ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೈಲೀನ್‌ಗೆ ಒಂದು ಹೊಸ ಮುಖ

ಮೈಲೀನ್‌ಗೆ ಒಂದು ಹೊಸ ಮುಖ

ಮೈಲೀನ್‌ಗೆ ಒಂದು ಹೊಸ ಮುಖ

ಮೈಲೀನಳ ತಾಯಿ ಹೇಳಿದಂತೆ

ನನ್ನ 11 ವರುಷದ ಮುದ್ದಿನ ಮಗಳಾದ ಮೈಲೀನ್‌ಗೆ ಒಂದು ಹೊಸ ಮುಖ ಏಕೆ ಅಗತ್ಯವಿದೆ? ನಾನು ವಿವರಿಸುತ್ತೇನೆ.

ಮೈಲೀನ್‌ ನನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಎರಡನೆಯವಳು. ಅವಳು 1992ರ ಆಗಸ್ಟ್‌ 5ರಂದು ಕ್ಯೂಬದ ಓಲ್‌ಜೀನ್‌ನಲ್ಲಿ ಜನಿಸಿದಳು. ಅವಳ ಜನನದಿಂದಾಗಿ ನನಗೆ, ಅವಳ ತಂದೆಗೆ ಮತ್ತು ಅವಳ ಅಕ್ಕನಿಗೆ ಬಹಳ ಸಂತೋಷವಾಯಿತು. ಆದರೆ ನಮ್ಮ ಸಂತೋಷವು ಬೇಗನೆ ಛಿದ್ರವಾಯಿತು. ಅವಳ ಜನನದ ಸ್ವಲ್ಪ ದಿವಸಗಳ ನಂತರ, ನಾನು ಸಿಡುಬು ರೋಗದಿಂದ ಸೋಂಕಿತಳಾದೆ ಮತ್ತು ಒಂದು ತಿಂಗಳ ನಂತರ ಮೈಲೀನಳು ಸಹ ಅದರಿಂದ ಬಾಧಿತಳಾದಳು.

ಆರಂಭದಲ್ಲಿ ಅವಳ ಸ್ಥಿತಿಯು ತೀರ ಗಂಭೀರವಾಗಿ ತೋರಲಿಲ್ಲ, ಆದರೆ ದಿನಗಳು ದಾಟುತ್ತಾ ಹೋದಂತೆ ಅದು ತೀರಾ ಹದಗೆಟ್ಟಿತು, ಮತ್ತು ಅವಳನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಮೈಲೀನಳಿಗೆ ಉತ್ತಮ ವೈದ್ಯಕೀಯ ಗಮನವು ದೊರಕಿತು, ಆದರೆ ಅವಳ ಸೋಂಕು ರಕ್ಷಾವ್ಯವಸ್ಥೆಯು ಬಹಳ ಬಲಹೀನಗೊಂಡಿದ್ದ ಕಾರಣ ಅವಳಿಗೆ ಒಂದು ಸೋಂಕು ತಗಲಿತು. ಅವಳ ಪುಟ್ಟ ಮೂಗಿನ ಒಂದು ಬದಿಯು ವಿಚಿತ್ರವಾದ ರೀತಿಯಲ್ಲಿ ಕೆಂಪಾಗಿರುವುದನ್ನು ನಾನು ಗಮನಿಸಿದೆ. ಇದಕ್ಕೆ, ಒಂದು ಅಪರೂಪದ ಅತಿ ಆಕ್ರಮಣಕಾರಿ ರೀತಿಯ ರೋಗಾಣುವೇ ಕಾರಣವೆಂದು ವೈದ್ಯರು ಕಂಡುಹಿಡಿದರು.

ತುರ್ತಾಗಿ ಆ್ಯಂಟಿಬೈಆಟಿಕ್ಸ್‌ ನೀಡಿದರೂ ಕೆಲವು ದಿನಗಳೊಳಗಾಗಿ ಆ ರೋಗಾಣುಗಳು ಅವಳ ಮುಖವನ್ನು ಧ್ವಂಸಗೊಳಿಸಲು ಆರಂಭಿಸಿದವು. ವೈದ್ಯರು ಆ ಸೋಂಕನ್ನು ನಿಯಂತ್ರಣಕ್ಕೆ ತರುವಷ್ಟರೊಳಗಾಗಿ, ಮೈಲೀನಳು ಹೆಚ್ಚುಕಡಿಮೆ ಅವಳ ಇಡೀ ಮೂಗು ಮತ್ತು ತುಟಿಗಳನ್ನೇ ಕಳೆದುಕೊಂಡಿದ್ದಳು, ಹಾಗೂ ಅವಳ ಒಸಡು ಹಾಗೂ ಗಲ್ಲದ ಭಾಗಗಳನ್ನು ಸಹ ಕಳೆದುಕೊಂಡಳು. ಅಷ್ಟುಮಾತ್ರವಲ್ಲದೆ, ಅವಳ ಒಂದು ಕಣ್ಣಿನ ಬದಿಯಲ್ಲಿ ರಂಧ್ರಗಳೂ ಆದವು.

