ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ನಿಮ್ಮ ಮಕ್ಕಳನ್ನು ವಾಚನಕ್ಕೆ ಪರಿಚಯಿಸಿರಿ

ರಿಫಾರ್ಮಾ ಎಂಬ ಮೆಕ್ಸಿಕನ್‌ ವಾರ್ತಾಪತ್ರಿಕೆಯಲ್ಲಿ ವರದಿಸಲ್ಪಟ್ಟಂತೆ, “ಒಳ್ಳೇ ವಾಚಕರ ಮಕ್ಕಳು ತಮ್ಮ ಹೆತ್ತವರ ಮಾದರಿಯನ್ನೇ ಅನುಸರಿಸುತ್ತಾರೆ ಎಂಬುದನ್ನು ಗಮನಿಸಲಾಗಿದೆ” ಎಂದು ನರಭಾಷಾಧ್ಯಯನ ವಿಶೇಷಜ್ಞರಾದ ಬೀಆಟ್ರೇಸ್‌ ಗೊನ್‌ಸಾಲೆಸ್‌ ಓರ್ಟ್ಯೂನ್ಯೊ ಅವರು ತಿಳಿಸುತ್ತಾರೆ. ಮಕ್ಕಳಲ್ಲಿ ಕಲಿಯುವ ಸಾಮರ್ಥ್ಯವು ಅತ್ಯಧಿಕವಾಗಿರುವುದರಿಂದ, ಅವರು ಸ್ವರಾಕ್ಷರಗಳನ್ನು ಗುರುತಿಸುವ ಮುಂಚೆಯೇ ವಾಚನದಲ್ಲಿನ ಅವರ ಆಸಕ್ತಿಯನ್ನು ಉತ್ತೇಜಿಸುವುದು ಒಳ್ಳೇದಾಗಿದೆ. ಉದಾಹರಣೆಗೆ, ಅವರು ತಮ್ಮ ಕಲ್ಪನಾಶಕ್ತಿಯನ್ನು ವಿಕಸಿಸಿಕೊಳ್ಳಲು ಸಹಾಯಮಾಡುವಂಥ ಕಥೆಗಳನ್ನು ಅವರಿಗೆ ಓದಿಹೇಳಸಾಧ್ಯವಿದೆ. ಮಕ್ಕಳನ್ನು ವಾಚನಕ್ಕೆ ಪರಿಚಯಿಸಲಿಕ್ಕಾಗಿ ಆ ವಾರ್ತಾಪತ್ರಿಕೆಯು ಈ ಮುಂದಿನ ಸಲಹೆಗಳನ್ನು ಕೊಡುತ್ತದೆ: “ಅವರೊಂದಿಗೆ ಕುಳಿತುಕೊಳ್ಳಿ . . . ಅವರು ಪುಸ್ತಕದ ಪುಟಗಳನ್ನು ತಿರುಗಿಸಲು, ಅವರಿಗೆ ಇಷ್ಟಬಂದಾಗ ಮಧ್ಯೆ ತಡೆಮಾಡಲು ಮತ್ತು ಪ್ರಶ್ನೆಗಳನ್ನು ಕೇಳಲು ಬಿಡಿರಿ . . . ಆ ಕಥೆಯಲ್ಲಿರುವ ವಸ್ತುಗಳು ಹಾಗೂ ಪಾತ್ರಗಳ ಕುರಿತು ನಿಮ್ಮೊಂದಿಗೆ ಮಾತಾಡುವಂತೆ ಅವರಿಗೆ ಹೇಳಿರಿ. ಅವರ ಪ್ರಶ್ನೆಗಳಿಗೆಲ್ಲಾ ಉತ್ತರ ನೀಡಿರಿ. . . . ಪುಸ್ತಕದಲ್ಲಿರುವ ವಿಷಯವನ್ನು ಅವರ ಸ್ವಂತ ಅನುಭವಗಳಿಗೆ ತುಲನೆಮಾಡಿರಿ.”(g05 1/8)

