ಚಿನ್ನದ ನಿತ್ಯ ಆಕರ್ಷಣೆ
ಚಿನ್ನದ ನಿತ್ಯ ಆಕರ್ಷಣೆ
ಆಸ್ಟ್ರೇಲಿಯದ ಎಚ್ಚರ! ಲೇಖಕರಿಂದ
ಆಸ್ಟ್ರೇಲಿಯದ ದಟ್ಟವಾದ ಪೊದೆಗಾಡುಗಳ ಮಧ್ಯೆ ಚಿನ್ನಶೋಧಕನಾಗಿರುವ ಒಬ್ಬ ವ್ಯಕ್ತಿಯು ಒಣಗಿರುವ ತೊರೆಯೊಂದರ ತಳದಲ್ಲಿ ಪ್ರಯಾಸದಿಂದ ಹೆಜ್ಜೆಹಾಕುತ್ತಾ ನಡೆಯುತ್ತಿದ್ದಾನೆ. ನಡುಹಗಲಿನ ಸೂರ್ಯನ ಕಡುಶಾಖವು ಅವನ ಬೆನ್ನಿಗೆ ಬಡಿಯುತ್ತಿದೆ. ಧೂಳಿನಿಂದ ತುಂಬಿರುವ ಅವನ ಷರ್ಟಿನಿಂದ ಬೆವರು ಹರಿಯುತ್ತಿದೆ. ಆದರೂ ಧೈರ್ಯಗುಂದದೆ, ಊಟದ ತಟ್ಟೆಯ ಗಾತ್ರದ ಸಾಧನಕ್ಕೆ ಅಳವಡಿಸಲ್ಪಟ್ಟಿರುವ ಒಂದು ಉದ್ದವಾದ ಲೋಹದ ರಾಡನ್ನು ಅವನು ಬಿಗಿಯಾಗಿ ಹಿಡಿದುಕೊಳ್ಳುತ್ತಾನೆ. ಲೋಹವನ್ನು ಪತ್ತೆಹಚ್ಚುವ ಈ ಅತ್ಯಾಧುನಿಕ ಸಾಧನವನ್ನು ನೆಲದ ಮೇಲೆ ಅತ್ತಿಂದಿತ್ತ ಬೀಸುತ್ತಾ ಹೋಗುತ್ತಾನೆ. ಈ ಸಾಧನದ ಕಾಂತೀಯ ಕ್ಷೇತ್ರವು, ಕಲ್ಲುಭೂಮಿಯಲ್ಲಿ ಸುಮಾರು ಮೂರು ಅಡಿಗಳಷ್ಟು ಕೆಳಗೆ ತೂರಿಹೋಗುತ್ತದೆ. ಅವನು ಹಾಕಿಕೊಂಡಿರುವ ಹೆಡ್‌ಫೋನ್‌ಗಳು ಲೋಹವನ್ನು ಪತ್ತೆಹಚ್ಚುವ ಸಾಧನದಿಂದ ಒಂದು ಸಿಗ್ನಲ್ ಅನ್ನು ಪಡೆದುಕೊಳ್ಳುತ್ತವೆ ಮತ್ತು ಏಕಪ್ರಕಾರವಾದ, ಉಚ್ಚಮಟ್ಟದ ಸಿಳ್ಳುಧ್ವನಿಯನ್ನು ಉಂಟುಮಾಡುತ್ತವೆ.
ಇದ್ದಕ್ಕಿದ್ದಂತೆ, ಉಚ್ಚಮಟ್ಟದ ಸಿಳ್ಳುಧ್ವನಿಯು ಕ್ಷೀಣಿಸುತ್ತಾ ಹೋಗಿ ಕ್ಲಿಕ್ ಕ್ಲಿಕ್ ಎಂಬ ಧ್ವನಿಯು ಉಂಟಾದಾಗ ಅವನ ಹೃದಯಬಡಿತವು ಹೆಚ್ಚಾಗುತ್ತದೆ. ಈ ಸಾಧನವು, ಅವನ ಕಾಲಕೆಳಗೆ ನೆಲದಲ್ಲಿ ಯಾವುದೋ ಲೋಹವು ಹುದುಗಿದೆ ಎಂಬುದನ್ನು ಖಂಡಿತವಾಗಿ ಸೂಚಿಸುತ್ತಿದೆ. ಅವನು ಮೊಣಕಾಲೂರಿ ಅಗೆಯಲು ಆರಂಭಿಸುತ್ತಾನೆ. ಗಟ್ಟಿಯಾದ ಭೂಮಿಯನ್ನು ಆ ಕೂಡಲೆ ಅಗೆಯಲಿಕ್ಕಾಗಿ ತನ್ನ ಚಿಕ್ಕ ಪಿಕಾಸಿಯನ್ನು ಉಪಯೋಗಿಸುತ್ತಾನೆ. ಅಲ್ಲಿ ಹೂತಿರುವಂಥ ವಸ್ತು ಕೇವಲ ಒಂದು ತುಕ್ಕುಹಿಡಿದಿರುವ ಮೊಳೆಯಾಗಿರಬಹುದು. ಒಂದು ಹಳೆಯ ನಾಣ್ಯವಾಗಿರಲೂಬಹುದು. ಆದರೆ ಗುಂಡಿಯು ಆಳಗೊಳ್ಳುತ್ತಾ ಹೋದಂತೆ, ಅಲ್ಲಿ ಕಿಂಚಿತ್ತಾದರೂ ಚಿನ್ನವು ಕಂಡುಬರುತ್ತದೋ ಎಂದು ನೋಡಲಿಕ್ಕಾಗಿ ಅವನು ಅತಿ ಹೆಚ್ಚು ಗಮನಕೊಟ್ಟು ದೃಷ್ಟಿಸುತ್ತಾನೆ.
