ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರನ್ನು ಪ್ರೀತಿಸುವಂತೆ ಚಿಕ್ಕಂದಿನಿಂದಲೂ ಕಲಿಸಲಾದದ್ದು

ದೇವರನ್ನು ಪ್ರೀತಿಸುವಂತೆ ಚಿಕ್ಕಂದಿನಿಂದಲೂ ಕಲಿಸಲಾದದ್ದು

ದೇವರನ್ನು ಪ್ರೀತಿಸುವಂತೆ ಚಿಕ್ಕಂದಿನಿಂದಲೂ ಕಲಿಸಲಾದದ್ದು

ಅನಟೋಲಿ ಮೆಲ್ನಿಕ್‌ ಹೇಳಿದಂತೆ

ಅನೇಕರು ಪ್ರೀತಿಯಿಂದ ನನ್ನನ್ನು ತಾತ ಎಂದು ಕರೆಯುತ್ತಾರೆ. ಆ ಪದವು ನನ್ನ ಮನಸ್ಸಿನಾಳದ ಭಾವನೆಗಳನ್ನು ಕದಡುತ್ತದೆ, ಏಕೆಂದರೆ ನಾನು ಯಾರನ್ನು ಅತಿಯಾಗಿ ಪ್ರೀತಿಸುತ್ತಿದ್ದೇನೊ ಮತ್ತು ಯಾರಿಗೆ ಋಣಿಯಾಗಿದ್ದೇನೊ ಆ ನನ್ನ ಸ್ವಂತ ಅಜ್ಜನ ನೆನಪನ್ನು ಅದು ನನ್ನ ಮನಸ್ಸಿಗೆ ತರುತ್ತದೆ. ಅವರ ಬಗ್ಗೆ ಮತ್ತು ಅವರು ಹಾಗೂ ಅಜ್ಜಿ ತಮ್ಮ ಕುಟುಂಬ ಸದಸ್ಯರ ಮೇಲೆಯೂ ಇತರ ಅನೇಕ ಜನರ ಮೇಲೆಯೂ ಯಾವ ರೀತಿಯಲ್ಲಿ ಗಾಢವಾದ ಪ್ರಭಾವವನ್ನು ಬೀರಿದರೆಂಬುದರ ಬಗ್ಗೆ ನಾನು ನಿಮಗೆ ತಿಳಿಸುತ್ತೇನೆ.

ಇಂದು ಮಾಲ್ಡೋವ * ಎಂಬುದಾಗಿ ಕರೆಯಲ್ಪಡುವ ಸ್ಥಳದ ಉತ್ತರ ದಿಕ್ಕಿನಲ್ಲಿರುವ ಕ್ಲೀನಾ ಗ್ರಾಮದಲ್ಲಿ ನಾನು ಜನಿಸಿದೆ. 1920ರಲ್ಲಿ, ಹಿಂದೆ ಪಿಲ್‌ಗ್ರಿಮ್ಸ್‌ ಎಂದು ಕರೆಯಲ್ಪಡುತ್ತಿದ್ದ ಸಂಚರಣ ಶುಶ್ರೂಷಕರು ರೊಮೇನಿಯದ ಗಡಿಪ್ರದೇಶದಾಚೆಯಿಂದ ಸುಂದರವಾದ ನಮ್ಮ ಬೆಟ್ಟಪ್ರದೇಶಕ್ಕೆ ಬಂದರು. ಬೈಬಲಿನಿಂದ ಸಾರಲ್ಪಟ್ಟ ಸುವಾರ್ತೆಗೆ ನನ್ನ ತಾಯಿಯ ಹೆತ್ತವರು ಕೂಡಲೆ ಪ್ರತಿಕ್ರಿಯೆ ತೋರಿಸಿದರು. 1927ರಲ್ಲಿ ಅವರು ಬೈಬಲ್‌ ವಿದ್ಯಾರ್ಥಿಗಳಾದರು​—⁠ಹಿಂದೆ ಯೆಹೋವನ ಸಾಕ್ಷಿಗಳನ್ನು ಹೀಗೆ ಕರೆಯಲಾಗುತ್ತಿತ್ತು. 1939ರಲ್ಲಿ ಎರಡನೇ ಲೋಕ ಯುದ್ಧ ಆರಂಭಗೊಳ್ಳುವಷ್ಟರಲ್ಲಿ ನಮ್ಮ ಸಣ್ಣ ಗ್ರಾಮದಲ್ಲಿ ಯೆಹೋವನ ಸಾಕ್ಷಿಗಳ ಒಂದು ಸಭೆಯು ಸ್ಥಾಪನೆಗೊಂಡಿತ್ತು.

ನಾನು ಹುಟ್ಟಿದ ವರುಷವಾದ 1936ರಲ್ಲಿ ತಂದೆಯನ್ನು ಹೊರತುಪಡಿಸಿ ನನ್ನ ಎಲ್ಲಾ ಸಂಬಂಧಿಕರು ಯೆಹೋವನ ಸಾಕ್ಷಿಗಳಾಗಿದ್ದರು. ನನ್ನ ತಂದೆಯವರು ಆರ್ತಡಾಕ್ಸ್‌ ಚರ್ಚ್‌ಗೆ ಹಾಜರಾಗುತ್ತಿದ್ದರು. ಎರಡನೇ ಲೋಕ ಯುದ್ಧದ ಸಮಯದಲ್ಲಿ ಅವರು ಸಹ ಜೀವಿತದ ಉದ್ದೇಶದ ಕುರಿತು ಗಂಭೀರವಾಗಿ ಆಲೋಚಿಸಲು ಆರಂಭಿಸಿ, ಕ್ರಮೇಣ ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡು ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದರು. ನಮ್ಮ ಕುಟುಂಬದ ಆಧ್ಯಾತ್ಮಿಕ ಬೆಳವಣಿಗೆಗೆ ನನ್ನ ಅಜ್ಜ ಬಹಳಷ್ಟು ಪ್ರಯತ್ನವನ್ನು ಮಾಡಿದರು. ಬೈಬಲಿನ ಕಡೆಗೆ ಅವರಿಗೆ ಆಳವಾದ ಪ್ರೀತಿಯಿತ್ತು ಮತ್ತು ನೂರಾರು ವಚನಗಳು ಅವರಿಗೆ ಬಾಯಿಪಾಠವಾಗಿದ್ದವು. ಯಾವುದೇ ಸಂಭಾಷಣೆಯನ್ನು ಬೈಬಲಿನ ಕಡೆಗೆ ನಿರ್ದೇಶಿಸಲು ಅವರು ಶಕ್ತರಾಗಿದ್ದರು.

ನಾನು ಯಾವಾಗಲೂ ಅಜ್ಜನ ತೊಡೆಯಲ್ಲಿ ಕುಳಿತುಕೊಂಡು ಬೈಬಲ್‌ ಕಥೆಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ದೇವರ ಕಡೆಗಿನ ಪ್ರೀತಿಯನ್ನು ಅವರು ನನ್ನಲ್ಲಿ ಬೇರೂರಿಸಿದರು. ಅದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ! ನಾನು ಎಂಟು ವರುಷದವನಾಗಿದ್ದಾಗ ಮೊದಲ ಬಾರಿಗೆ ಅಜ್ಜನೊಂದಿಗೆ ಸಾರುವ ಕೆಲಸಕ್ಕೆ ಹೋದೆ. ಬೈಬಲನ್ನು ಉಪಯೋಗಿಸುತ್ತಾ ಯೆಹೋವನು ಯಾರು ಮತ್ತು ಆತನ ಸಮೀಪಕ್ಕೆ ಬರುವುದು ಹೇಗೆ ಎಂಬುದನ್ನು ನಾವು ಜೊತೆ ಗ್ರಾಮಸ್ಥರಿಗೆ ತಿಳಿಸಿದೆವು.

