ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಲೋಕದ ಅತಿ ಪ್ರಾಚೀನ ವಿಶ್ವವಿದ್ಯಾನಿಲಯವೇ?

ಪೋಲೆಂಡ್‌ ಮತ್ತು ಈಜಿಪ್ಟ್‌ನ ಪ್ರಾಕ್ತನಶಾಸ್ತ್ರಜ್ಞರ ಒಂದು ತಂಡವು, ಈಜಿಪ್ಟ್‌ನ ಅಲೆಕ್ಸಾಂಡ್ರಿಯದಲ್ಲಿರುವ ಪುರಾತನ ವಿಶ್ವವಿದ್ಯಾನಿಲಯದ ಸ್ಥಳವನ್ನು ಅಗೆದುತೆಗೆದರು. ಲಾಸ್‌ ಆ್ಯಂಜಲಿಸ್‌ ಟೈಮ್ಸ್‌ ಪತ್ರಿಕೆಗನುಸಾರ ಆ ತಂಡವು, ಒಟ್ಟು 5,000 ವಿದ್ಯಾರ್ಥಿಗಳು ಕೂತುಕೊಳ್ಳಬಹುದಾದ 13 ಉಪನ್ಯಾಸ ಕೊಠಡಿಗಳನ್ನು ಕಂಡುಹಿಡಿಯಿತು. ಆ ಎಲ್ಲ ಕೊಠಡಿಗಳು ಒಂದೇ ಗಾತ್ರದ್ದಾಗಿದ್ದವು. ಪತ್ರಿಕೆಯು ಹೇಳುವುದು, ಈ ಕೊಠಡಿಗಳಲ್ಲಿ “ಮೂರು ಗೋಡೆಗಳ ಬದಿಯಿಂದ ಮೆಟ್ಟಿಲುಮೆಟ್ಟಿಲಾಗಿ ಮಾಡಿದ ಬೆಂಚುಗಳ U ಆಕಾರದ ಸಾಲುಗಳಿವೆ.” ಮಧ್ಯದಲ್ಲಿ ಮೇಲಕ್ಕೇರಿಸಲ್ಪಟ್ಟಿರುವ ಪೀಠವೊಂದಿದೆ. ಒಂದುವೇಳೆ ಇದು ಉಪನ್ಯಾಸಕರಿಗಾಗಿ ಇದ್ದಿರಬೇಕು. “ಇಡೀ ಮೆಡಿಟರೇನಿಯನ್‌ ಕ್ಷೇತ್ರದಲ್ಲಿನ ಯಾವುದೇ ಗ್ರೀಕೋ-ರೋಮನ್‌ ಸ್ಥಳದಲ್ಲಿ ಇಂಥ ಬೃಹತ್ತಾದ ಉಪನ್ಯಾಸ ಕೊಠಡಿಗಳು ಅನಾವರಣಗೊಳಿಸಲ್ಪಟ್ಟದ್ದು ಇದೇ ಮೊದಲ ಬಾರಿ” ಎಂದು ಈಜಿಪ್ಟಿನ ಪ್ರಾಚೀನ ಅನ್ವೇಷಣೆಗಳ ಸರ್ವೋಚ್ಚ ಸಮಿತಿಯ ಅಧ್ಯಕ್ಷರೂ ಪ್ರಾಕ್ತನಶಾಸ್ತ್ರಜ್ಞರೂ ಆದ ಜೀಹೀ ಹಾವೆಸ್‌ ತಿಳಿಸುತ್ತಾರೆ. ಇದನ್ನು ಹಾವೆಸ್‌ರವರು “ಲೋಕದಲ್ಲಿಯೇ ಒಂದುವೇಳೆ ಅತಿ ಪ್ರಾಚೀನ ವಿಶ್ವವಿದ್ಯಾನಿಲಯ” ಆಗಿರಬಹುದು ಎಂದು ವಿವರಿಸುತ್ತಾರೆ. (g05 6/8)

ಬೆಳ್ಳುಳ್ಳಿಯ ಐಸ್‌ ಕ್ರೀಮ್‌?

