರುವುದರಿಂದ, ವೈದ್ಯ-ರೋಗಿಯ ಸಂಬಂಧವು ಬದಲಾಗಿದೆ. ಆದುದರಿಂದ, ಆರಂಭದಲ್ಲಿ ಬರೆಯಲ್ಪಟ್ಟಿದ್ದಂತೆಯೇ ಹಿಪೊಕ್ರೇಟಿಕ್‌ ಪ್ರಮಾಣವಚನವನ್ನು ಈಗಲೂ ಉಪಯೋಗಿಸುತ್ತಿರುವ ವೈದ್ಯಕೀಯ ಕಾಲೇಜುಗಳು ಕೇವಲ ಕೊಂಚವೇ ಏಕೆ ಎಂಬುದು ಈಗ ಅರ್ಥವಾಗುತ್ತದೆ.

ಈ ಪ್ರಮಾಣವಚನಕ್ಕೆ ಮಾಡಲ್ಪಟ್ಟ ಇನ್ನಿತರ ಬದಲಾವಣೆಗಳು ಬಹುಶಃ ಹೆಚ್ಚು ಅಚ್ಚರಿಯನ್ನುಂಟುಮಾಡಬಹುದು. 1993ರಲ್ಲಿ, ಅಮೆರಿಕ ಮತ್ತು ಕೆನಡದಲ್ಲಿ ವೈದ್ಯರಿಂದ ಸ್ವೀಕರಿಸಲಾದ ಪ್ರಮಾಣವಚನಗಳಲ್ಲಿ, ವೈದ್ಯರು ತಮ್ಮ ಕೃತ್ಯಗಳಿಗೆ ಹೊಣೆಗಾರರೆಂಬ ವಚನವು ಕೇವಲ 43 ಪ್ರತಿಶತ ಪ್ರಮಾಣವಚನಗಳಲ್ಲಿತ್ತು. ಹೆಚ್ಚಿನ ಆಧುನಿಕ ಪಾಠಾಂತರಗಳಲ್ಲಿ, ಪ್ರಮಾಣವಚನವನ್ನು ಉಲ್ಲಂಘಿಸುವಲ್ಲಿ ದಂಡ ವಿಧಿಸಲಾಗುತ್ತದೆ ಎಂಬ ಹೇಳಿಕೆಯು ಸೇರಿಸಲ್ಪಟ್ಟಿರಲಿಲ್ಲ. ಸುಖಮರಣ ಮತ್ತು ಗರ್ಭಪಾತವನ್ನು ತ್ಯಜಿಸುವುದು ಮತ್ತು ದೇವತೆಗಳಿಗೆ ಪ್ರಾರ್ಥನೆಮಾಡುವುದು ಇನ್ನೂ ವಿರಳವಾಗಿತ್ತು, ಮತ್ತು ಸಮೀಕ್ಷೆ ನಡೆಸಲ್ಪಟ್ಟ ಕಾಲೇಜುಗಳಿಂದ ಉಪಯೋಗಿಸಲ್ಪಡುತ್ತಿರುವ ಒಪ್ಪಂದದ ಷರತ್ತುಗಳಲ್ಲಿ ಕೇವಲ 3 ಪ್ರತಿಶತ ಮಾತ್ರ, ರೋಗಿಗಳೊಂದಿಗೆ ಯಾವುದೇ ಲೈಂಗಿಕ ಸಂಪರ್ಕವನ್ನು ಮಾಡುವುದಿಲ್ಲ ಎಂಬ ಪ್ರಮಾಣವು ಇತ್ತು.

