ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ದೈಹಿಕ ಶ್ರಮದ ಕೆಲಸವನ್ನು ಏಕೆ ಮಾಡಬೇಕು?

ನಾನು ದೈಹಿಕ ಶ್ರಮದ ಕೆಲಸವನ್ನು ಏಕೆ ಮಾಡಬೇಕು?

ಯುವ ಜನರು ಪ್ರಶ್ನಿಸುವುದು . . .

ನಾನು ದೈಹಿಕ ಶ್ರಮದ ಕೆಲಸವನ್ನು ಏಕೆ ಮಾಡಬೇಕು?

“ದೈಹಿಕ ಶ್ರಮವನ್ನು ಅಗತ್ಯಪಡಿಸುವ ಕೆಲಸವನ್ನು ಮಾಡುವುದರ ಬಗ್ಗೆ ನಾನೆಂದೂ ಯೋಚಿಸಲೇ ಇಲ್ಲ. ನನ್ನ ಕಂಪ್ಯೂಟರ್‌ನೊಂದಿಗೆ ಆಟವಾಡುವುದೇ ನನಗೆ ಹೆಚ್ಚು ಖುಷಿ ನೀಡುತ್ತಿತ್ತು ಎಂಬುದು ನನ್ನ ಅನುಭವ.”​—⁠ನೇಥನ್‌.

“ಕೆಲವು ಮಂದಿ ಯುವ ಜನರು, ನಮ್ಮಲ್ಲಿ ಶಾರೀರಿಕ ದುಡಿಮೆಯನ್ನು ಮಾಡುತ್ತಿದ್ದವರನ್ನು ನಿಕೃಷ್ಟವಾಗಿ ಕಾಣುತ್ತಿದ್ದರು; ನಮಗೆ ಬೇರೆ ಯಾವುದೇ ಕೆಲಸವು ಮಾಡಲಿಕ್ಕೇ ಬರದಿರುವಷ್ಟು ದಡ್ಡರೋ ಎಂಬಂತೆ ನಮ್ಮನ್ನು ನೋಡುತ್ತಿದ್ದರು.”​—⁠ಸೇರ.

ದೈಹಿಕ ಶ್ರಮವನ್ನು ಅನೇಕರು ಬೇಸರಹಿಡಿಸುವಂಥ, ಕೊಳಕಾದ ಮತ್ತು ಅನಪೇಕ್ಷಿತ ಕೆಲಸವೆಂದು ಪರಿಗಣಿಸುತ್ತಾರೆ. ಕಾರ್ಮಿಕ ಕೆಲಸದ ವಿಷಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರರೊಬ್ಬರು ಹೇಳುವುದು: “ಸ್ಥಾನಮಾನಕ್ಕೆ ತುಂಬ ಬೆಲೆಕೊಡುವಂಥ ಈ ಲೋಕದಲ್ಲಿ ಈ ವೃತ್ತಿಗಳಿಗೆ ಹೆಚ್ಚು ಬೆಲೆಕೊಡಲಾಗುವುದಿಲ್ಲ.” ಹೀಗಿರುವಾಗ, ಯುವ ಜನರಲ್ಲಿ ಅನೇಕರು ದೈಹಿಕ ದುಡಿಮೆ ಎಂಬ ಶಬ್ದವು ಕಿವಿಗೆ ಬಿದ್ದ ಕೂಡಲೆ ಮೂಗುಮುರಿಯುವುದರಲ್ಲಿ ಆಶ್ಚರ್ಯವೇನಿಲ್ಲ.

ಆದರೂ, ಶ್ರಮದ ಕೆಲಸದ ವಿಷಯದಲ್ಲಿ ಬೈಬಲು ಭಿನ್ನವಾದ ದೃಷ್ಟಿಕೋನವನ್ನು ಉತ್ತೇಜಿಸುತ್ತದೆ. ಅರಸನಾದ ಸೊಲೊಮೋನನು ಹೇಳಿದ್ದು: “ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ [ಶ್ರಮದ ಕೆಲಸದಲ್ಲಿಯೂ] ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ.” (ಪ್ರಸಂಗಿ 2:24) ಬೈಬಲ್‌ ಸಮಯಗಳಲ್ಲಿ, ಇಸ್ರಾಯೇಲು ಒಂದು ಕೃಷಿ ಸಮಾಜವಾಗಿತ್ತು. ಉಳುವುದು, ಕೊಯ್ಲಿನ ಕೆಲಸ ಮತ್ತು ಒಕ್ಕುವುದು​—⁠ಇದೆಲ್ಲವೂ ಬಹಳಷ್ಟು ಶಾರೀರಿಕ ಪ್ರಯತ್ನವನ್ನು ಕೇಳಿಕೊಳ್ಳುತ್ತಿತ್ತು. ಆದರೂ, ಈ ಶ್ರಮದ ಕೆಲಸವು ಹೇರಳವಾದ ಪ್ರತಿಫಲಗಳನ್ನು ತರಸಾಧ್ಯವಿದೆ ಎಂದು ಸೊಲೊಮೋನನು ಹೇಳಿದನು.

