ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಟೈರುಗಳು ನಿಮ್ಮ ಜೀವ ಅವುಗಳ ಮೇಲೆ ಹೊಂದಿಕೊಂಡಿರಸಾಧ್ಯವಿದೆ!

ಟೈರುಗಳು ನಿಮ್ಮ ಜೀವ ಅವುಗಳ ಮೇಲೆ ಹೊಂದಿಕೊಂಡಿರಸಾಧ್ಯವಿದೆ!

ಟೈರುಗಳು ನಿಮ್ಮ ಜೀವ ಅವುಗಳ ಮೇಲೆ ಹೊಂದಿಕೊಂಡಿರಸಾಧ್ಯವಿದೆ!

ಉಕ್ಕು ಮತ್ತು ಗಾಜಿನ ಒಂದು ಪಂಜರದೊಳಗೆ ಇರುವುದನ್ನು ಮತ್ತು ನಿಮ್ಮ ಹತ್ತಿರದಲ್ಲೇ ಆಸಿಡ್‌ ಹಾಗೂ ದಹ್ಯ ದ್ರವಗಳ ಕಂಟೇನರ್‌ಗಳು ಇರುವುದನ್ನು ಊಹಿಸಿಕೊಳ್ಳಿ. ಪ್ರಾಣಘಾತಕವಾಗಿ ಪರಿಣಮಿಸಸಾಧ್ಯವಿರುವ ಈ ರಚನೆಯನ್ನು ನೆಲದಿಂದ ಕೇವಲ ಕೆಲವೇ ಇಂಚುಗಳು ಮೇಲೆ ಇಟ್ಟು ಪ್ರತಿ ಸೆಕೆಂಡಿಗೆ ಸುಮಾರು 30 ಮೀಟರ್‌ ವೇಗದಲ್ಲಿ ಚಲಾಯಿಸಿರಿ. ಇದು ಮಾತ್ರ ಸಾಲದೆಂದು, ಇತರ ಯಂತ್ರಗಳು ಎದುರುಬದಿಯಿಂದ ವೇಗವಾಗಿ ನಿಮ್ಮನ್ನು ದಾಟಿ ಹೋಗುವಾಗ ನಿಮ್ಮ ಈ ಯಂತ್ರವನ್ನು ತದ್ರೀತಿಯ ಯಂತ್ರಗಳ ಮಧ್ಯೆ ಇಟ್ಟು ಒಂದಕ್ಕೊಂದು ವೇಗವಾಗಿ ಚಲಿಸುವಂತೆ ಮಾಡಿ!

ಪ್ರತಿ ಸಾರಿ ನೀವು ನಿಮ್ಮ ವಾಹನದಲ್ಲಿ ಕುಳಿತು ಹೆದ್ದಾರಿಯಲ್ಲಿ ಅದನ್ನು ಚಲಾಯಿಸುವಾಗ ಮೂಲಭೂತವಾಗಿ ಇದನ್ನೇ ಮಾಡುತ್ತೀರಿ. ನೀವು ವಾಹನವನ್ನು ಚಲಾಯಿಸುತ್ತಿರುವಾಗ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಮತ್ತು ಭದ್ರವಾದ ಅನಿಸಿಕೆಯೊಂದಿಗಿರಲು ನಿಮಗೆ ಯಾವುದು ಸಹಾಯಮಾಡುತ್ತದೆ? ಬಹಳಷ್ಟು ಮಟ್ಟಿಗೆ, ನಿಮ್ಮ ಟೈರುಗಳೇ.

ಟೈರುಗಳ ಕೆಲಸ

ಟೈರುಗಳು ವಿಭಿನ್ನವಾದ ಮುಖ್ಯ ಉದ್ದೇಶಗಳನ್ನು ನೆರವೇರಿಸುತ್ತವೆ. ಅವು ನಿಮ್ಮ ವಾಹನದ ತೂಕವನ್ನು ಹೊರುತ್ತವೆ, ಅಷ್ಟುಮಾತ್ರವಲ್ಲದೆ ರಸ್ತೆಯ ಹಂಪ್‌ಗಳು, ರಸ್ತೆಗುಂಡಿಗಳು, ಮತ್ತು ಇತರ ಅಸಮತೆಗಳಿಂದ ಉಂಟಾಗುವ ಅಪ್ಪಳಿಸುವಿಕೆಯಿಂದ ವಾಹನವನ್ನು ರಕ್ಷಿಸುತ್ತವೆ. ಹೆಚ್ಚು ಮುಖ್ಯವಾಗಿ ವೇಗವನ್ನು ಹೆಚ್ಚಿಸಲು, ವಾಹನವನ್ನು ಮಾರ್ಗದರ್ಶಿಸಲು, ಬ್ರೇಕ್‌ ಹಾಕಲು, ಮತ್ತು ವಿಭಿನ್ನವಾದ ರಸ್ತೆಯ ಸ್ಥಿತಿಗತಿಗಳಲ್ಲಿ ನಿರ್ದೇಶನಾ ಸ್ಥಿರತೆಯನ್ನು ಒದಗಿಸುವುದರಲ್ಲಿ ಅವಶ್ಯಕವಾಗಿ ಬೇಕಾಗಿರುವ ಟ್ರ್ಯಾಕ್‌ಷನ್‌ (ಕರ್ಷಣ) ಅನ್ನು ಅವು ನೀಡುತ್ತವೆ. ಆದರೂ, ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಟೈರಿನ ಒಂದು ಚಿಕ್ಕ ಭಾಗವು​—⁠ಒಂದು ಅಂಚೆಕಾರ್ಡ್‌ನಷ್ಟು ಗಾತ್ರ​—⁠ಮಾತ್ರ ನೆಲದೊಂದಿಗೆ ಸಂಪರ್ಕದಲ್ಲಿರುತ್ತದೆ.

ಅವುಗಳ ಪ್ರಮುಖತೆಯನ್ನು ಪರಿಗಣಿಸುವಾಗ, ನಿಮ್ಮ ಟೈರುಗಳು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸಮಾಡುತ್ತಾ ಇರುವಂತೆ ನೀವೇನು ಮಾಡಬಲ್ಲಿರಿ? ಮತ್ತು ಸಮಯ ಬಂದಾಗ, ನೀವು ನಿಮ್ಮ ವಾಹನಗಳಿಗಾಗಿ ಸೂಕ್ತವಾದ ಟೈರುಗಳನ್ನು ಹೇಗೆ ಆರಿಸಿಕೊಳ್ಳುತ್ತೀರಿ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಮೊದಲು, ಟೈರಿನ ಇತಿಹಾಸದತ್ತ ನಸುನೋಟ ಬೀರೋಣವೇ?