ಬೆಳ್ಳುಳ್ಳಿಯು ಅದರ ಔಷಧೀಯ ಗುಣಕ್ಕಾಗಿ ಬಹಳ ವರುಷಗಳಿಂದ ಪ್ರಖ್ಯಾತವಾಗಿದೆ. ಈಗ ಪಶ್ಚಿಮ ಫಿಲಿಪ್ಪೀನ್ಸ್‌ನಲ್ಲಿನ ಮಾರ್ಯಾನೋ ಮಾರ್ಕೋಸ್‌ ರಾಷ್ಟ್ರ ವಿಶ್ವವಿದ್ಯಾನಿಲಯವು “ಆರೋಗ್ಯದ” ಕಾರಣಗಳಿಗಾಗಿ ಬೆಳ್ಳುಳ್ಳಿ ಐಸ್‌ ಕ್ರೀಮ್‌ ಅನ್ನು ತಯಾರಿಸಿದೆ ಎಂದು ಫಿಲಿಪ್ಪೀನ್‌ ಸ್ಟಾರ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಬೆಳ್ಳುಳ್ಳಿ ಸೇವನೆಯಿಂದ ವಾಸಿಯಾಗಬಹುದಾದ ಅಸ್ವಸ್ಥತೆಯನ್ನು ಹೊಂದಿರುವ ಜನರಿಗೆ ಈ ಹೊಸ ಉತ್ಪನ್ನದಿಂದ ಪ್ರಯೋಜನವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಂಥ ಅಸ್ವಸ್ಥತೆಗಳಲ್ಲಿ ಕೆಲವು ಸಾಮಾನ್ಯ ನೆಗಡಿ, ಜ್ವರಗಳು, ಅಧಿಕ ರಕ್ತದೊತ್ತಡ, ಉಸಿರಾಟದ ಸಮಸ್ಯೆಗಳು, ಸಂಧಿವಾತ, ಹಾವಿನ ಕಡಿತ, ಹಲ್ಲುನೋವು, ಕ್ಷಯರೋಗ, ನಾಯಿಕೆಮ್ಮು, ಗಾಯಗಳು ಮತ್ತು ತಲೆ ಬೋಳಾಗುವಿಕೆ ಆಗಿದೆ. ಆದುದರಿಂದ ಯಾರಿಗೆ ಬೆಳ್ಳುಳ್ಳಿಯ ಐಸ್‌ ಕ್ರೀಮ್‌ ಬೇಕು? (g05 6/8)

