ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಸತಿ ಬಿಕ್ಕಟ್ಟಿಗೆ ಯಾವುದು ಕಾರಣವಾಗಿದೆ?

ವಸತಿ ಬಿಕ್ಕಟ್ಟಿಗೆ ಯಾವುದು ಕಾರಣವಾಗಿದೆ?

ವಸತಿ ಬಿಕ್ಕಟ್ಟಿಗೆ ಯಾವುದು ಕಾರಣವಾಗಿದೆ?

ಆಫ್ರಿಕದಲ್ಲಿನ ಒಂದು ದೊಡ್ಡ ನಗರದ ಹೊರವಲಯದಲ್ಲಿ 36 ವರುಷ ಪ್ರಾಯದವಳಾದ ಜೋಸಫೀನ್‌, 6ರಿಂದ 11 ವರುಷ ಪ್ರಾಯದ ತನ್ನ ಮೂವರು ಗಂಡುಮಕ್ಕಳೊಂದಿಗೆ ವಾಸಿಸುತ್ತಾಳೆ. ಜೀವನವನ್ನು ಸಾಗಿಸಲಿಕ್ಕಾಗಿ ಅವಳು, ಖಾಲಿ ಪ್ಲ್ಯಾಸ್ಟಿಕ್‌ ಡಬ್ಬಗಳನ್ನು ಹೆಕ್ಕಿ, ಅವನ್ನು ಹತ್ತಿರದಲ್ಲಿರುವ ತ್ಯಾಜ್ಯ ಪದಾರ್ಥಗಳನ್ನು ಪುನಃ ಬಳಸುವಂತೆ ಪರಿವರ್ತಿಸುವ ಕಾರ್ಖಾನೆಗೆ ಮಾರುತ್ತಾಳೆ. ಬೆನ್ನುಮುರಿಯುವಂಥ ಈ ಕೆಲಸದಿಂದಾಗಿ ದಿನಕ್ಕೆ ಅವಳಿಗೆ ಸಿಗುವ ಹಣ 90 ರೂಪಾಯಿಗಿಂತಲೂ ಕಡಿಮೆ. ಆ ನಗರದಲ್ಲಿ, ಇಷ್ಟೊಂದು ಕೊಂಚ ಹಣದಿಂದ ತನ್ನ ಕುಟುಂಬವನ್ನು ಪೋಷಿಸುವುದು ಇಲ್ಲವೆ ಮಕ್ಕಳ ಶಾಲಾ ಫೀಸನ್ನು ಕಟ್ಟುವುದು ಅತಿ ಕಷ್ಟಕರವಾದ ಸಂಗತಿ.

ದಿನದ ಕೊನೆಯಲ್ಲಿ ಅವಳು, ಮನೆಯೆಂಬುದಾಗಿ ಕರೆಯಬೇಕಾಗುವ ತನ್ನ ವಾಸಸ್ಥಳಕ್ಕೆ ಹಿಂದಿರುಗುತ್ತಾಳೆ. ಆ ಮನೆಯ ಗೋಡೆಗಳು, ತೆಳ್ಳಗಿನ ರೆಂಬೆಗಳಿಂದ ಒಟ್ಟಿಗೆ ಅಂಟಿಸಲ್ಪಟ್ಟ ಮಣ್ಣಿನ ಇಟ್ಟಿಗೆ ಮತ್ತು ಜೇಡಿ ಮಣ್ಣಿನಿಂದ ಮಾಡಲ್ಪಟ್ಟಿವೆ. ತುಕ್ಕು ಹಿಡಿದ ಕಬ್ಬಿಣದ ತಗಡುಗಳು, ಟಿನ್‌ ತಗಡುಗಳು ಮತ್ತು ಪ್ಲ್ಯಾಸ್ಟಿಕ್‌ಗಳನ್ನು ಹಾಸುವ ಮೂಲಕ ಆ ಮನೆಯ ಚಾವಣಿಯನ್ನು ಮಾಡಲಾಗಿದೆ. ಜೋರಾಗಿ ಗಾಳಿ ಬೀಸಿದಾಗ ಚಾವಣಿಯು ಹಾರಿಹೋಗದಂತೆ ತಡೆಯಲು ಅದರ ಮೇಲೆ ಕಲ್ಲುಗಳು, ಮರದ ತುಂಡುಗಳು ಮತ್ತು ಭಾರವಾದ ಹಳೆಯ ಲೋಹದ ಹಲಗೆಗಳನ್ನು ಇಡಲಾಗಿದೆ. ಹರಿದ ಗೋಣಿಚೀಲಗಳೇ ಅವಳ ಮನೆಯ “ಬಾಗಿಲು” ಮತ್ತು “ಕಿಟಕಿ”ಗಳಾಗಿವೆ. ಅವು, ಅಕ್ರಮಪ್ರವೇಶಿಗಳನ್ನು ತಡೆಯುವುದಿರಲಿ ಶೀತಗಾಳಿಯನ್ನು ಸಹ ಒಳಬರುವುದರಿಂದ ತಡೆಯಶಕ್ತವಾಗಿಲ್ಲ.

ಆದರೆ, ಈ ಬಡ ಮನೆಯೂ ಅವಳ ಸ್ವಂತದ್ದಲ್ಲ. ಜೋಸಫೀನ್‌ ಮತ್ತು ಅವಳ ಮಕ್ಕಳು ಹೊರಗಟ್ಟಲ್ಪಡುವ ಭಯದಲ್ಲಿ ಸದಾ ಜೀವಿಸುತ್ತಾರೆ. ಅವರ ಈ ಬಡ ಮನೆಯಿರುವ ಸ್ಥಳವು ಹತ್ತಿರದ ರಸ್ತೆ ವಿಸ್ತರಣೆಗಾಗಿ ಉಪಯೋಗಿಸಲ್ಪಡಲಿದೆ. ದುಃಖಕರವಾಗಿ, ಇದೇ ರೀತಿಯ ಪರಿಸ್ಥಿತಿಗಳು ಲೋಕದಾದ್ಯಂತ ಅನೇಕ ದೇಶಗಳಲ್ಲಿ ಅಸ್ತಿತ್ವದಲ್ಲಿವೆ.

