ಜ್ಯೋತಿಶ್ಶಾಸ್ತ್ರವು ನಿಮ್ಮ ಭವಿಷ್ಯದ ದ್ವಾರಕ್ಕೆ ಕೀಲಿ ಕೈಯಾಗಿದೆಯೊ?
ಬೈಬಲಿನ ದೃಷ್ಟಿಕೋನ
ಜ್ಯೋತಿಶ್ಶಾಸ್ತ್ರವು ನಿಮ್ಮ ಭವಿಷ್ಯದ ದ್ವಾರಕ್ಕೆ ಕೀಲಿ ಕೈಯಾಗಿದೆಯೊ?
ನೀವು ನಿಮ್ಮ ಜೀವನವನ್ನು ಹೇಗೆ ಉತ್ತಮಗೊಳಿಸಬಲ್ಲಿರಿ? ಪ್ರೀತಿ ಮತ್ತು ಹಣದ ಬೆನ್ನಟ್ಟುವಿಕೆಯಲ್ಲಿ ಹೇಗೆ ಯಶಸ್ಸನ್ನು ಕಾಣಬಲ್ಲಿರಿ? ಉತ್ತರಕ್ಕಾಗಿ ಅನೇಕರು ಜ್ಯೋತಿಶ್ಶಾಸ್ತ್ರದ ಕಡೆಗೆ ನೋಡುತ್ತಾರೆ. ತಮ್ಮ ಪ್ರತೀಕ್ಷೆಯನ್ನು ಉತ್ತಮಗೊಳಿಸುವ ನಿರೀಕ್ಷೆಯಲ್ಲಿ ಕೋಟ್ಯಂತರ ಜನರು ಪ್ರತಿದಿನ ವಾರ್ತಾಪತ್ರಿಕೆಯಲ್ಲಿ ತಮ್ಮ ಜಾತಕವನ್ನು ನೋಡುತ್ತಾರೆ. ಲೋಕದ ಮುಖಂಡರು ಸಹ ತಾವು ಮಾಡುವ ನಿರ್ಣಯಗಳನ್ನು ನಕ್ಷತ್ರಗಳು ಮಾರ್ಗದರ್ಶಿಸುವಂತೆ ಬಿಡುತ್ತಾರೆ.
ಜ್ಯೋತಿಶ್ಶಾಸ್ತ್ರವು ಭರವಸಾರ್ಹವಾಗಿದೆಯೊ? ಜೋಯಿಸರು ಹೇಗೆ ಭವಿಷ್ಯ ನುಡಿಯುತ್ತಾರೆ? ತಾವು ಹೇಗೆ ಜೀವಿಸಬೇಕೆಂಬುದನ್ನು ಆಕಾಶಕಾಯಗಳು ನಿರ್ಧರಿಸುವಂತೆ ಕ್ರೈಸ್ತರು ಅನುಮತಿಸಬೇಕೊ?
ಜ್ಯೋತಿಶ್ಶಾಸ್ತ್ರ ಎಂದರೇನು?
ದ ವರ್ಲ್ಡ್ ಬುಕ್ ಎನ್‌ಸೈಕ್ಲಪೀಡೀಯಕ್ಕನುಸಾರ, “ಆಕಾಶಕಾಯಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಇಲ್ಲವೆ ಭವಿಷ್ಯತ್ತನ್ನು ಬಯಲುಪಡಿಸಸಾಧ್ಯವಿರುವಂಥ ನಮೂನೆಗಳನ್ನು ರಚಿಸುತ್ತವೆ ಎಂಬ ನಂಬಿಕೆಯ ಮೇಲಾಧಾರಿತ”ವಾಗಿರುವ ಸಂಗತಿಯೇ ಜ್ಯೋತಿಶ್ಶಾಸ್ತ್ರ. ಒಬ್ಬ ವ್ಯಕ್ತಿಯು ಹುಟ್ಟಿದ ಸಮಯದಲ್ಲಿನ ಗ್ರಹಗಳ ನಿಖರವಾದ ಸ್ಥಾನ ಮತ್ತು ರಾಶಿಚಕ್ರಗಳು ಅವನ ಸಂಪೂರ್ಣ ಜೀವನವನ್ನು ಪ್ರಭಾವಿಸಬಲ್ಲವು ಎಂದು ಜೋಯಿಸರು ಹೇಳುತ್ತಾರೆ. * ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿನ ಈ ಆಕಾಶಕಾಯಗಳ ಸ್ಥಾನವನ್ನು ಜಾತಕ ಎಂದು ಕರೆಯಲಾಗುತ್ತದೆ.