ಬಿಳಿ ಮೊಸಳೆಗಳನ್ನು ಕಂಡುಹಿಡಿಯಲಾಗಿದೆ

“ಮೊಸಳೆಗಳ ವಾರ್ಷಿಕ ಗಣತಿಯ ಸಮಯದಲ್ಲಿ, ಒರಿಸ್ಸಾದ ಬಿಟರ್ಕಾನೀಕಾ ರಾಷ್ಟ್ರೀಯ ಉದ್ಯಾನವನದಲ್ಲಿರುವ ಅರಣ್ಯಾಧಿಕಾರಿಗಳು ತೀರ ವಿರಳವಾಗಿರುವ 15 ಬಿಳಿ ಮೊಸಳೆಗಳನ್ನು . . . ಕಂಡುಕೊಂಡರು” ಎಂಬುದಾಗಿ ಭಾರತದ ದ ಹಿಂದು ವಾರ್ತಾಪತ್ರಿಕೆಯು ತಿಳಿಸುತ್ತದೆ. ಬಿಳಿ ಮೊಸಳೆಗಳು ತೀರ ಅಪರೂಪದವುಗಳಾಗಿವೆ ಮತ್ತು “ಲೋಕದ ಬೇರೆ ಯಾವುದೇ ಭಾಗದಲ್ಲಿ ಅದನ್ನು ಕಾಣಸಾಧ್ಯವಿಲ್ಲ.” ಕಾನೂನುಬಾಹಿರವಾಗಿ ಮೊಸಳೆಗಳನ್ನು ಹಿಡಿಯುತ್ತಿದ್ದ ಕಾರಣ 1970ಗಳಲ್ಲಿ ಉಪ್ಪುನೀರಿನ ಮೊಸಳೆಗಳು ಹೆಚ್ಚುಕಡಿಮೆ ಇಲ್ಲದೆ ಹೋಗುವ ಸ್ಥಿತಿಯಲ್ಲಿದ್ದವು. ಆದರೆ ಒರಿಸ್ಸಾ ರಾಜ್ಯ ಸರಕಾರವು ವಿಶ್ವಸಂಸ್ಥೆಯ ಕಾರ್ಯಕ್ರಮಗಳ ಸಹಾಯದೊಂದಿಗೆ ಉದ್ಯಾನವನದೊಳಗೆಯೇ ಮೊಸಳೆಗಳನ್ನು ಸಾಕುವ ಒಂದು ಏರ್ಪಾಡನ್ನು ಮಾಡಿತು. ಬಹಳಷ್ಟು ಉಷ್ಣವಲಯದ ಮರಗಳು, ಶುದ್ಧ ನೀರು, ಸಾಕಷ್ಟು ಆಹಾರ ಸರಬರಾಜು ಮತ್ತು ಕಡಿಮೆ ಮಾನವ ಮಧ್ಯಪ್ರವೇಶ ಈ ಎಲ್ಲ ವಿಷಯಗಳು ಮೊಸಳೆ ಸಾಕಣೆಯನ್ನು ಯಶಸ್ವಿಕರವಾಗಿ ಮಾಡಿದವು. ದ ಹಿಂದು ವಾರ್ತಾಪತ್ರಿಕೆಗನುಸಾರ, ಉದ್ಯಾನವನದಲ್ಲಿ ಈಗ ಅಪರೂಪದ ಬಿಳಿ ಮೊಸಳೆಗಳ ಜೊತೆಗೆ ಸುಮಾರು 1,500 ಸಾಮಾನ್ಯ ಬಣ್ಣಗಳುಳ್ಳ ಮೊಸಳೆಗಳಿವೆ. (g05 4/8)