ಶತಮಾನಗಳ ಬಳಿಕ ಅಪೊಸ್ತಲ ಪೌಲನು ಹೇಳಿದ್ದು: “ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ ಕೈಯಿಂದ ಯಾವದೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ.” (ಎಫೆಸ 4:28) ಸ್ವತಃ ಪೌಲನೇ ದೈಹಿಕ ಶ್ರಮದ ಕೆಲಸವನ್ನು ಮಾಡಿದನು. ಅವನು ತುಂಬ ವಿದ್ಯಾವಂತ ವ್ಯಕ್ತಿಯಾಗಿದ್ದನಾದರೂ, ಕೆಲವೊಮ್ಮೆ ಗುಡಾರಗಳನ್ನು ಮಾಡುವ ಮೂಲಕ ತನ್ನ ಮೂಲಭೂತ ಆವಶ್ಯಕತೆಗಳನ್ನು ಪೂರಸಿಕೊಂಡನು.​—⁠ಅ. ಕೃತ್ಯಗಳು 18:1-3.

ದೈಹಿಕ ಶ್ರಮದ ಕೆಲಸದ ಕುರಿತು ನಿಮ್ಮ ಅಭಿಪ್ರಾಯವೇನು? ನಿಮಗಿದು ಗೊತ್ತಿದೆಯೋ ಇಲ್ಲವೊ, ಶಾರೀರಿಕ ದುಡಿಮೆಯಂತೂ ನಿಮಗೆ ಅನೇಕ ವಿಧಗಳಲ್ಲಿ ಪ್ರಯೋಜನದಾಯಕವಾಗಿರಸಾಧ್ಯವಿದೆ.

ಜೀವನಕ್ಕೆ ಬೇಕಾದ ತರಬೇತಿಯನ್ನು ಕೊಡುವುದು

ಒಂದು ಸುತ್ತಿಗೆಯನ್ನು ಉಪಯೋಗಿಸುತ್ತಾ ಕೆಲಸಮಾಡುವ ಮೂಲಕ ಅಥವಾ ಉದ್ದಬೆಳೆದಿರುವ ಹುಲ್ಲನ್ನು ಕತ್ತರಿಸುವ ಮೂಲಕ ಶಾರೀರಿಕ ದುಡಿಮೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು, ಒಳ್ಳೇ ಆರೋಗ್ಯಕ್ಕೆ ಪುಷ್ಟಿ ನೀಡಬಲ್ಲದು. ಇದು, ನೀವು ಒಳ್ಳೇ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಿಂತಲೂ ಹೆಚ್ಚಿನ ಪ್ರಯೋಜನಗಳನ್ನು ನೀಡಬಲ್ಲದು. ಒಂದು ವಾಹನದ ಟೈರ್‌ ಪಂಕ್ಚರ್‌ ಆದರೆ ಅದನ್ನು ಹೇಗೆ ಸರಿಪಡಿಸಬೇಕು ಅಥವಾ ಕಾರಿನ ಎಂಜಿನ್‌ ಆಯಿಲ್‌ ಅನ್ನು ಹೇಗೆ ಬದಲಾಯಿಸಬೇಕು ಎಂಬುದು ನಿಮಗೆ ಗೊತ್ತೋ? ನೀವು ಮುರಿದುಹೋಗಿರುವ ಒಂದು ಕಿಟಕಿಯನ್ನು ರಿಪೇರಿಮಾಡಬಲ್ಲಿರೋ ಅಥವಾ ಅಡಚಿಕೊಂಡಿರುವ ಚರಂಡಿಯನ್ನು ಸರಿಪಡಿಸಬಲ್ಲಿರೋ? ನಿಮಗೆ ಅಡಿಗೆಮಾಡಲು ಬರುತ್ತದೋ? ಸ್ನಾನದ ಮನೆಯನ್ನು ಒಂದೇ ಒಂದು ಕಲೆಯೂ ಇಲ್ಲದಷ್ಟು ಶುಚಿಗೊಳಿಸಲು ಮತ್ತು ನೈರ್ಮಲೀಕರಿಸಲು ನಿಮಗೆ ಗೊತ್ತಿದೆಯೋ? ಈ ಕೌಶಲಗಳನ್ನು ಯುವಕರು ಮತ್ತು ಯುವತಿಯರು ತಿಳಿದುಕೊಂಡಿರುವುದು ಒಳ್ಳೇದು, ಏಕೆಂದರೆ ಇವು ಒಂದು ದಿನ ನೀವು ಯಶಸ್ವಿಕರವಾಗಿ ಬದುಕನ್ನು ನಡೆಸಲು ನಿಮಗೆ ಸಹಾಯಮಾಡಬಲ್ಲವು.

