ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಗುವನ್ನು ಪೋಷಿಸುವುದರ ಮಹತ್ವ

ನಿಮ್ಮ ಮಗುವನ್ನು ಪೋಷಿಸುವುದರ ಮಹತ್ವ

ನಿಮ್ಮ ಮಗುವನ್ನು ಪೋಷಿಸುವುದರ ಮಹತ್ವ

ಒಬ್ಬ ವ್ಯಕ್ತಿಯು ತನ್ನ ಬಾಲ್ಯದಲ್ಲಿ ಏನನ್ನು ಕಲಿಯುತ್ತಾನೋ ಅಥವಾ ಕಲಿಯುವುದಿಲ್ಲವೋ ಅದು, ಭವಿಷ್ಯತ್ತಿನಲ್ಲಿ ಅವನು ಹೊಂದಿರುವ ಸಾಮರ್ಥ್ಯಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಹಾಗಾದರೆ, ಸಮತೂಕದ, ಯಶಸ್ವೀ ವಯಸ್ಕರಾಗಲು ಮಕ್ಕಳಿಗೆ ಅವರ ಹೆತ್ತವರಿಂದ ಯಾವುದರ ಅಗತ್ಯವಿದೆ? ಇತ್ತೀಚಿನ ದಶಕಗಳಲ್ಲಿ ಮಾಡಲಾದ ಸಂಶೋಧನೆಯ ಆಧಾರದ ಮೇಲೆ ಕೆಲವರು ಯಾವ ನಿರ್ಧಾರವನ್ನು ಮಾಡಿದ್ದಾರೆಂಬುದನ್ನು ಪರಿಗಣಿಸಿರಿ.

ನರತಂತು ಸಂಬಂಧಿ ಕ್ರಿಯೆ (ಸಿನಾಪ್ಸಸ್‌)ಯ ಪಾತ್ರ

ಕ್ರಿಯೆಯಲ್ಲಿ ಇರುವಂಥ ಮಾನವ ಮಿದುಳನ್ನು ನೇರವಾಗಿ ಕಂಪ್ಯೂಟರಿನಲ್ಲಿ ನೋಡುವಂಥ ತಂತ್ರಜ್ಞಾನದಿಂದ ಮಿದುಳಿನ ಬೆಳವಣಿಗೆಯ ಕುರಿತು ಹಿಂದೆಂದಿಗಿಂತಲೂ ಅತಿ ಹೆಚ್ಚಾಗಿ ಅಧ್ಯಯನಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ. ಇಂಥ ಅಧ್ಯಯನವು ಸೂಚಿಸುವುದೇನಂದರೆ ಮಾಹಿತಿಯನ್ನು ಗ್ರಹಿಸಲು, ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು, ಮತ್ತು ಭಾಷೆಯಲ್ಲಿ ಪ್ರವೀಣರಾಗಲು ಅಗತ್ಯವಿರುವ ಮಿದುಳಿನ ಕ್ರಿಯೆಗಳನ್ನು ವಿಕಸಿಸಲಿಕ್ಕಾಗಿ ಬಾಲ್ಯದ ಆರಂಭದ ದಿನಗಳು ಪ್ರಾಮುಖ್ಯ ಸಮಯಗಳಾಗಿವೆ. “ಆರಂಭದ ವರುಷಗಳಲ್ಲಿ, ಆನುವಂಶೀಯ ಮಾಹಿತಿ ಮತ್ತು ಬಾಹ್ಯವಾಗಿ ಸಿಗುವ ಪ್ರಚೋದನೆಯ ಮಧ್ಯೆ ಪ್ರತಿಕ್ಷಣ ಉಂಟಾಗುವ ಪರಸ್ಪರಕ್ರಿಯೆಯಿಂದ ನಮ್ಮ ಮಿದುಳು ರೂಪುಗೊಳ್ಳುತ್ತದೆ. ಆದುದರಿಂದ, ಆ ಆರಂಭದ ವರುಷಗಳಲ್ಲಿ ಮಿದುಳಿನಲ್ಲಿ ನರತಂತು ಸಂಬಂಧಿ ಕ್ರಿಯೆಗಳು ಅತಿ ಶೀಘ್ರಗತಿಯಲ್ಲಿ ಉಂಟಾಗುತ್ತವೆ,” ಎಂಬುದಾಗಿ ನೇಷನ್‌ ಎಂಬ ಪತ್ರಿಕೆಯು ವರದಿಸುತ್ತದೆ.

