ನನ್ನ ಗುರಿಯನ್ನು ಸಾಧಿಸಲು ದೃಢನಿರ್ಧಾರವನ್ನು ಮಾಡಿದೆ
ನನ್ನ ಗುರಿಯನ್ನು ಸಾಧಿಸಲು ದೃಢನಿರ್ಧಾರವನ್ನು ಮಾಡಿದೆ
ಮಾರ್ಥ ಚಾವೆಸ್ ಸೆರ್ನಾ ಹೇಳಿರುವಂತೆ
ನಾನು 16 ವರುಷದವಳಾಗಿದ್ದಾಗ ಒಂದು ದಿನ ಮನೆಯಲ್ಲಿ ಕೆಲಸಮಾಡುತ್ತಿರುವಾಗ ನಾನು ನನ್ನ ಪ್ರಜ್ಞೆಯನ್ನು ಕಳೆದುಕೊಂಡೆ. ಎಚ್ಚರವಾದಾಗ ನಾನು ಹಾಸಿಗೆಯ ಮೇಲಿದ್ದೆ. ತೀವ್ರವಾದ ತಲೆನೋವಿನಿಂದ ಕಸಿವಿಸಿಗೊಂಡವಳಾಗಿ, ನನಗೆ ಸ್ವಲ್ಪ ನಿಮಿಷಗಳ ವರೆಗೆ ಏನೂ ಕಾಣಿಸಲಿಲ್ಲ ಮತ್ತು ಏನೂ ಕೇಳಿಸಲಿಲ್ಲ. ನಾನು ಭಯಭೀತಳಾದೆ. ನನಗೆ ಏನು ಸಂಭವಿಸಿದೆ?
ಚಿಂತಿತರಾದ ನನ್ನ ಹೆತ್ತವರು ನನ್ನನ್ನು ವೈದ್ಯರ ಬಳಿ ಕೊಂಡೊಯ್ದರು ಮತ್ತು ಅವರು ನನಗೆ ವಿಟಮಿನ್ ಮಾತ್ರೆಗಳನ್ನು ನೀಡಿದರು. ನಾನು ತಟ್ಟನೆ ಪ್ರಜ್ಞೆತಪ್ಪಿ ಬಿದ್ದುಬಿಡಲು ನಿದ್ರೆಯ ಕೊರತೆಯೇ ಕಾರಣ ಎಂದು ಅವರು ಹೇಳಿದರು. ಕೆಲವು ತಿಂಗಳುಗಳ ಅನಂತರ ಎರಡನೇ ಬಾರಿ ನನಗೆ ಸೆಟೆತ ಉಂಟಾಯಿತು ಮತ್ತು ಸ್ವಲ್ಪ ಸಮಯದಲ್ಲಿ ಮೂರನೇ ಬಾರಿ ಸಂಭವಿಸಿತು. ನಾವು ಬೇರೊಬ್ಬ ವೈದ್ಯರನ್ನು ಸಂಪರ್ಕಿಸಿದೆವು. ನನಗೆ ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆ ಇದೆ ಎಂದು ಅವರು ನೆನಸಿದರು ಮತ್ತು ನನಗೆ ಉಪಶಮನಕಾರಿ ಮದ್ದುಗಳನ್ನು ನೀಡಿದರು.
