ಮನೆಯನ್ನು ಶುದ್ಧವಾಗಿ ಇಡುವುದರಲ್ಲಿ ನಾವೆಲ್ಲರು ವಹಿಸುವ ಪಾತ್ರ
ಮನೆಯನ್ನು ಶುದ್ಧವಾಗಿ ಇಡುವುದರಲ್ಲಿ ನಾವೆಲ್ಲರು ವಹಿಸುವ ಪಾತ್ರ
ಮೆಕ್ಸಿಕೊದ ಎಚ್ಚರ! ಲೇಖಕರಿಂದ
ನಿರ್ಮಲವಾದ ಮತ್ತು ಕಲುಷಿತವಾಗಿರದ ಸುತ್ತುಮುತ್ತುಗಳಲ್ಲಿ ವಾಸಿಸುವುದು ಅದೆಷ್ಟು ರಮಣೀಯ! ಆದರೆ, ಪಟ್ಟಣಗಳಲ್ಲಿ ಇಂದು ಹೆಚ್ಚುತ್ತಿರುವ ಕಸಕೊಂಪೆಗಳಿಂದಾಗಿ ಪರಿಸರವನ್ನು ಶುದ್ಧವಾಗಿಯೂ ಕ್ರಮಬದ್ಧವಾಗಿಯೂ ಇಡುವುದು ಬಹಳಷ್ಟು ಕಷ್ಟಕರವಾಗುತ್ತಿದೆ.
ನಗರಸಭೆಯು ಕಸಸಂಗ್ರಹದ ಏರ್ಪಾಡುಗಳನ್ನು ಮಾಡುವ ಮೂಲಕ ದಾರಿಗಳನ್ನು ಶುದ್ಧವಾಗಿಡಲು ಹೆಣಗಾಡುತ್ತಿದೆ. ಆದರೆ ಇಷ್ಟೆಲ್ಲಾ ಮಾಡಿದರೂ ಕೆಲವೊಂದು ಕ್ಷೇತ್ರಗಳಲ್ಲಿ ಕಸಗಳ ರಾಶಿಯನ್ನು ನಾವು ನೋಡಸಾಧ್ಯವಿದೆ. ಇದು ನೋಡಲು ಅಸಹ್ಯವಾಗಿರುತ್ತದೆ ಮಾತ್ರವಲ್ಲ, ಸಾರ್ವಜನಿಕರ ಆರೋಗ್ಯಕ್ಕೂ ಇದು ಹಾನಿಕಾರಕವಾಗಿರುತ್ತದೆ. ರಾಶಿಬಿದ್ದಿರುವ ಕಸದಿಂದಾಗಿ ಇಲಿಗಳು, ಜಿರಳೆಗಳು ಮತ್ತು ರೋಗವನ್ನು ಉಂಟುಮಾಡುವಂಥ ಇತರ ಕ್ರಿಮಿಕೀಟಗಳು ಹೆಚ್ಚಾಗಬಲ್ಲವು. ಈ ಸನ್ನಿವೇಶವನ್ನು ಸರಿಪಡಿಸಲು ನೀವೇನಾದರು ಮಾಡಸಾಧ್ಯವಿದೆಯೊ? ಹೌದು ಮಾಡಸಾಧ್ಯವಿದೆ. ನಿಮ್ಮ ಮನೆ ಮತ್ತು ಸುತ್ತುಮುತ್ತುಗಳನ್ನು ನಿರ್ಮಲವಾಗಿಯೂ ಚೊಕ್ಕಟವಾಗಿಯೂ ಇಟ್ಟುಕೊಳ್ಳಿರಿ.
ಸರಿಯಾದ ಮನೋಭಾವ
ಅಶುದ್ಧವಾದ ಸುತ್ತುಮುತ್ತುಗಳು ಅಥವಾ ಮನೆಗಳು ಬಡತನದ ಸಂಕೇತವಾಗಿದೆ ಎಂದು ಕೆಲವರು ನೆನಸುತ್ತಾರೆ. ಆದರೆ ಅದು ಸತ್ಯವಲ್ಲ. ಹಣಕಾಸಿನ ಕೊರತೆಯಿಂದಾಗಿ ನಮ್ಮ ಸುತ್ತುಗಟ್ಟನ್ನು ಶುದ್ಧವಾಗಿಡುವುದು ಹೆಚ್ಚು ಕಷ್ಟಕರವಾಗಿ ಪರಿಣಮಿಸಬಹುದು. ಆದರೆ ಒಂದು ಸ್ಪ್ಯಾನಿಷ್ ನಾಣ್ಣುಡಿಯು ಹೇಳುವಂತೆ, “ಬಡತನಕ್ಕೂ ಶುದ್ಧತೆಗೂ ಯಾವುದೇ ಜಗಳವಿಲ್ಲ.” ಇನ್ನೊಂದು ಬದಿಯಲ್ಲಿ, ಒಬ್ಬ ವ್ಯಕ್ತಿಯ ಬಳಿ ಸಾಕಷ್ಟು ಭೌತಿಕ ವಿಷಯಗಳಿದ್ದರೆ ಅವನು ತನ್ನ ಸುತ್ತುಗಟ್ಟನ್ನು ಶುದ್ಧವಾಗಿಡುತ್ತಾನೆ ಎಂಬುದಕ್ಕೆ ಯಾವುದೇ ಖಾತ್ರಿಯಿಲ್ಲ.
