ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಯಾವ ಚಲನಚಿತ್ರಗಳನ್ನು ನೋಡುವಿರಿ?

ನೀವು ಯಾವ ಚಲನಚಿತ್ರಗಳನ್ನು ನೋಡುವಿರಿ?

ನೀವು ಯಾವ ಚಲನಚಿತ್ರಗಳನ್ನು ನೋಡುವಿರಿ?

ಇತ್ತೀಚಿನ ದಶಕಗಳಲ್ಲಿ, ಚಲನಚಿತ್ರಗಳು ಅಥವಾ ಟೆಲಿವಿಷನ್‌ ಕಾರ್ಯಕ್ರಮಗಳಲ್ಲಿ ಯಥೇಷ್ಟವಾಗಿ ತೋರಿಸಲಾಗುತ್ತಿರುವ ಸೆಕ್ಸ್‌ ಮತ್ತು ಹಿಂಸಾಕೃತ್ಯದ ದೃಶ್ಯಗಳು, ಹಾಗೂ ಉಪಯೋಗಿಸಲಾಗುತ್ತಿರುವ ಅಶ್ಲೀಲ ಭಾಷೆಯ ಕುರಿತು ವಿಭಿನ್ನವಾದ ಪ್ರತಿಕ್ರಿಯೆಗಳು ತೋರಿಬರುತ್ತಿವೆ. ಒಂದು ನಿರ್ದಿಷ್ಟ ಸೆಕ್ಸ್‌ದೃಶ್ಯವನ್ನು ತೀರ ಕೀಳ್ಮಟ್ಟದ್ದಾಗಿದೆ ಎಂದು ಕೆಲವರು ಹೇಳುವಾಗ, ಇನ್ನಿತರರು ಅದು ಕಲಾ ಸೌಂದರ್ಯವಾಗಿದೆ ಎಂದು ವಾದಿಸುತ್ತಾರೆ. ಚಲನಚಿತ್ರದಲ್ಲಿರುವ ಹಿಂಸಾಕೃತ್ಯಗಳು ಅನಗತ್ಯವಾದವುಗಳು ಎಂದು ಕೆಲವರು ಹೇಳುವಾಗ, ಇನ್ನಿತರರು ಅವು ಸಮಂಜಸವಾಗಿವೆ ಎಂಬುದಾಗಿ ಹೇಳುತ್ತಾರೆ. ಚಲನಚಿತ್ರದಲ್ಲಿರುವ ಡಯಲಾಗ್‌ಗಳಿಗೆ ಅಶ್ಲೀಲ ಭಾಷೆಯನ್ನು ಸೇರಿಸುವುದನ್ನು ಕೆಲವರು ಅಸಹ್ಯಕರ ಎಂದು ಹೇಳುವಾಗ, ಇನ್ನಿತರರು ಅದು ವಾಸ್ತವಿಕವಾಗಿದೆ ಎಂದು ವಾದಿಸುತ್ತಾರೆ. ಯಾವುದನ್ನು ಒಬ್ಬ ವ್ಯಕ್ತಿಯು ಅಶ್ಲೀಲ ಭಾಷೆ ಎಂಬುದಾಗಿ ಕರೆಯುತ್ತಾನೊ ಅದನ್ನು ಇನ್ನೊಬ್ಬನು ವಾಕ್‌ ಸ್ವಾತಂತ್ರ್ಯ ಎಂದು ಕರೆಯುತ್ತಾನೆ. ಇಂಥ ಎರಡೂ ಪಕ್ಷಗಳ ವಾದಗಳನ್ನು ಒಬ್ಬ ವ್ಯಕ್ತಿಯು ಆಲಿಸುವುದಾದರೆ, ಇದೊಂದು ಶಬ್ದಾರ್ಥ ಚರ್ಚೆ ಎಂಬಂತೆ ಅವನಿಗೆ ತೋರಬಹುದು.

ಆದರೆ ಚಲನಚಿತ್ರದಲ್ಲಿ ನೋಡುವ ಮತ್ತು ಆಲಿಸುವ ವಿಷಯಗಳು ಚರ್ಚಿಸಲು ಬರೀ ಕ್ಷುಲ್ಲಕವಾಗಿರುವ ವಿಷಯಗಳಾಗಿರುವುದಿಲ್ಲ. ಇವು ನಿಜವಾಗಿಯೂ ಚಿಂತನೆಯ ವಿಷಯಗಳಾಗಿವೆ. ಕೇವಲ ಹೆತ್ತವರಿಗೆ ಮಾತ್ರವಲ್ಲ, ನೈತಿಕ ಮಟ್ಟಗಳನ್ನು ಗಣ್ಯಮಾಡುವವರೆಲ್ಲರಿಗೂ ಇವು ಚಿಂತನೆಯ ವಿಷಯಗಳಾಗಿವೆ. ಒಬ್ಬಾಕೆ ಸ್ತ್ರೀ ಪ್ರಲಾಪಿಸುವುದು: “ಚಿತ್ರಮಂದಿರಕ್ಕೆ ಹೋಗಬಾರದೆಂಬ ನನ್ನ ಉತ್ತಮ ನಿರ್ಣಯವನ್ನು ಯಾವಾಗೆಲ್ಲ ನಾನು ಮುರಿದು ಅಲ್ಲಿಗೆ ಹೋಗುತ್ತೇನೊ ಆಗೆಲ್ಲ ನಾನು ಚಲನಚಿತ್ರವನ್ನು ವೀಕ್ಷಿಸಿ ಹಿಂದೆ ಬರುವಾಗ ನನ್ನ ಬಗ್ಗೆ ನನಗೆ ಹೇಯ ಅನಿಸಿಕೆಯಾಗುತ್ತದೆ. ಈ ರೀತಿಯ ಚಲನಚಿತ್ರಗಳನ್ನು ತಯಾರಿಸಿರುವ ಜನರ ಬಗ್ಗೆ ಮತ್ತು ಸ್ವತಃ ನನ್ನ ಬಗ್ಗೆಯೇ ನಾನು ನಾಚಿಕೆಪಡುತ್ತೇನೆ. ನಾನೇನನ್ನು ವೀಕ್ಷಿಸಿದೆನೋ ಅಂಥ ವಿಚಾರಗಳು ನನ್ನ ವ್ಯಕ್ತಿತ್ವವನ್ನೇ ಕೀಳ್ಮಟ್ಟಕ್ಕೆ ಕೊಂಡೊಯ್ದವು ಎಂದು ನನಗನಿಸುತ್ತದೆ.”

ಮಟ್ಟಗಳನ್ನು ಸ್ಥಾಪಿಸುವುದು

ಚಲನಚಿತ್ರದಲ್ಲಿರುವ ವಿಷಯಗಳ ಕಡೆಗಿನ ಚಿಂತೆಯು ಒಂದು ಹೊಸ ವಿಚಾರವಲ್ಲ. ಚಲನಚಿತ್ರದ ಆರಂಭದ ದಿವಸಗಳಲ್ಲಿಯೂ, ತೆರೆಯಲ್ಲಿ ತೋರಿಸಲ್ಪಡುವ ಲೈಂಗಿಕ ವಿಚಾರಗಳು ಮತ್ತು ಹಿಂಸಾತ್ಮಕ ಅಂಶಗಳ ಕಡೆಗೆ ಕೋಪೋದ್ರೇಕವನ್ನು ವ್ಯಕ್ತಪಡಿಸಲಾಗುತ್ತಿತ್ತು. ಅಂತಿಮವಾಗಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ 1930ರಲ್ಲಿ, ಚಲನಚಿತ್ರಗಳಲ್ಲಿ ಏನನ್ನು ಪ್ರದರ್ಶಿಸಬಹುದು ಎಂಬ ವಿಷಯದಲ್ಲಿ ತೀರ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರಲಾಯಿತು.

