ಜಗತ್ತನ್ನು ಗಮನಿಸುವುದು
ಜಗತ್ತನ್ನು ಗಮನಿಸುವುದು
ಪ್ರಸಂಗಗಳು ಮಾರಾಟಕ್ಕಿವೆ
“ಪ್ರಸಂಗಗಳನ್ನು ತಯಾರಿಸಲು ಹೆಣಗಾಡುತ್ತಿರುವ ತೀರಾ ಕಾರ್ಯಮಗ್ನ ಪಾದ್ರಿಗಳ ಪ್ರಾರ್ಥನೆಗಳು ಉತ್ತರಿಸಲ್ಪಟ್ಟಿವೆ: ಎಲ್ಲಾ ಸಂದರ್ಭಗಳಿಗಾಗಿ ಬೇಕಾಗಿರುವ ಪ್ರಸಂಗಗಳನ್ನು ಒದಗಿಸಿಕೊಡುವ ಒಂದು ಹೊಸ ವೆಬ್‌ಸೈಟ್, ಚರ್ಚ್ ಆಫ್ ಇಂಗ್ಲೆಂಡಿನ ಧರ್ಮಾರಾಧನೆಗಳನ್ನು ನಡೆಸಲು ಅಧಿಕಾರ ಪಡೆದಿರುವ ಒಬ್ಬ ವ್ಯಕ್ತಿಯಿಂದ ಪರಿಚಯಿಸಲ್ಪಟ್ಟಿದೆ” ಎಂದು ಲಂಡನಿನ ದ ಡೇಲಿ ಟೆಲಿಗ್ರಾಫ್ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಈ ವೆಬ್‌ಸೈಟಿನ ಕರ್ತೃವೂ ವೃತ್ತಿಪರ ಬರಹಗಾರನೂ ಆದ ಬೊಬ್ ಆಸ್ಟಿನ್ ಹೇಳುವುದು: “ಪಾದ್ರಿಗಳು ದಿನೇ ದಿನೇ ಹೆಚ್ಚೆಚ್ಚು ಕಾರ್ಯಮಗ್ನರಾಗುತ್ತಾ ಇದ್ದಾರೆ ಮತ್ತು ಅವರ ಆದ್ಯತೆಯ ಪಟ್ಟಿಯಲ್ಲಿ ಪ್ರಸಂಗಗಳ ತಯಾರಿಯು ತೀರಾ ಕೊನೆಗೆ ಹೋಗಿದೆ.” ಆದುದರಿಂದ, “ವಿಚಾರಪ್ರೇರಕ, ಸ್ಫೂರ್ತಿದಾಯಕ, ಮತ್ತು ಶೈಕ್ಷಣಿಕವೂ” ಆಗಿರುವ “ವಿಶ್ವಾಸಾರ್ಹ, ರೆಡಿಮೇಡ್ ಪ್ರಸಂಗಗಳನ್ನು” ಒದಗಿಸಿಕೊಡುವುದಾಗಿ ಅವನು ಹೇಳುತ್ತಾನೆ. ಈಗಾಗಲೇ ಈ ವೆಬ್‌ಸೈಟಿನಲ್ಲಿ, “50 ‘ಪೀಠ-ಪರೀಕ್ಷಿತ’ ಪ್ರಸಂಗಗಳಿವೆ ಮತ್ತು ಇವು, ಅನೇಕಾನೇಕ ಬೈಬಲ್ ವಚನಗಳನ್ನು ಹಾಗೂ ಮುಖ್ಯ ವಿಷಯಗಳನ್ನು ಆವರಿಸುತ್ತವೆ.” ಆದರೆ ಇವು, ಅತಿರೇಕ ಅಥವಾ ಸಿದ್ಧಾಂತಿಕವಾಗಿ ವಾದಾಸ್ಪದವಾದ ದೃಷ್ಟಿಕೋನಗಳನ್ನು ದೂರವಿಟ್ಟಿವೆ ಎಂದು ಆ ವಾರ್ತಾಪತ್ರಿಕೆಯು ವಿವರಿಸುತ್ತದೆ. “ಸಭೆಯು ಸುಲಭವಾಗಿ ಗ್ರಹಿಸಶಕ್ತವಾಗುವಂತೆ ವಿನ್ಯಾಸಿಸಲ್ಪಟ್ಟಿರುವ 10ರಿಂದ 12 ನಿಮಿಷ”ಗಳ ಅವಧಿಯದ್ದೆಂದು ವರ್ಣಿಸಲಾಗಿರುವ ಈ ಪ್ರಸಂಗಗಳ ಪ್ರತಿಯೊಂದರ ಬೆಲೆಯು 13 ಡಾಲರ್‌ಗಳಾಗಿವೆ. (g04 6/8)