ಮನೆಯ ಒಳಗೆ ಮತ್ತು ಹೊರಗಿನ ಶುದ್ಧತೆಯು, ಕ್ರಿಯೆಯಲ್ಲಿ ತೋರಿಸಲ್ಪಡುವ ನಮ್ಮ ಮನೋಭಾವದ ಮೇಲೆ ಹೊಂದಿಕೊಂಡಿರುತ್ತದೆ. ವಾಸ್ತವದಲ್ಲಿ, ಮನೆಯನ್ನು ಶುದ್ಧವಾಗಿಡುವುದು ಕುಟುಂಬದಲ್ಲಿರುವ ಎಲ್ಲ ಸದಸ್ಯರ ಮನೋಭಾವದ ಮೇಲೆ ಹೊಂದಿಕೊಂಡಿದೆ. ಆದುದರಿಂದಲೇ, ನಮ್ಮ ಮನೆಗಳನ್ನು ಮತ್ತು ಸುತ್ತುಮುತ್ತುಗಳನ್ನು ಶುದ್ಧವಾಗಿಡಲು ನಾವೆಲ್ಲರು ಏನು ಮಾಡಸಾಧ್ಯವಿದೆ ಎಂಬುದನ್ನು ಪರೀಕ್ಷಿಸುವುದು ಉತ್ತಮ.
ಶುಚಿಗೊಳಿಸುವ ಕಾರ್ಯಕ್ರಮ
ತಾಯಿಯ ಮನೆಗೆಲಸಕ್ಕೆ ಕೊನೆಯಿಲ್ಲ ಎಂದು ಹೇಳಲಾಗುತ್ತದೆ. ಆಹಾರ ತಯಾರಿಸುವುದು ಮತ್ತು ಮಕ್ಕಳನ್ನು ಶಾಲೆಗೆ ಸಿದ್ಧಗೊಳಿಸುವುದಲ್ಲದೆ, ಮನೆ ಹಾಗೂ ಅದರ ಸುತ್ತಮುತ್ತ ಶುದ್ಧವಾಗಿಡಲು ಸಹ ಆಕೆಯು ಕೆಲಸಮಾಡಬೇಕು. ಮಕ್ಕಳು ತಮ್ಮ ಕೋಣೆಯಲ್ಲಿ ಬಿಸಾಡಿರುವ ಕೊಳೆಯಾದ ಬಟ್ಟೆಗಳನ್ನು ಅಥವಾ ಇನ್ನಾವುದೇ ವಸ್ತುಗಳನ್ನು ತಾಯಿಯು ಪದೇ ಪದೇ ಹೆಕ್ಕಿ ಶುದ್ಧಗೊಳಿಸುವುದನ್ನು ನೀವು ಗಮನಿಸಿದ್ದೀರೊ? ಕಟ್ಟುನಿಟ್ಟಿನ ಶುಚಿಗೊಳಿಸುವ ಕಾರ್ಯಕ್ರಮವನ್ನು ಹೊಂದಿರುವ ಮತ್ತು ಇದರಲ್ಲಿ ಇಡೀ ಕುಟುಂಬವನ್ನು ಒಳಗೂಡಿಸುವ ಮೂಲಕ ತಾಯಿಯ ಭಾರವನ್ನು ಕಡಿಮೆಗೊಳಿಸಸಾಧ್ಯವಿದೆ.
ಮನೆಯಲ್ಲಿರುವ ಕೆಲವು ವಸ್ತುಗಳಿಗೆ ಪ್ರತಿದಿನದ ಗಮನ ಮತ್ತು ಶುಚಿಗೊಳಿಸುವಿಕೆಯ ಅಗತ್ಯವಾಗಿರುತ್ತದೆ ಹಾಗೂ ಮನೆಯ ಕೆಲವು ಸ್ಥಳಗಳನ್ನು ವಾರದಲ್ಲಿ ಒಮ್ಮೆ, ಇನ್ನಿತರ ಸ್ಥಳಗಳನ್ನು ತಿಂಗಳಿಗೊಮ್ಮೆ ಶುಚಿಗೊಳಿಸಿದರೆ ಸಾಕೆಂದು ಕೆಲವು ಪತ್ನಿಯರು ನಿರ್ಧರಿಸುತ್ತಾರೆ. ಕೆಲವೊಂದು ವಸ್ತುಗಳನ್ನು ವರುಷಕ್ಕೊಮ್ಮೆ ಶುಚಿಗೊಳಿಸಿದರೆ ಸಾಕಾಗುತ್ತದೆ. ಉದಾಹರಣೆಗೆ, ಪ್ರತಿಯೊಂದು ದೇಶದಲ್ಲಿನ ಯೆಹೋವನ ಸಾಕ್ಷಿಗಳ ಬ್ರಾಂಚ್ ಸೌಕರ್ಯಗಳಲ್ಲಿನ ಬೆತೆಲ್ ಗೃಹಗಳಲ್ಲಿ, ವರುಷಕ್ಕೊಮ್ಮೆ ಕಪಾಟನ್ನು ಶುಚಿಗೊಳಿಸಲಾಗುತ್ತದೆ. ಉಪಯೋಗಿಸದ ವಸ್ತುಗಳನ್ನು