ಆಸಕ್ತಿಕರವಾಗಿಯೇ, ಭೂಮಿಯಲ್ಲಿದ್ದಾಗ ಸ್ವತಃ ಯೇಸು ಕ್ರಿಸ್ತನೇ ದೈಹಿಕ ಶ್ರಮವನ್ನು ಅಗತ್ಯಪಡಿಸುವಂಥ ಕೆಲವು ಕೌಶಲಗಳಲ್ಲಿ ಪರಿಣತನಾಗಿದ್ದನೆಂದು ತೋರುತ್ತದೆ. ನಿಸ್ಸಂದೇಹವಾಗಿಯೂ ಅವನು ತನ್ನ ದತ್ತುತಂದೆಯಾದ ಯೋಸೇಫನಿಂದ ಬಡಗಿಯ ಕೆಲಸವನ್ನು ಕಲಿತುಕೊಂಡನು ಮತ್ತು ಬಡಗಿಯೆಂಬ ಹೆಸರೂ ಅವನಿಗಿತ್ತು. (ಮತ್ತಾಯ 13:55; ಮಾರ್ಕ 6:3) ನೀವು ಸಹ ದೈಹಿಕ ಶ್ರಮದ ಕೆಲಸವನ್ನು ಮಾಡುವ ಮೂಲಕ ಪ್ರಯೋಜನದಾಯಕವಾದ ಬೇರೆ ಬೇರೆ ಕೌಶಲಗಳನ್ನು ಕಲಿತುಕೊಳ್ಳಸಾಧ್ಯವಿದೆ.

ನಿಮ್ಮಲ್ಲಿ ಆಕರ್ಷಕ ಗುಣಗಳನ್ನು ಬೆಳೆಸುತ್ತದೆ

ಶ್ರಮಪಟ್ಟು ಕೆಲಸಮಾಡುವುದು, ನಿಮ್ಮ ಕುರಿತು ನಿಮಗಿರುವ ದೃಷ್ಟಿಕೋನವನ್ನು ಸಹ ಪ್ರಭಾವಿಸಬಲ್ಲದು. ಯು.ಎಸ್‌. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ಶಿಕ್ಷಣ ಕೇಂದ್ರದ ಪರವಾಗಿ ಬರೆಯುತ್ತಾ ಡಾ. ಫ್ರೆಡ್‌ ಪ್ರೊವೆನ್‌ಸಾನೋ ಹೇಳುವುದೇನೆಂದರೆ, ಶಾರೀರಿಕ ಕೆಲಸಗಳನ್ನು ಕಲಿತುಕೊಳ್ಳುವುದು ನಿಮ್ಮ “ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸ”ವನ್ನು ಹೆಚ್ಚಿಸಬಲ್ಲದು ಮತ್ತು “ಯಶಸ್ವಿಕರವಾದ ಉದ್ಯೋಗಕ್ಕೆ ಬುನಾದಿಯಂತಿರುವ ಸ್ವಶಿಸ್ತು ಹಾಗೂ ಸುವ್ಯವಸ್ಥೆಯನ್ನು ಬೆಳೆಸಿಕೊಳ್ಳಲು ಸಹ ಸಹಾಯಮಾಡಬಲ್ಲದು.” ಜಾನ್‌ ಎಂಬ ಹೆಸರಿನ ಒಬ್ಬ ಯುವಕನು ಹೇಳುವುದು: “ಶಾರೀರಿಕ ಕೆಲಸವು ತಾಳ್ಮೆಯನ್ನು ಕಲಿಯಲು ನಿಮಗೆ ಸಹಾಯಮಾಡುತ್ತದೆ. ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ ಎಂಬುದನ್ನು ನೀವು ಕಾರ್ಯತಃ ಕಲಿಯುತ್ತೀರಿ.”

