ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೊಸಳೆಯನ್ನು ನೋಡಿ ನಸುನಗೆ ಬೀರಬಲ್ಲಿರೋ?

ಮೊಸಳೆಯನ್ನು ನೋಡಿ ನಸುನಗೆ ಬೀರಬಲ್ಲಿರೋ?

ಮೊಸಳೆಯನ್ನು ನೋಡಿ ನಸುನಗೆ ಬೀರಬಲ್ಲಿರೋ?

ಭಾರತದ ಎಚ್ಚರ! ಲೇಖಕರಿಂದ

ಒಂದು ಮೊಸಳೆಯನ್ನು ನೋಡಿ ನಸುನಗುವುದರ ಬಗ್ಗೆ ನೀವೆಂದಾದರೂ ಯೋಚಿಸಿದ್ದುಂಟೊ? ಪೀಟರ್‌ ಪ್ಯಾನ್‌ ಎಂಬ ಮಕ್ಕಳ ಕಥೆಯ ಸಂಗೀತಮಯ ಕಥನವೊಂದರಲ್ಲಿ ಕ್ಯಾಪ್ಟನ್‌ ಹುಕ್‌ ಎಂಬ ಪಾತ್ರಧಾರಿಯು, “ಮೊಸಳೆಯನ್ನು ನೋಡಿ ಎಂದೂ ನಸುನಗಬೇಡಿ” ಎಂಬ ತನ್ನ ಬುದ್ಧಿವಾದಕ್ಕೆ ಕಾರಣವನ್ನು ತಿಳಿಸುತ್ತಾನೆ. ಮೊಸಳೆಯು ವಾಸ್ತವದಲ್ಲಿ, ‘ನಿಮ್ಮನ್ನು ತನ್ನ ಹೊಟ್ಟೆಯೊಳಗೆ ಹೇಗೆ ಸೇರಿಸಬಹುದೆಂದು ಯೋಚಿಸುತ್ತಾ ಇದೆ’ ಎಂದು ಅವನು ಹೇಳಿದನು.

ಲೋಕವ್ಯಾಪಕವಾಗಿರುವ ಅನೇಕ ಜಾತಿಯ ಮೊಸಳೆಗಳಲ್ಲಿ ಮನುಷ್ಯರ ಮೇಲೆ ಆಕ್ರಮಣಮಾಡುವ ಮೊಸಳೆ ಜಾತಿಗಳೂ ಕೆಲವು ಇವೆ ಎಂಬುದು ನಿಜವಾಗಿರುವುದಾದರೂ, “ಇದು ಎಷ್ಟು ಅಪರೂಪವಾಗಿ ಸಂಭವಿಸುತ್ತದೆಂದರೆ . . . ಸಾಮಾನ್ಯವಾಗಿ ಮೊಸಳೆಗಳನ್ನು ನರಭಕ್ಷಕಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ.” (ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ) ಕೆಲವರು ಮೊಸಳೆಗಳನ್ನು ಕುರೂಪವಾದ ಮತ್ತು ಭೀಕರವಾದ ಜೀವಿಗಳೆಂದು ಪರಿಗಣಿಸುವುದಾದರೂ, ಇನ್ನಿತರರ ದೃಷ್ಟಿಯಲ್ಲಿ ಅವು ತುಂಬ ಚಿತ್ತಾಕರ್ಷಕವಾಗಿವೆ. ನಾವೀಗ ಭಾರತದ ಸ್ಥಳೀಯ ಮೊಸಳೆ ಜಾತಿಗಳಲ್ಲಿ ಮೂರನ್ನು ಗಮನಿಸೋಣ. ಅವು ಉಪ್ಪುನೀರಿನ ಮೊಸಳೆ, ಮಗ್ಗರ್‌ ಮೊಸಳೆ ಮತ್ತು ಗೇವಿಯಲ್‌ ಮೊಸಳೆಗಳೇ ಆಗಿವೆ.

