ಜಂತರ್ ಮಂತರ್—ದೂರದರ್ಶಕಗಳಿಲ್ಲದ ವೀಕ್ಷಣಾಲಯ
ಜಂತರ್ ಮಂತರ್—ದೂರದರ್ಶಕಗಳಿಲ್ಲದ ವೀಕ್ಷಣಾಲಯ
ಭಾರತದ ಎಚ್ಚರ! ಲೇಖಕರಿಂದ
ಭಾರತದ ನವದೆಹಲಿಯಲ್ಲಿರುವ ಜಂತರ್ ಮಂತರ್ ಅನ್ನು ಸಂದರ್ಶಿಸುವಂಥ ಜನರು, ಅಲ್ಲಿನ ಕಟ್ಟಡ ರಚನೆಗಳನ್ನು ವಿಸ್ಮಯದಿಂದ ಎವೆಯಿಕ್ಕದೆ ನೋಡಿ, ‘ಇದು ನಿಜವಾಗಿಯೂ ಒಂದು ವೀಕ್ಷಣಾಲಯವಾಗಿರಲು ಸಾಧ್ಯವಿದೆಯೋ?’ ಎಂದು ಕುತೂಹಲಪಡಬಹುದು. ಉನ್ನತ ತಂತ್ರಜ್ಞಾನದಿಂದ ಕೂಡಿರುವಂಥ ಅನೇಕ ಖಗೋಳಶಾಸ್ತ್ರೀಯ ಉಪಕರಣಗಳುಳ್ಳ ಆಧುನಿಕ ಕಟ್ಟಡಗಳನ್ನು ನೋಡುವುದಕ್ಕೆ ಒಗ್ಗಿಹೋಗಿರುವವರಿಗೆ, ಒಂದು ದೊಡ್ಡ ಉದ್ಯಾನವನದಲ್ಲಿ ನೆಲೆಸಿದ್ದು ವಿಚಿತ್ರವಾಗಿ ಕಂಡುಬರುವ ಈ ಕಲ್ಲುಕಟ್ಟಡಗಳು, ಇದು ಒಂದು ವೀಕ್ಷಣಾಲಯವು ಹೌದೋ ಅಲ್ಲವೋ ಎಂದು ಆಲೋಚಿಸುವಂತೆ ಮಾಡಸಾಧ್ಯವಿದೆ. ಆದರೂ, 18ನೆಯ ಶತಮಾನದ ಆರಂಭದ ಭಾಗದಲ್ಲಿ ಜಂತರ್ ಮಂತರ್ ನಿರ್ಮಿಸಲ್ಪಟ್ಟಾಗ ನಿಜವಾಗಿಯೂ ಅದು ಒಂದು ವೀಕ್ಷಣಾಲಯವಾಗಿತ್ತು. ಗಮನಾರ್ಹವಾಗಿಯೇ, ಆಗ ಯೂರೋಪಿನಲ್ಲಿ ವಿಕಸಿಸಲ್ಪಡುತ್ತಿದ್ದ ದೂರದರ್ಶಕಗಳು ಮತ್ತು ಇತರ ಉಪಕರಣಗಳ ಸಹಾಯವಿಲ್ಲದೆ ಈ ವೀಕ್ಷಣಾಲಯವು ಆಕಾಶಕಾಯಗಳ ಕುರಿತು ಸವಿವರವಾದ ಮತ್ತು ಸಾಕಷ್ಟು ಮಟ್ಟಿಗೆ ನಿಷ್ಕೃಷ್ಟವಾದ ಮಾಹಿತಿಯನ್ನು ಒದಗಿಸಿತು.