ಜ್ಯೋತಿಶ್ಶಾಸ್ತ್ರದಲ್ಲಿನ ನಂಬಿಕೆಯು ಪುರಾತನದ್ದಾಗಿದೆ. ನಾಲ್ಕು ಸಾವಿರ ವರುಷಗಳ ಹಿಂದೆ ಬಾಬೆಲಿನವರು ಸೂರ್ಯ, ಚಂದ್ರ ಮತ್ತು ಸ್ಪಷ್ಟವಾಗಿ ಕಾಣುತ್ತಿದ್ದ ಐದು ಗ್ರಹಗಳ ಸ್ಥಾನಕ್ಕೆ ಅನುಸಾರವಾಗಿ ಭವಿಷ್ಯತ್ತನ್ನು ಮುಂತಿಳಿಸಲು ಆರಂಭಿಸಿದರು. ಈ ಆಕಾಶಕಾಯಗಳು, ಮಾನವರ ಸ್ವಭಾವವನ್ನು ಪ್ರಭಾವಿಸುವ ಶಕ್ತಿಯನ್ನು ಬೀರುತ್ತವೆ ಎಂದು ಅವರು ವಾದಿಸಿದರು. ಅನಂತರ ಅವರು ತಮ್ಮ ಭವಿಷ್ಯ ನುಡಿಯುವ ಕಾರ್ಯದಲ್ಲಿ ರಾಶಿಚಕ್ರಗಳನ್ನು ಸೇರಿಸಿದರು.
ಸೋಲಿನ ದೀರ್ಘ ಇತಿಹಾಸ
ಬಾಬೆಲಿನ ಮತ್ತು ಜ್ಯೋತಿಶ್ಶಾಸ್ತ್ರದ ನಡುವಣ ಸಂಬಂಧವನ್ನು ಬೈಬಲ್ ನಮ್ಮ ಗಮನಕ್ಕೆ ತರುತ್ತದೆ. ಬೈಬಲಿನಲ್ಲಿ ಬಾಬೆಲಿನ ಜೋಯಿಸರು ಎಂಬುದಾಗಿ ಅನೇಕ ಬಾರಿ ಉಲ್ಲೇಖಿಸಲಾಗಿದೆ. (ದಾನಿಯೇಲ 4:7; 5:7, 11) ಪ್ರವಾದಿ ದಾನಿಯೇಲನ ಸಮಯಗಳಲ್ಲಿ, ಕಸ್ದೀಯದಲ್ಲಿ (ಅಂದರೆ, ಬಾಬೆಲಿನಲ್ಲಿ) ಜ್ಯೋತಿಶ್ಶಾಸ್ತ್ರವು ಎಷ್ಟು ವ್ಯಾಪಕವಾಗಿತ್ತೆಂದರೆ “ಕಸ್ದೀಯರು” ಎಂಬ ಪದದ ಬಳಕೆಯು ಜೋಯಿಸರು ಎಂದು ಸೂಚಿಸುವುದಕ್ಕೆ ಸಮಾನವಾಗಿತ್ತು.
ದಾನಿಯೇಲನು, ಬಾಬೆಲಿನಲ್ಲಿ ಜ್ಯೋತಿಶ್ಶಾಸ್ತ್ರವು ಎಷ್ಟು ಪ್ರಬಲವಾಗಿತ್ತು ಎಂಬುದನ್ನು ಮಾತ್ರವಲ್ಲ ಅಲ್ಲಿನ ದಾನಿಯೇಲ 2:27) ಎರಡು ಶತಮಾನಗಳ ಹಿಂದೆ ಪ್ರವಾದಿ ಯೆಶಾಯನು ನಿಖರವಾಗಿ ಏನನ್ನು ಮುಂತಿಳಿಸಿದ್ದನು ಎಂಬುದನ್ನು ಗಮನಿಸಿರಿ. “ನಕ್ಷತ್ರಗಳನ್ನು ಅಧ್ಯಯನಮಾಡುವವರೂ, ಆಕಾಶಕಾಯಗಳನ್ನು ಗುರುತಿಸುವವರೂ ಮತ್ತು ಪ್ರತಿ ತಿಂಗಳು ನಿಮಗೆ ಏನು ಸಂಭವಿಸುತ್ತದೆ ಎಂಬುದನ್ನು ಮುಂತಿಳಿಸುವವರೂ ಆದ ನಿಮ್ಮ ಜೋಯಿಸರು ಮುಂದೆ ಬಂದು ನಿಮ್ಮನ್ನು ರಕ್ಷಿಸಲಿ” ಎಂದು ಯೆಶಾಯನು ತುಚ್ಛೀಕರಿಸಿ ಬರೆದನು. ಅವನು ಕೂಡಿಸಿದ್ದು: “ಅವರು ತಮ್ಮನ್ನೇ ರಕ್ಷಿಸಿಕೊಳ್ಳಲು ಸಹ ಅಶಕ್ತರಾಗಿದ್ದಾರೆ.”—ಯೆಶಾಯ 47:13, 14, ಟುಡೇಸ್ ಇಂಗ್ಲಿಷ್ ವರ್ಷನ್.