ನಾನು ಮತ್ತು ನನ್ನ ಗಂಡ ಅವಳನ್ನು ನೋಡಿದಾಕ್ಷಣ ಜೋರಾಗಿ ಅತ್ತುಬಿಟ್ಟೆವು. ನಮ್ಮ ಪುಟ್ಟ ಹುಡುಗಿಗೆ ಹೇಗೆ ಇಂಥ ದುರಂತವು ಸಂಭವಿಸಸಾಧ್ಯವಿದೆ? ಅನೇಕ ದಿನಗಳ ತನಕ ಮೈಲೀನಳು ಇಂಟೆನ್ಸಿವ್‌ ಕೇರ್‌ನಲ್ಲಿ ಇದ್ದಳು, ಮತ್ತು ಅವಳು ಬದುಕುವುದಿಲ್ಲ ಎಂದು ವೈದ್ಯರು ಭಾವಿಸಿದರು. “ಅವಳ ಮರಣವನ್ನು ಎದುರಿಸಲು ಸಿದ್ಧಳಾಗು,” ಎಂದು ನನ್ನ ಗಂಡ ಸಹ ಹೇಳುತ್ತಲೇ ಇದ್ದರು. ಆದರೆ, ಅವಳನ್ನು ಇಡಲಾಗಿದ್ದ ಕೃತಕ ಶಾಖೋಪಕರಣದ ಒಳಗೆ ನಾನು ಕೈಹಾಕುತ್ತಿದ್ದಾಗ ಅವಳು ತನ್ನ ಪುಟ್ಟ ಕೈಗಳಿಂದ ನನ್ನನ್ನು ಬಿಗಿಯಾಗಿ ಹಿಡಿಯುತ್ತಿದ್ದಳು. ಆದುದರಿಂದ ಅವಳು ಖಂಡಿತವಾಗಿಯೂ ಬದುಕಿ ಉಳಿಯುತ್ತಾಳೆಂಬ ನಂಬಿಕೆ ನನಗಿತ್ತು. ನಾನು ನನ್ನ ಗಂಡನಿಗೆ ಹೇಳಿದೆ: “ನಮ್ಮ ಮಗಳು ಖಂಡಿತವಾಗಿಯೂ ಸಾಯುವುದಿಲ್ಲ. ಆದರೆ ಈ ಸ್ಥಿತಿಯಲ್ಲಿ ಮೈಲೀನಳು ಮುಂದಕ್ಕೆ ಯಾವ ರೀತಿಯ ಜೀವನವನ್ನು ನಡಿಸುವಳೋ?” ಪ್ರತಿದಿನ ಬೆಳಿಗ್ಗೆ ನಾವು ಎದ್ದೇಳುವಾಗ, ಪ್ರಾಯಶಃ ಇದೆಲ್ಲ ಒಂದು ಕೆಟ್ಟ ಕನಸು ಅಷ್ಟೇ ಎಂದು ನೆನಸುತ್ತಿದ್ದೆವು.

ನಾವು ಆಸ್ಪತ್ರೆಯಲ್ಲಿದ್ದಾಗ, ಆಗ ಆರು ವರುಷದವಳಾಗಿದ್ದ ನಮ್ಮ ಹಿರಿಯ ಮಗಳಾದ ಮೈಡಿಲೀಸ್‌ ನನ್ನ ಹೆತ್ತವರೊಂದಿಗಿದ್ದಳು. ತನ್ನ ಪುಟ್ಟ ತಂಗಿಯು ಮನೆಗೆ ಹಿಂದಿರುಗಿ ಬರುವುದನ್ನೇ ಅವಳು ಬಹಳ ಕಾತರದಿಂದ ಕಾಯುತ್ತಿದ್ದಳು. ಮೈಲೀನ್‌ ಮನೆಯಿಂದ ಆಸ್ಪತ್ರೆಗೆ ಹೋಗುವಾಗ, ದೊಡ್ಡದಾದ ನೀಲಿ ಕಣ್ಣುಗಳುಳ್ಳ ಒಂದು ಸುಂದರವಾದ “ಗೊಂಬೆ”ಯಂತಿರುವುದನ್ನು ಅವಳು ನೋಡಿದ್ದಳು. ಆದರೆ ಮೈಡಿಲೀಸ್‌ ಮುಂದಿನ ಬಾರಿ ಅವಳನ್ನು ನೋಡಿದಾಗ, ಮೈಲೀನ್‌ ವಿಕಾರವಾಗಿ ಕಾಣುತ್ತಿದ್ದಳು.

‘ನನ್ನ ಮಗು ಏಕೆ ಇಷ್ಟೊಂದು ಕಷ್ಟಾನುಭವಿಸಬೇಕು?’

