ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೈರೋಬಿ “ತಂಪಾದ ನೀರಿನ ಪ್ರದೇಶ”

ನೈರೋಬಿ “ತಂಪಾದ ನೀರಿನ ಪ್ರದೇಶ”

ನೈರೋಬಿ “ತಂಪಾದ ನೀರಿನ ಪ್ರದೇಶ”

ಕೆನ್ಯದ ಎಚ್ಚರ! ಲೇಖಕರಿಂದ

“ಬೋಳಾದ, ಬರೀ ನೀರಿನಿಂದ ತುಂಬಿದ ಕೊಳಚೆ ಪ್ರದೇಶ, ವಿಪರೀತ ಗಾಳಿ, ಯಾವುದೇ ರೀತಿಯ ಮನುಷ್ಯರು ಅಲ್ಲಿಲ್ಲ, ಎಲ್ಲ ಜಾತಿಯ ಸಾವಿರಾರು ವನ್ಯಮೃಗಗಳ ವಾಸಸ್ಥಾನ. ಅಲ್ಲಿಗೆ ಅಪರೂಪಕ್ಕೆ ಮನುಷ್ಯರು ಬರುತ್ತಿದ್ದರೆಂಬುದಕ್ಕಿನ ಒಂದೇ ಒಂದು ಪುರಾವೆ, ಚಾವಣಿಬಂಡಿ ಹಾದುಹೋಗುತ್ತಿದ್ದದ್ದರಿಂದ ಅಲ್ಲಿನ ದಾರಿ ಬದಿಯಲ್ಲಿ ಉಂಟಾಗಿರುವ ಗುರುತುಗಳೇ ಆಗಿವೆ.”​—⁠“ಕೆನ್ಯ ವಸಾಹತ್ತಿನ ಆರಂಭ,” (ಇಂಗ್ಲಿಷ್‌).

ನೈರೋಬಿ ಒಂದು ಶತಮಾನಕ್ಕಿಂತ ಮುಂಚೆ ಯಾವ ಸ್ಥಿತಿಯಲ್ಲಿತ್ತು ಎಂಬುದನ್ನು ಈ ಮಾತುಗಳು ವರ್ಣಿಸುತ್ತವೆ. ಸಿಂಹಗಳು, ಖಡ್ಗಮೃಗಗಳು, ಚಿರತೆಗಳು, ಜಿರಾಫೆಗಳು, ವಿಷಕಾರಿ ಹಾವುಗಳು, ಮತ್ತು ಇತರ ಜಾತಿಯ ಸಹಸ್ರಾರು ವನ್ಯಜೀವಿಗಳು ಅಲ್ಲಿ ತಮ್ಮ ಬೀಡನ್ನು ಸ್ಥಾಪಿಸಿದ್ದವು. ಧೈರ್ಯಶಾಲಿಗಳಾದ ಮಾಸೈ ಜನರು ತಮ್ಮ ಅಚ್ಚುಮೆಚ್ಚಿನ ದನಗಳಿಗೆ ಸಿಹಿ ನೀರನ್ನು ಕುಡಿಸಲು ಅಲ್ಲಿದ್ದ ನದಿಗಳ ತೀರಕ್ಕೆ ಅವುಗಳನ್ನು ಕರೆದೊಯ್ಯುತ್ತಿದ್ದರು. ಇದು ಆ ಅಲೆಮಾರಿ ಜನರಿಗೆ ಒಂದು ಆಕರ್ಷಕ ಸ್ಥಳವಾಗಿತ್ತು. ವಾಸ್ತವದಲ್ಲಿ, ಮಾಸೈ ಜನರು ಆ ನದಿಯನ್ನು ಊಆಸೊ ನೈರೋಬಿ ಎಂದು ಕರೆದರು. ಈ ಹೆಸರಿನ ಅರ್ಥ “ತಂಪಾದ ನೀರು” ಎಂದಾಗಿದೆ. ಅಷ್ಟುಮಾತ್ರವಲ್ಲದೆ, ಆ ಪ್ರದೇಶಕ್ಕೆ ಎನ್‌ಕ್ಯಾರ್‌ಈ ನೈರೋಬಿ, ಅಂದರೆ “ತಂಪಾದ ನೀರಿನ ಪ್ರದೇಶ” ಎಂಬ ಹೆಸರಿಟ್ಟರು. ಈ ರೀತಿಯಾಗಿ, ಕೆನ್ಯದ ಇತಿಹಾಸವನ್ನೇ ಸಂಪೂರ್ಣವಾಗಿ ಬದಲಾಯಿಸಲಿದ್ದ ಒಂದು ಹೆಸರನ್ನು ಅವರು ಒದಗಿಸಿದರು.

