ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

“ಸಮಸ್ಯಾತ್ಮಕ ವರ್ತನೆಯುಳ್ಳ” ಮಕ್ಕಳು ಸುಧಾರಿಸುವ ಸಾಧ್ಯತೆಯಿದೆ

“ಸಮಸ್ಯಾತ್ಮಕ ವರ್ತನೆಯುಳ್ಳ ಪ್ರಾಥಮಿಕ ಶಾಲಾ ವಯಸ್ಸಿನ ಅನೇಕ ಮಕ್ಕಳು, ಬೆಳೆಯುತ್ತಾ ಹೋದಂತೆ ಪ್ರೌಢರಾಗುತ್ತಾರೆ. ಅವರು ಮಾನಸಿಕ ಮತ್ತು ಭಾವನಾತ್ಮಕ ಸ್ತಿಮಿತವಿರುವ ಹದಿವಯಸ್ಕರಾಗಿ ಪರಿಣಮಿಸಬಲ್ಲರು” ಎಂದು ದ ಸಿಡ್ನಿ ಮಾರ್ನಿಂಗ್‌ ಹೆರಲ್ಡ್‌ ವಾರ್ತಾಪತ್ರಿಕೆಯು ತಿಳಿಸುತ್ತದೆ. ಕುಟುಂಬ ಅಧ್ಯಯನಗಳ ಕುರಿತಾದ ಆಸ್ಟ್ರೇಲಿಯನ್‌ ಸಂಸ್ಥೆಯಿಂದ ನಡೆಸಲ್ಪಟ್ಟ ಸಂಶೋಧನೆಯು 178 ಮಂದಿ ಮಕ್ಕಳ ಪ್ರಗತಿಯ ಮೇಲೆ ನಿಗವಿಟ್ಟಿತು. ಇವರು 11 ಅಥವಾ 12 ವರ್ಷ ಪ್ರಾಯದಲ್ಲಿ, “ವಿಪರೀತ ಆಕ್ರಮಣಶೀಲತೆ, ಸಹಕಾರದ ಕೊರತೆ, ಕಡಿಮೆ ಆತ್ಮನಿಯಂತ್ರಣ, ಕೆಲಸಗಳನ್ನು ಮಾಡುವುದರಲ್ಲಿ ನಿರತರಾಗುವ ಸಾಮರ್ಥ್ಯದಲ್ಲಿ ಕೊರತೆ, ಅತಿಯಾದ ಚಟುವಟಿಕೆ ಮತ್ತು ತ್ವರಿತವಾಗಿ ಯಾವ ಸಮಯದಲ್ಲೂ ಬದಲಾಗಬಲ್ಲ ಅಥವಾ ಸಿಡುಕಿನ ಮನೋವೃತ್ತಿ”ಗಳಂಥ ಗುಣಲಕ್ಷಣಗಳಲ್ಲಿ ಮೂರು ಇಲ್ಲವೆ ಅದಕ್ಕಿಂತಲೂ ಹೆಚ್ಚು ಗುಣಲಕ್ಷಣಗಳನ್ನು ತೋರಿಸುವವರಾಗಿ ಗುರುತಿಸಲ್ಪಟ್ಟಿದ್ದರು. ಆರು ವರ್ಷಗಳ ತರುವಾಯ, ಈ ಯುವ ಜನರಲ್ಲಿ 100 ಮಂದಿ, “ಉತ್ತಮವಾಗಿ ವರ್ತಿಸುತ್ತಿದ್ದಂಥ ಯುವ ಜನರ ಗುಂಪಿನಿಂದ ತೋರಿಸಲ್ಪಟ್ಟ ವರ್ತನೆಯನ್ನೇ” ಬಹುಮಟ್ಟಿಗೆ ತೋರಿಸಿದರು. ಈ ರೀತಿ ಪ್ರಗತಿಯನ್ನು ಮಾಡಲು ಯಾವುದು ಅವರಿಗೆ ಸಹಾಯಮಾಡಿತು? “ಸಂತೋಷಭರಿತ ಹದಿವಯಸ್ಕರಾಗಿ ಬದಲಾದ ಮಕ್ಕಳು, ಸಮಾಜ ಕಂಟಕರಾಗಿದ್ದ ಸಮಾನವಯಸ್ಕರಿಂದ ಬಹುಶಃ ದೂರವಿದ್ದವರಾಗಿದ್ದರು ಮತ್ತು ಹೆತ್ತವರ ನಿಕಟ ಮೇಲ್ವಿಚಾರಣೆಯನ್ನು ಹೊಂದಿದವರಾಗಿದ್ದದ್ದು ಹೆಚ್ಚು ಸಂಭವನೀಯ” ಎಂದು ವರದಿಯು ತಿಳಿಸುತ್ತದೆ. (g05 8/8)

