ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರತಿಯೊಬ್ಬರಿಗೂ ಒಂದು ಮನೆಯ ಅಗತ್ಯವಿದೆ

ಪ್ರತಿಯೊಬ್ಬರಿಗೂ ಒಂದು ಮನೆಯ ಅಗತ್ಯವಿದೆ

ಪ್ರತಿಯೊಬ್ಬರಿಗೂ ಒಂದು ಮನೆಯ ಅಗತ್ಯವಿದೆ

“ವಸತಿ ಸೌಕರ್ಯವನ್ನು . . . ಸೇರಿಸಿ, ತನ್ನ ಮತ್ತು ತನ್ನ ಕುಟುಂಬದ ಆರೋಗ್ಯ ಹಾಗೂ ಸುಕ್ಷೇಮಕ್ಕಾಗಿ ಸೂಕ್ತವಾಗಿರುವ ಉತ್ತಮ ಜೀವನ ಮಟ್ಟವನ್ನು ಆನಂದಿಸುವ ಹಕ್ಕು ಪ್ರತಿಯೊಬ್ಬನಿಗೂ ಇದೆ.”​⁠ಮಾನವ ಹಕ್ಕುಗಳ ಸಾರ್ವತ್ರಿಕ ಪ್ರಕಟನೆ, ಲೇಖನ 25.

ದೊಡ್ಡ ಸಂಖ್ಯೆಯಲ್ಲಿ ವಲಸೆ ಬಂದಿರುವ ಹೊಲದ ಕೆಲಸಗಾರರು ಕ್ರಮೇಣ ಒಂದು ಪ್ರದೇಶದಲ್ಲಿ ನೆಲೆಸಿ, ಈಗ ಅದನ್ನೇ ತಮ್ಮ ವಾಸಸ್ಥಳ ಎಂದು ಕರೆಯುತ್ತಾರೆ. ಇದು ಪಟ್ಟಣದ ಹೊರವಲಯದಲ್ಲಿದ್ದು, ನೂರಾರು ಕುಟುಂಬಗಳು ಪಾರ್ಕಾಡೋರೆಸ್‌ ಎಂದು ಕರೆಯಲಾಗುವ ಕಡಿಮೆ ಬಾಡಿಗೆಯ ಮೋಟಾರುಮನೆಗಳಲ್ಲಿ ವಾಸಿಸುತ್ತವೆ. ಇಂಥ ಮನೆಗಳಲ್ಲಿ ರೊಚ್ಚಿನ ವಿಸರ್ಜನೆ, ಉತ್ತಮ ನೀರಿನ ಸರಬರಾಜು ಮತ್ತು ತಿಪ್ಪೆ ಎಸೆಯುವ ವ್ಯವಸ್ಥೆಯು ಸಹ ತೀರ ಕೀಳ್ಮಟ್ಟದಲ್ಲಿದೆ ಅಥವಾ ಇಲ್ಲವೇ ಇಲ್ಲ. ಈ ವಾಸಸ್ಥಳಗಳ ಕುರಿತು ವರ್ಣಿಸುತ್ತಾ ಒಬ್ಬ ವರದಿಗಾರನು ಹೇಳಿದ್ದು: ಇದು “ಎಷ್ಟೊಂದು ಬಡ ಸ್ಥಳವೆಂದರೆ, [ಹೊಲದ ಕೆಲಸಗಾರರು] ಇಲ್ಲಿ ಬಂದು ನೆಲೆಸಶಕ್ತರಾಗಿದ್ದಾರೆ.”

