ತೊನ್ನು ಎಂದರೇನು?
ತೊನ್ನು ಎಂದರೇನು?
ದಕ್ಷಿಣ ಆಫ್ರಿಕದಲ್ಲಿರುವ ಎಚ್ಚರ! ಲೇಖಕರಿಂದ
◼ ಸಿಬಾಂಗಿಲಿ ಕೆಲವೊಮ್ಮೆ ತನ್ನ ತ್ವಚೆಯ ಬಗ್ಗೆ ತಮಾಷೆಯಿಂದ ಮಾತಾಡುತ್ತಾಳೆ. ಅವಳು ತುಟಿಯಂಚಿನ ಕಿರುನಗೆಯೊಂದಿಗೆ, “ನಾನು ಹುಟ್ಟಿದಾಗ ಕಪ್ಪಗಿದ್ದೆ, ಆಮೇಲೆ ಬೆಳ್ಳಗಾದೆ, ಆದರೆ ಈಗ ನನಗೆ ಎರಡೂ ಬಣ್ಣಗಳಿವೆ!” ಎಂದು ಹೇಳುತ್ತಾಳೆ. ಅಂದರೆ ಅವಳಿಗೆ ತೊನ್ನು ಇದೆ.
ಲೂಕಡರ್ಮಾ ಎಂದೂ ಕರೆಯಲಾಗುವ ಈ ತೊನ್ನು, ಚರ್ಮಕ್ಕೆ ಬಣ್ಣಕೊಡುವ ಜೀವಕೋಶಗಳ ನಷ್ಟದಿಂದ ಶುರುವಾಗುತ್ತದೆ. ಇದರಿಂದಾಗಿ ಚರ್ಮದ ಮೇಲೆ ಬಿಳಿ ಚುಕ್ಕೆಗಳು ಮತ್ತು ಕಲೆಗಳು ಉಂಟಾಗುತ್ತವೆ. ಕೆಲವು ರೋಗಿಗಳಲ್ಲಿ ಒಂದೇ ಒಂದು ಕಲೆ ಉಂಟಾಗಿ ಮುಂದಕ್ಕೆ ಅದು ಉಲ್ಪಣಗೊಳ್ಳುವುದಿಲ್ಲ. ಆದರೆ ಬೇರೆ ರೋಗಿಗಳಲ್ಲಿ ಅದು ಬೇಗನೆ ಇಡೀ ದೇಹಕ್ಕೆ ಹರಡಿಕೊಳ್ಳುತ್ತದೆ. ಇನ್ನೂ ಕೆಲವರು, ಹೆಚ್ಚು ನಿಧಾನವಾಗಿ ಹಲವಾರು ವರ್ಷಗಳ ವರೆಗೆ ಹರಡುತ್ತಾ ಹೋಗುವಂಥ ರೀತಿಯ ತೊನ್ನಿನಿಂದ ಬಾಧಿತರಾಗಬಹುದು. ಆದರೆ ಈ ತೊನ್ನು ಶಾರೀರಿಕವಾಗಿ ನೋವನ್ನೂ ಉಂಟುಮಾಡುವುದಿಲ್ಲ, ಇತರರಿಗೆ ಹರಡುವುದೂ ಇಲ್ಲ.
ಎಲ್ಲಾ ರೋಗಿಗಳಲ್ಲಿ ಈ ರೋಗವು ಸಿಬಾಂಗಿಲಿಗಿರುವಂತೆ ಸ್ಪಷ್ಟವಾಗಿ ಕಣ್ಣಿಗೆ ಕಾಣುವಂಥದ್ದಾಗಿರಲಿಕ್ಕಿಲ್ಲ. ಅದು ಹೆಚ್ಚಾಗಿ ಕಪ್ಪುಬಣ್ಣದ ತ್ವಚೆಯುಳ್ಳ ಜನರಲ್ಲಿ ಎದ್ದುಕಾಣುತ್ತದೆ. ಆದರೆ ಒಂದಲ್ಲ ಒಂದು ಮಟ್ಟದಲ್ಲಿರುವ ತೊನ್ನಿನಿಂದ ಬಾಧಿತರಾಗಿರುವ ಅನೇಕ ಜನರಿದ್ದಾರೆ. ಸುಮಾರು 1ರಿಂದ 2 ಶೇಕಡದಷ್ಟು ಜನರು ತೊನ್ನಿನಿಂದ ಬಾಧಿತರಾಗಿದ್ದಾರೆಂದು ಅಂಕಿಸಂಖ್ಯೆಗಳು ತೋರಿಸುತ್ತವೆ. ತೊನ್ನಿಗೆ ಯಾವುದೇ ಜಾತೀಯ ಗಡಿಗಳಿಲ್ಲ ಮತ್ತು ಸ್ತ್ರೀಪುರುಷರೆನ್ನದೆ ಅದು ಎಲ್ಲರನ್ನೂ ಸಮಾನವಾಗಿ ಬಾಧಿಸುತ್ತದೆ. ತೊನ್ನು ಉಂಟಾಗಲು ಕಾರಣವೇನೆಂಬುದು ಈಗಲೂ ಯಾರಿಗೂ ತಿಳಿದಿಲ್ಲ.
