ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಬಹುಮಟ್ಟಿಗೆ ವಿನ್ಯಾಸಿಸಲ್ಪಟ್ಟ’ ಹಾಗಿದೆಯೊ?

‘ಬಹುಮಟ್ಟಿಗೆ ವಿನ್ಯಾಸಿಸಲ್ಪಟ್ಟ’ ಹಾಗಿದೆಯೊ?

‘ಬಹುಮಟ್ಟಿಗೆ ವಿನ್ಯಾಸಿಸಲ್ಪಟ್ಟ’ ಹಾಗಿದೆಯೊ?

ರಾತ್ರಿಯಲ್ಲಿ ನೀವು ಎಂದಾದರೂ ದೂರದರ್ಶಕದ ಮೂಲಕ ಆಕಾಶವನ್ನು ನೋಡಿದ್ದೀರೊ? ಹೀಗೆ ನೋಡಿದಂಥ ಅನೇಕರು, ತಾವು ಮೊತ್ತಮೊದಲ ಬಾರಿ ಶನಿಗ್ರಹವನ್ನು ವೀಕ್ಷಿಸಿದ ಸಂಗತಿಯು ತಮ್ಮ ಮನಸ್ಸಿನಲ್ಲಿ ಇನ್ನೂ ಹಚ್ಚಹಸುರಾಗಿಯೇ ಇದೆ ಎಂದು ಹೇಳಬಲ್ಲರು. ಇದೊಂದು ವಿಸ್ಮಯಗೊಳಿಸುವಂಥ ಸುಂದರ ದೃಶ್ಯವಾಗಿದೆ. ಹೊಳೆಯುತ್ತಿರುವ ಅಸಂಖ್ಯಾತ ನಕ್ಷತ್ರಗಳಿರುವ, ಕೊನೆಯಿಲ್ಲದಂತೆ ತೋರುವ ಕಪ್ಪಾದ ಹಿನ್ನೆಲೆಯಲ್ಲಿ ಪ್ರಕಾಶಮಾನವಾದ ಒಂದು ಗೋಳವು ತೂಗುತ್ತಿದೆ. ಆ ಗೋಳದ ಸುತ್ತಲೂ ಚಪ್ಪಟೆಯಾದ ಭವ್ಯ ಉಂಗುರಗಳಿವೆ!

ಈ ಉಂಗುರಗಳು ಏನಾಗಿವೆ? ಹಿಂದೆ 1610ರಲ್ಲಿ ಖಗೋಳಜ್ಞನಾದ ಗೆಲಿಲಿಯೋ ಮೊದಲ ಬಾರಿಗೆ ತಾನು ತಯಾರಿಸಿದ ದೂರದರ್ಶಕದ ಮೂಲಕ ಶನಿಗ್ರಹವನ್ನು ನೋಡಿದನು. ಆ ಮಬ್ಬಾದ ವೀಕ್ಷಣೆಯಲ್ಲಿ ಶನಿಗ್ರಹವು ಕಿವಿಗಳನ್ನು ಹೊಂದಿರುವಂತೆ ತೋರಿತು​—⁠ಮಧ್ಯದಲ್ಲಿದ್ದ ಗೋಳದ ಎರಡು ಬದಿಯಲ್ಲಿ ಸಣ್ಣ ಎರಡು ಗೋಳಗಳಿದ್ದವು. ವರುಷಗಳು ದಾಟಿದಂತೆ ದೂರದರ್ಶಕಗಳಲ್ಲಾದ ಪ್ರಗತಿಯಿಂದಾಗಿ ಖಗೋಳಜ್ಞರು ಈ ಉಂಗುರಗಳನ್ನು ಇನ್ನೂ ಸ್ಪಷ್ಟವಾಗಿ ನೋಡಶಕ್ತರಾದರು. ಆದರೂ, ಈ ಉಂಗುರಗಳು ಯಾವುದರಿಂದ ರಚಿತವಾಗಿದೆ ಎಂಬುದನ್ನು ಅವರು ಇನ್ನೂ ಚರ್ಚಿಸುತ್ತಿದ್ದರು. ಅವು ಗಡುಸಾದ ಮತ್ತು ಗಟ್ಟಿಯಾದ ಡಿಸ್ಕ್‌ಗಳು ಎಂದು ಅನೇಕರು ಭಾವಿಸಿದರು. ಆದರೆ ಈ ಉಂಗುರಗಳು, ಅಸಂಖ್ಯಾತ ಹಿಮಶಿಲಾಕಣಗಳು ಒತ್ತಾಗಿ ಸೇರಿಕೊಂಡು ರೂಪಿಸ್ಪಟ್ಟಿರುವಂಥವುಗಳು ಎಂಬುದನ್ನು ಖಗೋಳಜ್ಞರು 1895ರಲ್ಲಿ ದೃಢವಾದ ರುಜುವಾತಿನೊಂದಿಗೆ ಕಂಡುಹಿಡಿದರು.