ಆದರೆ, ಸೆಟೆತಗಳು ಪದೇ ಪದೇ ಸಂಭವಿಸ ತೊಡಗಿದವು. ನಾನು ಪ್ರಜ್ಞೆಯನ್ನು ಕಳೆದುಕೊಂಡು ಬಿದ್ದು ಗಾಯಗಳನ್ನು ಮಾಡಿಕೊಳ್ಳುತ್ತಿದ್ದೆ. ಕೆಲವೊಮ್ಮೆ ನಾನು ನನ್ನ ನಾಲಿಗೆಯನ್ನು ಮತ್ತು ಬಾಯಿಯ ಒಳಭಾಗವನ್ನು ಬಿಗಿಯಾಗಿ ಕಚ್ಚಿಕೊಳ್ಳುತ್ತಿದ್ದೆ. ಪ್ರಜ್ಞೆ ಬಂದಾಗ ನನಗೆ ತೀವ್ರ ತಲೆನೋವು ಮತ್ತು ಓಕರಿಕೆಯ ಅನಿಸಿಕೆಯಾಗುತ್ತಿತ್ತು. ನನ್ನ ಇಡೀ ದೇಹವೇ ನೋವಿನಲ್ಲಿರುತ್ತಿತ್ತು. ಹೆಚ್ಚಿನ ಸಮಯಗಳಲ್ಲಿ ಸೆಟೆತದ ಮುನ್ನ ಏನು ಸಂಭವಿಸಿತೆಂಬುದನ್ನು ಸಹ ನನಗೆ ಜ್ಞಾಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ಸೆಟೆತವು ಸಂಭವಿಸಿದ ನಂತರ ನಾನು ಚೇತರಿಸಿಕೊಳ್ಳಲು ಒಂದು ಅಥವಾ ಎರಡು ದಿನಗಳ ಬೆಡ್ ರೆಸ್ಟ್ ತೆಗೆದುಕೊಳ್ಳಬೇಕಿತ್ತು. ಹಾಗಿದ್ದರೂ, ಈ ನನ್ನ ಸಮಸ್ಯೆಯು ತಾತ್ಕಾಲಿಕವಾದದ್ದು ಮತ್ತು ಬೇಗನೆ ಸಂಪೂರ್ಣವಾಗಿ ಗುಣಮುಖಳಾಗುತ್ತೇನೆ ಎಂದು ನಾನು ನೆನಸುತ್ತಿದ್ದೆ.
ನನ್ನ ಗುರಿಗಳ ಮೇಲೆ ಬೀರಿದ ಪರಿಣಾಮ
ನಾನು ತೀರ ಚಿಕ್ಕವಳಿದ್ದಾಗ, ನನ್ನ ಕುಟುಂಬವು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿತು. ಇಬ್ಬರು ವಿಶೇಷ ಪಯನೀಯರರು ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇತರರಿಗೆ ಬೈಬಲಿನ ಸತ್ಯಗಳನ್ನು ಕಲಿಸಲು ಪ್ರತಿ ತಿಂಗಳು ಹಲವಾರು ತಾಸುಗಳನ್ನು ವ್ಯಯಿಸುವ ಪೂರ್ಣ ಸಮಯದ ಶುಶ್ರೂಷಕರು ನಮ್ಮ ಬೋಧಕರಾಗಿದ್ದರು. ಆ ಪಯನೀಯರರು ಮಾಡುತ್ತಿದ್ದ ಶುಶ್ರೂಷೆಯು ಅವರಿಗೆ ಆನಂದವನ್ನು ನೀಡುತ್ತಿತ್ತು ಎಂಬುದನ್ನು ನಾನು ಕಂಡುಕೊಂಡೆ. ಬೈಬಲಿನ ವಾಗ್ದಾನಗಳ ಕುರಿತು ನನ್ನ ಅಧ್ಯಾಪಕಿಯೊಂದಿಗೆ ಮತ್ತು ಸಹಪಾಠಿಗಳೊಂದಿಗೆ ನಾನು ಮಾತಾಡಿದಾಗ ಅದೇ ರೀತಿಯ ಆನಂದವನ್ನು ಅನುಭವಿಸತೊಡಗಿದೆ.
ಸ್ವಲ್ಪ ಸಮಯದೊಳಗಾಗಿ ನನ್ನ ಕುಟುಂಬದಲ್ಲಿ ಅನೇಕರು ಯೆಹೋವನ ಸಾಕ್ಷಿಗಳಾದರು. ಸುವಾರ್ತೆ ಸಾರುವ ಕೆಲಸದಲ್ಲಿ ನಾನು ಬಹಳಷ್ಟು ಆನಂದಿಸಿದೆ! ನಾನು ಏಳು ವರುಷದವಳಾಗಿದ್ದಾಗ, ಮುಂದಕ್ಕೆ ನಾನು ಸಹ ವಿಶೇಷ ಪಯನೀಯರಳಾಗಬೇಕೆಂಬ ಗುರಿಯನ್ನು ಇಟ್ಟೆ. 16 ವರುಷದವಳಾದಾಗ, ಈ ಗುರಿಯ ಕಡೆಗೆ ನನ್ನನ್ನು ಕೊಂಡೊಯ್ಯುವ ಅತಿ ದೊಡ್ಡ ಹೆಜ್ಜೆಯಾದ ದೀಕ್ಷಾಸ್ನಾನವನ್ನು ನಾನು ಪಡೆದುಕೊಂಡೆ. ಅನಂತರ ಪುನಃ ಸೆಟೆತಗಳು ಆರಂಭಗೊಂಡವು.
