ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉತ್ತಮ ಆರೋಗ್ಯಕ್ಕಾಗಿ ದೀರ್ಘಕಾಲದಿಂದ ನಡೆಯುತ್ತಿರುವ ಹೋರಾಟ

ಉತ್ತಮ ಆರೋಗ್ಯಕ್ಕಾಗಿ ದೀರ್ಘಕಾಲದಿಂದ ನಡೆಯುತ್ತಿರುವ ಹೋರಾಟ

ಉತ್ತಮ ಆರೋಗ್ಯಕ್ಕಾಗಿ ದೀರ್ಘಕಾಲದಿಂದ ನಡೆಯುತ್ತಿರುವ ಹೋರಾಟ

ಜೋಆ್ಯನಳು ನ್ಯೂ ಯಾರ್ಕಿನಲ್ಲಿ ವಾಸಿಸುತ್ತಿದ್ದಾಳೆ ಮತ್ತು ಅವಳಿಗೆ ಕ್ಷಯ (ಟಿಬಿ)ರೋಗವಿತ್ತು. ಆದರೆ ಅವಳಿಗಿದ್ದ ರೋಗವು ಸಾಮಾನ್ಯವಾದ ರೀತಿಯ ಕ್ಷಯರೋಗವಲ್ಲ. ಕಾರ್ಯತಃ ಎಲ್ಲಾ ರೀತಿಯ ಔಷಧಗಳನ್ನು ಪ್ರತಿರೋಧಿಸುವ ಸಾಮರ್ಥ್ಯವಿದ್ದ ಮತ್ತು ತನ್ನ ಬಲಿಪಶುಗಳಲ್ಲಿ ಅರ್ಧದಷ್ಟು ಮಂದಿಯನ್ನು ಕೊಲ್ಲುವ ರೂಪಾಂತರಿತ ಜಾತಿಯ ಕ್ಷಯರೋಗದಿಂದ ಅವಳು ಪೀಡಿತಳಾಗಿದ್ದಳು. ಆದರೂ, ಜೋಆ್ಯನಳು ಕ್ರಮವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಲಿಲ್ಲ, ಮತ್ತು ಇಷ್ಟರಲ್ಲಾಗಲೇ ಅವಳಿಂದ ಇತರರು ಸಹ ಕ್ಷಯರೋಗದಿಂದ ಒಮ್ಮೆಯಾದರೂ ಸೋಂಕಿತರಾದರು. ‘ಅವಳನ್ನು ಒಂದು ಕೋಣೆಯಲ್ಲಿ ಬಂಧಿಸಿಡಬೇಕು’ ಎಂದು ಹತಾಶರಾದ ಅವಳ ವೈದ್ಯರು ಹೇಳಿದರು.

ಕ್ಷಯರೋಗವು ಪುರಾತನಕಾಲದ ಕೊಲೆಗಡುಕ ರೋಗವಾಗಿದೆ. ವಾಸ್ತವದಲ್ಲಿ ಕೋಟಿಗಟ್ಟಲೆ ಜನರು ಈ ಕ್ಷಯರೋಗದಿಂದ ನರಳಿ ಸತ್ತಿದ್ದಾರೆ. ಪುರಾತನ ಈಜಿಪ್ಟ್‌ ಮತ್ತು ಪೆರುಗಳ ಮಮಿಗಳಲ್ಲಿ ಈ ರೋಗದ ಪುರಾವೆಯು ಕಂಡುಬಂದಿದೆ. ಇಂದು, ಮತ್ತೆ ತಲೆಯೆತ್ತಿರುವ ಕ್ಷಯರೋಗದ ಜಾತಿಗಳು ಪ್ರತಿ ವರ್ಷ ಸುಮಾರು 20 ಲಕ್ಷ ಜನರನ್ನು ಬಲಿತೆಗೆದುಕೊಳ್ಳುತ್ತಿವೆ.

ಆಫ್ರಿಕದ ಒಂದು ಗುಡಿಸಿಲಿನ ಚಿಕ್ಕ ಮಂಚವೊಂದರಲ್ಲಿ ಮಲಗಿಕೊಂಡಿದ್ದ ಕಾರ್ಲೀಟೋಸ್‌ನ ಹಣೆಯ ಮೇಲೆ ಬೆವರಿನ ಹನಿಗಳು ಮೂಡಿದ್ದವು. ಮಲೇರಿಯ ಜ್ವರವು ಅವನನ್ನು ಎಷ್ಟು ಅಶಕ್ತನನ್ನಾಗಿ ಮಾಡಿತ್ತೆಂದರೆ, ಅವನಿಗೆ ಅಳಲು ಸಹ ಶಕ್ತಿಯಿರಲಿಲ್ಲ. ಅವನ ಚಿಂತಾಭರಿತ ಹೆತ್ತವರ ಬಳಿ ಔಷಧಕ್ಕಾಗಿ ಹಣವೂ ಇರಲಿಲ್ಲ, ಮತ್ತು ತಮ್ಮ ಮಗನಿಗೆ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಲು ಹತ್ತಿರದಲ್ಲಿ ಒಂದು ಚಿಕಿತ್ಸಾಲಯವೂ ಇರಲಿಲ್ಲ. ಜ್ವರವಂತೂ ಕಡಿಮೆಯಾಗಲೇ ಇಲ್ಲ, ಮತ್ತು 48 ತಾಸುಗಳಲ್ಲಿ ಅವನು ಅಸುನೀಗಿದನು.