ಇಂಥ ನರತಂತು ಸಂಬಂಧಿ ಕ್ರಿಯೆಗಳಲ್ಲಿ ಹೆಚ್ಚಿನವು ಜೀವಿತದ ಮೊದಲ ಕೆಲವು ವರುಷಗಳಲ್ಲಿ ಸಂಭವಿಸುತ್ತವೆ ಎಂಬುದಾಗಿ ವಿಜ್ಞಾನಿಗಳು ನಂಬುತ್ತಾರೆ. ಮಗುವಿನ ಬೆಳವಣಿಗೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ವಿಶೇಷಜ್ಞರಾದ ಡಾ. ಟಿ. ಬೆರೀ ಬ್ರೇಜಿಲ್ಟನ್‌ಗನುಸಾರ ಈ ವರುಷಗಳಲ್ಲಿಯೇ, “ಮಗುವಿನ ಬುದ್ಧಿಶಕ್ತಿ, ಸ್ವಕೀಯತೆ, ಭರವಸಾ ಸಾಮರ್ಥ್ಯ ಮತ್ತು ಕಲಿಯಲು ಪ್ರೇರಣೆ ಈ ಮುಂತಾದ ವಿಷಯಗಳನ್ನು ಪ್ರಭಾವಿಸುವ ನರತಂತು ಸಂಬಂಧಿ ಕ್ರಿಯೆಗಳು ವಿಕಸಿಸುತ್ತವೆ.”

ಮಗುವಿನ ಮಿದುಳು ಮೊದಲ ಕೆಲವು ವರುಷಗಳಲ್ಲಿ ಅದರ ಗಾತ್ರ, ವಿನ್ಯಾಸ, ಮತ್ತು ಕ್ರಿಯೆಯಲ್ಲಿ ಗಮನಾರ್ಹವಾದ ಬೆಳವಣಿಗೆಯನ್ನು ಹೊಂದುತ್ತದೆ. ಬಹಳಷ್ಟು ಪ್ರಚೋದನೆ ಮತ್ತು ಕಲಿಯುವ ಅನುಭವಗಳು ದೊರಕುವಂಥ ಪರಿಸರದಲ್ಲಿ, ನರತಂತು ಸಂಬಂಧಿ ಕ್ರಿಯೆಗಳು ದ್ವಿಗುಣವಾಗುತ್ತಾ ಹೋಗಿ ಒಂದು ವಿಸ್ತಾರವಾದ ಸಂಕೀರ್ಣ ವ್ಯವಸ್ಥೆಯನ್ನು ಮಿದುಳಿನಲ್ಲಿ ರೂಪಿಸುತ್ತವೆ. ಇಂಥ ನರತಂತು ಸಂಬಂಧಿ ಕ್ರಿಯೆಗಳು ಆಲೋಚಿಸುವುದನ್ನು, ಕಲಿಯುವುದನ್ನು ಮತ್ತು ತರ್ಕಮಾಡುವುದನ್ನು ಸಾಧ್ಯವನ್ನಾಗಿ ಮಾಡುತ್ತವೆ.

ಶಿಶುವಿನ ಮಿದುಳಿಗೆ ಎಷ್ಟು ಹೆಚ್ಚು ಪ್ರಚೋದನೆ ದೊರಕುತ್ತದೋ ಅಷ್ಟು ಹೆಚ್ಚು ನರಕಣಗಳು ಕ್ರಿಯಾಶೀಲವಾಗಸಾಧ್ಯವಿದೆ ಮತ್ತು ಆ ನರಕಣಗಳ ಮಧ್ಯೆ ಹೆಚ್ಚು ಸಂಬಂಧಿ ಕ್ರಿಯೆ ಉಂಟಾಗಬಹುದು. ಆಸಕ್ತಿಕರವಾಗಿ, ಈ ಪ್ರಚೋದನೆಯು ಕೇವಲ ಜ್ಞಾನಕ್ಕೆ ಸಂಬಂಧಿಸಿದ್ದಾಗಿದ್ದರೆ ಸಾಲದು, ಅಂದರೆ ವಾಸ್ತವಾಂಶಗಳ, ಅಂಕಿಸಂಖ್ಯೆಗಳ, ಅಥವಾ ಭಾಷೆಯ ಮೂಲಕ ದೊರಕುವ ಪ್ರಚೋದನೆಯಾಗಿದ್ದರೆ ಸಾಲದು. ಭಾವನಾತ್ಮಕ ಪ್ರಚೋದನೆಯೂ ಅಗತ್ಯವಾಗಿದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ತಬ್ಬಿಕೊಂಡು ಮುದ್ದಾಡಿಸಿರದ ಮತ್ತು ಜೊತೆಯಾಗಿ ಆಟವಾಡಿಸಿರದ ಅಥವಾ ಭಾವನಾತ್ಮಕವಾಗಿ ಪ್ರಚೋದಿಸಿರದ ಶಿಶುವಿನಲ್ಲಿ ನರತಂತು ಸಂಬಂಧಿ ಕ್ರಿಯೆಗಳು ತೀರ ಕಡಿಮೆಯಾಗಿರುತ್ತವೆ ಎಂಬುದನ್ನು ಸಂಶೋಧನೆಯು ಸೂಚಿಸುತ್ತದೆ.