ಮೂರು ವರುಷಗಳ ಹಿಂದೆ, ಇಂಥ ಸ್ಥಳಗಳಲ್ಲಿ ಕೆಲವನ್ನು ಖಾಲಿಮಾಡಲು ಅಧಿಕಾರಿಗಳು ಆರಂಭಿಸಿದಾಗ ಕೆಲವು ಕುಟುಂಬಗಳು ತಮ್ಮ ಮೋಟಾರುಮನೆಗಳನ್ನು ಮಾರಿ, ಪಟ್ಟಣದ ಮಧ್ಯದಲ್ಲಿರುವ ಈಗಾಗಲೇ ಜನಜಂಗುಳಿಯಿಂದ ತುಂಬಿರುವ ಮನೆಗಳಿಗೆ, ಅಪಾರ್ಟ್‌ಮೆಂಟ್‌ಗಳಿಗೆ ಹಾಗೂ ಗ್ಯಾರೇಜ್‌ಗಳಿಗೆ ಸ್ಥಳಾಂತರಿಸಿದವು. ಇತರರು ತಮ್ಮ ವಸ್ತುಗಳನ್ನು ತೆಗೆದುಕೊಂಡು, ಮನೆ ಎಂಬುದಾಗಿ ಕರೆಯಸಾಧ್ಯವಿರುವ ಮತ್ತು ಪ್ರತಿ ವ್ಯವಸಾಯದ ನಂತರ ಅಲ್ಲಿಗೆ ಹಿಂದಿರುಗಿ ಬರಸಾಧ್ಯವಿರುವ ಮತ್ತೊಂದು ಸ್ಥಳಕ್ಕಾಗಿ ಹುಡುಕುತ್ತಾ ಹೊರಟರು.

ಇದನ್ನು ಓದಿದಾಗ, ಇದು ಮಧ್ಯ ಅಮೆರಿಕದ ಇಲ್ಲವೆ ದಕ್ಷಿಣ ಅಮೆರಿಕದ ಕೆಲವು ಸ್ಥಳಗಳು ಎಂದು ನೀವು ನೆನಸುತ್ತೀರೊ? ಹಾಗೆ ನೀವು ನೆನಸುತ್ತಿರುವುದಾದರೆ ಅದು ತಪ್ಪು. ಈ ಮೋಟಾರುಮನೆಗಳನ್ನು ನೀವು ಯುನೈಟೆಡ್‌ ಸ್ಟೇಟ್ಸ್‌ನ ದಕ್ಷಿಣ ಕ್ಯಾಲಿಫೋರ್ನಿಯದ ಮೆಕ್ಕಾ ಎಂಬ ಪಟ್ಟಣದ ಹತ್ತಿರ ಕಂಡುಕೊಳ್ಳಬಲ್ಲಿರಿ. ಇದು, ಶ್ರೀಮಂತ ನಗರವಾದ ಪಾಮ್‌ ಸ್ಪ್ರಿಂಗ್ಸ್‌ನ ಪಶ್ಚಿಮಕ್ಕೆ, ಒಂದು ತಾಸಿಗಿಂತಲೂ ಕಡಿಮೆ ಸಮಯದ ವಾಹನ ಪ್ರಯಾಣದಷ್ಟೇ ದೂರದಲ್ಲಿದೆ. ಹಿಂದೆಂದಿಗಿಂತಲೂ ಈಗ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಹೆಚ್ಚಿನವರು ತಮ್ಮ ಸ್ವಂತ ಮನೆಯನ್ನು ಹೊಂದಿದ್ದಾರೆ ಎಂಬುದಾಗಿ ಹೇಳಲಾಗುತ್ತದಾದರೂ ಮತ್ತು 2002ರಲ್ಲಿ ಅಲ್ಲಿನ ಸರಾಸರಿ ಕುಟುಂಬ ಆದಾಯವು ಸುಮಾರು 42,000 ಡಾಲರ್‌ ಆಗಿದ್ದರೂ, ಅಮೆರಿಕದ 50 ಲಕ್ಷಕ್ಕಿಂತಲೂ ಹೆಚ್ಚಿನ ಕುಟುಂಬಗಳು ಈಗಲೂ ಸೂಕ್ತವಲ್ಲದ ಮನೆಗಳಲ್ಲಿ ವಾಸಿಸುತ್ತಿವೆ ಎಂದು ಅಂದಾಜುಮಾಡಲಾಗಿದೆ.

