ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ಸೋಲನ್ನು ಹೇಗೆ ಎದುರಿಸಬಲ್ಲೆ?

ನಾನು ಸೋಲನ್ನು ಹೇಗೆ ಎದುರಿಸಬಲ್ಲೆ?

ಯುವ ಜನರು ಪ್ರಶ್ನಿಸುವುದು . . .

ನಾನು ಸೋಲನ್ನು ಹೇಗೆ ಎದುರಿಸಬಲ್ಲೆ?

“ಈಗತಾನೇ ನನ್ನ ರಿಪೋರ್ಟ್‌ ಕಾರ್ಡ್‌ ಸಿಕ್ಕಿತು. ಪುನಃ ಅದೇ ನಾಲ್ಕು ಸಬ್ಜೆಕ್ಟ್‌ಗಳಲ್ಲಿ ಫೇಲಾಗಿದ್ದೇನೆ. ನಾನು ತುಂಬ ಪ್ರಯತ್ನಮಾಡಿದೆ, ಆದರೂ ಪುನಃ ಫೇಲಾದೆ.”​—⁠ಲಾರೆನ್‌, ವಯಸ್ಸು 15.

“ಸೋಲನ್ನು ಸಹಿಸುವುದು ಖಂಡಿತವಾಗಿಯೂ ಒಂದು ಹೋರಾಟವೇ ಸರಿ. ಆಗ ನಾವು ಸುಲಭವಾಗಿ ನಕರಾತ್ಮಕ ರೀತಿಯಲ್ಲಿ ಯೋಚಿಸಲಾರಂಭಿಸುತ್ತೇವೆ.”​—⁠ಜೆಸಿಕ, ವಯಸ್ಸು 19.

ಸೋಲು. ಈ ಪದದ ಕುರಿತು ನಿಮಗೆ ನೆನಸಲೂ ಮನಸ್ಸಿರಲಿಕ್ಕಿಲ್ಲ. ಆದರೂ ಆಗಿಂದಾಗ್ಗೆ ಅದು ನಮ್ಮೆಲ್ಲರ ಎದುರಿಗೆ ಬಂದು ನಿಲ್ಲುತ್ತದೆ. ಅದು ಶಾಲಾ ಪರೀಕ್ಷೆಯಲ್ಲಿ ಫೇಲಾಗುವುದೇ ಆಗಿರಬಹುದು, ಯಾವುದೊ ಮಾತನ್ನಾಡಿದ್ದರಿಂದ ಅಥವಾ ಯಾವುದೊ ಕೃತ್ಯದಿಂದ ನಮ್ಮನ್ನೇ ಪೇಚಾಟಕ್ಕೆ ಸಿಕ್ಕಿಸಿಕೊಂಡ ಸಂದರ್ಭವೇ ಆಗಿರಬಹುದು, ನಾವು ಪ್ರೀತಿಸುವ ವ್ಯಕ್ತಿಯೊಬ್ಬರಿಗೆ ನಿರಾಶೆಯನ್ನುಂಟುಮಾಡಿದ ಸಂದರ್ಭವಾಗಿರಬಹುದು ಇಲ್ಲವೆ ನೈತಿಕತೆಯ ವಿಷಯದಲ್ಲಿ ಒಂದು ಗಂಭೀರ ತಪ್ಪನ್ನು ಮಾಡಿದ್ದಾಗಿರಬಹುದು. ಏನೇ ಆದರೂ, ಸೋಲು ನಮ್ಮನ್ನು ಛಿದ್ರಛಿದ್ರಗೊಳಿಸಬಲ್ಲದು.

ನಿಜ, ಎಲ್ಲಾ ಮನುಷ್ಯರು ತಪ್ಪುಗಳನ್ನು ಮಾಡುತ್ತಾರೆ. “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” ಎಂದು ಬೈಬಲ್‌ ಹೇಳುತ್ತದೆ. (ರೋಮಾಪುರ 3:23) ಆದರೂ ನಮ್ಮಲ್ಲಿ ಕೆಲವರಿಗೆ, ಈ ರೀತಿಯಲ್ಲಿ ಬಿದ್ದಾಗ ಏಳುವದು ಸ್ವಲ್ಪ ಕಷ್ಟವಾಗಿರುತ್ತದೆ. ಜೇಸನ್‌ ಎಂಬ ಹೆಸರಿನ ಯುವಕನೊಬ್ಬನು ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸುತ್ತಾನೆ: “ನನ್ನನ್ನು ನಾನೇ ತುಂಬ ಟೀಕಿಸಿಕೊಳ್ಳುತ್ತೇನೆ. ನಾನೊಂದು ತಪ್ಪುಮಾಡುವಾಗ ಜನರು ನಗಬಹುದು. ಆದರೆ ಸಾಮಾನ್ಯವಾಗಿ ಆಮೇಲೆ ಅವರದನ್ನು ಮರೆತುಬಿಡುತ್ತಾರೆ. ಆದರೆ ನಾನದನ್ನು ಮರೆಯುವುದಿಲ್ಲ, ಯಾವಾಗಲೂ ಆ ತಪ್ಪಿನ ಬಗ್ಗೆಯೇ ಯೋಚಿಸುತ್ತಾ ಇರುತ್ತೇನೆ.”

