ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳಿಗೆ ಅಗತ್ಯವಿರುವ ಗಮನವನ್ನು ನೀಡುವುದು

ಮಕ್ಕಳಿಗೆ ಅಗತ್ಯವಿರುವ ಗಮನವನ್ನು ನೀಡುವುದು

ಬೈಬಲಿನ ದೃಷ್ಟಿಕೋನ

ಮಕ್ಕಳಿಗೆ ಅಗತ್ಯವಿರುವ ಗಮನವನ್ನು ನೀಡುವುದು

ದೇವರ ಮಗನಿಗೆ ಮಕ್ಕಳೊಂದಿಗೆ ಕಳೆಯಲು ಸಮಯವಿತ್ತೊ? ಇಲ್ಲವೆಂದು ಅವನ ಶಿಷ್ಯರಲ್ಲಿ ಕೆಲವರು ನೆನಸಿದರು. ಒಂದು ಸಂದರ್ಭದಲ್ಲಿ ಚಿಕ್ಕ ಮಕ್ಕಳು ಯೇಸುವಿನ ಹತ್ತಿರಕ್ಕೆ ಬರದಂತೆ ತಡೆಯಲು ಅವರು ಪ್ರಯತ್ನಿಸಿದರು. ಆದರೆ ಅವನು ಅದಕ್ಕೆ ಹೀಗೆ ಹೇಳುವ ಮೂಲಕ ಪ್ರತಿಕ್ರಿಯಿಸಿದನು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ.” ನಂತರ ಅವನು ಮಕ್ಕಳ ಗುಂಪನ್ನು ಪ್ರೀತಿಯಿಂದ ತನ್ನ ಹತ್ತಿರಕ್ಕೆ ಕರೆದು, ಅವರೊಂದಿಗೆ ಮಾತಾಡಿದನು. (ಮಾರ್ಕ 10:​13-16) ಹೀಗೆ ಮಾಡುವ ಮೂಲಕ, ಮಕ್ಕಳಿಗೆ ಗಮನವನ್ನು ಕೊಡಲು ತಾನು ಬಯಸುತ್ತೇನೆ ಎಂಬುದನ್ನು ಯೇಸು ತೋರಿಸಿಕೊಟ್ಟನು. ಈ ಮಾದರಿಯನ್ನು ಇಂದು ಹೆತ್ತವರು ಹೇಗೆ ಅನುಕರಿಸಬಲ್ಲರು? ತಮ್ಮ ಮಕ್ಕಳಿಗೆ ಯೋಗ್ಯ ತರಬೇತಿಯನ್ನು ನೀಡುವ ಮತ್ತು ಅವರೊಂದಿಗೆ ಸಮಯವನ್ನು ಕಳೆಯುವ ಮೂಲಕವೇ.

ನಿಶ್ಚಯವಾಗಿಯೂ, ಜವಾಬ್ದಾರಿತ ಹೆತ್ತವರು ತಮ್ಮ ಮಕ್ಕಳ ಹಿತಕ್ಷೇಮವನ್ನು ನೋಡಿಕೊಳ್ಳಲು ಸತತ ಪ್ರಯತ್ನವನ್ನು ಮಾಡುತ್ತಾರೆ ಮತ್ತು ಅವರನ್ನು ಎಂದಿಗೂ ದುರುಪಚರಿಸುವುದಿಲ್ಲ. ಹೆತ್ತವರು ಮಕ್ಕಳಿಗೆ ಗೌರವ ಮತ್ತು ಪರಿಗಣನೆಯನ್ನು ತೋರಿಸುವುದು ಒಂದು ಸ್ವಾಭಾವಿಕ ವಿಷಯವಾಗಿದೆ ಎಂಬುದಾಗಿಯೂ ಹೇಳಬಹುದು. ಹಾಗಿದ್ದರೂ, ನಮ್ಮ ದಿನಗಳಲ್ಲಿ ಅನೇಕರಲ್ಲಿ ಸ್ವಾಭಾವಿಕ “ಮಮತೆ”ಯಿರುವುದಿಲ್ಲ ಎಂದು ಬೈಬಲ್‌ ಎಚ್ಚರಿಸುತ್ತದೆ. (2 ತಿಮೊಥೆಯ 3:​1-3) ತಮ್ಮ ಮಕ್ಕಳ ಬಗ್ಗೆ ನಿಶ್ಚಯವಾಗಿಯೂ ಪ್ರೀತಿಪರ ಕಾಳಜಿಯನ್ನು ವಹಿಸುವಂಥ ಹೆತ್ತವರು ಸಹ, ಜವಾಬ್ದಾರಿಯುತ ರೀತಿಯಲ್ಲಿ ಮಕ್ಕಳನ್ನು ಬೆಳೆಸುವ ಕುರಿತು ಯಾವಾಗಲೂ ಏನನ್ನಾದರೂ ಕಲಿಯಲು ಇದ್ದೇ ಇರುತ್ತದೆ. ಆದುದರಿಂದ, ತಮ್ಮ ಮಕ್ಕಳ ಒಳಿತನ್ನು ಬಯಸುವ ಹೆತ್ತವರಿಗೆ ಈ ಕೆಳಗೆ ಕೊಡಲ್ಪಟ್ಟಿರುವ ಬೈಬಲ್‌ ಮೂಲತತ್ತ್ವಗಳು ಪ್ರೀತಿಪರ ಮರುಜ್ಞಾಪನಗಳಾಗಿವೆ.