ಚಿನ್ನಕ್ಕಾಗಿ ಮುಂದುವರಿಯುತ್ತಿರುವ ನುಗ್ಗಾಟ
ಚಿನ್ನವನ್ನು ಕಂಡುಹಿಡಿಯುವ ವಿಧಾನಗಳು ಬದಲಾಗಿರಬಹುದು, ಆದರೆ ಇತಿಹಾಸದಾದ್ಯಂತ ಮಾನವಕುಲವು ಥಳಥಳಿಸುವಂಥ ಈ ಹಳದಿ ಲೋಹವನ್ನು ಅತ್ಯಾಸಕ್ತಿಯಿಂದ ಹುಡುಕಲು ಪ್ರಯತ್ನಿಸಿದೆ. ವಾಸ್ತವದಲ್ಲಿ, ಜಾಗತಿಕ ಚಿನ್ನದ ಸಮಾಲೋಚನ ಸಮಿತಿಗನುಸಾರ, ಕಳೆದ 6,000 ವರ್ಷಗಳಲ್ಲಿ 1,25,000 ಟನ್ನುಗಳಿಗಿಂತ ಹೆಚ್ಚು ಚಿನ್ನವು ಗಣಿಯಿಂದ ತೆಗೆಯಲ್ಪಟ್ಟಿದೆ. * ಈಜಿಪ್ಟ್, ಓಫೀರ್ ಮತ್ತು ದಕ್ಷಿಣ ಅಮೆರಿಕದಲ್ಲಿನ ಪುರಾತನ ನಾಗರಿಕತೆಗಳು ತಮ್ಮ ಚಿನ್ನದ ಸಂಪತ್ತುಗಳಿಗೆ ತುಂಬ ಪ್ರಸಿದ್ಧವಾಗಿದ್ದವಾದರೂ, ಇಷ್ಟರ ತನಕ ಗಣಿಯಿಂದ ತೆಗೆಯಲ್ಪಟ್ಟಿರುವ ಚಿನ್ನದಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚು ಚಿನ್ನವು ಕಳೆದ 150 ವರ್ಷಗಳಲ್ಲಿ ಅಗೆದು ತೆಗೆದದ್ದಾಗಿದೆ.—1 ಅರಸುಗಳು 9:28.
ಇಸವಿ 1848ರಲ್ಲಿ ಯು.ಎಸ್.ಎ.ಯ ಕ್ಯಾಲಿಫೊರ್ನಿಯದಲ್ಲಿ ಅಮೆರಿಕನ್ ರಿವರ್‌ನ ತೀರದಲ್ಲಿರುವ ಸಟರ್ಸ್ ಮಿಲ್‌ನಲ್ಲಿ ಚಿನ್ನವು ಕಂಡುಕೊಳ್ಳಲ್ಪಟ್ಟಾಗ, ಚಿನ್ನದ ಗಣಿಗಾರಿಕೆಯಲ್ಲಿ ಗಮನಾರ್ಹ ಹೆಚ್ಚಳವು ಆರಂಭಗೊಂಡಿತು. ಈ ಕಂಡುಹಿಡಿತವು ಚಿನ್ನಕ್ಕಾಗಿ ನುಗ್ಗಾಟವನ್ನು ಆರಂಭಿಸಿತು, ಅಂದರೆ ನಿರೀಕ್ಷಾಭರಿತ ಚಿನ್ನಶೋಧಕರು ಅಪಾರ ಸಂಖ್ಯೆಯಲ್ಲಿ ಈ ಕ್ಷೇತ್ರಕ್ಕೆ ಆಗಮಿಸಿದರು. ಕ್ಯಾಲಿಫೊರ್ನಿಯಕ್ಕೆ ಬಂದವರೆಲ್ಲರೂ, ಅಲ್ಲಿನ ನೆಲದಲ್ಲಿ ಹುದುಗಿರುವ ತಮ್ಮ ಐಶ್ವರ್ಯವನ್ನು ಕಂಡುಕೊಳ್ಳುವ ಕನಸು ಕಂಡಿದ್ದರು. ಅನೇಕರು ವಿಫಲರಾದರು, ಆದರೆ ಕೆಲವರು ಅದ್ಭುತಕರವಾದ ರೀತಿಯಲ್ಲಿ ಯಶಸ್ಸನ್ನು ಪಡೆದರು. ಈ ಭಾರಿ ಸಂಗ್ರಹದ ಅಸಾಧಾರಣ ವೈಶಾಲ್ಯವನ್ನು, ರೋಮನ್ ಸಾಮ್ರಾಜ್ಯದ ಇಡೀ ಕಾಲಾವಧಿಯಲ್ಲಿ ಸುಮಾರು ಹತ್ತು ಟನ್ನುಗಳಷ್ಟು ಚಿನ್ನವು ಲೋಕವ್ಯಾಪಕವಾಗಿ ಉತ್ಪಾದಿಸಲ್ಪಟ್ಟಿತು ಎಂಬುದನ್ನು ಪರಿಗಣಿಸುವ ಮೂಲಕ ಅಳೆಯಸಾಧ್ಯವಿದೆ. ಆದರೆ 1851ನೇ ಇಸವಿಯೊಂದರಲ್ಲೇ, ಕ್ಯಾಲಿಫೊರ್ನಿಯ ಚಿನ್ನದ ಕ್ಷೇತ್ರದಿಂದ 77 ಟನ್ನುಗಳಷ್ಟು ಚಿನ್ನವು ಗಣಿಯಿಂದ ತೆಗೆಯಲ್ಪಟ್ಟಿತು.