ಸೋಲುಗಳ ಬಗ್ಗೆ ಸ್ವಲ್ಪ ಯೋಚಿಸುವುದು ತಪ್ಪೇನಲ್ಲ. ವಿಶೇಷವಾಗಿ ಅದು ನಮಗೆ ಅಭಿವೃದ್ಧಿಮಾಡುವಂತೆ ಪ್ರಚೋದಿಸುವಾಗಲಂತೂ ತಪ್ಪಾಗಿರುವುದಿಲ್ಲ. ಆದರೆ ದೀರ್ಘಕಾಲದ ಮತ್ತು ಸತತವಾದ ಸ್ವ-ಟೀಕೆಯು ಹಾನಿಕರವೂ, ಪ್ರಯೋಜನವಿಲ್ಲದ್ದೂ ಆಗಿರುತ್ತದೆ. ಜ್ಞಾನೋಕ್ತಿ 12:25 ಹೇಳುವುದು: “ಚಿಂತೆಯು ಮನುಷ್ಯನ ಸಂತೋಷವನ್ನು ತೆಗೆದುಹಾಕುತ್ತದೆ.”​—⁠ಪರಿಶುದ್ಧ ಬೈಬಲ್‌. *

ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಎಪಫ್ರೊದೀತ ಎಂಬ ವ್ಯಕ್ತಿಯನ್ನು ತೆಗೆದುಕೊಳ್ಳಿ. ಅಪೊಸ್ತಲ ಪೌಲನ ವೈಯಕ್ತಿಕ ಸಹಾಯಕನಾಗಿ ಸೇವೆಸಲ್ಲಿಸಲು ಅವನನ್ನು ರೋಮ್‌ಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿ ತಲಪಿದಾಗ ಎಪಫ್ರೊದೀತನು ಅಸ್ವಸ್ಥನಾಗಿ, ತನ್ನ ನೇಮಕವನ್ನು ಪೂರೈಸಲು ಅಶಕ್ತನಾದನು. ಆಗ ಪೌಲನೇ ಅವನ ಶುಶ್ರೂಷೆಮಾಡಬೇಕಾಯಿತು! ಎಪಫ್ರೊದೀತನನ್ನು ಮನೆಗೆ ಕಳುಹಿಸಲು ಪೌಲನು ಏರ್ಪಾಡುಗಳನ್ನು ಮಾಡಿದನು ಮತ್ತು ಈ ನಂಬಿಗಸ್ತ ಪುರುಷನು ಖಿನ್ನತೆಗೂ ಒಳಗಾಗಿದ್ದಾನೆಂದು ಸ್ಥಳಿಕ ಸಭೆಯವರಿಗೆ ಸುದ್ದಿತಲಪಿಸಿದನು. ಅವನ ಖಿನ್ನತೆಗೆ ಕಾರಣವೇನಾಗಿತ್ತು? ಅವನ ಸಭೆಯವರು ‘ಅವನು [ಎಪಫ್ರೊದೀತನು] ಅಸ್ವಸ್ಥನಾಗಿದ್ದ ವರ್ತಮಾನವನ್ನು ಕೇಳಿದ್ದು’ ಆಗಿತ್ತೆಂದು ಪೌಲನು ವಿವರಿಸಿದನು. (ಫಿಲಿಪ್ಪಿ 2:25, 26) ತಾನು ಅಸ್ವಸ್ಥನಾಗಿ ತನ್ನ ಕೆಲಸಗಳನ್ನು ಪೂರೈಸಲು ಅಶಕ್ತನಾಗಿದ್ದೇನೆಂಬುದು ಇತರರಿಗೆ ತಿಳಿದುಬಂದಿದೆಯೆಂದು ಎಪಫ್ರೊದೀತನಿಗೆ ಗೊತ್ತಾದಾಗ, ತಾನೊಬ್ಬ ಪ್ರಯೋಜನಕ್ಕೆ ಬಾರದ ವ್ಯಕ್ತಿ ಎಂಬ ಭಾವನೆ ಅವನಲ್ಲಿ ಉಂಟಾಗಿರಬಹುದು. ಹೀಗಿರುವುದರಿಂದ ಅವನು ಖಿನ್ನನಾದ್ದದ್ದರಲ್ಲಿ ಆಶ್ಚರ್ಯವೇನಿಲ್ಲ!

ಸೋಲಿನಿಂದಾಗುವ ನೋವುಭರಿತ ಅನಿಸಿಕೆಗಳನ್ನು ದೂರಮಾಡಲು ಯಾವುದಾದರೂ ಮಾರ್ಗವಿದೆಯೊ?