ಜೋಯಿಸರು ಆ ನಗರದ ಬೀಳುವಿಕೆಯನ್ನು ಮುಂತಿಳಿಸಶಕ್ತರಾಗದ ಸಂಗತಿಯನ್ನೂ ಕಣ್ಣಾರೆ ಕಂಡಿದ್ದನು. (ಬಾಬೆಲಿನ ಜೋಯಿಸರಿಗೆ ತಮ್ಮ ನಗರದ ಪತನವನ್ನು ಮುಂತಿಳಿಸಲು ಸಾಧ್ಯವಾಗಲಿಲ್ಲ. ಕೆಲವು ತಾಸುಗಳ ಮುಂಚೆಯೂ ಅದನ್ನು ಮುಂತಿಳಿಸಲು ಅವರು ಅಶಕ್ತರಾಗಿದ್ದರು. ಮತ್ತು ರಾಜ ಬೇಲ್ಶಚ್ಚರನ ಅರಮನೆಯ ಗೋಡೆಯ ಮೇಲೆ ದೇವರ ಸ್ವಂತ ನ್ಯಾಯತೀರ್ಪು ಕಂಡುಬಂದಾಗ, ಆ ಗೋಪ್ಯಲಿಪಿಯ ಅರ್ಥವನ್ನು ತಿಳಿಸಲು ಅಲ್ಲಿನ ಜೋಯಿಸರಿಗೆ ಸಾಧ್ಯವಾಗಲಿಲ್ಲ.—ದಾನಿಯೇಲ 5:7, 8.
ಇಂದು ಸಹ, ಪ್ರಾಮುಖ್ಯ ಘಟನೆಗಳನ್ನು ಮುಂತಿಳಿಸುವುದರಲ್ಲಿ ಜೋಯಿಸರು ಅಷ್ಟೇ ಅಸಮರ್ಥರಾಗಿದ್ದಾರೆ. ಜೋಯಿಸರಿಂದ ಮುಂತಿಳಿಸಲಾದ 3,000ಕ್ಕಿಂತಲೂ ಹೆಚ್ಚಿನ ವಿವಿಧ ವಿಚಾರಗಳನ್ನು ಆರ್. ಕಲ್ವರ್ ಮತ್ತು ಫಿಲಪ್ ಐಆನಾ ಎಂಬ ವೈಜ್ಞಾನಿಕ ಪರಿಶೋಧಕರು ಪರಿಶೋಧಿಸಿ ನೋಡಿದಾಗ, ಅದರಲ್ಲಿ 10 ಪ್ರತಿಶತ ವಿಚಾರಗಳು ಮಾತ್ರ ನಿಖರವಾಗಿವೆ ಎಂಬ ಸಮಾಪ್ತಿಗೆ ಬಂದರು. ಸರಿಯಾದ ಮಾಹಿತಿಯನ್ನು ಪಡೆದುಕೊಂಡಿರುವ ಯಾವನೇ ವಿಶ್ಲೇಷಕನು ಸಹ ಇದಕ್ಕಿಂತಲೂ ಉತ್ತಮ ರೀತಿಯಲ್ಲಿ ವಿಷಯಗಳನ್ನು ಮುಂತಿಳಿಸಬಲ್ಲನು.