ಒಂದು ಪ್ರಮಾಣವಚನದ ಮೌಲ್ಯ

ಹಿಪೊಕ್ರೇಟಿಕ್‌ ಪ್ರಮಾಣವಚನದಲ್ಲಿ ಅನೇಕ ಬದಲಾವಣೆಗಳು ಮಾಡಲ್ಪಟ್ಟಿದ್ದರೂ, ಪ್ರಮಾಣವಚನಗಳ ಉಪಯೋಗವು ಮುಖ್ಯವಾಗಿ ಉದಾತ್ತವಾದ ಮತ್ತು ನೈತಿಕವಾದ ಧ್ಯೇಯಗಳಿಗೆ ಬದ್ಧವಾಗಿರುವ ಒಂದು ವೃತ್ತಿಗೆ ಅತ್ಯಾವಶ್ಯಕವೆಂದು ಅನೇಕವೇಳೆ ಪರಿಗಣಿಸಲಾಗುತ್ತದೆ. ಈ ಹಿಂದೆ ತಿಳಿಸಲಾದ 1993ರ ಸಮೀಕ್ಷೆಯಲ್ಲಿ ಕಂಡುಬಂದಿರುವುದು ಏನೆಂದರೆ, ಉಪಯೋಗದಲ್ಲಿರುವ ಹೆಚ್ಚಿನ ಪ್ರಮಾಣವಚನಗಳು, ವೈದ್ಯರು ರೋಗಿಗಳೊಂದಿಗೆ ಮಾಡುವ ಬದ್ಧತೆಯ ಕಡೆಗೆ ಗಮನಸೆಳೆಯುತ್ತವೆ. ಇದು ಭಾವೀ ವೈದ್ಯರು ತಮ್ಮ ರೋಗಿಗಳನ್ನು ನೋಡಿಕೊಳ್ಳಲು ತಮ್ಮಿಂದಾಗುವುದೆಲ್ಲವನ್ನೂ ಮಾಡುವೆವೆಂದು ಮಾತುಕೊಡುವುದನ್ನು ಮಾತ್ರ ಕೇಳಿಕೊಳ್ಳುತ್ತದೆ. ಅಂಥ ಒಪ್ಪಂದದ ಷರತ್ತನ್ನು ಮಾಡುವುದು, ವೈದ್ಯಕೀಯ ವೃತ್ತಿಗೆ ತಳಪಾಯವಾಗಿರುವ ಯೋಗ್ಯ ಮೂಲತತ್ತ್ವಗಳ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸುತ್ತದೆ.

ದ ಮೆಡಿಕಲ್‌ ಜರ್ನಲ್‌ ಆಫ್‌ ಆಸ್ಟ್ರೇಲಿಯದಲ್ಲಿ ಪ್ರಕಾಶನ ಮಾಡಲಾದ ಒಂದು ಸಂಪಾದಕೀಯ ಲೇಖನದಲ್ಲಿ ಪ್ರೊಫೆಸರ್‌ ಎಡ್ಮಂಟ್‌ ಪೆಲೆಗ್ರೀನೋ ಬರೆದದ್ದು: “ಇಂದು ಅನೇಕರಿಗೆ ವೈದ್ಯಕೀಯ ಪ್ರಮಾಣವಚನವು, ಧ್ವಂಸಗೊಂಡಿರುವ ಒಂದು ಪುರಾತನ ವಿಚಾರದ ಸಣ್ಣ ತುಣುಕಿನಂತಿದೆ. ಆದರೆ ಆ ವಿಚಾರದ ಹೆಚ್ಚಿನ ಅಂಶವು ವೈದ್ಯಕೀಯ ವೃತ್ತಿಗೆ ಸೇರಿದವರ ಪ್ರಜ್ಞೆಯಲ್ಲಿ ಉಳಿದಿದೆ. ಮತ್ತು ಈ ಕಾರಣದಿಂದ, ಅದನ್ನು ಸಂಪೂರ್ಣವಾಗಿ ಮರೆತುಬಿಡುವುದು, ವೈದ್ಯಕೀಯ ಪದ್ಧತಿಯನ್ನು ಒಂದು ವಾಣಿಜ್ಯ, ಕೈಗಾರಿಕಾ ಅಥವಾ ಕಾರ್ಮಿಕರ ಉದ್ಯಮವನ್ನಾಗಿ ಮಾರ್ಪಡಿಸುವುದಕ್ಕೆ ಸಮಾನವಾಗಿದೆ ಎಂಬ ನೆನಪನ್ನು ಇದು ಅವರಲ್ಲಿ ಹುಟ್ಟಿಸುತ್ತದೆ.”