ನಿಮ್ಮ ಇತಿಮಿತಿಗಳ ಬಗ್ಗೆ ಅರಿವುಳ್ಳವರಾಗಿರಿ

ಸೋಲುಣ್ಣುವುದರ ಸಾಧ್ಯತೆಯನ್ನು ಕಡಿಮೆಗೊಳಿಸುವ ಒಂದು ವಿಧ, ನಿಮಗಾಗಿ ನ್ಯಾಯಸಮ್ಮತವಾದ, ಕೈಗೆಟಕುವಂಥ ರೀತಿಯ ಗುರಿಗಳನ್ನಿಡುವುದಾಗಿದೆ. “ಮಿತವರ್ತಿಗಳಲ್ಲಿದೆ ವಿವೇಕ” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 11:​2, NW; 16:​18) ಮಿತಭಾವದ ವ್ಯಕ್ತಿಗೆ ತನ್ನ ಇತಿಮಿತಿಗಳ ಅರಿವಿರುತ್ತದೆ. ನಿಮ್ಮ ಕೌಶಲಗಳನ್ನೊ ಸಾಮರ್ಥ್ಯಗಳನ್ನೊ ಉತ್ತಮಗೊಳಿಸಲಿಕ್ಕಾಗಿ ನೀವು ಕೆಲವೊಮ್ಮೆ ಕೆಲವೊಂದು ಪಂಥಾಹ್ವಾನಗಳನ್ನು ಸ್ವೀಕರಿಸುವುದು ಒಳ್ಳೇದು ನಿಜ. ಆದರೆ ವಾಸ್ತವವಾದಿಗಳಾಗಿರಿ. ನೀವು ಗಣಿತದಲ್ಲಿ ಒಬ್ಬ ಪಂಡಿತರಾಗಿರಲಿಕ್ಕಿಲ್ಲ, ಇಲ್ಲವೆ ಒಬ್ಬ ಸ್ಟಾರ್‌ ಕ್ರೀಡಾಪಟುವಿಗಿರುವಷ್ಟೇ ಸುಲಲಿತ ಮತ್ತು ಸುಸಂಘಟಿತ ಭಾವಭಂಗಿಗಳು ನಿಮಗಿಲ್ಲದಿರಬಹುದು. ಮೈಕಲ್‌ ಎಂಬ ಒಬ್ಬ ಯುವಕನು ಒಪ್ಪಿಕೊಂಡದ್ದು: “ನಾನು ಕ್ರೀಡೆಯಲ್ಲಿ ಅಷ್ಟೇನೂ ಪ್ರವೀಣನಲ್ಲವೆಂದು ಬಲ್ಲೆ. ಆದುದರಿಂದಲೇ ನಾನು ಆಟವಾಡುತ್ತೇನಾದರೂ ಅದೇ ಸಮಯದಲ್ಲಿ ನಾನು ಸಾಧಿಸಲಾರೆ ಎಂದು ಗೊತ್ತಿರುವಂಥ ರೀತಿಯ ಯಾವುದೇ ಗುರಿಗಳನ್ನಿಡುವುದಿಲ್ಲ.” ಅವನು ವಿವರಿಸುವುದು: “ನಿಮ್ಮಿಂದ ಸಾಧಿಸಲು ಸಾಧ್ಯವಿರುವಂಥ ಗುರಿಗಳನ್ನೇ ನೀವು ಇಟ್ಟುಕೊಳ್ಳಬೇಕು.”

ಈವಾನ್‌ ಎಂಬ 14 ವರ್ಷ ಪ್ರಾಯದ ಹುಡುಗಿಯ ಮನೋಭಾವವನ್ನು ಪರಿಗಣಿಸಿರಿ. ಅವಳು ಸ್ಪೈನಾ ಬೈಫಿಡಾ ಎಂಬ ರೋಗ ಮತ್ತು ಮಸ್ತಿಷ್ಕ ಲಕ್ವದಿಂದ ಪೀಡಿತಳಾಗಿದ್ದಾಳೆ. ಈವಾನ್‌ ಹೇಳುವುದು: “ಇತರರಂತೆ ನಾನು ನಡೆಯಲಾರೆ, ಕುಣಿಯಲಾರೆ, ಓಡಲಾರೆ. ಬೇರೆಯವರು ಏನು ಮಾಡುತ್ತಿದ್ದಾರೊ ಅದನ್ನೇ ನಾನು ಮಾಡಲು ಆಗದಿರುವಾಗ ನನಗೆ ನನ್ನ ಮೇಲೆಯೇ ಜುಗುಪ್ಸೆಹುಟ್ಟುತ್ತದೆ. ಹೆಚ್ಚಿನ ಜನರು ಇದನ್ನು ನಿಜವಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಆದರೂ ನಾನು ಅಂಥ ಭಾವನೆಗಳನ್ನು ತಾಳಿಕೊಳ್ಳಬಲ್ಲೆ.” ಅವಳು ಕೊಡುವ ಸಲಹೆಯೇನು? “ಪ್ರಯತ್ನಿಸುತ್ತಾ ಇರಿ. ಅದನ್ನು ನಿಲ್ಲಿಸಬೇಡಿ. ನೀವು ಸೋಲುವಲ್ಲಿ ಇಲ್ಲವೆ ನಿಮಗೆ ತೃಪ್ತಿಯಾಗದಿರುವಲ್ಲಿಯೂ ಬಿಟ್ಟುಕೊಡಬೇಡಿರಿ. ನಿಮ್ಮಿಂದ ಸಾಧ್ಯವಿರುವಷ್ಟನ್ನು ಮಾಡುತ್ತಾ ಇರಿ ಅಷ್ಟೇ.”

