ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಾಯಿಯ ಗೌರವಾನ್ವಿತ ಪಾತ್ರ

ತಾಯಿಯ ಗೌರವಾನ್ವಿತ ಪಾತ್ರ

ತಾಯಿಯ ಗೌರವಾನ್ವಿತ ಪಾತ್ರ

ತಾಯಿಯ ಪಾತ್ರವನ್ನು ಅನೇಕವೇಳೆ ಅಗಣ್ಯಮಾಡಲಾಗುತ್ತದೆ ಮತ್ತು ತುಚ್ಛೀಕರಿಸಲಾಗುತ್ತದೆ ಸಹ. ಕೆಲವು ದಶಕಗಳ ಹಿಂದೆ, ಮಕ್ಕಳ ಆರೈಕೆಮಾಡುವ ಪಾತ್ರವನ್ನು ಕೆಲವರು ಹೀನೈಸಿ ಮಾತಾಡಲಾರಂಭಿಸಿದರು. ಅವರ ದೃಷ್ಟಿಯಲ್ಲಿ ಇದು ಒಂದು ಉದ್ಯೋಗಕ್ಕಿಂತ ಕಡಿಮೆ ದರ್ಜೆಯ ಕೆಲಸವಾಗಿತ್ತು ಮತ್ತು ಒಂದು ರೀತಿಯ ದಬ್ಬಾಳಿಕೆಯೂ ಆಗಿತ್ತು. ಇಂಥ ನೋಟವು ಅನೇಕರಿಗೆ ವಿಪರೀತವಾಗಿ ಕಂಡರೂ, ಗೃಹಿಣಿಯರಾಗಿದ್ದು ಮಕ್ಕಳ ಆರೈಕೆಮಾಡುವುದು ಕೆಳದರ್ಜೆಯ ಕೆಲಸವೆಂದು ಸಾಮಾನ್ಯವಾಗಿ ತಾಯಂದಿರು ಭಾವಿಸುವಂತೆ ಮಾಡಲಾಗುತ್ತದೆ. ಅಷ್ಟುಮಾತ್ರವಲ್ಲದೆ, ಸ್ತ್ರೀಯು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಉಪಯೋಗಕ್ಕೆ ಹಾಕಬೇಕಾದರೆ ಮನೆಯಿಂದ ಹೊರಗೆ ಹೋಗಿ ಕೆಲಸಮಾಡುವುದು ತೀರ ಅಗತ್ಯವೆಂದು ಅನೇಕರು ಭಾವಿಸುತ್ತಾರೆ.

ಹಾಗಿದ್ದರೂ, ಕುಟುಂಬದಲ್ಲಿನ ತಾಯಿಯ ಪಾತ್ರವನ್ನು ಅನೇಕ ಗಂಡಂದಿರು ಮತ್ತು ಮಕ್ಕಳು ಗಣ್ಯಮಾಡಲಾರಂಭಿಸಿದ್ದಾರೆ. ಫಿಲಿಪ್ಪೀನ್ಸ್‌ನ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ನಲ್ಲಿ ಸೇವೆಸಲ್ಲಿಸುತ್ತಿರುವ ಕಾರ್ಲೋ ಹೇಳುವುದು: “ಇಂದು ನಾನು ಇಲ್ಲಿರಲು ಕಾರಣ ನನ್ನ ತಾಯಿ ನನಗೆ ನೀಡಿದ ತರಬೇತಿಯೇ ಆಗಿದೆ. ನನ್ನ ತಂದೆ ಬಹಳ ಕಟ್ಟುನಿಟ್ಟಿನ ವ್ಯಕ್ತಿಯಾಗಿದ್ದರು. ತಪ್ಪುಮಾಡಿದ ಕೂಡಲೆ ಶಿಕ್ಷೆ ಕೊಡುತ್ತಿದ್ದರು. ಆದರೆ ತಾಯಿ, ಅದೇಕೆ ತಪ್ಪಾಗಿದೆ ಎಂಬುದನ್ನು ನಮಗೆ ವಿವರಿಸಿಹೇಳುತ್ತಿದ್ದರು ಮತ್ತು ಕಾರಣಗಳನ್ನು ಕೊಟ್ಟು ತಿದ್ದುತ್ತಿದ್ದರು. ಆಕೆಯ ಕಲಿಸುವ ವಿಧಾನವನ್ನು ನಾನು ನಿಜವಾಗಿಯೂ ಗಣ್ಯಮಾಡುತ್ತೇನೆ.”