ರಬ್ಬರಿನ ಮೂಲಕರ್ತರು

ಚಕ್ರಗಳು ಸಾವಿರಾರು ವರ್ಷಗಳಿಂದ ಉಪಯೋಗದಲ್ಲಿ ಇರುವುದಾದರೂ, ವಾಹನದ ಚಕ್ರಗಳ ಹೊರಅಂಚಿಗೆ ರಬ್ಬರನ್ನು ಜೋಡಿಸುವುದು ಇತ್ತೀಚಿನ ಬೆಳವಣಿಗೆಯಾಗಿದೆ. ನೈಸರ್ಗಿಕ ರಬ್ಬರನ್ನು ಮರದ ಅಥವಾ ಉಕ್ಕಿನ ಚಕ್ರಗಳಿಗೆ ಪ್ರಪ್ರಥಮವಾಗಿ 1800ಗಳ ಪ್ರಾರಂಭದ ವರ್ಷಗಳಲ್ಲಿ ಜೋಡಿಸಲಾಯಿತು. ಆದರೆ, ಇದು ಬೇಗನೆ ಸವೆದುಹೋಗುತ್ತಿತ್ತು, ಆದುದರಿಂದ ರಬ್ಬರ್‌ಲೇಪಿತ ಚಕ್ರಗಳ ಭವಿಷ್ಯವು ಆಶಾದಾಯಕವಾಗಿ ತೋರಲಿಲ್ಲ. ಯುನೈಟಡ್‌ ಸ್ಟೇಟ್ಸ್‌ನ ಕನೆಕ್ಟಿಕಟ್‌ನವನಾಗಿದ್ದ ಚಾರ್ಲ್ಸ್‌ ಗುಡ್‌ಯಿಯರ್‌ ಎಂಬ ಒಬ್ಬ ಛಲವಾದಿ ಆವಿಷ್ಕಾರಕನು ಈ ಕಾರ್ಯದಲ್ಲಿ ಆಸಕ್ತನಾಗುವ ವರೆಗೂ ಸನ್ನಿವೇಶವು ಹೀಗಿತ್ತು. ಇಸವಿ 1839ರಲ್ಲಿ, ಗುಡ್‌ಯಿಯರ್‌ ವಲ್ಕನೀಕರಣ ಎಂದು ಕರೆಯಲ್ಪಡುವ ಒಂದು ಕಾರ್ಯವಿಧಾನವನ್ನು ಕಂಡುಹಿಡಿದನು, ಮತ್ತು ಈ ವಿಧಾನದಲ್ಲಿ ತಾಪ ಹಾಗೂ ಒತ್ತಡದ ಕೆಳಗೆ ರಬ್ಬರನ್ನು ಗಂಧಕದೊಂದಿಗೆ ಸೇರಿಸಲಾಗುತ್ತದೆ. ಇದರಿಂದಾಗಿ ರಬ್ಬರನ್ನು ಮೋಲ್ಡ್‌ ಮಾಡುವುದು ಹೆಚ್ಚು ಸುಲಭವಾಯಿತು ಮತ್ತು ಅದರ ಸವೆತವನ್ನು ಬಹಳಷ್ಟು ಮಟ್ಟಿಗೆ ಕಡಿಮೆಮಾಡಿತು. ಗಡಸು ರಬ್ಬರ್‌ ಟೈರುಗಳು ಹೆಚ್ಚು ಪ್ರಖ್ಯಾತವಾದವು, ಆದರೆ ಇದರಲ್ಲಿನ ಪ್ರಯಾಣವಂತೂ ಜಟಕಾ ಸವಾರಿಯಂತಿತ್ತು.

ಇಸವಿ 1845ರಲ್ಲಿ, ಸ್ಕಾಟ್‌ಲೆಂಡ್‌ನ ರಾಬರ್ಟ್‌ ವಿ. ತಾಂಪ್ಸನ್‌ ಎಂಬ ಎಂಜಿನಿಯರ್‌ ಮೊದಲ ನ್ಯೂಮ್ಯಾಟಿಕ್‌ (ವಾಯುವಿಕ) ಅಥವಾ ಗಾಳಿತುಂಬಿದ ಟೈರ್‌ ಅನ್ನು ತಯಾರಿಸಲು ಹಕ್ಕುಪತ್ರವನ್ನು ಪಡೆದುಕೊಂಡನು. ಆದರೂ, ತನ್ನ ಮಗನ ಸೈಕಲ್‌ ಸವಾರಿಯನ್ನು ಉತ್ತಮಗೊಳಿಸಲಿಕ್ಕಾಗಿ ಹೊರಟ ಸ್ಕಾಟ್‌ಲೆಂಡ್‌ನ ಮತ್ತೊಬ್ಬ ವ್ಯಕ್ತಿ ಜಾನ್‌ ಬಾಯ್ಡ್‌ ಡನ್‌ಲಪ್‌ನ ನಂತರವೇ ನ್ಯೂಮ್ಯಾಟಿಕ್‌ ಟೈರು ಒಂದು ವ್ಯಾಪಾರ ವಸ್ತುವಾಗಿ ಯಶಸ್ಸನ್ನು ಕಂಡಿತು. ಡನ್‌ಲಪ್‌ 1888ರಲ್ಲಿ ತನ್ನ ಹೊಸ ಟೈರಿಗೆ ಮಂಜೂರಾತಿಯನ್ನು ಪಡೆದು ತನ್ನ ಸ್ವಂತ ಕಂಪನಿಯನ್ನು ಆರಂಭಿಸಿದನು. ಆದರೂ, ನ್ಯೂಮ್ಯಾಟಿಕ್‌ ಟೈರು ಗಮನಾರ್ಹವಾದ ತಡೆಗಳನ್ನು ಜಯಿಸಿ ಬರಬೇಕಾಗಿತ್ತು.