ನೈರೋಬಿಯ ಬೆಳವಣಿಗೆಗೆ ಸಹಾಯಮಾಡಿದ ಒಂದು ಪ್ರಾಮುಖ್ಯ ಸಂಗತಿಯೆಂದರೆ, ಹಿಂದೆ ಲುನಾಟಿಕ್‌ ಎಕ್ಸ್‌ಪ್ರೆಸ್‌ * ಎಂದು ಕರೆಯಲಾಗುತ್ತಿದ್ದ ಕೆನ್ಯದ ರೈಲುಮಾರ್ಗ ನಿರ್ಮಾಣಕಾರ್ಯವೇ. 1899ರ ಮಧ್ಯಭಾಗದಷ್ಟಕ್ಕೆ, ಕರಾವಳಿ ನಗರವಾದ ಮೊಂಬಾಸದಿಂದ ನೈರೋಬಿ ವರೆಗೆ 530ಕಿಲೋಮೀಟರ್‌ ಉದ್ದದ ರೈಲುಮಾರ್ಗವನ್ನು ರಚಿಸಲಾಗಿತ್ತು. ಆದರೆ ಆ ಸಮಯದೊಳಗೆ, ನಿರ್ಮಾಣ ಕೆಲಸಗಾರರು “ಸಾವ್‌ಒವಿನ ನರಭಕ್ಷಕ ಮೃಗಗಳು” ಅಂದರೆ ಅವರ ಅನೇಕ ಸಹೋದ್ಯೋಗಿಗಳನ್ನು ಕೊಂದಿದ್ದ ಎರಡು ಸಿಂಹಗಳ ಉಪದ್ರವದಿಂದ ನರಳಾಡುತ್ತಿದ್ದರು ಮತ್ತು ಗ್ರೇಟ್‌ ರಿಫ್ಟ್‌ ವ್ಯಾಲಿ ಎಂಬ ಭೂಬಿರುಕಿನ ಭೀಕರ ಪರಿಣಾಮವನ್ನು ಎದುರಿಸುತ್ತಿದ್ದರು. ರೈಲುಮಾರ್ಗವನ್ನು ಇನ್ನೂ ಒಳಪ್ರದೇಶಕ್ಕೆ ವಿಸ್ತರಿಸಲಿದ್ದ ಕಾರಣ, ಮುಂದಕ್ಕೆ ಮೊಂಬಾಸವನ್ನು ಕಟ್ಟುವ ಕೆಲಸದ ಸಾಮಗ್ರಿಗಳನ್ನು ಇಡುವ ಒಂದು ಮುಖ್ಯ ಡಿಪೋವನ್ನಾಗಿ ಉಪಯೋಗಿಸಲಿಲ್ಲ. ಬದಲಾಗಿ, ನೈರೋಬಿ ಒಂದು ನಿರಾಶ್ರಯ ಪ್ರದೇಶವಾಗಿದ್ದರೂ ಅದನ್ನು ನಿರ್ಮಾಣ ಕೆಲಸದ ಜನರಿಗೆ ವಿಶ್ರಮಿಸಲಿಕ್ಕಾಗಿರುವ ಒಂದು ಉತ್ತಮ ಸ್ಥಳವಾಗಿ ಪರಿಗಣಿಸಲಾಯಿತು. ಮಾತ್ರವಲ್ಲ, ಇದನ್ನು ಕಟ್ಟುವ ಕೆಲಸದ ಸಾಮಗ್ರಿಗಳನ್ನು ಇಡಲು ಒಂದು ಒಳನಾಡಿನ ಡಿಪೋವನ್ನಾಗಿಯೂ ಉಪಯೋಗಿಸಲಾಯಿತು. ಇದು ಮುಂದಕ್ಕೆ ನೈರೋಬಿಯು ಕೆನ್ಯದ ರಾಜಧಾನಿಯಾಗಲು ಸಹಾಯಮಾಡಿತು.

ಇಪ್ಪತ್ತನೇ ಶತಮಾನದ ಆರಂಭದಲ್ಲಿ ನೈರೋಬಿ, ಆಗ ಬ್ರಿಟಿಷ್‌ ಈಸ್ಟ್‌ ಆಫ್ರಿಕನ್‌ ಪ್ರೊಟೆಕ್ಟೊರೆಟ್‌ ಎಂದು ಜ್ಞಾತವಾಗಿದ್ದ ಕೆನ್ಯದ ಆಡಳಿತ ಕೇಂದ್ರವಾಯಿತು. ಮುಂಚಿತವಾಗಿಯೇ ಯೋಜನೆಮಾಡಿರುತ್ತಿದ್ದರೆ ಅದು ಈ ಬೆಳೆಯುವ ನಗರಕ್ಕೆ ಪ್ರಯೋಜನಕಾರಿಯಾಗಿರುತ್ತಿತ್ತು. ಬದಲಾಗಿ, ರೈಲುನಿಲ್ದಾಣದ ಸುತ್ತಮುತ್ತ ಒರಟಾಗಿ ವಿನ್ಯಾಸಿಸಲ್ಪಟ್ಟ ಕಟ್ಟಡಗಳನ್ನು ನಿರ್ಮಿಸಲಾಯಿತು. ಮರ, ಜಿಂಕ್‌ ಷೀಟ್‌ಗಳು ಮತ್ತು ಇತರ ಸ್ಥಳಿಕ ಸಾಮಗ್ರಿಗಳಿಂದ ಕಟ್ಟಲ್ಪಟ್ಟ ಕಟ್ಟಡಗಳ ಕಾರಣ ನೈರೋಬಿ ಭವಿಷ್ಯದ ಒಂದು ಅಂತಾರಾಷ್ಟ್ರೀಯ ಕೇಂದ್ರವಾಗಿ ಕಾಣುವ ಬದಲು ಗುಡಿಸಲು ಪ್ರದೇಶದಂತೆ ತೋರಿತು. ಆದರೆ, 20ನೆಯ ಶತಮಾನದ ಆರಂಭದಲ್ಲಿ, ನೈರೋಬಿ ಮುಂದಕ್ಕೆ ಒಂದು ಅಂತಾರಾಷ್ಟ್ರೀಯ ಕೇಂದ್ರವಾಗಸಾಧ್ಯವಿದೆ ಎಂಬ ಗುರಿಯೊಂದಿಗೆ ಕಟ್ಟಲ್ಪಟ್ಟ ಕಟ್ಟಡಗಳು ಕೇವಲ ಕೆಲವೇ. ಅಷ್ಟುಮಾತ್ರವಲ್ಲದೆ, ಅಲ್ಲಿ ಸುಳಿದಾಡುತ್ತಿದ್ದ ವನ್ಯಜೀವಿಗಳ ಭೀತಿ ಆ ಸ್ಥಳವನ್ನು ಯಾವಾಗಲೂ ಕಾಡುತ್ತಿತ್ತು.

