ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಂಥಾಹ್ವಾನಗಳನ್ನು ಜಯಿಸುತ್ತಿರುವ ತಾಯಂದಿರು

ಪಂಥಾಹ್ವಾನಗಳನ್ನು ಜಯಿಸುತ್ತಿರುವ ತಾಯಂದಿರು

ಪಂಥಾಹ್ವಾನಗಳನ್ನು ಜಯಿಸುತ್ತಿರುವ ತಾಯಂದಿರು

ತಾಯಂದಿರು ಇಂದು ಎದುರಿಸುವ ಒಂದು ದೊಡ್ಡ ಪಂಥಾಹ್ವಾನವು, ತಮ್ಮ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಐಹಿಕವಾಗಿ ಕೆಲಸಮಾಡುವುದೇ ಆಗಿದೆ. ಇದಲ್ಲದೆ, ಒಂದಲ್ಲಾ ಒಂದು ಕಾರಣಕ್ಕಾಗಿ ಕೆಲವರು ಇನ್ನೊಬ್ಬರ ಸಹಾಯವಿಲ್ಲದೆ ಒಂಟಿಗರಾಗಿಯೇ ತಮ್ಮ ಮಕ್ಕಳನ್ನು ಬೆಳೆಸಬೇಕಾಗಿರಬಹುದು.

ಮಾರ್ಗಾರೀಟಾ ಎಂಬವಳು ಯಾರ ಸಹಾಯವೂ ಇಲ್ಲದೆ ತನ್ನ ಎರಡು ಮಕ್ಕಳನ್ನು ಬೆಳೆಸುತ್ತಿರುವ ಮೆಕ್ಸಿಕೊದಲ್ಲಿನ ಒಬ್ಬ ಒಂಟಿ ತಾಯಿಯಾಗಿದ್ದಾಳೆ. ಅವಳು ಹೇಳುವುದು: “ಅವರನ್ನು ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ತರಬೇತಿಗೊಳಿಸುವುದು ಕಷ್ಟಕರವಾಗಿತ್ತು. ಹಿಂದೆ ಒಮ್ಮೆ, ತರುಣಾವಸ್ಥೆಯಲ್ಲಿದ್ದ ನನ್ನ ಮಗನು ಪಾರ್ಟಿಯಿಂದ ಮನೆಗೆ ಬರುವಾಗ ಅತಿಯಾಗಿ ಕುಡಿದು ಬಂದಿದ್ದನು. ಇನ್ನೊಮ್ಮೆ ಈ ರೀತಿಯಾಗಿ ಬಂದರೆ ಮನೆಯೊಳಕ್ಕೆ ಸೇರಿಸುವುದಿಲ್ಲವೆಂದು ನಾನು ಅವನಿಗೆ ಗದರಿಸಿದೆ. ಆದುದರಿಂದ ಮುಂದಿನ ಬಾರಿ ಅವನು ಅತಿಯಾಗಿ ಕುಡಿದು ಬಂದಾಗ ನಾನು ಅವನನ್ನು ಮನೆಯೊಳಗೆ ಸೇರಿಸಲಿಲ್ಲ. ಹಾಗೆ ಮಾಡುವುದು ನನಗೆ ಬಹಳ ವೇದನಾಮಯವಾಗಿತ್ತು, ಆದರೂ ನಾನು ಅದನ್ನು ಮಾಡಿದೆ. ಸಂತೋಷಕರವಾಗಿ, ಅಂದಿನಿಂದ ಮುಂದೆಂದೂ ಅವನು ಅತಿಯಾಗಿ ಕುಡಿಯಲಿಲ್ಲ.”

ಸ್ವಲ್ಪ ಸಮಯದ ನಂತರ ಮಾರ್ಗಾರೀಟಾ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದಳು. ಇದು ಅವಳಿಗೆ ತನ್ನ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೇರೂರಿಸಲು ಸಹಾಯಮಾಡಿತು. ಈಗ ಅವರಿಬ್ಬರೂ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರಾಗಿದ್ದಾರೆ.

ಗಂಡಂದಿರು ಹೊರದೇಶಕ್ಕೆ ಹೋದಾಗ

ಕಡಿಮೆ ವಿಕಾಸಹೊಂದಿರುವ ದೇಶಗಳಲ್ಲಿ ಅನೇಕ ಗಂಡಂದಿರು ಕೆಲಸವನ್ನು ಹುಡುಕುತ್ತಾ ಹೆಚ್ಚು ಅಭಿವೃದ್ಧಿಹೊಂದಿರುವ ದೇಶಗಳಿಗೆ ಸ್ಥಳಾಂತರಿಸುತ್ತಾರೆ. ಹೀಗೆ ಅವರು, ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ತಮ್ಮ ಹೆಂಡತಿಯರ ಕೈಗೆ ಒಪ್ಪಿಸಿಬಿಡುತ್ತಾರೆ. ನೇಪಾಲ್‌ನಲ್ಲಿರುವ ಲಕ್ಷ್ಮಿ ಎಂಬ ಒಬ್ಬಾಕೆ ತಾಯಿಯು ಹೇಳುವುದು: “ಏಳು ವರುಷಗಳಿಂದ ನನ್ನ ಗಂಡ ಹೊರದೇಶದಲ್ಲಿದ್ದಾರೆ. ಮಕ್ಕಳು ಅವರ ತಂದೆಗೆ ತೋರಿಸುವಷ್ಟು ವಿಧೇಯತೆಯನ್ನು ನನಗೆ ತೋರಿಸುವುದಿಲ್ಲ. ಮುಂದಾಳುತ್ವವನ್ನು ವಹಿಸಲು ಅವರು ಇಲ್ಲಿರುತ್ತಿದ್ದರೆ ಮಕ್ಕಳನ್ನು ಬೆಳೆಸುವುದು ಸುಲಭವಾಗುತ್ತಿತ್ತು.”