ಕಮ್ಯೂನಿಸ್ಟರಿಂದ ದಬ್ಬಾಳಿಕೆ

ಇಸವಿ 1947ರಲ್ಲಿ, ಕಮ್ಯೂನಿಸ್ಟ್‌ ಕಾರ್ಯನೀತಿ ಮತ್ತು ಆರ್ತಡಾಕ್ಸ್‌ ಚರ್ಚಿನ ಪ್ರಭಾವದ ಕೆಳಗೆ ಅಧಿಕಾರಿಗಳು ಮಾಲ್ಡೋವದಲ್ಲಿನ ಯೆಹೋವನ ಸಾಕ್ಷಿಗಳನ್ನು ಹಿಂಸಿಸಲು ಆರಂಭಿಸಿದರು. ಕೆ.ಜಿ.ಬಿ. (ರಾಷ್ಟ್ರ ಭದ್ರತಾ ಪಡೆ)ಯ ಕಾರ್ಯಭಾರಿಗಳು ಮತ್ತು ಸ್ಥಳಿಕ ಪೊಲೀಸರು ನಮ್ಮ ಮನೆಗೆ ಬಂದು, ನಮ್ಮ ಸಾರುವ ಕೆಲಸದ ಮೇಲ್ವಿಚಾರಣೆಯನ್ನು ಯಾರು ನೋಡಿಕೊಳ್ಳುತ್ತಾರೆ, ಸಾಹಿತ್ಯಗಳು ಎಲ್ಲಿಂದ ಬರುತ್ತವೆ, ಮತ್ತು ಆರಾಧನೆಗಾಗಿ ನಾವು ಎಲ್ಲಿ ಒಟ್ಟುಸೇರುತ್ತೇವೆ ಈ ಮುಂತಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಯೆಹೋವನ ಸಾಕ್ಷಿಗಳ ಚಟುವಟಿಕೆಯನ್ನು ತಾವು ನಿಲ್ಲಿಸಲಿದ್ದೇವೆ ಎಂಬುದಾಗಿ ಅವರು ಹೇಳಿದರು. ಯೆಹೋವನ ಸಾಕ್ಷಿಗಳನ್ನು ಅವರು “ದೇಶದಲ್ಲಿ ಕಮ್ಯೂನಿಸ್ಟ್‌ ಆಳ್ವಿಕೆಯ ಬೆಳವಣಿಗೆಗೆ ಅಡ್ಡಿಮಾಡುತ್ತಿರುವ” ಜನರು ಎಂಬುದಾಗಿ ಹೇಳುತ್ತಿದ್ದರು.

ಈ ಸಮಯದಷ್ಟಕ್ಕೆ, ಉತ್ತಮ ವಿದ್ಯಾಭ್ಯಾಸವಿದ್ದ ನನ್ನ ತಂದೆಯವರು ಸಹ ಬೈಬಲಿನ ಸತ್ಯವನ್ನು ಆಳವಾಗಿ ಪ್ರೀತಿಸಲಾರಂಭಿಸಿದ್ದರು. ನಮ್ಮ ಕ್ರೈಸ್ತ ಸಹೋದರ ಸಹೋದರಿಯರಿಗೆ ದ್ರೋಹಬಗೆಯದೆ, ವಿಚಾರಣೆಗಾರರಿಗೆ ಹೇಗೆ ಉತ್ತರ ಕೊಡಬೇಕೆಂಬುದು ತಂದೆಗೂ ಅಜ್ಜನಿಗೂ ತಿಳಿದಿತ್ತು. ಅವರಿಬ್ಬರು ಧೈರ್ಯಶಾಲಿಗಳೂ ಜೊತೆವಿಶ್ವಾಸಿಗಳ ಹಿತಕ್ಷೇಮದ ಬಗ್ಗೆ ಕಾಳಜಿವಹಿಸುವ ಪ್ರೀತಿಪರ ವ್ಯಕ್ತಿಗಳೂ ಆಗಿದ್ದರು. ಅವರಂತೆ ತಾಯಿಯು ಯಾವಾಗಲೂ ಸೌಮ್ಯಭಾವದಿಂದಿರುತ್ತಿದ್ದರು.

ಇಸವಿ 1948ರಲ್ಲಿ, ತಂದೆಯನ್ನು ಬಂಧಿಸಿ ಕರೆದೊಯ್ಯಲಾಯಿತು. ಅವರ ವಿರುದ್ಧ ಯಾವ ಅಪವಾದ ಹೊರಿಸಲಾಗಿದೆ ಎಂಬುದನ್ನು ಸಹ ನಮಗೆ ತಿಳಿಸಲಿಲ್ಲ. ಅವರಿಗೆ, ಅತಿ ಹೆಚ್ಚು ಭದ್ರತೆಯಿರುವ ಕಾರಾಗೃಹದಲ್ಲಿ ಏಳು ವರುಷಗಳ ಬಂಧಿವಾಸವನ್ನು ವಿಧಿಸಲಾಯಿತು. ಅನಂತರ ಇದಕ್ಕೆ ಕೂಡಿಕೆಯಾಗಿ ಎರಡು ವರುಷಗಳ ಕಾಲ ಗಡೀಪಾರು ಮಾಡಲಾಯಿತು. ಸಮಯಾನಂತರ ಅವರನ್ನು, ರಷ್ಯದ ಈಶಾನ್ಯಕ್ಕಿರುವ ಮಾಗಡಾನ್‌ ಸೀಮೆಗೆ ಕಳುಹಿಸಲಾಯಿತು. ಇದು ನಮ್ಮ ಮನೆಯಿಂದ 7,000 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿತ್ತು. ಒಂಭತ್ತು ವರುಷಗಳ ವರೆಗೆ ನಾವು ಒಬ್ಬರನ್ನೊಬ್ಬರು ನೋಡಲಿಲ್ಲ. ತಂದೆಯಿಲ್ಲದೆ ಜೀವಿಸುವುದು ಬಹಳ ಕಷ್ಟಕರವಾಗಿತ್ತು, ಆದರೆ ಆ ಸಮಯದಲ್ಲಿ ಅಜ್ಜ ನನಗೆ ಬೇಕಾಗಿದ್ದ ನಿಜವಾದ ಬೆಂಬಲವನ್ನು ನೀಡಿದರು.

ಗಡೀಪಾರು ಮಾಡಲ್ಪಟ್ಟದ್ದು

ಇಸವಿ 1949, ಜೂನ್‌ 6ರ ರಾತ್ರಿಯಂದು ಇಬ್ಬರು ಸೈನಿಕರು ಮತ್ತು ಒಬ್ಬ ಅಧಿಕಾರಿ ನಮ್ಮ ಮನೆಗೆ ದಾಳಿಮಾಡಿ, ಎರಡು ತಾಸಿನೊಳಗೆ ಮನೆಯನ್ನು ಖಾಲಿಮಾಡಿ ಅವರ ಗಾಡಿಯನ್ನು ಹತ್ತುವಂತೆ ನಮಗೆ ಆದೇಶವಿತ್ತರು. ಇನ್ನಾವುದೇ ಹೆಚ್ಚಿನ ವಿವರಣೆಯು ಕೊಡಲ್ಪಡಲಿಲ್ಲ. ನಮ್ಮನ್ನು ಗಡೀಪಾರು ಮಾಡಲಾಗುತ್ತಿದೆ ಮತ್ತು ಇನ್ನೆಂದೂ ನಾವು ಹಿಂದಿರುಗಿ ಬರಸಾಧ್ಯವಿಲ್ಲ ಎಂಬುದನ್ನು ಮಾತ್ರ ಅವರು ನಮಗೆ ತಿಳಿಸಿದರು. ಹೀಗೆ ತಾಯಿ, ಅಜ್ಜಅಜ್ಜಿ, ಮತ್ತು ಜೊತೆವಿಶ್ವಾಸಿಗಳೊಂದಿಗೆ ನಾನು ಸೈಬೀರಿಯಕ್ಕೆ ಕಳುಹಿಸಲ್ಪಟ್ಟೆ. ಆಗ ನಾನು ಕೇವಲ 13 ವರುಷದವನಾಗಿದ್ದೆ. ಕೆಲವು ವಾರಗಳ ಅನಂತರ ನಾವು, ದಟ್ಟವಾದ ಕಾಡಿನ ಮಧ್ಯೆ ಇರುವ ಟೈಗಾದ ಜವುಗು ಪ್ರದೇಶಕ್ಕೆ ತಲಪಿದೆವು. ನಾನು ಅತಿಯಾಗಿ ಪ್ರೀತಿಸುತ್ತಿದ್ದ ನನ್ನ ಹುಟ್ಟೂರಿನ ಪರಿಸರಕ್ಕಿಂತ ಇದು ಎಷ್ಟೊಂದು ವ್ಯತ್ಯಾಸವಾಗಿತ್ತು! ಕೆಲವೊಮ್ಮೆ ನಾವು ಅಳುತ್ತಿದ್ದೆವು. ಹಾಗಿದ್ದರೂ, ಯೆಹೋವನು ನಮ್ಮ ಕೈಬಿಡನೆಂಬ ಭರವಸೆ ನಮಗಿತ್ತು.

ನಮ್ಮನ್ನು ಎಲ್ಲಿಗೆ ಕರೆದೊಯ್ಯಲಾಯಿತೋ ಆ ಚಿಕ್ಕ ಹಳ್ಳಿಯಲ್ಲಿ ಮರದ ದಿಮ್ಮಿಯಿಂದ ಮಾಡಲಾದ ಹತ್ತು ಗುಡಿಸಲುಗಳಿದ್ದವು. ಇತರ ಸಾಕ್ಷಿಗಳನ್ನು ಟೈಗಾದಾದ್ಯಂತ ಇರುವ ಬೇರೆ ಬೇರೆ ಹಳ್ಳಿಗಳಿಗೆ ಗಡೀಪಾರು ಮಾಡಲಾಯಿತು. ಸ್ಥಳಿಕ ಜನರನ್ನು ಹೆದರಿಸುವ ಮತ್ತು ನಮ್ಮ ವಿರುದ್ಧ ಅವರಲ್ಲಿ ಪೂರ್ವಗ್ರಹವನ್ನು ಬೆಳೆಸುವ ಉದ್ದೇಶದಿಂದ, ಸಾಕ್ಷಿಗಳು ನರಭಕ್ಷಕರು ಎಂಬ ಸುದ್ದಿಯನ್ನು ಅಧಿಕಾರಿಗಳು ಹಬ್ಬಿಸಿದರು. ಆದರೆ ಬೇಗನೆ ಇದು ಸುಳ್ಳೆಂದೂ ನಮ್ಮ ಬಗ್ಗೆ ಹೆದರುವ ಅಗತ್ಯವಿಲ್ಲವೆಂದೂ ಜನರಿಗೆ ತಿಳಿದುಬಂತು.