ಇನ್ನೊಂದು ವಿಷಯವೇನೆಂದರೆ, ಅಲ್ಲಿನ ಹೊಸ ನೆಲೆಸಿಗರನ್ನು ರೋಗಗಳು ಭಯಂಕರವಾಗಿ ಬಾಧಿಸಿದವು. ಆ ಸಮಯದಲ್ಲಿ ತಲೆದೋರಿದ ಪ್ಲೇಗ್‌ ಹೊಸ ಆಡಳಿತಗಾರರಿಗೆ ಮೊದಲ ಅಗ್ನಿಪರೀಕ್ಷೆಯಾಗಿತ್ತು. ಅದಕ್ಕಾಗಿನ ತ್ವರಿತ ಪರಿಹಾರವೇನಾಗಿತ್ತು? ರೋಗದ ಹರಡುವಿಕೆಯನ್ನು ತಡೆಗಟ್ಟಲು ಪಟ್ಟಣದ ಬಾಧಿತವಾದ ಕ್ಷೇತ್ರಗಳನ್ನು ಸುಟ್ಟುಬಿಡಲಾಯಿತು! ಮುಂದಿನ ಐವತ್ತು ವರುಷದಲ್ಲಿ, ನೈರೋಬಿ ತನ್ನ ಮುಂಚಿನ ಅಹಿತ ಸ್ಥಿತಿಯಿಂದ ನಿಧಾನವಾಗಿ ಚೇತರಿಸಿಕೊಂಡು ಪೂರ್ವ ಆಫ್ರಿಕದ ವಾಣಿಜ್ಯ ಮತ್ತು ಸಾಮಾಜಿಕ ಚಟುವಟಿಕೆಯ ಕೇಂದ್ರವಾಯಿತು.

ಆಧುನಿಕ ಪಟ್ಟಣವು ಬೆಳೆದು ಬಂದ ವಿಧ

ಸಮುದ್ರ ಮಟ್ಟದಿಂದ ಸುಮಾರು 1,680 ಮೀಟರ್‌ ಎತ್ತರದಲ್ಲಿರುವ ನೈರೋಬಿ, ತನ್ನ ಸುತ್ತಲಿರುವ ಸ್ಥಳಗಳ ಒಂದು ಆಕರ್ಷಕ ದೃಶ್ಯವನ್ನು ನೀಡುತ್ತದೆ. ಒಂದು ಮೋಡರಹಿತ ದಿನದಂದು ಆಫ್ರಿಕದ ಎರಡು ಗಮನಾರ್ಹ ಸ್ಥಳಗಳನ್ನು ಒಬ್ಬನು ಇಲ್ಲಿಂದ ಸುಲಭವಾಗಿ ನೋಡಸಾಧ್ಯವಿದೆ. ಉತ್ತರಕ್ಕೆ ಮೌಂಟ್‌ ಕೆನ್ಯ ಇದೆ. ಇದು, 5,199 ಮೀಟರ್‌ ಎತ್ತರವಾಗಿದ್ದು ಆ ರಾಷ್ಟ್ರದ ಅತಿ ಎತ್ತರವಾದ ಪರ್ವತವಾಗಿದೆ ಮತ್ತು ಆಫ್ರಿಕದಲ್ಲಿ ಎರಡನೆಯ ಅತಿ ಎತ್ತರ ಪರ್ವತವಾಗಿದೆ. ದಕ್ಷಿಣ ದಿಕ್ಕಿನಲ್ಲಿ ಸ್ವಲ್ಪ ದೂರದಲ್ಲಿ, ಅಂದರೆ ಕೆನ್ಯ ಹಾಗೂ ಟಾನ್ಸೇನಿಯಾದ ಗಡಿಯಲ್ಲಿ ಮೌಂಟ್‌ ಕಿಲಿಮಂಜಾರೊ ಇದೆ. ಇದು, 5,895 ಮೀಟರ್‌ ಎತ್ತರವಾಗಿದ್ದು ಆಫ್ರಿಕದ ಅತಿ ಎತ್ತರ ಪರ್ವತವಾಗಿದೆ. ಭೂಮಧ್ಯ ರೇಖೆಯ ಸಮೀಪದಲ್ಲಿರುವ ಕಿಲಿಮಂಜಾರೊ ಪರ್ವತದಲ್ಲಿ ನಿರಂತರವಾಗಿರುವ ಹಿಮ ಮತ್ತು ಮಂಜು, 150 ವರುಷಗಳ ಹಿಂದೆಯೇ ಯೂರೋಪಿಯನ್‌ ಭೂಗೋಳ ಶಾಸ್ತ್ರಜ್ಞರಿಗೆ ಹಾಗೂ ಪರಿಶೋಧಕರಿಗೆ ಕುತೂಹಲವನ್ನು ಕೆರಳಿಸಿತ್ತು.