ಪಯನೀಯರ್ ಸೇವೆ
ನನಗೆ ಶಾರೀರಿಕ ಸಮಸ್ಯೆಗಳಿದ್ದರೂ, ನಾನು ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕಳಾಗಬಲ್ಲೆ ಎಂಬ ನಂಬಿಕೆ ನನಗಿತ್ತು. ಆದರೆ ಆ ಸಮಯದಲ್ಲಿ ನನಗೆ ವಾರಕ್ಕೆ ಎರಡಾವರ್ತಿಯಂತೆ ಸೆಟೆತಗಳು ಸಂಭವಿಸುತ್ತಿದ್ದ ಕಾರಣ, ಪಯನೀಯರ್ ಸೇವೆಯಂಥ ದೊಡ್ಡ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳಬಾರದು ಎಂದು ಸಭೆಯಲ್ಲಿದ್ದ ಕೆಲವರಿಗೆ ಅನಿಸಿತು. ಇದು ನನಗೆ ವಿಪರೀತ ದುಃಖ ಮತ್ತು ನಿರಾಶೆಯನ್ನು ಉಂಟುಮಾಡಿತು. ಆದರೆ ಸ್ವಲ್ಪ ಸಮಯದ ನಂತರ, ಮೆಕ್ಸಿಕೊವಿನ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಲ್ಲಿ ಸೇವೆಸಲ್ಲಿಸುತ್ತಿದ್ದ ಒಂದು ವಿವಾಹಿತ ದಂಪತಿಯು ನಮ್ಮ ಸಭೆಗೆ ಬಂದರು. ಪಯನೀಯರಳಾಗಬೇಕೆಂಬ ನನ್ನ ಆಸೆಯ ಕುರಿತು ತಿಳಿದುಕೊಂಡಾಗ, ಅವರು ನನ್ನನ್ನು ಉತ್ತೇಜಿಸಿದರು. ನನ್ನ ಅಸ್ವಸ್ಥತೆಯ ಮಧ್ಯೆಯೂ ನಾನು ಪಯನೀಯರ್ ಸೇವೆಯನ್ನು ಮಾಡಬಲ್ಲೆ ಎಂಬ ದೃಢತೆಯನ್ನು ಅವರು ನನಗೆ ನೀಡಿದರು.
ಹೀಗೆ, 1988ರ ಸೆಪ್ಟೆಂಬರ್ 1ರಂದು ನನ್ನ ಹುಟ್ಟೂರಾದ ಸಾನ್ ಆನ್ಡ್ರೇಸ್ ಚೀಅಟ್‌ಲಾದಲ್ಲಿ ಒಬ್ಬ ರೆಗ್ಯುಲರ್ ಪಯನೀಯರಳಾಗಿ ಸೇವೆಸಲ್ಲಿಸುವಂತೆ ನಾನು ನೇಮಿಸಲ್ಪಟ್ಟೆ. ಸುವಾರ್ತೆಯನ್ನು ಸಾರುತ್ತಾ ಪ್ರತಿ ತಿಂಗಳು ನಾನು ಅನೇಕ ತಾಸುಗಳನ್ನು ಕಳೆದೆ. ಸಾರ್ವಜನಿಕವಾಗಿ ನಾನು ಸಾರಲು ಅಶಕ್ತಳಾದಾಗ, ನನ್ನ ಕ್ಷೇತ್ರದಲ್ಲಿರುವ ಜನರಿಗೆ ಶಾಸ್ತ್ರೀಯ ವಿಷಯಗಳ ಕುರಿತು ಪತ್ರಗಳನ್ನು ಬರೆಯುತ್ತಿದ್ದೆ