ಸುಮಾರು ಇದೇ ಸಮಯದಷ್ಟಕ್ಕೆ, ಜಗತ್ತಿನ ಇನ್ನೊಂದು ಪಾರ್ಶ್ವದಲ್ಲಿ ಅಂದರೆ ಆಸ್ಟ್ರೇಲಿಯದ ಹೊಸ ಪ್ರಾಂತದಲ್ಲಿ ಚಿನ್ನವು ಕಂಡುಕೊಳ್ಳಲ್ಪಟ್ಟಿತು. ಕ್ಯಾಲಿಫೊರ್ನಿಯ ಚಿನ್ನದ ಕ್ಷೇತ್ರದಲ್ಲಿ ಅಮೂಲ್ಯವಾದ ಅನುಭವವನ್ನು ಪಡೆದಿದ್ದ ಎಡ್ವರ್ಡ್
ಹಾರ್‌ಗ್ರೇವ್ಸ್ ಆಸ್ಟ್ರೇಲಿಯಕ್ಕೆ ಬಂದನು ಮತ್ತು ನ್ಯೂ ಸೌತ್ ವೇಲ್ಸ್‌ನಲ್ಲಿರುವ ಬಾಥರ್ಸ್ಟ್‌ನ ಚಿಕ್ಕ ಪಟ್ಟಣದ ಬಳಿಯಿದ್ದ ತೊರೆಯಲ್ಲಿ ಚಿನ್ನವನ್ನು ಕಂಡುಕೊಂಡನು. 1851ರಲ್ಲಿ, ವಿಕ್ಟೋರಿಯ ರಾಜ್ಯದ ಬಾಲ್ಲರಾಟ್ ಮತ್ತು ಬೆಂಡಿಗೊದಲ್ಲಿ ಸಹ ದೊಡ್ಡ ನಿಕ್ಷೇಪಗಳು ಕಂಡುಕೊಳ್ಳಲ್ಪಟ್ಟವು. ಈ ಕಂಡುಹಿಡಿತಗಳ ಕುರಿತಾದ ಸಮಾಚಾರವು ಎಲ್ಲೆಡೆಯೂ ಹಬ್ಬಿದಾಗ ನುಗ್ಗಾಟವು ಆರಂಭವಾಯಿತು. ಇಲ್ಲಿಗೆ ಬಂದಂಥ ಕೆಲವರು ವೃತ್ತಿಪರ ಗಣಿಗಾರರಾಗಿದ್ದರು. ಆದರೂ, ಹೆಚ್ಚಿನವರು ಬೇಸಾಯಗಾರರು ಅಥವಾ ಆಫೀಸು ಕೆಲಸಗಾರರಾಗಿದ್ದು, ಈ ಮುಂಚೆ ಎಂದೂ ಗಣಿಗಾರರ ಪಿಕಾಸಿಯನ್ನು ಉಪಯೋಗಿಸಿ ಅವರಿಗೆ ರೂಢಿಯಿರಲಿಲ್ಲ. ಚಿನ್ನಕ್ಕಾಗಿ ನುಗ್ಗಾಟವಿದ್ದ ಒಂದು ಪಟ್ಟಣದಲ್ಲಿನ ದೃಶ್ಯವನ್ನು ವರ್ಣಿಸುತ್ತಾ, ಆ ಕಾಲದ ಒಂದು ಸ್ಥಳಿಕ ವಾರ್ತಾಪತ್ರಿಕೆಯು ಹೀಗೆ ವರದಿಸಿತು: “ಬಾಥರ್ಸ್ಟ್‌ಗೆ ಈಗ ಪುನಃ ಹುಚ್ಚುಹಿಡಿದಿದೆ. ಚಿನ್ನದ ಗೀಳಿನ ಕಾಯಿಲೆಯು ಇನ್ನಷ್ಟು ತೀವ್ರತೆಯೊಂದಿಗೆ ಹಿಂದಿರುಗಿದೆ. ಪುರುಷರು ಪರಸ್ಪರ ಭೇಟಿಯಾಗುತ್ತಾರೆ, ಸುಮ್ಮನೆ ಪರಸ್ಪರರನ್ನು ದಿಟ್ಟಿಸಿನೋಡುತ್ತಾರೆ, ಅರ್ಥವಿಲ್ಲದ ಮಾತುಗಳನ್ನಾಡುತ್ತಾರೆ ಮತ್ತು ಮುಂದೆ ಏನು ಸಂಭವಿಸಲಿದೆ ಎಂದು ಆಲೋಚಿಸುತ್ತಾರೆ.”ಇದಾದ ಬಳಿಕ ಏನು ಸಂಭವಿಸಿತು? ಜನಸಂಖ್ಯೆಯಲ್ಲಿ ಇದ್ದಕ್ಕಿದ್ದಂತೆ ಏರಿಕೆಯುಂಟಾಯಿತು. 1851ರ ದಶಕದಲ್ಲಿ, ಆಶಾವಾದಿಗಳಾದ ಚಿನ್ನಶೋಧಕರು ಜಗತ್ತಿನ ಎಲ್ಲ ಭಾಗಗಳಿಂದ ಆಸ್ಟ್ರೇಲಿಯಕ್ಕೆ ಬಂದು
ಸೇರಿದಂತೆ, ಆ ದೇಶದಲ್ಲಿ ವಾಸಿಸುತ್ತಿದ್ದ ಜನರ ಸಂಖ್ಯೆ ಇಮ್ಮಡಿಯಾಯಿತು. ಈ ಖಂಡದಾದ್ಯಂತ ಬೇರೆ ಬೇರೆ ಪ್ರಮಾಣಗಳಲ್ಲಿ ಚಿನ್ನವು ಕಂಡುಹಿಡಿಯಲ್ಪಟ್ಟಿತು. ಒಂದು ನುಗ್ಗಾಟವು ಕಡಿಮೆಯಾದಂತೆ ಇನ್ನೊಂದು ನುಗ್ಗಾಟವು ಆರಂಭಗೊಂಡಿತು. 