ಹೊಗೆಸೊಪ್ಪು ಇಡೀ ದೇಹಕ್ಕೆ ಹಾನಿಕಾರಕವಾಗಿದೆ

“ಧೂಮಪಾನಿಗಳು ತಮ್ಮ ಶ್ವಾಸಕೋಶಗಳು ಮತ್ತು ಅಪಧಮನಿಗಳನ್ನು ಮಾತ್ರವೇ ಅಪಾಯಕ್ಕೊಡ್ಡುತ್ತಿಲ್ಲ: ಎಲ್ಲ ಅಂಗಾಂಶಗಳು ಸಹ ಹಾನಿಯನ್ನು ಅನುಭವಿಸುತ್ತವೆ” ಎಂದು ನ್ಯೂ ಸೈಅಂಟಿಸ್ಟ್‌ ಪತ್ರಿಕೆಯು ವರದಿಸುತ್ತದೆ. ಯು.ಎಸ್‌. ಸರ್ಜನ್‌ ಜನರಲ್‌ರಾದ ರಿಚರ್ಡ್‌ ಏಚ್‌. ಕಾರ್ಮೊನರಿಂದ ಪ್ರಕಟಿಸಲ್ಪಟ್ಟ ಒಂದು ವರದಿಯು, ಹೊಗೆಸೊಪ್ಪಿನ ಉಪಯೋಗಕ್ಕೆ ಸಂಬಂಧಿಸಿದ ಅನೇಕಾನೇಕ ರೋಗಗಳನ್ನು ಪಟ್ಟಿಮಾಡುತ್ತದೆ. ಇವುಗಳಲ್ಲಿ ನ್ಯುಮೋನಿಯ, ಲುಕ್ಯೇಮಿಯ, ಕ್ಯಾಟರಾಕ್ಟ್‌, ಒಸಡಿನ ರೋಗ ಮತ್ತು ಮೂತ್ರಜನಕಾಂಗ, ಗರ್ಭಕೋಶದ ಕಂಠ, ಹೊಟ್ಟೆ ಹಾಗೂ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗಳು ಒಳಗೂಡಿವೆ. ಕಾರ್ಮೊನ ಹೇಳುವುದು: “ಧೂಮಪಾನವು ಹಾನಿಕರವಾಗಿದೆ ಎಂಬುದು ದಶಕಗಳಿಂದಲೂ ನಮಗೆ ಗೊತ್ತಿದೆ, ಆದರೆ ಇದು ನಾವು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚು ಹಾನಿಕರವಾಗಿದೆ ಎಂಬುದನ್ನು ಈ ವರದಿಯು ತೋರಿಸುತ್ತದೆ. ಸಿಗರೇಟಿನ ಹೊಗೆಯಿಂದ ಉಂಟಾಗುವ ವಿಷಗಳು, ರಕ್ತವು ಎಲ್ಲಿ ಹರಿಯುತ್ತದೋ ಅಲ್ಲೆಲ್ಲ ಹೋಗುತ್ತವೆ.” ಕಡಿಮೆ ಟಾರ್‌ ಮತ್ತು ನಿಕೊಟಿನ್‌ ಇರುವ ಸಿಗರೇಟ್‌ಗಳನ್ನು ಸೇದುವ ಮೂಲಕ ತಾವು ಇಂಥ ಹಾನಿಯನ್ನು ತಡೆಗಟ್ಟಸಾಧ್ಯವಿದೆ ಎಂದು ನೆನಸುವವರಿಗೆ, ಕಾರ್ಮೊನ ಹೇಳುವುದು: “ಯಾವುದೇ ರೀತಿಯ ಸುರಕ್ಷಿತ ಸಿಗರೇಟ್‌ ಇಲ್ಲವೇ ಇಲ್ಲ.” ಧೂಮಪಾನಮಾಡದವರಿಗೆ ಹೋಲಿಸುವಾಗ ಧೂಮಪಾನಮಾಡುವವರು ಸಾಮಾನ್ಯವಾಗಿ 13ರಿಂದ 14 ವರ್ಷ ಬೇಗ ಸಾಯುತ್ತಾರೆ. ದ ನ್ಯೂ ಯಾರ್ಕ್‌ ಟೈಮ್ಸ್‌ನಲ್ಲಿ ವರದಿಸಲ್ಪಟ್ಟಿರುವಂತೆ, “ಜೀವನದ ಪ್ರತಿಯೊಂದು ಹಂತದಲ್ಲಿ ಧೂಮಪಾನವು ಬಹುಮಟ್ಟಿಗೆ ದೇಹದ ಪ್ರತಿಯೊಂದು ಅವಯವದಲ್ಲಿ ರೋಗವನ್ನು ಉಂಟುಮಾಡುತ್ತದೆ” ಎಂದು ಕಾರ್ಮೊನ ಹೇಳಿದರು. (g05 9/22)