ಪ್ರಗತಿಪರ ದೇಶಗಳಲ್ಲಿ ಪರಿಸ್ಥಿತಿಯು ಇನ್ನೂ ಚಿಂತಾಜನಕವಾಗಿದೆ. ಅನೇಕಾನೇಕ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಹೊರತಾಗಿಯೂ, ಭೌಗೋಳಿಕ ವಸತಿ ಬಿಕ್ಕಟ್ಟು ಏಕಪ್ರಕಾರವಾಗಿ ಹೆಚ್ಚಾಗುತ್ತಾ ಇದೆ.

ಭೌಗೋಳಿಕ ಬಿಕ್ಕಟ್ಟು

ಲೋಕವ್ಯಾಪಕವಾಗಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಸಂಖ್ಯೆಯು ನೂರು ಕೋಟಿಗಿಂತಲೂ ಹೆಚ್ಚಿದೆ ಎಂದು ಅಂದಾಜುಮಾಡಲಾಗಿದೆ. ಬ್ರಸಿಲ್‌ನಲ್ಲಿ ಕೊಳಚೆ ಪ್ರದೇಶಗಳು ಎಷ್ಟು ತೀವ್ರವಾಗಿ ಬೆಳೆಯುತ್ತಿವೆ ಎಂದರೆ ಬೇಗನೆ ಫಾವೆಲ್ಲಾಸ್‌ ಅಂದರೆ ಕೊಳಚೆ ಪ್ರದೇಶಗಳು, ಅವು “ಮೊದಲಾಗಿ ಆರಂಭಗೊಂಡಂಥ ನಗರಗಳಿಗಿಂತಲೂ ಹೆಚ್ಚು ದೊಡ್ಡದ್ದೂ ಹೆಚ್ಚು ಜನಸಂಖ್ಯೆಯುಳ್ಳದ್ದೂ ಆಗಲಿವೆ” ಎಂಬುದಾಗಿ ಅಲ್ಲಿನ ನಗರೀಕರಣದ ಪರಿಣತರು ಭಯಪಡುತ್ತಾರೆ. ನೈಜಿರೀಯದ ಕೆಲವು ನಗರಗಳಲ್ಲಿನ ಜನಸಂಖ್ಯೆಯಲ್ಲಿ 80 ಪ್ರತಿಶತಕ್ಕಿಂತ ಹೆಚ್ಚಿನ ಜನರು ಕೊಳಚೆ ಮತ್ತು ಅಕ್ರಮ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. “ಗಂಭೀರವಾದ ಹೆಜ್ಜೆಗಳು ತೆಗೆದುಕೊಳ್ಳಲ್ಪಡದಿದ್ದರೆ, ಮುಂದಿನ 30 ವರುಷಗಳಲ್ಲಿ ಕೊಳಚೆ ಪ್ರದೇಶ ನಿವಾಸಿಗಳ ಸಂಖ್ಯೆ ಸುಮಾರು 200 ಕೋಟಿಗಳಷ್ಟು ಹೆಚ್ಚಾಗಲಿದೆ” ಎಂಬುದಾಗಿ 2003ರಲ್ಲಿ ಯು.ಎನ್‌. ಸೆಕ್ರಿಟರಿ ಜನರಲ್‌ ಕೋಫಿ ಅನಾನ್‌ ತಿಳಿಸಿದರು.