1856ನೇ ಇಸವಿಯೊಂದರಲ್ಲೇ, ಆಸ್ಟ್ರೇಲಿಯದ ಚಿನ್ನಶೋಧಕರು 95 ಟನ್ನುಗಳಷ್ಟು ಚಿನ್ನವನ್ನು ಭೂಮಿಯಿಂದ ಅಗೆದು ತೆಗೆದರು. ತದನಂತರ 1893ರಲ್ಲಿ, ಪಶ್ಚಿಮ ಆಸ್ಟ್ರೇಲಿಯದ ಕಾಲ್‌ಗೂರ್ಲಿ-ಬೌಲ್ಡರ್‌ನ ಬಳಿಯ ಪ್ರದೇಶದಿಂದ ಗಣಿಗಾರರು ಚಿನ್ನವನ್ನು ಅಗೆದು ತೆಗೆಯಲು ಆರಂಭಿಸಿದರು. ಅಂದಿನಿಂದ, “ಜಗತ್ತಿನಲ್ಲೇ ಹೆಚ್ಚು ಚಿನ್ನವನ್ನು ಒಳಗೂಡಿರುವ ಅತ್ಯಂತ ಸಮೃದ್ಧವಾದ 2.5 ಚದರ ಕಿಲೊಮೀಟರುಗಳ ಪ್ರದೇಶ” ಎಂದು ವರ್ಣಿಸಲ್ಪಟ್ಟಿರುವ ಒಂದು ಕ್ಷೇತ್ರದಿಂದ 1,300 ಟನ್ನುಗಳಿಗಿಂತಲೂ ಹೆಚ್ಚು ಚಿನ್ನವು ಅಗೆದು ತೆಗೆಯಲ್ಪಟ್ಟಿದೆ. ಆ ಕ್ಷೇತ್ರದಲ್ಲಿ ಈಗಲೂ ಚಿನ್ನವು ದೊರಕುತ್ತಿದೆ ಮತ್ತು ಇದು ಜಗತ್ತಿನ ಅತ್ಯಂತ ಆಳವಾದ ತೆರೆದಗಣಿಯಾಗಿದೆ. ಈ ತೆರೆದಗಣಿಯು ಒಂದು ಮನುಷ್ಯನಿರ್ಮಿತ ಕಮರಿಯಾಗಿದ್ದು, ಸುಮಾರು ಎರಡು ಕಿಲೊಮೀಟರ್ ಅಗಲ, ಮೂರು ಕಿಲೊಮೀಟರ್ ಉದ್ದ ಮತ್ತು 1,200 ಅಡಿಗಳಿಗಿಂತಲೂ ಹೆಚ್ಚು ಆಳವುಳ್ಳದ್ದಾಗಿದೆ!ಇಂದು ಆಸ್ಟ್ರೇಲಿಯವು ಜಗತ್ತಿನ ಮೂರನೇ ಅತಿ ದೊಡ್ಡ ಚಿನ್ನ ಉತ್ಪಾದಕ ದೇಶವಾಗಿದೆ. ಅಲ್ಲಿನ ಚಿನ್ನದ ಉದ್ಯಮವು 60,000 ಜನರನ್ನು ಕೆಲಸಕ್ಕಿಟ್ಟುಕೊಂಡಿದೆ ಮತ್ತು ವಾರ್ಷಿಕವಾಗಿ ಸುಮಾರು 300 ಟನ್ನುಗಳಷ್ಟು ಅಥವಾ ಐದು ಶತಕೋಟಿ ಡಾಲರ್ (ಆಸ್ಟ್ರೇಲಿಯನ್)ಗಳಷ್ಟು ಬೆಲೆಬಾಳುವ ಚಿನ್ನವನ್ನು ಅಗೆದು ತೆಗೆಯುತ್ತದೆ. ಜಗತ್ತಿನ ಎರಡನೇ ಅತಿ ದೊಡ್ಡ ಚಿನ್ನದ ಗಣಿಗಾರಿಕೆಯನ್ನು ಹೊಂದಿರುವ ದೇಶವು ಯುನೈಟೆಡ್ ಸ್ಟೇಟ್ಸ್ ಆಗಿದೆ. ಆದರೂ, ನೂರಕ್ಕಿಂತಲೂ ಹೆಚ್ಚು ವರ್ಷಗಳಿಂದ ಜಗತ್ತಿನಲ್ಲೇ ಹೆಚ್ಚು ಚಿನ್ನವನ್ನು ಉತ್ಪಾದಿಸುತ್ತಿರುವ ದೇಶವು ದಕ್ಷಿಣ ಆಫ್ರಿಕವಾಗಿದೆ. ಇಷ್ಟರ ತನಕ ಗಣಿಯಿಂದ ತೆಗೆಯಲ್ಪಟ್ಟಿರುವ ಚಿನ್ನದಲ್ಲಿ ಸುಮಾರು 40 ಪ್ರತಿಶತ ಚಿನ್ನವು ಈ ದೇಶದಿಂದ ಬಂದದ್ದಾಗಿದೆ. ಲೋಕವ್ಯಾಪಕವಾಗಿ 2,000 ಟನ್ನುಗಳಿಗಿಂತಲೂ ಹೆಚ್ಚು ಚಿನ್ನವು ಪ್ರತಿ ವರ್ಷ ಗಣಿಯಿಂದ ತೆಗೆಯಲ್ಪಡುತ್ತದೆ. ಈ ಅಮೂಲ್ಯ ಲೋಹಕ್ಕೆ ಏನು ಸಂಭವಿಸುತ್ತದೆ?
ಐಶ್ವರ್ಯದ ಜೊತೆಗೇ ಸೌಂದರ್ಯ
ಸ್ವಲ್ಪ ಪ್ರಮಾಣದ ಚಿನ್ನವನ್ನು ಈಗಲೂ ನಾಣ್ಯಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಪಶ್ಚಿಮ ಆಸ್ಟ್ರೇಲಿಯದ ಪರ್ತ್‌ನಲ್ಲಿರುವ ಟಂಕಸಾಲೆಯು ಈಗ ಈ ರೀತಿಯ ನಾಣ್ಯದ ಮುಖ್ಯ ಉತ್ಪಾದಕಗಳಲ್ಲಿ ಒಂದಾಗಿದೆ. ಈ ನಾಣ್ಯಗಳು ಸಾಮಾನ್ಯ ಚಲಾವಣೆಯಲ್ಲಿ ಇಲ್ಲದಿರುವುದಾದರೂ,
ನಾಣ್ಯಸಂಗ್ರಹಕರಿಂದ ಇವು ಸಂಗ್ರಹಿಸಲ್ಪಡುತ್ತವೆ. ಅಷ್ಟುಮಾತ್ರವಲ್ಲ, ಇಷ್ಟರ ತನಕ ಗಣಿಯಿಂದ ತೆಗೆಯಲ್ಪಟ್ಟಿರುವ ಚಿನ್ನದಲ್ಲಿ ಸುಮಾರು ಕಾಲುಭಾಗವು ಚಿನ್ನದ ಗಟ್ಟಿಗಳಾಗಿ, ಅಮೂಲ್ಯವಾದ ಚಿನ್ನದ ದೊಡ್ಡ ತುಂಡುಗಳಾಗಿ ರೂಪಾಂತರಿಸಲ್ಪಟ್ಟು, ಬ್ಯಾಂಕಿನ ನೆಲಮಾಳಿಗೆಗಳಲ್ಲಿ ಭದ್ರಪಡಿಸಲ್ಪಟ್ಟಿವೆ. ಯುನೈಟೆಡ್ ಸ್ಟೇಟ್ಸ್ ದೇಶವು ಜಗತ್ತಿನ ಚಿನ್ನದ ಗಟ್ಟಿಗಳಲ್ಲಿ ಹೆಚ್ಚಿನದ್ದನ್ನು ತನ್ನ ಬ್ಯಾಂಕಿನ ನೆಲಮಾಳಿಗೆಗಳಲ್ಲಿ ಶೇಖರಿಸಿಟ್ಟುಕೊಂಡಿದೆ.