ಮಲೇರಿಯ ಜ್ವರವು ಪ್ರತಿ ವರ್ಷ ಕಾರ್ಲೀಟೋಸ್‌ನಂಥ ಸುಮಾರು ಹತ್ತು ಲಕ್ಷ ಮಕ್ಕಳನ್ನು ಕೊಲ್ಲುತ್ತದೆ. ಪೂರ್ವ ಆಫ್ರಿಕದ ಹಳ್ಳಿಗಳಲ್ಲಿ, ಅನೇಕ ಮಕ್ಕಳಿಗೆ ಒಂದು ತಿಂಗಳಿನಲ್ಲಿ, ಮಲೇರಿಯ ಜ್ವರವನ್ನು ಹರಡುವ ಸೊಳ್ಳೆಗಳು ಸುಮಾರು 50ರಿಂದ 80 ಸಲ ಕಚ್ಚುತ್ತವೆ. ಈ ಸೊಳ್ಳೆಗಳು ಹೊಸ ಕ್ಷೇತ್ರಗಳಿಗೂ ಹಬ್ಬುತ್ತಿವೆ, ಮತ್ತು ಮಲೇರಿಯ ಜ್ವರದ ವಿರುದ್ಧ ನೀಡಲ್ಪಡುವ ಔಷಧಗಳು ಕಡಿಮೆ ಪರಿಣಾಮಕಾರಿಯಾಗುತ್ತಿವೆ. ಒಂದು ಅಂದಾಜಿಗನುಸಾರ, ಪ್ರತಿ ವರ್ಷ 30 ಕೋಟಿ ಜನರು ತೀವ್ರವಾದ ಮಲೇರಿಯ ಜ್ವರದಿಂದ ನರಳುತ್ತಾರೆ.

ಕ್ಯಾಲಿಫಾರ್ನಿಯದ ಸಾನ್‌ ಫ್ರಾನ್ಸಿಸ್ಕೋದಲ್ಲಿ ವಾಸಿಸುತ್ತಿದ್ದ 30 ವರ್ಷ ಪ್ರಾಯದ ಕೆನಥ್‌ ಎಂಬ ವ್ಯಕ್ತಿ 1980ರಲ್ಲಿ ಪ್ರಥಮ ಬಾರಿಗೆ ವೈದ್ಯರ ಬಳಿ ಹೋದನು. ತನಗೆ ಅತಿಭೇದಿ ಮತ್ತು ವಿಪರೀತ ಆಯಾಸವಾಗುತ್ತಿದೆ ಎಂದು ಅವನು ವೈದ್ಯರಿಗೆ ತಿಳಿಸಿದನು. ಒಂದು ವರ್ಷದ ನಂತರ ಅವನು ಮೃತಪಟ್ಟನು. ಅವನು ಪರಿಣತರಿಂದ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಂಡಿದ್ದನಾದರೂ, ಅವನ ದೇಹವು ಕ್ರಮೇಣ ಬಡಕಲಾಗುತ್ತಾ ಹೋಯಿತು, ಮತ್ತು ಕಟ್ಟಕಡೆಗೆ ಅವನು ನ್ಯುಮೋನಿಯಕ್ಕೆ ತುತ್ತಾಗಿ ಸತ್ತನು.

ಎರಡು ವರ್ಷಗಳಾನಂತರ, ಸಾನ್‌ ಫ್ರಾನ್ಸಿಸ್ಕೋದಿಂದ ಸುಮಾರು 16,000 ಕಿಲೊಮೀಟರುಗಳಷ್ಟು ದೂರದಲ್ಲಿರುವ ಉತ್ತರ ಟಾನ್ಸೇನಿಯದಲ್ಲಿನ ಯುವತಿಯೊಬ್ಬಳು ಅದೇ ರೀತಿಯ ರೋಗಲಕ್ಷಣಗಳಿಂದ ಕಷ್ಟಾನುಭವಿಸತೊಡಗಿದಳು. ಕೆಲವೇ ವಾರಗಳಲ್ಲಿ ಅವಳು ನಡೆಯುವ ಸಾಮರ್ಥ್ಯವನ್ನು ಕಳೆದುಕೊಂಡಳು, ಮತ್ತು ಸ್ವಲ್ಪದರಲ್ಲೇ ತೀರಿಹೋದಳು. ಜೂಲೀಆನಾ ಎಂಬ ಹೆಸರು ಮುದ್ರಿಸಲ್ಪಟ್ಟಿದ್ದ ಬಟ್ಟೆಗಳನ್ನು ಮಾರುತ್ತಿದ್ದ ಪುರುಷನೊಬ್ಬನು ಟಾನ್ಸೇನಿಯದ ಆ ಯುವತಿಗೆ ಮತ್ತು ಇತರ ಸ್ಥಳಿಕ ಸ್ತ್ರೀಯರಿಗೆ ಈ ರೋಗವನ್ನು ಸೋಂಕಿಸಿದ್ದರಿಂದ, ಹಳ್ಳಿಯ ಜನರು ಈ ವಿಚಿತ್ರ ರೋಗಕ್ಕೆ ಜೂಲೀಆನಾಳ ರೋಗ ಎಂದು ಹೆಸರಿಟ್ಟರು.

ಕೆನಥ್‌ಗೆ ಮತ್ತು ಟಾನ್ಸೇನಿಯದ ಆ ಸ್ತ್ರೀಗೆ ಒಂದೇ ರೀತಿಯ ರೋಗವಿತ್ತು. ಅದು ಏಡ್ಸ್‌ ಆಗಿತ್ತು. ಇಸವಿ 1980ಗಳ ಆರಂಭದಲ್ಲಿ, ವೈದ್ಯಕೀಯ ವಿಜ್ಞಾನವು ಅತ್ಯಂತ ಅಪಾಯಕಾರಿ ಸೂಕ್ಷ್ಮಜೀವಿಗಳನ್ನು ನಿಯಂತ್ರಣಕ್ಕೆ ತಂದಿರುವಂತೆ ತೋರುತ್ತಿದ್ದಾಗಲೇ, ಈ ಹೊಸ ಸೋಂಕು ರೋಗವು ಇಡೀ ಮಾನವಕುಲವನ್ನು ಪೀಡಿಸಲಿಕ್ಕಾಗಿ ತಲೆದೋರಿತು. ಎರಡೇ ದಶಕಗಳಲ್ಲಿ ಏಡ್ಸ್‌ ರೋಗದಿಂದ ಉಂಟುಮಾಡಲ್ಪಟ್ಟ ಮರಣ ಸಂಖ್ಯೆಯು, 14ನೇ ಶತಮಾನದಲ್ಲಿ ಯೂರೇಸಿಯದಾದ್ಯಂತ ಹಬ್ಬಿದ ಮತ್ತು ಯೂರೋಪ್‌ ಎಂದೆಂದಿಗೂ ಮರೆಯದಂಥ ಪ್ಲೇಗ್‌ ರೋಗದಿಂದ ಬರಮಾಡಲ್ಪಟ್ಟ ಮರಣ ಸಂಖ್ಯೆಯಷ್ಟೇ ಉಚ್ಚವಾಗಿತ್ತು.

