ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಪ್ಪಾದ ವ್ಯಕ್ತಿಗಳೊಂದಿಗೆ ಸೇರಿಕೊಳ್ಳದಂತೆ ನನ್ನನ್ನು ಹೇಗೆ ತಡೆಯಬಲ್ಲೆ?

ತಪ್ಪಾದ ವ್ಯಕ್ತಿಗಳೊಂದಿಗೆ ಸೇರಿಕೊಳ್ಳದಂತೆ ನನ್ನನ್ನು ಹೇಗೆ ತಡೆಯಬಲ್ಲೆ?

ಯುವ ಜನರು ಪ್ರಶ್ನಿಸುವುದು . . .

ತಪ್ಪಾದ ವ್ಯಕ್ತಿಗಳೊಂದಿಗೆ ಸೇರಿಕೊಳ್ಳದಂತೆ ನನ್ನನ್ನು ಹೇಗೆ ತಡೆಯಬಲ್ಲೆ?

“ನನ್ನ ಶಾಲೆಯ ಒಬ್ಬ ಹುಡುಗಿಯೊಂದಿಗೆ ನಾನು ಸಹವಾಸಿಸಲು ಆರಂಭಿಸಿದೆ. . . . ಅವಳು ಅಮಲೌಷಧಗಳನ್ನು ಸೇವಿಸುತ್ತಿರಲಿಲ್ಲ, ಉನ್ಮತ್ತವಾದ ಪಾರ್ಟಿಗಳಿಗೆ ಹೋಗುತ್ತಿರಲಿಲ್ಲ, ಇಲ್ಲವೆ ಸ್ವಚ್ಛಂದ ಜೀವನವನ್ನೂ ನಡೆಸುತ್ತಿರಲಿಲ್ಲ. ಅವಳು ಅಶ್ಲೀಲ ಮಾತುಗಳನ್ನಾಡುತ್ತಿರಲಿಲ್ಲ ಮತ್ತು ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿದ್ದಳು. ಆದರೂ ಖಂಡಿತವಾಗಿ ಆಕೆ ಒಂದು ಒಳ್ಳೆಯ ಒಡನಾಡಿಯಾಗಿರಲಿಲ್ಲ.”​—⁠ಬೆವರ್ಲಿ. *

ಬೆವರ್ಲಿ, ಮೇಲೆ ತಿಳಿಸಲ್ಪಟ್ಟಿರುವ ಸಮಾಪ್ತಿಗೆ ಏಕೆ ಬಂದಳು? ಏಕೆಂದರೆ, ಆ ಹುಡುಗಿಯು ತನ್ನನ್ನು ಅಹಿತಕರವಾದ ವಿಷಯಗಳಲ್ಲಿ ಸೇರಿಕೊಳ್ಳುವಂತೆ ಪ್ರಭಾವಿಸಿದ್ದಳು ಎಂಬುದನ್ನು ಬೆವರ್ಲಿ ಈಗ ಗ್ರಹಿಸುತ್ತಾಳೆ. ಅವಳು ವಿವರಿಸುವುದು: “ನಾನು ಅವಳೊಂದಿಗೆ ಸಹವಾಸಿಸಲು ಮುಂದುವರಿಸಿದಂತೆ, ಪ್ರೇತವ್ಯವಹಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ನಾನೂ ಓದಲಾರಂಭಿಸಿದೆ. ಮಾತ್ರವಲ್ಲದೆ, ಪ್ರೇತವ್ಯವಹಾರಕ್ಕೆ ಸಂಬಂಧಿಸಿದ ಒಂದು ಕಥೆಯನ್ನೂ ಬರೆದೆ.”

ಮೆಲಾನೀ ಎಂಬ ಒಬ್ಬ ಯುವತಿಯು ಸಹ ಕೆಟ್ಟ ನಡತೆಯ ಪಾಶಕ್ಕೆ ಸಿಕ್ಕಿಕೊಂಡಳು. ಆದರೆ ಇದು ಸಂಭವಿಸಿದ್ದು, ಜೊತೆ ಕ್ರೈಸ್ತಳು ಎಂದು ಹೇಳಿಕೊಳ್ಳುತ್ತಿದ್ದವಳೊಂದಿಗಿನ ಸಹವಾಸದಿಂದಲೇ! ಒಬ್ಬ ವ್ಯಕ್ತಿಯು ಯೋಗ್ಯ ಸಹವಾಸಿಯೊ ಇಲ್ಲವೊ ಎಂಬುದು ನಿಮಗೆ ಹೇಗೆ ತಿಳಿದುಬರುತ್ತದೆ? ಅವಿಶ್ವಾಸಿಗಳೊಂದಿಗೆ ಆಪ್ತವಾಗಿ ಸಹವಾಸಿಸುವುದು ಯಾವಾಗಲೂ ತಪ್ಪಾಗಿದೆಯೊ? ಜೊತೆ ಕ್ರೈಸ್ತರೊಂದಿಗೆ ಬೆಳೆಸುವ ಗೆಳೆತನವು ಯಾವಾಗಲೂ ಸುರಕ್ಷಿತವಾಗಿದೆಯೊ?