ಐವತ್ತು ವರುಷಗಳಿಗಿಂತಲೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಈ ನೈರೋಬಿ ಒಂದು ಸಂಪೂರ್ಣ ಬದಲಾವಣೆಯನ್ನೇ ಹೊಂದಿದೆ. ಗಗನವನ್ನು ಚುಂಬಿಸುವಂತೆ ತೋರುವ ಬೃಹತ್‌ ಕಟ್ಟಡಗಳೇ ಆ ಪಟ್ಟಣದ ಬೆಳವಣಿಗೆಗೆ ಪುರಾವೆಗಳಾಗಿವೆ. ಸೂರ್ಯನ ಬೆಳಕಿಗೆ ಮಿಣುಗುವ ಗಾಜು ಮತ್ತು ಉಕ್ಕಿನಿಂದ ಕಟ್ಟಲ್ಪಟ್ಟ ಉದ್ದನೆಯ ವಿಸ್ಮಯಕಾರಿ ಕಟ್ಟಡಗಳು ಇಂದು ಅಲ್ಲಿನ ಒಂದು ಸುಂದರವಾದ ನೋಟವಾಗಿದೆ. ನೈರೋಬಿಯ ವಾಣಿಜ್ಯ ಕೇಂದ್ರಕ್ಕೆ ಇಂದು ಭೇಟಿನೀಡುವವರು, ಕೇವಲ ನೂರು ವರುಷಗಳ ಹಿಂದೆ ಇದು ವನ್ಯಜೀವಿಗಳ ಬೀಡಾಗಿದ್ದು ಮನುಷ್ಯರು ವಾಸಿಸಲು ಅಪಾಯಕರವಾದ ಸ್ಥಳವಾಗಿತ್ತು ಎಂಬುದಾಗಿ ಕೇಳುವಾಗ ಮೂಕವಿಸ್ಮಿತರಾಗಬಹುದು.

ಸಮಯ ದಾಟಿದಂತೆ ಇಷ್ಟೊಂದು ಬದಲಾವಣೆಯಾಯಿತು. ಬೋಗನ್‌ವಿಲಿಯ, ಹೂಬಿಡುವ ಜಕರಾಂಡ ಮರ, ಶೀಘ್ರವಾಗಿ ಬೆಳೆಯುವ ಯೂಕಲಿಪ್ಟಸ್‌, ಮತ್ತು ಜಾಲೀಮರ ಮುಂತಾದ ಪರದೇಶದ ಮರಗಳನ್ನು ಅಲ್ಲಿ ತಂದು ನೆಡಲಾಯಿತು. ಈ ರೀತಿಯಾಗಿ, ಒಂದೊಮ್ಮೆ ದೂಳಿನಿಂದ ತುಂಬಿದ್ದ ಕಾಲುದಾರಿ ನಿಧಾನವಾಗಿ ಎರಡೂ ಬದಿಯಲ್ಲಿ ಮರಗಳಿಂದ ಕೂಡಿ ಪಾದಚಾರಿಗಳಿಗೆ ಬೇಸಿಗೆಯ ಸಮಯದಲ್ಲಿ ನೆರಳನ್ನು ನೀಡುವ ವಿಸ್ತಾರವಾದ ಬೀದಿಯಾಗಿ ಬದಲಾಯಿತು. ಪಟ್ಟಣದ ಕೇಂದ್ರ ಸ್ಥಳಕ್ಕೆ ಹತ್ತಿರದಲ್ಲಿದ್ದ ಒಂದು ವೃಕ್ಷವಾಟಿಯಲ್ಲಿ ಕಡಿಮೆಪಕ್ಷ 270 ಜಾತಿಯ ಮರಗಳಿವೆ. ನೈರೋಬಿಯು “ನೈಸರ್ಗಿಕ ವನದ ಮಧ್ಯೆ ಕಟ್ಟಲ್ಪಟ್ಟ ನಗರದಂತೆ ಕಾಣಿಸುತ್ತದೆ” ಎಂಬುದಾಗಿ ಒಬ್ಬ ಬರಹಗಾರನು ಏಕೆ ಹೇಳಿದನು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಸೊಂಪಾಗಿ ಬೆಳೆದ ಮರಗಳು ನೈರೋಬಿಯ ಹಿತಕರವಾದ ಹವಮಾನವನ್ನು ನಿಯಂತ್ರಿಸುತ್ತವೆ​—⁠ಹಗಲು ಬೆಚ್ಚಗಿರುತ್ತದೆ ಮತ್ತು ರಾತ್ರಿ ತಂಪಾಗಿರುತ್ತದೆ.