ದಕ್ಷಿಣ ಆಫ್ರಿಕದಲ್ಲಿರುವ ಪೀಟರ್‌ ಎಂಬವನು, ಕಡಿಮೆ ಶಿಕ್ಷಣವನ್ನು ಪಡಿದಿರುವ ತಾಯಿಯಿಂದ ಬೆಳೆಸಲ್ಪಟ್ಟ ಆರು ಮಂದಿ ಮಕ್ಕಳಲ್ಲಿ ಒಬ್ಬನಾಗಿದ್ದಾನೆ. ಅವನ ತಂದೆ ಕುಟುಂಬವನ್ನು ಬಿಟ್ಟುಹೋಗಿದ್ದನು. ಪೀಟರ್‌ ನೆನಪುಮಾಡಿಕೊಳ್ಳುವುದು: “ನನ್ನ ತಾಯಿ, ಮನೆಕೆಲಸದವಳಾಗಿ ಮತ್ತು ಕಚೇರಿಗಳನ್ನು ಶುಚಿಗೊಳಿಸುವವಳಾಗಿ ಕೆಲಸಮಾಡುತ್ತಿದ್ದರು. ಇದರಿಂದ ಅವರಿಗೆ ಹೆಚ್ಚು ಹಣ ಸಿಗುತ್ತಿರಲಿಲ್ಲ. ಮಕ್ಕಳಾದ ನಮ್ಮೆಲ್ಲರ ಶಾಲಾ ಫೀಸ್‌ ಕಟ್ಟಲು ಸಹ ಅವರಿಗೆ ಕಷ್ಟವಾಗುತ್ತಿತ್ತು. ಅನೇಕ ಬಾರಿ ನಾವು ಊಟವಿಲ್ಲದೆಯೇ ಮಲಗಬೇಕಾಗುತ್ತಿತ್ತು. ಮನೆಬಾಡಿಗೆಯನ್ನು ಕಟ್ಟುವುದೇ ಅವರಿಗೆ ಬಹಳ ಕಷ್ಟಕರವಾಗಿತ್ತು. ಈ ಎಲ್ಲಾ ಕಷ್ಟಗಳ ಮಧ್ಯದಲ್ಲಿಯೂ ನನ್ನ ತಾಯಿ ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ. ನಾವು ನಮ್ಮನ್ನು ಇತರರೊಂದಿಗೆ ಎಂದಿಗೂ ಹೋಲಿಸಿನೋಡಬಾರದೆಂದು ಅವರು ನಮಗೆ ಕಲಿಸಿದರು. ಅವರು ಧೈರ್ಯಶಾಲಿ ಬದ್ಧತೆಯನ್ನು ತೋರಿಸದಿದ್ದರೆ, ನಾವು ಜೀವನವನ್ನು ಯಶಸ್ವಿಕರವಾಗಿ ನಿಭಾಯಿಸುತ್ತಿರಲಿಲ್ಲ.”