ಸದ್ಯಕ್ಕೆ, ಪ್ರತಿ ವರ್ಷ ಗಣಿಯಿಂದ ತೆಗೆಯಲ್ಪಡುತ್ತಿರುವ ಚಿನ್ನದಲ್ಲಿ ಸುಮಾರು 80 ಪ್ರತಿಶತ ಅಂದರೆ 1,600 ಟನ್ನುಗಳಷ್ಟು ಚಿನ್ನವು ಆಭರಣವಾಗಿ ಮಾರ್ಪಡಿಸಲ್ಪಡುತ್ತಿದೆ. ಯುನೈಟೆಡ್ ಸ್ಟೇಟ್ಸ್‌ನ ಅಧಿಕಾಂಶ ಚಿನ್ನವು ಅದರ ಬ್ಯಾಂಕ್‌ಗಳಲ್ಲಿ ಇರುವುದಾದರೂ, ಎಣಿಕೆಯಲ್ಲಿ ಆಭರಣಗಳೂ ಒಳಗೂಡಿಸಲ್ಪಡುವಾಗ, ಭಾರತವು ತನ್ನ ಸರಹದ್ದುಗಳಲ್ಲಿ ಅತಿ ಹೆಚ್ಚು ಪ್ರಮಾಣದ ಚಿನ್ನವನ್ನು ಹೊಂದಿದೆ. ಈ ಮೃದು ಲೋಹವು ಅಮೂಲ್ಯವಾಗಿದೆ ಹಾಗೂ ಸುಂದರವಾಗಿದೆ ಮಾತ್ರವಲ್ಲದೆ, ಇದು ಕಠಿನವಾದ ಕೆಲಸಕ್ಕಾಗಿ ಉಪಯೋಗಿಸಲು ಸಾಧ್ಯವಾಗುವಂಥ ಗುಣಲಕ್ಷಣಗಳನ್ನೂ ಹೊಂದಿದೆ.
ಪುರಾತನ ಲೋಹದ ಆಧುನಿಕ ಉಪಯೋಗಗಳು
ಪುರಾತನ ಐಗುಪ್ತದ ಫರೋಹರು ಚಿನ್ನವು ಸವೆಯುವುದಿಲ್ಲ ಎಂಬುದನ್ನು ಮನಗಂಡಿದ್ದಿರಬಹುದು. ಆದುದರಿಂದಲೇ ತಮ್ಮ ಹೆಣದ ಮೊಗದಚ್ಚುಗಳನ್ನು ಮಾಡಿಸುವುದರಲ್ಲಿ ಅವರು ಇದನ್ನು ಉಪಯೋಗಿಸಿದ್ದಿರಬಹುದು. ಚಿನ್ನವು ಬಹುಕಾಲ ಉಳಿಯುತ್ತದೆ ಎಂಬುದಕ್ಕೆ ಸಾಕ್ಷ್ಯದೋಪಾದಿ, ಫರೋಹನಾಗಿದ್ದ ಟುಟಂಖಮೆನ್‌ನು ಮರಣಪಟ್ಟು ಸಾವಿರಾರು ವರ್ಷಗಳು ಕಳೆದ ಬಳಿಕ ಅವನ ಸಮಾಧಿಯನ್ನು ಪ್ರಾಕ್ತನಶಾಸ್ತ್ರಜ್ಞರು ಅಗೆದು ತೆಗೆದಾಗ, ಆ ಯುವರಾಜನ ಹೆಣದ ಚಿನ್ನದ ಮೊಗದಚ್ಚು ಕಾಂತಿಹೀನವಾಗಿರದೆ ಥಳಥಳಿಸುವಂಥ ಹಳದಿ ಬಣ್ಣವನ್ನು ಇನ್ನೂ ಹೊಂದಿರುವುದು ಕಂಡುಬಂತು.
ಕಬ್ಬಿಣದಂಥ ಇತರ ಲೋಹಗಳನ್ನು ಹಾಳುಮಾಡುವಂಥ ನೀರು ಮತ್ತು ಗಾಳಿಯು ಚಿನ್ನದ ಮೇಲೆ ಯಾವುದೇ ಪರಿಣಾಮ ಬೀರದಿರುವುದರಿಂದ, ಅದು ತನ್ನ ಹೊಳಪನ್ನು ಉಳಿಸಿಕೊಳ್ಳುತ್ತದೆ. ಹಾಳಾಗದಿರುವಿಕೆ ಹಾಗೂ ವಿದ್ಯುಚ್ಛಕ್ತಿಯನ್ನು ಸಂವಹಿಸುವ ಅದರ ಎದ್ದುಕಾಣುವ ಸಾಮರ್ಥ್ಯವು, ಇಲೆಕ್ಟ್ರಾನಿಕ್ ಘಟಕಗಳಲ್ಲಿ ಇದನ್ನು ಉಪಯೋಗಿಸಲು ತಕ್ಕದ್ದಾಗಿ ಮಾಡುತ್ತದೆ. ಪ್ರತಿ ವರ್ಷ ಸುಮಾರು 200 ಟನ್ನುಗಳಷ್ಟು ಚಿನ್ನವು ಟಿವಿಗಳು, ವಿಸಿಆರ್‌ಗಳು, ಸೆಲ್ ಫೋನ್‌ಗಳು ಮತ್ತು ಸುಮಾರು ಐದು ಕೋಟಿ ಕಂಪ್ಯೂಟರ್‌ಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ. ಇದರ ಜೊತೆಗೆ, ಉಚ್ಚ ಗುಣಮಟ್ಟದ ಕಾಂಪ್ಯಾಕ್ಟ್ ಡಿಸ್ಕ್‌ಗಳಲ್ಲಿಯೂ ಬಾಳಿಕೆ ಬರುವ ಚಿನ್ನದ ಒಂದು ತೆಳು ಪದರವು ಸೇರಿಸಲ್ಪಟ್ಟಿರುತ್ತದೆ. ಇದು ಡಿಸ್ಕ್‌ಗಳು ಹೆಚ್ಚು ಕಾಲ ಬಾಳಿಕೆ ಬರುವುದನ್ನು ಖಾತ್ರಿಪಡಿಸುತ್ತದೆ.