ವಿಷಕಾರಿ ಮನೆ

“ಕೀಳ್ಮಟ್ಟದ ಮನೆಗಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ತಮ್ಮ ಮನೆಯ ಬಗ್ಗೆ ನಾಚಿಕೆಯ ಭಾವನೆಯಿದೆ, . . . ಕುಟುಂಬ ಸದಸ್ಯರು ಯಾವಾಗಲೂ ಅಸ್ವಸ್ಥರಾಗುತ್ತಾರೆ. ಮತ್ತು . . . ಒಬ್ಬ ಸರಕಾರಿ ಅಧಿಕಾರಿ ಇಲ್ಲವೆ ಜಮೀನುದಾರನು ಯಾವಾಗ ಬಂದು [ತಮ್ಮ ಮನೆಯನ್ನು] ಧ್ವಂಸಮಾಡುತ್ತಾನೆ ಎಂಬುದು ಸಹ ಅವರಿಗೆ ತಿಳಿದಿರುವುದಿಲ್ಲ” ಎಂದು ಅಂತಾರಾಷ್ಟ್ರೀಯ ವಸತಿ ಸಹಕಾರ ಕಾರ್ಯಕ್ರಮದ ಹಿರಿಯ ಅಧಿಕಾರಿಯಾಗಿರುವ ರಾಬಿನ್‌ ಶೆಲ್‌ ತಿಳಿಸುತ್ತಾರೆ.

ಇಂಥ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಕುಟುಂಬದಲ್ಲಿರುವ ಹೆತ್ತವರು ಯಾವಾಗಲೂ ತಮ್ಮ ಮಕ್ಕಳ ಆರೋಗ್ಯ ಮತ್ತು ಭದ್ರತೆಯ ಬಗ್ಗೆ ಚಿಂತಿತರಾಗಿರುತ್ತಾರೆ. ಅವರು ತಮ್ಮ ಪರಿಸ್ಥಿತಿಯನ್ನು ಉತ್ತಮಗೊಳಿಸಲಿಕ್ಕಾಗಿ ಕೆಲಸಮಾಡಲು ಶಕ್ತರಾಗುವ ಬದಲಿಗೆ, ತಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ಮಕ್ಕಳ ಮೂಲಭೂತ ಅಗತ್ಯಗಳಾದ ಆಹಾರ, ವಿರಾಮ ಮತ್ತು ಆಶ್ರಯವನ್ನು ಒದಗಿಸುವುದರಲ್ಲಿಯೇ ಕಳೆಯುತ್ತಾರೆ.

ಹೆಚ್ಚು ಪ್ರಯತ್ನಪಡುವುದಾದರೆ ಬಡವರು ತಮ್ಮ ಪರಿಸ್ಥಿತಿಯನ್ನು ಸರಿಪಡಿಸಸಾಧ್ಯವಿದೆ ಎಂದು ಹೇಳುವುದು ಹೊರನೋಟಕ್ಕೆ ಸುಲಭವಾಗಿ ಕಾಣಬಹುದು. ಆದರೆ, ಸ್ವಸಾಮರ್ಥ್ಯದಿಂದ ತಮ್ಮ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂದು ಬರೀ ಹೇಳುವುದು ಈ ಸಮಸ್ಯೆಗೆ ಉತ್ತರವಾಗಿರುವುದಿಲ್ಲ. ವಸತಿ ಬಿಕ್ಕಟ್ಟಿನಲ್ಲಿ, ಯಾವನೇ ಮಾನವನ ಹತೋಟಿಗೆ ಮೀರಿದ ಶಕ್ತಿಯುತ ಅಂಶಗಳು ಸೇರಿಕೊಂಡಿರುತ್ತವೆ. ಜನಸಂಖ್ಯೆಯಲ್ಲಿನ ಸ್ಫೋಟ, ಕ್ಷಿಪ್ರವಾದ ನಗರೀಕರಣ, ನೈಸರ್ಗಿಕ ವಿಪತ್ತುಗಳು, ರಾಜಕೀಯ ಗೊಂದಲ ಮತ್ತು ಬೆನ್ನುಬಿಡದ ಬಡತನ ಇವೇ ವಸತಿ ಬಿಕ್ಕಟ್ಟಿಗೆ ಮುಖ್ಯ ಕಾರಣಗಳಾಗಿವೆ ಎಂದು ಸಂಶೋಧಕರು ತಿಳಿಸುತ್ತಾರೆ. ಬಿಗಿಮುಷ್ಟಿಯ ಐದು ಬೆರಳುಗಳಂತೆ ಈ ಐದು ಅಂಶಗಳು ಲೋಕದ ಬಡ ಜನರ ರಕ್ತಹಿಂಡುತ್ತಿವೆ.