ನಾವು ಅಲ್ಲಿಗೆ ಬಂದ ಮೊದಲ ಎರಡು ತಿಂಗಳು, ಒಂದು ಹಳೆಯ ಗುಡಿಸಲಿನಲ್ಲಿ ವಾಸಿಸಿದೆವು. ಆದರೆ ತೀಕ್ಷ್ಣವಾದ ಚಳಿಗಾಲವು ಬರುವ ಮುನ್ನ ಒಂದು ಸೂಕ್ತವಾದ ಮನೆಯನ್ನು ಕಟ್ಟುವ ಅಗತ್ಯವಿತ್ತು. ಸರಳವಾದ ಒಂದು ಮನೆಯನ್ನು ಕಟ್ಟುವಂತೆ ನನಗೂ ತಾಯಿಗೂ ಅಜ್ಜ ಮತ್ತು ಅಜ್ಜಿ ಸಹಾಯಮಾಡಿದರು. ಆ ಮನೆಯ ಅರ್ಧಭಾಗ ಭೂಮಿಯ ಮೇಲ್ಭಾಗದಲ್ಲಿಯೂ ಉಳಿದ ಅರ್ಧಭಾಗ ಕೆಳಭಾಗದಲ್ಲಿಯೂ ಇತ್ತು. ಅಲ್ಲಿ ನಾವು ಮೂರು ವರುಷಕ್ಕಿಂತಲೂ ಹೆಚ್ಚು ಕಾಲ ವಾಸಿಸಿದೆವು. ಅನುಮತಿಯಿಲ್ಲದೆ ಹಳ್ಳಿಯಿಂದ ಹೊರಗೆ ಹೋಗಸಾಧ್ಯವಿರಲಿಲ್ಲ ಮತ್ತು ಅನುಮತಿಯು ಎಂದಿಗೂ ಸಿಗುತ್ತಿರಲಿಲ್ಲ.

ಸ್ವಲ್ಪ ಸಮಯದ ಅನಂತರ ನನ್ನನ್ನು ಶಾಲೆಗೆ ಹೋಗಲು ಅನುಮತಿಸಲಾಯಿತು. ನನ್ನ ಧಾರ್ಮಿಕ ನೋಟವು ಅಲ್ಲಿದ್ದ ಇತರರಿಗಿಂತ ಭಿನ್ನವಾಗಿದ್ದ ಕಾರಣ, ಅಧ್ಯಾಪಕರು ಮತ್ತು ಜೊತೆವಿದ್ಯಾರ್ಥಿಗಳು ಅನೇಕ ವೇಳೆ ನನಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ನನ್ನ ನಂಬಿಕೆಗಳನ್ನು ನಾನು ಹೇಗೆ ಉತ್ತಮವಾಗಿ ವಿವರಿಸಶಕ್ತನಾದೆ ಎಂಬುದನ್ನು ಮನೆಗೆ ಬಂದು ಅಜ್ಜನಿಗೆ ತಿಳಿಸಿದಾಗ ಅವರ ಕಣ್ಣುಗಳು ಸಂತೋಷದಿಂದ ಕಂಗೊಳಿಸುತ್ತಿದ್ದವು.

ಸ್ವಲ್ಪ ಹೆಚ್ಚು ಸ್ವಾತಂತ್ರ್ಯ

ಇಸವಿ 1953ರಲ್ಲಿ ನಿರಂಕುಶಾಧಿಕಾರಿ ಸ್ಟ್ಯಾಲಿನ್‌ ಮೃತಪಟ್ಟ ಅನಂತರ ನಮ್ಮ ಜೀವನವು ಸ್ವಲ್ಪ ಉತ್ತಮಗೊಂಡಿತು. ಹಳ್ಳಿಯಿಂದ ಹೊರಗೆ ಹೋಗಲು ನಮಗೆ ಅನುಮತಿ ನೀಡಲ್ಪಟ್ಟಿತು. ಈ ಕಾರಣದಿಂದ, ಜೊತೆವಿಶ್ವಾಸಿಗಳೊಂದಿಗೆ ಸಹವಾಸಿಸಲು ಮತ್ತು ಇತರ ಸಾಕ್ಷಿಗಳು ಗಡೀಪಾರು ಮಾಡಲ್ಪಟ್ಟ ಹಳ್ಳಿಗಳಲ್ಲಿ ನಡೆಯುತ್ತಿದ್ದ ಕೂಟಗಳಿಗೆ ಹಾಜರಾಗಲು ಸಾಧ್ಯವಾಯಿತು. ಜನರ ಗಮನಸೆಳೆಯುವುದನ್ನು ತಡೆಗಟ್ಟುವ ಸಲುವಾಗಿ ನಾವು ಚಿಕ್ಕ ಚಿಕ್ಕ ಗುಂಪುಗಳಾಗಿ ಒಟ್ಟುಗೂಡುತ್ತಿದ್ದೆವು. ಕೂಟಗಳ ಸ್ಥಳಕ್ಕೆ ತಲಪಲು ನಾವು 30 ಕಿಲೋಮೀಟರ್‌ ನಡೆಯಬೇಕಿತ್ತು. ಕೆಲವೊಮ್ಮೆ ಮೊಣಕಾಲಿನ ವರೆಗೆ ಮಂಜು ತುಂಬಿರುವ ಮತ್ತು ಶೂನ್ಯ ಸೆಲ್ಸಿಯಸ್‌ಗಿಂತ 40 ಡಿಗ್ರಿ ಕೆಳಮಟ್ಟಕ್ಕೆ ಇಳಿದಿರುವ ತಾಪಮಾನದಲ್ಲಿ ಪ್ರಯಾಣಿಸಬೇಕಿತ್ತು. ಮರುದಿನ ನಾವು ಮನೆಗೆ ಹಿಂದಿರುಗುತ್ತಿದ್ದೆವು. ಪ್ರಯಾಣದ ಮಧ್ಯದಲ್ಲಿ, ಉಪ್ಪಿನಲ್ಲಿ ಹಾಕಿದ ಸಣ್ಣ ಸಣ್ಣ ಸೌತೇಕಾಯಿಯನ್ನು ಮತ್ತು ಸ್ವಲ್ಪ ಕಲ್ಲುಸಕ್ಕರೆಯನ್ನು ತಿನ್ನುತ್ತಿದ್ದೆವು. ಹಾಗಿದ್ದರೂ, ಪುರಾತನ ದಾವೀದನಂತೆ ನಾವು ಎಷ್ಟೊಂದು ಸಂತೋಷದಿಂದಿದ್ದೆವು!​—⁠ಕೀರ್ತನೆ 122:⁠1.

ಇಸವಿ 1955ರಲ್ಲಿ ಯೆಹೋವನಿಗೆ ನಾನು ಮಾಡಿದ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನಪಡೆದುಕೊಂಡೆ. ಇದಕ್ಕಿಂತ ಸ್ವಲ್ಪ ಸಮಯ ಮುಂಚೆ, ಪಕ್ಕದ ಹಳ್ಳಿಯಲ್ಲಿನ ಒಂದು ಸಭಾ ಕೂಟದಲ್ಲಿ ಕಪ್ಪುಕೂದಲಿದ್ದ ನಮ್ರ ಗುಣದ ಹುಡುಗಿಯಾದ ಲೀಡೀಯಳನ್ನು ನಾನು ಭೇಟಿಯಾಗಿದ್ದೆ. ನಮ್ಮಂತೆ, ಅವಳು ಮತ್ತು ಅವಳ ಕುಟುಂಬ ಸದಸ್ಯರು ಮಾಲ್ಡೋವದಿಂದ ಗಡೀಪಾರು ಮಾಡಲ್ಪಟ್ಟ ಸಾಕ್ಷಿಗಳಾಗಿದ್ದರು. ಅವಳಿಗೆ ಸುಂದರವಾದ ಗಾಯನ ಕಂಠವಿತ್ತು ಮತ್ತು ಆ ಸಮಯದಲ್ಲಿ ನಾವು ಉಪಯೋಗಿಸುತ್ತಿದ್ದ ಸಂಗೀತ ಪುಸ್ತಕದ ಹೆಚ್ಚುಕಡಿಮೆ ಎಲ್ಲಾ 337 ಹಾಡುಗಳು ಅವಳಿಗೆ ಬಾಯಿಪಾಠವಾಗಿತ್ತು. ಇದು ನನ್ನನ್ನು ಪ್ರಭಾವಿಸಿತು, ಏಕೆಂದರೆ ನಾನು ಸಹ ನಮ್ಮ ಸಂಗೀತ ಮತ್ತು ಹಾಡುಗಳಲ್ಲಿ ಆನಂದಿಸುತ್ತಿದ್ದೆ. 1956ರಲ್ಲಿ ನಾವು ವಿವಾಹವಾಗಲು ನಿರ್ಧರಿಸಿದೆವು.

