ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವಾಹವನ್ನು ಏಕೆ ಪವಿತ್ರವಾದದ್ದಾಗಿ ಪರಿಗಣಿಸಬೇಕು?

ವಿವಾಹವನ್ನು ಏಕೆ ಪವಿತ್ರವಾದದ್ದಾಗಿ ಪರಿಗಣಿಸಬೇಕು?

ಬೈಬಲಿನ ದೃಷ್ಟಿಕೋನ

ವಿವಾಹವನ್ನು ಏಕೆ ಪವಿತ್ರವಾದದ್ದಾಗಿ ಪರಿಗಣಿಸಬೇಕು?

ಅಧಿಕಾಂಶ ಜನರು ಇಂದು ತಾವು ವಿವಾಹವನ್ನು ಪವಿತ್ರವಾದದ್ದಾಗಿ ಮಾನ್ಯಮಾಡುತ್ತೇವೆಂದು ಹೇಳಿಕೊಳ್ಳುವುದು ಸಂಭವನೀಯ. ಹಾಗಾದರೆ, ಅನೇಕ ವಿವಾಹಗಳು ವಿಚ್ಛೇದದಲ್ಲಿ ಕೊನೆಗೊಳ್ಳುವುದೇಕೆ? ಕೆಲವರಿಗಾದರೋ, ವಿವಾಹವು ಕೇವಲ ರೋಮಾಂಚಕ ಪ್ರೀತಿಯ ಮೇಲಾಧಾರಿತವಾದ ಒಂದು ಪ್ರತಿಜ್ಞೆ ಮತ್ತು ಒಂದು ಕಾನೂನುಬದ್ಧ ಒಪ್ಪಂದವಾಗಿರುತ್ತದಷ್ಟೆ. ಮಾಡುವ ಪ್ರತಿಜ್ಞೆಗಳನ್ನು ಯಾವಾಗ ಬೇಕಾದರೂ ಮುರಿಯಬಹುದು ಎಂದು ಅವರು ನೆನಸುತ್ತಾರೆ. ವಿವಾಹವನ್ನು ಈ ರೀತಿಯಲ್ಲಿ ಪರಿಗಣಿಸುವ ಜನರು, ವಿಷಯಗಳು ತಾವೆಣಿಸಿದಂಥ ರೀತಿಯಲ್ಲಿ ನಡೆಯದಿರುವುದನ್ನು ಕಂಡಕೂಡಲೇ ತಮ್ಮ ವಿವಾಹವನ್ನು ಅಂತ್ಯಗೊಳಿಸುವುದನ್ನು ಬಹಳ ಸುಲಭವಾದದ್ದಾಗಿ ಕಂಡುಕೊಳ್ಳುತ್ತಾರೆ.

ಆದರೆ ದೇವರು ವೈವಾಹಿಕ ಏರ್ಪಾಡನ್ನು ಹೇಗೆ ಪರಿಗಣಿಸುತ್ತಾನೆ? ಇದಕ್ಕೆ ಉತ್ತರವು ಆತನ ವಾಕ್ಯವಾದ ಬೈಬಲಿನಲ್ಲಿ ಇಬ್ರಿಯ 13:4ರಲ್ಲಿ ಕಂಡುಬರುತ್ತದೆ: “ಗಂಡಹೆಂಡರ ಸಂಬಂಧವು ನಿಷ್ಕಲಂಕ [“ಪರಿಶುದ್ಧ,” ಪರಿಶುದ್ಧ ಬೈಬಲ್‌ *]ವಾಗಿರಬೇಕು.” “ಪರಿಶುದ್ಧ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು, ಅಮೂಲ್ಯವಾದದ್ದು ಮತ್ತು ಅತ್ಯಂತ ಉಚ್ಛ ಮಾನ್ಯತೆಯುಳ್ಳದ್ದು ಎಂಬರ್ಥವುಳ್ಳದ್ದಾಗಿದೆ. ನಾವು ಒಂದು ವಸ್ತುವನ್ನು ತುಂಬ ಅಮೂಲ್ಯವಾಗಿ ಪರಿಗಣಿಸುವಾಗ, ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ಮತ್ತು ಆಕಸ್ಮಿಕವಾಗಿಯೂ ಅದನ್ನು ಕಳೆದುಕೊಳ್ಳದಿರಲು ಜಾಗ್ರತೆವಹಿಸುತ್ತೇವೆ. ವಿವಾಹದ ಏರ್ಪಾಡಿನ ವಿಷಯದಲ್ಲಿಯೂ ಇದು ಸತ್ಯವಾಗಿರಬೇಕು. ಕ್ರೈಸ್ತರು ವಿವಾಹವನ್ನು ಪರಿಶುದ್ಧವಾದದ್ದಾಗಿ, ಅಂದರೆ ಅವರು ಸಂರಕ್ಷಿಸಲು ಬಯಸುವಂಥ ಒಂದು ಅಮೂಲ್ಯ ಸಂಗತಿಯಾಗಿ ಪರಿಗಣಿಸಬೇಕು.

