ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗ್ಲಾಕೋಮಾ ಎಂಬ ದೃಷ್ಟಿಚೋರ

ಗ್ಲಾಕೋಮಾ ಎಂಬ ದೃಷ್ಟಿಚೋರ

ಗ್ಲಾಕೋಮಾ ಎಂಬ ದೃಷ್ಟಿಚೋರ

ಒಂದು ಕ್ಷಣ ನಿಮ್ಮ ಕಣ್ಣುಗಳನ್ನು ಈ ವಾಕ್ಯದ ಕೊನೆಯ ಪದದ ಮೇಲೆ ನೆಡಿರಿ. ನಿಮ್ಮ ಕಣ್ಣುಗಳನ್ನು ಚಲಿಸದೆ ಈ ಪತ್ರಿಕೆಯ ಮೇಲಿನ ಭಾಗ, ಕೆಳಗಿನ ಭಾಗ ಮತ್ತು ಎರಡೂ ಬದಿಗಳಲ್ಲಿ ಸ್ವಲ್ಪವನ್ನು ನೀವು ನೋಡಶಕ್ತರಾಗಿದ್ದೀರೊ? ಹೆಚ್ಚಿನಾಂಶ ನೀವು ನೋಡಲು ಶಕ್ತರಾಗಿರಬಹುದು. ಇದಕ್ಕೆ ಕಾರಣ, ಯಾವುದನ್ನು ದೃಷ್ಟಿಯ ಕ್ಷೇತ್ರವೆಂದು ಕರೆಯಲಾಗುತ್ತದೊ ಅದೇ ಆಗಿದೆ. ಈ ಸಾಮರ್ಥ್ಯದಿಂದಾಗಿಯೇ, ನಿಮ್ಮ ಪಕ್ಕದಿಂದ ಹತ್ತಿರ ಬರುತ್ತಿರುವ ಸಂಶಯಾಸ್ಪದ ವ್ಯಕ್ತಿಯ ಕುರಿತಾಗಿ ನಿಮಗೆ ಗೊತ್ತಾಗುತ್ತದೆ. ಈ ಸಾಮರ್ಥ್ಯವೇ, ನೀವು ನಡೆಯುತ್ತಿರುವಾಗ ನೆಲದ ಮೇಲೆ ಬಿದ್ದಿರುವ ವಸ್ತುಗಳನ್ನು ತುಳಿಯದೆ ಮುಂದೆ ಹೆಜ್ಜೆಯಿಡುವಂತೆ ಮತ್ತು ಗೋಡೆಗಳಿಗೆ ಡಿಕ್ಕಿ ಹೊಡೆಯದಂತೆ ಸಹಾಯಮಾಡುತ್ತದೆ. ಮತ್ತು ಒಂದುವೇಳೆ ನೀವೊಂದು ಕಾರನ್ನು ಚಲಾಯಿಸುತ್ತಿರುವುದಾದರೆ ಆಗ, ಈ ದೃಷ್ಟಿಯ ಕ್ಷೇತ್ರವೇ, ಒಬ್ಬ ಪಾದಚಾರಿಯು ಈಗ ತಾನೇ ರಸ್ತೆಬದಿಯಿಂದ ರಸ್ತೆಗೆ ಕಾಲಿಟ್ಟಿದ್ದಾನೆಂದು ನಿಮ್ಮನ್ನು ಎಚ್ಚರಿಸಬಲ್ಲದು.

ಆದರೆ ನೀವು ಈ ಪುಟವನ್ನು ಓದುತ್ತಾ ಇರುವಾಗಲೇ, ನಿಮ್ಮ ಈ ದೃಷ್ಟಿಯ ಕ್ಷೇತ್ರದ ಪ್ರಮಾಣವು ನಿಧಾನವಾಗಿ ಮಾಯವಾಗುತ್ತಾ ಇರಬಹುದು. ಮತ್ತು ಇದು ನಿಮ್ಮ ಗಮನಕ್ಕೂ ಬಾರದಿರಬಹುದು. ಜಗತ್ತಿನಾದ್ಯಂತ, ಒಂದು ಅಂದಾಜಿಗನುಸಾರ 6.6 ಕೋಟಿ ಜನರು ಗ್ಲಾಕೋಮಾ ಎಂದು ಕರೆಯಲಾಗುವ ಕಣ್ಣುರೋಗಗಳ ಒಂದು ಗುಂಪಿನಿಂದ ಬಾಧಿತರಾಗಿದ್ದಾರೆ. ಆ ಸಂಖ್ಯೆಯಲ್ಲಿ, 50 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಂಪೂರ್ಣವಾಗಿ ಅಂಧರಾಗಿದ್ದಾರೆ. ಇದರಿಂದಾಗಿ, ಗ್ಲಾಕೋಮಾ ರೋಗವು ಶಾಶ್ವತ ಅಂಧತ್ವವನ್ನು ಉಂಟುಮಾಡುವ ಕಾರಣಗಳಲ್ಲಿ ಮೂರನೆಯ ಸ್ಥಾನವನ್ನು ಪಡೆದಿರುತ್ತದೆ. “ಆದರೂ, ವಿಶೇಷವಾಗಿ ಗ್ಲಾಕೋಮಾವನ್ನು ಮನಸ್ಸಿನಲ್ಲಿಟ್ಟು ಸಾರ್ವಜನಿಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿರುವ ವಿಕಾಸಹೊಂದಿರುವ ದೇಶಗಳಲ್ಲಿ ಸಹ, ಗ್ಲಾಕೋಮಾವಿರುವವರಲ್ಲಿ ಅರ್ಧದಷ್ಟು ಜನರು ಅದನ್ನು ಇನ್ನೂ ಪತ್ತೆಹಚ್ಚಿಲ್ಲ,” ಎಂದು ದ ಲ್ಯಾನ್ಸೆಟ್‌ ಎಂಬ ವೈದ್ಯಕೀಯ ಪತ್ರಿಕೆಯು ಹೇಳುತ್ತದೆ.