ಸಂಸ್ಕೃತಿಗಳ ಒಂದು ಸಂಕೀರ್ಣ ಸ್ಥಳ

ಒಂದು ದೊಡ್ಡ ಅಯಸ್ಕಾಂತದಂತೆ ಕ್ರಿಯೆಗೈಯುತ್ತಾ, ನೈರೋಬಿ ಅನೇಕ ಕಡೆಗಳಿಂದ ಮಾನವಕುಲವನ್ನು ತನ್ನ ಕಡೆಗೆ ಸೆಳೆದಿದೆ. ನಗರದ ಜನಸಂಖ್ಯೆಯು ಈಗ ಒಟ್ಟು 20 ಲಕ್ಷಕ್ಕಿಂತಲೂ ಹೆಚ್ಚಿದೆ. ರೈಲುಮಾರ್ಗವು ಪೂರ್ಣಗೊಂಡದ್ದರಿಂದ ಇನ್ನೂ ಹೆಚ್ಚಿನ ಜನರು ಈ ಸ್ಥಳಕ್ಕೆ ಬಂದು ನೆಲೆಸಿದ್ದಾರೆ. ರೈಲುಮಾರ್ಗದ ನಿರ್ಮಾಣ ಕಾರ್ಯಕ್ಕೆ ಸಹಾಯಮಾಡಲು ಬಂದ ಭಾರತೀಯರು ಅಲ್ಲಿಯೇ ಉಳಿದು ವ್ಯಾಪಾರ ವಹಿವಾಟನ್ನು ಆರಂಭಿಸಿ ಅದನ್ನು ದೇಶದಾದ್ಯಂತ ಹರಡಿಸಿದ್ದಾರೆ. ಭಾರತೀಯರನ್ನು ಅನುಸರಿಸಿ ಆಸ್ಟ್ರೇಲಿಯ, ಕೆನಡ, ಮತ್ತು ಆಫ್ರಿಕದ ಇತರ ಅನೇಕ ಸ್ಥಳಗಳಿಂದ ಜನರು ಬಂದು ಅಲ್ಲಿ ನೆಲೆಸಿದ್ದಾರೆ.

ನೈರೋಬಿ, ವೈವಿಧ್ಯಮಯ ಸಂಸ್ಕೃತಿಗಳಿರುವ ಒಂದು ಸ್ಥಳವಾಗಿದೆ. ಒಬ್ಬ ವ್ಯಕ್ತಿಯು ದಾರಿಯಲ್ಲಿ ನಡೆಯುತ್ತಿರುವಾಗ, ಹೂವಿನ ಸೀರೆಯನ್ನು ಧರಿಸಿ ವಸ್ತುಗಳನ್ನು ಖರೀದಿಸಲೆಂದು ಅಂಗಡಿಗೆ ಹೋಗುತ್ತಿರುವ ಭಾರತೀಯ ನಾರಿಯನ್ನು ನೋಡಬಹುದು, ಕಟ್ಟಡ ಕಟ್ಟುವ ಸ್ಥಳಕ್ಕೆ ವೇಗವಾಗಿ ಧಾವಿಸುತ್ತಿರುವ ಒಬ್ಬ ಪಾಕಿಸ್ತಾನಿ ಇಂಜಿನಿಯರ್‌ ಅನ್ನು ನೋಡಬಹುದು, ನೆದರ್ಲೆಂಡ್ಸ್‌ನವನಾದ ಶುಭ್ರವಸ್ತ್ರವನ್ನು ಧರಿಸಿರುವ ವಿಮಾನ ಅಟೆಂಡೆಟ್‌ ನಗರದಲ್ಲಿನ ಹೋಟೇಲಿನೊಳಗೆ ಹೋಗುತ್ತಿರುವುದನ್ನು ನೋಡಬಹುದು, ಅಥವಾ ಬಹುಶಃ ನೈರೋಬಿಯ ಸ್ಟಾಕ್‌ ಮಾರುಕಟ್ಟೆಯ ಬಳಿ ಜಪಾನೀ ವ್ಯಾಪಾರಸ್ಥನು ಅವಸರದಿಂದ ಒಂದು ಪ್ರಾಮುಖ್ಯ ವ್ಯಾಪಾರ ಕೂಟಕ್ಕೆ ಹೋಗುತ್ತಿರುವುದನ್ನು ನೋಡಬಹುದು. ಇದಕ್ಕೆ ಕೂಡಿಕೆಯಾಗಿ, ಸ್ಥಳಿಕ ನಿವಾಸಿಗಳು ಬಸ್‌ ನಿಲ್ದಾಣದಲ್ಲಿ ನಿಂತಿರುವುದನ್ನು, ಮತ್ತು ಗೂಡಂಗಡಿಗಳಲ್ಲಿ, ತೆರೆದ ಮಾರುಕಟ್ಟೆಗಳಲ್ಲಿ, ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿರುವುದನ್ನು, ಹಾಗೂ ಆಫೀಸಿನಲ್ಲಿ ಅಥವಾ ನೈರೋಬಿಯಲ್ಲಿರುವ ಅನೇಕ ಕಾರ್ಖಾನೆಗಳಲ್ಲಿ ಕೆಲಸಮಾಡುವುದನ್ನು ನೋಡಸಾಧ್ಯವಿದೆ.