ಆನೆಗಳು ಮತ್ತು ಮೆಣಸಿನಕಾಯಿ

ಆಫ್ರಿಕದ ವನ್ಯಜೀವಿಗಳ ಉದ್ಯಾನವನಗಳಲ್ಲಿರುವ ಆನೆಗಳು ಬಹಳ ಸಮಯದಿಂದಲೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಕರು ಹಾಗೂ ರೈತರ ನಡುವಣ ಜಗಳಕ್ಕೆ ಕಾರಣವಾಗಿವೆ. ಬೇಲಿಗಳು, ಪಂಜುಗಳು, ತಮಟೆಗಳು, ಇವೆಲ್ಲವೂ ಆನೆಗಳನ್ನು ಉದ್ಯಾನವನದ ಸರಹದ್ದಿನೊಳಗೇ ಇರಿಸುವುದರಲ್ಲಿ ವಿಫಲವಾಗಿವೆ. ಅಲೆದಾಡುವಂಥ ಆನೆಗಳು ಬಹಳಷ್ಟು ಸಲ ಬೆಳೆಗಳನ್ನು ನಾಶಮಾಡಿವೆ ಮತ್ತು ಜನರನ್ನೂ ತುಳಿದು ಸಾಯಿಸಿವೆ. ಆದರೆ ಕೊನೆಗೂ ಒಂದು ನಿರೋಧಕವನ್ನು ಕಂಡುಹಿಡಿಯಲಾಗಿದೆ; ಅದು ಮೆಣಸಿನಕಾಯಿಯ ಗಿಡವೇ ಆಗಿದೆ. ಉದ್ಯಾನವನದ ಗಡಿಗಳುದ್ದಕ್ಕೂ ಈ ಗಿಡಗಳನ್ನು ಬೆಳೆಸಿರುವುದರಿಂದ ಆನೆಗಳು ಗಡಿಯನ್ನು ದಾಟಿ ಹೊರಗೆ ಹೋಗುವುದಿಲ್ಲ, ಏಕೆಂದರೆ “ಆ ಗಿಡದ ವಾಸನೆಯು ಅವುಗಳನ್ನು ಹಿಮ್ಮೆಟ್ಟಿಸುತ್ತದೆ” ಎಂದು ಆಫ್ರಿಕದ ದ ವಿಟ್ನೆಸ್‌ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಇದರಿಂದ ಸಮಾಧಾನದ ನಿಟ್ಟುಸಿರುಬಿಡುತ್ತಿರುವ ಉದ್ಯಾನವನದ ರಕ್ಷಕರು ಈಗ “ಆನೆಗಳನ್ನು ಉದ್ಯಾನವನಕ್ಕೆ ಹಿಂದಟ್ಟುವ” ಆವಶ್ಯಕತೆಯಿಲ್ಲ ಮತ್ತು ಸ್ಥಳಿಕ ರೈತರ ಬೆಳೆಗಳಿಗೆ ಮಾಡಲ್ಪಡುವ ಹಾನಿಯು ಸಹ ಕಡಿಮೆಯಾಗಿದೆ. ಈ ಮೆಣಸಿನಕಾಯಿಗಳು ಆದಾಯದ ಲಾಭಕರ ಮೂಲವೂ ಆಗಿ ಪರಿಣಮಿಸಬಹುದು.(g05 1/8)