ದೊಡ್ಡ ಗಾತ್ರದ ಉಪ್ಪುನೀರಿನ ಮೊಸಳೆ

ಉಪ್ಪುನೀರಿನ ಅಥವಾ ಅಳಿವೆ ಮೊಸಳೆಗಳು ಭೂಮಿಯಲ್ಲೇ ಅತಿ ದೊಡ್ಡ ಸರೀಸೃಪಗಳಾಗಿವೆ. ಇವು 7 ಮೀಟರ್‌ಗಳು ಅಥವಾ ಅದಕ್ಕಿಂತಲೂ ಹೆಚ್ಚು ಉದ್ದ ಬೆಳೆಯಬಲ್ಲವು ಮತ್ತು 1,000 ಕಿಲೊಗ್ರಾಮ್‌ಗಳಷ್ಟು ತೂಕವುಳ್ಳವುಗಳಾಗಿರಬಲ್ಲವು. ಕೇವಲ ಉಪ್ಪುನೀರಿನಲ್ಲೇ ವಾಸಿಸುವ ಈ ಮೊಸಳೆಗಳು, ಭಾರತದಿಂದ ಉತ್ತರ ಆಸ್ಟ್ರೇಲಿಯದ ತೀರಗಳ ಉದ್ದಕ್ಕೂ ಇರುವ ಅಳಿವೆಗಳಲ್ಲಿ, ಸಮುದ್ರಗಳಲ್ಲಿ ಮತ್ತು ಕಾಂಡ್ಲ ಮರಗಳುಳ್ಳ ಜೌಗುಪ್ರದೇಶಗಳಲ್ಲಿ ಕಂಡುಬರುತ್ತವೆ. ಮಾಂಸಾಹಾರಿಗಳಾಗಿರುವ ಇವು ಇಲಿಗಳು, ಕಪ್ಪೆಗಳು, ಮೀನುಗಳು, ಹಾವುಗಳು, ಏಡಿಗಳು, ಕಡಲಾಮೆಗಳು ಮತ್ತು ಜಿಂಕೆಗಳನ್ನು ಚಿಕ್ಕ ಪ್ರಮಾಣಗಳಲ್ಲಿ ತಿನ್ನುತ್ತವೆ; ದೊಡ್ಡ ಗಂಡು ಮೊಸಳೆಗಳು ಒಂದು ದಿನಕ್ಕೆ ಸರಾಸರಿ 500ರಿಂದ 700 ಗ್ರಾಮ್‌ಗಳಷ್ಟೇ ಆಹಾರವನ್ನು ಸೇವಿಸುತ್ತವೆ. ಬಿಸಿಲಲ್ಲಿ ದೇಹವನ್ನು ಕಾಯಿಸಿಕೊಳ್ಳುವುದು ಅಥವಾ ನೀರಿನ ಮೇಲೆ ತೇಲುವುದು​—⁠ಇಂಥ ಆರಾಮದ ಜೀವನಶೈಲಿ ಮತ್ತು ಒಳ್ಳೆಯ ಪಚನಾಂಗ ವ್ಯೂಹದಿಂದಾಗಿ, ಇವುಗಳ ಶಕ್ತಿಯ ಉಪಯೋಗವು ಕಡಿಮೆಯಾಗಿರುತ್ತದೆ. ದೊಡ್ಡ ಗಾತ್ರದ ಉಪ್ಪುನೀರಿನ ಮೊಸಳೆಯು ಕೆಲವೊಮ್ಮೆ ಮಾತ್ರ, ಎಚ್ಚರದಿಂದಿರದ ಒಬ್ಬ ಮಾನವನ ಮೇಲೆ ಆಕ್ರಮಣವೆಸಗಬಹುದು. ಉಪ್ಪುನೀರಿನ ಮೊಸಳೆಗಳು ತಮ್ಮ ಮೂಗು ಮತ್ತು ಕಣ್ಣುಗಳನ್ನು ಬಿಟ್ಟು ಪೂರ್ತಿ ದೇಹವನ್ನು ನೀರಿನಲ್ಲಿ ಮುಳುಗಿಸಿ, ತಮ್ಮ ಬಾಲವನ್ನು ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಚಲಿಸುತ್ತಾ ಈಜುತ್ತವೆ, ಮತ್ತು ತಮ್ಮ ಗಿಡ್ಡ ಕಾಲುಗಳಿಂದ ನಡೆಯುತ್ತವೆ. ಆಹಾರಪ್ರಾಣಿಯನ್ನು ಹಿಡಿಯಲಿಕ್ಕಾಗಿ ಅವು ಮೇಲಕ್ಕೆ ಎಗರಬಲ್ಲವು ಮತ್ತು ಕೆಲವೊಮ್ಮೆ ತಮ್ಮ ಬೇಟೆಯ ಹಿಂದೆ ನಾಗಾಲೋಟದಿಂದ ಓಡುವುದಕ್ಕೂ ಹೆಸರುವಾಸಿಯಾಗಿವೆ. ಇನ್ನಿತರ ಎಲ್ಲಾ ಮೊಸಳೆಗಳಂತೆಯೇ ಇವುಗಳ ಘ್ರಾಣ, ದರ್ಶನ ಹಾಗೂ ಶ್ರವಣ ಇಂದ್ರಿಯಗಳು ಅತ್ಯುತ್ತಮವಾಗಿವೆ. ಕೂಡುವಿಕೆಯ ಕಾಲಾವಧಿಯಲ್ಲಿ ಉಪ್ಪುನೀರಿನ ಗಂಡು ಮೊಸಳೆಯು ತನ್ನ ಕ್ಷೇತ್ರಕ್ಕೆ ಬೇರೆ ಯಾವ ಮೊಸಳೆಯೂ ನುಗ್ಗದಂತೆ ಅದನ್ನು ಸಂರಕ್ಷಿಸುತ್ತದೆ, ಮತ್ತು ಹೆಣ್ಣು ಮೊಸಳೆಯು ತನ್ನ ಮೊಟ್ಟೆಗಳಿಗೂ ಅಷ್ಟೇ ಉಗ್ರ ಸಂರಕ್ಷಣೆ ಕೊಡುತ್ತದೆ.

ಅರ್ಪಿತಭಾವದ ತಾಯಿ ಮೊಸಳೆಗಳು

ಹೆಣ್ಣು ಮೊಸಳೆಯು ನೀರಿನ ಬಳಿ ಬಿಲವನ್ನು, ಅಂದರೆ ಸಾಮಾನ್ಯವಾಗಿ ಕೊಳೆಯುತ್ತಿರುವ ಕಸಕಡ್ಡಿ ಮತ್ತು ಮಣ್ಣಿನಿಂದ ಒಂದು ದಿಬ್ಬವನ್ನು ಕಟ್ಟುತ್ತದೆ. ಅದು ಅಲ್ಲಿ ಗಟ್ಟಿಯಾದ ಕವಚವಿರುವ ಸುಮಾರು 100 ಮೊಟ್ಟೆಗಳನ್ನು ಇಡುತ್ತದೆ, ಅವುಗಳನ್ನು ಕಸಕಡ್ಡಿಗಳಿಂದ ಮುಚ್ಚುತ್ತದೆ ಮತ್ತು ಅವುಗಳನ್ನು ಪರಭಕ್ಷಕ ಪ್ರಾಣಿಗಳಿಂದ ಸಂರಕ್ಷಿಸುತ್ತದೆ. ತದನಂತರ, ಮುಚ್ಚಿರುವಂಥ ಕಸಕಡ್ಡಿಯು ಹೆಚ್ಚು ಬೇಗನೆ ಕೊಳೆಯಲಿಕ್ಕಾಗಿ ಬಿಲದ ಮೇಲೆ ನೀರನ್ನು ಎರಚುತ್ತದೆ; ಈ ಕೊಳೆಯುವಿಕೆಯು ಮೊಟ್ಟೆಗಳನ್ನು ಮರಿಮಾಡಲಿಕ್ಕಾಗಿ ಬೇಕಾಗಿರುವ ಕಾವನ್ನು ಉತ್ಪಾದಿಸುತ್ತದೆ.