ಕಷ್ಟಗಳ ಮಧ್ಯೆಯೂ ಲಕ್ಷ್ಮಿ ಈ ಪಂಥಾಹ್ವಾನವನ್ನು ಯಶಸ್ವಿಕರವಾಗಿ ಎದುರಿಸುತ್ತಿದ್ದಾಳೆ. ಅವಳು ಕಡಿಮೆ ವಿದ್ಯಾಭ್ಯಾಸವನ್ನು ಪಡಿದಿರುವ ಕಾರಣ, ತನ್ನ ಹಿರಿಯ ಮಕ್ಕಳಿಗೆ ತಮ್ಮ ಪಾಠಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಟ್ಯೂಷನ್‌ ವ್ಯವಸ್ಥೆಯನ್ನು ಮಾಡಿದ್ದಾಳೆ. ಹಾಗಿದ್ದರೂ, ಅವಳು ಅವರೊಂದಿಗೆ ಪ್ರತಿ ವಾರ ಬೈಬಲ್‌ ಅಧ್ಯಯನವನ್ನು ಮಾಡುವ ಮೂಲಕ ಅವರ ಆಧ್ಯಾತ್ಮಿಕ ಶಿಕ್ಷಣದ ಕಡೆಗೆ ವಿಶೇಷ ಗಮನವನ್ನು ನೀಡುತ್ತಾಳೆ. ಅವಳು ಅವರೊಂದಿಗೆ ಪ್ರತಿದಿನ ಒಂದು ಬೈಬಲ್‌ ವಚನದ ಚರ್ಚೆಯನ್ನು ಮಾಡುತ್ತಾಳೆ ಮತ್ತು ಅವರನ್ನು ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಕರೆದೊಯ್ಯುತ್ತಾಳೆ.

ಕಡಿಮೆ ವಿದ್ಯಾಭ್ಯಾಸವಿರುವ ತಾಯಂದಿರು

ಕೆಲವು ದೇಶಗಳಲ್ಲಿರುವ ಇನ್ನೊಂದು ಪಂಥಾಹ್ವಾನವು, ಹೆಚ್ಚಿನ ಸಂಖ್ಯೆಯ ಸ್ತ್ರೀಯರು ಅನಕ್ಷರಸ್ಥರಾಗಿರುವುದೇ ಆಗಿದೆ. ಒಬ್ಬ ಅನಕ್ಷರಸ್ಥ ತಾಯಿಯಾಗಿರುವುದರ ಬಾಧಕಗಳನ್ನು ದೃಷ್ಟಾಂತಿಸುತ್ತಾ ಮೆಕ್ಸಿಕೊದಲ್ಲಿರುವ ಆರು ಮಕ್ಕಳ ತಾಯಿಯಾದ ಔರೀಲ್ಯಾ ಹೇಳುವುದು: “ವಿದ್ಯಾಭ್ಯಾಸವು ಸ್ತ್ರೀಯರಿಗಲ್ಲ ಎಂದು ನನ್ನ ತಾಯಿಯು ಯಾವಾಗಲೂ ಹೇಳುತ್ತಿದ್ದಳು. ಆದುದರಿಂದ ನಾನು ಓದಲು ಕಲಿಯಲೇ ಇಲ್ಲ. ಹೀಗಾಗಿ ನನ್ನ ಮಕ್ಕಳಿಗೆ ಅವರ ಶಾಲಾಪಾಠಗಳಲ್ಲಿ ಸಹಾಯಮಾಡಲು ನನ್ನಿಂದ ಸಾಧ್ಯವಾಗಲಿಲ್ಲ. ಇದು ನನಗೆ ಬಹಳ ದುಃಖವನ್ನುಂಟುಮಾಡಿತು. ಆದರೆ ನಾನು ಕಷ್ಟಪಟ್ಟಂತೆ ನನ್ನ ಮಕ್ಕಳು ಕಷ್ಟಪಡಬಾರದೆಂದು ನಾನು ಅವರೆಲ್ಲರಿಗೆ ವಿದ್ಯಾಭ್ಯಾಸವನ್ನು ನೀಡಲು ಕಠಿನವಾಗಿ ಶ್ರಮಿಸಿದೆ.”