ಜನಸಂಖ್ಯೆಯ ಒತ್ತಡಗಳು

ಪ್ರತಿ ವರುಷ 6.8ರಿಂದ 8 ಕೋಟಿ ಅಧಿಕ ಜನರಿಗೆ ಲೋಕವು ಆಶ್ರಯ ನೀಡಬೇಕಾಗಿದೆ ಎಂದು ಸಾಮಾನ್ಯವಾಗಿ ಅಂದಾಜುಮಾಡಲಾಗಿದೆ. ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿಗನುಸಾರ, 2001ರಲ್ಲಿ ಲೋಕದ ಜನಸಂಖ್ಯೆಯು 610 ಕೋಟಿಗಳಿಗಿಂತಲೂ ಹೆಚ್ಚಾಗಿತ್ತು ಮತ್ತು 2050ರೊಳಗಾಗಿ 790ರಿಂದ 1,090 ಕೋಟಿಗಳಷ್ಟನ್ನು ತಲಪಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನೂ ಗಂಭೀರವಾದ ವಿಚಾರವು ಯಾವುದೆಂದರೆ, ಮುಂದಿನ ಎರಡು ದಶಕಗಳಲ್ಲಿ ಸಂಭವಿಸಲಿರುವ ಈ ಹೆಚ್ಚಳದಲ್ಲಿ 98 ಪ್ರತಿಶತವು ಅಭಿವೃದ್ಧಿಶೀಲ ದೇಶಗಳಲ್ಲಿ ಸಂಭವಿಸಲಿದೆ. ಈ ಅಂದಾಜುಗಳೇ, ಸೂಕ್ತ ವಸತಿಗೆ ಸಂಬಂಧಿಸಿದ ದೊಡ್ಡ ಸಮಸ್ಯೆಯನ್ನು ನಾವು ಎದುರಿಸಲಿದ್ದೇವೆ ಎಂಬುದನ್ನು ಸೂಚಿಸುತ್ತವೆ. ಆದರೆ, ಹೆಚ್ಚಿನ ದೇಶಗಳಲ್ಲಿ ಶೀಘ್ರವಾಗಿ ಬೆಳೆಯುವ ಕ್ಷೇತ್ರವು ಈಗಾಗಲೇ ಜನರಿಂದ ತುಂಬಿತುಳುಕುತ್ತಿರುವ ನಗರಗಳೇ ಆಗಿವೆ. ಈ ನಿಜಾಂಶವು ವಸತಿ ಬಿಕ್ಕಟ್ಟು ಎಂಬ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ.

ಎಡೆಬಿಡದ ನಗರೀಕರಣ

ನ್ಯೂ ಯಾರ್ಕ್‌, ಲಂಡನ್‌ ಮತ್ತು ಟೋಕಿಯೊ ಮುಂತಾದ ಪ್ರಮುಖ ನಗರಗಳನ್ನು ಅನೇಕವೇಳೆ ದೇಶದ ಆರ್ಥಿಕ ಬೆಳವಣಿಗೆಯ ಮುಖ್ಯ ಸಂಕೇತಗಳಾಗಿ ವೀಕ್ಷಿಸಲಾಗುತ್ತದೆ. ಈ ಕಾರಣದಿಂದ, ಹಳ್ಳಿಯಲ್ಲಿರುವ ಸಾವಿರಾರು ಜನರು ಪ್ರತಿ ವರುಷ ಶಿಕ್ಷಣ ಮತ್ತು ಉದ್ಯೋಗವನ್ನು ಹುಡುಕುತ್ತ ‘ನಗರವೆಂಬ ಹಸಿರು ಹುಲ್ಲುಗಾವಲಿಗೆ’ ಹಿಂಡು ಹಿಂಡಾಗಿ ಬರುತ್ತಾರೆ.

ಉದಾಹರಣೆಗೆ, ಚೀನಾದಲ್ಲಿ ಆರ್ಥಿಕ ಸ್ಥಿತಿ ಶೀಘ್ರವಾಗಿ ಪ್ರಗತಿಹೊಂದುತ್ತಾ ಇದೆ. ಇದರ ಪರಿಣಾಮವಾಗಿ, ಮುಂದಿನ ಕೆಲವೇ ದಶಕಗಳಲ್ಲಿ ಅಲ್ಲಿನ ಪ್ರಮುಖ ನಗರ ಕ್ಷೇತ್ರಗಳಲ್ಲಿ ಮಾತ್ರವೇ 20 ಕೋಟಿಗಿಂತಲೂ ಹೆಚ್ಚಿನ ಹೊಸ ಮನೆಗಳ ಅಗತ್ಯವಿರುವುದು ಎಂದು ಒಂದು ವರದಿಯು ಅಂದಾಜುಮಾಡಿದೆ. ಇದು, ಈಗಾಗಲೇ ಯುನೈಟೆಡ್‌ ಸ್ಟೇಟ್ಸ್‌ನಲ್ಲಿರುವ ಮನೆಗಳ ಒಟ್ಟು ಸಂಖ್ಯೆಯ ಹೆಚ್ಚುಕಡಿಮೆ ಎರಡು ಪಟ್ಟಾಗಿರುವುದು. ಇಂಥ ಅಪಾರ ಬೇಡಿಕೆಯನ್ನು ಯಾವ ವಸತಿ ಕಾರ್ಯಕ್ರಮವು ಪೂರೈಸಶಕ್ತವಾಗಿರುವುದು?

ವಿಶ್ವ ಬ್ಯಾಂಕ್‌ಗನುಸಾರ, “ಪ್ರತಿ ವರುಷ ಸುಮಾರು 1.2ರಿಂದ 1.5 ಕೋಟಿ ಹೊಸ ಕುಟುಂಬಗಳು ಅಭಿವೃದ್ಧಿಶೀಲ ದೇಶಗಳಲ್ಲಿನ ನಗರಗಳಿಗೆ ಸೇರಿಸಲ್ಪಡುತ್ತಿವೆ. ಇದರ ಅರ್ಥ, ಅಷ್ಟೇ ಸಂಖ್ಯೆಯಲ್ಲಿ ಹೊಸ ಮನೆಗಳ ಅಗತ್ಯವಿದೆ.” ನಗರದಲ್ಲಿರುವ ಬಡವರು ಹೊಂದಶಕ್ತವಾಗಿರುವಂಥ ಮನೆಗಳು ಸಾಕಷ್ಟು ಇಲ್ಲದಿರುವ ಕಾರಣ, ಎಲ್ಲಿ ಸಾಧ್ಯವೊ ಅಲ್ಲಿ​—⁠ಅನೇಕವೇಳೆ ಯಾರೂ ವಾಸಿಸಲು ಆಯ್ದುಕೊಳ್ಳದಂಥ ಸ್ಥಳಗಳಲ್ಲಿ​—⁠ಅವರು ಆಶ್ರಯವನ್ನು ಕಂಡುಕೊಳ್ಳಲು ಒತ್ತಾಯಿಸಲ್ಪಡುತ್ತಾರೆ.