ಯೆಹೋವ ದೇವರು ವಿವಾಹವನ್ನು ಒಬ್ಬ ಪತಿ ಪತ್ನಿಯ ನಡುವೆಯಿರುವ ಒಂದು ಪವಿತ್ರ ಏರ್ಪಾಡಾಗಿ ನಿರ್ಮಿಸಿದನು ಎಂಬುದಂತೂ ಸುಸ್ಪಷ್ಟ. ಆದರೆ ವಿವಾಹದ ಕುರಿತು ಆತನಿಗಿರುವ ದೃಷ್ಟಿಕೋನವೇ ನಮಗೂ ಇದೆ ಎಂಬುದನ್ನು ನಾವು ಹೇಗೆ ತೋರಿಸಬಲ್ಲೆವು?

ಪ್ರೀತಿ ಮತ್ತು ಗೌರವ

ವೈವಾಹಿಕ ಏರ್ಪಾಡನ್ನು ಗೌರವಿಸುವುದು, ವಿವಾಹ ಸಂಗಾತಿಗಳು ಒಬ್ಬರು ಇನ್ನೊಬ್ಬರಿಗೆ ಮಾನಮರ್ಯಾದೆಯನ್ನು ತೋರಿಸುವುದನ್ನು ಅಗತ್ಯಪಡಿಸುತ್ತದೆ. (ರೋಮಾಪುರ 12:10) ಪ್ರಥಮ ಶತಮಾನದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದುದು: “ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು.”​—⁠ಎಫೆಸ 5:⁠33.

ಕೆಲವೊಮ್ಮೆ ವಿವಾಹ ಸಂಗಾತಿಗಳಲ್ಲಿ ಒಬ್ಬರು, ಪ್ರೀತಿಭರಿತವಾದ ಅಥವಾ ಗೌರವಭರಿತವಾದ ರೀತಿಯಲ್ಲಿ ವರ್ತಿಸದಿರಬಹುದು ಎಂಬುದು ಒಪ್ಪಿಕೊಳ್ಳತಕ್ಕ ಸಂಗತಿಯೇ. ಆದರೂ, ಕ್ರೈಸ್ತರು ಇಂಥ ಪ್ರೀತಿ ಮತ್ತು ಗೌರವವನ್ನು ತೋರಿಸಲೇಬೇಕು. ಪೌಲನು ಬರೆದುದು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.”​—⁠ಕೊಲೊಸ್ಸೆ 3:⁠13.

ಸಮಯ ಮತ್ತು ಗಮನ

ತಮ್ಮ ಬಂಧವನ್ನು ಪವಿತ್ರವಾಗಿ ಪರಿಗಣಿಸುವಂಥ ವಿವಾಹ ಸಂಗಾತಿಗಳು, ಪರಸ್ಪರರ ಶಾರೀರಿಕ ಮತ್ತು ಭಾವನಾತ್ಮಕ ಆವಶ್ಯಕತೆಗಳನ್ನು ಪೂರೈಸಲು ಸಮಯವನ್ನು ತೆಗೆದುಕೊಳ್ಳುತ್ತಾರೆ. ಲೈಂಗಿಕ ಸಂಬಂಧವೂ ಇದರಲ್ಲಿ ಒಳಗೂಡಿದೆ. ಬೈಬಲ್‌ ಹೇಳುವುದು: “ಗಂಡನು ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ, ಹಾಗೆಯೇ ಹೆಂಡತಿಯು ಗಂಡನಿಗೆ ಸಲ್ಲಿಸಲಿ.”​—⁠1 ಕೊರಿಂಥ 7:⁠3.