ಕಡಿಮೆ ವಿದ್ಯಾಭ್ಯಾಸವಿರುವುದಾದರೂ ತಾಯಿಯೊಬ್ಬಳು ಬಹಳಷ್ಟು ಪ್ರಭಾವವನ್ನು ಬೀರಬಲ್ಲಳು. “ಸ್ತ್ರೀಯನ್ನು ಶಿಕ್ಷಿತಳನ್ನಾಗಿ ಮಾಡಿರಿ, ಆಗ ನೀವು ಪುರುಷರ ಶಿಕ್ಷಕಿಯನ್ನು ಶಿಕ್ಷಿತಳನ್ನಾಗಿ ಮಾಡುತ್ತೀರಿ” ಎಂಬ ಹೇಳಿಕೆಯು ನಿಜವಾಗಿದೆ. ನೇಪಾಲ್‌ನಲ್ಲಿರುವ ಮೂರು ಮಕ್ಕಳ ತಾಯಿಯಾದ ಬಿಷ್ನು ಒಂದು ಕಾಲದಲ್ಲಿ ಅನಕ್ಷರಸ್ಥಳಾಗಿದ್ದಳು. ಆದರೆ ಬೈಬಲ್‌ ಸತ್ಯಗಳನ್ನು ಕಲಿಯಬೇಕು ಮತ್ತು ಅವನ್ನು ತನ್ನ ಮಕ್ಕಳಿಗೆ ಕಲಿಸಬೇಕೆಂಬ ಅವಳ ಇಚ್ಛೆಯು, ಓದುಬರಹವನ್ನು ಕಲಿಯಲು ನಿಜವಾದ ಪ್ರಯತ್ನವನ್ನು ಮಾಡುವಂತೆ ಅವಳನ್ನು ಮುನ್ನಡೆಸಿತು. ಅವಳು ತನ್ನ ಮಕ್ಕಳು ಶಾಲೆಯಲ್ಲಿ ನೀಡಲ್ಪಟ್ಟ ಹೋಮ್‌ವರ್ಕ್‌ ಅನ್ನು ಮಾಡುವಂತೆ ನೋಡಿಕೊಳ್ಳುತ್ತಿದ್ದಳು, ಮತ್ತು ತನ್ನ ಮಕ್ಕಳು ಹೇಗೆ ಕಲಿಯುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕ್ರಮವಾಗಿ ಶಾಲೆಗೆ ಹೋಗಿ ಅವರ ಅಧ್ಯಾಪಕರನ್ನು ಭೇಟಿಯಾಗುತ್ತಿದ್ದಳು.

ತಮಗೆ ದೊರೆತ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣದ ಕುರಿತು ಅವಳ ಮಗನಾದ ಸೀಲಾಶ್‌ ಹೇಳುವುದು: “ನನ್ನ ತಾಯಿಯ ಕಲಿಸುವ ವಿಧಾನದಲ್ಲಿ ನನಗೆ ಅತಿಯಾಗಿ ಹಿಡಿಸಿದ ಒಂದು ವಿಷಯವೇನೆಂದರೆ, ನಾವೇನಾದರೂ ತಪ್ಪುಮಾಡಿದರೆ ಅವಳು ಬೈಬಲ್‌ ಉದಾಹರಣೆಗಳನ್ನು ನೀಡಿ ನಮ್ಮನ್ನು ತಿದ್ದುತ್ತಿದ್ದಳು. ಕಲಿಸುವ ಈ ವಿಧಾನವು ಬಹಳ ಪ್ರಭಾವಕಾರಿಯಾಗಿತ್ತು ಮತ್ತು ಸಲಹೆಯನ್ನು ಸ್ವೀಕರಿಸಲು ನನಗೆ ಸಹಾಯಮಾಡಿತು.” ಬಿಷ್ನು ತನ್ನ ಮೂವರು ಗಂಡುಮಕ್ಕಳ ಯಶಸ್ವಿಕರ ಶಿಕ್ಷಕಿಯಾದಳು. ಅವಳ ಮೂವರು ಮಕ್ಕಳೂ ಈಗ ದೇವಭಯವುಳ್ಳ ಯುವಕರಾಗಿದ್ದಾರೆ.

ಇಬ್ಬರು ಮಕ್ಕಳನ್ನು ಬೆಳೆಸುತ್ತಿರುವ ಮೆಕ್ಸಿಕೊವಿನಲ್ಲಿರುವ ಆ್ಯನ್ಟೋನ್ಯಾ ಹೇಳುವುದು: “ನಾನು ಪ್ರಾಥಮಿಕ ಶಾಲೆಗೆ ಮಾತ್ರ ಹೋಗಿದ್ದೆ. ನಾವು ಒಂದು ಹಳ್ಳಿಯಲ್ಲಿ ವಾಸಿಸುತ್ತಿದ್ದೆವು, ಮತ್ತು ನಮ್ಮ ಹಳ್ಳಿಗೆ ಹತ್ತಿರವೆಂದು ಹೇಳಬಹುದಾದ ಪ್ರೌಢ ಶಾಲೆಯೇ ಬಹಳ ದೂರದಲ್ಲಿತ್ತು. ಆದರೆ ನನ್ನ ಮಕ್ಕಳು ನನಗಿಂತ ಹೆಚ್ಚು ವಿದ್ಯಾಭ್ಯಾಸವನ್ನು ಪಡೆಯಬೇಕೆಂದು ನಾನು ಬಯಸಿದೆ. ಆದುದರಿಂದ ನಾನು ಬಹಳಷ್ಟು ಸಮಯವನ್ನು ಅವರಿಗಾಗಿ ವ್ಯಯಿಸಿದೆ. ನಾನು ಅವರಿಗೆ ಅಕ್ಷರಗಳನ್ನು ಮತ್ತು ಸಂಖ್ಯೆಗಳನ್ನು ಸಹ ಕಲಿಸಿದೆ. ಶಾಲೆಗೆ ಹೋಗುವ ಮೊದಲೇ ನನ್ನ ಮಗಳಿಗೆ ಅವಳ ಹೆಸರನ್ನು ಬರೆಯಲು ಮತ್ತು ವರ್ಣಮಾಲೆಯಲ್ಲಿರುವ ಎಲ್ಲಾ ಅಕ್ಷರಗಳನ್ನು ಬರೆಯಲು ತಿಳಿದಿತ್ತು. ಕೆ.ಜಿ ಕ್ಲಾಸ್‌ಗೆ ಹೋಗುವಷ್ಟರಲ್ಲಿ ನನ್ನ ಮಗನಿಗೆ ಚೆನ್ನಾಗಿ ಓದಲು ಬರುತ್ತಿತ್ತು.”

ಮಕ್ಕಳಿಗೆ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣವನ್ನು ನೀಡಲು ಆ್ಯನ್ಟೋನ್ಯಾ ಏನು ಮಾಡಿದಳೆಂದು ಕೇಳಲ್ಪಟ್ಟಾಗ ಅವಳು ವಿವರಿಸುವುದು: “ನಾನು ಅವರಿಗೆ ಬೈಬಲ್‌ ಕಥೆಗಳನ್ನು ಕಲಿಸಿದೆ. ನನ್ನ ಮಗಳು ಮಾತನಾಡಲು ಕಲಿಯುವ ಮುನ್ನ ಕೈಸನ್ನೆಗಳ ಮೂಲಕ ಬೈಬಲ್‌ ಕಥೆಗಳನ್ನು ಹೇಳುತ್ತಿದ್ದಳು. ನನ್ನ ಮಗ ನಾಲ್ಕು ವರುಷದವನಾಗಿದ್ದಾಗ ಕ್ರೈಸ್ತ ಕೂಟಗಳಲ್ಲಿ ತನ್ನ ಮೊದಲ ಸಾರ್ವಜನಿಕ ಬೈಬಲ್‌ ಓದುವಿಕೆಯನ್ನು ಮಾಡಿದನು.” ಹೌದು, ಕಡಿಮೆ ವಿದ್ಯಾಭ್ಯಾಸವುಳ್ಳ ಅನೇಕ ತಾಯಂದಿರು ಶಿಕ್ಷಕಿಯರೋಪಾದಿ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ.

ಹಾನಿಕಾರಕ ಪದ್ಧತಿಗಳನ್ನು ಎದುರಿಸಿ ನಿಲ್ಲುವುದು

ತಮ್ಮ 12 ಅಥವಾ 13 ವರುಷ ಪ್ರಾಯದ ಹೆಣ್ಣುಮಕ್ಕಳನ್ನು ವಿವಾಹದಲ್ಲಿ ಮಾರಿಬಿಡುವುದು ಮೆಕ್ಸಿಕೊದ ಟ್ಸೋಟ್‌ಸೀಲ್‌ ಜನರ ಮಧ್ಯೆ ಇರುವ ಒಂದು ಪದ್ಧತಿಯಾಗಿದೆ. ಅನೇಕವೇಳೆ ಹುಡುಗಿಯರನ್ನು ಎರಡನೇ ಅಥವಾ ಮೂರನೇ ಹೆಂಡತಿಯನ್ನು ಬಯಸುವ ಹೆಚ್ಚು ಪ್ರಾಯದ ಗಂಡಸಿಗೆ ಮಾರಲಾಗುತ್ತದೆ. ಒಂದುವೇಳೆ ಆ ಗಂಡಸಿಗೆ ಅವಳು ಇಷ್ಟವಾಗದಿದ್ದರೆ, ಅವನು ಅವಳನ್ನು ಹಿಂದಿರುಗಿಸಿ ಹಣವನ್ನು ಹಿಂದೆ ಪಡೆಯಬಹುದು. ಪೆಟ್ರೋನಾ ಚಿಕ್ಕವಳಿರುವಾಗ ಸ್ವತಃ ಈ ಪದ್ಧತಿಯನ್ನು ಎದುರಿಸಬೇಕಾಯಿತು. ಅವಳ ತಾಯಿಯು ಒಬ್ಬನಿಗೆ ಹೆಂಡತಿಯಾಗಿ ಮಾರಲ್ಪಟ್ಟಿದ್ದಳು ಮತ್ತು ಒಂದು ಮಗುವನ್ನು ಹೆತ್ತಿದ್ದಳು. ಅನಂತರ ಅವಳ ಗಂಡನು ಅವಳಿಗೆ ವಿವಾಹ ವಿಚ್ಛೇದ ನೀಡಿದನು. ಇದೆಲ್ಲವು ಅವಳು ಕೇವಲ 13 ವರುಷದವಳಾಗುವಷ್ಟರಲ್ಲಿ ಸಂಭವಿಸಿತು! ಆ ಮೊದಲ ಮಗುವು ಮೃತಪಟ್ಟಿತು ಮತ್ತು ಪೆಟ್ರೋನಾಳ ತಾಯಿಯು ಪುನಃ ಎರಡು ಬಾರಿ ಮಾರಲ್ಪಟ್ಟಳು. ಒಟ್ಟಿಗೆ ಅವಳು ಎಂಟು ಮಕ್ಕಳನ್ನು ಹಡೆದಳು.

ಇಂಥ ರೀತಿಯ ಜೀವನದಿಂದ ಪೆಟ್ರೋನಾ ತಪ್ಪಿಸಿಕೊಳ್ಳಲು ಬಯಸಿದಳು ಮತ್ತು ಇದನ್ನು ಅವಳು ಹೇಗೆ ಮಾಡಶಕ್ತಳಾದಳೆಂದು ಅವಳೇ ವಿವರಿಸುತ್ತಾಳೆ: “ನಾನು ಪ್ರಾಥಮಿಕ ಶಾಲೆಯನ್ನು ಮುಗಿಸಿದ ನಂತರ, ನನಗೆ ವಿವಾಹವಾಗಲು ಇಷ್ಟವಿಲ್ಲ ಬದಲಾಗಿ ಇನ್ನೂ ಹೆಚ್ಚು ಓದಲು ಬಯಸುತ್ತೇನೆ ಎಂದು ನನ್ನ ತಾಯಿಗೆ ಹೇಳಿದೆ. ಇದರ ಕುರಿತು ತಾನೇನನ್ನೂ ಮಾಡಸಾಧ್ಯವಿಲ್ಲವೆಂದೂ ನಾನು ತಂದೆಯ ಬಳಿ ಮಾತಾಡಬೇಕೆಂದೂ ತಾಯಿಯು ತಿಳಿಸಿದಳು.”