ಈ ಹಂತದಲ್ಲಿ ಅತ್ಯಾಕರ್ಷಕವಾದದ್ದೇನೋ ಸಂಭವಿಸುತ್ತದೆ. ಮೊಟ್ಟೆಯೊಡೆಯುವ ಪ್ರಕ್ರಿಯೆಯು ಸಂಭವಿಸುವ ಮುನ್ನ ಪ್ರತಿ ಮೊಟ್ಟೆಗೆ ಸಿಗುವ ತಾಪಮಾನವು, ಮೊಸಳೆ ಮರಿಯು ಗಂಡಾಗುವುದೊ ಅಥವಾ ಹೆಣ್ಣಾಗುವುದೊ ಎಂಬುದನ್ನು ನಿರ್ಧರಿಸುತ್ತದೆ. ಇದನ್ನು ತುಸು ಊಹಿಸಿಕೊಳ್ಳಿರಿ! ಸುಮಾರು 28 ಡಿಗ್ರಿ ಸೆಲ್ಸಿಯಸ್‌ ಮತ್ತು 31 ಡಿಗ್ರಿ ಸೆಲ್ಸಿಯಸ್‌ನ ನಡುವಣ ತಾಪಮಾನದ ಕಾವುಸಿಗುವ ಮೊಟ್ಟೆಗಳು, ಹೆಚ್ಚುಕಡಿಮೆ 100 ದಿನಗಳಲ್ಲಿ ಹೆಣ್ಣುಮರಿಗಳನ್ನು ಉತ್ಪಾದಿಸುತ್ತವೆ; ಆದರೆ 32.5 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿರುವಾಗ 64 ದಿನಗಳಲ್ಲಿ ಗಂಡುಮರಿಗಳು ಉತ್ಪಾದಿಸಲ್ಪಡುತ್ತವೆ. 32.5 ಡಿಗ್ರಿ ಸೆಲ್ಸಿಯಸ್‌ ಮತ್ತು 33 ಡಿಗ್ರಿ ಸೆಲ್ಸಿಯಸ್‌ನ ನಡುವಣ ತಾಪಮಾನದ ಕಾವುಸಿಗುವ ಮೊಟ್ಟೆಗಳು ಗಂಡು ಅಥವಾ ಹೆಣ್ಣುಮರಿಯನ್ನು ಉತ್ಪಾದಿಸಬಲ್ಲವು. ಒಂದು ಪಾರ್ಶ್ವವು ನೀರಿನ ತೀರದಲ್ಲಿಯೂ ಇನ್ನೊಂದು ಪಾರ್ಶ್ವವು ಸೂರ್ಯಾಭಿಮುಖವಾಗಿಯೂ ಕಟ್ಟಲ್ಪಟ್ಟಿರುವ ಒಂದು ಬಿಲವು, ಶಾಖಭರಿತ ಪಾರ್ಶ್ವದಿಂದ ಗಂಡುಮರಿಗಳನ್ನೂ ಶೀತಲವಾಗಿರುವ ಪಾರ್ಶ್ವದಿಂದ ಹೆಣ್ಣುಮರಿಗಳನ್ನೂ ಉತ್ಪಾದಿಸಬಲ್ಲದು.

ಕೀಚುಧ್ವನಿಗಳು ತಾಯಿ ಮೊಸಳೆಯ ಕಿವಿಗೆ ಬಿದ್ದಾಗ, ಅದು ಬಿಲದ ಮೇಲಿನ ಕಸಕಡ್ಡಿಯನ್ನು ಪಕ್ಕಕ್ಕೆ ಸರಿಸುತ್ತದೆ; ಹೊಸ ಮರಿಗಳು ಹೊರಕವಚವನ್ನು ಒಡೆಯಲಿಕ್ಕಾಗಿ ತಮಗೆ ವಿಶೇಷವಾಗಿ ಒದಗಿಸಲಾಗಿರುವ ಹಲ್ಲಿನಿಂದ ಈಗಾಗಲೇ ಆ ಕವಚವನ್ನು ಒಡೆದಿಲ್ಲದಿರುವಲ್ಲಿ, ಕೆಲವೊಮ್ಮೆ ತಾಯಿ ಮೊಸಳೆಯು ಮೊಟ್ಟೆಗಳನ್ನು ಒಡೆಯುತ್ತದೆ. ಅದು ತನ್ನ ದೊಡ್ಡದಾದ ದವಡೆ ಹಲ್ಲುಗಳಲ್ಲಿ ಮರಿಗಳನ್ನು ಮೃದುವಾಗಿ ಎತ್ತಿ, ತನ್ನ ನಾಲಿಗೆಯ ಕೆಳಗಿರುವ ಚೀಲದಲ್ಲಿ ಹಾಕಿಕೊಂಡು ಅವುಗಳನ್ನು ನೀರಿನ ತುದಿಗೆ ಕೊಂಡೊಯ್ಯುತ್ತದೆ. ಜನಿಸುವಾಗಲೇ ಮರಿಗಳು ತಮ್ಮಷ್ಟಕ್ಕೇ ಜೀವಿಸಲು ಶಕ್ತವಾಗಿರುತ್ತವೆ ಮತ್ತು ಕೂಡಲೆ ಕೀಟಗಳು, ಕಪ್ಪೆಗಳು ಮತ್ತು ಚಿಕ್ಕ ಮೀನುಗಳನ್ನು ಬೇಟೆಯಾಡಲಾರಂಭಿಸುತ್ತವೆ. ಆದರೂ, ಸಂರಕ್ಷಣಾ ಭಾವವಿರುವ ಕೆಲವೊಂದು ತಾಯಿ ಮೊಸಳೆಗಳು ಹಲವಾರು ತಿಂಗಳುಗಳ ವರೆಗೆ ಮರಿಗಳ ಹತ್ತಿರವೇ ಸುತ್ತಾಡುತ್ತವೆ, ಜೌಗುಪ್ರದೇಶಗಳಲ್ಲಿ ಮರಿಗಳನ್ನು ನೋಡಿಕೊಳ್ಳಲಿಕ್ಕಾಗಿ ಕ್ಷೇತ್ರಗಳನ್ನು ರೂಪಿಸುತ್ತವೆ ಮತ್ತು ಅಲ್ಲಿ ತಂದೆ ಮೊಸಳೆಯು ಸಹ ತನ್ನ ಮರಿಗಳನ್ನು ನೋಡಿಕೊಳ್ಳುವುದರಲ್ಲಿ ಹಾಗೂ ಅವುಗಳನ್ನು ಸಂರಕ್ಷಿಸುವುದರಲ್ಲಿ ಸಹಾಯಹಸ್ತವನ್ನು ನೀಡುತ್ತದೆ.