ರಜಪೂತ ಅರಸನಾಗಿದ್ದ IIನೆಯ ಮಹಾರಾಜ ಸವೈ ಜೈ ಸಿಂಗ್‌ನಿಂದ ಕಟ್ಟಲ್ಪಟ್ಟ ಐದು ವೀಕ್ಷಣಾಲಯಗಳಲ್ಲಿ, ಮೂರಕ್ಕೆ ಉಪಯೋಗಿಸಲ್ಪಡುವ
ಸಾಮಾನ್ಯ ಹೆಸರು ಜಂತರ್ ಮಂತರ್ ಆಗಿದೆ. “ಜಂತರ್” ಎಂಬುದು “ಯಂತ್ರ” ಎಂಬ ಸಂಸ್ಕೃತ ಪದದಿಂದಲೂ “ಮಂತರ್” ಎಂಬುದು “ಮಂತ್ರ” ಎಂಬ ಪದದಿಂದಲೂ ಬಂದದ್ದಾಗಿದೆ. ಒತ್ತನ್ನು ನೀಡಲಿಕ್ಕಾಗಿ ಪ್ರಾಸಬದ್ಧ ಪದವನ್ನು ಕೂಡಿಸುವ ದಿನಬಳಕೆಯ ರೂಢಿಯಿಂದಾಗಿ ‘ಜಂತರ್ ಮಂತರ್’ ಎಂಬ ಹೆಸರು ಬಂದಿದೆ.ಇಸವಿ 1910ರಲ್ಲಿ ನವದೆಹಲಿಯಲ್ಲಿ ಜಂತರ್ ಮಂತರ್‌ನಲ್ಲಿರುವ ಉಪಕರಣವೊಂದಕ್ಕೆ ಜೋಡಿಸಲ್ಪಟ್ಟಿರುವ ಒಂದು ಫಲಕವು, ಈ ವೀಕ್ಷಣಾಲಯದ ನಿರ್ಮಾಣದ ವರ್ಷ 1710 ಎಂದು ತಿಳಿಯಪಡಿಸುತ್ತದೆ. ಆದರೆ, ಸಮಯಾನಂತರದ ಸಂಶೋಧನೆಯು 1724ನೇ ಇಸವಿಯಲ್ಲಿ ಈ ಕೆಲಸವು ಪೂರ್ಣಗೊಂಡಿತೆಂಬುದನ್ನು ಸೂಚಿಸುತ್ತದೆ. ನಾವು ಮುಂದೆ ನೋಡಲಿರುವಂತೆ, ಜೈ ಸಿಂಗನ ಜೀವನಚರಿತ್ರೆಯ ಮಾಹಿತಿಯು ಇದಕ್ಕೆ ಪುರಾವೆಯನ್ನು ನೀಡುತ್ತದೆ. ಆದರೆ ಮೊದಲಾಗಿ ನಾವು ಜಗತ್ತಿನಲ್ಲೇ ಅತ್ಯಂತ ಪುರಾತನವಾದದ್ದೆಂದು ಪರಿಗಣಿಸಲ್ಪಡುವ ಈ ವೀಕ್ಷಣಾಲಯದಲ್ಲಿರುವ ಉಪಕರಣಗಳ ಕಡೆಗೆ ಸಂಕ್ಷಿಪ್ತವಾಗಿ ದೃಷ್ಟಿಹರಿಸೋಣ.
ಕಲ್ಲಿನ ರಚನೆಗಳೇ ಉಪಕರಣಗಳಾಗಿ ಕಾರ್ಯನಡಿಸುತ್ತವೆ
ಈ ವೀಕ್ಷಣಾಲಯದಲ್ಲಿ ಕಲ್ಲು ಕೆಲಸದ ನಾಲ್ಕು ಬೇರೆ ಬೇರೆ ಉಪಕರಣಗಳಿವೆ. ಇವುಗಳಲ್ಲಿ ತುಂಬ ಎದ್ದುಕಾಣುವಂಥದ್ದು ಸಮ್ರಾಟ್ ಯಂತ್ರ ಅಥವಾ ಸರ್ವೋಚ್ಛ ಉಪಕರಣವಾಗಿದೆ. ಇದು ಒಂದು ದಿನವನ್ನು 24 ಸಮಾನ ಭಾಗಗಳಾಗಿ ವಿಭಾಗಿಸುವಂತೆ ರಚಿಸಲ್ಪಟ್ಟಿರುವ ಒಂದು ಛಾಯಾಯಂತ್ರವಾಗಿದೆ. ಇದು ಜೈ ಸಿಂಗನ ಅತಿ ಪ್ರಮುಖ ನಿರ್ಮಾಣಕಾರ್ಯವಾಗಿದೆ. ಇದು 70 ಅಡಿಗಳಷ್ಟು ಎತ್ತರ, 114 ಅಡಿಗಳ ತಳ ಮತ್ತು 10 ಅಡಿಗಳಷ್ಟು ಅಗಲವಿರುವ ಕಲ್ಲಿನ ದೊಡ್ಡ ತ್ರಿಕೋನವಾಗಿದೆ. ಈ ತ್ರಿಕೋನದ 128 ಅಡಿ ಉದ್ದವಾದ ಕರ್ಣವು ಭೂಮಿಯ ಅಕ್ಷಕ್ಕೆ ಸಮಾಂತರವಾಗಿದ್ದು ಉತ್ತರ ಧ್ರುವಾಭಿಮುಖವಾಗಿದೆ. ಈ ತ್ರಿಕೋನದ ಅಥವಾ ನೋಮನ್‌ನ ಎರಡೂ ಪಾರ್ಶ್ವಗಳಲ್ಲಿ ಕಾಲು ವರ್ತುಲಾಕೃತಿಯ ಉಪಕರಣಗಳಿದ್ದು, ಅದರಲ್ಲಿ ತಾಸುಗಳು, ನಿಮಿಷಗಳು ಮತ್ತು ಸೆಕೆಂಡುಗಳನ್ನು ಗುರುತಿಸಲು ಅಳತೆ ಗುರುತುಗಳಿವೆ. ಅನೇಕ ಶತಮಾನಗಳಿಂದ ಸರಳವಾದ ಛಾಯಾಯಂತ್ರಗಳು ಅಸ್ತಿತ್ವದಲ್ಲಿದ್ದವಾದರೂ, ಕಾಲಮಾಪನಕ್ಕಾಗಿದ್ದ ಈ ಮೂಲಭೂತ ಉಪಕರಣವನ್ನು ಜೈ ಸಿಂಗನು, ವಿಷುವದ್ ವೃತ್ತದಿಂದ ಇರುವ ಕೋನೀಯ ದೂರವನ್ನು ಮತ್ತು ಆಕಾಶಕಾಯಗಳ ಇತರ ಸಂಬಂಧಿತ ಸಹಯೋಜನೆಗಳನ್ನು ಅಳೆಯಲಿಕ್ಕಾಗಿರುವ ನಿಷ್ಕೃಷ್ಟ ಸಾಧನವಾಗಿ ರೂಪಾಂತರಿಸಿದನು.