ಅದೇ ಸಮಯದಲ್ಲಿ, ಇತರರೊಂದಿಗೆ ನಿಮ್ಮನ್ನು ಹೋಲಿಸುವ ಮೂಲಕ ನಿಮ್ಮನ್ನೇ ಪೀಡಿಸಿಕೊಳ್ಳದಿರಿ. 15 ವರ್ಷ ಪ್ರಾಯದ ಆ್ಯಂಡ್ರೂ ಹೇಳುವುದು: “ನಾನು ಇತರರೊಂದಿಗೆ ನನ್ನನ್ನು ಹೋಲಿಸದಿರಲು ಪ್ರಯತ್ನಿಸುತ್ತೇನೆ. ಏಕೆಂದರೆ ನಮಗೆಲ್ಲರಿಗೂ ಬೇರೆಬೇರೆ ಪ್ರಮಾಣದ ಶಕ್ತಿ ಹಾಗೂ ಸಾಮರ್ಥ್ಯಗಳಿವೆ.” ಆ್ಯಂಡ್ರೂವಿನ ಹೇಳಿಕೆಗಳು, ಬೈಬಲಿನ ಗಲಾತ್ಯ 6:​3, 4ರಲ್ಲಿರುವ ಈ ಮಾತುಗಳನ್ನು ಪ್ರತಿಧ್ವನಿಸುತ್ತವೆ: “ಒಬ್ಬನು ತನ್ನನ್ನು ಮತ್ತೊಬ್ಬನೊಡನೆ ಹೋಲಿಸಿಕೊಳ್ಳಕೂಡದು. ಪ್ರತಿಯೊಬ್ಬ ವ್ಯಕ್ತಿಯು ತನ್ನ ನಡತೆಯನ್ನು ತಾನೇ ವಿಮರ್ಶಿಸಿಕೊಳ್ಳಲಿ. ಆಗ ಅವನು ತನ್ನ ಕಾರ್ಯಗಳ ಬಗ್ಗೆ ಹೆಚ್ಚಳಪಡಲು ಸಾಧ್ಯವಾಗುವುದು.”​—⁠ಪರಿಶುದ್ಧ ಬೈಬಲ್‌.*

ಇತರರ ಉಚ್ಚ ನಿರೀಕ್ಷಣೆಗಳು

ಆದರೆ ಕೆಲವೊಮ್ಮೆ ಬೇರೆಯವರು, ಅಂದರೆ ಹೆತ್ತವರಾಗಲಿ, ಶಿಕ್ಷಕರಾಗಲಿ ಇನ್ನಿತರರಾಗಲಿ ನಿಮ್ಮ ಮೇಲೆ ಬಹಳ ಉಚ್ಚವಾದ ನಿರೀಕ್ಷಣೆಗಳನ್ನು ಹೇರುತ್ತಾರೆ. ಆಗ ನೀವೆಷ್ಟೇ ಪ್ರಯತ್ನಿಸಿದರೂ, ಅವರನ್ನು ಮೆಚ್ಚಿಸಲಿಕ್ಕೆ ಸಾಧ್ಯವೇ ಇಲ್ಲವೆಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ. ಇದಲ್ಲದೆ, ಅಂಥವರು ನಿಮ್ಮನ್ನು ಕೆರಳಿಸುವಂಥ ಇಲ್ಲವೆ ಬಹುಶಃ ಜಜ್ಜಿಬಿಡುವಂಥ ಮಾತುಗಳಲ್ಲಿ ತಮ್ಮ ಹತಾಶೆಯನ್ನು ವ್ಯಕ್ತಪಡಿಸಬಹುದು. (ಯೋಬ 19:⁠2) ಆದರೆ, ನಿಮ್ಮ ಹೆತ್ತವರು ಮತ್ತು ಇತರರು ನಿಮ್ಮನ್ನು ಬೇಕುಬೇಕೆಂದೇ ನೋಯಿಸಲು ಪ್ರಯತ್ನಿಸುತ್ತಿಲ್ಲವೆಂಬುದನ್ನು ನೀವು ಪ್ರಾಯಶಃ ಗ್ರಹಿಸಿರಬಹುದು. ಜೆಸಿಕ ಹೇಳುವಂತೆ, “ಅವರು ನಿಮ್ಮನ್ನು ಹೇಗೆ ಬಾಧಿಸುತ್ತಿದ್ದಾರೆಂಬುದರ ಕುರಿತು ಅವರಿಗೇ ಅರಿವಿಲ್ಲದಿರಬಹುದು. ಅಥವಾ ಕೆಲವೊಮ್ಮೆ ನೀವೇ ತಪ್ಪುತಿಳಿದುಕೊಂಡಿರಬಹುದು.”

ಇನ್ನೊಂದು ಬದಿಯಲ್ಲಿ, ಸ್ವತಃ ನೀವೇ ನೋಡಲಾಗದಂಥ ಯಾವುದೊ ವಿಷಯವನ್ನು ಅವರು ಗಮನಿಸಿರಬಹುದೊ? ಉದಾಹರಣೆಗೆ ನೀವು ವಾಸ್ತವದಲ್ಲಿ ನಿಮ್ಮ ಸಾಮರ್ಥ್ಯಗಳನ್ನು ಅಲ್ಪವೆಂದೆಣಿಸುತ್ತಾ ನಿಮ್ಮನ್ನೇ ಕಡಿಮೆ ಅಂದಾಜುಮಾಡುತ್ತಿದ್ದೀರೆಂದು ಅವರು ನಿಮಗೆ ಹೇಳಬಹುದು. ಅವರ ಮಾತುಗಳನ್ನು ಅಲಕ್ಷ್ಯಮಾಡುವ ಬದಲಿಗೆ, ‘ಉಪದೇಶವನ್ನು ಕೇಳುವುದು’ ವಿವೇಕಯುತವಾದದ್ದಾಗಿದೆ. (ಜ್ಞಾನೋಕ್ತಿ 8:33) ಮೈಕಲ್‌ ವಿವರಿಸುವುದು: “ಅದು ನಿಮ್ಮ ಸ್ವಂತ ಒಳಿತಿಗಾಗಿದೆ. ನೀವು ಇನ್ನೂ ಉತ್ತಮವಾಗಿ ಮಾಡಬೇಕು, ಹೆಚ್ಚು ಅಭಿವೃದ್ಧಿಮಾಡಬೇಕೆಂದು ಅವರು ಬಯಸುತ್ತಾರೆ. ಅದನ್ನು ಒಂದು ಸವಾಲಾಗಿ ತೆಗೆದುಕೊಳ್ಳಿ.”