ಪ್ಲೇಗ್‌ಮಾರಿ

ಬ್ಲ್ಯಾಕ್‌ ಡೆತ್‌ (ಕರಿ ಮೃತ್ಯು) ಎಂದು ಕರೆಯಲ್ಪಡುವ ಪ್ಲೇಗ್‌ಮಾರಿಯ ಆರಂಭವು, 1347ರಷ್ಟು ಹಿಂದಿನ ಕಾಲದ್ದೆಂದು ಪತ್ತೆಹಚ್ಚಸಾಧ್ಯವಿದೆ. ಕ್ರಿಮೆಯದಿಂದ ಹಡಗೊಂದು ಸಿಸಿಲ್ಯ ದ್ವೀಪದಲ್ಲಿದ್ದ ಮೆಸಿನದ ತಂಗುದಾಣದಲ್ಲಿ ನಿಲ್ಲಿಸಲ್ಪಟ್ಟಾಗ ಇದು ತಲೆದೋರಿತು. ಸಾಮಾನ್ಯವಾಗಿ ಸಾಗಿಸುವ ಸಾಮಾನು-ಸರಂಜಾಮಿನೊಂದಿಗೆ ಈ ಹಡಗು ಪ್ಲೇಗ್‌ ರೋಗವನ್ನೂ ಸಾಗಿಸಿತು. * ಸ್ವಲ್ಪದರಲ್ಲೇ ಬ್ಲ್ಯಾಕ್‌ ಡೆತ್‌ ಇಟಲಿಯಾದ್ಯಂತ ಹಬ್ಬಿತು.

ಅದರ ಮುಂದಿನ ವರ್ಷದಲ್ಲಿ, ಇಟಲಿಯ ಸಿಯೆನದ ಆನ್‌ಯೋಲೊ ಡೀ ಟೂರಾ ಎಂಬಾತನು ತನ್ನ ಪಟ್ಟಣದಲ್ಲಿನ ಭೀಕರ ಸನ್ನಿವೇಶವನ್ನು ಹೀಗೆ ವರ್ಣಿಸಿದನು: ‘ಸಿಯೆನದಲ್ಲಿನ ಪ್ರಾಣನಷ್ಟವು ಮೇ ತಿಂಗಳಿನಲ್ಲಿ ಆರಂಭವಾಯಿತು. ಅದು ತುಂಬ ಕ್ರೂರವಾದ ಹಾಗೂ ಭೀಕರವಾದ ಸಂಗತಿಯಾಗಿತ್ತು. ರೋಗಿಗಳು ಹೆಚ್ಚುಕಡಿಮೆ ಆ ಕೂಡಲೇ ಸಾವನ್ನಪ್ಪಿದರು. ಹಗಲೂರಾತ್ರಿ ನೂರಾರು ಸಂಖ್ಯೆಯಲ್ಲಿ ಜನರು ಸತ್ತರು.’ ಅವನು ಕೂಡಿಸಿ ಹೇಳಿದ್ದು: ‘ನನ್ನ ಸ್ವಂತ ಕೈಯಿಂದಲೇ ನಾನು ನನ್ನ ಐದು ಮಂದಿ ಮಕ್ಕಳ ಶವಸಂಸ್ಕಾರಮಾಡಿದೆ, ಮತ್ತು ಇನ್ನೂ ಅನೇಕರು ಸಹ ಇದನ್ನೇ ಮಾಡಿದರು. ಮರಣದಲ್ಲಿ ಯಾರನ್ನೇ ಕಳೆದುಕೊಂಡರೂ ಯಾರೊಬ್ಬರೂ ಅಳಲಿಲ್ಲ, ಏಕೆಂದರೆ ಹೆಚ್ಚುಕಡಿಮೆ ಪ್ರತಿಯೊಬ್ಬರೂ ಮರಣವನ್ನು ಎದುರುನೋಡುತ್ತಿದ್ದರು. ಎಷ್ಟು ಅಪಾರ ಸಂಖ್ಯೆಯಲ್ಲಿ ಜನರು ಸತ್ತರೆಂದರೆ, ಇದು ಲೋಕಾಂತ್ಯವಾಗಿದೆ ಎಂದು ಎಲ್ಲರೂ ನಂಬಿದರು.’