ದ ನ್ಯೂ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕಗನುಸಾರ ಈ ಹೊಸ ನಿಯಮವು ಚಲನಚಿತ್ರಗಳಿಗೆ ಒಂದು “ವಿಪರೀತ ತಡೆಗಟ್ಟಾಗಿತ್ತು. ಸಾಮಾನ್ಯ ವಯಸ್ಕ ಮಾನವನ ಅನುಭವಕ್ಕೆ ಸಂಬಂಧಪಟ್ಟ ಯಾವುದೇ ವಿಷಯವನ್ನು ತೆರೆಯ ಮೇಲೆ ತೋರಿಸುವುದನ್ನು ಮತ್ತು ‘ಕಾಮೋದ್ರೇಕ ದೃಶ್ಯಗಳ’ ಪ್ರದರ್ಶನವನ್ನು ಅದು ನಿಷೇಧಿಸಿತ್ತು. ವ್ಯಭಿಚಾರ, ನಿಷಿದ್ಧ ಲೈಂಗಿಕ ಸಂಬಂಧ, ಮೋಹಜಾಲ ಮತ್ತು ಅತ್ಯಾಚಾರ ಈ ಮುಂತಾದವುಗಳನ್ನು ಪ್ರಸ್ತಾಪಿಸಲು ಸಹ ಅನುಮತಿಯಿರಲಿಲ್ಲ. ಒಂದುವೇಳೆ ಇಂಥ ದೃಶ್ಯಗಳು ಅತ್ಯಾವಶ್ಯಕವಾಗಿದ್ದಲ್ಲಿ ಅದನ್ನು ಪ್ರದರ್ಶಿಸಬಹುದಾಗಿತ್ತಾದರೂ ಚಲನಚಿತ್ರದ ಅಂತ್ಯದಲ್ಲಿ ಅಂಥ ವಿಷಯಗಳನ್ನು ಮಾಡಿದ ವ್ಯಕ್ತಿಗೆ ಕಠಿನ ಶಿಕ್ಷೆ ವಿಧಿಸಲ್ಪಡುವುದನ್ನು ಚಿತ್ರೀಕರಿಸಬೇಕಿತ್ತು.”

ಹಿಂಸಾಚಾರದ ವಿಷಯದಲ್ಲಿಯಾದರೋ, ಚಲನಚಿತ್ರದಲ್ಲಿ “ಶಸ್ತ್ರಗಳನ್ನು ತೋರಿಸುವುದು ಅಥವಾ ಅದರ ಕುರಿತು ಚರ್ಚಿಸುವುದು ಸಹ ನಿಷೇಧಿಸಲ್ಪಟ್ಟಿತ್ತು. ಅಷ್ಟುಮಾತ್ರವಲ್ಲದೆ, ಪಾತಕದ ವಿವರಗಳನ್ನು ತೋರಿಸುವುದು, ನಿಯಮವನ್ನು ಸ್ಥಾಪಿಸುವ ಅಧಿಕಾರಿಗಳು ದುಷ್ಕರ್ಮಿಗಳ ಕೈಯಿಂದ ಹತರಾಗುವ ದೃಶ್ಯವನ್ನು ತೋರಿಸುವುದು, ಅತಿರೇಕವಾದ ಕ್ರೂರತ್ವ ಇಲ್ಲವೆ ಕಗ್ಗೊಲೆಯನ್ನು ತೋರಿಸುವುದು ಅಥವಾ ತೀರ ಅಗತ್ಯವಾಗಿರುವ ಸನ್ನಿವೇಶವನ್ನು ಹೊರತುಪಡಿಸಿ ಇತರ ಸಂದರ್ಭದಲ್ಲಿ ಕೊಲೆ ಇಲ್ಲವೆ ಆತ್ಮಹತ್ಯೆಯ ದೃಶ್ಯಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿತ್ತು. . . . ಯಾವುದೇ ಸಂದರ್ಭದಲ್ಲಿ ಪಾತಕವನ್ನು ಸಮರ್ಥಿಸುವಂತೆ ಪ್ರದರ್ಶಿಸಲು ಸಾಧ್ಯವಿರಲಿಲ್ಲ.” ಸಂಕ್ಷಿಪ್ತವಾಗಿ ಹೇಳಬೇಕಾದರೆ, “ವೀಕ್ಷಕರ ನೈತಿಕ ಮಟ್ಟಗಳನ್ನು ಕುಂಠಿತಗೊಳಿಸುವಂಥ ಯಾವುದೇ ಚಲನಚಿತ್ರವನ್ನು ತಯಾರಿಸಬಾರದು” ಎಂಬುದನ್ನೇ ಈ ಹೊಸ ನಿಯಮವು ತಿಳಿಸುತ್ತಿತ್ತು.

ನಿಷೇಧಗಳಿಂದ ರೇಟಿಂಗ್‌ಗಳಿಗೆ

ಇಸವಿ 1950ರಷ್ಟಕ್ಕೆ ಅನೇಕ ಹಾಲಿವುಡ್‌ ಚಿತ್ರಗಳ ನಿರ್ಮಾಪಕರು ಈ ನಿಯಮವನ್ನು ಗಣ್ಯಮಾಡುತ್ತಿರಲಿಲ್ಲ. ಇದು ತೀರ ಹಳೆಯ ಕಾಲದ ನಿಯಮ ಎಂದು ಅವರು ಭಾವಿಸುತ್ತಿದ್ದರು. ಆದುದರಿಂದಲೇ, 1968ರಲ್ಲಿ ಈ ನಿಯಮವನ್ನು ತೆಗೆದುಹಾಕಿ ಅದರ ಸ್ಥಳದಲ್ಲಿ ರೇಟಿಂಗ್‌ ಪದ್ಧತಿಯನ್ನು ಜಾರಿಗೆ ತರಲಾಯಿತು. * ರೇಟಿಂಗ್‌ ಪದ್ಧತಿಯಿಂದಾಗಿ ಚಲನಚಿತ್ರದಲ್ಲಿ ಯಾವುದೇ ವಿಷಯಗಳನ್ನು ಪ್ರದರ್ಶಿಸಸಾಧ್ಯವಿತ್ತು, ಆದರೆ ಅದು ಯಾವ ದರ್ಜೆಗೆ ಸೇರಿದೆ ಎಂಬುದನ್ನು ಗುರುತಿಸಲು ಅದಕ್ಕೆ ಲೇಬಲ್‌ಗಳನ್ನು ಹಾಕಲಾಗುತ್ತಿತ್ತು. ಇದರಿಂದಾಗಿ ಒಂದು ಚಲನಚಿತ್ರದಲ್ಲಿ “ವಯಸ್ಕರಿಗೆ” ಸಂಬಂಧಿಸಿದ ವಿಷಯಗಳು ಎಷ್ಟಿವೆ ಎಂಬುದನ್ನು ಸಾರ್ವಜನಿಕರು ಮುಂಚಿತವಾಗಿಯೇ ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತು. ಅಮೆರಿಕದ ಚಲನಚಿತ್ರ ಸಂಘದ ಅಧ್ಯಕ್ಷರಾಗಿ ಸುಮಾರು ನಾಲ್ಕು ದಶಕಗಳ ವರೆಗೆ ಸೇವೆಸಲ್ಲಿಸಿದ ಜ್ಯಾಕ್‌ ವ್ಯಾಲೆಂಟೀಗನುಸಾರ ರೇಟಿಂಗ್‌ ಪದ್ಧತಿಯ ಗುರಿಯು, “ತಮ್ಮ ಮಕ್ಕಳು ಯಾವ ಚಲನಚಿತ್ರವನ್ನು ನೋಡಬೇಕು ಮತ್ತು ಯಾವುದನ್ನು ನೋಡಬಾರದು ಎಂಬುದನ್ನು ಹೆತ್ತವರು ನಿರ್ಧರಿಸಶಕ್ತರಾಗುವಂತೆ ಅವರಿಗೆ ಕೆಲವು ಮುನ್ನೆಚ್ಚರಿಕೆಯನ್ನು ನೀಡುವುದೇ” ಆಗಿತ್ತು.

ರೇಟಿಂಗ್‌ ಪದ್ಧತಿಯು ಜಾರಿಗೆ ಬಂದ ಸಮಯದಿಂದ ಎಲ್ಲ ತಡೆಗಳು ತೆಗೆಯಲ್ಪಟ್ಟವು. ಸೆಕ್ಸ್‌, ಹಿಂಸಾಕೃತ್ಯ ಮತ್ತು ಅಶ್ಲೀಲ ಭಾಷೆ ಈ ಮುಂತಾದವುಗಳು ಪ್ರಧಾನ ಹಾಲಿವುಡ್‌ ಚಿತ್ರಗಳ ಕಥಾಲಿಪಿಪ್ರತಿಯೊಳಗೆ ಪ್ರವಾಹದಂತೆ ಬರತೊಡಗಿದವು. ಚಲನಚಿತ್ರ ತಯಾರಕರಿಗೆ ನೀಡಲ್ಪಟ್ಟ ಹೊಸ ಸ್ವಾತಂತ್ರ್ಯವು ತಡೆಹಿಡಿಯಲಾರದ ಸುನಾಮಿ ಅಲೆಗಳನ್ನೇ ಬಿಡುಗಡೆಮಾಡಿತು. ಹಾಗಿದ್ದರೂ, ರೇಟಿಂಗ್‌ ಪದ್ಧತಿಯ ಮೂಲಕ ಸಾರ್ವಜನಿಕರನ್ನು ಮುನ್ನೆಚ್ಚರಿಸಬಹುದು. ಆದರೆ ರೇಟಿಂಗ್‌ ನೀವು ತಿಳಿಯಬಯಸುವ ಎಲ್ಲವನ್ನೂ ತಿಳಿಸುತ್ತದೊ?

