ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಾಯಂದಿರು ಎದುರಿಸುವ ಪಂಥಾಹ್ವಾನಗಳು

ತಾಯಂದಿರು ಎದುರಿಸುವ ಪಂಥಾಹ್ವಾನಗಳು

ತಾಯಂದಿರು ಎದುರಿಸುವ ಪಂಥಾಹ್ವಾನಗಳು

“ಮನೆಗೆ ಸಂಬಂಧಿಸಿದ ಕರ್ತವ್ಯಗಳೇ ಮಾನವಕುಲದ ಅತಿ ಪ್ರಾಮುಖ್ಯ ಕರ್ತವ್ಯಗಳಾಗಿವೆ. . . . ತಾಯಿಯು ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಒಂದೇ ಮುಂದಿನ ಸಂತತಿ ಎಂಬುದೇ ಇರುವುದಿಲ್ಲ ಅಥವಾ ಮುಂದಿನ ಸಂತತಿಯು ಇಲ್ಲದಿರುತ್ತಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವಷ್ಟರ ಮಟ್ಟಿಗೆ ಅದು ಕೆಟ್ಟುಹೋಗಿರುವುದು.”​⁠ಯುನೈಟಡ್‌ ಸ್ಟೇಟ್ಸ್‌ನ 26ನೇ ಅಧ್ಯಕ್ಷರಾದ ಥೀಅಡೋರ್‌ ರೂಸ್‌ವೆಲ್ಟ್‌.

ಮಾನವ ಜೀವಕ್ಕೆ ತಾಯಿಯು ಅತ್ಯಾವಶ್ಯಕ ಎಂಬುದು ನಿಜ, ಆದರೆ ಅವಳು ವಹಿಸುವ ಪಾತ್ರದಲ್ಲಿ ಮಗುವನ್ನು ಹೆರುವುದಕ್ಕಿಂತ ಹೆಚ್ಚಿನದ್ದು ಒಳಗೂಡಿದೆ. ಇಂದಿನ ಜಗತ್ತಿನ ಅಧಿಕಾಂಶ ಭಾಗಗಳಲ್ಲಿರುವ ತಾಯಂದಿರ ಪಾತ್ರದ ಕುರಿತು ಒಬ್ಬ ಬರಹಗಾರನು ತಿಳಿಸಿದ್ದು: “ಆಕೆಯು ಪ್ರತಿಯೊಂದು ಮಗುವಿನ ಆರೋಗ್ಯ, ಶಿಕ್ಷಣ, ಬುದ್ಧಿಶಕ್ತಿ, ವ್ಯಕ್ತಿತ್ವ, ಸ್ವಭಾವ ಮತ್ತು ಭಾವನಾತ್ಮಕ ಸ್ಥಿರತೆಯ ಮುಖ್ಯ ಸಂರಕ್ಷಕಿಯಾಗಿದ್ದಾಳೆ.”

ತಾಯಿಯು ವಹಿಸುವ ಅನೇಕ ಪಾತ್ರಗಳಲ್ಲಿ, ತನ್ನ ಮಕ್ಕಳ ಶಿಕ್ಷಕಿಯಾಗಿ ಅವಳು ನಿರ್ವಹಿಸುವ ಪಾತ್ರವು ಒಂದಾಗಿದೆ. ಮಗುವು ಅದರ ಮೊದಲ ಮಾತುಗಳನ್ನು ಮತ್ತು ಅದರ ಮಾತಿನ ಧಾಟಿಯನ್ನು ಸಾಮಾನ್ಯವಾಗಿ ತಾಯಿಯಿಂದ ಕಲಿಯುತ್ತದೆ. ಆದುದರಿಂದ, ಒಬ್ಬನ ಪ್ರಥಮ ಭಾಷೆಯನ್ನು ಮಾತೃಭಾಷೆ ಎಂದು ಕರೆಯಲಾಗುತ್ತದೆ. ಪ್ರತಿ ದಿನ ತಂದೆಗಿಂತ ತಾಯಿಯು ತನ್ನ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ, ಅವಳು ಅವರ ಪ್ರಧಾನ ಶಿಕ್ಷಕಿಯಾಗಿ ಮತ್ತು ಪ್ರಮುಖ ಶಿಸ್ತುಗಾರ್ತಿಯಾಗಿರಬಹುದು. ಆದುದರಿಂದ, “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” ಎಂಬ ನಾಣ್ಣುಡಿಯು ತಾಯಿಯ ಪ್ರಾಮುಖ್ಯ ಪಾತ್ರಕ್ಕೆ ಸಾಕ್ಷ್ಯವನ್ನೀಯುತ್ತದೆ.

ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರು ಸಹ ತಾಯಂದಿರನ್ನು ಗೌರವಿಸುತ್ತಾನೆ. ವಾಸ್ತವದಲ್ಲಿ, “ದೇವರ ಕೈಯಿಂದ” ಶಿಲಾಶಾಸನಗಳ ಮೇಲೆ ಬರೆಯಲ್ಪಟ್ಟ ದಶಾಜ್ಞೆಗಳಲ್ಲಿ ಒಂದು ಆಜ್ಞೆಯು ಮಕ್ಕಳನ್ನು ಹೀಗೆ ಪ್ರೇರೇಪಿಸುತ್ತದೆ: “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು.” (ವಿಮೋಚನಕಾಂಡ 20:12; 31:18; ಧರ್ಮೋಪದೇಶಕಾಂಡ 9:10) ಅಷ್ಟುಮಾತ್ರವಲ್ಲ, ಬೈಬಲಿನ ಒಂದು ಜ್ಞಾನೋಕ್ತಿಯು “ತಾಯಿಯ ಬೋಧನೆ”ಗೆ ಸೂಚಿಸಿ ಮಾತಾಡುತ್ತದೆ. (ಜ್ಞಾನೋಕ್ತಿ 1:⁠8) ಮಕ್ಕಳ ಜೀವಿತದ ಮೊದಲ ಮೂರು ವರುಷಗಳಲ್ಲಿ ಅವರಿಗೆ ಶಿಕ್ಷಣವನ್ನು ನೀಡುವ ಪ್ರಮುಖತೆಯನ್ನು ಇಂದು ವ್ಯಾಪಕವಾಗಿ ಅಂಗೀಕರಿಸಲಾಗುತ್ತಿದೆ. ಆ ವರುಷಗಳಲ್ಲಿ ಅಧಿಕಾಂಶ ಮಕ್ಕಳು ಹೆಚ್ಚಾಗಿ ತಮ್ಮ ತಾಯಿಯ ಪರಾಮರಿಕೆಯ ಕೆಳಗಿರುತ್ತಾರೆ.

ಕೆಲವು ಪಂಥಾಹ್ವಾನಗಳು ಯಾವುವು?

ಕುಟುಂಬವನ್ನು ಪೋಷಿಸಲಿಕ್ಕಾಗಿ ಅನೇಕ ತಾಯಂದಿರು ಐಹಿಕವಾಗಿ ಕೆಲಸಮಾಡಬೇಕಾದ ಕಾರಣ, ಮಕ್ಕಳಿಗೆ ಅವರ ಬೆಳವಣಿಗೆಯ ನಿರ್ಣಾಯಕ ವರುಷಗಳಲ್ಲಿ ಶಿಕ್ಷಣವನ್ನು ನೀಡುವುದು ತಾಯಂದಿರಿಗೆ ಒಂದು ಪಂಥಾಹ್ವಾನವಾಗಿದೆ. ವಿಶ್ವಸಂಸ್ಥೆಯಿಂದ ಸಂಗ್ರಹಿಸಲ್ಪಟ್ಟ ಅಂಕಿಅಂಶಗಳು ತೋರಿಸುವ ಮೇರೆಗೆ, ವಿಕಾಸಹೊಂದಿರುವ ಅನೇಕ ದೇಶಗಳಲ್ಲಿ ಮೂರು ವರುಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿರುವ ತಾಯಂದಿರಲ್ಲಿ 50 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿ ಉದ್ಯೋಗಸ್ಥರಾಗಿದ್ದಾರೆ.