ನಿರ್ದಿಷ್ಟವಾಗಿ, ವಿರುದ್ಧ ಲಿಂಗದವರೊಂದಿಗಿನ ಸ್ನೇಹದ ಕುರಿತಾಗಿ ಏನು? ಒಬ್ಬ ವ್ಯಕ್ತಿಯನ್ನು ಸಂಭಾವ್ಯ ವಿವಾಹ ಸಂಗಾತಿಯಾಗಿ ನೀವು ಪರಿಗಣಿಸುತ್ತಿರುವುದಾದರೆ, ಆ ಸಂಬಂಧವು ನಿಮ್ಮ ಮೇಲೆ ಆಧ್ಯಾತ್ಮಿಕವಾಗಿ ಸಕಾರಾತ್ಮಕ ಪ್ರಭಾವವನ್ನು ಬೀರುವುದೊ ಎಂಬುದನ್ನು ನೀವು ಹೇಗೆ ತಿಳಿಯಬಲ್ಲಿರಿ? ಈ ಪ್ರಶ್ನೆಗಳನ್ನು ಉತ್ತರಿಸಲು ಬೈಬಲ್‌ ಮೂಲತತ್ತ್ವಗಳು ಹೇಗೆ ಸಹಾಯಮಾಡುತ್ತವೆ ಎಂಬುದನ್ನು ನಾವೀಗ ನೋಡೋಣ.

ಯಾರು ಒಳ್ಳೇ ಸ್ನೇಹಿತರಾಗಿದ್ದಾರೆ?

ಬೆವರ್ಲಿಯ ಶಾಲಾ ಸಂಗಾತಿ ಸತ್ಯ ದೇವರ ಆರಾಧಕಳಾಗಿರದಿದ್ದ ವಿಷಯವು ಅವಳೊಂದಿಗೆ ಗೆಳೆತನವನ್ನು ಬೆಳೆಸದಂತೆ ಬೆವರ್ಲಿಯನ್ನು ತಡೆಯಬೇಕಿತ್ತೊ? ಒಬ್ಬ ವ್ಯಕ್ತಿಯು ಜೊತೆ ವಿಶ್ವಾಸಿಯಾಗಿರದ ಕಾರಣಮಾತ್ರದಿಂದ ಅವನೊ ಅವಳೊ ಅಸಭ್ಯ ವ್ಯಕ್ತಿ ಇಲ್ಲವೆ ಅನೈತಿಕ ವ್ಯಕ್ತಿ ಎಂಬ ನಿರ್ಧಾರಕ್ಕೆ ಸತ್ಯ ಕ್ರೈಸ್ತರು ಬರುವುದಿಲ್ಲ ನಿಜ. ಹಾಗಿದ್ದರೂ, ಆಪ್ತ ಬಂಧವನ್ನು ಬೆಳೆಸಿಕೊಳ್ಳುವ ವಿಷಯವನ್ನು ಪರಿಗಣಿಸುವಾಗ ಜಾಗರೂಕರಾಗಿರಲು ಸಕಾರಣವಿದೆ. ಪ್ರಥಮ ಶತಮಾನದ ಕೊರಿಂಥ ಸಭೆಯವರನ್ನು ಎಚ್ಚರಿಸುತ್ತಾ ಅಪೊಸ್ತಲ ಪೌಲನು ಬರೆದದ್ದು: “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ಅವನ ಮಾತಿನ ಅರ್ಥವೇನು?