ಮದುವೆಯ ಕಪಟೋಪಾಯ

ದಕ್ಷಿಣ ಆಫ್ರಿಕದ 3,000ಕ್ಕಿಂತಲೂ ಹೆಚ್ಚು ಸ್ತ್ರೀಯರು “ಮದುವೆ”ಯನ್ನು ಮಾಡಿಕೊಳ್ಳುವ ವಂಚನೆಗೆ ಬಲಿಬಿದ್ದರು ಎಂದು ಜೊಹಾನಸ್‌ಬರ್ಗ್‌ನ ಸೊವೆಟನ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಒಂದು ಕಪಟೋಪಾಯದಲ್ಲಿ, ಕೆಲಸದ ಕಾಂಟ್ರ್ಯಾಕ್ಟ್‌ ಎಂದು ನೆನಸಿ ಸ್ತ್ರೀಯರು ಸರ್ಟಿಫಿಕೇಟ್‌ಗೆ ಸಹಿಹಾಕುತ್ತಾರೆ, ಆದರೆ ವಾಸ್ತವದಲ್ಲಿ ಅವರು ಒಂದು ಮದುವೆ ಸರ್ಟಿಫಿಕೇಟ್‌ಗೆ ಸಹಿಹಾಕಿರುತ್ತಾರೆ. ಈ ಸರ್ಟಿಫಿಕೇಟು ಒಬ್ಬ ವಿದೇಶೀ “ವರನನ್ನು” ಆ ದೇಶದಲ್ಲಿ ಶಾಶ್ವತ ನಿವಾಸವನ್ನು ಗಿಟ್ಟಿಸಿಕೊಳ್ಳಲು ಅರ್ಹನನ್ನಾಗಿ ಮಾಡುತ್ತದೆ. ಒಬ್ಬ “ವಧು” ತನ್ನ ಕಳೆದುಹೋದ ಗುರುತಿನ ಕಾಗದಪತ್ರಗಳನ್ನು ಬದಲಾಯಿಸಲು ಅರ್ಜಿಯನ್ನು ಹಾಕಿದಾಗಷ್ಟೇ ಅವಳಿಗೆ ಇಂಥ ಮೋಸವು ಅರಿವಿಗೆ ಬರುತ್ತದೆ ಮತ್ತು ತನಗೆ ಬೇರೆಯೇ ಉಪನಾಮವು ಕೊಡಲ್ಪಟ್ಟಿದೆ ಎಂಬುದು ಗೊತ್ತಾಗುತ್ತದೆ; ಅಥವಾ ಅವಳ ನಿಜವಾದ ವಿವಾಹ ದಿನದಂದು ಮದುವೆಯನ್ನು ನೋಂದಾಯಿಸಲು ಹೋದಾಗ, ಈಗಾಗಲೇ ಮದುವೆಯಾಗಿರುವವರ ಪಟ್ಟಿಯಲ್ಲಿ ಅವಳ ಹೆಸರಿರುವುದು ತಿಳಿದುಬರುತ್ತದೆ! “ಮದುವೆ”ಯನ್ನು ರದ್ದುಪಡಿಸುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಸಾಧ್ಯವಿದೆ. ಆದರೂ, ಆ ಸ್ತ್ರೀಯರಲ್ಲಿ ಸುಮಾರು 2,000 ಮಂದಿ ತಮಗೇ ಅರಿವಿಲ್ಲದೆ ಮಾಡಲ್ಪಟ್ಟ ಮದುವೆಗಳನ್ನು ರದ್ದುಪಡಿಸುವುದರಲ್ಲಿ ಸಫಲರಾಗಿದ್ದಾರೆ. ಈ ಕಪಟೋಪಾಯವನ್ನು ತಡೆಗಟ್ಟಲಿಕ್ಕಾಗಿ, ವಿದೇಶೀ ವಿವಾಹ ಸಂಗಾತಿಗಳು ಶಾಶ್ವತ ವಾಸಸ್ಥಾನಕ್ಕಾಗಿ ಅರ್ಜಿಯನ್ನು ಹಾಕುವುದಕ್ಕೆ ಮುಂಚೆ ಐದು ವರ್ಷಗಳ ವರೆಗೆ ಕಾಯುವುದನ್ನು ಅಗತ್ಯಪಡಿಸುವಂಥ ಒಂದು ಹೊಸ ನಿಯಮವು ಜಾರಿಗೆ ಬಂದಿದೆ. (g05 5/22)