ನೈಜೀರಿಯದಲ್ಲಿರುವ ಆಹ್ಮದ್‌ ಎಂಬ ಗಂಡನೊಬ್ಬನು, ಮಕ್ಕಳನ್ನು ಬೆಳೆಸುವುದರಲ್ಲಿ ತನ್ನ ಹೆಂಡತಿಯು ನೀಡುತ್ತಿರುವ ಸಹಾಯದ ಬಗ್ಗೆ ತನಗಿರುವ ಅನಿಸಿಕೆಯನ್ನು ಹೀಗೆ ತಿಳಿಸುತ್ತಾನೆ: “ನನ್ನ ಹೆಂಡತಿಯ ಪಾತ್ರವನ್ನು ನಾನು ಗಣ್ಯಮಾಡುತ್ತೇನೆ. ನಾನು ಮನೆಯಲ್ಲಿಲ್ಲದಿರುವಾಗ, ಮಕ್ಕಳು ಉತ್ತಮ ರೀತಿಯಲ್ಲಿ ಪರಾಮರಿಸಲ್ಪಡುತ್ತಾರೆ ಎಂಬ ಖಾತ್ರಿ ನನಗಿದೆ. ನನ್ನ ಹೆಂಡತಿಯು ನನ್ನೊಂದಿಗೆ ಪ್ರತಿಸ್ಪರ್ಧಿಸುತ್ತಿದ್ದಾಳೆ ಎಂದು ಭಾವಿಸುವ ಬದಲು, ನಾನು ಅವಳಿಗೆ ಉಪಕಾರ ಸಲ್ಲಿಸುತ್ತೇನೆ ಮತ್ತು ಮಕ್ಕಳು ನನ್ನನ್ನು ಗೌರವಿಸುವಂತೆ ಅವಳನ್ನೂ ಗೌರವಿಸಬೇಕೆಂದು ಅವರಿಗೆ ಹೇಳುತ್ತೇನೆ.”

ತನ್ನ ಹೆಂಡತಿಯು ಒಬ್ಬ ತಾಯಿಯಾಗಿ ಪಡೆಯುತ್ತಿರುವ ಯಶಸ್ಸಿನ ಕುರಿತು ಪ್ಯಾಲೆಸ್ಟೀನ್‌ನ ಒಬ್ಬ ವ್ಯಕ್ತಿಯು ಹೀಗೆ ಹೇಳುತ್ತಾನೆ: “ನಮ್ಮ ಮಗಳನ್ನು ಬೆಳೆಸುವ ವಿಷಯದಲ್ಲಿ ಲೀನ ಬಹಳಷ್ಟನ್ನು ಸಾಧಿಸಿದ್ದಾಳೆ. ಅಷ್ಟುಮಾತ್ರವಲ್ಲದೆ, ನಮ್ಮ ಕುಟುಂಬದ ಆಧ್ಯಾತ್ಮಿಕತೆಗೆ ಕೂಡ ಅವಳು ಬಹಳಷ್ಟು ನೆರವಾಗಿದ್ದಾಳೆ. ನನ್ನ ಅಭಿಪ್ರಾಯದ ಪ್ರಕಾರ, ಅವಳ ಯಶಸ್ಸಿಗೆ ಕಾರಣ ಅವಳ ಧಾರ್ಮಿಕ ನಂಬಿಕೆಗಳೇ ಆಗಿವೆ.” ಲೀನ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದಾಳೆ ಮತ್ತು ತನ್ನ ಮಗಳಿಗೆ ಶಿಕ್ಷಣ ನೀಡುವುದರಲ್ಲಿ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸುತ್ತಾಳೆ.

ಈ ಮೂಲತತ್ತ್ವಗಳಲ್ಲಿ ಕೆಲವು ಯಾವುವು? ತಾಯಂದಿರ ಕುರಿತಾದ ಬೈಬಲಿನ ದೃಷ್ಟಿಕೋನದ ಬಗ್ಗೆ ಏನು ಹೇಳಸಾಧ್ಯವಿದೆ? ಪುರಾತನ ಕಾಲಗಳಲ್ಲಿನ ತಾಯಂದಿರಿಗೆ ತಮ್ಮ ಮಕ್ಕಳ ಶಿಕ್ಷಕಿಯರೋಪಾದಿ ಯಾವ ರೀತಿಯ ಮಹತ್ವಭರಿತ ಮತ್ತು ಗೌರವಾನ್ವಿತ ಸ್ಥಾನವು ನೀಡಲ್ಪಟ್ಟಿತು?