ಒಂದೂವರೆ ತಿಂಗಳು ಆಸ್ಪತ್ರೆಯಲ್ಲಿ ಕಳೆದ ಬಳಿಕ ಮೈಲೀನಳನ್ನು ಮನೆಗೆ ಹೋಗುವಂತೆ ಅನುಮತಿಸಲಾಯಿತು. ಆದರೆ ನಾವು, ನಗರದಲ್ಲಿದ್ದ ನಮ್ಮ ಮನೆಗೆ ಹಿಂದಿರುಗಲಿಲ್ಲ, ಏಕೆಂದರೆ ಯಾರೂ ಅವಳನ್ನು ನೋಡಬಾರದೆಂದು ನಾವು ಬಯಸಿದೆವು. ಹಳ್ಳಿಯಲ್ಲಿ ನನ್ನ ಹೆತ್ತವರ ಫಾರ್ಮ್‌ನ ಪಕ್ಕದಲ್ಲಿಯೇ ಒಂದು ಸಣ್ಣ ಮನೆಯಲ್ಲಿ ನಾವು ನಮ್ಮನ್ನೇ ಎಲ್ಲರಿಂದ ಪ್ರತ್ಯೇಕಿಸಿಕೊಂಡೆವು.

ಆರಂಭದಲ್ಲಿ, ಮೈಲೀನಳ ಬಾಯಿಯಿದ್ದ ಸ್ಥಳದಲ್ಲಿನ ತೆರೆದ ಜಾಗದ ಮೂಲಕ ಸ್ವಲ್ಪ ಸ್ವಲ್ಪವಾಗಿ ಎದೆಹಾಲನ್ನು ಕೊಡಶಕ್ತಳಾದೆ. ಹಾಲನ್ನು ಹೀರಿಕೊಳ್ಳಲು ಅವಳು ಅಶಕ್ತಳಾಗಿದ್ದಳು. ಆದರೆ, ಗಾಯಗಳು ವಾಸಿಯಾಗುತ್ತಾ ಬಂದಂತೆ ಅವಳ ಬಾಯಿಯಿದ್ದ ಸ್ಥಳದಲ್ಲಿನ ತೆರೆದ ಜಾಗವೂ ಹೆಚ್ಚುಕಡಿಮೆ ಮುಚ್ಚಲ್ಪಟ್ಟಿತು. ಸೀಸದ ಮೂಲಕ ದ್ರವೀಕರಿಸಿದ ಆಹಾರವನ್ನು ಮಾತ್ರ ನಾನು ಅವಳಿಗೆ ನೀಡಶಕ್ತಳಾದೆ. ಅವಳು ಒಂದು ವರುಷದವಳಾದಾಗ ನಾವು ಓಲ್‌ಜೀನ್‌ಗೆ ಹೋದೆವು, ಅಲ್ಲಿ ವೈದ್ಯರು ಅವಳ ಬಾಯಿಯ ಸ್ಥಳದಲ್ಲಿನ ತೆರೆದ ಜಾಗವನ್ನು ದೊಡ್ಡದು ಮಾಡಲಿಕ್ಕಾಗಿ ನಾಲ್ಕು ಶಸ್ತ್ರಚಿಕಿತ್ಸೆಗಳನ್ನು ನಡೆಸಿದರು.