ರೇಟಿಂಗ್‌ಗಳು ನಿಮಗೆ ತಿಳಿಸಲು ಅಸಾಧ್ಯವಾದ ವಿಷಯಗಳು

ವರುಷಗಳು ದಾಟಿದಂತೆ ಈ ರೇಟಿಂಗ್‌ ಪದ್ಧತಿಯು ತೀರ ಸಡಿಲವಾಗುತ್ತಿದೆ ಎಂದು ಕೆಲವರು ಭಾವಿಸುತ್ತಾರೆ. ಇವರ ಈ ಅನಿಸಿಕೆಯನ್ನು ಸಾರ್ವಜನಿಕ ಆರೋಗ್ಯದ ಹಾರ್ವರ್ಡ್‌ ಶಾಲೆಯಿಂದ ನಡೆಸಲ್ಪಟ್ಟ ಅಧ್ಯಯನವು ಬೆಂಬಲಿಸುತ್ತದೆ. ಆ ಅಧ್ಯಯನವು ಪ್ರಕಟಪಡಿಸಿದ್ದೇನೆಂದರೆ, ಯುವ ಹದಿಹರೆಯದವರಿಗೆ ಸೂಕ್ತವಾಗಿದೆ ಎಂದು ಹೇಳಲಾಗಿರುವ ಚಲನಚಿತ್ರಗಳಲ್ಲಿ, ಕೇವಲ ಒಂದು ದಶಕದ ಹಿಂದಿನ ಚಲನಚಿತ್ರಗಳಲ್ಲಿ ಇರುವುದಕ್ಕಿಂತಲೂ ಬಹಳಷ್ಟು ಹೆಚ್ಚು ಹಿಂಸಾಕೃತ್ಯಗಳ ದೃಶ್ಯಗಳು ಮತ್ತು ಲೈಂಗಿಕವಾಗಿ ಅಸಭ್ಯವಾದ ದೃಶ್ಯಗಳು ಕಂಡುಬಂದಿವೆ. ಕೊನೆಯಲ್ಲಿ ಈ ಅಧ್ಯಯನವು ತಿಳಿಸಿದ್ದೇನೆಂದರೆ, “ಒಂದೇ ರೀತಿಯ ರೇಟಿಂಗನ್ನು ಹೊಂದಿರುವ ಚಲನಚಿತ್ರಗಳಲ್ಲಿ ಅಸಭ್ಯವಾದ ದೃಶ್ಯಗಳ ಸಂಖ್ಯೆ ಮತ್ತು ವಿಧಗಳು ವ್ಯತ್ಯಾಸವಾಗಿರುತ್ತವೆ” ಮತ್ತು “ವಯಸ್ಸಿನ ಮೇಲಾಧಾರಿತವಾದ ರೇಟಿಂಗ್‌ ಮಾತ್ರವೇ ಒಂದು ಚಲನಚಿತ್ರದಲ್ಲಿರುವ ಹಿಂಸಾಕೃತ್ಯಗಳು, ಸೆಕ್ಸ್‌, ಅಶ್ಲೀಲ ಭಾಷೆ ಮತ್ತು ಇತರ ವಿಚಾರಗಳ ಕುರಿತಾಗಿ ಸಾಕಷ್ಟು ಮಾಹಿತಿಯನ್ನು ನೀಡಲಾರದು.” *

ಯಾವುದೇ ಮುನ್ನೆಚ್ಚರಿಕೆ ವಹಿಸದೆ ಮಕ್ಕಳನ್ನು ಚಲನಚಿತ್ರ ನೋಡುವಂತೆ ಕಳುಹಿಸುವ ಹೆತ್ತವರು, ಇಂದಿನ ಲೋಕದಲ್ಲಿ ಯಾವುದನ್ನು ಸೂಕ್ತವಾದ ವಿಷಯವೆಂದು ಪರಿಗಣಿಸಲಾಗುತ್ತಿದೆ ಎಂಬುದರ ಕುರಿತು ತಿಳಿಯದಿರಬಹುದು. ಉದಾಹರಣೆಗೆ, ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಹದಿವಯಸ್ಕರಿಗೆ ವೀಕ್ಷಿಸಲು ಸೂಕ್ತವಾಗಿದೆ ಎಂದು ರೇಟಿಂಗ್‌ ಮಾಡಲ್ಪಟ್ಟಿರುವ ಒಂದು ಚಲನಚಿತ್ರದಲ್ಲಿನ ಮುಖ್ಯ ನಟಿಯ ಪಾತ್ರದ ಕುರಿತು ಒಬ್ಬ ಚಲನಚಿತ್ರ ವಿಮರ್ಶಕನು ತಿಳಿಸುತ್ತಾನೆ. ಅವಳು “ಪ್ರತಿ ದಿನ ಕುಡಿಕತನ, ಕಾನೂನುಬಾಹಿರ ಅಮಲೌಷಧ ಸೇವನೆ, ವಿಷಯ ಲಂಪಟತೆಯ ಪಾರ್ಟಿಗಳಲ್ಲಿ ಭಾಗವಹಿಸುವ ಮತ್ತು ಒಬ್ಬ ಹುಡುಗನನ್ನು ಭೇಟಿಯಾದ ಕ್ಷಣವೇ ಅವನೊಂದಿಗೆ ವಿಕೃತ ಲೈಂಗಿಕ ಸಂಬಂಧದಲ್ಲಿ ಒಳಗೂಡುವ ಸ್ವತಂತ್ರಪರ ಆತ್ಮದವಳಾದ 17 ವರುಷದವಳಾಗಿದ್ದಾಳೆ.” ಇಂಥ ರೀತಿಯ ವಿಷಯಗಳು ಚಲನಚಿತ್ರದಲ್ಲಿ ಸರ್ವಸಾಮಾನ್ಯವಾಗಿವೆ. ಮೌಖಿಕ ಸಂಭೋಗದ ಉಲ್ಲೇಖವು ಈಗ ಚಲನಚಿತ್ರಗಳಲ್ಲಿ “ಯಾವಾಗಲೂ ಸ್ವೀಕಾರಾರ್ಹವಾದ” ಸಂಗತಿಯಾಗಿದೆ ಮತ್ತು ಇದನ್ನು ಹದಿವಯಸ್ಕರಿಗೆ ಸೂಕ್ತವಾದದ್ದು ಎಂದು ರೇಟಿಂಗ್‌ ಮಾಡಲಾಗುತ್ತದೆ ಎಂದು ದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯು ತಿಳಿಸುತ್ತದೆ. ಒಂದು ಚಲನಚಿತ್ರದಲ್ಲಿ ಅಡಕವಾಗಿರುವ ವಿಷಯಗಳನ್ನು ತೂಗಿನೋಡಲು ರೇಟಿಂಗ್‌ ಏಕಮಾತ್ರ ಅಂಶವಾಗಿರಬಾರದು ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕಿಂತ ಉತ್ತಮವಾದ ಮಾರ್ಗದರ್ಶಿ ಲಭ್ಯವಿದೆಯೊ?

“ಕೆಟ್ಟತನವನ್ನು ಹಗೆಮಾಡಿರಿ”

ರೇಟಿಂಗ್‌ ಪದ್ಧತಿಯು ಒಂದು ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಗೆ ಬದಲಿಯಾಗಿರುವುದಿಲ್ಲ. ಕ್ರೈಸ್ತರು, ಮನೋರಂಜನೆಗೆ ಸಂಬಂಧಿಸಿದ ವಿಷಯಗಳನ್ನು ಸೇರಿಸಿ ತಮ್ಮ ಎಲ್ಲ ನಿರ್ಣಯಗಳಲ್ಲಿ “ಕೆಟ್ಟತನವನ್ನು ಹಗೆಮಾಡಿರಿ” ಎಂಬ, ಬೈಬಲಿನ ಕೀರ್ತನೆ 97:10ರಲ್ಲಿ ಕಂಡುಬರುವ ಸಲಹೆಯನ್ನು ಅನ್ವಯಿಸಲು ಹೆಣಗಾಡಬೇಕು. ಕೆಟ್ಟತನವನ್ನು ಹಗೆಮಾಡುವ ಒಬ್ಬ ವ್ಯಕ್ತಿಯು, ದೇವರು ಹಗೆಮಾಡುವ ವಿಷಯಗಳಿಂದ ಮನರಂಜಿಸಲ್ಪಡುವುದನ್ನು ತಪ್ಪೆಂದು ಪರಿಗಣಿಸುತ್ತಾನೆ.

