ಈ ಬೇಸಿಗೆಯಲ್ಲಿ ಯಾವ ಚಲನಚಿತ್ರಗಳು ಪ್ರದರ್ಶಿತವಾಗಲಿವೆ?
ಈ ಬೇಸಿಗೆಯಲ್ಲಿ ಯಾವ ಚಲನಚಿತ್ರಗಳು ಪ್ರದರ್ಶಿತವಾಗಲಿವೆ?
ಬೇಸಿಗೆ ಕಾಲ ಬಂತೆಂದೊಡನೆ ನೀವು ಏನು ಮಾಡಲು ಬಯಸುತ್ತೀರಿ? ಬೇಸಿಗೆ ಕಾಲದಲ್ಲಿ ಸೆಕೆಯು ತೀರ ಹೆಚ್ಚಾಗಿರುವುದಾದರೆ, ಜನರು ಮನೆಯಿಂದ ಹೊರಗೆ ಹೋಗಲು ಇಷ್ಟಪಡುತ್ತಾರೆ. ಉದಾಹರಣೆಗೆ, ಸಮುದ್ರತೀರಕ್ಕೊ ಪಾರ್ಕಿಗೊ ಅಥವಾ ಬೇರೊಂದು ಸ್ಥಳಕ್ಕೊ ಹೋಗಿ ಆನಂದಿಸಲು ಅವರು ಇಷ್ಟಪಡಬಹುದು.
ಆದರೆ, ಕೋಟ್ಯಂತರ ಜನರು ತಮ್ಮ ಬೇಸಿಗೆ ಕಾಲದ ಹೆಚ್ಚಿನ ಸಮಯವನ್ನು ಚಿತ್ರಮಂದಿರದ ಒಳಗೆ ಕಳೆಯಬೇಕು ಎಂದು ಚಿತ್ರೋದ್ಯಮಿಗಳು ಬಯಸುತ್ತಾರೆ. ಯುನೈಟೆಡ್ ಸ್ಟೇಟ್ಸ್ ಒಂದರಲ್ಲಿಯೇ ಕಡಿಮೆಪಕ್ಷ 35,000 ಚಿತ್ರಮಂದಿರಗಳಿವೆ ಮತ್ತು ಇತ್ತೀಚಿನ ವರುಷಗಳಲ್ಲಿ ಆ ದೇಶದಲ್ಲಿ ಗಳಿಸಲಾದ ಬಾಕ್ಸ್ ಆಫೀಸ್ ಲಾಭಗಳಲ್ಲಿ 40 ಪ್ರತಿಶತ ಬೇಸಿಗೆಯ ಸಮಯದಲ್ಲಿ ದೊರೆತವುಗಳಾಗಿವೆ. * “ಇದು ಕ್ರಿಸ್ಮಸ್ ಸಮಯದಲ್ಲಿ ವ್ಯಾಪಾರಿಗಳು ಗಳಿಸುವ ಲಾಭಗಳಂತಿವೆ” ಎಂಬುದಾಗಿ ಮೂವಿಲೈನ್ ಪತ್ರಿಕೆಯ ಹೈಡೀ ಪಾರ್ಕರ್ ತಿಳಿಸುತ್ತಾರೆ.
ಆದರೆ ಬಹಳ ವರುಷಗಳ ಹಿಂದೆ ಹೀಗಿರಲಿಲ್ಲ. ಒಂದೊಮ್ಮೆ ಬೇಸಿಗೆ ಕಾಲದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಚಿತ್ರಮಂದಿರಗಳಿಗೆ ತೀರ ಕಡಿಮೆ ಜನರು ಬರುತ್ತಿದ್ದರು. ಈ ಕಾರಣ, ನಾಲ್ಕು ಷೋಗಳನ್ನು ಎರಡು ಷೋಗಳಿಗೆ ಕಡಿಮೆಗೊಳಿಸಲಾಗುತ್ತಿತ್ತು ಅಥವಾ ಕೆಲವೊಮ್ಮೆ ಚಿತ್ರಮಂದಿರವನ್ನೇ ಮುಚ್ಚಿಬಿಡಲಾಗುತ್ತಿತ್ತು. ಆದರೆ 1970ರ ಮಧ್ಯಭಾಗದಷ್ಟಕ್ಕೆ, ಹವಾನಿಯಂತ್ರಿತ ಚಿತ್ರಮಂದಿರಗಳು ಕಟ್ಟಲ್ಪಟ್ಟವು ಮತ್ತು ಈ ಕಾರಣ, ಕೋಟ್ಯಂತರ ಜನರು ಹೊರಗಿನ ಬಿಸಿಯನ್ನು ತಾಳಲಾರದೆ ಚಿತ್ರಮಂದಿರದೊಳಕ್ಕೆ ಬರಲಾರಂಭಿಸಿದರು. ಅಷ್ಟುಮಾತ್ರವಲ್ಲದೆ, ಬೆಸಿಗೆಯಲ್ಲಿ ಮಕ್ಕಳಿಗೆ ಶಾಲೆಗೆ ರಜೆಯಿರುವುದರಿಂದ, ಚಲನಚಿತ್ರ ತಯಾರಕರು ಈ ಸಮಯವನ್ನು ಒಂದು ಸಂಭಾವ್ಯ ಅವಕಾಶವಾಗಿ ಕಂಡುಕೊಂಡರು. ಬೇಗನೆ, ಬೇಸಿಗೆ ಕಾಲದ ಬ್ಲಾಕ್‌ಬಸ್ಟರ್ ಚಲನಚಿತ್ರಗಳು ಬಿಡುಗಡೆಯಾಗಲು ತೊಡಗಿದವು. * ಇವು, ಮುಂದೆ ನಾವು ನೋಡಲಿರುವಂತೆ, ಚಲನಚಿತ್ರಗಳನ್ನು ತಯಾರಿಸುವ ಮತ್ತು ವಿಕ್ರಯಿಸುವ ವಿಧಾನವನ್ನೇ ಬದಲಾಯಿಸಿದವು. (g05 5/8)
[ಪಾದಟಿಪ್ಪಣಿಗಳು]
^ ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಬೇಸಿಗೆಯ ಚಲನಚಿತ್ರ ಕಾಲವು ಮೇ ತಿಂಗಳಿನಲ್ಲಿ ಆರಂಭಗೊಂಡು ಸೆಪ್ಟೆಂಬರ್ ತಿಂಗಳಿನ ವರೆಗೆ ಮುಂದುವರಿಯುತ್ತದೆ.
^ ಸಾಮಾನ್ಯವಾಗಿ, 450 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚು ರೂಪಾಯಿಗಳನ್ನು ಸಂಪಾದಿಸುವ ಚಲನಚಿತ್ರಗಳನ್ನು “ಬ್ಲಾಕ್‌ಬಸ್ಟರ್” ಎಂದು ಕರೆಯಲಾಗುತ್ತದೆ. ಆದರೆ ಕೆಲವೊಮ್ಮೆ, ಒಂದು ಚಲನಚಿತ್ರವು ಬಾಕ್ಸ್ ಆಫೀಸಿನಲ್ಲಿ ಎಷ್ಟೇ ಹಣವನ್ನು ಸಂಪಾದಿಸಿರಲಿ ಅದು ಬಹಳ ಜನಪ್ರಿಯವಾಗಿರುವಲ್ಲಿ ಅಂಥ ಚಲನಚಿತ್ರವನ್ನು ಸೂಚಿಸಲು ಸಹ ಈ ಪದವನ್ನು ಉಪಯೋಗಿಸಲಾಗುತ್ತದೆ.