ತೊಲಗಿಸಿ, ಕಪಾಟನ್ನು ಕ್ರಮಬದ್ಧವಾಗಿಡುವ ಸಮಯವು ಇದಾಗಿದೆ. ಕಟ್ಟಡಗಳ ಒಳಗೋಡೆಗಳನ್ನು ಶುಚಿಗೊಳಿಸಲು ಸಹ ಒಂದು ಕ್ರಮದ ಕಾರ್ಯಕ್ರಮವಿರುತ್ತದೆ.ಸ್ನಾನಗೃಹ ಮುಂತಾದ ಮನೆಯ ಕೆಲವು ಸ್ಥಳಗಳನ್ನು ಯಾವಾಗಲೂ ಬಹಳ ಶುದ್ಧವಾಗಿಡುವುದು ಉತ್ತಮ ಆರೋಗ್ಯದ ದೃಷ್ಟಿಯಿಂದ ಅತಿ ಜರೂರಿಯದ್ದಾಗಿದೆ. ಪ್ರತಿದಿನ ಸ್ವಲ್ಪಮಟ್ಟಿಗಿನ ಶುಚಿಗೊಳಿಸುವಿಕೆಯು ಅವಶ್ಯವಾಗಿದೆಯಾದರೂ, ವಾರಕ್ಕೊಮ್ಮೆ ಹೆಚ್ಚು ಸಂಪೂರ್ಣವಾಗಿ ಶುಚಿಗೊಳಿಸುವ ಮೂಲಕ ಬ್ಯಾಕ್ಟೀರಿಯ ವೃದ್ಧಿಯಾಗದಂತೆ ತಡೆಯಬಹುದು. ಶೌಚಾಲಯದ ಬೋಗುಣಿಯಲ್ಲಿ ಕಲೆಯುಂಟಾಗುವುದನ್ನು ತಡೆಯಲು ಸಾಧ್ಯವಿಲ್ಲ ಮತ್ತು ಅದನ್ನು ತೆಗೆಯಲು ಸಹ ಸಾಧ್ಯವಿಲ್ಲ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಶೌಚಾಲಯವು ಸಂಪೂರ್ಣ ಶುದ್ಧವಾಗಿಯೂ ಹೊಳಪುಳ್ಳದ್ದಾಗಿಯೂ ಇರುವ ಮನೆಗಳನ್ನು ನೀವು ಕಾಣುವಿರಿ. ಇದಕ್ಕೆ ಕ್ರಮವಾದ ಶುಚಿಗೊಳಿಸುವಿಕೆ ಮತ್ತು ಶುಚಿಗೊಳಿಸಲು ಸೂಕ್ತವಾದ ಉತ್ಪನ್ನಗಳ ಉಪಯೋಗದ ಅಗತ್ಯವಿದೆ ಅಷ್ಟೆ.
ಅಡಿಗೆಮನೆಯನ್ನು ಜಾಗ್ರತೆಯಿಂದ ಶುಚಿಗೊಳಿಸುವ ಅಗತ್ಯವಿದೆ. ಪ್ರತಿದಿನ ನೀವು ಪಾತ್ರೆಗಳನ್ನು, ಸ್ಟೋವ್ ಮತ್ತು ಕೌಂಟರ್‌ಗಳ ಮೇಲ್ಭಾಗವನ್ನು ತೊಳೆಯುತ್ತೀರಾದರೂ, ಆಗಿಂದಾಗ್ಗೆ ಇದಕ್ಕಿಂತಲೂ ಹೆಚ್ಚು ಸಂಪೂರ್ಣವಾದ ಶುಚಿಗೊಳಿಸುವಿಕೆಯ ಅಗತ್ಯವಿದೆ. ಉದಾಹರಣೆಗೆ, ಸ್ಟೋವ್ ಮತ್ತು ಫ್ರಿಜ್ಜಿನ ಹಿಂಭಾಗ ಹಾಗೂ ಬಚ್ಚಲ ತೊಟ್ಟಿಯ (ಸಿಂಕ್) ಅಡಿಭಾಗ ಈ ಮುಂತಾದ ಸ್ಥಳಗಳನ್ನು ಕಡಿಮೆಪಕ್ಷ ತಿಂಗಳಿಗೆ ಒಮ್ಮೆಯಾದರೂ ಶುಚಿಗೊಳಿಸಬೇಕು. ಅಡಿಗೆ ಸಾಮಾನುಗಳನ್ನು ಇಡುವ ಕಪಾಟುಗಳನ್ನು ಶುಚಿಗೊಳಿಸುವ ಮೂಲಕ ಅಲ್ಲಿ ಜಿರಳೆಗಳು ಮತ್ತು ಇತರ ಹಾನಿಕಾರಕ ಕ್ರಿಮಿಕೀಟಗಳು ಮನೆಮಾಡದಂತೆ ನೋಡಿಕೊಳ್ಳಸಾಧ್ಯವಿದೆ.
ಕುಟುಂಬದ ಸಹಕಾರ
ಮಕ್ಕಳು ಬೆಳಗ್ಗೆ ತಮ್ಮ ಕೋಣೆಗಳನ್ನು ಬಿಟ್ಟು ಶಾಲೆಗೆ ಹೋಗುವ ಮುನ್ನ, ತಮ್ಮ ಹಾಸಿಗೆಯನ್ನು ಸರಿಯಾಗಿ ಸಿದ್ಧಗೊಳಿಸುವಂತೆ, ಉಪಯೋಗಿಸಿದ ಬಟ್ಟೆಗಳನ್ನು ಸೂಕ್ತ ಸ್ಥಳದಲ್ಲಿಡುವಂತೆ ಮತ್ತು ತಮ್ಮ ವಸ್ತುಗಳನ್ನು ಸರಿಯಾದ ಕ್ರಮದಲ್ಲಿ ಇಡುವಂತೆ ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ನಿಯಮಗಳನ್ನು ಮಾಡುತ್ತಾರೆ ಹಾಗೂ ಅದಕ್ಕಾಗಿ ತರಬೇತಿಯನ್ನು ನೀಡುತ್ತಾರೆ. ಎಲ್ಲರಿಗೂ ಪ್ರಯೋಜನಕಾರಿಯಾಗಿರುವ ನಿಯಮವು ಯಾವುದೆಂದರೆ, “ಎಲ್ಲದಕ್ಕೂ ಅದರದ್ದೇ ಆದ ಸ್ಥಳವಿದೆ ಮತ್ತು ಎಲ್ಲವೂ ಅದರದರ ಸ್ಥಳದಲ್ಲಿರಬೇಕು.”