ಯಾರು ಗ್ಲಾಕೋಮಾಕ್ಕೆ ತುತ್ತಾಗುವ ಅಪಾಯವಿದೆ? ಅದನ್ನು ಹೇಗೆ ಪತ್ತೆಹಚ್ಚಲಾಗುತ್ತದೆ, ಮತ್ತು ಹೇಗೆ ಚಿಕಿತ್ಸೆ ನೀಡಲಾಗುತ್ತದೆ?

ಗ್ಲಾಕೋಮಾ ಎಂದರೇನು?

ನಾವು ಮೊದಲು ನಮ್ಮ ಕಣ್ಣುಗಳ ಬಗ್ಗೆ ಕೆಲವು ಸಂಗತಿಗಳನ್ನು ಅರ್ಥಮಾಡಿಕೊಳ್ಳಬೇಕು. ಆಸ್ಟ್ರೇಲಿಯಾದ ಗ್ಲಾಕೋಮಾ ಫೌಂಡೇಷನ್‌ ತಯಾರಿಸಿರುವ ಒಂದು ಬ್ರೋಷರ್‌ ವಿವರಿಸುವುದು: “ಕಣ್ಣಿನ ಆಕಾರವು, ಒತ್ತಡದಿಂದಾಗಿ ಅಂದರೆ ಕಣ್ಣುಗಳ ಮೆತ್ತನೆಯ ಅಂಗಸತ್ತ್ವಗಳು ಕಾರಿನ ಟೈರಿನಂತೆ ಇಲ್ಲವೆ ಬಲೂನಿನಂತೆ ‘ಉಬ್ಬುವುದರಿಂದ’ ಬರುತ್ತದೆ.” ಕಣ್ಣಿನೊಳಗಿರುವ ಕಣ್ಣೆವೆ ಎಂದು ಕರೆಯಲಾಗುವ ಒಂದು ಪಂಪು, ರಕ್ತನಾಳಗಳ ಮೂಲಕ ಕಣ್ಣಿನೊಳಗೆ ಜಲರಸ ಎಂಬ ದ್ರವವು ಹರಿಯುವಂತೆ ಮಾಡುತ್ತದೆ. “ಈ ಜಲರಸವು ಕಣ್ಣಿನೊಳಗೆ ಚೆನ್ನಾಗಿ ಸಂಚಲಿಸುತ್ತಾ ಕಣ್ಣಿನ ಜೀವಂತ ಭಾಗಗಳನ್ನು ಪೋಷಿಸಿ, ಆಧಾರಪಟ್ಟಿಯ ಜಾಲಬಂಧ (ಟ್ರಬೆಕ್ಯುಲರ್‌ ಮೆಷ್‌ವರ್ಕ್‌) ಎಂದು ಕರೆಯಲಾಗುವ ಒಂದು ಜರಡಿಯಂಥ ಭಾಗದಿಂದ ರಕ್ತಪ್ರವಾಹಕ್ಕೆ ಹಿಂದಿರುಗುತ್ತದೆ.”

ಈ ಜಾಲಬಂಧದಲ್ಲಿ ಯಾವುದೇ ಕಾರಣಕ್ಕಾಗಿ ಅಡಚಣೆಯಾಗುವಲ್ಲಿ ಇಲ್ಲವೆ ಅದು ಕಿರಿದಾಗುವಲ್ಲಿ ಕಣ್ಣಿನೊಳಗಿನ ಒತ್ತಡವು ಹೆಚ್ಚಾಗುವುದು ಮತ್ತು ಇದು ಕಟ್ಟಕಡೆಗೆ, ಕಣ್ಣಿನ ಹಿಂಭಾಗದಲ್ಲಿರುವ ಸೂಕ್ಷ್ಮವಾದ ನರತಂತುಗಳಿಗೆ ಹಾನಿಮಾಡಲಾರಂಭಿಸುತ್ತದೆ. ಈ ಸ್ಥಿತಿಯನ್ನು ತೆರೆದ ಕೋನದ ಗ್ಲಾಕೋಮಾ ಎಂದು ಕರೆಯಲಾಗುತ್ತದೆ ಮತ್ತು ಸುಮಾರು 90 ಪ್ರತಿಶತ ಗ್ಲಾಕೋಮಾ ಕೇಸುಗಳಿಗೆ ಇದೇ ಕಾರಣ.

ನಿಮ್ಮ ಕಣ್ಣೊಳಗಿನ ಒತ್ತಡವು ಪ್ರತಿ ತಾಸಿಗೂ ಬದಲಾಗುತ್ತಾ ಇರಬಲ್ಲದು, ಮತ್ತು ಇದು ನಿಮ್ಮ ಹೃದಯದ ಬಡಿತ, ನೀವು ಕುಡಿಯುವ ದ್ರವಗಳ ಪ್ರಮಾಣ ಮತ್ತು ನಿಮ್ಮ ದೇಹಭಂಗಿಯಂಥ ವಿವಿಧ ಅಂಶಗಳಿಂದ ಪ್ರಭಾವಿಸಲ್ಪಡಬಲ್ಲದು. ಸ್ವಾಭಾವಿಕವಾದ ಈ ಏರುಪೇರುಗಳಿಂದ ನಿಮ್ಮ ಕಣ್ಣಿಗೆ ಯಾವುದೇ ಹಾನಿಯಾಗದು. ಕಣ್ಣಿನೊಳಗಿನ ಉಚ್ಚ ಒತ್ತಡ ತಾನೇ ಗ್ಲಾಕೋಮಾ ಇದೆಯೆಂಬುದಕ್ಕೆ ಪುರಾವೆಯಲ್ಲ, ಏಕೆಂದರೆ ಕಣ್ಣಿನ “ಸಾಮಾನ್ಯ” ಒತ್ತಡವು ಪ್ರತಿ ವ್ಯಕ್ತಿಯಲ್ಲೂ ಬೇರೆಬೇರೆಯಾಗಿರುತ್ತದೆ. ಹಾಗಿದ್ದರೂ, ಕಣ್ಣೊಳಗಿನ ಉಚ್ಚ ಒತ್ತಡವು, ಗ್ಲಾಕೋಮಾವಿದೆಯೆಂಬುದನ್ನು ಸೂಚಿಸುವ ಅಂಶಗಳಲ್ಲಿ ಒಂದಾಗಿದೆ.