ನಾನು ಸ್ವತಃ ಹೀಗೆ ಕೇಳಿಕೊಳ್ಳುತ್ತಿದ್ದೆ: ‘ನನ್ನ ಮಗು ಏಕೆ ಇಷ್ಟೊಂದು ಕಷ್ಟಾನುಭವಿಸಬೇಕು?’ ಈ ಪ್ರಶ್ನೆಗೆ ಉತ್ತರವನ್ನು ನಾನು, ಪ್ರೇತವ್ಯವಹಾರದ ಕೇಂದ್ರಗಳನ್ನು ಭೇಟಿನೀಡುವ ಮೂಲಕ ಮತ್ತು ನನ್ನ ಧಾರ್ಮಿಕ ವಿಗ್ರಹಗಳಿಗೆ ಪ್ರಾರ್ಥಿಸುವ ಮೂಲಕ ಹುಡುಕುತ್ತಿದ್ದೆ. ಆದರೆ ಇದಾವುದೂ ನನ್ನನ್ನು ಸ್ವಲ್ಪವೂ ಸಂತೈಸಲಿಲ್ಲ. ಕೆಲವು ಸಂಬಂಧಿಕರ ಮತ್ತು ಸ್ನೇಹಿತರ ಮನನೋಯಿಸುವ ಮಾತುಗಳು ನನ್ನನ್ನು ಇನ್ನೂ ಹೆಚ್ಚಾಗಿ ಕಂಗೆಡಿಸಿದವು. “ದೇವರಿಗೆ, ತಾನೇಕೆ ಈ ಎಲ್ಲಾ ವಿಷಯಗಳನ್ನು ಸಂಭವಿಸುವಂತೆ ಅನುಮತಿಸುತ್ತಿದ್ದೇನೆ ಎಂಬುದು ತಿಳಿದಿದೆ” ಎಂಬುದಾಗಿ ಕೆಲವರು ಹೇಳುತ್ತಿದ್ದರು. ಇನ್ನಿತರರು, “ಖಂಡಿತವಾಗಿಯೂ ಇದು ದೇವರಿಂದಲೇ ಬಂದ ಶಿಕ್ಷೆ” ಎಂದು ಹೇಳುತ್ತಿದ್ದರು. ಆದರೆ ನಾನು, ಮೈಲೀನಳು ದೊಡ್ಡವಳಾದಾಗ ಅವಳಿಗೆ ಏನು ಹೇಳಲಿ ಎಂಬುದರ ಬಗ್ಗೆ ಯಾವಾಗಲೂ ಚಿಂತಿಸುತ್ತಿದ್ದೆ. ಮೈಲೀನಳು ಇನ್ನೂ ಚಿಕ್ಕವಳಾಗಿದ್ದಾಗ ಒಮ್ಮೆ ತನ್ನ ತಂದೆಯನ್ನು ಹೀಗೆ ಕೇಳಿದಳು: “ಎಲ್ಲರಂತೆ ನನಗ್ಯಾಕೆ ಮೂಗಿಲ್ಲ?” ಅವಳ ತಂದೆಗೆ ಉತ್ತರ ಹೇಳಲು ಆಗದೆ, ಹೊರಗೆ ಹೋಗಿ ಅತ್ತರು. ಏನು ಸಂಭವಿಸಿತೆಂದು ಅವಳಿಗೆ ವಿವರಿಸಲು ನಾನು ಪ್ರಯತ್ನಿಸಿದೆ. ಅವಳ ಮೂಗನ್ನು ಮತ್ತು ಬಾಯನ್ನು ಒಂದು ಸಣ್ಣ ಕೀಟವು ತಿಂದುಬಿಟ್ಟಿತು ಎಂದು ನಾನು ಅವಳಿಗೆ ಹೇಳುತ್ತಿದ್ದುದ್ದನ್ನು ಅವಳು ಇನ್ನೂ ಜ್ಞಾಪಿಸಿಕೊಳ್ಳುತ್ತಾಳೆ.

ನಿರೀಕ್ಷೆಗೆ ಆಧಾರ

ಒಮ್ಮೆ ನನಗೆ ತೀರಾ ನಿರಾಶೆಯ ಅನಿಸಿಕೆಯಾದಾಗ, ನನ್ನ ಒಬ್ಬಾಕೆ ನೆರೆಯವಳು ಯೆಹೋವನ ಸಾಕ್ಷಿಯೆಂಬುದು ನನಗೆ ನೆನಪಾಯಿತು. ನನ್ನ ಪುಟ್ಟ ಹುಡುಗಿಯು ಇಷ್ಟೊಂದು ಕಷ್ಟಾನುಭವಿಸುವಂತೆ ದೇವರು ಏಕೆ ಅನುಮತಿಸುತ್ತಿದ್ದಾನೆ ಎಂಬುದನ್ನು ಬೈಬಲಿನಿಂದ ತೋರಿಸುವಂತೆ ನಾನು ಅವಳನ್ನು ಕೇಳಿದೆ. “ಈ ಅಸ್ವಸ್ಥತೆಯು ನಾನು ಮಾಡಿದ ಯಾವುದೊ ತಪ್ಪಿಗಾಗಿ ಶಿಕ್ಷೆಯಾಗಿರುವುದಾದರೆ, ಮೈಲೀನಳು ಅದನ್ನು ಏಕೆ ಅನುಭವಿಸಬೇಕು?” ಎಂಬುದಾಗಿಯೂ ನಾನು ಅವಳನ್ನು ಪ್ರಶ್ನಿಸಿದೆ.