ತಾಯಂದಿರ ಕುರಿತು ಒಂದು ಸಮತೂಕದ ನೋಟ

ಸೃಷ್ಟಿಯ ಸಮಯದಲ್ಲಿ ಸ್ತ್ರೀಗೆ ಕುಟುಂಬ ಏರ್ಪಾಡಿನಲ್ಲಿ ಒಂದು ಗೌರವಾನ್ವಿತ ಪಾತ್ರವು ನೀಡಲ್ಪಟ್ಟಿತು. ಬೈಬಲಿನ ಮೊದಲನೇ ಪುಸ್ತಕವು ತಿಳಿಸುವುದು: “ಯೆಹೋವದೇವರು​—⁠ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು ಅಂದನು.” (ಆದಿಕಾಂಡ 2:18) ಮೊದಲನೇ ಸ್ತ್ರೀಯಾದ ಹವ್ವಳು ಆದಾಮನಿಗೆ ಸಹಕಾರಿಯಾಗಿ ಅಥವಾ ಪೂರಕಳಾಗಿ ಒದಗಿಸಲ್ಪಟ್ಟಳು. ಅವನಿಗೆ ತಕ್ಕ ಸಹಾಯಕಿಯಾಗಿರುವ ರೀತಿಯಲ್ಲಿ ಅವಳನ್ನು ಸೃಷ್ಟಿಸಲಾಯಿತು. ಅವರ ಕಡೆಗಿದ್ದ ದೇವರ ಉದ್ದೇಶದಲ್ಲಿ ಅವಳೂ ಭಾಗಿಯಾಗಲಿದ್ದಳು. ಆ ಉದ್ದೇಶವು ಮಕ್ಕಳನ್ನು ಹುಟ್ಟಿಸಿ, ಅವರನ್ನು ಆರೈಕೆಮಾಡುವುದು ಮತ್ತು ಭೂಮಿಯನ್ನೂ ಅದರಲ್ಲಿರುವ ಪ್ರಾಣಿಗಳನ್ನೂ ನೋಡಿಕೊಳ್ಳುವುದು ಆಗಿತ್ತು. ಒಬ್ಬ ನಿಜ ಸಂಗಾತಿಯು ನೀಡುವ ಬುದ್ಧಿವಂತಿಕೆಯ ಪ್ರಚೋದನೆ ಮತ್ತು ಬೆಂಬಲವನ್ನು ಅವಳು ತನ್ನ ಗಂಡನಿಗೆ ನೀಡಲಿದ್ದಳು. ಇಂಥ ಒಂದು ಸುಂದರವಾದ ಉಡುಗೊರೆಯನ್ನು ತನ್ನ ಸೃಷ್ಟಿಕರ್ತನಿಂದ ಹೊಂದಿದಕ್ಕಾಗಿ ಆದಾಮನು ಎಷ್ಟು ಸಂತೋಷಿತನಾಗಿದ್ದನು!​—⁠ಆದಿಕಾಂಡ 1:​26-28; 2:23.

ಅನಂತರ, ಸ್ತ್ರೀಯರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತಾಗಿ ದೇವರು ನಿರ್ದೇಶನಗಳನ್ನು ನೀಡಿದನು. ಉದಾಹರಣೆಗೆ, ಇಸ್ರಾಯೇಲ್ಯ ತಾಯಂದಿರಿಗೆ ಗೌರವವನ್ನು ತೋರಿಸಬೇಕಿತ್ತು ಮತ್ತು ಅವರನ್ನು ತುಚ್ಛವಾಗಿ ಉಪಚರಿಸಬಾರದಿತ್ತು. ಒಂದುವೇಳೆ ಮಗನು ‘ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸಿದರೆ’ ಅವನಿಗೆ ಮರಣಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಕ್ರೈಸ್ತ ಯುವ ಜನರಿಗೆ, “[ತಮ್ಮ] ತಂದೆತಾಯಿಗಳ ಮಾತನ್ನು ಕೇಳಬೇಕು” ಎಂದು ಪ್ರೇರೇಪಿಸಲಾಯಿತು.​—⁠ಯಾಜಕಕಾಂಡ 19:3; 20:9; ಎಫೆಸ 6:1; ಧರ್ಮೋಪದೇಶಕಾಂಡ 5:16; 27:16; ಜ್ಞಾನೋಕ್ತಿ 30:17.