ಶೀಘ್ರ ನಿಕೊಟಿನ್ ಚಟ
“ಸಿಗರೇಟಿನ ಮೊದಲ ಸೇದುವಿಕೆಯೇ ಒಬ್ಬ ಯುವ ವ್ಯಕ್ತಿಯು ಅದರ ಚಟಕ್ಕೆ ಸಿಲುಕುವಂತೆ ಮಾಡಲು ಸಾಕು,” ಎಂದು ಕೆನಡದ ನ್ಯಾಷನಲ್ ಪೋಸ್ಟ್ ಎಂಬ ವಾರ್ತಾಪತ್ರಿಕೆಯು ವರದಿಮಾಡುತ್ತದೆ. ಅದು ಮುಂದುವರಿಸುವುದು: “ಅನೇಕ ವರುಷಗಳ ವರೆಗೆ ಬಹಳಷ್ಟು ಧೂಮಪಾನ ಮಾಡಿದ ನಂತರವೇ ಒಬ್ಬ ವ್ಯಕ್ತಿಯು ನಿಧಾನವಾಗಿ ನಿಕೊಟಿನ್ ಚಟಕ್ಕೆ ಬಲಿಯಾಗುತ್ತಾನೆ ಎಂಬ ವ್ಯಾಪಕ ಅಭಿಪ್ರಾಯವನ್ನು ಈ ವಿಶೇಷ ಕಂಡುಹಿಡಿಯುವಿಕೆಗಳು ಸುಳ್ಳಾಗಿಸಿವೆ.” 1,200 ಹದಿವಯಸ್ಕರನ್ನು ಸುಮಾರು ಆರು ವರುಷಗಳ ತನಕ ಅಧ್ಯಯನಮಾಡುವ ಮೂಲಕ ಸಂಶೋಧಕರು ಕಂಡುಹಿಡಿದದ್ದೇನೆಂದರೆ, “ಬಹಳ ಅಪರೂಪಕ್ಕೆ ಸೇದುತ್ತಿದ್ದ ಹದಿವಯಸ್ಕರಲ್ಲಿಯೂ, ಸಮವಯಸ್ಕರ ಒತ್ತಡಕ್ಕಿಂತ ಶಾರೀರಿಕ ಚಟವು ಹೆಚ್ಚು ಬಲವಾದ ಪ್ರಭಾವವಾಗಿದೆ” ಎಂಬುದಾಗಿ ಆ ವಾರ್ತಾಪತ್ರಿಕೆಯು ತಿಳಿಸುತ್ತದೆ. ಆ ಅಧ್ಯಯನಕ್ಕನುಸಾರ, “ಮೊದಲ ಬಾರಿ ನಿಕೊಟಿನ್ ಸೇವಿಸಿದ ಮತ್ತು ಪ್ರತಿದಿನ ಸೇವಿಸುವ ಹಂತದ ಕಡೆಗೆ ಸಾಗುತ್ತಿರುವ ಅನೇಕ ಯುವಜನರಲ್ಲಿ ನಿಕೊಟಿನ್ ಅವಲಂಬನೆಯ ರೋಗಲಕ್ಷಣಗಳು ಕಂಡುಬರುತ್ತವೆ.” ಧೂಮಪಾನವಿರೋಧಿಸುವ ಚಳವಳಿಗಳನ್ನು, ಯುವಜನರು ಧೂಮಪಾನ ಮಾಡುವಂತೆ ಬರುವ ಒತ್ತಡವನ್ನು ಎದುರಿಸಲಿಕ್ಕಾಗಿ ಸಹಾಯಮಾಡಲು ಮಾತ್ರವಲ್ಲ, ಈಗಾಗಲೇ ಧೂಮಪಾನ ಮಾಡಿರುವವರು ನಿಕೊಟಿನ್ ಅವಲಂಬನೆಯನ್ನು ಜಯಿಸುವಂತೆ ಸಹಾಯಮಾಡುವ ಸಲುವಾಗಿಯೂ ಹೊಂದಿಸಿಕೊಳ್ಳಬೇಕು ಎಂದು ಸಂಶೋಧಕರು ಹೇಳುತ್ತಾರೆ. (g04 5/22)