ಈ ರೋಗದ ಒಂದು ವಿರಳವಾದ ರೂಪವನ್ನು ತೀಕ್ಷ್ಣವಾದ ಗ್ಲಾಕೋಮಾ ಇಲ್ಲವೆ ಸಂಕುಚಿತ ಕೋನದ ಗ್ಲಾಕೋಮಾ ಎಂದು ಕರೆಯಲಾಗುತ್ತದೆ. ಈ ವಿಧದ ಗ್ಲಾಕೋಮಾವು ತೆರೆದ ಕೋನದ ಗ್ಲಾಕೋಮಾದಂತಿರದೆ, ಕಣ್ಣಿನಲ್ಲಿ ಒತ್ತಡವು ಥಟ್ಟನೆ ಹೆಚ್ಚಾಗುತ್ತದೆ. ಇದರಿಂದಾಗಿ ಕಣ್ಣಿನಲ್ಲಿ ತೀವ್ರ ನೋವುಂಟಾಗಿ, ಜೊತೆಯಲ್ಲಿ ದೃಷ್ಟಿಯು ಮಂಜಾಗುತ್ತದೆ ಮತ್ತು ವಾಕರಿಕೆಯು ಉಂಟಾಗುತ್ತದೆ. ಈ ರೋಗಲಕ್ಷಣಗಳು ಆರಂಭವಾಗಿ ಕೆಲವೇ ತಾಸುಗಳೊಳಗೆ ಚಿಕಿತ್ಸೆಯನ್ನು ಪಡೆಯದಿರುವಲ್ಲಿ ಅದು ಅಂಧತ್ವವನ್ನು ಉಂಟುಮಾಡಬಲ್ಲದು. ಇನ್ನೊಂದು ರೀತಿಯ ಗ್ಲಾಕೋಮಾವನ್ನು, ದ್ವಿತೀಯ ಗ್ಲಾಕೋಮಾ ಎಂದು ಕರೆಯಲಾಗುತ್ತದೆ. ಈ ಹೆಸರೇ ಸೂಚಿಸುವಂತೆ ಈ ವಿಧದ ಗ್ಲಾಕೋಮಾವು ಟ್ಯೂಮರ್‌ಗಳು, ಮೋತಿಬಿಂದು ಇಲ್ಲವೆ ಕಣ್ಣಿನ ಗಾಯಗಳಂಥ ಇತರ ಸ್ಥಿತಿಗಳಿಂದಾಗಿ ಉಂಟಾಗುತ್ತದೆ. ಹುಟ್ಟು ಗ್ಲಾಕೋಮಾ ಎಂದು ಜ್ಞಾತವಾಗಿರುವ ನಾಲ್ಕನೆಯ ವಿಧದ ಗ್ಲಾಕೋಮಾದಿಂದ ಬಾಧಿತರಾಗಿರುವ ಜನರ ಸಂಖ್ಯೆ ಕಡಿಮೆ. ಈ ವಿಧದ ಗ್ಲಾಕೋಮಾವು ಹುಟ್ಟಿನಿಂದಲೇ ಇರುತ್ತದೆ ಇಲ್ಲವೆ ಸ್ವಲ್ಪ ಸಮಯದ ಬಳಿಕ ಆರಂಭವಾಗುತ್ತದೆ. ಇದರಿಂದಾಗಿ ಮಗುವಿಗೆ ದೊಡ್ಡದಾದ ಕಣ್ಣುಗುಡ್ಡೆಗಳಿರುತ್ತವೆ ಮತ್ತು ಬೆಳಕನ್ನು ನೋಡಲು ಹೆಚ್ಚೆಚ್ಚು ಕಷ್ಟವಾಗುತ್ತದೆ.