ಚಿನ್ನದ ತೆಳು ಹಾಳೆಗಳು ಅಸಾಮಾನ್ಯವಾದ ಕೆಲವು ಗುಣಲಕ್ಷಣಗಳನ್ನು ತೋರ್ಪಡಿಸುತ್ತವೆ. ಬೆಳಕಿನೊಂದಿಗೆ ಈ ಲೋಹದ ಪರಸ್ಪರ ಕ್ರಿಯೆಯನ್ನು ಪರಿಗಣಿಸಿರಿ. ಚಿನ್ನವನ್ನು ಅತಿ ತೆಳುವಾದ ತಗಡುಗಳಾಗಿ ಸಂಸ್ಕರಿಸಿದಾಗ, ಅದು ಪಾರದರ್ಶಕವಾಗಿ ಪರಿಣಮಿಸುತ್ತದೆ. ಇದು ವಿಪರೀತ ತೆಳುವಾಗಿರುವಾಗ, ಹಸಿರು ಬೆಳಕಿನ ತರಂಗಗಳು ತನ್ನ ಮೂಲಕ ಹಾದುಹೋಗುವಂತೆ ಬಿಡುತ್ತದೆ, ಆದರೆ ಅವರೋಹಿತ ಬೆಳಕನ್ನು ಪ್ರತಿಫಲಿಸುತ್ತದೆ. ಚಿನ್ನದ ಲೇಪವಿರುವ ಕಿಟಕಿಗಳು ಬೆಳಕನ್ನು ಒಳಕ್ಕೆ ಬರುವಂತೆ ಅನುಮತಿಸುತ್ತವೆ ಆದರೆ ಶಾಖವನ್ನು ಪ್ರತಿಫಲಿಸುತ್ತವೆ. ಈ ಕಾರಣದಿಂದ, ಆಧುನಿಕ ವಿಮಾನದ ಕಾಕ್‌ಪಿಟ್‌ನ ಕಿಟಕಿಗಳು ಚಿನ್ನದಿಂದ ಲೇಪಿತವಾಗಿವೆ, ಹಾಗೆಯೇ ಅನೇಕ ಹೊಸ ಆಫೀಸ್ ಕಟ್ಟಡಗಳ ಕಿಟಕಿಗಳು ಸಹ. ಅಷ್ಟುಮಾತ್ರವಲ್ಲ, ಚಿನ್ನದ ಪಾರದರ್ಶಕವಲ್ಲದಂಥ ಸ್ವಲ್ಪ ದಪ್ಪ ಹಾಳೆಯನ್ನು ಬಾಹ್ಯಾಕಾಶ ನೌಕೆಗಳ ಸುಲಭಭೇದ್ಯ ಭಾಗಗಳ ಸುತ್ತಲೂ ಸುತ್ತಲಾಗಿರುತ್ತದೆ; ಇದು ಆ ಭಾಗಗಳನ್ನು ತೀವ್ರವಾದ ವಿಕಿರಣ ಹಾಗೂ ಶಾಖದಿಂದ ಚೆನ್ನಾಗಿ ಸಂರಕ್ಷಿಸುತ್ತದೆ.
ಚಿನ್ನವು ಅತ್ಯಧಿಕ ಮಟ್ಟಿಗೆ ಬ್ಯಾಕ್ಟೀರಿಯ ಪ್ರತಿರೋಧಕವಾಗಿದೆ ಸಹ. ಆದುದರಿಂದ, ಹಾಳಾಗಿರುವ ಅಥವಾ ಹುಳುಕಾಗಿರುವ ಹಲ್ಲುಗಳನ್ನು ರಿಪೇರಿಮಾಡಲಿಕ್ಕಾಗಿ ಇಲ್ಲವೆ ಬದಲಾಯಿಸಲಿಕ್ಕಾಗಿ ದಂತವೈದ್ಯರು ಇದನ್ನು ಉಪಯೋಗಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನವು, ಶಸ್ತ್ರಚಿಕಿತ್ಸೆಯಲ್ಲಿ ಒಳಸೇರಿಸಲ್ಪಡುವ ಸ್ಟೆಂಟ್‌ಗಳಂಥ—ಹಾಳಾಗಿರುವ ಅಭಿಧಮನಿ ಅಥವಾ ಅಪಧಮನಿಗಳನ್ನು ಬಲಪಡಿಸಲಿಕ್ಕಾಗಿ ದೇಹದೊಳಗೆ ಸೇರಿಸಲ್ಪಡುವ ಚಿಕ್ಕ ತಂತಿಯ ಟ್ಯೂಬ್‌ಗಳು—ವಸ್ತುಗಳಲ್ಲಿ ಉಪಯೋಗಿಸಲು ತಕ್ಕದಾದ ಸಾಮಗ್ರಿಯಾಗಿ ರುಜುವಾಗಿದೆ.
ಚಿನ್ನದ ಅನೇಕ ಉಪಯೋಗಗಳು, ಮೌಲ್ಯ ಮತ್ತು ಸೌಂದರ್ಯಗಳನ್ನು ಪರಿಗಣಿಸುವಾಗ, ಚಿನ್ನಶೋಧಕರು ಈ ಆಕರ್ಷಕ ಲೋಹಕ್ಕಾಗಿ ಭೂಮಿಯನ್ನು ಶೋಧಿಸುವುದನ್ನು ಮುಂದುವರಿಸುವರು ಎಂಬುದರಲ್ಲಿ ಸಂಶಯವೇ ಇಲ್ಲ. (g05 9/22)
[ಪಾದಟಿಪ್ಪಣಿ]
^ ಚಿನ್ನವು ಎಷ್ಟು ಸಾಂದ್ರವುಳ್ಳದ್ದಾಗಿದೆಯೆಂದರೆ, ಎಲ್ಲ ಪಾರ್ಶ್ವಗಳಲ್ಲಿ 37 ಸೆಂಟಿಮೀಟರ್‌ಗಳಷ್ಟು ಅಳತೆಯಿರುವ ಚಿನ್ನದ ಒಂದು ಘನಾಕೃತಿಯು ಸುಮಾರು ಒಂದು ಟನ್ನಿನಷ್ಟು ತೂಕವುಳ್ಳದ್ದಾಗಿರಸಾಧ್ಯವಿದೆ.