ಹೆಚ್ಚೆಚ್ಚು ಯುವ ಜನರು ಬೀದಿಯಲ್ಲಿ ಜೀವಿಸುತ್ತಾರೆ
“ಮಡ್ರಿಡ್ ನಗರದ ಬೀದಿಗಳಲ್ಲಿ ಜೀವಿಸುವ ಹದಿವಯಸ್ಕರ ಸಂಖ್ಯೆಯು ವೃದ್ಧಿಯಾಗುತ್ತಿದೆ,” ಎಂದು ಎಲ್ ಪಾಯೀಸ್ ಎಂಬ ಸ್ಪಾನಿಷ್ ಭಾಷೆಯ ದಿನಪತ್ರಿಕೆಯ ಆಂಗ್ಲ ಆವೃತ್ತಿಯು ತಿಳಿಸುತ್ತದೆ. ಒಂದು ವಿಶ್ವವಿದ್ಯಾನಿಲಯದ ಅಧ್ಯಯನಕ್ಕನುಸಾರ, “ಮಡ್ರಿಡ್‌ನ 5,000 ಮನೆರಹಿತ ಜನರಲ್ಲಿ ಸುಮಾರು 1,250 ಮಂದಿ ಮನೆರಹಿತರಾದಾಗ 20 ವರುಷಕ್ಕಿಂತಲೂ ಕಡಿಮೆ ಪ್ರಾಯದವರಾಗಿದ್ದರು.” “ಹೆಚ್ಚಿನ ಮನೆರಹಿತ ಯುವಜನರು, ಒಡೆದ ಕುಟುಂಬಗಳಿಂದ ಬಂದವರಾಗಿದ್ದಾರೆ ಮತ್ತು ಅವರ ಜೀವನವು ನೋವಿನಿಂದ ತುಂಬಿದೆ ಎಂಬುದು ವ್ಯಕ್ತ.” ವಾಸ್ತವದಲ್ಲಿ, “ಪ್ರತಿ ಮೂರು ಮಂದಿ ಯುವಜನರಲ್ಲಿ ಇಬ್ಬರು, ಅಮಲೌಷಧ ವ್ಯಸನಿಗಳ ಅಥವಾ ಮಾದಕ ಪದಾರ್ಥಗಳನ್ನು ದುರುಪಯೋಗಿಸುವವರ ಮಕ್ಕಳಾಗಿದ್ದಾರೆ ಮತ್ತು ಅಷ್ಟೇ ಸಂಖ್ಯೆಯ ಯುವಜನರು ಮನೆಯಲ್ಲಿಯೇ ದೌರ್ಜನ್ಯಕ್ಕೆ ಒಳಗಾದವರಾಗಿದ್ದಾರೆ.” ಈ ವರದಿಯ ಕರ್ತೃ, ಮಾನ್ವೆಲ್ ಮುನ್ಯೋಸ್ ತಿಳಿಸುವುದು: “ಮೆಡಿಟರೇನಿಯನ್ ಸಂಸ್ಕೃತಿಗಳಲ್ಲಿ ಲಾಕ್ಷಣಿಕವಾಗಿರುವ ಸಾಂಪ್ರದಾಯಿಕ ಕುಟುಂಬ ಬಂಧಗಳು ಈಗ ಕುಸಿಯಲಾರಂಭಿಸಿವೆ.” (g04 5/8)
“ದಷ್ಟಪುಷ್ಟರಿಗಾಗಿ” ಒಂದು ಬೀಚ್