ಕೊರಿಂಥದಲ್ಲಿದ್ದ ಕ್ರೈಸ್ತರಲ್ಲಿ ಕೆಲವರು, ಗ್ರೀಕ್‌ ತತ್ತ್ವಜ್ಞಾನಿ ಎಪಿಕ್ಯೂರಸ್‌ನ ಹಿಂಬಾಲಕರಾದ ಎಪಿಕೂರಿಯರೊಂದಿಗೆ ಸಹವಾಸ ಮಾಡುತ್ತಿದ್ದ ಸಂಭವವಿದೆ. ಎಪಿಕ್ಯೂರಸ್‌ನ ಬೋಧನೆಯನ್ನು ಗಮನಿಸುವಾಗ, ಅವನು ತನ್ನ ಹಿಂಬಾಲಕರಿಗೆ ವಿವೇಚನೆ, ಧೈರ್ಯ, ಸ್ವನಿಯಂತ್ರಣ ಮತ್ತು ನ್ಯಾಯ ಉಳ್ಳವರಾಗಿ ಜೀವಿಸಬೇಕೆಂದು ಕಲಿಸಿದ್ದನು. ಮಾತ್ರವಲ್ಲದೆ, ಗುಪ್ತವಾಗಿ ಕೆಟ್ಟಕೆಲಸ ಮಾಡುವುದನ್ನೂ ಅಸಮ್ಮತಿಸುತ್ತಿದ್ದನು. ಹಾಗಿರುವಲ್ಲಿ ಪೌಲನು ಎಪಿಕೂರಿಯರೊಂದಿಗಿನ ಮತ್ತು ಸಭೆಯೊಳಗೆ ಅದೇ ರೀತಿಯ ವಿಚಾರಗಳನ್ನು ಹೊಂದಿರುವವರೊಂದಿಗಿನ ಸಹವಾಸವನ್ನು ಸಹ “ದುಸ್ಸಹವಾಸ” ಎಂದು ಏಕೆ ಪರಿಗಣಿಸಿದನು?

ಎಪಿಕೂರಿಯರು ಸತ್ಯ ದೇವರ ಆರಾಧಕರಾಗಿರಲಿಲ್ಲ. ಸತ್ತವರಿಗೆ ಪುನರುತ್ಥಾನವಿದೆ ಎಂಬ ನಂಬಿಕೆಯನ್ನು ಅವರು ಹೊಂದಿರದ ಕಾರಣ, ಸದ್ಯದ ಜೀವನವನ್ನು ತಮ್ಮಿಂದಾದಷ್ಟು ಮಟ್ಟಿಗೆ ಆನಂದಿಸಬೇಕು ಎಂಬುದೇ ಅವರ ಗುರಿಯಾಗಿತ್ತು. (ಅ. ಕೃತ್ಯಗಳು 17:​18, 19, 32) ಅಂಥ ವ್ಯಕ್ತಿಗಳೊಂದಿಗೆ ಸಹವಾಸವನ್ನು ಮಾಡಿದ ಕಾರಣ ಸಭೆಯಲ್ಲಿದ್ದ ಕೆಲವರು ಪುನರುತ್ಥಾನದಲ್ಲಿನ ತಮ್ಮ ನಂಬಿಕೆಯನ್ನು ಕಳೆದುಕೊಳ್ಳಲು ಆರಂಭಿಸಿದರು ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದುದರಿಂದಲೇ, ದುಸ್ಸಹವಾಸದ ಕುರಿತಾದ ಪೌಲನ ಎಚ್ಚರಿಕೆಯು ಎಲ್ಲಿ ಕಂಡುಬರುತ್ತದೊ ಆ 1 ಕೊರಿಂಥ 15ನೇ ಅಧ್ಯಾಯದಲ್ಲಿ, ಪುನರುತ್ಥಾನದ ನಿರೀಕ್ಷೆಯ ನಿಜತ್ವವನ್ನು ಆರಂಭದ ಕ್ರೈಸ್ತರಿಗೆ ಪುನಃ ದೃಢೀಕರಿಸುವ ತರ್ಕಗಳು ತುಂಬಿವೆ.

ಇದರಿಂದ ನಾವು ಕಲಿಯುವ ಪಾಠವೇನು? ದೇವಭಕ್ತಿಯಿಲ್ಲದ ಜನರು ಸಹ ಉತ್ತಮ ಗುಣಗಳನ್ನು ಪ್ರದರ್ಶಿಸಬಹುದು. ಆದರೆ, ನೀವು ಅವರನ್ನು ಆಪ್ತ ಸ್ನೇಹಿತರನ್ನಾಗಿ ಆರಿಸಿಕೊಳ್ಳುವುದಾದರೆ ನಿಮ್ಮ ಆಲೋಚನೆ, ನಂಬಿಕೆ ಮತ್ತು ನಡತೆಯು ಪ್ರಭಾವಿಸಲ್ಪಡುತ್ತದೆ. ಆದುದರಿಂದ ಪೌಲನು ಕೊರಿಂಥದವರಿಗೆ ಬರೆದ ತನ್ನ ಎರಡನೇ ಪತ್ರದಲ್ಲಿ ಹೇಳಿದ್ದು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ.”​—⁠2 ಕೊರಿಂಥ 6:​14-18.