[ಪುಟ 25ರಲ್ಲಿರುವ ಚೌಕ]
ಚಿನ್ನವು ಎಲ್ಲಿ ಸಿಗುತ್ತದೆ?
◼ ಬಂಡೆಗಳು: ಎಲ್ಲ ಅಗ್ನಿಶಿಲೆಗಳಲ್ಲಿ ಚಿಕ್ಕ ಪ್ರಮಾಣದಲ್ಲಿ ಚಿನ್ನವು ಇರುತ್ತದೆ. ಭೂಮಿಯ ಕೆಲವು ಕ್ಷೇತ್ರಗಳಲ್ಲಿರುವ ಬಂಡೆಗಳು ಅತ್ಯಧಿಕ ಮಟ್ಟದ ಚಿನ್ನದ ಸಂಗ್ರಹವನ್ನು ಹೊಂದಿರುತ್ತವೆ; ಇದು ಆ ಲೋಹವನ್ನು ಅಗೆದು ತೆಗೆದು, ಪುಡಿಮಾಡಿ, ಅದಿರಿನಿಂದ ಬೇರ್ಪಡಿಸುವುದನ್ನು ಕಂಪೆನಿಗಳಿಗೆ ಪ್ರತಿಫಲದಾಯಕವಾದದ್ದಾಗಿ ಮಾಡುತ್ತದೆ. ಒಂದು ಟನ್ ಬಂಡೆಯಲ್ಲಿ, ಉಚ್ಚ ಗುಣಮಟ್ಟದ ಅದಿರು ಕೇವಲ 30 ಗ್ರಾಮ್‌ಗಳಷ್ಟು ಚಿನ್ನವನ್ನು ಹೊಂದಿರುತ್ತದೆ.
◼ ಆಧಾರಶಿಲೆಗಳು: ಅಪರೂಪವಾಗಿ ಚಿನ್ನವು ಬೆಣಚುಕಲ್ಲಿನ ಪದರಗಳ ನಡುವೆ ಬೆಣೆಹಾಕಿದಂತೆ ಇರುವ ಪದರಗಳಾಗಿ ಅಥವಾ ಎಳೆಗಳಾಗಿ ಕಂಡುಬರುತ್ತದೆ.
◼ ನದಿಗಳು: ಚಿನ್ನವನ್ನು ಹೊಂದಿರುವ ಆಧಾರಶಿಲೆಗಳು ಕಾಲಕ್ರಮೇಣ ಬಿಸಿಲು, ಮಳೆ ಮತ್ತು ಗಾಳಿಗೆ ಒಡೆಯುತ್ತವೆ ಮತ್ತು ಅವುಗಳ ಒಳಗಿದ್ದ ಚಿನ್ನವು ಅತಿ ಚಿಕ್ಕ ಬಿಂದುಗಳೋಪಾದಿ ಅಥವಾ ಹಲ್ಲೆಹಲ್ಲೆಯಾಗಿ ತೊರೆಗಳಲ್ಲಿ ಮತ್ತು ನದಿಗಳಲ್ಲಿ ಶೇಖರವಾಗುತ್ತದೆ. ಈ ರೂಪದಲ್ಲಿರುವ ಚಿನ್ನವು ಮೆಕ್ಕಲು ಚಿನ್ನ ಎಂದು ಪ್ರಸಿದ್ಧವಾಗಿರುತ್ತದೆ.
◼ ಭೂಮಿಯ ಮೇಲ್ಮೈ: ಕೆಲವೊಮ್ಮೆ ವಿಲಕ್ಷಣ ಆಕಾರದ ಚಿನ್ನದ ಮುದ್ದೆಗಳು ಭೂಮಿಯ ಮೇಲ್ಮೈಯಲ್ಲಿ ರೂಪಿತವಾಗುತ್ತವೆ. ಈ ಮುದ್ದೆಗಳು ಕೆಲವೊಮ್ಮೆ ಭಾರೀ ಗಾತ್ರದವುಗಳಾಗಿರಸಾಧ್ಯವಿದೆ. ಇಷ್ಟರ ತನಕ ಆಸ್ಟ್ರೇಲಿಯದಲ್ಲಿ ಕಂಡುಕೊಳ್ಳಲ್ಪಟ್ಟಿರುವ ಅತಿ ದೊಡ್ಡ ಚಿನ್ನದ ನಗಿಟ್ ಅನ್ನು ‘ದ ವೆಲ್‌ಕಮ್ ಸ್ಟ್ರೇಂಜರ್’ ಎಂದು ಕರೆಯಲಾಯಿತು, ಮತ್ತು ಅದು 70 ಕಿಲೊಗ್ರಾಮ್‌ಗಳಿಗಿಂತಲೂ ಹೆಚ್ಚು ಭಾರವಾದದ್ದಾಗಿತ್ತು! ಇದು 1869ರಲ್ಲಿ ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದಲ್ಲಿ ಕಂಡುಹಿಡಿಯಲ್ಪಟ್ಟಿತು. ಆಸ್ಟ್ರೇಲಿಯವು ದೊಡ್ಡ ದೊಡ್ಡ ನಗಿಟ್‌ಗಳ ಮೂಲಸ್ಥಾನವಾಗಿದ್ದು, ಇಷ್ಟರ ತನಕ ಕಂಡುಹಿಡಿಯಲ್ಪಟ್ಟಿರುವ 25 ಅತಿ ದೊಡ್ಡ ನಗಿಟ್‌ಗಳಲ್ಲಿ 23 ನಗಿಟ್‌ಗಳು ಇಲ್ಲಿಯೇ ಸಿಕ್ಕಿದ್ದವು. ಇಂದು ಬೆಂಕಿಕಡ್ಡಿಯ ತಲೆಯಷ್ಟು ಚಿಕ್ಕ ಗಾತ್ರದ್ದೂ ಆಗಿರಸಾಧ್ಯವಿರುವ ಚಿನ್ನದ ನಗಿಟ್‌ಗಳು, ರತ್ನದ ಗುಣಮಟ್ಟವುಳ್ಳ ವಜ್ರಗಳಿಗಿಂತಲೂ ಹೆಚ್ಚು ಅಪರೂಪವಾಗಿವೆ.