ಮೆಕ್ಸಿಕೊವಿನ ಒಂದು ಹೋಟೆಲು, ತೆಳ್ಳಗಿನ ಮೈಕಟ್ಟುಳ್ಳ ಜನರಿಂದ ತುಂಬಿರುವ ಬೀಚ್‌ಗೆ ಬರಲು ನಾಚಿಗೆಪಡುವ ದಷ್ಟಪುಷ್ಟ ಜನರಿಗಾಗಿ ಒಂದು ನಿರ್ದಿಷ್ಟ ಸ್ಥಳವನ್ನು ಪ್ರತ್ಯೇಕಿಸಿದೆ ಎಂದು ಎಲ್ ಇಕೊನೊಮೀಸ್ಟಾ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಕ್ಯಾನ್ಕನ್ ಬೀಚಿನ ಪಕ್ಕದಲ್ಲಿರುವ ಒಂದು ಹೋಟೆಲ್ ಈ ಧ್ಯೇಯ ಮಂತ್ರವನ್ನು ತನ್ನದ್ದಾಗಿಸಿಕೊಂಡಿದೆ: “ದಪ್ಪಗಾಗಿರಿ ಮತ್ತು ಸಂತೋಷದಿಂದಿರಿ.” ಈ ಹೋಟೆಲಿನ ಮುಖ್ಯ ಗುರಿಯು, “ತಮ್ಮ ವಿಪರೀತ ದೇಹತೂಕದ ಕಾರಣ ಸ್ನಾನದ ಉಡುಪನ್ನು ಧರಿಸಲು ಅಂಜುವ ಜನರನ್ನು ಆಕರ್ಷಿಸುವುದೇ ಆಗಿದೆ.” ಎಲ್ಲಾ ಗಾತ್ರದ ದೇಹತೂಕವುಳ್ಳ ಜನರಿಂದ ಕೂಡಿರುವ ಆ ಹೋಟೆಲಿನ ಸಿಬ್ಬಂದಿಯು, ಹೆಚ್ಚು ದೇಹತೂಕದ ಯಾತ್ರಿಗಳನ್ನು ಯಾವುದೇ ಭೇದವಿಲ್ಲದೆ ಉಪಚರಿಸುವಂತೆ ತರಬೇತಿಯನ್ನು ಹೊಂದಿದೆ ಏಕೆಂದರೆ, ವರದಿಯು ತಿಳಿಸುವ ಮೇರೆಗೆ, “ಈಗಾಗಲೇ ಅವರು ತಮ್ಮ ಜೀವನದ ದೈನಂದಿನ ಚಟುವಟಿಕೆಗಳಲ್ಲಿ ಬಹಳಷ್ಟು ಭೇದಭಾವವನ್ನು ಅನುಭವಿಸಿರುತ್ತಾರೆ.” (g04 5/8)
ಮಕ್ಕಳ ಆತ್ಮಹತ್ಯೆ ಮುನ್ನೆಚ್ಚರಿಕೆ
“ಆತ್ಮಹತ್ಯೆಯನ್ನು ಮಾಡಲು ಪ್ರಯತ್ನಿಸುವ ಅಥವಾ ಮಾಡಿರುವ ಮಕ್ಕಳಲ್ಲಿ 80 ಪ್ರತಿಶತ, ಕೆಲವು ದಿವಸಗಳ ಇಲ್ಲವೆ ತಿಂಗಳುಗಳ ಮುನ್ನವೇ ಅದನ್ನು ಬಾಯಿಮಾತಿನಿಂದಲೋ ಬರೆದಿಟ್ಟೋ ತಿಳಿಯಪಡಿಸಿರುತ್ತಾರೆ,” ಎಂಬುದಾಗಿ ಮೆಕ್ಸಿಕೊ ನಗರದ ಮೀಲೆನ್ಯೋ ವಾರ್ತಾಪತ್ರಿಕೆಯು ವರದಿಸುತ್ತದೆ. ಚಿಕ್ಕ ಪ್ರಾಯದ ಮಕ್ಕಳು, ಜೀವಿಸುವ ಆಸೆಯನ್ನು ಕಳೆದುಕೊಳ್ಳಲು ಮುಖ್ಯ ಕಾರಣಗಳು (ಶಾರೀರಿಕ, ಮಾನಸಿಕ, ಅಥವಾ ಮೌಖಿಕ) ದುರುಪಚಾರ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ವಿಭಜನೆ, ಮತ್ತು ಶಾಲಾ-ಸಂಬಂಧಿತ ಸಮಸ್ಯೆಗಳು ಮುಂತಾದವುಗಳೇ ಆಗಿವೆ. ಮೆಕ್ಸಿಕೊವಿನ ಸಾಮಾಜಿಕ ಭದ್ರತಾ ಸಂಸ್ಥೆಯ ಮನೋರೋಗ ತಜ್ಞರಾದ ಹೋಸೇ ಲೂಯೀಸ್ ಬಾಸ್‌ಕೆಸ್‌ರಿಗನುಸಾರ, ಮರಣ ಎಂಬುವಂಥದ್ದು ಟಿವಿಯಲ್ಲಿ, ಚಲನಚಿತ್ರಗಳಲ್ಲಿ, ವಿಡಿಯೊ ಆಟಗಳಲ್ಲಿ, ಮತ್ತು ಪುಸ್ತಕಗಳಲ್ಲಿ ಎಷ್ಟು ಸರ್ವಸಾಮಾನ್ಯವಾಗಿದೆ ಎಂದರೆ ಮಕ್ಕಳು ಜೀವದ ಮೌಲ್ಯದ ಕುರಿತಾಗಿ ತಪ್ಪಾದ ಅಭಿಪ್ರಾಯವನ್ನು ರೂಪಿಸಿದ್ದಾರೆ. ಅವರು ಕೂಡಿಸುವುದು, ಎಂಟರಿಂದ ಹತ್ತು ವರುಷಗಳ ಪ್ರಾಯದಲ್ಲಿರುವ ಪ್ರತಿ 100 ಮಕ್ಕಳಲ್ಲಿ 15 ಮಕ್ಕಳಿಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತವೆ ಮತ್ತು ಅವರಲ್ಲಿ 5 ಪ್ರತಿಶತ ಮಕ್ಕಳು ತಮ್ಮ ಜೀವವನ್ನು ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ. ಆದುದರಿಂದ, ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಹೇಳುವಾಗ, ಅದನ್ನು ಸುಮ್ಮನೆ ಹೆದರಿಸಲು ಹೇಳುತ್ತಿದ್ದಾರೆ ಅಥವಾ ನಮ್ಮ ಗಮನವನ್ನು ಅವರ ಕಡೆಗೆ ಸೆಳೆಯಲು ಹೀಗೆ ಹೇಳುತ್ತಿದ್ದಾರೆ ಎಂದು ತಳ್ಳಿಹಾಕದೆ ಅದರ ಕಡೆಗೆ ನಿಕಟ ಗಮನವನ್ನು ಕೊಡುವಂತೆ ಆ ವಾರ್ತಾಪತ್ರಿಕೆಯು ಶಿಫಾರಸ್ಸುಮಾಡುತ್ತದೆ. ಅದು ಕೂಡಿಸುವುದು: “ಹೆತ್ತವರು ತಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯಬೇಕು, ಅವರೊಂದಿಗೆ ಆಟವಾಡಬೇಕು, ಸಂವಾದದ ದ್ವಾರವನ್ನು ಎಂದಿಗೂ ಮುಚ್ಚಿಬಿಡಬಾರದು, ಮತ್ತು ಅವರಿಗೆ ಯಾವಾಗಲೂ ಪ್ರೀತಿ ತೋರಿಸುತ್ತಾ ಇರಬೇಕು.” (g04 5/22)
ಜನರಿಗಿಂತ ಹಸುಗಳ ಮೌಲ್ಯ ಅಧಿಕವೊ?