ಹೆತ್ತವರು ತಮ್ಮ ಮಕ್ಕಳು ವೀಕ್ಷಿಸುವಂತೆ ಅನುಮತಿಸುವ ಚಲನಚಿತ್ರದ ಕುರಿತಾಗಿ ಮುಖ್ಯವಾಗಿ ಬಹಳ ಜಾಗ್ರತೆವಹಿಸಬೇಕು. ಕೇವಲ ರೇಟಿಂಗನ್ನು ನೋಡುವುದು ಬಹಳ ತಪ್ಪಾಗಿದೆ. ನಿಮ್ಮ ಮಕ್ಕಳ ವಯಸ್ಸಿಗೆ ಸೂಕ್ತವಾಗಿದೆ ಎಂದು ರೇಟಿಂಗ್‌ ಮಾಡಲ್ಪಟ್ಟಿರುವ ಚಲನಚಿತ್ರದಲ್ಲಿ ಹೆತ್ತವರಾದ ನೀವು ಅಂಗೀಕರಿಸದಂಥ ಕೆಲವು ಮಟ್ಟಗಳಿರಬಹುದು. ಇದು ಕ್ರೈಸ್ತರಿಗೆ ಒಂದು ಆಶ್ಚರ್ಯದ ಸಂಗತಿಯೇನಲ್ಲ, ಏಕೆಂದರೆ ಈ ಲೋಕವು ದೈವಿಕ ಮಟ್ಟಗಳಿಗೆ ವಿರುದ್ಧವಾಗಿರುವ ಆಲೋಚನಾ ರೀತಿ ಮತ್ತು ಕೃತ್ಯಗಳನ್ನು ತನ್ನದಾಗಿಸಿಕೊಂಡಿದೆ. *​—⁠ಎಫೆಸ 4:​17, 18; 1 ಯೋಹಾನ 2:​15-17.

ಇದರ ಅರ್ಥ ಎಲ್ಲ ಚಲನಚಿತ್ರಗಳು ಕೆಟ್ಟವುಗಳಾಗಿವೆ ಎಂದಲ್ಲ. ಆದರೆ ಜಾಗರೂಕರಾಗಿರುವುದು ಬಹಳ ಪ್ರಾಮುಖ್ಯ. ಈ ವಿಷಯದ ಕುರಿತಾಗಿ ಜೂನ್‌ 8, 1997ರ ಎಚ್ಚರ! ಸಂಚಿಕೆಯು ಈ ಹೇಳಿಕೆಯನ್ನು ಮಾಡಿತ್ತು: “ಪ್ರತಿಯೊಬ್ಬ ವ್ಯಕ್ತಿಯು ವಿಷಯಗಳನ್ನು ಜಾಗರೂಕವಾಗಿ ತೂಗಿನೋಡಿ, ದೇವರು ಮತ್ತು ಮನುಷ್ಯನ ಮುಂದೆ ಶುದ್ಧವಾದ ಮನಸ್ಸಾಕ್ಷಿಯುಳ್ಳವನಾಗಿರುವಂತೆ ಅವನನ್ನು ಅನುಮತಿಸುವ ನಿರ್ಣಯಗಳನ್ನು ಮಾಡಬೇಕು.”​—⁠1 ಕೊರಿಂಥ 10:31-33.

ಸೂಕ್ತವಾದ ಮನೋರಂಜನೆಯನ್ನು ಕಂಡುಕೊಳ್ಳುವುದು

ಕುಟುಂಬವಾಗಿ ಯಾವ ಚಲನಚಿತ್ರವನ್ನು ನೋಡಬೇಕೆಂಬುದನ್ನು ನಿರ್ಣಯಿಸುವಾಗ ಹೆತ್ತವರು ಹೇಗೆ ಆಯ್ಕೆಮಾಡಸಾಧ್ಯವಿದೆ? ಲೋಕದ ಸುತ್ತಲಿರುವ ಹೆತ್ತವರು ಮಾಡಿರುವ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ. ಇವು, ನಿಮ್ಮ ಕುಟುಂಬಕ್ಕೆ ಹಿತಕರವಾದ ಮನೋರಂಜನೆಯನ್ನು ಒದಗಿಸಲು ನೀವು ಪ್ರಯತ್ನಿಸುತ್ತಿರುವಾಗ ನಿಮಗೆ ಸಹಾಯಕರವಾಗಿರಬಹುದು.​—⁠14ನೇ ಪುಟದಲ್ಲಿರುವ “ಇತರ ರೀತಿಯ ಮನೋರಂಜನೆಗಳು” ಎಂಬ ಚೌಕವನ್ನು ಸಹ ನೋಡಿ.

ಸ್ಪೆಯಿನ್‌ನಲ್ಲಿರುವ ವಾನ್‌ ಎಂಬವನು ತಿಳಿಸುವುದು: “ನಮ್ಮ ಮಕ್ಕಳು ಚಿಕ್ಕವರಾಗಿದ್ದಾಗ ಅವರು ಚಲನಚಿತ್ರಕ್ಕೆ ಹೋಗುವಾಗೆಲ್ಲ ನಾನು ಅಥವಾ ನನ್ನ ಹೆಂಡತಿ ಅವರೊಂದಿಗೆ ಹೋಗುತ್ತಿದ್ದೆವು. ಅವರೆಂದಿಗೂ ಒಂಟಿಗರಾಗಿ ಅಥವಾ ಇತರ ಯುವ ಜನರೊಂದಿಗೆ ಹೋಗುತ್ತಿರಲಿಲ್ಲ. ಈಗ ಅವರು ಹದಿವಯಸ್ಕರಾಗಿದ್ದಾರೆ. ಅವರು ಚಲನಚಿತ್ರದ ಪ್ರಥಮ ಪ್ರದರ್ಶನಕ್ಕೆ ಹೋಗುವುದಿಲ್ಲ; ಬದಲಿಗೆ, ಚಲನಚಿತ್ರದ ಕುರಿತು ಟೀಕಾತ್ಮಕ ಹೇಳಿಕೆಗಳನ್ನು ಓದುವ ಅಥವಾ ನಾವು ಭರವಸೆಯಿಡುವ ಇತರ ಜನರ ಹೇಳಿಕೆಗಳನ್ನು ಕೇಳಿಸಿಕೊಳ್ಳುವ ತನಕ ನಾವು ಕಾಯಲು ಬಯಸುತ್ತೇವೆ. ನಂತರ, ಈ ಚಲನಚಿತ್ರವು ವೀಕ್ಷಿಸಲು ಯೋಗ್ಯವೊ ಎಂಬುದನ್ನು ನಾವು ಕುಟುಂಬವಾಗಿ ಚರ್ಚಿಸುತ್ತೇವೆ.”

ದಕ್ಷಿಣ ಆಫ್ರಿಕದಲ್ಲಿ ವಾಸಿಸುವ ಮಾರ್ಕ್‌, ಚಿತ್ರಮಂದಿರದಲ್ಲಿ ಯಾವ ಚಲನಚಿತ್ರವು ಪ್ರದರ್ಶಿಸಲ್ಪಡುತ್ತಿದೆಯೊ ಅದರ ಕುರಿತು ತನ್ನ ಹದಿಹರೆಯದ ಮಗನು ತನ್ನ ಅನಿಸಿಕೆಯನ್ನು ಯಾವುದೇ ಮುಚ್ಚುಮರೆಯಿಲ್ಲದೆ ತಿಳಿಸುವಂತೆ ಉತ್ತೇಜಿಸುತ್ತಾನೆ. ಮಾರ್ಕ್‌ ಹೇಳುವುದು: “ನಾನು ಮತ್ತು ನನ್ನ ಹೆಂಡತಿಯು ಚರ್ಚೆಯನ್ನು ಆರಂಭಿಸುತ್ತಿದ್ದೆವು. ಆಮೇಲೆ ಅವನ ಅಭಿಪ್ರಾಯವನ್ನು ಕೇಳುತ್ತಿದ್ದೆವು. ಇದು ನಮಗೆ ನಮ್ಮ ಮಗನ ಅನಿಸಿಕೆಗಳನ್ನು ತಿಳಿದುಕೊಳ್ಳಲು ಮತ್ತು ಅವನೊಂದಿಗೆ ತರ್ಕಿಸಲು ಸಾಧ್ಯಮಾಡಿತು. ಇದರ ಪರಿಣಾಮವಾಗಿ, ನಾವೆಲ್ಲರು ಒಟ್ಟಾಗಿ ಆನಂದಿಸಬಹುದಾದ ಚಲನಚಿತ್ರಗಳನ್ನು ನಾವು ಆಯ್ಕೆಮಾಡಶಕ್ತರಾದೆವು.”