ಅದು ದೃಷ್ಟಿಯನ್ನು “ಕದಿಯುವ” ವಿಧ

ನಿಮಗೆ ಅರಿವಿಲ್ಲದೆಯೇ ಗ್ಲಾಕೋಮಾ ನಿಮ್ಮ ಒಂದು ಕಣ್ಣಿನ 90 ಪ್ರತಿಶತದಷ್ಟು ದೃಷ್ಟಿಯನ್ನು ಕದಿಯಬಲ್ಲದು. ಅದು ಹೇಗೆ ಸಾಧ್ಯ? ನಮ್ಮೆಲ್ಲರಲ್ಲೂ ಸಹಜವಾಗಿಯೇ, ಪ್ರತಿ ಕಣ್ಣಿನ ಹಿಂಭಾಗದಲ್ಲಿ ಒಂದು ಅಂಧಕ್ಷೇತ್ರ (ಬ್ಲೈಂಡ್‌ ಸ್ಪಾಟ್‌) ಇರುತ್ತದೆ. ನಿಮ್ಮ ನರತಂತುಗಳು ಜೊತೆಗೂಡಿ ಚಕ್ಷುನರವನ್ನು ರಚಿಸುವ ಅಕ್ಷಿಪಟಲದ ಈ ಕ್ಷೇತ್ರದಲ್ಲಿ ಬೆಳಕುಗ್ರಾಹಕ ಕಣಗಳಿರುವುದಿಲ್ಲ. ಆದರೆ ನಿಮಗೂ ಈ ಅಂಧಕ್ಷೇತ್ರದ ಬಗ್ಗೆ ತಿಳಿಯುವುದಿಲ್ಲ, ಏಕೆಂದರೆ ನಿಮ್ಮ ಮಿದುಳಿಗೆ ನೀವು ನೋಡುತ್ತಿರುವ ದೃಶ್ಯದ ತಪ್ಪಿಹೋಗಿರುವ ಭಾಗಗಳನ್ನು ‘ತುಂಬಿಸುವ’ ಸಾಮರ್ಥ್ಯವಿದೆ. ಹಾಸ್ಯಾಸ್ಪದ ಸಂಗತಿಯೇನೆಂದರೆ, ಮಿದುಳಿಗಿರುವ ಈ ಸಾಮರ್ಥ್ಯದಿಂದಾಗಿಯೇ ಗ್ಲಾಕೋಮಾವು ಇಷ್ಟೊಂದು ಅಗೋಚರವಾಗಿ ಹರಡಲು ಶಕ್ತವಾಗುತ್ತದೆ.

ಆಸ್ಟ್ರೇಲಿಯದ ಒಬ್ಬ ಪ್ರಮುಖ ನೇತ್ರಶಾಸ್ತ್ರಜ್ಞರಾಗಿರುವ ಡಾ. ಐವನ್‌ ಗೋಲ್ಡ್‌ಬರ್ಗ್‌ ಎಚ್ಚರ! ಪತ್ರಿಕೆಗೆ ಹೇಳಿದ್ದು: “ಗ್ಲಾಕೋಮಾವನ್ನು ಗುಟ್ಟಿನಿಂದ ಒಳನುಸುಳುವ ದೃಷ್ಟಿಚೋರ ಎಂದು ಕರೆಯಲಾಗುತ್ತದೆ, ಏಕೆಂದರೆ ಅದು ನಿಮಗೆ ಯಾವುದೇ ರೀತಿಯ ರೋಗಲಕ್ಷಣಗಳನ್ನು ಕೊಡುವುದಿಲ್ಲ. ಸರ್ವಸಾಮಾನ್ಯ ರೀತಿಯ ಗ್ಲಾಕೋಮಾವು ನಿಧಾನವಾಗಿಯೂ ಸತತವಾಗಿಯೂ ವಿಕಸಿಸುವಂಥದ್ದಾಗಿರುತ್ತದೆ ಮತ್ತು ಯಾವುದೇ ಮುನ್ನೆಚ್ಚರಿಕೆ ನೀಡದೆ ನಿಮ್ಮ ಕಣ್ಣನ್ನು ಮಿದುಳಿನೊಂದಿಗೆ ಜೋಡಿಸುವ ನರ ರಚನೆಗೆ ಹಾನಿಯನ್ನು ಮಾಡುತ್ತದೆ. ನಿಮ್ಮ ಕಣ್ಣುಗಳಲ್ಲಿ ನೀರು ಬರುತ್ತಿರಲಿ ಇಲ್ಲದಿರಲಿ, ಅವು ಒಣಗಿರಲಿ ಇಲ್ಲದಿರಲಿ, ಅವು ಓದುವಾಗ ಇಲ್ಲವೆ ಬರೆಯುವಾಗ ಸ್ಪಷ್ಟವಾಗಿ ನೋಡಲು ಶಕ್ತವಾಗಿರಲಿ ಇಲ್ಲದಿರಲಿ, ಇವುಗಳಿಗೂ ಗ್ಲಾಕೋಮಾಕ್ಕೂ ಯಾವುದೇ ಸಂಬಂಧವಿಲ್ಲ. ನಿಮ್ಮ ಕಣ್ಣುಗಳು ತುಂಬ ಚೆನ್ನಾಗಿ ಕೆಲಸಮಾಡುತ್ತಿರಬಹುದು, ಆದರೆ ಅದೇ ವೇಳೆಯಲ್ಲಿ ಅವುಗಳಲ್ಲಿ ಗ್ಲಾಕೋಮಾವು ಗಂಭೀರವಾದ ಹಂತವನ್ನು ತಲಪಿರಲು ಸಾಧ್ಯವಿದೆ.”