ವೃದ್ಧರು ಒಂದು ಹೊರೆಯಲ್ಲ

“ವೃದ್ಧ ಜನರನ್ನು ನೋಡಿಕೊಳ್ಳುವುದರ ಖರ್ಚುವೆಚ್ಚಗಳ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸುವುದಕ್ಕೆ ಬದಲಾಗಿ, ವೃದ್ಧರು ಸಂಬಳವನ್ನು ತೆಗೆದುಕೊಳ್ಳದೇ ಮಾಡುವ ಕೆಲಸಗಳಿಂದ ಸಿಗುವ ಪ್ರಯೋಜನಗಳು ಮತ್ತು ಉಳಿತಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಪ್ರಾಮುಖ್ಯವಾದದ್ದಾಗಿದೆ” ಎಂದು ಕುಟುಂಬ ಅಧ್ಯಯನಗಳ ಕುರಿತಾದ ಆಸ್ಟ್ರೇಲಿಯನ್‌ ಸಂಸ್ಥೆಯಿಂದ ಪ್ರಕಟಿಸಲ್ಪಟ್ಟ ಒಂದು ವರದಿಯು ತಿಳಿಸುತ್ತದೆ. “ವೃದ್ಧರು ಸಂಬಳವನ್ನು ತೆಗೆದುಕೊಳ್ಳದೇ ಮಾಡುವ ಕೆಲಸದಲ್ಲಿ ಹೆಚ್ಚಿನದ್ದು, ಹಣಕೊಟ್ಟೂ ಪಡೆಯಲು ಸಾಧ್ಯವಿಲ್ಲದಿರುವ ರೀತಿಯ ಸಹಾಯವನ್ನು ಲಭ್ಯಗೊಳಿಸುತ್ತದೆ.” ಆ ಅಧ್ಯಯನವು ಬಯಲುಪಡಿಸಿದ್ದೇನೆಂದರೆ, “ಆಸ್ಟ್ರೇಲಿಯದಲ್ಲಿ 65ಕ್ಕಿಂತಲೂ ಹೆಚ್ಚು ಪ್ರಾಯವಾಗಿರುವವರು, ಯಾವುದೇ ಸಂಬಳವನ್ನು ತೆಗೆದುಕೊಳ್ಳದೆ ಕುಟುಂಬದೊಳಗೆ ಮಾಡುವ ಕೆಲಸದ ಮೂಲಕ [ಸಮಾಜಕ್ಕೆ] ವಾರ್ಷಿಕವಾಗಿ ಬಹುಮಟ್ಟಿಗೆ 3,900 ಕೋಟಿ ಡಾಲರುಗಳನ್ನು ಕಾಣಿಕೆಯಾಗಿ ನೀಡುತ್ತಾರೆ.” ಇಂಥ ಸ್ವಯಂಸೇವೆಯ ಚಟುವಟಿಕೆಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ಅಸ್ವಸ್ಥ ವಯಸ್ಕರ ಶುಶ್ರೂಷೆಮಾಡುವುದು ಹಾಗೂ ಮನೆಗೆಲಸವನ್ನು ನಿರ್ವಹಿಸುವುದು ಒಳಗೂಡಿದೆ. ಆ ಅಧ್ಯಯನದ ಲೇಖಕರು ಸೂಚಿಸುವಂತೆ, ಇಂಥ ಸಂಬಳವಿಲ್ಲದ ಕೆಲಸವು “ಸಮಾಜವನ್ನು ಒಟ್ಟಾಗಿರಿಸುವ ಸಾಮಾಜಿಕ ‘ಗೋಂದಿ’ನಂತೆ ಕಾರ್ಯನಡಿಸಬಲ್ಲದು.” ಅವರ ಸೇವೆಯ ಮೌಲ್ಯವನ್ನು ಕೇವಲ ಹಣಕಾಸಿನ ಮೌಲ್ಯದಲ್ಲಿ ಅಳೆಯಲು ಸಾಧ್ಯವಿಲ್ಲ. (g05 1/8)