ಇಸವಿ 1891ರಲ್ಲಿ ಒಂದು ದಿನ, ಫ್ರಾನ್ಸ್‌ನ ಒಬ್ಬ ವ್ಯಕ್ತಿಯ ಸೈಕಲ್‌ ಟೈರ್‌ ಪಂಕ್ಚರ್‌ ಆಯಿತು. ಇದನ್ನು ರಿಪೇರಿ ಮಾಡಲು ಅವನು ಪ್ರಯತ್ನಿಸಿದನು, ಆದರೆ ಸೈಕಲಿನ ಚಕ್ರಕ್ಕೆ ಟೈರು ಕಾಯಂ ಆಗಿ ಜೋಡಿಸಲ್ಪಟ್ಟಿದ್ದರಿಂದ ತನ್ನ ಯತ್ನದಲ್ಲಿ ಅಸಫಲನಾದನು. ಆದುದರಿಂದ, ಅವನು ವಲ್ಕನೀಕೃತ ರಬ್ಬರ್‌ ಕೆಲಸದಲ್ಲಿ ಪ್ರಖ್ಯಾತನಾಗಿದ್ದ ಆ್ಯಡ್ವರ್‌ ಮೀಶ್ಲನ್‌ ಎಂಬ ಜೊತೆ ಫ್ರೆಂಚಿಗನ ಸಹಾಯವನ್ನು ಕೋರಿದನು. ಮೀಶ್ಲನ್‌ ಆ ಟೈರನ್ನು ರಿಪೇರಿ ಮಾಡುವುದರಲ್ಲಿ ಒಂಬತ್ತು ತಾಸುಗಳನ್ನು ಕಳೆದನು. ಈ ಅನುಭವವು, ಸುಲಭವಾಗಿ ರಿಪೇರಿ ಮಾಡಲು ಸಾಧ್ಯವಾಗುವಂತೆ ಚಕ್ರದಿಂದ ಕಳಚಬಲ್ಲ ನ್ಯೂಮ್ಯಾಟಿಕ್‌ ಟೈರನ್ನು ವಿನ್ಯಾಸಿಸುವಂತೆ ಅವನನ್ನು ಪ್ರಚೋದಿಸಿತು.

ಮೀಶ್ಲನ್‌ನ ಟೈರುಗಳು ಎಷ್ಟು ಯಶಸ್ವಿಕರವಾಗಿದ್ದವೆಂದರೆ, ಮುಂದಿನ ವರ್ಷದಲ್ಲಿ 10,000 ಮಂದಿ ಸಂತುಷ್ಟ ಸೈಕಲ್‌ ಸವಾರರು ಅವುಗಳನ್ನು ಉಪಯೋಗಿಸುತ್ತಿದ್ದರು. ಶೀಘ್ರದಲ್ಲೇ, ಪ್ಯಾರಿಸ್‌ನಲ್ಲಿ ಕುದುರೆ ಬಂಡಿಗಳಿಗೆ ನ್ಯೂಮ್ಯಾಟಿಕ್‌ ಟೈರುಗಳು ಅಳವಡಿಸಲ್ಪಟ್ಟವು, ಮತ್ತು ಇದು ಅವುಗಳ ಫ್ರೆಂಚ್‌ ಪ್ರಯಾಣಿಕರನ್ನು ಪುಳಕಿತಗೊಳಿಸಿತು. ತಮ್ಮ ನ್ಯೂಮ್ಯಾಟಿಕ್‌ ಟೈರುಗಳನ್ನು ಮೋಟಾರು ವಾಹನಗಳಲ್ಲಿ ಉಪಯೋಗಿಸಸಾಧ್ಯವಿದೆ ಎಂಬುದನ್ನು ಪ್ರದರ್ಶಿಸಲಿಕ್ಕಾಗಿ, 1895ರಲ್ಲಿ, ಆ್ಯಡ್ವರ್‌ ಮತ್ತು ಅವನ ಸಹೋದರ ಆ್ಯಂಡ್ರೇ ಅವುಗಳನ್ನು ಒಂದು ರೇಸ್‌ ಕಾರಿಗೆ ಅಳವಡಿಸಿದರು. ಆದರೆ ಅದು ಓಟದಲ್ಲಿ ಕೊನೆಯ ಸ್ಥಾನವನ್ನು ಗಳಿಸಿತು. ಹಾಗಿದ್ದರೂ, ಈ ಅಸಾಮಾನ್ಯವಾದ ಟೈರುಗಳಿಂದ ಜನರು ಎಷ್ಟು ವಿಸ್ಮಯಗೊಂಡರೆಂದರೆ, ಈ ಮೀಶ್ಲನ್‌ ಸಹೋದರರು ಟೈರುಗಳಲ್ಲಿ ಏನನ್ನು ಹುದುಗಿಸಿಟ್ಟಿರಬಹುದೆಂಬ ಕುತೂಹಲದಿಂದ ಅವುಗಳನ್ನು ಕತ್ತರಿಸಿ ನೋಡಲು ಪ್ರಯತ್ನಿಸಿದರು!

ಇಸವಿ 1930 ಮತ್ತು 40ರ ದಶಕಗಳಲ್ಲಿ, ರೇಯಾನ್‌, ನೈಲಾನ್‌, ಪಾಲಿಯೆಸ್ಟರ್‌ನಂತಹ ಹೊಸ ಬಾಳಿಕೆ ಬರುವ ಸಾಮಗ್ರಿಗಳು, ಹೆಚ್ಚು ಭಿದುರಾದ ಹತ್ತಿ ಮತ್ತು ನೈಸರ್ಗಿಕ ರಬ್ಬರ್‌ನ ಸಾಮಗ್ರಿಗಳಿಗೆ ಬದಲಾಗಿ ಉಪಯೋಗಿಸಲ್ಪಟ್ಟವು. ಎರಡನೇ ಲೋಕ ಯುದ್ಧವನ್ನು ಹಿಂಬಾಲಿಸುತ್ತಾ, ಗಾಳಿಯನ್ನು ಹಿಡಿದಿಡಲು ಒಂದು ಟ್ಯೂಬಿಲ್ಲದೆ ಕೇವಲ ಟೈರು ಮತ್ತು ನೇಮಿಯ ಮಧ್ಯೆ ಗಾಳಿಯನ್ನು ಹಿಡಿದಿಡುವ ಒಂದು ಏರ್‌ಟೈಟ್‌ ಸೀಲ್‌ ಅನ್ನು ವಿನ್ಯಾಸಿಸಲಿಕ್ಕೆ ತಳಪಾಯವು ಹಾಕಲ್ಪಟ್ಟಿತು. ತದನಂತರ ಇತರ ಮಾರ್ಪಾಟುಗಳು ಮಾಡಲ್ಪಟ್ಟವು.

ಇಂದು, ಒಂದು ಟೈರನ್ನು ಉತ್ಪಾದಿಸುವುದರಲ್ಲಿ 200 ಕಚ್ಚಾ ವಸ್ತುಗಳು ಉಪಯೋಗಿಸಲ್ಪಡುತ್ತವೆ. ಮತ್ತು ಆಧುನಿಕ ತಂತ್ರಜ್ಞಾನದ ಸಹಾಯದಿಂದ, ಕೆಲವು ಟೈರುಗಳನ್ನು 1,30,000 ಕಿಲೊಮೀಟರುಗಳು ಅಥವಾ ಅದಕ್ಕಿಂತಲೂ ಹೆಚ್ಚು ದೂರದ ವರೆಗೆ ಓಡಿಸಸಾಧ್ಯವಿದೆ ಎಂದು ಹೇಳಲಾಗುವಾಗ, ಇತರ ಟೈರುಗಳು ಒಂದು ರೇಸ್‌ ಕಾರಿಗೆ ಅಳವಡಿಸಲ್ಪಟ್ಟು ತಾಸಿಗೆ ನೂರಾರು ಕಿಲೊಮೀಟರುಗಳ ವೇಗವನ್ನು ತಾಳಿಕೊಳ್ಳಬಲ್ಲವು. ಏತನ್ಮಧ್ಯೆ, ಟೈರುಗಳು ಒಬ್ಬ ಸಾಧಾರಣ ಬಳಕೆದಾರನು ಸುಲಭವಾಗಿ ಖರೀದಿಸಬಲ್ಲ ವಸ್ತುವಾಗಿ ಪರಿಣಮಿಸಿವೆ.