ಈ ಮುಂಚೆ ಯಾರ ಮಾತುಗಳನ್ನು ಉಲ್ಲೇಖಿಸಲಾಗಿತ್ತೊ ಆ ಸೇರ ವಿವರಿಸುವುದು: “ದೈಹಿಕ ದುಡಿಮೆಯನ್ನು ಮಾಡುವುದು ಶ್ರಮಜೀವಿಯೂ ಮೈಬಗ್ಗಿಸಿ ಕೆಲಸಮಾಡುವವಳೂ ಆಗಿರುವಂತೆ ನನಗೆ ಕಲಿಸಿತು. ನಾನು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಶಿಸ್ತನ್ನು ರೂಢಿಸಿಕೊಳ್ಳಲು ಕಲಿತೆ.” ಶ್ರಮದ ದುಡಿತವು ಬೇಸರಹಿಡಿಸುವ ಕೆಲಸವಾಗಿರುತ್ತದೊ? ನೇಥನ್‌ ಹೇಳುವುದು: “ನಾನು ಶ್ರಮದ ಕೆಲಸಮಾಡುವುದರಲ್ಲಿ ಆನಂದಿಸಲು ಕಲಿತೆ. ನನ್ನ ಕೌಶಲಗಳಲ್ಲಿ ನಾನು ಪ್ರಗತಿಯನ್ನು ಮಾಡಿದಂತೆ, ನನ್ನ ಕೆಲಸದ ಗುಣಮಟ್ಟವು ಸಹ ಉತ್ತಮಗೊಂಡದ್ದನ್ನು ನಾನು ಗಮನಿಸಿದೆ. ಇದು ನನ್ನ ಆತ್ಮಾಭಿಮಾನವನ್ನು ಸಹ ಹೆಚ್ಚಿಸಿತು.”

ದೈಹಿಕ ಶ್ರಮದ ಕೆಲಸವು ನಿಮಗೆ ಸಾಧನೆಯಿಂದ ಸಿಗುವ ಆನಂದದ ಬಗ್ಗೆಯೂ ಕಲಿಸಬಲ್ಲದು. ಜೇಮ್ಸ್‌ ಎಂಬ ಹೆಸರಿನ ಯುವಕನೊಬ್ಬನು ಇದನ್ನು ಈ ಮಾತುಗಳಲ್ಲಿ ವ್ಯಕ್ತಪಡಿಸುತ್ತಾನೆ: “ನಾನು ಮರಗೆಲಸ (ಕಾರ್ಪೆಂಟ್ರಿ)ದಲ್ಲಿ ತುಂಬ ಆನಂದಿಸುತ್ತೇನೆ. ಕೆಲವೊಮ್ಮೆ ಇದು ಶಾರೀರಿಕವಾಗಿ ದಣಿವನ್ನು ಉಂಟುಮಾಡಬಹುದಾದರೂ ನಾನು ಏನನ್ನು ಮಾಡಿದೆನೋ ಅದರ ಕುರಿತು ಆಲೋಚಿಸುವಾಗ ಏನನ್ನೋ ಸಾಧಿಸಿದ್ದೇನೆ ಎಂಬ ಸಂತೃಪ್ತಿಕರ ಅನಿಸಿಕೆ ನನಗಾಗುತ್ತದೆ. ಇದು ನಿಜವಾಗಿಯೂ ಸಂತೃಪ್ತಿದಾಯಕವಾಗಿದೆ.” ಬ್ರಾಯನ್‌ಗೂ ಇದೇ ರೀತಿಯ ಭಾವನೆಗಳಿವೆ. “ಮೋಟಾರುಗಾಡಿಗಳೊಂದಿಗೆ ಕೆಲಸಮಾಡುವುದೆಂದರೆ ನನಗೆ ತುಂಬ ಇಷ್ಟ. ಮುರಿದುಹೋಗಿರುವ ಏನನ್ನಾದರೂ ರಿಪೇರಿಮಾಡುವ ಹಾಗೂ ಅದು ಹೊಸದಾಗಿ ಕಾಣುವಷ್ಟರ ಮಟ್ಟಿಗೆ ಅದನ್ನು ಸರಿಪಡಿಸುವ ಸಾಮರ್ಥ್ಯ ನನ್ನಲ್ಲಿದೆ ಎಂಬುದನ್ನು ತಿಳಿದಿರುವುದು, ನನ್ನಲ್ಲಿ ಒಂದು ರೀತಿಯ ದೃಢಭರವಸೆ ಹಾಗೂ ಸಂತೃಪ್ತಿಯ ಭಾವನೆಯನ್ನು ಉಂಟುಮಾಡುತ್ತದೆ.”