ವೀಕ್ಷಣಾಲಯದಲ್ಲಿರುವ ಇತರ ಮೂರು ರಚನೆಗಳು, ರಾಮ, ಜಯಪ್ರಕಾಶ್ ಮತ್ತು ಮಿಶ್ರ ಯಂತ್ರಗಳೇ ಆಗಿವೆ. ಇವು ಸೂರ್ಯ ಮತ್ತು ನಕ್ಷತ್ರಗಳ ಕೋನೀಯ ದೂರ, ಕೋನೋನ್ನತಿ ಮತ್ತು ದಿಗಂಶಗಳನ್ನು ಅಳೆಯಲಿಕ್ಕಾಗಿ ಸಂಕೀರ್ಣವಾದ ರೀತಿಯಲ್ಲಿ ವಿನ್ಯಾಸಿಸಲ್ಪಟ್ಟಿವೆ. ಮಿಶ್ರ ಯಂತ್ರವು, ಲೋಕದಾದ್ಯಂತ ಇರುವ ಬೇರೆ ಬೇರೆ ನಗರಗಳಲ್ಲಿ ಯಾವಾಗ ಮಧ್ಯಾಹ್ನವಾಗುತ್ತದೆ ಎಂಬುದನ್ನು ಸಹ ಸೂಚಿಸಿತು.
ಮಿಶ್ರ ಯಂತ್ರವನ್ನು ಬಿಟ್ಟು ಈ ಮೇಲೆ ತಿಳಿಸಲ್ಪಟ್ಟಿರುವ ಎಲ್ಲ ಉಪಕರಣಗಳು ಜೈ ಸಿಂಗನಿಂದ ಕಂಡುಹಿಡಿಯಲ್ಪಟ್ಟವು. ಇವು ಆ ಕಾಲದಲ್ಲಿ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಇತರ ಯಾವುದೇ ಉಪಕರಣಗಳಿಗಿಂತ ಎಷ್ಟೋ ಹೆಚ್ಚು ಜಟಿಲವಾಗಿದ್ದವು ಮತ್ತು ಕಾರ್ಯಸಾಧಕವಾಗಿದ್ದವು. ಅವು, ನಿಷ್ಕೃಷ್ಟವಾದ ಪಂಚಾಂಗಗಳು ಮತ್ತು ಖಗೋಳಶಾಸ್ತ್ರೀಯ ಅಂಕಿಅಂಶ ಪಟ್ಟಿಗಳನ್ನು ವಿಕಸಿಸಲು ಕಾರಣವಾದವು. ಇವುಗಳ ವಿನ್ಯಾಸವು ತುಂಬ ಆಕರ್ಷಕವಾಗಿತ್ತು ಮತ್ತು ಸುಂದರವಾಗಿತ್ತು; ಅಷ್ಟುಮಾತ್ರವಲ್ಲ ದೂರದರ್ಶಕಗಳು ಮತ್ತು ಇತರ ಕಂಡುಹಿಡಿತಗಳು ಇವುಗಳ ಬಳಕೆಯನ್ನು ತಪ್ಪಿಸುವ ತನಕ ಇವು ಅಮೂಲ್ಯವಾದ ಮಾಹಿತಿಯನ್ನು ನೀಡಿದವು. ಆದರೆ, ತುಂಬ ಬುದ್ಧಿವಂತನಾದ ಮತ್ತು ಹೆಚ್ಚು ಪಾಂಡಿತ್ಯವಿದ್ದ ಈ ಪುರುಷನು, ದೃಷ್ಟಿಸಹಾಯಕ ದೂರದರ್ಶಕವನ್ನು ಮತ್ತು ಯೂರೋಪಿನಲ್ಲಿ ಲಭ್ಯವಿದ್ದ ಸಾಧನಗಳಲ್ಲಿ ಕೆಲವನ್ನು ತನ್ನ ಖಗೋಳಶಾಸ್ತ್ರೀಯ ಸಂಶೋಧನೆಯಲ್ಲಿ ಏಕೆ ಒಳಗೂಡಿಸಲಿಲ್ಲ? ಇದಕ್ಕೆ ಉತ್ತರವನ್ನು, ಮಹಾರಾಜನ ಹಿನ್ನೆಲೆಯಲ್ಲಿ ಮತ್ತು ಆ ಕಾಲದ ಇತಿಹಾಸದಲ್ಲಿ ಕಂಡುಕೊಳ್ಳಬಹುದು.