ಆದರೆ ಹೆತ್ತವರ ಮತ್ತು ಇತರರ ಬೇಡಿಕೆಗಳು ನಿಮ್ಮಿಂದ ತೀರಿಸಲಾಗದಷ್ಟು ವಿಪರೀತವಾಗಿವೆ, ನೀವು ಸೋಲುವುದು ಖಂಡಿತವೆಂದು ನಿಮಗನಿಸುವಲ್ಲಿ ಆಗೇನು? ಆಗ, ಅವರೊಂದಿಗೆ ಗೌರವಪೂರ್ವಕವಾಗಿ ಆದರೆ ಮುಚ್ಚುಮರೆಯಿಲ್ಲದೆ ಮಾತಾಡಿ, ನಿಮ್ಮ ಅನಿಸಿಕೆಗಳನ್ನು ಅವರಿಗೆ ತಿಳಿಸುವುದು ವಿವೇಕದ ಸಂಗತಿ. ನೀವು ಜೊತೆಗೂಡಿ, ಹೆಚ್ಚು ವಾಸ್ತವಿಕವಾಗಿರುವಂಥ ಕೆಲವು ಗುರಿಗಳನ್ನು ಇಡಲು ಶಕ್ತರಾಗಬಹುದು.

ನಿಮ್ಮ ಆಧ್ಯಾತ್ಮಿಕ ಜೀವನದಲ್ಲಿ “ಸೋಲುಗಳು”

ಯೆಹೋವನ ಸಾಕ್ಷಿಗಳ ಪೈಕಿ ಯುವ ಜನರಿಗೆ ದೇವರ ಶುಶ್ರೂಷಕರಾಗಿ ತಮ್ಮ ನೇಮಕಗಳನ್ನು ಪೂರೈಸುವ ಪಂಥಾಹ್ವಾನವಿರುತ್ತದೆ. (2 ತಿಮೊಥೆಯ 4:⁠5) ನೀವೊಬ್ಬ ಯುವ ಕ್ರೈಸ್ತರಾಗಿರುವಲ್ಲಿ, ನಿಮಗೆ ಕೆಲವೊಮ್ಮೆ ನೀವು ಅನರ್ಹರೆಂಬ ಭಾವನೆಯು ಕಾಡಬಹುದು. ಕೂಟಗಳಲ್ಲಿ ನೀವು ಒಳ್ಳೇ ಉತ್ತರಗಳನ್ನು ಕೊಡುತ್ತಿಲ್ಲವೆಂದು ನಿಮಗನಿಸುತ್ತಿರಬಹುದು. ಅಥವಾ, ಬೈಬಲಿನ ಸಂದೇಶವನ್ನು ಇತರರಿಗೆ ವಿವರಿಸುವುದು ನಿಮಗೆ ಕಷ್ಟಕರವಾಗಿರಬಹುದು. ಉದಾಹರಣೆಗೆ ಜೆಸಿಕ ಹದಿಪ್ರಾಯದ ಹುಡುಗಿಯೊಂದಿಗೆ ಬೈಬಲ್‌ ಅಧ್ಯಯನ ಮಾಡಿದಳು. ಸ್ವಲ್ಪ ಸಮಯದ ವರೆಗೆ ಅವಳ ಬೈಬಲ್‌ ವಿದ್ಯಾರ್ಥಿಯು ಚೆನ್ನಾಗಿ ಪ್ರಗತಿಮಾಡಿದಳು. ಆದರೆ, ತಟ್ಟನೆ ಒಂದು ದಿನ ಆ ಹುಡುಗಿಯು ತಾನು ದೇವರನ್ನು ಸೇವಿಸಲು ಇಚ್ಛಿಸುವುದಿಲ್ಲವೆಂದು ನಿರ್ಣಯಮಾಡಿದಳು. ಜೆಸಿಕ ಜ್ಞಾಪಿಸಿಕೊಳ್ಳುವುದು: “ಒಬ್ಬ ಶಿಕ್ಷಕಿಯೋಪಾದಿ ನಾನು ಮಾಡಿದ ಕೆಲಸದಲ್ಲಿ ಸೋತುಹೋದೆ ಎಂದು ನನಗನಿಸಿತು.”