ನೈಸರ್ಗಿಕ ವಿಪತ್ತುಗಳು ಮತ್ತು ರಾಜಕೀಯ ದುರಂತಗಳು

ಬಡತನದ ಕಾರಣ ಅನೇಕರು ನೆರೆಹಾವಳಿ, ಭೂಕುಸಿತ ಮತ್ತು ಭೂಕಂಪಗಳಿಗೆ ತುತ್ತಾಗುವ ಕ್ಷೇತ್ರಗಳಲ್ಲಿ ವಾಸಿಸಬೇಕಾಗಿದೆ. ಉದಾಹರಣೆಗೆ, ವೆನಿಸ್ವೇಲದ ಕಾರಕಾಸ್‌ನಲ್ಲಿ ಐದು ಲಕ್ಷಕ್ಕಿಂತಲೂ ಹೆಚ್ಚಿನ ಜನರು, “ಯಾವಾಗಲೂ ಭೂಕುಸಿತದಿಂದ ಬಾಧಿಸಲ್ಪಡುವ ಕಡಿದಾದ ಇಳುಕಲುಗಳ ಮೇಲೆ ಜೋಪಡಿಗಳಲ್ಲಿ ವಾಸಿಸುತ್ತಾರೆ.” ಮಾತ್ರವಲ್ಲದೆ, 1984ರಲ್ಲಿ ಭಾರತದ ಭೋಪಾಲ್‌ನಲ್ಲಿ ಸಂಭವಿಸಿದ ಕಾರ್ಖಾನೆ ದುರಂತವನ್ನು ಜ್ಞಾಪಿಸಿಕೊಳ್ಳಿ. ಇದರಲ್ಲಿ ಹಲವು ಸಾವಿರ ಜನರು ತಮ್ಮ ಜೀವವನ್ನು ಕಳೆದುಕೊಂಡರು ಮತ್ತು ಅನೇಕರು ಹಾನಿಗೊಳಗಾದರು. ಆದರೆ ಇಷ್ಟೊಂದು ಜನರು ಸಾಯಲು ಅಥವಾ ಹಾನಿಗೊಳಗಾಗಲು ಕಾರಣವೇನು? ಮುಖ್ಯ ಕಾರಣ, ಸಮೀಪದ ಒಂದು ಗುಡಿಸಲು ಪ್ರದೇಶವು ಕಾರ್ಖಾನೆಯ ಮೇರೆಗೆ ಸುಮಾರು ಐದು ಮೀಟರ್‌ ಹತ್ತಿರದ ತನಕ ವಿಸ್ತರಿಸಿಕೊಂಡಿತ್ತು.

ಅಂತರ್ಯುದ್ಧಗಳು ಮುಂತಾದ ರಾಜಕೀಯ ದುರಂತಗಳು ಸಹ ವಸತಿ ಸಮಸ್ಯೆಗಳಿಗೆ ಹೆಚ್ಚೆಚ್ಚು ಕಾರಣಗಳಾಗಿವೆ. ನೈರುತ್ಯ ಟರ್ಕಿಯಲ್ಲಿ, 1984 ಮತ್ತು 1999ರ ನಡುವೆ ನಡೆದ ಅಂತರ್ಗಲಭೆಯ ಸಮಯದಲ್ಲಿ ಸುಮಾರು 15 ಲಕ್ಷ ಜನರು, ಇವರಲ್ಲಿ ಹೆಚ್ಚಿನವರು ಗ್ರಾಮಸ್ಥರು, ತಮ್ಮ ಮನೆಯನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಓಡಿಹೋಗಬೇಕಾಯಿತು ಎಂದು ಮಾನವ ಹಕ್ಕುಗಳ ಒಂದು ಸಂಘಟನೆಯಿಂದ 2002ರಲ್ಲಿ ಪ್ರಕಟಿಸಲ್ಪಟ್ಟ ವರದಿಯು ತಿಳಿಸುತ್ತದೆ. ಇವರಲ್ಲಿ ಅನೇಕರು ಎಲ್ಲಿ ಸಾಧ್ಯವೊ ಅಲ್ಲಿ ಆಶ್ರಯವನ್ನು ಕಂಡುಕೊಳ್ಳುವಂತೆ ಒತ್ತಾಯಿಸಲ್ಪಟ್ಟರು. ಹೆಚ್ಚಾಗಿ ಅವರು, ತಮ್ಮ ಸಂಬಂಧಿಕರು ಮತ್ತು ನೆರೆಯವರಿಂದ ತುಂಬಿಕೊಂಡಿರುವ ತಾತ್ಕಾಲಿಕ ಡೇರೆಗಳು, ಬಾಡಿಗೆ ಮನೆಗಳು, ಕೃಷಿ ಕಟ್ಟಡಗಳು ಅಥವಾ ಕಟ್ಟಡ ನಿರ್ಮಾಣ ನಿವೇಶನಗಳಲ್ಲಿ ಸೇರಿಕೊಂಡರು. ಕುಟುಂಬಗಳ ಒಂದು ಗುಂಪು ಕುದುರೆ ಲಾಯಗಳಲ್ಲಿ ವಾಸಿಸುತ್ತಿತ್ತೆಂದು ವರದಿಸಲಾಗಿದೆ. ಒಂದು ಕೋಣೆಯಲ್ಲಿ 13 ಅಥವಾ ಅದಕ್ಕಿಂತಲೂ ಹೆಚ್ಚು ಮಂದಿ ವಾಸಿಸುತ್ತಿದ್ದರು ಮತ್ತು ಎಲ್ಲರೂ ಒಂದೇ ಶೌಚಾಲಯವನ್ನು ಹಾಗೂ ಅಂಗಣದಲ್ಲಿದ್ದ ಒಂದೇ ನೀರಿನ ಕೊಳವೆಯನ್ನು ಉಪಯೋಗಿಸುತ್ತಿದ್ದರು. ಒಬ್ಬ ನಿರಾಶ್ರಿತನು ಹೇಳಿದ್ದು: “ಈ ರೀತಿಯ ಜೀವನದಿಂದ ನಾವು ಹೊರಬರಲು ಬಯಸುತ್ತೇವೆ. ಪ್ರಾಣಿಗಳಿಗಾಗಿ ಕಟ್ಟಿದ ಸ್ಥಳದಲ್ಲಿ ನಾವು ವಾಸಿಸುತ್ತಿದ್ದೇವೆ.”