ಪೌಲನ ಮಾತಿನ ವಿವೇಕವನ್ನು 16 ವರುಷದವನಾದ ಫ್ರೆಡ್‌ ಗ್ರಹಿಸಿದನು. ಅವನು ತನ್ನ ಜೊತೆ ವಿದ್ಯಾರ್ಥಿಗಳೊಂದಿಗೆ ಒಂದು ಅಭಿವೃದ್ಧಿಶೀಲ ದೇಶಕ್ಕೆ ಪ್ರಯಾಣಿಸಿ ಅಲ್ಲಿರುವ ಮಕ್ಕಳಿಗೆ ಕಲಿಸುವುದರಲ್ಲಿ ಸಹಾಯಮಾಡುವ ಒಂದು ಪಠ್ಯೇತರ ಚಟುವಟಿಕೆಯಲ್ಲಿ ಸೇರಿಕೊಳ್ಳಲು ಆರಂಭದಲ್ಲಿ ಒಪ್ಪಿದ್ದನು. ಆದರೆ, ಅವರು ಒಟ್ಟಾಗಿ ಆ ಯೋಜನೆಗಾಗಿ ತಯಾರಿಸುತ್ತಿದ್ದಾಗ ಅವನು ತನ್ನ ದೃಷ್ಟಿಕೋನವನ್ನು ಬದಲಾಯಿಸಿದನು. ಅವನು ಹೇಳಿದ್ದು: “ಅವರೊಂದಿಗೆ ಅಷ್ಟೊಂದು ಸಮಯವನ್ನು ಕಳೆಯುವುದು ನನಗೆ ಆಧ್ಯಾತ್ಮಿಕ ಹಾನಿಯನ್ನು ಉಂಟುಮಾಡಬಲ್ಲದು ಎಂಬುದನ್ನು ನಾನು ಗ್ರಹಿಸಿಕೊಂಡೆ.” ಈ ಕಾರಣಕ್ಕಾಗಿ, ಆ ಯೋಜನೆಯಿಂದ ಫ್ರೆಡ್‌ ತನ್ನ ಹೆಸರನ್ನು ತೆಗೆಸಿದನು ಮತ್ತು ಪ್ರತಿಕೂಲ ಸ್ಥಿತಿಯಲ್ಲಿದ್ದ ಜನರಿಗೆ ಇತರ ರೀತಿಯಲ್ಲಿ ಸಹಾಯಮಾಡುವ ಆಯ್ಕೆಮಾಡಿದನು.

ಜೊತೆ ಕ್ರೈಸ್ತರೊಂದಿಗೆ ಸ್ನೇಹ

ಕ್ರೈಸ್ತ ಸಭೆಯ ಒಳಗೆ ಬೆಳೆಸುವ ಸ್ನೇಹದ ಕುರಿತಾಗಿ ಏನು? ಯುವ ತಿಮೊಥೆಯನಿಗೆ ಬರೆಯುವಾಗ ಪೌಲನು ಹೀಗೆ ಎಚ್ಚರಿಸಿದನು: “ದೊಡ್ಡ ಮನೆಯಲ್ಲಿ ಬೆಳ್ಳಿಬಂಗಾರದ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಅವುಗಳಲ್ಲಿ ಕೆಲವು ಉತ್ತಮವಾದ ಬಳಕೆಗೂ ಕೆಲವು ಹೀನವಾದ ಬಳಕೆಗೂ ಬರುತ್ತವೆ. ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು; ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ ಯಜಮಾನನಿಗೆ ಉಪಯುಕ್ತವಾಗಿಯೂ ಸಕಲಸತ್ಕ್ರಿಯೆಗಳನ್ನು ಮಾಡುವದಕ್ಕೆ ಸಿದ್ಧನಾಗಿಯೂ ಇರುವನು.” (2 ತಿಮೊಥೆಯ 2:20, 21) ಹೀಗೆ, ಕ್ರೈಸ್ತರಲ್ಲಿಯೂ ಕೆಲವರು ಯೋಗ್ಯ ನಡತೆಯನ್ನು ಹೊಂದಿರದವರು ಇರಬಹುದು ಎಂಬ ನಿಜತ್ವವನ್ನು ಪೌಲನು ಅಡಗಿಸಿಡಲಿಲ್ಲ. ಅಂಥವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಳ್ಳುವಂತೆ ಅವನು ತಿಮೊಥೆಯನಿಗೆ ಯಾವುದೇ ಮುಚ್ಚುಮರೆಯಿಲ್ಲದೆ ತಿಳಿಸಿದನು.