ಅತಿ ಹೆಚ್ಚು ಸಂಖ್ಯೆಯ ಏಡ್ಸ್‌ ರೋಗಿಗಳು

ಇಸವಿ 2003ರಲ್ಲಿ ಐವತ್ತು ಲಕ್ಷ ಜನರು ಏಡ್ಸ್‌ ರೋಗದಿಂದ ಬಾಧಿತರಾದರು ಮತ್ತು ಇದು “ಈ ಸಾಂಕ್ರಾಮಿಕ ರೋಗವು ಇಪ್ಪತ್ತು ವರ್ಷಗಳ ಹಿಂದೆ ಆರಂಭವಾದಂದಿನಿಂದ ಒಂದೇ ಒಂದು ವರ್ಷದಲ್ಲಿ ವರದಿಸಲ್ಪಟ್ಟಿರುವ ಅತಿ ದೊಡ್ಡ ಸಂಖ್ಯೆಯಾಗಿದೆ” ಎಂದು ದ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿಸುತ್ತದೆ. “ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿ ಏಚ್‌ಐವಿಯನ್ನು ಹೊಡೆದೋಡಿಸಲಿಕ್ಕಾಗಿ ಲೋಕವ್ಯಾಪಕವಾಗಿ ಶ್ರದ್ಧಾಪೂರ್ವಕ ಪ್ರಯತ್ನವು ಮಾಡಲ್ಪಡುತ್ತಿರುವುದಾದರೂ, ಏಡ್ಸ್‌ ವೈರಸ್‌ ಹೆಚ್ಚೆಚ್ಚು ಸಂಖ್ಯೆಯ ಜನರನ್ನು ಬಾಧಿಸುತ್ತಾ ಮುಂದುವರಿಯುತ್ತಿದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಮಂದಿಯನ್ನು ಕೊಲ್ಲುತ್ತಿದೆ.” ವಿಶ್ವ ಸಂಸ್ಥೆ ಮತ್ತು ಇತರ ಗುಂಪುಗಳಿಂದ ಪ್ರಾಯೋಜಿತವಾದ ‘ಅನ್‌ಏಡ್ಸ್‌’ ಎಂಬ ಏಡ್ಸ್‌ ಕಾರ್ಯಕ್ರಮದಿಂದ ಪ್ರಕಟಿಸಲ್ಪಟ್ಟ ಒಂದು ದತ್ತಾಂಶಕ್ಕನುಸಾರ, ಪ್ರತಿ ವರ್ಷ ಸುಮಾರು 30 ಲಕ್ಷ ಜನರು ಏಡ್ಸ್‌ ರೋಗದಿಂದ ಸಾಯುತ್ತಾರೆ ಮತ್ತು 1981ರಲ್ಲಿ ಈ ರೋಗವು ಕಂಡುಹಿಡಿಯಲ್ಪಟ್ಟಂದಿನಿಂದ ಇಷ್ಟರ ತನಕ 2 ಕೋಟಿಗಿಂತಲೂ ಹೆಚ್ಚು ಜನರು ಸತ್ತಿದ್ದಾರೆ. ಪ್ರಚಲಿತವಾಗಿ, 3.8 ಕೋಟಿ ಜನರು ಏಚ್‌ಐವಿಯಿಂದ ಬಾಧಿತರಾಗಿದ್ದಾರೆ ಎಂದು ಯು.ಎನ್‌. ಏಜೆನ್ಸಿಯೊಂದು ಅಂದಾಜುಮಾಡುತ್ತದೆ. ಆಫ್ರಿಕದ ಸಹಾರಾ ಮರುಭೂಮಿಯ ದಕ್ಷಿಣ ಭಾಗದಲ್ಲಿ 2.5 ಕೋಟಿಯಷ್ಟು ಏಡ್ಸ್‌ ರೋಗಿಗಳಿದ್ದು, ಈ ಪ್ರಾಂತವೇ ಅತಿ ಮಾರಕವಾಗಿ ಬಾಧಿತವಾಗಿರುವ ಪ್ರದೇಶವಾಗಿದೆ; ಇದರ ಬಳಿಕ ದಕ್ಷಿಣ ಹಾಗೂ ಆಗ್ನೇಯ ಏಷಿಯಾ ಈ ಶ್ರೇಣಿಯಲ್ಲಿದ್ದು, 65 ಲಕ್ಷ ಜನರು ಬಾಧಿತರಾಗಿದ್ದಾರೆ. “ಲೋಕವ್ಯಾಪಕವಾಗಿರುವ ಎಲ್ಲಾ ಹೊಸ ಏಚ್‌ಐವಿ ರೋಗಿಗಳಲ್ಲಿ ಸುಮಾರು ಅರ್ಧದಷ್ಟು ಮಂದಿ 15ರಿಂದ 24ರ ಪ್ರಾಯದವರಾಗಿರುವ ಯುವ ಜನರಾಗಿದ್ದಾರೆ” ಎಂದು ಆ ವಾರ್ತಾಪತ್ರಿಕೆಯು ತಿಳಿಸುತ್ತದೆ. (g05 2/22)