ಬಿಡುವಿನ ಸಮಯದ ವಾಚನವು ಉಚ್ಚ ಅಂಕಗಳನ್ನು ಪಡೆಯಲು ಸಹಾಯಮಾಡುತ್ತದೆ

“ಅಧ್ಯಯನಮಾಡುವುದರಲ್ಲಿ, ಹೆತ್ತವರು ನೀಡುವ ಶಿಕ್ಷಣದಲ್ಲಿ, ತರಗತಿಯ ನೋಟ್ಸ್‌ಗಳ ಉಪಯೋಗದಲ್ಲಿ ಅಥವಾ ಕಂಪ್ಯೂಟರ್‌ ಉಪಯೋಗದಲ್ಲಿ ಕಳೆಯಲ್ಪಡುವ ಅನೇಕ ತಾಸುಗಳಿ”ಗಿಂತ ಮನಸ್ಸಂತೋಷಕ್ಕಾಗಿ ಓದುವುದು ಉಚ್ಚ ಅಂಕಗಳನ್ನು ಪಡೆಯಲು ಹೆಚ್ಚು ಸಹಾಯಮಾಡುತ್ತದೆ ಎಂದು, ಮೆಕ್ಸಿಕೋ ನಗರದ ಮಿಲನ್ಯೊ ವಾರ್ತಾಪತ್ರಿಕೆಯು ವರದಿಸುತ್ತದೆ. ಪ್ರೌಢ ಶಾಲೆಯ ಪ್ರವೇಶಕ್ಕಾಗಿರುವ ನೂರಾರು ಸಾವಿರ ಪರೀಕ್ಷೆಗಳ ಕುರಿತಾದ ಒಂದು ಅಧ್ಯಯನವು ಸೂಚಿಸುವಂತೆ, ತಮ್ಮ ಶಾಲಾ ವ್ಯಾಸಂಗಗಳಿಗಾಗಿ ಹಾಗೂ ಬಿಡುವಿನ ಸಮಯದ ವಾಚನಕ್ಕಾಗಿ ಸಮಯವನ್ನು ಬದಿಗಿರಿಸುವ ವಿದ್ಯಾರ್ಥಿಗಳು ಶಾಲೆಯಲ್ಲಿ ಸಾಫಲ್ಯವನ್ನು ಪಡೆಯುವುದು ಹೆಚ್ಚು ಸಂಭವನೀಯ. ವಿದ್ಯಾರ್ಥಿಗಳು ಶಾಲೆಯ ಸಬ್ಜೆಕ್ಟ್‌ಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಮಾತ್ರವೇ ಆರಿಸಿಕೊಳ್ಳಬೇಕಾಗಿಲ್ಲ, ಬದಲಾಗಿ ಜೀವನಚರಿತ್ರೆಗಳು, ಕವಿತೆಗಳು ಮತ್ತು ವೈಜ್ಞಾನಿಕ ವಿಷಯಗಳಿರುವ ಮನಸ್ಸಂತೋಷಕ್ಕಾಗಿ ಓದುವಂಥ ಪುಸ್ತಕಗಳೂ ಇದರಲ್ಲಿ ಒಳಗೂಡಿರಬಹುದು. ಇನ್ನೊಂದು ಕಡೆಯಲ್ಲಿ, ಓದುವುದಕ್ಕೆ ಬದಲಾಗಿ ಒಂದು ದಿನದಲ್ಲಿ ಹಲವಾರು ತಾಸು ಟಿವಿ ನೋಡುವಂಥ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ಪಡೆಯುವ ಪ್ರವೃತ್ತಿಯುಳ್ಳವರಾಗಿರುತ್ತಾರೆ ಎಂದು ವರದಿಯು ತಿಳಿಸುತ್ತದೆ. (g05 8/8)