‘ಗಣಿತ ವಿಜ್ಞಾನದ ಅಧ್ಯಯನಕ್ಕಾಗಿ ಪೂರ್ಣವಾಗಿ ಅರ್ಪಿಸಿಕೊಂಡದ್ದು’
ಜೈ ಸಿಂಗನು 1688ರಲ್ಲಿ ಭಾರತದ ರಾಜಸ್ಥಾನ್‌ನಲ್ಲಿ ಜನಿಸಿದನು. ರಜಪೂತರ ರಾಚಾವಹಾ ವಂಶದ ರಾಜಧಾನಿಯಾದ ಅಂಬರ್‌ನಲ್ಲಿ
ಒಬ್ಬ ಮಹಾರಾಜನಾಗಿದ್ದ ಅವನ ತಂದೆ, ದೆಹಲಿಯ ಮೊಗಲರ ಅಧಿಕಾರದ ಕೆಳಗಿದ್ದನು. ಈ ಯುವರಾಜನು ಹಿಂದಿ, ಸಂಸ್ಕೃತ, ಪಾರ್ಸಿ ಮತ್ತು ಅರೇಬಿಕ್ ಭಾಷೆಗಳಲ್ಲಿ ಶಿಕ್ಷಣ ಪಡೆದಿದ್ದನು. ಅವನಿಗೆ ಗಣಿತ, ಖಗೋಳಶಾಸ್ತ್ರ ಮತ್ತು ಕದನ ಕಲೆಗಳು ಸಹ ಕಲಿಸಲ್ಪಟ್ಟವು. ಆದರೆ ಒಂದು ವಿಷಯವು ಈ ರಾಜಕುಮಾರನಿಗೆ ಅಚ್ಚುಮೆಚ್ಚಿನದ್ದಾಗಿತ್ತು. ಅವನ ಕಾಲದ ಒಂದು ಮೂಲಪಾಠವು ಹೀಗೆ ತಿಳಿಸುತ್ತದೆ: “ಸವೈ ಜೈ ಸಿಂಗನು ತನ್ನ ತರ್ಕಶಕ್ತಿಯನ್ನು ಉಪಯೋಗಿಸಲು ಆರಂಭಿಸಿದಂದಿನಿಂದ ಮತ್ತು ಅದು ಪ್ರೌಢತೆಯ ಕಡೆಗೆ ಪ್ರಗತಿಯನ್ನು ಮಾಡುವ ಸಮಯದಲ್ಲಿ, ಗಣಿತ ವಿಜ್ಞಾನ (ಖಗೋಳಶಾಸ್ತ್ರ)ದ ಅಧ್ಯಯನಕ್ಕಾಗಿ ತನ್ನನ್ನು ಪೂರ್ಣವಾಗಿ ಅರ್ಪಿಸಿಕೊಂಡನು.”ತಂದೆಯ ಮರಣಾನಂತರ 1700ರಲ್ಲಿ ಅಂದರೆ 11ರ ಪ್ರಾಯದಲ್ಲಿ ಜೈ ಸಿಂಗನು ಅಂಬರ್‌ನ ಸಿಂಹಾಸನವನ್ನೇರಿದನು. ಸ್ವಲ್ಪ ಸಮಯಾನಂತರ ಮೊಗಲ್ ಚಕ್ರವರ್ತಿಯು ದಕ್ಷಿಣ ಭಾರತದಲ್ಲಿದ್ದ ತನ್ನ ಆಸ್ಥಾನಕ್ಕೆ ಈ ಯುವರಾಜನನ್ನು ಕರೆಸಿಕೊಂಡನು. ಅಲ್ಲಿ ಜೈ ಸಿಂಗನು, ಗಣಿತ ಮತ್ತು ಖಗೋಳಶಾಸ್ತ್ರದಲ್ಲಿ ಪಾಂಡಿತ್ಯಪಡೆದಿದ್ದ ಜಗನ್ನಾಥನನ್ನು ಭೇಟಿಯಾದನು. ಕಾಲಾನಂತರ ಈ ವ್ಯಕ್ತಿಯು ಅರಸನ ಮುಖ್ಯ ಸಹಾಯಕನಾಗಿ ನೇಮಕಹೊಂದಿದನು. ಮೊಹಮ್ಮದ್ ಷಾನ ಆಳ್ವಿಕೆಯು 1719ರಲ್ಲಿ ಆರಂಭವಾಗುವ ತನಕ ಈ ಯುವ ಮಹಾರಾಜನ ರಾಜಕೀಯ ಪ್ರತೀಕ್ಷೆಗಳು ಡೋಲಾಯಮಾನವಾಗಿದ್ದವು. ಆಗ, ಆ ಹೊಸ ಮೊಗಲ್ ದೊರೆಯನ್ನು ಸಂಧಿಸಲಿಕ್ಕಾಗಿ ರಾಜಧಾನಿಯಾದ ದೆಹಲಿಗೆ ಬರುವಂತೆ ಜೈ ಸಿಂಗನಿಗೆ ಕರೆಬಂತು. 1720ರ ನವೆಂಬರ್ ತಿಂಗಳಿನಲ್ಲಿ ನಡೆಸಲ್ಪಟ್ಟ ಈ ಭೇಟಿಯಲ್ಲಿ, ಒಂದು ವೀಕ್ಷಣಾಲಯವನ್ನು ನಿರ್ಮಿಸುವ ಪ್ರಸ್ತಾಪವನ್ನು ಜೈ ಸಿಂಗನು ಮಾಡಿರುವುದು ಸುವ್ಯಕ್ತ. ಆ ಕಟ್ಟಡಗಳು ಬಹುಶಃ 1724ರಲ್ಲಿ ಕಟ್ಟಲ್ಪಟ್ಟವು.