ನನ್ನ ನೆರೆಯವಳು, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸಬಲ್ಲಿರಿ * ಎಂಬ ಪುಸ್ತಕವನ್ನು ಉಪಯೋಗಿಸಿ ನನ್ನೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸಿದಳು. ಮೈಲೀನಳಿಗೆ ಏನು ಸಂಭವಿಸಿದೆಯೊ ಅದಕ್ಕೆ ದೇವರು ಕಾರಣನಲ್ಲ ಮತ್ತು ಆತನು ನಮ್ಮ ಬಗ್ಗೆ ನಿಜವಾಗಿಯೂ ಚಿಂತಿಸುತ್ತಾನೆ ಎಂಬುದನ್ನು ನಾನು ಸ್ವಲ್ಪಸ್ವಲ್ಪವಾಗಿ ಅರ್ಥಮಾಡಿಕೊಳ್ಳಲಾರಂಭಿಸಿದೆ. (ಯಾಕೋಬ 1:13; 1 ಪೇತ್ರ 5:7) ಯೇಸು ಕ್ರಿಸ್ತನ ಕೈಯಲ್ಲಿರುವ ಆತನ ಸ್ವರ್ಗೀಯ ರಾಜ್ಯದ ಕೆಳಗೆ ಕಷ್ಟಾನುಭವವು ಸಂಪೂರ್ಣವಾಗಿ ತೆಗೆದುಹಾಕಲ್ಪಡಲಿದೆ ಎಂಬ ಅದ್ಭುತಕರ ನಿರೀಕ್ಷೆಯನ್ನು ನಾನು ಗಣ್ಯಮಾಡತೊಡಗಿದೆ. (ಮತ್ತಾಯ 6:​10; ಪ್ರಕಟನೆ 21:​3, 4) ಈ ಜ್ಞಾನವು ನನ್ನನ್ನು ಬಲಗೊಳಿಸಿತು, ಮತ್ತು ನಾನು ಯೆಹೋವನ ಸಾಕ್ಷಿಗಳ ಕ್ರೈಸ್ತ ಕೂಟಗಳಿಗೆ ಹಾಜರಾಗುವಂತೆ ಪ್ರಚೋದಿಸಿತು. ಆರಂಭದಲ್ಲಿ, ನನ್ನ ಈ ಹೊಸ ಆಧ್ಯಾತ್ಮಿಕ ಆಸಕ್ತಿಯನ್ನು ನನ್ನ ಗಂಡ ಇಷ್ಟಪಡಲಿಲ್ಲ. ಆದರೆ, ಅದು ನನಗೆ ನಮ್ಮ ದುರಂತವನ್ನು ತಾಳಿಕೊಳ್ಳಲು ಸಹಾಯನೀಡುತ್ತಿದ್ದುದರಿಂದ ನಾನು ಬೈಬಲನ್ನು ಅಧ್ಯಯನ ಮಾಡುವುದನ್ನು ಅವರು ತಡೆಯಲಿಲ್ಲ.

ವಿದೇಶದಿಂದ ಸಹಾಯ

ಮೈಲೀನಳು ಎರಡು ವರುಷದವಳಾಗಿದ್ದಾಗ, ಮೆಕ್ಸಿಕೊದಲ್ಲಿದ್ದ ಒಬ್ಬ ಹೆಸರುವಾಸಿ ಅಂಗಭಿನ್ನ ಚಿಕಿತ್ಸೆ (ಪ್ಲಾಸ್ಟಿಕ್‌ ಸರ್ಜರಿ)ಯ ಶಸ್ತ್ರಚಿಕಿತ್ಸಕನಿಗೆ ಅವಳ ಬಗ್ಗೆ ತಿಳಿದುಬಂತು ಮತ್ತು ಅವನು ಮೈಲೀನಳಿಗೆ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ತಿಳಿಸಿದನು. 1994ರಲ್ಲಿ ಮೊದಲ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. ಹೆಚ್ಚುಕಡಿಮೆ ಒಂದು ವರುಷ ಕಾಲ ನಾನು ಮತ್ತು ಮೈಲೀನ್‌ ಮೆಕ್ಸಿಕೊದಲ್ಲಿ ಉಳುಕೊಂಡೆವು. ಆರಂಭದಲ್ಲಿ ನಮಗೆ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಲು ಅಸಾಧ್ಯವಾದುದರಿಂದ, ನಾವು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದು ನನ್ನನ್ನು ಆಧ್ಯಾತ್ಮಿಕವಾಗಿ ಬಲಹೀನಗೊಳಿಸಿತು. ನಂತರ, ಸ್ಥಳಿಕ ಸಾಕ್ಷಿಗಳಲ್ಲೊಬ್ಬರು ನಮ್ಮನ್ನು ಸಂಪರ್ಕಿಸಿದರು, ಮತ್ತು ಆದಷ್ಟು ಬೇಗನೆ ಪುನಃ ನಾವು ನಮ್ಮ ಜೊತೆ ವಿಶ್ವಾಸಿಗಳೊಂದಿಗೆ ಸಹವಾಸಿಸಲು ಆರಂಭಿಸಿದೆವು. ಕ್ಯೂಬಕ್ಕೆ ಹಿಂದಿರುಗಿದ ನಂತರ ನಾನು ನನ್ನ ಬೈಬಲ್‌ ಅಧ್ಯಯನವನ್ನು ಮುಂದುವರಿಸಿದೆ ಮತ್ತು ಆಧ್ಯಾತ್ಮಿಕವಾಗಿ ಚೇತರಿಸಿಕೊಂಡೆ.