ಟೈರುಗಳನ್ನು ಆರಿಸಿಕೊಳ್ಳುವುದು

ನೀವು ಒಂದು ಮೋಟಾರು ವಾಹನವನ್ನು ಹೊಂದಿರುವುದಾದರೆ, ಹೊಸ ಟೈರುಗಳನ್ನು ಆರಿಸುವ ಕಷ್ಟಕರ ಕೆಲಸ ನಿಮಗೆ ಎದುರಾಗಬಹುದು. ನಿಮ್ಮ ಟೈರುಗಳನ್ನು ಬದಲಾಯಿಸಬೇಕಾದ ಸಮಯವು ಬಂದಿದೆ ಎಂಬುದನ್ನು ನೀವು ಹೇಗೆ ನಿರ್ಧರಿಸುವಿರಿ? ನಿಮ್ಮ ಟೈರುಗಳಲ್ಲಿ ಸವೆತ ಅಥವಾ ಹಾನಿಯ ಪ್ರತ್ಯಕ್ಷ ಗುರುತುಗಳಿಗಾಗಿ ಕ್ರಮವಾಗಿ ಪರೀಕ್ಷಿಸುವ ಮೂಲಕವೇ. * ಟೈರು ಉತ್ಪಾದಕರು, ನಿಮ್ಮ ಟೈರುಗಳು ಯಾವಾಗ ಬಾಳಿಕೆಯ ಸಮಯಾವಧಿಯ ಅಂತ್ಯವನ್ನು ಸಮೀಪಿಸಿವೆ ಎಂಬುದನ್ನು ಸೂಚಿಸುವ ಸವೆತ ಸೂಚಕಗಳನ್ನು ಒದಗಿಸುತ್ತಾರೆ. ಇವು ಟೈರುಗಳ ಒಳಗೇ ಅಳವಡಿಸಲ್ಪಟ್ಟಿರುತ್ತವೆ. ಇವುಗಳನ್ನು ಹೆಚ್ಚಾಗಿ ವೇರ್‌ ಬಾರ್ಸ್‌ ಎಂದು ಕರೆಯಲಾಗುತ್ತದೆ. ಈ ವೇರ್‌ ಬಾರ್‌ಗಳು ಟ್ರೆಡ್‌ ಮೇಲ್ಮೈಯಲ್ಲಿ (ಮೆಟ್ಟು ಭಾಗ) ಗಡಸಾದ ರಬ್ಬರ್‌ ಪಟ್ಟಿಗಳಂತೆ ಕಾಣುತ್ತವೆ. ಮಾತ್ರವಲ್ಲದೆ, ಟ್ರೆಡ್‌ ಭಾಗ ಟೈರಿನಿಂದ ಬೇರ್ಪಟ್ಟಿದೆಯೋ, ಟೈರಿನ ತಂತಿಗಳು ಬಿಚ್ಚಿಕೊಂಡಿವೆಯೋ, ಟೈರಿನ ಪಕ್ಕಗೋಡೆಯಲ್ಲಿ ಉಬ್ಬುಗಳಿವೆಯೋ, ಮತ್ತು ಇತರ ಯಾವುದೇ ಅಸಮತೆಗಳಿವೆಯೋ ಎಂದು ನೋಡುವುದು ಸಹ ಒಳ್ಳೇದು. ನೀವು ಇಂತಹ ಯಾವುದೇ ಗುರುತುಲಕ್ಷಣಗಳನ್ನು ಕಂಡುಕೊಳ್ಳುವುದಾದರೆ, ಟೈರು ರಿಪೇರಿ ಮಾಡಲ್ಪಡುವ ಅಥವಾ ಬದಲಾಯಿಸಲ್ಪಡುವ ತನಕ ನಿಮ್ಮ ವಾಹನವನ್ನು ಉಪಯೋಗಿಸಬಾರದು. ನೀವು ನಿಮ್ಮ ಟೈರುಗಳನ್ನು ಹೊಸದಾಗಿ ಖರೀದಿಸಿದ್ದಾದರೆ, ಟೈರು ವ್ಯಾಪಾರಿಯು ಹಾನಿಯಾಗಿರುವ ಟೈರಿಗೆ ಬದಲಾಗಿ ಹೊಸ ಟೈರನ್ನು ಕಡಿಮೆ ಬೆಲೆಗೆ ಕೊಡಬಹುದು​—⁠ಒಂದುವೇಳೆ ಅದು ವಾರಂಟಿಯಲ್ಲಿ ಒಳಗೂಡಿರುವುದಾದರೆ.

ನೀವು ಟೈರುಗಳನ್ನು ಬದಲಾಯಿಸುವುದಾದರೆ, ಒಂದೇ ಆಕ್ಸಲ್‌ನಲ್ಲಿ ಜೋಡಿ ಟೈರುಗಳನ್ನು ಬದಲಾಯಿಸುವುದು ಅತ್ಯುತ್ತಮ. ನೀವು ಒಂದೇ ಒಂದು ಟೈರನ್ನು ಮಾತ್ರ ಬದಲಾಯಿಸಲಿರುವುದಾದರೆ, ಅದನ್ನು ಹೆಚ್ಚಿನ ಟ್ರೆಡ್‌ ಹೊಂದಿರುವ ಟೈರಿನೊಂದಿಗೆ ಜೋಡಿಸಿ ಹಾಕಿರಿ. ಇದರಿಂದಾಗಿ, ನೀವು ಬ್ರೇಕ್‌ ಹಾಕುವಾಗ ಸಮವಾದ ಟ್ರ್ಯಾಕ್‌ಷನ್‌ ಸಾಧ್ಯವಾಗುವುದು.