ತಂಬಾಕು, ಬಡತನ ಮತ್ತು ಅನಾರೋಗ್ಯ

“ತಂಬಾಕು ಮತ್ತು ಬಡತನವು ಒಂದು ವಿಷಮ ಚಕ್ರದಂತಿರುವ ಬಡ ದೇಶಗಳಲ್ಲಿ ಹೆಚ್ಚುಕಡಿಮೆ 84 ಪ್ರತಿಶತ ಧೂಮಪಾನಿಗಳು ವಾಸಿಸುತ್ತಿದ್ದಾರೆ ಎಂದು ಲೋಕಾರೋಗ್ಯ ಸಂಸ್ಥೆಯು (ಡಬ್ಲ್ಯೂಏಚ್‌ಓ) ಎಚ್ಚರಿಸುತ್ತದೆ” ಎಂಬುದಾಗಿ ಡೀಆರ್ಯೋ ಮೆಡೀಕೋ ಎಂಬ ಸ್ಪ್ಯಾನಿಷ್‌ ವಾರ್ತಾಪತ್ರಿಕೆಯು ತಿಳಿಸುತ್ತದೆ. ಮಾತ್ರವಲ್ಲದೆ, ಪ್ರತಿ ದೇಶದಲ್ಲಿ “ಹೆಚ್ಚು ಧೂಮಪಾನಮಾಡುವವರು ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ಸಮಸ್ಯೆಗಳನ್ನು ಹೆಚ್ಚು ಅನುಭವಿಸುತ್ತಿರುವವರು, ತೀರ ಬಡ ವಿಭಾಗಕ್ಕೆ ಸೇರಿದ ಜನರಾಗಿದ್ದಾರೆ.” ಹೆಚ್ಚಿನ ವಿಕಾಸಹೊಂದಿರುವ ದೇಶಗಳಲ್ಲಿ ತಂಬಾಕು ಸೇವನೆಯು ನಿಂತುಹೋಗಿದೆಯಾದರೂ, ಲೋಕವ್ಯಾಪಕವಾಗಿ ಅದು “ರೋಗವನ್ನು ಉಂಟುಮಾಡುವುದರಲ್ಲಿ ನಾಲ್ಕನೇ ಅತಿ ದೊಡ್ಡ ಅಪಾಯ ಸಂಭವವಾಗಿದೆ” ಎಂದು ವಾರ್ತಾಪತ್ರಿಕೆಯು ವರದಿಸುತ್ತದೆ. ಎಲ್ಲಿ ತಂಬಾಕು ಸೇವನೆಯಿಂದ ಸಾಯುವವರ ವಾರ್ಷಿಕ ಸಂಖ್ಯೆಯು 60,000ಕ್ಕೆ ತಲಪಿದೆಯೊ ಆ ಸ್ಪೆಯಿನ್‌ ದೇಶದಲ್ಲಿ, ಧೂಮಪಾನವು “ಅನಾರೋಗ್ಯ, ದೌರ್ಬಲ್ಯ ಮತ್ತು ತಡೆಯಸಾಧ್ಯವಿದ್ದ ಮರಣಕ್ಕೆ ಮೂಲಕಾರಣವಾಗಿದೆ.” (g05 4/8)