ಆದರೆ ಈ ರೀತಿಯ ಭಾವಶೂನ್ಯ ಅಂಕೆಸಂಖ್ಯೆಗಳು, ಕೀಳ್ಮಟ್ಟದ ಜೀವನವನ್ನು ನಡೆಸುತ್ತಿರುವ ಲೋಕದ ಬಡಜನರು ಅನುಭವಿಸುತ್ತಿರುವಂಥ ಕಷ್ಟಸಂಕಟಗಳ ಭೀಕರತೆಯನ್ನು ನಮಗೆ ನಿಜವಾಗಿಯೂ ಪ್ರಕಟಪಡಿಸಲಾರವು. ವಿಶ್ವಸಂಸ್ಥೆಗನುಸಾರ, ಅಭಿವೃದ್ಧಿಶೀಲ ದೇಶಗಳಲ್ಲಿರುವ 50 ಪ್ರತಿಶತಕ್ಕಿಂತ ಹೆಚ್ಚು ಜನರು ಮೂಲಭೂತ ನಿರ್ಮಲೀಕರಣ ವ್ಯವಸ್ಥೆಯನ್ನು ಹೊಂದಿರುವುದಿಲ್ಲ, 33 ಪ್ರತಿಶತ ಜನರಿಗೆ ಶುದ್ಧ ನೀರಿನ ಸರಬರಾಯಿ ಇಲ್ಲ, 25 ಪ್ರತಿಶತ ಜನರು ಸೂಕ್ತವಾದ ವಸತಿಯನ್ನು ಹೊಂದಿರುವುದಿಲ್ಲ ಮತ್ತು 20 ಪ್ರತಿಶತ ಜನರು ಆಧುನಿಕ ಆರೋಗ್ಯ ಸೌಕರ್ಯಗಳನ್ನು ಹೊಂದಶಕ್ತರಾಗಿಲ್ಲ. ವಿಕಾಸಹೊಂದಿರುವ ದೇಶಗಳಲ್ಲಿನ ಜನರು ತಮ್ಮ ಸಾಕುಪ್ರಾಣಿಗಳನ್ನು ಸಹ ಇಂಥ ಪರಿಸ್ಥಿತಿಯಲ್ಲಿ ವಾಸಿಸಲು ಅನುಮತಿಸಲಿಕ್ಕಿಲ್ಲ.

ಸಾರ್ವತ್ರಿಕ ಹಕ್ಕು

ಸೂಕ್ತವಾದ ವಸತಿಯು ಮಾನವನ ಮೂಲಭೂತ ಅಗತ್ಯವಾಗಿದೆ ಎಂದು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಪ್ರತಿಯೊಬ್ಬರಿಗೂ ಸಂತೃಪ್ತಿಕರವಾದ ವಸತಿಯನ್ನು ಹೊಂದಿರುವುದರೊಂದಿಗೆ ಒಂದು ಯೋಗ್ಯ ಮಟ್ಟದ ಜೀವನವನ್ನು ನಡೆಸುವ ಹಕ್ಕಿದೆ ಎಂದು 1948ರಲ್ಲಿ ವಿಶ್ವಸಂಸ್ಥೆಯಿಂದ ಸ್ವೀಕರಿಸಲ್ಪಟ್ಟ ‘ಮಾನವ ಹಕ್ಕುಗಳ ಸಾರ್ವತ್ರಿಕ ಪ್ರಕಟನೆಯು’ ಘೋಷಿಸಿತು. ನಿಜ, ಪ್ರತಿಯೊಬ್ಬರಿಗೂ ಒಂದು ಸೂಕ್ತವಾದ ಮನೆಯ ಅಗತ್ಯವಿದೆ.

ಇತ್ತೀಚೆಗೆ, ಅಂದರೆ 1996ರಲ್ಲಿ ಅನೇಕ ದೇಶಗಳು, ವಿಶ್ವಸಂಸ್ಥೆಯ ಹ್ಯಾಬಿಟಟ್‌ ಎಜೆಂಡಾ ಎಂಬುದಾಗಿ ನಂತರ ಕರೆಯಲ್ಪಟ್ಟ ಶಾಸನವನ್ನು ಸ್ವೀಕರಿಸಿದವು. ಈ ಶಾಸನದಲ್ಲಿ, ಎಲ್ಲರಿಗೂ ತಕ್ಕಮಟ್ಟಿಗಿನ ಆಶ್ರಯವನ್ನು ಒದಗಿಸುವ ನಿರ್ದಿಷ್ಟ ಒಪ್ಪಂದಗಳನ್ನು ಪಟ್ಟಿಮಾಡಲಾಗಿದೆ. ಅನಂತರ 2002ರ ಜನವರಿ 1ರಂದು, ಈ ಎಜೆಂಡಾವನ್ನು ಒಂದು ಸಂಪೂರ್ಣ ಯು.ಎನ್‌. ಕಾರ್ಯಕ್ರಮವಾಗಿ ಮಾರ್ಪಡಿಸುವ ಮೂಲಕ ವಿಶ್ವಸಂಸ್ಥೆಯು ಆ ಒಪ್ಪಂದವನ್ನು ಮತ್ತಷ್ಟು ಬಲಪಡಿಸಿತು.