ಲೋಕದಲ್ಲಿರುವ ಧನಿಕರ ಮತ್ತು ಬಡವರ ನಡುವಣ ಅಂತರವು ಹೆಚ್ಚಾಗುತ್ತಾ ಇದೆ. ಕಳೆದ 20 ವರುಷಗಳಲ್ಲಿ, ತೀರ ಕಡಿಮೆ ಪ್ರಗತಿಪರದೇಶಗಳ (70 ಕೋಟಿ ನಿವಾಸಿಗಳು) ಮಾರುಕಟ್ಟೆಯ ಪಾಲು, ಲೋಕದ ಒಟ್ಟು ವ್ಯಾಪಾರದಲ್ಲಿ 1 ಪ್ರತಿಶತದಿಂದ 0.6 ಪ್ರತಿಶಕ್ಕೆ ಕುಸಿದಿದೆ. “ಇಂದು ಕರಿಯ ಆಫ್ರಿಕನರಲ್ಲಿ ಹೆಚ್ಚಿನವರು ಕಳೆದ ಸಂತತಿಯವರಿಗಿಂತ ಇನ್ನೂ ಹೆಚ್ಚು ಬಡವರಾಗಿದ್ದಾರೆ,” ಎಂದು ಫ್ರಾನ್ಸಿನ ಅರ್ಥಶಾಸ್ತ್ರಜ್ಞ ಫೀಲೀಪ್ ಯರ್ಜೆನ್ಸೆನ್ ಶಾಲಾನ್ಜ್ ಎಂಬ ಪತ್ರಿಕೆಯಲ್ಲಿ ಬರೆದಿದ್ದಾರೆ. ಉದಾಹರಣೆಗೆ ಇಥಿಯೊಪಿಯದಲ್ಲಿ 6.7 ಕೋಟಿ ಜನರು, ಲಕ್ಸೆಂಬರ್ಗ್‌ನ 4,00,000 ನಿವಾಸಿಗಳು ಹೊಂದಿರುವ ಸಂಪತ್ತಿನ ಮೂರರಲ್ಲಿ ಒಂದಂಶದಷ್ಟು ಸಂಪತ್ತಿನಲ್ಲಿ ಜೀವನ ನಡೆಸುತ್ತಿದ್ದಾರೆ. ಯರ್ಜೆನ್ಸೆನ್‌ರವರು ತಿಳಿಸುವುದು, ಯೂರೋಪಿನಲ್ಲಿ ಒಂದು ಹಸುವಿಗೆ 150 ರೂಪಾಯಿ ಸಬ್ಸಿಡಿಯನ್ನು ಪ್ರತಿದಿನ ರೈತರಿಗೆ ನೀಡಲಾಗುತ್ತದೆ. ಆದರೆ ಇನ್ನೊಂದು ಕಡೆಯಲ್ಲಿ, 250 ಕೋಟಿ ಜನರು ಪ್ರತಿದಿನ ಅದಕ್ಕಿಂತಲೂ ಕಡಿಮೆ ಹಣದಲ್ಲಿ ಜೀವಿಸುತ್ತಿದ್ದಾರೆ. ಹೀಗಿರುವುದರಿಂದ, ಲೋಕದ ಅನೇಕ ದೇಶಗಳಲ್ಲಿ “ಒಬ್ಬ ಬಡ ವ್ಯಕ್ತಿಯ ಮೌಲ್ಯವು ಒಂದು ಹಸುವಿನ ಮೌಲ್ಯಕ್ಕಿಂತಲೂ ಕಡಿಮೆ” ಎಂದು ಯರ್ಜೆನ್ಸೆನ್ ತಿಳಿಸುತ್ತಾರೆ. (g04 6/8)
ಮತ್ತೇರಿದ ಮಕ್ಕಳು