ಜೆಸಿಕ ಆ ಭಾವನೆಗಳೊಂದಿಗೆ ಹೇಗೆ ಹೋರಾಡಿದಳು? ಮೊಟ್ಟಮೊದಲಾಗಿ ಅವಳು ಅರ್ಥಮಾಡಿಕೊಳ್ಳಬೇಕಾಗಿದ್ದ ಸಂಗತಿಯೇನೆಂದರೆ, ಅವಳ ವಿದ್ಯಾರ್ಥಿಯು ಅವಳನ್ನಲ್ಲ, ಬದಲಾಗಿ ದೇವರನ್ನು ತಿರಸ್ಕರಿಸಿದ್ದಳು. ಹಲವಾರು ಲೋಪದೋಷಗಳಿದ್ದ ದೇವಭಕ್ತ ಪುರುಷನಾದ ಪೇತ್ರನ ಬೈಬಲ್‌ ಮಾದರಿಯ ಕುರಿತು ಧ್ಯಾನಿಸುವುದರಿಂದಲೂ ಅವಳಿಗೆ ಸಹಾಯ ಸಿಕ್ಕಿತು. ಅವಳು ವಿವರಿಸುವುದು: “ಪೇತ್ರನು ತನ್ನ ಬಲಹೀನತೆಗಳನ್ನು ಜಯಿಸಿದನು, ಮತ್ತು ಯೆಹೋವನು ಅವನನ್ನು ರಾಜ್ಯದಭಿರುಚಿಗಳನ್ನು ಪ್ರವರ್ಧಿಸಲು ಅನೇಕ ವಿಧಗಳಲ್ಲಿ ಉಪಯೋಗಿಸಿದನೆಂದು ಬೈಬಲ್‌ ತೋರಿಸುತ್ತದೆ.” (ಲೂಕ 22:​31-34, 60-62) ಒಂದುವೇಳೆ ಒಬ್ಬ ಬೋಧಕರಾಗಿ ನಿಮಗಿರುವ ಕೌಶಲಗಳನ್ನು ನೀವು ಉತ್ತಮಗೊಳಿಸಬೇಕಾಗಿರುವಲ್ಲಿ, ಇದಕ್ಕಾಗಿ ಸ್ವಲ್ಪ ಹೆಚ್ಚು ಪ್ರಯತ್ನವನ್ನು ಏಕೆ ಹಾಕಬಾರದು? (1 ತಿಮೊಥೆಯ 4:13) ಸಭೆಯಲ್ಲಿರುವ ಪ್ರೌಢ ವ್ಯಕ್ತಿಗಳ ಸಹಾಯವನ್ನು ಪಡೆದುಕೊಳ್ಳಿರಿ. ಅವರು ನಿಮಗೆ ಕಲಿಸಬಲ್ಲರು ಮತ್ತು ತರಬೇತಿಕೊಡಬಲ್ಲರು.

ಆದರೆ, ಮನೆಯಿಂದ ಮನೆಯ ಶುಶ್ರೂಷೆಯು ನಿಮಗೆ ವಿಶೇಷವಾಗಿ ಹೆಚ್ಚು ಪಂಥಾಹ್ವಾನಕಾರಿಯಾಗಿರಬಹುದು. ಜೇಸನ್‌ ಒಪ್ಪಿಕೊಳ್ಳುವುದು: “ಪ್ರತಿ ಸಲ ಒಬ್ಬ ಮನೆಯವನು ನನಗೆ ಬೇಡವೆಂದು ಹೇಳಿ ಬಾಗಿಲನ್ನು ಮುಚ್ಚುವಾಗ, ನನಗೆ ಒಂದು ಚಿಕ್ಕ ಸೋಲನ್ನು ಅನುಭವಿಸಿದಂತಾಗುತ್ತದೆ.” ಅವನಿದನ್ನು ಹೇಗೆ ನಿಭಾಯಿಸುತ್ತಾನೆ? “ನಾನು ನಿಜವಾಗಿ ಸೋತಿಲ್ಲವೆಂದು ನೆನಪಿನಲ್ಲಿಡಬೇಕಾಗುತ್ತದೆ.” ಹೌದು, ದೇವರು ಅವನಿಗೆ ಏನನ್ನು ಮಾಡಲು ಹೇಳಿದ್ದಾನೊ ಅದರಲ್ಲಿ ಅಂದರೆ ಸಾರುವುದರಲ್ಲಿ ಅವನು ಯಶಸ್ವಿಯಾಗಿದ್ದಾನೆ! ತಿರಸ್ಕರಿಸುವಿಕೆಯನ್ನು ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗಿದ್ದರೂ, ಎಲ್ಲಾ ಜನರು ಬೈಬಲಿನ ಸಂದೇಶವನ್ನು ತಿರಸ್ಕರಿಸದಿರುವರು. “ಕಿವಿಗೊಡುವ ಒಬ್ಬ ವ್ಯಕ್ತಿಯು ಸಿಗುವಾಗ, ನನ್ನ ಪ್ರಯತ್ನವು ಸಾರ್ಥಕವೆಂದು ನನಗನಿಸುತ್ತಿರುತ್ತದೆ” ಎಂದು ಹೇಳುತ್ತಾನೆ ಜೇಸನ್‌.