ಆ ಸಮಯದಲ್ಲಿ ನನ್ನ ಗಂಡ ಇನ್ನೂ ಬೈಬಲಿನಲ್ಲಿ ಆಸಕ್ತಿಯನ್ನು ತೋರಿಸುತ್ತಿರಲಿಲ್ಲ. ಅವರ ಆಸಕ್ತಿಯನ್ನು ಕೆರಳಿಸುವ ಉದ್ದೇಶದಿಂದ, ಬೈಬಲ್‌ ಆಧಾರಿತ ಸಾಹಿತ್ಯಗಳ ಕೆಲವು ಭಾಗಗಳನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ನನಗಾಗಿ ಓದಿ ಹೇಳಲು ನಾನು ಅವರನ್ನು ಕೇಳಿಕೊಂಡೆ. ಮೆಕ್ಸಿಕೊಗೆ ಆಗಾಗ ಮಾಡಬೇಕಾದ ದೀರ್ಘಕಾಲದ ಭೇಟಿಗಳು ನಮ್ಮ ಕುಟುಂಬ ಸಂಬಂಧವನ್ನು ಧ್ವಂಸಗೊಳಿಸಬಹುದು ಎಂಬ ಚಿಂತೆ ಅವರನ್ನು ಕಾಡುತ್ತಿದ್ದುದರಿಂದ ಅವರು ಕ್ರಮೇಣ ಒಂದು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಲು ಪ್ರೇರೇಪಿಸಲ್ಪಟ್ಟರು. ಆಧ್ಯಾತ್ಮಿಕವಾಗಿ ಐಕ್ಯರಾಗಿರುವುದು, ಕುಟುಂಬದಿಂದ ಪ್ರತ್ಯೇಕವಾಗಿರುವ ಈ ಅವಧಿಗಳನ್ನು ಉತ್ತಮ ರೀತಿಯಲ್ಲಿ ತಾಳಿಕೊಳ್ಳಲು ನಮಗೆ ಸಹಾಯಮಾಡಬಲ್ಲದು ಎಂದು ಅವರು ಭಾವಿಸಿದರು. ಅಂತೆಯೇ ಇದು ಸಹಾಯಮಾಡಿತು. 1997ರಲ್ಲಿ ನಾನು, ನನ್ನ ಗಂಡ, ಮತ್ತು ನನ್ನ ಹಿರಿಯ ಮಗಳು ದೀಕ್ಷಾಸ್ನಾನ ಪಡೆದುಕೊಂಡೆವು.

ಮೊದಲ ಕೆಲವು ಬಾರಿ ನಾವು ಮೆಕ್ಸಿಕೊದಲ್ಲಿ ತಂಗಿದ್ದಾಗ ಮೈಲೀನಳು, ತನ್ನ ಮುಖವನ್ನು ಆ ಸಣ್ಣ ಕೀಟವು ತಿಂದಿರದಿದ್ದರೆ ತಂದೆ ಮತ್ತು ಅಕ್ಕನಿಂದ ಇಷ್ಟು ದಿವಸಗಳ ತನಕ ನಾವು ದೂರವಿರುವ ಅಗತ್ಯವಿರುತ್ತಿರಲಿಲ್ಲವಲ್ಲಾ ಎಂದು ಹೇಳುತ್ತಿದ್ದಳು. ಅಷ್ಟೊಂದು ದೀರ್ಘಕಾಲದ ವರೆಗೆ ಕುಟುಂಬದಿಂದ ದೂರವಿರುವುದು ನಿಜವಾಗಿಯೂ ಬಹಳ ದುಃಖಕರ ಸಂಗತಿಯಾಗಿತ್ತು. ಹಾಗಿದ್ದರೂ, ಮೆಕ್ಸಿಕೊದಲ್ಲಿರುವ ಬೆತೆಲ್‌ ಎಂದು ಕರೆಯಲ್ಪಡುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ನೀಡಿದ ಭೇಟಿಯು ನಿಜವಾಗಿಯೂ ನಮ್ಮನ್ನು ಬಹಳವಾಗಿ ಹುರಿದುಂಬಿಸಿತು. ಆ ಭೇಟಿ ನನಗಿನ್ನೂ ನೆನಪಿದೆ. ನಾವು ಮೆಕ್ಸಿಕೊವನ್ನು ಭೇಟಿನೀಡಿದ ಆ ಅವಧಿಯಲ್ಲಿ ಮೈಲೀನಳಿಗೆ ಅದು ಐದನೇ ಶಸ್ತ್ರಚಿಕಿತ್ಸೆಯಾಗಿತ್ತು. ಆದರೆ ತನಗೆ ಈ ಶಸ್ತ್ರಚಿಕಿತ್ಸೆ ಬೇಡವೆಂದು ಮೈಲೀನಳು ಹೇಳುತ್ತಿದ್ದಳು, ಏಕೆಂದರೆ ಶಸ್ತ್ರಚಿಕಿತ್ಸೆಯ ನಂತರ ಗಾಯವು ವಾಸಿಯಾಗುವಾಗ ಬಹಳ ನೋವನ್ನು ಅವಳು ಅನುಭವಿಸಬೇಕಾಗುತ್ತಿತ್ತು. ಆದರೆ, ಅವಳು ಧೈರ್ಯದಿಂದಿದ್ದು, ವೈದ್ಯರು ಶಸ್ತ್ರಚಿಕಿತ್ಸೆಯನ್ನು ಮಾಡುವಂತೆ ಅನುಮತಿಸುವುದಾದರೆ, ಆಸ್ಪತ್ರೆಯಿಂದ ಹಿಂದಿರುಗಿದೊಡನೆ ಅವಳಿಗೆ ಒಂದು ಪಾರ್ಟಿಯನ್ನು ನೀಡಲಾಗುವುದೆಂದು ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡುತ್ತಿದ್ದ ಕೆಲವು ಸಾಕ್ಷಿಗಳು ಅವಳಿಗೆ ಮಾತುಕೊಟ್ಟರು. ಈ ಕಾರಣ ಅವಳು ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡಳು.