ಬ್ರಿಟನಿನಲ್ಲಿ, “ಆರು ವರುಷ ಪ್ರಾಯದಷ್ಟು ಚಿಕ್ಕ ಮಕ್ಕಳು ಅತಿಯಾಗಿ ಕುಡಿದು ಆಸ್ಪತ್ರೆಗೆ ದಾಖಲಿಸಲ್ಪಡುತ್ತಾರೆ,” ಎಂದು 50 ಆಸ್ಪತ್ರೆಗಳ ಅಪಘಾತ ಮತ್ತು ತುರ್ತುಸೇವಾ ಇಲಾಖೆಗಳ ಸಮೀಕ್ಷೆಯಿಂದ ತಿಳಿದುಬಂದಿದೆ ಎಂಬುದಾಗಿ ಲಂಡನಿನ ದ ಡೇಲಿ ಟೆಲಿಗ್ರಾಫ್ ಎಂಬ ಪತ್ರಿಕೆಯು ವರದಿಸುತ್ತದೆ. ಒಂದು ಆಸ್ಪತ್ರೆಯಲ್ಲಿ, ಬೇಸಿಗೆ ರಜಾ ಸಮಯದಲ್ಲಿ ಒಂದು ವಾರ ಸುಮಾರು 100 ಮಂದಿ ಮತ್ತೇರಿದ ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತು ಎಂದು ವೈದ್ಯರು ಮತ್ತು ನರ್ಸುಗಳು ವರದಿಸಿದ್ದಾರೆ. “ಮದ್ಯದ ದುರುಪಯೋಗದಿಂದಾಗಿ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸರಾಸರಿ ಪ್ರಾಯವು ಹಿಂದಿಗಿಂತ ಇಳಿಯುತ್ತಾ ಬರುತ್ತಿದೆ ಎಂದು ಸಿಬ್ಬಂದಿವರ್ಗದಲ್ಲಿ 70 ಪ್ರತಿಶತಕ್ಕಿಂತಲೂ ಹೆಚ್ಚಿನವರು ಒಪ್ಪುತ್ತಾರೆ,” ಎಂಬುದಾಗಿ ಆ ವಾರ್ತಾಪತ್ರಿಕೆಯು ತಿಳಿಸುತ್ತದೆ. ಅಷ್ಟುಮಾತ್ರವಲ್ಲದೆ, ಬ್ರಿಟನಿನಲ್ಲಿ ಮದ್ಯಸೇವನೆಗೆ ಸಂಬಂಧಿಸಿದ ಮರಣಗಳು 20 ವರುಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿವೆ ಎಂದು ಇತ್ತೀಚಿನ ಸರಕಾರಿ ವರದಿಯು ತೋರಿಸುತ್ತದೆ. (g04 6/8)
ಒಂದು ಭೌಗೋಳಿಕ ಆರೋಗ್ಯ ದುರಂತ
