ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತೋಟಗಾರಿಕೆಯು ನಿಮಗೆ ಪ್ರಯೋಜನಕರ

ತೋಟಗಾರಿಕೆಯು ನಿಮಗೆ ಪ್ರಯೋಜನಕರ

ತೋಟಗಾರಿಕೆಯು ನಿಮಗೆ ಪ್ರಯೋಜನಕರ

ನೀವು ತೋಟಗಾರಿಕೆಯಲ್ಲಿ ಆನಂದಿಸುತ್ತೀರೊ? ನಿಮ್ಮ ಹವ್ಯಾಸದಿಂದ ನೀವು ಸಂತೋಷಕ್ಕಿಂತಲೂ ಹೆಚ್ಚಿನದ್ದನ್ನು ಗಳಿಸಬಲ್ಲಿರಿ. “ತೋಟಗಾರಿಕೆಯು ನಿಮ್ಮ ಆರೋಗ್ಯಕ್ಕೆ ಒಳ್ಳೇದಾಗಿದೆ. ಅದು ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆಗೊಳಿಸುತ್ತದೆ, ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ ಮತ್ತು ನೀವು ದೀರ್ಘಾಯುಷ್ಯವನ್ನು ಹೊಂದುವಂತೆಯೂ ಸಹಾಯಮಾಡುತ್ತದೆ” ಎಂಬ ಪುರಾವೆಯನ್ನು ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ಲಂಡನಿನ ಇಂಡಿಪೆಂಡೆಂಟ್‌ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ.

“ಕಾರ್ಯಮಗ್ನವಾದ ಒತ್ತಡಭರಿತ ದಿನದ ನಂತರ ಮನೆಗೆ ಬಂದು ನಿಮ್ಮ ತೋಟದಲ್ಲಿ ಸಮಯವನ್ನು ಕಳೆಯುವುದು ನಿಜವಾಗಿಯೂ ಮನಸ್ಸಿಗೆ ನೆಮ್ಮದಿಯನ್ನು ಉಂಟುಮಾಡುತ್ತದೆ” ಎಂದು ಗ್ರಂಥಕರ್ತ ಗೇ ಸರ್ಚ್‌ ತಿಳಿಸುತ್ತಾರೆ. ತೋಟಗಾರಿಕೆಯು ಪ್ರತಿಫಲದಾಯಕವೂ ಆಸಕ್ತಿಕರವೂ ಆಗಿರುವುದು ಮಾತ್ರವಲ್ಲದೆ ವ್ಯಾಯಾಮ ಶಾಲೆಗೆ ಬದಲಾಗಿ ಮನೆಯಲ್ಲಿಯೇ ಉತ್ತಮ ವ್ಯಾಯಾಮವನ್ನು ಒದಗಿಸಬಲ್ಲದು. ಇದು ಹೇಗೆ ಸಾಧ್ಯ? ಸರ್ಚ್‌ಗನುಸಾರ, “ಅಗೆಯುವುದು, ಕೆದಕುವುದು ಈ ಮುಂತಾದ ಚಟುವಟಿಕೆಗಳು ಉತ್ತಮ ವ್ಯಾಯಾಮಗಳಾಗಿವೆ. ಸೈಕಲ್‌ ಸವಾರಿಮಾಡುವುದಕ್ಕಿಂತಲೂ ಇಂಥ ಕೆಲಸವನ್ನು ಮಾಡುವುದರಿಂದ ಹೆಚ್ಚು ಕ್ಯಾಲೊರಿಗಳು ಕರಗಿಸಲ್ಪಡುತ್ತವೆ.”

ಒಂದು ತೋಟವನ್ನು ನೋಡಿಕೊಳ್ಳುವುದು ವಯಸ್ಕರಿಗೆ ನಿಜವಾಗಿಯೂ ಪ್ರಯೋಜನಕಾರಿಯಾಗಿದೆ. ಹೊಸ ಮೊಳಕೆ ಬರುವುದನ್ನು ಅಥವಾ ಚಿಗುರೊಡೆಯುವುದನ್ನು ನೋಡಲು ಕಾಯುವುದು, ಭವಿಷ್ಯತ್ತನ್ನು ಸಕಾರಾತ್ಮಕವಾಗಿ ನೋಡುವಂತೆ ಅವರಿಗೆ ಸಹಾಯಮಾಡುತ್ತದೆ. ಮಾತ್ರವಲ್ಲದೆ, ವೃದ್ಧಾಪ್ಯದಲ್ಲಿ ಸಂಭವಿಸುವ “ನೋವು ಮತ್ತು ಆಶಾಭಂಗದಿಂದ ತೋಟಗಾರಿಕೆಯು ಬಿಡುಗಡೆಯನ್ನು ಒದಗಿಸುತ್ತದೆ” ಎಂದು ರಾಯಲ್‌ ಹಾರ್ಟಿಕಲ್ಚರಲ್‌ ಸೊಸೈಟಿಯ ಡಾ. ಬ್ರಿಜಿಡ್‌ ಬೋರ್ಡ್‌ಮನ್‌ ತಿಳಿಸುತ್ತಾರೆ. ವೃದ್ಧರು ಇತರರ ಮೇಲೆ ಹೆಚ್ಚೆಚ್ಚು ಅವಲಂಬಿಸಬೇಕಾಗುವ ಕಾರಣ ಅನೇಕವೇಳೆ ನಿರುತ್ತೇಜಿತರಾಗುತ್ತಾರೆ. ಆದರೆ, “ಅವರು ಏನನ್ನು ನೆಡುತ್ತಾರೊ, ತೋಟವನ್ನು ಹೇಗೆ ವಿನ್ಯಾಸಿಸುತ್ತಾರೊ ಮತ್ತು ಗಿಡಗಳನ್ನು ಹೇಗೆ ಬೆಳೆಸುತ್ತಾರೊ ಅದನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಮೂಲಕ ತಾವು ಈಗಲೂ ವಿಷಯಗಳನ್ನು ನಿಯಂತ್ರಿಸಬಲ್ಲೆವು ಎಂಬ ಅನಿಸಿಕೆ ಅವರಿಗಾಗಬಲ್ಲದು. ಅಷ್ಟುಮಾತ್ರವಲ್ಲದೆ, ಇತರರನ್ನು ನೋಡಿಕೊಳ್ಳಬೇಕು ಎಂಬ ಅವರ ಅಗತ್ಯವೂ ಅದರೊಂದಿಗೆ ಪೂರೈಸಲ್ಪಡುವುದು” ಎಂದು ಡಾ. ಬೋರ್ಡ್‌ಮನ್‌ ತಿಳಿಸುತ್ತಾರೆ.

ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಸುಂದರವಾದ, ಶಾಂತಿಭರಿತ ಪರಿಸರದಲ್ಲಿ ಕೆಲಸಮಾಡುವಾಗ ಅನೇಕವೇಳೆ ಹಿತವೆನಿಸುತ್ತದೆ. ಮಾತ್ರವಲ್ಲದೆ ಅಂಥವರು ಇತರರಿಗಾಗಿ ಹೂವುಗಳನ್ನು ಅಥವಾ ಕಾಯಿಪಲ್ಯಗಳನ್ನು ಬೆಳೆಸುವಾಗ ಅದು ಅವರಲ್ಲಿ ಆತ್ಮವಿಶ್ವಾಸ ಮತ್ತು ಸ್ವಗೌರವವನ್ನು ಪುನಃ ಮೂಡಿಸಲು ಸಹಾಯಮಾಡಬಹುದು.

ಹಾಗಿದ್ದರೂ, ಹಸಿರು ಸಸ್ಯಗಳು ತೋಟದ ಕೆಲಸಮಾಡುವವರಿಗೆ ಮಾತ್ರ ಪ್ರಯೋಜನವನ್ನು ತರುವುದಿಲ್ಲ. ಟೆಕ್ಸಸ್‌ನ ವಿಶ್ವವಿದ್ಯಾನಿಲಯದಲ್ಲಿನ ಪ್ರೊಫೆಸರರಾದ ರಾಜರ್‌ ಉಲ್‌ರಿಕ್‌ರವರು, ಒತ್ತಡಕ್ಕೊಳಗಾಗಿದ್ದ ಜನರ ಒಂದು ಗುಂಪನ್ನು ಪ್ರಯೋಗಕ್ಕೊಳಪಡಿಸಿದರು. ಅವರು ಕಂಡುಕೊಂಡದ್ದೇನೆಂದರೆ, ಹಸಿರು ಸಸ್ಯಗಳು ಇರುವ ಸ್ಥಳಕ್ಕೆ ಯಾರನ್ನು ಕರೆದುಕೊಂಡು ಹೋಗಲಿಲ್ಲವೊ ಅವರಿಗಿಂತ, ಮರಗಳಿಂದ ಸುತ್ತುವರಿದಿರುವ ವಾತಾವರಣಕ್ಕೆ ಕರೆದೊಯ್ಯಲ್ಪಟ್ಟ ಜನರು ಬೇಗನೆ ಸ್ವಸ್ಥರಾದರು. ಅವರ ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು ಪರೀಕ್ಷಿಸುವ ಮೂಲಕ ಇದನ್ನು ತಿಳಿದುಕೊಳ್ಳಲಾಯಿತು. ಇಂಥದ್ದೇ ಇನ್ನೊಂದು ಪರೀಕ್ಷೆಯಲ್ಲಿ, ರೋಗಿಗಳನ್ನು ಶಸ್ತ್ರಚಿಕಿತ್ಸೆಯ ನಂತರ ಗಿಡಮರಗಳನ್ನು ವೀಕ್ಷಿಸಲು ಸಾಧ್ಯವಿರುವ ಕೋಣೆಗಳಲ್ಲಿ ಇರಿಸುವುದಾದರೆ ಬಹಳ ಪ್ರಯೋಜನಕಾರಿಯಾಗಿದೆ ಎಂದು ಕಂಡುಕೊಳ್ಳಲಾಯಿತು. ಇತರ ರೋಗಿಗಳಿಗೆ ಹೋಲಿಸುವಾಗ ಅವರು “ಬೇಗನೆ ಚೇತರಿಸಿಕೊಂಡರು, ಬೇಗನೆ ಮನೆಗೆ ಹಿಂದಿರುಗಿದರು. ಅವರಿಗೆ ನೋವು ನಿವಾರಕ ಔಷಧದ ಅಗತ್ಯವಿದ್ದದ್ದು ಕಡಿಮೆ ಮತ್ತು ಅವರು ಗೊಣಗುತ್ತಿದ್ದದ್ದು ಕಡಿಮೆ.” (g05 4/22)