ಮತ್ತು ಈ ರೀತಿಯಲ್ಲಿ, ಬೈಬಲನ್ನು ಅಧ್ಯಯನಮಾಡುವಂತೆ ಅವರಿಗೆ ಲಿಖಿತ ಉತ್ತೇಜನವನ್ನು ನೀಡುತ್ತಿದ್ದೆ.ನನ್ನ ರೋಗವನ್ನು ಪತ್ತೆಹಚ್ಚಲಾಯಿತು
ಈ ಸಮಯದಲ್ಲಿ ನನ್ನ ಹೆತ್ತವರು ಬಹಳಷ್ಟು ಹಣವನ್ನು ಖರ್ಚುಮಾಡಿ ನನ್ನನ್ನು ಒಬ್ಬ ನರಶಾಸ್ತ್ರಜ್ಞನ ಬಳಿಗೆ ಕರೆದೊಯ್ದರು. ನನಗೆ ಮೂರ್ಛೆರೋಗವಿದೆ ಎಂಬುದನ್ನು ಈ ವೈದ್ಯರು ಕಂಡುಹಿಡಿದರು. ನಂತರ ನನಗೆ ನೀಡಲ್ಪಟ್ಟ ಚಿಕಿತ್ಸೆಯಿಂದಾಗಿ ನಾಲ್ಕು ವರುಷಗಳ ವರೆಗೆ ನನ್ನ ಅಸ್ವಸ್ಥತೆಯು ಹತೋಟಿಯಲ್ಲಿತ್ತು. ಈ ಮಧ್ಯೆ ನಾನು ಪಯನೀಯರ್ ಸೇವಾ ಶಾಲೆಗೆ ಹಾಜರಾಗಶಕ್ತಳಾದೆ. ಅಲ್ಲಿ ನನಗೆ ದೊರೆತ ಉತ್ತೇಜನದಿಂದಾಗಿ, ಸೌವಾರ್ತಿಕರ ಹೆಚ್ಚಿನ ಅಗತ್ಯ ಎಲ್ಲಿದೆಯೊ ಅಲ್ಲಿಗೆ ಹೋಗಿ ಸೇವೆಸಲ್ಲಿಸುವ ನನ್ನ ಇಚ್ಛೆಯು ಅಧಿಕವಾಯಿತು.
ನನ್ನ ಸೇವೆಯನ್ನು ವಿಸ್ತರಿಸಲು ನಾನು ಎಷ್ಟು ಅಪೇಕ್ಷಿಸುತ್ತೇನೆಂದು ನನ್ನ ಹೆತ್ತವರಿಗೆ ತಿಳಿದಿತ್ತು. ನನ್ನ ಅಸ್ವಸ್ಥತೆಯು ಸ್ವಲ್ಪ ಮಟ್ಟಿಗೆ ಹತೋಟಿಯಲ್ಲಿದ್ದ ಕಾರಣ, ಮನೆಯಿಂದ 200 ಕಿಲೋಮೀಟರ್ ದೂರದಲ್ಲಿರುವ ಮೀಕೋಆಕಾನ್ ರಾಜ್ಯದ ಸೀಟಾಕ್ವಾರೊಗೆ ಹೋಗಲು ಅವರು ನನ್ನನ್ನು ಅನುಮತಿಸಿದರು. ಆ ನೇಮಕದಲ್ಲಿ ಇತರ ಪಯನೀಯರರೊಂದಿಗೆ ಸಹವಾಸಿಸುವುದು, ಪೂರ್ಣ ಸಮಯದ ಸೇವೆಯನ್ನು ಇನ್ನಷ್ಟು ಅಮೂಲ್ಯವಾಗಿ ಕಾಣಲು ನನಗೆ ಸಹಾಯಮಾಡಿತು.