ಮರಗಳಿಗೆ ಎತ್ತರದ ಮಿತಿ

“ಮಂಜತ್ತಿ (ರೆಡ್‌ವುಡ್‌) ಮರಗಳು ಭೂಮಿಯಲ್ಲಿರುವ ಅತಿ ಎತ್ತರವಾದ ಸಜೀವ ವಸ್ತುಗಳಾಗಿವೆ, ಆದರೆ ಅವು ಎಷ್ಟು ಎತ್ತರಕ್ಕೆ ಬೆಳೆಯಸಾಧ್ಯವಿದೆ ಎಂಬುದಕ್ಕೆ ಒಂದು ಮಿತಿಯಿದೆ, ಮತ್ತು ಪರಿಸ್ಥಿತಿಗಳು ಎಷ್ಟೇ ಅನುಕೂಲಕರವಾಗಿರುವುದಾದರೂ ಇದನ್ನು ಮೀರಿಹೋಗುವ ಸಂಭವನೀಯತೆ ಇಲ್ಲ” ಎಂದು ಲಾಸ್‌ ವೆಗಾಸ್‌ ರಿವ್ಯೂ-ಜರ್ನಲ್‌ ವಾರ್ತಾಪತ್ರಿಕೆಯು ತಿಳಿಸುತ್ತದೆ. ಸದ್ಯಕ್ಕೆ ಲೋಕದಲ್ಲಿರುವ ಅತಿ ಎತ್ತರವಾದ ಮರದ (110 ಮೀಟರುಗಳು ಅಂದರೆ ಸುಮಾರು 30 ಮಹಡಿಗಳುಳ್ಳ ಕಟ್ಟಡದಷ್ಟು ಎತ್ತರ) ಹಾಗೂ ಇತರ ನಾಲ್ಕು ರೆಡ್‌ವುಡ್‌ ಮರಗಳ ಕುರಿತಾದ ಒಂದು ಅಧ್ಯಯನವು, ಒಂದು ರೆಡ್‌ವುಡ್‌ ಮರವು ಗರಿಷ್ಠವೆಂದರೆ ಸುಮಾರು 130 ಮೀಟರುಗಳಷ್ಟು ಎತ್ತರಕ್ಕೆ ಬೆಳೆಯಬಹುದು ಎಂದು ಸೂಚಿಸುತ್ತದೆ. ಈ ಮರದ ಎಲೆಗಳಿಂದ ತೇವಾಂಶವು ಬಾಷ್ಪೀಕರಣಗೊಳ್ಳುವುದರಿಂದ, ನೀರನ್ನು ಬೇರುಗಳಿಂದ ಮೇಲಕ್ಕೆ ಸೆಳೆದು, ಮರದ ತುದಿ ಭಾಗಕ್ಕೆ ತಲಪಿಸಬೇಕಾಗುತ್ತದೆ, ಅಂದರೆ ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಕಾರ್ಯನಡಿಸಬೇಕಾಗುತ್ತದೆ. ಈ ಕಾರ್ಯಗತಿಗೆ ಹೆಚ್ಚುಕಡಿಮೆ 24 ದಿನಗಳು ತಗಲಸಾಧ್ಯವಿದೆ ಎಂದು ಸಂಶೋಧಕರು ಅಂದಾಜುಮಾಡುತ್ತಾರೆ. ಸೈಲೆಮ್‌ ಎಂದು ಕರೆಯಲ್ಪಡುವ ನಾಳಗಳ ಮೂಲಕ ನೀರನ್ನು ಸೆಳೆಯುವಾಗ, ನೀರಿನ ಭಾರವು ಅತ್ಯಧಿಕಗೊಳ್ಳುತ್ತಾ ಹೋಗುತ್ತದೆ ಮತ್ತು ನೀರಿನ ಸರಬರಾಯಿಯು ಸ್ಥಗಿತಗೊಳ್ಳುತ್ತದೆ. ಇದು ಮರದ ಎತ್ತರವನ್ನು ಅಲ್ಲಿಗೆ ನಿಲ್ಲಿಸುತ್ತದೆ. ಇಷ್ಟರ ತನಕ ದಾಖಲೆಯಾಗಿರುವ ಅತಿ ಎತ್ತರವಾದ ಮರವು ಡಗ್ಲಸ್‌ ಫರ್‌ ಮರವಾಗಿದ್ದು, ಅದು ಸುಮಾರು 126 ಮೀಟರುಗಳಷ್ಟು ಎತ್ತರವನ್ನು ತಲಪಿತ್ತು. (g05 2/22)