ಗಂಭೀರವಾದ ತಪ್ಪುಗಳು

ನೀವೊಂದು ಗಂಭೀರವಾದ ತಪ್ಪನ್ನು, ಇಲ್ಲವೆ ಗಂಭೀರವಾದ ಪಾಪವನ್ನೇ ಮಾಡುವಲ್ಲಿ ಆಗೇನು? 19 ವರ್ಷದವಳಾಗಿರುವ ಆ್ಯನ * ಇಂಥ ಒಂದು ತಪ್ಪನ್ನು ಮಾಡಿದಳು. ಅವಳು ಒಪ್ಪಿಕೊಳ್ಳುವುದು: “ನಾನು ಸಭೆಗೆ, ನನ್ನ ಕುಟುಂಬಕ್ಕೆ ಮತ್ತು ವಿಶೇಷವಾಗಿ ಯೆಹೋವ ದೇವರಿಗೆ ನಿರಾಶೆಯನ್ನುಂಟುಮಾಡಿದೆ.” ನೀವು ಮಾಡಿರುವಂಥ ಗಂಭೀರವಾದ ತಪ್ಪಿನಿಂದ ಚೇತರಿಸಿಕೊಳ್ಳಲಿಕ್ಕಾಗಿ, ಪಶ್ಚಾತ್ತಾಪಪಟ್ಟು ಸಭೆಯಲ್ಲಿರುವ ಆಧ್ಯಾತ್ಮಿಕ ಹಿರೀಪುರುಷರ ಸಹಾಯವನ್ನು ಕೋರಬೇಕು. (ಯಾಕೋಬ 5:​14-16) ಆ್ಯನ ಒಬ್ಬ ಹಿರಿಯನ ಸಹಾಯಕಾರಿ ಮಾತುಗಳನ್ನು ಜ್ಞಾಪಿಸಿಕೊಳ್ಳುವುದು: “ರಾಜ ದಾವೀದನು ಮಾಡಿದಂಥ ಎಲ್ಲ ತಪ್ಪುಗಳ ಎದುರಿನಲ್ಲೂ ಯೆಹೋವನು ಅವನನ್ನು ಕ್ಷಮಿಸಲು ಸಿದ್ಧನಿದ್ದನು ಮತ್ತು ದಾವೀದನು ಚೇತರಿಸಿಕೊಂಡನು ಎಂದು ಅವರು ಹೇಳಿದರು. ಈ ಮಾತು ನನಗೆ ಸಹಾಯಮಾಡಿತು.” (2 ಸಮುವೇಲ 12:​9, 13; ಕೀರ್ತನೆ 32:⁠5) ನೀವು ಸಹ, ಆಧ್ಯಾತ್ಮಿಕವಾಗಿ ನಿಮ್ಮನ್ನೇ ಬಲಪಡಿಸಿಕೊಳ್ಳಲು ನಿಮ್ಮಿಂದ ಏನು ಸಾಧ್ಯವೊ ಅದೆಲ್ಲವನ್ನೂ ಮಾಡಬೇಕಾಗಿದೆ. ಆ್ಯನ ಹೇಳುವುದು: “ನಾನು ಕೀರ್ತನೆ ಪುಸ್ತಕವನ್ನು ಪುನಃ ಪುನಃ ಓದುತ್ತೇನೆ, ಮತ್ತು ಉತ್ತೇಜನದಾಯಕವಾದ ವಚನಗಳನ್ನು ಬರೆದಿಡಲು ಒಂದು ಪುಸ್ತಕವನ್ನಿಟ್ಟಿದ್ದೇನೆ.” ಕಾಲಾನಂತರ, ಒಬ್ಬ ವ್ಯಕ್ತಿಯು ಗಂಭೀರವಾದ ಪಾಪದಿಂದಲೂ ಚೇತರಿಸಿಕೊಳ್ಳಸಾಧ್ಯವಿದೆ. ಜ್ಞಾನೋಕ್ತಿ 24:16 ಹೇಳುವುದು: “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು.”

ಸೋಲಿನಿಂದ ಚೇತರಿಸಿಕೊಳ್ಳುವುದು

ಚಿಕ್ಕಪುಟ್ಟ ಸೋಲುಗಳು ಸಹ ನಿಮ್ಮ ಮನಸ್ಸನ್ನು ನೋಯಿಸಬಲ್ಲದೆಂಬುದು ನಿಜ. ಅವುಗಳಿಂದ ಚೇತರಿಸಿಕೊಳ್ಳಲು ನಿಮಗೇನು ಸಹಾಯಮಾಡಬಲ್ಲದು? ಪ್ರಥಮವಾಗಿ, ನಿಮ್ಮ ತಪ್ಪುಗಳನ್ನು ವಾಸ್ತವಿಕ ರೀತಿಯಲ್ಲಿ ಎದುರಿಸಿರಿ. ಮೈಕಲ್‌ ಶಿಫಾರಸ್ಸುಮಾಡುವುದು: “‘ಏನು ಮಾಡಿದರೂ ನಾನು ಸೋತುಹೋಗುವೆ’ ಎಂದು ನೆನಸುವ ಬದಲಿಗೆ, ನೀವು ಯಾವ ಕೆಲಸದಲ್ಲಿ ಸೋತುಹೋದಿರಿ ಎಂಬುದನ್ನು ನಿರ್ದಿಷ್ಟವಾಗಿ ಗುರುತಿಸಿ, ಅದಕ್ಕೆ ಕಾರಣಗಳೇನೆಂಬುದನ್ನು ಪತ್ತೆಹಚ್ಚಿರಿ. ಹೀಗೆ ಮಾಡುವುದರಿಂದ ನೀವು ಮುಂದಿನ ಸಲ ಆ ಕೆಲಸವನ್ನು ಹೆಚ್ಚು ಉತ್ತಮವಾಗಿ ಮಾಡಶಕ್ತರಾಗುವಿರಿ.”