ಚೋರನನ್ನು ಪತ್ತೆಹಚ್ಚುವುದು

ದುಃಖದ ಸಂಗತಿಯೇನೆಂದರೆ, ಗ್ಲಾಕೋಮಾವನ್ನು ಪತ್ತೆಹಚ್ಚಲು ಒಂದೇ ಒಂದು ವ್ಯಾಪಕ ಪರೀಕ್ಷೆ ಇಲ್ಲ. ಟೊನೊಮೀಟರ್‌ ಎಂಬ ಒಂದು ಉಪಕರಣವನ್ನು ಬಳಸಿ ಕಣ್ಣಿನ ತಜ್ಞರೊಬ್ಬರು ನಿಮ್ಮ ಕಣ್ಣುಗಳಲ್ಲಿರುವ ದ್ರವದ ಒತ್ತಡವನ್ನು ಪರಿಶೀಲಿಸುವ ಮೂಲಕ ಆರಂಭಿಸಬಹುದು. ಕೋಡ್ಪರೆಯನ್ನು ಇಲ್ಲವೆ ನಿಮ್ಮ ಕಣ್ಣಿನ ಮುಂದಿನ ಭಾಗವನ್ನು ಸಪಾಟಗೊಳಿಸಲು ಸೌಮ್ಯವಾಗಿ ಆ ಸಾಧನವನ್ನು ಬಳಸಲಾಗುತ್ತದೆ. ಈ ಕೆಲಸವನ್ನು ಮಾಡಲು ಬೇಕಾಗುವ ಬಲವನ್ನು ಅಳೆಯಲಾಗುತ್ತದೆ, ಮತ್ತು ಈ ವಿಧದಲ್ಲಿ ನಿಮ್ಮ ಕಣ್ಣೊಳಗಿನ ಒತ್ತಡವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಕಣ್ಣನ್ನು ಮಿದುಳಿನೊಂದಿಗೆ ಜೋಡಿಸುವ ನರ ರಚನೆಯಲ್ಲಿ ಹಾನಿಯಾಗಿರುವ ಅಂಗಸತ್ತ್ವವನ್ನು ಗುರುತಿಸುವ ಉಪಕರಣಗಳನ್ನು ಬಳಸುವ ಮೂಲಕವೂ ಕಣ್ಣಿನ ತಜ್ಞನು ಗ್ಲಾಕೋಮಾದ ಸೂಚನೆಗಳಿಗಾಗಿ ಹುಡುಕುವನು. ಡಾ. ಗೋಲ್ಡ್‌ಬರ್ಗ್‌ ಹೇಳುವುದು: “ಕಣ್ಣಿನ ಹಿಂಭಾಗದಲ್ಲಿರುವ ನರತಂತುಗಳು ಇಲ್ಲವೆ ರಕ್ತನಾಳಗಳ ಆಕಾರದಲ್ಲಿ ಏನಾದರೂ ಅಸಾಮಾನ್ಯತೆ ಇದೆಯೊ ಎಂದು ನಾವು ನೋಡುತ್ತೇವೆ, ಏಕೆಂದರೆ ಇದರಿಂದ ನರಗಳಿಗೆ ಹಾನಿಯಾಗಿದೆ ಎಂಬ ಸೂಚನೆ ಸಿಗುತ್ತದೆ.”

ಗ್ಲಾಕೋಮಾವನ್ನು ವಿಶ್ಯೂಅಲ್‌ ಫೀಲ್ಡ್‌ ಟೆಸ್ಟಿಂಗ್‌ ಮೂಲಕವೂ ಪತ್ತೆಹಚ್ಚಲಾಗುತ್ತದೆ. ಡಾಕ್ಟರ್‌ ಗೋಲ್ಡ್‌ಬರ್ಗ್‌ ವಿವರಿಸುವುದು: “ಒಬ್ಬ ವ್ಯಕ್ತಿಯು, ಬಿಳಿ ಬಣ್ಣದ ಬೆಳಕಿರುವ ಒಂದು ಗುಮ್ಮಟವನ್ನು ನೋಡುತ್ತಾನೆ, ಮತ್ತು ಆ ಗುಮ್ಮಟದೊಳಗೆ ಒಂದು ಸಣ್ಣ ಚುಕ್ಕೆಯ ಮೇಲೆ ಇನ್ನೂ ಉಜ್ವಲವಾದ ಬಿಳಿ ಬೆಳಕನ್ನು ಪ್ರಕಾಶಿಸಲಾಗುತ್ತದೆ. ಅವನು ಈ ಸಣ್ಣ ಬಿಳಿ ಬೆಳಕಿನ ಚುಕ್ಕೆಯನ್ನು ನೋಡಲು ಶಕ್ತನಾಗಿರುವಾಗ ಒಂದು ಬಟನ್‌ ಅನ್ನು ಒತ್ತುವ ಮೂಲಕ ಪ್ರತಿಕ್ರಿಯೆ ತೋರಿಸುತ್ತಾನೆ.” ನಿಮ್ಮ ದೃಷ್ಟಿ ಕ್ಷೇತ್ರದ ಹೊರಗಿನ ಅಂಚಿನಲ್ಲಿರುವ ಬಿಳಿ ಬೆಳಕು ನಿಮಗೆ ಕಾಣಿಸದಿರುವಲ್ಲಿ ಅದು ಗ್ಲಾಕೋಮಾದ ಸೂಚನೆಯಾಗಿರಬಲ್ಲದು. ಈ ತ್ರಾಸದಾಯಕವಾದ ಕಾರ್ಯವಿಧಾನವನ್ನು ಸರಳೀಕರಿಸಬಹುದಾದ ಹೊಸ ಉಪಕರಣಗಳನ್ನು ತಯಾರಿಸಲಾಗುತ್ತಿದೆ.

ಯಾರೆಲ್ಲ ಅಪಾಯದಲ್ಲಿದ್ದಾರೆ?

