ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಇದು ಜನರಿಗೆ ತಿಳಿದಿರುತ್ತಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು!”

“ಇದು ಜನರಿಗೆ ತಿಳಿದಿರುತ್ತಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು!”

“ಇದು ಜನರಿಗೆ ತಿಳಿದಿರುತ್ತಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು!”

ಅನೇಕ ಯುವ ಜನರು ತಮ್ಮ ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಭೌತಿಕ ಗುರಿಗಳನ್ನು ತಲಪಲು ಪ್ರಯತ್ನಿಸುತ್ತಾರೆ, ಆದರೆ ಡೇವಿಡ್‌ಗೆ ಬೇರೆ ಗುರಿಗಳಿದ್ದವು. 2003ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ಅವನು ಮತ್ತು ಅವನ ಸ್ನೇಹಿತನೊಬ್ಬನು ಯುನೈಟಡ್‌ ಸ್ಟೇಟ್ಸ್‌ನ ಇಲಿನ್ವಾಯ್‌ನಿಂದ ಡೊಮಿನಿಕನ್‌ ರಿಪಬ್ಲಿಕ್‌ಗೆ ಸ್ಥಳಾಂತರಿಸಿದರು. * ಸ್ನೇಹಿತರಿಂದ ಮತ್ತು ಕುಟುಂಬದವರಿಂದ ಡೇವಿ ಎಂದು ಕರೆಯಲ್ಪಡುತ್ತಿದ್ದ ಅವನು, ಸ್ಪ್ಯಾನಿಷ್‌ ಭಾಷೆಯನ್ನು ಕಲಿತು ಯೆಹೋವನ ಸಾಕ್ಷಿಗಳ ನಾವಾಸ್‌ ಸಭೆಯೊಂದಿಗೆ ಅದರ ಬೈಬಲ್‌ ಶಿಕ್ಷಣ ಕೆಲಸದಲ್ಲಿ ಜೊತೆಗೂಡಲು ನಿರ್ಧರಿಸಿದನು. ಸಭೆಯು ಅವನನ್ನು ಆದರಣೀಯವಾಗಿ ಸ್ವಾಗತಿಸಿತು. ಆ ಸಭೆಯ ಏಕಮಾತ್ರ ಹಿರಿಯರಾದ ಕ್ವಾನ್‌ ತಿಳಿಸುವುದು: “ಡೇವಿ ತನಗೆ ಹೇಳಲ್ಪಡುತ್ತಿದ್ದ ಎಲ್ಲ ಕೆಲಸವನ್ನೂ ಮಾಡುತ್ತಿದ್ದನು. ಇತರರಿಗಾಗಿ ಆತನು ಯಾವಾಗಲೂ ತನ್ನನ್ನು ನೀಡಿಕೊಂಡನು ಮತ್ತು ಸಹೋದರರು ಅವನನ್ನು ಬಹಳವಾಗಿ ಪ್ರೀತಿಸಿದರು.”

ಡೇವಿ ತನ್ನ ನೇಮಕವನ್ನು ಬಹಳವಾಗಿ ಪ್ರೀತಿಸಿದನು. ಯುನೈಟಡ್‌ ಸ್ಟೇಟ್ಸ್‌ನಲ್ಲಿದ್ದ ತನ್ನ ಸ್ನೇಹಿತನಿಗೆ ಅವನು ಹೀಗೆ ಬರೆದಿದ್ದನು: “ನಾನು ಇಲ್ಲಿ ನನ್ನ ಜೀವಿತವನ್ನು ಬಹಳವಾಗಿ ಆನಂದಿಸುತ್ತಿದ್ದೇನೆ. ಶುಶ್ರೂಷೆಯು ಎಷ್ಟು ಚೈತನ್ಯದಾಯಕವಾಗಿದೆ! ಪ್ರತಿ ಮನೆಯಲ್ಲಿ ನಾವು ಸುಮಾರು 20 ನಿಮಿಷಗಳ ವರೆಗೆ ಮಾತಾಡುತ್ತೇವೆ, ಏಕೆಂದರೆ ನಾವೇನನ್ನು ಹೇಳುತ್ತೇವೊ ಅದೆಲ್ಲವನ್ನು ಜನರು ಕೇಳಬಯಸುತ್ತಾರೆ. ನಾನು ಈಗಾಗಲೇ ಆರು ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೇನೆ, ಆದರೆ ನಮಗೆ ಇನ್ನೂ ಹೆಚ್ಚಿನ ಸಹೋದರ ಸಹೋದರಿಯರ ಅಗತ್ಯವಿದೆ. 30 ರಾಜ್ಯ ಪ್ರಚಾರಕರಿರುವ ನಮ್ಮ ಸಭೆಯ ಕೂಟಕ್ಕೆ ಒಮ್ಮೆ 103 ಮಂದಿ ಹಾಜರಾದರು!”