ಆದರೆ, ಸೀಟಾಕ್ವಾರೊವಿನಲ್ಲಿ ಎರಡು ವರುಷಗಳನ್ನು ಕಳೆದ ನಂತರ ನನ್ನ ಸೆಟೆತವು ಪುನಃ ಹಿಂದಿರುಗಿತು. ತೀರ ಆಶಾಭಂಗ ಮತ್ತು ದುಃಖದಿಂದ ಹಾಗೂ ವೈದ್ಯಕೀಯ ಗಮನದ ಅಗತ್ಯದೊಂದಿಗೆ ನಾನು ನನ್ನ ಹೆತ್ತವರ ಬಳಿಗೆ ಹಿಂದಿರುಗಿದೆ. ನಾನು ಒಬ್ಬ ನರಶಸ್ತ್ರಜ್ಞರನ್ನು ಸಂಪರ್ಕಿಸಿದೆ. ಈ ಮುಂಚೆ ನಾನು ತೆಗೆದುಕೊಳ್ಳುತ್ತಿದ್ದ ಚಿಕಿತ್ಸೆಯು ನನ್ನ ಪಿತ್ತಜನಕಾಂಗಕ್ಕೆ ಹಾನಿಯನ್ನುಂಟುಮಾಡುತ್ತಿದೆ ಎಂದು ಅವರು ತಿಳಿಸಿದರು. ಆದರೆ ವಿಶೇಷಜ್ಞರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ನಮ್ಮ ಬಳಿ ಹಣವಿಲ್ಲದ ಕಾರಣ, ನಾನು ಇತರ ರೀತಿಯ ಚಿಕಿತ್ಸೆಗಾಗಿ ಹುಡುಕಲು ಆರಂಭಿಸಿದೆ. ನನ್ನ ಸ್ಥಿತಿಯು ತೀರ ಹದಗೆಡುತ್ತಾ ಹೋಯಿತು ಮತ್ತು ಈ ಕಾರಣ ನಾನು ಪಯನೀಯರ್ ಸೇವೆಯನ್ನು ನಿಲ್ಲಿಸಬೇಕಾಯಿತು. ಪ್ರತಿಯೊಂದು ಸೆಟೆತವು ಒಂದು ಮರುಕಳಿಕೆಯಾಗಿತ್ತು. ಆದರೆ ನಾನು ಕೀರ್ತನೆ ಪುಸ್ತಕವನ್ನು ಓದಿ, ಪ್ರಾರ್ಥನೆಯಲ್ಲಿ ಯೆಹೋವನ ಕಡೆಗೆ ತಿರುಗುವಾಗ, ಸಾಂತ್ವನ ಮತ್ತು ಬಲವನ್ನು ಪಡೆದುಕೊಂಡಂತಾಗುತ್ತಿತ್ತು.—ಕೀರ್ತನೆ 94:17-19.
ನನ್ನ ಗುರಿಯನ್ನು ತಲಪಿದೆ
ನನ್ನ ಅತಿ ಕಷ್ಟಕರವಾದ ಆ ಸಮಯದಲ್ಲಿ ನನಗೆ ದಿನಕ್ಕೆ ಎರಡು ಬಾರಿ ಸೆಟೆತಗಳು ಉಂಟಾಗುತ್ತಿದ್ದವು. ನಂತರ ನಾನು ಒಂದು ತಿರುಗುಬಿಂದುವನ್ನು ತಲಪಿದೆ. ಒಬ್ಬ ವೈದ್ಯರು ನನ್ನ ಮೂರ್ಛೆರೋಗಕ್ಕೆ ಒಂದು ವಿಶೇಷ ಚಿಕಿತ್ಸೆಯನ್ನು ನೀಡಿದರು ಮತ್ತು ಇದರಿಂದಾಗಿ ನನ್ನ ಆರೋಗ್ಯವು ಉತ್ತಮಗೊಳ್ಳಲು ಆರಂಭಿಸಿತು ಹಾಗೂ ದೀರ್ಘ ಕಾಲಾವಧಿಯ ವರೆಗೆ ನನಗೆ ಯಾವುದೇ ಸಮಸ್ಯೆಯುಂಟಾಗಲಿಲ್ಲ. ಆದುದರಿಂದ, 1995ರ ಸೆಪ್ಟೆಂಬರ್ 1ರಂದು ನಾನು ನನ್ನ ಪಯನೀಯರ್ ಸೇವೆಯನ್ನು ಪುನಃ ಆರಂಭಿಸಿದೆ. ಮುಂದಿನ ಎರಡು ವರುಷಗಳ ವರೆಗೆ ನನ್ನ ಆರೋಗ್ಯ ಸ್ಥಿರವಾಗಿದ್ದು ನನಗೆ ಒಮ್ಮೆಯೂ ಸೆಟೆತ ಉಂಟಾಗದಿದ್ದ ಕಾರಣ ನಾನು ವಿಶೇಷ ಪಯನೀಯರ್ ಸೇವೆಗೆ ಅರ್ಜಿ ಹಾಕಿದೆ. ಇದರ ಅರ್ಥ, ನಾನು ಶುಶ್ರೂಷೆಯಲ್ಲಿ ಹೆಚ್ಚು ಸಮಯ ವ್ಯಯಿಸಬೇಕಿತ್ತು ಮತ್ತು ಎಲ್ಲಿ ಅಗತ್ಯವಿದೆಯೊ ಅಲ್ಲಿಗೆ ಹೋಗಿ ಸೇವೆಸಲ್ಲಿಸಬೇಕಿತ್ತು. ನಾನು ವಿಶೇಷ ಪಯನೀಯರಳಾಗಿ ನೇಮಿಸಲ್ಪಟ್ಟಾಗ ನನಗಾದ ಆನಂದವನ್ನು ತುಸು ಕಲ್ಪಿಸಿಕೊಳ್ಳಿ! ನಾನು ಚಿಕ್ಕ ಹುಡುಗಿಯಾಗಿದ್ದಾಗ ಇಟ್ಟ ಗುರಿಯನ್ನು ಈಗ ತಲಪಿದೆ.