ಆದರೂ, ಕೆಲವು ವಿವಾಹಿತ ದಂಪತಿಗಳಲ್ಲಿ ಗಂಡನು ಹೆಚ್ಚಿನ ಸಂಪಾದನೆಗೊಸ್ಕರ ತಾತ್ಕಾಲಿಕವಾಗಿ ಬೇರೆ ಸ್ಥಳಕ್ಕೆ ಹೋಗುವ ಆವಶ್ಯಕತೆಯು ಉಂಟಾಗಿದೆ. ಕೆಲವೊಮ್ಮೆ ಗಂಡಹೆಂಡತಿಯರ ಈ ಅಗಲುವಿಕೆಯು ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ದೀರ್ಘಕಾಲದ್ದಾಗಿ ಬಿಡುತ್ತದೆ. ಅನೇಕವೇಳೆ ಇಂಥ ಪ್ರತ್ಯೇಕತೆಯು ವಿವಾಹವನ್ನು ತುಂಬ ಕಷ್ಟಕರ ಸನ್ನಿವೇಶಕ್ಕೆ ಒಡ್ಡಿದೆ, ಮತ್ತು ಕೆಲವೊಮ್ಮೆ ವ್ಯಭಿಚಾರ ಹಾಗೂ ವಿವಾಹ ವಿಚ್ಛೇದಕ್ಕೂ ನಡಿಸಿದೆ. (1 ಕೊರಿಂಥ 7:​2, 5) ಈ ಕಾರಣದಿಂದಲೇ ಅನೇಕ ಕ್ರೈಸ್ತ ದಂಪತಿಗಳು, ತಾವು ಪವಿತ್ರವೆಂದು ಪರಿಗಣಿಸುವ ವಿವಾಹ ಸಂಬಂಧವನ್ನು ಅಪಾಯಕ್ಕೊಡ್ಡುವ ಬದಲಿಗೆ ಭೌತಿಕ ಪ್ರಯೋಜನಗಳನ್ನು ತ್ಯಾಗಮಾಡಲು ನಿರ್ಧರಿಸಿದ್ದಾರೆ.

ಸಮಸ್ಯೆಗಳು ಏಳುವಾಗ

ಕಷ್ಟತೊಂದರೆಗಳು ಎದುರಾಗುವಾಗ, ತಮ್ಮ ವಿವಾಹವನ್ನು ಗೌರವಿಸುವ ಕ್ರೈಸ್ತರು ಆತುರದಿಂದ ಕ್ರಿಯೆಗೈದು ಪ್ರತ್ಯೇಕವಾಸವನ್ನೊ ವಿಚ್ಛೇದವನ್ನೋ ಪಡೆದುಕೊಳ್ಳಲು ಪ್ರಯತ್ನಿಸುವುದಿಲ್ಲ. (ಮಲಾಕಿಯ 2:16; 1 ಕೊರಿಂಥ 7:10, 11) ಯೇಸು ಹೇಳಿದ್ದು: “ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವದಕ್ಕೆ ಕಾರಣನಾಗುತ್ತಾನೆ. ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರಮಾಡಿದವನಾಗಿದ್ದಾನೆ.” (ಮತ್ತಾಯ 5:32) ಯಾವುದೇ ಶಾಸ್ತ್ರೀಯ ಆಧಾರವು ಇಲ್ಲದಿರುವಾಗ ಒಬ್ಬ ದಂಪತಿಯು ವಿವಾಹ ವಿಚ್ಛೇದ ಅಥವಾ ಪ್ರತ್ಯೇಕವಾಗಲು ಆಯ್ಕೆಮಾಡುವುದು, ವಿವಾಹಕ್ಕೆ ಅಗೌರವವನ್ನು ತೋರಿಸುವಂತಿದೆ.