ಮಗ್ಗರ್‌ ಮೊಸಳೆ ಮತ್ತು ಉದ್ದಮೂತಿಯ ಗೇವಿಯಲ್‌ ಮೊಸಳೆ

ಮಗ್ಗರ್‌ ಮೊಸಳೆ ಅಥವಾ ಜೌಗುಪ್ರದೇಶದ ಮೊಸಳೆ ಮತ್ತು ಗೇವಿಯಲ್‌ ಮೊಸಳೆಗಳು ಭಾರತದ ಉಪಖಂಡದಲ್ಲಿ ಮಾತ್ರವೇ ಕಂಡುಬರುತ್ತವೆ. ಸುಮಾರು ನಾಲ್ಕು ಮೀಟರ್‌ಗಳಷ್ಟು ಉದ್ದವಿರುವ ಮಗ್ಗರ್‌ ಮೊಸಳೆಯು ಭಾರತದಾದ್ಯಂತ ಇರುವ ಸಿಹಿನೀರಿನ ಜೌಗುಪ್ರದೇಶಗಳಲ್ಲಿ, ಸರೋವರಗಳಲ್ಲಿ ಮತ್ತು ನದಿಗಳಲ್ಲಿ ಕಂಡುಬರುತ್ತದೆ. ಇದು ಉಪ್ಪುನೀರಿನ ಮೊಸಳೆಗಿಂತ ಎಷ್ಟೋ ಗಿಡ್ಡವಾಗಿರುತ್ತದೆ. ತನ್ನ ಬಲಿಷ್ಠ ದವಡೆಗಳಲ್ಲಿ ಇದು ಚಿಕ್ಕ ಪ್ರಾಣಿಗಳನ್ನು ಹಿಡಿಯುತ್ತದೆ, ನೀರಿನಲ್ಲಿ ಮುಳುಗಿಸುತ್ತದೆ ಮತ್ತು ಅವುಗಳನ್ನು ಜೋರಾಗಿ ಬೀಸಿ, ತಿನ್ನತಕ್ಕ ಮಾಂಸದ ಭಾಗಗಳು ತುಂಡರಿಸಿ ಬೀಳುವಂತೆ ಮಾಡುತ್ತದೆ.

ಮಗ್ಗರ್‌ ಮೊಸಳೆಗಳು ಕೂಡಲಿಕ್ಕಾಗಿ ಹೇಗೆ ಸಂಧಿಸುತ್ತವೆ? ಗಂಡು ಮಗ್ಗರ್‌ ಮೊಸಳೆಯು ಹೆಣ್ಣು ಮೊಸಳೆಗಾಗಿ ಹುಡುಕುತ್ತಿರುವಾಗ, ನೀರಿನ ಮೇಲೆ ತನ್ನ ದವಡೆಗಳನ್ನು ಬಡಿಯುತ್ತದೆ ಮತ್ತು ಗುರುಗುಟ್ಟುತ್ತದೆ. ಮುಂದಕ್ಕೆ ಆ ಗಂಡು ಮೊಸಳೆಯು ಹೆಣ್ಣು ಮೊಸಳೆಯ ಜೊತೆ ಸೇರಿಕೊಂಡು ಬಿಲವನ್ನು ಕಾಯುವ ಕೆಲಸವನ್ನು ಮಾಡುತ್ತದೆ, ಹೊಸ ಮರಿಗಳು ಮೊಟ್ಟೆಗಳಿಂದ ಹೊರಬರುವಂತೆ ಸಹಾಯಮಾಡುತ್ತದೆ ಮತ್ತು ಸ್ವಲ್ಪ ಕಾಲದ ವರೆಗೆ ಅವುಗಳೊಂದಿಗೆ ಉಳಿಯುತ್ತದೆ.