ಬ್ರಸಿಲ್‌ನ ರೋಸಾರಿಯೊ ಸಹ ತನ್ನ ಮಕ್ಕಳೊಂದಿಗೆ ನೋಡಲು ಬಯಸುವ ಚಲನಚಿತ್ರಗಳ ಕುರಿತು ವಿಶ್ಲೇಷಿಸಲು ಸಮಯವನ್ನು ವ್ಯಯಿಸುತ್ತಾನೆ. ಅವನು ಹೇಳುವುದು: “ವಿಮರ್ಶಕರು ಆ ಚಲನಚಿತ್ರದ ಕುರಿತು ಏನು ಬರೆದಿದ್ದಾರೆಂದು ನಾನು ನನ್ನ ಮಕ್ಕಳೊಂದಿಗೆ ಓದುತ್ತೇನೆ. ನಾನು ಅವರೊಂದಿಗೆ ವಿಡಿಯೋ ಕ್ಯಾಸೆಟ್‌ಗಳ ಅಂಗಡಿಗೆ ಹೋಗುತ್ತೇನೆ ಮತ್ತು ಒಂದು ಚಲನಚಿತ್ರವು ಸೂಕ್ತವಾಗಿದೆಯೊ ಇಲ್ಲವೊ ಎಂಬುದನ್ನು ವಿಡಿಯೋ ಕ್ಯಾಸೆಟಿನ ಕವರನ್ನು ನೋಡಿ ಹೇಗೆ ತಿಳಿಯಸಾಧ್ಯವಿದೆ ಎಂಬುದನ್ನು ಅವರಿಗೆ ಕಲಿಸುತ್ತೇನೆ.”

ಬ್ರಿಟನಿನ ಮ್ಯಾಥ್ಯೂ, ತಾವು ನೋಡಲು ಬಯಸುವ ಚಲನಚಿತ್ರಗಳ ಕುರಿತು ತನ್ನ ಮಕ್ಕಳೊಂದಿಗೆ ಮಾತಾಡುವುದು ಪ್ರಯೋಜನಕಾರಿ ಎಂಬುದನ್ನು ಕಂಡುಕೊಂಡನು. ಅವನು ಹೇಳುವುದು: “ನಮ್ಮ ಮಕ್ಕಳು ಚಿಕ್ಕವರಿರುವಾಗಲಿಂದಲೇ, ಕುಟುಂಬವಾಗಿ ನಮಗೆ ಆಸಕ್ತಿಕರವಾಗಿರುವ ಚಲನಚಿತ್ರದಲ್ಲಿರುವ ವಿಷಯಗಳ ಕುರಿತು ಚರ್ಚಿಸುವಾಗ ಅವರನ್ನೂ ನಾವು ಒಳಗೂಡಿಸುತ್ತಿದ್ದೆವು. ಒಂದುವೇಳೆ ಒಂದು ನಿರ್ದಿಷ್ಟ ಚಲನಚಿತ್ರವನ್ನು ನಾವು ವೀಕ್ಷಿಸಬಾರದೆಂದು ನಿರ್ಧರಿಸಿರುವಲ್ಲಿ, ಬರೀ ಅದನ್ನು ನೋಡಬಾರದು ಎಂಬುದಾಗಿ ಹೇಳುವ ಬದಲು ಏಕೆ ನೋಡಬಾರದು ಎಂಬ ವಿವರಣೆಯನ್ನು ನಾನು ಮತ್ತು ನನ್ನ ಹೆಂಡತಿ ನೀಡುತ್ತಿದ್ದೆವು.”

ಇದಕ್ಕೆ ಕೂಡಿಸಿ, ಇಂಟರ್‌ನೆಟ್‌ನಲ್ಲಿ ಚಲನಚಿತ್ರಗಳ ಕುರಿತು ಸಂಶೋಧನೆಮಾಡುವುದು ಸಹಾಯಕಾರಿಯಾಗಿದೆ ಎಂದು ಕೆಲವು ಹೆತ್ತವರು ಕಂಡುಕೊಂಡಿದ್ದಾರೆ. ಚಲನಚಿತ್ರಗಳಲ್ಲಿರುವ ವಿಚಾರಗಳ ಕುರಿತು ಸವಿಸ್ತಾರವಾದ ವರದಿಯನ್ನು ನೀಡುವಂಥ ಅನೇಕ ವೆಬ್‌ ಸೈಟ್‌ಗಳಿವೆ. ಇದರ ಮೂಲಕವಾಗಿ ನಿರ್ದಿಷ್ಟ ಚಲನಚಿತ್ರದಲ್ಲಿ ಪ್ರೋತ್ಸಾಹಿಸಲ್ಪಟ್ಟಿರುವ ಮೌಲ್ಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಸಾಧ್ಯವಿದೆ.

ಶಿಕ್ಷಿತ ಮನಸ್ಸಾಕ್ಷಿಯ ಪ್ರಯೋಜನಗಳು

“ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿ”ದವರ ಕುರಿತು ಬೈಬಲ್‌ ಮಾತಾಡುತ್ತದೆ. (ಇಬ್ರಿಯ 5:14) ಹೆತ್ತವರ ಗುರಿಯು, ಮಕ್ಕಳಿಗೆ ತಮ್ಮ ಸ್ವಂತ ಮನೋರಂಜನೆಯನ್ನು ಆಯ್ಕೆಮಾಡುವ ಸ್ವಾತಂತ್ರ್ಯವಿರುವಾಗ ಅವರು ವಿವೇಕಪ್ರದವಾದ ನಿರ್ಣಯಗಳನ್ನು ಮಾಡಶಕ್ತರಾಗುವಂತೆ ಅವರಲ್ಲಿ ಸರಿಯಾದ ಮೌಲ್ಯಗಳನ್ನು ಬೇರೂರಿಸುವುದೇ ಆಗಿರಬೇಕು.