ದೂರದ ಗ್ರಹಗಳು (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುವುದು: “ಶನಿಗ್ರಹದಲ್ಲಿರುವ ಉಂಗುರಗಳು, ಅಸಂಖ್ಯಾತ ಹಿಮಕಣಗಳಿಂದ ಮಾಡಲ್ಪಟ್ಟಿರುವ ಹಲವು ರಿಬ್ಬನುಗಳಂತಿವೆ. ಸೌರವ್ಯೂಹದ ಮಹಾ ಅದ್ಭುತಗಳ ದರ್ಜೆಯಲ್ಲಿ ಇವುಗಳೂ ಸೇರಿವೆ. ಶನಿಗ್ರಹದ ಈ ಉಂಗುರಗಳು ಬೃಹತ್ತಾಗಿವೆ. ಗ್ರಹದಿಂದ ಸ್ವಲ್ಪ ಮೇಲಿರುವ ಈ ಉಂಗುರಗಳ ಒಳಭಾಗದಿಂದ ಅದರ ಹೊರಭಾಗದ ವರೆಗೆ ಸುಮಾರು 4,00,000 ಕಿಲೋಮೀಟರ್‌ಗಳಷ್ಟು ಅಂತರವಿದೆ. ಮಾತ್ರವಲ್ಲದೆ ಇವು ಬಹಳ ತೆಳ್ಳಗಾಗಿವೆ​—⁠ಸರಾಸರಿ 30 ಮೀಟರ್‌ಗಳಿಗಿಂತಲೂ ಕಡಿಮೆಗಾತ್ರದ್ದಾಗಿವೆ.” 2004ರ ಜೂನ್‌ ತಿಂಗಳಿನಲ್ಲಿ, ಕಾಸೀನೀ-ಹೈಗೆನ್ಸ್‌ ಆಕಾಶನೌಕೆಯು ಶನಿಗ್ರಹವನ್ನು ತಲಪಿ, ಅಲ್ಲಿನ ಮಾಹಿತಿ ಮತ್ತು ಚಿತ್ರಗಳನ್ನು ಕಳುಹಿಸಿದಾಗ, ಈ ನೂರಾರು ಉಂಗುರಗಳ ಬಗ್ಗೆ ವಿಜ್ಞಾನಿಗಳು ಮತ್ತಷ್ಟು ವಿಷಯಗಳನ್ನು ಕಲಿಯಲಾರಂಭಿಸಿದರು.

ಸ್ಮಿತ್‌ಸೋನಿಯನ್‌ ಪತ್ರಿಕೆಯ ಲೇಖನವೊಂದರಲ್ಲಿ ಇತ್ತೀಚೆಗೆ ಹೀಗೆ ತಿಳಿಸಲಾಯಿತು: “ಗಣಿತದಂತೆ ನಿಷ್ಕೃಷ್ಟ ವಸ್ತುವಾದ ಶನಿಗ್ರಹವನ್ನು ನೋಡುವಾಗ ಅದನ್ನು ಬಹುಮಟ್ಟಿಗೆ ವಿನ್ಯಾಸಿಸಿರುವ ಹಾಗೆ ತೋರುತ್ತದೆ.” ಬರಹಗಾರನ ಭಾವನೆಗಳೊಂದಿಗೆ ನಾವು ಸಹಮತಿಸಸಾಧ್ಯವಿದೆ, ಆದರೆ “ಬಹುಮಟ್ಟಿಗೆ” ಎಂಬ ಪದವನ್ನು ಅವನು ಸೇರಿಸಿದ ವಿಷಯವು ನಮ್ಮನ್ನು ಕಸಿವಿಸಿಗೊಳಿಸುತ್ತದೆ. ವಾಸ್ತವದಲ್ಲಿ, ಈ ಸುಂದರವಾದ ಆಕಾಶಸ್ಥಕಾಯವು ಇತರ ಆಕಾಶಸ್ಥಕಾಯಗಳಂತೆ, ಸಾವಿರಾರು ವರುಷಗಳ ಹಿಂದೆ ಬರೆಯಲ್ಪಟ್ಟ ಪ್ರೇರಿತ ವರ್ಣನೆಗೆ ಹೊಂದಿಕೆಯಲ್ಲಿದೆ: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.”​—⁠ಕೀರ್ತನೆ 19:⁠1. (g05 6/22)

[ಪುಟ 31ರಲ್ಲಿರುವ ಚಿತ್ರ ಕೃಪೆ]

ಹಿನ್ನೆಲೆ: NASA, ESA and E. Karkoschka (University of Arizona); ಒಳಚಿತ್ರ: NASA and The Hubble Heritage Team (STScl/AURA)