ವಿವಾಹದ ಕುರಿತಾದ ನಮ್ಮ ದೃಷ್ಟಿಕೋನವು, ಗಂಭೀರವಾದ ವೈವಾಹಿಕ ಸಮಸ್ಯೆಗಳಿರುವವರಿಗೆ ನಾವು ನೀಡುವ ಬುದ್ಧಿವಾದದ ಮೂಲಕವೂ ತೋರಿಸಲ್ಪಡುತ್ತದೆ. ಪ್ರತ್ಯೇಕವಾಗುವಂತೆ ಅಥವಾ ವಿಚ್ಛೇದ ನೀಡುವಂತೆ ನಾವು ಕೂಡಲೆ ಶಿಫಾರಸ್ಸು ಮಾಡುತ್ತೇವೋ? ನಿಜ, ಕೆಲವೊಮ್ಮೆ ವಿಪರೀತ ಶಾರೀರಿಕ ದೌರ್ಜನ್ಯ ಅಥವಾ ಉದ್ದೇಶಪೂರ್ವಕವಾಗಿ ಬೆಂಬಲ ನೀಡದಿರುವಂಥ ಪರಿಸ್ಥಿತಿಗಳಿರುವಲ್ಲಿ ಪ್ರತ್ಯೇಕವಾಸವನ್ನು ಆಯ್ಕೆಮಾಡಲು ಸೂಕ್ತವಾದ ಕಾರಣಗಳಿರಬಹುದು. * ಅಷ್ಟುಮಾತ್ರವಲ್ಲ, ಈಗಾಗಲೇ ತಿಳಿಸಲ್ಪಟ್ಟಂತೆ, ಒಬ್ಬ ವ್ಯಕ್ತಿಯ ಸಂಗಾತಿಯು ಹಾದರಕ್ಕೆ ಕಾರಣವಾಗಿರುವಲ್ಲಿ ಮಾತ್ರ ಅವನಿಗೆ/ಅವಳಿಗೆ ವಿಚ್ಛೇದ ನೀಡುವ ಅನುಮತಿಯನ್ನು ಬೈಬಲ್‌ ಕೊಡುತ್ತದೆ. ಆದರೂ, ಇಂಥ ಸನ್ನಿವೇಶಗಳಲ್ಲಿ ಕ್ರೈಸ್ತರು ಇತರರ ನಿರ್ಣಯವನ್ನು ಅನುಚಿತವಾಗಿ ಪ್ರಭಾವಿಸಬಾರದು. ಎಷ್ಟೆಂದರೂ, ಆ ನಿರ್ಣಯದ ಫಲಿತಾಂಶಗಳೊಂದಿಗೆ ಜೀವಿಸಬೇಕಾಗಿರುವುದು ವೈವಾಹಿಕ ಸಮಸ್ಯೆಯಿರುವ ವ್ಯಕ್ತಿಯೇ ಹೊರತು ಬುದ್ಧಿವಾದವನ್ನು ನೀಡುವ ವ್ಯಕ್ತಿಯಲ್ಲ.​—⁠ಗಲಾತ್ಯ 6:​5, 7.

ಅಲಕ್ಷ್ಯ ಮನೋಭಾವವನ್ನು ತೋರಿಸದಿರಿ

ಕೆಲವೊಂದು ಕ್ಷೇತ್ರಗಳಲ್ಲಿ, ಜನರು ಬೇರೊಂದು ದೇಶದಲ್ಲಿ ಕಾನೂನುಬದ್ಧವಾಗಿ ನೆಲೆಸುವ ಹಕ್ಕನ್ನು ಪಡೆಯಲಿಕ್ಕಾಗಿ ವಿವಾಹವನ್ನು ಉಪಯೋಗಿಸುವುದು ಸರ್ವಸಾಮಾನ್ಯವಾಗಿದೆ. ಸಾಮಾನ್ಯವಾಗಿ ಇಂಥ ವ್ಯಕ್ತಿಗಳು ಆ ದೇಶದ ಒಬ್ಬ ಪ್ರಜೆಯನ್ನು ವಿವಾಹವಾಗಲಿಕ್ಕಾಗಿ ಅವರಿಗೆ ಹಣವನ್ನು ಕೊಡಲು ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ಈ ದಂಪತಿಗಳು ವಿವಾಹಿತರಾಗಿರುವುದಾದರೂ ಅನೇಕವೇಳೆ ಅವರು ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಾರೆ, ಬಹುಶಃ ಅವರ ನಡುವೆ ಸ್ನೇಹಭರಿತ ಸಂಬಂಧವೂ ಇರುವುದಿಲ್ಲ. ಅವರು ಬಯಸಿದಂತೆ, ಆ ದೇಶದಲ್ಲಿ ನಿವಾಸಿಸುವ ಕಾನೂನುಬದ್ಧ ಹಕ್ಕು ದೊರಕಿದ ಕೂಡಲೆ ಅವರು ವಿಚ್ಛೇದ ನೀಡುತ್ತಾರೆ. ಅವರು ತಮ್ಮ ವಿವಾಹವನ್ನು ಕೇವಲ ಒಂದು ವ್ಯಾಪಾರ ಒಪ್ಪಂದವಾಗಿ ಪರಿಗಣಿಸುತ್ತಾರಷ್ಟೆ.