ಇಸವಿ 2001ರ ಏಪ್ರಿಲ್ 1ರಿಂದ, ಈಡಾಲ್‌ಗೊ ರಾಜ್ಯದ ಸೀಎರದಲ್ಲಿನ ಒಂದು ಸಣ್ಣ ಹಳ್ಳಿಯಲ್ಲಿ ನಾನು ನನ್ನ ಹೊಸ ನೇಮಕವನ್ನು ಆರಂಭಿಸಿದೆ. ಈಗ ನಾನು ಗ್ವಾನಹಾಟೊ ರಾಜ್ಯದಲ್ಲಿನ ಒಂದು ಸಣ್ಣ ಪಟ್ಟಣದಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಈಗಲೂ, ಮದ್ದುಗಳನ್ನು ಸೇವಿಸುವುದರಲ್ಲಿ ಮತ್ತು ಸಾಕಷ್ಟು ವಿರಾಮವನ್ನು ತೆಗೆದುಕೊಳ್ಳುವುದರಲ್ಲಿ ನಾನು ಬಹು ಜಾಗ್ರತೆಯಿಂದಿರಬೇಕಾಗಿದೆ. ನನ್ನ ಆಹಾರ ಪಥ್ಯದ ವಿಷಯದಲ್ಲಿಯೂ ನಾನು ಕಟ್ಟುನಿಟ್ಟಿನಿಂದಿರುತ್ತೇನೆ. ಮುಖ್ಯವಾಗಿ ಕೊಬ್ಬು, ಕ್ಯಾಫೀನ್ ಮತ್ತು ಡಬ್ಬಿ ಆಹಾರದ ವಿಷಯದಲ್ಲಿ ನಾನು ಹೆಚ್ಚು ಜಾಗ್ರತೆ ವಹಿಸುತ್ತೇನೆ. ಅಷ್ಟುಮಾತ್ರವಲ್ಲದೆ, ಕೋಪ ಅಥವಾ ಅತಿಯಾದ ಚಿಂತೆ ಈ ಮುಂತಾದ ತೀವ್ರ ಭಾವನೆಗಳನ್ನು ನಾನು ತಡೆಯುತ್ತೇನೆ. ಆದರೆ ಈ ರೀತಿಯ ಕಟ್ಟುನಿಟ್ಟಿನ ದಿನಚರಿಯು ನನಗೆ ಪ್ರಯೋಜನವನ್ನು ತಂದಿದೆ. ವಿಶೇಷ ಪಯನೀಯರಳಾಗಿ ನಾನು ಸೇವೆಸಲ್ಲಿಸುತ್ತಿರುವ ವರುಷಗಳಲ್ಲಿ ನನಗೆ ಕೇವಲ ಒಂದೇ ಬಾರಿ ಸೆಟೆತ ಉಂಟಾಗಿತ್ತು.