ಯೆಹೋವನ ಸಾಕ್ಷಿಗಳ ಮಧ್ಯೆಯಿರುವ ಅನೇಕ ಯುವ ಜನರು ತಮ್ಮ ಹೆತ್ತವರಿಂದ ಅತ್ಯುತ್ತಮವಾದ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಉದಾಹರಣೆಗೆ, ಯುನೈಟೆಡ್‌ ಸ್ಟೇಟ್ಸ್‌ನ ಬಿಲ್‌ ಮತ್ತು ಚೆರಿ ತಮ್ಮ ಇಬ್ಬರು ಹದಿಪ್ರಾಯದ ಗಂಡುಮಕ್ಕಳೊಂದಿಗೆ ಚಲನಚಿತ್ರಗಳಿಗೆ ಹೋಗುವುದರಲ್ಲಿ ಆನಂದಿಸುತ್ತಿದ್ದರು. ಬಿಲ್‌ ಹೇಳುವುದು: “ಅನೇಕವೇಳೆ ನಾವು ನಿರ್ದಿಷ್ಟ ಫಿಲ್ಮ್‌ನ ಕುರಿತು ಒಂದು ಕೌಟುಂಬಿಕ ಚರ್ಚೆಯಲ್ಲಿ ಒಳಗೂಡುತ್ತಿದ್ದೆವು. ಅದು ಯಾವ ಮೌಲ್ಯಗಳನ್ನು ಕಲಿಸಿತು ಮತ್ತು ಆ ಮೌಲ್ಯಗಳನ್ನು ನಾವು ಅಂಗೀಕರಿಸುತ್ತೇವೋ ಇಲ್ಲವೋ ಎಂಬುದರ ಕುರಿತು ಮಾತಾಡುತ್ತಿದ್ದೆವು.” ನಿಶ್ಚಯವಾಗಿಯೂ, ಇದರಲ್ಲಿ ಆಯ್ಕೆಮಾಡುವವರಾಗಿ ಇರುವುದರ ಆವಶ್ಯಕತೆಯನ್ನು ಬಿಲ್‌ ಮತ್ತು ಚೆರಿ ಮನಗಾಣುತ್ತಾರೆ. ಬಿಲ್‌ ಹೇಳುವುದು: “ನಿರ್ದಿಷ್ಟ ಚಲನಚಿತ್ರದ ಕುರಿತು ನಾವು ಮುಂಚಿತವಾಗಿಯೇ ಸಾಕಷ್ಟು ವಿಷಯಗಳನ್ನು ಓದಿ ತಿಳಿದುಕೊಂಡಿರುತ್ತೇವೆ, ಮತ್ತು ನಾವು ನಿರೀಕ್ಷಿಸದಂಥ ಯಾವುದೇ ಆಕ್ಷೇಪಣೀಯ ವಿಷಯವು ಇರುವಲ್ಲಿ, ಒಂದು ಫಿಲ್ಮ್‌ನಿಂದ ಮಧ್ಯದಲ್ಲೇ ಎದ್ದು ಹೊರಗೆ ಬರಲು ನಾವು ಮುಜುಗರಪಡುವುದಿಲ್ಲ.” ಜವಾಬ್ದಾರಿಯುತ ನಿರ್ಣಯವನ್ನು ಮಾಡುವುದರಲ್ಲಿ ತಮ್ಮ ಮಕ್ಕಳನ್ನೂ ಒಳಗೂಡಿಸುವ ಮೂಲಕ, ಒಳ್ಳೇದು ಮತ್ತು ಕೆಟ್ಟದ್ದರ ಗಹನವಾದ ಪರಿಜ್ಞಾನವನ್ನು ಬೆಳೆಸಿಕೊಳ್ಳುವಂತೆ ತಮ್ಮ ಗಂಡುಮಕ್ಕಳಿಗೆ ಸಹಾಯಮಾಡುತ್ತಿದ್ದೇವೆ ಎಂದು ಬಿಲ್‌ ಮತ್ತು ಚೆರಿಗೆ ಅನಿಸುತ್ತದೆ. ಬಿಲ್‌ ಹೇಳುವುದು: “ತಾವು ಯಾವ ಚಲನಚಿತ್ರವನ್ನು ನೋಡಲು ಬಯಸುತ್ತೇವೆ ಎಂಬುದನ್ನು ಆಯ್ಕೆಮಾಡುವ ವಿಷಯದಲ್ಲಿ ಅವರು ಹೆಚ್ಚು ವಿವೇಕಭರಿತ ನಿರ್ಣಯಗಳನ್ನು ಮಾಡುತ್ತಿದ್ದಾರೆ.”

ಬಿಲ್‌ ಮತ್ತು ಚೆರಿಯಂತೆ ಅನೇಕರು ಮನೋರಂಜನೆಯ ವಿಷಯದಲ್ಲಿ ತಮ್ಮ ಜ್ಞಾನೇಂದ್ರಿಯಗಳನ್ನು ಶಿಕ್ಷಿಸಿಕೊಂಡಿದ್ದಾರೆ. ಚಿತ್ರೋದ್ಯಮದಲ್ಲಿ ತಯಾರಿಸಲ್ಪಡುವ ಹೆಚ್ಚಿನ ಚಲನಚಿತ್ರಗಳು ವೀಕ್ಷಿಸಲು ಯೋಗ್ಯವಾದವುಗಳಲ್ಲ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಇನ್ನೊಂದು ಬದಿಯಲ್ಲಿ, ಕ್ರೈಸ್ತರು ಬೈಬಲ್‌ ಮೂಲತತ್ತ್ವಗಳಿಂದ ಮಾರ್ಗದರ್ಶಿಸಲ್ಪಡುವಾಗ ಹಿತಕರವಾದ ಮತ್ತು ಆಹ್ಲಾದಕರವಾದ ಉತ್ತಮ ಮನೋರಂಜನೆಯಲ್ಲಿ ಆನಂದಿಸುತ್ತಾರೆ. (g05 5/8)

[ಪಾದಟಿಪ್ಪಣಿಗಳು]

^ ಲೋಕದ ಸುತ್ತಲಿರುವ ಅನೇಕ ದೇಶಗಳು ಈ ಪದ್ಧತಿಯನ್ನು ಅನುಸರಿಸಿವೆ. ಇದರಲ್ಲಿ, ಒಂದು ಚಲನಚಿತ್ರವು ಯಾವ ವಯಸ್ಸಿನ ಜನರಿಗೆ ಸೂಕ್ತವಾಗಿದೆ ಎಂಬುದನ್ನು ಸೂಚಿಸುವ ವಿಭಿನ್ನ ರೇಟಿಂಗ್‌ ಚಿಹ್ನೆಗಳನ್ನು ಉಪಯೋಗಿಸಲಾಗುತ್ತದೆ.

^ ಇದಕ್ಕೆ ಕೂಡಿಸಿ, ಯಾವುದರ ಮೇಲಾಧಾರಿಸಿ ಚಲನಚಿತ್ರಕ್ಕೆ ರೇಟಿಂಗ್‌ ಹಾಕಲಾಗುತ್ತದೆ ಎಂಬುದು ಸಹ ಒಂದು ದೇಶದಿಂದ ಇನ್ನೊಂದಕ್ಕೆ ವ್ಯತ್ಯಾಸವಾಗಿರುತ್ತದೆ. ಒಂದು ದೇಶದಲ್ಲಿ, ಹದಿವಯಸ್ಕರು ನೋಡಲು ಸೂಕ್ತವಲ್ಲ ಎಂದು ತಿಳಿಸಿರುವ ಚಲನಚಿತ್ರವು ಇನ್ನೊಂದು ದೇಶದಲ್ಲಿ ನೋಡಬಹುದೆಂದಾಗಿರುತ್ತದೆ.

^ ಮಕ್ಕಳಿಗೆ ಮತ್ತು ಹದಿವಯಸ್ಕರಿಗೆಂದು ಬಿಡುಗಡೆಯಾಗುವ ಚಲನಚಿತ್ರಗಳಲ್ಲಿ ಮಾಟಮಂತ್ರ, ಪ್ರೇತವ್ಯವಹಾರ ಅಥವಾ ಇತರ ರೀತಿಯ ಪೈಶಾಚಿಕ ವಿಷಯಗಳು ಒಳಗೂಡಿರುತ್ತವೆ ಎಂಬುದನ್ನು ಸಹ ಕ್ರೈಸ್ತರು ಮನಸ್ಸಿನಲ್ಲಿಡಬೇಕು.​—⁠1 ಕೊರಿಂಥ 10:21.

[ಪುಟ 12ರಲ್ಲಿರುವ ಚೌಕ/ಚಿತ್ರಗಳು]

“ನಾವು ಕುಟುಂಬವಾಗಿ ನಿರ್ಣಯವನ್ನು ಮಾಡುತ್ತೇವೆ”

“ನಾನು ಚಿಕ್ಕವಳಾಗಿದ್ದಾಗ ಸಿನಿಮಾ ನೋಡಲು ನಾವು ಕುಟುಂಬವಾಗಿ ಹೋಗುತ್ತಿದ್ದೆವು. ಈಗ ನಾನು ದೊಡ್ಡವಳಾಗಿರುವ ಕಾರಣ ಹೆತ್ತವರಿಲ್ಲದೆಯೂ ಹೋಗಲು ನನಗೆ ಅನುಮತಿ ಇದೆ. ಆದರೆ, ನನ್ನನ್ನು ಹೋಗಲು ಬಿಡುವ ಮುನ್ನ ಚಲನಚಿತ್ರದ ಹೆಸರು ಮತ್ತು ಅದು ಯಾವುದರ ಕುರಿತಾಗಿದೆ ಎಂಬುದನ್ನು ತಿಳಿದುಕೊಳ್ಳಲು ನನ್ನ ಹೆತ್ತವರು ಬಯಸುತ್ತಾರೆ. ಒಂದುವೇಳೆ ಅವರು ಚಲನಚಿತ್ರದ ಬಗ್ಗೆ ಕೇಳಿಸಿಕೊಂಡಿಲ್ಲದಿದ್ದರೆ ವಿಮರ್ಶೆಗಳನ್ನು ಓದಿ ಅಥವಾ ಟಿವಿ ಟ್ರೇಲರ್‌ ನೋಡಿ ಅದರ ಕುರಿತು ತಿಳಿದುಕೊಳ್ಳುತ್ತಾರೆ. ಇಂಟರ್‌ನೆಟ್‌ ಮೂಲಕವೂ ಅವರು ಅದರ ಕುರಿತು ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಒಂದುವೇಳೆ ಅವರಿಗೆ ಆ ಚಲನಚಿತ್ರವು ವೀಕ್ಷಿಸಲು ಸೂಕ್ತವಲ್ಲ ಎಂದು ಅನಿಸಿದರೆ, ಅದೇಕೆ ಸೂಕ್ತವಲ್ಲ ಎಂಬುದನ್ನು ನನಗೆ ವಿವರಿಸುತ್ತಾರೆ. ನಾನು ನನ್ನ ಅಭಿಪ್ರಾಯವನ್ನು ತಿಳಿಸುವಂತೆ ಅನುಮತಿಸುತ್ತಾರೆ. ನಮ್ಮ ಮಧ್ಯೆ ಸಂವಾದ ದ್ವಾರವು ಯಾವಾಗಲೂ ತೆರೆದಿರುತ್ತದೆ ಮತ್ತು ನಾವು ಕುಟುಂಬವಾಗಿ ನಿರ್ಣಯವನ್ನು ಮಾಡುತ್ತೇವೆ.”​—⁠ಏಲಾಯೀಸ್‌, 19, ಫ್ರಾನ್ಸ್‌.