ಕೋಪವನ್ನೆಬ್ಬಿಸದೆ ತರಬೇತಿನೀಡುವುದು

ಒಬ್ಬ ಪ್ರಸಿದ್ಧ ಶಿಕ್ಷಕನೂ ಮನೋವೈದ್ಯ ಪರಿಶೋಧಕನೂ ಆದ ಡಾ. ರಾಬರ್ಟ್‌ ಕೋಲ್ಸ್‌ ಒಮ್ಮೆ ತಿಳಿಸಿದ್ದು: “ಮಗುವಿನೊಳಗೆ ಒಂದು ನೈತಿಕ ಪ್ರಜ್ಞೆಯು ಬೆಳೆಯುತ್ತಿರುತ್ತದೆ. ಇದು ದೇವದತ್ತ ವಿಷಯವಾಗಿದೆ ಎಂದು ನಾನು ನೆನಸುತ್ತೇನೆ. ಏಕೆಂದರೆ ಮಕ್ಕಳೊಳಗೆ ನೈತಿಕ ಮಾರ್ಗದರ್ಶನಕ್ಕಾಗಿ ಹಂಬಲಿಕೆ ಇರುತ್ತದೆ.” ನೈತಿಕ ಮಾರ್ಗದರ್ಶನಕ್ಕಾಗಿನ ಈ ಹಸಿವು ಮತ್ತು ಬಾಯಾರಿಕೆಯನ್ನು ಯಾರು ತಣಿಸಬೇಕು?

ಎಫೆಸ 6:4 ರಲ್ಲಿ ಶಾಸ್ತ್ರವಚನವು ಹೀಗೆ ಸಲಹೆನೀಡುತ್ತದೆ: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ [“ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ,” NW] ಅವರನ್ನು ಸಾಕಿ ಸಲಹಿರಿ.” ಈ ಶಾಸ್ತ್ರವಚನವು, ದೇವರಿಗಾಗಿ ಪ್ರೀತಿ ಮತ್ತು ದೈವಿಕ ಮಟ್ಟಗಳಿಗಾಗಿ ಆಳವಾದ ಗಣ್ಯತೆಯನ್ನು ಮಕ್ಕಳಲ್ಲಿ ಬೇರೂರಿಸುವ ಜವಾಬ್ದಾರಿಯನ್ನು ನಿರ್ದಿಷ್ಟವಾಗಿ ತಂದೆಗೆ ವಹಿಸುತ್ತದೆ ಎಂಬುದನ್ನು ಗಮನಿಸಿದಿರೋ? ಆದರೆ ಅಪೊಸ್ತಲ ಪೌಲನು ಎಫೆಸ 6ನೇ ಅಧ್ಯಾಯದ 1ನೇ ವಚನದಲ್ಲಿ, “ತಂದೆತಾಯಿಗಳ [“ಹೆತ್ತವರ,” NW] ಮಾತನ್ನು ಕೇಳಬೇಕು” ಎಂದು ಮಕ್ಕಳಿಗೆ ಹೇಳಿದಾಗ, ತಂದೆ ಮತ್ತು ತಾಯಿ ಎಂಬುದಾಗಿ ಇಬ್ಬರನ್ನೂ ಸೂಚಿಸಿದನು. *