ನಾನು ಅವಿವಾಹಿತಳಾಗಿ ಯಾವುದೇ ಕುಟುಂಬ ಜವಾಬ್ದಾರಿಯನ್ನು ಹೊಂದಿರದ ಕಾರಣ, ವಿಶೇಷ ಪಯನೀಯರ್ ಸೇವೆಯನ್ನು ಮುಂದುವರಿಸುತ್ತಾ ಹೋಗಲು ಇಚ್ಛಿಸುತ್ತೇನೆ. ‘ನಮ್ಮ ಕೆಲಸವನ್ನೂ ಇದರಲ್ಲಿ ನಾವು ಯೆಹೋವನ ನಾಮದ ವಿಷಯವಾಗಿ ತೋರಿಸುವ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ’ ಎಂಬುದನ್ನು ತಿಳಿಯುವಾಗ ನನಗೆ ಸಾಂತ್ವನ ಸಿಗುತ್ತದೆ. ಆತನೆಂಥ ಪ್ರೀತಿಯ ದೇವರಾಗಿದ್ದಾನೆ. ನಮ್ಮಿಂದ ಏನನ್ನು ಮಾಡಲು ಸಾಧ್ಯವಿಲ್ಲವೊ ಅದನ್ನು ಆತನು ತಗಾದೆಮಾಡುವುದಿಲ್ಲ. ಸತ್ಯವನ್ನು ಸ್ವೀಕರಿಸಿದ ಕಾರಣ ನನ್ನ ಮನಸ್ಸನ್ನು ಸಮತೋಲನದಲ್ಲಿ ಇಡಲು ನನಗೆ ಸಾಧ್ಯವಾಗಿದೆ. ಒಂದುವೇಳೆ ನನ್ನ ಅನಾರೋಗ್ಯದಿಂದ ನಾನು ಪಯನೀಯರ್ ಸೇವೆಯನ್ನು ಪುನಃ ನಿಲ್ಲಿಸಬೇಕಾಗಿ ಬಂದರೆ, ಆಗಲೂ ನನ್ನ ಪೂರ್ಣಪ್ರಾಣದ ಸೇವೆಯಲ್ಲಿ ಯೆಹೋವನು ಸಂತೋಷಿಸುತ್ತಾನೆ ಎಂಬುದು ನನಗೆ ತಿಳಿದಿದೆ.—ಇಬ್ರಿಯ 6:10; ಕೊಲೊಸ್ಸೆ 3:23.
ಪ್ರತಿದಿನ ನನ್ನ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಿಸ್ಸಂಶಯವಾಗಿಯೂ ನನಗೆ ಬಲವನ್ನು ಒದಗಿಸುತ್ತದೆ. ಮಾತ್ರವಲ್ಲದೆ, ಭವಿಷ್ಯತ್ತಿನಲ್ಲಿ ದೇವರು ನಮಗಾಗಿ ಕಾದಿರಿಸಿರುವ ಆಶೀರ್ವಾದಗಳನ್ನು ಯಾವಾಗಲೂ ನನ್ನ ಕಣ್ಣ ಮುಂದೆಯೇ ಇಟ್ಟುಕೊಳ್ಳುವಂತೆಯೂ ಇದು ನನಗೆ ಸಹಾಯಮಾಡುತ್ತದೆ. ಹೊಸ ಲೋಕದಲ್ಲಿ ರೋಗವಿರುವುದಿಲ್ಲ, ‘ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಗುವುದು’ ಎಂಬುದಾಗಿ ಬೈಬಲ್ ವಾಗ್ದಾನಿಸುತ್ತದೆ.—ಪ್ರಕಟನೆ 21:3, 4; ಯೆಶಾಯ 33:24; 2 ಪೇತ್ರ 3:13. (g05 6/22)
[ಪುಟ 26ರಲ್ಲಿರುವ ಚಿತ್ರಗಳು]
ಸುಮಾರು 7 ವರ್ಷ ಪ್ರಾಯದಲ್ಲಿ (ಮೇಲೆ); ಸುಮಾರು 16ರ ಪ್ರಾಯ, ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡ ಸ್ವಲ್ಪ ಸಮಯದ ಬಳಿಕ
[ಪುಟ 27ರಲ್ಲಿರುವ ಚಿತ್ರ]
ಒಬ್ಬ ಸ್ನೇಹಿತಳೊಂದಿಗೆ ಸಾರುವುದು