ಆರ್ಥಿಕ ಸ್ಥಗಿತತೆ

ಅಂತಿಮವಾಗಿ, ವಸತಿ ಸೌಕರ್ಯ ಮತ್ತು ಬಡವರ ಆರ್ಥಿಕ ಪರಿಸ್ಥಿತಿಗಳ ಮಧ್ಯೆಯಿರುವ ಸಂಬಂಧವನ್ನು ಅಲ್ಲಗಳೆಯಸಾಧ್ಯವಿಲ್ಲ. ಈ ಮುಂಚೆ ತಿಳಿಸಿದ ವಿಶ್ವ ಬ್ಯಾಂಕಿನ ವರದಿಗನುಸಾರ, ಇಸವಿ 1988 ಒಂದರಲ್ಲಿಯೇ ಅಭಿವೃದ್ಧಿಶೀಲ ದೇಶಗಳಲ್ಲಿನ 33 ಕೋಟಿ ನಗರವಾಸಿಗಳು ಬಡವರಾಗಿದ್ದರು ಎಂದು ಹೇಳಲಾಗಿದೆ ಮತ್ತು ಈ ಪರಿಸ್ಥಿತಿಯು ನಂತರದ ವರುಷಗಳಲ್ಲಿ ಬದಲಾಗುವುದು ಎಂಬುದನ್ನು ನಿರೀಕ್ಷಿಸಲಾಗಿರಲಿಲ್ಲ. ಜನರು ತಮಗೆ ಆಹಾರ ಮತ್ತು ಬಟ್ಟೆಬರೆಗಳಂಥ ಮೂಲಭೂತ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕೂಡ ಸಾಧ್ಯವಿಲ್ಲದಷ್ಟು ಬಡವರಾಗಿರುವಾಗ, ಬಾಡಿಗೆ ಮನೆಯನ್ನು ಹೊಂದಲು ಇಲ್ಲವೆ ಒಂದು ಸೂಕ್ತವಾದ ಮನೆಯನ್ನು ಕಟ್ಟಿಸಿಕೊಳ್ಳಲು ಹೇಗೆ ಶಕ್ತರಾಗುವರು?

ಅಧಿಕ ಬಡ್ಡಿ ದರಗಳಿಂದಾಗಿ ಮತ್ತು ಹಣದುಬ್ಬರದಿಂದಾಗಿ ಬ್ಯಾಂಕ್‌ ಸಾಲವನ್ನು ಪಾವತಿಮಾಡುವುದು ಅನೇಕ ಕುಟುಂಬಗಳಿಗೆ ಅಸಾಧ್ಯವಾಗಿದೆ. ಮಾತ್ರವಲ್ಲದೆ, ಕುಟುಂಬಕ್ಕೆ ಬೇಕಾಗಿರುವ ನಿತ್ಯೋಪಯುಕ್ತ ವಸ್ತುಗಳ ಬೆಲೆ ಏರಿಕೆಯು ಸಹ, ಆರ್ಥಿಕವಾಗಿ ಜನರು ಪ್ರಗತಿಹೊಂದುವುದನ್ನು ಕಷ್ಟಕರವನ್ನಾಗಿ ಮಾಡುತ್ತದೆ. ನಿರುದ್ಯೋಗದ ಪ್ರಮಾಣಗಳು ಕೆಲವು ದೇಶಗಳಲ್ಲಿ 20 ಪ್ರತಿಶತದಷ್ಟು ಉಚ್ಚವಾಗಿವೆ. ಆದುದರಿಂದ ಮೂಲಭೂತ ಅಗತ್ಯಗಳನ್ನು ಹೊಂದುವುದೇ ಕಷ್ಟಕರವಾಗಿದೆ.

ಇವು ಮತ್ತು ಇನ್ನಿತರ ವಿಷಯಗಳು, ಲೋಕದ ಸುತ್ತಲಿರುವ ಕೋಟ್ಯಂತರ ಜನರು ದಿಕ್ಕುತೋಚದೆ ಕೀಳ್ಮಟ್ಟದ ಮನೆಗಳಲ್ಲಿ ವಾಸಿಸುವಂತೆ ಮಾಡಿವೆ. ಜನರು ಹಾಳಾಗಿರುವ ಬಸ್‌ಗಳಲ್ಲಿ, ಶಿಪ್ಪಿಂಗ್‌ ಕಂಟೇನರ್‌ಗಳಲ್ಲಿ ಮತ್ತು ಕಾರ್ಡ್‌ಬೋರ್ಡ್‌ ಬಾಕ್ಸ್‌ಗಳಲ್ಲಿ ವಾಸಿಸುತ್ತಾರೆ. ಅವರು ಮೆಟ್ಟಲುಗಳನ್ನು, ಪ್ಲ್ಯಾಸ್ಟಿಕ್‌ ಶೀಟ್‌ಗಳನ್ನು ಮತ್ತು ಉಪಯೋಗಿಸಿದ ಮರದ ವಸ್ತುಗಳ ತುಂಡುಗಳನ್ನು ಚಾವಣಿಯಾಗಿ ಉಪಯೋಗಿಸಿ ಅದರಡಿಯಲ್ಲಿ ವಾಸಿಸುತ್ತಾರೆ. ಪಾಳುಬಿದ್ದಿರುವ ಕಾರ್ಖಾನೆಗಳು ಸಹ ಕೆಲವರಿಗೆ ವಾಸಸ್ಥಳವಾಗಿವೆ.

ಈ ಸಮಸ್ಯೆಯನ್ನು ಹೋಗಲಾಡಿಸಲು ಯಾವ ಪ್ರಯತ್ನಗಳನ್ನು ಮಾಡಲಾಗಿದೆ?