ಇಂಥ ಅಲಕ್ಷ್ಯ ಮನೋಭಾವವನ್ನು ಬೈಬಲು ಸಮ್ಮತಿಸುವುದಿಲ್ಲ. ಇಂಥವರ ಹೇತುಗಳು ಏನೇ ಆಗಿರಲಿ, ಯಾರು ವಿವಾಹವಾಗುತ್ತಾರೋ ಅವರು ಜೀವನಪರ್ಯಂತ ಉಳಿಯುವ ಬಂಧವೆಂದು ದೇವರು ಪರಿಗಣಿಸುವಂಥ ಒಂದು ಪವಿತ್ರ ಏರ್ಪಾಡನ್ನು ಪ್ರವೇಶಿಸುತ್ತಾರೆ. ಇದರಲ್ಲಿ ಒಳಗೂಡಿರುವ ವ್ಯಕ್ತಿಗಳು ಗಂಡಹೆಂಡತಿಯ ಸಂಬಂಧದಲ್ಲಿಯೇ ಉಳಿಯುತ್ತಾರೆ, ಮತ್ತು ವಿವಾಹ ವಿಚ್ಛೇದಕ್ಕಾಗಿರುವ ಒಂದು ಶಾಸ್ತ್ರೀಯ ಆಧಾರವಿಲ್ಲದೆ ಪುನರ್ವಿವಾಹವಾಗಲಾರರು.​—⁠ಮತ್ತಾಯ 19:​5, 6, 9.

ಪ್ರಯೋಜನಾರ್ಹವಾದ ಯಾವುದೇ ಕೆಲಸದಲ್ಲಿ ನಿಜವಾಗಿರುವಂತೆ, ಒಂದು ಒಳ್ಳೇ ವಿವಾಹ ಸಹ ಪ್ರಯತ್ನ ಹಾಗೂ ಪಟ್ಟುಹಿಡಿಯುವಿಕೆಯನ್ನು ಕೇಳಿಕೊಳ್ಳುತ್ತದೆ. ಇದರ ಪಾವಿತ್ರ್ಯವನ್ನು ಗಣ್ಯಮಾಡಲು ತಪ್ಪಿಹೋಗುವವರು ಬೇಗನೆ ಪ್ರಯತ್ನವನ್ನು ಬಿಟ್ಟುಬಿಡುತ್ತಾರೆ. ಅಥವಾ ಒಲ್ಲದ ಮನಸ್ಸಿನಿಂದ ಒಂದು ಸಂತೋಷರಹಿತ ವಿವಾಹದಲ್ಲೇ ಬದುಕುತ್ತಾ ಮುಂದುವರಿಯಲು ಪ್ರಯತ್ನಿಸುತ್ತಾರೆ. ಇನ್ನೊಂದು ಕಡೆಯಲ್ಲಿ, ವಿವಾಹದ ಪಾವಿತ್ರ್ಯವನ್ನು ಅಂಗೀಕರಿಸುವಂಥ ಜನರು, ತಾವು ಒಟ್ಟಿಗೆ ಉಳಿಯಬೇಕೆಂದು ದೇವರು ನಿರೀಕ್ಷಿಸುತ್ತಾನೆ ಎಂಬುದನ್ನು ಬಲ್ಲವರಾಗಿದ್ದಾರೆ. (ಆದಿಕಾಂಡ 2:24) ತಮ್ಮ ವಿವಾಹವು ಸಾಮರಸ್ಯದಿಂದ ಮುಂದುವರಿಯುವಂತೆ ಕೆಲಸಮಾಡುವ ಮೂಲಕ ತಾವು ವೈವಾಹಿಕ ಏರ್ಪಾಡಿನ ಮೂಲಕರ್ತನಾಗಿರುವ ದೇವರಿಗೆ ಗೌರವ ಸಲ್ಲಿಸುತ್ತೇವೆ ಎಂಬುದನ್ನೂ ಅವರು ಅರ್ಥಮಾಡಿಕೊಳ್ಳುತ್ತಾರೆ. (1 ಕೊರಿಂಥ 10:31) ಈ ರೀತಿಯ ದೃಷ್ಟಿಕೋನವುಳ್ಳವರಾಗಿರುವುದು, ತಮ್ಮ ವಿವಾಹವನ್ನು ಸಫಲಗೊಳಿಸುವುದರಲ್ಲಿ ಪಟ್ಟುಹಿಡಿಯಲು ಮತ್ತು ಪ್ರಯತ್ನಮಾಡಲು ಅವರಿಗೆ ಪ್ರಚೋದನೆಯನ್ನು ನೀಡುತ್ತದೆ. (g04 5/8)

[ಪಾದಟಿಪ್ಪಣಿಗಳು]

^ Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ನವೆಂಬರ್‌ 1, 1988ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ 22-3ನೆಯ ಪುಟಗಳನ್ನು ನೋಡಿರಿ.