ವಿವಿಧ ಬಗೆಯ, ವಿವಿಧ ಗಾತ್ರದ, ಮತ್ತು ಮಾದರಿಗಳ ಟೈರುಗಳನ್ನು ಪರಿಶೀಲಿಸಿ, ಒಂದನ್ನು ಆರಿಸಿಕೊಳ್ಳುವುದು ಗಲಿಬಿಲಿಗೊಳಿಸುವಂಥದ್ದೇ. ಆದರೂ, ಕೆಲವೊಂದು ಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಮೂಲಕ, ನಿಮ್ಮ ಈ ಕೆಲಸವು ಸುಲಭವಾಗುವುದು. ಮೊದಲು, ವಾಹನ ಉತ್ಪಾದಕರ ಶಿಫಾರಸ್ಸುಗಳನ್ನು ಪರಿಶೀಲಿಸಿರಿ. ನಿಮ್ಮ ವಾಹನಕ್ಕೆ ನಿರ್ದಿಷ್ಟ ಆವಶ್ಯಕತೆಗಳಿದ್ದು ಇವುಗಳನ್ನು ಪರಿಗಣಿಸಬೇಕಾಗಿದೆ​—⁠ಇದರಲ್ಲಿ ಟೈರು ಮತ್ತು ಚಕ್ರದ ಗಾತ್ರ, ವಾಹನ ಹಾಗೂ ನೆಲದ ಮಧ್ಯೆ ಅಂತರ, ಮತ್ತು ವಾಹನವು ಹೊರಬಲ್ಲ ತೂಕದ ಪ್ರಮಾಣವು ಒಳಗೂಡಿದೆ. ನಿಮ್ಮ ವಾಹನದ ವಿನ್ಯಾಸವು ಸಹ ಪ್ರಾಮುಖ್ಯವಾಗಿದೆ. ಆ್ಯಂಟಿಲಾಕ್‌ ಬ್ರೇಕ್‌ಗಳು, ಟ್ರ್ಯಾಕ್‌ಷನ್‌ ಕಂಟ್ರೋಲ್‌, ಮತ್ತು ಆಲ್‌ ವ್ಹೀಲ್‌ ಚಾಲನ ವ್ಯವಸ್ಥೆಗಳುಳ್ಳ ಆಧುನಿಕ ವಾಹನಗಳು, ನಿರ್ದಿಷ್ಟ ಚಾಲನ ವೈಶಿಷ್ಟ್ಯಗಳುಳ್ಳ ಟೈರುಗಳೊಂದಿಗೆ ಉಪಯೋಗಿಸಲ್ಪಡಲಿಕ್ಕಾಗಿ ವಿನ್ಯಾಸಿಸಲ್ಪಡುತ್ತವೆ. ಈ ಟೈರ್‌ ವಿಶಿಷ್ಟಾಂಶಗಳನ್ನು ಸಾಮಾನ್ಯವಾಗಿ ವಾಹನ ಮಾಲೀಕರಿಗಾಗಿರುವ ನಿಮ್ಮ ಕೈಪಿಡಿಯಲ್ಲಿ ಕಂಡುಕೊಳ್ಳಬಹುದು.

ಮತ್ತೊಂದು ಅಂಶವು ರಸ್ತೆಯ ಸ್ಥಿತಿಗತಿಯಾಗಿದೆ. ನಿಮ್ಮ ವಾಹನವನ್ನು ಹೆಚ್ಚಾಗಿ ಮಣ್ಣಿನ ರಸ್ತೆಗಳಲ್ಲಿ ಓಡಿಸುವಿರೊ ನೆಲಗಟ್ಟುಮಾಡಲ್ಪಟ್ಟಿರುವ ರಸ್ತೆಗಳಲ್ಲಿ ಓಡಿಸುವಿರೊ? ಹೆಚ್ಚಾಗಿ ಮಳೆಗಾಲದಲ್ಲಿ ಓಡಿಸುವಿರೊ, ಶುಷ್ಕ ಹವಾಮಾನದಲ್ಲಿ ಓಡಿಸುವಿರೊ? ನೀವು ಹೆಚ್ಚಾಗಿ ಭಿನ್ನ ಭಿನ್ನ ಪರಿಸ್ಥಿತಿಗಳಲ್ಲಿ ನಿಮ್ಮ ವಾಹನವನ್ನು ಓಡಿಸುತ್ತಿರಬಹುದು. ಇಂತಹ ವಿದ್ಯಮಾನದಲ್ಲಿ, ನಿಮಗೆ ಎಲ್ಲಾ ಸ್ಥಿತಿಗಳಲ್ಲೂ ಅಥವಾ ಎಲ್ಲಾ ಸಮಯದಲ್ಲೂ ಉಪಯೋಗಿಸಬಲ್ಲ ಟೈರಿನ ಅಗತ್ಯವಿರಬಹುದು.

ನೀವು ಟೈರಿನ ಬಾಳಿಕೆ ಬರುವಿಕೆ ಮತ್ತು ಟ್ರ್ಯಾಕ್‌ಷನ್‌ ರೇಟಿಂಗ್‌ ಅನ್ನು ಸಹ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ, ಟ್ರೆಡ್‌ ಮಿಶ್ರಣವು ಎಷ್ಟು ಮೃದುವಾಗಿದೆಯೋ ಅಷ್ಟು ಟ್ರ್ಯಾಕ್‌ಷನ್‌ ಅನ್ನು ಟೈರ್‌ ಕೊಡುವುದು, ಆದರೆ ಇದು ಹೆಚ್ಚು ಬೇಗನೆ ಸವೆದುಹೋಗಬಹುದು. ಮತ್ತೊಂದು ಬದಿಯಲ್ಲಿ, ಟ್ರೆಡ್‌ ಮಿಶ್ರಣವು ಸಾಕಷ್ಟು ಗಟ್ಟಿಯಾಗಿರುವುದಾದರೆ, ಟೈರು ಕಡಿಮೆ ಟ್ರ್ಯಾಕ್‌ಷನ್‌ ಅನ್ನು ಹೊಂದಿರುವುದು ಆದರೆ ಪ್ರಾಯಶಃ ಹೆಚ್ಚು ಕಾಲ ಬಾಳಿಕೆ ಬರುವುದು. ಇದರ ರೇಟಿಂಗ್‌ಗಳನ್ನು ಟೈರುಗಳು ಮಾರಾಟವಾಗುವ ಸ್ಥಳಗಳಲ್ಲಿ ಸಿಗುವ ಸೇಲ್ಸ್‌ ಸಾಹಿತ್ಯದಲ್ಲಿ ಕಂಡುಕೊಳ್ಳಬಹುದು. ಟೈರಿನ ರೇಟಿಂಗ್‌ಗಳು ಉತ್ಪಾದಕರಿಂದ ಉತ್ಪಾದಕರಿಗೆ ಭಿನ್ನವಾಗಿರುತ್ತವೆ ಎಂಬುದನ್ನು ಮನಸ್ಸಿನಲ್ಲಿಡಿ.