ನಾಲ್ಕೇ ವರ್ಷಗಳಲ್ಲಿ ಪ್ಲೇಗು ಯೂರೋಪಿನಾದ್ಯಂತ ಹಬ್ಬಿತು ಮತ್ತು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು​—⁠ಬಹುಶಃ ಎರಡು ಕೋಟಿ ಮತ್ತು ಮೂರು ಕೋಟಿಗಳ ನಡುವಣ ಸಂಖ್ಯೆಯಷ್ಟು ಮಂದಿ​—⁠ತಮ್ಮ ಜೀವಗಳನ್ನು ಕಳೆದುಕೊಂಡರು ಎಂದು ಕೆಲವು ಇತಿಹಾಸಗಾರರು ಹೇಳುತ್ತಾರೆ. ಅತಿ ದೂರದ ಐಸ್‌ಲೆಂಡ್‌ಗೆ ಸಹ ಪ್ಲೇಗು ಹಬ್ಬಿತು ಮತ್ತು ಅದು ಜನಸಂಖ್ಯೆಯಲ್ಲಿ ಹೆಚ್ಚು ಮಂದಿಯನ್ನು ಸಂಹರಿಸಿಬಿಟ್ಟಿತು. ದೂರಪ್ರಾಚ್ಯದಲ್ಲಿ, ಪ್ಲೇಗ್‌ ಮತ್ತು ಅದೇ ಸಮಯದಲ್ಲಿ ಉಂಟಾದ ಬರಗಾಲದ ಫಲಿತಾಂಶವಾಗಿ, 13ನೆಯ ಶತಮಾನದ ಆರಂಭದಲ್ಲಿ ಚೀನಾದ ಜನಸಂಖ್ಯೆಯು 12.3 ಕೋಟಿಯಿಂದ 14ನೆಯ ಶತಮಾನದಲ್ಲಿ 6.5 ಕೋಟಿಗೆ ಬಂದಿಳಿಯಿತು ಎಂದು ಹೇಳಲಾಗಿದೆ.

ಹಿಂದಿನ ಯಾವುದೇ ಸಾಂಕ್ರಾಮಿಕ ರೋಗವಾಗಲಿ, ಯುದ್ಧವಾಗಲಿ, ಬರಗಾಲವಾಗಲಿ ಅಷ್ಟರ ತನಕ ಅಂಥ ವ್ಯಾಪಕ ನರಳಾಟವನ್ನು ಉಂಟುಮಾಡಿರಲಿಲ್ಲ. “ಅದು ಮಾನವ ಇತಿಹಾಸದಲ್ಲಿಯೇ ಸರಿಸಾಟಿಯಿಲ್ಲದಿರುವಂಥ ಒಂದು ವಿಪತ್ತಾಗಿತ್ತು” ಎಂದು ಮಾನವ ಮತ್ತು ಸೂಕ್ಷ್ಮಜೀವಿಗಳು (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುತ್ತದೆ. “ಯೂರೋಪ್‌, ಉತ್ತರ ಆಫ್ರಿಕ, ಮತ್ತು ಏಷ್ಯಾದ ಕೆಲವು ಕ್ಷೇತ್ರಗಳ ಕಾಲುಭಾಗ ಮತ್ತು ಅರ್ಧಭಾಗದ ನಡುವಣ ಸಂಖ್ಯೆಯಷ್ಟು ಜನರು ಸಾವನ್ನಪ್ಪಿದರು.”

ಅಮೆರಿಕಗಳು ಲೋಕದ ಇತರ ಭಾಗಗಳಿಂದ ಪ್ರತ್ಯೇಕವಾಗಿರುವುದರಿಂದ ಪ್ಲೇಗ್‌ಮಾರಿಯ ಹಾವಳಿಯಿಂದ ತಪ್ಪಿಸಿಕೊಂಡವು. ಆದರೆ ಮಹಾಸಾಗರದಲ್ಲಿ ಸಂಚರಿಸುವ ಹಡಗುಗಳು ಬೇಗನೆ ಈ ಪ್ರತ್ಯೇಕತೆಗೆ ಭಂಗವೊಡ್ಡಿದವು. ಹದಿನಾರನೆಯ ಶತಮಾನದಲ್ಲಿ, ಪ್ಲೇಗ್‌ಗಿಂತ ಹೆಚ್ಚು ಮಾರಕವಾಗಿ ಪರಿಣಮಿಸಿದ ಸಾಂಕ್ರಾಮಿಕ ರೋಗಗಳ ಒಂದು ಅಲೆಯು ‘ನೂತನ ಲೋಕದ’ ಮೇಲೆ ಧ್ವಂಸಕಾರಕ ಪರಿಣಾಮವನ್ನು ಬೀರಿತು.

ಸಿಡುಬು ರೋಗವು ಅಮೆರಿಕಗಳನ್ನು ವಶಪಡಿಸಿಕೊಂಡದ್ದು

ಇಸವಿ 1492ರಲ್ಲಿ ಕೊಲಂಬಸನು ವೆಸ್ಟ್‌ ಇಂಡೀಸ್‌ಗೆ ಆಗಮಿಸಿದಾಗ, ಅವನು ಅಲ್ಲಿನ ಸ್ಥಳೀಯ ಜನರನ್ನು ‘ಸುಂದರವಾದ ರೂಪವಿದ್ದು, ಅತ್ಯುತ್ತಮ ಗುಣಲಕ್ಷಣಗಳಿರುವ ಮತ್ತು ಮಧ್ಯಮ ಎತ್ತರವಿದ್ದು ದಷ್ಟಪುಷ್ಟ ದೇಹ’ಗಳುಳ್ಳ ಜನರೆಂದು ವರ್ಣಿಸಿದನು. ಆದರೂ, ಅವರ ಆರೋಗ್ಯಭರಿತ ಹೊರತೋರಿಕೆಯು, ‘ಪುರಾತನ ಲೋಕದ’ ರೋಗಗಳಿಗೆ ಅವರ ಸುಲಭಬೇಧ್ಯತೆಯನ್ನು ಮರೆಮಾಡಿತು.