ನಾನು ನನ್ನ ತಂದೆಗೆ ಈ ವಿಷಯದ ಕುರಿತು ಕಾಗದವನ್ನು ಬರೆದೆ. ಅವರನ್ನು ಮಾಗಡಾನ್‌ಗೆ ಗಡೀಪಾರು ಮಾಡಲಾಗಿತ್ತೆಂದು ನಮಗೆ ತಿಳಿದುಬಂತು ಮತ್ತು ಅವರಿಂದ ಒಪ್ಪಿಗೆಯ ಪತ್ರ ಬರುವ ತನಕ ಮದುವೆಯನ್ನು ಮುಂದೂಡಿದೆವು. ಸ್ವಲ್ಪ ಸಮಯದ ಅನಂತರ ತಂದೆಯವರನ್ನು ಬಿಡುಗಡೆಮಾಡಲಾಯಿತು ಮತ್ತು ಗಡೀಪಾರು ಮಾಡಲ್ಪಟ್ಟು ನಾವೆಲ್ಲಿ ವಾಸಿಸುತ್ತಿದ್ದೆವೋ ಅಲ್ಲಿಗೆ ಅವರೂ ಬಂದು ನಮ್ಮನ್ನು ಜೊತೆಗೂಡಿದರು. ಅವರು ಮತ್ತು ಜೊತೆ ಕ್ರೈಸ್ತರು ಹೇಗೆ ದೇವರ ಸಹಾಯದಿಂದ ಸೆರೆಶಿಬಿರಗಳಲ್ಲಿನ ಭಯಂಕರ ಪರಿಸ್ಥಿತಿಗಳನ್ನು ಪಾರಾದರು ಎಂಬುದನ್ನು ನಮಗೆ ತಿಳಿಸಿದರು. ಅಂಥ ವೃತ್ತಾಂತಗಳು ನಮ್ಮ ನಂಬಿಕೆಯನ್ನು ಬಲಪಡಿಸಿದವು.

ತಂದೆಯವರು ಹಿಂದಿರುಗಿ ಬಂದ ಸ್ವಲ್ಪ ಸಮಯದ ಅನಂತರ ಒಮ್ಮೆ ತಾಯಿಯು ಪೇಂಟ್‌ ಮತ್ತು ವಾರ್ನಿಷ್‌ಗೆ ಉಪಯೋಗಿಸುವ ಎಣ್ಣೆಯನ್ನು ಬಿಸಿಮಾಡುತ್ತಿರುವಾಗ ಒಂದು ಭೀಕರ ಅಪಘಾತ ಸಂಭವಿಸಿತು. ಕುದಿಯುವ ಎಣ್ಣೆಯ ದೊಡ್ಡ ಪಾತ್ರೆಯು ಹೇಗೋ ಜಾರಿ ತಾಯಿಯ ಮೇಲೆ ಬಿತ್ತು. ಅವರು ಆಸ್ಪತ್ರೆಯಲ್ಲಿ ಅಸುನೀಗಿದರು. ನಾವು ದುಃಖದಲ್ಲಿ ಮುಳುಗಿಹೋದೆವು. ಸಮಯವು ಕಳೆದಂತೆ ತಂದೆಯ ದುಃಖವು ಕಡಿಮೆಯಾಯಿತು, ಮತ್ತು ಸಮಯಾನಂತರ ಅವರು ಪಕ್ಕದ ಹಳ್ಳಿಯ ಒಬ್ಬಾಕೆ ಸಾಕ್ಷಿಯಾದ ಟಾಟ್ಯಾನಳನ್ನು ವಿವಾಹವಾದರು.

ನಮ್ಮ ಶುಶ್ರೂಷೆಯನ್ನು ವಿಸ್ತರಿಸುವುದು

ಇಸವಿ 1958ರಲ್ಲಿ ನಾನು ಮತ್ತು ಲೀಡೀಯ, ನಾವು ವಾಸಿಸುತ್ತಿದ್ದ ಕೀಜಾಕ್‌ ಹಳ್ಳಿಯಿಂದ 100 ಕಿಲೋಮೀಟರ್‌ ದೂರದಲ್ಲಿರುವ ಲಿಬೈಯೆ ಎಂಬ ದೊಡ್ಡ ಗ್ರಾಮಕ್ಕೆ ಸ್ಥಳಾಂತರಿಸಿದೆವು. ಇತರ ದೇಶಗಳಲ್ಲಿರುವ ಕ್ರೈಸ್ತರು ಮನೆಯಿಂದ ಮನೆಗೆ ಹೋಗಿ ಸಾರುತ್ತಿದ್ದರೆಂದು ನಾವು ಓದಿ ತಿಳಿದುಕೊಂಡಿದ್ದೆವು. ನಾವು ಸಹ ನಮ್ಮ ಹೊಸ ಸ್ಥಳದಲ್ಲಿ ಇದನ್ನು ಮಾಡಲು ಪ್ರಯತ್ನಿಸಿದೆವು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯು ನಿಷೇಧಿಸಲ್ಪಟ್ಟಿತ್ತು, ಆದರೆ ಇತರ ಸ್ಥಳಗಳಿಂದ ಗುಟ್ಟಾಗಿ ನಾವು ಪತ್ರಿಕೆಗಳನ್ನು ಪಡೆಯುತ್ತಿದ್ದೆವು. ಕೇವಲ ರಷ್ಯನ್‌ ಭಾಷೆಯಲ್ಲಿ ಮಾತ್ರ ಪತ್ರಿಕೆಗಳನ್ನು ಪಡೆದುಕೊಳ್ಳಬಹುದು ಎಂಬುದಾಗಿ ಆಗ ನಮಗೆ ಪ್ರಕಟಿಸಲಾಗಿತ್ತು. ಅಷ್ಟರ ತನಕ ಮೋಲ್ಡೇವಿಯನ್‌ ಭಾಷೆಯಲ್ಲಿಯೂ ನಮಗೆ ಪತ್ರಿಕೆಗಳು ದೊರಕುತ್ತಿದ್ದವು. ಆದುದರಿಂದ ರಷ್ಯನ್‌ ಭಾಷೆಯನ್ನು ಉತ್ತಮವಾಗಿ ಕಲಿಯಲು ನಾವು ಸತತ ಪ್ರಯತ್ನವನ್ನು ಮಾಡಿದೆವು. ಇಂದಿನ ವರೆಗೂ ನನಗೆ ಕೆಲವು ಲೇಖನಗಳ ಶೀರ್ಷಿಕೆ ಮಾತ್ರವಲ್ಲ ಅವುಗಳಲ್ಲಿದ್ದ ಕೆಲವು ವಿಚಾರಗಳು ಸಹ ನೆನಪಿಗೆ ಬರುತ್ತವೆ.

ಜೀವನದ ಅಗತ್ಯತೆಗಳನ್ನು ಪೂರೈಸಲಿಕ್ಕಾಗಿ, ಲೀಡೀಯ ಧಾನ್ಯವನ್ನು ಮೇಲಕ್ಕೆತ್ತುವ ಯಂತ್ರದಲ್ಲಿ ಕೆಲಸಮಾಡಿದಳು ಮತ್ತು ನಾನು ಮರದಿಮ್ಮಿಗಳನ್ನು ಗಾಡಿಯಿಂದ ಕೆಳಗಿಳಿಸುವ ಕೆಲಸವನ್ನು ಮಾಡಿದೆ. ಕೆಲಸವು ತೀರ ಕಠಿನವಾಗಿತ್ತು, ಆದರೆ ಸಂಬಳವು ಬಹಳ ಕಡಿಮೆಯಾಗಿತ್ತು. ಸಾಕ್ಷಿಗಳನ್ನು ಉತ್ತಮ ಕೆಲಸಗಾರರೆಂದು ಭಾವಿಸಲಾಗಿತ್ತಾದರೂ, ನಮಗೆ ಯಾವುದೇ ಅನುಕೂಲಗಳಾಗಲಿ ಅಥವಾ ಸಂಭಾವನೆಯಾಗಲಿ ದೊರಕಲಿಲ್ಲ. ಅಧಿಕಾರಿಗಳು ನೇರವಾಗಿ ಹೇಳಿದ್ದು: “ಕಮ್ಯೂನಿಸ್ಟ್‌ ಸಮಾಜದಲ್ಲಿ ಯೆಹೋವನ ಸಾಕ್ಷಿಗಳಿಗೆ ಯಾವುದೇ ಸ್ಥಳವಿಲ್ಲ.” ಹಾಗಿದ್ದರೂ, ನಮ್ಮ ವಿಷಯದಲ್ಲಿ ಯೇಸು ತನ್ನ ಶಿಷ್ಯರ ಕುರಿತಾಗಿ ಹೇಳಿದ ಮಾತು ಸತ್ಯವಾಯಿತು ಎಂಬುದನ್ನು ತಿಳಿದು ನಾವು ಸಂತೋಷಿಸಿದೆವು. ಅವನು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.”​—⁠ಯೋಹಾನ 17:16.