ತಂದೆಯು ಇಲ್ಲದಿರುವಲ್ಲಿ, ಈ ಜವಾಬ್ದಾರಿಯನ್ನು ತಾಯಿಯಾದವಳು ಸ್ವೀಕರಿಸಬೇಕೆಂಬುದು ನಿಜ. ಅನೇಕ ಒಂಟಿ ತಾಯಂದಿರು ತಮ್ಮ ಮಕ್ಕಳನ್ನು ಯೆಹೋವ ದೇವರ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಯಶಸ್ವಿಕರವಾಗಿ ಬೆಳೆಸಿದ್ದಾರೆ. ಆದರೆ ತಾಯಿಯು ಪುನಃ ವಿವಾಹವಾಗುವಲ್ಲಿ, ಕ್ರೈಸ್ತ ಗಂಡನು ಮುಂದಾಳುತ್ವವನ್ನು ವಹಿಸಬೇಕು. ಮತ್ತು ಮಕ್ಕಳನ್ನು ತರಬೇತಿಗೊಳಿಸಲು ಹಾಗೂ ಶಿಸ್ತುಗೊಳಿಸಲು ಅವನು ತೆಗೆದುಕೊಳ್ಳುವ ಮುಂದಾಳುತ್ವವನ್ನು ತಾಯಿಯು ಇಚ್ಛಾಪೂರ್ವಕವಾಗಿ ಅನುಸರಿಸಬೇಕು.

ನೀವು ನಿಮ್ಮ ಮಕ್ಕಳಿಗೆ “ಕೋಪವನ್ನೆಬ್ಬಿಸದೆ” ಹೇಗೆ ಶಿಸ್ತು ಅಥವಾ ತರಬೇತಿಯನ್ನು ನೀಡುವಿರಿ? ಇದಕ್ಕೆ ಯಾವುದೇ ರಹಸ್ಯ ಸೂತ್ರಗಳಿಲ್ಲ, ಏಕೆಂದರೆ ಪ್ರತಿಯೊಂದು ಮಗುವೂ ಭಿನ್ನವಾಗಿದೆ. ಆದರೆ ಹೆತ್ತವರು ತಮ್ಮ ಶಿಸ್ತುಗೊಳಿಸುವ ವಿಧಾನಕ್ಕೆ ಬಹಳಷ್ಟು ಗಮನವನ್ನು ಕೊಡಬೇಕು. ಯಾವಾಗಲೂ ತಮ್ಮ ಮಕ್ಕಳಿಗೆ ಪ್ರೀತಿ ಮತ್ತು ಗೌರವವನ್ನು ತೋರಿಸಬೇಕು. ಆಸಕ್ತಿಕರವಾಗಿ, ಮಕ್ಕಳಿಗೆ ಕೋಪವನ್ನೆಬ್ಬಿಸದೆ ಇರುವ ಈ ವಿಷಯವು ಕೊಲೊಸ್ಸೆ 3:21 ರಲ್ಲಿ ಪುನರಾವರ್ತಿಸಲ್ಪಟ್ಟಿದೆ. ಅಲ್ಲಿ ತಂದೆಗಳನ್ನು ಪುನಃ ಈ ರೀತಿಯಲ್ಲಿ ಉತ್ತೇಜಿಸಲಾಗಿದೆ: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.”

ಕೆಲವು ಹೆತ್ತವರು ತಮ್ಮ ಮಕ್ಕಳ ಮೇಲೆ ಕೂಗಾಡುತ್ತಾರೆ ಮತ್ತು ಕಿರುಚಾಡುತ್ತಾರೆ. ಖಂಡಿತವಾಗಿಯೂ ಇದು ಅವರ ಎಳೆಯ ಮಕ್ಕಳನ್ನು ಕೆಣಕುತ್ತದೆ. ಆದರೆ ಬೈಬಲ್‌ ಉತ್ತೇಜಿಸುವುದು: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ [“ಕೂಗಾಟ,” NW] ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.” (ಎಫೆಸ 4:31) ಅಷ್ಟುಮಾತ್ರವಲ್ಲದೆ, “ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧು”ವಾಗಿರಬೇಕೆಂದೂ ಬೈಬಲ್‌ ಹೇಳುತ್ತದೆ.​—⁠2 ತಿಮೊಥೆಯ 2:24.