ಸ್ವಶರೀರದ ಬಗ್ಗೆ ತಪ್ಪು ಕಲ್ಪನೆಯ ವಿರುದ್ಧ ಹೋರಾಟ

“ತೀರ ಚಿಕ್ಕ ಪ್ರಾಯದಿಂದಲೇ ಯುವ ಜನರು​—⁠ಮುಖ್ಯವಾಗಿ ಹೆಣ್ಣುಮಕ್ಕಳು​—⁠ತಮ್ಮ ಶರೀರದ ಬಗ್ಗೆ ತಪ್ಪು ಕಲ್ಪನೆಯೊಂದಿಗೆ ಹೆಚ್ಚೆಚ್ಚು ಹೆಣಗಾಡುತ್ತಿದ್ದಾರೆ ಮತ್ತು ಇದರಿಂದಾಗಿ ಗಂಭೀರವಾದ ಆರೋಗ್ಯದ ಸಮಸ್ಯೆಗಳು ಸಹ ಉಂಟಾಗಸಾಧ್ಯವಿದೆ” ಎಂದು ಕೆನಡದ ಗ್ಲೋಬ್‌ ಆ್ಯಂಡ್‌ ಮೇಲ್‌ ಎಂಬ ವಾರ್ತಾಪತ್ರಿಕೆಯು ತಿಳಿಸುತ್ತದೆ. ಊಟಮಾಡುವುದರ ಕಡೆಗಿನ ಮನೋಭಾವದ ಬಗ್ಗೆ 10ರಿಂದ 14 ವರುಷದ ಹುಡುಗಿಯರನ್ನು ಪ್ರಶ್ನಿಸಲಾಯಿತು ಮತ್ತು 2,200 ಕ್ಕಿಂತಲೂ ಹೆಚ್ಚು ಮಂದಿ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಗ್ಲೋಬ್‌ ವರದಿಸುವುದು: “ಹೆಚ್ಚು ತೂಕವನ್ನು ಹೊಂದಿದ್ದ ಹುಡುಗಿಯರ ಸಂಖ್ಯೆಯು 7 ಪ್ರತಿಶತಕ್ಕಿಂತಲೂ ಕಡಿಮೆ ಇತ್ತು, ಆದರೆ 31 ಪ್ರತಿಶತಕ್ಕಿಂತ ಹೆಚ್ಚಿನವರು ತಮ್ಮನ್ನು ‘ದಢೂತಿಯರು’ ಎಂದು ವರ್ಣಿಸಿಕೊಳ್ಳುತ್ತಿದ್ದರು ಮತ್ತು 29 ಪ್ರತಿಶತ ಹುಡುಗಿಯರು ತಾವೀಗ ತೂಕವನ್ನು ಕಡಿಮೆಗೊಳಿಸುವ ಸಲುವಾಗಿ ಕಡಿಮೆ ಆಹಾರ ಸೇವಿಸುತ್ತಿದ್ದೇವೆ ಎಂದು ಹೇಳಿದರು.” ಹುಡುಗಿಯರು ತೂಕವನ್ನು ಕಳೆದುಕೊಳ್ಳಲು ಏಕೆ ಬಯಸುತ್ತಾರೆ? ವಾರ್ತಾಪತ್ರಿಕೆಗನುಸಾರ, ಆದರ್ಶಪ್ರಾಯರಾಗಿರುವ ವಯಸ್ಕರೇ ಇದಕ್ಕೆ ಕಾರಣರಾಗಿದ್ದಾರೆ. ಅವರು ಸ್ವತಃ ಕ್ರಮವಾಗಿ ಕಡಿಮೆ ಆಹಾರವನ್ನು ಸೇವಿಸುತ್ತಾರೆ ಮತ್ತು ಹೆಚ್ಚು ದೇಹ ತೂಕವನ್ನು ಹೊಂದಿರುವವರನ್ನು ಗೇಲಿಮಾಡುತ್ತಾರೆ. “ಯಾವಾಗಲೂ ತೀರ ತೆಳ್ಳಗಿನ ಮೈಕಟ್ಟನ್ನು ಹೊಂದಿರುವವರನ್ನು ಆದರ್ಶಪ್ರಾಯರಾಗಿ ತೋರಿಸುವ ಮೂಲಕ, ಹದಿವಯಸ್ಕರ ವರ್ತನೆಯನ್ನು ಪ್ರಭಾವಿಸುವುದರಲ್ಲಿ ಮಾಧ್ಯಮವೂ ಅತಿ ದೊಡ್ಡ ಪಾತ್ರವನ್ನು ವಹಿಸುತ್ತದೆ” ಎಂದು ಗ್ಲೋಬ್‌ ವಾರ್ತಾಪತ್ರಿಕೆಯು ತಿಳಿಸುತ್ತದೆ. “ತರುಣಾವಸ್ಥೆಯನ್ನು ತಲಪುತ್ತಿರುವ ಮಕ್ಕಳು ತೂಕವನ್ನು ಗಳಿಸುವುದು ಸಹಜವಾಗಿದೆ ಮತ್ತು ಅದು ಅತ್ಯಗತ್ಯವೂ ಆಗಿದೆ” ಎಂಬುದನ್ನು ಮಕ್ಕಳು, ಹೆತ್ತವರು ಮತ್ತು ಬೋಧಕರೆಲ್ಲರೂ ಗ್ರಹಿಸಬೇಕಾಗಿದೆ ಎಂದು ಅಸ್ವಸ್ಥ ಮಕ್ಕಳಿಗಾಗಿರುವ ಟೊರಾಂಟೊ ಆಸ್ಪತ್ರೆಯಲ್ಲಿನ ಒಬ್ಬಾಕೆ ಸಂಶೋಧಕಿ ವಿಜ್ಞಾನಿಯಾದ ಡಾ. ಗೇಲ್‌ ಮಕ್ವೇ ತಿಳಿಸುತ್ತಾರೆ. (g05 4/8)

