ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಕಷ್ಟಾನುಭವ “ಯುವ ಜನರು ಪ್ರಶ್ನಿಸುವುದು . . . ನಾವು ಕಷ್ಟಾನುಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆ?” ಎಂಬ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರ. (ಜುಲೈ-ಸೆಪ್ಟೆಂಬರ್‌, 2004) ನಾನು 14 ವರ್ಷ ಪ್ರಾಯದವಳು. ನಾನು ತುಂಬ ಹಚ್ಚಿಕೊಂಡಿದ್ದ ಇಬ್ಬರು ವ್ಯಕ್ತಿಗಳು ಅಂದರೆ ನನ್ನ ತಾತ ಮತ್ತು ಅತ್ತೆಯವರು ಇತ್ತೀಚಿಗೆ ತೀರಿಹೋದರು. ಅವರ ಸಾವಿಗೆ ದೇವರು ಕಾರಣನಲ್ಲ ಎಂಬುದು ನನಗೆ ತಿಳಿದಿತ್ತು. ಸೈತಾನನೇ ಇದಕ್ಕೆ ಹೊಣೆಯಾಗಿದ್ದಾನೆ ಮತ್ತು ಅವನಿಗಿರುವ ಕಾಲವು ಕೊಂಚವೇ ಆಗಿದೆ. ಈ ಲೇಖನವು ನಿಜವಾಗಿಯೂ ನನ್ನನ್ನು ಸಂತೈಸಿತು. ದಯಮಾಡಿ ಇಂಥ ಲೇಖನಗಳನ್ನು ಬರೆಯುವುದನ್ನು ಮುಂದುವರಿಸಿ. ನನ್ನ ಹೃದಯದಾಳದಿಂದ ನಿಮಗೆ ಪುನಃ ಉಪಕಾರ.

ಬಿ. ಬಿ., ಯುನೈಟೆಡ್‌ ಸ್ಟೇಟ್ಸ್‌

ನಾನು ವಿವಾಹವಾಗಲಿದ್ದ ಹುಡುಗಿಯು ಇತ್ತೀಚಿಗೆ ಒಂದು ಕಾರ್‌ ಅಪಘಾತದಲ್ಲಿ ಸಾವನ್ನಪ್ಪಿದಳು. ನನಗೆ, ಸಭೆಗೆ ಮತ್ತು ವಿಶೇಷವಾಗಿ ಅವಳ ಹೆತ್ತವರಿಗೆ ಇದು ಒಂದು ಭೀಕರ ದುರಂತವಾಗಿತ್ತು. ನನ್ನ ತೀರ ದುಃಖಿತ ಸ್ಥಿತಿಯಿಂದ ಹೊರಬರುವಂತೆ ನನಗೆ ಸಹಾಯಮಾಡಿದ್ದಕ್ಕಾಗಿ ಯೆಹೋವನಿಗೆ ಉಪಕಾರ ಹೇಳುತ್ತೇನೆ. ಮತ್ತು “ನಾವು ಕಷ್ಟಾನುಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆ?” ಎಂಬ ಲೇಖನಕ್ಕಾಗಿಯೂ ನಾನು ನಿಮಗೆ ಉಪಕಾರ ಸಲ್ಲಿಸುತ್ತೇನೆ. ಇದು ಸರಿಯಾದ ಸಮಯಕ್ಕೆ ನನ್ನ ಕೈಸೇರಿತು.

ಐ. ಡಿ., ಜರ್ಮನಿ

ಮೊದಲು ನನಗೆ ಈ ಲೇಖನವನ್ನು ಓದಲು ಮನಸ್ಸಿರಲಿಲ್ಲ. ಇದರಲ್ಲಿರುವ ವಿಷಯಗಳು ನನ್ನನ್ನು ಇನ್ನಷ್ಟು ಖಿನ್ನಳನ್ನಾಗಿ ಮಾಡಬಹುದೆಂದು ನಾನು ನೆನಸಿದ್ದೆ. ಎರಡು ವರ್ಷಗಳ ಹಿಂದೆ ನನ್ನ ಅಣ್ಣನು ಒಂದು ಕಾಯಿಲೆಯಿಂದ ತೀರಿಹೋದನು, ಮತ್ತು ಈಗಲೂ ನನ್ನ ಭಾವನಾತ್ಮಕ ಗಾಯದ ಕಲೆಗಳು ಮಾಸಿಲ್ಲ. ಆದರೆ ಯೆಹೋವನು ಒಳ್ಳೇ ವಿಷಯಗಳ ದಾತನಾಗಿದ್ದಾನೆ ಎಂಬುದನ್ನು ಈ ಲೇಖನವು ನನಗೆ ನೆನಪುಹುಟ್ಟಿಸಿತು. ನನ್ನ ಭಾವನಾತ್ಮಕ ಕಲೆಗಳು ಬೇಗನೆ ಮಾಸಿಹೋಗುತ್ತಿರುವಂತೆ ನನಗನಿಸಿತು ಮತ್ತು ಈ ಅಸ್ಥಿರ ಲೋಕದಲ್ಲಿ ಬದುಕನ್ನು ಮುಂದುವರಿಸುವ ಧೈರ್ಯ ನನಗೆ ಬಂತು.