ತೊನ್ನನ್ನು ನಿಶ್ಚಯವಾಗಿಯೂ ಗುಣಪಡಿಸುವ ಯಾವುದೇ ಔಷಧ ಇಲ್ಲದಿದ್ದರೂ, ಅದನ್ನು ನಿಭಾಯಿಸುವ ಅನೇಕ ವಿಧಾನಗಳಿವೆ. ದೃಷ್ಟಾಂತಕ್ಕಾಗಿ, ಶ್ವೇತವರ್ಣದ ರೋಗಿಗಳಲ್ಲಿ ಈ ರೋಗಸ್ಥಿತಿಯು, ಅವರು ಬಿಸಿಲಿಗೆ ಮೈಯೊಡ್ಡುವಾಗ ಅವರ ಚರ್ಮವು ಕಂದುಬಣ್ಣಕ್ಕೆ ತಿರುಗುವುದರಿಂದ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಆದುದರಿಂದ ಬಿಸಿಲಿಗೆ ಮೈಯೊಡ್ಡುವುದನ್ನು ತಪ್ಪಿಸುವ ಮೂಲಕ ಈ ರೋಗಸ್ಥಿತಿಯು ಬೇರೆಯವರ ಕಣ್ಣಿಗೆ ಬೀಳುವುದನ್ನು ತಪ್ಪಿಸಬಹುದು. ತುಂಬ ಕಪ್ಪುಬಣ್ಣದ ತ್ವಚೆಯುಳ್ಳವರಿಗೆ, ವಿಶೇಷ ಪ್ರಸಾಧನಗಳು ಚರ್ಮದ ಬಣ್ಣದಲ್ಲಾಗುವ ವ್ಯತ್ಯಾಸವನ್ನು ಮರೆಮಾಚಲು ಸಹಾಯಮಾಡಬಲ್ಲವು. ಕೆಲವು ರೋಗಿಗಳಿಗೆ ರೀಪಿಗ್ಮೆಂಟೇಷನ್ ಎಂಬ ಕಾರ್ಯವಿಧಾನವು ಒಳ್ಳೇ ಫಲಿತಾಂಶಗಳನ್ನು ತಂದಿದೆ. ಈ ಚಿಕಿತ್ಸೆಯಲ್ಲಿ, ಅನೇಕ ತಿಂಗಳುಗಳ ವರೆಗಿನ ಔಷಧೋಪಚಾರ ಮತ್ತು ವಿಶೇಷವಾದ ನೀಲಾತೀತ ಉಪಕರಣದ ಬಳಕೆಯು ಸೇರಿರುತ್ತದೆ. ಕೆಲವು ಸಂದರ್ಭಗಳಲ್ಲಿ ಈ ಚಿಕಿತ್ಸೆಯಿಂದಾಗಿ, ಚರ್ಮವು ಬಾಧಿಸಲ್ಪಟ್ಟಿರುವ ಭಾಗಗಳು ಸಹಜ ಬಣ್ಣಕ್ಕೆ ತಿರುಗಿವೆ. ಬೇರೆ ರೋಗಿಗಳು ಡೀಪಿಗ್ಮೆಂಟೇಷನ್ ಕಾರ್ಯವಿಧಾನವನ್ನು ಆಯ್ಕೆಮಾಡುತ್ತಾರೆ. ಈ ಚಿಕಿತ್ಸೆಯ ಗುರಿಯು, ಚರ್ಮಕ್ಕೆ ಬಣ್ಣಕೊಡುವ ಉಳಿದ ಜೀವಕೋಶಗಳನ್ನು ಔಷಧೋಪಚಾರದ ಮೂಲಕ ನಾಶಮಾಡಿ ತ್ವಚೆಯನ್ನು ಒಂದೇ ಬಣ್ಣಕ್ಕೆ ತರುವುದಾಗಿದೆ.