ವಾಸ್ತವದಲ್ಲಿ ಒಂದು ಮೊಸಳೆಯಾಗಿರದಿದ್ದರೂ ಮಾಂಸಾಹಾರಿ ಸರೀಸೃಪವಾಗಿರುವ ಅಪರೂಪದ ಗೇವಿಯಲ್‌ ಮೊಸಳೆಯು ಅನೇಕ ವಿಧಗಳಲ್ಲಿ ತುಂಬ ಅಪೂರ್ವವಾದದ್ದಾಗಿದೆ. ಇದರ ಮುಖ್ಯ ಆಹಾರವಾಗಿರುವ ಮೀನುಗಳನ್ನು ಹಿಡಿಯಲು ಹೇಳಿಮಾಡಿಸಿದಂತಿರುವ ಇದರ ತುಂಬ ಉದ್ದ ಮತ್ತು ನೀಳವಾದ ದವಡೆಗಳಿಂದ ಇದನ್ನು ಸುಲಭವಾಗಿ ಗುರುತಿಸಸಾಧ್ಯವಿದೆ. ಗೇವಿಯಲ್‌ ಮೊಸಳೆಯು ಉಪ್ಪುನೀರಿನ ಮೊಸಳೆಯಷ್ಟೇ ಉದ್ದವಾಗಿ ಬೆಳೆಯಬಲ್ಲದಾದರೂ, ಮಾನವರ ಮೇಲೆ ಆಕ್ರಮಣಮಾಡುವ ಹೆಸರು ಇದಕ್ಕಿಲ್ಲ. ಇದರ ನುಣುಪಾದ, ಗಾಳಿಯ ಅಥವಾ ನೀರಿನ ತಡೆಯನ್ನು ಆದಷ್ಟು ತಗ್ಗಿಸುವಂಥ ಆಕಾರವುಳ್ಳ ದೇಹವು, ಉತ್ತರ ಭಾರತದ ಆಳವಾದ ಮತ್ತು ರಭಸವಾಗಿ ಹರಿಯುವ ನದಿಗಳಲ್ಲಿ ವೇಗವಾಗಿ ಚಲಿಸುವಂತೆ ಅದಕ್ಕೆ ಸಹಾಯಮಾಡುತ್ತದೆ. ಸಂತಾನೋತ್ಪತ್ತಿಯ ಕಾಲಾವಧಿಯಲ್ಲಿ ಗಂಡು ಗೇವಿಯಲ್‌ ಮೊಸಳೆಯ ಮೂತಿಯ ತುದಿಯಲ್ಲಿ ಗುಂಡಗಿನ ಡುಬ್ಬವು ಬೆಳೆಯುತ್ತದೆ. ಇದು ಹೆಣ್ಣು ಗೇವಿಯಲ್‌ ಮೊಸಳೆಯನ್ನು ಆಕರ್ಷಿಸಲಿಕ್ಕಾಗಿ ಈ ಮೊಸಳೆಯ ಬುಸುಗುಟ್ಟುವಿಕೆಯನ್ನು ಇನ್ನಷ್ಟು ಜೋರಾಗಿ ಕೇಳಿಸುವಂತೆ ಮಾಡುತ್ತದೆ.

ಪರಿಸರವ್ಯವಸ್ಥೆಯಲ್ಲಿ ಅವುಗಳ ಪಾತ್ರ

ನಮ್ಮ ಪರಿಸರಕ್ಕೆ ಮೊಸಳೆಗಳು ಎಷ್ಟು ಪ್ರಾಮುಖ್ಯವಾದವುಗಳಾಗಿವೆ? ಇವು ಹೊಲಸನ್ನು ತಿನ್ನುವ ಪ್ರಾಣಿಗಳಾಗಿದ್ದು, ನದಿಗಳು, ಸರೋವರಗಳು ಹಾಗೂ ಸಮೀಪದ ಭೂಕ್ಷೇತ್ರಗಳಿಂದ ಸತ್ತ ಮೀನುಗಳನ್ನೂ ಪ್ರಾಣಿಗಳನ್ನೂ ತಿಂದುಹಾಕುತ್ತವೆ. ಇದು ಜಲವ್ಯವಸ್ಥೆಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ. ಇವು ಮಾಂಸಾಹಾರಿಗಳಾಗಿರುವುದರಿಂದ, ದುರ್ಬಲವಾದ, ಗಾಯಗೊಂಡಿರುವ ಮತ್ತು ರೋಗಗ್ರಸ್ತವಾದ ಜೀವಿಗಳನ್ನು ಹಿಡಿದು ತಿನ್ನಲು ಕಾಯುತ್ತಿರುತ್ತವೆ. ಇವು, ಮಾನವರ ಬಳಕೆಗಾಗಿ ಹಿಡಿಯಲ್ಪಡುವ ಮತ್ತು ಮಾರಾಟಮಾಡಲ್ಪಡುವ ಕಾರ್ಪು ಮೀನು ಹಾಗೂ ಟಿಲಪಿಯ ಮೀನುಗಳನ್ನು ಆಹಾರವಾಗಿ ಕಬಳಿಸುವಂಥ ವಿನಾಶಕರ ಬೆಕ್ಕುಮೀನುಗಳನ್ನು ತಿಂದುಹಾಕುತ್ತವೆ.