ಇದರ ಅರ್ಥ ನೀವು ನಿಮ್ಮ ಜೊತೆ ಕ್ರೈಸ್ತರ ಕಡೆಗೆ ಸಂಶಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದೊ? ಇಲ್ಲ. ಮಾತ್ರವಲ್ಲದೆ, ನೀವು ನಿಮ್ಮ ಸ್ನೇಹಿತರಲ್ಲಿ ಪರಿಪೂರ್ಣತೆಯನ್ನು ಎದುರುನೋಡಬೇಕೆಂಬ ಅರ್ಥವನ್ನು ಸಹ ಇದು ಕೊಡುವುದಿಲ್ಲ. (ಪ್ರಸಂಗಿ 7:​16-18) ಹಾಗಿದ್ದರೂ, ಒಬ್ಬ ಯುವ ವ್ಯಕ್ತಿಯು ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಾನೆ ಅಥವಾ ಸಭೆಯಲ್ಲಿ ಬಹಳ ಹುರುಪಿನಿಂದಿರುವ ಹೆತ್ತವರು ಅವನಿಗಿದ್ದಾರೆ ಎಂದ ಮಾತ್ರಕ್ಕೆ ಅವನು ನಮ್ಮ ಆಪ್ತ ಸ್ನೇಹಿತನಾಗಲು ಒಳ್ಳೆಯ ಆಯ್ಕೆ ಎಂದು ನೆನಸುವುದು ತಪ್ಪಾಗಿದೆ.

“ಒಬ್ಬ ಹುಡುಗನಾದರೂ [ಇಲ್ಲವೆ ಹುಡುಗಿಯಾದರೂ] ಶುದ್ಧವೂ ಸತ್ಯವೂ ಆದ ನಡತೆಯಿಂದಲೇ ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು” ಎಂದು ಜ್ಞಾನೋಕ್ತಿ 20:11 ತಿಳಿಸುತ್ತದೆ. ಆದುದರಿಂದ ಈ ಮುಂದಿನ ಪ್ರಶ್ನೆಗಳನ್ನು ಪರಿಗಣಿಸುವುದು ವಿವೇಕಪ್ರದವಾಗಿದೆ: ಯೆಹೋವನೊಂದಿಗಿನ ಸಂಬಂಧವು ಅವನ ಅಥವಾ ಅವಳ ಜೀವನದ ಕೇಂದ್ರಬಿಂದುವಾಗಿದೆಯೊ? ಇಲ್ಲವೆ, “ಪ್ರಾಪಂಚಿಕ ಆತ್ಮ”ವನ್ನು ಪ್ರತಿಬಿಂಬಿಸುವ ಆಲೋಚನೆ ಮತ್ತು ಮನೋಭಾವವು ಅವನಲ್ಲಿ ಅಥವಾ ಅವಳಲ್ಲಿ ಇದೆಯೊ? (1 ಕೊರಿಂಥ 2:12; ಎಫೆಸ 2:⁠2) ಅವನೊಂದಿಗೆ ಅಥವಾ ಅವಳೊಂದಿಗೆ ನೀವು ಕಳೆಯುವ ಸಮಯವು, ಯೆಹೋವನನ್ನು ಆರಾಧಿಸಬೇಕೆಂಬ ನಿಮ್ಮ ಇಚ್ಛೆಯನ್ನು ಮತ್ತಷ್ಟು ಬಲಗೊಳಿಸುತ್ತದೊ?

ಯೆಹೋವನ ಕಡೆಗೆ ಮತ್ತು ಆಧ್ಯಾತ್ಮಿಕ ವಿಷಯಗಳ ಕಡೆಗೆ ಗಾಢವಾದ ಪ್ರೀತಿಯನ್ನು ಹೊಂದಿರುವವರನ್ನು ನಿಮ್ಮ ಸ್ನೇಹಿತರನ್ನಾಗಿ ಆರಿಸಿಕೊಂಡರೆ, ನೀವು ಸಮಸ್ಯೆಗಳನ್ನು ತಡೆಗಟ್ಟುತ್ತೀರಿ. ಮಾತ್ರವಲ್ಲದೆ ಇದು ನಿಮಗೆ ದೇವರನ್ನು ಸೇವಿಸಲು ಅತಿ ಹೆಚ್ಚಿನ ಬಲವನ್ನು ಕಂಡುಕೊಳ್ಳುವಂತೆ ಸಹಾಯಮಾಡುತ್ತದೆ. ಪೌಲನು ತಿಮೊಥೆಯನಿಗೆ ಹೇಳಿದ್ದು: “ನೀತಿ ವಿಶ್ವಾಸ ಪ್ರೀತಿ ಮತ್ತು ಸಮಾಧಾನವನ್ನು ಸಂಪಾದಿಸುವದಕ್ಕೆ ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ಪ್ರಯಾಸಪಡು.”​—⁠2 ತಿಮೊಥೆಯ 2:22.