ಇಸವಿ 1518ರಲ್ಲಿ, ಹಿಸ್ಪನಿಯೋಲ ದ್ವೀಪದಲ್ಲಿ ಸಿಡುಬು ರೋಗವು ತಲೆದೋರಿತು. ಸ್ಥಳೀಯ ಅಮೆರಿಕನರು ಹಿಂದೆಂದೂ ಸಿಡುಬು ರೋಗಕ್ಕೆ ತುತ್ತಾಗಿರಲಿಲ್ಲ, ಮತ್ತು ಇದರ ಪರಿಣಾಮವು ವಿಧ್ವಂಸಕವಾಗಿತ್ತು. ಒಬ್ಬ ಸ್ಪ್ಯಾನಿಷ್‌ ಪ್ರತ್ಯಕ್ಷದರ್ಶಿಯು ಅಂದಾಜುಮಾಡಿದಂತೆ, ಆ ದ್ವೀಪದಲ್ಲಿ ಕೇವಲ ಒಂದು ಸಾವಿರ ಜನರು ಮಾತ್ರ ಇದರಿಂದ ಬದುಕಿ ಉಳಿದರು. ಅತಿ ಬೇಗನೆ ಈ ಸಾಂಕ್ರಾಮಿಕ ರೋಗವು ಮೆಕ್ಸಿಕೊ ಮತ್ತು ಪೆರುವಿಗೆ ಸಹ ಹಬ್ಬಿತು ಮತ್ತು ಇದೇ ರೀತಿಯ ಪರಿಣಾಮಗಳು ಸಂಭವಿಸಿದವು.

ತದನಂತರದ ಶತಮಾನದಲ್ಲಿ, ಇಂಗ್ಲೆಂಡಿನಿಂದ ಬಂದ ನೆಲೆಸಿಗರು ಉತ್ತರ ಅಮೆರಿಕದ ಮ್ಯಾಸಚೂಸೆಟ್ಸ್‌ನ ಕ್ಷೇತ್ರಕ್ಕೆ ಆಗಮಿಸಿದಾಗ, ಸಿಡುಬು ರೋಗವು ಬಹುಮಟ್ಟಿಗೆ ದೇಶದ ಎಲ್ಲಾ ನಿವಾಸಿಗಳನ್ನು ಹತಿಸಿಬಿಟ್ಟಿತ್ತು ಎಂಬುದು ಅವರಿಗೆ ತಿಳಿದುಬಂತು. “ಸ್ಥಳೀಯರಲ್ಲಿ ಬಹುಮಟ್ಟಿಗೆ ಎಲ್ಲರೂ ಸಿಡುಬು ರೋಗದಿಂದ ಸಾವನ್ನಪ್ಪಿದ್ದಾರೆ” ಎಂದು ಇಂಗ್ಲೆಂಡಿನಿಂದ ಬಂದ ನೆಲೆಸಿಗರ ನಾಯಕನಾದ ಜಾನ್‌ ವಿಂತ್ರೋಪ್‌ ಬರೆದನು.

ಸಿಡುಬು ರೋಗದ ನಂತರ ಇತರ ಸಾಂಕ್ರಾಮಿಕ ರೋಗಗಳು ಬಂದವು. ಒಂದು ಕೃತಿಗನುಸಾರ, ಕೊಲಂಬಸನು ಬಂದು ಒಂದು ಶತಮಾನವು ಕಳೆಯುವಷ್ಟರಲ್ಲಿ, ವಿದೇಶೀಯರಿಂದ ಆಮದುಮಾಡಲ್ಪಟ್ಟ ರೋಗಗಳು ‘ನೂತನ ಲೋಕದ’ ಜನಸಂಖ್ಯೆಯಲ್ಲಿ 90 ಪ್ರತಿಶತದಷ್ಟು ಮಂದಿಯನ್ನು ಹತಿಸಿಬಿಟ್ಟವು. ಮೆಕ್ಸಿಕೋದ ಜನಸಂಖ್ಯೆಯು 3 ಕೋಟಿಯಿಂದ 30 ಲಕ್ಷಕ್ಕೆ ಇಳಿದಿತ್ತು, ಮತ್ತು ಪೆರುವಿನ ಜನಸಂಖ್ಯೆಯು 80 ಲಕ್ಷದಿಂದ 10 ಲಕ್ಷಕ್ಕೆ ಇಳಿದಿತ್ತು. ಸಿಡುಬು ರೋಗಕ್ಕೆ ತುತ್ತಾದವರು ಸ್ಥಳೀಯ ಅಮೆರಿಕನರು ಮಾತ್ರವೇ ಆಗಿರಲಿಲ್ಲ. “ಮಾನವ ಇತಿಹಾಸದಾದ್ಯಂತ ಸಿಡುಬು ರೋಗವು ಕೋಟಿಗಟ್ಟಲೆ ಜನರ ಜೀವಗಳನ್ನು ಬಲಿತೆಗೆದುಕೊಂಡಿದೆ, ಪ್ಲೇಗ್‌ಗಿಂತಲೂ ಎಷ್ಟೋ ಅಧಿಕ . . . ಮತ್ತು ಇಪ್ಪತ್ತನೆಯ ಶತಮಾನದಲ್ಲಿ ನಡೆದಿರುವ ಎಲ್ಲಾ ಯುದ್ಧಗಳಲ್ಲಿ ಕೊಲ್ಲಲ್ಪಟ್ಟಿರುವವರ ಒಟ್ಟು ಸಂಖ್ಯೆಗಿಂತಲೂ ಅಧಿಕ” ಎಂದು, ಉಪದ್ರವ​—⁠ಸಿಡುಬು ರೋಗದ ಮಾಜಿ ಹಾಗೂ ಭಾವೀ ಬೆದರಿಕೆ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುತ್ತದೆ.