ನನ್ನ ತಂದೆಯಾದರೋ, “ನಾನು ನಿನಗೆ ಮದುವೆ ಮಾಡಿಸುತ್ತೇನೆ. ನಿನಗೆ ಸ್ಪ್ಯಾನಿಷ್‌ ಭಾಷೆಯನ್ನು ಮಾತಾಡಲು ಮತ್ತು ಓದಲು ಬರುತ್ತದಲ್ಲಾ ಇನ್ನೇನು ಬೇಕು? ನಿನಗೆ ಇನ್ನೂ ಹೆಚ್ಚು ಓದಬೇಕೆಂದಿದ್ದರೆ, ನಿನ್ನ ವಿದ್ಯಾಭ್ಯಾಸಕ್ಕೆ ನೀನೇ ಹಣಕಟ್ಟಬೇಕು” ಎಂದು ಹೇಳಿದರು.

“ನಾನು ಇದನ್ನೇ ಮಾಡಿದೆ. ಬಟ್ಟೆಗೆ ಕಸೂತಿ ಹಾಕುವ ಕೆಲಸವನ್ನು ಮಾಡಿ ಹಣ ಸಂಪಾದಿಸಿದೆ” ಎಂದು ಪೆಟ್ರೋನಾ ತಿಳಿಸುತ್ತಾಳೆ. ಈ ರೀತಿಯಲ್ಲಿ ಅವಳು ವಿವಾಹದಲ್ಲಿ ಮಾರಲ್ಪಡುವುದರಿಂದ ತಪ್ಪಿಸಿಕೊಂಡಳು. ಪೆಟ್ರೋನಾ ಬೆಳೆದ ನಂತರ ಅವಳ ತಾಯಿಯು ಬೈಬಲ್‌ ಅಧ್ಯಯನವನ್ನು ಮಾಡಲಾರಂಭಿಸಿದಳು ಮತ್ತು ಇದು ಅವಳಿಗೆ, ಬೈಬಲ್‌ ಆಧಾರಿತ ಮೌಲ್ಯಗಳನ್ನು ಪೆಟ್ರೋನಾಳ ತಂಗಿಯರಲ್ಲಿ ಬೇರೂರಿಸುವ ಧೈರ್ಯವನ್ನು ನೀಡಿತು. ಯುವ ಹುಡುಗಿಯರನ್ನು ವಿವಾಹದಲ್ಲಿ ಮಾರುವ ಪದ್ಧತಿಯಿಂದಾಗಿ ಫಲಿಸುವ ದುಷ್ಪರಿಣಾಮಗಳನ್ನು ತಾಯಿಯು ತನ್ನ ಸ್ವಂತ ಅನುಭವದಿಂದ ಕಲಿಸಶಕ್ತಳಾದಳು.

ಕುಟುಂಬದಲ್ಲಿ ಗಂಡುಮಕ್ಕಳಿಗೆ ಕೇವಲ ತಂದೆ ಮಾತ್ರ ಶಿಸ್ತುನೀಡಬೇಕೆಂಬುದು ಅನೇಕರು ಅನುಕರಿಸುವ ಇನ್ನೊಂದು ಪದ್ಧತಿಯಾಗಿದೆ. ಪೆಟ್ರೋನಾ ಹೇಳುವುದು: “ಪುರುಷರಿಗಿಂತ ಸ್ತ್ರೀಯರು ಕೀಳಾದವರು ಎಂದು ಟ್ಸೋಟ್‌ಸೀಲ್‌ ಸ್ತ್ರೀಯರಿಗೆ ಕಲಿಸಲಾಗುತ್ತದೆ. ಪುರುಷರು ಬಹಳ ದಬ್ಬಾಳಿಕೆ ನಡೆಸುವವರಾಗಿರುತ್ತಾರೆ. ಚಿಕ್ಕ ಹುಡುಗರು ತಮ್ಮ ತಂದೆಯನ್ನು ಅನುಕರಿಸುತ್ತಾರೆ ಮತ್ತು ತಮ್ಮ ತಾಯಿಗೆ: ‘ನಾನೇನು ಮಾಡಬೇಕೆಂದು ನೀನು ನನಗೆ ಹೇಳಬೇಡ. ನನ್ನ ತಂದೆ ಹೇಳಿದರೆ ಮಾತ್ರ ನಾನು ಮಾಡುತ್ತೇನೆ’ ಎಂದು ಹೇಳುತ್ತಾರೆ. ಆದುದರಿಂದ ತಾಯಂದಿರಿಗೆ ತಮ್ಮ ಗಂಡುಮಕ್ಕಳನ್ನು ತರಬೇತಿಗೊಳಿಸಸಾಧ್ಯವಿಲ್ಲ. ಆದರೆ ಈಗ ನನ್ನ ತಾಯಿ ಬೈಬಲನ್ನು ಅಧ್ಯಯನಮಾಡಿದ ನಂತರ ನನ್ನ ಸಹೋದರರಿಗೆ ಕಲಿಸುವುದರಲ್ಲಿ ಯಶಸ್ವಿಯಾಗಿದ್ದಾಳೆ. ನನ್ನ ಸಹೋದರರು ಎಫೆಸ 6:​1, 2ನ್ನು ಬಾಯಿಪಾಠಮಾಡಿಕೊಂಡಿದ್ದಾರೆ: ‘ಮಕ್ಕಳೇ, . . . ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; . . . ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು.’”