ಯುದ್ಧದ ಯುವ ಬಲಿಗಳು

ರುಆಂಡದ ಜಾತೀಯ ಗಲಭೆಯ ಸಮಯದಲ್ಲಿ ಕೊಲ್ಲಲ್ಪಟ್ಟ 8,00,000 ಜನರಲ್ಲಿ 3,00,000 ಮಂದಿ ಮಕ್ಕಳಾಗಿದ್ದರು ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿಯು ಅಂದಾಜುಮಾಡಿದೆ ಎಂಬುದಾಗಿ ಜರ್ಮನಿಯ ಲೈಪ್‌ಸೀಗರ್‌ ಫೊಕ್ಸ್‌ಸೈಟುನ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ರುಆಂಡದಲ್ಲಿ 1,00,000ಕ್ಕಿಂತಲೂ ಹೆಚ್ಚಿನ ಮಕ್ಕಳು ಯಾವುದೇ ವಯಸ್ಕರ ಮೇಲ್ವಿಚಾರಣೆಯಿಲ್ಲದೆ ವಾಸಿಸುತ್ತಿದ್ದಾರೆ ಎಂದು ಅಂದಾಜುಮಾಡಲಾಗಿದೆ. “ಅವರ ದೈನಂದಿನ ಜೀವನವು ಕಡುಬಡತನದಿಂದ ಬಾಧಿತವಾಗಿದೆ” ಎಂದು ವಾರ್ತಾಪತ್ರಿಕೆಯು ತಿಳಿಸುತ್ತದೆ. (g05 4/22)