ದುಃಖಕರವಾಗಿ, 2004ರ ಏಪ್ರಿಲ್‌ 24ರಂದು ಒಂದು ಅಪಘಾತವು ಡೇವಿಯ ಪ್ರಾಣವನ್ನು ಆಹುತಿ ತೆಗೆದುಕೊಂಡಿತು. ಅವನೊಂದಿಗೆ ಅದೇ ಸಭೆಗೆ ಸೇರಿದ ಇನ್ನೊಬ್ಬ ಯುವಕನೂ ಮರಣವನ್ನಪ್ಪಿದನು. ತನ್ನ ಮರಣದ ತನಕ ತಾನು ಮಾಡುತ್ತಿದ್ದ ಕೆಲಸದಲ್ಲಿ ಡೇವಿ ಬಹಳ ಉತ್ಸುಕನಾಗಿದ್ದನು ಮತ್ತು ತನ್ನ ಹುಟ್ಟೂರಿನಲ್ಲಿದ್ದ ಇತರ ಯುವಕರು ಸಹ ಇಲ್ಲಿಗೆ ಬಂದು ತನ್ನೊಂದಿಗೆ ಜೊತೆಗೂಡುವಂತೆ ಉತ್ತೇಜಿಸುತ್ತಿದ್ದನು. “ಅದು ನಿನ್ನ ದೃಷ್ಟಿಕೋನವನ್ನು ಬದಲಾಯಿಸುವುದು,” ಎಂಬುದಾಗಿ ಅವನು ಒಬ್ಬಾಕೆ ಯುವಪ್ರಾಯದ ಸಾಕ್ಷಿಗೆ ಹೇಳಿದ್ದನು.

ಸ್ವತಃ ಡೇವಿ ಒಂದು ವಿಷಯದಲ್ಲಿ ತನ್ನ ದೃಷ್ಟಿಕೋನವು ಬದಲಾದದ್ದನ್ನು ನೋಡಿದನು. ಅದು ಭೌತಿಕ ವಿಷಯಗಳ ಕುರಿತಾದ ಅವನ ದೃಷ್ಟಿಕೋನವಾಗಿತ್ತು. ಅವನ ತಂದೆಯು ಜ್ಞಾಪಿಸಿಕೊಳ್ಳುವುದು: “ಡೇವಿ ಒಮ್ಮೆ ಮನೆಗೆ ಭೇಟಿನೀಡಿದಾಗ, ಅವನನ್ನು ಹಿಮದಲ್ಲಿ ಜಾರಾಟವಾಡುವ ಒಂದು ಸಂಚಾರಕ್ಕೆ ಆಮಂತ್ರಿಸಲಾಯಿತು. ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂದು ಅವನು ವಿಚಾರಿಸಿದನು. ಎಷ್ಟಾಗುವುದೆಂದು ಅವನಿಗೆ ತಿಳಿಸಲ್ಪಟ್ಟಾಗ, ಇಷ್ಟೊಂದು ಹಣವನ್ನು ತಾನು ಖರ್ಚುಮಾಡಲು ಸಿದ್ಧನಿಲ್ಲ, ಏಕೆಂದರೆ ಅಷ್ಟೇ ಹಣದಲ್ಲಿ ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ತಾನು ಅನೇಕ ತಿಂಗಳುಗಳ ವರೆಗೆ ಜೀವನ ನಡೆಸಸಾಧ್ಯವಿದೆ ಎಂದು ಅವನು ಹೇಳಿದನು.”

ಡೇವಿಯ ಹುರುಪು ಇತರರನ್ನೂ ಪ್ರಭಾವಿಸಿತು. ಅವನ ಹುಟ್ಟೂರಿನಲ್ಲಿದ್ದ ಒಬ್ಬ ಯುವತಿಯು ಹೇಳುವುದು: “ಡೇವಿ ಏನೆಲ್ಲಾ ಮಾಡುತ್ತಿದ್ದಾನೆ ಮತ್ತು ಎಷ್ಟು ಸಂತೋಷದಿಂದಿದ್ದಾನೆ ಎಂಬುದನ್ನು ನಾನು ಕೇಳಿಸಿಕೊಂಡಾಗ, ನಾನು ಸಹ ಅಂತಹದ್ದೇ ಕಾರ್ಯವನ್ನು ಮಾಡಸಾಧ್ಯವಿದೆಯೆಂದು ಗ್ರಹಿಸಿದೆ. ಡೇವಿಯ ಮರಣವು, ಒಂದುವೇಳೆ ನಾನು ಸತ್ತರೆ ಜನರು ನನ್ನ ಕುರಿತು ಏನು ಮಾತಾಡುವರು ಮತ್ತು ಈಗ ನಾನು ಇತರರ ಜೀವನದ ಮೇಲೆ ಅಷ್ಟೇ ಸಕಾರಾತ್ಮಕ ಪ್ರಭಾವವನ್ನು ಬೀರುವೆನೋ ಎಂಬುದನ್ನು ಆಲೋಚಿಸುವಂತೆ ಪ್ರಚೋದಿಸಿದೆ.”