ಅವರಿಗೆ ನಿಮ್ಮ ಸಮಯವನ್ನು ಕೊಡಿರಿ

ನಿಮ್ಮ ಮಕ್ಕಳಿಗೆ ಅಗತ್ಯವಿರುವ ಸಮಯವನ್ನು ನೀಡುವುದರಲ್ಲಿ, ನಿಮ್ಮ ಮಕ್ಕಳ ಹಿತಕ್ಷೇಮಕ್ಕಾಗಿ ನಿಮ್ಮ ಸ್ವಂತ ಸುಖ ಮತ್ತು ವೈಯಕ್ತಿಕ ಅನುಕೂಲತೆಯನ್ನು ತ್ಯಾಗಮಾಡುವುದೂ ಒಳಗೂಡಿದೆ. ಬೈಬಲ್‌ ಹೇಳುವುದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”​—⁠ಧರ್ಮೋಪದೇಶಕಾಂಡ 6:6, 7.

ಹೆಚ್ಚಾಗುತ್ತಿರುವ ಆರ್ಥಿಕ ಬಿಕ್ಕಟ್ಟಿನ ಕಾರಣ ಇಂದು ಕೆಲವೇ ಹೆತ್ತವರಿಗೆ ತಮ್ಮ ಮಕ್ಕಳೊಂದಿಗೆ ದಿನವೆಲ್ಲಾ ಸಮಯ ಕಳೆಯಲು ಸಾಧ್ಯವಾಗುತ್ತಿದೆ. ಹಾಗಿದ್ದರೂ, ಹೆತ್ತವರು ತಮ್ಮ ಚಿಕ್ಕ ಮಕ್ಕಳೊಂದಿಗೆ ವ್ಯಯಿಸಲಿಕ್ಕಾಗಿ ಸಮಯವನ್ನು ಕಂಡುಕೊಳ್ಳಲೇಬೇಕು ಎಂಬುದನ್ನು ಧರ್ಮೋಪದೇಶಕಾಂಡ ಪುಸ್ತಕವು ಒತ್ತಿಹೇಳುತ್ತದೆ. ಹೀಗೆ ಮಾಡಬೇಕಾದರೆ ಉತ್ತಮ ವ್ಯವಸ್ಥಾಪನೆ ಮತ್ತು ತ್ಯಾಗದ ಅಗತ್ಯವಿದೆ. ಆದರೆ ಮಕ್ಕಳಿಗೆ ಅಂಥ ಗಮನವು ಅತ್ಯಗತ್ಯವಾಗಿದೆ.

ಒಂದು ಅಧ್ಯಯನದ ಫಲಿತಾಂಶಗಳನ್ನು ಪರಿಗಣಿಸಿರಿ. ಇದು 12,000ಕ್ಕಿಂತಲೂ ಹೆಚ್ಚು ಹದಿಹರೆಯದವರ ಮೇಲೆ ನಡೆಸಲ್ಪಟ್ಟ ಅಧ್ಯಯನವಾಗಿತ್ತು. ಸಂಶೋಧಕರ ಸಮಾಪ್ತಿಯು ಈ ರೀತಿಯಾಗಿದೆ: “ಹದಿಹರೆಯದವರ ಆರೋಗ್ಯಕ್ಕೆ ಉತ್ತಮ ಗ್ಯಾರಂಟಿ ಮತ್ತು ಅವರ ಹಿತಕ್ಷೇಮವನ್ನು ಅಪಾಯಕ್ಕೆ ಒಡ್ಡಬಲ್ಲ ಕೆಟ್ಟ ನಡವಳಿಕೆಯ ವಿರುದ್ಧವಾಗಿರುವ ಬಲವಾದ ಅಡ್ಡಗೋಡೆಯು ಹೆತ್ತವರೊಂದಿಗೆ ಅವರಿಗಿರುವ ಬಲವಾದ ಭಾವನಾತ್ಮಕ ಬಂಧವೇ ಆಗಿದೆ.” ಹೌದು, ಮಕ್ಕಳು ತಮ್ಮ ಹೆತ್ತವರ ಗಮನಕ್ಕಾಗಿ ಹಾತೊರೆಯುತ್ತಿರುತ್ತಾರೆ. ಒಬ್ಬಾಕೆ ತಾಯಿಯು ತನ್ನ ಮಕ್ಕಳಿಗೆ ಒಮ್ಮೆ ಹೀಗೆ ಕೇಳಿದಳು: “ನಿಮಗೆ ಏನು ಬೇಕೊ ಅದನ್ನು ಕೇಳಿ ಕೊಡುತ್ತೇನೆಂದು ಹೇಳಿದರೆ ನೀವು ಏನನ್ನು ಕೇಳಬಯಸುತ್ತೀರಿ?” ಆ ನಾಲ್ಕೂ ಮಂದಿ ಮಕ್ಕಳು ಉತ್ತರಿಸಿದ್ದು: “ಅಪ್ಪಅಮ್ಮ ನಮ್ಮೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು.”