ವಿರುದ್ಧ ಲಿಂಗದವರೊಂದಿಗೆ ಸ್ನೇಹ

ನೀವು ಪ್ರಾಪ್ತ ವಯಸ್ಕರಾಗಿರುವುದಾದರೆ ಮತ್ತು ವಿವಾಹವಾಗಲು ಬಯಸುವುದಾದರೆ, ಸಂಗಾತಿಯನ್ನು ಆಯ್ಕೆಮಾಡುವ ವಿಷಯದಲ್ಲಿಯೂ ಇದೇ ಮೂಲತತ್ತ್ವಗಳು ಹೇಗೆ ಅನ್ವಯಿಸುತ್ತವೆ ಎಂದು ಆಲೋಚಿಸಿದ್ದೀರೊ? ಸಂಭಾವ್ಯ ಸಂಗಾತಿಯ ಕಡೆಗೆ ಅನೇಕ ವಿಷಯಗಳು ನಿಮ್ಮನ್ನು ಆಕರ್ಷಿಸಸಾಧ್ಯವಿದೆ, ಆದರೆ ವ್ಯಕ್ತಿಯ ಆಧ್ಯಾತ್ಮಿಕ ಸ್ಥಿತಿಗಿಂತ ಯಾವುದೇ ವಿಷಯವು ಹೆಚ್ಚು ಪ್ರಾಮುಖ್ಯವಾಗಿರುವುದಿಲ್ಲ.

ಆದುದರಿಂದಲೇ, “ಕರ್ತನಲ್ಲಿ” ಇಲ್ಲದಿರುವವರನ್ನು ವಿವಾಹವಾಗುವುದರ ವಿರುದ್ಧ ಬೈಬಲ್‌ ಪುನಃ ಪುನಃ ಎಚ್ಚರಿಸುತ್ತದೆ. (1 ಕೊರಿಂಥ 7:​39, NW; ಧರ್ಮೋಪದೇಶಕಾಂಡ 7:​3, 4; ನೆಹೆಮೀಯ 13:27) ಜೊತೆ ವಿಶ್ವಾಸಿಗಳಾಗಿರದ ಜನರು ಸಹ ಭರವಸಾರ್ಹರು, ಸಭ್ಯ ನಡತೆಯುಳ್ಳವರು ಮತ್ತು ದಯಾಭಾವದವರು ಆಗಿರಬಹುದು. ಆದರೂ, ಅಂಥ ಗುಣಗಳನ್ನು ಇನ್ನಷ್ಟು ಬೆಳೆಸುತ್ತಾ ಹೋಗಲು ಮತ್ತು ವರುಷಗಳು ದಾಟಿದಂತೆಯೇ ವಿವಾಹವನ್ನು ಕಾಪಾಡುತ್ತಾ ಹೋಗಲು ನಿಮಗಿರುವ ಪ್ರಚೋದನೆ ಅವರಿಗಿರುವುದಿಲ್ಲ.

ಇನ್ನೊಂದು ಬದಿಯಲ್ಲಿ, ಯೆಹೋವನಿಗೆ ಸಮರ್ಪಿಸಿಕೊಂಡಿರುವ ಮತ್ತು ಆತನಿಗೆ ನಿಷ್ಠನಾಗಿರುವ ವ್ಯಕ್ತಿಯು ಕ್ರೈಸ್ತ ಗುಣಗಳನ್ನು ಇಚ್ಛಾಪೂರ್ವಕವಾಗಿ ಬೆಳೆಸಿಕೊಂಡು, ಎಲ್ಲ ಸಂದರ್ಭದಲ್ಲಿಯೂ ಅವುಗಳನ್ನು ಕಾಪಾಡಿಕೊಳ್ಳುವನು. ಬೈಬಲ್‌, ಒಬ್ಬನು ತನ್ನ ಸಂಗಾತಿಯನ್ನು ಪ್ರೀತಿಸುವುದನ್ನು ಯೆಹೋವನೊಂದಿಗೆ ಒಳ್ಳೇ ಸಂಬಂಧವನ್ನು ಹೊಂದಿರುವುದಕ್ಕೆ ಸಂಬಂಧಿಸಿ ಮಾತಾಡುತ್ತದೆ ಎಂದು ಅವನು ಅಥವಾ ಅವಳು ಗ್ರಹಿಸುತ್ತಾರೆ. (ಎಫೆಸ 5:​28, 33; 1 ಪೇತ್ರ 3:⁠7) ಆದುದರಿಂದ, ಸಂಗಾತಿಗಳಿಬ್ಬರೂ ಯೆಹೋವನನ್ನು ಪ್ರೀತಿಸುವಾಗ, ಒಬ್ಬರಿಗೊಬ್ಬರು ನಿಷ್ಠರಾಗಿ ಉಳಿಯಲು ಅವರಿಗೆ ಅತಿ ಬಲವಾದ ಪ್ರೇರಣೆ ಇರುತ್ತದೆ.