ಯೆಹೋವನ ಸಾಕ್ಷಿಗಳಾದ ಡೇವಿಯ ಹೆತ್ತವರಿಗೂ ಅವನ ಒಡಹುಟ್ಟಿದವರಿಗೂ ಬರಲಿರುವ ನೀತಿಯ ನೂತನ ಲೋಕದಲ್ಲಿ ದೇವರು ಅವನನ್ನು ಪುನರುತ್ಥಾನಗೊಳಿಸುವನು ಎಂಬ ಪೂರ್ಣ ಭರವಸೆಯಿದೆ. (ಯೋಹಾನ 5:28, 29; ಪ್ರಕಟನೆ 21:1-4) ಅಷ್ಟರ ತನಕ ಅವರು, ಡೇವಿ ತನ್ನ ಜೀವನವನ್ನು ಸಾಧ್ಯವಿದ್ದ ಅತ್ಯುತ್ತಮ ರೀತಿಯಲ್ಲಿ ತನ್ನ ಸೃಷ್ಟಿಕರ್ತನನ್ನು ಸೇವಿಸಲು ಉಪಯೋಗಿಸಿದನು ಎಂಬ ಸಂಗತಿಯಿಂದ ಸಾಂತ್ವನವನ್ನು ಪಡೆದುಕೊಳ್ಳುತ್ತಾರೆ. (ಪ್ರಸಂಗಿ 12:⁠1) ಎಲ್ಲಿ ಹೆಚ್ಚಿನ ಸಹಾಯದ ಅಗತ್ಯವಿದೆಯೊ ಅಲ್ಲಿ ಸೇವೆಸಲ್ಲಿಸಲು ತಾನು ಮಾಡಿದ ನಿರ್ಧಾರದ ಕುರಿತಾಗಿ ಮಾತಾಡುತ್ತಾ ಒಮ್ಮೆ ಡೇವಿ ಹೇಳಿದ್ದು: “ಪ್ರತಿಯೊಬ್ಬ ಯುವ ವ್ಯಕ್ತಿಯೂ ಇದನ್ನೇ ಮಾಡಬೇಕು ಮತ್ತು ನಾನು ಆನಂದಿಸುತ್ತಿರುವ ಅದೇ ಆನಂದವನ್ನು ಸವಿದುನೋಡಬೇಕೆಂದು ನಾನು ಹಾರೈಸುತ್ತೇನೆ. ಪೂರ್ಣಪ್ರಾಣದಿಂದ ನಾವು ಯೆಹೋವನನ್ನು ಸೇವಿಸುವುದಕ್ಕಿಂತ ಮಿಗಿಲಾದ ವಿಷಯವು ಇನ್ನೊಂದಿಲ್ಲ. ಇದು ಜನರಿಗೆ ತಿಳಿದಿರುತ್ತಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು!” (g05 1/8)

[ಪಾದಟಿಪ್ಪಣಿ]

^ ಡೇವಿಡ್‌ನಂತೆ ಅನೇಕ ಯೆಹೋವನ ಸಾಕ್ಷಿಗಳು, ಎಲ್ಲಿ ಹೆಚ್ಚಿನ ರಾಜ್ಯ ಪ್ರಚಾರಕರ ಅಗತ್ಯವಿದೆಯೊ ಅಂಥ ಸ್ಥಳಕ್ಕೆ ಹೋಗಲು ತಮ್ಮನ್ನು ನೀಡಿಕೊಂಡಿದ್ದಾರೆ. ಕೆಲವರು ಇತರರಿಗೆ ದೇವರ ವಾಕ್ಯದ ಸತ್ಯಗಳನ್ನು ಕಲಿಸುವ ಸಲುವಾಗಿ ಒಂದು ವಿದೇಶಿ ಭಾಷೆಯನ್ನೂ ಕಲಿಯುತ್ತಾರೆ. ಅಂಥ ಸ್ವಯಂಸೇವಕರಲ್ಲಿ 400ಕ್ಕಿಂತಲೂ ಹೆಚ್ಚಿನವರು ಇಂದು ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ಸೇವೆಸಲ್ಲಿಸುತ್ತಿದ್ದಾರೆ.