ಪೋಷಣೆ ಮತ್ತು ಸಾಮರ್ಥ್ಯ

ಕ್ರಮೇಣ ಮಕ್ಕಳು ದೊಡ್ಡವರಾಗುತ್ತಾ ಬಂದಂತೆ, ಒಂದು ರೀತಿಯ ಪರಿಷ್ಕರಣ ಕೆಲಸವು ನಡೆಯುತ್ತದೆ. ಅನಾವಶ್ಯಕವಾದ ನರತಂತು ಸಂಬಂಧಿ ಕ್ರಿಯೆಗಳನ್ನು ದೇಹವು ತೆಗೆದುಹಾಕುವಂತೆ ತೋರುತ್ತದೆ. ಇದು ಮಗುವಿನ ಸಾಮರ್ಥ್ಯದ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಬಲ್ಲದು. “ಸರಿಯಾದ ಪ್ರಾಯದಲ್ಲಿ ಸರಿಯಾದ ರೀತಿಯ ಪ್ರಚೋದನೆಯು ಮಗುವಿಗೆ ಸಿಗದೆ ಹೋದಲ್ಲಿ ನರವ್ಯೂಹಗಳು ಯೋಗ್ಯ ರೀತಿಯಲ್ಲಿ ಬೆಳವಣಿಗೆ ಹೊಂದುವುದಿಲ್ಲ” ಎಂಬುದಾಗಿ ಮಿದುಳಿನ ಸಂಶೋಧಕರಾದ ಮ್ಯಾಕ್ಸ್‌ ಸೀನಾಡರ್‌ ತಿಳಿಸುತ್ತಾರೆ. ಡಾ. ಜೆ. ಫ್ರೇಜರ್‌ ಮಸ್ಟರ್ಡ್‌ಗನುಸಾರ ಇದರಿಂದುಂಟಾಗುವ ಪರಿಣಾಮಗಳೆಂದರೆ, ಕಡಿಮೆ ಬುದ್ಧಿ ಪ್ರಮಾಣ, ಮಾತು ಬೆಳವಣಿಗೆಯಲ್ಲಿ ವಿಕಲತೆ ಹಾಗೂ ಗಣಿತ ವಿಕಾಸ ಹಂತದಲ್ಲಿ ದೋಷ, ವಯಸ್ಕನಾದಂತೆ ಆರೋಗ್ಯದ ಸಮಸ್ಯೆಗಳು, ಮತ್ತು ವರ್ತನಾ ಸಮಸ್ಯೆಗಳು.

ಇದರಿಂದ ತಿಳಿದುಬರುವುದೇನೆಂದರೆ ಒಬ್ಬ ವ್ಯಕ್ತಿಯು ಮಗುವಾಗಿದ್ದಾಗ ಪಡೆದುಕೊಳ್ಳುವ ಅನುಭವಗಳು ಅವನ ವಯಸ್ಕ ಜೀವನದ ಮೇಲೆ ಖಂಡಿತವಾಗಿಯೂ ಪರಿಣಾಮಬೀರಬಲ್ಲವು. ಒಬ್ಬ ವ್ಯಕ್ತಿಯು ಯಾವುದೇ ಒಂದು ಪರಿಸ್ಥಿತಿಯಿಂದ ಸುಲಭವಾಗಿ ಚೇತರಿಸಿಕೊಳ್ಳಬಲ್ಲನೋ ಅಥವಾ ತೀರ ಸೂಕ್ಷ್ಮ ವೇದಿಯಾಗಿದ್ದಾನೋ, ಭಾವಾರೂಪದಲ್ಲಿ ಆಲೋಚಿಸಲು ಕಲಿಯುತ್ತಾನೋ ಅಥವಾ ಈ ಸಾಮರ್ಥ್ಯದಲ್ಲಿ ಅವನಿಗೆ ಕೊರತೆಯಿದೆಯೋ, ಮತ್ತು ಅವನು ಅನುಭೂತಿಯುಳ್ಳವನಾಗಿದ್ದಾನೋ ಇಲ್ಲವೋ ಎಂಬ ಈ ಎಲ್ಲಾ ವಿಚಾರಗಳು ಅವನ ಬಾಲ್ಯದ ಆರಂಭದ ಅನುಭವಗಳಿಂದ ಪ್ರಭಾವಿಸಲ್ಪಟ್ಟಿರಬಲ್ಲವು. ಆದುದರಿಂದ ಹೆತ್ತವರ ಪಾತ್ರವು ಅತಿ ಪ್ರಾಮುಖ್ಯ. “ಮಗುವಿಗೆ ತನ್ನ ಆರಂಭದ ವರುಷಗಳಲ್ಲಾಗುವ ಅನುಭವಗಳ ಅತಿ ಸೂಕ್ಷ್ಮವಾದ ಅಂಶಗಳಲ್ಲಿ ಒಂದು, ಸಂವೇದಿಗಳಾದ ಹೆತ್ತವರಿಂದ ದೊರಕುವ ಕಾಳಜಿಯೇ ಆಗಿದೆ” ಎಂದು ಮಕ್ಕಳ ತಜ್ಞರೊಬ್ಬರು ತಿಳಿಸುತ್ತಾರೆ.