ಒಂದು ವೀಕ್ಷಣಾಲಯವನ್ನು ಕಟ್ಟುವಂತೆ ಯಾವುದು ಈ ಮಹಾರಾಜನನ್ನು ಪ್ರಚೋದಿಸಿತು? ಜೈ ಸಿಂಗನು, ಭಾರತದಲ್ಲಿರುವ ಪಂಚಾಂಗಗಳು ಮತ್ತು ಖಗೋಳಶಾಸ್ತ್ರೀಯ ನಕ್ಷೆಗಳು ಸ್ವಲ್ಪವೂ ನಿಷ್ಕೃಷ್ಟವಾಗಿಲ್ಲ ಮತ್ತು ಖಗೋಳಶಾಸ್ತ್ರದ ಕ್ಷೇತ್ರದಲ್ಲಿ ತುಂಬ ಕಡಿಮೆ ಪ್ರಗತಿಯು ಮಾಡಲ್ಪಡುತ್ತಿದೆ ಎಂಬುದನ್ನು ಮನಗಂಡನು. ಆದುದರಿಂದ ಅವನು, ದೃಷ್ಟಿಗೋಚರವಾಗಿರುವ ಆಕಾಶಕಾಯಗಳಿಗೆ ಅನುರೂಪವಾದ ಹೊಸ ನಕ್ಷೆಗಳನ್ನು ತಯಾರಿಸಲು ನಿರ್ಧರಿಸಿದನು. ಖಗೋಳಶಾಸ್ತ್ರೀಯ ವೀಕ್ಷಣಕ್ಕಾಗಿರುವ ಉಪಕರಣಗಳನ್ನು, ಖಗೋಳಶಾಸ್ತ್ರದ ಅಧ್ಯಯನಕ್ಕೆ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಗೂ ಲಭ್ಯಗೊಳಿಸಬೇಕು ಎಂಬ ಬಯಕೆಯೂ ಅವನಿಗಿತ್ತು. ಈ ಕಾರಣದಿಂದ ಜೈ ಸಿಂಗನು ಫ್ರಾನ್ಸ್, ಇಂಗ್ಲೆಂಡ್, ಪೋರ್ಚುಗಲ್ ಮತ್ತು ಜರ್ಮನಿಯಿಂದ ಪುಸ್ತಕಗಳ ದೊಡ್ಡ ಗ್ರಂಥಾಲಯವನ್ನೇ ಒಟ್ಟುಗೂಡಿಸಿಕೊಂಡನು. ಅವನ ಆಸ್ಥಾನಕ್ಕೆ, ಖಗೋಳಶಾಸ್ತ್ರದ ಹಿಂದೂ, ಇಸ್ಲಾಮ್ ಮತ್ತು ಯೂರೋಪಿಯನ್ ಸಂಶೋಧನ ಕೇಂದ್ರಗಳಿಂದ ವಿದ್ವಾಂಸರನ್ನು ಸಹ ಕರೆಸಿಕೊಂಡನು. ಖಗೋಳಶಾಸ್ತ್ರದ ಕುರಿತಾದ ಮಾಹಿತಿಯನ್ನು ಸಂಗ್ರಹಿಸಲಿಕ್ಕಾಗಿ ಅವನು ಪೂರ್ವದಿಂದ ಯೂರೋಪಿಗೆ ವಾಸ್ತವಾಂಶಗಳನ್ನು ಕಂಡುಕೊಳ್ಳುವ ಪ್ರಥಮ ಪ್ರತಿನಿಧಿಗಳ ಮಂಡಲಿಯನ್ನು ಸಹ ಕಳುಹಿಸಿದನು, ಮತ್ತು ಅವರು ಬರುವಾಗ ಪುಸ್ತಕಗಳನ್ನು ಹಾಗೂ ಸಾಧನಗಳನ್ನು ತಮ್ಮೊಂದಿಗೆ ತರುವಂತೆಯೂ ಆದೇಶ ನೀಡಿದನು.