ಬದುಕಿ ಉಳಿಯಲಿಕ್ಕಾಗಿರುವ ಹೋರಾಟ​—⁠ಮೊಸಳೆ ಕಣ್ಣೀರಲ್ಲ

ಯಾರೋ ಒಬ್ಬರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆಂದು ಹೇಳಲಾಗುವುದನ್ನು ನೀವು ಕೇಳಿಸಿಕೊಂಡಿದ್ದೀರೋ? ಅದರರ್ಥ, ಆ ಕಣ್ಣೀರು ಮತ್ತು ದುಃಖ ನಿಜವಾದುದಲ್ಲ, ಬರೀ ಒಂದು ಸೋಗು ಅಷ್ಟೇ. ವಾಸ್ತವದಲ್ಲಿ, ಒಂದು ಮೊಸಳೆಯು ತನ್ನ ದೇಹದಿಂದ ಅಗತ್ಯಕ್ಕಿಂತ ಹೆಚ್ಚಾದ ಲವಣಾಂಶವನ್ನು ಹೊರಹಾಕಲು ಕಣ್ಣೀರನ್ನು ಹರಿಸುತ್ತದೆ. ಆದರೆ, 1970ಗಳ ಆರಂಭದಲ್ಲಿ, ಮೊಸಳೆಗಳಿಗಾಗಿ ಬಹುಶಃ ನಿಜವಾಗಿಯೂ ಕಣ್ಣೀರು ಸುರಿಸುವ ಪರಿಸ್ಥಿತಿ ಉಂಟಾಗಿತ್ತು. ಭಾರತದಲ್ಲಿ ಕೆಲವೇ ಸಾವಿರ ಮೊಸಳೆಗಳು ಅಂದರೆ ಅವುಗಳ ಹಿಂದಣ ಸಂಖ್ಯೆಯಲ್ಲಿ ಸುಮಾರು 10 ಪ್ರತಿಶತದಷ್ಟು ಮಾತ್ರ ಬದುಕಿ ಉಳಿದಿದ್ದವು. ಏಕೆ? ಮಾನವರು ಮೊಸಳೆಗಳ ಇರುನೆಲೆಯ ಮೇಲೆ ಅತಿಕ್ರಮಣಮಾಡಿದ್ದರಿಂದ ಅವು ಕೊಲ್ಲಲ್ಪಟ್ಟವು, ಏಕೆಂದರೆ ಎಳೆಯ ಮತ್ತು ದುರ್ಬಲವಾದ ಸಾಕುಪ್ರಾಣಿಗಳಿಗೆ ಇವು ಒಂದು ಬೆದರಿಕೆಯಾಗಿವೆ ಎಂದು ಪರಿಗಣಿಸಲಾಗಿತ್ತು. ಅನೇಕರು ಮೊಸಳೆಗಳ ಮಾಂಸ ಮತ್ತು ಮೊಟ್ಟೆಗಳು ತುಂಬ ರುಚಿಕರವಾಗಿವೆಯೆಂದು ಕಂಡುಕೊಂಡಿದ್ದಾರೆ. ಮೊಸಳೆಯ ಕಸ್ತೂರಿ ಸ್ರವಿಸುವ ಗ್ರಂಥಿಗಳಿಂದ ತೆಗೆದ ಪದಾರ್ಥವನ್ನು ಸುಗಂಧದ್ರವ್ಯವನ್ನು ಮಾಡಲಿಕ್ಕಾಗಿ ಉಪಯೋಗಿಸಲಾಗುತ್ತಿತ್ತು. ಅಷ್ಟುಮಾತ್ರವಲ್ಲದೆ, ಅಣೆಕಟ್ಟಿನ ನಿರ್ಮಾಣ ಮತ್ತು ನೀರಿನ ಮಾಲಿನ್ಯವು ಮೊಸಳೆಗಳ ಸಂಖ್ಯೆಯನ್ನು ಕುಂದಿಸಿತು. ಆದರೆ ಬಹುಶಃ ಅವುಗಳನ್ನು ಅಳಿವಿನ ಅಂಚಿಗೆ ತಳ್ಳಿರುವ ಕಾರಣವು, ಅವುಗಳ ಚರ್ಮಕ್ಕಾಗಿರುವ ಬೇಡಿಕೆಯೇ ಆಗಿದೆ. ಮೊಸಳೆ ಚರ್ಮದಿಂದ ಮಾಡಲ್ಪಟ್ಟಿರುವ ಷೂಗಳು, ಹ್ಯಾಂಡ್‌ಬ್ಯಾಗ್‌ಗಳು, ಪ್ರಯಾಣಿಕ ಪೆಟ್ಟಿಗೆಗಳು, ಬೆಲ್ಟುಗಳು ಹಾಗೂ ಇನ್ನಿತರ ವಸ್ತುಗಳು ತುಂಬ ಸುಂದರವಾಗಿರುತ್ತವೆ, ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ತುಂಬ ಆಶೆಪಟ್ಟದ್ದಾಗಿರುತ್ತವೆ. ಈ ಬೆದರಿಕೆಗಳು ಈಗಲೂ ಇವೆಯಾದರೂ, ಸಂರಕ್ಷಣಾ ಕ್ರಮಗಳು ತುಂಬ ಯಶಸ್ವಿಕರವಾಗಿ ಕಂಡುಬಂದಿವೆ!​—⁠ಕೆಳಗಿರುವ ಚೌಕವನ್ನು ನೋಡಿ.

ನಸುನಗಲು ಮರೆಯದಿರಿ!

ಈಗ ನೀವು ಮೊಸಳೆ ಕುಟುಂಬದ ಕೆಲವು ಸದಸ್ಯರೊಂದಿಗೆ ಸ್ವಲ್ಪ ಹೆಚ್ಚು ಪರಿಚಿತರಾಗಿರುವುದರಿಂದ ಅವುಗಳ ಕುರಿತು ನಿಮಗೆ ಹೇಗನಿಸುತ್ತದೆ? ಅವುಗಳ ಬಗ್ಗೆ ನಿಮಗಿದ್ದ ಯಾವುದೇ ನಕಾರಾತ್ಮಕ ದೃಷ್ಟಿಕೋನಗಳು ಹೋಗಿ ಆಸಕ್ತಿಯು ಹುಟ್ಟಿರಬಹುದೆಂದು ನಿರೀಕ್ಷಿಸುತ್ತೇವೆ. ಲೋಕವ್ಯಾಪಕವಾಗಿರುವ ಅನೇಕ ಪ್ರಾಣಿಪ್ರಿಯರು, ಬೃಹದ್ಗಾತ್ರದ ಉಪ್ಪುನೀರಿನ ಮೊಸಳೆಯನ್ನು ನೋಡಿಯೂ ಹೆದರುವ ಅಗತ್ಯವಿಲ್ಲದಿರುವಂಥ ಸಮಯಕ್ಕಾಗಿ ಎದುರುನೋಡುತ್ತಿದ್ದಾರೆ. ಆ ಸಮಯದಲ್ಲಿ ಸರೀಸೃಪಗಳ ಸೃಷ್ಟಿಕರ್ತನು ಭೂಮಿಯನ್ನು ನವೀಕರಿಸುವಾಗ, ನಾವು ಎಲ್ಲಾ ಮೊಸಳೆಗಳನ್ನು ನೋಡಿ ನಸುನಗೆಯನ್ನು ಬೀರಲು ಶಕ್ತರಾಗಿರುವೆವು.​—⁠ಯೆಶಾಯ 11:8, 9. (g05 3/8)