ನೀವು ನಿಮ್ಮ ಹುಡುಕಾಟವನ್ನು ಹೆಚ್ಚು ಮಟ್ಟಿಗೆ ಮಾಡಿ ಮುಗಿಸಿರುವಾಗ, ಬೆಲೆಯು ನಿಮ್ಮ ಕೊನೆಯ ಆಯ್ಕೆಯನ್ನು ತೀರ್ಮಾನಿಸಬಹುದು. ಪ್ರಖ್ಯಾತ ಉತ್ಪಾದಕರು ಸಾಮಾನ್ಯವಾಗಿ ಗುಣಮಟ್ಟದ ವಿಷಯದಲ್ಲಿ ಹೆಚ್ಚು ಭರವಸೆ ಮತ್ತು ವಾರಂಟಿ ವ್ಯಾಪ್ತಿಯನ್ನು ಕೊಡುತ್ತಾರೆ.

ನಿಮ್ಮ ಟೈರುಗಳನ್ನು ಸುಸ್ಥಿತಿಯಲ್ಲಿಡುವುದು

ಯೋಗ್ಯವಾದ ಟೈರನ್ನು ಸುಸ್ಥಿತಿಯಲ್ಲಿಡುವುದರಲ್ಲಿ ಮೂರು ವಿಷಯಗಳು ಒಳಗೂಡಿವೆ: ಸರಿಯಾದ ವಾಯುವಿನ ಒತ್ತಡವನ್ನು ಕಾಪಾಡಿಕೊಳ್ಳುವುದು, ಟೈರ್‌ಗಳನ್ನು ಕ್ರಮವಾಗಿ ರೊಟೇಟ್‌ ಮಾಡುವುದು, ಮತ್ತು ಅವುಗಳನ್ನು ಸರಿಯಾದ ಸಮತೋಲನ ಹಾಗೂ ಅಲೈನ್‌ಮೆಂಟ್‌ನಲ್ಲಿ ಇಡುವುದು. ಸರಿಯಾದ ವಾಯುವಿನ ಒತ್ತಡವನ್ನು ಕಾಪಾಡಿಕೊಳ್ಳುವುದು ತುಂಬ ಪ್ರಾಮುಖ್ಯವಾಗಿದೆ. ಒಂದು ಟೈರಿನಲ್ಲಿ ತುಂಬ ಗಾಳಿಯಿರುವುದಾದರೆ, ಟೈರಿನ ಟ್ರೆಡ್‌ ನಿಗದಿತ ಕಾಲಕ್ಕಿಂತ ಮುಂಚಿತವಾಗಿಯೇ ಮಧ್ಯಭಾಗದಲ್ಲಿ ಸವೆದುಹೋಗಬಹುದು. ಮತ್ತೊಂದು ಬದಿಯಲ್ಲಿ, ಟೈರಿನ ವಾಯುವಿನ ಒತ್ತಡವು ತೀರ ಕಡಿಮೆಯಾಗಿರುವುದಾದರೆ, ಟೈರು ಅದರ ಪಕ್ಕಗಳಲ್ಲಿ ಬಹಳವಾಗಿ ಸವೆದು ಇಂಧನವು ವಿಪರೀತವಾಗಿ ಬಳಕೆಯಾಗಬಹುದು.

ರಬ್ಬರ್‌ನಿಂದ ವಾಯು ನಿಧಾನವಾಗಿ ಹೊರಹೋಗುವುದರಿಂದ ಟೈರುಗಳು ಸಾಮಾನ್ಯವಾಗಿ ಪ್ರತಿ ತಿಂಗಳು ಅರ್ಧ ಅಥವಾ ಅದಕ್ಕಿಂತ ಹೆಚ್ಚು ಕಿಲೊಗ್ರ್ಯಾಮ್‌ ಒತ್ತಡವನ್ನು ಕಳೆದುಕೊಳ್ಳಬಹುದು. ಆದುದರಿಂದ, ಕೇವಲ ನಿಮ್ಮ ಟೈರಿನ ಆಕಾರವನ್ನು ನೋಡಿ ಅದರಲ್ಲಿ ಸರಿಯಾದ ಪ್ರಮಾಣದಲ್ಲಿ ಗಾಳಿಯಿದೆಯೋ ಎಂದು ಹೇಳಬಲ್ಲೆ ಎಂದು ನೆನಸಬೇಡಿರಿ. ರಬ್ಬರ್‌ ಉತ್ಪಾದಕರ ಸಂಘಕ್ಕನುಸಾರ, “ಒಂದು ಟೈರು ಅರ್ಧದಷ್ಟು ವಾಯುವಿನ ಒತ್ತಡವನ್ನು ಕಳೆದುಕೊಂಡಿರುವುದಾದರೂ, ಗಾಳಿಯನ್ನು ಕಳೆದುಕೊಂಡಿರುವಂತೆ ತೋರಲಿಕ್ಕಿಲ್ಲ!” ಆದುದರಿಂದ, ಟೈರಿನ ಒತ್ತಡದ ಮೇಲೆ ನಿಗಾ ಇಡಲಿಕ್ಕಾಗಿ ಒಂದು ಒತ್ತಡ ಮಾಪಕವನ್ನು ಉಪಯೋಗಿಸಿರಿ, ಮತ್ತು ಇದನ್ನು ತಿಂಗಳಿಗೊಮ್ಮೆಯಾದರೂ ಮಾಡಿರಿ. ಅನುಕೂಲಕರ ಉಪಯೋಗಕ್ಕಾಗಿ ಅನೇಕ ವಾಹನ ಮಾಲೀಕರು ಡ್ಯಾಶ್‌ಬೋರ್ಡ್‌ನಲ್ಲಿರುವ ಬಾಕ್ಸ್‌ನಲ್ಲಿ ಒಂದು ಒತ್ತಡ ಮಾಪಕವನ್ನು ಇಡುತ್ತಾರೆ. ನೀವು ಎಂಜಿನ್‌ ಆಯಿಲ್‌ ಅನ್ನು ಬದಲಾಯಿಸಿದಾಗೆಲ್ಲಾ ಮತ್ತು ಟೈರುಗಳು ತಣ್ಣಗಾಗಿರುವಾಗ ಅಂದರೆ ಅವು ಕಡಿಮೆಪಕ್ಷ ಮೂರು ತಾಸುಗಳ ವರೆಗೆ ಉಪಯೋಗಿಸಲ್ಪಡದೆ ಇದ್ದ ನಂತರ ಅಥವಾ ಅವು 1.5 ಕಿಲೊಮೀಟರ್‌ಗಳಿಗಿಂತಲೂ ಕಡಿಮೆ ದೂರ ಓಡಿಸಲ್ಪಟ್ಟಿರುವಾಗ ಮಾತ್ರ ಪರೀಕ್ಷಿಸಿರಿ. ಟೈರಿನ ಒತ್ತಡ ಪ್ರಮಾಣಗಳು ಸಾಮಾನ್ಯವಾಗಿ ಮಾಲೀಕರಿಗಾಗಿರುವ ಕೈಪಿಡಿಯಲ್ಲಿ ಅಥವಾ ಚಾಲಕನ ಬಾಗಿಲ ಬಳಿಯಿರುವ ಒಂದು ಲೇಬಲ್‌ನಲ್ಲಿ ಅಥವಾ ಡ್ಯಾಶ್‌ಬೋರ್ಡ್‌ನಲ್ಲಿರುವ ಬಾಕ್ಸ್‌ನಲ್ಲಿ ಗುರುತಿಸಲ್ಪಟ್ಟಿರುತ್ತವೆ. ನೀವು ಜಟಕಾ ಗಾಡಿಯಂಥ ಸವಾರಿಯನ್ನು ತಪ್ಪಿಸಲು ಬಯಸುವುದಾದರೆ, ಪಕ್ಕಗೋಡೆಯಲ್ಲಿ ಮೋಲ್ಡ್‌ ಮಾಡಲ್ಪಟ್ಟಿರುವ ಟೈರುಗಳಲ್ಲಿ ಗರಿಷ್ಠ ಒತ್ತಡದ ವರೆಗೆ ವಾಯುವನ್ನು ತುಂಬಿಸಬೇಡಿರಿ.