ಹಾಸ್ಯಾಸ್ಪದ ಸಂಗತಿಯೇನೆಂದರೆ, ಚಂದ್ರನ ಮೇಲೆ ನೆಲಸುನಾಡನ್ನು ಸ್ಥಾಪಿಸಲು ಮತ್ತು ಮಂಗಳ ಗ್ರಹವನ್ನು ಪರೀಕ್ಷಿಸಲು ಕೆಲವು ಅತಿ ಶ್ರೀಮಂತ ರಾಷ್ಟ್ರಗಳು ತಮ್ಮ ಮನವಿಗಳನ್ನು ಪುನಃ ಮುಂದಿಡುತ್ತಿರುವಾಗ, ದಿನೇ ದಿನೇ ಹೆಚ್ಚಾಗುತ್ತಿರುವ ಆ ರಾಷ್ಟ್ರಗಳ ಅತಿ ಬಡ ಪ್ರಜೆಗಳು ಈ ಭೂಮಿಯ ಮೇಲೆಯೇ ವಾಸಿಸಲು ಒಂದು ಸೂಕ್ತವಾದ ಸ್ಥಳವನ್ನು ಹೊಂದಲು ಅಶಕ್ತರಾಗಿದ್ದಾರೆ. ಈ ವಸತಿ ಬಿಕ್ಕಟ್ಟು ನಿಮ್ಮನ್ನು ವೈಯಕ್ತಿಕವಾಗಿ ಹೇಗೆ ಬಾಧಿಸುತ್ತಿದೆ? ಉತ್ತಮ ಸೌಕರ್ಯಗಳಿರುವ ಮನೆಯನ್ನು ಎಲ್ಲರೂ ಹೊಂದಿರುವಂಥ ಒಂದು ಕಾಲವು ಬರುವುದೆಂದು ನಾವು ನಿರೀಕ್ಷಿಸಸಾಧ್ಯವಿದೆಯೊ? (g05 9/22)

[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]

ಕೆಲವು ರಾಷ್ಟ್ರಗಳು ಚಂದ್ರನ ಮೇಲೆ ನೆಲಸುನಾಡನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವಾಗ, ಅದರ ಅನೇಕ ಪ್ರಜೆಗಳು ಈ ಭೂಮಿಯ ಮೇಲೆಯೇ ವಾಸಿಸಲು ಒಂದು ಸೂಕ್ತವಾದ ಸ್ಥಳವನ್ನು ಹೊಂದಿರುವುದಿಲ್ಲ

[ಪುಟ 2, 3ರಲ್ಲಿರುವ ಚಿತ್ರ]

ಏಷ್ಯಾದ ನಿರಾಶ್ರಿತ ಕುಟುಂಬ.

ಒಂದು ನಗರದಲ್ಲಿ, 3,500 ಕುಟುಂಬಗಳು ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿವೆ. ಅವರಿಗೆ ನೀರಿನ ಮತ್ತು ನಿರ್ಮಲೀಕರಣ ವ್ಯವಸ್ಥೆಯ ತೀವ್ರ ಅಗತ್ಯವಿದೆ

[ಕೃಪೆ]

© Tim Dirven/Panos Pictures

[ಪುಟ 4ರಲ್ಲಿರುವ ಚಿತ್ರ]

ಉತ್ತರ ಅಮೆರಿಕ