ಇದಕ್ಕೆ ಕೂಡಿಕೆಯಾಗಿ, ಗಂಡಂದಿರು ಕೆಲಸವನ್ನು ಹುಡುಕುವ ಸಲುವಾಗಿ ತಮ್ಮ ಮನೆಯನ್ನು ಬಿಟ್ಟು ಇನ್ನೊಂದು ಪಟ್ಟಣಕ್ಕೊ ದೇಶಕ್ಕೊ ಹೋಗಿರುವ ಕಾರಣ ಅನೇಕ ತಾಯಂದಿರು ಒಂಟಿಗರಾಗಿ ತಮ್ಮ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಉದಾಹರಣೆಗೆ, ಅರ್‌ಮೇನಿಯದ ಕೆಲವು ಕ್ಷೇತ್ರಗಳಲ್ಲಿ ಸುಮಾರು ಮೂರನೆಯ ಒಂದಂಶದಷ್ಟು ಗಂಡಸರು ಕೆಲಸವನ್ನು ಹುಡುಕುವ ಸಲುವಾಗಿ ವಿದೇಶಗಳಿಗೆ ಹೋಗಿರುತ್ತಾರೆ ಎಂದು ವರದಿಸಲಾಗಿದೆ. ಇನ್ನು ಕೆಲವು ತಾಯಂದಿರಿಗೆ, ತಮ್ಮ ಗಂಡಂದಿರು ತಮ್ಮನ್ನು ಬಿಟ್ಟುಹೋಗಿರುವ ಅಥವಾ ತೀರಿಕೊಂಡಿರುವ ಕಾರಣದಿಂದ ಒಂಟಿಗರಾಗಿ ಮಕ್ಕಳನ್ನು ಬೆಳೆಸಬೇಕಾಗಿರುತ್ತದೆ.

ಇನ್ನು ಕೆಲವು ದೇಶಗಳಲ್ಲಿ ಅನೇಕ ತಾಯಂದಿರು ಕಡಿಮೆ ವಿದ್ಯಾಭ್ಯಾಸವನ್ನು ಪಡೆದಿರುವುದು ತಾನೇ ಒಂದು ಪಂಥಾಹ್ವಾನವಾಗಿದೆ. ಲೋಕದಲ್ಲಿರುವ 87.6 ಕೋಟಿ ಅನಕ್ಷರಸ್ಥರಲ್ಲಿ ಮೂರರಲ್ಲಿ ಎರಡಂಶ ಸ್ತ್ರೀಯರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯು ಅಂದಾಜುಮಾಡುತ್ತದೆ. ವಾಸ್ತವದಲ್ಲಿ, ಯೂನೆಸ್ಕೊಗನುಸಾರ ಆಫ್ರಿಕ, ಅರಬ್‌ ದೇಶಗಳು, ಮತ್ತು ಪೂರ್ವ ಹಾಗೂ ದಕ್ಷಿಣ ಏಷ್ಯಾದಲ್ಲಿ 60 ಪ್ರತಿಶತಕ್ಕಿಂತಲೂ ಹೆಚ್ಚು ಸ್ತ್ರೀಯರು ಅನಕ್ಷರಸ್ಥರಾಗಿದ್ದಾರೆ. ಸ್ತ್ರೀಯರಿಗೆ ಶಿಕ್ಷಣವನ್ನು ನೀಡುವ ಅಗತ್ಯವಿಲ್ಲ ಎಂದು ಬಹುತೇಕ ಗಂಡಸರು ನಂಬುತ್ತಾರೆ. ಅಷ್ಟುಮಾತ್ರವಲ್ಲದೆ, ಅವರಿಗೆ ಶಿಕ್ಷಣವನ್ನು ನೀಡಿದರೆ ಮಕ್ಕಳನ್ನು ಹಡೆಯುವ ಪಾತ್ರಕ್ಕೆ ಅವರನ್ನು ಅದು ಅಸಮರ್ಥರನ್ನಾಗಿ ಮಾಡುತ್ತದೆ ಎಂದು ಸಹ ಅನೇಕ ಗಂಡಸರು ನಂಬುತ್ತಾರೆ.