ಕಾಳಜಿವಹಿಸುವ ವ್ಯಕ್ತಿಗಳಿಂದ, ಸಂಘಟನೆಗಳಿಂದ ಮತ್ತು ಸರಕಾರಗಳಿಂದ ಈ ಬಿಕ್ಕಟ್ಟನ್ನು ಹೋಗಲಾಡಿಸಲು ಬಹುಮಟ್ಟಿನ ಪ್ರಯತ್ನಗಳು ಈಗಾಗಲೇ ಮಾಡಲ್ಪಟ್ಟಿವೆ. ಜಪಾನಿನಲ್ಲಿ, ಬಡವರು ಹೊಂದಶಕ್ತರಾಗುವ ರೀತಿಯ ಮನೆಗಳನ್ನು ಕಟ್ಟಲು ಸಹಾಯನೀಡುವಂತೆ ಅನೇಕ ಏಜೆನ್ಸಿಗಳನ್ನು ಸ್ಥಾಪಿಸಲಾಗಿದೆ. 1994ರಲ್ಲಿ ದಕ್ಷಿಣ ಆಫ್ರಿಕದಲ್ಲಿ ಆರಂಭಿಸಲ್ಪಟ್ಟ ಒಂದು ವಸತಿ ಕಾರ್ಯಕ್ರಮದ ಪರಿಣಾಮವಾಗಿ, ನಾಲ್ಕು ಕೋಣೆಗಳುಳ್ಳ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮನೆಗಳು ಕಟ್ಟಲ್ಪಟ್ಟವು. ಪ್ರತಿ ವರುಷ ನಗರ ಪ್ರದೇಶದಲ್ಲಿ 1,50,000 ಮನೆಗಳನ್ನು ಮತ್ತು ಗ್ರಾಮೀಣ ಪ್ರದೇಶದಲ್ಲಿ ಅದರ ಎರಡು ಪಟ್ಟು ಮನೆಗಳನ್ನು ಕಟ್ಟುವುದು ಕೆನ್ಯದಲ್ಲಿನ ಒಂದು ವಸತಿ ಯೋಜನೆಯ ಗುರಿಯಾಗಿತ್ತು. ಮಡಗಾಸ್ಕರ್‌ನಂಥ ಇತರ ದೇಶಗಳು, ಕಡಿಮೆ ಖರ್ಚಿನಲ್ಲಿ ಮನೆಗಳನ್ನು ಕಟ್ಟುವ ವಿಧಾನಗಳನ್ನು ಕಂಡುಹಿಡಿಯಲು ಪ್ರಯತ್ನಗಳನ್ನು ಮಾಡುತ್ತಿವೆ.

“ಅಧಿಕ ಪ್ರಮಾಣದ ನಗರ ಬೆಳವಣಿಗೆಯಿಂದಾಗಿ ಉಂಟಾಗುತ್ತಿರುವ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಸುಧಾರಿಸಲು” ಲೋಕವು ಎಷ್ಟು ಬದ್ಧವಾಗಿದೆ ಎಂಬುದನ್ನು ತೋರಿಸಲು ಯು.ಎನ್‌.-ಹ್ಯಾಬಿಟಟ್‌ನಂಥ ಅಂತಾರಾಷ್ಟ್ರೀಯ ಸಂಘಟನೆಗಳು ಸ್ಥಾಪನೆಗೊಂಡಿವೆ. ಲಾಭೋದ್ದೇಶವಿಲ್ಲದ ಮತ್ತು ಸರ್ಕಾರೇತರ ಸಂಘಟನೆಗಳು ಸಹ ಸಹಾಯಮಾಡಲು ಪ್ರಯತ್ನಿಸುತ್ತಿವೆ. ಲಾಭೋದ್ದೇಶವಿಲ್ಲದ ಒಂದು ಸಂಘಟನೆಯು, ವಿವಿಧ ದೇಶಗಳಲ್ಲಿರುವ 1,50,000ಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ ಅವರ ಕೀಳ್ಮಟ್ಟದ ಮನೆಯನ್ನು ಉತ್ತಮಗೊಳಿಸಲು ಸಹಾಯಮಾಡಿದೆ. 2005ರ ಅಂತ್ಯದೊಳಗಾಗಿ, ಹತ್ತು ಲಕ್ಷ ಜನರು ಒಂದು ಸರಳವಾದ, ಸೂಕ್ತವಾದ ಮತ್ತು ಹೊಂದಶಕ್ತವಾದ ಮನೆಯನ್ನು ಕಂಡುಕೊಳ್ಳಲು ಅದು ಸಹಾಯಮಾಡುವುದು ಎಂದು ಅಂದಾಜುಮಾಡಲಾಗಿದೆ.

ಇಂಥ ಅನೇಕ ಸಂಘಟನೆಗಳು, ಕೀಳ್ಮಟ್ಟದ ಮನೆಗಳಲ್ಲಿ ವಾಸಿಸುವ ಜನರು ತಮ್ಮ ಸನ್ನಿವೇಶವನ್ನು ತಮ್ಮಿಂದ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನಿಭಾಯಿಸುವಂತೆ ಅಥವಾ ಅದನ್ನು ಉತ್ತಮಗೊಳಿಸುವಂತೆ ಕೂಡಲೆ ದೊರಕುವ ಪ್ರಾಯೋಗಿಕ ಮಾಹಿತಿಯನ್ನು ಸಿದ್ಧಪಡಿಸಿವೆ. ನಿಮಗೆ ಒಂದುವೇಳೆ ಸಹಾಯದ ಅಗತ್ಯವಿರುವಲ್ಲಿ, ನೀವು ಸಹ ಇಂಥ ಏರ್ಪಾಡುಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ. ಅಷ್ಟುಮಾತ್ರವಲ್ಲದೆ, ನಿಮ್ಮ ಪರಿಸ್ಥಿತಿಯನ್ನು ಉತ್ತಮಗೊಳಿಸಲು ನೀವು ಸ್ವತಃ ಮಾಡಸಾಧ್ಯವಿರುವ ಅನೇಕ ಮೂಲಭೂತ ಸಂಗತಿಗಳಿವೆ.​—⁠7ನೇ ಪುಟದಲ್ಲಿರುವ “ನಿಮ್ಮ ಮನೆ ಮತ್ತು ನಿಮ್ಮ ಆರೋಗ್ಯ” ಎಂಬ ಚೌಕವನ್ನು ನೋಡಿ.