ಮಾತ್ರವಲ್ಲದೆ, ಕುಟುಂಬದ ಕೆಲವು ಸದಸ್ಯರಿಗೆ ನಿರ್ದಿಷ್ಟ ನೇಮಕವನ್ನು ಕೊಡಸಾಧ್ಯವಿದೆ ಅಥವಾ ಮನೆಯ ಒಂದು ಭಾಗವನ್ನು ಶುದ್ಧವಾಗಿಡುವ ಕೆಲಸವನ್ನು ನೀಡಸಾಧ್ಯವಿದೆ. ಉದಾಹರಣೆಗೆ, ತಂದೆಯಾದವನು ಕಡಿಮೆಪಕ್ಷ ವರುಷಕ್ಕೊಮ್ಮೆಯಾದರೂ ವಾಹನವನ್ನು ನಿಲ್ಲಿಸುವ ಸ್ಥಳವನ್ನು ಶುದ್ಧಗೊಳಿಸಿ, ಅಲ್ಲಿರುವ ವಸ್ತುಗಳನ್ನು ಕ್ರಮಬದ್ಧವಾಗಿಡುತ್ತಾನೆಯೆ? ಮಕ್ಕಳಲ್ಲಿ ಯಾರಾದರೊಬ್ಬರು ಈ ಕೆಲಸದಲ್ಲಿ ತಂದೆಗೆ ಸಹಾಯಮಾಡಬಲ್ಲರೊ? ಮನೆಯ ಅಂಗಳದಲ್ಲಿ ಬೆಳೆಯುವ ಕಳೆಗಳನ್ನು ಕಿತ್ತು ಅಂಗಳವನ್ನು ಶುದ್ಧವಾಗಿಡುವ ಕೆಲಸ ಯಾರದ್ದು? ಮನೆಯ ಮುಂದುಗಡೆ ಶುದ್ಧವಾಗಿಡಲು ಇದನ್ನು ಎಷ್ಟು ದಿನಗಳ ಅಂತರದಲ್ಲಿ ಮಾಡಬೇಕಾಗಿರುತ್ತದೆ? ಮನೆಯಲ್ಲಿ ಶುಚಿಗೊಳಿಸುವಿಕೆ ಅಗತ್ಯವಾಗಿರುವ ಅಟ್ಟ ಅಥವಾ ಗೃಹೋಪಯೋಗಿ ಕೋಣೆಯಿದೆಯೊ? ಇರುವುದಾದರೆ ಅಲ್ಲಿ ಅಗತ್ಯವಿಲ್ಲದಿರುವ ವಸ್ತುಗಳನ್ನು ತೆಗೆದು ಅದನ್ನು ಯಾರು ಶುಚಿಗೊಳಿಸುತ್ತಾರೆ? ಕೆಲವು ಹೆತ್ತವರು ಇಂಥ ಕೆಲಸಗಳನ್ನು ಮಕ್ಕಳಿಗೆ ನೇಮಿಸುತ್ತಾರೆ ಮತ್ತು ಮಕ್ಕಳ ಮಧ್ಯೆ ಅದನ್ನು ಸರದಿಗನುಸಾರ ಬದಲಾಯಿಸುತ್ತಾರೆ.