ಔಟ್‌ಲುಕ್‌ ಪತ್ರಿಕೆಯು ಹೇಳುವುದೇನೆಂದರೆ, ಹೆಣ್ಣುಮಕ್ಕಳು 15 ವರುಷದೊಳಗೆ ತಾಯಂದಿರಾಗುವಂಥ ಭಾರತದ ಕೇರಳ ರಾಜ್ಯದ ಒಂದು ಜಿಲ್ಲೆಯಲ್ಲಿ ಯಾರೂ ವಿದ್ಯಾವಂತ ವಧುವನ್ನು ಬಯಸುವುದಿಲ್ಲ. ನೆರೆದೇಶವಾಗಿರುವ ಪಾಕಿಸ್ತಾನದಲ್ಲಿ ಗಂಡುಮಕ್ಕಳಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಮುಂದಕ್ಕೆ ತಮ್ಮ ಹೆತ್ತವರನ್ನು ಅವರ ಇಳಿವಯಸ್ಸಿನಲ್ಲಿ ನೋಡಿಕೊಳ್ಳಲಾಗುವಂತೆ ಉತ್ತಮ ಸಂಬಳ ಸಿಗುವ ಉದ್ಯೋಗವನ್ನು ಕಂಡುಕೊಳ್ಳುವಂಥ ರೀತಿಯಲ್ಲಿ ಗಂಡುಮಕ್ಕಳನ್ನು ಬೆಳೆಸಲಾಗುತ್ತದೆ. ಇನ್ನೊಂದು ಬದಿಯಲ್ಲಿ, ಪ್ರಗತಿಶೀಲ ದೇಶಗಳಲ್ಲಿ ಸ್ತ್ರೀಯರ ಶಿಕ್ಷಣ (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ “ಹೆಣ್ಣುಮಕ್ಕಳು ಮುಂದಕ್ಕೆ ತಮ್ಮ ಕುಟುಂಬಕ್ಕೆ ಆರ್ಥಿಕ ಬೆಂಬಲವನ್ನು ನೀಡಶಕ್ತರಾಗಬೇಕೆಂದು ಹೆತ್ತವರು ನಿರೀಕ್ಷಿಸದ ಕಾರಣ, ಅವರ ವಿದ್ಯಾಭ್ಯಾಸಕ್ಕೆ ಹಣವನ್ನು ವ್ಯಯಿಸುವುದಿಲ್ಲ.”