ಪ್ಯಾಂಡಗಳು ಮತ್ತು ಅವುಗಳ ಬಿದಿರು

“ಚೀನಾ ದೇಶದ ಹಾಗೂ ವನ್ಯಜೀವಿ ಸಂರಕ್ಷಣಾಲಯದ ಸಂಕೇತವಾಗಿರುವ ದೈತ್ಯ ಗಾತ್ರದ ಪ್ಯಾಂಡವು ಈ ಮುಂಚೆ ನಂಬಲಾಗುತ್ತಿದ್ದಂತೆ ಅಳಿವಿನ ಅಂಚಿನಲ್ಲಿಲ್ಲ” ಎಂದು ಲಂಡನಿನ ದ ಡೈಲಿ ಟೆಲಿಗ್ರಾಫ್‌ ತಿಳಿಸುತ್ತದೆ. ಲೋಕವ್ಯಾಪಕ ನೈಸರ್ಗಿಕ ನಿಧಿ ಮತ್ತು ಚೀನೀ ಸರಕಾರದಿಂದ ನಡೆಸಲ್ಪಟ್ಟ ನಾಲ್ಕು ವರ್ಷದ ಅಧ್ಯಯನವೊಂದು, ವನದಲ್ಲಿ 1,000ದಿಂದ 1,100ರಷ್ಟು ಪ್ಯಾಂಡಗಳು ಇವೆಯೆಂದು ಈ ಮುಂಚೆ ಅಂದಾಜುಮಾಡಲ್ಪಟ್ಟ ಸಂಖ್ಯೆಗೆ ಬದಲಾಗಿ 1,590ಕ್ಕಿಂತಲೂ ಹೆಚ್ಚು ಪ್ಯಾಂಡಗಳು ಇವೆ ಎಂದು ವರದಿಸಿದೆ. ಯಾವ ಕ್ಷೇತ್ರಗಳಲ್ಲಿ ಹುಡುಕಾಟ ನಡೆಸಬೇಕಾಗಿದೆ ಎಂಬುದನ್ನು ಗುರುತಿಸಲಿಕ್ಕಾಗಿ, ಉಪಗ್ರಹ-ಆಧಾರಿತ ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮನ್ನೂ ಒಳಗೊಂಡು ಪ್ರಗತಿಗೊಂಡಿರುವ ತಂತ್ರಜ್ಞಾನವನ್ನು ಉಪಯೋಗಿಸುವ ಮೂಲಕ ಈ ಹೆಚ್ಚು ನಿಷ್ಕೃಷ್ಟವಾದ ಸಂಖ್ಯೆಯನ್ನು ಪಡೆದುಕೊಳ್ಳಲಾಯಿತು. ದೊರೆತಂಥ ಫಲಿತಾಂಶಗಳು ವನ್ಯಜೀವಿ ಸಂರಕ್ಷಕರಿಗೆ ಸಿಹಿ ಸುದ್ದಿಯಾಗಿರುವುದಾದರೂ, ದೈತ್ಯಾಕಾರದ ಪ್ಯಾಂಡಗಳ ಮುಖ್ಯ ಆಹಾರವಾಗಿರುವ ಬಿದಿರು ಅರಣ್ಯನಾಶದಿಂದ ಗಂಭೀರವಾಗಿ ಅಪಾಯಕ್ಕೀಡಾಗಿದೆಯೆಂದು ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿರುವ ‘ವರ್ಲ್ಡ್‌ ಕನ್ಸರ್‌ವೇಷನ್‌ ಮೊನಿಟರಿಂಗ್‌ ಸೆಂಟರ್‌’ ಎಚ್ಚರಿಕೆ ನೀಡುತ್ತದೆ. ನಿರ್ದಿಷ್ಟವಾಗಿ ಬಿದಿರು ತೀವ್ರಗತಿಯ ಅರಣ್ಯನಾಶಕ್ಕೆ ಸುಲಭವಾಗಿ ಬಲಿಬೀಳುವಂತೆ ಯಾವುದು ಮಾಡುತ್ತದೆಂದರೆ, “ಪ್ರತಿಯೊಂದು ಜಾತಿಯ ಬಿದಿರಿನ ಒಂದೊಂದು ಪ್ರಭೇದವೂ ಪ್ರತಿ 20ರಿಂದ 100 ವರ್ಷಗಳಲ್ಲಿ ಏಕಕಾಲದಲ್ಲೇ ಒಂದು ಬಾರಿ ಹೂಬಿಡುತ್ತದೆ ಮತ್ತು ಒಣಗಿಹೋಗುತ್ತದೆ” ಎಂದು ಟೆಲಿಗ್ರಾಫ್‌ ವರದಿಸುತ್ತದೆ. (g05 3/8)