[ಪುಟ 13ರಲ್ಲಿರುವ ಚೌಕ/ಚಿತ್ರ]

ವಿಷಯವನ್ನು ಚರ್ಚಿಸಿರಿ!

“ಹೆತ್ತವರು ಒಂದುವೇಳೆ ಯಾವುದೇ ಒಂದು ಮನೋರಂಜನೆಯನ್ನು ನಿಷೇಧಿಸಿ ಅದರ ಸ್ಥಳದಲ್ಲಿ ಇನ್ನೊಂದನ್ನು ನೀಡದೆ ಹೋದರೆ ಮಕ್ಕಳು ಕದ್ದುಮುಚ್ಚಿ ತಮ್ಮ ಇಚ್ಛೆಗಳನ್ನು ತೃಪ್ತಿಪಡಿಸಿಕೊಳ್ಳುತ್ತಾರೆ. ಆದುದರಿಂದ ಮಕ್ಕಳು ಸೂಕ್ತವಲ್ಲದ ಯಾವುದೇ ಒಂದು ಮನೋರಂಜನೆಯನ್ನು ವೀಕ್ಷಿಸಲು ಬಯಸುವುದಾದರೆ, ಕೆಲವು ಹೆತ್ತವರು ಅದನ್ನು ಕೂಡಲೆ ನಿಷೇಧಿಸುವುದಿಲ್ಲ ಮತ್ತು ಅದೇ ಸಮಯದಲ್ಲಿ ಅದನ್ನು ನೋಡಲು ಸಹ ಅನುಮತಿಸುವುದಿಲ್ಲ. ಬದಲಿಗೆ, ವಿಷಯವು ತಣ್ಣಗಾಗುವಂತೆ ಅವರು ಸ್ವಲ್ಪ ಸಮಯ ಬಿಡುತ್ತಾರೆ. ಸ್ವಲ್ಪ ದಿನಗಳ ನಂತರ, ಕೋಪಿಸಿಕೊಳ್ಳದೆ ವಿಷಯವನ್ನು ಅವರು ಚರ್ಚಿಸುತ್ತಾರೆ. ತಮ್ಮ ಮಗನಿಗೆ ಅಥವಾ ಮಗಳಿಗೆ ಈ ರೀತಿಯ ಮನೋರಂಜನೆಯು ಏಕೆ ಸೂಕ್ತವಾಗಿದೆಯೆಂದು ಅನಿಸುತ್ತದೆ ಎಂದು ಅವರು ಕೇಳುತ್ತಾರೆ. ಹೀಗೆ ವಿಷಯವನ್ನು ಚರ್ಚಿಸುವಲ್ಲಿ, ಅನೇಕವೇಳೆ ಯುವ ಜನರು ತಮ್ಮ ಮನಸ್ಸನ್ನು ಬದಲಾಯಿಸಿ ಹೆತ್ತವರೊಂದಿಗೆ ಸಹಮತಿಸುತ್ತಾರೆ. ಅಷ್ಟುಮಾತ್ರವಲ್ಲದೆ, ಸಹಾಯನೀಡಿದ್ದಕ್ಕಾಗಿ ಹೆತ್ತವರಿಗೆ ಉಪಕಾರವನ್ನೂ ಹೇಳುತ್ತಾರೆ. ನಂತರ, ಹೆತ್ತವರ ಮುಂದಾಳುತ್ವದಲ್ಲಿ, ಅವರು ಬೇರೆ ಯಾವುದೇ ಮನೋರಂಜನೆಯನ್ನು ಆಯ್ಕೆಮಾಡಸಾಧ್ಯವಿದೆ ಮತ್ತು ಅದರಲ್ಲಿ ಒಟ್ಟಾಗಿ ಆನಂದಿಸಸಾಧ್ಯವಿದೆ.”​—⁠ಮಾಸಾಆಕೀ, ಜಪಾನಿನ ಸಂಚರಣ ಮೇಲ್ವಿಚಾರಕರು.

[ಪುಟ 14ರಲ್ಲಿರುವ ಚೌಕ/ಚಿತ್ರಗಳು]

ಇತರ ರೀತಿಯ ಮನೋರಂಜನೆಗಳು

◼ “ತಮ್ಮ ಸಮವಯಸ್ಕರ ಜೊತೆಯಲ್ಲಿರಬೇಕೆಂದು ಯುವ ಜನರು ಸಾಮಾನ್ಯವಾಗಿ ಇಚ್ಛಿಸುತ್ತಾರೆ. ಆದುದರಿಂದಲೇ, ನಾವು ನಮ್ಮ ಮಗಳಿಗೆ ನಮ್ಮ ಮೇಲ್ವಿಚಾರಣೆಯ ಕೆಳಗೆ ಉತ್ತಮ ಸಹವಾಸದಲ್ಲಿ ಆನಂದಿಸುವ ಏರ್ಪಾಡನ್ನು ಮಾಡಿದ್ದೇವೆ. ನಮ್ಮ ಸಭೆಯಲ್ಲಿ ಆದರ್ಶಪ್ರಾಯರಾಗಿರುವ ಅನೇಕ ಯುವ ಜನರು ಇರುವುದರಿಂದ, ಅವರೊಂದಿಗೆ ಸ್ನೇಹವನ್ನು ಬೆಳೆಸುವಂತೆ ನಾವು ನಮ್ಮ ಮಗಳಿಗೆ ಪ್ರೋತ್ಸಾಹಿಸುತ್ತೇವೆ.”​—⁠ಎಲೀಸಾ, ಇಟಲಿ.

◼ “ನಮ್ಮ ಮಕ್ಕಳ ಮನೋರಂಜನೆಯಲ್ಲಿ ನಾವು ಸಹ ಭಾಗವಹಿಸುತ್ತೇವೆ. ಅವರಿಗಾಗಿ ನಾವು ಆರೋಗ್ಯಕರ ಚಟುವಟಿಕೆಗಳನ್ನು ಏರ್ಪಡಿಸುತ್ತೇವೆ. ಉದಾಹರಣೆಗೆ, ತಿರುಗಾಡುವುದು, ಬಾರ್ಬಿಕ್ಯೂ (ಯಾವುದಾದರು ಸ್ಥಳಕ್ಕೆ ಪಿಕ್ನಿಕ್‌ಗೆ ಹೋಗಿ ಅಲ್ಲಿಯೇ ಊಟವನ್ನು ತಯಾರಿಸುವುದು), ಪಿಕ್ನಿಕ್‌ಗಳು ಮತ್ತು ವಿವಿಧ ವಯಸ್ಸಿನ ಜೊತೆ ಕ್ರೈಸ್ತರೊಂದಿಗೆ ಒಕ್ಕೂಟಗಳು ಈ ಮುಂತಾದವುಗಳನ್ನು ಏರ್ಪಡಿಸುತ್ತೇವೆ. ಹೀಗೆ ಮಾಡುವುದರಿಂದ, ಮನೋರಂಜನೆಯು ತಮ್ಮ ಸಮವಯಸ್ಕರೊಂದಿಗೆ ಮಾತ್ರ ಆನಂದಿಸುವಂಥದ್ದಾಗಿದೆ ಎಂದು ನಮ್ಮ ಮಕ್ಕಳು ನೆನಸುವುದಿಲ್ಲ.”​—⁠ಜಾನ್‌, ಬ್ರಿಟನ್‌.