ದ್ವಿಭಾಷಾ ಮಕ್ಕಳನ್ನು ಬೆಳೆಸುವುದು

“ಮಕ್ಕಳನ್ನು ತಾಳ್ಮೆ ಮತ್ತು ಜಾಣ್ಮೆಯಿಂದ ಬೆಳೆಸುವುದಾದರೆ, ಬಹುಭಾಷೆಯು ಅವರಿಗೆ, ಅವರ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಪ್ರಯೋಜನಕಾರಿಯಾಗಿರಬಲ್ಲದು” ಎಂದು ಮೆಕ್ಸಿಕೊ ಸಿಟಿಯ ಮೀಲೆನ್ಯೋ ವಾರ್ತಾಪತ್ರಿಕೆಯು ತಿಳಿಸುತ್ತದೆ. “ಎರಡು ಭಾಷೆಗಳನ್ನು ಮಾತಾಡಬಲ್ಲ ಮಕ್ಕಳು ಕೇವಲ ಒಂದೇ ಭಾಷೆಯನ್ನು ಮಾತಾಡುವ ಮಕ್ಕಳಿಗಿಂತ ಶಾಲೆಯಲ್ಲಿ ಉತ್ತಮವಾಗಿ ಕಲಿಯುತ್ತಾರೆ ಎಂಬ ವಿಷಯವನ್ನು” ಅಧ್ಯಯನಗಳು ತೋರಿಸಿಕೊಟ್ಟಿವೆ. ಮಾತ್ರವಲ್ಲದೆ, ಎರಡು ಸಂಸ್ಕೃತಿಗಳನ್ನು ಗ್ರಹಿಸಬಲ್ಲ ಮಕ್ಕಳು ಇತರರ ದೃಷ್ಟಿಕೋನವನ್ನು ಅರ್ಥಮಾಡಿಕೊಂಡು ಇತರರೊಂದಿಗೆ ವ್ಯವಹರಿಸುವುದರಲ್ಲಿ ಹೆಚ್ಚು ಉತ್ತಮರಾಗಿರುತ್ತಾರೆ. ಮಕ್ಕಳು ಒಂದು ಭಾಷೆಯಲ್ಲಿ ಇನ್ನೊಂದನ್ನು ಸೇರಿಸಿ ಆಡುವಾಗ ಅಥವಾ ಒಂದು ಭಾಷೆಯ ನಿಯಮವನ್ನು ಇನ್ನೊಂದಕ್ಕೆ ಅನ್ವಯಿಸುವಾಗ ಕೆಲವೊಮ್ಮೆ ಹೆತ್ತವರು ಚಿಂತಿತರಾಗುತ್ತಾರೆ. “ಆದರೆ ಈ ವ್ಯಾಕರಣಕ್ಕೆ ಸಂಬಂಧಿಸಿದ ‘ತಪ್ಪುಗಳು’ ಕ್ಷುಲ್ಲಕ ವಿಷಯವಾಗಿದೆ ಮತ್ತು ಇದು ಬೇಗನೆ ಇಲ್ಲದೆ ಹೋಗುತ್ತದೆ. ಭಾಷೆಯನ್ನು ಸರಿಯಾದ ವ್ಯಾಕರಣದೊಂದಿಗೆ ಮಾತಾಡಲು ಸ್ವಲ್ಪ ತಡವಾದರೂ ದ್ವಿಭಾಷೆಯನ್ನು ಮಾತನಾಡುವುದರ ಪ್ರಯೋಜನಗಳನ್ನು ಅವರು ಹೊಂದುತ್ತಾರೆ” ಎಂದು ಮಕ್ಕಳ ಭಾಷಾ ಬೆಳವಣಿಗೆಯ ವಿಶೇಷಜ್ಞರಾಗಿರುವ ಮನಶ್ಶಾಸ್ತ್ರಜ್ಞರಾದ ಪ್ರೊಫೆಸರ್‌ ಟೋನೀ ಕ್ಲೈನ್‌ ತಿಳಿಸುತ್ತಾರೆ. ಹುಟ್ಟಿನಿಂದಲೇ ಹೆತ್ತವರಿಬ್ಬರ ಭಾಷೆಯನ್ನೂ ಮಕ್ಕಳಿಗೆ ಕಲಿಸುವುದಾದರೆ, ಅವರು ಎರಡು ಭಾಷೆಯನ್ನೂ ಹೀರಿಕೊಳ್ಳುತ್ತಾರೆ ಮತ್ತು ಕ್ರಮೇಣ ಪ್ರತಿಯೊಂದು ಭಾಷೆಯನ್ನು ಸರಿಯಾಗಿ ಮತ್ತು ಕಲಬೆರಕೆಮಾಡದೆ ಮಾತಾಡಲು ಶಕ್ತರಾಗುತ್ತಾರೆ. (g05 5/8)