ಆದುದರಿಂದ, ನಿಮ್ಮ ಮನೆಯನ್ನು ಸ್ವಚ್ಛವಾಗಿಡಲು ಉತ್ತಮ ಯೋಜನೆಯನ್ನು ಮಾಡಿರಿ. ನೀವೇ ಶುಚಿಗೊಳಿಸುತ್ತೀರೊ ಅಥವಾ ನಿಮ್ಮ ಕುಟುಂಬ ಸದಸ್ಯರೊಂದಿಗೆ ಮಾಡುತ್ತೀರೊ ಅಥವಾ ಕೆಲಸದಾಳನ್ನು ಇಟ್ಟು ಮಾಡಿಸುತ್ತೀರೊ ಅದು ಮುಖ್ಯವಲ್ಲ, ಆದರೆ ಕಟ್ಟುನಿಟ್ಟಿನ ಶುಚಿಗೊಳಿಸುವ ಕಾರ್ಯಕ್ರಮವನ್ನು ಹೊಂದಿರುವುದು ಪ್ರಾಮುಖ್ಯ. ತನ್ನ ಮನೆಯನ್ನು ಬಹಳ ಶುದ್ಧವಾಗಿಟ್ಟಿರುವ ಒಬ್ಬ ತಾಯಿಯು, ಮನೆಯನ್ನು ಶುದ್ಧವಾಗಿಡಲು ಇಡೀ ಕುಟುಂಬವು ಹೇಗೆ ಸಹಕರಿಸುತ್ತದೆ ಎಂಬುದನ್ನು ನಮಗೆ ಹೇಳುತ್ತಾಳೆ: “ನಾನು ಮತ್ತು ನನ್ನ ಮೂವರು ಹೆಣ್ಣುಮಕ್ಕಳು ಮನೆಗೆಲಸವನ್ನು ಹಂಚಿಕೊಳ್ಳುತ್ತೇವೆ. ವಾಸದ ಕೊಠಡಿ, ಮಲಗುವ ಎರಡು ಕೋಣೆಗಳು, ಅಂಗಣ ಮತ್ತು ಮನೆಯ ಮುಂದುಗಡೆಯ ರಸ್ತೆ ಇವನ್ನು ನೋರ್ಮ ಆ್ಯಡ್ರೀಆನಾ ಶುಚಿಗೊಳಿಸುತ್ತಾಳೆ. ಅಡಿಗೆ ಕೋಣೆಯನ್ನು ಆ್ಯನಾ ಜೋಆಕೀನಾ ನೋಡಿಕೊಳ್ಳುತ್ತಾಳೆ. ನಾನು ಬಟ್ಟೆ ಒಗೆಯುವುದು ಮತ್ತು ಇತರ ಕೆಲವು ಕೆಲಸಗಳನ್ನು ಮಾಡುತ್ತೇನೆ ಹಾಗೂ ಮಾರೀಆ ಡೆಲ್ ಕಾರ್ಮನ್ ಪಾತ್ರೆಗಳನ್ನು ತೊಳೆಯುತ್ತಾಳೆ.”
ಮನೆಯ ಹೊರಗೆ ಶುದ್ಧವಾಗಿಡುವುದು
ಮನೆಯ ಹೊರಗೆ ಶುದ್ಧವಾಗಿಡುವುದರ ಕುರಿತಾಗಿ ಏನು? ನೀವು ಒಂದು ದೊಡ್ಡ ಮನೆಯಲ್ಲಿಯೇ ವಾಸಿಸುತ್ತಿರಲಿ ಅಥವಾ ಒಂದು ಸಣ್ಣ ಮನೆಯಲ್ಲಿಯೇ ವಾಸಿಸುತ್ತಿರಲಿ ಮನೆಯ ಹೊರಗೆ ಶುದ್ಧವಾಗಿಡುವ ಯೋಜನೆಯು ಅತ್ಯಗತ್ಯ. ಉದಾಹರಣೆಗೆ, ಮನೆಯ ಬೇಲಿಯಲ್ಲಿರುವ ಗೇಟಿನ ತಿರುಪು ಮುರಿದಿರಬಹುದು. ಒಂದುವೇಳೆ ಗೇಟ್ ಬಿದ್ದುಹೋಗುವ ತನಕ ಅದನ್ನು ರಿಪೇರಿ ಮಾಡದಿದ್ದರೆ ಅದು ಎಷ್ಟು ಅಸಹ್ಯವಾಗಿ ಕಾಣುತ್ತದೆಂದು ನಿಮಗೆ ತಿಳಿದಿದೆ. ಅದೇ ರೀತಿಯಲ್ಲಿ ಮನೆಯ ಮುಂದೆ ಕಸಗಳು ರಾಶಿಬೀಳುವಂತೆ ಬಿಡುವುದಾದರೆ ಅದೂ ಅಸಹ್ಯವಾಗಿರುತ್ತದೆ. ಕೆಲವೊಮ್ಮೆ ಮನೆಯ ಹೊರಗೆ ಡಬ್ಬಗಳು, ಸಾಮಗ್ರಿಗಳು ಮತ್ತು ಇತರ ವಸ್ತುಗಳನ್ನು ರಾಶಿಹಾಕಿ ಇಡಲಾಗುತ್ತದೆ. ಇದು ನೋಡಲು ಅಸಹ್ಯವಾಗಿರುತ್ತದೆ ಮತ್ತು ಕ್ರಿಮಿಕೀಟಗಳು ಅಡಗಿಕೊಳ್ಳುವ ಸ್ಥಳವಾಗಿರುತ್ತದೆ.
ಕೆಲವು ಕುಟುಂಬಗಳು ಅಗತ್ಯಕ್ಕನುಸಾರ ಪ್ರತಿದಿನ ಅಥವಾ ಪ್ರತಿವಾರ, ಮನೆಯ ಸುತ್ತಮುತ್ತ, ಕಾಲುನಡಿಗೆಯ ಪಕ್ಕದಾರಿ ಮತ್ತು ತಮ್ಮ ಮನೆಯ ಮುಂದಿರುವ ರಸ್ತೆಯನ್ನು ಸಹ ಗುಡಿಸಿ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಕೆಲವು ಸ್ಥಳಗಳಲ್ಲಿ ಪರಿಸರವನ್ನು ಶುದ್ಧವಾಗಿಡಲು ಸರಕಾರವು ಉತ್ತಮ ಯೋಜನೆಗಳನ್ನು ಹೊಂದಿರುತ್ತದೆ, ಆದರೆ ಇನ್ನಿತರ ಸ್ಥಳಗಳಲ್ಲಿ ಇಂಥ ಯಾವುದೇ ಯೋಜನೆಗಳಿರುವುದಿಲ್ಲ. ನಮ್ಮ ಪರಿಸರವನ್ನು ಶುದ್ಧವಾಗಿಡಲು ನಾವೆಲ್ಲರು ನಮ್ಮ ಪಾತ್ರವನ್ನು ಪೂರೈಸುವುದಾದರೆ, ಖಂಡಿತವಾಗಿಯೂ ಅದು ನೋಡಲು ಅಂದವಾಗಿರುತ್ತದೆ ಮತ್ತು ಹೆಚ್ಚು ಆರೋಗ್ಯಕರವಾಗಿರುತ್ತದೆ.
ಕೆಲವು ಕುಟುಂಬಗಳು ಶುಚಿಗೊಳಿಸುವ ಒಂದು ಕಾರ್ಯಕ್ರಮವನ್ನು ಹೊಂದಿರುವುದು ಮಾತ್ರವಲ್ಲದೆ ಅದನ್ನು ಒಂದು ಕಾಗದಲ್ಲಿ ಬರೆದಿಟ್ಟು, ಅದನ್ನು ಇಡೀ ಕುಟುಂಬವು ನೋಡಬಹುದಾದ ಸ್ಥಳದಲ್ಲಿ ಅಂಟಿಸಿಟ್ಟಿರುತ್ತವೆ ಮತ್ತು ಅದನ್ನು ತಪ್ಪದೆ ಪಾಲಿಸುತ್ತವೆ. ಇದು ಅತ್ಯುತ್ತಮ ಪ್ರತಿಫಲವನ್ನು ನೀಡುತ್ತದೆ. ಶುದ್ಧತೆಯ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳನ್ನು ನಾವು ಒಳಸೇರಿಸಿಲ್ಲ. ಉದಾಹರಣೆಗೆ, ಶುಚಿಗೊಳಿಸಲು ಉಪಯೋಗಿಸುವ ಉತ್ಪನ್ನಗಳಲ್ಲಿ ನಿಮ್ಮ ಸಮುದಾಯಕ್ಕೆ ಅತಿ ಸೂಕ್ತವಾಗಿರುವಂಥದ್ದು ಯಾವುದು ಮತ್ತು ಶುಚಿಗೊಳಿಸಲು ಉಪಯುಕ್ತವಾಗಿರುವ ಯಾವ ಸಾಧನಗಳನ್ನು ನೀವು ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ನೀವೇ ನಿರ್ಧರಿಸತಕ್ಕದ್ದು.
ಇಲ್ಲಿ ಕೊಡಲ್ಪಟ್ಟಿರುವ ಕೆಲವು ಸಲಹೆಗಳು, ನಿಮ್ಮ ಮನೆ ಮತ್ತು ಸುತ್ತುಮುತ್ತುಗಳನ್ನು ಶುದ್ಧವಾಗಿ ಇಟ್ಟುಕೊಳ್ಳುವ ಅಗತ್ಯವನ್ನು ಇಡೀ ಕುಟುಂಬವು ಮನಗಾಣುವಂತೆ ಖಂಡಿತವಾಗಿಯೂ ಸಹಾಯಮಾಡುತ್ತವೆ. ನೆನಪಿನಲ್ಲಿಡಿರಿ, ಮನೆ ಮತ್ತು ಪರಿಸರವನ್ನು ಶುದ್ಧವಾಗಿಡುವುದು ನಿಮ್ಮ ಆರ್ಥಿಕ ನಿಲುವಿನ ಮೇಲೆ ಹೊಂದಿಕೊಂಡಿರುವುದಿಲ್ಲ, ಬದಲಾಗಿ ನಿಮ್ಮ ಮನೋಭಾವದ ಮೇಲೆ ಹೊಂದಿಕೊಂಡಿರುತ್ತದೆ. (g05 6/8)
[ಪುಟ 22, 23ರಲ್ಲಿರುವ ಚೌಕ]
ಮನೆಯನ್ನು ಶುಚಿಗೊಳಿಸುವ ವ್ಯಾವಹಾರಿಕ ಕಾರ್ಯಕ್ರಮ
ಪಟ್ಟಿಯಲ್ಲಿರುವ ಖಾಲಿ ಸ್ಥಳವನ್ನು ನಿಮ್ಮ ಸ್ವಂತ ಅಂಶಗಳನ್ನು ಸೇರಿಸಲು ಉಪಯೋಗಿಸಿರಿ
ಪ್ರಾಮುಖ್ಯ ಸೂಚನೆ: ಶುಚಿಗೊಳಿಸಲು ಉಪಯೋಗಿಸುವ ಉತ್ಪನ್ನಗಳನ್ನು ಬೆರೆಸುವುದು, ಅದರಲ್ಲೂ ಮುಖ್ಯವಾಗಿ ಬ್ಲೀಚ್ ಮತ್ತು ಅಮೋನಿಯವನ್ನು ಒಟ್ಟಿಗೆ ಬೆರೆಸುವುದು ಬಹಳ ಅಪಾಯಕಾರಿಯಾಗಿರಬಲ್ಲದು
✔ ಪ್ರತಿದಿನ
❏ ಮಲಗುವ ಕೋಣೆ: ಹಾಸಿಗೆಯನ್ನು ಸಿದ್ಧಮಾಡಿ ಸರಿಯಾಗಿ ಇಡಿರಿ ಮತ್ತು ಕೋಣೆಯನ್ನು ಚೊಕ್ಕವಾಗಿಡಿ