ಇನ್ನೊಂದು ಪಂಥಾಹ್ವಾನವು, ಸ್ಥಳಿಕ ಪದ್ಧತಿಗಳ ವಿಷಯವಾಗಿದೆ. ಉದಾಹರಣೆಗೆ, ಕೆಲವು ದೇಶಗಳಲ್ಲಿ ತಾಯಂದಿರು, ತಮ್ಮ ಯುವ ಪ್ರಾಯದ ಹೆಣ್ಣುಮಕ್ಕಳನ್ನು ವಿವಾಹದಲ್ಲಿ ಮಾರುವ ಪದ್ಧತಿಯನ್ನು ಮತ್ತು ಸ್ತ್ರೀ ಜನನೇಂದ್ರಿಯ ಛೇದನದಂಥ ಪದ್ಧತಿಯನ್ನು ಬೆಂಬಲಿಸುವಂತೆ ಕೇಳಿಕೊಳ್ಳಲ್ಪಡುತ್ತಾರೆ. ಅಷ್ಟುಮಾತ್ರವಲ್ಲದೆ, ತಾಯಂದಿರು ತಮ್ಮ ಗಂಡುಮಕ್ಕಳಿಗೆ ಕಲಿಸುವುದು ಮತ್ತು ಅವರಿಗೆ ಶಿಸ್ತುಗೊಳಿಸುವುದು ನಿಷೇಧಿತವಾಗಿರುತ್ತದೆ. ಹಾಗಾದರೆ, ತಾಯಿಯಾದವಳು ಇಂಥ ಪದ್ಧತಿಗಳನ್ನು ಅನುಸರಿಸಿ, ತನ್ನ ಗಂಡುಮಕ್ಕಳಿಗೆ ಬೋಧಿಸುವ ಕೆಲಸವನ್ನು ಇತರರ ಮೇಲೆ ಬಿಟ್ಟುಬಿಡಬೇಕಾದ ಹಂಗಿನಲ್ಲಿದ್ದಾಳೊ?

ಇಂಥ ಪಂಥಾಹ್ವಾನಗಳನ್ನು ಕೆಲವು ತಾಯಂದಿರು ಹೇಗೆ ಜಯಿಸುತ್ತಿದ್ದಾರೆ ಎಂಬುದನ್ನು ನಾವು ಮುಂದಿನ ಲೇಖನಗಳಲ್ಲಿ ನೋಡಲಿದ್ದೇವೆ. ಅಷ್ಟುಮಾತ್ರವಲ್ಲದೆ, ತಾಯಂದಿರನ್ನು ಮತ್ತು ತಾಯ್ತನವನ್ನು ನಾವು ಹೆಚ್ಚು ಗಣ್ಯಮಾಡಲು ಪ್ರಯತ್ನಿಸೋಣ ಹಾಗೂ ತನ್ನ ಮಕ್ಕಳ ಶಿಕ್ಷಕಿಯೋಪಾದಿ ತಾಯಿಯ ಪಾತ್ರದ ಕುರಿತು ಸಮತೂಕ ನೋಟವನ್ನು ಗಳಿಸೋಣ. (g05 2/22)

[ಪುಟ 4ರಲ್ಲಿರುವ ಚೌಕ/ಚಿತ್ರ]

“ಮಗುವಿನ ಬುದ್ಧಿಶಕ್ತಿಯನ್ನೂ ಕುತೂಹಲವನ್ನೂ ಕೆರಳಿಸುವ ಹಾಗೂ ಮಗುವಿನ ಸೃಜನಶೀಲತೆಯನ್ನು ಬೆಳೆಸುವ ವಿಷಯದಲ್ಲಿ ತಾಯಿಯ ಪಾತ್ರವೇ ಅತಿ ಪ್ರಾಮುಖ್ಯವಾಗಿದೆ.”—ಮಕ್ಕಳ ಹಕ್ಕುಗಳ ಕುರಿತಾದ ಪ್ರಾದೇಶಿಕ ಶೃಂಗಸಭೆ, ಬುರ್ಕಿನ ಫಾಸೊ, 1997.

[ಪುಟ 3ರಲ್ಲಿರುವ ಚಿತ್ರಗಳು]

ಪ್ರತಿಯೊಂದು ಮಗುವಿನ ಆರೋಗ್ಯ, ಶಿಕ್ಷಣ, ವ್ಯಕ್ತಿತ್ವ ಮತ್ತು ಭಾವನಾತ್ಮಕ ಸ್ಥಿರತೆಯ ವಿಷಯದಲ್ಲಿ ತಾಯಂದಿರು ಮುಖ್ಯ ಪಾತ್ರವನ್ನು ವಹಿಸುತ್ತಾರೆ