ಹಿಪೊಕ್ರೇಟಿಕ್‌ ಪ್ರಮಾಣವಚನ ಅಥವಾ ಅದರಿಂದ ಹುಟ್ಟಿಬಂದ ಆಧುನಿಕ ಒಪ್ಪಂದದ ಷರತ್ತುಗಳು, ಇಂದು ಸುಸಂಬದ್ಧವಾಗಿವೆಯೊ ಇಲ್ಲವೊ ಎಂಬುದು ಪ್ರಾಯಶಃ ಒಂದು ಶೈಕ್ಷಣಿಕ ವಾದವಿವಾದವಾಗಿಯೇ ಮುಂದುವರಿಯುತ್ತಿದೆ. ಆದರೆ ಪರಿಣಾಮವು ಏನೇ ಆಗಿರಲಿ, ರೋಗಿಗಳ ಆರೈಕೆಯ ಕಡೆಗೆ ವೈದ್ಯರಿಗಿರುವ ಬದ್ಧತೆಯು ನಿಜವಾಗಿಯೂ ಗಣ್ಯಮಾಡಲ್ಪಡಲು ಅರ್ಹವಾದದ್ದಾಗಿ ಉಳಿಯುತ್ತದೆ. (g04 4/22)

[ಪುಟ 23ರಲ್ಲಿರುವ ಚೌಕ]

ಹಿಪೊಕ್ರೇಟಿಕ್‌ ಪ್ರಮಾಣವಚನ

ಲೂಟ್ವಿಕ್‌ ಏಡೆಲ್ಸ್‌ಟೈನ್‌ರಿಂದ ಭಾಷಾಂತರಿಸಲ್ಪಟ್ಟಿರುವಂತೆ

ಅಪೋಲೋ ವೈದ್ಯನ ಮತ್ತು ಅಸ್ಕ್‌ಲೀಪಿಯಸ್‌, ಈಯೀಯ ಹಾಗೂ ಪಾನಾಕೀಅ ಮತ್ತು ಎಲ್ಲಾ ದೇವದೇವತೆಗಳನ್ನು ನನ್ನ ಸಾಕ್ಷಿಯಾಗಿ ಇಟ್ಟುಕೊಂಡು ನಾನು ಪ್ರತಿಜ್ಞೆಮಾಡುವುದೇನೆಂದರೆ, ನನ್ನ ಸಾಮರ್ಥ್ಯ ಹಾಗೂ ವಿವೇಚನೆಗೆ ಅನುಸಾರವಾಗಿ ನಾನು ಈ ಪ್ರಮಾಣವಚನವನ್ನು ಮತ್ತು ಈ ಒಪ್ಪಂದವನ್ನು ಪೂರೈಸುವೆ.