ಇದರ ಅರ್ಥ, ಜೊತೆ ವಿಶ್ವಾಸಿಯೊಂದಿಗಿನ ವಿವಾಹವು ಯಶಸ್ಸಿನ ಖಾತ್ರಿಯನ್ನು ನೀಡುತ್ತದೆ ಎಂದಾಗಿದೆಯೊ? ಇಲ್ಲ. ಒಂದುವೇಳೆ ಆಧ್ಯಾತ್ಮಿಕ ವಿಷಯಗಳಲ್ಲಿ ಕೊಂಚವೇ ಆಸಕ್ತಿಯಿರುವ ಒಬ್ಬ ವ್ಯಕ್ತಿಯನ್ನು ನೀವು ವಿವಾಹವಾಗುವುದಾದರೆ, ಆಗೇನು? ಈ ವ್ಯವಸ್ಥೆಯಿಂದ ಬರುವ ಒತ್ತಡವನ್ನು ಎದುರಿಸಲು ಸುಸಜ್ಜಿತನಾಗಿರದ ಕಾರಣ ಆಧ್ಯಾತ್ಮಿಕವಾಗಿ ಬಲಹೀನನಾಗಿರುವ ವ್ಯಕ್ತಿಯು ಕ್ರೈಸ್ತ ಸಭೆಯಿಂದ ಸುಲಭವಾಗಿ ದೂರ ತೇಲಿಹೋಗುವ ಹೆಚ್ಚಿನ ಸಾಧ್ಯತೆಯಿದೆ. (ಫಿಲಿಪ್ಪ 3:18; 1 ಯೋಹಾನ 2:19) ನಿಮ್ಮ ಸಂಗಾತಿಯು ‘ಲೋಕದ ಮಲಿನತ್ವಗಳಲ್ಲಿ’ ಸಿಲುಕಿಕೊಂಡರೆ ನೀವು ಎದುರಿಸಬಲ್ಲ ನೋವು ಮತ್ತು ವೈವಾಹಿಕ ಕಲಹವನ್ನು ಕಲ್ಪಿಸಿಕೊಳ್ಳಿ.​—⁠2 ಪೇತ್ರ 2:20.

ವಿವಾಹಕ್ಕೆ ನಡೆಸಬಲ್ಲ ಸಂಬಂಧವನ್ನು ಬೆಳೆಸಿಕೊಳ್ಳುವ ಮುಂಚೆ ಇವನ್ನು ಪರಿಗಣಿಸಿರಿ: ತಾನೊಬ್ಬ ಆಧ್ಯಾತ್ಮಿಕ ವ್ಯಕ್ತಿ ಎಂಬುದಕ್ಕಾಗಿನ ಪುರಾವೆಯನ್ನು ಅವನು ಅಥವಾ ಅವಳು ಒದಗಿಸುತ್ತಿದ್ದಾನೊ/ಳೊ? ಅವನು ಅಥವಾ ಅವಳು ಕ್ರೈಸ್ತ ಜೀವನದ ವಿಷಯದಲ್ಲಿ ಉತ್ತಮ ಮಾದರಿಯನ್ನು ಇಡುತ್ತಿದ್ದಾನೊ/ಳೊ? ಈ ವ್ಯಕ್ತಿ ಬೈಬಲ್‌ ಸತ್ಯದಲ್ಲಿ ಆಳವಾಗಿ ಬೇರೂರಲ್ಪಟ್ಟಿದ್ದಾನೊ, ಇಲ್ಲವೆ ಅವನಿಗೆ ಅಥವಾ ಅವಳಿಗೆ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲು ಇನ್ನಷ್ಟು ಸಮಯದ ಅಗತ್ಯವಿದೆಯೊ? ಅವನ ಅಥವಾ ಅವಳ ಜೀವನದಲ್ಲಿ ಯೆಹೋವನ ಕಡೆಗಿನ ಪ್ರೀತಿಯು ಅತಿ ಪ್ರಾಮುಖ್ಯ ಸಂಗತಿಯಾಗಿದೆ ಎಂದು ನೀವು ಮನಗಂಡಿದ್ದೀರೊ? ಆ ವ್ಯಕ್ತಿ ಒಳ್ಳೇ ಹೆಸರನ್ನು ಹೊಂದಿದ್ದಾನೊ ಎಂಬುದನ್ನು ತಿಳಿಯುವುದು ಸಹಾಯಕಾರಿ. ಹಾಗಿದ್ದರೂ, ನೀವು ಯಾರಲ್ಲಿ ಆಸಕ್ತರಾಗಿದ್ದೀರೊ ಆ ವ್ಯಕ್ತಿ ಯೆಹೋವನಿಗಾಗಿ ಶ್ರದ್ಧೆಯುಳ್ಳವನು/ಳು ಆಗಿದ್ದಾನೊ/ಳೊ ಮತ್ತು ಒಬ್ಬ ಉತ್ತಮ ವಿವಾಹ ಸಂಗಾತಿಯಾಗಬಹುದೊ ಎಂಬುದನ್ನು ಸ್ವತಃ ನೀವು ಮನಗಾಣುವುದು ಅತ್ಯಾವಶ್ಯಕವಾಗಿದೆ.