[ಪುಟ 25ರಲ್ಲಿರುವ ಚೌಕ/ಚಿತ್ರ]

‘ದ ಮೆಡ್ರಾಸ್‌ ಕ್ರಾಕಡೈಲ್‌ ಬ್ಯಾಂಕ್‌’

ಏಷ್ಯಾದ ಕೆಲವು ಭಾಗಗಳಲ್ಲಿರುವ ವನ್ಯಪ್ರದೇಶದಲ್ಲಿ ತೀರ ಕಡಿಮೆ ಮೊಸಳೆಗಳು ಉಳಿದಿವೆ ಎಂಬುದನ್ನು ಒಂದು ಸಮೀಕ್ಷೆಯು ತೋರಿಸಿದ ಬಳಿಕ, 1972ರಲ್ಲಿ ‘ಮೆಡ್ರಾಸ್‌ ಸ್ನೇಕ್‌ ಪಾರ್ಕ್‌’ನಲ್ಲಿ ಮೊಸಳೆಗಳ ಸಂರಕ್ಷಣೆಯು ಆರಂಭವಾಯಿತು. ಭಾರತದಲ್ಲಿರುವ 30ಕ್ಕಿಂತಲೂ ಹೆಚ್ಚಿನ ಸರೀಸೃಪ ಕೇಂದ್ರಗಳಲ್ಲೇ ‘ದ ಮೆಡ್ರಾಸ್‌ ಕ್ರಾಕಡೈಲ್‌ ಬ್ಯಾಂಕ್‌’ ಅತಿ ಪುರಾತನವಾದದ್ದಾಗಿದೆ ಮತ್ತು ಅತ್ಯಂತ ದೊಡ್ಡದಾಗಿದೆ. ಇದು 1976ರಲ್ಲಿ ರಾಮ್ಯಲಸ್‌ ವಿಟಕರ್‌ ಎಂಬ ಸರೀಸೃಪವಿಜ್ಞಾನಿಯಿಂದ ಸ್ಥಾಪಿಸಲ್ಪಟ್ಟಿತು. ಕೊರಮಂಡಲ್‌ ಕರಾವಳಿಯಲ್ಲಿ ಎಂಟೂವರೆ ಎಕ್ರೆಗಳಷ್ಟು ಕ್ಷೇತ್ರವನ್ನು ಆವರಿಸಿರುವ ಈ ಕ್ರಾಕಡೈಲ್‌ ಬ್ಯಾಂಕ್‌ನಲ್ಲಿ 150 ಜಾತಿಯ ಮರಗಳಿದ್ದು, ಇವು ಸುಂದರವಾದ ಪಕ್ಷಿಗಳನ್ನು ಮತ್ತು ಕೀಟಗಳನ್ನು ಆಕರ್ಷಿಸುತ್ತವೆ.