ಪವಿತ್ರ ಸೇವೆ

ಕ್ರೈಸ್ತ ಯುವ ಜನರಿಗಾದರೋ ಶ್ರಮದ ಕೆಲಸವನ್ನು ಮಾಡಲು ಶಕ್ತರಾಗಿರುವುದು ದೇವರಿಗೆ ಸೇವೆಯನ್ನು ಸಲ್ಲಿಸುವುದರಲ್ಲಿ ಸಹಾಯಕವಾಗಿರುವುದು. ಯೆಹೋವನಿಗಾಗಿ ಒಂದು ಭವ್ಯ ದೇವಾಲಯವನ್ನು ಕಟ್ಟುವ ನೇಮಕವು ಅರಸನಾದ ಸೊಲೊಮೋನನಿಗೆ ಕೊಡಲ್ಪಟ್ಟಾಗ, ಇದು ಭಾರೀ ಪ್ರಮಾಣದ ಪ್ರಯತ್ನ ಹಾಗೂ ಕೌಶಲವನ್ನು ಅಗತ್ಯಪಡಿಸುವಂಥ ನೇಮಕವಾಗಿದೆ ಎಂಬುದನ್ನು ಅವನು ಮನಗಂಡನು. ಬೈಬಲ್‌ ಹೇಳುವುದು: “ರಾಜನಾದ ಸೊಲೊಮೋನನು ತೂರಿನಲ್ಲಿದ್ದ ಹೀರಾಮ್‌ ಎಂಬವನಿಗೆ ಸಂದೇಶವನ್ನು ಕಳುಹಿಸಿ ಅವನನ್ನು ಜೆರುಸಲೇಮಿಗೆ ಕರೆಸಿದನು. ಹೀರಾಮನ ತಾಯಿಯು ನಫ್ತಾಲಿ ಕುಲದವಳಾಗಿದ್ದಳು ಮತ್ತು ಇಸ್ರೇಲಿನವಳಾಗಿದ್ದಳು. ಅವನ ದಿವಂಗತ ತಂದೆಯು ತೂರಿನವನಾಗಿದ್ದನು. ಹೀರಾಮನು ಹಿತ್ತಾಳೆಯಿಂದ ವಸ್ತುಗಳನ್ನು ತಯಾರಿಸುತ್ತಿದ್ದನು. ಅವನು ಕುಶಲಕರ್ಮಿಯೂ ಅನುಭವಿಯೂ ಆದ ಕೆಲಸಗಾರನಾಗಿದ್ದನು. ರಾಜನಾದ ಸೊಲೊಮೋನನು ಹೀರಾಮನಿಗೆ ಬರಲು ಹೇಳಿದಾಗ, ಅವನು ಒಪ್ಪಿಕೊಂಡನು. ರಾಜನಾದ ಸೊಲೊಮೋನನು ಎಲ್ಲಾ ಹಿತ್ತಾಳೆಯ ಕಾರ್ಯಗಳಿಗೆ ಹೀರಾಮನನ್ನು ಮೇಲ್ವಿಚಾರಕನನ್ನಾಗಿ ನೇಮಿಸಿದನು. ಹೀರಾಮನು ಹಿತ್ತಾಳೆಯ ವಸ್ತುಗಳನ್ನು ನಿರ್ಮಿಸಿದನು.”​—⁠1 ಅರಸುಗಳು 7:13, 14, ಪರಿಶುದ್ಧ ಬೈಬಲ್‌. *

ಯೆಹೋವನ ಆರಾಧನೆಯನ್ನು ಉತ್ತೇಜಿಸಲಿಕ್ಕಾಗಿ ತನ್ನ ಕೌಶಲಗಳನ್ನು ಉಪಯೋಗಿಸುವ ಎಂಥ ಒಂದು ಸುಯೋಗ ಹೀರಾಮನಿಗೆ ಸಿಕ್ಕಿತು! ಹೀರಾಮನ ಅನುಭವವು, ಜ್ಞಾನೋಕ್ತಿ 22:29ರಲ್ಲಿ ಕಂಡುಬರುವ ಬೈಬಲಿನ ಮಾತುಗಳ ಸತ್ಯತೆಯನ್ನು ಎತ್ತಿತೋರಿಸುತ್ತದೆ: “ತನ್ನ ಕೆಲಸದಲ್ಲಿ ಚಟುವಟಿಕೆಯಾಗಿರುವವನನ್ನು ನೋಡು; ಇಂಥವನು ರಾಜರನ್ನು ಸೇವಿಸುವನಲ್ಲದೆ ನೀಚರನ್ನು ಸೇವಿಸುವದಿಲ್ಲ.”