ಹೊಸ ಪಂಥಾಹ್ವಾನಗಳು

ಇಸವಿ 1959ರಲ್ಲಿ ನಮ್ಮ ಮಗಳಾದ ವಾಲೆನ್ಟೀನಾ ಹುಟ್ಟಿದಳು. ಸ್ವಲ್ಪ ಸಮಯದ ಅನಂತರ ಹಿಂಸೆಯ ಒಂದು ಹೊಸ ಅಲೆಯು ಬೀಸಿತು. ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ತಿಳಿಸುವುದು: “ಮುಖ್ಯ ಮಂತ್ರಿಯಾದ ನಿಕೀಟಾ ಕ್ರೂಶ್‌ಚೇವ್‌ನ ಮುಂದಾಳುತ್ವದ ಕೆಳಗೆ 1959-64ರಲ್ಲಿ ಒಂದು ಹೊಸ ಧರ್ಮವಿರೋಧಿ ಚಳವಳಿಯು ಆರಂಭವಾಯಿತು.” ಎಲ್ಲಾ ಧರ್ಮವನ್ನು, ಅದರಲ್ಲಿಯೂ ಮುಖ್ಯವಾಗಿ ಯೆಹೋವನ ಸಾಕ್ಷಿಗಳನ್ನು ಇಲ್ಲದಂತೆ ಮಾಡುವುದೇ ಸೋವಿಯೆಟ್‌ ಸರಕಾರದ ಗುರಿಯಾಗಿದೆ ಎಂಬುದಾಗಿ ರಾಷ್ಟ್ರ ಭದ್ರತಾ ಪಡೆಯ ಸದಸ್ಯರು ನಮಗೆ ತಿಳಿಸಿದರು.

ವಾಲೆನ್ಟೀನಾಳು ಸುಮಾರು ಒಂದು ವರುಷದವಳಾಗಿದ್ದಾಗ ನನ್ನನ್ನು ಸೇನೆಗೆ ಕರೆಯಲಾಯಿತು. ನಾನು ಹೋಗಲು ನಿರಾಕರಿಸಿದಾಗ, ನನ್ನ ತಟಸ್ಥ ನಿಲುವಿಗಾಗಿ ಐದು ವರುಷದ ಸೆರೆವಾಸವನ್ನು ವಿಧಿಸಲಾಯಿತು. ಒಮ್ಮೆ ಲೀಡೀಯ ನನ್ನನ್ನು ಭೇಟಿಮಾಡಲು ಬಂದಾಗ, ರಾಷ್ಟ್ರ ಭದ್ರತಾ ಪಡೆಯ ಅಧಿಕಾರಿಯೊಬ್ಬನು ಅವಳಿಗೆ ಹೇಳಿದ್ದು: “ಎರಡು ವರುಷದೊಳಗಾಗಿ ರಷ್ಯದಲ್ಲಿ ಒಬ್ಬನೇ ಒಬ್ಬ ಯೆಹೋವನ ಸಾಕ್ಷಿ ಸಹ ಇಲ್ಲದಂತೆ ಮಾಡಲಾಗುತ್ತದೆ ಎಂಬುದಾಗಿ ನಮಗೆ ರಷ್ಯ ಸರಕಾರದಿಂದ ಸುದ್ದಿಬಂದಿದೆ.” ಅನಂತರ ಅವನು ಎಚ್ಚರಿಸಿದ್ದು: “ನೀವು ನಿಮ್ಮ ನಂಬಿಕೆಯನ್ನು ತ್ಯಜಿಸಬೇಕು, ಇಲ್ಲವಾದರೆ ನಿಮ್ಮನ್ನು ಸೆರೆಮನೆಗೆ ಹಾಕಲಾಗುವುದು.” ಅಂಥ ಬೆದರಿಕೆಯು ಸ್ತ್ರೀಯರ ಬಾಯನ್ನು ಮುಚ್ಚಿಸುವುದು ಎಂಬುದಾಗಿ ಅಧಿಕಾರಿಯು ಭಾವಿಸಿದನು. ಅವನಂದದ್ದು: “ಈ ಸ್ತ್ರೀಯರೊಂದು ಬಲಹೀನ ಗುಂಪು.”

ಸ್ವಲ್ಪ ಸಮಯದೊಳಗಾಗಿ ಹೆಚ್ಚಿನ ಸಾಕ್ಷಿ ಪುರುಷರನ್ನು ಸೆರೆಮನೆಗೆ ಮತ್ತು ಕಾರ್ಮಿಕಶಿಬಿರಗಳಿಗೆ ಹಾಕಲಾಯಿತು. ಹಾಗಿದ್ದರೂ, ಧೀರರಾದ ಸ್ತ್ರೀಯರು ತಮ್ಮ ಸಾರುವ ಕೆಲಸವನ್ನು ಮುಂದುವರಿಸುತ್ತಾ ಹೋದರು. ಅವರು ತಮಗೆ ಅಪಾಯವಿದ್ದರೂ, ಸೆರೆಮನೆ ಮತ್ತು ಕಾರ್ಮಿಕಶಿಬಿರಕ್ಕೆ ಸಾಹಿತ್ಯಗಳನ್ನು ಗುಟ್ಟಿನಿಂದ ತಂದರು. ಲೀಡೀಯಳು ಅಂಥ ಪರೀಕ್ಷೆಗಳನ್ನು ಎದುರಿಸಿದಳು ಮತ್ತು ನನ್ನ ಗೈರುಹಾಜರಿಯನ್ನು ದುರುಪಯೋಗಿಸಿಕೊಳ್ಳಲು ಪ್ರಯತ್ನಿಸಿದ ಪುರುಷರಿಂದ ಅನಪೇಕ್ಷಿತ ಲೈಂಗಿಕ ಕಿರುಕುಳಗಳಿಗೂ ಅನೇಕಬಾರಿ ಗುರಿಯಾದಳು. ಅಷ್ಟುಮಾತ್ರವಲ್ಲದೆ, ನಾನೆಂದೂ ಬಿಡುಗಡೆಯಾಗುವುದಿಲ್ಲವೆಂದು ಸಹ ಅವಳಿಗೆ ಹೇಳಲಾಯಿತು. ಆದರೆ ನಾನು ಬಿಡುಗಡೆಹೊಂದಿದೆ!

ಬಿಡುಗಡೆ ಮತ್ತು ಕಸಾಕ್‌ಸ್ತಾನ್‌ಗೆ ಸ್ಥಳಾಂತರ

ಇಸವಿ 1963ರಲ್ಲಿ ನನ್ನ ಕೇಸನ್ನು ಪುನಃ ಒಮ್ಮೆ ಪರಿಗಣಿಸಲಾಯಿತು, ಮತ್ತು ಅನಂತರ ನಾನು ಬಿಡುಗಡೆಮಾಡಲ್ಪಟ್ಟೆ. ಅಷ್ಟರಲ್ಲೇ ನಾನು ಮೂರು ವರುಷ ಸೆರೆವಾಸವನ್ನು ಅನುಭವಿಸಿದ್ದೆ. ನಮಗೆ ಎಲ್ಲಿಯೂ ವಸತಿಗೆ ಅವಕಾಶ ದೊರಕಲಿಲ್ಲ, ಈ ಕಾರಣ ನನಗೆ ಕೆಲಸವನ್ನು ಕಂಡುಕೊಳ್ಳುವುದು ಕಷ್ಟಕರವಾಯಿತು. ಏಕೆಂದರೆ, “ಶಾಶ್ವತ ನಿವಾಸವಿಲ್ಲದಿದ್ದರೆ ಕೆಲಸವೂ ಇಲ್ಲ” ಎಂಬ ಕಾಯಿದೆಯನ್ನು ರಾಷ್ಟ್ರವು ಜಾರಿಗೆ ತಂದಿತ್ತು. ಸತತವಾದ ಪ್ರಾರ್ಥನೆಯ ಮೂಲಕ ನಾವು ಯೆಹೋವನಲ್ಲಿ ಸಹಾಯಕ್ಕಾಗಿ ಬೇಡಿದೆವು. ಅನಂತರ ನಾವು ಕಸಾಕ್‌ಸ್ತಾನಿನ ಉತ್ತರಕ್ಕಿರುವ ಪಿಟ್ರೋಪಾವ್ಲ್‌ಗೆ ಹೋಗಲು ನಿರ್ಣಯಿಸಿದೆವು. ಆದರೆ ಅಲ್ಲಿನ ಸ್ಥಳೀಯ ಅಧಿಕಾರಿಗಳಿಗೆ ಈಗಾಗಲೇ ನಮ್ಮ ಕುರಿತು ಸುದ್ದಿಯು ತಲಪಿಸಲ್ಪಟ್ಟಿತ್ತು ಮತ್ತು ನಾವು ಅಲ್ಲಿ ವಾಸಿಸಲು ಅಥವಾ ಕೆಲಸಮಾಡಲು ಅವರು ಒಪ್ಪಲಿಲ್ಲ. ನಗರದಲ್ಲಿದ್ದ ಸುಮಾರು 50 ಸಾಕ್ಷಿಗಳು ಇದೇ ರೀತಿಯ ಹಿಂಸೆಯನ್ನು ಅನುಭವಿಸಿದರು.