ಪಾಲ್‌, 40ರ ಆರಂಭದ ವಯಸ್ಸಿನ ಒಬ್ಬ ಆರೋಗ್ಯವಂತ ವ್ಯಕ್ತಿಯಾಗಿದ್ದಾನೆ. ಅವನು ಹೇಳುವುದು: “ಹೊಸ ಕನ್ನಡಕಗಳನ್ನು ಮಾಡಿಸಿಕೊಳ್ಳಲಿಕ್ಕಾಗಿ ಪರೀಕ್ಷೆಮಾಡಲು ದೃಷ್ಟಿಮಾಪನಕಾರನ ಬಳಿ ಹೋದೆ. ನನ್ನ ಕುಟುಂಬದಲ್ಲಿ ಯಾರಿಗಾದರೂ ಗ್ಲಾಕೋಮಾ ಇದೆಯೊ ಎಂದವನು ನನಗೆ ಕೇಳಿದ. ನಾನು ಇದರ ಬಗ್ಗೆ ಸ್ವಲ್ಪ ವಿಚಾರಣೆ ಮಾಡಿದಾಗ, ನನ್ನ ದೊಡ್ಡಮ್ಮ ಹಾಗೂ ಸೋದರಮಾವನಿಗೆ ಇತ್ತೆಂದು ತಿಳಿದುಬಂತು. ಒಬ್ಬ ಕಣ್ಣಿನ ತಜ್ಞನ ಬಳಿ ಹೋಗುವಂತೆ ನನಗೆ ಹೇಳಲಾಯಿತು, ಮತ್ತು ನನಗೆ ಗ್ಲಾಕೋಮಾ ಇದೆಯೆಂದು ಅವರು ದೃಢೀಕರಿಸಿದರು.” ಡಾ. ಗೋಲ್ಡ್‌ಬರ್ಗ್‌ ವಿವರಿಸುವುದು: “ನಿಮ್ಮ ತಾಯಿ ಅಥವಾ ತಂದೆಗೆ ಗ್ಲಾಕೋಮಾ ಇರುವಲ್ಲಿ ಅದು ನಿಮಗೂ ಬರುವ ಸಾಧ್ಯತೆಯು ಮೂರರಿಂದ ಐದು ಪಟ್ಟು ಹೆಚ್ಚಾಗಿರುತ್ತದೆ. ಮತ್ತು ನಿಮ್ಮ ಸಹೋದರ ಅಥವಾ ಸಹೋದರಿಗಿರುವಲ್ಲಿ ಅದು ನಿಮಗೆ ಬರುವ ಸಾಧ್ಯತೆಯು ಐದರಿಂದ ಏಳು ಪಟ್ಟು ಹೆಚ್ಚಾಗಿರುತ್ತದೆ.”

ಅಮೆರಿಕದಲ್ಲಿರುವ ಗ್ಲಾಕೋಮಾ ಫೌಂಡೇಷನ್‌ನ ಡಾ. ಕೆವಿನ್‌ ಗ್ರೀನಿಡ್ಜ್‌ ಇತರ ಅಪಾಯದ ಅಂಶಗಳನ್ನು ಹೀಗೆ ಎತ್ತಿಹೇಳಿದರು: “ನೀವು 45ರ ಪ್ರಾಯವನ್ನು ದಾಟಿರುವಲ್ಲಿ ಮತ್ತು ಆಫ್ರಿಕದ ಮೂಲದವರಾಗಿರುವಲ್ಲಿ, ಇಲ್ಲವೆ ನಿಮಗೆ ಈ ಎಲ್ಲಾ ಅಪಾಯದ ಅಂಶಗಳಿರುವಲ್ಲಿ, ಅಂದರೆ ಕುಟುಂಬದಲ್ಲಿ ಗ್ಲಾಕೋಮಾವುಳ್ಳವರಿದ್ದರೆ, ಸಮೀಪದೃಷ್ಟಿಯಿದ್ದರೆ, ಮಧುಮೇಹವಿದ್ದರೆ, ಹಿಂದೆ ಯಾವಾಗಲೊ ಕಣ್ಣಿಗೆ ಗಾಯವಾಗಿದ್ದರೆ ಇಲ್ಲವೆ ಕ್ರಮವಾಗಿ ಕಾರ್ಟಿಸೋನ್‌/ಸ್ಟೀರಾಯ್ಡ್‌ ಉತ್ಪನ್ನಗಳನ್ನು ಬಳಸುತ್ತಿದ್ದರೆ ಪ್ರತಿ ವರ್ಷ ನಿಮ್ಮ ಕಣ್ಣುಗಳನ್ನು ಪರೀಕ್ಷಿಸಿರಿ.” ನಿಮಗೆ ಈ ಎಲ್ಲಾ ಅಪಾಯದ ಅಂಶಗಳಿಲ್ಲದಿರುವಲ್ಲಿಯೂ ಮತ್ತು ನೀವು 45ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೂ, ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಿಮ್ಮ ಕಣ್ಣುಗಳನ್ನು ಗ್ಲಾಕೋಮಾಕ್ಕಾಗಿ ತಪಾಸಣೆಮಾಡುವಂತೆ ಈ ಫೌಂಡೇಷನ್‌ ಶಿಫಾರಸ್ಸುಮಾಡುತ್ತದೆ. ನೀವು 45ರ ಪ್ರಾಯವನ್ನು ದಾಟಿರುವಲ್ಲಿ, ಈ ತಪಾಸಣೆಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಮಾಡಿಸಿಕೊಳ್ಳತಕ್ಕದ್ದು.