ಇಂದು, ನಿರ್ಮಾಣಕಾರ್ಯದಲ್ಲಿ ಸ್ವಲ್ಪವೇ ಅನುಭವವಿರುವ ಅಥವಾ ಅನುಭವವೇ ಇಲ್ಲದಿರುವಂಥ ಯುವ ಜನರು ರಾಜ್ಯ ಸಭಾಗೃಹಗಳನ್ನು ನಿರ್ಮಿಸುವ ಕೆಲಸದಲ್ಲಿ ಪಾಲ್ಗೊಳ್ಳುವ ಸುಯೋಗವನ್ನು ಹೊಂದಿದ್ದಾರೆ. ಇಂಥ ಕಾರ್ಯಯೋಜನೆಗಳಲ್ಲಿ ಅವರು ಒಳಗೂಡಿದ್ದರಿಂದ, ಇಲೆಕ್ಟ್ರಿಕಲ್‌ ಕೆಲಸ, ಪ್ಲಂಬಿಂಗ್‌ ಕೆಲಸ, ಕಲ್ಲುಕೆಲಸ ಮತ್ತು ಕಾರ್ಪೆಂಟ್ರಿಯಂಥ ಪ್ರಯೋಜನದಾಯಕ ಕಸಬುಗಳನ್ನು ಅವರು ಕಲಿತಿದ್ದಾರೆ. ನೀವು ಸಹ ರಾಜ್ಯ ಸಭಾಗೃಹದ ನಿರ್ಮಾಣ ಕೆಲಸದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯ ಬಗ್ಗೆ ನಿಮ್ಮ ಸ್ಥಳಿಕ ಹಿರಿಯರೊಂದಿಗೆ ಚರ್ಚಿಸಸಾಧ್ಯವಿದೆ.

ಅನೇಕ ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯದಲ್ಲಿ ಒಳಗೂಡಿದ್ದ ಜೇಮ್ಸ್‌ ಹೇಳುವುದು: “ಸಹಾಯಮಾಡುವ ವಿಷಯದಲ್ಲಿ ಸಭೆಗಳಲ್ಲಿರುವ ಅನೇಕರಿಗೆ ಸಮಯ ಅಥವಾ ಸಾಮರ್ಥ್ಯಗಳು ಇಲ್ಲದಿರಬಹುದು. ಆದುದರಿಂದ ಈ ರೀತಿಯಲ್ಲಿ ಸಹಾಯಮಾಡುವುದು ನೀವು ಒಂದು ಇಡೀ ಸಭೆಗೆ ನೆರವು ನೀಡಿದಂತಾಗುತ್ತದೆ.” ಕಾಂಕ್ರಿಟ್‌ ಕೆಲಸವನ್ನು ಹೇಗೆ ಮಾಡುವುದು ಎಂಬುದನ್ನು ಕಲಿತುಕೊಂಡ ನೇಥನ್‌, ಈ ಕೌಶಲವು ದೇವರ ಸೇವೆಯನ್ನು ಮಾಡಲು ಇನ್ನೊಂದು ಸದವಕಾಶವನ್ನು ತೆರೆಯಿತೆಂಬುದನ್ನು ಕಂಡುಕೊಂಡನು. ಅವನು ಜ್ಞಾಪಿಸಿಕೊಳ್ಳುವುದು: “ನಾನು ಸಿಂಬಾಬ್ವೆಗೆ ಹೋಗಿ, ಯೆಹೋವನ ಸಾಕ್ಷಿಗಳ ಒಂದು ಬ್ರಾಂಚ್‌ ಆಫೀಸನ್ನು ಕಟ್ಟಲು ಸಹಾಯಮಾಡುವುದರಲ್ಲಿ ನನ್ನ ಕೌಶಲಗಳನ್ನು ಉಪಯೋಗಿಸಲು ಶಕ್ತನಾದೆ. ನಾನು ಅಲ್ಲಿ ಮೂರು ತಿಂಗಳುಗಳ ವರೆಗೆ ಕೆಲಸಮಾಡಿದೆ ಮತ್ತು ಇದು ನನ್ನ ಜೀವಿತದ ಮಹತ್ತರವಾದ ಅನುಭವಗಳಲ್ಲಿ ಒಂದಾಗಿದೆ.” ಇತರ ಯುವ ಜನರಿಗಾದರೋ, ಶ್ರಮದ ಕೆಲಸವನ್ನು ಮಾಡಲಿಕ್ಕಾಗಿರುವ ಬಯಕೆಯು, ಯೆಹೋವನ ಸಾಕ್ಷಿಗಳ ಸ್ಥಳಿಕ ಬ್ರಾಂಚ್‌ ಆಫೀಸಿನಲ್ಲಿ ಸ್ವಯಂಸೇವಕರಾಗಿ ಸೇವೆಮಾಡಲು ಅರ್ಜಿಯನ್ನು ಹಾಕುವಂತೆ ಅವರನ್ನು ಪ್ರಚೋದಿಸಿದೆ.