ಹೀಗೆ ಒಂದು ಜವಾಬ್ದಾರಿಯುತ ಹೆತ್ತವರಾಗಿರುವುದು ಎಂದರೆ, ನಿಮ್ಮ ಮಕ್ಕಳ ಆವಶ್ಯಕತೆಗಳು ಪೂರೈಸಲ್ಪಡುತ್ತಿವೆಯೋ ಎಂಬುದನ್ನು ಖಚಿತಪಡಿಸಿಕೊಳ್ಳುವುದೇ ಆಗಿದೆ. ಇದರಲ್ಲಿ ಅವರ ಆಧ್ಯಾತ್ಮಿಕ ಶಿಕ್ಷಣ ಮತ್ತು ಹೆತ್ತವರೊಂದಿಗಿನ ಆಪ್ತ ಸ್ನೇಹಸಂಬಂಧವನ್ನು ಹೊಂದುವ ಅಗತ್ಯವೂ ಒಳಗೊಂಡಿದೆ. ಇದರ ಅರ್ಥ, ನಿಮ್ಮ ಮಕ್ಕಳು ಸಮರ್ಥ, ಗೌರವಭರಿತ ಮತ್ತು ಜೊತೆಮಾನವರನ್ನು ದಯೆಯಿಂದ ಉಪಚರಿಸುವ ಹಾಗೂ ತಮ್ಮ ಸೃಷ್ಟಿಕರ್ತನಿಗೆ ಘನತೆಯನ್ನು ತರುವ ಪ್ರಾಮಾಣಿಕ ವಯಸ್ಕರಾಗಿ ಬೆಳೆಯುವಂತೆ ಸಹಾಯಮಾಡುವುದೇ ಆಗಿದೆ. (1 ಸಮುವೇಲ 2:26) ಹೌದು, ಯಾವಾಗ ಹೆತ್ತವರು ತಮ್ಮ ಮಕ್ಕಳನ್ನು ದೈವಿಕ ಮಾರ್ಗದಲ್ಲಿ ತರಬೇತುಗೊಳಿಸಿ, ಶಿಸ್ತುಗೊಳಿಸುತ್ತಾರೋ ಆಗ ಆ ಹೆತ್ತವರು ಜವಾಬ್ದಾರಿಯುತರಾಗಿದ್ದಾರೆಂದು ಹೇಳಬಹುದು. (g05 2/8)

[ಪಾದಟಿಪ್ಪಣಿ]

^ ಇಲ್ಲಿ ಪೌಲನು ಗೊನಿಫ್‌ಸಿನ್‌ ಎಂಬ ಗ್ರೀಕ್‌ ಪದವನ್ನು ಉಪಯೋಗಿಸಿದನು. ಗೊನಿಫ್ಸ್‌ ಎಂಬ ಪದವು “ಹೆತ್ತವರು” ಎಂಬ ಅರ್ಥವನ್ನು ನೀಡುತ್ತದೆ. ಆದರೆ, 4ನೇ ವಚನದಲ್ಲಿ ಅವನು ಪಾಟಿರೆಸ್‌ ಅಂದರೆ “ತಂದೆಗಳು” ಎಂಬ ಅರ್ಥವನ್ನು ನೀಡುವ ಗ್ರೀಕ್‌ ಪದವನ್ನು ಉಪಯೋಗಿಸಿದನು.

[ಪುಟ 13ರಲ್ಲಿರುವ ಚಿತ್ರ]

ಕೂಗಾಡುವುದು ಮತ್ತು ಕಿರುಚಾಡುವುದು ಮಗುವಿಗೆ ನೋವನ್ನು ಉಂಟುಮಾಡಸಾಧ್ಯವಿದೆ

[ಪುಟ 13ರಲ್ಲಿರುವ ಚಿತ್ರ]

ನಿಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯಿರಿ