ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ಕ್ರಿಪ್ಟ್‌ನಿಂದ ಸ್ಕ್ರೀನಿನ ವರೆಗೆ

ಸ್ಕ್ರಿಪ್ಟ್‌ನಿಂದ ಸ್ಕ್ರೀನಿನ ವರೆಗೆ

ಸ್ಕ್ರಿಪ್ಟ್‌ನಿಂದ ಸ್ಕ್ರೀನಿನ ವರೆಗೆ

ಕಳೆದ ಕೆಲವು ದಶಕಗಳಲ್ಲಿ, ಹಾಲಿವುಡ್‌ ಚಿತ್ರೋದ್ಯಮವು ಬಾಕ್ಸ್‌ ಆಫೀಸ್‌ ಬ್ಲಾಕ್‌ಬಸ್ಟರ್‌ಗಳ ಸಮೃದ್ಧ ತಯಾರಿಕೆಯ ಮೂಲವಾಗಿದೆ. ಇದರ ಪ್ರಭಾವವು ಲೋಕದ ಎಲ್ಲ ಕಡೆಗಳಲ್ಲೂ ಪಸರಿಸಿದೆ. ಏಕೆಂದರೆ, ಅನೇಕ ಅಮೆರಿಕನ್‌ ಚಲನಚಿತ್ರಗಳು ಅಲ್ಲಿ ಬಿಡುಗಡೆಯಾದ ಕೆಲವೇ ವಾರಗಳಲ್ಲಿ, ಕೆಲವೊಮ್ಮೆ ಕೆಲವೇ ದಿನಗಳಲ್ಲಿ ಇತರ ದೇಶಗಳಲ್ಲೂ ಬಿಡುಗಡೆಯಾಗುತ್ತವೆ. ಕೆಲವು ಚಲನಚಿತ್ರಗಳಾದರೋ ಒಂದೇ ತಾರೀಖಿನಂದು ಲೋಕದ ಸುತ್ತಲೂ ಬಿಡುಗಡೆಯಾಗಿವೆ. “ಚಲನಚಿತ್ರಗಳ ಅಂತಾರಾಷ್ಟ್ರೀಯ ಮಾರುಕಟ್ಟೆಯು ಬಹಳ ತ್ವರಿತವಾಗಿ ಬೆಳೆಯುತ್ತಿದೆ ಮತ್ತು ಇದು ಕುತೂಹಲಕಾರಿ ಮಾರುಕಟ್ಟೆಯಾಗಿದೆ. ಆದುದರಿಂದ, ಚಲನಚಿತ್ರಗಳನ್ನು ತಯಾರಿಸುವಾಗ ಅವುಗಳನ್ನು ಒಂದು ಭೌಗೋಳಿಕ ಸದವಕಾಶವಾಗಿ ವೀಕ್ಷಿಸುತ್ತೇವೆ” ಎಂದು ವಾರ್ನರ್‌ ಬ್ರದರ್ಸ್‌ ಪಿಕ್ಚರ್ಸ್‌ನ ಸ್ಥಳೀಯ ವಿತರಣೆಯ ಅಧ್ಯಕ್ಷರಾದ ಡ್ಯಾನ್‌ ಫೆಲ್‌ಮನ್‌ ತಿಳಿಸುತ್ತಾರೆ. ಹಾಲಿವುಡ್‌ ಚಿತ್ರೋದ್ಯಮದಲ್ಲಿ ಏನು ಸಂಭವಿಸುತ್ತಿದೆಯೊ ಅದು ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಲೋಕದಾದ್ಯಂತ ಇರುವ ಮನೋರಂಜನೆಯ ಉದ್ಯಮವನ್ನು ಪ್ರಭಾವಿಸುತ್ತಿದೆ. *

ಆದರೆ ಒಂದು ಚಲನಚಿತ್ರದಲ್ಲಿ ಲಾಭವನ್ನು ಗಳಿಸುವುದು ಅಷ್ಟು ಸುಲಭದ ವಿಷಯವಲ್ಲ. ಅನೇಕ ಚಲನಚಿತ್ರಗಳ ಬರೀ ತಯಾರಿಕೆ ಮತ್ತು ವಿಕ್ರಯ ವೆಚ್ಚವನ್ನು ತುಂಬಿಸಲಿಕ್ಕಾಗಿ ಅವು 450 ಕೋಟಿಗಿಂತಲೂ ಹೆಚ್ಚು ರೂಪಾಯಿಗಳನ್ನು ಸಂಪಾದಿಸಬೇಕಾಗುತ್ತವೆ. ಅವು ಯಶಸ್ಸನ್ನು ಗಳಿಸುತ್ತವೊ ಇಲ್ಲವೊ ಎಂಬುದು ಮುಂತಿಳಿಸಲಾಗದ ಮನಸ್ಸಿನ ಸಾರ್ವಜನಿಕರ ಮೇಲೆ ಸಂಪೂರ್ಣವಾಗಿ ಹೊಂದಿಕೊಂಡಿರುತ್ತವೆ. “ಯಾವ ಸಮಯದಲ್ಲಿ ಜನರು ಯಾವುದನ್ನು ಆಸಕ್ತಿಕರವಾಗಿ ಅಥವಾ ಭಾವೋದ್ರೇಕಕರವಾಗಿ ಕಾಣುವರು ಎಂಬುದನ್ನು ನೀವೆಂದಿಗೂ ಊಹಿಸಲಾರಿರಿ” ಎಂದು ಎಮ್ರೀ ವಿಶ್ವವಿದ್ಯಾನಿಲಯದ ಚಲನಚಿತ್ರ ಅಧ್ಯಯನಗಳ ಪ್ರೊಫೆಸರರಾದ ಡೇವಿಡ್‌ ಕುಕ್‌ ಹೇಳುತ್ತಾರೆ. ಹೀಗಿರುವಾಗ, ಚಲನಚಿತ್ರ ತಯಾರಕರು ತಮ್ಮ ಯಶಸ್ಸಿನ ಸಾಧ್ಯತೆಯನ್ನು ಹೇಗೆ ಹೆಚ್ಚಿಸುತ್ತಾರೆ? ಇದಕ್ಕೆ ಉತ್ತರವನ್ನು ಕಂಡುಕೊಳ್ಳುವ ಮುನ್ನ, ಚಲನಚಿತ್ರಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದರ ಕುರಿತು ಕೆಲವು ಮೂಲಭೂತ ಅಂಶಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. *

ಚಲನಚಿತ್ರ ತಯಾರಿಕೆಗೆ ಪೂರ್ವ​—⁠ಚಲನಚಿತ್ರವನ್ನು ತೆಗೆಯಲು ಸಿದ್ಧತೆಗಳನ್ನು ಮಾಡುವುದು

ಚಲನಚಿತ್ರದ ತಯಾರಿಕೆಯಲ್ಲಿ, ತಯಾರಿಕೆಗೆ ಪೂರ್ವ ಕೆಲಸಗಳು ಅತಿ ದೀರ್ಘಾವಧಿಯದ್ದೂ ಅತಿ ಪ್ರಾಮುಖ್ಯವಾದವುಗಳೂ ಆಗಿರುತ್ತವೆ. ಯಾವುದೇ ದೊಡ್ಡ ಯೋಜನೆಯಲ್ಲಿ ಸತ್ಯವಾಗಿರುವಂತೆ, ಪೂರ್ವಸಿದ್ಧತೆಯು ಯಶಸ್ಸಿಗೆ ಕೀಲಿಕೈಯಾಗಿದೆ. ಚಿತ್ರತಯಾರಿಕೆಗೆ ಪೂರ್ವದ ಕೆಲಸಗಳ ಸಮಯದಲ್ಲಿ ಎಷ್ಟು ಖರ್ಚುಮಾಡಲಾಗುತ್ತದೊ ಮುಂದೆ ಚಲನಚಿತ್ರವನ್ನು ತಯಾರಿಸುವ ಸಮಯದಲ್ಲಿ ಅದರ ಅನೇಕ ಪಟ್ಟು ಉಳಿತಾಯವಾಗುತ್ತದೆ ಎಂಬುದೇ ನಿರೀಕ್ಷೆಯಾಗಿದೆ.

ಚಲನಚಿತ್ರದ ತಯಾರಿಯು ಒಂದು ಕಥೆಯೊಂದಿಗೆ ಆರಂಭವಾಗುತ್ತದೆ. ಕಥೆಯು, ಕಲ್ಪನೆ ಅಥವಾ ನಿಜ ಜೀವನ ಘಟನೆಗಳ ಮೇಲೆ ಆಧಾರಿತವಾಗಿರಬಹುದು. ಲೇಖಕನು ಕಥೆಯನ್ನು ಕಥಾಲಿಪಿಪ್ರತಿಯ (ಸ್ಕ್ರಿಪ್ಟ್‌) ರೂಪಕ್ಕೆ ಬದಲಾಯಿಸುತ್ತಾನೆ. ಕಥಾವಸ್ತು (ಸ್ಕ್ರೀನ್‌ಪ್ಲೇ) ಎಂಬುದಾಗಿಯೂ ಕರೆಯಲಾಗುವ ಈ ಕಥಾಲಿಪಿಪ್ರತಿಯನ್ನು ಅನೇಕ ಬಾರಿ ಓದಿ, ತಿದ್ದುವಿಕೆಯನ್ನು ಮಾಡಿದ ನಂತರ ಅಂತಿಮ ರೂಪಭೇದವು ಸಿದ್ಧವಾಗುತ್ತದೆ. ಇದನ್ನು ಷೂಟಿಂಗ್‌ ಕಥಾಲಿಪಿಪ್ರತಿ (ಷೂಟಿಂಗ್‌ ಸ್ಕ್ರಿಪ್ಟ್‌) ಎಂದು ಕರೆಯಲಾಗುತ್ತದೆ. ಷೂಟಿಂಗ್‌ ಕಥಾಲಿಪಿಪ್ರತಿಯಲ್ಲಿ ಚಿತ್ರದಲ್ಲಿನ ಡೈಅಲಾಗ್‌ ಮತ್ತು ಸಂಭವಿಸಲಿರುವ ದೃಶ್ಯದ ಸಂಕ್ಷಿಪ್ತ ವರ್ಣನೆಯು ಕೊಡಲ್ಪಟ್ಟಿರುತ್ತದೆ. ಮಾತ್ರವಲ್ಲದೆ, ತಾಂತ್ರಿಕ ವಿವರಗಳ ಕುರಿತಾದ ಮಾರ್ಗದರ್ಶನಗಳನ್ನು, ಅಂದರೆ ಕ್ಯಾಮರಾ ನಿರ್ದೇಶನ ಮತ್ತು ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಬದಲಾವಣೆಯ ಕುರಿತಾದ ನಿರ್ದೇಶನ ಈ ಮುಂತಾದ ವಿಚಾರಗಳನ್ನು ಸಹ ಅದು ಒದಗಿಸುತ್ತದೆ.

ಆದರೆ, ಒಂದು ಚಲನಚಿತ್ರವು ಅದರ ಆರಂಭದ ಹಂತದಲ್ಲಿರುವಾಗಲೇ, ಅಂದರೆ ಕಥಾವಸ್ತುವಿನ ಹಂತದಲ್ಲಿಯೇ ಅದನ್ನು ಒಬ್ಬ ನಿರ್ಮಾಪಕನಿಗೆ ಮಾರಲಾಗುತ್ತದೆ. * ಯಾವ ರೀತಿಯ ಕಥಾವಸ್ತುವನ್ನು ನಿರ್ಮಾಪಕನು ಪಡೆದುಕೊಳ್ಳಲು ಬಯಸುತ್ತಾನೆ? ಬೇಸಿಗೆ ಕಾಲದ ಚಲನಚಿತ್ರಗಳನ್ನು ಮುಖ್ಯವಾಗಿ ಹದಿಹರೆಯದವರನ್ನೂ ಯೌವನಸ್ಥರನ್ನೂ ಮನಸ್ಸಿನಲ್ಲಿಟ್ಟು ತಯಾರಿಸಲಾಗುತ್ತದೆ. ಇವರನ್ನು “ಪಾಪ್‌ಕಾರ್ನ್‌ ಗುಂಪು” ಎಂಬುದಾಗಿ ಒಬ್ಬ ಚಲನಚಿತ್ರ ವಿಮರ್ಶಕನು ಕರೆಯುತ್ತಾನೆ. ಆದುದರಿಂದಲೇ, ಯುವ ಜನರನ್ನು ಆಕರ್ಷಿಸುವಂಥ ಕಥೆಗಳಲ್ಲಿ ನಿರ್ಮಾಪಕನು ಆಸಕ್ತನಾಗಿರುತ್ತಾನೆ.

ಎಲ್ಲ ವಯಸ್ಸಿನವರಿಗೆ ಆಕರ್ಷಕವಾಗಿರುವ ಕಥಾಲಿಪಿಪ್ರತಿಯು ಇನ್ನೂ ಹೆಚ್ಚು ಉತ್ತಮವಾಗಿರುವುದು. ಉದಾಹರಣೆಗೆ, ಕಾಮಿಕ್‌ ಪುಸ್ತಕದಲ್ಲಿ ಬರುವ ಸೂಪರ್‌ಹೀರೊವಿನ ಮೇಲಾಧಾರಿತವಾದ ಒಂದು ಚಲನಚಿತ್ರವು ಚಿಕ್ಕ ಮಕ್ಕಳ ಗಮನವನ್ನು ಸೆಳೆಯುತ್ತದೆ, ಏಕೆಂದರೆ ಅವರಿಗೆ ಅದರ ಪಾತ್ರಧಾರಿಯ ಪರಿಚಯವಿರುತ್ತದೆ. ಮತ್ತು ಚಲನಚಿತ್ರವನ್ನು ನೋಡಲು ಹೋಗುವಾಗ ಖಂಡಿತವಾಗಿಯೂ ಅವರ ಹೆತ್ತವರು ಅವರೊಂದಿಗೆ ಹೋಗುವರು. ಆದರೆ ಹದಿಹರೆಯದವರನ್ನು ಮತ್ತು ಯೌವನಸ್ಥರನ್ನು ಚಲನಚಿತ್ರ ತಯಾರಕರು ಹೇಗೆ ಆಕರ್ಷಿಸುತ್ತಾರೆ? ಇದಕ್ಕೆ “ಪ್ರಚೋದಕ ವಿಷಯಗಳೇ” ಕೀಲಿಕೈಯಾಗಿದೆ ಎಂಬುದಾಗಿ ದಿ ವಾಷಿಂಗ್‌ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಲೀಸ ಮನ್ಡೀ ತಿಳಿಸುತ್ತಾರೆ. “ಎಲ್ಲ ವಯಸ್ಸಿನವರಿಗೆ ಆಕರ್ಷಕವಾಗುವಂತೆ ಮಾಡುವ ಮೂಲಕ ಅದರ ಲಾಭಗಳಿಸುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಲು” ಒಂದು ಉಪಾಯವು, ಅಶ್ಲೀಲ ಭಾಷೆ, ತೀವ್ರವಾದ ಹಿಂಸಾಕೃತ್ಯದ ದೃಶ್ಯಗಳು ಮತ್ತು ಬಹಳಷ್ಟು ಸೆಕ್ಸ್‌ ದೃಶ್ಯಗಳನ್ನು ಚಲನಚಿತ್ರದಲ್ಲಿ ಸೇರಿಸುವುದೇ ಆಗಿದೆ.

ಒಂದು ಕಥಾವಸ್ತುವಿನಿಂದ ಲಾಭಗಳಿಸುವ ಸಾಧ್ಯತೆಯಿದೆ ಎಂದು ನಿರ್ಮಾಪಕನಿಗೆ ಅನಿಸುವುದಾದರೆ ಅವನದನ್ನು ಖರೀದಿಸಿ, ಒಬ್ಬ ಖ್ಯಾತ ನಿರ್ದೇಶಕ ಮತ್ತು ಒಬ್ಬ ಪ್ರಸಿದ್ಧ ನಟ ಅಥವಾ ನಟಿಯೊಂದಿಗೆ ಒಪ್ಪಂದಮಾಡುತ್ತಾನೆ. ಒಬ್ಬ ಖ್ಯಾತ ನಿರ್ದೇಶಕನನ್ನು ಮತ್ತು ಪ್ರಸಿದ್ಧ ತಾರೆಯನ್ನು ಕೇವಲ ಹೊಂದಿರುವುದೇ ಚಲನಚಿತ್ರವು ಬಿಡುಗಡೆಯಾಗುವಾಗ ಜನರ ಆಸಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ, ಆರಂಭದ ಹಂತದಲ್ಲಿ ಚಲನಚಿತ್ರಕ್ಕೆ ಹಣಕಾಸಿನ ಬೆಂಬಲವನ್ನು ನೀಡಲು ಮುಂದೆಬರುವಂತೆ ಬಂಡವಾಳ ಹೂಡುವವರನ್ನೂ ಅದು ಆಕರ್ಷಿಸುತ್ತದೆ.

ಚಲನಚಿತ್ರ ತಯಾರಿಕೆಯ ಪೂರ್ವದ ಕೆಲಸಗಳಲ್ಲಿ ಇನ್ನೊಂದು, ಕಥಾಫಲಕವನ್ನು ಸಿದ್ಧಗೊಳಿಸುವುದೇ ಆಗಿದೆ. ಕಥಾಫಲಕ ಅಂದರೆ ಚಲನಚಿತ್ರದ ವಿವಿಧ ದೃಶ್ಯಗಳನ್ನು​—⁠ಮುಖ್ಯವಾಗಿ ಯಾವ ದೃಶ್ಯದಲ್ಲಿ ಆ್ಯಕ್ಷನ್‌ ಒಳಗೂಡಿರುತ್ತದೊ ಅಂಥ ದೃಶ್ಯಗಳನ್ನು​—⁠ಪ್ರದರ್ಶಿಸುವ ರೇಖಾಚಿತ್ರಗಳ ಸರಣಿಯಾಗಿದೆ. ಇದು ಛಾಯಾಗ್ರಾಹಕನಿಗೆ ಒಂದು ನೀಲಿನಕ್ಷೆಯಾಗಿ ಕಾರ್ಯನಡಿಸುತ್ತದೆ. ಕಥಾಫಲಕವು, ಚಿತ್ರೀಕರಣದ ಸಮಯದಲ್ಲಿ ಬಹಳಷ್ಟು ಸಮಯವನ್ನು ಉಳಿಸುತ್ತದೆ. “ಚಲನಚಿತ್ರವನ್ನು ಚಿತ್ರೀಕರಿಸುವ ಸ್ಥಳದಲ್ಲಿ ನಿಂತು ಕ್ಯಾಮರವನ್ನು ಎಲ್ಲಿ ನಿಲ್ಲಿಸಬೇಕು ಎಂದು ಯೋಜಿಸುತ್ತಾ ಷೂಟಿಂಗ್‌ ದಿನವನ್ನು ಹಾಳುಮಾಡುವ ಸಂಗತಿಗಿಂತ ಬೇಸರದ ಸಂಗತಿ ಇನ್ನೊಂದಿಲ್ಲ” ಎಂದು ನಿರ್ದೇಶಕರೂ ಕಥಾಲೇಖಕರೂ ಆದ ಫ್ರ್ಯಾಂಕ್‌ ಡ್ಯಾರಬಾಟ್‌ ಹೇಳುತ್ತಾರೆ.

ಚಲನಚಿತ್ರ ತಯಾರಿಕೆಯ ಪೂರ್ವದ ಕೆಲಸಗಳ ಸಮಯದಲ್ಲಿ ಇನ್ನೂ ಅನೇಕ ವಿಷಯಗಳನ್ನು ನಿರ್ಣಯಿಸಬೇಕಾಗುತ್ತದೆ. ಉದಾಹರಣೆಗೆ, ಚಿತ್ರೀಕರಣಕ್ಕಾಗಿ ಯಾವ ಯಾವ ಸ್ಥಳಗಳನ್ನು ಉಪಯೋಗಿಸಬೇಕು? ಪ್ರಯಾಣವು ಅಗತ್ಯವಾಗಿದೆಯೊ? ಕಟ್ಟಡ ಯಾ ಮನೆಗಳ ಒಳಭಾಗದ ದೃಶ್ಯಗಳನ್ನು ಚಿತ್ರೀಕರಿಸಬೇಕಾಗಿರುವಲ್ಲಿ, ಅವುಗಳನ್ನು ಕಟ್ಟಿ ವಿನ್ಯಾಸಿಸುವುದು ಹೇಗೆ? ಪೋಷಾಕುಗಳ (ಕಾಸ್ಟ್ಯೂಮ್‌) ಅಗತ್ಯವಿದೆಯೊ? ಲೈಟಿಂಗ್‌, ಮೇಕಪ್‌ ಮತ್ತು ಕೇಶಾಲಂಕಾರದ ಜವಾಬ್ದಾರಿಯನ್ನು ಯಾರು ನೋಡಿಕೊಳ್ಳುತ್ತಾರೆ? ಆಡಿಯೊ ರೆಕಾರ್ಡಿಂಗ್‌, ಭ್ರಮಾತ್ಮಕ ದೃಶ್ಯ ಪರಿಣಾಮಗಳು (ಸ್ಪೆಷಲ್‌ ಇಫೆಕ್ಟ್‌) ಮತ್ತು ಸಾಹಸ ಪ್ರದರ್ಶನಗಳ (ಸ್ಟಂಟ್‌) ಕುರಿತಾಗಿ ಏನು? ಒಂದು ಚಲನಚಿತ್ರವನ್ನು ತಯಾರಿಸುವ ಮುನ್ನ ಪರಿಗಣಿಸಬೇಕಾದ ಅನೇಕ ವಿಷಯಗಳಲ್ಲಿ ಇವು ಕೇವಲ ಕೆಲವೇ ಆಗಿವೆ. ಒಂದು ದೊಡ್ಡ ಬಡ್ಜಟ್ಟಿನ ಚಲನಚಿತ್ರದ ಕೊನೆಯಲ್ಲಿ ಬರುವ ಹೆಸರುಗಳ ಪಟ್ಟಿಯನ್ನು ಗಮನಿಸಿರಿ. ಒಂದು ಚಲನಚಿತ್ರವನ್ನು ತಯಾರಿಸುವುದರ ಹಿಂದೆ ನೂರಾರು ಜನರು ಒಳಗೂಡಿದ್ದಾರೆ ಎಂಬುದನ್ನು ನೀವು ಕಂಡುಕೊಳ್ಳುವಿರಿ. “ಒಂದು ದೀರ್ಘಚಿತ್ರವನ್ನು ತಯಾರಿಸಲು ಇಡೀ ಒಂದು ನಗರದಷ್ಟು ಜನರು ಬೇಕಾಗುತ್ತಾರೆ,” ಎಂಬುದಾಗಿ ಅನೇಕ ಚಲನಚಿತ್ರ ತಂಡಗಳಲ್ಲಿ ಕೆಲಸಮಾಡಿದ ಒಬ್ಬ ತಂತ್ರಜ್ಞನು ತಿಳಿಸುತ್ತಾನೆ.

ಚಲನಚಿತ್ರ ತಯಾರಿಕೆ​—⁠ಚಲನಚಿತ್ರವನ್ನು ಫಿಲ್ಮ್‌ಗೆ ಸೇರಿಸುವುದು

ಒಂದು ಚಲನಚಿತ್ರದ ಷೂಟಿಂಗ್‌ ಮಾಡುವುದು ಬಹಳಷ್ಟು ಸಮಯ ಮತ್ತು ಪರಿಶ್ರಮವನ್ನು ಕೇಳಿಕೊಳ್ಳುತ್ತದೆ ಹಾಗೂ ಅದು ತುಂಬ ದುಬಾರಿಯಾಗಿದೆ. ಷೂಟಿಂಗ್‌ನ ಸಮಯದಲ್ಲಿ ಕೇವಲ ಒಂದು ನಿಮಿಷವನ್ನು ಹಾಳುಮಾಡಿದರೂ ಅದರಿಂದಾಗಿ ಸಾವಿರಾರು ಡಾಲರ್‌ ಹಣ ನಷ್ಟವಾಗಸಾಧ್ಯವಿದೆ. ಕೆಲವೊಮ್ಮೆ ನಟರನ್ನು, ನೆರವು ನೀಡುವ ಸದಸ್ಯರನ್ನು ಮತ್ತು ಸಾಮಗ್ರಿಗಳನ್ನು ಒಂದು ಸ್ಥಳದಿಂದ ಲೋಕದ ಇನ್ನೊಂದು ಮೂಲೆಗೆ ಸಾಗಿಸಬೇಕಾಗಿರುತ್ತದೆ. ಷೂಟಿಂಗ್‌ ಎಲ್ಲಿಯೇ ನಡೆಯಲಿ, ಚಿತ್ರೀಕರಣದ ಪ್ರತಿ ದಿನ ದೊಡ್ಡ ಮೊತ್ತದ ಹಣವನ್ನು ವ್ಯಯಿಸಬೇಕಾಗಿರುತ್ತದೆ.

ಷೂಟಿಂಗ್‌ ನಡೆಯುವ ಸ್ಥಳಕ್ಕೆ ಬರುವವರಲ್ಲಿ ಲೈಟಿಂಗಿಗೆ ನೆರವು ನೀಡುವ ಸದಸ್ಯರು, ಕೇಶಾಲಂಕಾರ ಮಾಡುವವರು ಮತ್ತು ಮೇಕಪ್‌ ಮಾಡುವವರು ಮೊದಲಿಗರಾಗಿರುತ್ತಾರೆ. ಚಿತ್ರೀಕರಣದ ಪ್ರತಿ ದಿನ, ಚಲನಚಿತ್ರ ತಾರೆಯರು ತಮ್ಮನ್ನು ಕ್ಯಾಮರಕ್ಕೆ ಸಿದ್ಧಗೊಳಿಸಲು ಬಹಳಷ್ಟು ತಾಸುಗಳನ್ನು ವ್ಯಯಿಸುತ್ತಾರೆ. ಅನಂತರ ದೀರ್ಘಾವಧಿಯ ಷೂಟಿಂಗ್‌ ಆರಂಭವಾಗುತ್ತದೆ.

ಪ್ರತಿಯೊಂದು ದೃಶ್ಯದ ಚಿತ್ರೀಕರಣವನ್ನು ನಿರ್ದೇಶಕನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಾನೆ. ಸ್ವಲ್ಪ ಮಟ್ಟಿಗಿನ ಸರಳ ದೃಶ್ಯವು ಸಹ ಕೆಲವೊಮ್ಮೆ ಇಡೀ ದಿನವನ್ನು ತೆಗೆದುಕೊಳ್ಳಸಾಧ್ಯವಿದೆ. ಚಲನಚಿತ್ರದಲ್ಲಿರುವ ಹೆಚ್ಚಿನ ದೃಶ್ಯಗಳು ಕೇವಲ ಒಂದೇ ಕ್ಯಾಮರದಿಂದ ಚಿತ್ರೀಕರಿಸಲ್ಪಡುತ್ತವೆ. ಆದುದರಿಂದ, ಒಂದು ದೃಶ್ಯವನ್ನು ಕ್ಯಾಮರಾದ ಪ್ರತಿಯೊಂದು ಕೋನದಿಂದ ತೆಗೆಯಲಿಕ್ಕಾಗಿ ಹಲವಾರು ಬಾರಿ ನಟಿಸಲಾಗುತ್ತದೆ. ಮಾತ್ರವಲ್ಲದೆ, ಅತ್ಯುತ್ತಮ ನಟನೆಗಾಗಿ ಅಥವಾ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಯಿಂದಾಗಿ ಪ್ರತಿ ಷಾಟನ್ನು ಪುನಃ ಪುನಃ ತೆಗೆಯಬೇಕಾಗಬಹುದು. ಇಂಥ ಪ್ರತಿಯೊಂದು ಯತ್ನವನ್ನು ಟೇಕ್‌ ಎಂಬುದಾಗಿ ಕರೆಯಲಾಗುತ್ತದೆ. ದೊಡ್ಡ ದೃಶ್ಯಗಳಿಗೆ 50 ಅಥವಾ ಅದಕ್ಕಿಂತಲೂ ಹೆಚ್ಚಿನ ಟೇಕ್‌ಗಳನ್ನು ತೆಗೆಯಲಾಗುತ್ತದೆ! ಅನಂತರ​—⁠ಸಾಮಾನ್ಯವಾಗಿ ಪ್ರತಿ ಷೂಟಿಂಗ್‌ ದಿನದ ಅಂತ್ಯದಲ್ಲಿ​—⁠ನಿರ್ದೇಶಕನು ಪ್ರತಿಯೊಂದು ಟೇಕ್‌ ಅನ್ನು ವೀಕ್ಷಿಸಿ, ಯಾವುದನ್ನು ಉಳಿಸುವುದೆಂದು ನಿರ್ಧರಿಸುತ್ತಾನೆ. ಒಟ್ಟಿನಲ್ಲಿ ಚಿತ್ರೀಕರಣದ ಕೆಲಸಕ್ಕೆ ಕೆಲವು ವಾರಗಳು ಅಥವಾ ಕೆಲವೊಮ್ಮೆ ತಿಂಗಳುಗಳು ಸಹ ಬೇಕಾಗುತ್ತದೆ.

ಚಲನಚಿತ್ರ ತಯಾರಿಕೆಯ ತರುವಾಯ​—⁠ತುಣುಕುಗಳನ್ನು ಸಂಯೋಜಿಸುವುದು

ಚಲನಚಿತ್ರ ತಯಾರಿಕೆಯ ತರುವಾಯ ಎಲ್ಲ ಟೇಕ್‌ಗಳನ್ನು ಜೋಡಿಸಲಾಗುತ್ತದೆ. ಇದನ್ನು ಎಡಿಟಿಂಗ್‌ ಎಂದು ಕರೆಯುತ್ತಾರೆ. ಹೀಗೆ ಮಾಡುವ ಮೂಲಕ ಪ್ರತಿಯೊಂದು ಟೇಕ್‌ ಒಂದಕ್ಕೊಂದು ಒಟ್ಟುಗೂಡಿ ಕೊನೆಯಲ್ಲಿ ಒಂದು ಸಂಪೂರ್ಣ ಚಲನಚಿತ್ರವಾಗುತ್ತದೆ. ಮೊದಲಾಗಿ, ಶ್ರವ್ಯ ಭಾಗಗಳನ್ನು ದೃಶ್ಯ ಭಾಗಗಳೊಂದಿಗೆ ಪರಸ್ಪರ ಸಂಯೋಜಿಸಲಾಗುತ್ತದೆ. ಅನಂತರ, ಸಂಪಾದಕನು ಜೋಡಿಸಲ್ಪಡದಿರುವ ಟೇಕ್‌ಗಳನ್ನು ಒಟ್ಟುಮಾಡಿ ಚಲನಚಿತ್ರದ ಒಂದು ಪೂರ್ವಭಾವಿ ಹಂತವನ್ನು ಸಿದ್ಧಪಡಿಸುತ್ತಾನೆ. ಅದನ್ನು ಕರಡು ಪ್ರತಿ ಎಂದು ಕರೆಯಲಾಗುತ್ತದೆ.

ಇದೇ ಹಂತದಲ್ಲಿ ಧ್ವನಿ ಪರಿಣಾಮ ಮತ್ತು ವೀಕ್ಷಣ ಸಾಧನಗಳನ್ನು ಸೇರಿಸಲಾಗುತ್ತದೆ. ಸ್ಪೆಷಲ್‌ ಇಫೆಕ್ಟ್ಸ್‌ ಚಲನಚಿತ್ರ ಕಲೆ​—⁠ಚಲನಚಿತ್ರ ತಯಾರಿಕೆಯಲ್ಲಿನ ಜಟಿಲ ಅಂಶಗಳಲ್ಲಿ ಒಂದು​—⁠ಯನ್ನು ಕೆಲವೊಮ್ಮೆ ಕಂಪ್ಯೂಟರ್‌ ಗ್ರಾಫಿಕ್ಸ್‌ನ ಸಹಾಯದಿಂದ ಪೂರೈಸಲಾಗುತ್ತದೆ. ಫಲಿತಾಂಶವು ಅತಿ ಪ್ರೇಕ್ಷಣೀಯವೂ ನೈಜವೂ ಆಗಿರಸಾಧ್ಯವಿದೆ.

ಚಲನಚಿತ್ರ ತಯಾರಿಕೆಯ ತರುವಾಯದ ಕೆಲಸಗಳ ಸಮಯದಲ್ಲಿ ಸಂಗೀತವನ್ನು ಸಹ ಸೇರಿಸಲಾಗುತ್ತದೆ ಮತ್ತು ಇಂದಿನ ಚಲನಚಿತ್ರದಲ್ಲಿ ಸಂಗೀತವು ಒಂದು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ. “ಮೂಲ ಧ್ವನಿಪಥ ಸಂಗೀತದ ಬೇಡಿಕೆಯು ಚಿತ್ರೋದ್ಯಮದಲ್ಲಿ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ನಾಟಕೀಯ ಘಟನೆಗಳ ಸಂದರ್ಭದಲ್ಲಿ ಕೇವಲ ಇಪ್ಪತ್ತು ನಿಮಿಷಗಳ ಅಥವಾ ಸ್ವಲ್ಪ ಹೊತ್ತಿನ ಸಂಗೀತಕ್ಕಲ್ಲ, ಬದಲಾಗಿ ಒಂದು ತಾಸಿನಷ್ಟು ಉದ್ದದ ಸಂಗೀತಕ್ಕೆ ಇಂದು ಬೇಡಿಕೆಯಿದೆ” ಎಂದು ಫಿಲ್ಮ್‌ ಸ್ಕೋರ್‌ ಮಂತ್ಲೀ ಎಂಬ ಪತ್ರಿಕೆಯಲ್ಲಿ ಎಡ್ವಿನ್‌ ಬ್ಲ್ಯಾಕ್‌ ತಿಳಿಸುತ್ತಾರೆ.

ಕೆಲವೊಮ್ಮೆ ಹೊಸದಾಗಿ ಜೋಡಿಸಿದ ಚಲನಚಿತ್ರವನ್ನು ಆಯ್ದ ವೀಕ್ಷಕರಿಗೆ ತೋರಿಸಲಾಗುತ್ತದೆ. ಈ ಆಯ್ದ ವೀಕ್ಷಕರು, ಒಂದುವೇಳೆ ನಿರ್ದೇಶಕನ ಚಲನಚಿತ್ರ ತಯಾರಿಕೆಯಲ್ಲಿ ಒಳಗೂಡಿರದ ಸ್ನೇಹಿತರು ಅಥವಾ ಸಹೋದ್ಯೋಗಿಗಳು ಆಗಿರಬಹುದು. ಅವರ ಪ್ರತಿಕ್ರಿಯೆಗೆ ಹೊಂದಿಕೆಯಲ್ಲಿ ನಿರ್ದೇಶಕನು ದೃಶ್ಯಗಳನ್ನು ಪುನಃ ಷೂಟ್‌ ಮಾಡಬಹುದು ಅಥವಾ ಕೆಲವು ದೃಶ್ಯಗಳನ್ನು ತೆಗೆದುಬಿಡಬಹುದು. ಕೆಲವೊಂದು ಸಂದರ್ಭಗಳಲ್ಲಿ, ಪ್ರಥಮ ತೆರೆಪರೀಕ್ಷೆಯ ಸಮಯದಲ್ಲಿ ದೊರೆತ ನಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಚಲನಚಿತ್ರದ ಸಂಪೂರ್ಣ ಸಮಾಪ್ತಿಯನ್ನೇ ಬದಲಾಯಿಸಲಾಗುತ್ತದೆ.

ಅಂತಿಮವಾಗಿ, ಇಡೀ ಚಲನಚಿತ್ರವನ್ನು ಚಿತ್ರಮಂದಿರಕ್ಕೆ ಬಿಡುಗಡೆಮಾಡಲಾಗುತ್ತದೆ. ಕೇವಲ ಈ ಹಂತದಲ್ಲಿ, ಒಂದು ಚಲನಚಿತ್ರವು ಬ್ಲಾಕ್‌ಬಸ್ಟರ್‌ ಆಗುತ್ತದೊ ಅಥವಾ ಸಂಪೂರ್ಣವಾಗಿ ‘ಫ್ಲಾಪ್‌’ ಆಗುತ್ತದೊ ಇಲ್ಲವೆ ಇವೆರಡರ ಮಧ್ಯಂತರ ಪರಿಣಾಮವನ್ನು ತರುತ್ತದೊ ಎಂಬುದು ತಿಳಿದುಬರುತ್ತದೆ. ಆದರೆ, ಇದರಲ್ಲಿ ಹಣಕ್ಕಿಂತಲೂ ಹೆಚ್ಚಿನದ್ದು ಗಂಡಾಂತರದಲ್ಲಿದೆ. ಒಂದರ ನಂತರ ಇನ್ನೊಂದರಂತೆ ಚಲನಚಿತ್ರವು ಫ್ಲಾಪ್‌ ಆಗುವುದಾದರೆ, ಒಬ್ಬ ನಟನ ಭಾವೀ ಪ್ರತೀಕ್ಷೆಯು ಹಾಳಾಗುತ್ತದೆ ಮತ್ತು ನಿರ್ದೇಶಕನ ಪ್ರಖ್ಯಾತಿಯು ನಾಶವಾಗುತ್ತದೆ. ಚಲನಚಿತ್ರ ತಯಾರಿಕೆಯಲ್ಲಿನ ತನ್ನ ಆರಂಭದ ವರುಷಗಳನ್ನು ನೆನಪಿಸಿಕೊಳ್ಳುತ್ತಾ ನಿರ್ದೇಶಕರಾದ ಜಾನ್‌ ಬೋರ್ಮನ್‌ ತಿಳಿಸುವುದು: “ನನ್ನ ಸಮಕಾಲೀನರಲ್ಲಿ ಹಲವಾರು ಮಂದಿ, ಕೆಲವು ಚಲನಚಿತ್ರವು ಸೋಲನ್ನಪ್ಪಿದ ನಂತರ ತಮ್ಮ ಕೆಲಸವನ್ನು ಕಳೆದುಕೊಂಡದ್ದನ್ನು ನಾನು ನೋಡಿದ್ದೇನೆ. ಚಿತ್ರೋದ್ಯಮದ ಕಠೋರ ಸತ್ಯತೆಯು ಏನೆಂದರೆ, ನಿಮ್ಮ ಯಜಮಾನರಿಗೆ ನೀವು ಹಣವನ್ನು ಸಂಪಾದಿಸಿ ಕೊಡದಿದ್ದರೆ ನೀವು ಕೆಲಸವನ್ನು ಕಳೆದುಕೊಳ್ಳುವುದು ನಿಶ್ಚಯ ಎಂಬುದೇ.”

ಆದರೆ, ಸಾರ್ವಜನಿಕರು ಒಂದು ಚಿತ್ರಮಂದಿರದ ಮುಂದೆ ನಿಂತಿರುವಾಗ, ಚಲನಚಿತ್ರ ತಯಾರಕರ ಕೆಲಸ ಉಳಿಯುತ್ತದೆಯೋ ಅಥವಾ ಕೆಲಸವನ್ನು ಕಳೆದುಕೊಳ್ಳುತ್ತಾರೊ ಎಂದು ಯೋಚಿಸುವುದಿಲ್ಲ. ಅವರ ಮುಖ್ಯ ಚಿಂತೆಯು, ‘ನಾನು ಈ ಚಲನಚಿತ್ರವನ್ನು ಸವಿಯುವೆನೊ? ಇದನ್ನು ನೋಡಲಿಕ್ಕಾಗಿ ಟಿಕೇಟಿಗೆ ಇಷ್ಟು ಹಣ ಖರ್ಚುಮಾಡುವುದು ಸಾರ್ಥಕವೊ? ಚಲನಚಿತ್ರವು ದಿಗ್ಭ್ರಮೆಗೊಳಿಸುವಂಥದ್ದು ಅಥವಾ ಮನ ನೋಯಿಸುವಂಥದ್ದಾಗಿದೆಯೊ? ಇದು ನನ್ನ ಮಕ್ಕಳಿಗೆ ನೋಡಲು ಸೂಕ್ತವಾಗಿದೆಯೊ?’ ಎಂದಾಗಿರುತ್ತದೆ. ನೀವು ಯಾವ ಚಲನಚಿತ್ರವನ್ನು ನೋಡಬೇಕೆಂದು ನಿರ್ಧರಿಸುವ ಮುನ್ನ ಈ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬಲ್ಲಿರಿ? (g05 5/8)

[ಪಾದಟಿಪ್ಪಣಿಗಳು]

^ ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ನ ಪ್ರೊಫೆಸರ್‌ ಅನೀಟ ಎಲ್‌ಬರ್ಸ್‌ಗನುಸಾರ, “ಈಗ ಇತರ ದೇಶಗಳ ಬಾಕ್ಸ್‌ ಆಫೀಸ್‌ ಸಂಪಾದನೆಯು ಅಮೆರಿಕಕ್ಕಿಂತಲೂ ಹೆಚ್ಚಾಗಿರುವುದಾದರೂ, ಅಮೆರಿಕದಲ್ಲಿ ಒಂದು ಚಲನಚಿತ್ರವು ಎಷ್ಟು ಉತ್ತಮ ಬೆಲೆಗೆ ವಿಕ್ರಯವಾಗುತ್ತದೊ ಅದರ ಮೇಲೆಯೇ ಇತರ ದೇಶಗಳಲ್ಲಿ ಅದು ಎಷ್ಟು ಬೆಲೆಗೆ ವಿಕ್ರಯವಾಗುವುದೆಂಬುದು ಹೊಂದಿಕೊಂಡಿರುತ್ತದೆ.”

^ ಒಂದು ಚಲನಚಿತ್ರದಿಂದ ಇನ್ನೊಂದಕ್ಕೆ ಕೆಲವು ವಿವರಗಳು ಬದಲಾಗಬಹುದಾದರೂ, ಅದನ್ನು ತಯಾರಿಸಸಾಧ್ಯವಿರುವ ಒಂದು ವಿಧವನ್ನು ಇಲ್ಲಿ ಕೊಡಲಾಗಿದೆ.

^ ಕೆಲವೊಮ್ಮೆ ನಿರ್ಮಾಪಕನಿಗೆ ಕಥಾವಸ್ತುವಿನ ಬದಲಿಗೆ ಕೇವಲ ಕಥೆಯ ಹೊರಮೇರೆಯನ್ನು ಮಾತ್ರ ನೀಡಲಾಗುತ್ತದೆ. ಒಂದುವೇಳೆ ಅವನಿಗೆ ಕಥೆಯು ಆಸಕ್ತಿದಾಯಕವಾಗಿ ಕಂಡುಬಂದರೆ, ಅವನು ಅದರ ಕಾನೂನುಬದ್ಧ ಒಪ್ಪಿಗೆಯನ್ನು ಖರೀದಿಸುತ್ತಾನೆ ಮತ್ತು ಅದನ್ನು ಒಂದು ಕಥಾವಸ್ತುವಾಗಿ ವಿಕಸಿಸುತ್ತಾನೆ.

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಯಾವ ಸಮಯದಲ್ಲಿ ಜನರು ಯಾವುದನ್ನು ಆಸಕ್ತಿಕರವಾಗಿ ಅಥವಾ ಭಾವೋದ್ರೇಕಕರವಾಗಿ ಕಾಣುವರು ಎಂಬುದನ್ನು ನೀವೆಂದಿಗೂ ಊಹಿಸಲಾರಿರಿ”​—⁠ಚಲನಚಿತ್ರ ಅಧ್ಯಯನಗಳ ಪ್ರೊಫೆಸರ್‌ ಡೇವಿಡ್‌ ಕುಕ್‌

[ಪುಟ 6, 7ರಲ್ಲಿರುವ ಚೌಕ/ಚಿತ್ರಗಳು]

ಬ್ಲಾಕ್‌ಬಸ್ಟರ್‌ ಮಾರಾಟಗಾರಿಕೆ

ಚಲನಚಿತ್ರದ ತಯಾರಿಕೆಯು ಮುಗಿದಿದೆ. ಕೋಟ್ಯಂತರ ಜನರು ವೀಕ್ಷಿಸಲು ಅದು ಈಗ ಸಿದ್ಧವಾಗಿದೆ. ಅದು ಯಶಸ್ವಿಯಾಗುವುದೊ? ಚಲನಚಿತ್ರ ತಯಾರಕರು ತಮ್ಮ ಉತ್ಪನ್ನದ ಮಾರಾಟಗಾರಿಕೆಯನ್ನು ಹೇಗೆ ಮಾಡುತ್ತಾರೆ ಮತ್ತು ಅದನ್ನು ಒಂದು ಬ್ಲಾಕ್‌ಬಸ್ಟರ್‌ ಚಲನಚಿತ್ರವಾಗಿ ಹೇಗೆ ಮಾರ್ಪಡಿಸುತ್ತಾರೆ ಎಂಬ ಕೆಲವು ವಿಧಾನಗಳನ್ನು ನಾವೀಗ ಪರಿಗಣಿಸೋಣ.

ಕುತೂಹಲ ಕೆರಳಿಸುವ ಮಾತುಕತೆ: ಚಲನಚಿತ್ರಕ್ಕಾಗಿ ಜನರಲ್ಲಿ ಕುತೂಹಲವನ್ನು ಬೆಳೆಸುವ ಅತಿ ಪರಿಣಾಮಕಾರಿಯಾದ ಒಂದು ವಿಧಾನವು ಬಾಯಿಮಾತಿನ ಮೂಲಕವೇ ಆಗಿದೆ. ಚಲನಚಿತ್ರ ಬಿಡುಗಡೆಯಾಗುವ ಕೆಲವು ತಿಂಗಳುಗಳ ಮುಂಚೆಯೇ ಈ ರೀತಿಯ ಮಾತುಕತೆ ಆರಂಭವಾಗುತ್ತದೆ. ಮುಂಚಿನ ಹಿಟ್‌ ಚಿತ್ರದಂತೆಯೇ ಇನ್ನೊಂದು ಚಿತ್ರವು ಬಿಡುಗಡೆಯಾಗಲಿದೆ ಎಂದು ಘೋಷಿಸುವ ಮೂಲಕ ಇದು ಆರಂಭವಾಗಬಹುದು. ಕೂಡಲೆ ಜನರು ಹೀಗೆ ಯೋಚಿಸತೊಡಗುತ್ತಾರೆ: ಹಿಂದಿನ ಹಿಟ್‌ ಚಿತ್ರದಲ್ಲಿದ್ದ ಅದೇ ತಾರೆಗಳು ಇದರಲ್ಲಿಯೂ ನಟಿಸಿರುವರೊ? ಮೊದಲಿನ ಚಲನಚಿತ್ರದಷ್ಟೇ ಇದೂ ಉತ್ತಮವಾಗಿರುವುದೊ (ಅಥವಾ ಕೆಟ್ಟದಾಗಿರುವುದೊ)?

ಕೆಲವು ಸಂದರ್ಭಗಳಲ್ಲಿ, ಚಲನಚಿತ್ರದ ಯಾವುದೊ ಒಂದು ವಿವಾದಗ್ರಸ್ತ ಅಂಶದ ಮೇಲೆ ಮಾತುಕತೆ ನಡೆಸಲಾಗುತ್ತದೆ. ಉದಾಹರಣೆಗೆ, ಸಾಮಾನ್ಯ ಸಭಿಕರಿಗಾಗಿ ತಯಾರಿಸಲ್ಪಡುವ ಚಲನಚಿತ್ರಗಳಿಗೆ ತೀರ ಪ್ರತಿಕೂಲವಾಗಿದೆ ಎಂಬುದಾಗಿ ತೋರುವ ಸೆಕ್ಸ್‌ ದೃಶ್ಯದ ಪ್ರದರ್ಶನದ ಕುರಿತಾಗಿ ಮಾತುಕತೆ ನಡೆಸಲಾಗಬಹುದು. ದೃಶ್ಯವು ನಿಜವಾಗಿಯೂ ಅಷ್ಟು ಅಸಹ್ಯವಾಗಿದೆಯೊ? ಚಲನಚಿತ್ರವು ಸ್ವೀಕಾರಾರ್ಹ ಮಿತಿಗಳಿಗಿಂತ ತೀರ ದೂರ “ಸರಿದಿದೆಯೊ”? ಎಂಬ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡುತ್ತವೆ. ಈ ವಿಷಯದಲ್ಲಿ ವಿರುದ್ಧ ದೃಷ್ಟಿಕೋನವನ್ನು ಹೊಂದಿರುವ ಜನಸಾಮಾನ್ಯರು ತಮ್ಮ ನಡುವೆ ಚರ್ಚೆಗಳನ್ನು ಮಾಡುವಾಗ, ಚಲನಚಿತ್ರ ತಯಾರಕರಿಗೆ ತಮ್ಮ ಚಿತ್ರಕ್ಕೆ ಪುಕ್ಕಟೆಯಾಗಿ ಜಾಹೀರಾತು ದೊರೆತಂತಿರುತ್ತದೆ. ಕೆಲವೊಮ್ಮೆ ಈ ರೀತಿಯಾಗಿ ಎಬ್ಬಿಸಲ್ಪಟ್ಟ ವಿವಾದವು, ಚಲನಚಿತ್ರದ ಪ್ರಥಮ ಷೋಗೆ ಬಹಳಷ್ಟು ಸಂಖ್ಯೆಯಲ್ಲಿ ಜನರು ಹಾಜರಾಗುವುದನ್ನು ಖಾತ್ರಿಪಡಿಸುತ್ತದೆ.

ಮಾಧ್ಯಮ: ಹೆಚ್ಚು ಉಪಯೋಗದಲ್ಲಿರುವ ಜಾಹೀರಾತು ವಿಧಗಳಲ್ಲಿ ಜಾಹೀರಾತು ಫಲಕದ ಉಪಯೋಗ, ವಾರ್ತಾಪತ್ರಿಕೆ ಮತ್ತು ಟಿವಿ ಜಾಹೀರಾತು, ಚಿತ್ರಮಂದಿರದಲ್ಲಿ ತೋರಿಸುವ ಹೊಸ ಚಲನಚಿತ್ರದ ಟ್ರೇಲರ್‌ಗಳು ಹಾಗೂ ಚಲನಚಿತ್ರ ತಾರೆಗಳು ತಮ್ಮ ಇತ್ತೀಚಿನ ಚಲನಚಿತ್ರದ ಕುರಿತು ಕೆಲವು ವಿವರಣೆಯನ್ನು ನೀಡುವ ಸಂದರ್ಶನಗಳು ಒಳಗೂಡಿವೆ. ಇಂದು ಚಲನಚಿತ್ರ ಜಾಹೀರಾತಿನ ಮುಖ್ಯ ಸಾಧನ ಇಂಟರ್‌ನೆಟ್‌ ಆಗಿದೆ.

ಜಾಹೀರಾತು ಸರಕುಗಳು: ಜಾಹೀರಾತು ಸರಕುಗಳು ಚಲನಚಿತ್ರದ ಬಿಡುಗಡೆಯ ಕಡೆಗೆ ಜನರ ಆಸಕ್ತಿಯನ್ನು ಹೆಚ್ಚಿಸಸಾಧ್ಯವಿದೆ. ಉದಾಹರಣೆಗೆ, ಕಾಮಿಕ್‌ ಪುಸ್ತಕದ ಹೀರೊವಿನ ಮೇಲಾಧಾರಿತವಾದ ಒಂದು ಚಲನಚಿತ್ರದೊಂದಿಗೆ ಆ ಚಲನಚಿತ್ರದ ಹೆಸರನ್ನು ಬರೆದಿರುವ ಊಟದ ಡಬ್ಬಗಳು, ಮಗ್‌ಗಳು, ಒಡವೆಗಳು, ಬಟ್ಟೆಗಳು, ಕೀಚೈನುಗಳು, ಗಡಿಯಾರ, ದೀಪಗಳು, ಒಂದು ಬೋರ್ಡ್‌ ಆಟ ಈ ಮುಂತಾದವುಗಳನ್ನು ಮಾರುಕಟ್ಟೆಗೆ ತರಲಾಗುತ್ತದೆ. “ಸಾಮಾನ್ಯವಾಗಿ, ಒಂದು ಚಲನಚಿತ್ರ ಬಿಡುಗಡೆಯಾಗುವುದಕ್ಕಿಂತಲೂ ಮುಂಚಿತವಾಗಿ ಅದಕ್ಕೆ ಸಂಬಂಧಿಸಿದ ಜಾಹೀರಾತು ಸರಕುಗಳು 40 ಪ್ರತಿಶತದಷ್ಟು ಮಾರಾಟವಾಗಿರುತ್ತವೆ” ಎಂಬುದಾಗಿ ಅಮೆರಿಕದ ನ್ಯಾಯವಾದಿಗಳ ಸಂಘದ ಒಂದು ಮನೋರಂಜನಾ ಪುಸ್ತಕದಲ್ಲಿ ಜೋ ಸಿಸ್‌ಟೋ ಬರೆದಿದ್ದಾರೆ.

ಮನೆಯಲ್ಲಿಯೇ ವಿಡಿಯೋ ವೀಕ್ಷಣೆ: ಬಾಕ್ಸ್‌ ಆಫೀಸಿನಲ್ಲಿ ಲಾಭವನ್ನು ಗಳಿಸಲು ತಪ್ಪಿಹೋಗುವ ಚಲನಚಿತ್ರಗಳು ವಿಡಿಯೋ ಮಾರಾಟಗಳ ಮೂಲಕ ಲಾಭವನ್ನು ಗಳಿಸಬಲ್ಲವು. ಚಲನಚಿತ್ರಗಳ ಮೂಲಕ ಗಳಿಸಲಾಗುವ ಹಣದ ಲೆಕ್ಕಾಚಾರವನ್ನು ಇಡುವ ಬ್ರೂಸ್‌ ನ್ಯಾಶ್‌ ತಿಳಿಸುವುದು: “ವಿಡಿಯೋ ಮಾರಾಟಗಳ ಲಾಭವು 40ರಿಂದ 50 ಪ್ರತಿಶತವಿರುತ್ತದೆ.”

ರೇಟಿಂಗ್‌: ಚಲನಚಿತ್ರ ತಯಾರಕರು ರೇಟಿಂಗನ್ನು ತಮ್ಮ ಲಾಭಕ್ಕಾಗಿ ಬಳಸಲು ಕಲಿತಿದ್ದಾರೆ. ಉದಾಹರಣೆಗೆ, ಒಂದು ಚಲನಚಿತ್ರದಲ್ಲಿ ಬೇಕುಬೇಕೆಂದೆ ಯಾವುದಾದರೊಂದು ಅಶ್ಲೀಲ ವಿಷಯವನ್ನು ಸೇರಿಸಿ ಅದಕ್ಕೆ ವಿಪರೀತ ರೇಟಿಂಗ್‌ ದೊರೆಯುವಂತೆ ಮಾಡುತ್ತಾರೆ. ಈ ರೀತಿಯಾಗಿ, ವಯಸ್ಕರಿಗೆ ಮಾತ್ರ ಎಂಬ ರೇಟಿಂಗನ್ನು ಪಡೆಯುವಂತೆ ಮಾಡಲಾಗುತ್ತದೆ. ಇನ್ನೊಂದು ಬದಿಯಲ್ಲಿ, ವಯಸ್ಕರಿಗೆ ಮಾತ್ರ ಎಂಬ ರೇಟಿಂಗನ್ನು ತ್ಯಜಿಸಲಿಕ್ಕಾಗಿ ಮತ್ತು ಅದನ್ನು ಹದಿಹರೆಯದವರಿಗಾಗಿ ಮಾಡುವಂತೆ ಸಾಕಷ್ಟು ದೃಶ್ಯಗಳನ್ನು ಕತ್ತರಿಸಿ ತೆಗೆಯಲಾಗುತ್ತದೆ. ದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಲೀಸ ಮನ್ಡೀ ಬರೆದದ್ದು, ಹದಿಹರೆಯದ ರೇಟಿಂಗ್‌ “ಒಂದು ಜಾಹೀರಾತಾಗಿ ಪರಿವರ್ತನೆಗೊಂಡಿದೆ. ಚಲನಚಿತ್ರದಲ್ಲಿ ಆಕರ್ಷಕ ವಿಷಯಗಳಿವೆ ಎಂಬ ಸಂದೇಶವನ್ನು ಹದಿಹರೆಯದವರಿಗೆ ಮತ್ತು ಹದಿಹರೆಯವನ್ನು ತಲಪಲು ಆತುರಪಡುತ್ತಿರುವ ಚಿಕ್ಕ ಮಕ್ಕಳಿಗೆ ಕಳುಹಿಸಲು ಸ್ಟೂಡಿಯೋಗಳು ರೇಟಿಂಗನ್ನು ಉಪಯೋಗಿಸುತ್ತವೆ.” ಮನ್ಡೀ ಮುಂದುವರಿಸಿ ಬರೆಯುವುದು, ರೇಟಿಂಗ್‌ “ಹೆತ್ತವರನ್ನು ಎಚ್ಚರಿಸುತ್ತದೆ ಮತ್ತು ಮಕ್ಕಳನ್ನು ವಂಚಿಸುತ್ತದೆ. ಈ ರೀತಿಯಾಗಿ ಹೆತ್ತವರ ಮತ್ತು ಮಕ್ಕಳ ನಡುವೆ ಒತ್ತಡವನ್ನು” ಉಂಟುಮಾಡುತ್ತದೆ.

[ಪುಟ 8, 9ರಲ್ಲಿರುವ ಚಿತ್ರಗಳು]

ಚಲನಚಿತ್ರಗಳನ್ನು ತಯಾರಿಸುವ ವಿಧಾನ

ಸ್ಕ್ರಿಪ್ಟ್‌

ಕಥಾಫಲಕಗಳು

ಪೋಷಾಕು

ಮೇಕಪ್‌

ಸ್ಥಳದಲ್ಲಿ ಚಲನಚಿತ್ರ ತೆಗೆಯುವುದು

ಸ್ಪೆಷಲ್‌ ಇಫೆಕ್ಟ್‌ಗಳನ್ನು ತೆಗೆಯುವುದು

ಸಂಗೀತದ ರೆಕಾರ್ಡಿಂಗ್‌

ಸೌಂಡ್‌ ಮಿಕ್ಸಿಂಗ್‌

ಕಂಪ್ಯೂಟರ್‌ನಿಂದ ಉಂಟುಮಾಡಲ್ಪಡುವ ಆ್ಯನಿಮೇಷನ್‌

ಎಡಿಟ್‌ ಮಾಡುವುದು