ತೊನ್ನಿನಿಂದ ಬಾಧಿತರಾದವರು, ಅದು ವಿಶೇಷವಾಗಿ ಮುಖಕ್ಕೆ ಹರಡುವಾಗ ಭಾವನಾತ್ಮಕ ಸಂಕಟಕ್ಕೆ ಒಳಗಾಗಸಾಧ್ಯವಿದೆ. ಸಿಬಾಂಗಿಲಿ ವಿವರಿಸುವುದು: “ಇತ್ತೀಚೆಗೆ ಇಬ್ಬರು ಮಕ್ಕಳು ನನ್ನನ್ನು ನೋಡಿ ಚೀರಾಡುತ್ತಾ ಓಡಿಹೋದರು. ಇತರರು ನನ್ನೊಂದಿಗೆ ಮಾತಾಡಲು ಹಿಂಜರಿಯುತ್ತಾರೆ. ನನಗೊಂದು ಅಂಟುರೋಗವಿದೆಯೆಂದೊ ನಾನು ಶಾಪಗ್ರಸ್ತಳಾಗಿದ್ದೇನೆಂದೊ ಅವರು ನೆನಸುತ್ತಾರೆ. ನಾನು ಇತರರಿಗೆ ಒಂದೇ ಒಂದು ವಿಷಯವನ್ನು ಹೇಳಬಯಸುತ್ತೇನೆ. ಅದೇನೆಂದರೆ ಈ ರೋಗಸ್ಥಿತಿಯುಳ್ಳ ಜನರ ಬಗ್ಗೆ ಹೆದರಬೇಕಾಗಿಲ್ಲ. ಏಕೆಂದರೆ ಸ್ಪರ್ಶದ ಮೂಲಕವಾಗಲಿ ಗಾಳಿಯ ಮೂಲಕವಾಗಲಿ ಈ ರೋಗವು ಹರಡಲು ಸಾಧ್ಯವಿಲ್ಲ.”
ತನ್ನ ಈ ರೋಗಸ್ಥಿತಿಯು, ಯೆಹೋವನ ಸಾಕ್ಷಿಯಾಗಿದ್ದು ತಾನು ತುಂಬ ಇಷ್ಟಪಡುವಂಥ ಬೈಬಲ್ ಶಿಕ್ಷಣ ಕೆಲಸದಿಂದ ತನ್ನನ್ನು ತಡೆಹಿಡಿಯುವಂತೆ ಸಿಬಾಂಗಿಲಿ ಬಿಡುವುದಿಲ್ಲ. ಆ ಕೆಲಸದಲ್ಲಿ, ಜನರನ್ನು ಅವರ ಮನೆಗಳಲ್ಲಿ ಭೇಟಿಯಾಗಿ ಅವರೊಂದಿಗೆ ಮುಖಾಮುಖಿಯಾಗಿ ಮಾತಾಡುವುದು ಸೇರಿರುತ್ತದೆ. ಅವಳನ್ನುವುದು: “ನನ್ನ ತೋರಿಕೆಯನ್ನು ನಾನು ಸ್ವೀಕರಿಸಲು ಕಲಿತಿದ್ದೇನೆ. ನಾನೀಗ ಇರುವ ಸ್ಥಿತಿಯಲ್ಲಿ ಹೆಚ್ಚು ಹಾಯಾಗಿದ್ದೇನೆ ಮತ್ತು ಯೆಹೋವ ದೇವರಿಂದ ವಾಗ್ದಾನಿಸಲ್ಪಟ್ಟಿರುವ ಭೂಪರದೈಸಿನಲ್ಲಿ ನನ್ನ ಹುಟ್ಟು ಬಣ್ಣವು ನನಗೆ ಪೂರ್ಣವಾಗಿ ಪುನಃ ಕೊಡಲ್ಪಡುವ ಸಮಯಕ್ಕಾಗಿ ಎದುರುನೋಡುತ್ತಿದ್ದೇನೆ.”—ಪ್ರಕಟನೆ 21:3-5. (g04 9/22)
[ಪುಟ 22ರಲ್ಲಿರುವ ಚಿತ್ರ]
ಇಸವಿ 1967ರಲ್ಲಿ, ಈ ರೋಗಸ್ಥಿತಿ ಯಿಂದ ಬಾಧಿತಳಾಗುವ ಮುಂಚೆ