ಬೈಬಲ್ ಬೋಧನೆಗಳಿಗೆ ವಿರುದ್ಧವಾಗಿದೆ
ಹಾಗಿದ್ದರೂ, ಇಬ್ರಿಯ ಪ್ರವಾದಿಗಳು ಜ್ಯೋತಿಶ್ಶಾಸ್ತ್ರವನ್ನು ನಿರಾಕರಿಸಿದ್ದು ಅದು ಭವಿಷ್ಯತ್ತನ್ನು ನಿಖರವಾಗಿ ಮುಂತಿಳಿಸಲಾರದು ಎಂಬುದಕ್ಕಾಗಿ ಮಾತ್ರವೇ ಅಲ್ಲ. ಮೋಶೆಯ ಮೂಲಕ ದೇವರು ಇಸ್ರಾಯೇಲ್ಯರಿಗೆ ನೀಡಿದ ಧರ್ಮಶಾಸ್ತ್ರವು ಶಕುನ ನೋಡುವುದರ ವಿರುದ್ಧ ಎಚ್ಚರಿಸಿತ್ತು. “ಕಣಿಕೇಳುವವರು, ಶಕುನನೋಡುವವರು, . . . ಇಂಥ ಕೆಲಸಗಳನ್ನು ನಡಿಸುವರು ಯೆಹೋವನಿಗೆ ಅಸಹ್ಯರಾಗಿದ್ದಾರೆ” ಎಂಬುದಾಗಿ ಧರ್ಮಶಾಸ್ತ್ರವು ತಿಳಿಸಿತ್ತು.—ಧರ್ಮೋಪದೇಶಕಾಂಡ 18:10, 12.
ಈ ಶಾಸ್ತ್ರವಚನದಲ್ಲಿ ಜ್ಯೋತಿಶ್ಶಾಸ್ತ್ರವನ್ನು ತಿಳಿಸಿರದಿದ್ದರೂ, ಈ ಆಚಾರಕ್ಕೂ ನಿಷೇಧವಿತ್ತೆಂಬುದು ಸ್ಪಷ್ಟ. ಜ್ಯೋತಿಶ್ಶಾಸ್ತ್ರವು ಒಂದು “ರೀತಿಯ ಕಣಿಕೇಳುವುದಾಗಿದೆ. ಇದು ನಕ್ಷತ್ರಗಳು, ಸೂರ್ಯ, ಚಂದ್ರ ಮತ್ತು ಗ್ರಹಗಳನ್ನು ನೋಡಿ, ಭೂಮಿಯ ಹಾಗೂ ಮಾನವರ ಘಟನೆಗಳನ್ನು ಮುಂತಿಳಿಸುವುದಾಗಿದೆ” ಎಂದು ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ತಿಳಿಸುತ್ತದೆ. ನಕ್ಷತ್ರಗಳ ಸಹಾಯದಿಂದಾಗಲಿ ಇಲ್ಲವೆ ಇತರ ವಸ್ತುಗಳ ಸಹಾಯದಿಂದಾಗಲಿ, ಎಲ್ಲ ರೀತಿಯ ಕಣಿಕೇಳುವುದು ತಪ್ಪಾಗಿದೆ. ಏಕೆ? ಇದಕ್ಕೆ ಸಕಾರಣವಿದೆ.
ನಮ್ಮ ಸೋಲು ಇಲ್ಲವೆ ಗೆಲುವಿನ ಆರೋಪವನ್ನು ನಕ್ಷತ್ರಗಳ ಮೇಲೆ ಹಾಕುವ ಬದಲು, “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು” ಎಂದು ಬೈಬಲ್ ಸ್ಪಷ್ಟವಾಗಿ ತಿಳಿಸುತ್ತದೆ. (ಗಲಾತ್ಯ 6:7) ನಾವು ಇಚ್ಛಾಸ್ವಾತಂತ್ರ್ಯವಿರುವ ವ್ಯಕ್ತಿಗಳಾಗಿರುವ ಕಾರಣ, ನಮ್ಮ ಕೃತ್ಯಗಳಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ದೇವರಿಗೆ ಲೆಕ್ಕಒಪ್ಪಿಸಬೇಕಾಗಿದೆ. (ಧರ್ಮೋಪದೇಶಕಾಂಡ 30:19, 20; ರೋಮಾಪುರ 14:12) ನಿಜ, ನಮ್ಮ ಹತೋಟಿಯನ್ನು ಮೀರಿದಂಥ ಸಂಗತಿಯಿಂದಾಗಿ ನಾವು ಯಾವುದಾದರೊಂದು ಅಪಘಾತಕ್ಕೆ ತುತ್ತಾಗಬಹುದು ಇಲ್ಲವೆ ಅಸ್ವಸ್ಥತೆಯನ್ನು ಅನುಭವಿಸಬೇಕಾಗಿ ಬರಬಹುದು. ಆದರೆ ಅಂಥ ವಿಪತ್ತುಗಳು, “ಕಾಲ ಮತ್ತು ಮುಂಗಾಣದ ಸಂಭವ”ದಿಂದಾಗಿ ಉಂಟಾಗುತ್ತದೆಯೇ ಹೊರತು ನಮ್ಮ ಜಾತಕದಿಂದಾಗಿ ಅಲ್ಲ ಎಂದು ವಚನಗಳು ವಿವರಿಸುತ್ತವೆ.—ಪ್ರಸಂಗಿ 9:11, NW.