ಭೂತಾನ್‌ ರಾಜ್ಯವು ಹೊಗೆಸೊಪ್ಪಿನ ಮಾರಾಟವನ್ನು ನಿಷೇಧಿಸುತ್ತದೆ

ಭಾರತ ಮತ್ತು ಚೀನಾದ ನಡುವೆ ಹಿಮಾಲಯ ಪರ್ವತಗಳಲ್ಲಿ ನೆಲೆಸಿರುವ ಭೂತಾನ್‌ ರಾಜ್ಯವು ಹೊಗೆಸೊಪ್ಪಿನ ಎಲ್ಲ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ. ಈ ನಿಷೇಧವು, ವಿದೇಶೀ ರಾಯಭಾರಿಗಳಿಗೆ ಅಥವಾ ಪ್ರವಾಸಿಗರಿಗೆ ಇಲ್ಲವೆ ಸರಕಾರಕ್ಕೆ ಸಂಬಂಧಿಸದ ಸಂಸ್ಥೆಗಳಲ್ಲಿ ಕೆಲಸಮಾಡುವವರಿಗೆ ಅನ್ವಯವಾಗುವುದಿಲ್ಲ. ಜಗತ್ತಿನಲ್ಲಿ ಇಂಥ ಒಂದು ಕ್ರಮವನ್ನು ಕೈಗೊಳ್ಳುವುದರಲ್ಲಿ ಭೂತಾನ್‌ ಪ್ರಥಮ ದೇಶವಾಗಿದೆ ಎಂದು ನಂಬಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಮಾಡುವುದು ಸಹ ನಿಷೇಧಿಸಲ್ಪಟ್ಟಿದೆ. “ಈ ನಿಷೇಧವು, ಭೂತಾನನ್ನು ಧೂಮಪಾನಮುಕ್ತ ರಾಷ್ಟ್ರವಾಗಿ ಮಾಡಲಿಕ್ಕಾಗಿರುವ ಸರಕಾರದ ಪ್ರಯತ್ನಗಳ ಒಂದು ಭಾಗವಾಗಿದೆ” ಎಂದು ಬಿಬಿಸಿ ವರದಿಯು ತಿಳಿಸುತ್ತದೆ. (g05 8/22)