ನಿಮ್ಮ ವೈಯಕ್ತಿಕ ಪರಿಸ್ಥಿತಿಯನ್ನು ನಿಮ್ಮಿಂದ ಸುಧಾರಿಸಸಾಧ್ಯವಿರಲಿ ಇಲ್ಲದಿರಲಿ, ಈ ಬಿಕ್ಕಟ್ಟನ್ನು ಉಂಟುಮಾಡುತ್ತಿರುವ ಭೌಗೋಳಿಕ ಅಂಶಗಳ ಮುಷ್ಟಿಯನ್ನು ಬಿಡಿಸಲು ಯಾವನೇ ಒಬ್ಬ ಮಾನವನಿಗೆ ಇಲ್ಲವೆ ಮಾನವ ಸಂಘಟನೆಗೆ ಸಾಧ್ಯವಿಲ್ಲ. ಆರ್ಥಿಕ ಬೆಳವಣಿಗೆ ಮತ್ತು ಮಾನವೀಯ ಪರಿಹಾರಗಳಿಗಾಗಿನ ತ್ವರಿತವಾದ ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅಂತಾರಾಷ್ಟ್ರೀಯ ಸಮುದಾಯವು ಹೆಚ್ಚೆಚ್ಚಾಗಿ ಸೋತುಹೋಗುತ್ತಿದೆ. ಪ್ರತಿ ವರುಷ ಲಕ್ಷಾಂತರ ಮಕ್ಕಳು ಹೆಚ್ಚುತ್ತಿರುವ ಈ ಬಡ ಪರಿಸ್ಥಿತಿಯಲ್ಲಿ ಹುಟ್ಟುತ್ತಿವೆ. ಶಾಶ್ವತ ಪರಿಹಾರದ ಯಾವುದೇ ನಿಜ ನಿರೀಕ್ಷೆ ಇದೆಯೊ? (g05 9/22)

[ಪುಟ 7ರಲ್ಲಿರುವ ಚೌಕ]

ನಿಮ್ಮ ಮನೆ ಮತ್ತು ನಿಮ್ಮ ಆರೋಗ್ಯ

ಲೋಕಾರೋಗ್ಯ ಸಂಸ್ಥೆಗನುಸಾರ, ಒಳ್ಳೇ ಆರೋಗ್ಯವನ್ನು ಹೊಂದಿರಬೇಕಾದರೆ ಒಂದು ಮನೆಯಲ್ಲಿ ಕಡಿಮೆಪಕ್ಷ ಈ ಕೆಳಗಿನ ವಿಷಯಗಳಿರಬೇಕು:

◼ ಮಳೆನೀರು ಸೋರದಂತೆ ಒಳ್ಳೇ ಚಾವಣಿ

◼ ತೀಕ್ಷ್ಣ ಹವಮಾನದಿಂದ ಸುರಕ್ಷಿತರಾಗಿರಲು ಮತ್ತು ಪ್ರಾಣಿಗಳು ಒಳಬರದಂತೆ ತಡೆಯಲು ಒಳ್ಳೇ ಗೋಡೆ ಮತ್ತು ಬಾಗಿಲುಗಳು

◼ ಸೊಳ್ಳೆ ಮತ್ತು ಇತರ ಕೀಟಗಳು ಮನೆಯೊಳಗೆ ಬರದಂತೆ ತಡೆಯಲು ಕಿಟಕಿಗಳಿಗೆ ಮತ್ತು ಬಾಗಿಲುಗಳಿಗೆ ತಂತಿ ಜಾಲರಿ

◼ ಸೆಕೆಗಾಲದಲ್ಲಿ ಸೂರ್ಯನ ತೀಕ್ಷ್ಣವಾದ ಬಿಸಿಲು ಗೋಡೆಗೆ ನೇರವಾಗಿ ಬೀಳದಂತೆ ತಡೆಯಲು ಸುತ್ತಲೂ ಸನ್‌ಷೇಡ್‌ (ಗೋಡೆಗಳಿಗಿಂತ ಮುಂದಕ್ಕೆ ಚಾಚಿರುವ ಚಾವಣಿ)

[ಪುಟ 8ರಲ್ಲಿರುವ ಚೌಕ/ಚಿತ್ರಗಳು]

ಆಫ್ರಿಕದ ಗ್ರಾಮೀಣ ಪ್ರದೇಶದಲ್ಲಿನ ಸಾಂಪ್ರದಾಯಿಕ ಮನೆಗಳು

ಅನೇಕ ವರುಷಗಳ ವರೆಗೆ ಆಫ್ರಿಕದ ಸಾಂಪ್ರದಾಯಿಕ ಮನೆಗಳು ಅಲ್ಲಲ್ಲಿ ಕಂಡುಬರುತ್ತಿದ್ದವು. ಅವು ವಿವಿಧ ಗಾತ್ರದಲ್ಲಿ ಮತ್ತು ವಿವಿಧ ಆಕಾರದಲ್ಲಿ ಇದ್ದವು. ಕೆನ್ಯದ ಕಿಕುಯು ಮತ್ತು ಲೂಓನಂಥ ಸಮುದಾಯಗಳು, ವೃತ್ತಾಕಾರದ ಗೋಡೆಗಳು ಮತ್ತು ಶಂಕುವಿನ ಆಕಾರದ ಹುಲ್ಲಿನ ಚಾವಣಿಯನ್ನು ಇಷ್ಟಪಡುತ್ತಿದ್ದವು. ಕೆನ್ಯ ಮತ್ತು ಟಾನ್ಸೇನಿಯದ ಮಸಾಯ್‌ ಜನರನ್ನು ಸೇರಿಸಿ ಇತರರು, ಹೆಚ್ಚುಕಡಿಮೆ ಆಯತಾಕಾರದ ಚಾವಣಿಯನ್ನು ಇಷ್ಟಪಡುತ್ತಿದ್ದರು. ಪೂರ್ವ ಆಫ್ರಿಕದ ಕರಾವಳಿ ಪ್ರದೇಶಗಳಲ್ಲಿನ ಮನೆಗಳ ಹುಲ್ಲಿನ ಚಾವಣಿಗಳು ನೆಲವನ್ನು ಮುಟ್ಟುತ್ತಿದ್ದವು ಮತ್ತು ಜೇನುಗೂಡಿನಂತೆ ಕಾಣುತ್ತಿದ್ದವು.