ಮಧುಮೇಹವು ಹೆಚ್ಚಾಗುತ್ತಿರುವುದರಿಂದ, ಹಿಂದೆಂದೂ ಕಂಡಿರದಂಥ “ಒಂದು ಅತೀ ದೊಡ್ಡ ಆರೋಗ್ಯ ದುರಂತದ” ಕಡೆಗೆ ಲೋಕವು ಈಗ ಮುನ್ನುಗ್ಗುತ್ತಿದೆ ಎಂದು ಅಂತಾರಾಷ್ಟ್ರೀಯ ಮಧುಮೇಹ ಫೆಡರೇಷನ್‌ನ (ಐಡಿಎಫ್) ಅಧ್ಯಕ್ಷರಾದ ಬ್ರಿಟನಿನ ಪ್ರೋಫೆಸರ್ ಸರ್ ಜಾರ್ಜ್ ಆಲ್ಬರ್ಟೀ ಎಚ್ಚರಿಸುತ್ತಾರೆ. ಐಡಿಎಫ್ ವರದಿಸಿರುವ ಸಂಖ್ಯೆಗಳಿಗನುಸಾರ, ಲೋಕವ್ಯಾಪಕವಾಗಿ 30 ಕೋಟಿಗಿಂತ ಹೆಚ್ಚಿನ ಜನರಲ್ಲಿ ಗ್ಲೂಕೋಸ್ ಸಹಿಷ್ಣುತೆಯು ಕಡಿಮೆಯಾಗಿದೆ, ಮತ್ತು ಇದು ಅನೇಕವೇಳೆ ಮಧುಮೇಹಕ್ಕೆ ನಡಿಸುತ್ತದೆ ಎಂದು ಬ್ರಿಟನಿನ ಗಾರ್ಡಿಯನ್ ವಾರ್ತಾಪತ್ರಿಕೆಯು ವರದಿಸುತ್ತದೆ. ಒಂದು ಕಾಲದಲ್ಲಿ ಮುಖ್ಯವಾಗಿ ವೃದ್ಧರನ್ನು ಬಾಧಿಸುತ್ತಿದ್ದ ಟೈಪ್ 2 ಮಧುಮೇಹವು, ಈಗ ಬ್ರಿಟನಿನ ಯುವಜನರ ಆರೋಗ್ಯವನ್ನು ಸಹ ಬಾಧಿಸುತ್ತಿದೆ. ಇದಕ್ಕೆ ಕಾರಣ, ಯುವಜನರು ಹೆಚ್ಚಾಗಿ ಕಳಪೆ ಆಹಾರ (ಜಂಕ್ ಫೂಡ್)ಗಳನ್ನು ಸೇವಿಸುವುದರಿಂದಾಗಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಸ್ಥೂಲ ದೇಹವನ್ನು ಹೊಂದಿರುವುದೇ ಆಗಿದೆ. “ದುಃಖಕರ ಸಂಗತಿ ಏನೆಂದರೆ, ಒಬ್ಬನು ತನ್ನ ಜೀವನಶೈಲಿಯ ಮೂಲಕ ಹೆಚ್ಚಿನದ್ದನ್ನು [ಮಧುಮೇಹವನ್ನು ಮತ್ತು ಅದರ ಪ್ರಭಾವಗಳನ್ನು] ತಡೆಯಬಹುದಿತ್ತು,” ಎಂದು ಆಲ್ಬರ್ಟೀ ತಿಳಿಸುತ್ತಾರೆ. ಪ್ರಗತಿಪರ ದೇಶಗಳು, “ಅನಾರೋಗ್ಯಕರ ಆಹಾರಪಥ್ಯವನ್ನು ಮತ್ತು ಶ್ರೀಮಂತ ದೇಶದ ಜೀವನಶೈಲಿಗಳನ್ನು” ಮೈಗೂಡಿಸಿಕೊಳ್ಳುವಾಗ, ಅಲ್ಲಿಯೂ ಮಧುಮೇಹವು ಹೆಚ್ಚಾಗುವುದು ಎಂದು ದ ಗಾರ್ಡಿಯನ್ ಪತ್ರಿಕೆಯು ಹೇಳಿಕೆ ನೀಡುತ್ತದೆ. (g04 6/22)