ಪೂರ್ವಪಶ್ಚಿಮಗಳು ಸಂಧಿಸಲಾಗಲಿಲ್ಲ
ದೂರದರ್ಶಕ, ಮೈಕ್ರೊಮೀಟರ್ ಮತ್ತು ವರ್ನಿಯರ್‌ಗಳು ಯೂರೋಪಿನಲ್ಲಿ ಬಳಕೆಯಲ್ಲಿದ್ದವಾದರೂ, ಜೈ ಸಿಂಗನು ಏಕೆ ಕಲ್ಲುಕಟ್ಟಡಗಳನ್ನು ನಿರ್ಮಿಸಿದನು? ಇದಲ್ಲದೆ ಕೊಪರ್ನಿಕಸ್ ಮತ್ತು ಗೆಲಿಲಿಯೊನ ಸೂರ್ಯಕೇಂದ್ರೀಯ ಕಂಡುಹಿಡಿತಗಳ ವಿಷಯದಲ್ಲಿ ಅವನು ಅಪರಿಚಿತನಾಗಿರುವಂತೆ ತೋರುವುದೇಕೆ?
ಪೂರ್ವ ಮತ್ತು ಪಶ್ಚಿಮದ ನಡುವೆ ಸಂಪರ್ಕದ ಕೊರತೆಯು ಭಾಗಶಃ ಇದಕ್ಕೆ ಕಾರಣವಾಗಿರಬೇಕು. ಆದರೆ ಇದೊಂದೇ ತೊಂದರೆಯಾಗಿರಲಿಲ್ಲ. ಆ ಕಾಲದ ಧಾರ್ಮಿಕ ವಾತಾವರಣವು ಸಹ ಇದಕ್ಕೆ ಕಾರಣವಾಗಿತ್ತು. ಬ್ರಾಹ್ಮಣ ವಿದ್ವಾಂಸರು ಯೂರೋಪಿಗೆ ಪ್ರಯಾಣಿಸಲು ನಿರಾಕರಿಸುತ್ತಿದ್ದರು, ಏಕೆಂದರೆ ಮಹಾಸಾಗರವನ್ನು ದಾಟುವುದರಿಂದ ಅವರು ತಮ್ಮ ಜಾತಿಯನ್ನು ಕಳೆದುಕೊಳ್ಳಸಾಧ್ಯವಿತ್ತು. ಮಾಹಿತಿಯನ್ನು ಸಂಗ್ರಹಿಸಲಿಕ್ಕಾಗಿ ಜೈ ಸಿಂಗನಿಗೆ ಸಹಾಯಮಾಡಿದ ಯೂರೋಪಿಯನ್ ಸಹಾಯಕರು ಹೆಚ್ಚಾಗಿ ಜೆಸ್ಯೂಟ್ ವಿದ್ವಾಂಸರಾಗಿದ್ದರು. ಜೈ ಸಿಂಗನ ಜೀವನಚರಿತ್ರೆಯನ್ನು ಬರೆದ ವಿ. ಎನ್. ಶರ್ಮರಿಗನುಸಾರ, ಪಾಷಂಡ ನ್ಯಾಯಾಲಯದ ಬೆದರಿಕೆಯ ಕೆಳಗಿದ್ದ ಜೆಸ್ಯೂಟರು ಹಾಗೂ ಕ್ಯಾಥೊಲಿಕ್ ಚರ್ಚಿನ ಸದಸ್ಯರು, ಭೂಮಿಯು ಸೂರ್ಯನ ಸುತ್ತಲೂ ಸುತ್ತುತ್ತದೆ ಎಂಬ ಗೆಲಿಲಿಯೊ ಮತ್ತು ಇತರ ವಿಜ್ಞಾನಿಗಳಿಂದ ಎತ್ತಿಹಿಡಿಯಲ್ಪಟ್ಟ ದೃಷ್ಟಿಕೋನವನ್ನು ಅಂಗೀಕರಿಸುವುದರಿಂದ ನಿಷೇಧಿಸಲ್ಪಟ್ಟಿದ್ದರು. ಚರ್ಚಿನ ದೃಷ್ಟಿಯಲ್ಲಿ ಇದು ಪಾಷಂಡಮತವಾಗಿತ್ತು ಮತ್ತು ನಾಸ್ತಿಕತೆಯಾಗಿತ್ತು. ಆದುದರಿಂದ, ಜೈ ಸಿಂಗನು ಯೂರೋಪಿಗೆ ಕಳುಹಿಸಿದ್ದಂಥ ಪ್ರತಿನಿಧಿಗಳು, ಕೊಪರ್ನಿಕಸ್ ಮತ್ತು ಗೆಲಿಲಿಯೊನ ಕೃತಿಗಳನ್ನು ಅಥವಾ ಸೂರ್ಯಕೇಂದ್ರೀಯ ಸಿದ್ಧಾಂತಗಳನ್ನು ಬೆಂಬಲಿಸಲಿಕ್ಕಾಗಿ ಉಪಯೋಗಿಸಲ್ಪಡುತ್ತಿದ್ದ ಹೊಸ ಉಪಕರಣಗಳನ್ನು ತಾವು ಖರೀದಿಸಬೇಕಾಗಿದ್ದ ವಸ್ತುಗಳ ಪಟ್ಟಿಯಲ್ಲಿ ಒಳಗೂಡಿಸದೇ ಇದ್ದುದರಲ್ಲಿ ಆಶ್ಚರ್ಯವೇನೂ ಇಲ್ಲ.