ಮೊಸಳೆಗಳು ಮತ್ತು ಗೇವಿಯಲ್‌ಗಳು ಬಂಧಿತ ಸ್ಥಿತಿಯಲ್ಲಿ ಈಯುವಂತೆ ಮಾಡಲಾಗುತ್ತದೆ ಮತ್ತು ಅನಂತರ ಅವುಗಳನ್ನು ಜೌಗುಪ್ರದೇಶಗಳಿಗೆ ಹಾಗೂ ನದಿಗಳಿಗೆ ಬಿಟ್ಟುಬಿಡಲಾಗುತ್ತದೆ, ಅಥವಾ ತಳಿಬೆಳೆಸುವಂಥ ಇತರ ಸ್ಥಳಗಳಿಗೆ ಹಾಗೂ ಸಂಶೋಧನಾ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಈ ಬ್ಯಾಂಕ್‌ನಲ್ಲಿ ಒಂದು ನರ್ಸರಿ ಇದೆ; ಈ ನರ್ಸರಿಯ ಕೊಳಗಳಲ್ಲಿ ಒಂದು ಬಾರಿಗೆ ಸುಮಾರು 2,500ರಷ್ಟು ಮೊಸಳೆ ಮರಿಗಳು ಇಡಲ್ಪಡುತ್ತವೆ ಮತ್ತು ಸ್ಥಳಿಕ ಬೆಸ್ತರಿಂದ ಪ್ರತಿದಿನ ಒದಗಿಸಲ್ಪಡುವ ಮೀನಿನ ತುಂಡುಗಳು ಅವುಗಳಿಗೆ ಆಹಾರವಾಗಿ ನೀಡಲ್ಪಡುತ್ತವೆ. ಕೊಳಗಳ ಮೇಲೆ ಹಾಸಲ್ಪಟ್ಟಿರುವ ಬಲೆಗಳು, ದಾಳಿಮಾಡುವಂಥ ಪಕ್ಷಿಗಳು ಮೀನುಗಳನ್ನು ಅಥವಾ ಬಲಹೀನವಾದ ಮೊಸಳೆ ಮರಿಗಳನ್ನು ಎತ್ತಿಕೊಂಡು ಹೋಗದಂತೆ ತಡೆಯುತ್ತವೆ. ಎಳೆಯ ಮರಿಗಳು ಸ್ವಲ್ಪ ದೊಡ್ಡವಾದಾಗ ಅವುಗಳನ್ನು ದೊಡ್ಡ ಕೊಳಗಳಿಗೆ ಸ್ಥಳಾಂತರಿಸಲಾಗುತ್ತದೆ ಮತ್ತು ಅಲ್ಲಿ ಅವು ಮೂರು ವರ್ಷದವುಗಳಾಗುವ ತನಕ ಹಾಗೂ 1.25 ಮತ್ತು 1.5 ಮೀಟರುಗಳಷ್ಟು ಉದ್ದ ಬೆಳೆಯುವ ತನಕ ಇಡೀ ಮೀನನ್ನು ಆಹಾರವಾಗಿ ನೀಡಲಾಗುತ್ತದೆ. ತದನಂತರ ದೊಡ್ಡ ಮಾಂಸದ ಕಂಪೆನಿಯಿಂದ ಸಿಗುವ ದನದ ಮಾಂಸದ ವೇಸ್ಟ್‌ ಅನ್ನು ಆಹಾರವಾಗಿ ನೀಡಲಾಗುತ್ತದೆ. ಆರಂಭದಲ್ಲಿ ಕ್ರಾಕಡೈಲ್‌ ಬ್ಯಾಂಕ್‌ ಭಾರತದ ಸ್ಥಳೀಯ ಮೊಸಳೆಗಳಲ್ಲಿ ಕೇವಲ 3 ಜಾತಿಯ ಮೊಸಳೆಗಳನ್ನು ಬೆಳೆಸುತ್ತಿತ್ತು, ಆದರೆ ಈಗ ಅದು ಇನ್ನೂ 7 ಜಾತಿಗಳನ್ನು ಹೊಂದಿದೆ ಮತ್ತು ಕಾಲಕ್ರಮೇಣ ಜಗತ್ಪ್ರಸಿದ್ಧವಾಗಿರುವ ಮೊಸಳೆಗಳ ಎಲ್ಲಾ ಜಾತಿಗಳನ್ನು ಸಂಗ್ರಹಿಸುವ ಯೋಜನೆಯನ್ನು ಮಾಡಲಾಗಿದೆ. ಮೊಸಳೆಗಳ ಚರ್ಮಕ್ಕಾಗಿ ಮತ್ತು ಮಾಂಸಕ್ಕಾಗಿ ಈ ಸರೀಸೃಪಗಳ ವಾಣಿಜ್ಯ ಸಾಕಣೆಯ ಕುರಿತು ವಾಗ್ವಾದ ನಡೆಯುತ್ತಿದೆ. ಈ ಸರೀಸೃಪಗಳ ಮಾಂಸವು ರುಚಿಕರವಾಗಿರುತ್ತದೆ ಮತ್ತು ಕಡಿಮೆ ಕೊಲೆಸ್ಟರಾಲ್‌ ಉಳ್ಳದ್ದಾಗಿರುತ್ತದೆ ಎಂದು ವಿಟಕರ್‌ ಅವರು ಎಚ್ಚರ!ಕ್ಕೆ ತಿಳಿಸಿದರು. ಯಶಸ್ವಿಕರವಾದ ಸಂರಕ್ಷಣೆಯು ಈ ಭಾರೀ ಜೀವಿಗಳನ್ನು ನಿರ್ಮೂಲನದ ಅಂಚಿನಿಂದ ಮಿಗುತಾಯದ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ಪ್ರವಾಸಿಗರನ್ನು ಆಕರ್ಷಿಸುವ ಜನಪ್ರಿಯ ತಾಣವಾದ ‘ದ ಮೆಡ್ರಾಸ್‌ ಕ್ರಾಕಡೈಲ್‌ ಬ್ಯಾಂಕ್‌’ ಸಹ, ಮೊಸಳೆಗಳ ಕುರಿತಾದ ತಪ್ಪಭಿಪ್ರಾಯಗಳನ್ನು ದೂರಮಾಡುವ ಮತ್ತು ಅವುಗಳ ಬಗ್ಗೆ ಇರುವ ಸಾರ್ವಜನಿಕ ನೋಟವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿದೆ.

[ಕೃಪೆ]

Romulus Whitaker, Madras Crocodile Bank

[ಪುಟ 23ರಲ್ಲಿರುವ ಚಿತ್ರ]

ದೊಡ್ಡ ಗಾತ್ರದ ಉಪ್ಪುನೀರಿನ ಮೊಸಳೆ

[ಪುಟ 24ರಲ್ಲಿರುವ ಚಿತ್ರ]

ಉಪ್ಪುನೀರಿನ ಹೆಣ್ಣು ಮೊಸಳೆಯೊಂದು ಹೊಸ ಮರಿಯನ್ನು ತನ್ನ ದವಡೆಯಲ್ಲಿ ಕೊಂಡೊಯ್ಯುತ್ತಿರುವುದು

[ಕೃಪೆ]

© Adam Britton, http://crocodilian.com

[ಪುಟ 24ರಲ್ಲಿರುವ ಚಿತ್ರ]

ಮಗ್ಗರ್‌ ಮೊಸಳೆ

[ಕೃಪೆ]

© E. Hanumantha Rao/Photo Researchers, Inc.

[ಪುಟ 24ರಲ್ಲಿರುವ ಚಿತ್ರ]

ಉದ್ದ ಮೂಗಿನ ಗೇವಿಯಲ್‌ ಮೊಸಳೆ