ಎಸ್‌. ಏಚ್‌., ಜಪಾನ್‌ (g05 1/8)

ವಿಕಾರವಾದ ಮಗು ಮೈಲೀನ್‌ಳ ಅನುಭವವು ನನ್ನ ಮೇಲೆ ಆಳವಾದ ಪ್ರಭಾವ ಬೀರಿತು. (“ಮೈಲೀನ್‌ಗೆ ಒಂದು ಹೊಸ ಮುಖ,” ಜುಲೈ-ಸೆಪ್ಟೆಂಬರ್‌, 2004) ಹನ್ನೊಂದು ವರ್ಷದ ಈ ಬಾಲೆಯು ಭೀಕರವಾದ ಸಂಕಟವನ್ನು ತಾಳಿಕೊಳ್ಳಲು ಹೇಗೆ ಹೋರಾಡುತ್ತಿದ್ದಾಳೆ, ಆದರೂ ತನ್ನ ಬೈಬಲಾಧಾರಿತ ನಿರೀಕ್ಷೆಯ ಕುರಿತು ಇತರರೊಂದಿಗೆ ಮಾತಾಡುತ್ತಿದ್ದಾಳೆ ಎಂಬುದರ ಕುರಿತು ಓದಿ ನಾನು ತುಂಬ ಪ್ರೋತ್ಸಾಹಿಸಲ್ಪಟ್ಟೆ.

ಎಮ್‌. ಬಿ., ಇಟಲಿ

ಮೈಲೀನ್‌ ಹಾಗೂ ಅವಳ ಕುಟುಂಬದ ಸಕಾರಾತ್ಮಕ ಹೊರನೋಟವು ನನಗೆ ತುಂಬ ಉತ್ತೇಜನದಾಯಕವಾಗಿತ್ತು. ಇಂದಿನ ಲೋಕದಲ್ಲಿ ಸಮೂಹ ಮಾಧ್ಯಮಗಳು ಹೆಚ್ಚಾಗಿ ಹೊರತೋರಿಕೆಗೆ ಅನಗತ್ಯವಾದ ಪ್ರಮುಖತೆಯನ್ನು ನೀಡುತ್ತವೆ. ಇದು ಎದೆಗುಂದಿಸುವಂಥ ವಿಚಾರವಾಗಿದೆ. ಆದರೆ ಮೈಲೀನ್‌ಳ ನಿಜ ಸೌಂದರ್ಯವು ನನಗೆ ತುಂಬ ಸ್ಪಷ್ಟವಾಗಿ ಕಾಣುತ್ತಿದೆಯೆಂದು ಮೈಲೀನ್‌ಗೆ ಗೊತ್ತಾಗಬೇಕು ಎಂಬುದು ನನ್ನ ಇಚ್ಛೆಯಾಗಿದೆ. ತನ್ನ ಹೊಸ ಲೋಕದಲ್ಲಿ ಯೆಹೋವನು ಅವಳಿಗೆ ಒಂದು ಹೊಸ ಮುಖವನ್ನು ಕೊಡುವಾಗ ಅವಳೊಂದಿಗೆ ಹರ್ಷಿಸುವ ಅವಕಾಶ ನನಗೆ ಸಿಗಲಿ ಎಂಬುದೇ ನನ್ನ ಹಾರೈಕೆ. ಅವಳ ನಂಬಿಕೆಯು ನನ್ನನ್ನು ಇನ್ನಷ್ಟು ಬಲಪಡಿಸಿದೆ.