ಟೈರುಗಳನ್ನು ನೀವು ಕ್ರಮವಾಗಿ ರೊಟೇಟ್‌ ಮಾಡುವುದಾದರೆ ಅವು ಹೆಚ್ಚು ಕಾಲ ಬಾಳಿಕೆ ಬರುವವು ಮತ್ತು ಹೆಚ್ಚು ಸಮನಾಗಿ ಸವೆಯುವವು. ನಿಮ್ಮ ವಾಹನ ಉತ್ಪಾದಕರು ಬೇರೆ ರೀತಿಯಲ್ಲಿ ಶಿಫಾರಸ್ಸು ಮಾಡದೆ ಇದ್ದರೆ, ಟೈರುಗಳನ್ನು ಪ್ರತಿ 10,000ದಿಂದ 13,000 ಕಿಲೊಮೀಟರ್‌ ಓಡಿಸಿದ ನಂತರ ರೊಟೇಟ್‌ ಮಾಡುವುದು ಒಳ್ಳೇದು. ಪುನಃ ಒಮ್ಮೆ, ಶಿಫಾರಸ್ಸು ಮಾಡಲ್ಪಟ್ಟಿರುವ ರೊಟೇಷನ್‌ ನಮೂನೆಗಾಗಿ ನಿಮ್ಮ ಮಾಲೀಕರಿಗಾಗಿರುವ ಕೈಪಿಡಿಯನ್ನು ಪರಿಶೀಲಿಸಿರಿ.

ಅಂತಿಮವಾಗಿ, ವಾರ್ಷಿಕವಾಗಿ ಅಥವಾ ನಿಮ್ಮ ಕಾರನ್ನು ಓಡಿಸುವಾಗ ಯಾವುದೇ ಅಸಾಮಾನ್ಯವಾದ ಕಂಪನ ಅಥವಾ ಅಸಮತೆಯನ್ನು ನೀವು ಗಮನಿಸುವುದಾದರೆ, ನಿಮ್ಮ ಟೈರ್‌ ಅಲೈನ್‌ಮೆಂಟ್‌ ಅನ್ನು ಚೆಕ್‌ ಮಾಡಿ. ವಿಭಿನ್ನ ತೂಕಗಳನ್ನು ಹೊತ್ತಿರುವಾಗ ಟೈರುಗಳನ್ನು ಅದಕ್ಕನುಗುಣವಾಗಿ ಅಲೈನ್‌ ಮಾಡುವ ರೀತಿಯಲ್ಲಿ ನಿಮ್ಮ ವಾಹನದಲ್ಲಿರುವ ಸಸ್ಪೆನ್ಷನ್‌ ವ್ಯವಸ್ಥೆ ವಿನ್ಯಾಸಿಸಲ್ಪಟ್ಟಿರುವುದಾದರೂ, ಸಾಮಾನ್ಯವಾದ ಕಡಿತ ಮತ್ತು ಸವೆತವು ಟೈರುಗಳನ್ನು ಕ್ರಮಾನುಗತವಾಗಿ ಪರೀಕ್ಷಿಸುವುದನ್ನು ಮತ್ತು ರೀಅಲೈನ್‌ ಮಾಡುವುದನ್ನು ಅಗತ್ಯಪಡಿಸುತ್ತದೆ. ಸಸ್ಪೆನ್ಷನ್‌ ಮತ್ತು ವ್ಹೀಲ್‌ ಅಲೈನ್‌ಮೆಂಟ್‌ನಲ್ಲಿ ಯೋಗ್ಯತಾಪತ್ರವನ್ನು ಹೊಂದಿರುವ ಒಬ್ಬ ಮೆಕ್ಯಾನಿಕ್‌ ನಿಮ್ಮ ವಾಹನವನ್ನು ನಿಷ್ಕೃಷ್ಟವಾದ ಅಲೈನ್‌ಮೆಂಟ್‌ನಲ್ಲಿ ಇಡಲು ಶಕ್ತನಾಗಿರಬೇಕು, ಮತ್ತು ಇದು ಟೈರಿನ ಬಾಳಿಕೆ ಬರುವಿಕೆ ಮತ್ತು ಚಾಲನ ಗುಣಮಟ್ಟವನ್ನು ಹೆಚ್ಚಿಸುತ್ತದೆ.

“ಚುರುಕು ಬುದ್ಧಿಯ” ಟೈರುಗಳು

ಕಂಪ್ಯೂಟರ್‌ಗಳ ನೆರವಿನಿಂದ ಕೆಲವು ಕಾರ್‌ಗಳು, ಟೈರ್‌ ಒತ್ತಡ ಯಾವಾಗ ಸುರಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂಬುದರ ಕುರಿತು ಚಾಲಕನಿಗೆ ಎಚ್ಚರಿಕೆಯನ್ನು ಕೊಡುತ್ತವೆ. ವಾಯುವಿನ ಒತ್ತಡವಿಲ್ಲದೆ ಕೆಲವು ಟೈರುಗಳನ್ನು ಅಲ್ಪ ಕಾಲಾವಧಿಯ ವರೆಗೆ ಚಲಾಯಿಸಸಾಧ್ಯವಿದೆ, ಮತ್ತು ಇತರ ಟೈರುಗಳಿಗೆ ಒಂದು ರಂಧ್ರವಾಗುವುದಾದರೆ, ತಾನಾಗಿಯೇ ಮುಚ್ಚಿಕೊಳ್ಳುತ್ತವೆ. ವಾಸ್ತವದಲ್ಲಿ, ಎಂಜಿನಿಯರ್‌ಗಳು ಹೆಚ್ಚೆಚ್ಚು ವಿಸ್ತಾರವಾಗುತ್ತಿರುವ ಚಾಲನಾ ಪರಿಸ್ಥಿತಿಗಳಿಗೆ ಸರಿಬೀಳುವ ಟೈರುಗಳನ್ನು ವಿನ್ಯಾಸಿಸುತ್ತಿದ್ದಾರೆ.