ನನಗೆ ಯಾರು ಈ ಕಲೆಯನ್ನು ಕಲಿಸಿದ್ದಾರೋ ಅವರನ್ನು ನನ್ನ ಹೆತ್ತವರಂತೆ ವೀಕ್ಷಿಸುವೆ, ನನ್ನ ಜೀವಮಾನವಿಡೀ ಅವರೊಂದಿಗೆ ಸಹಕರಿಸುತ್ತಾ ಇರುತ್ತೇನೆ, ಅವರಿಗೆ ಹಣದ ಅಗತ್ಯವಿದ್ದಾಗ ನನ್ನ ಹಣವನ್ನು ಅವರೊಂದಿಗೆ ಹಂಚಿಕೊಳ್ಳುವೆ ಮತ್ತು ಅವರ ಸಂತತಿಯವರನ್ನು ನನ್ನ ಸಹೋದರರಂತೆ ನೋಡಿಕೊಂಡು, ಅವರಿಗೆ ಈ ಕಲೆಯನ್ನು​—⁠ಅವರು ಕಲಿಯಲು ಬಯಸುವುದಾದರೆ​—⁠ಯಾವುದೇ ಹಣ ಮತ್ತು ಒಪ್ಪಂದವಿಲ್ಲದೆ ಕಲಿಸಿಕೊಡುವೆ; ಈ ವೃತ್ತಿಯ ನಿಯಮಗಳನ್ನು ಹಾಗೂ ಅದರಲ್ಲಿ ನಾನು ಆಲಿಸಿ ಕಲಿತ ಉಪದೇಶವನ್ನು ಮತ್ತು ಇನ್ನಿತರ ವಿಷಯಗಳನ್ನು ನನ್ನ ಮಕ್ಕಳಿಗೆ ಹಾಗೂ ನನಗೆ ಬೋಧಿಸಿದವರ ಮಕ್ಕಳಿಗೆ ಮತ್ತು ನನ್ನೊಂದಿಗೆ ವೈದ್ಯಕೀಯ ಕಾನೂನಿಗನುಸಾರ ಪ್ರಮಾಣವಚನವನ್ನು ಸ್ವೀಕರಿಸಿದ ಇತರ ವಿದ್ಯಾರ್ಥಿಗಳಿಗೆ ಕಲಿಸಿಕೊಡುವೆ, ಆದರೆ ಇವರಲ್ಲದೆ ಬೇರಾರಿಗೂ ಕಲಿಸುವುದಿಲ್ಲ.

ನನ್ನ ಸಾಮರ್ಥ್ಯ ಮತ್ತು ವಿವೇಚನೆಗನುಸಾರ ರೋಗಿಗಳ ಪ್ರಯೋಜನಾರ್ಥವಾಗಿ ನಾನು ಪಥ್ಯ ಕ್ರಮವನ್ನು ನೀಡುವೆ; ಅವರಿಗೆ ಹಾನಿ ಮತ್ತು ಅನ್ಯಾಯವಾಗದಂತೆ ನೋಡಿಕೊಳ್ಳುವೆ.

ಮಾರಕ ಔಷಧವು ಕೇಳಲ್ಪಟ್ಟಲ್ಲಿ ನಾನು ಯಾರಿಗೂ ಅದನ್ನು ನೀಡುವುದಿಲ್ಲ, ಅಥವಾ ಅದನ್ನು ಯಾರಿಗೂ ಶಿಫಾರಸ್ಸುಮಾಡುವುದಿಲ್ಲ. ಅಂತೆಯೇ, ಯಾವುದೇ ಸ್ತ್ರೀಗೆ ಗರ್ಭಪಾತವಾಗುವಂಥ ಔಷಧವನ್ನೂ ನೀಡುವುದಿಲ್ಲ. ಶುದ್ಧ ಮತ್ತು ಪವಿತ್ರ ಮನಸ್ಸಿನಿಂದ ನಾನು ನನ್ನ ಜೀವವನ್ನು ಮತ್ತು ನನ್ನ ಕಲೆಯನ್ನು ಕಾಪಾಡಿಕೊಳ್ಳುವೆ.

ನಾನು ಶಸ್ತ್ರಚಿಕಿತ್ಸೆಯನ್ನು ಮಾಡದಿರುವೆ, ದೇಹದಲ್ಲಿ ಅಶ್ಮರಿ ಉಂಟಾಗಿ ಭಾದೆಪಡುತ್ತಿರುವವರ ಮೇಲೆಯೂ ಮಾಡದಿರುವೆ. ಅದಕ್ಕೆ ಬದಲಾಗಿ ಆ ಕೆಲಸವನ್ನು ಶಸ್ತ್ರಚಿಕಿತ್ಸಕನಿಗೆ ಬಿಟ್ಟುಬಿಡುವೆ.