ತೀವ್ರಗತಿಯ ನಾಲಿಗೆಯಿರುವ ಗೋಸುಂಬೆ

ಒಂದು ಗೋಸುಂಬೆಯು ತನ್ನ ಆಹಾರವನ್ನು ಹಿಡಿಯಲಿಕ್ಕಾಗಿ ಅಷ್ಟು ತೀವ್ರಗತಿಯಲ್ಲಿ ತನ್ನ ನಾಲಿಗೆಯನ್ನು ಹೇಗೆ ಮುನ್ನೂಕುತ್ತದೆ? “ಇದರ ರಹಸ್ಯವೇನೆಂದರೆ, ಕಲ್ಲುಗುಂಡುಗಳನ್ನು ಎಸೆಯುವುದಕ್ಕೆ ಮೊದಲು ಒಂದು ಯಾಂತ್ರಿಕ ಕವಣೆಯ ಇಲ್ಯಾಸ್ಟಿಕ್‌ ಶಕ್ತಿಯನ್ನು ಸಂಗ್ರಹಿಸಿಕೊಳ್ಳುವಂತೆ ಗೋಸುಂಬೆಯಲ್ಲಿರುವ ಸ್ಪ್ರಿಂಗ್‌-ಲೋಡಿಂಗ್‌ ರಚನಾವಿಧವು ಶಕ್ತಿಯನ್ನು ಸಂಗ್ರಹಿಸಿಕೊಳ್ಳುತ್ತದೆ” ಎಂದು ನ್ಯೂ ಸೈಂಟಿಸ್ಟ್‌ ಪತ್ರಿಕೆಯು ವರದಿಸುತ್ತದೆ. ಗೋಸುಂಬೆಯ ನಾಲಿಗೆಯಲ್ಲಿರುವ ಕೋಶಗಳ ಸುತ್ತಲೂ “ವೇಗವರ್ಧಕ ಸ್ನಾಯುವಿದೆ” ಎಂಬುದು ವಿಜ್ಞಾನಿಗಳಿಗೆ ತಿಳಿದಿತ್ತು. ಈಗ, ನಿಧಾನಗತಿಯ ಚಲನೆಯ ವಿಡಿಯೋ ಫಿಲ್ಮ್‌ನ ಸಹಾಯದಿಂದ ಡಚ್‌ ಸಂಶೋಧಕರು ಕಂಡುಹಿಡಿದಿರುವುದೇನೆಂದರೆ, ಗೋಸುಂಬೆಯು ತನ್ನ ನಾಲಿಗೆಯನ್ನು ಮುಂಚಾಚುವುದಕ್ಕೆ ಕೇವಲ 200 ಮಿಲಿಸೆಕೆಂಡುಗಳಷ್ಟು ಮುಂಚೆ, “ಒಂದು ದೂರದರ್ಶಕದ ವಿಭಾಗಗಳಂತೆ, ನಾಲಿಗೆಯ ಒಳಗಿರುವ ಕೋಶಗಳನ್ನು ಒಂದರಮೇಲೊಂದು ಮೆದೆಮಾಡಿಟ್ಟು, ಅವುಗಳಲ್ಲಿ ಸ್ಪ್ರಿಂಗ್‌-ಲೋಡ್‌ ಶಕ್ತಿಯನ್ನು ತುಂಬಿಸಲಿಕ್ಕಾಗಿ ವೇಗವರ್ಧಕ ಸ್ನಾಯುವನ್ನು ಉಪಯೋಗಿಸುತ್ತದೆ. ಗೋಸುಂಬೆಯು ದಾಳಿಮಾಡುವಾಗ, ಅದುಮಿಟ್ಟ ಶಕ್ತಿಯು ಕೇವಲ 20 ಮಿಲಿಸೆಕೆಂಡುಗಳಲ್ಲಿ ಹೊರಹಾಕಲ್ಪಡಸಾಧ್ಯವಿದೆ” ಮತ್ತು ಆಹಾರವನ್ನು ಹಿಡಿಯಲಿಕ್ಕಾಗಿ “ಅದರ ನಾಲಿಗೆಯನ್ನು ವೇಗವಾಗಿ ಮುನ್ನೂಕುವಂತೆ ಇದು ಮಾಡುತ್ತದೆ.” (g05 3/22)