ಶಾರೀರಿಕ ದುಡಿಮೆಯಲ್ಲಿ ಕೌಶಲವನ್ನು ಪಡೆಯುವುದು, ನೀವು ಸ್ವಲ್ಪಮಟ್ಟಿಗಿನ “ಸಂತುಷ್ಟಿ”ಯನ್ನು ಹೊಂದುವಂತೆಯೂ ಸಹಾಯಮಾಡಸಾಧ್ಯವಿದೆ. (1 ತಿಮೊಥೆಯ 6:6) ಯೆಹೋವನ ಸಾಕ್ಷಿಗಳ ನಡುವೆಯಿರುವ ಅನೇಕ ಯುವ ಜನರು ಪಯನೀಯರರಾಗಿ ಅಥವಾ ಪೂರ್ಣ ಸಮಯದ ಸೌವಾರ್ತಿಕರಾಗಿ ಸೇವೆಮಾಡುತ್ತಿದ್ದಾರೆ. ಯಾವುದಾದರೊಂದು ಕಸಬನ್ನು ಕಲಿಯುವುದು, ಐಹಿಕ ವಿದ್ಯಾಭ್ಯಾಸದಲ್ಲಿ ಅತ್ಯಧಿಕ ಸಮಯ ಹಾಗೂ ಹಣವನ್ನು ವ್ಯಯಿಸದೇ ತಮ್ಮನ್ನು ಆರ್ಥಿಕವಾಗಿ ಬೆಂಬಲಿಸಿಕೊಳ್ಳುವಂತೆ ಕೆಲವರಿಗೆ ಸಹಾಯಮಾಡಿದೆ.