ಸತತವಾದ ಅನ್ವೇಷಣೆ
ಜೈ ಸಿಂಗನು ಧಾರ್ಮಿಕ ಅಸಹಿಷ್ಣುತೆ ಮತ್ತು ಮತಾಂಧತೆಯಿಂದ ಬಾಧಿತವಾಗಿದ್ದಂಥ ಒಂದು ಯುಗದಲ್ಲಿ ಜೀವಿಸಿದ್ದನು. ಆಕಾಶಕಾಯಗಳ ಕುರಿತಾದ ಜ್ಞಾನವನ್ನು ಹೆಚ್ಚು ಆಧುನಿಕಗೊಳಿಸುವುದರಲ್ಲಿ ಅವನ ಬುದ್ಧಿವಂತ ಹಾಗೂ ಕೌಶಲಭರಿತ ಕೆಲಸದ ಹೊರತಾಗಿಯೂ, ಅನೇಕ ದಶಕಗಳ ವರೆಗೆ ಭಾರತದಲ್ಲಿ ಈ ಕ್ಷೇತ್ರದಲ್ಲಿ ತೀರ ಕಡಿಮೆ ಪ್ರಗತಿಯು ಮಾಡಲ್ಪಟ್ಟಿತು. ಆದರೂ, ಜಂತರ್ ಮಂತರ್ ವೀಕ್ಷಣಾಲಯವು ಜ್ಞಾನದ ದಾಹವಿದ್ದ ಒಬ್ಬ ಮನುಷ್ಯನ ಪ್ರಯತ್ನಗಳಿಗೆ ಒಂದು ಸಾಕ್ಷ್ಯವಾಗಿದೆ.
ಜೈ ಸಿಂಗನು ಆಕಾಶಕಾಯಗಳ ಚಲನೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುವ ಅನೇಕ ವರ್ಷಗಳಿಗೆ ಮುಂಚೆ, ಆಲೋಚನಾಪರರಾಗಿದ್ದ ಇತರ ಮಾನವರು ಆಕಾಶದ ಕಡೆಗೆ ನೋಡಿ, ವಿಶ್ವದ ಅದ್ಭುತಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದರು. ದೇವರ ಕೈಕೆಲಸಗಳ ಕುರಿತಾದ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಿಂದ ಮಾನವಕುಲವು ‘ಕಣ್ಣುಗಳನ್ನು ಮೇಲಕ್ಕೆತ್ತಿ’ ಆಕಾಶದ ಕಡೆಗೆ ನೋಡುವುದನ್ನು ಮುಂದುವರಿಸುವುದು ಎಂಬುದರಲ್ಲಿ ಸಂಶಯವಿಲ್ಲ.—ಯೆಶಾಯ 40:26; ಕೀರ್ತನೆ 19:1. (g05 7/8)
[ಪುಟ 18ರಲ್ಲಿರುವ ರೇಖಾಕೃತಿ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಸಮ್ರಾಟ್ ಯಂತ್ರವು ನಿಷ್ಕೃಷ್ಟವಾದ ಛಾಯಾಯಂತ್ರವಾಗಿತ್ತು. ಆ ದೊಡ್ಡ ತ್ರಿಕೋನದ ನೆರಳು ಬಾಗಿರುವ ಕಾಲು ವರ್ತುಲಾಕೃತಿಯ ಉಪಕರಣಗಳ (ಬಿಳಿ ವೃತ್ತದಿಂದ ಗುರುತಿಸಲ್ಪಟ್ಟಿದೆ) ಮೇಲೆ ಬೀಳಿಸಲ್ಪಡುತ್ತಿತ್ತು ಮತ್ತು ಅಲ್ಲಿ ಅವುಗಳ ಮೇಲೆ ಅಳತೆ ಗುರುತುಗಳು ಇವೆ
[ಪುಟ 18ರಲ್ಲಿರುವ ರೇಖಾಕೃತಿ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಜಯಪ್ರಕಾಶ್ ಯಂತ್ರವು ಕುಳಿಯಂಥ ಅರ್ಧಗೋಳಗಳನ್ನು ಒಳಗೂಡಿದೆ. ಅವುಗಳ ನಿಮ್ನ ಮೇಲ್ಮೈಯ ಮೇಲೆ ಗುರುತುಗಳಿವೆ. ಹೊರವಲಯದ ಮೇಲೆ ನಿರ್ದಿಷ್ಟ ಬಿಂದುಗಳಲ್ಲಿ ಅಡ್ಡತಂತಿಗಳು ಅಳವಡಿಸಲ್ಪಟ್ಟಿವೆ