ಗಂಡನ ನಿರ್ದೇಶನದ ಕೆಳಗೆ ತಾಯಿಯು ತನ್ನ ಹೆಣ್ಣು ಮತ್ತು ಗಂಡುಮಕ್ಕಳ ಶಿಕ್ಷಕಿಯಾಗಿರಬೇಕಿತ್ತು. ‘ತಾಯಿಯ ಉಪದೇಶವನ್ನು ಬಿಡಬಾರದೆಂದು’ ಮಗನಿಗೆ ಆಜ್ಞಾಪಿಸಲಾಗಿತ್ತು. (ಜ್ಞಾನೋಕ್ತಿ 6:20) ಅಷ್ಟುಮಾತ್ರವಲ್ಲದೆ, ಜ್ಞಾನೋಕ್ತಿ 31ನೇ ಅಧ್ಯಾಯದಲ್ಲಿ ‘ಅರಸನಾದ ಲೆಮೂವೇಲನ ತಾಯಿಯು ಅವನಿಗೆ ಉಪದೇಶಿಸಿದ ದೈವೋಕ್ತಿಗಳನ್ನು’ ನಾವು ಕಾಣುತ್ತೇವೆ. ಮದ್ಯದ ದುರುಪಯೋಗದ ವಿರುದ್ಧ ಅವಳು ವಿವೇಕದಿಂದ ತನ್ನ ಮಗನನ್ನು ಎಚ್ಚರಿಸಿ ಹೀಗೆ ಹೇಳಿದಳು: “ದ್ರಾಕ್ಷಾರಸವನ್ನು ಕುಡಿಯುವದು . . . ರಾಜರಿಗೆ ಯೋಗ್ಯವಲ್ಲ; ಮದ್ಯವೆಲ್ಲಿ ಎನ್ನುವದು ಪ್ರಭುಗಳಿಗೆ ವಿಹಿತವಲ್ಲ. ಕುಡಿದರೆ ಅವರು ಧರ್ಮನಿಯಮಗಳನ್ನು ಮರೆತುಬಿಟ್ಟು ಬಾಧೆಪಡುವವರೆಲ್ಲರ ನ್ಯಾಯವನ್ನು ವ್ಯತ್ಯಾಸಮಾಡುವರು.”​—⁠ಜ್ಞಾನೋಕ್ತಿ 31:​1, 4, 5.

ಅದಲ್ಲದೆ, ರಾಜ ಲೆಮೂವೇಲನ ತಾಯಿಯಿಂದ ನೀಡಲ್ಪಟ್ಟಿರುವ “ಗುಣವತಿಯಾದ ಸತಿ”ಯ ಕುರಿತಾದ ವರ್ಣನೆಯನ್ನು ವಿವಾಹವಾಗಲು ಇಚ್ಛಿಸುವ ಪ್ರತಿಯೊಬ್ಬ ಯುವಕನು ಪರಿಗಣಿಸುವುದು ವಿವೇಕಪ್ರದವಾಗಿದೆ. ಅವಳು ಹೇಳಿದ್ದು: “ಆಕೆಯು ಹವಳಕ್ಕಿಂತಲೂ ಬಹು ಅಮೂಲ್ಯಳು.” ಅಂಥ ಪತ್ನಿಯು ತನ್ನ ಕುಟುಂಬಕ್ಕೆ ಮಾಡುವ ಪ್ರಾಮುಖ್ಯ ನೆರವಿನ ಕುರಿತು ವಿವರಿಸಿದ ನಂತರ, ರಾಜನ ತಾಯಿಯು ಹೀಗೆ ಹೇಳಿದಳು: “ಸೌಂದರ್ಯವು ನೆಚ್ಚತಕ್ಕದ್ದಲ, ಲಾವಣ್ಯವು ನೆಲೆಯಲ್ಲ; ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು.” (ಜ್ಞಾನೋಕ್ತಿ 31:​10-31) ಸ್ಪಷ್ಟವಾಗಿಯೇ, ಸ್ತ್ರೀಯರು ಕುಟುಂಬದಲ್ಲಿ ಗೌರವ ಮತ್ತು ಜವಾಬ್ದಾರಿಯ ಸ್ಥಾನವನ್ನು ಹೊಂದಿರುವಂತೆ ನಮ್ಮ ಸೃಷ್ಟಿಕರ್ತನು ಮಾಡಿದ್ದನು.