ವಿರೋಧಾಭಾಸವಾಗಿ, ನಗರದಲ್ಲಿ ವಾಸಿಸುವ ಕೇವಲ ಕೊಂಚ ಮಂದಿ ಕೆನ್ಯದವರನ್ನು ಮಾತ್ರ ನಿಜವಾದ “ನೈರೋಬಿಯರು” ಎಂದು ಕರೆಯಸಾಧ್ಯವಿದೆ. ಹೆಚ್ಚಿನವರು ಒಂದು ಪ್ರಶಾಂತ ಜೀವನವನ್ನು ಹುಡುಕಿಕೊಂಡು ಇತರ ದೇಶಗಳಿಂದ ಬಂದವರಾಗಿದ್ದಾರೆ. ಸಾರಾಂಶವಾಗಿ ಹೇಳಬೇಕಾದರೆ, ನೈರೋಬಿಯ ಜನರು ಬಹಳ ಸ್ನೇಹಪರರೂ ಅತಿಥಿಸತ್ಕಾರಿಗಳೂ ಆಗಿದ್ದಾರೆ. ಇಂಥ ಅತಿಥಿಸತ್ಕಾರ ಮನೋಭಾವವೇ ಆ ನಗರಕ್ಕೆ ಎಲ್ಲಾ ಕಡೆಯ ಜನರನ್ನು ಮತ್ತು ಸಂಘಸಂಸ್ಥೆಗಳನ್ನು ಆಕರ್ಷಿಸಿದೆ. ವಿಶ್ವ ಸಂಸ್ಥೆಯ ಪರಿಸರ ಕಾರ್ಯಯೋಜನೆಯ ವಿಶ್ವ ಮುಖ್ಯ ಕಾರ್ಯಾಲಯವು ನೈರೋಬಿಯಲ್ಲಿದೆ.

ಸಂದರ್ಶಕರನ್ನು ಯಾವುದು ಆಕರ್ಷಿಸುತ್ತದೆ?

ಕೆನ್ಯವು ಅಸಂಖ್ಯಾತ ಮತ್ತು ವೈವಿಧ್ಯವಾದ ವನ್ಯಜೀವಿಗಳ ದೇಶವಾಗಿದೆ. ಅಲ್ಲಿನ ಅನೇಕ ರಾಷ್ಟ್ರೀಯ ಉದ್ಯಾನವನಗಳು ಮತ್ತು ಮೃಗಾಶ್ರಯ ವನಗಳು ಪ್ರತಿ ವರುಷ ಸಾವಿರಾರು ಸಂದರ್ಶಕರನ್ನು ಆಕರ್ಷಿಸುತ್ತವೆ. ಹೆಚ್ಚಿನ ಪ್ರವಾಸಗಳು ವ್ಯವಸ್ಥಾಪಿಸಲ್ಪಡುವ ಕೇಂದ್ರ ಸ್ಥಳವು ನೈರೋಬಿಯಾಗಿದೆ. ಹಾಗಿದ್ದರೂ, ನೈರೋಬಿ ತಾನೇ ಒಂದು ಪ್ರವಾಸ ಸ್ಥಳವಾಗಿದೆ. ಲೋಕದಲ್ಲಿ, ಪ್ರಾಣಿಗಳು ಮನೆ ಮುಂದೆಯೇ ಓಡಾಡುತ್ತಿರುವುದನ್ನು ನೋಡಸಾಧ್ಯವಿರುವ ಸ್ಥಳ ಕೇವಲ ಕೆಲವೇ ಇವೆ. ನಗರದ ಕೇಂದ್ರದಿಂದ ಹತ್ತು ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿ ನೈರೋಬಿಯ ರಾಷ್ಟ್ರೀಯ ಉದ್ಯಾನವನ ಇದೆ. ಇದನ್ನು ಸಂದರ್ಶಕರ ಧಾಮವೆಂದು ಕರೆಯಲಾಗುತ್ತದೆ. * ಇಲ್ಲಿಗೆ ಬಂದವರು ನೈರೋಬಿಯ ಆರಂಭದ ನಿವಾಸಿಗಳಾದ ಪ್ರಾಣಿಗಳನ್ನು ಭೇಟಿನೀಡುತ್ತಾರೆ. ಅಲ್ಲಿ ಮನುಷ್ಯರಿಗೂ ಪ್ರಾಣಿಗಳಿಗೂ ಕೇವಲ ಕೊಂಚವೇ ಅಂತರವಿರುತ್ತದೆ, ಅಂದರೆ ತೀರ ಹತ್ತಿರದಿಂದ ಪ್ರಾಣಿಗಳನ್ನು ನೋಡಸಾಧ್ಯವಿದೆ. ಇತ್ತೀಚೆಗೆ ಅಂದರೆ 2002ರ ಸೆಪ್ಟೆಂಬರ್‌ ತಿಂಗಳಲ್ಲಿ, ನೈರೋಬಿಯ ಒಂದು ಮನೆಯಲ್ಲಿನ ವಾಸದ ಕೋಣೆಯಲ್ಲಿ ಕಾಡಿನಿಂದ ದಾರಿತಪ್ಪಿ ಬಂದ ಒಂದು ಪ್ರಾಯದ ಚಿರತೆಯನ್ನು ಹಿಡಿಯಲಾಯಿತು!