[ಪುಟ 27ರಲ್ಲಿರುವ ಚೌಕ/ಚಿತ್ರ]
ಲೋಹವನ್ನು ಪತ್ತೆಹಚ್ಚುವ ಸಾಧನವು ಹೇಗೆ ಕೆಲಸಮಾಡುತ್ತದೆ?
ಲೋಹವನ್ನು ಪತ್ತೆಹಚ್ಚುವ ಸಾಧನದಲ್ಲಿರುವ ಮುಖ್ಯ ಘಟಕಗಳು ಸಾಮಾನ್ಯವಾಗಿ ತಂತಿಯ ಎರಡು ಕಾಇಲ್‌ಗಳಾಗಿವೆ. ಈ ಕಾಇಲ್‌ಗಳಲ್ಲಿ ಒಂದರ ಮೂಲಕ ವಿದ್ಯುಚ್ಛಕ್ತಿಯು ಹರಿಸಲ್ಪಡುತ್ತದೆ, ಮತ್ತು ಇದು ಒಂದು ಕಾಂತೀಯ ಕ್ಷೇತ್ರವನ್ನು ಉಂಟುಮಾಡುತ್ತದೆ. ಲೋಹವನ್ನು ಪತ್ತೆಹಚ್ಚುವ ಸಾಧನವು ಚಿನ್ನದ ನಗಿಟ್‌ನಂಥ ಒಂದು ಲೋಹದ ವಸ್ತುವಿನ ಮೇಲಿನಿಂದ ಹಾಯುವಾಗ, ಆ ವಸ್ತುವಿನಲ್ಲಿ ಸ್ವಲ್ಪಮಟ್ಟಿಗಿನ ಕಾಂತೀಯ ಕ್ಷೇತ್ರವನ್ನು ಉಂಟುಮಾಡುತ್ತದೆ. ಲೋಹವನ್ನು ಪತ್ತೆಹಚ್ಚುವ ಸಾಧನದಲ್ಲಿರುವ ಎರಡನೆಯ ಕಾಇಲ್ ಈ ಕಾಂತೀಯ ಕ್ಷೇತ್ರವನ್ನು ಪತ್ತೆಹಚ್ಚುತ್ತದೆ ಮತ್ತು ಒಂದು ಬೆಳಕು, ಮಾಪಕ ಅಥವಾ ಸದ್ದಿನ ಮೂಲಕ ಅದರ ಆಪರೇಟರ್‌ಗೆ ಸೂಚನೆಯನ್ನು ನೀಡುತ್ತದೆ.
[ಪುಟ 25ರಲ್ಲಿರುವ ಚಿತ್ರಗಳು]
1800ಗಳ ಮಧ್ಯಭಾಗದಲ್ಲಿ ಚಿನ್ನದ ಗಣಿಗಾರಿಕೆಯಲ್ಲಿ ಗಮನಾರ್ಹ ಹೆಚ್ಚಳ:
1. ಸಟರ್ಸ್ ಮಿಲ್, ಕ್ಯಾಲಿಫೊರ್ನಿಯ, ಯು.ಎಸ್.ಎ.
2. ಬೆಂಡಿಗೊ ತೊರೆ, ವಿಕ್ಟೋರಿಯ, ಆಸ್ಟ್ರೇಲಿಯ
3. ಗೋಲ್ಡನ್ ಪಾಯಿಂಟ್, ಬಾಲ್ಲರಾಟ್, ವಿಕ್ಟೋರಿಯ, ಆಸ್ಟ್ರೇಲಿಯ
[ಕೃಪೆ]
1: Library of Congress; 2: Gold Museum, Ballarat; 3: La Trobe Picture Collection, State Library of Victoria
[ಪುಟ 26ರಲ್ಲಿರುವ ಚಿತ್ರಗಳು]
ಚಿನ್ನದ ಆಧುನಿಕ ಉಪಯೋಗಗಳು
ಉಚ್ಚ ಗುಣಮಟ್ಟದ ಕಾಂಪ್ಯಾಕ್ಟ್ ಡಿಸ್ಕ್‌ಗಳಲ್ಲಿ ಚಿನ್ನದ ಒಂದು ತೆಳು ಪದರವು ಸೇರಿಸಲ್ಪಟ್ಟಿರುತ್ತದೆ
ಬಾಹ್ಯಾಕಾಶ ನೌಕೆಗಳಲ್ಲಿ ಚಿನ್ನದ ಹಾಳೆಯು ಉಪಯೋಗಿಸಲ್ಪಡುತ್ತದೆ
ಮೈಕ್ರೊಚಿಪ್‌ಗಳಲ್ಲಿ ಚಿನ್ನವು ಉಪಯೋಗಿಸಲ್ಪಡುತ್ತದೆ
ಚಿನ್ನದಿಂದ ಲೇಪಿತವಾದ ತಂತಿಗಳು ವಿದ್ಯುಚ್ಛಕ್ತಿಯನ್ನು ಸಂವಹಿಸುವ ಎದ್ದುಕಾಣುವ ಸಾಮರ್ಥ್ಯವನ್ನು ಹೊಂದಿವೆ
[ಕೃಪೆ]
NASA photo
Carita Stubbe
Courtesy Tanaka Denshi Kogyo
[ಪುಟ 26ರಲ್ಲಿರುವ ಚಿತ್ರ]
ಜಗತ್ತಿನ ಅತ್ಯಂತ ಆಳವಾದ ತೆರೆದಗಣಿಯು, ಪಶ್ಚಿಮ ಆಸ್ಟ್ರೇಲಿಯದ ಕಾಲ್‌ಗೂರ್ಲಿ-ಬೌಲ್ಡರ್‌ನಲ್ಲಿದೆ
[ಕೃಪೆ]
Courtesy Newmont Mining Corporation
[ಪುಟ 24ರಲ್ಲಿರುವ ಚಿತ್ರ ಕೃಪೆ]
Brasil Gemas, Ouro Preto, MG ▸