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಹೋರಾಟವು ಇನ್ನೂ ಜಯವನ್ನು ಸಾಧಿಸಿಲ್ಲ

ಈಗ, ಪ್ಲೇಗ್‌ ಮತ್ತು ಸಿಡುಬಿನಂಥ ಭೀಕರ ಸಾಂಕ್ರಾಮಿಕ ರೋಗಗಳು ಗತ ಇತಿಹಾಸದಲ್ಲಿ ಮಾತ್ರವೇ ಸಂಭವಿಸಿರುವ ವಿಪತ್ತುಗಳಾಗಿ ತೋರಬಹುದು. ಇಪ್ಪತ್ತನೆಯ ಶತಮಾನದಲ್ಲಿ, ವಿಶೇಷವಾಗಿ ಔದ್ಯೋಗೀಕೃತ ದೇಶಗಳಲ್ಲಿ ಸೋಂಕು ರೋಗಗಳ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮಾನವಕುಲವು ಅನೇಕ ಸಂಘರ್ಷಗಳನ್ನು ಜಯಿಸಿದೆ. ವೈದ್ಯರು ಅಧಿಕಾಂಶ ರೋಗಗಳ ಮೂಲ ಕಾರಣಗಳನ್ನು ಪತ್ತೆಹಚ್ಚಿದರು, ಮತ್ತು ಅವರು ಈ ರೋಗಗಳನ್ನು ಗುಣಪಡಿಸುವ ಮಾರ್ಗಗಳನ್ನು ಸಹ ಕಂಡುಕೊಂಡರು. (ಕೆಳಗೆ ಕೊಡಲ್ಪಟ್ಟಿರುವ ಚೌಕವನ್ನು ನೋಡಿ.) ಹೊಸ ಲಸಿಕೆಗಳು ಮತ್ತು ಆ್ಯಂಟಿಬೈಆಟಿಕ್‌ಗಳು, ಗುಣಪಡಿಸಲು ತುಂಬ ಕಷ್ಟಕರವಾಗಿರುವಂಥ ರೋಗಗಳನ್ನೂ ನಿರ್ಮೂಲನಗೊಳಿಸುವುದರಲ್ಲಿ ಸರ್ವರೋಗಾಪಹಾರಿಗಳಾಗಿ ಕಾರ್ಯನಡಿಸುವಂತೆ ಕಂಡುಬಂತು.

ಆದರೂ, ‘ಅಲರ್ಜಿ ಮತ್ತು ಸೋಂಕು ರೋಗಗಳ ಯು.ಎಸ್‌. ರಾಷ್ಟ್ರೀಯ ಸಂಸ್ಥೆ’ಯ ಮಾಜಿ ನಿರ್ದೇಶಕರಾಗಿರುವ ಡಾ. ರಿಚರ್ಡ್‌ ಕ್ರೌಸ ಅವರು ತಿಳಿಸುವಂತೆ, “ಪ್ಲೇಗ್‌ ಮರಣ ಹಾಗೂ ತೆರಿಗೆಯಷ್ಟೇ ನಿಶ್ಚಿತವಾಗಿದೆ.” ಕ್ಷಯ ಮತ್ತು ಮಲೇರಿಯದಂಥ ರೋಗಗಳು ಸಹ ನಿರ್ಮೂಲನಮಾಡಲ್ಪಟ್ಟಿಲ್ಲ. ಮತ್ತು ಇತ್ತೀಚಿನ ಏಡ್ಸ್‌ ಸರ್ವವ್ಯಾಪಿ ರೋಗವು, ಅಂಟುರೋಗವು ಇನ್ನೂ ಭೂಗೋಳವನ್ನು ಬೆದರಿಸುತ್ತಿದೆ ಎಂಬ ನಿರಾಶಾದಾಯಕ ಜ್ಞಾಪನವನ್ನು ನೀಡಿದೆ. “ಸೋಂಕು ರೋಗಗಳು ಜಗತ್ತಿನಲ್ಲಿ ಮರಣಕ್ಕೆ ಮುಖ್ಯ ಕಾರಣವಾಗಿ ಉಳಿದಿವೆ; ಮುಂದೆಯೂ ದೀರ್ಘಕಾಲದ ವರೆಗೆ ಅವು ಹಾಗೆಯೇ ಉಳಿಯುವವು” ಎಂದು ಮಾನವ ಮತ್ತು ಸೂಕ್ಷ್ಮಜೀವಿಗಳು (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುತ್ತದೆ.

ರೋಗದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಗಮನಾರ್ಹ ಪ್ರಗತಿಯು ಮಾಡಲ್ಪಟ್ಟಿರುವುದಾದರೂ, ಕಳೆದ ಕೆಲವು ದಶಕಗಳ ಸಾಧನೆಗಳು ತಾತ್ಕಾಲಿಕವಾಗಿರಬಹುದಷ್ಟೆ ಎಂದು ಕೆಲವು ವೈದ್ಯರು ಕಳವಳಗೊಳ್ಳುತ್ತಾರೆ. “ಸೋಂಕು ರೋಗಗಳಿಂದ ಒಡ್ಡಲ್ಪಟ್ಟಿರುವ ಅಪಾಯವು ಇನ್ನೂ ಹೋಗಿಲ್ಲ​—⁠ಇನ್ನೂ ಅತ್ಯಧಿಕವಾಗುತ್ತಾ ಇದೆ” ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ರಾಬರ್ಟ್‌ ಶೋಪ್‌ ಎಚ್ಚರಿಕೆ ನೀಡುತ್ತಾರೆ. ಮುಂದಿನ ಲೇಖನವು ಇದಕ್ಕೆ ಕಾರಣವೇನು ಎಂಬುದನ್ನು ವಿವರಿಸುವುದು. (g04 5/22)

[ಪಾದಟಿಪ್ಪಣಿ]