ನಿದ್ರೆಯು ಸಮಸ್ಯೆಗಳನ್ನು ಬಗೆಹರಿಸಲು ಸಹಾಯಮಾಡುತ್ತದೆ

“ಮಲಗಲು ಹೋಗುವ ಸಮಯದಲ್ಲಿ ಬಗೆಹರಿಸಲ್ಪಡಲು ಅಸಾಧ್ಯವಾಗಿದ್ದ ಒಂದು ಸಮಸ್ಯೆಯು ಬೆಳಗ್ಗೆ ಏಳುವಾಗ ಬಗೆಹರಿಸಲು ಹೆಚ್ಚು ಸುಲಭವಾದದ್ದಾಗಿ ಕಂಡುಬರುತ್ತದೆ ಎಂದು ಅನೇಕರು ಮನಗಂಡಿದ್ದಾರೆ; ಇದು ಇಡೀ ರಾತ್ರಿ ಮಿದುಳು ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಾ ಇತ್ತೇನೋ ಎಂಬಂತೆ ತೋರುತ್ತದೆ” ಎಂದು ಲಂಡನ್‌ನ ದ ಟೈಮ್ಸ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಇದು ನಿಜವಾಗಿದೆ ಎಂಬುದರ ಪುರಾವೆಯನ್ನು ತಾವೀಗ ಕಂಡುಹಿಡಿದಿದ್ದೇವೆ ಎಂದು ಜರ್ಮನಿಯಲ್ಲಿರುವ ವಿಜ್ಞಾನಿಗಳು ಹೇಳಿದ್ದಾರೆ ಮತ್ತು ತಮ್ಮ ಕಂಡುಹಿಡಿತಗಳನ್ನು ನೇಚರ್‌ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಅವರು 66 ಮಂದಿ ಸ್ವಯಂ ಸೇವಕರಿಗೆ ಗಣಿತಕ್ಕೆ ಸಂಬಂಧಿಸಿದ ಒಂದು ಲೆಕ್ಕವನ್ನು ಬಿಡಿಸಲಿಕ್ಕಾಗಿ ಎರಡು ಸೂತ್ರಗಳನ್ನು ಕಲಿಸಿದರು, ಆದರೆ ನೇರವಾಗಿ ಸರಿಯಾದ ಉತ್ತರಕ್ಕೆ ನಡಿಸುವಂಥ ಮೂರನೆಯ ಸೂತ್ರವನ್ನು ಬಹಿರಂಗಪಡಿಸಲಿಲ್ಲ. ತದನಂತರ ಆ ಸ್ವಯಂ ಸೇವಕರಲ್ಲಿ ಕೆಲವರನ್ನು ನಿದ್ರಿಸಲು ಬಿಡಲಾಯಿತು, ಉಳಿದವರನ್ನು ಇಡೀ ರಾತ್ರಿ ಅಥವಾ ಹಗಲು ಎಚ್ಚರವಾಗಿರಿಸಲಾಯಿತು. ಇದೇ ಅಧ್ಯಯನದ ಕುರಿತು ಹೇಳಿಕೆ ನೀಡುತ್ತಾ ಲಂಡನ್‌ನ ದ ಡೈಲಿ ಟೆಲಿಗ್ರಾಫ್‌ ವಾರ್ತಾಪತ್ರಿಕೆಯು ವರದಿಸಿದ್ದು: “ನಿದ್ರೆಯು ಅದ್ಭುತಕರ ಫಲಿತಾಂಶಗಳನ್ನು ಉಂಟುಮಾಡಿತು.” “ಎಚ್ಚರವಾಗಿ ಉಳಿದವರಿಗಿಂತ” ಯಾರು ನಿದ್ರಿಸಿದರೋ ಅವರಲ್ಲಿ “ಆ ಮೂರನೆಯ ಸೂತ್ರವನ್ನು ಕಂಡುಹಿಡಿಯುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗಿತ್ತು.” ನಿದ್ರಿಸಲು ಬಿಡಲ್ಪಟ್ಟಂಥ ಜನರ ಗುಂಪು ವಿಶ್ರಾಂತಿ ಪಡೆದುಕೊಂಡು ಚೈತನ್ಯಗೊಂಡ ಕಾರಣದಿಂದಾಗಿ ಈ ಫಲಿತಾಂಶಗಳು ಉಂಟಾಗಲಿಲ್ಲ ಎಂಬುದನ್ನು ಖಚಿತಪಡಿಸಲಿಕ್ಕಾಗಿ, ವಿಜ್ಞಾನಿಗಳು ಎರಡನೆಯ ಪ್ರಯೋಗವನ್ನು ನಡೆಸಿದರು. ಈ ಎರಡೂ ಗುಂಪಿನವರಿಗೆ​—⁠ನಿದ್ರಿಸಿ ಎದ್ದವರಿಗೆ ಬೆಳಗ್ಗೆ ಅಥವಾ ಇಡೀ ದಿನ ಎಚ್ಚರವಾಗಿದ್ದವರಿಗೆ ರಾತ್ರಿಯಲ್ಲಿ​—⁠ಎರಡನೆಯ ಲೆಕ್ಕವು ಕೊಡಲ್ಪಟ್ಟಿತು. ಈ ಸಲ ಎರಡೂ ಗುಂಪುಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ಭಿನ್ನತೆಯಿರಲಿಲ್ಲ. ಇದು “ಮಿದುಳು ವಿಶ್ರಾಂತಿಯನ್ನು ಪಡೆದುಕೊಂಡದ್ದರ ಪರಿಣಾಮವಾಗಿ ಅಲ್ಲ, ಬದಲಾಗಿ ನಿದ್ರೆಯ ಸಮಯದಲ್ಲಿ ತಾನಾಗಿಯೇ ಪುನಃಸಂಘಟಿಸಿಕೊಂಡಿರುವ ಮಿದುಳನ್ನು ಹೊಂದಿರುವುದರ ಫಲಿತಾಂಶವಾಗಿದೆ” ಎಂದು ದ ಟೈಮ್ಸ್‌ ವಾರ್ತಾಪತ್ರಿಕೆಯು ತಿಳಿಸುತ್ತದೆ. “ಹೀಗೆ, ನಿದ್ರೆಯು ಸೃಜನಾತ್ಮಕ ಕಲಿಕೆಯ ಪ್ರಕ್ರಿಯೆಯಾಗಿ ಕಾರ್ಯನಡಿಸುತ್ತದೆ” ಎಂದು ಸಂಶೋಧಕರಾದ ಡಾ. ಉಲ್‌ರಿಕ್‌ ವ್ಯಾಗ್ನರ್‌ ಮುಕ್ತಾಯಗೊಳಿಸಿದರು. (g05 9/8)