ಕ್ರೈಸ್ತ ಸಭೆಯಲ್ಲಿ ಪತ್ನಿಯರನ್ನೂ ತಾಯಂದಿರನ್ನೂ ಗೌರವಿಸಲಾಗುತ್ತದೆ ಮತ್ತು ಗಣ್ಯಮಾಡಲಾಗುತ್ತದೆ. ಎಫೆಸ 5:25 ತಿಳಿಸುವುದು: “ಪುರುಷರೇ, . . . ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.” “ಪರಿಶುದ್ಧಗ್ರಂಥ”ಗಳನ್ನು ಗೌರವಿಸುವಂತೆ ತಾಯಿ ಮತ್ತು ಅಜ್ಜಿಯಿಂದ ಕಲಿಸಲ್ಪಟ್ಟ ಯುವಕನಾದ ತಿಮೊಥೆಯನಿಗೆ ಈ ಪ್ರೇರಿತ ಸಲಹೆಯು ನೀಡಲ್ಪಟ್ಟಿತು: ‘ವೃದ್ಧಸ್ತ್ರೀಯರನ್ನು ತಾಯಿಗಳೆಂದು ಎಣಿಸು.’ (2 ತಿಮೊಥೆಯ 3:15; 1 ತಿಮೊಥೆಯ 5:⁠1, 2) ಹೀಗೆ, ಪುರುಷನು ವೃದ್ಧಸ್ತ್ರೀಯನ್ನು ತನ್ನ ತಾಯಿಯಂತೆ ವೀಕ್ಷಿಸಿ ಆಕೆಗೆ ಗೌರವವನ್ನು ನೀಡಬೇಕು. ನಿಜವಾಗಿಯೂ ದೇವರು ಸ್ತ್ರೀಯರನ್ನು ಮೌಲ್ಯಮಾಡುತ್ತಾನೆ ಮತ್ತು ಅವರಿಗೆ ಗೌರವಾನ್ವಿತ ಸ್ಥಾನವನ್ನು ನೀಡುತ್ತಾನೆ.

ನಿಮ್ಮ ಗಣ್ಯತೆಯನ್ನು ಮಾತಿನಲ್ಲಿ ವ್ಯಕ್ತಪಡಿಸಿರಿ

ಸ್ತ್ರೀಯರನ್ನು ಕೀಳಾಗಿ ವೀಕ್ಷಿಸುವ ಸಂಸ್ಕೃತಿಯಲ್ಲಿ ಬೆಳೆಸಲ್ಪಟ್ಟ ಒಬ್ಬ ಪುರುಷನು ತಿಳಿಸುವುದು: “ಪುರುಷ ಕೇಂದ್ರಿತ ವಿದ್ಯಾಭ್ಯಾಸವನ್ನು ನಾನು ಪಡೆದುಕೊಂಡಿದ್ದೆ ಮತ್ತು ಸ್ತ್ರೀಯರನ್ನು ದುರುಪಚರಿಸುತ್ತಿದ್ದದ್ದನ್ನೂ ಅವರಿಗೆ ಗೌರವವನ್ನು ತೋರಿಸದಿದ್ದದ್ದನ್ನೂ ನಾನು ಗಮನಿಸಿದ್ದೇನೆ. ಆದುದರಿಂದ, ಸ್ತ್ರೀಯರನ್ನು ಸೃಷ್ಟಿಕರ್ತನು ವೀಕ್ಷಿಸುವ ರೀತಿಯಲ್ಲಿ, ಅಂದರೆ ಮನೆಯಲ್ಲಿ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸದಲ್ಲಿ ಒಬ್ಬ ಸಹಕಾರಿಣಿಯಾಗಿ, ಅಥವಾ ಸಹಾಯಕಳಾಗಿ ವೀಕ್ಷಿಸುವುದನ್ನು ಕಲಿಯಲು ನಾನು ಬಹಳ ಹೆಣಗಾಡಬೇಕಾಯಿತು. ನನ್ನ ಹೆಂಡತಿಗೆ ಮಾತುಗಳಲ್ಲಿ ಮೆಚ್ಚಿಗೆಯನ್ನು ವ್ಯಕ್ತಪಡಿಸುವುದು ನನಗೆ ಕಷ್ಟಕರವಾಗಿದ್ದರೂ, ನನ್ನ ಮಕ್ಕಳಲ್ಲಿರುವ ಒಳ್ಳೇ ಗುಣಗಳಿಗೆ ಅವಳ ಕಠಿನ ಪರಿಶ್ರಮವೇ ಕಾರಣವೆಂಬುದನ್ನು ನಾನು ಅಂಗೀಕರಿಸುತ್ತೇನೆ.”