ಇನ್ನೊಂದು ಸಾಕ್ಷಿ ದಂಪತಿಯರೊಂದಿಗೆ ನಾವು, ದಕ್ಷಿಣದಲ್ಲಿರುವ ಸ್ಕೂಚಿನ್‌ಸ್ಕ್‌ ಎಂಬ ಸಣ್ಣ ಪಟ್ಟಣಕ್ಕೆ ಹೋದೆವು. ಅಲ್ಲಿ ಬೇರೆ ಯಾವುದೇ ಸಾಕ್ಷಿಗಳು ವಾಸಿಸುತ್ತಿರಲಿಲ್ಲ ಮತ್ತು ಅಧಿಕಾರಿಗಳಿಗೆ ನಮ್ಮ ಸಾರುವ ಕೆಲಸದ ಕುರಿತು ಏನೂ ತಿಳಿದಿರಲಿಲ್ಲ. ಒಂದು ವಾರದ ವರೆಗೆ ನಾನು ಮತ್ತು ಇವಾನ್‌ ಕೆಲಸವನ್ನು ಹುಡುಕುತ್ತಿದ್ದೆವು ಮತ್ತು ನಮ್ಮ ಪತ್ನಿಯರು ರೈಲುನಿಲ್ದಾಣದಲ್ಲಿ ಕುಳಿತುಕೊಂಡಿರುತ್ತಿದ್ದರು. ರಾತ್ರಿ ನಿದ್ರೆಯನ್ನು ಸಹ ನಾವು ಇಲ್ಲಿಯೇ ಮಾಡುತ್ತಿದ್ದೆವು. ಕೊನೆಗೂ ನಮಗೆ ಒಂದು ಗಾಜಿನ ಕಾರ್ಖಾನೆಯಲ್ಲಿ ಕೆಲಸ ದೊರಕಿತು. ನಮ್ಮ ಕುಟುಂಬಕ್ಕಾಗಿ ನಾವೊಂದು ಸಣ್ಣ ಮನೆಯನ್ನು ಬಾಡಿಗೆಗೆ ತೆಗೆದುಕೊಂಡೆವು. ಆ ಮನೆಯಲ್ಲಿ ಕೇವಲ ಎರಡು ಹಾಸಿಗೆಯನ್ನು ಹಾಸಿದ ಮೇಲೆ ಸ್ವಲ್ಪ ಸ್ಥಳ ಮಾತ್ರ ಉಳಿಯುತ್ತಿತ್ತು. ಅಷ್ಟು ಚಿಕ್ಕದಾಗಿದ್ದರೂ ನಾವು ತೃಪ್ತರಾಗಿದ್ದೆವು.

ನಾನು ಮತ್ತು ಇವಾನ್‌ ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದೆವು, ಹಾಗೂ ಈ ಕಾರಣ ನಮ್ಮ ಧಣಿಗೆ ಬಹಳ ಸಂತೋಷವಾಯಿತು. ಮಿಲಿಟರಿ ಸೇವೆಗಾಗಿ ನನಗೆ ಪುನಃ ಕರೆನೀಡಲ್ಪಟ್ಟ ಸಮಯದೊಳಗಾಗಿ, ನನ್ನ ಕಾರ್ಖಾನೆಯ ನಿರ್ವಾಹಕನಿಗೆ ನನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯ ಕಾರಣ ನಾನು ಮಿಲಿಟರಿ ತರಬೇತಿಯಲ್ಲಿ ಸೇರಲಾರೆ ಎಂಬುದು ತಿಳಿಯಿತು. ಆಶ್ಚರ್ಯಕರವಾಗಿ, ಅವನೇ ಸ್ವತಃ ಮಿಲಿಟರಿ ಮುಖಂಡನನ್ನು ಭೇಟಿಯಾಗಿ, ನಾನು ಮತ್ತು ಇವಾನ್‌ ಇಬ್ಬರೂ ಕುಶಲ ಕಾರ್ಮಿಕರಾಗಿರುವುದರಿಂದ ಅವನ ಕಾರ್ಖಾನೆಗೆ ಅತ್ಯಗತ್ಯರಾಗಿದ್ದೇವೆ ಎಂದು ಹೇಳಿದನು. ಆದುದರಿಂದ ನಾವು ಅಲ್ಲಿಯೇ ಉಳಿಯುವಂತೆ ಅನುಮತಿಸಲಾಯಿತು.

ಮಕ್ಕಳನ್ನು ಬೆಳೆಸುವುದು ಮತ್ತು ಇತರರಿಗೆ ಸೇವೆಸಲ್ಲಿಸುವುದು

ಇಸವಿ 1966ರಲ್ಲಿ ನಮ್ಮ ಎರಡನೆಯ ಮಗಳಾದ ಲೀಲ್ಯಾ ಹುಟ್ಟಿದಳು. ಒಂದು ವರುಷದ ಅನಂತರ ನಾವು, ಕಸಾಕ್‌ಸ್ತಾನಿನ ದಕ್ಷಿಣದಲ್ಲಿರುವ ಮತ್ತು ಉಸ್ಬೆಕಿಸ್ತಾನ್‌ನಿನ ಗಡಿಯ ಸಮೀಪವಿರುವ ಬೀಲಿಯೆ ವೊಡಿ ಎಂಬ ಪಟ್ಟಣಕ್ಕೆ ಸ್ಥಳಾಂತರಿಸಿದೆವು. ಅಲ್ಲಿ ಸಾಕ್ಷಿಗಳ ಸಣ್ಣ ಗುಂಪೊಂದಿತ್ತು. ಬೇಗನೆ ಒಂದು ಸಭೆಯು ಸ್ಥಾಪನೆಯಾಯಿತು, ಮತ್ತು ನನ್ನನ್ನು ಅಧ್ಯಕ್ಷ ಮೇಲ್ವಿಚಾರಕನಾಗಿ ನೇಮಿಸಲಾಯಿತು. 1969ರಲ್ಲಿ ನಮ್ಮ ಮಗನಾದ ಆಲ್ಯೆಕ್‌ನ ಜನನವಾಯಿತು. ಎರಡು ವರುಷಗಳ ಅನಂತರ ನಮ್ಮ ಕೊನೆಯ ಮಗಳಾದ ನಟಾಶ ಹುಟ್ಟಿದಳು. ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವೆಂಬುದನ್ನು ನಾನು ಮತ್ತು ಲೀಡೀಯ ಎಂದಿಗೂ ಮರೆಯಲಿಲ್ಲ. (ಕೀರ್ತನೆ 127:⁠3) ಯೆಹೋವನನ್ನು ಪ್ರೀತಿಸುವ ಮಕ್ಕಳಾಗಿ ಅವರನ್ನು ಬೆಳೆಸಬೇಕಾದರೆ ನಾವು ಏನು ಮಾಡಬೇಕೆಂದು ಒಟ್ಟಾಗಿ ಚರ್ಚಿಸಿದೆವು.

ಇಸವಿ 1970ಗಳಲ್ಲಿ ಸಹ, ಹೆಚ್ಚಿನ ಸಾಕ್ಷಿ ಪುರುಷರು ಇನ್ನೂ ಕಾರ್ಮಿಕಶಿಬಿರದಲ್ಲಿದ್ದರು. ಅನೇಕ ಸಭೆಗಳನ್ನು ನೋಡಿಕೊಳ್ಳಲು ಮತ್ತು ಮಾರ್ಗದರ್ಶಿಸಲು ಪ್ರೌಢ ಸಹೋದರರ ಅಗತ್ಯವಿತ್ತು. ಆದುದರಿಂದ ಲೀಡೀಯ ಕೆಲವೊಮ್ಮೆ ತಂದೆಯಂತೆಯೂ ತಾಯಿಯಂತೆಯೂ ಕೆಲಸ ನಿರ್ವಹಿಸುತ್ತಾ ನಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಪ್ರಾಮುಖ್ಯ ಪಾತ್ರವನ್ನು ವಹಿಸಿದಂತೆ ನಾನು ಸಂಚರಣ ಮೇಲ್ವಿಚಾರಕನಾಗಿ ಕೆಲಸಮಾಡಿದೆ. ಕಸಾಕ್‌ಸ್ತಾನ್‌ನಲ್ಲಿರುವ ಸಭೆಗಳನ್ನು ಮತ್ತು ನೆರೆಹೊರೆಯಲ್ಲಿದ್ದ ಟಜಿಕಿಸ್ತಾನ್‌, ಟರ್ಕ್‌ಮೆನಿಸ್ತಾನ್‌, ಮತ್ತು ಉಸ್ಬೆಕಿಸ್ತಾನ್‌ನ ಸಭೆಗಳನ್ನೂ ಸಂದರ್ಶಿಸಿದೆ. ಅದೇ ಸಮಯದಲ್ಲಿ, ಕುಟುಂಬವನ್ನು ಬೆಂಬಲಿಸಲು ನಾನು ಕೆಲಸವನ್ನು ಸಹ ಮಾಡಿದೆ. ಲೀಡೀಯ ಮತ್ತು ಮಕ್ಕಳು ಇಚ್ಛಾಪೂರ್ವಕವಾಗಿ ನನ್ನೊಂದಿಗೆ ಸಹಕರಿಸಿದರು.