ಅಂಥ ಮನೆಗಳನ್ನು ಕಟ್ಟಲು ಉಪಯೋಗಿಸುತ್ತಿದ್ದ ಸಾಮಾಗ್ರಿಗಳು ಬೇಗನೆ ಲಭ್ಯವಾಗುತ್ತಿದ್ದ ಕಾರಣ, ವಸತಿ ಸಮಸ್ಯೆಗಳು ಬಹಳ ಕಡಿಮೆಯಿತ್ತು. ಮಣ್ಣನ್ನು ನೀರಿನಲ್ಲಿ ಬೆರೆಸುವ ಮೂಲಕ ಗೋಡೆಯನ್ನು ಕಟ್ಟಲು ಬೇಕಾದ ಮೆತುಮಣ್ಣನ್ನು ಸಿದ್ಧಮಾಡಲಾಗುತ್ತಿತ್ತು. ಹತ್ತಿರದಲ್ಲಿಯೇ ಅನೇಕ ಕಾಡುಗಳಿದ್ದ ಕಾರಣ ಮರ, ಹುಲ್ಲು, ಆಪು ಮತ್ತು ಬಿದಿರು ಈ ಮುಂತಾದವುಗಳು ಸುಲಭವಾಗಿ ದೊರಕುತ್ತಿದ್ದವು. ಆದುದರಿಂದ, ಎಷ್ಟೇ ಬಡ ಕುಟುಂಬವಾಗಿರಲಿ ಅಥವಾ ಎಷ್ಟೇ ಶ್ರೀಮಂತ ಕುಟುಂಬವಾಗಿರಲಿ, ಸ್ವಂತ ಮನೆಯನ್ನು ಹೊಂದಿರುವುದು ಸುಲಭದ ಸಂಗತಿಯಾಗಿತ್ತು.

ಆದರೆ, ಅಂಥ ಮನೆಗಳಿಗೆ ಅವುಗಳದ್ದೇ ಆದ ಅನಾನುಕೂಲತೆಗಳಿದ್ದವು. ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುವಿನಿಂದ ಅದರ ಚಾವಣಿಯು ಮಾಡಲ್ಪಟ್ಟಿದ್ದ ಕಾರಣ, ಬೆಂಕಿ ಹಿಡಿಯುವ ಅಪಾಯ ಹೆಚ್ಚಿತ್ತು. ಮಾತ್ರವಲ್ಲದೆ, ಮಣ್ಣಿನ ಗೋಡೆಯನ್ನು ತೂತು ಮಾಡಿ ಕಳ್ಳರು ಸುಲಭವಾಗಿ ಒಳನುಗ್ಗಸಾಧ್ಯವಿತ್ತು. ಆದುದರಿಂದಲೇ ಇಂದು ಅನೇಕ ಕ್ಷೇತ್ರಗಳಲ್ಲಿ ಆಫ್ರಿಕದ ಸಾಂಪ್ರದಾಯಿಕ ಮನೆಗಳು ಕಣ್ಮರೆಯಾಗುತ್ತಿವೆ. ಅವುಗಳ ಸ್ಥಳಗಳಲ್ಲಿ ಇತರ ಹೆಚ್ಚು ಬಾಳಿಕೆಬರುವ ಮನೆಗಳು ಕಟ್ಟಲ್ಪಡುತ್ತಿವೆ.

[ಕೃಪೆ]

ಮೂಲ: ಆಫ್ರಿಕದ ಸಾಂಪ್ರದಾಯಿಕ ಕಟ್ಟಡ (ಇಂಗ್ಲಿಷ್‌)

ಗುಡಿಸಲುಗಳು: Courtesy Bomas of Kenya Ltd - ಒಂದು ಸಾಂಸ್ಕೃತಿಕ, ಸಮ್ಮೇಳನ, ಮತ್ತು ಮನೋರಂಜನಾ ಕೇಂದ್ರ

[ಪುಟ 5ರಲ್ಲಿರುವ ಚಿತ್ರ]

ಯೂರೋಪ್‌

[ಕೃಪೆ]

© Tim Dirven/Panos Pictures

[ಪುಟ 6ರಲ್ಲಿರುವ ಚಿತ್ರ]

ಆಫ್ರಿಕ

[ಪುಟ 6ರಲ್ಲಿರುವ ಚಿತ್ರ]

ದಕ್ಷಿಣ ಅಮೆರಿಕ

[ಪುಟ 7ರಲ್ಲಿರುವ ಚಿತ್ರ]

ದಕ್ಷಿಣ ಅಮೆರಿಕ

[ಪುಟ 7ರಲ್ಲಿರುವ ಚಿತ್ರ]

ಏಷ್ಯಾ

[ಪುಟ 6ರಲ್ಲಿರುವ ಚಿತ್ರ ಕೃಪೆ]

© Teun Voeten/Panos Pictures; J.R. Ripper/BrazilPhotos

[ಪುಟ 7ರಲ್ಲಿರುವ ಚಿತ್ರ ಕೃಪೆ]

JORGE UZON/AFP/Getty Images; © Frits Meyst/Panos Pictures