ಶಿಕ್ಷಕರೋಪಾದಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ತಾಯಂದಿರು ತಮ್ಮ ಪಾತ್ರಕ್ಕಾಗಿ ಹೆಮ್ಮಪಡಬಲ್ಲರು. ಇದೊಂದು ಸಾರ್ಥಕವಾದ ಕೆಲಸ. ಅವರು ನ್ಯಾಯಯುತವಾಗಿಯೇ ಶ್ಲಾಘನೆ ಮತ್ತು ಹೃದಯದಾಳದ ಗಣ್ಯತೆಯ ಮಾತುಗಳಿಗೆ ಅರ್ಹರಾಗಿದ್ದಾರೆ. ಮತ್ತು ನಾವು ತಾಯಿಯಿಂದ ಎಷ್ಟೊಂದು ವಿಷಯಗಳನ್ನು ಕಲಿಯುತ್ತೇವೆ​—⁠ನಮಗೆ ಜೀವಮಾನದಾದ್ಯಂತ ಪ್ರಯೋಜನವನ್ನು ತರುವ ಹವ್ಯಾಸಗಳನ್ನು, ಒಳ್ಳೇ ಸಂಬಂಧಗಳಿಗೆ ಅಗತ್ಯವಾಗಿರುವ ಶಿಷ್ಟಾಚಾರಗಳು ಮತ್ತು ಅನೇಕ ಸಂದರ್ಭಗಳಲ್ಲಿ, ಯುವ ಜನರನ್ನು ಸರಿಯಾದ ಮಾರ್ಗದಲ್ಲಿ ಇಡುವ ನೈತಿಕ ಹಾಗೂ ಆಧ್ಯಾತ್ಮಿಕ ತರಬೇತಿಯನ್ನು ತಾಯಿಯಿಂದ ಪಡೆಯುತ್ತೇವೆ. ನಿಮಗಾಗಿ ನಿಮ್ಮ ತಾಯಿಯು ಏನನ್ನು ಮಾಡಿದ್ದಾಳೊ ಅದಕ್ಕಾಗಿ ನೀವು ಅವಳಿಗೆ ಇತ್ತೀಚೆಗೆ ನಿಮ್ಮ ಗಣ್ಯತೆಯನ್ನು ಮಾತುಗಳಲ್ಲಿ ವ್ಯಕ್ತಪಡಿಸಿದ್ದೀರೊ? (g05 2/22)

[ಪುಟ 9ರಲ್ಲಿರುವ ಚಿತ್ರ]

ಪ್ರಯತ್ನವನ್ನು ಬಿಟ್ಟುಬಿಡಬಾರದು ಎಂಬುದನ್ನು ಪೀಟರ್‌ನ ತಾಯಿಯು ಅವನಿಗೆ ಕಲಿಸಿದಳು

[ಪುಟ 10ರಲ್ಲಿರುವ ಚಿತ್ರ]

ತನ್ನ ಮಕ್ಕಳನ್ನು ಬೆಳೆಸುವುದರಲ್ಲಿ ತನ್ನ ಹೆಂಡತಿಯು ನೀಡಿದ ಸಹಾಯವನ್ನು ಆಹ್ಮದ್‌ ಬಹಳವಾಗಿ ಗಣ್ಯಮಾಡುತ್ತಾನೆ

[ಪುಟ 10ರಲ್ಲಿರುವ ಚಿತ್ರ]

ತಮ್ಮ ಮಗಳ ಉತ್ತಮ ನಡವಳಿಕೆಗೆ ತನ್ನ ಹೆಂಡತಿಯ ಧಾರ್ಮಿಕ ನಂಬಿಕೆಗಳೇ ಕಾರಣ ಎಂದು ಲೀನಳ ಗಂಡನು ಹೇಳುತ್ತಾನೆ