ನೈಜೀರಿಯದಲ್ಲಿರುವ ಮೇರಿ ಎಂಬ ಒಬ್ಬ ತಾಯಿಯು ಸಹ ಹೀಗೆ ಹೇಳಿಕೆ ನೀಡುತ್ತಾಳೆ: “ನಾನು ಬೆಳೆದು ಬಂದ ಸ್ಥಳದಲ್ಲಿನ ಜನರ ಸಂಸ್ಕೃತಿಯು, ತಾಯಿ ತನ್ನ ಮಗನಿಗೆ ಕಲಿಸುವುದನ್ನು ಅಥವಾ ಶಿಸ್ತುಗೊಳಿಸುವುದನ್ನು ಅನುಮತಿಸುವುದಿಲ್ಲ. ಆದರೆ, ಬೈಬಲಿನಲ್ಲಿರುವ ಲೋವಿ ಮತ್ತು ಯೂನೀಕೆಯ​—⁠ತಿಮೊಥೆಯನ ಅಜ್ಜಿ ಮತ್ತು ತಾಯಿಯ​—⁠ಮಾದರಿಯನ್ನು ಅನುಸರಿಸುತ್ತಾ ನನ್ನ ಮಕ್ಕಳಿಗೆ ಕಲಿಸುವುದರಿಂದ ಸ್ಥಳಿಕ ಪದ್ಧತಿಗಳು ನನ್ನನ್ನು ತಡೆಯಬಾರದೆಂದು ನಾನು ದೃಢನಿಶ್ಚಿತಳಾಗಿದ್ದೆ.”​—⁠2 ತಿಮೊಥೆಯ 1:⁠5.

ಕೆಲವು ದೇಶಗಳಲ್ಲಿ ಅಭ್ಯಾಸಿಸಲ್ಪಡುತ್ತಿರುವ ಇನ್ನೊಂದು ಪದ್ಧತಿಯು, “ಸ್ತ್ರೀಯರ ಸುನ್ನತಿ” ಎಂದು ಕೆಲವರು ಕರೆಯುವ ಮತ್ತು ಈಗ ಸಾಮಾನ್ಯವಾಗಿ ಸ್ತ್ರೀ ಜನನೇಂದ್ರಿಯ ಛೇದನ (ಎಫ್‌ಜಿಎಮ್‌) ಎಂದು ಕರೆಯಲಾಗುತ್ತಿರುವ ಪದ್ಧತಿಯಾಗಿದೆ. ಈ ಪ್ರಕ್ರಿಯೆಯಿಂದ ಹೆಣ್ಣಿನ ಜನನೇಂದ್ರಿಯದ ಭಾಗವನ್ನು ಅಥವಾ ಹೆಚ್ಚುಕಡಿಮೆ ಸಂಪೂರ್ಣ ಜನನೇಂದ್ರಿಯವನ್ನು ಕತ್ತರಿಸಲಾಗುತ್ತದೆ. ಜನಪ್ರಿಯ ಫ್ಯಾಶನ್‌ ರೂಪದರ್ಶಿ ಮತ್ತು ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿಯ ವಿಶೇಷ ರಾಯಭಾರಿಯಾದ ವಾರಿಸ್‌ ಡೀರೀ ಎಂಬವಳು, ಈ ಪದ್ಧತಿಯನ್ನು ಜನಸಾಮಾನ್ಯರ ಗಮನಕ್ಕೆ ತಂದಳು. ಸೋಮಾಲಿಯದ ಸ್ಥಳಿಕ ಪದ್ಧತಿಗನುಸಾರ, ಅವಳು ಐದು ವರುಷದ ಮಗುವಾಗಿರುವಾಗ ಅವಳ ತಾಯಿ ಅವಳನ್ನು ಎಫ್‌ಜಿಎಮ್‌ ಪ್ರಕ್ರಿಯೆಗೆ ಒಳಪಡಿಸಿದ್ದಳು. ಒಂದು ವರದಿಗನುಸಾರ, ಮಧ್ಯಪೂರ್ವ ಮತ್ತು ಆಫ್ರಿಕದಲ್ಲಿ ಸುಮಾರು 80 ಲಕ್ಷದಿಂದ 1 ಕೋಟಿ ಸ್ತ್ರೀಯರು ಮತ್ತು ಹುಡುಗಿಯರು ಎಫ್‌ಜಿಎಮ್‌ ಪ್ರಕ್ರಿಯೆಗೆ ಒಳಗಾಗುವ ಅಪಾಯದಲ್ಲಿದ್ದಾರೆ. ಯುನೈಟಡ್‌ ಸ್ಟೇಟ್ಸ್‌ನಲ್ಲಿ ಸಹ ಸುಮಾರು 10,000 ಹುಡುಗಿಯರು ಇದಕ್ಕೊಳಗಾಗುವ ಅಪಾಯದಲ್ಲಿದ್ದಾರೆ.