❏ ಅಡಿಗೆ ಕೋಣೆ: ಪಾತ್ರೆಗಳನ್ನು ಮತ್ತು ತೊಟ್ಟಿ (ಸಿಂಕ್)ಯನ್ನು ತೊಳೆಯಿರಿ. ಕಪಾಟುಗಳನ್ನು ಹಾಗೂ ಮೇಜನ್ನು ಶುದ್ಧವಾಗಿಡಿ. ಅಗತ್ಯವಿರುವಾಗ ನೆಲವನ್ನು ಗುಡಿಸಿ ಅಥವಾ ಒರಸಿರಿ
❏ ಸ್ನಾನದ ಕೋಣೆ: ಸಿಂಕ್ ಮತ್ತು ಶೌಚಾಲಯವನ್ನು ತೊಳೆಯಿರಿ. ಎಲ್ಲ ವಸ್ತುಗಳನ್ನು ಚೊಕ್ಕವಾಗಿಡಿ
❏ ವಾಸದ ಕೋಣೆ ಮತ್ತು ಇತರ ಕೋಣೆಗಳು: ವಸ್ತುಗಳನ್ನು ಕ್ರಮಬದ್ಧವಾಗಿಡಿ. ಪೀಠೋಪಕರಣಗಳನ್ನು ಶುಚಿಗೊಳಿಸಿ. ಅಗತ್ಯವಿದ್ದಾಗ ನೆಲವನ್ನು ಗುಡಿಸಿ, ಒರಸಿ ಅಥವಾ ವ್ಯಾಕ್ಯೂಮ್ ಮಾಡಿ
❏ ಇಡೀ ಮನೆ: ಕಸವನ್ನು ಸರಿಯಾಗಿ ತೊಲಗಿಸಿ
✔ ಸಾಪ್ತಾಹಿಕ
❏ ಮಲಗುವ ಕೋಣೆ: ಹಾಸಿಗೆಯ ಮೇಲೆ ಹಾಕಿರುವ ಬಟ್ಟೆಯನ್ನು ಬದಲಾಯಿಸಿರಿ. ಅಗತ್ಯವಿದ್ದರೆ ನೆಲವನ್ನು ಗುಡಿಸಿ, ಒರಸಿ ಅಥವಾ ವ್ಯಾಕ್ಯೂಮ್ ಮಾಡಿ. ಪೀಠೋಪಕರಣಗಳಿಂದ ಧೂಳನ್ನು ಒರಸಿರಿ
❏ ಅಡಿಗೆ ಕೋಣೆ: ಸ್ಟೋವ್, ಅಡಿಗೆ ಮಾಡಲು ಉಪಯೋಗಿಸುವ ಸ್ಥಳದಲ್ಲಿರುವ ಸಾಮಗ್ರಿಗಳು ಮತ್ತು ಸಿಂಕಿನ ಅಡಿಭಾಗವನ್ನು ತೊಳೆಯಿರಿ. ನೆಲವನ್ನು ಒರಸಿರಿ
❏ ಸ್ನಾನದ ಕೋಣೆ: ಸ್ನಾನದ ಕೋಣೆಯ ಗೋಡೆಗಳನ್ನು ತೊಳೆಯಿರಿ ಮತ್ತು ಅಲ್ಲಿರುವ ಸಿಂಕ್ ಅಥವಾ ಸ್ನಾನದ ಟಬ್ಬಿನ ಅಡಿಭಾಗವನ್ನು ಶುಚಿಗೊಳಿಸಿರಿ. ಶೌಚಾಲಯವನ್ನು, ಕ್ಯಾಬಿನೆಟ್ ಮತ್ತು ಇತರ ಮೇಲ್ಮೈಯನ್ನು ಸೋಂಕು ನಿವಾರಕಗಳಿಂದ ಶುಚಿಗೊಳಿಸಿರಿ. ಟವಲುಗಳನ್ನು ಬದಲಾಯಿಸಿರಿ. ನೆಲವನ್ನು ಗುಡಿಸಿ ಅಥವಾ ಒರಸಿರಿ
✔ ಮಾಸಿಕ
❏ ಸ್ನಾನದ ಕೋಣೆ: ಎಲ್ಲ ಗೋಡೆಗಳನ್ನು ಸರಿಯಾಗಿ ಉಜ್ಜಿ ತೊಳೆಯಿರಿ
❏ ಇಡೀ ಮನೆ: ಬಾಗಿಲುಗಳ ಚೌಕಟ್ಟುಗಳನ್ನು ಶುಚಿಗೊಳಿಸಿರಿ. ಪೀಠೋಪಕರಣಗಳಿಗೆ ಹಾಕುವ ಸಜ್ಜನ್ನು ವ್ಯಾಕ್ಯೂಮ್ ಮಾಡಿರಿ ಅಥವಾ ಸರಿಯಾಗಿ ಶುದ್ಧಗೊಳಿಸಿರಿ
❏ ತೋಟ, ಅಂಗಳ, ವಾಹನವನ್ನು ನಿಲ್ಲಿಸುವ ಸ್ಥಳ: ಅಗತ್ಯವಿದ್ದಾಗ ಗುಡಿಸಿ ಶುದ್ಧವಾಗಿಡಿ. ಕಸ ಅಥವಾ ಅನಗತ್ಯ ವಸ್ತುಗಳು ಒಟ್ಟುಸೇರದಂತೆ ನೋಡಿಕೊಳ್ಳಿ
✔ ಆರು ತಿಂಗಳಿಗೊಮ್ಮೆ