ಸಾಮಗ್ರಿಗಳಲ್ಲಿ, ಟ್ರೆಡ್‌ ವಿನ್ಯಾಸ, ಸಸ್ಪೆನ್ಷನ್‌, ಸ್ಟಿಯರಿಂಗ್‌, ಮತ್ತು ಬ್ರೇಕಿಂಗ್‌ ವ್ಯವಸ್ಥೆಗಳಲ್ಲಿ ಆಗುವ ಪ್ರಗತಿಗಳು ಆಧುನಿಕ ವಾಹನಗಳಿಗೆ ಅಳವಡಿಸಲ್ಪಡುವಾಗ, ಟೈರುಗಳು ವಾಹನ ಚಾಲನೆಯನ್ನು ಸುಲಭ ಮಾತ್ರವಲ್ಲದೆ ಸುರಕ್ಷಿತವನ್ನಾಗಿಯೂ ಮಾಡುತ್ತವೆ. (g04 6/8)

[ಪಾದಟಿಪ್ಪಣಿ]

^ ನಿಮ್ಮ ಟೈರುಗಳನ್ನು ಪರೀಕ್ಷಿಸಲು ನಿಮಗೆ ಸಹಾಯಮಾಡುವ ವಿಷಯಗಳಿಗಾಗಿ ಪುಟ 29ರಲ್ಲಿರುವ ಚಾರ್ಟನ್ನು ನೋಡಿರಿ.

[ಪುಟ 29ರಲ್ಲಿರುವ ಚಾರ್ಟು/ಚಿತ್ರಗಳು]

ಟೈರನ್ನು ಸುಸ್ಥಿತಿಯಲ್ಲಿಡಲು ಚೆಕ್‌ಲಿಸ್ಟ್‌

ದೃಶ್ಯ ಪರೀಕ್ಷೆಗಳು:

❑ ಪಕ್ಕಗೋಡೆಗಳಲ್ಲಿ ಉಬ್ಬುವಿಕೆಗಳಿವೆಯೋ?

❑ ಟ್ರೆಡ್‌ ಭಾಗದಲ್ಲಿ ತಂತಿಗಳು ಕಾಣಿಸಿಕೊಳ್ಳುತ್ತಿವೆಯೋ?

❑ ಟ್ರೆಡ್‌ ಆಳವು ಸುರಕ್ಷಿತ ಮಟ್ಟದೊಳಗಿದೆಯೋ, ಅಥವಾ ಟೈರಿನ ವೇರ್‌ ಬಾರ್‌ಗಳು ಕಾಣಿಸಿಕೊಳ್ಳುತ್ತಿವೆಯೋ?

ಇದನ್ನೂ ಪರಿಗಣಿಸಿ:

❑ ಟೈರಿನ ಒತ್ತಡವು ವಾಹನ ಉತ್ಪಾದಕರಿಂದ ಶಿಫಾರಸ್ಸು ಮಾಡಲ್ಪಟ್ಟಿರುವುದಕ್ಕೆ ಹೊಂದಿಕೆಯಲ್ಲಿ ಇದೆಯೋ?

❑ ಟೈರುಗಳನ್ನು ರೊಟೇಟ್‌ ಮಾಡಲು ಸಮಯ ಬಂದಿದೆಯೋ? (ವಾಹನ ಉತ್ಪಾದಕರು ಸೂಚಿಸಿರುವ ಮೈಲೇಜ್‌ ಅಂತರ ಮತ್ತು ರೊಟೇಷನ್‌ ನಮೂನೆಯನ್ನು ಉಪಯೋಗಿಸಿರಿ.)

❑ ಋತುವಿನಲ್ಲಾಗುವ ಬದಲಾವಣೆಯಿಂದ ಬೇರೆ ಟೈರುಗಳನ್ನು ಅಳವಡಿಸಬೇಕಾಗಿದೆಯೋ?

[ಚಿತ್ರ]

ವೇರ್‌ ಬಾರ್‌

[ಪುಟ 28ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಟೈರಿನ ವಿವಿಧ ಭಾಗಗಳು

ಟ್ರೆಡ್‌ ಟ್ರ್ಯಾಕ್‌ಷನ್‌ ಮತ್ತು ಕಾರ್ನರಿಂಗ್‌ ಗ್ರಿಪ್‌ ಅನ್ನು ಕೊಡುತ್ತದೆ

ಬೆಲ್ಟ್‌ಗಳು ಟ್ರೆಡ್‌ ಅನ್ನು ಸ್ಥಿರಪಡಿಸಿ ಬಲಪಡಿಸುತ್ತವೆ

ಪಕ್ಕಗೋಡೆ ರಸ್ತೆ ಮತ್ತು ರಸ್ತೆಯ ಅಂಚುಕಲ್ಲು ಹಾನಿಯಿಂದ ಟೈರಿನ ಪಕ್ಕಭಾಗವನ್ನು ಸಂರಕ್ಷಿಸುತ್ತದೆ

ಬಾಡಿ ಪ್ಲೈ ಟೈರಿಗೆ ಶಕ್ತಿ ಮತ್ತು ನಮ್ಯತೆಯನ್ನು ನೀಡುತ್ತದೆ

ಇನ್ನರ್‌ ಲೈನರ್‌ ಗಾಳಿಯನ್ನು ಟೈರಿನ ಒಳಗೇ ಇರಿಸುತ್ತದೆ

ಬೀಡ್‌ ನೇಮಿಯೊಂದಿಗೆ ಏರ್‌ಟೈಟ್‌ ಕೂಡಿಕೆಯನ್ನು ಖಚಿತಪಡಿಸುತ್ತದೆ

[ಪುಟ 27ರಲ್ಲಿರುವ ಚಿತ್ರಗಳು]

ಒಂದು ಆದಿ ಸೈಕಲ್‌ ಮತ್ತು ಕಾರ್‌, ಎರಡಕ್ಕೂ ಗಾಳಿ ತುಂಬಿಸಬಹುದಾದ ಟೈರುಗಳು ಅಳವಡಿಸಲ್ಪಟ್ಟಿವೆ; ಆರಂಭದ ಟೈರು ಕಾರ್ಖಾನೆಯೊಂದರಲ್ಲಿನ ಕೆಲಸಗಾರರು

[ಕೃಪೆ]

The Goodyear Tire & Rubber Company