ಕೆಲವೊಮ್ಮೆ ನಾನು ಕೆಲವು ವಾರಗಳ ವರೆಗೆ ಕುಟುಂಬದಿಂದ ದೂರವಿರುತ್ತಿದ್ದರೂ, ನನ್ನ ಮಕ್ಕಳಿಗೆ ತಂದೆಯ ಪ್ರೀತಿಯ ಕೊರತೆಯಾಗದಂತೆ ನೋಡಿಕೊಂಡೆ ಮತ್ತು ಅವರ ಆಧ್ಯಾತ್ಮಿಕ ಬೆಳವಣಿಗೆಗೆ ಸಹ ಸಹಾಯಮಾಡಿದೆ. ಲೀಡೀಯ ಮತ್ತು ನಾನು ಯಾವಾಗಲೂ ನಮ್ಮ ಮಕ್ಕಳಿಗೆ ಸಹಾಯನೀಡುವಂತೆ ಯೆಹೋವನಲ್ಲಿ ಪ್ರಾರ್ಥಿಸಿದೆವು, ಮತ್ತು ಮನುಷ್ಯ ಭಯವನ್ನು ಹೇಗೆ ಎದುರಿಸುವುದು ಹಾಗೂ ದೇವರೊಂದಿಗೆ ಒಂದು ಆಪ್ತ ಸಂಬಂಧವನ್ನು ಹೇಗೆ ಬೆಳೆಸಿಕೊಳ್ಳುವುದು ಎಂಬುದರ ಕುರಿತು ನಾವು ನಮ್ಮ ಮಕ್ಕಳೊಂದಿಗೆ ಚರ್ಚಿಸಿದೆವು. ನನ್ನ ಪ್ರಿಯ ಪತ್ನಿಯ ನಿಸ್ವಾರ್ಥ ಬೆಂಬಲದ ಹೊರತಾಗಿ ನಾನು ಖಂಡಿತವಾಗಿಯೂ ಸಂಚರಣ ಮೇಲ್ವಿಚಾರಕನಾಗಿ ಕೆಲಸಮಾಡಲು ಸಾಧ್ಯವಿರುತ್ತಿರಲಿಲ್ಲ. ರಾಷ್ಟ್ರ ಭದ್ರತಾ ಪಡೆಯ ಅಧಿಕಾರಿಯು ತಿಳಿಸಿದಂತೆ ಲೀಡೀಯ ಮತ್ತು ನಮ್ಮ ಇತರ ಸಹೋದರಿಯರು “ಬಲಹೀನ ಗುಂಪು”ಗಳಾಗಿರಲಿಲ್ಲ. ಅವರು ನಿಜವಾಗಿಯೂ ಬಲಶಾಲಿಗಳಾಗಿದ್ದರು. ಅವರು ಆಧ್ಯಾತ್ಮಿಕವಾದ ದೈತ್ಯರಾಗಿದ್ದರು!​—⁠ಫಿಲಿಪ್ಪಿ 4:13.

ಇಸವಿ 1988ರಲ್ಲಿ, ನಮ್ಮ ಎಲ್ಲಾ ಮಕ್ಕಳು ಬೆಳೆದ ಅನಂತರ, ನನ್ನನ್ನು ಕ್ರಮದ ಸಂಚರಣ ಮೇಲ್ವಿಚಾರಕನಾಗಿ ನೇಮಿಸಲಾಯಿತು. ನನ್ನ ಸರ್ಕಿಟ್‌ನಲ್ಲಿ ಮಧ್ಯ ಏಷಿಯಾದ ಹೆಚ್ಚಿನ ದೇಶಗಳು ಸೇರಿದ್ದವು. 1991ರಲ್ಲಿ ಹಿಂದಿನ ಸೋವಿಯೆಟ್‌ ಒಕ್ಕೂಟದಲ್ಲಿ ಯೆಹೋವನ ಸಾಕ್ಷಿಗಳ ಸಾರುವ ಕಾರ್ಯವು ಕಾನೂನುಬದ್ಧವಾಗಿ ರಿಜಿಸ್ಟರ್‌ ಮಾಡಲ್ಪಟ್ಟ ಅನಂತರ, ಅರ್ಹರಾದ ಹಾಗೂ ಆಧ್ಯಾತ್ಮಿಕವಾಗಿ ಪ್ರೌಢರಾದ ಇನ್ನಿತರ ಪುರುಷರು ಹಿಂದಿನ ಸೋವಿಯೆಟ್‌ ಒಕ್ಕೂಟದ ಏಷ್ಯಾ ಗಣರಾಜ್ಯಗಳಲ್ಲಿ ಸೇವೆಸಲ್ಲಿಸಲು ಆರಂಭಿಸಿದರು. ಇಂದು ಈ ದೇಶಗಳಲ್ಲಿ ಸುಮಾರು 14 ಸಂಚರಣ ಮೇಲ್ವಿಚಾರಕರು ಸೇವೆಸಲ್ಲಿಸುತ್ತಿದ್ದಾರೆ. ಕಳೆದ ವರುಷ ಕರ್ತನ ಮರಣದ ಜ್ಞಾಪಕಾಚರಣೆಗೆ 50,000 ಕ್ಕಿಂತಲೂ ಹೆಚ್ಚು ಮಂದಿ ಹಾಜರಾದರು.

ನೆನಸದಂಥ ಒಂದು ಆಮಂತ್ರಣ

ಇಸವಿ 1988ರ ಆರಂಭದಲ್ಲಿ, ಯೆಹೋವನ ಸಾಕ್ಷಿಗಳ ರಷ್ಯದ ಬ್ರಾಂಚ್‌ ಆಫೀಸಿನಿಂದ ನನಗೆ ಒಂದು ಫೋನ್‌ ಕರೆ ಬಂತು. “ಅನಟೋಲಿ, ನೀವು ಮತ್ತು ಲೀಡೀಯ ಪೂರ್ಣ ಸಮಯದ ಸೇವೆಯನ್ನು ಮಾಡುವುದರ ಕುರಿತು ಯೋಚಿಸಿದ್ದೀರೋ?” ಎಂಬ ಪ್ರಶ್ನೆಯನ್ನು ನನಗೆ ಕೇಳಲಾಯಿತು. ನಮ್ಮ ಮಕ್ಕಳಿಗಾಗಿ ಅಂಥ ಸುಯೋಗವನ್ನು ನಾವು ಆಲೋಚಿಸುತ್ತಿದ್ದೆವು. ವಾಸ್ತವದಲ್ಲಿ ನಮ್ಮ ಮಗ ಆಲ್ಯೆಕ್‌ ಈಗಾಗಲೇ ಸುಮಾರು ಐದು ವರುಷದಿಂದ ರಷ್ಯದ ಬ್ರಾಂಚ್‌ ಆಫೀಸಿನಲ್ಲಿ ಸೇವೆಸಲ್ಲಿಸುತ್ತಿದ್ದನು.

ನಮಗೆ ನೀಡಲಾದ ಆಮಂತ್ರಣದ ಕುರಿತು ನಾನು ಲೀಡೀಯಳಿಗೆ ತಿಳಿಸಿದಾಗ ಅವಳು ಕೇಳಿದ್ದು: “ನಮ್ಮ ಮನೆ, ತೋಟ, ಮತ್ತು ಇತರ ವಸ್ತುಗಳನ್ನು ಏನು ಮಾಡುವುದು?” ಪ್ರಾರ್ಥನೆ ಮತ್ತು ಚರ್ಚೆಯ ಅನಂತರ, ನಾವು ನಮ್ಮನ್ನೇ ನೀಡಿಕೊಳ್ಳಲು ನಿರ್ಧರಿಸಿದೆವು. ಸ್ವಲ್ಪ ಸಮಯದಲ್ಲಿಯೇ ಕಸಾಕ್‌ಸ್ತಾನ್‌ನ ಇಸಕ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಧಾರ್ಮಿಕ ಕೇಂದ್ರದಲ್ಲಿ ಸೇವೆಸಲ್ಲಿಸುವಂತೆ ನಮಗೆ ಆಮಂತ್ರಣವು ನೀಡಲ್ಪಟ್ಟಿತು. ಈ ಸ್ಥಳವು ಅಲ್ಮಾ-ಆಟಾದ ದೊಡ್ಡ ನಗರದ ಸಮೀಪದಲ್ಲಿತ್ತು. ಇಲ್ಲಿ ನಮ್ಮ ಬೈಬಲ್‌ ಸಾಹಿತ್ಯಗಳನ್ನು ಆ ಪ್ರದೇಶದಾದ್ಯಂತ ಮಾತಾಡುವ ಸ್ಥಳಿಕ ಭಾಷೆಯಲ್ಲಿ ಭಾಷಾಂತರಿಸುವ ಕೆಲಸವನ್ನು ಮಾಡಲಾಗುತ್ತಿತ್ತು.