ಚಿಕಿತ್ಸೆಯಿಂದ ಅದನ್ನು ನಿಯಂತ್ರಿಸಿರಿ

ಪಾಲ್‌ ಗ್ಲಾಕೋಮಾಕ್ಕಾಗಿ ಪಡೆದುಕೊಳ್ಳುತ್ತಿರುವ ಚಿಕಿತ್ಸೆಯಲ್ಲಿ, ದಿನಕ್ಕೊಮ್ಮೆ ವಿಶೇಷವಾದ ಕಣ್ಣಿನ ಡ್ರಾಪ್‌ಗಳನ್ನು ಹಾಕಿಕೊಳ್ಳುವುದು ಸೇರಿದೆ. ಪಾಲ್‌ ಹೇಳುವುದು: “ನಾನು ಬಳಸುವ ಡ್ರಾಪ್ಸ್‌, ಕಣ್ಣುಗುಡ್ಡೆಯಲ್ಲಿ ಜಲರಸದ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ.” ಪಾಲ್‌ ಇನ್ನೊಂದು ಚಿಕಿತ್ಸೆಗೂ ಒಳಗಾದನು. ಅದರಲ್ಲಿ, ದ್ರವವು ಹರಿದುಹೋಗಲು ಕಣ್ಣಿನ ಮುಂಭಾಗದಲ್ಲಿರುವ ನೈಸರ್ಗಿಕ ರಂಧ್ರಗಳ ಬಳಿಯಲ್ಲೇ, ಸುಮಾರು ಹತ್ತು ರಂಧ್ರಗಳನ್ನು “ಡ್ರಿಲ್‌” ಮಾಡಲಿಕ್ಕಾಗಿ ಲೇಸರ್‌ ಕಿರಣವನ್ನು ಉಪಯೋಗಿಸಲಾಯಿತು. ಅವನು ಹೇಳುವುದು: “ನನ್ನ ಮೊದಲ ಕಣ್ಣನ್ನು ಲೇಸರ್‌ ಕಿರಣದಿಂದ ಚಿಕಿತ್ಸೆ ಮಾಡಿಸುತ್ತಿದ್ದಾಗ ನಾನು ತುಂಬ ಹೆದರಿಕೊಂಡಿದ್ದೆ, ಮತ್ತು ಇದರಿಂದಾಗಿ ನನಗಾದ ತೊಂದರೆಯು ಜಾಸ್ತಿಯಾಯಿತು. ಆದರೆ ಕೆಲವು ದಿನಗಳ ಬಳಿಕ ನನ್ನ ಎರಡನೇ ಕಣ್ಣಿನ ಚಿಕಿತ್ಸೆಗಾಗಿ ಹೋದಾಗ, ನಾನೇನು ನಿರೀಕ್ಷಿಸಬಹುದೆಂದು ನನಗೆ ತಿಳಿದಿತ್ತು. ಆದುದರಿಂದ ನಾನು ಹೆಚ್ಚು ಹಾಯಾಗಿದ್ದೆ, ಮತ್ತು ಈ ಕಾರಣದಿಂದ ನನಗೆ ಗೊತ್ತಾಗುವ ಮುಂಚೆಯೇ ಡಾಕ್ಟರ್‌ ಆ ಆಪರೇಷನನ್ನು ಕಾರ್ಯತಃ ಮುಗಿಸಿಬಿಟ್ಟಿದ್ದರು.” ಈ ಚಿಕಿತ್ಸೆಯು, ಪಾಲ್‌ನ ಕಣ್ಣೊಳಗಿನ ಒತ್ತಡವನ್ನು ಸ್ಥಿರೀಕರಿಸಲು ಸಹಾಯಮಾಡಿದೆ.

ಈ ಕಾರಣದಿಂದ ಪಾಲ್‌ನ ಹೊರನೋಟವು ಸಕಾರಾತ್ಮಕವಾಗಿದೆ. ಅವನು ಹೇಳುವುದು: “ನನ್ನ ಅಕ್ಷಿಪಟಲಗಳು ಕೇವಲ ಕೊಂಚವಾಗಿ ಹಾನಿಗೊಂಡಿವೆ. ನನ್ನ ದೃಷ್ಟಿಯ ಕ್ಷೇತ್ರಕ್ಕೆ ಇನ್ನೂ ಏನೂ ಆಗದೇ ಇದ್ದದ್ದಕ್ಕಾಗಿ ನಾನು ಸಂತೋಷಿಸುತ್ತೇನೆ. ಪ್ರತಿ ದಿನ ನಾನು ನೆನಪಿಟ್ಟು ಕಣ್ಣಿನ ಡ್ರಾಪ್‌ಗಳನ್ನು ಬಳಸುವಲ್ಲಿ, ಅದು ಹಾಗೆಯೇ ಉಳಿಯುವ ಸಾಧ್ಯತೆಯಿದೆ.”

ಈ “ಗುಟ್ಟಾಗಿ ಒಳನುಸುಳುವ ದೃಷ್ಟಿಚೋರ” ನಿಮ್ಮ ದೃಷ್ಟಿಯನ್ನು ಕದಿಯುತ್ತಿದ್ದಾನೊ? ನಿಮ್ಮ ಕಣ್ಣುಗಳನ್ನು ನೀವು ಎಂದೂ ಗ್ಲಾಕೋಮಾಕ್ಕಾಗಿ ತಪಾಸಣೆಮಾಡಿಸಿರದಿದ್ದರೆ​—⁠ಮತ್ತು ವಿಶೇಷವಾಗಿ ನೀವು ಅಪಾಯಸಂಭವವುಳ್ಳ ಜನರಲ್ಲಿ ಒಬ್ಬರಾಗಿರುವುದಾದರೆ​—⁠ಅದನ್ನು ಮಾಡಿಸಲು ನಿಮ್ಮ ಡಾಕ್ಟರನನ್ನು ಕೇಳುವುದು ವಿವೇಕದ ಸಂಗತಿಯಾಗಿರುವುದು. ಡಾ. ಗೋಲ್ಡ್‌ಬರ್ಗ್‌ ಹೇಳುವಂತೆ, “ಸಮಯೋಚಿತವಾದ ಮತ್ತು ಸೂಕ್ತವಾದ ಚಿಕಿತ್ಸೆಯ ಮೂಲಕ ಗ್ಲಾಕೋಮಾದಿಂದಾಗುವ ಹೆಚ್ಚಿನ ಹಾನಿಯನ್ನು ತಡೆಗಟ್ಟಸಾಧ್ಯವಿದೆ.” ಹೌದು, ಈ ದೃಷ್ಟಿಚೋರನನ್ನು ನೀವು ಹಿಡಿದು ನಿಯಂತ್ರಿಸಸಾಧ್ಯವಿದೆ! (g04 10/8)