ಎಮ್‌. ಎಸ್‌., ಯುನೈಟೆಡ್‌ ಸ್ಟೇಟ್ಸ್‌

ಸ್ವಲ್ಪದರಲ್ಲೇ ನನ್ನ ಒಂದು ಸ್ತನವನ್ನು ತೆಗೆಸಲಿಕ್ಕಾಗಿ ನಾನೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದೇನೆ. ಒಂದು ಅಸ್ವಸ್ಥತೆಯ ಕಾರಣ ನಿಮ್ಮ ಹೊರತೋರಿಕೆಗೆ ಧಕ್ಕೆ ಬರುವಾಗ, ಎದೆಗುಂದದೆ ಮುಂದುವರಿಯಲು ಶಕ್ತಿ ಹಾಗೂ ಧೈರ್ಯದ ಅಗತ್ಯವಿರುತ್ತದೆ. ಮೈಲೀನ್‌ಳ ಧೈರ್ಯ ಮತ್ತು ಆಶಾವಾದವು ನನ್ನನ್ನು ಬಲಪಡಿಸಿದೆ. ಮೈಲೀನ್‌ಗೆ ನಾನು ಹೇಳಲು ಬಯಸುವುದು ಇದನ್ನೇ: ನಿನಗೆ ಒಳ್ಳೇದಾಗಲಿ. ನೀನು ಸುಂದರಳಾಗಿದ್ದೀ ಎಂಬುದೇ ನನ್ನ ಅನಿಸಿಕೆ!

ಜಿ. ಆರ್‌., ಫ್ರಾನ್ಸ್‌

ನಾನು ಹುಟ್ಟುವಾಗಲೇ ಸಿರಬಾಯಿ (ಸೀಳಿದ ಮೇಲ್ದುಟಿ) ಎಂದು ಕರೆಯಲ್ಪಡುವ ದೇಹವಿಕೃತಿ ನನಗಿತ್ತು. ಶಾಲೆಯಲ್ಲಿ ಬೇರೆ ಮಕ್ಕಳು ನನ್ನ ಕಡೆಗೆ ವಿಚಿತ್ರ ನೋಟವನ್ನು ಬೀರುತ್ತಿದ್ದರು. ಕೆಲವರು ನನ್ನ ಮೇಲೆ ಉಗಿದಿದ್ದಾರೆ ಸಹ. ನಾನು ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ಒಟ್ಟುಗೂಡಿಸಿಕೊಳ್ಳಲು ನನಗೆ ಸಹಾಯಮಾಡಿದ್ದು, ನನ್ನ ತಾಯಿ ನನಗೆ ಬೈಬಲಿನಿಂದ ಏನನ್ನು ಕಲಿಸಿದರೋ ಅದೇ ಎಂಬುದು ನನ್ನ ನಂಬಿಕೆ. ಈಗ ನಾನು 31ರ ಪ್ರಾಯದವನಾಗಿರುವುದಾದರೂ, ನನ್ನ ಹೊರತೋರಿಕೆಯ ಬಗ್ಗೆ ನನಗಿನ್ನೂ ವಿಷಾದವಿದೆ. ಆದುದರಿಂದ, ಮೈಲೀನ್‌ಳ ಅನುಭವವು ನನ್ನ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿತು. ಯೆಹೋವನ ಸಹಾಯದಿಂದ ನಾವು ಮುಂದೆ ಬರುವ ಯಾವುದೇ ಪಂಥಾಹ್ವಾನವನ್ನು ಎದುರಿಸಸಾಧ್ಯವಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ.

ಟಿ. ಎಸ್‌., ಜಪಾನ್‌

ಮೈಲೀನಳು ನನಗೆ, ಸಂತೋಷ ಮತ್ತು ಸಂತೃಪ್ತಿಯನ್ನು ತರುವಂಥದ್ದು ಹೊರತೋರಿಕೆಯಲ್ಲ ಎಂಬುದನ್ನು ಮನಗಾಣಿಸಿದ್ದಾಳೆ. ನಮ್ಮ ದೇವರ ಸೇವೆಮಾಡುವುದರಿಂದ ಮತ್ತು ಆತನನ್ನು ಪ್ರೀತಿಸುವುದರಿಂದಲೇ ಇದನ್ನು ಪಡೆದುಕೊಳ್ಳಸಾಧ್ಯವಿದೆ. ಮೈಲೀನಳ ಉದಾಹರಣೆಯು ನನಗೆ ಒಂದು ಸ್ಫೂರ್ತಿಯಾಗಿದೆ.

ಎ. ಟಿ., ಫಿಲಿಪ್ಪೀನ್ಸ್‌ (g05 3/8)