ಇಂದು ನಮ್ಮ ಕುಟುಂಬ

ಬೈಬಲಿನ ಸತ್ಯವನ್ನು ನಮ್ಮ ಮಕ್ಕಳಿಗೆ ಕಲಿಸುವಂತೆ ದೇವರು ಸಹಾಯನೀಡಿದಕ್ಕಾಗಿ ನಾವು ಆತನಿಗೆ ಬಹಳ ಆಭಾರಿಗಳಾಗಿದ್ದೇವೆ! ನಮ್ಮ ಹಿರಿಯ ಮಗಳಾದ ವಾಲೆನ್ಟೀನಾಳು ವಿವಾಹವಾಗಿ 1993ರಲ್ಲಿ ತನ್ನ ಗಂಡನೊಂದಿಗೆ ಜರ್ಮನಿಯ ಇನ್‌ಗೆಲ್‌ಹೈಮ್‌ಗೆ ಹೋದಳು. ಅವರಿಗೆ ಮೂವರು ಮಕ್ಕಳಿದ್ದಾರೆ. ಎಲ್ಲರೂ ಯೆಹೋವನ ಸ್ನಾತ ಸಾಕ್ಷಿಗಳಾಗಿದ್ದಾರೆ.

ನಮ್ಮ ಎರಡನೆಯ ಮಗಳಾದ ಲೀಲ್ಯಾಳಿಗೆ ಸಹ ಕುಟುಂಬವಿದೆ. ಅವಳು ಮತ್ತು ಬೀಲಿಯೆ ವೊಡಿ ಎಂಬ ಸಭೆಯಲ್ಲಿ ಹಿರಿಯನಾಗಿರುವ ಅವಳ ಗಂಡನು, ದೇವರನ್ನು ಪ್ರೀತಿಸುವಂತೆ ತಮ್ಮ ಇಬ್ಬರು ಮಕ್ಕಳನ್ನು ಬೆಳೆಸುತ್ತಿದ್ದಾರೆ. ಆಲ್ಯೆಕ್‌, ಮೊಸ್ಕೋವಿನ ಒಬ್ಬ ಕ್ರೈಸ್ತ ಸಹೋದರಿಯಾದ ನಟಾಶಳನ್ನು ವಿವಾಹವಾದನು. ಅವರು ಸೈಂಟ್‌ ಪೀಟರ್ಸ್‌ಬರ್ಗ್‌ನ ಸಮೀಪವಿರುವ ರಷ್ಯದ ಬ್ರಾಂಚ್‌ ಆಫೀಸಿನಲ್ಲಿ ಒಟ್ಟಾಗಿ ಸೇವೆಸಲ್ಲಿಸುತ್ತಿದ್ದಾರೆ. 1995ರಲ್ಲಿ ನಮ್ಮ ಕಿರಿಯ ಮಗಳಾದ ನಟಾಶ ವಿವಾಹವಾದಳು ಮತ್ತು ಅವಳು ಜರ್ಮಿನಿಯ ರಷ್ಯನ್‌ ಭಾಷೆಯ ಸಭೆಯಲ್ಲಿ ಅವಳ ಗಂಡನೊಂದಿಗೆ ಸೇವೆಸಲ್ಲಿಸುತ್ತಿದ್ದಾಳೆ.

ಆಗಿಂದಾಗ್ಗೆ ನಾವು ಒಂದು ದೊಡ್ಡ ಕುಟುಂಬ ಒಕ್ಕೂಟಕ್ಕಾಗಿ ಒಟ್ಟುಗೂಡುತ್ತೇವೆ. ನಮ್ಮ ಮಕ್ಕಳು ಅವರ ಮಕ್ಕಳಿಗೆ ತಮ್ಮ “ಮಮ್ಮಿ” ಮತ್ತು “ಪಪ್ಪಾ” ಹೇಗೆ ಯೆಹೋವನಿಗೆ ಕಿವಿಗೊಟ್ಟರು ಹಾಗೂ ಸತ್ಯ ದೇವರಾದ ಯೆಹೋವನನ್ನು ಪ್ರೀತಿಸುವಂತೆ ಮತ್ತು ಆತನಿಗೆ ಸೇವೆಸಲ್ಲಿಸುವಂತೆ ತಮಗೆ ಹೇಗೆ ಕಲಿಸಿಕೊಟ್ಟರು ಎಂಬುದನ್ನು ತಿಳಿಸುತ್ತಾರೆ. ನಮ್ಮ ಮೊಮ್ಮಕ್ಕಳು ಆಧ್ಯಾತ್ಮಿಕವಾಗಿ ಬೆಳೆಯುವಂತೆ ಈ ಚರ್ಚೆಗಳು ಅವರಿಗೆ ಸಹಾಯಮಾಡುವುದನ್ನು ನಾನು ನೋಡಬಲ್ಲೆ. ನಮ್ಮ ಕಿರಿಯ ಮೊಮ್ಮಗನು, ನಾನು ಅವನ ಪ್ರಾಯದವನಾಗಿದ್ದಾಗ ಹೇಗಿದ್ದೆನೋ ಹಾಗೆಯೇ ಇದ್ದಾನೆ. ಕೆಲವೊಮ್ಮೆ ಅವನು ನನ್ನ ತೊಡೆಯನ್ನೇರಿ ಕುಳಿತುಕೊಂಡು, ನನಗೆ ಬೈಬಲ್‌ ಕಥೆಯನ್ನು ಹೇಳಿ ಎಂದು ಕೇಳುತ್ತಾನೆ. ಇದು ನನಗೆ, ನಾನು ನನ್ನ ಅಜ್ಜನ ತೊಡೆಯಲ್ಲಿ ಕುಳಿತುಕೊಂಡಿರುತ್ತಿದ್ದ ವಿಷಯವನ್ನು ಮತ್ತು ದೇವರನ್ನು ಪ್ರೀತಿಸುವಂತೆಯೂ ಆತನನ್ನು ಸೇವಿಸುವಂತೆಯೂ ಅವರು ನನಗೆ ಕಲಿಸುತ್ತಿದ್ದ ವಿಷಯವನ್ನು ನೆನಪಿಗೆ ತರುವಾಗ ಕಣ್ಣೀರು ತುಂಬಿಬರುತ್ತದೆ. (g04 10/22)

[ಪಾದಟಿಪ್ಪಣಿ]

^ ಈ ದೇಶದ ಹಿಂದಿನ ಹೆಸರಾದ ಮಾಲ್ಡೇವಿಯ ಅಥವಾ ಮಾಲ್ಡೇವಿಯದ ಸೋವಿಯೆಟ್‌ ರಿಪಬ್ಲಿಕ್‌ ಅನ್ನು ಉಪಯೋಗಿಸುವ ಬದಲು ಈ ಲೇಖನದಾದ್ಯಂತ ಮಾಲ್ಡೋವ ಎಂಬ ಸದ್ಯದ ಹೆಸರನ್ನು ಉಪಯೋಗಿಸಲಾಗಿದೆ.

[ಪುಟ 11ರಲ್ಲಿರುವ ಚಿತ್ರ]

ತಂದೆಯು ಸೆರೆಮನೆಗೆ ಒಯ್ಯಲ್ಪಡುವ ಮುನ್ನ, ಮಾಲ್ಡೋವದಲ್ಲಿರುವ ನಮ್ಮ ಮನೆಯ ಹೊರಗೆ ನನ್ನ ಹೆತ್ತವರೊಂದಿಗೆ

[ಪುಟ 12ರಲ್ಲಿರುವ ಚಿತ್ರ]

1959ರಲ್ಲಿ ಇನ್ನೂ ಗಡೀಪಾರಿನಲ್ಲಿರುವಾಗ ಲೀಡೀಯಳೊಂದಿಗೆ

[ಪುಟ 13ರಲ್ಲಿರುವ ಚಿತ್ರ]

ನಾನು ಸೆರೆಮನೆಯಲ್ಲಿರುವಾಗ ನಮ್ಮ ಮಗಳಾದ ವಾಲೆನ್ಟೀನಾಳೊಂದಿಗೆ ಲೀಡೀಯ

[ಪುಟ 15ರಲ್ಲಿರುವ ಚಿತ್ರ]

ಇಂದು ಲೀಡೀಯಳೊಂದಿಗೆ

[ಪುಟ 15ರಲ್ಲಿರುವ ಚಿತ್ರ]

ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ, ಎಲ್ಲರೂ ಯೆಹೋವನನ್ನು ಸೇವಿಸುತ್ತಿದ್ದಾರೆ!