ಅಷ್ಟುಮಾತ್ರವಲ್ಲದೆ, ನಿಮ್ಮ ಅನಿಸಿಕೆಗಳಲ್ಲೇ ತೀರ ಮುಳುಗಿಹೋಗಬೇಡಿರಿ. “ನಗುವ ಸಮಯ”ವೂ ಇದೆ, ಮತ್ತು ಇದರಲ್ಲಿ ಸ್ವತಃ ನಿಮ್ಮ ಬಗ್ಗೆಯೇ ನಗುವುದೂ ಸೇರಿರಬಹುದು! (ಪ್ರಸಂಗಿ 3:⁠4) ನಿಮಗೆ ನಿರುತ್ಸಾಹವಾಗುವಲ್ಲಿ, ನೀವು ಚೆನ್ನಾಗಿ ಮಾಡುವಂಥ ಒಂದು ವಿಷಯದ ಕಡೆಗೆ, ಪ್ರಾಯಶಃ ಒಂದು ಹವ್ಯಾಸ ಅಥವಾ ಒಂದು ಕ್ರೀಡೆಯ ಕಡೆಗೆ ನಿಮ್ಮ ಗಮನವನ್ನು ತಿರುಗಿಸಿರಿ. ನಿಮ್ಮ ನಂಬಿಕೆಯ ಕುರಿತಾಗಿ ಇತರರೊಂದಿಗೆ ಮಾತಾಡುವುದರಂಥ ‘ಸತ್ಕಾರ್ಯಗಳಲ್ಲಿ ಐಶ್ವರ್ಯವಂತ’ರಾಗಿರುವುದು, ನೀವು ನಿಮ್ಮ ಬಗ್ಗೆ ಹೆಚ್ಚು ಆತ್ಮವಿಶ್ವಾಸದಿಂದಿರಲು ಸಹಾಯಮಾಡಬಲ್ಲದು.​—⁠1 ತಿಮೊಥೆಯ 6:⁠18.

ಕೊನೆಯದಾಗಿ ಹೇಳುವುದಾದರೆ, “ಯೆಹೋವನು ಕನಿಕರವೂ ದಯೆಯೂ . . . ಉಳ್ಳವನು. ಆತನು ಯಾವಾಗಲೂ ತಪ್ಪುಹುಡುಕುವವನಲ್ಲ” ಎಂಬುದನ್ನು ನೆನಪಿನಲ್ಲಿಡಿರಿ. (ಕೀರ್ತನೆ 103:8, 9) ಜೆಸಿಕ ಹೇಳುವುದು: “ನಾನು ಯೆಹೋವ ದೇವರಿಗೆ ಹೆಚ್ಚು ಸಮೀಪವಾಗುತ್ತಾ ಇರುವಾಗ, ನಾನು ಅನುಭವಿಸುವ ಯಾವುದೇ ವಿಷಯಗಳಲ್ಲಿ ಆತನ ಬೆಂಬಲ ಮತ್ತು ಸಹಾಯವಿದೆಯೆಂದು ಹೆಚ್ಚೆಚ್ಚು ಭರವಸೆಯಿಂದಿರಬಲ್ಲೆ ಎಂದು ನನಗನಿಸುತ್ತದೆ.” ಹೌದು, ನಿಮಗೆ ಕುಂದುಕೊರತೆಗಳಿದ್ದರೂ ನಿಮ್ಮ ಸ್ವರ್ಗೀಯ ಪಿತನಿಗೆ ನೀವು ಅಮೂಲ್ಯರಾಗಿದ್ದೀರಿ! (g04 11/22)

[ಪಾದಟಿಪ್ಪಣಿಗಳು]

^ Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಹೆಸರನ್ನು ಬದಲಾಯಿಸಲಾಗಿದೆ.

[ಪುಟ 24ರಲ್ಲಿರುವ ಚಿತ್ರ]

ನಿಮ್ಮ ಮೇಲೆ ಹಾಕಲಾಗುತ್ತಿರುವ ಬೇಡಿಕೆಗಳು ನಿಮ್ಮನ್ನು ಜಜ್ಜಿಬಿಡುತ್ತಿರುವ ಅನಿಸಿಕೆ ನಿಮಗಾಗುವಲ್ಲಿ, ನಿಮ್ಮ ಮನಸ್ಸಿನಲ್ಲಿರುವ ವಿಷಯವನ್ನು ತಿಳಿಸಲು ಗೌರವಪೂರ್ವಕವಾದ ವಿಧಾನವನ್ನು ಬಳಸಿರಿ

[ಪುಟ 25ರಲ್ಲಿರುವ ಚಿತ್ರ]

ನೀವು ಚೆನ್ನಾಗಿ ಮಾಡುವಂಥ ಸಂಗತಿಗಳು, ಸೋಲಿನ ಭಾವನೆಗಳನ್ನು ಹೊಡೆದೋಡಿಸಲು ಸಹಾಯಮಾಡಬಲ್ಲವು