❏ ಮಲಗುವ ಕೋಣೆ: ಹಾಸಿಗೆಯನ್ನು ಬಳಸದಿರುವಾಗ ಅದರ ಮೇಲೆ ಹರಡುವ ಬಟ್ಟೆಗಳನ್ನು ಅದರ ತಯಾರಕನ ಸಲಹೆಗನುಸಾರ ಶುಚಿಗೊಳಿಸಿರಿ
❏ ಅಡಿಗೆ ಕೋಣೆ: ಫ್ರಿಜ್ ಅನ್ನು ಖಾಲಿ ಮಾಡಿ, ಸಂಪೂರ್ಣವಾಗಿ ಶುಚಿಗೊಳಿಸಿರಿ
❏ ಸ್ನಾನದ ಕೋಣೆ: ಎಲ್ಲ ಶೆಲ್ಫ್ ಮತ್ತು ಕಪಾಟುಗಳನ್ನು ಖಾಲಿ ಮಾಡಿ, ಶುಚಿಗೊಳಿಸಿರಿ. ಅಗತ್ಯವಿಲ್ಲದ ಅಥವಾ ಅವಧಿ ಮುಗಿದ ವಸ್ತುಗಳನ್ನು ಬಿಸಾಡಿರಿ
❏ ಇಡೀ ಮನೆ: ದೀಪಗಳು, ಫ್ಯಾನ್‌ಗಳು ಮತ್ತು ಲೈಟ್‌ಗಳ ನೆಲೆವಸ್ತುಗಳಿದ್ದರೆ ಅವುಗಳನ್ನು ಶುಚಿಗೊಳಿಸಿರಿ. ಬಾಗಿಲನ್ನು ಶುಚಿಗೊಳಿಸಿ. ಕರ್ಟನ್‌ಗಳನ್ನು ಒಗೆಯಿರಿ. ಕಿಟಕಿಗಳನ್ನು ಮತ್ತು ಕಿಟಕಿಯ ಚೌಕಟ್ಟುಗಳನ್ನು ತೊಳೆಯಿರಿ
✔ ವರ್ಷಕ್ಕೊಮ್ಮೆ
❏ ಮಲಗುವ ಕೋಣೆ: ಕಪಾಟುಗಳನ್ನು ಖಾಲಿ ಮಾಡಿ, ಸಂಪೂರ್ಣವಾಗಿ ಶುಚಿಗೊಳಿಸಿರಿ. ಅನಗತ್ಯ ವಸ್ತುಗಳನ್ನು ಬಿಸಾಡಿರಿ. ಕಂಬಳಿಗಳನ್ನು ಒಗೆಯಿರಿ. ಹಾಸಿಗೆಯನ್ನು ವ್ಯಾಕ್ಯೂಮ್ ಮಾಡಿ ಅಥವಾ ಸಂಪೂರ್ಣವಾಗಿ ಧೂಳನ್ನು ಜಾಡಿಸಿ. ತಲೆದಿಂಬುಗಳನ್ನು ಅದರ ತಯಾರಕನ ಸಲಹೆಗನುಸಾರ ಶುಚಿಗೊಳಿಸಿರಿ
❏ ಅಡಿಗೆ ಕೋಣೆ: ಶೆಲ್ಫ್‌ಗಳು, ಕಪಾಟುಗಳು ಮತ್ತು ಡ್ರಾಅರುಗಳನ್ನು ಖಾಲಿ ಮಾಡಿ, ಶುಚಿಗೊಳಿಸಿರಿ. ಬೇಡವಾದ ವಸ್ತುಗಳನ್ನು ಬಿಸಾಡಿರಿ. ಸಾಮಗ್ರಿಗಳನ್ನು ಹೊರತೆಗೆದು, ಆ ಸ್ಥಳವನ್ನು ಶುಚಿಗೊಳಿಸಿ
❏ ಇಡೀ ಮನೆ: ಎಲ್ಲ ಗೋಡೆಗಳನ್ನು ತೊಳೆಯಿರಿ. ಪೀಠೋಪಕರಣಗಳಿಗೆ ಹಾಕುವ ಸಜ್ಜನ್ನು ಮತ್ತು ಕರ್ಟನ್‌ಗಳನ್ನು ಅವುಗಳ ತಯಾರಕನ ಸಲಹೆಗನುಸಾರ ಶುಚಿಗೊಳಿಸಿರಿ
❏ ವಾಹನವನ್ನು ನಿಲ್ಲಿಸುವ ಸ್ಥಳ ಅಥವಾ ದಾಸ್ತಾನುಕೋಣೆ: ಒಳ್ಳೇ ರೀತಿಯಲ್ಲಿ ಗುಡಿಸಿರಿ. ವಸ್ತುಗಳನ್ನು ಕ್ರಮಬದ್ಧವಾಗಿಡಿರಿ ಮತ್ತು ಅನಗತ್ಯ ವಸ್ತುಗಳನ್ನು ಬಿಸಾಡಿರಿ
[ಪುಟ 24ರಲ್ಲಿರುವ ಚಿತ್ರಗಳು]
“ಎಲ್ಲದಕ್ಕೂ ಅದರದ್ದೇ ಆದ ಸ್ಥಳವಿದೆ ಮತ್ತು ಎಲ್ಲವೂ ಅದರದರ ಸ್ಥಳದಲ್ಲಿರಬೇಕು”
[ಪುಟ 24ರಲ್ಲಿರುವ ಚಿತ್ರಗಳು]
ನೀವು ಮುಂದೆಂದೂ ಉಪಯೋಗಿಸದ ವಸ್ತುಗಳನ್ನು ತೊಲಗಿಸಲು ಇದು ನಿಮಗೆ ಸಹಾಯಮಾಡಬಹುದು