ಮೈಲೀನಳೇ ತನ್ನ ಅನಿಸಿಕೆಗಳನ್ನು ಹೇಳಲಿ: “ಬೆತೆಲಿನಲ್ಲಿ ಒಂದು ಪಾರ್ಟಿಯನ್ನು ಹೊಂದುವುದರ ಕುರಿತು ನಾನು ಪುಳಕಿತಳಾದೆ. ಆದುದರಿಂದ ನಾನು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಹಳ ಧೈರ್ಯದಿಂದಿದ್ದೆ. ಪಾರ್ಟಿಯು ಬಹಳ ಆನಂದದಾಯಕವಾಗಿತ್ತು. ಅನೇಕ ಆಧ್ಯಾತ್ಮಿಕ ಸಹೋದರ ಸಹೋದರಿಯರಿದ್ದರು. ಅವರು ನನಗೆ ಅನೇಕ ಕಾರ್ಡ್‌ಗಳನ್ನು ನೀಡಿದರು. ಅವು ಈಗಲೂ ನನ್ನ ಬಳಿ ಇವೆ. ಅಲ್ಲಿ ನನಗೆ ದೊರೆತ ಉತ್ತೇಜನವು, ಮುಂದಿನ ಶಸ್ತ್ರಚಿಕಿತ್ಸೆಗಳನ್ನು ತಾಳಿಕೊಳ್ಳಲು ನನಗೆ ಬಲವನ್ನು ನೀಡಿತು.”

ಪ್ರಗತಿ ಮತ್ತು ತಾಳಿಕೊಳ್ಳಲು ಸಹಾಯ

ಮೈಲೀನಳು ಈಗ 11 ವರುಷದವಳಾಗಿದ್ದಾಳೆ. ಅವಳ ಮುಖದ ಮೇಲೆ 20 ಶಸ್ತ್ರಚಿಕಿತ್ಸೆಗಳು ನಡೆಸಲ್ಪಟ್ಟಿವೆ. ಶಸ್ತ್ರಚಿಕಿತ್ಸೆಗಳಿಂದಾಗಿ ಅವಳಿಗೆ ಬಹಳ ಸಹಾಯವು ದೊರೆತವಾದರೂ, ಈಗಲೂ ಅವಳಿಗೆ ತನ್ನ ಬಾಯನ್ನು ಸಂಪೂರ್ಣವಾಗಿ ತೆರೆಯಲು ಸಾಧ್ಯವಾಗುತ್ತಿಲ್ಲ. ಆದರೂ, ಅವಳು ಯಾವಾಗಲೂ ಧೈರ್ಯ ಮತ್ತು ಸಕಾರಾತ್ಮಕ ಮನೋಭಾವವನ್ನು ಹೊಂದಿರುತ್ತಾಳೆ. ಆಧ್ಯಾತ್ಮಿಕ ವಿಷಯಗಳಿಗೂ ಅವಳು ಬಹಳಷ್ಟು ಗಣ್ಯತೆಯನ್ನು ತೋರಿಸುತ್ತಾಳೆ. ಆರು ವರುಷದವಳಾಗಿದ್ದಾಗಿನಿಂದ ಅವಳು ನಮ್ಮ ಸ್ಥಳಿಕ ಸಭೆಯಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಗವಹಿಸುತ್ತಿದ್ದಾಳೆ. ಮತ್ತು ಅವಳು 2003ರ ಏಪ್ರಿಲ್‌ 27ರಂದು ದೀಕ್ಷಾಸ್ನಾನವನ್ನು ಪಡೆದುಕೊಂಡಳು. ಅವಳು ಒಂದು ಸಮಯದಲ್ಲಿ ಮೂರು ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದಳು. ಒಮ್ಮೆ ಮೆಕ್ಸಿಕೊದಲ್ಲಿದ್ದಾಗ, ಅವಳು ಒಬ್ಬ ಸಭ್ಯವ್ಯಕ್ತಿಯೊಂದಿಗೆ ಮಾತಾಡಿದಳು, ಮತ್ತು ಅವನು ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದನು. ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಮತ್ತು ಇತರ ಸಭಾಕೂಟಗಳಿಗೆ ಅವಳು ಆ ವ್ಯಕ್ತಿಯನ್ನು ಆಮಂತ್ರಿಸಿದಳು. ಅವನು ಬಹು ಆಸಕ್ತಿಯಿಂದ ಹಾಜರಾದನು.