ರಾಮ ಯಂತ್ರದ ಒಳಭಾಗದಿಂದ ವೀಕ್ಷಕನೊಬ್ಬನು ಬೇರೆ ಬೇರೆ ಗುರುತುಗಳ ಸಹಾಯದಿಂದ ಅಥವಾ ಒಂದು ಕಿಟಕಿಯ ಮೂಲೆಯಿಂದ ಒಂದು ನಕ್ಷತ್ರದ ಸ್ಥಾನವನ್ನು ಗುರುತಿಸಸಾಧ್ಯವಿದೆ
[ಪುಟ 18ರಲ್ಲಿರುವ ರೇಖಾಕೃತಿ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಮಿಶ್ರ ಯಂತ್ರವು ಬೇರೆ ಬೇರೆ ನಗರಗಳಲ್ಲಿ ಯಾವಾಗ ಮಧ್ಯಾಹ್ನವಾಗುತ್ತದೆ ಎಂಬುದನ್ನು ಸೂಚಿಸಿತು
[ಪುಟ 19ರಲ್ಲಿರುವ ರೇಖಾಕೃತಿ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ದೃಷ್ಟಿರೇಖೆ ವೀಕ್ಷಣೆ ಅಂದರೆ ಖಗೋಳಶಾಸ್ತ್ರದ ಆರಂಭದ ರೂಪವು ಜೈ ಸಿಂಗನಿಂದ ಹೆಚ್ಚು ನಿಷ್ಕೃಷ್ಟಗೊಳಿಸಲ್ಪಟ್ಟಿತು
ಒಂದು ನಕ್ಷತ್ರದ ನೆಲೆಯನ್ನು ಗುರುತಿಸಬೇಕಾದರೆ, ನೀವು ಅದರ ಕೋನೋನ್ನತಿ (ಆಕಾಶದಲ್ಲಿ ಅದು ಎಷ್ಟು ಎತ್ತರದಲ್ಲಿದೆ) ಹಾಗೂ ಅದರ ದಿಗಂಶ (ಭೂಮಿಯ ಅಕ್ಷಕ್ಕನುಗುಣವಾಗಿರುವ ಉತ್ತರ ದಿಕ್ಕಿನಿಂದ ಅದು ಎಷ್ಟು ಪೂರ್ವಕ್ಕೆ ಇದೆ)ವನ್ನು ತಿಳಿದುಕೊಳ್ಳುವ ಅಗತ್ಯವಿದೆ
ಸಮ್ರಾಟ್ ಯಂತ್ರದಲ್ಲಿ ನಿಷ್ಕೃಷ್ಟವಾಗಿ ಒಂದು ನಕ್ಷತ್ರವನ್ನು ಗುರುತಿಸಲು ಮತ್ತು ಅದರ ಸ್ಥಾನವನ್ನು ದಾಖಲಿಸಲು ಇಬ್ಬರು ವ್ಯಕ್ತಿಗಳ ಅಗತ್ಯವಿತ್ತು
[ಕೃಪೆ]
ಕೆಳಗೆ: Reproduced from the book SAWAI JAI SINGH AND HIS ASTRONOMY, published by Motilal Banarsidass Publishers (P) Ltd., Jawahar Nagar Delhi, India
[ಪುಟ 19ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಭಾರತ
ನವದೆಹಲಿ
ಮಥುರಾ
ಜೈಪುರ್
ವಾರಣಾಸಿ
ಉಜ್ಜಯಿನಿ
ಜೈ ಸಿಂಗನು ನವದೆಹಲಿಯಲ್ಲಿರುವ ವೀಕ್ಷಣಾಲಯವನ್ನು ಸೇರಿಸಿ ಭಾರತದಲ್ಲಿ ಐದು ವೀಕ್ಷಣಾಲಯಗಳನ್ನು ನಿರ್ಮಿಸಿದನು
[ಪುಟ 18ರಲ್ಲಿರುವ ಚಿತ್ರ ಕೃಪೆ]
ಭಾವಚಿತ್ರ: Courtesy Roop Kishore Goyal