[ಪುಟ 28ರಲ್ಲಿರುವ ಚೌಕ/ಚಿತ್ರ]

ನಿಮ್ಮಲ್ಲಿ ಈ ಅಂಶಗಳಿರುವಲ್ಲಿ ಗ್ಲಾಕೋಮಾವು ಉಂಟಾಗುವ ಅಪಾಯ ಹೆಚ್ಚುತ್ತದೆ

● ನೀವು ಆಫ್ರಿಕದ ಮೂಲದವರಾಗಿದ್ದರೆ

● ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಗ್ಲಾಕೋಮಾವಿದ್ದರೆ

● ನಿಮಗೆ ಮಧುಮೇಹ ಇದ್ದರೆ

● ಸಮೀಪ ದೃಷ್ಟಿಯಿದ್ದರೆ

● ಕ್ರಮವಾಗಿ ಕಾರ್ಟಿಸೋನು/ಸ್ಟೀರಾಯ್ಡ್‌ ಉತ್ಪನ್ನಗಳನ್ನು ಬಳಸುತ್ತಿದ್ದರೆ

● ಹಿಂದೆ ಯಾವಾಗಲಾದರೂ ಕಣ್ಣಿಗೆ ಗಾಯವಾಗಿದ್ದರೆ

● ನೀವು 45ಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ

[ಚಿತ್ರ]

ಕಣ್ಣುಗಳನ್ನು ಕ್ರಮವಾಗಿ ಪರೀಕ್ಷಿಸುವುದು ಗಂಭೀರವಾದ ದೃಷ್ಟಿ ನಷ್ಟವನ್ನು ತಡೆಗಟ್ಟಸಾಧ್ಯವಿದೆ

[ಪುಟ 27ರಲ್ಲಿರುವ ರೇಖಾಕೃತಿ/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ತೆರೆದ ಕೋನದ ಗ್ಲಾಕೋಮಾ

ಕಣ್ಣುಪಾಪೆ

ಐರಿಸ್‌

ಮಸೂರ

ಅಕ್ಷಿಪಟಲ

ಚಕ್ಷುಬಿಲ್ಲೆ, ಅಥವಾ ಅಂಧಕ್ಷೇತ್ರವು, ನರತಂತುಗಳು ಜೊತೆಗೂಡಿ ಚಕ್ಷು ನರವನ್ನು ರಚಿಸುವ ಕ್ಷೇತ್ರವಾಗಿದೆ

ಚಕ್ಷು ನರ ಮಿದುಳಿಗೆ ದೃಶ್ಯ ಆವೇಗಗಳನ್ನು ಕಳುಹಿಸುತ್ತದೆ

ಕಣ್ಣೆವೆ​—⁠ದ್ರವವನ್ನು ಇಲ್ಲಿಯೇ ತಯಾರಿಸಲಾಗುತ್ತದೆ

1 ಜಲರಸ ಧಾತುವು ಮಸೂರಗಳನ್ನು, ಐರಿಸ್‌ ಅನ್ನು ಮತ್ತು ಕಣ್ಣುಪಾಪೆಯ ಒಳಭಾಗವನ್ನು ಪೋಷಿಸುವ ಒಂದು ನೀರಿನಂಥ ದ್ರವವಾಗಿದೆ. ಆದರೆ ಇದು ಮತ್ತು ಕಣ್ಣಿನ ಹೊರಭಾಗವನ್ನು ಸ್ವಚ್ಛಗೊಳಿಸುವ ಕಣ್ಣೀರು ಬೇರೆಬೇರೆಯಾಗಿವೆ

2 ಆಧಾರಪಟ್ಟಿ ಜಾಲಬಂಧ ದ್ರವವನ್ನು ಸ್ರವಿಸುತ್ತದೆ

3 ಈ ಜಾಲಬಂಧದಲ್ಲಿ ಅಡಚಣೆಯಾಗುವಲ್ಲಿ ಇಲ್ಲವೆ ಅದು ಕಿರಿದಾಗುವಲ್ಲಿ, ಕಣ್ಣೊಳಗಿನ ಒತ್ತಡವು ಹೆಚ್ಚಾಗುತ್ತದೆ

4 ಒತ್ತಡವು ಹೆಚ್ಚಾಗುವಲ್ಲಿ, ಕಣ್ಣಿನ ಹಿಂಭಾಗದಲ್ಲಿರುವ ಸೂಕ್ಷ್ಮವಾದ ನರತಂತುಗಳಿಗೆ ಹಾನಿಯಾಗಿ ಗ್ಲಾಕೋಮಾ ಉಂಟಾಗುತ್ತದೆ ಇಲ್ಲವೆ ದೃಷ್ಟಿಶಕ್ತಿಯು ಕಡಿಮೆಯಾಗುತ್ತದೆ

[ಪುಟ 27ರಲ್ಲಿರುವ ಚಿತ್ರಗಳು]

ಚಕ್ಷುಬಿಲ್ಲೆ (ಆಪ್ಟಿಕ್‌ ಡಿಸ್ಕ್‌)

ನಿಮ್ಮ ದೃಷ್ಟಿಗೆ ಬೀಳುವ ದೃಶ್ಯ

ಸಾಧಾರಣ ದೃಷ್ಟಿ

ಆರಂಭ ಹಂತದ ಗ್ಲಾಕೋಮಾ

ಬಹಳ ಮುಂದುವರಿದ ಗ್ಲಾಕೋಮಾ

[ಕೃಪೆ]

ಚಕ್ಷುಬಿಲ್ಲೆಗಳ ಫೋಟೋಗಳು: Courtesy Atlas of Ophthalmology