ಮೈಲೀನಳು ಮನೆಯಿಂದ ಮನೆಗೆ ಸಾರುತ್ತಿರುವಾಗ, ಕೆಲವು ಜನರು ಅವಳ ಮುಖವನ್ನು ನೋಡಿ, ಬೆಂಕಿಯಿಂದ ಸುಟ್ಟಿತೊ ಎಂದು ಕೇಳುತ್ತಾರೆ. ಆ ಸಂದರ್ಭವನ್ನು ಅವಳು, ಬರಲಿರುವ ಪರದೈಸಿನಲ್ಲಿ ಯೆಹೋವನು ತನಗೊಂದು ಹೊಸ ಮುಖವನ್ನು ನೀಡುವನು ಎಂಬ ತನ್ನ ಬೈಬಲ್‌ ಆಧಾರಿತ ನಿರೀಕ್ಷೆಯನ್ನು ಹಂಚಿಕೊಳ್ಳಲು ಉಪಯೋಗಿಸುತ್ತಾಳೆ.​—⁠ಲೂಕ 23:43.

ಶಸ್ತ್ರಚಿಕಿತ್ಸೆಗಳ ಮತ್ತು ಇತರ ಮಕ್ಕಳ ಅಣಕಿಸುವ ಮಾತುಗಳಿಂದ ಮೈಲೀನಳು ಅನುಭವಿಸಿರುವ ನೋವನ್ನು ಮಾತುಗಳಿಂದ ವರ್ಣಿಸಸಾಧ್ಯವಿಲ್ಲ. ಆದರೆ ಇದನ್ನೆಲ್ಲಾ ತಾಳಿಕೊಳ್ಳಲು ಅವಳಿಗೆ ಯಾವುದು ಸಹಾಯಮಾಡಿತು? ಮೈಲೀನಳು ದೃಢಭರವಸೆಯಿಂದ ಉತ್ತರಿಸುವುದು: “ಯೆಹೋವನು ನನಗೆ ತುಂಬ ನೈಜ ವ್ಯಕ್ತಿಯಾಗಿದ್ದಾನೆ. ತಾಳಿಕೊಳ್ಳಲು ಬೇಕಾದ ಬಲ ಮತ್ತು ಧೈರ್ಯವನ್ನು ಆತನು ನನಗೆ ನೀಡುತ್ತಾನೆ. ನನಗೆ ಇನ್ನು ಹೆಚ್ಚಿನ ಶಸ್ತ್ರಚಿಕಿತ್ಸೆಗಳು ಬೇಡ, ಏಕೆಂದರೆ ನನಗಾಗಿ ವೈದ್ಯರು ಇನ್ನೇನನ್ನೂ ಮಾಡಲಾರರು. ನಾನು ಹುಟ್ಟಿದಾಗ ಹೇಗಿದ್ದೆನೊ ಹಾಗೆ ಅವರಿಂದ ನನ್ನನ್ನು ಮಾಡಸಾಧ್ಯವಿಲ್ಲ. ಆದರೆ ಯೆಹೋವನು ನನಗೆ ಹೊಸ ಲೋಕದಲ್ಲಿ ಒಂದು ಹೊಸ ಮುಖವನ್ನು ನೀಡಲಿದ್ದಾನೆಂಬ ನಂಬಿಕೆ ನನಗಿದೆ. ಆಗ ನಾನು ಪುನಃ ಒಮ್ಮೆ ಸುಂದರಳಾಗುವೆ.” (g04 5/22)

[ಪಾದಟಿಪ್ಪಣಿ]

^ ಯೆಹೋವನ ಸಾಕ್ಷಿಗಳ ಪ್ರಕಾಶನ.

[ಪುಟ 18ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಯೆಹೋವನು ನನಗೆ ಹೊಸ ಲೋಕದಲ್ಲಿ ಒಂದು ಹೊಸ ಮುಖವನ್ನು ನೀಡಲಿದ್ದಾನೆ”

[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರು ಇದಕ್ಕೆ ಕಾರಣನಲ್ಲ ಎಂದು ನಾನು ಸ್ವಲ್ಪಸ್ವಲ್ಪವಾಗಿ ಅರ್ಥಮಾಡಿಕೊಂಡೆ