ಮಾನವ ಸಂಬಂಧಗಳ ವಿಷಯದಲ್ಲಿ, ನಾವು ಕನಿಕರ, ದಯೆ, ದೀನಭಾವ, ಸಾತ್ವಿಕತ್ವ, ದೀರ್ಘಶಾಂತಿ ಮತ್ತು ಪ್ರೀತಿ ಎಂಬ ಗುಣಗಳನ್ನು ಧರಿಸಿಕೊಳ್ಳುವಂತೆ ಬೈಬಲ್ ನಮ್ಮನ್ನು ಉತ್ತೇಜಿಸುತ್ತದೆ. (ಕೊಲೊಸ್ಸೆ 3:12-14) ಈ ಗುಣಗಳು, ಬಾಳುವ ಸ್ನೇಹಕ್ಕೆ ಮತ್ತು ವಿವಾಹವನ್ನು ಬಲಪಡಿಸುವುದಕ್ಕೆ ಕೀಲಿ ಕೈಗಳಾಗಿವೆ. ಒಬ್ಬ ವಿವಾಹ ಸಂಗಾತಿಯನ್ನು ಆರಿಸಿಕೊಳ್ಳಲು “ಜನ್ಮಕುಂಡಲಿಯು” ಭರವಸಾರ್ಹ ಮಾರ್ಗದರ್ಶಿಯಾಗಿರುವುದಿಲ್ಲ. ಸುಮಾರು 3,500 ದಂಪತಿಗಳ ಜನ್ಮಜಾತಕವನ್ನು ಮನಶ್ಶಾಸ್ತ್ರಜ್ಞರಾದ ಬರ್ನಾಡ್ ಸಿಲ್ವರ್‌ಮನ್ ಪರೀಕ್ಷಿಸಿ ನೋಡಿದರು. ಆ ದಂಪತಿಗಳಲ್ಲಿ 17 ಪ್ರತಿಶತ ಈಗಾಗಲೇ ವಿವಾಹ ವಿಚ್ಛೇದವನ್ನು ಹೊಂದಿದ್ದಾರೆ. ಯಾರ “ಜಾತಕ ಕೂಡಿಬಂದಿತ್ತೊ” ಆ ವ್ಯಕ್ತಿಯನ್ನು ಸಂಗಾತಿಯನ್ನಾಗಿ ಆರಿಸಿಕೊಂಡಿದ್ದವರ ನಡುವೆಯೂ ವಿವಾಹ ವಿಚ್ಛೇದದ ಪ್ರಮಾಣದಲ್ಲಿ ಯಾವುದೇ ಇಳಿತವನ್ನು ಅವರು ಕಾಣಲಿಲ್ಲ.
ಜ್ಯೋತಿಶ್ಶಾಸ್ತ್ರವು ಭರವಸಾರ್ಹವಲ್ಲದ್ದೂ ದಾರಿತಪ್ಪಿಸುವಂಥದ್ದೂ ಆಗಿದೆ ಎಂಬುದು ಸುಸ್ಪಷ್ಟ. ನಾವು ತಪ್ಪು ಮಾಡಿ ನಂತರ ನಕ್ಷತ್ರಗಳ ಮೇಲೆ ದೂರು ಹಾಕುವಂತೆ ಇದು ನಡೆಸುತ್ತದೆ. ಎಲ್ಲದ್ದಕ್ಕಿಂತಲೂ ಮಿಗಿಲಾಗಿ, ಇದು ದೇವರ ವಾಕ್ಯದಲ್ಲಿ ಸ್ಪಷ್ಟವಾಗಿ ಖಂಡಿಸಲ್ಪಟ್ಟಿದೆ. (g05 8/8)
[ಪಾದಟಿಪ್ಪಣಿ]
^ ರಾಶಿಚಕ್ರಗಳು ಎಂಬುದು ಜೋಯಿಸರು ಉಪಯೋಗಿಸುವ 12 ವಿವಿಧ ನಕ್ಷತ್ರಪುಂಜಗಳಾಗಿವೆ.