ನಗರದ ಕೇಂದ್ರದಿಂದ ಕೆಲವೇ ನಿಮಿಷಗಳಷ್ಟು ದೂರ ನಡೆದರೆ ನೈರೋಬಿ ವಸ್ತುಸಂಗ್ರಹಾಲಯವು ಸಿಗುತ್ತದೆ. ಕೆನ್ಯದ ಆಸಕ್ತಿಕರ ಇತಿಹಾಸವನ್ನು ಓದಿ ತಿಳಿಯಲು ಪ್ರತಿದಿನ ನೂರಾರು ಸಂದರ್ಶಕರು ಅಲ್ಲಿಗೆ ಬರುತ್ತಾರೆ. ವಸ್ತುಸಂಗ್ರಹಾಲಯದ ಒಳಗಿರುವ ಹಾವಿನ ಉದ್ಯಾನವನದಲ್ಲಿ ಅನೇಕ ಜಾತಿಯ ಉರಗ ವರ್ಗದ ಪ್ರಾಣಿಗಳಿವೆ. ಮೊಸಳೆಗಳು ಹಾಯಾಗಿ ನಿದ್ರಿಸುತ್ತಿರುತ್ತವೆ. ಅದರ ಹತ್ತಿರದಲ್ಲಿಯೇ ಇರುವ ಆಮೆ ಸಹ, ತನ್ನ ನಿಧಾನವಾದ ನಡಿಗೆಯ ಹೊರತಾಗಿಯೂ ಸುತ್ತಲೂ ಇರುವ ಕಾರ್ಯಮಗ್ನ ಲೋಕದಿಂದ ಬೇಸರಗೊಳ್ಳದೆ ಇರುತ್ತದೆ. ಇಲ್ಲಿನ ಮುಖ್ಯ ನಿವಾಸಿಗಳು ಸರ್ಪಗಳು, ಹೆಬ್ಬಾವುಗಳು ಮತ್ತು ಮಂಡಲದ ಹಾವುಗಳೇ ಆಗಿವೆ. ಇಂಥ ಜೀವಿಗಳು ನಮ್ಮ ಸುತ್ತಲೂ ಇರುವಾಗ ಖಂಡಿತವಾಗಿಯೂ ಅಲ್ಲಿರುವ ಸೂಚನ ಫಲಕವನ್ನು ಗಮನಿಸಿರಿ. ಅದು ತಿಳಿಸುವುದು: “ಅತಿಕ್ರಮ ಪ್ರವೇಶಿಗಳಿಗೆ ವಿಷಕೊಡಲಾಗುತ್ತದೆ”!

ವ್ಯತ್ಯಾಸವಾದ ನೀರು

ನೈರೋಬಿಯ ಹೆಸರನ್ನು ಹೊಂದಿರುವ ನದಿಯು ಹರಿಯುತ್ತಾ ಇದೆಯಾದರೂ, ಅನೇಕ ಪ್ರಗತಿಪರ ನಗರಗಳಂತೆ ಕಾರ್ಖಾನೆ ಮತ್ತು ಗೃಹ ಕೊಳಚೆಗಳ ಕಾರಣ ಅದು ಮಲಿನಗೊಂಡಿದೆ. ಹಾಗಿದ್ದರೂ, ಅನೇಕ ವರುಷಗಳಿಂದ ನೈರೋಬಿಯಲ್ಲಿ ವಾಸಿಸುವ ಜನರಿಗೆ ಒಂದು ಉನ್ನತ ಮೂಲದಿಂದ ಬರುವ “ನೀರು” ಒದಗಿಸಲ್ಪಡುತ್ತಾ ಇದೆ. ಇದು ಯೆಹೋವನ ಸಾಕ್ಷಿಗಳಿಂದ ಕಲಿಸಲ್ಪಡುವ ಬೈಬಲಿನ ಜೀವದ ಸಂದೇಶವಾಗಿದೆ.​—⁠ಯೋಹಾನ 4:14.

ಇಸವಿ 1931ರಲ್ಲಿ, ಅಂದರೆ ನೈರೋಬಿ ಇಂದಿನ ವೈಭವಕ್ಕೆ ಬರುವ ಎಷ್ಟೋ ಮುನ್ನ ದಕ್ಷಿಣ ಆಫ್ರಿಕದಿಂದ ಬಂದ ಇಬ್ಬರು ಸಹೋದರರಾದ ಗ್ರೇ ಮತ್ತು ಫ್ರ್ಯಾಂಕ್‌ ಸ್ಮಿತ್‌, ಬೈಬಲಿನ ಸತ್ಯವನ್ನು ಹರಡಿಸುವ ಗುರಿಯಿಂದ ಕೆನ್ಯಕ್ಕೆ ಭೇಟಿನೀಡಿದರು. ಮೊಂಬಾಸದಿಂದ ಹಿಂದಿನ ಅದೇ ರೈಲುಮಾರ್ಗವನ್ನು ಅನುಸರಿಸಿ, ಬಹಳ ಗಂಡಾಂತರಗಳನ್ನು ಧೈರ್ಯದಿಂದ ಎದುರಿಸಿ ಅವರು ನೈರೋಬಿಗೆ ಬಂದರು. ಅನೇಕ ಸಲ ಅವರು ವನ್ಯಜೀವಿಗಳಿರುವ ಸ್ಥಳಕ್ಕೆ ಅತಿ ಹತ್ತಿರದಲ್ಲಿಯೇ ರಾತ್ರಿಯನ್ನು ಕಳೆಯಬೇಕಾಗಿತ್ತು. ನೈರೋಬಿಯಲ್ಲಿ 600 ಪುಸ್ತಿಕೆ ಮತ್ತು ಇತರ ಬೈಬಲ್‌ ಸಾಹಿತ್ಯವನ್ನು ವಿತರಿಸುವುದರಲ್ಲಿ ಅವರು ಯಶಸ್ವಿಗಳಾದರು. ಇಂದು ಮೆಟ್ರೊಪಾಲಿಟನ್‌ ನೈರೋಬಿಯಲ್ಲಿ 61 ಸಭೆಗಳೂ ಸುಮಾರು 5,000 ಸಾಕ್ಷಿಗಳೂ ಇದ್ದಾರೆ. ಸಭಾ ಕೂಟಗಳು, ಸಮ್ಮೇಳನಗಳು, ಜಿಲ್ಲಾ ಅಧಿವೇಶನಗಳು, ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳ ಮೂಲಕ ನೈರೋಬಿಯ ನಿವಾಸಿಗಳಿಗೆ ಯೆಹೋವನ ಸಾಕ್ಷಿಗಳ ಚಟುವಟಿಕೆಗಳ ಪರಿಚಯವಾಗಿದೆ. ಸಾಕ್ಷಿಗಳ ಬೈಬಲಾಧಾರಿತ ನಿರೀಕ್ಷೆಯ ಸಂದೇಶವನ್ನು ಅನೇಕರು ಸಂತೋಷದಿಂದ ಸ್ವೀಕರಿಸಿದ್ದಾರೆ.