^ ಪ್ಲೇಗ್‌ ರೋಗವು ಹಲವಾರು ರೂಪಗಳಲ್ಲಿ ಕಾಣಿಸಿಕೊಂಡಿತು. ಇದರಲ್ಲಿ ಗೆಡ್ಡೆ ಪ್ಲೇಗ್‌ ಮತ್ತು ನ್ಯುಮೋನಿಯದಂಥ ಪ್ಲೇಗ್‌ ಸಹ ಒಳಗೂಡಿತ್ತು. ಮುಖ್ಯವಾಗಿ ಇಲಿಗಳಿಂದ ರವಾನಿಸಲ್ಪಡುತ್ತಿದ್ದ ಚಿಗಟಗಳು ಗೆಡ್ಡೆ ಪ್ಲೇಗನ್ನು ಹಬ್ಬಿಸಿದವು ಮತ್ತು ಸೋಂಕಿತ ವ್ಯಕ್ತಿಗಳ ಕೆಮ್ಮು ಹಾಗೂ ಸೀನಿನ ಮೂಲಕ ಅನೇಕವೇಳೆ ನ್ಯುಮೋನಿಯದಂಥ ಪ್ಲೇಗು ಹಬ್ಬಿಸಲ್ಪಟ್ಟಿತು.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ಎರಡೇ ದಶಕಗಳಲ್ಲಿ ಏಡ್ಸ್‌ ರೋಗದಿಂದ ಉಂಟುಮಾಡಲ್ಪಟ್ಟ ಮರಣ ಸಂಖ್ಯೆಯು, 14ನೇ ಶತಮಾನದಲ್ಲಿ ಯೂರೇಸಿಯದಾದ್ಯಂತ ಹಬ್ಬಿದ ಪ್ಲೇಗ್‌ ರೋಗದಿಂದ ಬರಮಾಡಲ್ಪಟ್ಟ ಮರಣ ಸಂಖ್ಯೆಯಷ್ಟೇ ಉಚ್ಚವಾಗಿತ್ತು

[ಪುಟ 6ರಲ್ಲಿರುವ ಚೌಕ/ಚಿತ್ರಗಳು]

ಜ್ಞಾನಕ್ಕೆ ವ್ಯತಿರಿಕ್ತವಾಗಿ ಮೂಢನಂಬಿಕೆ

ಹದಿನಾಲ್ಕನೆಯ ಶತಮಾನದಲ್ಲಿ ಪ್ಲೇಗ್‌ಮಾರಿಯು ಏವಿಗ್ನಾನ್‌ನಲ್ಲಿದ್ದ ಪೋಪ್‌ನ ಮನೆವಾರ್ತೆಯ ಮೇಲೆ ಬೆದರಿಕೆಯೊಡ್ಡಿದಾಗ, ಕುಂಭರಾಶಿಯ ಸಂಕೇತದಲ್ಲಿ ಶನಿ, ಗುರು, ಮತ್ತು ಮಂಗಳ ಎಂಬ ಮೂರು ಗ್ರಹಗಳ ಸಮಾಗಮವೇ ಈ ಸಾಂಕ್ರಾಮಿಕ ರೋಗಕ್ಕೆ ಮೂಲ ಕಾರಣವೆಂದು ವೈದ್ಯರು ಅವನಿಗೆ ತಿಳಿಸಿದರು.

ಸುಮಾರು ನಾಲ್ಕು ಶತಮಾನಗಳ ಬಳಿಕ, ಜಾರ್ಜ್‌ ವಾಷಿಂಗ್ಟನ್‌ ಅವರಿಗೆ ಗಂಟಲು ನೋವು ಉಂಟಾಯಿತು. ಮೂವರು ಹೆಸರಾಂತ ವೈದ್ಯರು ಅವರ ಅಭಿಧಮನಿ ರಕ್ತನಾಳದಿಂದ ಎರಡು ಲೀಟರುಗಳಷ್ಟು ರಕ್ತವನ್ನು ಬಸಿಯುವ ಮೂಲಕ ಅವರ ಸೋಂಕಿಗೆ ಚಿಕಿತ್ಸೆ ನೀಡಿದರು. ಕೆಲವೇ ತಾಸುಗಳಲ್ಲಿ ಇವರು ತೀರಿಕೊಂಡರು. ಸುಮಾರು 2,500 ವರ್ಷಗಳ ವರೆಗೆ, ಅಂದರೆ ಹಿಪೊಕ್ರೇಟಿಸನ ಕಾಲದಿಂದ ಹಿಡಿದು 19ನೆಯ ಶತಮಾನದ ಮಧ್ಯಭಾಗದ ತನಕ, ರೋಗಿಯ ರಕ್ತವನ್ನು ಹೊರಡಿಸುವುದು ಪ್ರಮಾಣಭೂತವಾದ ವೈದ್ಯಕೀಯ ರೂಢಿಯಾಗಿತ್ತು.

ಮೂಢನಂಬಿಕೆ ಮತ್ತು ಸಂಪ್ರದಾಯವು ವೈದ್ಯಕೀಯ ಪ್ರಗತಿಯನ್ನು ವಿಳಂಬಿಸಿತಾದರೂ, ಸೋಂಕು ರೋಗಗಳ ಕಾರಣಗಳು ಮತ್ತು ಅವುಗಳಿಗಾಗಿರುವ ಔಷಧಗಳನ್ನು ಕಂಡುಹಿಡಿಯಲಿಕ್ಕಾಗಿ ಸಮರ್ಪಣಾಭಾವದ ವೈದ್ಯರು ಬಹಳಷ್ಟು ಶ್ರಮಿಸಿದರು. ಅವರು ಮಾಡಿದ ಪ್ರಮುಖ ಸಾಧನೆಗಳಲ್ಲಿ ಕೆಲವು ಈ ಕೆಳಗೆ ಕೊಡಲ್ಪಟ್ಟಿವೆ.

ಸಿಡುಬು ರೋಗ. 1798ರಲ್ಲಿ, ಎಡ್ವರ್ಡ್‌ ಜನ್ನರ್‌ ಎಂಬಾತನು ಸಿಡುಬು ರೋಗಕ್ಕೆ ಒಂದು ಲಸಿಕೆಯನ್ನು ಸಿದ್ಧಪಡಿಸುವುದರಲ್ಲಿ ಯಶಸ್ವಿಯಾದನು. ಇಪ್ಪತ್ತನೆಯ ಶತಮಾನದಲ್ಲಿ, ಪೋಲಿಯೊ, ಪೀತಜ್ವರ, ದಡಾರ, ಮತ್ತು ಜರ್ಮನ್‌ ದಡಾರದಂಥ ಇತರ ರೋಗಗಳನ್ನು ತಡೆಗಟ್ಟುವುದರಲ್ಲಿ ಲಸಿಕೆಗಳು ಪರಿಣಾಮಕಾರಿಯಾಗಿ ಕಂಡುಬಂದಿವೆ.