ಮಕ್ಕಳನ್ನು ಪೋಷಿಸಿರಿ ಮತ್ತು ಅವರ ಕಡೆಗೆ ಕಾಳಜಿವಹಿಸಿ, ಆಗ ಅವರು ಸಫಲರಾಗುವರು. ಇದು ಕೇಳಿಸಿಕೊಳ್ಳಲು ಒಂದು ಸರಳ ಸಂಗತಿಯಾಗಿ ತೋರಬಹುದು. ಆದರೆ, ಮಕ್ಕಳನ್ನು ಸರಿಯಾದ ರೀತಿಯಲ್ಲಿ ಹೇಗೆ ನೋಡಿಕೊಳ್ಳುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಯಾವಾಗಲೂ ಸುಲಭದ ಸಂಗತಿಯಾಗಿರಲಿಕ್ಕಿಲ್ಲ ಎಂಬುದನ್ನು ಹೆತ್ತವರು ತಿಳಿದಿದ್ದಾರೆ. ಪರಿಣಾಮಕಾರಿಯಾದ ರೀತಿಯಲ್ಲಿ ಮಕ್ಕಳನ್ನು ಬೆಳೆಸುವುದು ಯಾವಾಗಲೂ ಹುಟ್ಟರಿವಿನ ಭಾಗವಾಗಿರುವುದಿಲ್ಲ.

ಒಂದು ಅಧ್ಯಯನಕ್ಕನುಸಾರ, ಇಂಟರ್‌ವ್ಯೂ ಮಾಡಲ್ಪಟ್ಟ ಹೆತ್ತವರಲ್ಲಿ 25 ಪ್ರತಿಶತ ಹೆತ್ತವರಿಗೆ ತಾವು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ರೀತಿಯು ಅವರ ಬುದ್ಧಿಶಕ್ತಿ, ಭರವಸೆ ಮತ್ತು ಕಲಿಯುವುದರ ಕಡೆಗಿನ ಅವರ ಪ್ರೀತಿಯನ್ನು ಹೆಚ್ಚಿಸುತ್ತದೊ ಅಥವಾ ಕುಂಠಿತಗೊಳಿಸುತ್ತದೊ ಎಂಬುದು ತಿಳಿದಿರಲಿಲ್ಲ. ಇದು ಒಂದು ಪ್ರಶ್ನೆಯನ್ನು ಎಬ್ಬಿಸುತ್ತದೆ: ನಿಮ್ಮ ಮಕ್ಕಳ ಸಾಮರ್ಥ್ಯವನ್ನು ಬೆಳೆಸಲು ಅತ್ಯುತ್ತಮ ವಿಧಾನವು ಯಾವುದಾಗಿದೆ? ಸೂಕ್ತವಾದ ಪರಿಸರವನ್ನು ನೀವು ನಿಮ್ಮ ಮಕ್ಕಳಿಗೆ ಹೇಗೆ ಒದಗಿಸಬಲ್ಲಿರಿ? ಇದನ್ನು ಮುಂದಿನ ಲೇಖನದಲ್ಲಿ ನೋಡೋಣ. (g04 10/22)

[ಪುಟ 6ರಲ್ಲಿರುವ ಚಿತ್ರ]

ಯಾವುದೇ ಪ್ರಚೋದನೆಯಿಲ್ಲದೆ ಬಿಡಲ್ಪಡುವ ಮಗುವು ಇತರರಂತೆ ಬೆಳವಣಿಗೆಯನ್ನು ಹೊಂದಲಿಕ್ಕಿಲ್ಲ