ನಾನು ಯಾವುದೇ ಮನೆಗಳಿಗೆ ಭೇಟಿ ನೀಡಿದರೂ ಅಸ್ವಸ್ಥರ ಪ್ರಯೋಜನಾರ್ಥವಾಗಿ ಅದನ್ನು ಮಾಡುವೆ. ಎಲ್ಲಾ ರೀತಿಯ ಉದ್ದೇಶಪೂರ್ವಕ ಅನ್ಯಾಯ ಮತ್ತು ಕುಚೇಷ್ಟೆಯಿಂದ ಹಾಗೂ ವಿಶೇಷವಾಗಿ, ಗಂಡಸರಾಗಿರಲಿ ಹೆಂಗಸರಾಗಿರಲಿ ಸ್ವತಂತ್ರರಾಗಿರಲಿ ಆಳುಗಳಾಗಿರಲಿ ಅವರೊಂದಿಗೆ ಲೈಂಗಿಕ ಸಂಬಂಧವನ್ನಿಡುವುದರಿಂದ ದೂರವಿರುವೆ.

ಮನುಷ್ಯರ ಜೀವಕ್ಕೆ ಸಂಬಂಧಪಟ್ಟ ಚಿಕಿತ್ಸೆಯ ಅವಧಿಯಲ್ಲಿ ಅಥವಾ ಬೇರೆ ಸಮಯದಲ್ಲೂ ಆ ವ್ಯಕ್ತಿಗಳ ಕುರಿತಾಗಿ, ಬಹಿರಂಗಗೊಳಿಸಬಾರದ ಯಾವುದೇ ವಿಷಯವನ್ನು ನಾನು ನೋಡುವಲ್ಲಿ ಅಥವಾ ಕೇಳಿಸಿಕೊಳ್ಳುವಲ್ಲಿ, ಅದನ್ನು ನಾನು ಯಾರಿಗೂ ತಿಳಿಸದಿರುವೆ. ತಿಳಿಸಲು ಲಜ್ಜಾಸ್ಪದವಾಗಿರುವ ವಿಷಯವನ್ನು ನಾನು ಗೋಪ್ಯವಾಗಿಡುವೆ.

ನಾನು ಈ ಪ್ರಮಾಣವಚನಕ್ಕೆ ಅಂಟಿಕೊಂಡು ಅದನ್ನು ಉಲ್ಲಂಘಿಸದೇ ಇರುವಲ್ಲಿ, ಎಲ್ಲಾ ಜನರಿಂದ ಹಾಗೂ ಭವಿಷ್ಯತ್ತಿನ ಎಲ್ಲಾ ಸಮಯಗಳಲ್ಲಿ ನಾನು ಸತ್ಕೀರ್ತಿಯಿಂದ ಗೌರವಿಸಲ್ಪಟ್ಟು, ಬದುಕನ್ನು ಮತ್ತು ನನ್ನ ಕಲೆಯನ್ನು ಆನಂದಿಸುವ ಸುಯೋಗವು ನನಗೆ ನೀಡಲ್ಪಡಲಿ; ಆದರೆ ನಾನು ಇದಕ್ಕೆ ಅಂಟಿಕೊಳ್ಳದೆ ಸುಳ್ಳಾಗಿ ಆಣೆಯಿಟ್ಟರೆ, ಇದೆಲ್ಲದ್ದಕ್ಕೆ ವಿರುದ್ಧವಾದದ್ದು ನನ್ನ ಜೀವನದಲ್ಲಿ ಸಂಭವಿಸಲಿ.

[ಪುಟ 22ರಲ್ಲಿರುವ ಚಿತ್ರ]

ಹಿಪೊಕ್ರೇಟಿಕ್‌ ಸಂಗ್ರಹದಿಂದ ತೆಗೆದ ಒಂದು ಪುಟ

[ಪುಟ 22ರಲ್ಲಿರುವ ಚಿತ್ರ ಕೃಪೆ]

ಹಿಪೊಕ್ರೇಟಿಸ್‌ ಮತ್ತು ಪುಟ: Courtesy of the National Library of Medicine