ಕ್ಷಯರೋಗ. ಇಸವಿ 1882ರಲ್ಲಿ, ರಾಬರ್ಟ್‌ ಕೋಚ್‌ ಕ್ಷಯರೋಗದ ಬ್ಯಾಕ್ಟೀರಿಯವನ್ನು ಗುರುತಿಸಿದನು ಮತ್ತು ಈ ರೋಗಕ್ಕಾಗಿ ಒಂದು ಪರೀಕ್ಷೆಯನ್ನು ವಿಕಸಿಸಿದನು. ಸುಮಾರು 60 ವರ್ಷಗಳ ಬಳಿಕ, ಕ್ಷಯರೋಗಕ್ಕೆ ಚಿಕಿತ್ಸೆ ನೀಡಲಿಕ್ಕಾಗಿ ಸ್ಟ್ರೆಪ್ಟೊಮೈಸಿನ್‌ ಎಂಬ ಪರಿಣಾಮಕಾರಿ ಆ್ಯಂಟಿಬೈಆಟಿಕ್‌ ಅನ್ನು ಕಂಡುಹಿಡಿಯಲಾಯಿತು. ಈ ಔಷಧವು ಗೆಡ್ಡೆ ಪ್ಲೇಗನ್ನು ಗುಣಪಡಿಸುವುದರಲ್ಲಿಯೂ ಪ್ರಯೋಜನದಾಯಕವಾಗಿ ರುಜುವಾಯಿತು.

ಮಲೇರಿಯ. ಹದಿನೇಳನೆಯ ಶತಮಾನದಿಂದ, ಸಿಂಕೋನ ಮರದ ತೊಗಟೆಯಲ್ಲಿ ದೊರಕುವ ಕ್ವಿನೀನ್‌ ಎಂಬ ಪದಾರ್ಥವು ಮಲೇರಿಯ ಜ್ವರದಿಂದ ನರಳುತ್ತಿದ್ದ ಕೋಟಿಗಟ್ಟಲೆ ಜನರ ಜೀವಗಳನ್ನು ಸಂರಕ್ಷಿಸಿತು. ಇಸವಿ 1897ರಲ್ಲಿ, ರೊನಾಲ್ಡ್‌ ರೋಸ್‌ ಎಂಬಾತನು ಅನೊಫೆಲಿಸ್‌ ಎಂಬ ಸೊಳ್ಳೆಗಳು ಮಲೇರಿಯ ಜ್ವರವನ್ನು ಹಬ್ಬಿಸುತ್ತವೆ ಎಂಬುದನ್ನು ಕಂಡುಹಿಡಿದನು, ಮತ್ತು ಉಷ್ಣವಲಯದ ದೇಶಗಳಲ್ಲಿ ಮರಣ ಸಂಖ್ಯೆಯನ್ನು ಕಡಿಮೆಗೊಳಿಸಲಿಕ್ಕಾಗಿ ಸೊಳ್ಳೆಗಳ ಸಂಖ್ಯಾಭಿವೃದ್ಧಿಯನ್ನು ನಿಯಂತ್ರಿಸುವ ಪ್ರಯತ್ನಗಳು ಮಾಡಲ್ಪಟ್ಟವು.

[ಚಿತ್ರಗಳು]

ರಾಶಿಚಕ್ರ (ಮೇಲೆ) ಮತ್ತು ರಕ್ತವನ್ನು ಹೊರಡಿಸುವುದು

[ಕೃಪೆ]

ಎರಡೂ ಚಿತ್ರ: Biblioteca Histórica “Marqués de Valdecilla”

[ಪುಟ 3ರಲ್ಲಿರುವ ಚಿತ್ರಗಳು]

ಇಂದು, ಮತ್ತೆ ತಲೆಯೆತ್ತಿರುವ ಕ್ಷಯರೋಗದ ಜಾತಿಗಳು ಪ್ರತಿ ವರ್ಷ ಸುಮಾರು 20 ಲಕ್ಷ ಜನರನ್ನು ಬಲಿತೆಗೆದುಕೊಳ್ಳುತ್ತಿವೆ

[ಕೃಪೆ]

ಎಕ್ಸ್‌ ರೇ: New Jersey Medical School–National Tuberculosis Center; ಪುರುಷ: Photo: WHO/Thierry Falise

[ಪುಟ 4ರಲ್ಲಿರುವ ಚಿತ್ರ]

ಸುಮಾರು 1500ನೆಯ ಇಸವಿಯದ್ದೆಂದು ಹೇಳಲಾಗುವ ಒಂದು ಜರ್ಮನ್‌ ಕೆತ್ತನೆಯು, ಪ್ಲೇಗ್‌ಮಾರಿಯ ವಿರುದ್ಧ ಸಂರಕ್ಷಿಸಿಕೊಳ್ಳಲಿಕ್ಕಾಗಿ ವೈದ್ಯನೊಬ್ಬನು ಒಂದು ಮಾಸ್ಕನ್ನು ಧರಿಸಿರುವುದನ್ನು ಚಿತ್ರಿಸುತ್ತದೆ. ಅದರ ಕೊಕ್ಕಿನಲ್ಲಿ ಸುಗಂಧದ್ರವ್ಯವಿತ್ತು

[ಕೃಪೆ]

Godo-Foto

[ಪುಟ 4ರಲ್ಲಿರುವ ಚಿತ್ರ]

ಗೆಡ್ಡೆ ಪ್ಲೇಗನ್ನು ಉಂಟುಮಾಡಿದ ಬ್ಯಾಕ್ಟೀರಿಯ

[ಕೃಪೆ]

© Gary Gaugler/Visuals Unlimited