ಈ ಪದ್ಧತಿಯನ್ನು ಏಕೆ ಅನುಸರಿಸಲಾಗುತ್ತಿದೆ? ಸ್ತ್ರೀ ಜನನೇಂದ್ರಿಯಗಳು ಕೆಟ್ಟದ್ದಾಗಿವೆ ಮತ್ತು ಅವು ಹೆಣ್ಣನ್ನು ಅಶುದ್ಧಳನ್ನಾಗಿಯೂ ಮತ್ತು ಹೀಗೆ ವಿವಾಹಕ್ಕೆ ಅಯೋಗ್ಯಳನ್ನಾಗಿಯೂ ಮಾಡುತ್ತವೆ ಎಂದು ಕೆಲವರು ಭಾವಿಸುತ್ತಾರೆ. ಇದಕ್ಕೆ ಕೂಡಿಸಿ, ಹೆಣ್ಣುಮಗುವಿನ ಜನನೇಂದ್ರಿಯಗಳನ್ನು ಕತ್ತರಿಸುವುದು ಅಥವಾ ತೆಗೆದುಬಿಡುವುದು ಅವಳ ಕನ್ಯಾವಸ್ಥೆಯನ್ನು ಕಾಪಾಡುವುದು ಮತ್ತು ನಂತರ ತನ್ನ ಗಂಡನಿಗೆ ನಂಬಿಗಸ್ತಳಾಗಿರುವುದನ್ನು ಖಚಿತಪಡಿಸುವುದು ಎಂದು ಭಾವಿಸಲಾಗುತ್ತದೆ. ಒಂದುವೇಳೆ ತಾಯಿ ಈ ಪದ್ಧತಿಯನ್ನು ನೆರವೇರಿಸದಿದ್ದರೆ, ಅವಳು ತನ್ನ ಗಂಡನ ಮತ್ತು ಸ್ಥಳಿಕ ಸಮುದಾಯದ ಕೋಪಕ್ಕೆ ಗುರಿಯಾಗುತ್ತಾಳೆ.

ಹಾಗಿದ್ದರೂ, ಅನೇಕ ತಾಯಂದಿರು, ಈ ನೋವುಭರಿತ ಪದ್ಧತಿಯನ್ನು ಬೆಂಬಲಿಸಲು ಧಾರ್ಮಿಕವಾಗಿಯೂ ವೈದ್ಯಕೀಯವಾಗಿಯೂ ಅಥವಾ ಆರೋಗ್ಯದ ದೃಷ್ಟಿಯಿಂದಲೂ ಯಾವುದೇ ನ್ಯಾಯಬದ್ಧವಾದ ಕಾರಣವಿಲ್ಲ ಎಂಬುದನ್ನು ಗ್ರಹಿಸಿಕೊಂಡಿದ್ದಾರೆ. ಮತ್ತು ಅನೇಕ ತಾಯಂದಿರು ತಮ್ಮ ಹೆಣ್ಣುಮಕ್ಕಳನ್ನು ಈ ಪದ್ಧತಿಗೆ ಗುರಿಮಾಡಲು ಧೈರ್ಯದಿಂದ ನಿರಾಕರಿಸಿದ್ದಾರೆ ಎಂದು ಅಸಹ್ಯಕರ ಪದ್ಧತಿಗಳನ್ನು ಬಿಟ್ಟುಬಿಡುವುದು (ಇಂಗ್ಲಿಷ್‌) ಎಂಬ ನೈಜೀರಿಯದ ಪುಸ್ತಕವು ತಿಳಿಸುತ್ತದೆ.

ಹೌದು, ಹಲವಾರು ಪಂಥಾಹ್ವಾನಗಳ ಹೊರತಾಗಿಯೂ ಲೋಕಾದ್ಯಂತ ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಯಶಸ್ವಿಕರವಾಗಿ ಸಂರಕ್ಷಿಸುತ್ತಿದ್ದಾರೆ ಮತ್ತು ಶಿಕ್ಷಣವನ್ನು ನೀಡುತ್ತಿದ್ದಾರೆ. ಅವರ ಪ್ರಯತ್ನಗಳು ನಿಜವಾಗಿಯೂ ಗಣ್ಯಮಾಡಲ್ಪಡುತ್ತಿವೆಯೊ? (g05 2/22)

[ಪುಟ 5ರಲ್ಲಿರುವ ಚೌಕ/ಚಿತ್ರ]

“ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಂಭವಿಸಿದ ಪ್ರಗತಿಯ ಹಿಂದೆ ಸ್ತ್ರೀಯರ ಮುಖ್ಯ ಪಾತ್ರ ಇದ್ದೇ ಇದೆ ಎಂಬುದನ್ನು ಪದೇ ಪದೇ ಮಾಡಲಾದ ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಯಾವಾಗ ಸ್ತ್ರೀಯರು ಸಂಪೂರ್ಣವಾಗಿ ಒಳಗೊಂಡಿರುತ್ತಾರೊ ಆಗ ಪ್ರಯೋಜನಗಳು ಕೂಡಲೆ ತೋರಿಬರುತ್ತವೆ: ಕುಟುಂಬಗಳು ಹೆಚ್ಚು ಆರೋಗ್ಯಕರವಾಗಿಯೂ ಉತ್ತಮವಾಗಿ ಪೋಷಿಸಲ್ಪಟ್ಟದ್ದಾಗಿಯೂ ಇರುತ್ತವೆ; ಅವರ ಆದಾಯ, ಉಳಿತಾಯ ಮತ್ತು ಬಂಡವಾಳ ಹೂಡುವಿಕೆ ಇವೆಲ್ಲವೂ ಹೆಚ್ಚಾಗುತ್ತವೆ. ಇದು ಕುಟುಂಬದಲ್ಲಿ ಸತ್ಯವಾಗಿರುವಂತೆ ಸಮುದಾಯಗಳ ವಿಷಯದಲ್ಲೂ ಕಟ್ಟಕಡೆಗೆ ಇಡೀ ದೇಶಗಳ ವಿಷಯದಲ್ಲೂ ನಿಜವಾಗಿರುತ್ತದೆ.”​—⁠ವಿಶ್ವ ಸಂಸ್ಥೆಯ ಸೆಕ್ರಿಟರಿ ಜೆನರಲ್‌ ಕೋಫೀ ಆ್ಯನಾನ್‌, ಮಾರ್ಚ್‌ 8, 2003.