ಒಂದು ಆಶಾದಾಯಕ ಭವಿಷ್ಯತ್ತು

“ಔದ್ಯೋಗೀಕೃತ ನಗರಗಳು ಸಾಕಷ್ಟು ವಸತಿ ಸೌಕರ್ಯದ ಕೊರತೆಯಿಂದ ಬಾಧಿತವಾಗಿವೆ . . . ಕಾರ್ಖಾನೆಗಳು ಗಾಳಿ ಮತ್ತು ನೀರನ್ನು ಮಲಿನಗೊಳಿಸುತ್ತವೆ” ಎಂಬುದಾಗಿ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ತಿಳಿಸುತ್ತದೆ. ನೈರೋಬಿಯ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಹಳ್ಳಿಗಳಿಂದ ಜನರು ದಿನಂಪ್ರತಿ ವಲಸೆಬರುತ್ತಿರುವ ಕಾರಣ, ಇಂಥ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳೂ ಇವೆ. ಸದಾ ಈ ಸಮಸ್ಯೆಗಳಿಂದ ಬಾಧಿಸಲ್ಪಡುವ ಕಾರಣ ನೈರೋಬಿಯ ಸೌಂದರ್ಯ ಸುಲಭವಾಗಿ ಮಾಸಿಹೋಗಸಾಧ್ಯವಿದೆ.

ಆದರೆ ಸಂತೋಷಕರವಾದ ವಿಷಯವೇನೆಂದರೆ ದೇವರ ರಾಜ್ಯದ ಕೆಳಗೆ ಎಲ್ಲಾ ಜನರು ಪರಿಪೂರ್ಣ ಜೀವನವನ್ನು ಆನಂದಿಸುವ ಕಾಲವು ಬರಲಿದೆ. ಇಂದು ನಗರ ಜೀವನವನ್ನು ಕಷ್ಟಕರವನ್ನಾಗಿ ಮಾಡುತ್ತಿರುವ ಯಾವುದೇ ಸಮಸ್ಯೆಯಿಂದ ಆಗ ಜೀವನವು ನಾಶವಾಗದು.​—⁠2 ಪೇತ್ರ 3:13. (g04 11/8)

[ಪಾದಟಿಪ್ಪಣಿಗಳು]

^ ರೈಲುಮಾರ್ಗದ ನಿರ್ಮಾಣದ ಕುರಿತು ಸಂಪೂರ್ಣ ವಿವರಣೆಗಾಗಿ, 1998, ಸೆಪ್ಟೆಂಬರ್‌ 22ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಪುಟ 21-4ರಲ್ಲಿರುವ “ಪೂರ್ವ ಆಫ್ರಿಕದ ‘ಲುನಾಟಿಕ್‌ ಎಕ್ಸ್‌ಪ್ರೆಸ್‌’” ಎಂಬ ಲೇಖನವನ್ನು ನೋಡಿರಿ.

^ ಇಸವಿ 2003, ಜೂನ್‌ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಪುಟ 24-7ನ್ನು ನೋಡಿ.

[ಪುಟ 16ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ನೈರೋಬಿ

[ಪುಟ 18ರಲ್ಲಿರುವ ಚಿತ್ರ]

ಮೌಂಟ್‌ ಕಿಲಿಮಂಜಾರೊ

[ಪುಟ 18ರಲ್ಲಿರುವ ಚಿತ್ರ]

ಮೌಂಟ್‌ ಕೆನ್ಯ

[ಕೃಪೆ]

Duncan Willetts, Camerapix

[ಪುಟ 18ರಲ್ಲಿರುವ ಚಿತ್ರ]

ತೆರೆದ ಮಾರುಕಟ್ಟೆ

[ಪುಟ 19ರಲ್ಲಿರುವ ಚಿತ್ರ]

1931ರಲ್ಲಿ ಫ್ರ್ಯಾಂಕ್‌ ಮತ್ತು ಗ್ರೇ ಸ್ಮಿತ್‌

[ಪುಟ 17ರಲ್ಲಿರುವ ಚಿತ್ರ ಕೃಪೆ]

© Crispin Hughes/Panos Pictures