ಆಯುಧಗಳನ್ನು ಆಟದ ಮೈದಾನದ ಸಾಧನಗಳಾಗಿ ಮಾಡುವುದು

ಬ್ರಸಿಲ್‌ನಲ್ಲಿ ಆರಂಭಿಸಲ್ಪಟ್ಟ ಒಂದು ಕಾರ್ಯಾಚರಣೆಯು, ಅದರ ಜನಸಂಖ್ಯೆಯ ಬಳಿಯಿರುವ ಆಯುಧಗಳ ಸಂಖ್ಯೆಯನ್ನು ಕಡಿಮೆಮಾಡಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿತ್ತು. ಸ್ವಇಷ್ಟದಿಂದ ಒಪ್ಪಿಸಲಾಗುವ ಪ್ರತಿಯೊಂದು ಆಯುಧಕ್ಕಾಗಿರುವ ಪರಿಹಾರ ಧನವು, 30 ಯು.ಎಸ್‌. ಡಾಲರುಗಳಿಂದ 100 ಯು.ಎಸ್‌. ಡಾಲರುಗಳ ವರೆಗಿತ್ತು. ಫೋಲ್ಯಾ ಆನ್‌ಲೈನ್‌ ವಾರ್ತಾಪತ್ರಿಕೆಯಲ್ಲಿ ವರದಿಸಲ್ಪಟ್ಟಂತೆ, 2004ರ ಜುಲೈ ತಿಂಗಳಿನಿಂದ ಡಿಸೆಂಬರ್‌ ತಿಂಗಳಿನ ತನಕ ಈ ದೇಶದಲ್ಲಿ 2,00,000ಕ್ಕಿಂತಲೂ ಹೆಚ್ಚು ಆಯುಧಗಳು ಸಂಗ್ರಹಿಸಲ್ಪಟ್ಟವು. ಸಾವ್‌ ಪೌಲೂ ರಾಜ್ಯದಲ್ಲಿ ಸಂಗ್ರಹಿಸಲ್ಪಟ್ಟ ಆಯುಧಗಳು ಜಜ್ಜಲ್ಪಟ್ಟು, ಸಂಮರ್ದಿಸಲ್ಪಟ್ಟು, ಕರಗಿಸಲ್ಪಟ್ಟು, ತದನಂತರ ಆಟದ ಮೈದಾನದ ಸಾಧನಗಳಾಗಿ ಮಾರ್ಪಡಿಸಲ್ಪಟ್ಟವು ಮತ್ತು ಆ ನಗರದ ಉದ್ಯಾನವನವೊಂದರಲ್ಲಿ ಅಳವಡಿಸಲ್ಪಟ್ಟವು. ಈ ಉದ್ಯಾನವನದಲ್ಲಿ ಈಗ ಒಂದು ತೂಗುತೊಲೆ (ಸೀಸಾ), ಜೋಕಾಲಿಗಳು ಮತ್ತು ಒಂದು ಜಾರುಬಂಡಿ ಇದೆ​—⁠ಇದೆಲ್ಲವೂ ಪುನಃ ಬಳಸಲಾದ ಆ ಸಾಮಗ್ರಿಗಳಿಂದ ಸಿದ್ಧಪಡಿಸಲ್ಪಟ್ಟದ್ದು. ನ್ಯಾಯ ಮಂತ್ರಿ ಮಾರ್‌ಸ್ಯೂ ಟೂಮಾಸ್‌ ಪಾಸ್‌ಟೋಸ್‌ ಅವರು ಅಂದದ್ದು: “ಈ ನಿಶ್ಶಸ್ತ್ರೀಕರಣ ಕಾರ್ಯಾಚರಣೆಯ ಪ್ರಮುಖ ಉದ್ದೇಶಗಳಲ್ಲಿ ಒಂದು, ಶಾಂತಿಯ ಸಂಸ್ಕೃತಿಯನ್ನು ಜಾರಿಗೆ ತರುವುದೇ ಆಗಿದೆ.” (g05 9/22)