◼ “ಜೊತೆ ಕ್ರೈಸ್ತರೊಂದಿಗಿನ ಒಕ್ಕೂಟಗಳಲ್ಲಿ ನಾವು ಸಂತೋಷವನ್ನು ಕಂಡುಕೊಂಡಿದ್ದೇವೆ. ಸಾಕರ್‌ ಆಟವನ್ನು ಆಡಲು ನನ್ನ ಮಕ್ಕಳು ಬಹಳ ಇಷ್ಟಪಡುತ್ತಾರೆ. ಆದುದರಿಂದ, ಈ ಆಟದಲ್ಲಿ ಇತರರೊಂದಿಗೆ ಭಾಗವಹಿಸಲು ನಾವು ಏರ್ಪಾಡುಮಾಡುತ್ತೇವೆ.”​—⁠ವಾನ್‌, ಸ್ಪೆಯಿನ್‌.

◼ “ಸಂಗೀತ ಉಪಕರಣಗಳನ್ನು ನುಡಿಸುವಂತೆ ನಾವು ನಮ್ಮ ಮಕ್ಕಳನ್ನು ಉತ್ತೇಜಿಸುತ್ತೇವೆ. ಮಾತ್ರವಲ್ಲದೆ ಟೆನ್ನಿಸ್‌, ವಾಲಿಬಾಲ್‌, ಸೈಕಲ್‌ ಸವಾರಿ, ವಾಚನ ಮತ್ತು ಸ್ನೇಹಿತರೊಂದಿಗೆ ಒಟ್ಟುಸೇರುವುದು ಈ ಮುಂತಾದ ಹವ್ಯಾಸಗಳಲ್ಲಿ ನಾವು ಒಟ್ಟಾಗಿ ಭಾಗವಹಿಸುತ್ತೇವೆ.”​—⁠ಮಾರ್ಕ್‌, ಬ್ರಿಟನ್‌.

◼ “ನಾವು ಕ್ರಮವಾಗಿ ಬೋಲಿಂಗ್‌ ಆಟವಾಡಲು ಕುಟುಂಬವಾಗಿಯೂ ಸ್ನೇಹಿತರೊಂದಿಗೂ ಹೋಗುತ್ತೇವೆ. ಮಾತ್ರವಲ್ಲದೆ, ತಿಂಗಳಿಗೊಮ್ಮೆ ನಾವು ಒಟ್ಟಾಗಿ ಏನಾದರು ವಿಶೇಷ ಕಾರ್ಯಕ್ರಮವನ್ನು ಯೋಜಿಸುತ್ತೇವೆ. ಮಕ್ಕಳ ಚಟುವಟಿಕೆಗಳ ಮೇಲೆ ಹೆತ್ತವರು ನಿಗಾ ಇಡುವುದು ಸಮಸ್ಯೆಗಳನ್ನು ತಡೆಗಟ್ಟಲು ಕೀಲಿಕೈಯಾಗಿದೆ.”​—⁠ಡಾನೀಲೋ, ಫಿಲಿಪ್ಪೀನ್ಸ್‌.

◼ “ಕುರ್ಚಿಯಲ್ಲಿ ಸುಮ್ಮನೆ ಕುಳಿತುಕೊಂಡು ಚಲನಚಿತ್ರವನ್ನು ನೋಡುವುದಕ್ಕಿಂತ ಯಾವುದೇ ಘಟನೆಗಳು ನಮ್ಮ ಕಣ್ಮುಂದೆ ನಿಜವಾಗಿ ಸಂಭವಿಸುತ್ತಿರುವಾಗ ನೋಡುವುದು ಇನ್ನಷ್ಟು ಹೆಚ್ಚು ಆನಂದಕರವಾಗಿರುತ್ತದೆ. ಆದುದರಿಂದ, ಸ್ಥಳಿಕವಾಗಿ ಯಾವಾಗ ವಸ್ತು ಪ್ರದರ್ಶನಗಳು, ಕಾರ್‌ ಪ್ರದರ್ಶನಗಳು ಅಥವಾ ಸಂಗೀತ ಕಾರ್ಯಕ್ರಮಗಳು ಇರುತ್ತವೆಂದು ನಾವು ತಿಳಿದುಕೊಳ್ಳುತ್ತೇವೆ. ಇಂಥ ಘಟನೆಗಳನ್ನು ನಾವು ವೀಕ್ಷಿಸುವ ಅದೇ ಸಮಯದಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ ಸಂವಾದಿಸಲು ಸಹ ಸಾಧ್ಯವಾಗುತ್ತದೆ. ಮಕ್ಕಳಿಗೆ ಬಹಳಷ್ಟು ಮನೋರಂಜನೆಯನ್ನು ನೀಡದಂತೆಯೂ ನಾವು ಎಚ್ಚರವಹಿಸುತ್ತೇವೆ. ಏಕೆಂದರೆ ಇದರಿಂದ ಸಮಯವು ಹಾಳಾಗುತ್ತದೆ ಮಾತ್ರವಲ್ಲ, ಅದು ಘಟನೆಯನ್ನು ಕಳೆಗುಂದುವಂತೆ ಮಾಡಿ, ಉತ್ಸಾಹವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.”​—⁠ಜೂಡಿತ್‌, ದಕ್ಷಿಣ ಆಫ್ರಿಕ.

◼ “ಇತರ ಮಕ್ಕಳು ಮಾಡುವ ಪ್ರತಿಯೊಂದು ವಿಷಯವು ನನ್ನ ಮಕ್ಕಳಿಗೆ ಯೋಗ್ಯವಾಗಿರುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳುವಂತೆ ನಾನು ಅವರಿಗೆ ಸಹಾಯಮಾಡುತ್ತೇನೆ. ಅದೇ ಸಮಯದಲ್ಲಿ, ಅವರಿಗೆ ಉತ್ತಮ ಮನೋರಂಜನೆಯನ್ನು ಒದಗಿಸಿಕೊಡಲು ನಾನು ಮತ್ತು ನನ್ನ ಗಂಡ ಪ್ರಯತ್ನಿಸುತ್ತೇವೆ. ‘ನಾವು ಎಲ್ಲಿಗೂ ಹೋಗುವುದಿಲ್ಲ, ಏನೂ ಮಾಡುವುದಿಲ್ಲ’ ಎಂದು ನಮ್ಮ ಮಕ್ಕಳು ಹೇಳದಂತೆ ನಾವು ನೋಡಿಕೊಳ್ಳುತ್ತೇವೆ. ಕುಟುಂಬವಾಗಿ ನಾವು ಪಾರ್ಕಿಗೆ ಹೋಗುತ್ತೇವೆ ಮತ್ತು ನಮ್ಮ ಸಭೆಯ ಸದಸ್ಯರನ್ನು ನಮ್ಮ ಮನೆಗೆ ಕರೆದು ಒಕ್ಕೂಟಗಳನ್ನು ಏರ್ಪಡಿಸುತ್ತೇವೆ.” *​—⁠ಮಾರೀಅ, ಬ್ರಸಿಲ್‌.

[ಪಾದಟಿಪ್ಪಣಿ]

^ ಸಾಮಾಜಿಕ ಒಕ್ಕೂಟಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನಮ್ಮ ಜೊತೆ ಪತ್ರಿಕೆಯಾದ ಕಾವಲಿನಬುರುಜು 1992, ನವೆಂಬರ್‌ 15, ಪುಟ 15-20ನ್ನು ನೋಡಿರಿ.

[ಕೃಪೆ]

James Hall Museum of Transport, Johannesburg, South Africa

[ಪುಟ 11ರಲ್ಲಿರುವ ಚಿತ್ರ]

ನಿರ್ಣಯಿಸುವ ಮುಂಚೆ ಚಲನಚಿತ್ರ ವಿಮರ್ಶೆಗಳನ್ನು ಪರೀಕ್ಷಿಸಿರಿ

[ಪುಟ 12, 13ರಲ್ಲಿರುವ ಚಿತ್ರ]

ಹೆತ್ತವರೇ, ಸರಿಯಾಗಿ ಆಯ್ಕೆಮಾಡುವವರಾಗಿ ಇರುವಂತೆ ನಿಮ್ಮ ಮಕ್ಕಳಿಗೆ ಕಲಿಸಿರಿ