[ಕೃಪೆ]

UN/DPI photo by Milton Grant

[ಪುಟ 8ರಲ್ಲಿರುವ ಚೌಕ/ಚಿತ್ರಗಳು]

ಅವಳು ನಮಗಾಗಿ ತ್ಯಾಗಗಳನ್ನು ಮಾಡಿದಳು

ಬ್ರಸಿಲ್‌ನ ಜೂಲ್ಯಾನೂ ಎಂಬ ಒಬ್ಬ ಯುವಕನು ಹೇಳುವುದು: “ನಾನು ಐದು ವರುಷದವನಾಗಿದ್ದಾಗ ನನ್ನ ತಾಯಿಗೆ ಒಂದು ಉತ್ತಮವಾದ ಉದ್ಯೋಗವಿತ್ತು. ಆದರೆ ನನ್ನ ತಂಗಿ ಹುಟ್ಟಿದಾಗ ನಮ್ಮನ್ನು ನೋಡಿಕೊಳ್ಳುವ ಸಲುವಾಗಿ ತಾಯಿಯು ತನ್ನ ಕೆಲಸಕ್ಕೆ ರಾಜಿನಾಮೆಕೊಟ್ಟಳು. ಅವಳ ಕೆಲಸದ ಸ್ಥಳದಲ್ಲಿದ್ದ ಸಲಹೆಗಾರರು, ಅವಳು ತನ್ನ ಕೆಲಸವನ್ನು ಬಿಡದಂತೆ ಮನವೊಪ್ಪಿಸಲು ಬಹಳಷ್ಟು ಪ್ರಯತ್ನಮಾಡಿದರು. ಮಕ್ಕಳು ಮದುವೆಯಾಗಿ ಮನೆಬಿಟ್ಟುಹೋದ ನಂತರ ಅವಳು ಅವರಿಗಾಗಿ ಮಾಡಿದ ಎಲ್ಲಾ ತ್ಯಾಗಗಳು ವ್ಯರ್ಥವಾಗುತ್ತವೆ, ಯಾವುದೇ ಲಾಭವನ್ನು ತರದಂಥ ಬಂಡವಾಳವಾಗಿ ಅದು ಪರಿಣಮಿಸುತ್ತದೆ ಎಂದು ಅವರು ಅವಳಿಗೆ ಹೇಳಿದರು. ಆದರೆ ಅವರು ಹೇಳಿದ್ದೆಲ್ಲಾ ತಪ್ಪಾಗಿತ್ತು ಎಂದು ನಾನೀಗ ಹೇಳಬಲ್ಲೆ; ಏಕೆಂದರೆ ನನ್ನ ತಾಯಿಯ ಆ ಪ್ರೀತಿಯ ಕೃತ್ಯವನ್ನು ನಾನೆಂದಿಗೂ ಮರೆಯಲಾರೆ.”

[ಚಿತ್ರಗಳು]

ತನ್ನ ಮಕ್ಕಳೊಂದಿಗೆ ನಿಂತಿರುವ ಜೂಲ್ಯಾನೂವಿನ ತಾಯಿ; ಎಡಬದಿಯಲ್ಲಿ: ಜೂಲ್ಯಾನೂ ಐದು ವರುಷದವನಾಗಿದ್ದಾಗ

[ಪುಟ 6ರಲ್ಲಿರುವ ಚಿತ್ರಗಳು]

ಬಿಷ್ನು ಓದುಬರಹವನ್ನು ಕಲಿತಳು, ಅನಂತರ ತನ್ನ ಗಂಡುಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುವಂತೆ ಸಹಾಯಮಾಡಿದಳು

[ಪುಟ 7ರಲ್ಲಿರುವ ಚಿತ್ರಗಳು]

ಆ್ಯನ್ಟೋನ್ಯಾಳ ಚಿಕ್ಕ ಮಗನು ಕ್ರೈಸ್ತ ಕೂಟಗಳಲ್ಲಿ ಬೈಬಲ್‌ ವಾಚನಗಳನ್ನು ಮಾಡುತ್ತಾನೆ

[ಪುಟ 7ರಲ್ಲಿರುವ ಚಿತ್ರಗಳು]

ಪೆಟ್ರೋನಾ, ಯೆಹೋವನ ಸಾಕ್ಷಿಗಳ ಮೆಕ್ಸಿಕೊ ಬ್ರಾಂಚ್‌ನಲ್ಲಿ ಸ್ವಯಂ ಸೇವಕಿಯಾಗಿ ಕೆಲಸಮಾಡುತ್ತಿದ್ದಾಳೆ. ಕಾಲಾನಂತರ ಒಬ್ಬ ಸಾಕ್ಷಿಯಾದ ಅವಳ ತಾಯಿಯು, ಪೆಟ್ರೋನಾಳ ತಂಗಿ ಹಾಗೂ ತಮ್ಮಂದಿರಿಗೆ ಕಲಿಸುತ್ತಿದ್ದಾಳೆ

[ಪುಟ 8ರಲ್ಲಿರುವ ಚಿತ್ರ]

ವಾರಿಸ್‌ ಡೀರೀ, ಸ್ತ್ರೀ ಜನನೇಂದ್ರಿಯ ಛೇದನ ಪದ್ಧತಿಯ ವಿರುದ್ಧ ಮಾತಾಡುವ ಪ್ರಖ್ಯಾತ ಪ್ರತಿನಿಧಿ

[ಕೃಪೆ]

Photo by Sean Gallup/Getty Images