ದೈಹಿಕ ಶ್ರಮದ ಕೆಲಸವನ್ನು ಮಾಡಲು ಕಲಿಯುವ ವಿಧ

ಜೀವನಾಧಾರಕ್ಕಾಗಿ ನೀವು ಒಂದು ಕಸಬಿನಲ್ಲಿ ಆಸಕ್ತರಾಗಿರಲಿ ಅಥವಾ ನಿಮ್ಮ ಕೌಶಲಗಳನ್ನು ಕೇವಲ ಮನೆಯಲ್ಲಿ ಉಪಯೋಗಕ್ಕೆ ಹಾಕಲು ಬಯಸುವವರಾಗಿರಲಿ, ದೈಹಿಕ ಶ್ರಮದ ಕೆಲಸವನ್ನು ಮಾಡಲು ಕಲಿಯುವುದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯಸಾಧ್ಯವಿದೆ ಎಂಬುದು ಸುಸ್ಪಷ್ಟ. ನಿಮ್ಮ ಸ್ಥಳಿಕ ಶಾಲಾಕಾಲೇಜುಗಳು ಕೆಲವೊಂದು ಕೌಶಲಗಳಲ್ಲಿ ಕೋರ್ಸುಗಳನ್ನು ನಡೆಸುತ್ತಿರಬಹುದು. ನೀವು ಮನೆಯಲ್ಲಿಯೇ ಕೆಲವೊಂದು ರೀತಿಯ ತರಬೇತಿಯನ್ನು ಪಡೆದುಕೊಳ್ಳಸಾಧ್ಯವಿರುವುದೂ ಸಂಭವನೀಯ. ಹೇಗೆ? ಮನೆಯಲ್ಲಿನ ನಿತ್ಯಗಟ್ಟಳೆಯ ಕೆಲಸಗಳನ್ನು ಮಾಡಲು ಕಲಿಯುವ ಮೂಲಕವೇ. ಈ ಮುಂಚೆ ಉಲ್ಲೇಖಿಸಲ್ಪಟ್ಟಿರುವ ಡಾ. ಪ್ರೊವೆನ್‌ಸಾನೋ ಹೀಗೆ ಬರೆಯುತ್ತಾರೆ: “ಈ ನಿತ್ಯಗಟ್ಟಳೆಯ ಕೆಲಸಗಳು ಹದಿಪ್ರಾಯದವರಿಗೆ ವಿಶೇಷವಾಗಿ ಪ್ರಾಮುಖ್ಯವಾದವುಗಳಾಗಿವೆ, ಏಕೆಂದರೆ ತಕ್ಕ ಸಮಯವು ಬರುವಾಗ ಇವು ಹದಿಪ್ರಾಯದವರು ತಮ್ಮ ಹೆತ್ತವರಿಂದ ಪ್ರತ್ಯೇಕವಾಗಿದ್ದು ಯಶಸ್ವಿಕರವಾಗಿ ಮತ್ತು ದಕ್ಷರೀತಿಯಲ್ಲಿ ಜೀವಿಸಲು ಸಹಾಯಮಾಡುವಂಥ ಗೃಹಕೃತ್ಯಕ್ಕೆ ಸಂಬಂಧಪಟ್ಟ ಉಪಯುಕ್ತ ಕೌಶಲಗಳನ್ನು ಕಲಿಸುತ್ತವೆ.” ಆದುದರಿಂದ ಮನೆಯಲ್ಲಿ ಅಗತ್ಯವಿರುವಂಥ ಕೆಲಸವನ್ನು ಮಾಡಲು ಸದಾ ಸಿದ್ಧರಾಗಿರಿ. ಮನೆಯ ಸುತ್ತಲೂ ಉದ್ದವಾಗಿ ಬೆಳೆದಿರುವ ಹುಲ್ಲನ್ನು ಕತ್ತರಿಸಲಿಕ್ಕಿದೆಯೋ ಅಥವಾ ಒಂದು ಶೆಲ್ಫ್‌ ಅನ್ನು ರಿಪೇರಿಮಾಡುವ ಅಗತ್ಯವಿದೆಯೋ?

ಶಾರೀರಿಕ ದುಡಿಮೆಯು ಕೀಳಾದದ್ದು ಅಥವಾ ಹೀನವಾದದ್ದಾಗಿರುವ ಬದಲಾಗಿ, ಇದು ನಿಮಗೆ ಅನೇಕ ವಿಧಗಳಲ್ಲಿ ಸಹಾಯಮಾಡಬಲ್ಲದು. ಕೆಲಸ ಎಂದಾಕ್ಷಣ ಮಾರುದೂರ ಓಡಬೇಡಿ! ಬದಲಾಗಿ, ನಿಮ್ಮ ಶ್ರಮದ ಕೆಲಸದಲ್ಲಿ ‘ಸುಖವನ್ನನುಭವಿಸಲು’ ಅಥವಾ ಆನಂದಿಸಲು ಪ್ರಯತ್ನಿಸಿರಿ, ಏಕೆಂದರೆ ಪ್ರಸಂಗಿ 3:13 ಹೇಳುವಂತೆ ಅದು “ದೇವರ ಅನುಗ್ರಹವೇ” ಇಲ್ಲವೆ ವರದಾನವೇ ಆಗಿದೆ. (g05 3/22)

[ಪಾದಟಿಪ್ಪಣಿ]

^ Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರಣೆ]

ಒಂದು ಕಸಬನ್ನು ಕಲಿಯುವುದು, ದೇವರಿಗೆ ಸಲ್ಲಿಸುವ ಸೇವೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಅನೇಕ ಯುವ ಜನರಿಗೆ ಸಹಾಯಮಾಡಿದೆ

[ಪುಟ 22ರಲ್ಲಿರುವ ಚಿತ್ರಗಳು]

ಅನೇಕವೇಳೆ ನಿಮ್ಮ ಹೆತ್ತವರು ನಿಮಗೆ ಮೂಲಭೂತ ಕೌಶಲಗಳನ್ನು ಕಲಿಸಬಲ್ಲರು