ಹುಚ್ಚು ರಾಕ್ಷಸ ಅಲೆಗಳು

ಭೂಮಿಯ ಯಾವುದಾದರೊಂದು ಭಾಗದಲ್ಲಿ ಪ್ರತಿ ವಾರಕ್ಕೆ ಸರಾಸರಿ ಎರಡು ಹಡಗುಗಳು ಮುಳುಗಿಬಿಡುತ್ತವೆಂದು ಹೇಳಲಾಗುತ್ತದೆ. ಸೂಪರ್‌ ಟ್ಯಾಂಕರ್‌ಗಳು ಮತ್ತು 200ಕ್ಕಿಂತಲೂ ಹೆಚ್ಚು ಮೀಟರ್‌ ಉದ್ದದ ಕಂಟೇನರ್‌ಗಳು ಸಹ ಸಮುದ್ರಕ್ಕೆ ಬಲಿಯಾಗಿವೆ. ಇಂಥ ಹೆಚ್ಚಿನ ಅವಘಡಗಳು ಹುಚ್ಚು ಅಲೆಗಳ ಕಾರಣ ಸಂಭವಿಸಿವೆ ಎಂದು ನಂಬಲಾಗಿದೆ. ಸಮುದ್ರದ ಬೃಹತ್‌ ಅಲೆಗಳು ದೊಡ್ಡ ಹಡಗುಗಳನ್ನು ಸಹ ಮುಳುಗಿಸಲು ಶಕ್ತವಾಗಿವೆ ಎಂಬ ವರದಿಗಳನ್ನು ನಾವಿಕರ ಬರಿಯ ಕಟ್ಟುಕಥೆ ಎಂದು ಹೇಳಿ ಬಹುಕಾಲದಿಂದ ಅಗಣ್ಯಮಾಡಲ್ಪಟ್ಟಿದೆ. ಆದರೆ, ಐರೋಪ್ಯ ಒಕ್ಕೂಟ ಸಂಶೋಧನಾ ಯೋಜನೆಯು ಅಂಥ ವರದಿಗಳಿಗೆ ಆಧಾರವನ್ನು ನೀಡಿತು. ರಾಕ್ಷಸ ಅಲೆಗಳನ್ನು ತಿಳಿದುಕೊಳ್ಳಲು ಸಮುದ್ರದ ಸ್ಯಾಟಲೈಟ್‌ ರೇಡಾರ್‌ ಚಿತ್ರಗಳನ್ನು ಸ್ಕ್ಯಾನ್‌ ಮಾಡಲಾಗಿದೆ. ಸ್ಯೂಯಿಟ್‌ಡೊಯ್‌ಚಾ ಸೈಟುಂಗ್‌ಗನುಸಾರ ಯೋಜನೆಯ ಮುಖ್ಯಸ್ಥರಾದ ವುಲ್ಫ್‌ಗಾಂಗ್‌ ರೋಸೆನ್ಟಾಲ್‌ ತಿಳಿಸುವುದು: “ರಾಕ್ಷಸ ಅಲೆಗಳು, ಒಬ್ಬನು ನೆನಸಿರುವುದಕ್ಕಿಂತಲೂ ಹೆಚ್ಚು ಸಾಮಾನ್ಯವಾಗಿವೆ ಎಂಬುದನ್ನು ನಾವು ರುಜುಪಡಿಸಿದೆವು.” ಮೂರು ವಾರಗಳ ಕಾಲಾವಧಿಯಲ್ಲಿ ಅವರ ತಂಡವು ಕಡಿಮೆಪಕ್ಷ ಅಂಥ ಹತ್ತು ಅಲೆಗಳನ್ನು ಗುರುತಿಸಿತು. ಅಂಥ ಅಲೆಗಳು ಹೆಚ್ಚುಕಡಿಮೆ ಲಂಬಾಕಾರವಾಗಿರುತ್ತವೆ ಮತ್ತು 40 ಮೀಟರುಗಳಷ್ಟು ಎತ್ತರವಾಗಿರುತ್ತವೆ ಹಾಗೂ ಒಂದು ಹಡಗಿಗೆ ಬಡಿದು ಅದಕ್ಕೆ ಭಯಂಕರ ಹಾನಿಯನ್ನು ಉಂಟುಮಾಡಲು ಶಕ್ತವಾಗಿವೆ ಅಥವಾ ಅದನ್ನು ಮುಳುಗಿಸಿಬಿಡುವಷ್ಟು ಶಕ್ತಿಯುತವಾಗಿವೆ. ಕೆಲವೇ ಹಡಗುಗಳು ಅವುಗಳನ್ನು ಎದುರಿಸಿನಿಲ್ಲಲು ಸಾಧ್ಯ. “ಇಂಥ ಅಲೆಗಳ ಬಗ್ಗೆ ಮುನ್‌ಸೂಚನೆಯನ್ನು ನೀಡಲು ಸಾಧ್ಯವಿದೆಯೊ ಎಂಬುದನ್ನು ನಾವೀಗ ವಿಶ್ಲೇಷಿಸಬೇಕು” ಎಂದು ರೋಸೆನ್ಟಾಲ್‌ ಹೇಳುತ್ತಾರೆ. (g05 6/8)