“ತಪ್ಪಾದ ವ್ಯಕ್ತಿಗಳ” ಕಡೆಗೆ ಆಕರ್ಷಿತರಾಗುವ ಕೆಲವರು ಮೊದಲಾಗಿ ತಪ್ಪಾದ ವಿಷಯಗಳಿಗೆ​—⁠ಯಾವುದೊ ರೀತಿಯ ಸೂಕ್ತವಲ್ಲದ ಮನೋರಂಜನೆ ಅಥವಾ ಚಟುವಟಿಕೆಗೆ​—⁠ಆಕರ್ಷಿತರಾಗುತ್ತಾರೆ ಎಂಬುದನ್ನೂ ನೆನಪಿನಲ್ಲಿಡಿ. ಸಭೆಯಲ್ಲಿರುವ ಆದರ್ಶಪ್ರಾಯ ಯುವ ಜನರು ಇಂಥ ವಿಷಯಗಳಲ್ಲಿ ನಿಮ್ಮೊಂದಿಗೆ ಭಾಗವಹಿಸುವುದಿಲ್ಲ. ಆದುದರಿಂದ ನಿಮ್ಮ ಹೃದಯವನ್ನು ಪರೀಕ್ಷಿಸಿರಿ.

ಒಂದುವೇಳೆ ನಿಮ್ಮ ಹೃದಯಕ್ಕೆ ಶಿಸ್ತಿನ ಅಗತ್ಯವಿದೆ ಎಂದು ತಿಳಿದುಬಂದರೆ, ನಿರೀಕ್ಷಾಹೀನರಾಗಬೇಡಿ. ಹೃದಯವನ್ನು ಶಿಸ್ತುಗೊಳಿಸಸಾಧ್ಯವಿದೆ. (ಜ್ಞಾನೋಕ್ತಿ 23:​12, NIBV) ಅತಿ ಪ್ರಾಮುಖ್ಯ ಅಂಶವು: ನಿಮಗೆ ನಿಜವಾಗಿಯೂ ಏನು ಬೇಕಾಗಿದೆ? ಉತ್ತಮವಾದ ವಿಷಯಗಳ ಕಡೆಗೆ ಮತ್ತು ಅದನ್ನು ಅಭ್ಯಾಸಿಸುತ್ತಿರುವವರ ಕಡೆಗೆ ಸೆಳೆಯಲ್ಪಡಲು ನೀವು ಬಯಸುತ್ತೀರೊ? ಯೆಹೋವನ ಸಹಾಯದಿಂದ ಅಂಥ ಹೃದಯವನ್ನು ನೀವು ಬೆಳೆಸಿಕೊಳ್ಳಬಲ್ಲಿರಿ. (ಕೀರ್ತನೆ 97:10) ಒಳ್ಳೇದು ಮತ್ತು ಕೆಟ್ಟದ್ದರ ಭೇದವನ್ನು ತಿಳಿದುಕೊಳ್ಳುವಂತೆ ನಿಮ್ಮ ಜ್ಞಾನೇಂದ್ರಿಯಗಳನ್ನು ಶಿಕ್ಷಿಸಿಕೊಳ್ಳುವ ಮೂಲಕ ಯಾರು ಹಿತಕರವಾದ, ಕಟ್ಟುವಂಥ ಸ್ನೇಹಿತರು ಎಂಬುದನ್ನು ಸುಲಭವಾಗಿ ನಿರ್ಧರಿಸಲು ನೀವು ಶಕ್ತರಾಗುವಿರಿ.​—⁠ಇಬ್ರಿಯ 5:14. (g05 8/22)

[ಪಾದಟಿಪ್ಪಣಿ]

^ ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 14ರಲ್ಲಿರುವ ಚಿತ್ರ]

ಒಳ್ಳೇ ಸಹವಾಸಿಗಳು ಆಧ್ಯಾತ್ಮಿಕವಾಗಿ ಸಕಾರಾತ್ಮಕ ಪ್ರಭಾವವನ್ನು ಬೀರುತ್ತಾರೆ